ಭಾನುವಾರ, ಆಗಸ್ಟ್ 30, 2026

ತುತ್ತಿನ ಸವಿ (ಬೆಳಕಿಂಡಿಯ ಕತೆಗಳು - 77)

 


ಚಿಕ್ಕಂದಿನಲ್ಲಿ ಮುದ್ದೆಯನ್ನು ತುಪ್ಪದಲ್ಲಿ ಅದ್ದಿ ತಿನ್ನಿಸುವಾಗ, ಅನ್ನ ಉಪ್ಪು-ತುಪ್ಪ, ಸಾರನ್ನ, ಚಟ್ನಿ ಅನ್ನ, ಒಗ್ಗರಣೆ ಅನ್ನ, ಮೊಸರನ್ನ, ಹಾಲು ಅನ್ನ ಹೀಗೆ ಒಂದೊಂದು ದಿನ ಒಂದೊಂದು ರೀತಿ ತುತ್ತು ಬಾಯಿಗಿಡುತ್ತಾ ಮುದ್ದು ಮಾಡಿ ತಿನ್ನಿಸುತ್ತಾ, ಟಿ.ವಿ ಯ ಸಖ್ಯ ಬೆಳೆಸಲು ಬಿಡದೆ, ಚಂದಮಾಮನನ್ನು ತೋರಿಸುತ್ತಾ ಕತೆ ಹೇಳಿ ತಿನ್ನಿಸುವಾಗಿನ ನಿನ್ನ ಪಾತ್ರ ಈಗ ನನ್ನದಾಗಿದೆ ಅಮ್ಮ. 

ಮೊಬೈಲ್ ತೋರಿಸದೆ, ಕತೆಗಳನ್ನು ಹೇಳುತ್ತಾ ತುತ್ತು ಮಾಡಿ ತಿನ್ನಿಸುವಾಗಿನ ಆ ಸಂತೋಷದ ಸವಿ ಯಾವುದಕ್ಕೂ ಬೆಲೆಕಟ್ಟಲಾದದ್ದು. ಅದು ಸಂಸ್ಕೃತಿಯ ಸವಿಯೂ ಹೌದು.


~ವಿಭಾ ವಿಶ್ವನಾಥ್

ವಿಧಿಯ ಮಧುರ ಸಂಚು (ಬೆಳಕಿಂಡಿಯ ಕತೆಗಳು - 76)

 


ಆವತ್ತು ನೀನು ನನಗೆ ಸಿಗದಿದ್ದರೆ ಬಹುಶಃ ನಾನೂ, ನೀನೂ ಸತ್ತು ಯಾವ ಕಾಲವಾಗಿರುತ್ತಿತ್ತೋ.. 

ನಿನ್ನನ್ನು ನಿನ್ನಮ್ಮ ಅನಾಥಳನ್ನಾಗಿಸಿದ್ದರೆ, ನನ್ನನ್ನು ನಾನೇ ಅನಾಥಳನ್ನಾಗಿಕೊಂಡಿದ್ದೆ. ಬಹುಶಃ, ನಿನಗೆ ನಾನು ತಾಯಾಗಲು ಹಾಗೂ ನೀನು ನನ್ನ ಮಡಿಲ ಕೂಸಾಗಲು ವಿಧಿಯ ಬೆಸುಗೆಯೇ ಇದಾಗಿರಬಹುದಾ..?? ಅಂದು ನೀನು ನನಗೆ ಸಿಗದಿದ್ದರೆ, ನಮ್ಮಿಬ್ಬರ ಬಂಧ ಬೆಸೆಯದಿದ್ದರೆ ಈ 'ಮಡಿಲು' ಅನಾಥಾಲಯದ ಹುಟ್ಟಾದರೂ ಎಲ್ಲಿರುತ್ತಿತ್ತು ಹೇಳು..?? ನೀನು ಸಿಕ್ಕಿ 25 ವರ್ಷವಾಯಿತು. ಇಂದೂ ಮತ್ತಾವುದೋ ಕಂದ 'ಮಡಿಲು' ತುಂಬಲಿದೆ. ವಿಧಿಯ ಮಧುರ ಸಂಚು ಹೀಗೇ ನಮ್ಮೆಲ್ಲರನ್ನು ಬೆಸೆದುಬಿಡಲಿ.. 


~ವಿಭಾ ವಿಶ್ವನಾಥ್

ಸಿರಿತನಕ್ಕೆ ಸಡ್ಡು ಹೊಡೆದು...

 


"ಅಯ್ಯೋ ಅಮ್ಮ, ನಿಮಗೆಲ್ಲಾ ಏನಾಗಿದೆ. ಏನು ಅವರೇನು ಈ ದೇಶದ ರಾಷ್ಟ್ರಪತಿನಾ.. ಅವರು ಬಂದರೆ ಎದ್ದು ನಿಲ್ಲುವುದೇನು.. ಅತಿ ಗೌರವ ಕೊಡುವುದೇನು..

ಅವರೇನು ಆಕಾಶದಿಂದ ಇಳಿದು ಬಂದಿದ್ದಾರಾ ಹೇಗೆ.. ಅವರು ಕೂಡಾ ನಮ್ಮ ಹಾಗೆಯೇ ಮನುಷ್ಯರು. ಅಲ್ಲವಾ ? ಶ್ರೀಮಂತರಾದರೆ ಅದು ಅವರ ಮನೆಯಲ್ಲಿ ದರ್ಪ ತೋರಿಸಲಿಕ್ಕೆ. ಅಷ್ಟೇ... ನಿಮ್ಮಂತಹವರ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ ಅವರು. ನಿಮಗೆಲ್ಲಾ ಎಷ್ಟು ಹೇಳಿದರೂ ಬುದ್ದಿ ಬರುವುದಿಲ್ಲ ಬಿಡಿ" ಎಂದ ಶ್ರೀಕಾಂತನ ಮಾತನ್ನು ಕೇಳಿ


"ನಾಲ್ಕು ಅಕ್ಷರ ಕಲಿತ ಮಾತ್ರಕ್ಕೆ ನೀನು ದೊಡ್ಡ ಮನುಷ್ಯ ಆಗುವುದಿಲ್ಲ. ಅಥವಾ ನೀನು ಹೇಳಿದ್ದೇ ಸರಿ ಅಂತಾ ಇಲ್ಲಿ ಯಾರೂ ಸಹಾ ಕುಣಿಯುವುದಿಲ್ಲ. ನೀನೇನೋ ಹೇಳುತ್ತಿಯ... ಕಳೆದ ಬಾರಿ ನಿನ್ನಂತಹಾ ಮಂದ ಬುದ್ಧಿಯವರು ಅದನ್ನೇ ನಂಬಿಕೊಂಡು ಕುಣಿದರು. ಧಣಿಗಳು ಅವರಿಗೆ ಕೆಲಸಕ್ಕೆ ಕರೆಯುವುದನ್ನೇ ಬಿಟ್ಟರು. ಕೊನೆಗೆ ಅವರೇ ಧಣಿಗಳ ಹತ್ತಿರ ಹೋಗಿ ಕಾಲು ಹಿಡಿದು ಬೇಡಿಕೊಂಡರು. ನೀವುಗಳು ಹಳ್ಳಿಗೆ ಬರುತ್ತೀರ. ನಾಲ್ಕು ದಿನ ಇರುತ್ತೀರಿ.. ಹೋಗಬೇಕಾದರೆ ಏನನ್ನೋ ಹೇಳಿ ಆಸೆ ಹುಟ್ಟಿಸಿ ಹೋಗುತ್ತೀರಿ. ಕೊನೆಗೆ ಅದನ್ನೆಲ್ಲಾ ಅನುಭವಿಸಬೇಕಾಗಿರುವುದು ಇಲ್ಲಿ ಇರುವವರೇ ತಾನೇ.." ಎಂದ ಅಮ್ಮನ ಮಾತಿಗೆ


"ಅಮ್ಮ, ನಾವೇನು ಏನನ್ನೋ ಹೇಳುತ್ತಿಲ್ಲ. ಇಲ್ಲಿನ ನಿಮ್ಮ ಧಣಿಗಳು ನಿಮ್ಮನ್ನು ದಿನಗೂಲಿ ಅಂತಾ ಕರೆಸಿಕೊಳ್ಳುತ್ತಾರೆ. ಆದರೆ , ಕಡಿಮೆ ಸಂಬಳ ಎಣಿಸುತ್ತಾರೆ. ಕೇಳಿದರೆ, ಮುಂದಿನ ಸಲ ಅದಕ್ಕಿಂತ ಕಮ್ಮಿ. ನಿಮಗೆ ಬಗ್ಗಿ ಬಗ್ಗಿ ರೂಢಿಯಾಗಿ ತಲೆ ಎತ್ತಿ ನಿಂತು ಮಾತನಾಡುವುದನ್ನೇ ಮರೆತಿದ್ದೀರಿ. ನಾವು ಕೇಳಿದ ತಕ್ಷಣ ಅವರು ಸಾಲ ಕೊಡುವುದಿಲ್ಲವಾ ಅಂತಾ ನಮಗೇ ಪ್ರಶ್ನೆ ಮಾಡುತ್ತೀರಿ.


ಆ ಯಪ್ಪಾ ಏನು ಸುಮ್ಮನೆ ಸಾಲ ಕೊಡುತ್ತಾನಾ ಹೇಳು. ನೀವು ಅದಕ್ಕೆ ಬಡ್ಡಿ, ಚಕ್ರ ಬಡ್ಡಿ ಎಲ್ಲವನ್ನೂ ಕಟ್ಟುತ್ತೀರಿ. ಅಲ್ಲವಾ ? ಏನೂ ಆಧಾರವಾಗಿ ಇರಿಸಿಕೊಳ್ಳದೆ ಸುಮ್ಮನೆ ಸಾಲ ಕೊಟ್ಟು ಬಿಡುತ್ತಾರಾ ಹೇಳು. ಜಮೀನನ್ನೋ ಇಲ್ಲವೇ ಮನೆಯನ್ನೋ ಅಥವಾ ಪ್ರಾಣಿಗಳನ್ನೋ ಅಡ ಇರಿಸುತ್ತೀರಿ ತಾನೇ.. ನೀವು ಈ ಯಪ್ಪನ ಬಳಿ ಹೀಗೆ ಸಾಲ ತೆಗೆದುಕೊಳ್ಳುವುದರ ಬದಲಾಗಿ ಬ್ಯಾಂಕ್ ಗೆ ಹೋಗಿ ಸಾಲ ಕೇಳಿದರೆ ಸಾಲ ಕೊಡುತ್ತಾರೆ ತಾನೇ ? ನಿಮ್ಮ ಅನಕ್ಷರತೆಯನ್ನು, ಮುಗ್ಧತೆಯನ್ನು ಸರಿಯಾಗಿಯೇ ಉಪಯೋಗಿಸಿಕೊಳ್ಳುತ್ತಾ ಇದ್ದಾನೆ. ಸಿರಿತನ ಯಾವತ್ತಿಗೂ ಶಾಶ್ವತ ಅಲ್ಲ ತಾನೇ..?? " ಎಂದು ಒಂದೇ ಸಮನೆ ಮಾತನಾಡುತ್ತಿದ್ದವನನ್ನು ಕಂಡ ಶ್ರೀಕಾಂತನ ತಾಯಿ


"ನಿಮ್ಮಪ್ಪನೂ ಹೀಗೆ ಮಾಡುವುದಕ್ಕೆ ಹೋಗಿ ಸತ್ತಿದ್ದು. ನೀನೂ ಹಾಗೆ ಆಡಿ ನನ್ನ ಹೊಟ್ಟೆ ಉರಿಸುತ್ತಾ ಇದ್ದೀಯ.


ಅವರತ್ರ ದುಡ್ಡಿದೆ. ಆದರೆ, ನಮ್ಮ ಹತ್ತಿರ ಏನೂ ಇಲ್ಲ. ನಾವೂ ಒಬ್ಬರಿಗೆ ಸಮನಾಗಿ ನಿಂತು ವಿರೋಧಿಸಬೇಕು ಅಂತಾ ಅಂದರೆ ಜನಬಲ ಮತ್ತು ಹಣಬಲ ಇರಬೇಕು. ಜನಬಲವನ್ನು ಹಣದಿಂದ ಕೊಂಡುಕೊಳ್ಳಬಲ್ಲ ಆತ. ಹಣಬಲ ಬೇಕು ಅಂದರೆ ದುಡಿಯಬೇಕು. ಆದರೆ, ನೀನೂ ಅಡ್ಡ ದಾರಿ ಹಿಡಿದು ಸಿರಿವಂತ ಆಗುತ್ತೇನೆ ಅಂತಾ ಹೊರಟರೆ ಅವನಿಗೂ ನಿನಗೂ ಯಾವ ವ್ಯತ್ಯಾಸವೂ ಕಾಣಿಸುವುದಿಲ್ಲ. ನೀನು ನ್ಯಾಯವಾಗಿ ಸಂಪಾದನೆ ಮಾಡಬೇಕು.


ಬಗ್ಗುವುದು ಅವನಿಗೆ ಅಥವಾ ಅವನ ಸಿರಿತನಕ್ಕೆ ಮಣಿದು ಅಲ್ಲ. ನಿಮ್ಮಂತಹಾ ಭವಿಷ್ಯದ ಪೀಳಿಗೆ ಎದ್ದು ನಿಲ್ಲಬೇಕು ಅಂತಾ ಅಂದರೆ ಅದು ನಮಗೆ ಅನಿವಾರ್ಯ. ನಿಮ್ಮ ರೀತಿ ಮಾತನಾಡುತ್ತಾ ಕಾಲಹರಣ ಮಾಡುತ್ತಾ ಕುಳಿತರೆ ಅವನು ಮತ್ತಷ್ಟು ಬೆಳೆಯುತ್ತಾ ಹೋಗುತ್ತಾನೆ. ಅದರ ಬದಲಾಗಿ ಹೋಗಿ ದುಡಿ. ಅದಕ್ಕಿಂತ ಹೆಚ್ಚು ಬಲಶಾಲಿಯಾಗಿ ಬಾ.. ಅದೂ ನ್ಯಾಯವಾದ ರೀತಿಯಲ್ಲಿ.


