ಭಾನುವಾರ, ಮಾರ್ಚ್ 8, 2020

ಪ್ರತ್ಯಕ್ಷ ಕಂಡರೂ …

ಅಂದು  9:00 ಘಂಟೆಗೆ ಕಾಲೇಜಿಗೆ ಹೋದಾಗ ನನಗೆ ಆಶ್ಚರ್ಯವಾಯಿತು. ಬಂದ್ ಗಳಿಗೂ ರಜೆ ಕೊಡದ ಪ್ರಾಂಶುಪಾಲರು ಅಂದು ರಜೆ ಘೋಷಿಸಿದ್ದರು.

ನಾವು ಫ್ರೆಂಡ್ಸ್ ಎಲ್ಲರೂ "ಏನು ಇವತ್ತು ಜೋರಾಗಿ ಮಳೆ ಬರುತ್ತೆ ಅನ್ಸುತ್ತೆ" ಅಂತಾ ಮಾತನಾಡಿಕೊಳ್ತಾ ಇದ್ರೆ, ಇನ್ನೊಬ್ಬಳು "ಏ! ಇವತ್ತು ಸೂರ್ಯ ಪಶ್ಚಿಮದಲ್ಲಿ ಹುಟ್ಟಿರಬೇಕೇನೋ" ಅಂತಾ ಹೇಳಿದ್ಲು. ರಜೆಗೆ ಕಾರಣ ಏನು ಎಂದು ಗೊತ್ತಿಲ್ಲದೆ ನಾವು ಇಷ್ಟೆಲ್ಲಾ ಮಾತನಾಡಿಕೊಳ್ತಾ ಇದ್ವಿ. ಅಷ್ಟರಲ್ಲಿ ಬಂದ ಸಂದೀಪ್. ಇವನು ನಮ್ ಕಾಲೇಜ್ಗೆ ಒಂತರಾ ರೇಡಿಯೋ ತರಾ. ಇವನ ಬಾಯಿಗೆ ಒಂದು ವಿಷಯ ಸಿಕ್ಕಿತು ಅಂದ್ರೆ ಮುಗಿದೇ ಹೋಯಿತು.ಇವನನ್ನು ಕೇಳಿದ್ರೆ ಗೊತ್ತಾಗಬಹುದೇನೋ ಅಂದುಕೊಂಡು "ಏನೋ ಸಂದೀಪ್, ಇವತ್ತು ಯಾಕೆ    ರಜೆ ಕೊಟ್ಟಿದ್ದಾರೆ?" ಅಂತಾ ನಾನು ಅವನನ್ನು ಕೇಳಿದೆ.ಅದಕ್ಕೆ "ಏನೋ ಮನು, ನಿನಗೆ ಇನ್ನೂ ವಿಷಯಾನೇ ಗೊತ್ತಿಲ್ವಾ, ನೀನು ಹುಡುಗಿಯರ ಜೊತೆ ಮಾತಾಡ್ತಾ ಇದ್ರೆ ನಿನಗೆ ಲೋಕಾನೇ ಮರೆತು ಹೋಗಿಬಿಡುತ್ತೆ. ಅದ್ಸರಿ, ನೀನು ಇನ್ನೂ ವಾಟ್ಸಾಪ್ ನಲ್ಲಿ ಆ ವೀಡಿಯೋ ನೋಡಿಲ್ವಾ?" ಅಂದ.

"ಸುತ್ತಿ ಬಳಸಿ ಮಾತಾಡ್ಬೇಡ, ಅದೇನು ಅಂತಾ ಬೇಗ ವಿಷಯಕ್ಕೆ ಬಾರೋ" ಅಂದೆ. "ಮೊದಲು ವಾಟ್ಸಾಪ್ ವೀಡಿಯೋ ನೋಡು ನಿನಗೇ ಗೊತ್ತಾಗುತ್ತೆ. ನನಗೆ ಲೇಟಾಗುತ್ತೆ, ನಾನು ಬೇಗ ಹೋಗಬೇಕು." ಅಂತಾ ಹೇಳಿದ.

