ಗುರುವಾರ, ಸೆಪ್ಟೆಂಬರ್ 26, 2019

ನಿನ್ನ ಬದುಕಿನ ಉತ್ತರಕ್ಕೆ ಪ್ರತ್ಯುತ್ತರ, ನನ್ನ ಬದುಕಿನ ಪ್ರಶ್ನೆ...

ಪ್ರೀತಿಯ ಗೆಳತಿಗೆ,

ನೀನು ಹೇಳಿದ್ದು ತುಂಬಾ ನಿಜ ಎಂದೆನ್ನಿಸಲು ಶುರುವಾಗಿದೆ, ಏಕೆಂದರೆ ಭಾವನೆಗಳು ನಾವು ಅರ್ಥಮಾಡಿಕೊಂಡಂತೆ ಎಂದು ನೀನು ಹೇಳಿದ್ದು ನಿಜ ಎನ್ನಿಸುತ್ತಿದೆ. ಸಮಯ ಕಳೆದಂತೆ ಜೀವನದ ಅರ್ಥ ಮತ್ತು ಸಾರ್ಥಕತೆ ತಿಳಿಯುತ್ತಿದೆ.

ನಾನು ನಿನ್ನನ್ನು ಕೇಳಿದ ಸಲಹೆಗೆ ಸ್ಪಂದಿಸಿ ನಿನ್ನ ಅತ್ಯಮೂಲ್ಯ ಸಲಹೆ ನೀಡಿದ ನಿನಗೆ ಧನ್ಯವಾದಗಳು. ಅಂದ ಹಾಗೆ ಮುಂದಿನ ತಿಂಗಳೇ ನನ್ನ ಮದುವೆ.ನೀನು ತಪ್ಪದೆ ಮದುವೆಗೆ ಎರಡು ದಿನ ಮುಂಚಿತವಾಗಿಯೇ ಬಂದು ಶುಭ ಕೋರುವೆ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿರುವ...

-ನಿನ್ನ ಪ್ರೀತಿಯ ಗೆಳತಿ 

ನಲ್ಮೆಯ ಸ್ನೇಹಿತೆಗೆ,

ನೀನು ಬಹಳ ಸಂತೋಷದಿಂದ್ದಿದ್ದೀಯ ಮತ್ತು ಯಾವುದೇ ಅಪರಾಧಿ ಪ್ರಜ್ಙೆಕಾಡುತ್ತಿಲ್ಲವೆಂಬುದು ನಿನ್ನ ಈ ಪತ್ರದಿಂದಲೇ ತಿಳಿಯುತ್ತದೆ. ನಿನ್ನ ಜೀವನದ ಅತ್ಯಮೂಲ್ಯ ಸಂಗತಿಯನ್ನು ಆಯ್ದುಕೊಳ್ಳಲು ನಿನಗೆ ನೆರವಾಗಿದ್ದಕ್ಕೆ ನನಗೆ ಆತ್ಮ ಸಂತೃಪ್ತಿಯಿದೆ.

ನೀನು ಆ ದಿನ ನನ್ನೊಡನೆ ಮಾತನಾಡಿದಾಗ ನಿನ್ನ ಧ್ವನಿಯಲ್ಲಿದ್ದ ಆ ದುಗುಡ ನನ್ನನ್ನು ಬಹುವಾಗಿ ಕಾಡಿತು. ಯಾಕೆಂದರೆ ಯಾವಾಗಲು ಅರಗಿಣಿಯಂತೆ ನುಡಿಮುತ್ತನ್ನು ಉದುರಿಸುತ್ತಿದ್ದ ನೀನು, ಹಾಗಿರುವುದನ್ನು ನಾನೆಂದಿಗೂ ನೋಡ ಬಯಸುವುದಿಲ್ಲ. ಹಿರಿಯ ಮಗಳಾಗಿದ್ದ ನಿನ್ನ ಮೇಲೆ ಜವಾಬ್ದಾರಿ ಹೆಚ್ಚಿತ್ತು ನಿಜ, ನಿನ್ನ ತಂಗಿಯರ ಭವಿಷ್ಯಕ್ಕಾಗಿ ನಿನ್ನ ಭವಿಷ್ಯವನ್ನು ತ್ಯಾಗ ಮಾಡಿ, ನೀನು ಆ ಹುಡುಗನನ್ನು ಒಪ್ಪಲು ಯಾರೂ ನಿನ್ನನ್ನು ಒತ್ತಾಯಿಸದಿದ್ದರೂ, ನಿನ್ನ ರೂಪಕ್ಕೆ ಆತ ಅನುರೂಪನಲ್ಲವೆಂಬುದನ್ನು ಮನಸ್ಸಿನಲ್ಲಿ ತುಂಬಿಕೊಂಡು ಮಂಕಾಗಿಯೇ, ಅರ್ಧಂಬರ್ಧ ಮನಸ್ಸಿನಲ್ಲಿಯೇ ಆ ಮದುವೆಗೆ ಒಪ್ಪಿಗೆ ನೀಡಿದ್ದೆ. ನಿನ್ನ ಆ ನಿರ್ಧಾರಕ್ಕೆ ಹಿಂದಿನ ಗಂಡುಗಳಿಂದ ತಿರಸ್ಕಾರವೂ ಸೇರಿತ್ತೇನೋ..?ನಾನರಿಯೆ..!

