ಪುಸ್ತಕದ ಶೀರ್ಷಿಕೆ : ಅಮೃತ ಮಂಥನ
ಕೃತಿ ಪ್ರಕಾರ : ಸಾಮಾಜಿಕ ಕಾದಂಬರಿ
ಲೇಖಕರು : ಅ. ನ. ಕೃ
ಪ್ರಕಾಶಕರು : ಹೇಮಂತ ಸಾಹಿತ್ಯ
ಪ್ರಥಮ ಮುದ್ರಣ : 1961
ಎರಡನೇ ಮುದ್ರಣ : 2019 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 156
ಬೆಲೆ : 110 ರೂ.
ಕಥೆ, ನಾಟಕ, ವಿಮರ್ಶೆ, ಜೀವನ ಚರಿತ್ರೆ, ಪತ್ರಿಕಾರಂಗ ಹೀಗೆ ಎಲ್ಲದರಲ್ಲಿಯೂ ಸಾಹಿತ್ಯ ಕೃಷಿ ಮಾಡಿದ್ದರೂ 110ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿರುವ ಇವರನ್ನು ಕಾದಂಬರಿ ಸಾರ್ವಭೌಮ ಎಂದು ಕರೆಯುತ್ತೇವೆ. ಅಮೃತ ಸವಿದಷ್ಟೇ ಸುಲಲಿತವಾದ ಸುಂದರ ಭಾಷೆ, ಕಥಾವಸ್ತುವಿನ ಕಾದಂಬರಿಯ ಅವಲೋಕನ ಇಂತಿದೆ.
ಅಮೃತ ಮಂಥನ ಶೀರ್ಷಿಕೆ ಕಂಡಾಗ ಮೊದಲಿಗೆ ಪೌರಾಣಿಕ ಪ್ರಸಂಗದ ನೆನಪಾಯಿತು. ಈ ಪುರಾಣದ ಕಥೆಗೂ ಇಲ್ಲಿನ ಕಥೆಗೂ ಸಾಂಕೇತಿಕವಾಗಿ ಅರ್ಥ ನೀಡಿದ್ದಾರೆ. ಅಮೃತ ಸಿಗುವುದಕ್ಕೂ ಮುನ್ನ ಹಲವಾರು ಅಮೂಲ್ಯ ವಸ್ತುಗಳು, ಲಕ್ಷ್ಮಿ, ಹಾಲಾಹಲ ಬಂದದ್ದನ್ನು ಕಾಣಬಹುದು. ಅಷ್ಟೇ ಅಲ್ಲದೆ ಅಮೃತಮಂಥನ ಸುಲಭದ ಕೆಲಸವಾಗಿರಲಿಲ್ಲ. ಮಂದಾರ ಪರ್ವತವನ್ನೇ ಕಡೆಗೋಲನ್ನಾಗಿಸಿ ವಾಸುಕಿಯನ್ನು ಹಗ್ಗ ಮಾಡಿಕೊಂಡು ಪರಸ್ಪರ ವಿರೋಧಿಗಳಾದ ದೇವತೆಗಳು-ಅಸುರರು ಸೇರಿಯೇ ಅಮೃತಮಂಥನ ಮಾಡಿದ್ದು.
ಇಂದಿನ ಸಮಾಜದಲ್ಲಿಯೂ ಅಮೃತಕ್ಕಾಗಿ ಪ್ರತಿನಿತ್ಯವೂ ಮಂಥನವಾಗುತ್ತದೆ. ಕುಟುಂಬದಲ್ಲಿ, ಸಾಮಾಜಿಕವಾಗಿ.. ಕೆಲಸದ ಕಡೆಯಲ್ಲಿ ಹಲವಾರು ಕಷ್ಟಗಳನ್ನೆದುರಿಸಿದ ನಂತರವೇ ಸುಖ ಸಿಗುವುದು. ಮಧ್ಯಮ ವರ್ಗದ ಸಾಮಾನ್ಯ ಬದುಕಿನಲ್ಲಿಯೂ ಹಲವು ದೈವಿಕ ಗುಣಗಳಿರುತ್ತವೆ. ಇಲ್ಲಿ ಲೇಖಕರ ಉದ್ದೇಶ ಅಂತಹ ದೈವಿಕ ಗುಣವನ್ನು ನಿರೂಪಿಸುವುದು. ಅದಕ್ಕಾಗಿ ಹಲವು ಬೇರೆಯ ಗುಣಗಳನ್ನೂ ನಾವಿಲ್ಲಿ ಕಾಣಬೇಕಾಗುತ್ತದೆ. ಸುಖ-ದುಃಖ, ಭೋಗ, ಸ್ನೇಹ-ಸೌಹಾರ್ದ, ತ್ಯಾಗ ಎಲ್ಲದರ ಒಳಹೊರಗೆ ಚಿತ್ರಿತವಾಗಿದೆ.
ಸ್ವಭಾವದಲ್ಲಿ ತದ್ವಿರುದ್ಧವಾಗಿದ್ದರೂ.. ಯೋಗಾನರಸಿಂಹಯ್ಯನವರು ಹಾಗೂ ಪದ್ಮನಾಭರಾಯರ ಗೆಳೆತನಕ್ಕೆ ಯಾವುದೂ ತಡೆಯಾಗಿರಲಿಲ್ಲ. ವಿಭಿನ್ನ ಧ್ರುವಗಳು ಸೆಳೆಯುತ್ತವೆನ್ನುವುದು ನಿಜವೇ ಇರಬೇಕು. ಐರಣಿ ಕೃಷ್ಣರಾಯರ ಪುರಾಣದ ಪ್ರಸಂಗವನ್ನು ಕೇಳಬೇಕೆನ್ನುವ ಪದ್ಮರಾಭರಾಯರ ಆಸೆಗೆ ನರಸಿಂಹಯ್ಯನವರ ಧರ್ಮಪತ್ನಿಯ ಮೂಲಕ ರಾಯರು ಕೆಲಸ ಸಾಧಿಸಿದ್ದರು.
"ದೈವ, ಅಸುರ ಶಕ್ತಿಗಳ ಮಂಥನವಾದಾಗ ಮಾರಕ ಗರಳವು ಹುಟ್ಟುತ್ತದೆ. ತಾರಕ ಅಮೃತವೂ ಹುಟ್ಟುತ್ತದೆ. ಎರಡನ್ನೂ ಮನುಷ್ಯ ಜೀರ್ಣಿಸಿಕೊಳ್ಳಲು ಸಮರ್ಥನಾಗಬೇಕು."
ಮನೆ, ಮನಗಳಲ್ಲಿ ನಡೆಯುವ ನಿತ್ಯ ಅಮೃತಮಂಥನಕ್ಕೆ ಹೊಸ ಅರ್ಥವನ್ನು ಹೇಳಿದ ಕೃಷ್ಣರಾಯರ ಪ್ರಸಂಗ ನರಸಿಂಹಯ್ಯನವರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯಿತು.
ಕಾದಂಬರಿಯ ಪೂರ್ವ ಪೀಠಿಕೆ ಇದಾದರೆ..
ಯೋಗ ನರಸಿಂಹಯ್ಯನವರ ಅಮಾಲ್ದಾರಿಕೆ ನಡೆಸಿರುವಾಗ ಅವರ ಕಟ್ಟುನಿಟ್ಟಿನ ಶ್ರಮ, ಪ್ರಾಮಾಣಿಕತೆಯ ಪರಿಚಯವಾಗುತ್ತದೆ. ಅವರಿಗೆ ತಕ್ಕ ಪತ್ನಿ ಕಮಲಾಕ್ಷ್ಮಮ್ಮ. ಮಕ್ಕಳಿಗೆ ನಾವು ಆಸ್ತಿ ಕೊಡಲಿಕ್ಕಾಗುವುದಿಲ್ಲ. ಚೆನ್ನಾಗಿ ಓದಿಸೋಣ ಎನ್ನುವ ನರಸಿಂಹಯ್ಯನವರ ಮನೋಭಾವ ಹಿಡಿಸಿತು.
