ಭಾನುವಾರ, ಅಕ್ಟೋಬರ್ 13, 2019

ಯಶೋಗಾಥೆ

"ಈ ಕಾಲದಲ್ಲಿ, ಅದೂ ಈ ಪಾಪ್,ರ್ಯಾಪ್ ಸಾಂಗ್ ಗಳನ್ನು ಕೇಳುವುದನ್ನು ಬಿಟ್ಟು ನಿನ್ನ ಈ ಲಾವಣಿ, ತತ್ವಪದಗಳನ್ನೆಲ್ಲಾ ಯಾರಾದ್ರೂ ಕೇಳ್ತಾ ಕೂತಿರ್ತಾರಾ? ಅದರಲ್ಲೂ ನಾನು ಹೋಗ್ತಾ ಇರೋದು ಅಂತರರಾಷ್ಟ್ರೀಯ ಸಾಂಸ್ಕೃತಿಕ ಸ್ಪರ್ಧೆಗೆ.. ಅಲ್ಲಿರುವವರು ಇದನ್ನು ಕೇಳಿ ಅಣಕಿಸಿಕೊಂಡು ನಕ್ತಾರೆ ಅಷ್ಟೇ..ನಾನು ಎಲ್ಲರಿಗೂ ಇಷ್ಟ ಆಗೋ ತರಾ ರ್ಯಾಪ್ ಸಾಂಗ್ ಹಾಡುವುದಕ್ಕೆ ತಯಾರಿ ಮಾಡಿಕೊಂಡಿದ್ದರೆ, ಅದನ್ನಲ್ಲಾ ಬಿಟ್ಟು ಹಳೇ ಕಾಲದ ಲಾವಣಿನೆಲ್ಲಾ ಯಾರು ಹಾಡ್ತಾರೆ,ಹೋಗಿ ಕೆಲಸ ನೋಡು ಹೋಗು. ನನ್ನ ತಂಡದವರನ್ನೆಲ್ಲಾ ತಯಾರಿ ಮಾಡಿಕೊಳ್ಳೋದಕ್ಕೆ ಅಂತಾ ನಿನ್ನ ಸಹಾಯ ಕೇಳಿದ್ರೆ, ನೀನು ನಿನ್ನ ಕಾಲದ ಅದ್ರಲ್ಲೂ ಆ ಹಳ್ಳಿ ಜನಗಳ ಲಾವಣಿ, ತತ್ವಪದಗಳ ಬಗ್ಗೆನೇ ಕೊರೀತೀಯಲ್ಲಾ..." ಅಂತಾ ರೇಗಿದ ಯಶಸ್.

ಯಶಸ್ ನ ಹೆಸರಿಗೆ ತಕ್ಕಂತೆ ಅವನಿಗೆ ಎಲ್ಲಿ ಹೋದರೂ ಯಶಸ್ಸು ಕಟ್ಟಿಟ್ಟ ಬುತ್ತಿ, ಆದರೆ ಯಾಕೋ ಈ ವಿಷಯದಲ್ಲಿ ಸ್ವಲ್ಪ ತಡವಾಗುತ್ತಾ ಇತ್ತು ಅಷ್ಟೇ..
ಎಲ್ಲಾ ವಿಷಯಕ್ಕೂ ಅವನ ಅಕ್ಕ ಯಶಸ್ವಿನಿಯ ಮಾರ್ಗದರ್ಶನವಿಲ್ಲದೆ ಆತ ಮುಂದುವರಿಯುತ್ತಲೇ ಇರಲಿಲ್ಲ. ಎಷ್ಟೇ ಬೈದರೂ, ಜಗಳವಾದರೂ ಇಬ್ಬರೂ ಮನಸ್ಸಿಗೆ ತೆಗೆದುಕೊಳ್ಳದೆ ಒಬ್ಬರಿಗೊಬ್ಬರು ಅರಿತು ನಡೆಯುತ್ತಿದ್ದರು.

ಸಂಸ್ಕೃತಿ,ಕಲೆಯ ವಿಷಯಗಳಲ್ಲಿ "ಹೆಣ್ಣುಮಕ್ಕಳು ಬೇರಿನಂತೆ ಆಳಕ್ಕಿಳಿದು ಅಧೋಮುಖರಾಗುತ್ತಾ ಹೋದರೆ, ಗಂಡುಮಕ್ಕಳು ತುದಿಯಂತೆ ಊರ್ಧ್ವಮುಖ"ರಾಗುತ್ತಾ ಹೋಗುತ್ತಾರೆ. ಆದರೆ ಇಬ್ಬರ ಬೆಳವಣಿಗೆಯೂ ಒಳಿತಿಗಾಗಿಯೇ ಅಲ್ಲವೇ?

