ಭಾನುವಾರ, ಸೆಪ್ಟೆಂಬರ್ 22, 2019

ಮಗಳ ಮನೋಲಹರಿ

ಮಗಳು ಹುಟ್ಟಿದರೆ ಜವಾಬ್ದಾರಿ ಹೆಚ್ಚಿತು ಎಂದುಕೊಳ್ಳುವವರೇ ಹೆಚ್ಚು. ಇಂದಿನ ದಿನಗಳಲ್ಲಿ ಇದು ಗಣನೀಯವಾಗಿ ಕಡಿಮೆಯಾಗುತ್ತಿದ್ದರೂ ಸಂಪೂರ್ಣವಾಗಿ ನಿಂತಿಲ್ಲ.

ಪೋಷಕರಲ್ಲಿ ಮಗಳ ಮೇಲಿನ ಕಾಳಜಿ ಸ್ವಲ್ಪ ಹೆಚ್ಚು, ಪ್ರೀತಿ ಕೂಡಾ ಹಾಗೆಯೇ ಆತಂಕ ಸಹಾ ಕೊಂಚ ಹೆಚ್ಚೇ.. ಆದರೆ ಅದೆಲ್ಲದಕ್ಕೂ ಕಾರಣ ಇದೆ ಎಂದು ತಿಳಿಯುವುದಕ್ಕೆ ಸ್ವಲ್ಪ ಜಾಸ್ತಿಯೇ ಸಮಯ ಬೇಕಾಗುತ್ತದೆ.

ಯಾಕಿಷ್ಟು ಬೇಗ ಬೆಳೆದು ದೊಡ್ಡವರಾಗುತ್ತೇವೆ ಅಂತಾ ಗೊತ್ತಿಲ್ಲ. ಕಾಲ ಸ್ವಲ್ಪ ನಿಧಾನವಾಗಿ ಸರಿಯಬಾರದಿತ್ತಾ ಅಂತಾ ಅನ್ನಿಸುತ್ತಾ ಇರುವುದೂ ಸುಳ್ಳಲ್ಲ. ಜವಾಬ್ದಾರಿಯನ್ನು ಹೊರುವುದಕ್ಕೆ ಹೆದರುವುದಿಲ್ಲ, ಹೊರ ಜಗತ್ತಿನಲ್ಲಿ ಧೈರ್ಯವಾಗಿರುವುದಕ್ಕೆ ಕಲಿತಿದ್ದೇವೆ. ನೂರಾರು ಹಸಿದ ಕಣ್ಣುಗಳಿಗೆ ಆಹಾರವಾದರೂ ಅದನ್ನು ನಿರ್ಲಕ್ಷಿಸಿ ಬದುಕುವುದನ್ನು ಕಲಿತಿದ್ದೇವೆ. ಆದರೂ ಎಲ್ಲೋ ಒಂದು ಕಡೆ, ಒಂದರೆಕ್ಷಣ ಭಯವಾಗುವುದು ಸುಳ್ಳಲ್ಲ. ಯಾವುದೋ ಬಾಲಕಿಯ ಮೇಲೆ ಅತ್ಯಾಚಾರವಾದ ಸುದ್ದಿ ಕೇಳಿ, ಮತ್ತಾವುದೋ ಮನೆಮಗಳನ್ನು ವರದಕ್ಷಿಣೆ ಕಿರುಕುಳಕ್ಕಾಗಿ ಚಿತ್ರಹಿಂಸೆ ನೀಡಿ ಅರೆಜೀವ ಮಾಡಿರುವುದನ್ನು ಕೇಳಿ, ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾದವಳ ಜೀವನ ಕಂಡು ಭಯವಾಗುತ್ತೆ. ಆವಾಗೆಲ್ಲಾ ಧೈರ್ಯ ತುಂಬುವುದು ಯಾವುದು ಗೊತ್ತಾ..?

ಅಮ್ಮನ ಮಡಿಲಲ್ಲಿ ಮಲಗಿದಾಗ ಸಿಗುವ ನಿಶ್ಚಿಂತೆ, ಅಪ್ಪ ಕೈ ಹಿಡಿದು ನಡೆಸುವಾಗ ಸಿಕ್ಕ ಕೈ ಬಿಸುಪಿನ ಬೆಚ್ಚನೆ ಸ್ಪರ್ಶ, ಅಜ್ಜ-ಅಜ್ಜಿಯ ಪ್ರೀತಿ, ಚಿಕ್ಕಮ್ಮ-ದೊಡ್ಡಮ್ಮಂದಿರ ಕಾಳಜಿ, ಅಣ್ಣನ ಕಣ್ಗಾವಲು ಇವೆಲ್ಲಾ ಎಷ್ಟು ಆಪ್ತ ಎನ್ನಿಸಿಬಿಡುತ್ತದೆ ಗೊತ್ತಾ..? ಚಿಕ್ಕ-ಚಿಕ್ಕ ನಡೆಗಳು, ಸಂಬಂಧಗಳ ಆಪ್ತ ಬಂಧಗಳು ಎಷ್ಟೆಲ್ಲಾ ಧೈರ್ಯ ತುಂಬುತ್ತವೆ ಅಂದರೆ ಜಗತ್ತಿನಲ್ಲಿಯೇ ನಾನು ಅತ್ಯಂತ ಸುರಕ್ಷಿತಳು ಎನ್ನುವ ಭಾವನೆ ಬಂದು ಬಿಡುತ್ತದೆ.