ಆಗ ಬಾ. ಸಿರಿತನಕ್ಕಲ್ಲ ಆ ಸಿರಿವಂತನ ದರ್ಪಕ್ಕೆ ಸಡ್ಡು ಹೊಡೆದು ನಿಲ್ಲಲು ಎಲ್ಲರೂ ಜೊತೆಯಾಗುತ್ತೇವೆ. " ಎಂದ ಅಮ್ಮನ ಮಾತು ಶ್ರೀಕಾಂತನಿಗೆ ಸಿರಿತನಕ್ಕೆ ಸಡ್ಡು ಹೊಡೆದು ನಿಲ್ಲಲು ಬೇರೆಯದ್ದೇ ಹಾದಿ ತೋರಿತ್ತು.


~ವಿಭಾ ವಿಶ್ವನಾಥ್

ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ


"ಈಗಲೇ ಇಷ್ಟು ಕಟು ವಾಸ್ತವವಾದಿಯಾಗಬೇಡ್ವೆ. ಬರಹದಲ್ಲಿ ಅಷ್ಟು ಕೋಮಲ ಭಾವನೆಗಳನ್ನು ತುಂಬುವ ನೀನೇ ಇಷ್ಟು ಕಟುವಾದರೆ ಹೇಗೆ..?" ಕೇಳಿದ್ದಕ್ಕೆ 


"ಮತ್ತೆ.. ಹೇಗಿರಬೇಕು ನೀನೇ ಹೇಳು..?

ಕಾಗೆ ಹಸಿರು ಬಣ್ಣ ಅಂದರೆ ಹೂಂ ಅನ್ನಬೇಕಾ..?

ವಾಸ್ತವದ ನುಡಿಗಳು, ಸತ್ಯ ಎಲ್ಲವೂ ಕಟುವೇ. ಕಹಿ ಔಷಧಿಯೇ ಅಲ್ಲವಾ ರೋಗವನ್ನು ಗುಣಪಡಿಸೋದು" ಎಂದಳು.


ಅವಳ ಮಾತಿನಲ್ಲಿ ತಪ್ಪು ಕಾಣಲಿಲ್ಲವಾದರೂ.. ಗುಂಪಿನಲ್ಲಿ ಗೋವಿಂದ ಎನ್ನುವವರಿಗಿಂತ ವಿಭಿನ್ನವಾಗಿ ಕಂಡ ಇವಳೇ ಎಲ್ಲರಿಗೂ ಮೊದಲ ಗುರಿಯಾಗುತ್ತಿದ್ದಳಲ್ಲಾ ಎನ್ನಿಸಿತು.


"ಗುಂಪಿನಲ್ಲಿ ಸ್ಥಾನ ಇಲ್ಲ ಎಂದರೆ ಅವರ ಸ್ಥಾನ ವೇದಿಕೆಯ ಮೇಲೆ" ಎನ್ನುವ ಮಾತು ಆ ಕ್ಷಣಕ್ಕೆ ಅವಳಿಗೆ ಹೊಂದುವಂತೆ ಕಂಡಿತು. 

"ನೇರವಾದ ಮರಗಳೇ ಅಲ್ಲವಾ ಮೊದಲು ಕೊಡಲಿಯ ಏಟಿಗೆ ಬಲಿಯಾಗುವುದು.." ಎಂಬ ಮಾತು ನೆನಪಾಗಿ ಆತಂಕವೂ ಆಯಿತು.


ಅವಳ ಬಿಸಿರಕ್ತದ ವಯಸ್ಸು ಹೀಗೆಲ್ಲಾ ಮಾಡಿಸುತ್ತಿದೆ. ಹಾರಾಟ, ಕಟು ವಾಸ್ತವಗಳು ಕಾಲ ಕಳೆದಂತೆ ಮಾಗುತ್ತವೆ. ಪ್ರತಿಯೊಂದಕ್ಕೂ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ಅರಿವಾಗುವ ಸಮಯ ಬರುತ್ತದೆ. ಅದು ಅವಳಿಗೆ ತಾನಾಗಿಯೇ ಅರ್ಥವಾಗುತ್ತದೆ ಎಂದುಕೊಂಡೆನಾದರೂ.. ಕಾಲ ಬಲು ಕಠೋರ. ಯಾವತ್ತಿಗೂ ರಿವರ್ಸ್ ಪ್ರಕ್ರಿಯೆ ಅನ್ನೋದೇ ಅಲ್ಲಿಲ್ಲ. ಅವಳು ಮಾಗುವಷ್ಟರಲ್ಲಿ ಮನಸ್ಸು ಕಲ್ಲಾದರೆ..!


ಹೀಗೆ ಯೋಚನೆಗಳ ಪ್ರವಾಹ ಸಾಗುತ್ತಿತ್ತು. ಅದು ಅವಳ ಮಾತುಗಳಿಂದಲೇ ಕಡಿಯಿತು. 


"ಯೋಚನೆ ಬೇಡ್ವೆ. ಮನಸ್ಸಲ್ಲಿ ಇರೋದನ್ನ ಒದರಿ ಹಗುರಾಗುವೆ. ಕೆಲವೊಮ್ಮೆ ಜನಗಳ ಎದುರಲ್ಲಿ.. ಹಲವೊಮ್ಮೆ ನನ್ನ ಬರಹದಲ್ಲಿ..

'ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ' ಅನ್ನೋ ನುಡಿ ಕೇಳಿಲ್ವಾ ನೀನು..?!

ಸಂಧರ್ಭಕ್ಕೆ ತಕ್ಕಂತೆ ಕಠಿಣವೋ.. ಮೃದುವೋ ನಿರ್ಧರಿಸುತ್ತೇನೆ. 

ತೀರಾ ತಲೆಕೆಡಿಸಿಕೊಳ್ಳಬೇಡ್ವೆ"


ಅವಳು ಹೀಗೆಯೇ ಇರಲಿ ಬದಲಾಗದಿರಲಿ ಎಂದು ಮನ ಹಾರೈಸಿದರೂ.. ಬಾಯಲ್ಲಿ ಬಂದ ಮಾತು..?!


ಈ ಮಾತುಕಥೆ ಒಂದು ಕಾಲದ ನನ್ನನ್ನೇ ನೆನಪಿಸಿತು. ಅಂದ ಹಾಗೆ ಅವಳ ಜೊತೆ ಆದ ಸಂಭಾಷಣೆ..?!


~ವಿಭಾ ವಿಶ್ವನಾಥ್ 

ಶನಿವಾರ, ಆಗಸ್ಟ್ 29, 2026

ಮಂಜು ಮುಸುಕಿದ ಹಾದಿ (ಪುಸ್ತಕ ಯಾನ - 485)


ಪುಸ್ತಕದ ಶೀರ್ಷಿಕೆ : ಮಂಜು ಮುಸುಕಿದ ಹಾದಿ 

ಲೇಖಕರು : ಶೈಲಜಾ ಪ್ರಕಾಶ್ 

ಪ್ರಕಾಶಕರು : ಶ್ರೀ ಕೃಷ್ಣ ಪ್ರಕಾಶನ

ಪ್ರಥಮ ಮುದ್ರಣ : 2022


ಈ ಪುಸ್ತಕ ಮಂಜು ಮುಸುಕಿದ ಹಾದಿ, ಟೀಚರ್ ಹಾಗೂ ಚಿಂಪು ಎನ್ನುವ ಮೂರು ಕಿರುಕಾದಂಬರಿಗಳು ಸಂಪುಟ ಇದು.


ಇಂದು ಮಂಜು ಮುಸುಕಿದ ಹಾದಿ ಕಾದಂಬರಿಯನ್ನು ಮಾತ್ರ ಪರಿಚಯಿಸುತ್ತಿದ್ದೇನೆ.


ಮಂಜು ಮುಸುಕಿದ ಹಾದಿ ಸಾಮಾಜಿಕ ಶೈಲಿಯ ಕಾದಂಬರಿ. ಮುಖ್ಯವಾಗಿ ಕೌಟುಂಬಿಕ ಪರಿಸರವನ್ನು ಕಟ್ಟಿಕೊಡುತ್ತಾ.. ಮನುಷ್ಯನ ಜೀವನ ಸದಾ ಬೆಳಕಿನಲ್ಲಿರದೆ ಮಂಜು ಮುಸುಕಿದ ಹಾದಿಯಲ್ಲಿಯೂ ನಡೆಯಬೇಕಾದ ಸಂದರ್ಭಗಳನ್ನು ತೋರಿಸುತ್ತಾರೆ. ಅಂತಹ ಸಂದರ್ಭದಲ್ಲಿ ದಾರಿ ಸರಿಯಾಗಿ ಕಾಣದೆ.. ಕಲ್ಲು, ಮಣ್ಣು, ಮುಳ್ಳು, ಹಳ್ಳ-ಕೊಳ್ಳಗಳನ್ನು ದಾಟುವ ಸಂದರ್ಭ ಬಂದಾಗ ಅವೆಲ್ಲವನ್ನು ಎದುರಿಸಿ ಹೇಗೆ ಸಾಗುತ್ತಾರೆ ಹಾಗೂ ಅವೆಲ್ಲವೂ ಅವರ ಬದುಕಿನಲ್ಲಿ ಯಾವೆಲ್ಲಾ ಬದಲಾವಣೆಗಳನ್ನು ತರುತ್ತದೆ ಎಂಬುದನ್ನು ದಾರಿದೀಪದಂತೆ ತೋರಿದ್ದಾರೆ.


ಕಾದಂಬರಿಯ ನಾಯಕ ವಿಶ್ವನಾಥ. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು, ನಂತರ ತಾಯಿಯನ್ನು ಕಳೆದುಕೊಂಡವನು. ಎಸ್. ಎಸ್. ಎಲ್. ಸಿ ಗೆ ಬರುವ ಹೊತ್ತಿಗೆ ಅನಾಥನಾಗಿದ್ದ ಆತನ ಹೊಣೆ ಹೊತ್ತವರು ಅವನ ಸೋದರ ಮಾವ ಸದಾಶಿವರಾವ್. ಸದಾಶಿವರಾವ್ ಅವರ ಮನೆಯಲ್ಲಿಯೇ ತನ್ನ ಮುಂದಿನ ದಿನಗಳನ್ನು ಕಳೆವ ಅವನಿಗೆ ಅಲ್ಲಿ ಸಿಗುತ್ತಿದ್ದದ್ದು ಊಟ ಹಾಗೂ ಉಳಿದುಕೊಳ್ಳುವ ಜಾಗವಷ್ಟೇ ಎಂದರು ತಪ್ಪಾಗಲಾರದು. ಆತ ಅದೆಲ್ಲಾ ಕಷ್ಟಗಳನ್ನು ದಾಟಿ ನಿಂತ ಬಗ್ಗೆ ಸ್ಪೂರ್ತಿದಾಯಕ.


"ಸಾಧನೆಗಳಲ್ಲಿ ನೆಲೆ ನಿಂತವನ ಬುದ್ಧಿಯು ಒಂದೇ ಮುಖವಾಗಿರುವುದು. ನೆಲೆ ಇಲ್ಲದವನ ಬುದ್ಧಿಯು ಮರದ ಅನೇಕ ಕೊಂಬೆಗಳ ತರಹ ಬೇರೆ ಬೇರೆಯಾಗಿರುತ್ತೆ


ಬದುಕುವುದು ಒಂದು ಕಲೆ!"


ಮುಂದೆ ಥಿಯೇಟರ್ ಕೆಲಸಕ್ಕೆ ಸೇರಿದಾಗ ಅಲ್ಲಿನ ಓನರ್ ಮಂಜಯ್ಯನವರ ಪ್ರೋತ್ಸಾಹದಿಂದ ನೈಟ್ ಕಾಲೇಜಿಗೆ ಹೋಗಿ ಓದಿ ಡಿಗ್ರಿ ಮುಗಿಸಿ ಒಳ್ಳೆಯ ಕೆಲಸಕ್ಕೂ ಸೇರುತ್ತಾನೆ. 


ಇತ್ತ ಮತ್ತೊಂದು ಕುಟುಂಬದ ಪರಿಚಯ ಮಾಡಿಸುತ್ತಾರೆ. ಅದು ಅಡ್ವಕೇಟ್ ಆನಂದ ರಾವ್ ಅವರ ಕುಟುಂಬ. ಅವರ ಪತ್ನಿ ಮಂಗಳ. ಮದುವೆಯಾಗಿ 10 ವರ್ಷವಾದರೂ ಅವರಿಗೆ ಮಕ್ಕಳಿರಲಿಲ್ಲ. ಆನಂದರಾವ್ ಅವರ ಬುದ್ಧಿವಂತಿಕೆ ಹಾಗೂ ಗಳಿಸುವ ಕಲೆಯನ್ನು ಸೊಗಸಾಗಿ ಚಿತ್ರಿಸಿದ್ದಾರೆ.


ಆನಂದರಾಯರ ಏಕೈಕ ತಂಗಿ ಸರಸ್ವತಮ್ಮ. ಅವರ ಒಬ್ಬಳೇ ಮುದ್ದಿನ ಮಗಳು ಮಾಲತಿ. ಗಂಡನನ್ನು ಕಳೆದುಕೊಂಡಿದ್ದ ಸರಸ್ವತಮ್ಮನವರ ಆರೋಗ್ಯವು ಅಷ್ಟು ಸರಿ ಇರಲಿಲ್ಲ. ಆನಂದರಾಯರು ತಂಗಿಯ ಕಷ್ಟಕ್ಕಾಗುತ್ತಿದ್ದರು. ತಿಂಗಳಿಗೊಮ್ಮೆ ಬಂದು ಅವರ ಸಂಸಾರದ ನಿಗಾ ನೋಡುತ್ತಿದ್ದರು.


ಮುಂದೆ ವಿಶ್ವನಾಥ ಹಾಗೂ ಮಾಲತಿ ಇಬ್ಬರ ವಿವಾಹವಾಗುತ್ತದೆ. ಇದಕ್ಕೆ ಕಾರಣರು ಯಾರು..? ಅವರ ಬಂಧ ಕೂಡಿಬಂದದ್ದು ಹೇಗೆ..?


