ಶುಕ್ರವಾರ, ಸೆಪ್ಟೆಂಬರ್ 20, 2019

ಯಾವ ಹೆಸರು ಈ ಭಾವಾನುಬಂಧಕೆ

ಇವತ್ತು ಮನೆಗೆ ಬಂದ ತಕ್ಷಣ 8 ವರ್ಷದ ಸರಳ ಓಡಿ ಬಂದು ಅಪ್ಪಿಕೊಂಡು "ಪಪ್ಪಾ, ನಾಳೆ ಭಾನುವಾರ ಅಲ್ವಾ? ಎಲ್ಲಾದ್ರೂ ಹೋಗೋಣ್ವಾ?" ಅಂತ ಕೇಳಿದಳು. ಅದಕ್ಕೆ "ಆಯ್ತು ಪುಟ್ಟಾ, ಅಮ್ಮ, ನಾನು, ನೀನು, ಅಜ್ಜಿ, ತಾತ ಎಲ್ಲಾ ಎಲ್ಲಾದ್ರೂ ಹೊರಗಡೆ ಹೋಗಿ ಸುತ್ತಾಡಿಕೊಂಡು ಬರೋಣ " ಎಂದು ಹೇಳುತ್ತಿರುವಷ್ಟರಲ್ಲೇ ರೂಪ ಬಂದು "ಹಾಂ! ಏನು ಹೇಳ್ತಾ ಇದ್ದೀರಾ? ಆಗ್ಲೇ ಇಷ್ಟು ಬೇಗ ಮರೆತು ಹೋದ್ರಾ?" ಅಂತಾ ಕೇಳಿದ್ಲು, ಅದಕ್ಕೆ "ಎಲ್ಲಿಗೆ ಹೋಗಬೇಕೇ?" ಅಂತಾ ಕೇಳಿದೆ. ಅದಕ್ಕೆ "ರವಿ ಅಂಕಲ್ ನ ನೋಡೋದಕ್ಕೆ ಹೋಗಬೇಕು ಅನ್ನೋದನ್ನ ಇಷ್ಟು ಬೇಗ ಮರೆತುಬಿಟ್ರಾ?" ಅಂದ್ಲು. "ಓ! ನನಗೆ ಇವಾಗ ನೆನಪಾಯ್ತು, ಸಾರಿ ಪುಟ್ಟಾ ಇನ್ನೊಂದು ದಿನ ಪಿಕ್ ನಿಕ್ ಗೆ ಹೋಗೋಣ ಅಂದೆ" ಅದಕ್ಕೆ ಅವಳು ಕೆನ್ನೆ ಊದಿಸಿಕೊಂಡು "ಪಪ್ಪಾ, ಯಾವಾಗ್ಲೂ ನೀನು ಹೀಗೇ, ಆದ್ರೆ ರವಿ ಅಂಕಲ್ ಅಂದ್ರೆ ಯಾರು? ನೀನು,ಅಮ್ಮ ಅವರನ್ನು ನೋಡೋಕೆ ಪ್ರತಿ ತಿಂಗಳು ಯಾಕೆ ಹೋಗಬೇಕು?" ಅಂದ್ಲು. ಅದಕ್ಕೆ ರೂಪ "ಅವರು ನಿನಗೆ ತಾತ ಆಗಬೇಕು ಪುಟ್ಟಾ" ಅಂತಂದ್ಲು.ಆದರೆ ಸರಳ ಅದನ್ನು ಒಪ್ಪದೆ "ನಮ್ಮ ತಾತ ನಮ್ಮನೆಯಲ್ಲೇ ಇದ್ದಾರೆ, ನೀವು ಸುಳ್ಳು ಹೇಳ್ತಾ ಇದ್ದೀರಾ. ನಾನು, ನನ್ನ ಪಿಕ್ ನಿಕ್ ಗಿಂತ ಬೇರೆ ಯಾರೋ ಹೆಚ್ಚಾದ್ರು ಅಲ್ವಾ?" ಎಂದವಳಿಗೆ ಎರಡು ಹೊಡೆದು ನಾನು ನನ್ನ ರೂಂ ಸೇರಿದೆ. ನನ್ನ ಮನಸ್ಸು ಹಿಂದಕ್ಕೋಡಿತು.

