ಗುರುವಾರ, ಮಾರ್ಚ್ 26, 2020

ಅಂದಿನಿಂದ ಇಂದಿನವರೆಗೂ ಮಹಿಳಾ ಸಾಹಿತ್ಯ

ಸಾಹಿತ್ಯದ ಹಾದಿಯಲ್ಲಿ ಮಹಿಳಾ ಸಾಹಿತ್ಯ ಅಂದಿನಿಂದ ಇಂದಿನವರೆಗೂ ತನ್ನ ಕಂಪನ್ನು ಚೆಲ್ಲುತ್ತಾ ಹೊಚ್ಚ ಹೊಸ ರೀತಿಯಲ್ಲಿ ನವೀಕರಣಗೊಳ್ಳುತ್ತಾ ತನ್ನದೇ ಛಾಪನ್ನು ಮೂಡಿಸಿ ಓದುಗರನ್ನು ಹಿಡಿದಿಟ್ಟಿದೆ. ಸಾಹಿತ್ಯದಲ್ಲಿ ಮಹಿಳೆಯರು ಹಾಗೂ ಮಹಿಳೆಯರು ಬರೆದ ಸಾಹಿತ್ಯ ಎರಡೂ ಸಹಾ ವಿಭಿನ್ನ ಪಾತ್ರಗಳೆನಿಸಿದರೂ ಸಹಾ ಒಂದೇ ಆತ್ಮದ ಎರಡು ದೇಹಗಳಂತೆ ಭಾಸವಾಗುತ್ತದೆ.

ತ್ರಿವೇಣಿ, ಹೆಚ್.ಜಿ. ರಾಧಾದೇವಿ, ಸಾಯಿಸುತೆ, ಉಷಾನವರತ್ನರಾಮ್, ವಾಣಿ, ಅಶ್ವಿನಿ ಮುಂತಾದ ಘಟಾನುಘಟಿ ಲೇಖಕಿಯರು ಕನ್ನಡ ಸಾಹಿತ್ಯವನ್ನು ಕಥೆ ಹಾಗೂ ಕಾದಂಬರಿ ಲೋಕದಲ್ಲಿ ಎತ್ತಿ ಹಿಡಿದಿದ್ದಾರೆ. ಇವರ ಕಾದಂಬರಿ ಹಾಗೂ ಕಥೆಯ ಪಾತ್ರಗಳು ಹಾಗೂ ಕಥಾನಕ ಇಂದಿನ ದಿನಗಳಲ್ಲೂ ಪ್ರಸ್ತುತವೆನಿಸುತ್ತದೆ. ಹೆಣ್ಣಿನಲ್ಲಿ ಇರಬೇಕಾದ ದಯೆ, ಕರುಣೆಯ ಜೊತೆಜೊತೆಗೇ ಸಂಸ್ಕೃತಿಯ ಪಾಠಗಳನ್ನೂ ಸಾರುತ್ತಾ ಹೆಣ್ಣಿಗೆ ಬೇಕಾದ ಛಲವನ್ನೂ ಪ್ರತಿಬಿಂಬಿಸುತ್ತಾರೆ. ಸಮಸ್ಯೆಗಳ ಮೂಲವನ್ನು ಹಲವು ಮಗ್ಗುಲುಗಳಲ್ಲಿ ವಿಶ್ಲೇಷಿಸುವಂತೆ ಮಾಡುತ್ತಾ ಕಥಾನಾಯಕಿ ತೆಗೆದುಕೊಳ್ಳಬೇಕಾದ ನಿರ್ಧಾರವನ್ನು ಮೊದಲೇ ನಮ್ಮಲ್ಲಿ ಮೂಡುವಂತೆ ಆಲೋಚಿಸುವ ಆಲೋಚನಾ ಶಕ್ತಿಯನ್ನು ತುಂಬುತ್ತಾ ಕುತೂಹಲಕ್ಕೀಡು ಮಾಡುತ್ತಾರೆ. ಕೆಲವು ಘಟನೆಗಳನ್ನು ಆಗಿನ ಕಾಲಘಟ್ಟದಲ್ಲಿ ನಿಂತು ವಿಶ್ಲೇಷಿಸುವುದಾದರೆ ಕೆಲವು ನಿರ್ಧಾರಗಳು ಹಾಗೂ ಘಟನೆಗಳು ಕ್ರಾಂತಿಕಾರಿಯಂತೆಯೇ ಭಾಸವಾಗುತ್ತವೆ. ಹಾಗೂ ಕೆಲವು ಮೂಢನಂಬಿಕೆಗಳನ್ನು ಹೊಡೆದೋಡಿಸಲೂ ಅದು ಸಹಕಾರಿಯೆನಿಸುತ್ತದೆ. ಕೆಲ ಕಾದಂಬರಿಗಳು ಚಲನಚಿತ್ರಗಳಾಗಿಯೂ ಬೆಳ್ಳಿತೆರೆಯ ಮೇಲೆ ತೆರೆ ಕಂಡು ಕಾದಂಬರಿ ಓದದವರನ್ನೂ ಸಾಹಿತ್ಯ ಓದುವಷ್ಟರ ಮಟ್ಟಿಗೆ ಪ್ರೇರೇಪಿಸಿವೆ. ಸರಳವಾದ ಬರವಣಿಗೆಯ ಶೈಲಿ ಓದುಗರ ಮೇಲೆ ಪ್ರಭಾವ ಬೀರಿ ಸಾಹಿತ್ಯದ ಓದಿಗೆ ಎಳೆ ತರುತ್ತದೆ.