ಈ ದಂಪತಿಗಳ ಮೊದಲನೇ ಮಗ ಸುಬ್ಬುಕೃಷ್ಣ. ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದನು. ಲಾಯರ್ ಶಂಕರನಾರಾಯಣರಾಯರ ಒಬ್ಬಳೇ ಮಗಳು ಶಾರದೆಯ ವಿವಾಹದ ಪ್ರಸ್ತಾಪ ಬಂದಾಗ ಪದ್ಮನಾಭರಾಯರು ಹಾಗೂ ನಾಗೂಬಾಯಿ ದಂಪತಿಗಳು ಕೂಡಿಯೇ ಹೋಗಿ ಇದಕ್ಕೆ ಒಪ್ಪಿದ್ದರು. ಮಕ್ಕಳಿಲ್ಲದ ಈ ದಂಪತಿಗಳಿಗೆ ಯೋಗಾನರಸಿಂಹಯ್ಯನವರ ಮೂವರು ಮಕ್ಕಳೇ ತಮ್ಮ ಮಕ್ಕಳಂತೆ.
ವಿವಾಹದ ಜೊತೆಗೆ ಪರೀಕ್ಷೆಗೂ ಕೂತು ಅಸಿಸ್ಟೆಂಟ್ ಕಮಿಷನರ್ ಆದ ಸುಬ್ಬು ಕೃಷ್ಣ ಮುಂದೆ ತಂದೆ-ತಾಯಿಯ ಜೊತೆ ಉಳಿಯುವ ಪ್ರಸಂಗ ಬರಲಿಲ್ಲ. ಇವರ ಹೊಂದಾಣಿಕೆ ಹೇಗಿತ್ತು ಓದಿ ನೋಡಿ.
ಎರಡನೆಯ ಮಗ ರಾಮಸ್ವಾಮಿ. ಹಾಗೂ ಒಬ್ಬಳೇ ಮಗಳು ಸೀತ.
ಸುಬ್ಬುಕೃಷ್ಣನ ನಂತರ ಸೀತಳಿಗೆ ಕೂಡಿ ಬಂದ ಸಂಬಂಧ ಶಂಕರನಾರಾಯಣರಾಯರ ಪತ್ನಿ ಪದ್ಮಾವತಮ್ಮನವರು ಸೂಚಿಸಿದ ವರ. ರಾಯರ ತಂಗಿಯ ಭಾವಮೈದುನನ ಮಗ ಮೂರ್ತಿ. ಶ್ರೀನಿವಾಸ ಮೂರ್ತಿ ಶಿಕ್ಷಕನಾಗಿದ್ದವನು. ತಂದೆ ಇರಲಿಲ್ಲ. ತಾಯಿ ಅಚ್ಚಮ್ಮನಿಗೆ ಹಣದ ಆಸೆ ಹೆಚ್ಚು.
ರಾಮಸ್ವಾಮಿಯ ಒಳ್ಳೆಯತನ ಹಾಗೂ ಸೀತ ಕಪ್ಪಾಗಿದ್ದರು ಅವಳ ಗುಣ ತಿಳಿದು ಆ ವಿವಾಹ ನೆರವೇರಿತು. ಆದರೆ, ಅಚ್ಚಮ್ಮನವರ ವರಶುಲ್ಕದ ಆಸೆ ಮಗನ ಕಾರಣದಿಂದ ಸಾಗಲಿಲ್ಲ.
ಹೆಸರಿಗೆ ತಕ್ಕಂತೆ ರತ್ನದಂತೆಯೇ ಇದ್ದ ಹುಡುಗಿ ಸುಗುಣಶೀಲ ರಾಮಸ್ವಾಮಿಗೆ ತಕ್ಕ ಪತ್ನಿಯಾಗಿದ್ದು ಪದ್ಮನಾಭರಾಯರು ನಾಗೂಬಾಯಿಯವರ ದೆಸೆಯಿಂದ. ಈ ಪ್ರಸಂಗ ಜರುಗಿದ್ದು ಹೇಗೆ? ಓದಿ ನೋಡಿ.
