ಅಶುತೋಷ್ ನಿಗೆ ಕ್ಷಣ ಕ್ಷಣವೂ ಯುಗದಂತೆ ಭಾಸವಾಗತೊಡಗಿತು. ಕಾಯುವಿಕೆಯ ಮೇಲೆಯಷ್ಟೇ ಸಮಯದ ಪರಿವೆಯ ನಿರ್ಧಾರ ಸಾಧ್ಯ. ತಕ್ಷಣವೇ ನಂದನ್ ಗೆ ಡಯಲ್ ಮಾಡಿದ.ನಂದನ್ ಹೇಳಿದ ಮಾತು ಕೇಳಿ ಅವನಿಗೆ ಹೃದಯವೇ ಬಾಯಿಗೆ ಬಂದಂತಾಯಿತು.
ಅಪರ್ಣಾ ಅಲ್ಲಿಂದ ಹೊರಟ ನಂತರ ನಂದನ್ ಕೂಡಾ ಅವಳನ್ನು ಹಿಂಬಾಲಿಸಿದ. ಅಲ್ಲೇ ಹೊರಗೆ ವಾಚ್ ಮ್ಯಾನ್ ಜೊತೆಗೆ ಆಡುತ್ತಿದ್ದ ಅಥರ್ವನನ್ನು ಕರೆದುಕೊಂಡು ಹೊರಟಳು.
ಅಥರ್ವ ಇಲ್ಲಿಗೆ ಮೊದಲ ಬಾರಿಗೆ ಬಂದದ್ದೇನೂ ಅಲ್ಲ. ಅಥರ್ವ ಬಂದಾಗಲೆಲ್ಲಾ ಆಡುತ್ತಿದ್ದದ್ದು ವಾಚ್ ಮ್ಯಾನ್ ಶಾಂತಪ್ಪನ ಜೊತೆಗೆ. ಅಥರ್ವ ಎಲ್ಲರಂತೆ ಸಾಮಾನ್ಯ ಮಗುವಲ್ಲ, ಅವನು ವಿಕಲ ಚೇತನ ಮಗು. ಅಥರ್ವನಿಗೆ ಬಲಗಾಲು ಊನವಾಗಿತ್ತು. ಎಲ್ಲರಂತೆ ನಡೆದುಕೊಂಡು, ಓಡಾಡಿಕೊಂಡು ಇರುವ ಭಾಗ್ಯ ಅವನಿಗಿರಲಿಲ್ಲ. ಅವನು ನಡೆದಾಡಬೇಕಿದ್ದಲ್ಲಿ ಮತ್ತೊಬ್ಬರ ಸಹಾಯ ಪಡೆಯಬೇಕಿತ್ತು. ಈಗಷ್ಟೇ ಕೆಲ ದಿನಗಳ ಹಿಂದೆ ಅವನಿಗೆ ಆಪರೇಷನ್ ಕೂಡಾ ಆಗಿತ್ತು. ಅವನು ಸ್ವತಃ ನಡೆದಾಡಬಲ್ಲನಾದರು ಕೊಂಚ ಕುಂಟುವಿಕೆ ಇದ್ದೇ ಇತ್ತು. ಐದಾರು ವರ್ಷದ ಪುಟ್ಟ ಮಗುವನ್ನು ಆ ಸ್ಥಿತಿಯಲ್ಲಿ ನೋಡುವುದು ಎಲ್ಲರಿಗೂ ಮರುಕ ಹುಟ್ಟುವಂತಿತ್ತು.