ಹುಡುಗ ಕಪ್ಪು ಎಂಬುದನ್ನು ಬಿಟ್ಟರೆ, ಆತನಲ್ಲಿ ಬೇರಾವ ದುರ್ಗುಣ, ದುಶ್ಚಟಗಳೂ ಇಲ್ಲ ಎಂಬುದು ನಿನಗೆ ಕಾಲಕ್ರಮೇಣ ತಿಳಿದಿರುವುದು ಸಂತಸದ ವಿಷಯ. ಆತನೊಂದಿಗೆ ಮಾತನಾಡಿ,ಕಾಲಕಳೆದ ನಂತರ ನಿನಗೇ ಅರಿವಾಗಿ ಈಗ ನೀನು ಆತನೊಂದಿಗೇ ಸಂತಸದಿಂದಲೇ ಸಪ್ತಪದಿ ತುಳಿಯುತ್ತಿದ್ದೀಯ.

ನೋಡಲು ಯಾವ ಹೀರೋಹಿನ್ ಗೂ ಕಮ್ಮಿ ಇಲ್ಲದ ನೀನು ಸ್ವಲ್ಪ ಕುಳ್ಳಿ ಎಂಬುದನ್ನು ಬಿಟ್ಟರೆ ನಿನ್ನನ್ನು ನಿರಾಕರಿಸಲು ಬೇರೆ ಯಾವ ಕಾರಣಗಳೂ ಇರಲಿಲ್ಲ, ಆದರೆ ಆ ಹುಡುಗನ ಮನೆಯವರೆಲ್ಲರೂ ನಿನ್ನನ್ನು ಒಪ್ಪಿಬಿಟ್ಟಿದ್ದರು. ಕೆಲಸಕ್ಕೆಂದು ಹೊರಹೋದ ನಿನಗೆ ಬೆಂಗಳೂರೆಂಬ ಮಾಯಾಜಾಲದ ಪರಿಚಯವಾಗಿಬಿಟ್ಟಿತ್ತು. ಅಲ್ಲದೆ ಫಿಲ್ಮ್ ಗಳ ಹುಚ್ಚೂ ನಿನಗೆ ಸ್ವಲ್ಪ ಹೆಚ್ಚೇ ಇದ್ದುದ್ದರಿಂದ ನಿನ್ನ ಜೀವನ ಸಂಗಾತಿಯ ಬಗ್ಗೆ ನೀನು ಹುಚ್ಚು ಕನಸುಗಳನ್ನಿಟ್ಟುಕೊಂಡು ಕಾಯುತ್ತಿದ್ದೆ.