ರಾಮು ಹಾಗೂ ಸೀತರ ವಿವಾಹ ಹಿಂದಿನ, ಮುಂದಿನ ದಿನದಲ್ಲಿ ಒಟ್ಟಿಗೆ ನಡೆದವು. ರತ್ನಳ ತಂದೆ ಸೀತಾರಾಮಯ್ಯನವರು ಆರಂಭಿಸಬೇಕೆಂದಿದ್ದ ಹೈಸ್ಕೂಲಿಗೆ ಹೆಡ್ ಮಾಸ್ಟರ್ ಆಗಿ ಶ್ರೀನಿವಾಸಮೂರ್ತಿ ನೇಮಕವಾಗಿದ್ದು ಕೇವಲ ಸಂಬಂಧವೆಂದಲ್ಲ.. ಆತನ ಅರ್ಹತೆಯಿಂದಲೂ..
ವಿವಾಹದ ನಂತರ ರಾಮಸ್ವಾಮಿಗೂ ಕೆಲಸ ಕೂಡಿಬಂತು.
ಸುಬ್ಬುಕೃಷ್ಣನಂತಲ್ಲದ ರಾಮಸ್ವಾಮಿ ತಂದೆ-ತಾಯಿಯ ಹೊಣೆ ಹೊತ್ತು, ತಂಗಿಯನ್ನೂ ವಿಚಾರಿಸಿಕೊಳ್ಳುತ್ತಾ.. ಪತ್ನಿಯನ್ನೂ ಪ್ರೀತಿಸುವ ಪರಿ, ಎಲ್ಲವನ್ನೂ ನಿಭಾಯಿಸುವ ರೀತಿ ಸೆಳೆಯುತ್ತದೆ. ದೂರದೂರಿನ ಪೋಸ್ಟಿಂಗ್ ಅದೂ ವಿವಾಹದ ಹೊಸತರಲ್ಲಿ. ಆಗ ರತ್ನ ಎಲ್ಲವನ್ನು ಸಂಭಾಳಿಸುವ ಹೊಣೆ ಹೊರಬೇಕಾದ ಸಂಧರ್ಭ. ಇಲ್ಲಿ ಅತ್ತೆ-ಮಾವ, ಸೊಸೆಯಂತಲ್ಲದೆ ತಂದೆ-ತಾಯಿ, ಮಗಳ ಬಾಂಧವ್ಯ ಕಾಣಿಸುತ್ತದೆ.
ಸುಬ್ಬುಕೃಷ್ಣನ ಮೇಲ್ಮಟ್ಟದ ನಡವಳಿಕೆ, ಕೆಟ್ಟವರಲ್ಲದಿದ್ದರೂ ಅಚ್ಚಮ್ಮನವರ ಆಸೆಬುರುಕತನ, ರತ್ನ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದ ಪರಿ.. ಸೀತ ಮೌನದಿಂದ ಎಲ್ಲವನ್ನು ಸಹಿಸುವ ರೀತಿ, ಕಷ್ಟಪಟ್ಟು ಶ್ರಮ ಹಾಕಿದರೂ ಕುಟುಂಬದೆಡೆಗೆ ಹೆಚ್ಚೇ ಮನಸ್ಸು ಮಾಡಿದ ರಾಮಸ್ವಾಮಿಯ ಭವಿಷ್ಯ ಎಲ್ಲವನ್ನು ಹಂತಹಂತವಾಗಿ ತೋರುತ್ತಾ ಹೋಗಿದ್ದಾರೆ.
ಸುಬ್ಬಕೃಷ್ಣ ಹಾಗೂ ಶಾರದೆಯರ ದಾಂಪತ್ಯ ಹೇಗಿತ್ತು..? ಬಡತನದ ಕುಟುಂಬಕ್ಕೆ ಸೇರಿದರೂ ಸೀತಳಿಗೆ ಸಮಾಧಾನದ ಸಂಗತಿ ಏನಿತ್ತು..?