ಅಪರ್ಣ ಅಥರ್ವನನ್ನು ಕಂಡದ್ದು "ಕರುಣಾಳು" ಎಂಬ ಅನಾಥಾಶ್ರಮದಲ್ಲಿ. "ಕರ್ಮಭೂಮಿ ಪ್ರೈವೇಟ್ ಲಿಮಿಟೆಡ್" ನಡೆಸುತ್ತಿದ್ದ ಅನಾಥ ಮಕ್ಕಳ ಮತ್ತು ವೃದ್ದಾಶ್ರಮದ ಸಂಸ್ಥೆ ಅದು. "ಕರ್ಮಭೂಮಿ"ಯ ಹಲವಾರು ಸಾಮಾಜಿಕ ಕಳಕಳಿಯ ಸೇವೆಗಳಲ್ಲಿ ಅದು ಕೂಡಾ ಒಂದು. ಅಪರ್ಣಾ ಒಮ್ಮೆ "ಕರುಣಾಳು" ಆಶ್ರಮಕ್ಕೆ ಹೋದಾಗ ಅಲ್ಲಿ ಕಂಡದ್ದು ಅಥರ್ವನನ್ನು. ಅವಳು ಮಕ್ಕಳ ವಿಭಾಗಕ್ಕೆ ಭೇಟಿ ನೀಡಿದಾಗ ಅಲ್ಲೊಂದು ಒಂದೂವರೆ-ಎರಡು ವರ್ಷದ ಪುಟ್ಟ ಕಂದ ತೆವಳುತ್ತಾ ಕೂತಿತ್ತು. ಅಲ್ಲಿ ಮೇಲೆ ತೂಗು ಹಾಕಿದ್ದ ಕನ್ನಡಿಯಲ್ಲಿ ಅವನ ಬಿಂಬವನ್ನು ಅವನೇ ಕಾಣುವಾಸೆ. ಆದರೆ ಎದ್ದು ನಿಲ್ಲಲಾಗದ್ದು, ಬಂದವರತ್ತ ದೈನ್ಯದಿಂದ ಎತ್ತಿಕೋ ಎಂದು ಕೈ ಚಾಚುತ್ತಿದ್ದ. ಅಪರ್ಣಾಳೊಳಗಿದ್ದ ಮಾತೃ ವಾತ್ಸಲ್ಯ ಜಾಗೃತವಾದ ಹೊತ್ತು. ಅಶುತೋಷ್ ನೊಡನೆ ಮದುವೆಯಾಗಿ ಕಳೆದದ್ದು ಆರು ತಿಂಗಳಷ್ಟೇ.. ಯಾಕೋ ಈ ಮಗುವನ್ನು ತನ್ನ ಮಗುವನ್ನಾಗಿ ಸಾಕಬೇಕು ಎನ್ನಿಸಿಬಿಟ್ಟಿತ್ತು. ಅವನ ತೊದಲು ನುಡಿ, ಮುಗ್ಧತೆ ಎಲ್ಲವೂ ಅವಳನ್ನು ಸೆಳೆದಿತ್ತು.
ಅವನು "ಕರುಣಾಳು"ವಿಗೆ ಬಂದು ಒಂದೂವರೆಯಿಂದ ಎರಡು ವರ್ಷ ಕಳೆದಿತ್ತು. ಪಕ್ಕದ ಬೀದಿಯ ಕಸದ ತೊಟ್ಟಿಯ ಪಕ್ಕದಲ್ಲಿ ಕಣ್ಣೇ ಬಿಟ್ಟಿರದ ಕಂದ ಅಳುತ್ತಿತ್ತು. ಅದರ ಧ್ವನಿ ಅತ್ತೂ ಅತ್ತೂ ಉಡುಗಿ ಹೋಗಿತ್ತು. ಯಾವ ಪಾಪಿಯ ಹೊಟ್ಟೆಯಲ್ಲಿ ಹುಟ್ಟಿತ್ತೋ ಆದರೆ ಪುಣ್ಯವಂತರ ಮನೆ ಸೇರುವ ಭಾಗ್ಯವಿತ್ತು ಎನ್ನಿಸುತ್ತದೆ. ಬೀದಿ ನಾಯಿಗಳ ಕಾಟ ಜೋರಾಗಿದ್ದ ಕಾಲ, ಆದರೆ ಮಗುವಿನ ಅದೃಷ್ಟವೋ ಏನೋ ಮಗುವಿಗೆ ಏನೂ ಆಗಿರಲಿಲ್ಲ. "ಕರುಣಾಳು" ಆಶ್ರಮದ ವೃದ್ದಾಶ್ರಮದಲ್ಲಿದ್ದ ವೃದ್ಧರೊಬ್ಬರಿಗೆ ಬೆಳ್ಳಂಬೆಳಗ್ಗೆ ವಾಕ್ ಹೋಗುವ ಅಭ್ಯಾಸವಿತ್ತು. ಅವರ ಕಣ್ಣಿಗೆ ಬಿದ್ದಿದ್ದ ಈ ಮಗು ಅನಾಥಾಶ್ರಮದಲ್ಲಿ ಬೆಳೆಯುತ್ತಿತ್ತು. ಅಕ್ರಮ ಸಂತಾನದ ಫಲವೋ, ತಾಯಿಗೆ ಯಾವ ಕಷ್ಟವೋ ತಾಯಿ ಮಡಿಲಿನಿಂದ ಹೊರ ದಬ್ಬಲ್ಪಟ್ಟಿದ್ದ. ಹೆಣ್ಣು ಮಕ್ಕಳು ಪೋಷಣೆಗೆ ಕಷ್ಟವಾಗಬಹುದೆಂದು ಹಲವರು ಹೆಣ್ಣು ಮಕ್ಕಳನ್ನು ಹೀಗೆ ಬೀದಿಗೆ ಬಿಸಾಡುವುದುಂಟು. ಆದರೆ, ಈ ಮಗು ಯಾವ ಕಾರಣಕ್ಕೆ ಹೀಗೆ ಬೀದಿಗೆ ಬಿದ್ದಿತ್ತೋ ಗೊತ್ತಿಲ್ಲ, ಕಾಲಿನ ಉನವೂ ಕಾರಣವಾಗಿರಬಹುದು. ಹಲವಾರು ಜನರು ಅಲ್ಲಿಂದ ಮಕ್ಕಳನ್ನು ದತ್ತು ಪಡೆಯಲು ಬಂದಿದ್ದರು. ಹಲವಾರು ಜನರು ಈಗೀಗ ಹೆಣ್ಣು ಮಕ್ಕಳನ್ನು ದತ್ತು ಪಡೆಯಲಿಚ್ಛಿಸುತ್ತಾರೆ. ಅವನ ಓರಗೆಯ ಮಕ್ಕಳೆಲ್ಲಾ ಒಂದು ನೆಲೆ ಕಂಡರೂ ಇವನು ಇಲ್ಲೇ ಉಳಿದು ಬಿಟ್ಟ. ಕಾಲಿನ ಊನ ಕೂಡಾ ಅದಕ್ಕೆ ಕಾರಣವಾಗಿತ್ತೋ ಏನೋ. ಕೆಲವೊಮ್ಮೆ ಅದೃಷ್ಟ ತಡವಾಗಿ ಬಾಗಿಲು ಬಡಿಯುತ್ತದೆ ಕಾಯುವ ತಾಳ್ಮೆ ಇರಬೇಕಷ್ಟೇ.. ಅವನ ಅದೃಷ್ಟ ಅಪರ್ಣಾಳ ರೂಪದಲ್ಲಿತ್ತು.