"ಸರಿ, ಹೋಗು" ಅಂತಾ ಹೇಳಿ, "ಮೊಬೈಲ್ ಅನ್ನು ನಿರ್ಬಂಧಿಸಲಾಗಿದೆ." ಅನ್ನೋ ಬೋರ್ಡ್ ಕೆಳಗೆ ನಿಂತುಕೊಂಡು ಮೊಬೈಲ್ ಆನ್ ಮಾಡಿದೆ. ಒಂದರ ಮೇಲೊಂದು ಮೆಸೇಜ್ ಗಳು ಬರುವುದಕ್ಕೆ ಶುರು ಮಾಡಿದವು. ಎಲ್ಲಾ 'ಜಿಯೋ' ಪ್ರಭಾವ ಅಂತಾ ಹೇಳ್ಕೊಂಡು, ಏನಿರಬಹುದು ಆ ವೀಡಿಯೋದಲ್ಲಿ ಅನ್ನೋ ಕುತೂಹಲದಲ್ಲೇ ಗ್ರೂಪ್ ನಲ್ಲಿ ಹಾಕಿದ್ದ ಆ ವೀಡಿಯೋ ಡೌನ್ ಲೋಡ್ ಮಾಡಿದೆ. ಒಂದು ಟೆಂಪೋ ಮುಂದೆ ರಕ್ತಸಿಕ್ತವಾಗಿ ಬಿದ್ದಿದ್ದ ಹುಡುಗನೊಬ್ಬ ನೋವಿನಿಂದ ನರಳುತ್ತಾ ಇದ್ದಾನೆ. ಹಾಕಿದ್ದ ಜೀನ್ಸ್ ಹರಿದು, ಅವನ ಚರ್ಮ ಕಿತ್ತುಹೋಗಿ ರಕ್ತ ಸುರಿಯುತ್ತಿದೆ. ಬಹುಷಃ ಅವನ ಕಾಲು ಮುರಿದಿರಬಹುದು. ಏಳುವುದಕ್ಕೆ ಪ್ರಯತ್ನ ಪಡುತ್ತಿದ್ದಾನೆ. ಅವನು ಮಾತನಾಡ್ತಾ ಇರುವುದು ಸರಿಯಾಗಿ ಕೇಳಿಸುತ್ತಿಲ್ಲ. ಹೈವೇ ಅನ್ಸುತ್ತೆ, ತುಂಬಾ ವಾಹನಗಳ ಸದ್ದು ಕೇಳಿಸುತ್ತಾ ಇದೆ. ಹಾಗೇ ಸ್ವಲ್ಪ ಮುಂದೆ ಒಬ್ಬಳು ಹುಡುಗಿ ಬಿದ್ದಿದ್ದಾಳೆ. ಅವಳ ಹೈಹೀಲ್ಡ್ ಚಪ್ಪಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಬಟ್ಟೆ ಅಸ್ತವ್ಯಸ್ತವಾಗಿದೆ. ಅವಳಲ್ಲಂತೂ ಚಲನೆಯೇ ಇಲ್ಲ. ಅಂಗಾತ ಬಿದ್ದಿದ್ದ ಅವಳ ತಲೆಯಿಂದ ರಕ್ತ ಹರಿದು ಕೋಡಿಯಾಗಿ ರಸ್ತೆಯಲ್ಲಿ ಮಡುಗಟ್ಟಿದೆ. ಆಂಬ್ಯುಲೆನ್ಸ್ ಬರುತ್ತಿದೆ ಅನ್ಸುತ್ತೆ, ಅದರ ಸೌಂಡ್ ಕೇಳಿಸ್ತಾ ಇದೆ.