ರತ್ನ ಹಾಗೂ ಸೀತೆಯರು ಅತ್ತಿಗೆ-ನಾದಿನಿಯಂತಲ್ಲದೆ ಅಕ್ಕ-ತಂಗಿಯೋ.. ಸ್ನೇಹಿತೆಯೋ ಎಂಬಂತೆ ಭಾಸವಾಗುವ ಬಾಂಧವ್ಯ ಜೊತೆಗೆ ಸೀತೆಯ ಬದುಕನ್ನು ತಹಬದಿಗೆ ತರಲು ರತ್ನ ಆಲೋಚಿಸುವ ರೀತಿ ಹಾಗೂ ರಾಮಸ್ವಾಮಿಯ ತಾಳ್ಮೆಯ ನಡೆ ನಿಜಕ್ಕೂ ಆದರ್ಶನೀಯ.
ಯೋಗಾನರಸಿಂಹಯ್ಯನವರು ಹೆಚ್ಚು ಹಣ ಮಾಡಿದ್ದವರಲ್ಲ. ಹಾಗಾಗಿ ಮಕ್ಕಳ ವಿವಾಹಕ್ಕೆ ಪದ್ಮನಾಭಯ್ಯನವರಿಂದ ಹಣ ಪಡೆಯಬೇಕಾಗಿ ಬಂದಿತ್ತು. ಆ ದಂಪತಿಗಳು ಸಾಲವೆಂದಲ್ಲ ಎಂದಿದ್ದರೂ.. ತಮ್ಮ ಮಕ್ಕಳ ಮದುವೆಗೆ ಖರ್ಚು ಮಾಡುತ್ತಿದ್ದೇವೆ ಎಂದು ಕೈಯೆತ್ತಿ ಕೊಟ್ಟಿದ್ದರು. ಅಲ್ಲದೆ, ಆ ಹಣವನ್ನು ನಿರೀಕ್ಷಿಸಿದವರಲ್ಲ. ಹಾಗೆಂದು ಯಾರೂ ಯಾರ ಋಣಭಾರವನ್ನೂ ಹೊರಲು ಇಷ್ಟಪಡದವರು. ಎರಡು ಕುಟುಂಬಗಳ ನಿರ್ಮಲ ಪ್ರೀತಿಯ ಬಾಂಧವ್ಯವನ್ನು ಉಳಿಸಿಕೊಂಡೇ.. ಋಣ ತೀರಿಸಲಾಗುವುದಿಲ್ಲ ಎಂಬ ಮಾತು ಹೇಳಿಯೇ ಹಣವನ್ನು ಅವರಿಗೆ ವಾಪಸು ಮಾಡಿದ್ದು ಯಾರು ಹಾಗೂ ಅವರ ನಡೆ ಏನಿತ್ತು..? ಎಷ್ಟೋ ಸಂಬಂಧಗಳು ಹಣದಿಂದಲೇ ಹಾಳಾಗುತ್ತಿದ್ದರೂ ಹಣದಾಚೆಗಿನ ನಿರ್ಮಲ ಅಂತಃಕರಣ ಕಾಣಿಸಿಕೊಳ್ಳುತ್ತದೆ.
ಒಂದೇ ತಂದೆ-ತಾಯಿಯ ಮಕ್ಕಳಾದರೂ ಸುಬ್ಬುಕೃಷ್ಣ ಹಾಗೂ ರಾಮಸ್ವಾಮಿಯರಲ್ಲಿ ನಾವಿಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ಕಾಣುತ್ತೇವೆ. ಅದು ಬೆಳೆದ ಪರಿಸರ ಹಾಗೂ ಸಂಸ್ಕಾರದ ಕಾರಣವಲ್ಲ.. ವೃತ್ತಿ ಅಥವಾ ಮುಂದಿನ ಬದುಕನ್ನು ಕಟ್ಟಿಕೊಳ್ಳುವಾಗ ಅವರಿದ್ದ ಪರಿಸ್ಥಿತಿ ಎನ್ನಬಹುದೇ..?
ವಿದ್ಯೆ ಒಬ್ಬರಲ್ಲಿ ವಿನಯ, ಸಂಸ್ಕಾರ, ಬುದ್ಧಿವಂತಿಕೆ, ಶ್ರಮವನ್ನು ಪೋಷಿಸಿದರೆ ಮತ್ತೊಬ್ಬರಲ್ಲಿ ಹಣದ ಆಸೆ, ದರ್ಪ, ದುರಾಸೆಯನ್ನು ರೂಪಿಸುವ ಪರಿಯನ್ನು ನಾವು ಕಾಣುತ್ತೇವೆ.