ನೋಡಿದವರಿಗೆ ಇದೆಂತಹಾ ಹುಚ್ಚು ಆಸೆ ಎನ್ನಿಸಬಹುದು, ತಮಗೆ ಮಕ್ಕಳಾಗುವ ಹೊತ್ತಲ್ಲಿ ಈ ಮಗು ಬೇಕಾ ? ಎಂಬ ಭಾವ ಮೂಡುವುದಂತೂ ಸುಳ್ಳಲ್ಲ. ಆದರೆ, ಅಪರ್ಣಾಳ ಅತ್ತೆ-ಮಾವ ಉದಾರ ಹೃದಯವರು. ಹಣದಲ್ಲಿ ಮಾತ್ರವಲ್ಲ ಗುಣದಲ್ಲಿಯೂ ಸಿರಿವಂತರೇ.. ಎಂಬುದನ್ನು ನಿರೂಪಿಸಿಬಿಟ್ಟರು. ಆದರೆ, ಅಶುತೋಷ್ ನಿಗೆ ಆಗಲೇ ಯಾಕೋ ಈ ವಿಚಾರದಲ್ಲಿ ಕೊಂಚ ವಿರೋಧವಿದ್ದಂತಿತ್ತು. ದತ್ತು ಮಗುವಿನ ಅವಶ್ಯಕತೆ ಇಲ್ಲ ಎಂಬ ಧಾಟಿಯಲ್ಲಿ ಅವನಿದ್ದ. ಬಾಯಿ ಬಿಟ್ಟು ಏನನ್ನೂ ಆಡದಿದ್ದರೂ, ಅವನ ಚರ್ಯೆಯಲ್ಲಿ ಅದೇಕೋ ಅಪಶೃತಿ ಇತ್ತು. ಪುಟ್ಟ ಕಂದ ಮನೆಗೆ ಬಂದ ನಂತರ ಮನೆಯ ವಾತಾವರಣ ಬದಲಾಗಿ ಹೋಯಿತು. ಅವನಿಗೆ "ಅಥರ್ವ" ಎಂಬ ನಾಮಕರಣ ನಡೆಯಿತು. ಅಶುವಿನ ಚರ್ಯೆಯೂ ಬದಲಾಯಿತು. ಪುಟ್ಟ ಅಥರ್ವನೊಂದಿಗೆ ಕಾಲ ಕಳೆಯುವಾಗಲೆಲ್ಲಾ ಅವನ ಮುಖದಲ್ಲಿ ಯಾವುದೋ ಅವ್ಯಕ್ತ ನೋವಿನ ಛಾಯೆಯಿತ್ತು.
ಅಥರ್ವ ಕೆಲ ಸಂಧರ್ಭದಲ್ಲಿ, ಕಾರ್ಯಕ್ರಮಗಳಲ್ಲಿ ಅಥವಾ ಅಶುತೋಷ್ ಅಪರ್ಣರೊಂದಿಗೆ "ಕರ್ಮಭೂಮಿ"ಗೆ ಬರುವುದಿತ್ತು. ಅವನಿಗೆ ಕಚೇರಿಯಲ್ಲಿ ಹಿಡಿದಿಟ್ಟ ವಾತಾವರಣ ಬೇಕಿರಲಿಲ್ಲ, ಬೆಳೆಯುವ ಮಕ್ಕಳು ಸ್ವಾತಂತ್ರ್ಯ ಬಯಸುತ್ತಾರೆ, ಅದರಲ್ಲೂ ಇತರರೊಂದಿಗೆ ಬೆರೆಯುವ, ಆಟವಾಡುವ ಇಚ್ಛೆ ಹೊಂದಿರುತ್ತಾರೆ. ಅಥರ್ವನಿಗೆ ಆ ಅನುಕಂಪದ ನೋಟ, ಸಿರಿವಂತಿಕೆಯ ಆವರಣದಿಂದ ಈಚೆ ಬರಬೇಕಿತ್ತು. ಆತ ಇಲ್ಲಿಗೆ ಬಂದಾಗಲೆಲ್ಲಾ ಆಡುತ್ತಿದ್ದದ್ದು ವಾಚ್ ಮ್ಯಾನ್ 'ಶಾಂತಪ್ಪ'ನೊಂದಿಗೆ. ಅಜ್ಜನ ಜೊತೆ ಮನೆಯಲ್ಲಿ ಆಟವಾಡಿ ರೂಢಿಯಾಗಿದ್ದ ಅವನು, ಅವರದೇ ವಯಸ್ಸಿನವರಾದ ಶಾಂತಪ್ಪನವರೊಟ್ಟಿಗೆ ಸುಲಭವಾಗಿ ಬೆರೆತು ಆಡುತ್ತಿದ್ದ. ಅವರೂ ಮಗುವಿನೊಟ್ಟಿಗೆ ಮಗುವಿನಂತಾಗಿ ಬಿಡುತ್ತಿದ್ದರು.
