ಭಾನುವಾರ, ಸೆಪ್ಟೆಂಬರ್ 15, 2019

ಇಂಜಿನಿಯರ್ ಗಳ ಹಿಂದಿನ ಕತೆ

ಪಿ.ಯು.ಸಿ ಮುಗಿದ ನಂತರ ಯಾವುದೋ ಕೋರ್ಸ್ ಆಗಬಹುದು ಎಂದೋ, ಅಥವಾ ಮತ್ತಾವ ಆಯ್ಕೆಯೂ ಲಭ್ಯವಿಲ್ಲ ಎಂದೋ ಅಥವಾ ಮತ್ತೊಬ್ಬರ ಮಾತಿಗೆ ಬೆಲೆಕೊಟ್ಟು ಅಥವಾ ಮನೆಯಲ್ಲಿ ಹೇಳಿದರೆಂದೋ, ನಮ್ಮ ಹವ್ಯಾಸಗಳನ್ನೆಲ್ಲಾ ಬಲಿಕೊಟ್ಟೋ ಒಂದು ಪ್ರೊಫೆಶನಲ್ ಕೋರ್ಸ್ ಗೆ ಸೇರುತ್ತೇವೆ. ಇಂಜಿನಿಯರಿಂಗ್ ಮುಗಿಸಿದ 80 ರಿಂದ 90% ಜನರ ಇಂಜಿನಿಯರಿಂಗ್ ಸೇರುವ ಮೊದಲಿನ ಕಥೆ ಇದು.

ಹುಡುಗಿಯರ ಇಂಜಿನಿಯರಿಂಗ್ ಸೇರುವಿಕೆಯ ಹಿಂದೆ ಇನ್ನೊಂದಿಷ್ಟು ಕಾರಣಗಳಿರುತ್ತವೆ. ಹುಡುಗಿ ಕೊಂಚ ಕಪ್ಪು, ಎತ್ತರ ಕೂಡಾ ಕಡಿಮೆಯೇ.. ಬಿ.ಎಸ್.ಸಿ ಸೇರಿದರೆ ಗಂಡು ಹುಡುಕುವುದು ಕಷ್ಟ ಆಗುತ್ತೆ. ಬಿ.ಇ ಅಥವಾ ಬಿ.ಟೆಕ್ ಮಾಡಿದರೆ ಅವಳ ಮದುವೆಗೆ ಸುಲಭವಾಗುತ್ತೆ. ಹೆಣ್ಣುಮಕ್ಕಳ ಮದುವೆಯ ಮಾರ್ಕೆಟ್ ಗೆ ಇದೊಂದು ಅಸ್ತ್ರವಾಗಿರುತ್ತದೆ ಅಷ್ಟೇ..

ಇಂಜಿನಿಯರಿಂಗ್ ಸೇರಿದವರೆಲ್ಲಾ ಇಂಜಿನಿಯರ್ ಗಳೇ ಆಗುತ್ತಾರಾ? ಖಂಡಿತ ಇಲ್ಲ. 4 ವರ್ಷದಲ್ಲಿ ಇಂಜಿನಿಯರಿಂಗ್ ಮುಗಿಸುವವರು ಕೂಡಾ ಇಂಜಿನಿಯರ್ ಗಳಾಗುತ್ತಾರೆ. 8 ವರ್ಷದಲ್ಲಿ ಇಂಜಿನಿಯರಿಂಗ್ ಮುಗಿಸುವವರು ಕೂಡಾ ಇಂಜಿನಿಯರ್ ಎಂಬ ಹಣೆಪಟ್ಟಿ ಹೊತ್ತುಕೊಳ್ಳುತ್ತಾರೆ. 4 ವರ್ಷದಲ್ಲಿ ಇಂಜಿನಿಯರಿಂಗ್ ಮುಗಿಸಿದರೂ ಮೊದಲನೇ ಅಟೆಂಪ್ಟ್ ಅಲ್ಲಿಯೇ ಎಲ್ಲಾ ಸಬ್ಜೆಕ್ಟ್ ಗಳನ್ನು ಪಾಸ್ ಮಾಡುವವರು ಕಡಿಮೆಯೇ.. 8 ಸೆಮಿಸ್ಟರ್ ಮುಗಿಸಿ, 64 ಸಬ್ಜೆಕ್ಟ್ ಗಳನ್ನು ಓದಿದ ಮಾತ್ರಕ್ಕೆ ಇಂಜಿನಿಯರ್ ಗಳಾಗಿ ಬಿಡುತ್ತಾರಾ? ಅಸಲಿಗೆ ಇಂಜಿನಿಯರ್ ಗಳೆಂದರೆ ಯಾರು?