ತಂದೆ-ತಾಯಿಯರು ನಿಜವಾಗಿ ಬಯಸುವುದು ಮಕ್ಕಳ ಅಭ್ಯುದಯ, ಖುಷಿಯನ್ನು. ಯೋಗಾನರಸಿಂಹಯ್ಯ ದಂಪತಿಗಳಿಗೆ ಮಕ್ಕಳು ಎರಡೂ ಬಗೆಯ ಬದುಕನ್ನು ತೋರಿಸಿದರು. ದುಃಖ ಹಾಗೂ ಸಂತಸ ಎರಡನ್ನೂ.. ಅಮೃತ ಮಂಥನದಲ್ಲಿ ಗರಳ ಹಾಗೂ ಅಮೃತ ಎರಡನ್ನೂ ಕಂಡ ಹಾಗೆ.
ತಾವು ಮಾತ್ರ ಅಭಿವೃದ್ಧಿ ಹೊಂದಿದರೆ ಸಾಲದು. ತಮ್ಮ ಜೊತೆಯವರಿಗೂ ದಾರಿ ತೋರುವ, ಅವರ ಉನ್ನತ ಬದುಕನ್ನು ಕಾಣುವ ಬಗೆ, ಕಷ್ಟದಲ್ಲಿ ಜೊತೆಯಾಗಿ ನಿಲ್ಲುವ ರೀತಿ ಇವೆಲ್ಲವನ್ನೂ ನಾವು ರಾಮಸ್ವಾಮಿಯ ಬದುಕಿನಲ್ಲಿ ಕಾಣುತ್ತೇವೆ. ಅದು ರಾಮಸ್ವಾಮಿ ಪಡೆದದ್ದು ಹಾಗೂ ನೀಡಿದ್ದು ಎರಡರಲ್ಲಿಯೂ... ಸಮಾಜದಿಂದ ನಾವು ಪಡೆದದ್ದನ್ನೇ ನಾವು ಸಮಾಜಕ್ಕೆ ನೀಡುವ ಪರಿಯನ್ನು ನಾವಿಲ್ಲಿ ಗಮನಿಸಬಹುದು.
ಸಾಮಾಜಿಕ ಹಾಗೂ ಕೌಟುಂಬಿಕ ಎರಡು ನೆಲೆಯಲ್ಲಿಯೂ ಬದುಕಿನ ಏರಿಳಿತಗಳನ್ನು ತೋರುತ್ತಾ ಮನುಷ್ಯ ಬದಲಾಗುವ ಬಗೆ ಹಾಗೂ ಬದಲಾಗಬೇಕಾದ ಬಗೆಯನ್ನು ಹೇಳುತ್ತಾ ಸುಂದರ ಕಥೆಯನ್ನು ಸೊಗಸಾಗಿ ಹೇಳುತ್ತಾರೆ.
ಸುಬ್ಬುಕೃಷ್ಣ, ರಾಮಸ್ವಾಮಿ ಹಾಗೂ ಸೀತ ಮೂವರ ಬದುಕಿನ ಸಂಪೂರ್ಣ ಚಿತ್ರಣದ ಜೊತೆಗೆ ಕುಟುಂಬಗಳ ನಡುವಿನ ಬಾಂಧವ್ಯವನ್ನು, ಮನುಷ್ಯರ ಅಂತರಂಗವನ್ನು ಅರಿಯಬೇಕಿದ್ದರೆ ನೀವು ಕಾದಂಬರಿಯನ್ನು ಓದಲೇಬೇಕು. ಫೀಲ್ ಗುಡ್ ಎನ್ನಿಸುವ ಹಾಗೂ ಒಳ್ಳೆಯ ಮೌಲ್ಯಗಳನ್ನು ಹೊಂದಿರುವ ಚೆಂದದ ಕಾದಂಬರಿಯ ಸುಂದರವಾದ ಓದು.
~ವಿಭಾ ವಿಶ್ವನಾಥ್

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