ಇಂದಿನ ಮಹಿಳಾ ಸಾಹಿತ್ಯದಲ್ಲಿ ಸಂಧ್ಯಾರಾಣಿ, ಭಾರತಿ ಬಿ.ವಿ, ವಸುಮತಿ ಉಡುಪ, ಪ್ರತಿಭಾ ನಂದಕುಮಾರ್, ಶಾಂತಾಕುಮಾರಿ, ಭುವನೇಶ್ವರಿ ಹೆಗಡೆ ಮುಂತಾದವರು ಕನ್ನಡ ಸಾಹಿತ್ಯ ಲೋಕದಲ್ಲಿ ವಿಭಿನ್ನ ರೀತಿಯ ಪ್ರಯೋಗಶೀಲತೆಗೆ ಮುಖ ಮಾಡುತ್ತಾ ಸಾಹಿತ್ಯದ ವಿಭಿನ್ನ ಪ್ರಕಾರಗಳನ್ನೂ ಪರಿಚಯಿಸುತ್ತಿದ್ದಾರೆ. ಅಂತರಂಗದ ತುಮುಲಗಳು, ತಮ್ಮದೇ ಬದುಕಿನ ಪುಟಗಳು, ಕ್ಯಾನ್ಸರ್ ನಂತಹಾ ಮಹಾಮಾರಿಯಿಂದ ಪಾರಾದ ಬಗೆ, ಜುಗಲ್ಬಂಧಿಯ ಕವಿತೆಗಳು, ಕವಿತೆಯಲ್ಲಿನ ವಿಶಿಷ್ಟ ರೂಪಕಗಳು ಇವೆಲ್ಲವೂ ಈಗಿನ ಸಾಹಿತ್ಯದ ಬೆಳವಣಿಗೆಯ ಅಂಶಗಳು. ಇವು ಸ್ತ್ರೀ ಕೇಂದ್ರಿತವಾಗಿ ಮಾತ್ರ ಇರದೆ ಸಮಾಜದ ವಿವಿಧ ಸಾಮಾಜಿಕ ಚಿತ್ರಣಗಳನ್ನೂ ನಮ್ಮ ಮುಂದಿಡುತ್ತವೆ. ಕೆಲ ದಶಕಗಳ ಹಿಂದೆ ಕೇವಲ ಪ್ರಾಸಂಗಿಕವಾಗಿ ಚುಟುಕಾಗಿ ಉಪಯೋಗವಾಗುತ್ತಿದ್ದ ಮುಟ್ಟು, ಮುಕ್ತ ಲೈಂಗಿಕತೆಗಳು, ಮೆನೋಪಾಸ್ ಮುಂತಾದವುಗಳು ಇಂದು ವಿಶ್ಲೇಷಣೆಯೊಂದಿಗೆ ತೆರೆದುಕೊಳ್ಳುತ್ತವೆ. ಕವಿತೆ, ಕಥೆ, ಕಾದಂಬರಿ, ಲಲಿತ ಪ್ರಬಂಧ ಎಲ್ಲವೂ ಹೊಸ ಹೊಳಹಿನೊಡನೆ ತೆರೆದುಕೊಳ್ಳುತ್ತಾ ಓದುಗರನ್ನು ತಲುಪುತ್ತಿದೆ.

