ಭಾನುವಾರ, ಅಕ್ಟೋಬರ್ 20, 2019

ಬಿಟ್ಟು ಹೊರಡುವ ಮುನ್ನ..

ನಿನಗೆ,
ಏನೆಂದು ಸಂಭೋಧಿಸಲೆಂದೇ ಗೊತ್ತಾಗದೆ ಆತ್ಮೀಯನಾಗಿದ್ದ ನಿನಗೇ,

ಬಿಟ್ಟು ಹೊರಡುವ ಘಳಿಗೆ ಹತ್ತಿರ ಬರುತ್ತಿದ್ದಂತೆ ಮನದಲ್ಲೇನೋ ತಲ್ಲಣ, ಮಾತನಾಡಲು ನೂರಾರು ಪದಗಳಿವೆ, ಹಂಚಿಕೊಳ್ಳಲು ನೂರಾರು ಕನಸುಗಳಿವೆ. ಎದೆಯಾಳದಲ್ಲಿ ಸಾವಿರಾರು ಭಾವನೆಗಳಿವೆ.ಆದರೆ ಹೇಳಿಕೊಳ್ಳಲು ನೀನೇ ಸಿಗುತ್ತಿಲ್ಲ. ಮೌನಿಯಂತಿದ್ದ ನನ್ನಲ್ಲಿ ಮಾತನಾಡಲು ಚೈತನ್ಯ ತುಂಬಿದ ನಿನಗೆ ಧನ್ಯವಾದಗಳನ್ನೇಳಬೇಕು ಎಂದಿದ್ದೇನೆ. ಆದರೆ ಹೇಳುವುದಿಲ್ಲ. ಮನದಲ್ಲಿರುವುದು ಮಾತಾಗಲು ಹೆಚ್ಚು ಹೊತ್ತು ಬೇಕಿಲ್ಲ. ಆದರೆ ಅದನ್ನು ಹೇಳುವ ಮನಸಿಲ್ಲ.

ಏಕೋ, ನೀನು ಮೊದಲಿನಂತಿಲ್ಲ.ನನಗೇ ಹಾಗನ್ನಿಸುತ್ತಿದೆಯೋ, ಇಲ್ಲ ನೀನೇ ಬದಲಾಗುತ್ತಿರುವೆಯೋ ಗೊತ್ತಿಲ್ಲ. ಆದರೆ ಮೌನದ ಚಿಪ್ಪಿನೊಳಗೆ ಅಡಗಿ ಕುಳಿತಿದ್ದವಳನ್ನು ವಾಚಾಳಿಯನ್ನಾಗಿ ಮಾಡಿದೆ. ಆದರೆ ನನ್ನ ಮಾತುಗಳನ್ನು ನೀನು ಕೇಳಲೇ ಇಲ್ಲ. ನಿನ್ನ ಮುಂದಿದ್ದಾಗ ಮಾತೇ ಹೊರಡದೇ ತಬ್ಬಿಬ್ಬಾದರೂ ಭಾವನೆಗಳನ್ನು ಅರ್ಥೈಸಿಕೊಂಡು ಸಾಂತ್ವನ ಹೇಳಿದ್ದೀಯ. ನಿನಗೆ ನನ್ನ ಅವಶ್ಯಕತೆ ಮುಗಿಯುವ ಮುನ್ನವೇ ಈ ಸಂಬಂಧದ ಕೊಂಡಿಯನ್ನು ಕಳಚಲೇಬೇಕಲ್ಲವೇ?

ಭಾವನೆಗಳ ಸೂಕ್ಷ್ಮತೆಗಳು ನಿನಗೆ ತಿಳಿಯುವುದಿಲ್ಲವೆಂದು ನಾನು ಹೇಳಿದ್ದು ಎಷ್ಟು ಸಲವೋ? ಆದರೆ ಎಷ್ಟೋ ಸಲ ಅನ್ನಿಸಿದ್ದಿದೆ. ನಾನು ನಿನ್ನಷ್ಟು ಭಾವುಕಳಲ್ಲವೆಂದು. ಹೆಂಗರುಳು ನಿನ್ನದು. ಎಲ್ಲರ ಕಷ್ಟಕ್ಕೂ ಮರುಗುವ, ಸ್ಪಂದಿಸುವ ನೀನು ಇತ್ತೀಚೆಗೆ ಹೃದಯವೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿರುವುದೇಕೆ? ಕಂಡರೂ ಕಾಣದಂತೆ ಹೋಗಿ ಬಿಡುತ್ತೀಯೆ. ಏಕೆಂಬುದು ಮಾತ್ರ ಗೊತ್ತಿಲ್ಲ, ನನ್ನ ತಪ್ಪಿದ್ದರೆ ಬೈದು ಬುದ್ದಿ ಹೇಳಬಹುದಲ್ಲವೇ? ಕೇಳಿದರೆ ಕೆಲಸದ ಬ್ಯುಸಿ ಎನ್ನುತ್ತೀಯ, ಕೆಲಸದ ಬ್ಯುಸಿ ಎಂದಾದರೆ ನನ್ನದೊಂದು ಪ್ರಶ್ನೆ. ಕೆಲಸಕ್ಕೋಸ್ಕರವಾಗಿ ಬದುಕುತ್ತಿದ್ದೀಯೋ? ಅಥವಾ ಬದುಕುವುದಕ್ಕೋಸ್ಕರವಾಗಿ ಕೆಲಸವೋ? ಇದಕ್ಕಾದರೂ ಎಂದಾದರೂ ಉತ್ತರ ಹುಡುಕಿಕೋ.