ಎರಡು ನಿಮಿಷದ ಆ ವೀಡಿಯೋ ಬದುಕಿನ ದುರಂತದ ಚಿತ್ರಣವನ್ನೇ ಕಣ್ಣ ಮುಂದೆ ಇಟ್ಟಿತ್ತು. ಹುಡುಗನ ಮುಖ ನೋಡಿದರೆ ಅವನು ನಮ್ಮ ಕಾಲೇಜಿನವನಲ್ಲ, ಆದರೆ ಹುಡುಗಿ ಅಂಗಾತ ಬಿದ್ದಿದ್ದರಿಂದ ಯಾರೆಂದು ಗುರುತು ಸಿಗಲಿಲ್ಲ. ನಮ್ಮ ಕಾಲೇಜಿನವಳೇನೋ ಎಂಬ ಸಂಶಯ ಉಂಟಾಯಿತು.

ಅಷ್ಟರಲ್ಲಿ ನನಗೆ ನೆನಪಾಗಿದ್ದು ಶಾರ್ವರಿ. ಏನಿವತ್ತು ಇಷ್ಟೊತ್ತಾದ್ರೂ ಕ್ಯಾಂಪಸ್ ನಲ್ಲಿ ಕಾಣಿಸಿಕೊಂಡೇ ಇಲ್ವಲ್ಲಾ ಅಂತಾ ಒಂದು ಸಾರಿ ಕಣ್ಣಾಡಿಸಿದೆ. ಅವಳೇನಾದ್ರೂ ನಾನು ಈ ವೀಡಿಯೋ ನೋಡೋದನ್ನ ನೋಡಿದ್ರೆ ಅವಳ ಸ್ಟೈಲಲ್ಲೇ ಕಿವಿ ಹಿಂಡಿ "ಕತ್ತೆ, ಯಾಕೋ ಇಂತಾ ವೀಡಿಯೋ ಎಲ್ಲಾ ನೋಡ್ತಿಯಾ? ಸುತ್ತಾ ಇರುವವರು ವೀಡಿಯೋ ಮಾಡೋದು ಬಿಟ್ಟು ಅವರನ್ನು ಆಸ್ಪತ್ರೆಗೆ ಸೇರಿಸಿದ್ರೆ ಅವರ ಜೀವ ಆದ್ರೂ ಉಳಿಯುತ್ತೆ. ವೀಡಿಯೋ ಮಾಡುವವರಿಗೆ ಬುದ್ಧಿ ಇಲ್ಲ. ಅದನ್ನು ಕಣ್ಣು ಬಿಟ್ಕೊಂಡು ರೆಪ್ಪೆ ಮಿಟುಕಿಸದೆ  ನೋಡುವವರಿಗೆ ಬುದ್ದಿನೇ ಇಲ್ಲ" ಅಂತಾ ಹೇಳ್ತಾ ಇದ್ಲು.

ಆಗ ನಾನು "ಏ,ಶಾರಿ! ತಪ್ಪಾಯ್ತು ಕಣೇ,ನನ್ನ ಕಿವಿ ಬಿಡೇ, ನೋಯ್ತಾ ಇದೆ." ಅಂತಾ ಅವಳ ಕೈಯಿಂದ ಬಿಡಿಸಿಕೊಳ್ತಾ ಇದ್ದೆ. ಅವಳು ನೋಡೋದಕ್ಕೆ ಬಿಂದಾಸ್ ಹುಡುಗಿ ತರಹ ಕಾಣಿಸಿದ್ರೂ, ಮನಸ್ಸು ಮಾತ್ರ ತುಂಬಾ ಮೃದು ಅಂತಾ ನೆನಪು ಮಾಡಿಕೊಳ್ತಾ ಇರುವಾಗ ಮತ್ತೆ ಸಂದೀಪ್ ಬಂದ." ಏ, ಸಂದೀಪ ನಿಂತ್ಕೊಳ್ಳೋ, ವೀಡಿಯೋ ನೋಡಿದೆ ಕಣೋ, ಆದರೆ ಯಾರು ಅಂತಾ ಗೊತ್ತಾಗ್ಲಿಲ್ಲ, ನಮ್ಮ ಕಾಲೇಜ್ ಹುಡುಗೀನಾ?" ಅಂತಾ ಕೇಳಿದೆ. ಅದಕ್ಕೆ ಅವನು "ಇನ್ನೂ ಗೊತ್ತಾಗ್ಲಿಲ್ವೇನೋ? ಶಾರ್ವರಿ ಕಣೋ ಅವಳು" ಅಂದಾಗ ಒಂದು ಕ್ಷಣ ಏನಾಗ್ತಾ ಇದೆ ಅನ್ನೋದೇ ಗೊತ್ತಾಗ್ಲಿಲ್ಲ. ಆಗ ನನ್ನ ಕಣ್ಮುಂದೆ ಒಂದು ಕ್ಷಣ ಶಾರ್ವರಿ ತೇಲಿ ಹೋದ್ಲು.