ಅದೇಕೋ ಯಶಸ್ವಿನಿ ಹಳ್ಳಿಯ ಜನಪದರ ಸೊಗಡಿನ ಲಾವಣಿ,ತತ್ವಪದ,ಗೀಗೀ ಪದ, ನೈಸರ್ಗಿಕ ಚಿತ್ರಕಥನ ಮುಂತಾದವುಗಳ ಕುರಿತು ಆಸಕ್ತಿ ಬೆಳೆಸಿಕೊಂಡು ಅವುಗಳನ್ನೇ ತನ್ನ ಸಂಶೋಧನೆಯ ವಿಷಯವಾಗಿ ಆರಿಸಿಕೊಂಡಿದ್ದರೆ, ಯಶಸ್ ಗೆ ಚಲನಚಿತ್ರಗಳ ಪ್ರಭಾವದಿಂದ ಅವೆಲ್ಲವೂ ಹಳೆಯ ಗೊಡ್ಡಿನಂತೆ ಕಾಣುತ್ತಿದ್ದವು.

ಅವನ ಅಕ್ಕ ಈ ಕುರಿತು ಮಾತನಾಡಲು ಹೊರಟರೆ "ನಿಮ್ಮ ಕಾಲದನ್ನೆಲ್ಲಾ, ಈಗಿನ ಕಾಲದಲ್ಲಿ ಹೇಳ್ಬೇಡ. ಅದೆಲ್ಲಾ ಆಗಲೇ ಮುಗಿದೋಯ್ತು." ಅಂತಾ ಅಣಕಿಸಿ ಹೊರಟುಬಿಡುತ್ತಿದ್ದ. ಆದರೆ ಯಶಸ್ವಿನಿ ಇದನ್ನೆಲ್ಲಾ ಮನಸ್ಸಿಗೆ ತೆಗೆದುಕೊಳ್ಳದೆ, "ನಾನು ಇರುವುದು ಇನ್ಯಾವ ಕಾಲದಲ್ಲೋ..? ಅಬ್ಬಬ್ಬಾ ಅಂದ್ರೆ 4 ವರ್ಷಗಳ ವ್ಯತ್ಯಾಸ ಅಷ್ಟೇ..", "ಓಲ್ಡ್ ಈಸ್ ಗೋಲ್ಡ್" ಅಂತಾ ನಿನ್ನ ಬಾಯಲ್ಲೇ ಬರೋವರೆಗೂ ನಾನು ಕಾಯ್ತೀನಿ" ಅಂತಾ ಹೇಳಿ ನಸುನಗುತ್ತಾ ಸುಮ್ಮನಾಗ್ತಾ ಇದ್ದಳು.ಆ ಕಾಲವೂ ದೂರದಲ್ಲೇನೂ ಇರಲಿಲ್ಲ.

ಪಾಪ್ ಸಾಂಗ್,ರ್ಯಾಪ್ ಸಾಂಗ್ ಅಂತಾ ತಯಾರಾಗಿದ್ದ ಯಶಸ್ ಗೆ ಕಾರ್ಯಕ್ರಮದ ಆಯೋಜಕರು ಹೇಳಿದ್ದು ಇಷ್ಟೇ,"ಎಲ್ಲರೂ ಇದನ್ನೇ ಪ್ರದರ್ಶಿಸಿದ್ದರೆ, ಹೊಸತನ ಎಲ್ಲಿಂದ ಬರುತ್ತೆ..?, ಏನಾದ್ರೂ ಹೊಸದಾಗಿ ಪ್ರಯತ್ನ ಮಾಡಿದ್ರೆ ಮಾತ್ರ ನಿನ್ನ ತಂಡಕ್ಕೆ ಅವಕಾಶ" ಅಂತಾ ಹೇಳಿದ್ರು. ಅದರ ವಿಷಯವಾಗಿ ಮಾತನಾಡುತ್ತಿರುವಾಗಲೇ ಈ ರೇಗಾಟ ನಡೆದದ್ದು. ಇವನ ಈ ರೇಗಾಟಕ್ಕೆ ಸೊಪ್ಪು ಹಾಕದ ಇವನ ಅಕ್ಕ ಅವನ ತಂಡದವರನ್ನೆಲ್ಲಾ ಕರೆದು ಕೂರಿಸಿ ತನ್ನ ಯೋಜನೆಗಳನ್ನು ವಿವರಿಸಿದಳು.