ಮನಸ್ಸಿಗೆ ಬೇಜಾರಾದಾಗ ಯೋಚಿಸಲು ಪುರುಸೊತ್ತಿಲ್ಲದಂತೆ ಕೆಲಸ ಮಾಡು ಎಂದು ನೀನೇ ಎಂದೋ ಹೇಳಿದ್ದೆ. ಅದಕ್ಕೋಸ್ಕರವೇ ನೀನು ಹೀಗೆ ನಿನ್ನನ್ನು ನೀನು ಕೆಲಸದದಲ್ಲಿ ತೊಡಗಿಸಿಕೊಂಡಿದ್ದೀಯಾ? ಉತ್ತರ ಹೇಳಲು , ನಿನಗೆ ನಾನು ಯಾರು ಅಲ್ಲವೇ?

ಉತ್ತರಗಳೇ ಸಿಗದ, ದ್ವಂದ್ವ ನಿಲುವಿನ ಎಷ್ಟೋ ಪ್ರಶ್ನೆಗಳಿಗೆ ನೀನೇ ಉತ್ತರಿಸಿದ್ದೀಯ. ಆಗ ವಾದಗಳು, ಚರ್ಚೆಗಳು ನಡೆದರೂ ಕೊನೆಗೆ ಇಬ್ಬರೂ ಮತ್ತೆ ಬರುತ್ತಿದ್ದುದು ದ್ವಂದ್ವತೆಯ ನಿಲುವಿಗೇ. ಕಾರಣ, ನೀನು ಹೇಳಿದ್ದು ಸರಿ ಎಂದು ನನಗನ್ನಿಸಿದರೆ, ನಾನು ಹೇಳಿದ್ದು ಸರಿ ಎಂದು ನಿನಗನ್ನಿಸುತ್ತಿತ್ತು. ಕೊನೆಗೆ ಒಂದು ನಿಲುವಿಗೆ ಬರಲಾಗದೆ, ಒಬ್ಬರಿಗೊಬ್ಬರು ಸೋಲದೆ,ಇಬ್ಬರೂ ಗೆಲ್ಲದೆ ದೂಡಿದ ಕ್ಷಣಗಳೆಷ್ಟೋ?

ಕೆಲವೊಂದು ವಿಷಯಗಳಲ್ಲಿ ಭಿನಾಭಿಪ್ರಾಯಗಳಿದ್ದರೂ, ಒಮ್ಮತದ ನಿಲುವಿಗೆ ಬರಬೇಕೆಂದಾದಾಗ ನೀನೊಮ್ಮೆ ಸೋತರೆ, ನಾನೊಮ್ಮೆ ಸೋಲುವೆ. ಗೆಲುವಿನ ಅಹಂಭಾವ ಅಲ್ಲಿಲ್ಲ, ಸೋಲುವಿಕೆಯ ಸೊಗಡೂ ಅಲ್ಲಿ ಸುಳಿಯಲಿಲ್ಲ. ಅಭಿಪ್ರಾಯಗಳಲ್ಲಿ ನೀನು ಉತ್ತರ ಧ್ರುವವಾದರೆ, ನಾನು ದಕ್ಷಿಣ ಧ್ರುವ. ಬಹುಶಃ ವಿಜ್ಞಾನದ ಕಾಂತೀಯ ನಿಯಮದಂತೆ "ವಿರುದ್ದ ಧ್ರುವಗಳು  ಆಕರ್ಷಿಸಲ್ಪಡುತ್ತವೆ" ಎಂಬ ನಿಯಮದಂತೆಯೇ ಇರಬೇಕು ನಾವು ಸೆಳೆಯಲ್ಪಟ್ಟಿದ್ದು.ಸೆಳೆಯಲ್ಪಡಲು ಕಾರಣವಾದ ಆ ಶಕ್ತಿ ಯಾವುದೋ? ಈಗ ಬೇರೆಯಾಗುವ ನಿರ್ಧಾರವನ್ನು ಬೆಂಬಲಿಸುತ್ತಿರುವ ಶಕ್ತಿ ಯಾವುದೋ?
ಎಲ್ಲದಕ್ಕೂ ಒಂದು ಕಾರಣ ಇದೆ ಎಂದು ಹೇಳುತ್ತಿದ್ದೆಯಲ್ಲಾ, ಆ ಕಾರಣ ಯಾವುದು ಎಂದು ಕೇಳಿದರೆ.. ಗೊತ್ತಿಲ್ಲ, ಆದರೆ ಯಾವುದೋ ಒಂದು ಕಾರಣ ಇರುವುದಂತೂ ಸತ್ಯ ಎನ್ನುತ್ತೀಯಲ್ಲ. ನಿನ್ನ ನಂಬಿಕೆಯಂತೆ ಇದಕ್ಕೂ ಯಾವುದೋ ಒಂದು ಬಲವಾದ ಕಾರಣ ಇರಬಹುದು. ಆಗುವುದೆಲ್ಲಾ ಒಳ್ಳೆಯದಕ್ಕೇ ಅಲ್ಲವೇ? ಒಳ್ಳೆಯದೇ ಆಗಲಿ.

-ಇಂತಿ
ಬಿಡಲಾಗದಿದ್ದರೂ ಬಿಟ್ಟು ಹೊರಟಿರುವ ನಿನ್ನ ಹಿತೈಷಿ

(ಬರಹ : ವಿಭಾ ವಿಶ್ವನಾಥ್)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