ನಾನು ನನ್ನ ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿರುವಾಗ 'ಸಹನ' ನನ್ನ ಬಾಳಿನಲ್ಲಿ ಬಂದಿದ್ದಳು. ಬಿ.ಕಾಂ ಕೊನೆ ವರ್ಷದಲ್ಲಿದ್ದ ಸಹನ ಬೇರೆ ಯಾರೂ ಅಲ್ಲ, ಅಪ್ಪನ ಫ್ರೆಂಡ್ ರವಿ ಅಂಕಲ್ ಮಗಳೇ. ನಮ್ಮಿಬ್ಬರ ಕುಟುಂಬಗಳಲ್ಲಿ ತುಂಬಾ ಸಲುಗೆ ಇತ್ತು. ಅದೇ ಧೈರ್ಯದಿಂದ ನಾನು ಅವಳು ಪ್ರೀತಿಸುತ್ತಾ ಇದ್ವಿ. ನಮ್ಮ ಮನೆಗಳಲ್ಲಿ ಈ ವಿಷಯ ಗೊತ್ತಾದಾಗ ಅಮ್ಮ "ಅವಳು ನಿನಗೆ ಸರಿ ಹೊಂದುವುದಿಲ್ಲ ಆದರೆ ನಿನ್ನಿಷ್ಟಾನೇ ನನ್ನಿಷ್ಟ" ಅಂದಿದ್ರು.

ಅಪ್ಪ ಮತ್ತು ರವಿ ಅಂಕಲ್ ಬೇರೆಯವರಿಗೆ ತಿಳಿಯದಂತೆ ನನ್ನ ಮತ್ತು ಸಹನ ಮದುವೆ ನಿಶ್ಚಯ ಮಾಡಿಕೊಂಡಿದ್ದನ್ನು ನಾನು ಕದ್ದು ಕೇಳಿಸಿಕೊಂಡಿದ್ದೆ. ಇದೇ ಸಲುಗೆಯಿಂದ ಪರೀಕ್ಷೆಗಳನ್ನೂ ನಿರ್ಲಕ್ಷ್ಯ ಮಾಡಿ ಅವಳ ಹಿಂದೆ ಹಿಂದೆ ಸುತ್ತುತ್ತಾ ಇದ್ದೆ. ನನ್ನ ಕ್ಲೋಸ್ ಫ್ರೆಂಡ್ "ಅವಳು ಸರಿ ಇಲ್ಲ ಕಣೋ, ನಿನಗೆ ಸರಿ ಹೊಂದಲ್ಲ ಕಣೋ" ಅಂದಾಗಲೂ "ಒಬ್ಬಳು ಹುಡುಗಿ ಚಾರಿತ್ರ್ಯದ ಬಗ್ಗೆ ಮಾತಾಡೋ ನೀನು ಸರಿ ಇದ್ದೀಯಾ?" ಅಂತಾ ಜಗಳ ಮಾಡಿ ಅವನನ್ನೂ ದೂರ ಮಾಡಿಕೊಂಡಿದ್ದೆ.