ಅದು ಇಂಜಿನಿಯರಿಂಗ್ ನ ಮೊದಲನೇ ದಿನ. ಎಲ್ಲರೂ ಡ್ರೆಸ್ ಕೋಡ್ ಫಾಲೋ ಮಾಡ್ತಾ ಬಂದ್ರೆ, ಇವಳೊಬ್ಬಳು ಬಿಂದಾಸ್ ಆಗಿ ಜೀನ್ಸ್, ಫ್ರೀ ಹೇರ್ ಬಿಟ್ಟುಕೊಂಡು ಬಂದ್ಲು. ಅವಳೆಷ್ಟು ನೋಡೋದಕ್ಕೆ ಚೆನ್ನಾಗಿದ್ಲೋ, ಅವಳು ಓದುವುದರಲ್ಲಿ ಕೂಡಾ ಅಷ್ಟೇ ಮುಂದಿದ್ದಳು. ನೋಡನೋಡುತ್ತಲೇ ಒಂದು ಸೆಮಿಸ್ಟರ್ ಮುಗಿದೇ ಹೋಯಿತು. ಅವಳು 'ಟಾಪರ್' ಕೂಡ ಆದಳು. ಓದಿನಲ್ಲಿ ಅಷ್ಟೇನೂ ಚುರುಕಿಲ್ಲದ ನಾನು ಅವಳನ್ನು ಪ್ರಪೋಸ್ ಮಾಡಬೇಕು, ಅದಕ್ಕಿಂತ ಮೊದಲು ಅವಳನ್ನು ಫ್ರೆಂಡ್ ಮಾಡಿಕೊಂಡು ಆಮೇಲೆ ಪ್ರಪೋಸ್ ಮಾಡಬೇಕು ಅಂತಾ ಅಂದುಕೊಂಡೆ. ಹಾಗೆ ಮಾಡಿದ್ದಕ್ಕೆ ಅವಳು "ಆಕರ್ಷಣೆ ಎಲ್ಲ ಪ್ರೀತಿ ಅಲ್ಲ, ಸ್ನೇಹ ಅನ್ನುವ ಹೆಸರಲ್ಲಿ ಶುರುವಾಗಿ ಪ್ರೀತಿ ಅನ್ನುವ ಮಾಯೆಗೆ ಸಿಲುಕಿರುವುದರಲ್ಲಿ ಅರ್ಥ ಇಲ್ಲಾ, ಸುಮ್ಮನೆ ಇದಕ್ಕೆ ತಲೆ ಕೆಡಿಸಿಕೊಂಡು ನಿನ್ನ ಜೀವನ ಹಾಳು ಮಾಡಿಕೊಳ್ಳಬೇಡ. ಇವತ್ತಿಂದ ಚೆನ್ನಾಗಿ ಓದು,ನಾನು ನಿನಗೆ ಸಹಾಯ ಮಾಡುತ್ತೇನೆ. ನೀನು ಇವತ್ತಿಂದ ನನ್ನ ಬೆಸ್ಟ್ ಫ್ರೆಂಡ್ ಆಯ್ತಾ" ಅಂತ ಹೇಳಿ ನನ್ನ ಮನಸನ್ನು ಓದುವುದರ ಕಡೆಗೆ ಒಲಿಸಿದಳು. ಪ್ರೀತಿನೋ, ಆಕರ್ಷಣೆನೋ ಗೊತ್ತಿಲ್ಲ ಆದ್ರೆ ಅವಳು ನನ್ನ ಬೆಸ್ಟ್ ಫ್ರೆಂಡ್. ಈ ಅಪಘಾತಕ್ಕೆ 2 ದಿನ ಮುಂಚೆ "ನನಗೆ 2000 ರೂಪಾಯಿ ಬೇಕಿತ್ತು. ಮುಂದಿನ ವಾರ ಕೊಡ್ತೀನಿ" ಅಂದಾಗ ಸರಿ ಅಂತ ಕೊಟ್ಟೆ.ಯಾಕೆ ಅಂತಾ ಕೇಳಿದ್ದಕ್ಕೆ ಶಿವಮೊಗ್ಗಕ್ಕೆ ಹೋಗ್ತಾ ಇದ್ದೀನಿ, ಉಳಿದಿದ್ದನ್ನು ಬಂದು ಹೇಳ್ತಿನಿ ಅಂದ್ಲು. ಸರಿ ಅಂತಾ ದುಡ್ಡು ಕೊಟ್ಟು , ದುಡ್ಡಿನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ಹೋಗ್ಬಿಟ್ಟು ಬಾ ಅಂದೆ.

