ಗುರುವಾರ, ಅಕ್ಟೋಬರ್ 3, 2019

ಭಾವಶರಧಿಯಲ್ಲೊಂದು ಸುತ್ತು

ಬದುಕು ಭಾವನೆಗಳ ಹಂದರವಾದರೂ, ಬಹಳ ವಿಚಿತ್ರ. ಕೆಲವೊಮ್ಮೆ ನಂಟುಗಳು ಬೆಸೆದುಕೊಳ್ಳುವ ಪರಿ ಅರ್ಥವೇ ಆಗುವುದಿಲ್ಲ. ಬದುಕಲ್ಲಿ ಅಚಾನಕ್ಕಾಗಿ ಕೆಲವು ವ್ಯಕ್ತಿಗಳು ಪ್ರವೇಶಿಸುತ್ತಾರೆ ಅಥವಾ ನಾವೇ ಅವರ ಜೀವನದಲ್ಲಿ ಅತಿಕ್ರಮಣ ಮಾಡುತ್ತೇವೆ. ಒಬ್ಬರ ಬದುಕಲ್ಲಿ, ಮತ್ತೊಬ್ಬರು ಹಾಗೆ ಸಿಗುವುದು ವಿಧಿಲಿಖಿತವೇ ಆಗಿರಬಹುದು. ಆದರೆ, ಪರಿಣಾಮಗಳಂತೂ ಇದ್ದೇ ಇದೆ. ಒಳ್ಳೆಯದ್ದಾದರೂ, ಕೆಟ್ಟದ್ದೇ ಆದರೂ ಅದು ಪರಿಣಾಮವೇ ಅಲ್ಲವೇ..?

ಇಂತಹಾ ಎಷ್ಟೋ ಬಂಧಗಳಿಗೆ ಹೆಸರಿಡುವುದು ಅಸಾಧ್ಯವೇ ಸರಿ. ಎಲ್ಲದಕ್ಕೂ ಹೆಸರಿಡುವೆನೆಂದು ಹೊರಡುವುದಾದರೆ ಮೀರಾ-ಮಾಧವರ ಬಂಧಕ್ಕಿರುವ ಹೆಸರೇನು..? ಬಂಧಗಳು ಧೀರ್ಘಕಾಲ ಉಳಿಯುವುದೋ ಇಲ್ಲವೋ ಎಂಬುದು ಆಯಾ ವ್ಯಕ್ತಿಗಳಿಗೆ ಸಂಬಂಧಿಸಿದ ವಿಚಾರ. ಬದುಕಲ್ಲಿ ಮುಂದೆ ಈಗ ಸಿಕ್ಕಿರುವವರಿಗಿಂತ ಮೌಲ್ಯವುಳ್ಳ ವ್ಯಕ್ತಿಗಳು ಸಿಗಬಹುದು.. ಅಪರಿಚಿತತೆಯಿಂದ ಪರಿಚಿತತೆಯೆಡೆಗೆ ಹೋಗುವ ಚಲನೆ ಸಂತಸ ನೀಡುವುದು ಹೌದಾದರೂ, ಪರಿಚಿತತೆಯಿಂದ ಅಪರಿಚಿತತೆಗೆ ಚಲಿಸುವ ಹಿಮ್ಮುಖ ಕಾಲಚಕ್ರ ನಿಜಕ್ಕೂ ಯಾತನಾದಾಯಕ.

