ಆಷಾಡ ಮಾಸವೇ ಮುಗಿವ ಹೊತ್ತಲ್ಲಿ ಹೀಗೊಂದು ಅನುಭೂತಿ..
ಆಷಾಡದಲ್ಲಿ ನವವಿವಾಹಿತರ ಚಿರವಿರಹ ಒಂದು ಅನುಭೂತಿಯಾದರೆ, ಸುತ್ತಲೂ ಸುಳಿದಾಡುವ ಸುಳಿಗಾಳಿಯದ್ದೇ ಮತ್ತೊಂದು ವಿಚಿತ್ರ ಅನುಭವ.
ಮಂದಗಾಮಿನಿಯಂತೆ ಸುಳಿಗಾಳಿಯಂತೆ ಬೀಸುತ್ತಿದ್ದ ಗಾಳಿಗೆ ಭೋರೆಂದು ಬೀಸುವ ತವಕ. ಕಿವಿಗಂತೂ ಯಾವುದೋ ರೌದ್ರನರ್ತನದ ಆಲಾಪದಂತೆ ಕೇಳಿಸುತ್ತಾ, ತನ್ನ ವಿರಹವನ್ನು ಅರುಹುತ್ತಿರುವ ಪ್ರೇಮಿಯಂತೆ ಭಾಸವಾಗುತ್ತದೆ. ಎಲ್ಲಿಂದಲೋ ಎಲ್ಲಿಗೋ ಪಯಣಿಸುತ್ತಿರುವ, ಯಾರ ಅಂಕೆಗೂ ನಿಲುಕದ, ಯಾರನ್ನೋ ಹುಡುಕಿ ಸಿಗದಾದಾಗ ಪ್ರಲಾಪಿಸುವ ಆರ್ತನಾದದಂತೆ ಅನ್ನಿಸುತ್ತದೆ.
ಆಷಾಡ ಮಾಸಕ್ಕೆ ಕರೆಯಲು ಬರುವ ಅಣ್ಣನ ನಿರೀಕ್ಷೆಯೂ ಈ ಸುಳಿಗಾಳಿಯ ಜೊತೆಜೊತೆಗೇ ಸುಳಿಯುತ್ತಾ, ಅಣ್ಣ ಇಂದೂ ಬರಲಿಲ್ಲವೆಂಬುದನ್ನು ಮತ್ತೆ-ಮತ್ತೆ ನೆನಪಿಸುತ್ತದೆ.ಅಣ್ಣನಿಗಾದರೂ ಈಗ ತಂಗಿಯ ನೆನಪೆಲ್ಲಿದೆ? ಅತ್ತಿಗೆಯ ವಿರಹ ಕಾಡುತ್ತಿರುವ ಹೊತ್ತಲ್ಲಿ ತಂಗಿ ನೆನಪಾಗುವುದಾದರೂ ಹೇಗೆ ಅಲ್ಲವೇ..?ಜೊತೆಗೆ ಈ ತಣ್ಣನೆ ಗಾಳಿಯ ಸ್ಪರ್ಶ, ಅದರೊಟ್ಟಿಗೆ ಬರುವ ಬರುವ ತುಂತುರು ಹನಿಗಳೂ ಅವನನ್ನು ಮನೆಯಲ್ಲೇ ನಿಲ್ಲುವಂತೆ ಮಾಡಿಬಿಡುತ್ತವೆ. ಅಮ್ಮನ ಕೈರುಚಿಯ ಚಹಾ ಕೂಡಾ ಸಪ್ಪೆಯೆನಿಸುತ್ತಿರುತ್ತದೆ.ನೆನಪುಗಳಿಗೇನು ಬರ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ತೋರಿಕೆಯ ಪ್ರೀತಿ ತೋರುವ ಅಣ್ಣನ ಮನಸ್ಸು ಕೂಡಾ ಶೀತಲ ಗಾಳಿಗೆ ಮಂಜಿನಂತಾಗಿರುತ್ತದೆ. ಅತ್ತಿಗೆಯ ಬರುವಿಕೆ ಮಾತ್ರ ಬೇಸರದ ಮಂಜನ್ನು ಕರಗಿಸಲು ಸಾಧ್ಯ.ಇತ್ತ ಅಣ್ಣನ ಬರುವಿಕೆಗೆ ಕಾದ ತಂಗಿ ಸುಸ್ತಾಗಿ, ಮಹಾಲಕ್ಷ್ಮಿಯಂತೆ ಇಲ್ಲಿಯೇ ಇರುವೆನೋ ಹೊರತು ಮಾರಿಯಾಗಿ ಆ ಮನೆಗೆ ಕಾಡಲಾರೆ ಎಂಬ ಯೋಚನೆ ಮಾಡುತ್ತಾ ಅನ್ಯಮನಸ್ಕಳಾಗುತ್ತಿರುತ್ತಾಳೆ.