ಪ್ರೀತಿಯಲ್ಲಿ ಬಿದ್ದಿದ್ದಾಗ ಎಲ್ಲರೂ ಹೇಳುವ ಬುದ್ದಿಮಾತು ಕಿವಿ ಮೇಲೆ ಬೀಳೋದಿಲ್ಲ ಅಂತಾ ಹೇಳುತ್ತಾರಲ್ಲ, ನನ್ನ ವಿಷಯದಲ್ಲೂ ಹಾಗೇ ಆಯ್ತು. ಮೊದಮೊದಲು ನನ್ನ ಜೊತೆ ಪ್ರೀತಿಯಿಂದಲೇ ನಡೆದುಕೊಳ್ಳುತ್ತಾ ಇದ್ದ ಸಹನ ಬರುಬರುತ್ತಾ ಅವಳ ಕಾಲೇಜಿನ 'ಮಯಾಂಕ್'ಗೆ ಜೊತೆಯಾದಳು. ಮೊದಮೊದಲಿಗೆ ನಾನೂ ಸಹಾ ಸಹಪಾಠಿಗಳಲ್ವಾ ಅಂತಾ ಉಪೇಕ್ಷೆ ಮಾಡಿದರೂ ನಂತರದ ದಿನಗಳಲ್ಲಿ ಅವಳನ್ನು ಪ್ರಶ್ನಿಸಲಾರಂಭಿಸಿದೆ. ಅದಕ್ಕೆ ಅವಳು "ಇಷ್ಟೊಂದು ಪೊಸೆಸ್ಸೀವ್ ಆದ್ರೆ ಹೇಗೆ? ಈಗಲೇ ಇಷ್ಟು ಅನುಮಾನ ಪಡುವವನು ಮುಂದೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೀಯಾ ಅಂತಾ ಹೇಗೆ ನಂಬಲಿ?" ಅಂತಾ ಕೇಳಿದ್ಲು. ಅವತ್ತು ನನಗೇ ನನ್ನ ಮೇಲೆ ಬೇಜಾರಾಗಿ "ಸಾರಿ ಕಣೇ, ಇನ್ನೊಂದು ಸಲ ಹೀಗಾಗಲ್ಲ" ಅಂತಾ ಅವಳನ್ನು ರಮಿಸಿ ಅವಳಿಷ್ಟದ ರೆಸ್ಟೋರೆಂಟ್ ಗೆ ಕರೆದುಕೊಂಡು ಹೋಗಿ ಜೇಬನ್ನೆಲ್ಲಾ ಖಾಲಿ ಮಾಡಿದೆ.

ಕಾಲೇಜ್ ನಲ್ಲಿ ಕ್ಯಾಂಪಸ್ ಸೆಲೆಕ್ಷನ್ ನಡೆಯುತ್ತಾ ಇಡ್ಡರೂ ಉಡಾಫೆ ಮಾಡಿಕೊಂಡು ನಾನು ಸಹನಾಳೊಟ್ಟಿಗೇ ತಿರುಗಾಡ್ತಾ ಇದ್ದೆ. ಅಲ್ಲದೇ ನನ್ನ ಇಂಜಿನಿಯರಿಂಗ್ ಮುಗಿಯಲು ಇನ್ನು ಕೆಲವೇ ದಿನಗಳು ಇದ್ದಾಗ ಸಹನ ಪದೇಪದೇ ಮುನಿಸಿಕೊಳ್ಳುವುದು, ರಗಳೆ ತೆಗೆಯುವುದು ನಡೆದೇ ಇತ್ತು. ಅಲ್ಲದೇ 'ಮಯಾಂಕ್'ನೊಟ್ಟಿಗೆ ಕಾಣಿಸಿಕೊಳ್ಳುವುದು ಎಂದಿಗಿಂತ ಜಾಸ್ತಿಯೇ ಆಗಿತ್ತು. ಇನ್ನು ತಡ ಮಾಡಬಾರದು ಅಂತಾ ತೀರ್ಮಾನ ಮಾಡಿದ ನಾನು ಅವತ್ತು ಸಂಜೆಯೇ ಅವಳ ಮನೆಗೆ ಹೊರಟೆ.

