ಗುರುವಾರ, ಅಕ್ಟೋಬರ್ 24, 2019

ಜನನಾಯಕರಿಗೆ ಜನಸಾಮಾನ್ಯರಿಂದ..

ಜನನಾಯಕರಿಗೆ,

ಈ ಪ್ರಜಾತಂತ್ರ ಆಡಳಿತದಲ್ಲಿ, ಪ್ರಜೆಗಳಿಂದಲೇ ಆರಿಸಿಕೊಂಡು ಅವರನ್ನೇ ಮರೆತು ಅವರ ಹಣದ ಭಿಕ್ಷೆಯಿಂದ ಜೀವನ ನಡೆಸುತ್ತಿರುವ ಧೀಮಂತನಾಯಕರಿಗೆ...

ಒಬ್ಬ ಸಾಮಾನ್ಯ ಪ್ರಜೆಯ ಅಳಲು ಕೇಳುವ ಆಸಕ್ತಿಯಿದ್ದರೆ ಮುಂದುವರಿಯಿರಿ.
ಐದು ವರ್ಷದ ಅಧಿಕಾರದ ಅವಧಿಯಲ್ಲಿ ನೀವು ಎಷ್ಟೆಲ್ಲಾ ಅವ್ಯವಹಾರ ನಡೆಸಿಬಿಡುತ್ತೀರಾ ಅಲ್ಲವೇ? ಅಧಿಕಾರದ ಅಮಲು ನಿಮಗೆ ಅಷ್ಟೊಂದು ಆವರಿಸಿಕೊಂಡು ಬಿಡುತ್ತದೆಯೇ?ಅಧಿಕಾರ ಬರುವ ಮುನ್ನ ನಮ್ಮ ಹಾಗೆಯೇ ಬಸ್ಸಿನಲ್ಲಿ,ಬೈಕಿನಲ್ಲಿ ಅಥವಾ ನಡೆದುಕೊಂಡೇ ಓಡಾಡುತ್ತಿದ್ದವರು ,ಈಗ ಕಾರು ಬಿಟ್ಟು ಕಾಲು ಬಿಟ್ಟು ಕಾಲು ಬಳಸುವುದೇ ಅಪರೂಪ. ನೀವು ನಿಮ್ಮ ಕಾಲು ಬಳಸಿದರೆ ಬಹುಶಃ ಅದು ನಿಮ್ಮ ಪಕ್ಷದ ಯಾವುದೋ ಪ್ರಚಾರಕ್ಕೆ ಇಲ್ಲವೆಂದರೆ ತೂಕ ಇಳಿಸುವ ಯಾವುದೋ ಚಿಕಿತ್ಸೆಗಾಗಿರುತ್ತದೆ.

ತಂಗಳು ಮುದ್ದೆ,ಅನ್ನ, ಮಧ್ಯಾಹ್ನದ ಸಾರಲ್ಲಿ ಊಟ ಮಾಡುತ್ತಿದ್ದವರಿಗೆ ಈಗ ಫೈವ್ ಸ್ಟಾರ್ ಹೋಟೆಲ್ ಗಳ ಊಟ ಬಿಟ್ಟು ಬೇರೆ ಊಟ ರುಚಿಸುವುಡೇ ಇಲ್ಲ. ನೀವು ಬಿಸಾಡುವ ಊಟ ಎಷ್ಟೋ ಜನ ಬಡವರ ದಿನನಿತ್ಯದ ಆಹಾರಕ್ಕಿಂತ ಹೆಚ್ಚಿರುತ್ತದೆ ಎಂಬುದು ನಿಮಗೆ ಗೊತ್ತೇ ಆಗುವುದಿಲ್ಲ..!ಯಾರದೋ ದುಡ್ಡು, ಯಲ್ಲಮ್ಮನ ಜಾತ್ರೆ ಎಂದಾದಾಗ ಮಾತ್ರವೇ ಹೀಗಾಗುತ್ತದೆ. ಕಷ್ಟಪಟ್ಟು ದುಡಿದಿದ್ದರೆ ಬಹುಶಃ ನಿಮಗೆ ಆ ಹಣದ ಬೆಲೆಯ ಅರಿವಾಗುತ್ತಿತ್ತೇನೋ?

ನೀವು ಹುಟ್ಟಿದ ಹಳ್ಳಿಯ ಹೆಸರನ್ನು ನಿಮ್ಮ ಹೆಸರಿನ ಮುಂದೆ ಸೇರಿಸಿಕೊಂಡು ಮೆರೆಯುವ ನೀವು ಆ ಊರಿನ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಅಲ್ಲವೇ?ಆ ಊರಿನ ರಸ್ತೆ ಡಾಂಬರು ಕಂಡು ಎಷ್ಟೋ ವರ್ಷಗಳೇ ಆಗಿಹೋಗಿದೆ, ನಿಮ್ಮೂರಿನ ಸರ್ಕಾರಿ ಶಾಲೆಗೆ ಹಾಕಿದ ಬೀಗ ತೆಗೆಯಲಾಗದಂತೆ ಕಿಲುಬು ಹಿಡಿದಿದೆ. ಆದರೂ ಸರ್ಕಾರದಿಂದ ಬಿಡುಗಡೆಯಾಗುವ ಹಣದ ಅನುದಾನಕ್ಕೆ ಆ ಶಾಲೆಯದ್ದೇ ಮುಖ್ಯ ಹೆಸರು. ಡಾಂಬರು ಹಾಕಿಸುವ ನೆಪದಲ್ಲಿ ಕಾಂಟ್ರಾಕ್ಟ್ ಮಾಡಲು ಗೊತ್ತೇ ಇರದ ಆ ಕಾಂಟ್ರಾಕ್ಟುದಾರನಿಗೆ ಹಣದ ಸುರಿಮಳೆ. ಇದನ್ನೆಲ್ಲಾ ತಡೆಯಲು ಬರುವ ಸರ್ಕಾರಿ ಅಧಿಕಾರಿಗಳಿಗೆ ಯಮನೂರಿಗೆ ಪರವಾನಗಿ ಕೊಟ್ಟು ಕಳುಹಿಸಿಯೇ ಬಿಡುತ್ತೀರ,  ಅದಕ್ಕೆ ಅಡ್ಡಿಪಡಿಸಿದರೆ ಅಲ್ಲಿಂದ ಎತ್ತಂಗಡಿಯ ಭಾಗ್ಯ. ಇದೇ ಅಲ್ಲವೇ ನಿಮ್ಮಿಂದ ಆಗುವುದು?