ಪ್ರತಿಬಾರಿಯಂತೆ ಈ ಬಾರಿಯೂ ಅಥರ್ವ ಅಪರ್ಣಾಳೊಟ್ಟಿಗೆ ಹೊರಟ. ಪ್ರತಿಬಾರಿಯಂತೆ ಈ ಬಾರಿ ಕಾರ್ ಇರಲಿಲ್ಲ. ಇಬ್ಬರೂ ನಡೆದೇ ಗೇಟ್ ದಾಟಿದರು. ಅಥರ್ವನಿಗೆ ಕುತೂಹಲ ಹೆಚ್ಚಾಗಿ "ಯಾಕಮ್ಮಾ, ಇವತ್ತು ಕಾರ್ ರಿಪೇರಿಗೆ ಹೋಗಿದೆಯಾ? ಆಟೋದಲ್ಲಿ ಮನೆಗೆ ಹೋಗೋದಾ?" ಎಂದದ್ದಕ್ಕೆ ಅವಳಿಗೆ ಏನು ಹೇಳಬೇಕೆಂದು ತೋಚದೆ "ನಿನಗೆ ಐಸ್ಕ್ರೀಂ ಅಂದರೆ ಇಷ್ಟ ಅಲ್ವಾ..? ಅದಕ್ಕೆ ಇಲ್ಲೇ ಹತ್ತಿರದಲ್ಲಿರೋ ಐಸ್ಕ್ರೀಂ ಪಾರ್ಲರ್ ನಲ್ಲಿ ಐಸ್ಕ್ರೀಂ ತಿನ್ನಿಸೋಣ" ಅಂತಾ ಹೇಳಿದಳು. ಖುಷಿಯಿಂದ ಅವಳೊಟ್ಟಿಗೆ ಹೆಜ್ಜೆ ಹಾಕುತ್ತಿದ್ದ ಅಥರ್ವ ಯಾವುದೋ ಮಾಯೆಯಲ್ಲಿ ಅವಳ ಕೈ ಬಿಡಿಸಿಕೊಂಡು ರಸ್ತೆಗಿಳಿದುಬಿಟ್ಟ. ಆಗಲೇ ಅಲ್ಲಿ ಬರುತ್ತಿದ್ದ ಕಾರಿಗೆ ಸಿಲುಕುವವನಿದ್ದ, ಅಷ್ಟರಲ್ಲಿ ಯಾರೋ ಅವನನ್ನು ದೂಡಿ ತಾನು ಕಾರಿಗೆ ಸಿಲುಕಿದ್ದ, ಆ ಪುಟ್ಟ ಹುಡುಗನೊಡನೆ ಮತ್ತೊಬ್ಬ ಹುಡುಗಿಯೂ ಇದ್ದಳು. ಆ ಕಾರು ಮೈನಾವತಿಯವರದ್ದು. ಎಲ್ಲವೂ ಕಣ್ರೆಪ್ಪೆ ಮುಚ್ಚಿ ತೆಗೆಯುವಷ್ಟರಲ್ಲಿ ನಡೆದು ಹೋಗಿತ್ತು.