ಸೋದರಸೊಸೆ ಮಾಲತಿಯ ಬದುಕಿನಲ್ಲಿ ಮೊದಲಿನಿಂದಲೂ ಕಾಳಜಿ ಮಾಡುತ್ತಿದ್ದ ಆನಂದರಾಯರ ಮನಸ್ಸಿನಲ್ಲಿ ಏನಿತ್ತು ..?


ಆನಂದರಾಯರು ಅವರ ಸಂಸಾರಕ್ಕೆ ನೆರವಾಗುವಾಗ ಮಂಗಳಮ್ಮನವರ ಮನಸ್ಸಿನ ಭಾವಗಳೇನು..?


ಮದುವೆಯಾದ ನಂತರವೂ ಮಾಲತಿ ಓದಿನಲ್ಲಿ ಪ್ರಗತಿ ಸಾಧಿಸುವ ಬಗೆ ಸ್ಪೂರ್ತಿದಾಯಕವೆನಿಸಿತು. ಅಷ್ಟೇ ಅಲ್ಲದೆ ಮಾಲತಿಯ ಗಟ್ಟಿತನದ ವ್ಯಕ್ತಿತ್ವ ಇಲ್ಲಿದೆ. ಗಂಡನನ್ನು ವ್ಯರ್ಥವಾಗಿ ಕಾಲ ಕಳೆಯಲು ಬಿಡದೆ ಡಿಪಾರ್ಟ್ಮೆಂಟ್ ಎಕ್ಸಾಮ್ ಗಳನ್ನು ತೆಗೆದುಕೊಳ್ಳುವಂತೆ ಸ್ಪೂರ್ತಿ ತುಂಬಿ ಆತನ ವೃತ್ತಿ ಬದುಕಿನ ಮುನ್ನಡೆಗೆ ಕಾರಣವಾಗುತ್ತಾಳೆ. ವಿಶ್ವನಾಥ ಪತ್ನಿಯ ಬಗ್ಗೆ ಯಾವ ಭಾವವನ್ನು ಹೊಂದಿದ್ದ..?


ಮನುಷ್ಯನ ಬದುಕಿನಲ್ಲಿ ಸುಖ ಬಂದ ಹಾಗೆಯೇ ದುಃಖಗಳೂ ಹಿಂದೆಯೇ ಬರುತ್ತವೆ. ಸುಖಕ್ಕೆ ಅಣಿಯಾದಂತೆ ಕಷ್ಟಕ್ಕೂ ಅಣಿಯಾಗಿರಬೇಕು. 


ಹಲವು ಸುಖಗಳನ್ನು ಮಾನವನು ಬಯಸಿ, ಬೇಡಿ ಪಡೆದರು ಮುಂದೆ ಅವೇ ಮುಳುವಾಗುತ್ತವೆ. ಮಾಲತಿ ಹಾಗೂ ವಿಶ್ವನಾಥರ ಬದುಕಿನಲ್ಲಿಯೂ ಅಂತಹ ಪ್ರಸಂಗ ಬಂದಿತು. ಅವರ ಬದುಕಿನಲ್ಲಿ ಮೂರು ವರ್ಷದಲ್ಲಿ ಬಹಳ ಬದಲಾವಣೆಗಳಾಗಿದ್ದು.. ಅವರ ಬದುಕಿನಲ್ಲಿ ಮಗಳು ಮೀನಾ ಬಂದಿದ್ದರೆ, ಉಳಿದವರೆಲ್ಲರೂ ಇದ್ದು ಇರದಂತಾಗಿದ್ದೇಕೆ.?


ಇದಾದ ಆರು ವರ್ಷಗಳಲ್ಲಿ ಮತ್ತೆ ಗಂಭೀರವಾದ ಬದಲಾವಣೆಗಳಾದವು. ಸಂಸಾರದಲ್ಲಿ ನಂಬಿಕೆ ಎನ್ನುವುದು ಎಷ್ಟು ಮುಖ್ಯ ಎನ್ನುವುದರ ಅರಿವಾಗುತ್ತದೆ. ಎಷ್ಟೇ ನಂಬಿಕೆ ಇದ್ದರೂ ಅದರ ಬುಡವನ್ನು ಅಲುಗಾಡಿಸುವಂತಹ ಕೆಲವು ಘಟನೆಗಳು, ಬೇರೆಯ ಕೋನದ ನೋಟ ಸುಖ ಸಂಸಾರಕ್ಕೆ ಎರವಾಗಬಲ್ಲವು. ಇದೆಲ್ಲವನ್ನು ಮೀರಿ ವಿಶ್ವನಾಥ ಹಾಗೂ ಮಾಲತಿಯರು ಗಟ್ಟಿಯಾದರೇ..?


ಅಕಸ್ಮಾತ್ ಇದೆಲ್ಲವನ್ನು ಬಗೆಹರಿಸಿಕೊಂಡರೂ.. ವಿಧಿಯ ಆಟ ಬೇರೆಯೇ ಇದ್ದರೆ..?


ವ್ಯಕ್ತಿಗಳ ನಡೆ ಸಮಯ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಇಲ್ಲಿಯೂ ಯಾರೂ ಅದಕ್ಕೆ ಹೊರತಾದವರಲ್ಲ. ಮಾಲತಿಯ ವ್ಯಕ್ತಿತ್ವ ಮಾತ್ರ ಮೊದಲಿನಿಂದ ಕೊನೆಯವರೆಗೂ ಬದಲಾದದ್ದು ಕಂಡುಬರಲಿಲ್ಲ. ಯಾರ ಮನಸ್ಸಿನಲ್ಲಿ ಯಾವ ಭಾವವಿರುತ್ತದೆಯೋ ಯಾರೂ ಅರಿತವರಲ್ಲ. ಆದರೆ, ನಕಾರಾತ್ಮಕ ಗುಣವನ್ನು ಬೆಳೆಯಲು ಬಿಡದೆ ಸಕಾರಾತ್ಮಕವಾಗಿ ಆಲೋಚಿಸುವ ಹಾಗೂ ಅಂತೆಯೇ ನಡೆಯುವ ಗುಣವಷ್ಟೇ ಸಮಾಜದಲ್ಲಿ ಅವರ ವ್ಯಕ್ತಿತ್ವವನ್ನು ಉಳಿಸಿಕೊಡಬಲ್ಲದು.


ವಿಶ್ವನಾಥ ಮಾಲತಿಯರ ಬದುಕಿನ ಮಂಜು ಮುಸುಕಿದ ಹಾದಿಯ ಚಿತ್ರಣ ಇಲ್ಲಿದೆ. 


ಹಲವಾರು ನೋಟ್ ಮಾಡುವಂತಹ ಕೋಟ್ ಗಳಂತಹ ಮೌಲ್ಯಯುತ ಸಾಲುಗಳನ್ನು, ಗೂಡಾರ್ಥ ಉಳ್ಳ ನಿರೂಪಣೆಯನ್ನು ನಾವಿಲ್ಲಿ ಕಾಣಬಹುದಾಗಿದೆ. ಸೊಗಸಾದ ಕಾದಂಬರಿಯ ಓದು.

~ವಿಭಾ ವಿಶ್ವನಾಥ್

ಪುರುಷಸಿಂಹ (ಪುಸ್ತಕ ಯಾನ - 484)


ಪುಸ್ತಕದ ಶೀರ್ಷಿಕೆ : ಪುರುಷಸಿಂಹ

ಲೇಖಕರು : ಜಿ. ಪ್ರಕಾಶ್

ಪ್ರಕಾಶಕರು : ಕ್ರಿಯೇಟಿವ್ ಪುಸ್ತಕಮನೆ 

ಎರಡನೇ ಮುದ್ರಣ : 2026

ಪುಟಗಳು : 104

ಬೆಲೆ : 100 ರೂ. 


1980 ರಿಂದ ಸ್ಪೈ ನಾವೆಲ್ ಗಳನ್ನು ಬರೆಯಲು ಶುರು ಮಾಡಿರುವ ಜಿ. ಪ್ರಕಾಶ್ ಅವರ 100ನೇ ಕಾದಂಬರಿ ಇದು. ಈ ಕಾದಂಬರಿಯ ಮುಖ್ಯ ನಾಯಕ ಪ್ರದೀಪ. 


ಪುಸ್ತಕ ಮನೆ ಪ್ರಕಾಶನದವರ "ಅಪರಂಜಿ ಮಾಲೆ" ಮಾಲಿಕೆಯಡಿ ಈ ಕಾದಂಬರಿ ಮರುಮುದ್ರಣಗೊಂಡಿದೆ.


ಸ್ಪೈ ನಾವೆಲ್ ಆದ್ದರಿಂದ ಈ ಕಾದಂಬರಿಯ ಪೂರ್ಣ ಕಥೆಯನ್ನು, ರೋಚಕ ತಿರುವುಗಳನ್ನು ನಾನು ಬಿಚ್ಚಿಡಲಾರೆ. ಕಾದಂಬರಿಯ ಪ್ರವೇಶಿಕೆ ಹಾಗೂ ಕುತೂಹಲ ಮೂಡಿಸುವಂತಹ ವಿಚಾರಗಳನ್ನು ಹೇಳುವ ಪ್ರಯತ್ನ ಮಾಡುವೆ.


ಕಾದಂಬರಿ ಶುರುವಾಗುವುದು ಸಿ.ಬಿ.ಐ ಡೈರೆಕ್ಟರ್ ಡಿಸೋಜ ಹಾಗೂ 65 ವರ್ಷದ ದಿವಾಕರ್ ಅವರ ಮಾತುಕತೆಯಿಂದ. ದಿವಾಕರ್ ಅವರಿಗೆ ಸಹಾಯ ಬೇಕಿರುತ್ತದೆ. ವಿಜ್ಞಾನಿಯಾಗಿದ್ದವರು ಡಿಫೈನ್ಸ್ ಇನ್ಸ್ಟಿಟ್ಯೂಟ್ ನಲ್ಲಿ ಚೀಫ್ ಸೈಂಟಿಸ್ಟ್ ಆಗಿ ಎರಡು ವರ್ಷದ ಹಿಂದೆ ರಿಟೈರ್ಡ್ ಆಗಿದ್ದವರು. ಇಬ್ಬರೂ ಬಾಲ್ಯದ ಗೆಳೆಯರು. ರಾಷ್ರಾಷ್ಟ್ರಾಧ್ಯಕ್ಷರಿಂದ ಪ್ರಶಸ್ತಿಯನ್ನೂ ಪಡೆದಿದ್ದವರು. ಅವರ ಆವಿಷ್ಕಾರಗಳು, ಸಂಶೋಧನೆಗಳ ವಿಚಾರಗಳನ್ನು ತೆರೆದಿಡುತ್ತಲೇ.. ಬುದ್ಧಿವಂತಿಕೆಯೇ ಅವರ ಬದುಕಿನಲ್ಲಿ ಮುಳುವಾದ ಸಂದರ್ಭದಲ್ಲಿ ಈಗ ಡಿಸೋಜಾ ಅವರ ಸಹಾಯ ಕೋರಿ ಬಂದಿರುತ್ತಾರೆ.


ದಿವಾಕರ್ ಅವರ ಮೊಮ್ಮಗಳು ನಿ ತಿಷಾ ಕಾಣೆಯಾಗಿರುತ್ತಾಳೆ. ಅದು ಕೇವಲ ಕಾಣೆಯಾಗಿದ್ದಲ್ಲ. ಅಪಹರಣವಾಗಿರುವುದು. ಹಾಗೆಂದು ಇದು ಊಹಾಪೋಹವೂ ಅಲ್ಲ. ಖಚಿತವಾದ ಮಾಹಿತಿ. ಕಣ್ಮುಂದೆ ನಡೆದ ಘಟನೆಯೇ.. ಆದರೆ, ಅದನ್ನು ತಪ್ಪಿಸಲಾಗಿರಲಿಲ್ಲ.


ಭೈರನ್ ಸಿಂಗ್ ಭೈರಾಗಿ ಎನ್ನುವ ಕುಖ್ಯಾತ ಅಪರಾಧಿಯೊಬ್ಬ ನಿತಿಷಾಳನ್ನು ಅಪಹರಿಸುತ್ತಾನೆ. ಅದೂ.. ತಾತನ ಎದುರುನಲ್ಲಿಯೇ..!


ಗುರುದಾಸಪುರ್ ಜೈಲಿನಲ್ಲಿ ತಮ್ಮ ಹೆಂಡತಿಯ ಪುಣ್ಯತಿಥಿಯ ದಿನದಂದು ಅಲ್ಲಿನ ಖೈದಿಗಳಿಗೆ ಹಾಗೂ ರೋಗಿಗಳಿಗೆ ಹಣ್ಣು, ಔಷಧಿ, ಸಿಹಿ ಹಂಚಲು ಹೋಗಿರುತ್ತಾರೆ. ದಿವಾಕರ್ ಅವರು ಸಾಮಾನ್ಯವಾಗಿ ವಿಸಿಟರ್ಸ್ ಅನ್ನು ಬಿಡದಿದ್ದವರು ಇವರ ಮೇಧಾವಿತನದ ಅರಿವಿದ್ದು ಹಾಗೂ ವಿ.ಐ.ಪಿ ಆದ್ದರಿಂದ ಒಳಬಿಟ್ಟಿರುತ್ತಾರೆ. ಆದರೆ, ಅವರ ಅದೃಷ್ಟ ಕೆಟ್ಟು ಎಲ್ಲರ ಎದುರಿನಲ್ಲಿಯೇ ಬೈರನ್ ಸಿಂಗ್ ಭೈರಾಗಿ ನಿತಿಶಾಳೊಂದಿಗೆ ಮಾಯವಾಗಿರುತ್ತಾನೆ. ತೀವ್ರವಾದಿಗಳ ಪಾಲಾದ ಮೊಮ್ಮಗಳ ಪತ್ತೆ ಮಾಡಲು ಈಗ ದಿವಾಕರ್ ಸಹಾಯ ಕೋರಿ ಬಂದಿರುವುದು. ಅವರಿಗಿದ್ದ ಒಬ್ಬಳೇ ಮಗಳ ಮಗಳ ಮಗಳು ಅವಳ. ಇದು ಕೇವಲ ಸಂಬಂಧದಿಂದ ಮಾತ್ರ ಕನೆಕ್ಟ್ ಆಗುವ ಕಥೆಯಲ್ಲ. ಅವಳನ್ನೇ ಅಪಹರಿಸುವ ಉದ್ದೇಶವಿತ್ತೇ..?! ಅದರ ಹಿಂದಿನ ಮರ್ಮವೇನು..?