ಹಾಗೆ ಹೋದ "ಶಾರಿ" ಮರಳಿ ಬಂದದ್ದು ಹೀಗೆ. ಆಸ್ಫತ್ರೆಗೆ ಹೋಗಿ ಅವಳನ್ನೊಮ್ಮೆ ಕೊನೆಯ ಬಾರಿ ನೋಡಬೇಕು ಅಂತಾ ಹೋದಾಗ ಅವಳ ತಂದೆ ಆಡಿದ ಮಾತು ನನಗೆ ಇನ್ನೂ ಶಾಕ್ ನೀಡಿತು. "ಇವಳು ನನ್ನ ಮಗಳಲ್ಲ, ಬೇಡ ಬೇಡ ಅಂತಾ ಎಷ್ಟೇ ಹೇಳಿದ್ರೂ ಹಟ ಮಾಡಿಕೊಂಡು ಬಂದು ಕಾಲೇಜಿಗೆ ಸೇರಿದ್ಲು. ಅವನ ಜೊತೆಗೆ 2 ದಿನ ಶಿವಮೊಗ್ಗದಲ್ಲೂ ಇದ್ದು ಬಂದಿದ್ದಾಳೆ. ನನಗೆ ಮಗಳೇ ಇರಲಿಲ್ಲ." ಎಂದು ಅವಳ ಕುರಿತು ಮಾತನಾಡಿ ಹೊರಟು ಹೋದರು. ಅವಳ ತಾಯಿ ಅಳುತ್ತಾ ನಿಂತಿದ್ದರು.

ಅಷ್ಟರಲ್ಲಾಗಲೇ ನಮ್ಮ ಕಾಲೇಜಿನ ಎಲ್ಲರ ಬಾಯಿಯಲ್ಲೂ ಅವಳ ಚಾರಿತ್ರ್ಯದ ಬಗ್ಗೆ ಕಥೆ ಸೃಷ್ಟಿಯಾಗಿ ರೆಕ್ಕೆ-ಪುಕ್ಕ ಬೆಳೆದು ಎಲ್ಲೆಡೆ ಹಬ್ಬಿತ್ತು.

ಅವಳು 'ಟಾಪರ್' ಆದಾಗ ಹೊಗಳಿದ್ದ ಶಿಕ್ಷಕರೂ ಸಹ "ಅವಳು ಡ್ರೆಸ್ ಕೋಡ್ ಫಾಲೋ ಮಾಡದೆ ಇರುವಾಗಲೇ ಅವಳು ಹೀಗೆ ಅಂತಾ ಅಂದುಕೊಂಡಿದ್ದೆ. ಆದರೆ ಇವಾಗ ಗೊತ್ತಾಯ್ತು ನೋಡಿ" ಅಂತಾ ಹೇಳ್ತಾ ಇದ್ರು.

