ಗುರುವಾರ, ಮಾರ್ಚ್ 19, 2020

ತೇಜಸ್ವಿ ಎಂದೆಂದಿಗೂ ಅಚ್ಚಳಿಯದ ತೇಜಸ್ಸು

ಪೂಚಂತೇ ಎಂದೇ ಖ್ಯಾತರಾದ ಪೂರ್ಣಚಂದ್ರ ತೇಜಸ್ವಿಯವರು "ಹಾಗೆ ಬದುಕಿ, ಹೀಗೆ ಬದುಕಿ" ಎಂದಿಗೂ ಹೇಳದೆ "ಬದುಕನ್ನು ಬದುಕುವುದು ಹೀಗೆ" ಎಂದು ತೋರಿಸಿಕೊಟ್ಟವರು. ಬರೀ ಬರಹದಿಂದ ಅಷ್ಟೇ ಅಲ್ಲದ ಪರಿಸರ ಕಾಳಜಿ, ವ್ಯಕ್ತಿತ್ವ, ಛಾಯಾಗ್ರಹಣ, ಕಾಡಿನ ಬದುಕು, ಹೋರಾಟ ಇವೆಲ್ಲದರಿಂದಲೂ ಎಲ್ಲರಲ್ಲೂ ಸ್ಫೂರ್ತಿ ಮೂಡಿಸಿದ ಅದ್ಭುತ ಶಕ್ತಿ.

       "ಓದುಗರನ್ನು ಗೆಲ್ಲಬೇಕು,ಪ್ರಶಸ್ತಿಗಳನ್ನಲ್ಲ" ಎಂಬ ಧ್ಯೇಯಕ್ಕೆ ನಿಷ್ಠರಾಗಿ ಬರೆದ ತೇಜಸ್ವಿಯವರು ತಮ್ಮ ಬರಹಗಳಿಂದ ಕೋಟ್ಯಾಂತರ ಓದುಗರನ್ನು ಗೆದ್ದಿದ್ದಾರೆ, ಗೆಲ್ಲುತ್ತಲೂ ಇದ್ದಾರೆ. ಇವರ ಬರಹಗಳಲ್ಲಿ  ಅದ್ಭುತ ಕಲಾಸೃಷ್ಠಿ ಇದೆ, ಜೀವನದೃಷ್ಟಿ ಇದೆ, ತತ್ವ ಚಿಂತನೆಗಳಿವೆ. ತಮ್ಮದೇ ಬದುಕಿನ ಅಪೂರ್ವ ವ್ಯಾಖ್ಯಾನವಿದೆ, ದೂರದೃಷ್ಟಿತ್ವವಿದೆ. ಒಮ್ಮೆ ತೇಜಸ್ವಿಯವರ ಪುಸ್ತಕಗಳನ್ನು ಓದಲು ಶುರು ಮಾಡಿದರೆ, ಓದಿಸಿಕೊಂಡು ಹೋಗುವ ಓದಿನ ಓಘದ ಮಧ್ಯೆ ಓದುಗ ಕಳೆದು ಹೋಗುತ್ತಿದ್ದಾನೆ. "ಮುಖ್ಯ ವಿಚಾರವನ್ನು ಬಿಟ್ಟು ಅಡ್ಡದಾರಿ ಹಿಡಿಯಬೇಡಿ" ಎಂದು ಜನತೆಗೆ ಸಂದೇಶ ನೀಡುತ್ತಾ ರಾಜಕೀಯ ಮತ್ತು ಅಧಿಕಾರಶಾಹಿ ವ್ಯವಸ್ಥೆಯಿಂದ ದೂರವಿದ್ದರೂ ತಮ್ಮ ಬರವಣಿಗೆಯ ಮೂಲಕ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