ಸಮಾಜದ ಸಮಸ್ಯೆಗಳಿಗೆ ಎಲ್ಲರಿಗೂ ಸರಿ ಹೊಂದುವಂತೆ ಉತ್ತರ ಸೂಚಿಸುವವನೇ ಇಂಜಿನಿಯರ್. ಕಲ್ಲಿನಿಂದ ಬೆಂಕಿ ಉತ್ಪಾದಿಸುವುದನ್ನು ಕಂಡು ಹಿಡಿದವನು, ಮರದ ಗಾಲಿ ಕಂಡು ಹಿಡಿದವನು, ಮನೆ ಕಟ್ಟುವುದನ್ನು ಶುರು ಮಾಡಿದವನು ಎಲ್ಲರೂ ಒಂದರ್ಥದಲ್ಲಿ ಇಂಜಿನಿಯರ್ ಗಳೇ.. ಇಂದಿನ ಇಂಜಿನಿಯರ್ ಗಳ ಕುರಿತು ಒಂದು ಮಾತಿದೆ. ಬೆಂಗಳೂರಿನಲ್ಲಿ ಒಂದು ಬೀದಿಯಲ್ಲಿ ನಿಂತು ಕಲ್ಲು ಎಸೆದರೆ ಅದು ಒಂದು ನಾಯಿಗೆ ತಾಕುತ್ತದೆ ಅಥವಾ ಒಬ್ಬ ಇಂಜಿನಿಯರ್ ಗೆ ತಾಕುತ್ತದೆ ಎಂದು. ಇಂಜಿನಿಯರ್ ಗಳ ಸಂಖ್ಯೆ ಇಂದು ಕ್ರಮೇಣ ಹೆಚ್ಚಾಗುತ್ತಲೇ ಹೋಗುತ್ತಿದೆ. ಇಂದಿನ ಇಂಜಿನಿಯರಿಂಗ್ ಕಾಲೇಜುಗಳು ಇಂಜಿನಿಯರ್ ಗಳನ್ನು ತಯಾರು ಮಾಡುವ ಕಾರ್ಖಾನೆಗಳಂತೆ ಭಾಸವಾಗುತ್ತಿವೆ. ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ ಬದಲಿಗೆ ಸಂಖ್ಯೆಗಳಲ್ಲಿ ಹೆಚ್ಚಳ ಮಾಡುತ್ತಿವೆ ಅಷ್ಟೇ..