ಇನ್ನು ಕೆಲವರು "ಪಾಪ, ಆ ಹುಡುಗಿ ಚೆನ್ನಾಗಿ ಓದ್ತಾ ಇತ್ತು,ಯಾಕೆ ಹೀಗಾಯ್ತು" ಅಂದ್ರು.

ಅವಳ ಜೊತೆಯಲ್ಲಿದ್ದ ಹುಡುಗ ಎಲ್ಲೋ  ನಾಪತ್ತೆಯಾಗಿದ್ದ.ಯಾರವನು?

ಅವಳು ಶಿವಮೊಗ್ಗಕ್ಕೆ ಹೋಗಿದ್ದು ಯಾಕೆ ಅಂತಾ ನನಗೂ ಗೊತ್ತಿರಲಿಲ್ಲ. ಅವನಿಗೋಸ್ಕರ ನನ್ನ ಪ್ರೀತಿಯನ್ನು ನಿರಾಕರಿಸಿದಳಾ ಅನ್ನೋ ಡೌಟ್ ಕೂಡ ಬಂತು. ನಾನೇನೂ ಮಾತನಾಡದೆ ಸುಮ್ಮನಾದೆ. ಹೀಗೆ 2 ದಿನ ಕಳೆದ ನಂತರ ನಡೆದದ್ದೇ ಬೇರೆ. ಕಾಲೇಜಿಗೆ ಒಂದು ಮೇಲ್ ಬಂತು.ಅದರ ಒಕ್ಕಣೆ ಹೀಗಿತ್ತು. "ಶಿವಮೊಗ್ಗದಲ್ಲಿ ನಡೆದ ಅಂತಾರಾಷ್ಟ್ರೀಯ ಕಾನ್ಫರೆನ್ಸ್ ನಲ್ಲಿ ನಿಮ್ಮ ಕಾಲೇಜಿನ ಶಾರ್ವರಿ ಮಂಡಿಸಿದ್ಧ ಪ್ರಾಜೆಕ್ಟ್ ಐಡಿಯಾ ಮುಂದಿನ ಹಂತಕ್ಕೆ ಆಯ್ಕೆಯಾಗಿದೆ."

ಅಂದು ಅವಳ ಜೊತೆಯಲ್ಲಿದ್ದ ಆ ಹುಡುಗನೂ ಕಾಲೇಜಿಗೆ ಬಂದ. ಆತ ಹೇಳಿದ್ದು ಹೀಗೆ ಆತ...

