ಗುರುವಾರ, ಅಕ್ಟೋಬರ್ 31, 2019

ಜೊತೆಗೂಡದ ಹೆಜ್ಜೆಗಳು

ಅದೆಷ್ಟೇ ಪ್ರಯತ್ನಿಸಿದರೂ ನಿನ್ನ ನಡಿಗೆಯ ವೇಗಕ್ಕೆ ನನಗೆ ಸರಿಸಾಟಿಯಾಗಲು ಸಾಧ್ಯವೇ ಆಗಲಿಲ್ಲ. ಬರಿ ಹೆಜ್ಜೆ ಮಾತ್ರವಲ್ಲ, ನಿನ್ನ ಬದುಕು ಮತ್ತು ಕನಸಿನ ಜೊತೆಗೂಡಲು ನನ್ನಿಂದ ಸಾಧ್ಯವಾಗುವುದಿಲ್ಲ. ಸಾಧ್ಯವಾದರೂ ನಾ ನಿನ್ನೊಡನೆ ಹೆಜ್ಜೆ ಹಾಕುವುದಿಲ್ಲ. ನಾ ನಿನ್ನೊಡನೆ ಹೆಜ್ಜೆ ಹಾಕಲು ಯಾರು, ಯಾರು ನೀ ನನಗೆ..?

ಸಾವಿತ್ರಿ ಯಮನೊಡನೆ ಪತಿಯ ಪ್ರಾಣ ಭಿಕ್ಷೆಗಾಗಿ ಹೆಜ್ಜೆ ಹಾಕಿದಳು. ಇನ್ನು ಸಪ್ತಪದಿಯಲ್ಲಿ ಸಹಚರರಿಗಾಗಿ ಪ್ರಮಾಣ ಮಾಡಲು ಹೆಜ್ಜೆ ಹಾಕುತ್ತಾರೆ. ನಾನೇಕೆ ನಿನ್ನೊಡನೆ ಹೆಜ್ಜೆ ಹಾಕಲಿ..?

ಬೇಡಿ ಸಣ್ಣವಳಾಗಲಾರೆ, ಕೊಟ್ಟು ದೊಡ್ಡವಳಾಗಲಾರೆ. ಸಹಮತಕ್ಕೆ ನಮ್ಮಲ್ಲಿ ಸಮಾನಾಭಿರುಚಿಯೂ ಇಲ್ಲ. ಬಹುಶಃ ಹೆಜ್ಜೆ ಹಾದಿ ತಪ್ಪಬಹುದು, ಹೃದಯದ ಬಡಿತ ತಪ್ಪಬಹುದು. ಆದರೂ, ಹೆಜ್ಜೆಗಳು ಜೊತೆಗೂಡಲಾರವು.ಅಲ್ಲವೇ..?

ನಿನ್ನ ಹಿಂದೆ ನಾ ಹೆಜ್ಜೆ ಹಾಕಲು ನೀನು ಮುಖಂಡನಲ್ಲ, ನಾನು ಹಿಂಬಾಲಕಿಯಲ್ಲ. ಇಲ್ಲವೆಂದರೆ, ನಾ ಮುಂದೆ ಹೆಜ್ಜೆ ಹಾಕಲು ನಾನು ಮುಂದಾಳುವಲ್ಲ, ನೀನು ನನ್ನ ಹಿಂಬಾಲಕನಲ್ಲ. ಜೊತೆ-ಜೊತೆಗೆ ಹೆಜ್ಜೆ ಹಾಕಲು ನಾವು ಸ್ನೇಹಿತರೂ ಅಲ್ಲ. ಬಹುಶಃ ಕಾಲದೊಡನೆ ಕೆಲಕಾಲ ಸಮಾನಾಂತರದಲ್ಲಿ ಹೆಜ್ಜೆ ಹಾಕುತ್ತಿರುವೆವೋ, ಏನೋ..? ಎಲ್ಲರ ಕಾಲೆಳೆದು ಮೋಜು ನೋಡುವ ಕಾಲ ಕೆಲಕಾಲದ ನಂತರ ನಮ್ಮ ಹೆಜ್ಜೆ ಗುರುತುಗಳನ್ನೆಲ್ಲಾ ಅಳಿಸಲೂಬಹುದು ಅಥವಾ ಅದರ ಮೇಲೆ ಮತ್ತೊಬ್ಬರ ಹೆಜ್ಜೆ ಗುರುತನ್ನು ಮೂಡಿಸಬಹುದು. ಕಾಲಾಂತರದ ಹಾದಿಯಲ್ಲಿ ನಾ ಯಾರೋ..? ನೀ ಯಾರೋ..? ಅವರ್ಯಾರೋ..?