ಮುಂದೆ ಈ ಕಥೆ ದೇಶಪ್ರೇಮಕ್ಕೂ ಸಂಬಂಧಿಸಿದಂತೆ ಮುಂದುವರೆಯುತ್ತದೆ.


ದಿವಾಕರ್ ಅವರ ಕುಟುಂಬದ ಪರಿಚಯದ ಜೊತೆಗೆ ತೀವ್ರಗಾಮಿ ಭೈರನ್ ಸಿಂಗ್ ಭೈರಾಗಿ ಎಷ್ಟು ಅಪಾಯಕಾರಿ ಎನ್ನುವುದನ್ನು ಕಟ್ಟಿಕೊಡುತ್ತಾ ಹೋಗುತ್ತಾರೆ.


ಭಯೋತ್ಪಾದನೆ ಜೊತೆಗೆ ಪಾಕಿಸ್ತಾನ ಹಾಗೂ ಭೈರನ್ ಸಿಂಗ್ ಭೈರಾಗಿಗೆ ಆ ದೇಶದ ಜೊತೆಗಿದ್ದ ಸಂಬಂಧ ಎನ್ನುವುದನ್ನು ಹೇಳುತ್ತಲೇ ಆ ಕೃತ್ಯದ ದುಷ್ಪರಿಣಾಮ ಎಷ್ಟಿದೆ ಎಂಬುದರ ಅಂದಾಜನ್ನು ನಾವು ಮಾಡಿಕೊಳ್ಳಬಹುದು.


ಹಾಗೆಂದು.. ಇಲ್ಲಿ ಪ್ರದೀಪ್ ತೀವ್ರವಾದ ಹೊಡೆದಾಟದ ಅಥವಾ ಕಾರ್ಯಾಚರಣೆಯ ಹಾದಿಯ ಬದಲಾಗಿ ಬೇರೆಯ ಹಾದಿಯನ್ನೇ ಹಿಡಿಯಬೇಕಾಗಿ ಬರುತ್ತದೆ. ಅದು ಅವನ ಶೈಲಿಯಲ್ಲಿಯೇ ಎಂದುಕೊಂಡರೆ.. ಅಷ್ಟರೊಳಗೆ ಡಿಸೋಜಾ ಅವರು ಆತನ ಮುಂದಿನ ಹೆಜ್ಜೆಯನ್ನು ಪ್ಲಾನ್ ಮಾಡಿ ಅದರ ಪ್ರಕಾರವೇ ನಡೆಯಬೇಕೆಂದು ನಿರ್ದೇಶಿಸುತ್ತಾರೆ. ಹಾಗಿದ್ದಲ್ಲಿ, ಪ್ರದೀಪನ ಸಾಹಸ ಶುರುವಾಗುವುದು ಎಲ್ಲಿಂದ..?


ಅಲ್ಲಿಂದ ಶುರುವಾಗುವ ಪ್ರದೀಪನ ಸಾಹಸಗಾಥೆಯನ್ನು ನಾವಿಲ್ಲಿ ಕಂಡುಕೊಳ್ಳಬಹುದು.


ಕೆ.ವನ್ ವೇಷ ಮರೆಸಿಕೊಂಡು ಹೋಗುವುದರ ಜೊತೆಗೆ ಮಕನ್ ಸಿಂಗ್ ಎನ್ನುವ ತೀವ್ರಗಾಮಿಯ ನಂಬಿಕೆ ಗಳಿಸುವಲ್ಲಿಂದ ಶುರುವಾಗುವ ಕಥೆ ಹಲವಾರು ರೋಚಕ ತಿರುವುಗಳೊಂದಿಗೆ ನೌಗುತ್ತಾ ಹೋಗುತ್ತದೆ.


ಕ್ರಾಂತಿಕಾರಿಗಳು ಹಾಗೂ ತೀವ್ರಗಾಮಿಗಳು ಇಬ್ಬರಿಗೂ ಇರುವ ವ್ಯತ್ಯಾಸವನ್ನು ನಾವಿಲ್ಲಿ ಕಾಣಬಹುದು.


ಮಿಂಚಿನ ಕಾರ್ಯಚರಣೆಯಂತೆ.. ಮುಂದಿನ ಪ್ರತಿ ಹಂತವು ಸಾಗುತ್ತಾ ಹೋಗುವಂತೆ ಕಥೆಯನ್ನು ವೇಗವಾಗಿ ಹಾಗೂ ರೋಚಕವಾಗಿ ಕಟ್ಟಿಕೊಡುತ್ತಾರೆ.


ಮಕನ್ ಸಿಂಗ್, ಭೈರನ್ ಸಿಂಗ್ ಭೈರಾಗಿ ಹಾಗೂ ಸುಖಿಯಾ ಸಿಂಗ್ ಇವರೆಲ್ಲರಿಗೂ ಶೇರ್ ಸಿಂಗ್ ಮಣ್ಣುಮುಕ್ಕಿಸಿದ್ದು ಹೇಗೆ..?


ಕೆಲವು ಸಿನಿಮಾ ಶೈಲಿಯ ನಡೆಗಳ ಜೊತೆಗೆ ಮುಂದಿನ ಗುಟ್ಟು ಬಿಟ್ಟುಕೊಡದಂತೆ ಈ ಸ್ಟೈ ನಾವೆಲ್ ಸಾಗುತ್ತದೆ.


ಪಾಕಿಸ್ತಾನದ ವಾತಾವರಣ, ಅಲ್ಲಿಯ ಗೂಢಚಾರರು, ಕಾರ್ಯಾಚರಣೆ ಜೊತೆಗೆ ಪ್ರದೀಪನ ಸಾಹಸವನ್ನು ಕಾಣಬಹುದು.


ಉಗ್ರವಾದಿಗಳ ಬಂಧನದಲ್ಲಿದ್ದ ನಿತಿಷಾ ಬಿಡುಗಡೆಯಾಗಿದ್ದು ಯಾವಾಗ..? ಇದಕ್ಕೆ ಪ್ರದೀಪನ ಜೊತೆಯಾದವರು ಯಾರು ಹಾಗೂ ಯಾವೆಲ್ಲ ಸಾಹಸಗಳನ್ನು ಪ್ರದೀಪ ಮಾಡಿದ..? 


ಮುಮ್ತಾಜ್ ಮಾಡಿದ್ದು ಸರಿಯೋ ತಪ್ಪೋ..? ನೀವೇ ಓದಿ ಅರಿಯಿರಿ.


ಇದು ನಾನು ಓದಿದ ಜಿ. ಪ್ರಕಾಶ್ ಅವರ ಮೊದಲ ಕಾದಂಬರಿ. ವಿಭಿನ್ನ ಓದಿನ ಅನುಭವ ಕಟ್ಟಿಕೊಟ್ಟಿತು. 


~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 23, 2026

ಹುಚ್ಚಿ ಸತ್ತದಲ್ಲ..

 


"ಅವಳು ಅಡುಗೆಯ ತಯಾರಿಯ ಹಂತದಲ್ಲಿದ್ದಳು. ತನ್ನದೇ ಗುಂಗಿನಲ್ಲಿ ಮುಳುಗಿರುವಾಗ ಅದೇನೋ ಸದ್ದಾಯಿತು! ಅವಳು ಬೆಚ್ಚಿ ಬಿದ್ದಳು!" 


ತಟ್ಟನೆ "ಪಾಪು, ಪಾಪು.. ಪಾಪು, ಪಾಪು" ಎಂದು ಕರೆಯುತ್ತಾ ಇಡೀ ಮನೆ ಹುಡುಕಿದಳು. ಯಾಕೋ ಮನಸ್ಸು ಕೇಡನ್ನೇ ಶಂಕಿಸುತ್ತಿತ್ತು. ದೇವರ ಬಳಿ ಮನಸ್ಸಿನಲ್ಲಿಯೇ ಬೇಡುತ್ತಾ ಮನೆಯ ಮುಂದಿನ ತೊಟ್ಟಿಯ ಬಳಿ ಬಂದಳು. ತೊಟ್ಟಿಯ ಬಳಿ ಯಾರೂ ಕಾಣಲಿಲ್ಲ. ಅಲ್ಲೇ ಕೊಂಚ ಮುಂದೆ ಇದ್ದ ಬಾವಿಯ ಬಳಿ ಬಂದಳು. ಅಲ್ಲಿ ಬಗ್ಗಿ ನೋಡಿದರೆ ಜೀವ ಬಾಯಿಗೆ ಬಂದಿತ್ತು. ಪಾಪುವನ್ನು ಹಿಡಿದುಕೊಂಡು ಸರಳಾ ಬಾವಿಯಿಂದ ಹೊರ ಬರಲು ಸೆಣೆಸಾಡುತ್ತಿದ್ದಳು. ತಕ್ಷಣವೇ ಅಲ್ಲಿ ನಿಂತು ಜೋರು ಬೊಬ್ಬೆ ಹೊಡೆದು ಕೆಲಸದವರನ್ನೆಲ್ಲಾ ಕರೆದಳು. ಮಂಜ ಮಿಂಚಿನಂತೆ ಹಾರಿ ಇಬ್ಬರನ್ನೂ ಮೇಲೆ ತಂದಿದ್ದ. ಆದರೆ, ಅಷ್ಟರಲ್ಲಾಗಲೇ ಕಾಲ ಮಿಂಚಿ ಹೋಗಿತ್ತು.


ಸುಮಿತ್ರಾ ಪ್ರಲಾಪಿಸುತ್ತಿದ್ದಳು. ಹಾಗೆಯೇ, ಅವಳ ಗಮನ ಹಿಂದಕ್ಕೆ ಓಡಿತು. ಪಾಪು ಮತ್ತು ಸರಳಾ ಇಬ್ಬರೂ ಮನೆಯಲ್ಲಿ ಒಂದು ರೀತಿ ಅಬ್ಬೇಪಾರಿಗಳೇ.. ಕೇಳುವವರೇ ದಿಕ್ಕಿಲ್ಲ.


ಸುಮಿತ್ರಾ ಪಾಪುವನ್ನು ಹೆತ್ತಾಗ ಗಂಡನ ಕಡೆಯಿಂದ ಬಂದು ನೋಡಿದ್ದವರು ಮೂಗು ಮುರಿದಿದ್ದರು. "ಹುಟ್ಟಿದ್ದು ಹೆಣ್ಣು" ಎಂದು.. ಮಗುವಿಗೆ ನಾಮಕರಣ ಮಾಡುವ ಸೌಜನ್ಯವನ್ನು ತೋರದೆ ಕಾಳಜಿಯನ್ನೂ ಮಾಡದೆ ಹಾಗೆಯೇ ಬಿಟ್ಟು ಬಿಟ್ಟಿದ್ದರು. ಅದಕ್ಕೆ ಅವಳು ಇನ್ನು "ಪಾಪು". ಜೊತೆಗೆ ದಿನ ಕಳೆದಂತೆ ಅರಿವಾಗಿದ್ದು ಅವಳು ಮೂಕಿ ಮತ್ತು ಕಿವುಡಿ. ಮೇಲೆ ಹೆಣ್ಣು ಬೇರೆ..


ಬಾಣಂತನ ಮುಗಿಯುವ ಮೊದಲೇ ಇಲ್ಲಿನ ಚಾಕರಿ ಕಾಯುತ್ತಿತ್ತು. ಮಗುವನ್ನು ಆಡಿಸಲು ಯಾರೂ ಮುಂದೆ ಬಾರದಿದ್ದಾಗ ಈ ಮನೆಯಲ್ಲಿ ಅವಳ ಜೊತೆಯಾಗಿದ್ದು ಸರಳಾ. ಮನೆಯವರ ಪಾಲಿಗೆ ಅವಳು "ಹುಚ್ಚಿ ಸರಳಾ". ಈ ಮನೆ ಮಗಳು. ಅವಳ ಮದುವೆಯ ದಿನ ಮದುವೆಯ ನಂತರ ಮಂಟಪದಿಂದ ಗಂಡನ ಮನೆಗೆ ಹೋಗುತ್ತಿರುವಾಗ ದೊಡ್ಡ ಅಪಘಾತವಾಗಿ ಗಂಡನನ್ನು ಕಳೆದುಕೊಂಡಳು. ಅದೇ ಆಘಾತಕ್ಕೆ ಹುಚ್ಚಿಯಾದಳು. ಅವಳನ್ನು ಸರಿಪಡಿಸುವ ಕೆಲಸವನ್ನು ಯಾರೂ ಮಾಡಲಿಲ್ಲ. ಗಂಡನ ಮನೆಯವರು ಅವಳನ್ನು ಕೂಡಲಿಲ್ಲವಾದ್ದರಿಂದ ಈ ಮನೆಯಲ್ಲಿ ಹುಟ್ಟಿದ ತಪ್ಪಿಗೆ ಇಲ್ಲಿಯೇ ಉಳಿದುಕೊಂಡಳು. ಅದೂ ಹುಚ್ಚಿಯಾಗಿ...