ಆಕೆಯ ಅತ್ತೆಯ ಮಗ. ಅವಳ ತಂದೆಗೂ, ಇವನ ತಾಯಿಗೂ ಕೆಲ ತಿಂಗಳ ಹಿಂದೆ ಜಗಳವಾಗಿ ಬೇರೆಯಾಗಿದ್ದರು. ಚಿಕ್ಕಂದಿನಿಂದ ಒಟ್ಟಿಗೆ ಬೆಳೆದ ಇಬ್ಬರೂ ನಂತರವೂ ಮನೆಯಲ್ಲಿ ಗೊತ್ತಾಗದಂತೆ ಸಂಪರ್ಕದಲ್ಲಿದ್ದರು. ಶಿವಮೊಗ್ಗದಲ್ಲಿ ನಡೆಯುತ್ತಿದ್ಧ ಅಂತರಾಷ್ಟ್ರೀಯ ಕಾನ್ಪರೆನ್ಸ್ ನ ಬಗ್ಗೆ ಈತನಿಗೆ ತಿಳಿದಾಗ , ಶಾರ್ವರಿಯನ್ನು ಹೋಗಲು ತಿಳಿಸಿದ. ಆದರೆ ಆಕೆ ಶಿವಮೊಗ್ಗದಲ್ಲಿ ನನಗೆ ಯಾರೂ ಪರಿಚಯವಿಲ್ಲ, ಹಣ ಕೂಡ ಇಲ್ಲವೆಂದಾಗ, ನಾನು "ನಿನ್ನನ್ನು ನಾನು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುತ್ತೇನೆ. ಆದರೆ ಹಣ ಹೊಂದಿಸಿಕೊ" ಎಂದು ಹೇಳಿದೆ. ಅವಳು ಅವಳ ಮನೆಯಲ್ಲಿ ಹಣ ಕೇಳಿದಾಗ ಅವಳ ತಂದೆ "ಅದೆಲ್ಲ ಏನೂ ಬೇಡ, ಸಂಪ್ರದಾಯಸ್ಥ ಕುಟುಂಬದಿಂದ ಬಂದಿದ್ದರೂ ನಿನ್ನ ಜೀವನದ ರೀತಿಯೇ ಬದಲಾಗಿದೆ. ಓದು ವಿನಯವನ್ನು ಕಲಿಸಬೇಕೋ ಹೊರತು ಸ್ವೇಚ್ಛೆಯನ್ನಲ್ಲ. ನೀನು ಓದುವುದು ನನಗೆ ಇಷ್ಟವಿಲ್ಲದಿದ್ದರೂ ನಿನ್ನನ್ನು ಓದಿಸುತ್ತಿರುವುದೇ ಹೆಚ್ಚು, ನೀನು ಎಲ್ಲಿಗೂ ಹೋಗಕೂಡದು" ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ನಂತರ ಅವಳು ಅವಳ ಗೆಳೆಯನ ಹತ್ತಿರ ಹಣ ತೆಗೆದುಕೊಂಡು ಬಂದಳು. ನಾನೂ ಸಹ ಮನೆಯಲ್ಲಿ ಸುಳ್ಳು ಹೇಳಿ ಗೆಳೆಯರ ಜೊತೆಗೆ ಟ್ರಿಪ್ ಹೊರಟಿದ್ದೇನೆಂದು ಹೇಳಿ ಬೈಕ್ ತೆಗೆದುಕೊಂಡು ಬಂದೆ. ಶಿವಮೊಗ್ಗದಿಂದ ಬರುವಾಗ ಈ ಅಪಘಾತ ನಡೆಯಿತು. ಮತ್ತಷ್ಟು ರಾದ್ದಾಂತವಾಗುವುದನ್ನು ತಡೆಯಲು ನನ್ನ ತಾಯಿ ನನ್ನನ್ನು ಆಸ್ಫತ್ರೆಯಿಂದ ಅವಳ ಮುಖವನ್ನೂ ನೋಡಲೂ ಬಿಡದೆ ಕರೆದುಕೊಂಡು ಹೋದರು. ಆದರೆ ಇಂದು ಅವಳ ಕುರಿತು ಹಬ್ಬಿರುವ ಕಥೆಯನ್ನು ಕೇಳಲು ಸಾಧ್ಯವಾಗದೆ ನಾನೇ ಬಂದಿದ್ದೇನೆ" ಎಂದು ಹೇಳಿದ.

"ಹುಡುಗಿಯರ ಡ್ರೆಸ್ ಕೋಡ್ ಅವರ ಚಾರಿತ್ರ್ಯದ ಮೇಲೆ ಪರಿಣಾಮ ಬೀರುವುದು ಎನ್ನುವುದಾದರೆ, ಸೀರೆ ಉಟ್ಟವರು ಮಾತ್ರ ವಿನಯವಂತರು. ಜೀನ್ಸ್, ಹೈಹೀಲ್ಡ್, ಫ್ರೀ ಹೇರ್ ಬಿಟ್ಟವರು ಸ್ವೇಚ್ಛಾಚಾರಿಗಳು ಎಂದರ್ಥವೇ?"  

 

"ಕ್ಲಾಸಿಗೆ 'ಟಾಪರ್' ಆದಾಗ ಅವಳ ಡ್ರೆಸ್ ಕೋಡ್ ಶಿಕ್ಷಕರಿಗೆ ಕಾಣಲಿಲ್ಲವೇ?"