ಇಂದಿನ ಇಂಜಿನಿಯರಿಂಗ್ ಕಾಲೇಜುಗಳ ಪಠ್ಯದಲ್ಲಿರುವುದು 10 ರಿಂದ 15 ವರ್ಷ ಹಿಂದಿನ ಟೆಕ್ನಾಲಜಿಯ ಕುರಿತ ವಿಚಾರಗಳು. ಇಂದಿನ ಪೀಳಿಗೆಗೆ ಅದು ಔಟ್ ಡೇಟೆಡ್. ಅಲ್ಲದೇ ಇಂದಿನ ಇಂಜಿನಿಯರ್ ಗಳಿಗೆ ಬೇಕಾದ ಪ್ರಾಕ್ಟಿಕಲ್ ನಾಲೆಡ್ಜ್ ಕೂಡಾ ಅದರಿಂದ ದೊರೆಯುತ್ತಿಲ್ಲ. ಬರಿ ಪುಸ್ತಕಕ್ಕಷ್ಟೇ, ಅಂಕಕ್ಕಷ್ಟೇ ಓದು ಸೀಮಿತವಾಗಿಬಿಟ್ಟಿದೆ. ಅದಕ್ಕಾಗಿಯೇ ಇಂಜಿನಿಯರಿಂಗ್ ಮುಗಿದ ಮೇಲೂ ಕೆಲಸಕ್ಕೋಸ್ಕರ ಮತ್ತೊಂದು ಕೋರ್ಸ್ ಮಾಡಬೇಕಾಗುತ್ತದೆ. ಅಲ್ಲದೇ, ಇಂಜಿನಿಯರಿಂಗ್ ನ ಕೊನೆಯ ವರ್ಷದ ಪ್ರಾಜೆಕ್ಟ್ ಎಷ್ಟು ಜನರ ಸ್ವಂತ ಆಲೋಚನೆ..? ಬಹುಶಃ 10% ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್ ಗಳನ್ನು ತಾವೇ ಮಾಡಬಹುದೇನೋ ಅಷ್ಟೇ. ಇಂಜಿನಿಯರಿಂಗ್ ಪ್ರಾಜೆಕ್ಟ್ ಮಾಡಿಕೊಡುವ ಕನ್ಸಲ್ಟೆನ್ಸಿ ಗಳು ಇಂದು ನಾಯಿಕೊಡೆಗಳಂತೆ ತಲೆ ಎತ್ತಿವೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಲ್ಲಿಂದ ಪ್ರಾಜೆಕ್ಟ್ ಕೊಂಡು ತರುತ್ತಾರೆ ಆದರೆ ಅದನ್ನು ಸರಿಯಾಗಿ ವಿವರಿಸಲು ಸಹಾ ಅವರಿಂದ ಆಗುತ್ತಿರುವುದಿಲ್ಲ. ಇಂದಿನ ದಿನಗಳಲ್ಲಿ ಅವರ ಪ್ರಾಜೆಕ್ಟ್ ಗಳನ್ನು ಅವರೇ ಮಾಡಿದಾಗಲೂ ಅವರ ಗೈಡ್ ಗಳು ನಂಬಲು ತಯಾರಿರುವುದಿಲ್ಲ. ಗೈಡ್ ಎಂಬ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ. ಗೈಡೆನ್ಸ್ ನೀಡದವರಿಗೂ ಅಲ್ಲಿ ಗೈಡ್ ಎಂಬ ಹಣೆಪಟ್ಟಿ.

ಇಷ್ಟೆಲ್ಲಾ ಮುಗಿಸಿ ಹೊರಬಂದರೆ ಕೆಲಸ ಎಂಬ ಪ್ರಶ್ನೆ ಎದುರಾಗುತ್ತದೆ. ಕಾಲೇಜ್ ನಲ್ಲಿಯೇ ಪ್ಲೇಸ್ ಮೆಂಟ್ ಆದವರದ್ದೊಂದು ಕತೆಯಾದರೆ, ಆಗದವರದ್ದೊಂದು ಕತೆ. ಕಾಲೇಜ್ ನ ಪ್ಲೇಸ್ ಮೆಂಟ್ ಟ್ರೈನಿಂಗ್ ನ ಮರುದಿನ ಅಲ್ಲಿನ ಸ್ಥಳೀಯ ಪತ್ರಿಕೆಗಳಲ್ಲಿ, ಕಾಲೇಜಿನ ಹೊರಗಡೆ ಕೆಲಸ ಸಿಕ್ಕಿದವರ ಫೋಟೋ ರಾರಾಜಿಸುತ್ತಿರುತ್ತದೆ. ಆದರೆ, ಕೆಲಸಕ್ಕೆ ಸೇರಲು ಹೋದಾಗ ಅಲ್ಲಿನ ನೈಜ ಸ್ಥಿತಿ ಅರಿವಾಗುವುದು.ಇಂತಹದ್ದೇ ಒಂದಷ್ಟು ಕಾಲೇಜುಗಳಿಂದ ಆಯ್ಕೆ ಮಾಡಿದ ವಿದ್ಯಾರ್ಥಿಗಳು ಅಲ್ಲಿರುತ್ತಾರೆ. ಅಲ್ಲಿರುವ 10-20 ಸ್ಥಾನಗಳಿಗೆ ಮತ್ತೆ ಅಲ್ಲಿ ಪೈಪೋಟಿ ನಡೆಯುತ್ತದೆ. ಇತ್ತ ಕೆಲಸವಿಲ್ಲ, ಅತ್ತ ಕಾಲೇಜಿನಿಂದ ಕೆಲಸ ಸಿಕ್ಕಿದೆ ಎಂಬ ಮುದ್ರೆ. ಇಲ್ಲಿಯೂ ಇರದೆ, ಅಲ್ಲಿಯೂ ಹೋಗದೆ ಅಬ್ಬೇಪಾರಿಗಳಂತಾಗಿ ಬಿಡುತ್ತಾರೆ. ಕಾಲೇಜಿನವರು ನಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಕೈ ತೊಳೆದುಕೊಂಡು ಬಿಡುತ್ತಾರೆ. ನಂತರ ಪ್ಲೇಸ್ ಮೆಂಟ್ ಆಗದವರ ಸಾಲಿಗೇ ಸೇರಿಕೊಂಡು ರೆಸ್ಯೂಮ್ ಹಿಡಿದುಕೊಂಡು ಅಲೆಯುತ್ತಾ ಮತ್ತಾವುದೋ ಕೋರ್ಸ್ ಗೆ ಸೇರಿಕೊಂಡು ಸಿಕ್ಕ ಕೆಲಸ ಮಾಡಿಕೊಂಡು, ಸಿಕ್ಕಷ್ಟೇ ಸಂಬಳವನ್ನು ಒಪ್ಪಿಕೊಂಡು ಸುಮ್ಮನಾಗುವ ಹೊತ್ತಿಗೆ ಇಂತಹದ್ದೇ ಪರಿಸ್ಥಿತಿಯ ಮತ್ತೊಂದು ಬ್ಯಾಚ್ ಇಂಜಿನಿಯರ್ ಗಳು ಎಂಬ ಕಿರೀಟ ಹೊತ್ತುಕೊಂಡು ಹೊರಬಂದಿರುತ್ತಾರೆ.