"ಅವಳಿಗೆ ಹುಚ್ಚು, ಮಗುವನ್ನು ಅವಳ ಬಳಿ ಬಿಡಬೇಡ" ಎಂದ ಅತ್ತೆಗೆ "ಆಯ್ತು ಅತ್ತೆ, ಹಾಗೇ ನೀವೇ ಸ್ವಲ್ಪ ಗಮನ ಕೊಡಿ" ಎಂದಾಗ "ದೇವಸ್ಥಾನಕ್ಕೆ ಹೊತ್ತಾಯ್ತು" ಎನ್ನುತ್ತಾ ನುಣುಚಿಕೊಂಡಿದ್ದರು. ಮಾವ, ಗಂಡ, ಮೈದುನರನ್ನಂತೂ ಮಾತನಾಡಿಸುವ ಹಾಗೆಯೇ ಇಲ್ಲ. ಇದೇ ಹುಚ್ಚಿ ಪಾಪುವನ್ನು ಎದೆಗವಚಿಕೊಂಡು ತನ್ನದೇ ಮಗು ಎಂಬಂತೆ ಬೆಳೆಸತೊಡಗಿದ್ದು.. ಮಗುವಿಗೆ ಇನ್ನೇನು ಒಂದು ವಾರದಲ್ಲಿ ಮೂರು ವರ್ಷ ತುಂಬುವುದರಲ್ಲಿತ್ತು.


ಎಲ್ಲಿದ್ದರೋ ಅತ್ತೆ ಲಬಲಬನೆ ಬಾಯಿ ಬಡಿದುಕೊಂಡು "ಅಯ್ಯೋ ಪಾಪಿ, ಮಗುವನ್ನು ಕೊಂದುಬಿಟ್ಟೆಯಲ್ಲೇ.." ಎನ್ನುತ್ತಾ ಓಡೋಡಿ ಬಂದರು. ಸರಳಾ ಕಾಣಲಿಲ್ಲವಾಗಿ "ಅತ್ತೆ, ಮಗುವಿನ ಮೇಲೆ ಹಾಗೇ ಕಣ್ಣಿಟ್ಟಿರಿ" ಎಂದಿದ್ದಕ್ಕೆ ಹೂಂಗುಟ್ಟಿದ್ದರು. ಆದರೆ, ಅದ್ಯಾವ ಮಾಯದಲ್ಲೋ ಮಾಯವಾಗಿದ್ದರು. ಅತ್ತೆ ಇರುತ್ತಾರೆ ಎಂಬ ಒಂದೇ ಭರವಸೆಯ ಮೇಲಲ್ಲವಾ ಅಡುಗೆ ತಯಾರಿಗೆ ನಿಂತದ್ದು. ಅಷ್ಟರಲ್ಲಿ...


"ಈ ಹುಚ್ಚಿನೇ ಮಗುವನ್ನು ಬಾವಿಗೆ ದೂಡಿದ್ದು.."

"ಹುಚ್ಚು ನೆತ್ತಿಗೇರಿತ್ತೇನೋ.. ಮಗುವನ್ನು ತಳ್ಳಿಯೇ ಬಿಟ್ಟಿದ್ದಾಳೆ. "

"ಮಗುವನ್ನು ಹುಚ್ಚಿ ಜೊತೆ ಬಿಡುತ್ತಾರಾ.. ಇವರಿಗೆ ಸ್ವಲ್ಪವಾದರೂ ಜ್ಞಾನ ಬೇಡವಾ.."


ಆಳಿಗೊಂದೊಂದು ಕಲ್ಲು ಎಸೆಯುತ್ತಿದ್ದರು. ನನಗೇನೋ ನಂಬಲು ಆಗಲಿಲ್ಲ. ಸರಳಾ ಮಗುವನ್ನು ಕಾಪಾಡಿದ್ದು ಎಂದು ಸಾರಿ ಸಾರಿ ಹೇಳಬೇಕೆಂದುಕೊಂಡರೂ ಧ್ವನಿ ಈಚೆಯೇ ಬರಲಿಲ್ಲ. ಅವಳು ಮಗುವನ್ನು ಅವಚಿಕೊಂಡು ರಕ್ಷಿಸುತ್ತಿದ್ದ ಪರಿ ಕಂಡಿದ್ದೆನಲ್ಲಾ.. ಅಲ್ಲದೇ, ಅವಳ ಕಣ್ಣಲ್ಲಿ ಕಾಣುತ್ತಿದ್ದ ಮಾತೃಭಾವ ಸುಳ್ಳೇನು..??


ಪಾಪು ಎಚ್ಚರವಾಗಿದ್ದಳು. ಸರಳಾ ಬಾರದ ಲೋಕಕ್ಕೆ ಪಯಣಿಸಿದ್ದಳು. ಈಗ ಮಾತುಕತೆ ಬೇರೆಯೇ ಆಯಾಮ ಪಡೆದಿತ್ತು. "ಮಗುವಿನಿಂದ ಈ ಮನೆ ಮಗಳ ಪ್ರಾಣ ಹೋಯಿತು.. "


ಯಾರು ಏನು ಕಳೆದುಕೊಂಡರೋ ತಿಳಿಯಲಿಲ್ಲ. ಪಾಪು ಅವಳನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವುದನ್ನು ಕಂಡು ಅಯ್ಯೋ ಎನ್ನಿಸುತ್ತಿತ್ತು.


ಹುಚ್ಚಿ ಸತ್ತದಲ್ಲ.. ಅಮ್ಮ ಸತ್ತಿದ್ಲು..

ಅತ್ತೆಯಂತಹಾ ಅಮ್ಮ ಪಾಪುವನ್ನು ಬದುಕಿಸಿ ತಾನು ಸತ್ತಿದ್ಲು.

ಮಾನವೀಯತೆ ಕಳೆದುಕೊಂಡ ನಾವೆಲ್ಲರೂ ಬದುಕಿದ್ದೂ ಹೆಣವಾಗಿದ್ವಿ.


~ ವಿಭಾ ವಿಶ್ವನಾಥ್

ಅವಳು ಮತ್ತು ಅಡುಗೆಮನೆ


 'ಇದೊಂದು ಕೆಲಸ ಮುಗಿಯೋದೇ ಇಲ್ಲ, ಸಾಕು, ನಾ ಇವತ್ತಿಂದ ಅಡುಗೆ ಮಾಡೋದೇ ಇಲ್ಲ, ನಂಗೂ ಸಾಕಾಗಿಹೋಗಿದೆ ಜೀವನ, ಅಡುಗೆ ಮಾಡಲು ಆಲಸ್ಯ ಇರೋ ಹೆಣ್ ಮಕ್ಕಳ ಸಂಘ ಕಟ್ಬೇಕು ನಾನು ' ಎಂದು ಅವಳು ಗೊಣಗಿದಳು. 


ಅವಳ ಈ ಗೊಣಗಾಟ ಮನೆಯಲ್ಲಿ ಯಾರಿಗೇನೂ ಹೊಸತಲ್ಲ.  ಆ ಮನೆಯಲ್ಲಿ ಇದ್ದ ಉಳಿದಿಬ್ಬರು ಗಂಡಸರು. ಆಕರ್ಷಳ ಗಂಡ ಪ್ರೇಕ್ಷಿತ್ ಹಾಗೂ ಮಾವ ಸುಂದರ್. ಹಾಗೆಂದು ಗೊಣಗುತ್ತಿದ್ದಾಗ ಮೊದಲೆಲ್ಲಾ ಇಬ್ಬರಲ್ಲಿ ಒಬ್ಬರು ಹೋಗಿ ತರಕಾರಿ ಹೆಚ್ಚುವುದು ಇಲ್ಲವೇ ಪಾತ್ರೆ ತೊಳೆಯುವ ಕೆಲಸಕ್ಕೆ ನಿಂತುಕೊಳ್ಳುತ್ತಿದ್ದರು. ಆದರೆ, ಅವಳನ್ನು ಮೆಚ್ಚಿಸಲು ಯಾರಿಂದಲೂ ಆಗುತ್ತಿರಲಿಲ್ಲ. 'ಇಲ್ಲೊಂಚೂರು ಸೋಪು ಹೋಗಿಲ್ಲ'.. 'ಈ ಜಿಡ್ಡು ಹಾಗೆಯೇ ಇದೆ' ಎಂದೋ ಏನಾದರೊಂದು ಹೇಳುತ್ತಾ ತಾನೇ ಮತ್ತೆ ಆ ಕೆಲಸಕ್ಕೆ ನಿಲ್ಲುತ್ತಿದ್ದಳು. ತರಕಾರಿ ಹೆಚ್ಚಲು ಹೋದರೆ ಉದ್ದ, ಅಡ್ಡ, ದಪ್ಪ, ಸಣ್ಣ ಎಂದು ಏನಾದರೊಂದು ಹೇಳಿ ತಾನೇ ಮಾಡುತ್ತಿದ್ದಳು. ಅವಳ ಈ ಪರಿ ಕಂಡು ಯಾರೂ ಅವಳ ತಂಟೆಗೆ ಹೋಗುತ್ತಿರಲಿಲ್ಲ. ಅಲ್ಲದೇ, ಕೆಲಸದವಳ ಕೆಲಸ ಕೂಡಾ ಮೆಚ್ಚುಗೆಯಾಗುತ್ತಿರಲಿಲ್ಲ. ಹಾಗೆಂದು, ಆಕರ್ಷ ರುಚಿಯಾಗಿ ಅಡುಗೆ ಮಾಡುತ್ತಿದ್ದಳು ಎಂದಲ್ಲ. ಅವಳ ದೃಷ್ಟಿಯಲ್ಲಿ ಶುಚಿಗೆ ಹೆಚ್ಚಿನ ಪ್ರಾಮುಖ್ಯತೆ. ಪ್ರೇಕ್ಷಿತ್ ಕೂಡಾ ಅಡುಗೆ ಮಾಡುತ್ತಿದ್ದ. ಅವಳಿಗಿಂತಲೂ ರುಚಿಯಾಗಿಯೇ ಅಡುಗೆ ಮಾಡುತ್ತಿದ್ದ. ಆದರೆ, ಅವನ ಶುಚಿಯಿಲ್ಲದ ಅಡುಗೆ ಕಂಡು ಅವಳೇ ಬೇಡವೆಂದಿದ್ದಳು.


ಇನ್ ಫ್ಯಾಕ್ಟ್ ಆಕರ್ಷ ಪ್ರೇಕ್ಷಿತ್ ನನ್ನು ಇಷ್ಟಪಟ್ಟದ್ದೇ ಆತನಿಗೆ ಅಡುಗೆ ಮಾಡಲು ಬರುತ್ತದೆ ಎಂದು. ನಂತರ ಅವನ ಕೈ ರುಚಿ ನೋಡಿ ಅದಕ್ಕೆ ಮನಸೋತಿದ್ದಳು. ಮದುವೆಯಾಗಿ ಬಂದ ನಂತರ ಅಡುಗೆ ಮನೆ ನೋಡಿ, ಪ್ರೇಕ್ಷಿತ್ ಮಾಡುವ ಕೊಳಕು ನೋಡಿ ತಲೆ ತಿರುಗಿ ಬೀಳದೆ ಇರುವುದು ಪುಣ್ಯ. ನಂತರ, ಅವಳೂ ಕೆಲಸಕ್ಕೆ ಹೋಗುವಾಗ ಏನೋ ಒಂದು ಬೇಯಿಸಿ ಹಾಕಿಕೊಂಡೋ ಇಲ್ಲವೇ ಏನಾದರೂ ಆರ್ಡರ್ ಮಾಡಿಕೊಂಡು ತಿಂದರೆ ಮುಗಿಯುತ್ತಿತ್ತು.


ಅತ್ತೆ ಅಚಾನಕ್ಕಾಗಿ ತೀರಿ ಹೋಗಿ ಮಾವ ಅಲ್ಲೇ ಬಂದು ಇರುವಂತಾದಾಗ ಅವಳೂ ಮನೆಯಿಂದ ಕೆಲಸ ಮಾಡಲು ಶುರು ಮಾಡಿದ್ದಳು. ಆಗಲೇ, ಅಷ್ಟೋ ಇಷ್ಟೋ ಅಡುಗೆ ಮಾಡಲು ಕಲಿತದ್ದು. ಯಾವ ಕೆಲಸವನ್ನಾದರೂ ಶ್ರದ್ಧೆಯಿಂದ ಮಾಡುವ ಅವಳಿಗೆ ಅದೇಕೋ ಅಡುಗೆ ಮನೆ ಕೆಲಸ, ಅಡುಗೆ ಎಂದರೆ ಮಾರು ದೂರ. ದಿನವಿಡೀ ಮನೆಯ ಧೂಳು ತೆಗೆದು ಸ್ವಚ್ಛ ಮಾಡಿ ಇಬ್ಬರಿಬ್ಬರ ಕಚೇರಿ ಕೆಲಸ ಒಬ್ಬಳೇ ನಿಭಾಹಿಸುವಳಾದರೂ ಅಡುಗೆ ಕೆಲಸವೆಂದರೆ ಆಲಸ್ಯ. ಮುಕ್ಕಾಲು ಗಂಟೆಗಿಂತ ಹೆಚ್ಚು ಅವಳು ಅಡುಗೆ ಮನೆಯಲ್ಲಿ ಕಾಲ ಕಳೆದದ್ದೇ ಕಡಿಮೆ.