ಅವತ್ತು ರವಿ ಅಂಕಲ್ ಮನೆಯಲ್ಲಿ ಇರಲಿಲ್ಲ. ಸದಾ ನಗುಮುಖದಿಂದಲೇ ಸ್ವಾಗತಿಸುತ್ತಿದ್ದ ಸಹನಾಳ ಅಮ್ಮ ಕೂಡಾ ಯಾಕೋ ಅವತ್ತು ಬೇಕೋ ಬೇಡ್ವೋ ಅನ್ನೋ ತರಹ ಬಾಗಿಲು ತೆರೆದರು. ಎಲ್ಲಿ ನೋಡಿದರೂ ಸಹನಾಳ ಸುಳಿವೇ ಇರಲಿಲ್ಲ. "ಸಹನಾ ಇನ್ನೂ ಬಂದಿಲ್ವಾ" ಅಂತಾ ನಾನು ಅವರನ್ನು ಕೇಳಿದಾಗ "ಇಲ್ಲ" ಅಂತಾ ಚುಟುಕಾಗಿಯೇ ಉತ್ತರ ಕೊಟ್ರು. "ಕಾಲೇಜು 4 ಗಂಟೆಗೇ ಮುಗಿಯುತ್ತಲ್ವಾ? ಇನ್ನೂ ಅವಳು ಮನೆಗೆ ಬಂದಿಲ್ವಾ?" ಅಂತಾ ಹೇಳಬೇಕೆಂದುಕೊಂಡ ವಿಷಯಕ್ಕೆ ಪೀಠಿಕೆ ಹಾಕುತ್ತಾ ಇರುವಾಗಲೇ ಅವರು "ನನ್ನ ಮಗಳ ಬಗ್ಗೆ ನೀನ್ಯಾಕೆ ಅಷ್ಟು ತಲೆ ಕೆಡಿಸಿಕೊಳ್ಳುತ್ತೀಯಾ? ಅವಳು ಇಷ್ಟೊತ್ತಲ್ಲಿ ಎಲ್ಲಿದ್ದಾಳೆ ಅಂತಾ ನನಗೊತ್ತು. ಅವಳು ಮತ್ತು ಮಯಾಂಕ್ ನನಗೆ ಹೇಳಿಯೇ ಫಿಲ್ಮ್ ಗೆ ಹೋಗಿದ್ದಾರೆ. ಏನೀವಾಗ? ಇನ್ನಾದ್ರು ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಡು" ಎಂದರು. ಹಾಗಾದರೆ ಇವ್ರಿಗೆ ಮಯಾಂಕ್ ಬಗ್ಗೆ ಗೊತ್ತಿದೆಯಾ ಅಂತಾ ಆಶ್ಚರ್ಯ ಪಡುತ್ತಿರುವಾಗಲೇ "ಮಯಾಂಕ್ ನನ್ನ ಮಗಳನ್ನು ಮದುವೆ ಆಗುತ್ತಿರುವ ಹುಡುಗ, ಅಲ್ಲದೇ ಅವರು ತುಂಬಾ ಶ್ರೀಮಂತರು. ಅವರದ್ದೇ ಫ್ಯಾಕ್ಟರಿ ಇದೆ, ಮನೆ ತುಂಬಾ ಆಳು-ಕಾಳು. ಇರೋ ಒಬ್ಬಳು ಮಗಳನ್ನು ನಾನು ಅಂದ್ಕೊಂಡ ಹಾಗೆಯೇ ಒಳ್ಳೆ ಮನೆಗೇ ಕೊಡ್ತಾ ಇದ್ದೀನಿ. ನಿಮ್ಮ ರವಿ ಅಂಕಲ್ ಹಾಗೆ ಪ್ರಾಮಾಣಿಕತೆ ಅಂತಾ ಕೂತಿದ್ರೆ ಇದೆಲ್ಲಾ ಆಗ್ತಾ ಇರ್ಲಿಲ್ಲ. ಇನ್ಮುಂದೆ ಆದ್ರೂ ನಮ್ಮ ಜೀವನದಲ್ಲಿ ತಲೆ ಹಾಕುವುದನ್ನು ನಿಲ್ಲಿಸು" ಅಂದ್ರು. ಅವತ್ತು ಅಲ್ಲಿಂದ ಎದ್ದು ಬಂದು ಹೇಗೆ ಮನೆ ಸೇರಿದೆನೋ ದೇವರಿಗೇ ಗೊತ್ತು.