 

"ಒಂದು ಹುಡುಗ-ಹುಡುಗಿ ಒಟ್ಟಿಗಿದ್ದರೆ ,ಕಟ್ಟು ಕಥೆಗಳು ಸೃಷ್ಟಿಯಾಗುತ್ತವಲ್ಲಾ, ಆ ಜಾಗದಲ್ಲಿ ನಿಮ್ಮ ಮನೆಯ ಹೆಣ್ಣು ಮಗಳಿದಿದ್ದರೆ ನೀವು ಹಾಗೆಯೇ ಮಾತನಾಡುತ್ತಿದ್ದಿರಾ?"

ಎಂಬ ಅವನ ಪ್ರಶ್ನೆಗೆ ಎಲ್ಲರೂ ಮೌನ.

 

ನಿಧಾನವಾಗಿ ನಾನು ಯೋಚಿಸಿದೆ. ಶಾರ್ವರಿಯ ಗುಣವೆಂತಹದ್ದೆಂದು ಅವಳು ನನ್ನ ಪ್ರೀತಿಯನ್ನು ನಿರಾಕರಿಸಿದಾಗಲೇ ಕಂಡುಕೊಂಡೆ. ಆದರೆ ನಾನೇಕೆ ಸತ್ಯವನ್ನು ಕಂಡುಹಿಡಿಯಲು ಪ್ರಯತ್ನಿಸಲಿಲ್ಲ? ಅವಳ ತಂದೆ ಅವಳ ಕುರಿತು ಆಡಿದ ಮಾತು ನನ್ನನ್ನೂ ಎಲ್ಲರಂತೆ ಭ್ರಮೆಗೊಳಪಡಿಸಿತೇ? ಅಥವಾ ಆ ಹುಡುಗನನ್ನು ನೋಡಿ ನಾನು ಎಲ್ಲರಂತೆ ಅಪಾರ್ಥ ಮಾಡಿಕೊಂಡೆನೇ? ಪ್ರತ್ಯಕ್ಷ ಕಂಡರೂ ಪರಾಮರ್ಶಿಸಿ ನೋಡಲಿಲ್ಲವೇಕೆ?"

 

ಸತ್ತವರ ಕುರಿತು ಏನು ಆಡಿದರೂ ಅವರು ಬಂದು ನಿಜ ಹೇಳುವುದಿಲ್ಲ ಎಂಬ ಧೈರ್ಯ ನಮ್ಮ ಸುತ್ತಮುತ್ತಲಿನ ಗಾಳಿಸುದ್ದಿಯ ಹಬ್ಬುವಿಕೆಗೆ ಕಾರಣವೇ?

ಇಲ್ಲಿ ಎಲ್ಲರೂ ಒಂದರ್ಥದಲ್ಲಿ ತಪ್ಪಿತಸ್ಥರೆ...

ಪ್ರತ್ಯಕ್ಷ ಕಂಡರೂ,ಕಾಣದಿದ್ದರೂ ಯಾರೂ ಪ್ರಮಾಣಿಸುವ ಗೋಜಿಗೇ ಹೋಗಲಿಲ್ಲ. ಇಂದು ಆತ ಬಂದು ಇದ್ಧ ಸತ್ಯವನ್ನು ಹೇಳದಿದ್ದರೆ...? ಆಕೆಯ ಚಾರಿತ್ರ್ಯಕ್ಕಂಟಿದ ಮಸಿ ಹೋಗುತ್ತಲೇ ಇರಲಿಲ್ಲ.

 ಶಾರ್ವರಿ ಎದುರು ಬಂದು ಅಣಕಿಸಿ ಹೇಳಿದಂತಾಗುತ್ತಿದೆ. "ಇನ್ನಾದರೂ,ಪ್ರತ್ಯಕ್ಷ ಕಂಡರೂ ಪರಾಮರ್ಶಿಸಿ,ಪ್ರಮಾಣಿಸಿ ನೋಡು."

-ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