ಮೊದಮೊದಲು ಸುಂದರ್ ಅವಳು ಗೊಣಗುತ್ತಿದುದ್ದನ್ನು ಕಂಡು ತಾನು ಬಂದದ್ದು ಅವಳಿಗೆ ತೊಂದರೆಯಾಯಿತೋ ಏನೋ ಎಂದುಕೊಂಡರೆ ಅವಳು ತನ್ನ ನಡವಳಿಕೆಯಿಂದ ಅದು ತೊಂದರೆಯೇ ಅಲ್ಲ ಎನ್ನುವಂತೆ ತೋರಿಸುತ್ತಿದ್ದಳು. ಹುಡುಕಿದರೂ ಒಂದೇ ಒಂದು ಕೊರತೆ ಕಂಡು ಬರುತ್ತಿರಲಿಲ್ಲ ಅವಳು ಆದರಿಸುವ ರೀತಿಯಲ್ಲಿ. ಕೊನೆಗೆ, ಸುಂದರ್ ರವರು ಇದಕ್ಕೆ ಕಾರಣವೇನೆಂದು ತಿಳಿಯಲು ವಿಚಾರಿಸಿದಾಗ ಅವರಿಗೆ ತಿಳಿದದ್ದು.. ಅವಳು ಬೆಳೆದದ್ದು ಅಜ್ಜಿ ಮನೆಯಲ್ಲಿ.. ಅಲ್ಲಿ ಅಡುಗೆ ಮನೆಯಲ್ಲಿ ತಯಾರಾಗುವ ಅಡುಗೆಗೆ ಶುಚಿ- ರುಚಿ ಎರಡೂ ಮುಖ್ಯವಾಗಿದ್ದವು. ಒಂದು ಚಿಟಿಕೆ ಉಪ್ಪು, ಒಂದು ಹರಳು ಸಕ್ಕರೆ ಆಚೀಚೆಯಾದರೂ ಅವಳ ಅಜ್ಜಿ ಬೈಗುಳ ತಿನ್ನುತ್ತಿದ್ದರು. ಹಾಗೆಯೇ ಅತ್ತೆಗೂ ಅದೇ ಸ್ಥಿತಿ. ಅವರಿಬ್ಬರ ಗೈರು ಹಾಜರಿಯಲ್ಲಿ ಒಮ್ಮೆ ಇವಳು ಬಾರದ ಅಡುಗೆಯನ್ನು ಮಾಡಿದಾಗ ಸಿಕ್ಕಿದ್ದು ಇದೇ ಕಟು ಮಾತುಗಳು. ಅವಳನ್ನು ಅಡುಗೆ ಮನೆಯಿಂದ, ಅಡುಗೆ ಕೆಲಸದಿಂದ ದೂರ ಇರುವಂತೆ, ವಿಮುಖ ಮಾಡುವಂತೆ ಮಾಡುತ್ತಿದ್ದವು. ಎಲ್ಲದರಲ್ಲಿಯೂ ಹೊಗಳಿಸಿಕೊಳ್ಳುವ ಅವಳಿಗೆ ಅಡುಗೆ ಮಾಡಿದರೆ ಎಲ್ಲಿ ಕೊಂಕು ಕೇಳಬೇಕಾದೀತೋ ಎಂಬ ಭಯ.


ಕೊನೆಗೆ, ಅಡುಗೆ ಮನೆಯಲ್ಲಿ ತೀರಾ ಕಡಿಮೆ ಸಮಯ ಇರುವುದು.. ತನಗೆ ಅದು ಆಗಿ ಬರುವುದಿಲ್ಲ ಎಂದು ಹೇಳುವುದನ್ನು ರೂಢಿಸಿಕೊಂಡಳು. ಅದರ ಪ್ರತಿಫಲವೇ ಇದು.


ಈಗ ಅವಳು ತನ್ನದೇ ಕೆಲಸಗಳಲ್ಲಿ, ಹವ್ಯಾಸಗಳಲ್ಲಿ ತೊಡಗಿಕೊಂಡಿದ್ದಾಳೆ. ಮಾವನ ಕೈರುಚಿ, ಶುಚಿ ಎರಡೂ ಹಿಡಿಸುತ್ತದೆ.

ಬಂದ ಹಾಗೆ ಮಾಡಿ ಹಾಕು ಎಂದೋ.. ಅಡುಗೆ ಮಾಡಲೇ ಬೇಕು ನೀನು ಎಂದೋ.. ಹೆಣ್ಣು ಹುಟ್ಟಿದ್ದೇ ಅಡುಗೆ ಕೆಲಸ ಮಾಡಲಿಕ್ಕೆ ಎಂದೋ.. ಭಾವಿಸುವ ಮಾವಂದಿರ ನಡುವೆ ಅಮ್ಮನಂತಹಾ ಮಾವ ದೊರೆತಿದ್ದಾರೆ. ಎಂದೂ ಸವಿಯದ ಅಮ್ಮನ ಕೈರುಚಿ ಹೀಗೆಯೇ ಇದ್ದಿರಬಹುದು ಎನ್ನಿಸುತ್ತದೆ ಅವಳಿಗೆ..


~ವಿಭಾ ವಿಶ್ವನಾಥ್

ಮುಂದಿನ ಹಾದಿ (ಬೆಳಕಿಂಡಿಯ ಕತೆಗಳು - 75)

 


ಇದು ನಾನಾಗೇ ನಾನು ಮಾಡಿಕೊಂಡ ಬಂಧನ ಎನ್ನಲೋ ಅಥವಾ ಮನೆಯವರ ಒತ್ತಡಕ್ಕೆ ಮಣಿದು ಬಂಧಿಸಿಕೊಂಡದ್ದು ಎನ್ನಲೋ.. ಏನೇ ಆದರೂ ವಿವಾಹವೆಂಬ ಬಂಧನದಲ್ಲಿ ಸಿಲುಕಿಕೊಂಡದ್ದಂತೂ ಆಗಿದೆ.


ಎಲ್ಲರಿಗೂ ವಿವಾಹದ ನಂತರದ ಬದುಕು ಸುಲಭದ ಹಾದಿಯಾಗಿರುವುದಿಲ್ಲ. ಅವತ್ತು ನನ್ನ ಮುಂದೆ ಇದ್ದದ್ದು ಎರಡೇ ಆಯ್ಕೆಗಳು ಸಾವು ಇಲ್ಲವೇ ಹೋರಾಟದ ಬದುಕು. ಓದಿದ ನಾನೇ ಹೇಡಿಯಾದರೆ.. ಇಲ್ಲ, ಮುಂದಿನ ದಾರಿ ನಿಚ್ಚಳವಾಗಿತ್ತು. ಬಂಧನದಿಂದ ಹೊರ ಬಂದು ಓದಿದೆ. ಈಗ ಮನಃಶಾಸ್ತ್ರಜ್ಞೆಯಾಗಿದ್ದೇನೆ. ಎಲ್ಲರಿಗೂ ಮುಂದಿನ ಹಾದಿಗೆ ಬೆಳಕು ಬೀರಲು..

ಮುಂದಿನ ಹಾದಿಗೆ ಬೆಳಕು ಬೀರಲು ದೀಪ ತನ್ನನ್ನೇ ಸುಟ್ಟುಕೊಳ್ಳುವ ಕುರಿತು ನನಗೆ ಬೇಸರವಿಲ್ಲ.. ಬದಲಿಗೆ ಸಮರ್ಪಣೆಯ ಸಂತಸವಿದೆ. 

~ವಿಭಾ ವಿಶ್ವನಾಥ್

ಪಾತರದವಳು (ಬೆಳಕಿಂಡಿಯ ಕತೆಗಳು - 74)

 


ಬದುಕಲ್ಲಿ ಬಣ್ಣ ಹಚ್ಚದೆ ಬಣ್ಣ-ಬಣ್ಣದ ನಾಟಕ ಮಾಡಿ ಹಣ ಸಂಪಾದಿಸುವ ಬದಲು ದುಡಿದು ತಿನ್ನುವ ಇರಾದೆಯಲ್ಲಿ ತನ್ನ ಕಾಲ ಮೇಲೆ ತಾನು ನಿಲ್ಲುವ ಆಸೆಯಿಂದ ಪಾತರದವಳಾಗಿ ಬಣ್ಣ ಹಚ್ಚಿ ನಿಂತಳು.

ಲೋಕದ ಕಟು ನುಡಿಗೆ ಕೆಂದದೇ, ತನ್ನ ಆತ್ಮಾಭಿಮಾನವನ್ನು ಮಾಡಿಕೊಳ್ಳದೇ ತನ್ನ ಹೊಟ್ಟೆ ಹೊರೆದುಕೊಂಡು, ಕುಟುಂಬವನ್ನೂ ಸಾಕಿ ಸ್ವಾಭಿಮಾನದಿಂದ ಬೆಳೆದು ನಿಂತಳು. ಈಗ ಅವಳು ಬರೀ 'ಪಾತರದವಳಲ್ಲ' ಬದಲಾಗಿ 'ಅಭಿನೇತ್ರಿ'.

~ವಿಭಾ ವಿಶ್ವನಾಥ್

ಮುಂದಿನ ನಿಲ್ದಾಣ (ಬೆಳಕಿಂಡಿಯ ಕತೆಗಳು - 73)


ಈ ನಿಲ್ದಾಣದಲ್ಲಿ ಬಾಗಿಲು ಎಡಕ್ಕೆ ತೆರೆಯುತ್ತದೆ ಎಂದೋ ಬಲಕ್ಕೆ ತೆರೆಯುತ್ತದೆ ಎಂದೋ ಪ್ರಯಾಣಿಕರಿಗೆ ತಿಳಿಯುವಂತೆ ಹೇಳುತ್ತಾ ಇರುವ ಮೆಟ್ರೋ ಮುಂದಿನ ನಿಲ್ದಾಣವನ್ನೂ ತಿಳಿಸುತ್ತಿತ್ತು. ಇನ್ನೇನು ಆರು ನಿಮಿಷದಲ್ಲಿ ನಾನು ಇಳಿಯುವ ನಿಲ್ದಾಣ ಬರುತ್ತದೆನ್ನುವಷ್ಟರಲ್ಲೇ ಆ ಬೋಗಿಗೇ ಹತ್ತಿದ್ದಳು ಅವಳು. ಒಂದು ಚೂರೂ ಬದಲಾಗಿಲ್ಲದ ಅವಳು.. ಅದೇ ಕಪ್ಪು ಕಂಗಳಿಗೆ ಕನ್ನಡಕ, ಅದೇ ಕಾಟನ್ ಸೀರೆ, ಅದೇ ಸರಳತೆ. ಥೇಟ್ ಆಗಿನಂತೆಯೇ.. ಬಂದವಳೇ ಕೈಯಲ್ಲಿ ಒಂದು ಪುಸ್ತಕ ಹಿಡಿದು ಕುಳಿತವಳೇ ಅದರೊಳಗೆ ಕಣ್ಣು ಕೀಲಿಸಿ ಇಹವನ್ನೇ ಮರೆತುಬಿಟ್ಟಳು. ನನ್ನನ್ನು ಮರೆತಂತೆ.. ನಾನು ಇಳಿಯುವ ನಿಲ್ದಾಣ ಬರುವಷ್ಟರಲ್ಲಿ ಅವಳನ್ನೊಮ್ಮೆ ಮಾತನಾಡಿಸೋಣ ಎಂದುಕೊಂಡರೆ ಕಾಲೇ ಬರುತ್ತಿಲ್ಲ. ಹಾಗೆಯೇ.. ಮಾತು..!


ಆ ನಿಲ್ದಾಣದಲ್ಲಿ ಅವಳೇ ಮೊದಲು ಇಳಿದಳು. ಜನಜಂಗುಳಿಯೊಳಗೆ ಕಳೆದು ಹೋದದ್ದು ನಾನೋ ಅವಳೋ ತಿಳಿಯಲಿಲ್ಲ. ತೆರೆದ ಮೆಟ್ರೋ ಬಾಗಿಲಿನ ಒಳಗೆ ಮುಂದಿನ ನಿಲ್ದಾಣಕ್ಕಾಗಿ ಕಾಯುತ್ತಿದ್ದವರು ಕಾಣುತ್ತಿದ್ದರು. ಯಾರ ಪಯಣ ಎಲ್ಲಿಗೋ.. ಎಂತೋ.. ಹೇಗೋ.. ನಮ್ಮ ನಮ್ಮ ನಿಲ್ದಾಣವೇ ನಿರ್ಧರಿಸಬೇಕಷ್ಟೇ..


~ವಿಭಾ ವಿಶ್ವನಾಥ್

ಲಕ್ಷ್ಮೀ ಕಟಾಕ್ಷ (ಬೆಳಕಿಂಡಿಯ ಕತೆಗಳು - 72)


ಹಾಗೆಲ್ಲಾ ಸುಮ್ಮನೆ ಲಕ್ಷ್ಮಿ ಒಲಿಯುವುದಿಲ್ಲ. ಸರಸ್ವತಿಯ ದಯೆಯಿಂದ ಲೆಕ್ಕ ಒಲಿದಾಗ, ಹಸಿವಿನ ದಾರಿದ್ರ್ಯ ನಿವಾರಿಸುವ ಅನ್ನಪೂರ್ಣೆಯ ದಯೆಯಿಂದ ಹಸಿದವರಿಗೆ ಎರಡು ತುತ್ತು ಅನ್ನ ಹಾಕುವ ಮನಸ್ಸಿದ್ದಾಗ, ಕಷ್ಟದಲ್ಲಿರುವವರೇ ದೇವರೆಂದು ತಿಳಿದು ಮಾನವೀಯತೆಯಿಂದ ಕೈಲಾದಷ್ಟು ಸಹಾಯಕ್ಕೆ ನಿಲ್ಲುವಾಗ ಲಕ್ಷ್ಮೀ ಕಟಾಕ್ಷ ತಾನಾಗಿಯೇ ಬರುತ್ತದೆ. 

ಅಂಗಡಿಯಲ್ಲಿ ಕೇವಲ ಹಣ ಸಂಪಾದನೆಯ ಗುರಿಯ ಬದಲಾಗಿ.. ಮನುಷ್ಯತ್ವ, ದಯೆ, ಬುದ್ಧಿವಂತಿಕೆ ರೂಢಿಸಿಕೊಂಡ. ಅಪ್ಪನ ಮಾತು ಹುಸಿಯಾಗಲಿಲ್ಲ.