ಸಾಹಿತ್ಯದಲ್ಲಿ ಮಹಿಳೆಯ ಉಲ್ಲೇಖಗಳನ್ನು ಗಮನಿಸಿದರೆ ಸಾರಾ ಅಬೂಬಕ್ಕರ್ ಅವರ ಕಥೆಗಳು ಇಂದಿಗೂ ಮುಸಲ್ಮಾನ ಸಮುದಾಯದ ಮಹಿಳೆಯರ ಸ್ಥಿತಿಗತಿಗಳನ್ನು ತೋರಿಸುತ್ತವೆ. ವಾರಿಸ್ ಡೇರಿಯ ಆತ್ಮಕಥೆ ಮರುಭೂಮಿಯ ಹೂ ಅವರ ಜನಾಂಗದಲ್ಲಿ ಇಂದಿಗೂ ಆಚರಣೆಯಲ್ಲಿರುವ ಯೋನಿ ಛೇದನ ಪ್ರಕ್ರಿಯೆಯ ಕ್ರೂರತೆಯನ್ನು ತೆರೆದಿಡುತ್ತದೆ. ಅತ್ಯಾಚಾರ ವಿರೋಧಿ ಸಾಹಿತ್ಯವೂ ಮಹಿಳೆಯನ್ನು ಸಾಹಿತ್ಯದಲ್ಲಿ ಬಂಧಿಸಿದೆ.

ಇಂದು ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಹಿತ್ಯ ಪಸರಿಸುತ್ತಿದೆ. ಮಹಿಳೆಯರು ಹೆಚ್ಚಾಗಿ ಇದರ ಉಪಯೋಗ ಪಡೆದುಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿರುವುದೂ ಸಂತಸದ ವಿಷಯ.

ಅಂದಿನ ಮತ್ತು ಇಂದಿನ ಮಹಿಳಾ ಸಾಹಿತ್ಯವನ್ನು ತಕ್ಕಡಿಯಲ್ಲಿಟ್ಟರೆ ಎರಡೂ ಸಮಾನವಾಗಿಯೇ ತೂಗುತ್ತವೆ. ಮಹಿಳಾ ಸಾಹಿತ್ಯ ಎಂದಿಗೂ ಪುರುಷ ದ್ವೇಷಿಯಾಗಿದ್ದನ್ನು ನಾನು ಗಮನಿಸಿಲ್ಲ. ಅಂದು, ಇಂದು ಹಾಗೂ ಎಂದೆಂದಿಗೂ ಪ್ರಸ್ತುತವೆನಿಸುವ ಮೌಲ್ಯಗಳನ್ನು ಕಟ್ಟಿಕೊಡುವಲ್ಲಿ ಹಿಂದಿನ ಮಹಿಳಾ ಸಾಹಿತ್ಯದ ಪಾತ್ರವೇ ಹೆಚ್ಚು. ವೈಯಕ್ತಿಕವಾಗಿಯೂ ನನಗೆ ಇಂದಿನ ಮಹಿಳಾ ಸಾಹಿತ್ಯಕ್ಕಿಂತ ಅಂದಿನ ಮಹಿಳಾ ಸಾಹಿತ್ಯವೇ ಅಪ್ಯಾಯಮಾನವೆನಿಸುತ್ತದೆ. ಪ್ರಸ್ತುತ ಸ್ಥಿತಿಗಳು ಕೆಲವೊಮ್ಮೆ ಮುಂದೆ ಅಪ್ರಸ್ತುತವೆನಿಸಬಹುದೇನೋ, ಆದರೆ ಮೌಲಿಕವಾದ ನೀತಿಯುತವಾದ ಅಂದಿನ ಮಹಿಳಾ ಸಾಹಿತ್ಯ ಎಂದೆಂದಿಗೂ ಅಜರಾಮರವೇ. ಬೇರು ಗಟ್ಟಿಯಾಗಿರುವಾಗ ಸತ್ವವೂ ಕೂಡಾ ಚೆನ್ನಾಗಿಯೇ ಇರುತ್ತದೆ. ಹಾಗೆಯೇ ಅದರ ಭಾಗವೇ ಆಗಿರುವ ಇಂದಿನ ಮಹಿಳಾ ಸಾಹಿತ್ಯ ಕೂಡಾ.. ಇಂದಿನ ಮಹಿಳಾ ಸಾಹಿತ್ಯದ ಹಾದಿಯೂ ಸುಗಮವಾಗಿ ಸಾಗಲಿ ಎಂದೇ ಆಶಿಸುತ್ತೇನೆ. 

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