ಹುಡುಗ ನೋಡುವುದಕ್ಕೆ ಅಷ್ಟೇನೂ ಚೆನ್ನಾಗಿಲ್ಲ,ಏನ್ಮಾಡ್ಲಿ?ಎಂಬ ನಿನ್ನ ಆ ಪ್ರಶ್ನೆ ನನ್ನಲ್ಲೊಂದು ಪ್ರಶ್ನಾಪ್ರವಾಹವನ್ನೇ ಎಬ್ಬಿಸಿಬಿಟ್ಟಿತ್ತು. ನಿನ್ನ ಆ ಪ್ರಶ್ನೆಗೆ ಉತ್ತರಿಸಲು ನಾನೆಷ್ಟು ಒದ್ದಾಡಿದ್ದೇನೆಂಬುದರ ಕಿಂಚಿತ್ ಅರಿವೂ ನಿನಗಿರಲಿಕ್ಕಿಲ್ಲ. ನನ್ನ ಆಪ್ತ ಸ್ನೇಹಿತೆಯ ಜೀವನದ ಕುರಿತ ಪ್ರಶ್ನೆಗೆ ನಾನು ಸರಿಯಾದ ಉತ್ತರ ನೀಡಲು ನಾನೇ ಉತ್ತರವನ್ನರಸುತ್ತಾ ಹೊರಟೆ.

ನನ್ನ ಎಲ್ಲಾ ಸಂದೇಹಗಳಿಗೂ ಉತ್ತರ ನೀಡುತ್ತಿದ್ದ ಆಪ್ತರೊಬ್ಬರ ಬಳಿ ಹೊರಗಿನ ಸೌಂದರ್ಯ ಮುಖ್ಯವೋ? ಅಥವಾ ವ್ಯಕ್ತಿತ್ವ ಮುಖ್ಯವೋ? ಎಂಬ ಪ್ರಶ್ನೆಯನ್ನಿಟ್ಟಿದ್ದೆ. ಯಾವಾಗಲೂ ನಾನೆಣಿಸಿದಂತೆಯೇ ಉತ್ತರ ನೀಡುತ್ತಿದ್ದ ಆತ, ಅಂದು ನೀಡಿದ ಉತ್ತರ ನನ್ನ ಮನಸ್ಸನ್ನು ಮತ್ತಷ್ಟು ಘಾಸಿಗೊಳಿಸಿತ್ತು. ಕಾರಣ ಇಷ್ಟೇ: ಹೊರಗಿನ ಸೌಂದರ್ಯವೇ ಮುಖ್ಯ ಎಂದೇ ಆತ ಹೇಳಿದ್ದ. ಹೊಸಬರು ನಮ್ಮನ್ನು ಅಳೆಯುವಾಗ ಎಂದಿಗೂ ಅವರಿಗೆ ನಮ್ಮ ವ್ಯಕ್ತಿತ್ವ ಪರಿಚಿತವಿರುವುದಿಲ್ಲ, ಆದ್ದರಿಂದ ಹೊರಗಿನ ಸೌಂದರ್ಯವೇ ಮುಖ್ಯ ಎಂದು ಹೇಳಿದ್ದರು.ಒಬ್ಬರನ್ನಷ್ಟೇ ಅಲ್ಲಾ,ಬಹಳ ಜನರಿಂದ ಬಂದ ಉತ್ತರ ರೂಪವೇ ಮುಖ್ಯ ಎಂದೇ..ಕೊನೆಗೆ ನಾನು ಇವರೆಲ್ಲರ ಹೇಳಿಕೆಗೆ ವಿರುದ್ದವಾಗಿ ಬಣ್ಣಕ್ಕಿಂತ ಗುಣವೇ ಮುಖ್ಯ ಎಂದೇ ಹೇಳಿದೆ.

"ಹತ್ತಿಯ ಹಣ್ಣು ಬಲು ಕೆಂಪು ಇದ್ದರೂ ಒಡೆದು ನೋಡಿದರೆ ಹುಳು ಬಹಳ, ನೇರಳೆ ಹಣ್ಣು ಬಲು ಕಪ್ಪು ಇದ್ದರೂ ತಿಂದು ನೋಡಿದರೆ ರುಚಿ ಬಹಳ" ಎಂಬ ಜನಪದರ ಉದಾಹರಣೆಯನ್ನೂ ನೀಡಿದೆ.