ತತ್ವಪದ,ಲಾವಣಿಗಳು ಬರೀ ಪದಗಳಲ್ಲ. ಆಡು ಮಾತುಗಳಲ್ಲ. ಅದರಲ್ಲಿ ಜೀವನದ ಸತ್ವ,ತತ್ವಗಳೇ ಅಡಗಿ ಕೂತಿವೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಕೆಚ್ಚು ತುಂಬುತ್ತಿದ್ದ ಪದಗಳವು. ಜನಪದರ ಜೀವನಾಡಿಗಳು ಅವು. ಅವುಗಳಲ್ಲಿ ಆರ್ತನಾದವಿದೆ, ಬಿಸಿಯುಸಿರಿದೆ. ಆದರೆ ತಲುಪಿಸುವ ಕಂಠಗಳು ಮುದಿಯಾಗುತ್ತಲಿವೆ, ಅವುಗಳಿಗೆ ಈಗ ಜೀವಕಳೆ ತುಂಬಬೇಕಿದೆ. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ನಿಮ್ಮ ರ್ಯಾಪ್ ಸಾಂಗ್ ಗಳಲ್ಲಿ ಈ ಲಾವಣಿ, ತತ್ವಪದಗಳಿಗೆ ಹೊಸ ಚೈತನ್ಯ ಬರಲಿ. ಗಿಟಾರ್ ಜೊತೆಗೆ ಕಂಸಾಳೆಯ ತಾಳ, ದಮ್ಮಡಿಗಳೂ ಸೇರಲಿ. ಇದರ ಜೊತೆಗೆ ಅದಕ್ಕೆ ಸಾಂದರ್ಭಿಕವಾಕ ಹಿನ್ನೆಲೆಯನ್ನು ನೈಸರ್ಗಿಕ ಚಿತ್ರ-ಕಥನದ ಶೈಲಿಯಾದ ನೆರಳು-ಬೆಳಕಿನಾಟದ ಮೂಲಕ ನೀಡಿ. ಸಂಜ್ಞೆಗಳು, ಭಾವನೆಗಳಿಗೆ ದೇಶ-ಭಾಷೆಯ ಹಂಗಿಲ್ಲ. ಹೀಗೆ ಯಾರ ಹಂಗೂ ಇಲ್ಲದೆ ಬೆಳೆಯುವ ಕಲೆಗಳು ಮಾತ್ರ ಉಳಿಯುತ್ತವೆ. ಯಶಸ್ಸು ಸ್ಪರ್ಧೆಯ ಬಹುಮಾನದಲ್ಲಾಗಲೀ, ಹಣದಲ್ಲಾಗಲೀ ದೊರೆಯುವುದಿಲ್ಲ.ಅಪ್ಪಟ ಕಲಾಭಿಮಾನಿಗಳ ಮನದಲ್ಲಿ ಮೂಡಿನಿಲ್ಲುವುದೇ ಯಶಸ್ಸು.

ನನ್ನ ಈ ಮಾತನ್ನು ಪಾಲಿಸಲೇಬೇಕು ಅಂತಾ ಇಲ್ಲ,ಗೆದ್ದರೆ ಜನಪದರ ಕಲೆಗೆ ನೆಲೆ ಸಿಗುತ್ತದೆ, ಸೋತರೂ ತೊಂದರೆ ಇಲ್ಲ, ಇತರರಿಗೆ ಅದರ ಪರಿಚಯವಾಗುತ್ತದೆ. ನೀವು ಗೆದ್ದರೆ ಸಂತೋಷ, ಆದರೆ ಸೋತರೆ ತಿದ್ದಿಕೊಳ್ಳಲು ಒಂದು ಪಾಠ ಸಿಗುತ್ತದೆ. ಪ್ರತಿಭೆಯ ಅನಾವರಣವಾಗುವುದಂತೂ ಖಂಡಿತ.ಇತರರನ್ನು ತುಳಿದು ಬೆಳೆಯದೆ, ಬೆಳೆಸುತ್ತಾ ಬೆಳೆದರೆ ಅದು ನಿಜವಾದ ಗೆಲುವು ಅಲ್ವಾ? ನಿರ್ಧಾರ ನಿಮಗೆ ಬಿಟ್ಟದ್ದು.. ಎಂದು ಹೇಳಿ ಅಲ್ಲಿಂದ ಹೊರಟಳು ಯಶಸ್ವಿನಿ.

ಅದರ ನಂತರ ನಡೆದದ್ದು ನಿಜಕ್ಕೂ ಯಶಸ್ವಿ ಕಥೆಯೇ, ಅವಳ ಮಾತಿಗೆ ಎಲ್ಲರೂ ಮನಸ್ಸು ಬದಲಿಸಿ ಶ್ರದ್ದೆಯಿಂದ, ಜನಪದ ಕಲಾವಿದರ ಸಹಾಯದಿಂದ ನಶಿಸಿ ಹೋಗುತ್ತಿದ್ದ ಕಲೆಯನ್ನು ಉಳಿಸಿಕೊಳ್ಳಲು ಯಶಸ್ವಿಯಾದರು, ಅದಕ್ಕೆ ಪ್ರತಿಫಲವಾಗಿ ಬಹುಮಾನವೂ ಸಂದಿತು.ಇಂದು ಅದೇ ಹಣದ ನೆರವಿನಿಂದ "ಯಶೋಗಾಥೆ" ಎಂಬ ಸಂಸ್ಕೃತಿ ಕೇಂದ್ರ ಸ್ಥಾಪನೆಯಾಗಿ ಯಶೋಮಾರ್ಗದತ್ತ ಸಾಗುತ್ತಾ ಕಲಾರಾಧಕರು ಮತ್ತು ಕಲೆಗೆ ಬೆಳಕು ನೀಡುವ ಕೈಂಕರ್ಯದಲ್ಲಿ ತೊಡಗಿದೆ.

-ವಿಭಾ  ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