ಕಾರಿನಿಂದ ಇಳಿದ ಮೈನಾವತಿಯವರು ಅಪರ್ಣಾಳನ್ನು, ಅಥರ್ವನನ್ನು ನೋಡಿ ಗಾಬರಿಯಾದರು. ಅವರನ್ನು ಮತ್ತಷ್ಟು ಗಾಬರಿಗೊಳಪಡಿಸಿದ್ದು ಆ ಮಕ್ಕಳು.
"ಸ್ಕಂದ..... ಸುಕ್ಷಿತ..." ಎಂದು ಕೂಗಿಕೊಂಡವರೇ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟರು.
ಅಪರ್ಣಾಳಿಗೆ ಎಲ್ಲವೂ ಅಯೋಮಯ. ಮೈನಾವತಿ ಅಮ್ಮನನ್ನು ಅಲ್ಲಿ ನೋಡಿದವಳಿಗೆ ಆಶ್ಚರ್ಯವಾಗಿತ್ತು. ಆದರೆ, ಅದೆಲ್ಲವನ್ನು ಯೋಚಿಸುವ ಸ್ಥಿತಿಯಲ್ಲಿ ಅವಳಿರಲಿಲ್ಲ. ಅಥರ್ವನಿಗೆ ತರಚು ಗಾಯಗಳಾಗಿದ್ದವು ಅಷ್ಟೇ.. ಆದರೆ, ಸ್ಕಂದ ರಕ್ತದ ಮಡುವಲ್ಲಿದ್ದ, ಸುಕ್ಷಿತ ಕೂಡಾ ಪ್ರಜ್ಞೆ ತಪ್ಪಿದ್ದಳು. ಯಾರನ್ನು ಸಂಭಾಳಿಸುವುದೋ ತಿಳಿಯದಿರುವಾಗ ಸಂಧರ್ಭವನ್ನು ಚಾಕಚಕ್ಯತೆಯಿಂದ ನಿಭಾಯಿಸಿದ್ದ ನಂದನ್. ತಕ್ಷಣವೇ ಆಸ್ಪತ್ರೆಗೆ ಕರೆ ಮಾಡಿ ambulance ಅನ್ನು ಕರೆಸಿದ್ದ. ಆವರದ್ದೇ ಆಸ್ಪತ್ರೆ "ಕಾರುಣ್ಯ"ದಲ್ಲಿ ಸ್ಕಂದನ ಚಿಕಿತ್ಸೆಗೆ ಎಲ್ಲವೂ ತಯಾರಾಗಿತ್ತು.
ತಕ್ಷಣವೇ ನಂದನ್ ಕರೆಮಾಡಿ ಎಲ್ಲವನ್ನೂ ಅಶುತೋಷ್ ಗೆ ತಿಳಿಸಿದ್ದ.
ಸ್ಕಂದ ಅಲ್ಲಿಗೆ ಯಾಕೆ ಬಂದ? ಹೇಗೆ ಬಂದ? ಅಪರ್ಣಾ ಮೈನಾ ಅಮ್ಮನನ್ನು ನೋಡಿದ್ದಾಳೆ. ಯಾವ ಸತ್ಯವನ್ನು ಅವಳಿಂದ ಇಷ್ಟು ದಿನ ಮುಚ್ಚಿಟ್ಟಿದ್ದೇನೋ ಅದು ತಾನಾಗಿಯೇ ಅವಳ ಮುಂದಿದೆ. ಈಗೇನು ಮಾಡುವುದು ? ತಲೆಬಿಸಿಯಲ್ಲಿದ್ದ ಅಶುತೋಷ್ ನ ಮೊಬೈಲ್ ಮತ್ತೆ ರಿಂಗಣಿಸತೊಡಗಿತು
(ಸಶೇಷ)
(ಎಂದಿನಂತೆ ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಿ. ಮುಂದಿನ ಬರಹಕ್ಕೆ ನಿಮ್ಮ ಪ್ರತಿಕ್ರಿಯೆಗಳೇ ಸ್ಫೂರ್ತಿ)
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