ಆದರೆ ನಿನ್ನ ಪ್ರಶ್ನೆಗೆ ಉತ್ತರ ಹುಡುಕಲು ಹೋಗಿ ನನ್ನ ಮನಸ್ಸೇ ಗೊಂದಲದ ಗೂಡಾಗಿದೆ. ಗಂಡು ಕಪ್ಪಿದ್ದರೂ ಶ್ಯಾಮಲ ವರ್ಣದವನು ಕೃಷ್ಣ,ರಾಮ, ಶಿವನ ಹಾಗಿದ್ದಾನೆ ಎಂದೆಲ್ಲಾ ಹೇಳುತ್ತಾರೆ, ಆದರೆ ಹುಡುಗಿ ಕಪ್ಪಿದ್ದರೆ ಯಾರೂ ಅಷ್ಟು ಸುಲಭದಲ್ಲಿ ಒಪ್ಪುವುದಿಲ್ಲ. ನನ್ನ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ನಾನೇನು ಬೆಳ್ಳಗಿಲ್ಲ, ಸುಂದರವಾಗಿ ಅಲಂಕರಿಸಿಕೊಳ್ಳುವ ಆಸಕ್ತಿಯೂ ನನಗಿಲ್ಲ, ನೋಡಲು ಚೆನ್ನಾಗಿ ಕಾಣಬೇಕೆಂದು ಅಲಂಕರಿಸಿಕೊಳ್ಳುವುದರಲ್ಲಿ ಅಸ್ಥೆಯೂ ಇಲ್ಲ. ಹಾಗಾದರೆ ನನ್ನ ಜೀವನ ಸಂಗಾತಿ ನನ್ನನ್ನು ಯಾವುದರಿಂದ ಆರಿಸಿಕೊಳ್ಳಬಹುದು? ಪ್ರೀತಿ ಇಲ್ಲದ ಮೇಲೆ ನಂಟು ಉಳಿದೀತು ಹೇಗೆ..? ಆತನೂ ನಿನ್ನಂತೆಯೇ ಯೋಚಿಸಿ ಅರೆಮನಸ್ಸಿನಿಂದ ಒಪ್ಪಿಗೆ ಇತ್ತರೆ...?ವರದಕ್ಷಿಣೆಯ ಆಸೆಯಿಂದ ಒಪ್ಪಿಗೆ ಇತ್ತರೆ..? ಇತ್ತರೆ ಏನು,ಆಗುವುದು ಖಂಡಿತಾ ಅದೇ ಎಂಬುದರ ಅರಿವು ನನಗಿದೆ. ಬಂದದ್ದೆಲ್ಲಾ ಬರಲಿ ಗೋವಿಂದನ ದಯವೊಂದಿರಲಿ ಎನ್ನುವುದನ್ನು ಬಿಟ್ಟು ಮತ್ತೇನು ಮಾಡಲು ಸಾಧ್ಯ ನನ್ನಿಂದ..?

ಬಹುಶಃ ನಾನಂದು ನಿನಗೆ ಧೈರ್ಯ ತುಂಬಲು ಹೋಗಿ, ನನ್ನ ಜೀವನದ ಬಹು ದೊಡ್ಡ ಸತ್ಯವನ್ನು ಅರಿತೆ.ನಿನ್ನ ಬದುಕಿನ ಉತ್ತರಕ್ಕೆ ಪ್ರತ್ಯುತ್ತರ ನನ್ನ ಬದುಕಿನ ಪ್ರಶ್ನೆ...ಆದರೆ ನಿನ್ನ ಬಾಳಿಗೆ ತೋರಿದ ಬೆಳಕು ಎಂದು ಆರದಿರಲಿ ಎಂದೇ ಆರೈಸುವೆ.

ಸುಂದರ ಮನಸ್ಸಿನ,ಶ್ಯಾಮಲ ವರ್ಣದ, ಮೃದು ಹೃದಯಿ, ನಿನ್ನನ್ನು ಅರಿತುಕೊಂಡು ಬಾಳುವ ಹುಡುಗ ನಿನಗೆ ಸಿಕ್ಕಿದ್ದಾನೆ. ಬಹುಶಃ ಎಲ್ಲರಿಗಿಂತ ಹೆಚ್ಚು ಖುಷಿ ಪಡುವವಳು ನಾನೇ, ನಿನ್ನ ದಾಂಪತ್ಯ ಜೀವನ ಸುಖವಾಗಿರಲಿ ಎಂದು ಹಾರೈಸುವ

-ನಿನ್ನ ಹಿತೈಷಿ

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