     ನಮ್ಮ ಸುತ್ತ-ಮುತ್ತಲಿನ ಜನರೇ ತಮ್ಮ ಜೀವನವನ್ನು ತೋರಿಸುವಂತೆ ತೇಜಸ್ವಿಯವರ ಕಥಾ ಪಾತ್ರಗಳು ಭಾಸವಾಗುತ್ತವೆ. ಇಂತಹ ಒಂದು ಪಾತ್ರವೇ ತಬರಸೆಟ್ಟಿ. ತಬರನ ಕಥೆಯಲ್ಲಿ ಬರುವ ತಬರ ಇಂದಿನ ಪರಿಸ್ಥಿತಿಗೂ ಹಿಡಿದ ಕೈಗನ್ನಡಿಯಾಗಿದ್ದಾನೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ಆಳ್ವಿಕೆಯಲ್ಲಿಯೂ ಸೇವೆ ಸಲ್ಲಿಸಿದ್ದ ತಬರ  ಸ್ವಾತಂತ್ರ್ಯಾ ನಂತರ ಅನೇಕ ಕಡೆ ವರ್ಗಾವಣೆಯ ಕಷ್ಟಕ್ಕೆ ಸಿಲುಕಿ ಪಡುಗೆರೆಯ ಮುನಿಸಿಪಾಲಿಟಿ ನೌಕರನಾಗುವ ಹೊತ್ತಿಗೆ ನಿವೃತ್ತಿಯ ವಯಸ್ಸಿಗೆ ಬಂದಿದ್ದ. ತಬರನ ಮನಸ್ಸಿನ ಆತಂಕಗಳು ಉನ್ಮಾದ ಅಥವಾ ಅಸಂಬದ್ಧವಾಗಿರದೆ ಪಡುಗೆರೆಯ ಆಡಳಿತ ವೈಖರಿಯಿಂದ ಉದ್ಭವವಾದುದಾಗಿತ್ತು. ಒಂದೊಮ್ಮೆ ತಬರ ಬರೆದ ರಸೀತಿಗೆ ಇನ್ನೂ ವಸೂಲಾಗದೆ ಅವನ ಸಂಬಳಕ್ಕೆ ಕತ್ತರಿ ಬೀಳುವ ಪರಿಸ್ಥಿತಿಯಲ್ಲಿ ಪಡಿಪಾಟಲು ಪಡುತ್ತಿರುವಾಗಲೇ, "ದುರ್ಭಿಕ್ಷದಲ್ಲಿ ಅಧಿಕ ಮಾಸ" ಎಂಬಂತೆ ಅವನ ಹೆಂಡತಿಗೆ ಮಧುಮೇಹ ಆವರಿಸಿತ್ತು. ಈ ಮಧುಮೇಹದ ಚಿಕಿತ್ಸೆಗಾಗಿ ಹಣ ಹೊಂದಿಸಲು ತಬರ ಪಡಿಪಾಟಲು ಪಡುತ್ತಿದ್ದಾಗ, ಯಾರೋ ಹೇಳಿದಂತೆ ಫ್ರಾವಿಡೆಂಟ್ ಫಂಡನ್ನು ಪಡೆಯಲು ಕಛೇರಿಯಿಂದ,ಕಛೇರಿಗೆ ತಿರುಗಿ ಸಂಬಳವನ್ನಷ್ಟೇ ಅಲ್ಲದೆ, ಗ್ಯಾಂಗ್ರೀನ್ ಆದ ಹೆಂಡತಿಯನ್ನೂ ಕಳೆದುಕೊಂಡ. ತನ್ನ ಪೆನ್ಶನ್ ಹಣವನ್ನೂ ಪಡೆಯದ ತಬರ ಸ್ವಾತಂತ್ರ್ಯ ದಿನಾಚರಣೆಯ ಬೆಳ್ಳಿಹಬ್ಬದ ಆಚರಣೆಯಂದೇ ಹುಚ್ಚನೆಂಬ ಪಟ್ಟ ಹೊತ್ತು, ದುರಂತ ನಾಯಕನಾದ.ಎಲ್ಲೋ ಕೆಲವರಿಗೆ ಮಾತ್ರ ಅವನನ್ನು ಕಂಡಾಗ ನಮ್ಮ ಭೀಕರ ವ್ಯವಸ್ಥೆಯ ವಿರಾಡ್ರೂಪ ಮಿಂಚುತ್ತಿತ್ತು. ಯಾವುದೋ ಅರಿಯದ ಭೀತಿಯಲ್ಲಿ ಅವರು ನಡುಗುತ್ತಿದ್ದರು.

     ಅವರಂತೆಯೇ ಇಂದು ನಾವೂ ಸಹ ರಾಜಕೀಯ ಮತ್ತು ಅಧಿಕಾರಶಾಹಿ ವ್ಯವಸ್ಥೆಯಿಂದ ಸ್ವಾತಂತ್ರ್ಯವನ್ನು ಕಳೆದುಕೊಂಡು ಒದ್ದಾಡುತ್ತಿದ್ದೇವೆ. ತೇಜಸ್ವಿಯವರು ಅಂದಿನ ದಿನಗಳಲ್ಲಿಯೇ ಬಿಚ್ಚಿಟ್ಟಿರುವ ಈ ಲಂಚಾವತಾರಿ ಸಮಸ್ಯೆಗೆ ಇಂದಿನ ಜನಾಂಗದಲ್ಲಿಯಾದರೂ ಪರಿಹಾರ ನೀಡಬೇಕಾಗಿದೆ. ಇಂತಹ ದಿನಗಳಲ್ಲಿ ಪ್ರಜಾಕಾರಣ, ಪ್ರಜಾಕೀಯ ಪರಿಹಾರವನ್ನು ನೀಡಲು ಹೊರಟಿರುವ ಸಲಹೆಗೆ ಕೈ ಜೋಡಿಸಿದರೆ ಅಡ್ಡದಾರಿಯನ್ನು ಹಿಡಿಯದೆ, ರಾಜಮಾರ್ಗದಲ್ಲಿಯೇ ಉತ್ತರವನ್ನು ಕಂಡುಕೊಳ್ಳಬಹುದಾಗಿದೆ. ನಮ್ಮ ಆತ್ಮಶಕ್ತಿಯನ್ನು ಹೆಚ್ಚಿಸಿಕೊಂಡು ಈ ನಿಟ್ಟಿನಲ್ಲಿ ದುಡಿದರೆ ತಬರನ ಕಥೆಯ ಅಂತ್ಯವನ್ನು ಬದಲಾಯಿಸಿ ತೇಜಸ್ವಿಯವರ ಅಚ್ಚಳಿಯದ ತೇಜಸ್ಸನ್ನು ಕಂಡುಕೊಳ್ಳಬಹುದಾಗಿದೆ.


-ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