ಸಮುದ್ರವೇ ನಮ್ಮ ಹೆಜ್ಜೆಗಳನ್ನು ಒಟ್ಟಿಗಿರಲು ಬಿಡುವುದಿಲ್ಲವೆಂದರೆ, ಕಾಲ ಸುಮ್ಮನಿರುವುದೇ..? ಎಂದೋ, ಯಾವುದೋ ಕಾರಣಕ್ಕೆ ಆಸರೆಯಾದ ಹೆಜ್ಜೆಗಳು ಸದಾ ಹಾಗೆಯೇ ಆಸರೆಯಾಗಿರಲು ಸಾಧ್ಯವೇ..? ಅಚಾನಕ್ಕಾಗಿ ಕಾಲು ಮುರಿದಾಗ ತಾನಿಲ್ಲದೆ ಆಸರೆಯೇ ಇಲ್ಲ, ಜೀವನವೇ ಇಲ್ಲ ಎಂಬಂತಿದ್ದ ಊರುಗೋಲು  ತಾನು ಎದ್ದು ನಡೆದಾಡುವಂತಾದ ಮೇಲೆ ಮೂಲೆಪಾಲು.ಅಕಸ್ಮಾತ್, ಆ ಊರುಗೋಲನ್ನು ನಾವು ಬಿಡುವುದಿಲ್ಲವೆಂದು ಸುತ್ತಲಿನವರು ಸುಮ್ಮನಿರುವರೇ..? ಊರುಗೋಲಿಗೆ ಮಾತ್ರವಲ್ಲ, ಮನುಷ್ಯರಿಗೂ ಅದೇ ಪಾಡೇ. ಎಂದೋ ಮಾಡಿದ ಸಹಕಾರ ಆ ಕಾಲಕ್ಕೆ ದೊಡ್ಡದಾದರೂ, ಮುಂದಿನ ದಿನಗಳಲ್ಲಿ ಕಡಿಮೆಯೇ.. ಆದರೂ ಯಾರಿಗಾದರೂ ಸಹಕಾರ ನೀಡಿದರೆ ಪ್ರತಿಫಲದ ಅಪೇಕ್ಷೆ ಇರಬಾರದು. ಪ್ರತಿಫಲದ ನಿರೀಕ್ಷೆಯಿಂದ ನೀಡುವ ಸಹಕಾರ, ಮಾಡುವ ಸಹಾಯ ವ್ಯಾಪಾರವಲ್ಲದೇ ಮತ್ತೇನು..? "ನೀ ನನಗಾದರೆ, ನಾ ನಿನಗೆ.." ಎಂಬುದೇ ಸಾರ್ವತ್ರಿಕವಾಗಿದ್ದರೂ ನನ್ನ ದೃಷ್ಠಿಯಲ್ಲಿ "ನೀ ನನಗಾಗದಿದ್ದರೂ, ನಾ ನಿನಗೆ" ಎಂದು ಬದಲಾಗಿದೆ. 

ಹೆಜ್ಜೆಯಿಂದ ಪ್ರತಿಫಲದ ಕಡೆಗೆ ಯೋಚನೆಯ ಹೆಜ್ಜೆ ಸಾಗಿತು. ಎಷ್ಟಾದರೂ ಮನಸ್ಸು ಮರ್ಕಟವಲ್ಲವೇ..? ಏನನ್ನೋ ಹೇಳ ಹೊರಟು ಮತ್ತೇನನ್ನೋ ಹೇಳಿದ ಹಾಗೆ, ಹೆಜ್ಜೆಗಳೂ ಸಹಾ ಏನನ್ನೋ ಹಿಂಬಾಲಿಸ ಹೊರಟು ಮತ್ತೇನನ್ನೋ ಹಿಂಬಾಲಿಸುತ್ತವೆ, ಮತ್ತೆಲ್ಲಿಗೋ ಹೊರಟು ಬಿಡುತ್ತವೆ. ಕೆಲವೊಮ್ಮೆ ತಮಗೆ ಜೊತೆಯಾಗಬಯಸುವವರನ್ನು ತೊರೆದು, ತಾವು ಬೇರಾರಿಗೋ ಜೊತೆಗಾರರಾಗಲು ಹೊರಡುತ್ತವೆ. ಅದು ತಮ್ಮಭಿಪ್ರಾಯದ ಮೇರೆಗೋ ಅಥವಾ ಪ್ರತಿಷ್ಠೆಗೋ ಅಥವಾ ಬೇರೆಯವರ ಮೇಲಿನ ಗೌರವಕ್ಕೋ ಅಥವಾ ತಮ್ಮ ಕನಸಿನಂತೆ ಬದುಕುವುದಕ್ಕಾಗಿಯೋ ಎಂಬುದು ಮತ್ತೊಂದು ಹೆಜ್ಜೆಗೆ ಮುಖ್ಯವಾಗುವುದಿಲ್ಲ, ಬಹುಶಃ ಆ ಸಮಯಕ್ಕೆ ಸಹ ಹೆಜ್ಜೆಗೆ ಅದು ಅಪ್ರಸ್ತುತ ಕೂಡಾ.