ಬದುಕಿನ ದೋಣಿಯಲ್ಲಿ ಕೆಲವೊಮ್ಮೆ ಸಹಪ್ರಯಾಣಿಕರಾಗುತ್ತೇವೆ. ಆದರೆ, ಅವರೊಂದಿಗೇ ಜೀವನಪೂರ್ತಿ ಇರುತ್ತೇವೆ ಎಂದು ಭಾವಿಸುವುದು ತಪ್ಪಾಗುತ್ತದೆ. ಅವರಿಲ್ಲದೇ ಬದುಕು ಸಾಗುವುದಿಲ್ಲವೇ..? ಕಂಡಿತಾ, ಯಾರಿಲ್ಲದೆಯೂ ಬದುಕು ಸಾಗುತ್ತದೆ. ಇಷ್ಟು ದಿನ ನಮ್ಮ ಬದುಕಲ್ಲಿ ಅವರೇ ಇದ್ದರೇ..? ಜೊತೆಯಲ್ಲಿ ಪ್ರಯಾಣಿಸಿದ ನಂತರ ಮತ್ತೆ ಒಬ್ಬರೇ ಪ್ರಯಾಣಿಸುವುದು ಕೊಂಚ ಕಷ್ಟವಾಗಬಹುದು ಆದರೆ ಅಸಾಧ್ಯವಂತೂ ಅಲ್ಲ. ಅಲ್ಲವೇ..? ಆದರೆ ಹಾಗೆ ಬಂದು ಹೋದ ಕೆಲವರಿಂದ ನಮ್ಮ ಬದುಕಿನಲ್ಲಿ ಮಹತ್ತರ ಬದಲಾವಣೆಗಳಂತೂ ಆಗುತ್ತವೆ.  ಆ ಬದಲಾವಣೆ ತಂದವರ ಬದುಕಲ್ಲಿ ಮತ್ತಾವುದೋ ಕಹಿಸತ್ಯ ಅಡಗಿರಬಹುದು, ಅವರು ಕಲಿತ ಮಹತ್ತರ ಅನುಭವದ ಪಾಠ ಅದಾಗಿರಬಹುದು. ಆ ಕಾಳಜಿಯ ಹಿಂದೆ ನನಸಾಗದ ಅವರ ಕನಸನ್ನು ನಿಮ್ಮ ಮೂಲಕ ನನಸು ಮಾಡಿಕೊಳ್ಳುವ ಆಸೆ ಇರಬಹುದು. ಪ್ರತಿ ಮಮತೆ, ಕಾಳಜಿಗೂ ಪ್ರತಿಫಲ ಬಯಸದ ನಿಸ್ವಾರ್ಥತೆಯ ಹಿಂದೆ ನಿರ್ಮಲ ಅಂತಃಕರಣ ಅಡಗಿರುತ್ತದೆ, ಮೃದು ಮನಸ್ಸಿರುತ್ತದೆ. ಅದು ಮತ್ತೊಂದು ಭಾವವನ್ನು ಸೃಷ್ಟಿಸ ಹೊರಟಲ್ಲಿ ಕೀಳಾಗಬಹುದು. ಪ್ರತಿ ಕಾಳಜಿ, ಮಮಕಾರಕ್ಕೂ ಪ್ರತಿಫಲ ಬಯಸಿದರೆ ಅದು ವ್ಯವಹಾರ ಎಂದೆನಿಸಿಕೊಳ್ಳುವುದಿಲ್ಲವೇ..? ವ್ಯಾವಹಾರಿಕ ಸಂಬಂಧಗಳ ಆಯಸ್ಸು ಕೆಲಕಾಲ ಮಾತ್ರವೇ.. ಆದರೆ, ನಿಸ್ವಾರ್ಥತೆಯಿಂದ ಮಾಡುವ ಸಹಕಾರ ನೀಡುವ ತೃಪ್ತಿ ಸಾಕು ನೆಮ್ಮದಿಯಿಂದ ಜೀವಿಸಲು.

ಸಹಾಯ ಮಾಡಲು, ಸಹಕಾರ ನೀಡಲು ಇಲ್ಲಿ ನಿರ್ದಿಷ್ಟ ಕಾರಣಗಳೇ ಬೇಕಿಲ್ಲ. ಅಂತಸ್ತು, ಅಂದ-ಚೆಂದ ಎಲ್ಲವೂ ನಗಣ್ಯ. ಮನಸ್ಸಿನ ಸೌಂದರ್ಯ, ಒಳ್ಳೆಯತನ, ಆದರ್ಶ, ಒರಟುತನದ ಹಿಂದೆ ಅಡಗಿರುವ ಕಾಳಜಿ ಇವಿಷ್ಟೇ ಸಾಕಲ್ಲವೇ ಅವರಿಗೆ ಸಹಕಾರ ನೀಡಲು..