ಇದನ್ನೆಲ್ಲಾ ತಿಳಿದ ಅಮ್ಮ ರವಿ ಅಂಕಲ್ ಮತ್ತು ಅವರ ಮನೆಯವರಿಗೆ ಹಿಡಿಶಾಪ ಹಾಕಿದ್ರು. ಅಪ್ಪನದ್ದು ಮತ್ತದೇ ಸಹನೆ ಮತ್ತು ನಿರ್ಲಿಪ್ತತೆ. "ಆಗುವುದೆಲ್ಲಾ ಒಳ್ಳೆಯದಕ್ಕೇ" ಮತ್ತು "ರವಿ ಅಂತಹವನಲ್ಲ, ಎಲ್ಲೋ ಏನೋ ತಪ್ಪು ತಿಳುವಳಿಕೆ ಆಗಿರಬಹುದು, ದುಡುಕಿ ಯಾವುದೇ ನಿರ್ದಾರವನ್ನು ತೆಗೆದುಕೊಳ್ಳುವುದು ಬೇಡ" ಅಂತಂದ್ರು. ಅಷ್ಟರಲ್ಲಿ ನನ್ನ ಎಕ್ಸಾಂಗಳು ಕೂಡಾ ಮುಗಿದಿದ್ದವು. ಯಾವುದರಲ್ಲಿಯೂ ಚೆನ್ನಾಗಿ ಮಾಡಿರದ ನಾನು ಪಾಸಾಗುವುದರಲ್ಲಿ ನನಗೇ ನಂಬಿಕೆ ಇರಲಿಲ್ಲ.

ಇಷ್ಟೆಲ್ಲಾ ಆದ ಒಂದು ವಾರದ ನಂತರ ರವಿ ಅಂಕಲ್ ಒಂದು ದಿನ ಇದ್ದಕ್ಕಿದ್ದಂತೆ ನಮ್ಮ ಮನೆಗೆ ಬಂದು "ಇದೆಲ್ಲಾ ಆದದ್ದು ನನಗೆ ಗೊತ್ತಿರಲಿಲ್ಲ, ನಾನು ಹಳ್ಳಿಗೆ ಹೋಗಿ ಬರುವಷ್ಟರಲ್ಲಿ ಇಷ್ಟೆಲ್ಲಾ ಆಗಿಬಿಟ್ಟಿದೆ. ನಿನ್ನ ಕನಸಿನ ಸೌಧ ಕಟ್ಟಿದ್ದು, ಕುಸಿದದ್ದು ಎಲ್ಲದ್ದಕ್ಕೂ ನಾನೇ ಕಾರಣ. ಹಣದ ಹುಚ್ಚಿಗೆ ಬಲಿಯಾಗಿ ತನ್ನ ಹೆಂಡತಿ, ಮಗಳು ನಿನಗೆ ಅನ್ಯಾಯ ಮಾಡಿದ್ದಾರೆ. ಆ ಅನ್ಯಾಯವನ್ನು ಸರಿ ಮಾಡುವುದು ನನ್ನ ಜವಾಬ್ದಾರಿ. ಅದಕ್ಕಾಗಿ ನಾನು ಅವರ ಹತ್ತಿರ ಜಗಳ ಮಾಡಿಕೊಂಡು ಮನೆ ಬಿಟ್ಟು ಬಂದಿದ್ದೇನೆ." ಅಂತಾ ಹೇಳಿದ್ರು.ಅದಕ್ಕೆ ಪ್ರತ್ಯುತ್ತರವಾಗಿ ಅಮ್ಮ "ನಿಮ್ಮ ನಾಟಕ ನಿಲ್ಲಿಸಿ, ಅಪ್ಪ ಒಂದು ತರಹ, ಮಗಳು ಒಂದು ತರಹ ನಾಟಕ ಮಾಡಿ ಇರುವ ಜೀವನಾನೂ ಹಾಳು ಮಾಡಬೇಡಿ, ಇಲ್ಲಿಂದ ಹೊರಡಿ" ಅಂತಾ ಅಬ್ಬರಿಸಿದ್ರು. ಮಗನನ್ನು ಆ ಸ್ಥಿತಿಯಲ್ಲಿ ನೋಡಿದ್ದ ಕರುಳಿನ ಸಂಕಟ ಅಂತಹದ್ದು. ಅದಕ್ಕೆ ರವಿ ಅಂಕಲ್ "ನನ್ನ ಪ್ರಾಮಾಣಿಕತೆಯಿಂದ ತಪ್ಪಿತಸ್ಥ ಅಲ್ಲದೇ ಇದ್ರೂ ಎಲ್ಲಾ ಕಡೆಯೂ ಮಾತು ಕೇಳ್ತಾ ಬಂದಿದ್ದೇನೆ. ಇದೇನೂ ನನಗೆ ಹೊಸದಲ್ಲ. ಆದರೆ ರಘು ಜೀವನಾ ಸರೀ ಹೋಗದೆ ನಾನು ಇಲ್ಲಿಂದ ಹೋಗೋದಿಲ್ಲ. ಆಮೇಲೆ ನೀವೇ ಕೇಳಿಕೊಂಡ್ರೂ ನಾನು ಇಲ್ಲಿ ಒಂದು ನಿಮಿಷವೂ ಇರೋದಿಲ್ಲ" ಅಂತಾ ಹೇಳಿದ್ರು. ಅದಕ್ಕೆ ಅಪ್ಪ "ನೀನು ಮಾಡದೆ ಇರೋ ತಪ್ಪನ್ನು ನೀನು ಯಾಕೆ ಸರಿ ಮಾಡುತ್ತೀಯಾ? " ಅಂದರೂ ಕೇಳದೆ ಇಲ್ಲೇ ಉಳಿದುಕೊಂಡರು.