ಶುಭಕಾರ್ಯಗಳು ಜರುಗದ ಆಷಾಡ ಮಾಸ ಸದಾ ಗಜಿಬಿಜಿಯಂತಿರುವ ಕಾರ್ಯಕ್ರಮಗಳಿಗೆಲ್ಲಾ ಒಂದು ಸಣ್ಣ ವಿರಾಮ ನೀಡುತ್ತದೆ. ಶುಭ-ಅಶುಭಗಳೆಲ್ಲಾ ಮನಸ್ಸಿನಲ್ಲಿರುತ್ತದೆ, ಮಾಸದಲ್ಲಲ್ಲ ಎಂಬುದಕ್ಕೆ ವೈಜ್ಙಾನಿಕ ಉದಾಹರಣೆ ನೀಡಿ ಗಂಟೆಗಟ್ಟಲೆ ಭಾಷಣ ಮಾಡಿದವರೂ ಸಹಾ ಆಷಾಡ ಮಾಸದಲ್ಲಿ ಮದುವೆ ಕಾರ್ಯಕ್ರಮವನ್ನು ನೆರವೇರಿಸುವುದಿಲ್ಲ.
ಅದೇಕೋ ಮೋಡಗಳೂ ಸಹಾ ಮುಖ ಊದಿಸಿಕೊಂಡು ನೆಲಕ್ಕಿಳಿಯದೇ ಅಲ್ಲೇ ಕುಳಿತುಬಿಡುತ್ತವೆ. ಮುಖ ಗಂಟು ಹಾಕಿಕೊಂಡು ಕೂತ ಅಣ್ಣನನ್ನು ಪದೇ ಪದೇ ನೆನಪಾಗಿಸಿಬಿಡುತ್ತದೆ.
ಆಷಾಡದ ಅನುಭೂತಿ ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕಾಡಿಬಿಡುತ್ತದೆ. ಕಾಡದೇ ಬಿಡುವ ಮಾಸವಂತೂ ಇದಲ್ಲ. ಮುಖ ಧುಮ್ಮಿಸಿ ಕೂತ ಮೋಡ, ಮರೆಯಾದ ಬಿಸಿಲು, ನೆನಪಲ್ಲಷ್ಟೇ ಉಳಿದುಬಿಡುವ ತಂಗಿ, ವಿರಹವನ್ನು ಅನುಭವಿಸುವ ನವಜೋಡಿ, ಎಷ್ಟೇ ಬಿಸಿಯಿದ್ದರೂ ತಣ್ಣಗೆನಿಸುವ ಚಹಾ, ರಾತ್ರಿಯಲ್ಲಿ ಕಾಣದ ಚುಕ್ಕಿಗಳು, ಬೀರುವಿನಿಂದಲೇ ನನ್ನನ್ನು ಎತ್ತಿಕೋ ಎಂದು ಕರೆಯುವ ಸ್ವೆಟರ್ ಹೀಗೆ.. ಹುಡುಕಿದಷ್ಟೂ ಅನುಭೂತಿಗಳು ಆಷಾಡಕ್ಕೆಂದೇ ಕಾಪಿಟ್ಟಂತೆ ಕಾಣಸಿಗುತ್ತದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