ಎಷ್ಟೆಲ್ಲಾ ಕಾಳಜಿ, ಪ್ರೀತಿಯ ನಡುವೆಯೂ ಮನೆಯವರಿಗೆ ಮಗಳು ಜವಾಬ್ದಾರಿ, ಹೊರೆ ಎನ್ನಿಸುತ್ತಾಳೆ ಅಲ್ವಾ..? ಹೊರೆ ಅಂತಲ್ಲದಿದ್ದರೂ ನಿಮ್ಮ ಜವಾಬ್ದಾರಿಯಿಂದ ಕಳಚಿಕೊಳ್ಳಲು ನೀವೆಲ್ಲಾ ಸಿದ್ದರಾಗುತ್ತಾ ಇರುತ್ತೀರ. ವಿದ್ಯಾಭ್ಯಾಸ ಮುಗಿಯುವುದೇ ತಡ, ಅವಳನ್ನು ಸಾಗ ಹಾಕುವ ಸಿದ್ದತೆ ಮಾಡಿಕೊಳ್ಳುತ್ತಾ ಇರುತ್ತೀರ. ಖಂಡಿತಾ ಇದು ತಪ್ಪಲ್ಲ. ಆದರೆ, ಮಗಳ ಮನಸ್ಸಿನಲ್ಲಿ ಏನಿರುತ್ತದೆ? ಎಂಬುದು ಅಲ್ಲಿ ಮುಖ್ಯವಾಗುವುದೇ ಇಲ್ಲ..

ವಿದ್ಯಾಭ್ಯಾಸ ಮುಗಿದ ಮೇಲೆ ಕೆಲಸ ಸಿಕ್ಕು ಕೆಲ ಕಾಲ ತನ್ನದೇ ಕುಟುಂಬದಲ್ಲಿ, ತನ್ನದೇ ಪ್ರಪಂಚದಲ್ಲಿ ನೆಮ್ಮದಿಯಾಗಿರಬೇಕು ಎನ್ನುವ ಆಸೆ ಇರುತ್ತದೆ. ಯಾಕೆಂದರೆ, ಮುಂದಿನ ದಿನಗಳ ಜವಾಬ್ದಾರಿ, ಒತ್ತಡ, ಸಂಬಂಧಗಳ ಪಾಲನೆ-ಪೋಷಣೆಯ ಅರಿವು ಅವಳಿಗಿರುತ್ತದೆ. ವಿಪರ್ಯಾಸವೆಂದರೆ, ಇದ್ಯಾವುದೂ ಅವಳಿಷ್ಟದಂತೆ ನಡೆಯುವುದೇ ಇಲ್ಲ. ಕಾಲಚಕ್ರದಲ್ಲಿ ವಿವಾಹ ಬಂಧನದಲ್ಲಿ ಸಿಲುಕಿ ಅವಳು ತನ್ನ ಹವ್ಯಾಸ, ಇಷ್ಟಾನಿಷ್ಟಗಳನ್ನು ಕಟ್ಟಿಟ್ಟು ಸಂಪೂರ್ಣ ಬದಲಾಗುತ್ತಾಳೆ. ತನ್ನದಲ್ಲದ ಪ್ರಪಂಚವನ್ನು ತನ್ನದು ಎಂಬಂತೆ ಭಾವಿಸಿ ಬದುಕುತ್ತಾ ತ್ರಿಶಂಕು ಸ್ವರ್ಗವನ್ನು ಸೃಷ್ಟಿ ಮಾಡಿಕೊಳ್ಳುತ್ತಾಳೆ. ತನ್ನ ಮಗಳಲ್ಲಿ ತನ್ನ ಆಸೆ-ಕನಸುಗಳನ್ನು ಬಿತ್ತುತ್ತಾ ತನ್ನನ್ನು ಅವಳಲ್ಲಿ ಕಾಣಬಯಸುತ್ತಾಳೆ. ಮಗಳು ಬೆಳೆಯುತ್ತಾ ಹೋದಂತೆ ಕಾಲಚಕ್ರ ಮತ್ತೆ ಪುನರಾವರ್ತನೆಯಾಗುತ್ತಿರುತ್ತದೆ.

ಇದೆಲ್ಲವನ್ನೂ ನೋಡಿದಾಗ ಮತ್ತೆ ಪುನಃ ಮಗುವಾಗಿ, ಎಲ್ಲರ ನೆಚ್ಚಿನ ಮನೆಮಗಳಾಗಿಯೇ ಇರುವ ಆಸೆ ಹುಟ್ಟುವುದಂತೂ ಸುಳ್ಳಲ್ಲ. ಇವತ್ತು ಮಗಳ ದಿನವಂತೆ.. ಯಾಕೋ ಇವಿಷ್ಟನ್ನೂ ಹೇಳಬೇಕೆನಿಸಿತು. ಮಗಳ ಮನೋಲಹರಿಯಲ್ಲಿ ಬಹಳಷ್ಟು ಲಹರಿಗಳಿದ್ದರೂ ತೆರೆದಿಡಲಾಗುತ್ತಿಲ್ಲ. ಅತಿ ಹೆಚ್ಚು ಭಾವುಕತೆ ಇದ್ದಾಗ ಪದಗಳಲ್ಲಿ ಹಿಡಿದಿಡುವುದು ಕಷ್ಟವಾಗುತ್ತದೆ. ಮಗಳಾಗಿ ನನಗೆ ನನ್ನ ಜವಾಬ್ದಾರಿಯ ಅರಿವಿದೆ ಎಂದು ತಿಳಿಸಬಯಸುತ್ತೇನೆ. ಅಪ್ಪ-ಅಮ್ಮನಿಗೆ, ಮನೆಗೆ ಒಳ್ಳೆಯ ಮಗಳಾಗಿಯೇ ಇರುವ ಆಸೆ, ಇರುತ್ತೇನೆ ಎಂಬ ಭರವಸೆ ಇಷ್ಟೇ ನನ್ನಿಂದ ಹೇಳಲಾಗುವುದು.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