ಅಂಕಲ್ ಸಹಾಯದಿಂದ ನಾನು ಹೊಸ ಜೀವನವನ್ನು ಕಟ್ಟಿಕೊಂಡೆ. ಆರು ತಿಂಗಳ ನಂತರ ನಾನು ಪುನಃ ಇಂಜಿನಿಯರಿಂಗ್ ಲಾಸ್ಟ್ ಸೆಮ್ ಎಕ್ಸಾಂ ಮತ್ತೆ ಬರೆದೆ. ಡಿಪ್ರೆಷನ್ ನಿಂದ ಹೊರಗೆ ಬಂದು ನನ್ನದೇ ಆದ ಹೊಸ ಜೀವನದತ್ತ ಹೆಜ್ಜೆ ಹಾಕುತ್ತಿದ್ದೆ. ಇವತ್ತು ನನಗೆ ಎಂ.ಎನ್.ಸಿ ಕಂಪೆನಿಯಲ್ಲಿ ಕೆಲಸ. ಒಳ್ಳೆಯ ಸಂಬಳ ಬರುತ್ತಾ ಇದೆ. ಬಾಳ ಸಂಗಾತಿಯ ವಿಷಯದಲ್ಲಿ ನಾನು ಮತ್ತೊಮ್ಮೆ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಇಷ್ಟ ಪಡದೆ ಇದ್ದುದರಿಂದ ರವಿ ಅಂಕಲ್ ತಾನೇ ನಿಂತು 'ರೂಪಾ'ಳನ್ನು ಆರಿಸಿದರು. ತಂದೆ-ತಾಯಿ ಇಲ್ಲದ ರೂಪಾಳನ್ನು ತಂದೆಯ ಸ್ಥಾನದಲ್ಲಿ ನಿಂತು ಅವರೇ ಮದುವೆ ಮಾಡಿಕೊಟ್ಟಿದ್ದರು. ನಂತರ ನಾವು ಎಷ್ಟೇ ಕೇಳಿಕೊಂಡರೂ ಇರದೆ, ಅವರಿಗಿದ್ದ ಆಸ್ತಿಯನ್ನು ನನ್ನ ಹೆಸರಿಗೆ ಬರೆದು, ತಮ್ಮ ಮನೆಗೂ ಹೋಗದೆ ತೀರ್ಥಯಾತ್ರೆಗೆ ಹೊರಟು ನಿಂತಿದ್ದರು. ಅಪ್ಪ-ಅಮ್ಮನ ಬೇಡಿಕೆಗೂ ಜಗ್ಗದೆ, ನನ್ನ ಮತ್ತು ರೂಪಾಳ ಕಣ್ಣೀರಿಗೂ ಕರಗದೆ ಅವತ್ತು ನೀಡಿದ ವಚನದಂತೆಯೇ ಹೊರಟು ನಿಂತಿದ್ದರು. ಬಹಳ ಬೇಡಿಕೊಂಡ ಮೇಲೆ ಒಂದು ಶರತ್ತಿನ ಮೇಲೆ ಅವರನ್ನು ಒಪ್ಪಿಸಲು ಸಫಲನಾದೆ.