ಉಸುಕಿನ ಮೇಲೆ ಮೂಡಿಸಿದ ಹೆಜ್ಜೆ ಗಾಳಿಗೆ ಮುಚ್ಚಿ ಹೋಗಲೇ ಬೇಕಲ್ಲವೇ? ನೀರಿನ ಮೇಲೆ ಎಂದಾದರೂ ಹೆಜ್ಜೆ ಮೂಡಿಸಲು ಸಾಧ್ಯವೇ? ಬದುಕಿನ ಹಾದಿಯೂ ಹಾಗೆಯೇ..ಹೆಜ್ಜೆಗಳನ್ನು ಒಡಮೂಡಿಸುತ್ತದೆ, ಕ್ರಮೇಣ ಅದರ ಮೇಲೆ ಪ್ರಭಾವ ಬೀರುತ್ತಾ ಆ ಜೊತೆಗೂಡಿದ ಹೆಜ್ಜೆಗಳನ್ನು ಜೊತೆಗೂಡದಂತಾಗಿಸುತ್ತದೆ. ಆದರೆ, ನಂಬಿಕೆ ಜೊತೆಗಿದ್ದರೆ, ಜೊತೆಗಿರುವ ಹೆಜ್ಜೆಗಳು ಎಂದಿಗೂ ಬೇರಾಗವು. ಆದರೂ, ಹೆಜ್ಜೆಗಳು ಜೊತೆಗಿರದಿದ್ದರೂ ಮನಸ್ಸು ಜೊತೆಗಿರಬೇಕಲ್ಲವೇ..? ರಾಧೆಯ ಹೆಜ್ಜೆಗೆ ಕೃಷ್ಣ ಕೊಳಲಾದಂತೆ. ಕೃಷ್ಣನ ರಾಗಕ್ಕೆ ರಾಧೆಯ ಹೆಜ್ಜೆ-ಗೆಜ್ಜೆ-ಲಜ್ಜೆಗಳು ಒಂದಾದಂತೆ.. ನಮ್ಮ ಪಯಣದ ಹೆಜ್ಜೆಗಳು ಜೊತೆಯಾಗಿಯೇ ಸಾಗಲು ಸಾಧ್ಯವೇ..? ಕಡೇ ಪಕ್ಷ ಕನಸಿನಲ್ಲಾದರೂ..

ಬಹುಶಃ ಇಂದು ಜೊತೆಗೂಡದ ಹೆಜ್ಜೆಗಳು, ಬಾಳಯಾನದಲ್ಲಿ ನಾಳೆ ಒಂದಾಗಿ ಜೊತೆಗೂಡಿ ಪಯಣಿಸಬಹುದೇ..? ಬಹುಶಃ ಅದು ಸಾಧ್ಯವಾಗದಿದ್ದರೇ ಒಳಿತು. ಏಕೆಂದರೆ, ಕೈಗೆ ಸಿಕ್ಕ ಚಂದಿರನನ್ನು ನಿರ್ಲಕ್ಷಿಸಿ, ನಿಲುಕದ ನಕ್ಷತ್ರಕ್ಕೇ ಅಲ್ಲವೇ ಮನ ಹಾತೊರೆಯುವುದು..ಅಷ್ಟೇ ಅಲ್ಲದೆ, ಜೊತೆಗೂಡಿ ದೂರವಾಗುವುದಕ್ಕಿಂತ ದೂರವಿದ್ದರೇ ಒಳಿತಲ್ಲವೇ..?

-ವಿಭಾ ವಿಶ್ವನಾಥ್         

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