ಓ, ಒಂದು ರೂಪಾಯಿಗೆ ಅಕ್ಕಿ ನೀಡುತ್ತೇನೆನ್ನುವಿರಾ,ನಿಮ್ಮ ಆ ಅಕ್ಕಿ ಪಡೆಯಲು ಹೆಬ್ಬೆಟ್ಟಿನ ಗುರುತು ನೀಡಲು ಬರುವ ವೃದ್ದರ ಪಾಡು ನೀವು ಗಮನಿಸಲೇ ಇಲ್ಲವೇ? ರೇಷನ್ ಒದಗಿಸುವ ವ್ಯಕ್ತಿಯ ಅಧಿಕಾರದ ಚುಕ್ಕಾಣಿ ಬೇರೊಬ್ಬರ ಹಿಡಿತದಲ್ಲಿದ್ದರೂ,ಯಾರೂ ಅದನ್ನು ಚಕಾರವೆತ್ತದಂತೆ ಅವರು ಕೊಟ್ಟಷ್ಟು ತೆಗೆದುಕೊಂಡು, ಅವರು ಅಂದಂತೆ ಅನ್ನಿಸಿಕೊಂಡು ನಮ್ಮ ಹಣೆಬರಹವೇ ಇಷ್ಟೆಂದು ಹಳಿದುಕೊಂಡು ಸುಮ್ಮನಿರಬೇಕೆಂದು ಕಟ್ಟಳೆ ಮಾಡಿಲ್ಲವೇ? ದುಡಿಯುವ ವ್ಯಕ್ತಿಗಳಿಗೂ ಅಕ್ಕಿಯ ಆಸೆ ತೋರಿಸಿ ಸೋಮಾರಿಗಳನಾಗಿಸಿದ್ದು ಸಾಲಲಿಲ್ಲವೇ?

ಸ್ವಾಮಿ, ಒಂದು ದಿನ ಪೊರಕೆ ಹಿಡಿದು ಬೀದಿ ಶುಭ್ರ ಮಾಡಿದರೆ ಸಾಲದು, ಮೊದಲು ಮನಸ್ಸನ್ನು ಶುಭ್ರಗೊಳಿಸಿಕೊಳ್ಳಬೇಕು. ಲಂಚ ಕೊಡಲಾಗದೆ ಬದುಕನ್ನೇ ಛಿದ್ರ ಮಾಡಿಕೊಂಡವರ ಬದುಕನ್ನು ಮರಳಿಸಲು ನಿಮ್ಮಿಂದಾಗುವುದೇ? ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹಗಲು-ರಾತ್ರಿ ಓದಿ ಪ್ರಥಮ ಸ್ಥಾನ ಪಡೆದವನನ್ನೂ, ಲಂಚ ಕೊಡಲಿಲ್ಲವೆಂದೂ ರಿಸರ್ವೇಷನ್ ಇಲ್ಲವೆಂದು ತಿರಸ್ಕರಿಸಿದಾಗ, ಅವನ ಕಣ್ಣಿನಲ್ಲಿನ ಅಸಹಾಯಕತೆಯ ನೋವು ನಿಮಗೆ ಕಾಣಲೇ ಇಲ್ಲವೇ?

ಸರಕಾರಿ ಶಾಲೆಗಳನ್ನು ಉಳಿಸಿ ಎಂದು ಘೋಷಣೆ ಕೂಗುತ್ತಾ, ದೂರದರ್ಶನದಲ್ಲಿ ಅಷ್ಟುದ್ದದ ಸಂದರ್ಶನ ನೀಡುತ್ತಿರುವಾಗ, ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿಯೇ ಓದಿಸಬೇಕೆಂಬುದು ನೆನಪಾಗಲಿಲ್ಲವೇ?
ಬಹುಶಃ ಪೂರ್ತಿ ಪತ್ರ ಓದಿದ್ದರೆ, ಮಾನವೀಯತೆಯ ಲವಲೇಷವಾದರೂ ನಿಮ್ಮಲ್ಲಿ ಇನ್ನೂ ಜೀವಂತವಾಗಿದ್ದರೆ ಮೊದಲು ನೀವು ಬದಲಾಗಿ, ನಂತರ ನಿಮ್ಮವರನ್ನೂ ಬದಲಾಯಿಸಿ

-ಇಂತಿ
ಬದಲಾವಣೆ ಬಯಸುವ ಸಾಮಾನ್ಯ ಪ್ರಜೆ

(ಬರಹ : ವಿಭಾ ವಿಶ್ವನಾಥ್)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