~ವಿಭಾ ವಿಶ್ವನಾಥ್

ವರಮಹಾಲಕ್ಷ್ಮಿ ವರವ ಕೊಡಮ್ಮ


ತಾಯಿ ವರಮಹಾಲಕ್ಷ್ಮಿ ವರವ ಕೊಡಮ್ಮ 

ಸದಾ ಭಕ್ತಿಯು ನೆಲೆಸಿರಲೆಂದು ಬೇಡುವೆನಮ್ಮ


ನಕಾರಾತ್ಮಕ ಯೋಚನೆಗಳು ಬರದಿರಲಮ್ಮ

ಕೆಡುಕನು ನೀನು ದೂರವಿಡಮ್ಮ

ಮನೆಯಲಿ ಶಾಂತಿಯು ನೆಲೆಸಿರಲಮ್ಮ 

ಕಷ್ಟ ಕಳೆಯುವ ಶಕ್ತಿ ನನಗಿರಲಮ್ಮ


ಚಿತ್ತದಿ ಅನುಮಾನದ ಹುತ್ತ ಬೆಳೆಯದಿರಲಮ್ಮ

ಚಿಂತೆಯ ರಾಶಿ ಸುಟ್ಟು ಬಿಡಮ್ಮ

ಭವಸಾಗರ ದಾಟಲು ಧೈರ್ಯ ಕೊಡಮ್ಮ

ಎಲ್ಲರ ರಕ್ಷಿಸೋ ತಾಯಿಯಾಗಿ ಪೊರೆಯಮ್ಮ


ಬಾಂಧವ್ಯಗಳ ಗಟ್ಟಿಯಾಗಿ ರಕ್ಷಿಸಮ್ಮ

ಬರುವ ದಿನಗಳು ನೆಮ್ಮದಿ ತರಲಮ್ಮ

ನಿನ್ನ ಕೃಪಾಕಟಾಕ್ಷ ನಮ್ಮೆಲ್ಲರ ಮೇಲಿರಲಮ್ಮ

ಜಗನ್ಮಾತೆ ನಿನ್ನ ಬಿಡದೆ ಆರಾಧಿಸುವೆನಮ್ಮ 


~ವಿಭಾ ವಿಶ್ವನಾಥ್

ಜೊತೆಗಾರ (ಪುಸ್ತಕ ಯಾನ - 483)


ಪುಸ್ತಕದ ಶೀರ್ಷಿಕೆ : ಜೊತೆಗಾರ

ಲೇಖಕರು : ಜಯಶ್ರೀ ಇಡ್ಕಿದು

ಪ್ರಕಾಶಕರು : ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ

ಪ್ರಥಮ ಮುದ್ರಣ : ಜನವರಿ 2012

ಪುಟಗಳು : 32

ಬೆಲೆ : 15 ರೂ.


ಜಯಶ್ರೀ ಇಡ್ಕಿದು ಅವರು ಹತ್ತನೇ ತರಗತಿಯಲ್ಲಿರುವಾಗಲೇ ಪ್ರಕಟಿಸಿರುವ ಕವನ ಸಂಕಲನ ಇದು. 2012ರಲ್ಲಿ ಪ್ರಕಟವಾಗಿದೆ. ಸಾಮಾನ್ಯವಾಗಿ ಆ ವಯಸ್ಸಿನಲ್ಲಿ ಕವಿತೆಗಳನ್ನು ಪ್ರಕಟಿಸಬೇಕಿದ್ದರೆ ಪ್ರಬುದ್ಧ ಆಲೋಚನೆಗಳು ಜೊತೆಗೆ ಕವಿ ಮನಸ್ಸು, ವಿಭಿನ್ನ ಆಲೋಚನಾ ಶೈಲಿ ಇರಬೇಕು. ಇಲ್ಲಿ ನಾವು ಅದನ್ನು ಸ್ಪಷ್ಟವಾಗಿ ಕಾಣಬಹುದು. ಇವು ರಾಗ ಹಾಕಿ ಹಾಡಬಹುದಾದ ಕವಿತೆಗಳು ಹೌದು 


ಇವರ ತಂದೆ ಜನಾರ್ಧನ ಕುಲಾಲ್ ಹಾಗೂ ತಾಯಿ ಲಲಿತಾರವರು. 10ನೇ ತರಗತಿಯಲ್ಲಿರುವಾಗ ಈ ಪುಸ್ತಕ ಪ್ರಕಟವಾದರೂ.. ಐದಾರು ವರ್ಷಗಳಿಂದಲೂ ಬರೆಯುತ್ತಿದ್ದವರು. ಎಂಟನೇ ತರಗತಿಯಲ್ಲಿದ್ದಾಗ ಬಂಟ್ವಾಳದ ಐದನೇ ಮಕ್ಕಳ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದಾಗ ಸಿಕ್ಕ ಪ್ರೋತ್ಸಾಹ ಇವರ ಸಾಹಿತ್ಯ ಹಾದಿಯಲ್ಲಿ ಪ್ರಮುಖ ಹೆಜ್ಜೆ. 

ಭಾಷಣ ಇವರಿಗೆ ಇಷ್ಟವಾದ ವಿಚಾರ. ಭಾಷಣ ಮಾಡುವಾಗಲೆಲ್ಲ ಇವರದ್ದೇ ದಾಟಿಯಲ್ಲಿ ಬರೆಯಲು ತೊಡಗಿದ್ದರಂತೆ. ಅದನ್ನು ಮಾತಿನ ಮೂಲಕ ಅಭಿವ್ಯಕ್ತಗೊಳಿಸುವಾಗ ಇರುತ್ತಿದ್ದ ವಿಭಿನ್ನ ಶೈಲಿಯೇ ಬಹುಮಾನಗಳನ್ನು ತಂದುಕೊಟ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿದ ಬಗೆಯನ್ನು ನೆನಪಿಸಿಕೊಂಡಿದ್ದಾರೆ.


ಈ ಕವನ ಸಂಕಲನದಲ್ಲಿ 18 ಚಂದದ ಕವನಗಳಿವೆ 


ತಾಯಿಯನ್ನು ಹಲವಾರು ರೂಪಗಳಲ್ಲಿ 'ತಾಯಿ' ಕವನದಲ್ಲಿ ನೆನೆಯುತ್ತಾರೆ. ಒಂದೆರಡು ಸಾಲನ್ನು ನೋಡುವುದಾದರೆ..

ಕಂದನ ಸೋಲಲಿ ಒಬ್ಬಳಾದಳು 

ಗೆಲುವು ಬರಲು ದೂರದಿ ನಗುವಳು 

ಸೋಲು ಗೆಲುವಲು ಜೊತೆಯಾಗಿರುವಳು

ಅವಳು ಧೈರ್ಯ ನೀಡಿದ ತಾಯಿ 

ಆಕೆ ಸ್ನೇಹಮಯಿ 


ಒಲವಿನ ಜೀವ ಕವಿತೆಯನ್ನು ಶುರು ಮಾಡುವಾಗ ಒಲವಿನ ಜೀವ ಯಾವುದಿರಬಹುದು ಎಂದು ಆಸಕ್ತಿಯಿಂದಲೇ ಓದುತ್ತಾ ಹೋದೆ. ಇಲ್ಲಿ ಅಪ್ಪನನ್ನು ಚೆಂದವಾಗಿ ಚಿತ್ರಿಸಿದ್ದಾರೆ. 

ದೂರ ಮಾಡಿದಿರಿ ನನ್ನ 

ಮನದ ನೂರು ಭಯ 

ಅಂದಿನಿಂದಲೇ ಅಪ್ಪ 

ನೀವೇ ನನ್ನ ನೆಚ್ಚಿನ ಗೆಳೆಯ 


ಮಳೆಗಾಲದ ಒಂದು ದಿನ ಎಂಬ ಕವಿತೆಯಲ್ಲಿ ಮಳೆಯ ರಭಸ, ಮಳೆ ಬಂದಾಗ ಸಿಗುವ ಹರುಷ, ರೈತನ ಬದುಕನ್ನು ಸ್ಮರಣೀಯವಾಗಿಸುತ್ತಾರೆ.

ಮಳೆರಾಯ ನೀನೊಮ್ಮೆ ಸುರಿದು ಹೋಗು 

ಮತ್ತೆ ಬರುವಾಗ ಶಾಂತನಾಗು 

ರೈತರದೆಯಲ್ಲಿ ತಾ ಹರುಷ

ನೋವು ಬೇಡ ಸಾವಿರ ವರುಷ 

ಈ ಅರ್ಥಪೂರ್ಣ ಸಾಲುಗಳಲ್ಲಿ ಮಳೆರಾಯ ವಿದ್ವಾಂಸಕನಾಗಿ ಬರದೆ, ರೈತರಿಗೆ ಹರುಷ ತರುವಂತೆ ಶಾಂತನಾಗಿ ಬಾ ಎನ್ನುತ್ತಾ ಹೇಳುವ ಮಾತು ನನಗೆ ಬಹಳ ಇಷ್ಟವಾಯಿತು. 


'ಎಲ್ಲವೂ ಅವನದೇ'ಎನ್ನುವ ಕವಿತೆಯಲ್ಲಿ ಸಮಾಜದ ಹಾಗೂ ಹಲವಾರು ಸಾಮಾಜಿಕ ಅಂಶಗಳ ಜೊತೆ ಜೊತೆಗೆ ಆಧ್ಯಾತ್ಮದ ಶೈಲಿಯ ಆಲೋಚನೆಯ ಕವಿತೆಯಾಗಿ ಅರ್ಥೈಸಿಕೊಂಡೆ. 

ಕನ್ನಡಿಯೆದುರು ನಿಂತರೆ 

ಬಿಂಬವೊಂದು ಮೂಡುವುದು

ಆ ಬಿಂಬ ನನ್ನದು

ಆದರೆ ಆ ಬಿಂಬವೇ ನಾನಲ್ಲ


ಹೀಗೆ ಶುರುವಾಗುವ ಕವಿತೆಯಲ್ಲಿ ಈ ಸಾಲುಗಳನ್ನೂ ಕಾಣಬಹುದು.


ನಾ ಮಾತನಾಡಿದೆ

ಕೇಳುವವರು ಸಿಕ್ಕಿದರು

ಅದು ಮಾತು ಹೌದು

ಆದರೆ ಆ ಮಾತು ನನ್ನದಲ್ಲ

ಯಾವುದು ನನ್ನದು, ಯಾವುದು ನನ್ನದಲ್ಲ ಎನ್ನುತ್ತಲೇ.. ಯಾವುದೂ ನನ್ನದಲ್ಲ.. ಅವನ ಚಿತ್ತ, ಅವನಾಡಿಸಿದಂತೆ ಎಂದು ದೇವರ ಆಟವನ್ನು ಹಾಗೂ ನಮ್ಮ ನಿಮಿತ್ತವನ್ನು ಸೊಗಸಾಗಿ ತೋರುತ್ತಾರೆ.


ಈ ಪುಸ್ತಕದ ಶೀರ್ಷಿಕೆಯೂ ಆಗಿರುವ ಕವಿತೆ 'ಜೊತೆಗಾರ' ಯಾರೆಂಬುದನ್ನು ಚಂದವಾಗಿ ಹೇಳುತ್ತದೆ. ಈ ಕವನ ಸಂಕಲನದ ಮುಖಪುಟದ ಚಿತ್ರವೂ ಸಹ ಸೂಕ್ಷವಾಗಿ ಅದನ್ನೇ ತೋರುತ್ತದೆ. ಸಾಮಾನ್ಯವಾಗಿ ಜೊತೆಗಾರ ಎಂದಾಕ್ಷಣ ಸ್ನೇಹಿತನನ್ನೋ ಅಥವಾ ಒಲವಿನ ಇನಿಯನ ನ್ನೋ ನಾವಿಲ್ಲಿ ನೆನೆಯುವಂತಿಲ್ಲ. ಇಲ್ಲಿನ ಜೊತೆಗಾರನೇ ಬೇರೆ. ಈ ವಿಭಿನ್ನ ಜೊತೆಗಾರ ಯಾರೆಂಬುದನ್ನು ಊಹಿಸಬಲ್ಲಿರಾ..?


ಹೀಗೆ ಶೀರ್ಷಿಕೆ ಗುಟ್ಟು ಬಿಟ್ಟುಕೊಡದಂತೆ ಕವಿತೆ ಬೇರೊಬ್ಬರನ್ನೇ ಪರಿಚಯಿಸುವ ಮತ್ತೊಂದು ಕವಿತೆ "ಕ್ಷಮಿಸಲಾರೆಯಾ ನನ್ನ ಓ ಜೀವ". ಮನೆಯ ನಿಯತ್ತಿನ ಜೀವವೊಂದನ್ನು ನೆನಪಿಸಿಕೊಂಡಿರುವ ಪರಿ ಚೆನ್ನಾಗಿದೆ.


ಲೋಕದ ನೋವುಗಳ ತೊಡೆಯುವಲ್ಲಿ

ಒಬ್ಬರಾಗಿ ಬಾಳೋಣ ಪ್ರೀತಿ ಸ್ನೇಹದಲ್ಲಿ

ಲೋಕದ ನಗುವೊಳು ನಗುತಿರೆಂದು ಖುಷಿಯಲ್ಲಿ

ಎನ್ನುತ್ತಾ ಮನುಷ್ಯ ಬದುಕಬೇಕಾದ ರೀತಿ ಹಾಗೂ ಎಲ್ಲರೊಳಗೊಂದಾಗುವ ಬಗೆಯನ್ನು 'ಅನಾಥರಲ್ಲ ಯಾರೂ ಇಲ್ಲಿ' ಎಂಬ ಕವಿತೆಯಲ್ಲಿ ಹೇಳುತ್ತಾರೆ.


ಇಂತಹ ಹಲವಾರು ಸೊಗಸಾದ ಸಾಲುಗಳ ಇನ್ನಷ್ಟು ಕವಿತೆಗಳು ಇಲ್ಲಿವೆ. ಪರಿಸರ ಪ್ರೇಮ, ದೇವರನ್ನು ನೆನಪಿಸಿಕೊಳ್ಳುವ, ಭಗವಂತನಿಗೆ ವಂದಿಸುವ, ಕಿರಿಮೆಯನ್ನು ಸಾರುವ ಪರಿ ಕಾಣುತ್ತದೆ. ತಂದೆ-ತಾಯಿಯ ಮೇಲಿನ ಅಕ್ಕರೆ, ಗೆಳತಿ ಹಾಗೂ ಜೊತೆಗಾರರು, ಸುತ್ತಮುತ್ತಲಿನ ಪರಿಸರದ ಚಿತ್ರಣಗಳ ಜೊತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪರಿ ಇಲ್ಲಿದೆ. 


ನಿಜಕ್ಕೂ ನನಗೆ ಈ ಕವನಗಳ ಓದು ಅಚ್ಚರಿ ಹಾಗೂ ಆಪ್ತತೆಯನ್ನು ಕಟ್ಟಿಕೊಟ್ಟವು.