'ರೂಪಾ'ಳನ್ನು ನಿಮ್ಮ ಮಗಳು ಅಂತಲೇ ಅಂದುಕೊಂಡು ಮದುವೆಯಾಗಿದ್ದೇನೆ. ನೀವು ನಮ್ಮನ್ನು ಬಿಟ್ಟು ಹೊರಟರೆ ನಾನು ಅವಳನ್ನು ಬಿಡುತ್ತೇನೆ ಎಂದಾಗ ಅವರು ಹೌಹಾರಿ ತಮ್ಮ ನಿರ್ಧಾರವನ್ನು ಕೊಂಚ ಸಡಿಲಿಸಿ, "ಸರಿ, ನಾನು ನನ್ನ ಹಳ್ಳಿಮನೆಯಲ್ಲಿ ಶಾಂತತೆಯಲ್ಲಿ ನನ್ನ ಕೊನೆಯ ದಿನಗಳನ್ನು ಕಳೆಯಬೇಕೆಂದಿದ್ದೇನೆ. ಆದುದರಿಂದ, ನಾನು ಅಲ್ಲಿಗೇ ಹೋಗುತ್ತಿದ್ದೇನೆ. ನೀವು ತಿಂಗಳಿಗೊಮ್ಮೆ ಮಾತ್ರ ಅಲ್ಲಿಗೆ ಬಂದು ನನ್ನನ್ನು ನೋಡಬಹುದು." ಎಂದರು.

ಆಗಿನಿಂದ ಈಗಿನವರೆಗೂ ಈ ರೂಡಿಯನ್ನು ತಪ್ಪಿಸಲಾಗಿಲ್ಲ. ಆದರೆ, ನನ್ನ ಅವರ ಸಂಬಂಧಕ್ಕೆ ಹೆಸರೇನು? ತಂದೆ-ಮಗನೇ? ಮಾವ-ಅಳಿಯನೇ ? ಗುರು-ಶಿಷ್ಯನೇ? ಇವೆಲ್ಲಕ್ಕೂ ಮೀರಿದ ಬಂಧ ನಮ್ಮದು.

ಏನೆಂದು ಹೆಸರಿಡಲಿ ನಮ್ಮ ಈ ಬಂಧಕೆ?
ಆತ್ಮೀಯ ಭಾವ ಬೆಸೆದ ನಮ್ಮ ಅನುಬಂಧಕೆ
ಜನುಮ ಜನುಮದ ಭಾವಾನುಬಂಧಕೆ..

ಅಷ್ಟರಲ್ಲಿ "ಸಾರಿ ಪಪ್ಪಾ, ಇನ್ಮೇಲೆ ಹೀಗೆಲ್ಲಾ ಕೇಳಿ ನಿನಗೆ ಸಿಟ್ಟು ಬರುವ ಹಾಗೆ ಮಾಡಲ್ಲ, ರವಿ ತಾತನ್ನ ನೋಡೋಕೆ ನಾನೂ ಬರ್ತೀನಿ" ಅಂದ್ಲು ಮುದ್ದು ಸರಳ.

ಅದೆಲ್ಲಾ ಸರಿ. ಪ್ರಶ್ನೆಯೊಂದು ಮನದಲ್ಲಿ ಉಳಿದೇ ಹೋಗಿತ್ತು. "ಯಾವ ಹೆಸರು ಈ ಭಾವಾನುಬಂಧಕೆ?"

 ~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