ಅವರ ಕಣ್ಣಲ್ಲಿ ಕಾಣುವ ನಂಬಿಕೆ, ಭರವಸೆ ಮತ್ತೊಬ್ಬರ ಬದುಕಿನಲ್ಲಿ ನೀಡುವ ಉತ್ತೇಜನದ ಅರಿವು ಅವರಿಗಿದೆಯೋ ಇಲ್ಲವೋ ಗೊತ್ತಿಲ್ಲ.. ಆದರೆ ಆ ಕ್ಷಣದಲ್ಲಿ ಅದು ನೀಡುವ ಆತ್ಮವಿಶ್ವಾಸ ಪದಗಳಲ್ಲಿ ಹಿಡಿದಿಡಲು ಅಸಾಧ್ಯ. ಎಲ್ಲರೂ ಕೈಬಿಟ್ಟು, ಎಲ್ಲವೂ ಮುಗಿಯಿತು ಎನ್ನುವಾಗ ಸಿಗುವ ಆ ಸಾಂತ್ವಾನದ ಮಾತು ಬದುಕನ್ನೇ ಬದಲಿಸಬಲ್ಲದು. ಜೊತೆ ನಿಲ್ಲದಿದ್ದರೂ ಪರವಾಗಿಲ್ಲ ಆ ಒಂದು ಮಾತು ಸಾಕು ಬದುಕಿನ ದಿಕ್ಕನ್ನೇ ಬದಲಾಯಿಸಲು.

"ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಶು ಕದಾಚನಾ" ಎಂದಿದ್ದಾನೆ ಕೃಷ್ಣ ಭಗವದ್ಗೀತೆಯಲ್ಲಿ. ನಿನ್ನ ಕೆಲಸವನ್ನು ನೀನು ಮಾಡು ಅದರ ಫಲಾಫಲವನ್ನು ನಿರೀಕ್ಷಿಸಬೇಡ ಎಂಬುದು ಅದರ ಅರ್ಥ. ಬದುಕಿನ ಕರ್ಮಫಲವೂ ಹೀಗೇ ಅಲ್ಲವೇ..? ಒಬ್ಬರಿಗೆ ಒಳಿತು ಮಾಡಿದರೆ ಅದು ನಮಗೆ ಮತ್ತಾವುದೋ ರೀತಿಯಲ್ಲಿ ತಿರುಗಿ ಬರುತ್ತದೆ.

ಫಲಾಫಲಗಳನ್ನು ನಿರೀಕ್ಷಿಸುತ್ತಾ ಕುಳಿತಾಗ ಮತ್ತೊಬ್ಬರು ನಮ್ಮ ನಿರೀಕ್ಷೆಗೆ ತಕ್ಕಂತೆ ಪ್ರತಿಕ್ರಿಯಿಸದಿದ್ದಾಗ ಅಘಾತವಾಗುವುದು ಸಹಜವೇ.. ಅದಕ್ಕಿಂತ ನಿರೀಕ್ಷೆಯೇ ಇಲ್ಲದಿದ್ದರೆ ಒಳಿತಲ್ಲವೇ..? ನಿರೀಕ್ಷೆ ಇಲ್ಲದೆ, ಪ್ರೀತಿ, ಕಾಳಜಿ ತೋರದೆ ಸುಮ್ಮನಿರಲು ನಾವೆಲ್ಲಾ ಬುದ್ದರಲ್ಲ ಎಂಬುವುದನ್ನು ನಾನು ಒಪ್ಪಿಕೊಳ್ಳುವೆ. ಆದರೆ, ಕೆಲವೊಮ್ಮೆ ಅಂಕೆಯಲ್ಲಿರದ ಭಾವನೆಗಳಿಂದ ನೋವು ಅನುಭವಿಸುವುದೇ ಹೆಚ್ಚು. ಎರಡು ದಡಗಳು ಸಮಾನಾಂತರವಾಗಿ ಬಾಳಬಹುದು ಅಷ್ಟೇ.. ಒಂದಾಗಲು ಸಾಧ್ಯವಿಲ್ಲ.

ಭಾವ ಶರಧಿಯಲ್ಲಿ ಹಾಗೆ ಸುಮ್ಮನೆ ಒಂದು ಸುತ್ತು ಅಷ್ಟೇ.. ನಿಮ್ಮ ಅಭಿಪ್ರಾಯಗಳು ನಿಮ್ಮ ನಿಮ್ಮ ಸ್ವಂತ. ಇದು ನನ್ನ ಅಭಿಪ್ರಾಯವಷ್ಟೇ.. ಒಬ್ಬರ ಆಲೋಚನೆ ಮತ್ತೊಬ್ಬರದಕ್ಕಿಂತ ಭಿನ್ನ. ಅಲ್ಲವೇ..? ನನ್ನ ಹುಚ್ಚು ಆಲೋಚನೆಯಲ್ಲಿ ಇದೂ ಒಂದು ಅಷ್ಟೇ..

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