ಇಂತಹದ್ದೇ ಪರಿಸ್ಥಿತಿ ಮರುಕಳಿಸುತ್ತಲೇ ಇದೆ. ವಿದ್ಯಾರ್ಥಿಗಳ ಕೆಲವು ಕೊರತೆಯಿಂದ ಇಂಜಿನಿಯರಿಂಗ್ ಕಾಲೇಜುಗಳು ಬಾಗಿಲು ಮುಚ್ಚುವ ಪರಿಸ್ಥಿತಿಗೆ ಬರುತ್ತಿದ್ದರೆ ಮತ್ತೆ ಕೆಲವು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಶುರುವಾಗುತ್ತಿವೆ.

ಇನ್ನು ಮುಂದಾದರೂ ಗುಣಮಟ್ಟದ ಶಿಕ್ಷಣ ಕೊಡುವ ಇಂಜಿನಿಯರಿಂಗ್ ಕಾಲೇಜುಗಳಾಗಿ ಕಾಲೇಜುಗಳು ಮತ್ತು ಅಧ್ಯಾಪಕರು ಬದಲಾಗಲಿ. ಇವತ್ತು ಕೀಳಿರಿಮೆಯಿಂದ "ನಾನೂ ಒಬ್ಬ ಇಂಜಿನಿಯರ್" ಎಂದು ಹೇಳಿಕೊಳ್ಳುವವರು ಗರ್ವದಿಂದ ಸಮಾಜಕ್ಕೆ ನಾನು ನೀಡಿರುವ ಕೊಡುಗೆ ಇದು.. "ನಾನೋರ್ವ ಇಂಜಿನಿಯರ್" ಎಂದು ಹೆಮ್ಮೆಯಿಂದ ಹೇಳುವಂತಾಗಲಿ. ಯಾವುದೂ ಸಿಗದೆ ಇಂಜಿನಿಯರಿಂಗ್ ಸೇರಿಕೊಂಡೆ ಎನ್ನುವುದಕ್ಕಿಂತ "ಇಂಜಿನಿಯರಿಂಗ್" ಅನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದೇ ಇಂಜಿನಿಯರಿಂಗ್ ಅನ್ನು ಆಯ್ಕೆ ಮಾಡಿಕೊಳ್ಳುವಂತಾಗಲಿ ಎಂದು ಆಶಿಸುವೆ.

ಇಂಜಿನಿಯರಿಂಗ್ ಹಿಂದಿನ ಕತೆ ಏನೇ ಇದ್ದರೂ ಇಂಜಿನಿಯರಿಂಗ್ ಮುಗಿಸಿರುವ ಎಲ್ಲಾ ಇಂಜಿನಿಯರ್ ಗಳಿಗೂ, ಭಾವೀ ಇಂಜಿನಿಯರ್ ಗಳಿಗೂ, ಇಂಜಿನಿಯರಿಂಗ್ ಓದಿ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೂ ಹ್ಯಾಪಿ ಇಂಜಿನಿಯರ್ಸ್ ಡೇ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