~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 16, 2026

ಆಕೆ ಹೇಳಿದ್ದು ಒಂದೇ ಸುಳ್ಳು

 


"ಯಾವಾಗಲೂ ನನ್ನ ಮಗಳು ಸತ್ಯವನ್ನೇ ಹೇಳುತ್ತಾಳೆ ಅಂತಾ ಅಂದುಕೊಂಡಿದ್ದೆನಲ್ಲಮ್ಮ. ಈಗ ಏನು ಆಗಿ ಹೋಗಿದೆ ನೋಡು. ಯಾವಾಗಲೂ ನಿಜ ಹೇಳುತ್ತಾ ಇದ್ದವಳು ಇದೊಂದು ಸುಳ್ಳನ್ನು ಯಾಕೆ ಹೇಳಿದೆಯಮ್ಮಾ.. ಮಾತಾಡು ತಾಯಿ ಮಾತಾಡು..." ಎನ್ನುತ್ತಾ ಸರಸ್ವತಿಯ ಅಪ್ಪ ಮಾತನಾಡಿಸುತ್ತಿದ್ದರೆ ಮಾತನಾಡದೆ ಮಲಗಿದ್ದಳು ಮಗಳು.


"ಯಾವಾಗಲೂ ಕೇಳುತ್ತಾ ಇದ್ದೆಯಲ್ಲಮ್ಮ.. ಅಪ್ಪ, ಸುಳ್ಳು ಹೇಳಿದ್ರೆ ಪಾಪ ಬರುತ್ತೆ. ಆದರೆ, ಒಳ್ಳೆಯದಕ್ಕಾಗಿ ಮತ್ತೆ ಇನ್ನೊಬ್ಬರ ಸಂತೋಷಕ್ಕಾಗಿ ನಿಜ ಹೇಳಿದರೆ ಆ ಪಾಪ ಪುಣ್ಯದ ಲೆಕ್ಕದಲ್ಲಿ ತೊಳೆದು ಹೋಗುತ್ತಂತೆ. ಹೌದಾ..?? ಅಂತಾ


ನಾನು ಹೌದು ಅನ್ನಬಾರದಿತ್ತು. ಬಹುಶಃ, ನಾನವತ್ತು ಸುಳ್ಳು ಹೇಳಿದ ಪಾಪ ಪಾಪವೇ.. ಅಂತಾ ಅಂದಿದ್ದರೆ ನೀನು ಸುಳ್ಳು ಹೇಳುವ ಧೈರ್ಯ ಮಾಡುತ್ತಾ ಇರಲಿಲ್ಲ ಅನ್ನಿಸುತ್ತೇನೋ ಅಲ್ಲವಾ ಸರಸು. ನಾನೇ ನಿನಗೆ ಸುಳ್ಳು ಹೇಳುವಂತೆ ಪರೋಕ್ಷವಾಗಿ ಪ್ರೋತ್ಸಾಹ ನೀಡಿಬಿಟ್ಟೆ ಅನ್ನಿಸುತ್ತೆ. ಅಲ್ವಾ.. ಈ ಪಾಪಿ ಅಪ್ಪನಿಗಾಗಿ, ಇಂದೋ ನಾಳೆಯೋ ಬಿದ್ದು ಹೋಗುವ ಮರಕ್ಕಾಗಿ ಯಾಕಮ್ಮಾ ನಿನ್ನ ಜೀವನವನ್ನು ನೀನು ಕೈಯ್ಯಾರೆ ಹಾಳು ಮಾಡಿಕೊಂಡೆ ? ಹೇಳು ಸರಸು ಹೇಳು.." ಎನ್ನುತ್ತಿದ್ದರೆ ಅಲ್ಲಿದ್ದ ಎಂಥಹವರಿಗಾದರೂ ಕರುಳು ಕಿತ್ತು ಬರುತ್ತಿತ್ತು.


"ನೀನು ಸುಳ್ಳು ಹೇಳಿದ್ದಿಯ.. ನೀನು ನನಗೆ ಮುಖ ತೋರಿಸಬೇಡ. ಇಲ್ಲಿಂದ ಎದ್ದು ಎಲ್ಲಿಗಾದರೂ ಹೋಗು.. ಹೋಗು.. ಬೇಡ ಬಿಡು.. ನಾನೇ ಹೋಗ್ತೀನಿ." ಎಂದು ಹುಚ್ಚು ಹಿಡಿದವನಂತೆ ಮಾತನಾಡುತ್ತಿದ್ದ ಪಾಪಯ್ಯ.


ಪಾಪಯ್ಯನ ಹೆಂಡತಿ ಸರಸ್ವತಿ ಜನ್ಮ ನೀಡಿ ತೀರಿ ಹೋಗಿದ್ದಳು. ಅದಾದ ನಂತರ ಪಾಪಯ್ಯನಿಗೆ ಸರಸ್ವತಿ.. ಸರಸ್ವತಿಗೆ ಪಾಪಯ್ಯ. ಇಷ್ಟೇ ಅವರ ಲೋಕ. ಮಗಳಿಗೆ ಕಷ್ಟವಾಗಬಾರದೆಂದು ಅವಳಿಗೆ ಮಲತಾಯಿಯನ್ನು ತಾರದೆ ತಾನೇ ತಂದೆ - ತಾಯಿ ಎರಡೂ ಆಗಿ ಅವಳನ್ನು ಸಾಕುತ್ತಿದ್ದ. ಸರಸ್ವತಿಗೂ ಅಷ್ಟೇ ಅಪ್ಪನೆಂದರೆ ಎಲ್ಲಿಲ್ಲದ ಮಮತೆ. ಅಪ್ಪನೆಂದರೆ ಸಾಕು ಜೀವ ಬಿಡಲೂ ಸಿದ್ದವಿದ್ದಳು. ಹೀಗಿದ್ದ ಇಬ್ಬರ ಬಾಂಧವ್ಯ ಇಡೀ ಹಳ್ಳಿಯೇ ಕೊಂಡಾಡುವಂತಿತ್ತು.


ಎಲ್ಲಾ ಮನೆಯ ಹೆಣ್ಣು ಮಕ್ಕಳೂ ತವರಿನಿಂದ ದೂರವಾಗುವ ಸಂಧರ್ಭ ಇರುವ ಹಾಗೆ ಸರಸ್ವತಿಗೂ ಆಗಿತ್ತು. ಪಾಪಯ್ಯನೇ ಮಗಳಿಗೆ ಒದಗಿ ಬಂದ ಪಟ್ಟಣದ ಗಂಡು ಒಪ್ಪಿದ್ದ. ಒಬ್ಬನೇ ಮಗ.. ಓದಿದ್ದ, ಒಳ್ಳೆಯ ಕೆಲಸದಲ್ಲಿದ್ದ. ಪಾಪಯ್ಯ ಹಿಂದೆ ಮುಂದೆ ನೋಡದೆ ಒಪ್ಪಿ ಮಗಳನ್ನು ಕೊಟ್ಟಿದ್ದ. ಸರಸ್ವತಿಯ ರೂಪ ಹಾಗೂ ಗುಣ ನೋಡಿದ್ದ ಅವರೂ ನಿರಾಕರಿಸಲಿಲ್ಲ.


ಮನಸ್ಸಿಲ್ಲದ ಮನಸ್ಸಲ್ಲಿ ಸರಸ್ವತಿ ಮದುವೆಯಾಗಿ ಹೊರಟಳು. ಆನಂತರ ತಿಳಿದು ಬಂದಿತ್ತು ಅವರ ಯೋಗ್ಯತೆ. ಮನೆಯಲ್ಲಿ ಅವಳು ಕೆಲಸದ ಆಳಿಗಿಂತಲೂ ಕಡೆ. ಕೂರಲು, ನಿಲ್ಲಲು ಮನೆಯಲ್ಲಿ ಮತ್ತೊಬ್ಬರ ಅನುಮತಿ ಪಡೆಯಬೇಕಿತ್ತು. ಗಂಡನೋ ಅನುಮಾನದ ಪಿಶಾಚಿ.


ಅಪ್ಪನ ಕರೆ ಬಂದಾಗಲೆಲ್ಲಾ ಸರಸ್ವತಿ "ನಾನಿಲ್ಲಿ ಸುಖವಾಗಿದ್ದೇನೆ ಅಪ್ಪ. "

"ಹೋ.. ಇಲ್ಲಿ ಇವರೆಲ್ಲಾ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ" ಎಂದು ಹೇಳುತ್ತಿದ್ದಳು.


ಪತ್ರದಲ್ಲಿಯೂ "ನಾನಿಲ್ಲಿ ಕ್ಷೇಮ. ನೀವು.. " ಅಷ್ಟೇ..


ಅಪ್ಪನ ಮನಸ್ಸಿಗೆ ನೋವಾಗಬಾರದೆಂದು ಒಂದೇ ಸುಳ್ಳನ್ನು ವಿಧವಿಧವಾಗಿ ಆಗಾಗ ಹೇಳುತ್ತಿದ್ದಳು.


ಹಳ್ಳಿಯವರಾರೋ ಒಂದೆರಡು ಬಾರಿ ಸರಸ್ವತಿಯ ನಿಜ ಬದುಕನ್ನು ನೋಡಿ ಪಾಪಯ್ಯನಿಗೆ ಹೇಳಿದಾಗ ಅವನು ನಂಬಿರಲಿಲ್ಲ. ಅವನು ಹೋದಾಗ ಅಲ್ಲಿ ಅಂತಹದ್ದೇನೂ ಕಂಡಿರಲಿಲ್ಲ. ಸರಸ್ವತಿ ಕೂಡಾ ಅದೇ ಸುಳ್ಳನ್ನು ಚರ್ವಿತ ಚರ್ವಣದಂತೆ ಹೇಳಿದ್ದಳು. ಇಳಿದು ಹೋದ ಮಗಳನ್ನು ಕಂಡಾಗಲೂ ಅವಳು ಹೇಳಿದ್ದನ್ನು ನಂಬಿ ನನ್ನ ಮಗಳು ಯಾವತ್ತೂ ಸುಳ್ಳು ಹೇಳುವುದಿಲ್ಲ ಎಂದು ಬಂದಿದ್ದನು. ಆದರೆ.. ಮಗಳು ಮನೆಗೆ ಬಂದದ್ದು ಹೆಣವಾಗಿಯೇ.. ಬೆಂಕಿ ಹಚ್ಚಿ ಕೊಂದಿದ್ದರು. ಬಹುಶಃ , ಅರೆ ಜೀವವಾಗಿದ್ದರೂ ಆಕೆ ಅಪ್ಪನ ನೆಮ್ಮದಿಗೆ ಅದೇ ಸುಳ್ಳನ್ನೇ ಹೇಳುತ್ತಿದ್ದಳೋ ಏನೋ..


"ಅವಳು ಹೇಳಿದ್ದು ಒಂದೇ ಸುಳ್ಳು. ಸಾಯುವವರೆಗೂ ಆಕೆಯಾಡಿದ್ದು ಒಂದೇ ಸುಳ್ಳು" ಎನ್ನುತ್ತಾ ಮನೆಮನೆಗೂ ಹೋಗಿ ಹೇಳುತ್ತಾ ಸರಸ್ವತಿಯನ್ನು ನೆನೆದು ಕಣ್ಣೀರು ಹಾಕಿಕೊಂಡೇ ಹುಚ್ಚನಂತೆ ತಿರುಗುತ್ತಿದ್ದಾನೆ ಪಾಪಯ್ಯ.


~ವಿಭಾ ವಿಶ್ವನಾಥ್


ಶನಿವಾರ, ಆಗಸ್ಟ್ 15, 2026

ಕತೆ ಹೇಳುವ ಮುನ್ನ


"ಇಲ್ಲಿ ನೆರೆದಿರುವ ಎಷ್ಟು ಜನ ಕಥೆ ಕೇಳಲು ಸಿದ್ದರಾಗಿದ್ದೀರಿ..?" ಎಂಬ ಶಾರ್ವರಿಯ ಮಾತಿಗೆ ಸಭಾಂಗಣದಲ್ಲಿದ್ದ ಎಲ್ಲರೂ ಕೈ ಎತ್ತಿದ್ದರು. ಆದರೆ, ಒಬ್ಬನ ಹೊರತಾಗಿ. "ನೀವಿನ್ನೂ ಕತೆ ಕೇಳಲು ಸಿದ್ಧವಾಗಿಲ್ಲವಾ.. ಅಥವಾ ಕತೆ ಆಸಕ್ತಿಯೇ ಇಲ್ಲದೆ ಸುಮ್ಮನೆ ಟೈಮ್ ಪಾಸ್ ಗೆ ಎಂದು ಬಂದಿದ್ದೀರಾ..??" ಎಂದು ಆಕೆ ಪ್ರಶ್ನಿಸಿದಾಗ ಎಲ್ಲರೂ ಯಾರಿಗೆ ಎಂದು ಸುತ್ತ ಮುತ್ತ ಹುಡುಕುತ್ತಿದ್ದರು.

"ರೀ, ಮಿಸ್ಟರ್ ನಿಮ್ಮನ್ನೇ.. ಕೈ ಎತ್ತದ ನಿಮ್ಮನ್ನೇ ನಾನು ಕೇಳುತ್ತಾ ಇರುವುದು" ಎಂದಾಗ ಪ್ರದ್ಯುಮ್ನ ಎದ್ದು ನಿಂತು ಖ್ಯಾತ ಕಥೆಗಾರ್ತಿ ಶಾರ್ವರಿಗೆ ಕೇಳಿದ ಮೊದಲ ಪ್ರಶ್ನೆ "ನಾನ್ಯಾಕೆ ನಿಮ್ಮ ಕಥೆ ಕೇಳಬೇಕು ? ಅಷ್ಟಕ್ಕೂ ಕಥೆ ಕೇಳಲು ಆಸಕ್ತಿ ಇದೆಯಾ ಎಂದು ಪ್ರಶ್ನಿಸುವ ಬದಲಾಗಿ, ಕಥೆ ಹೇಳುತ್ತಾ ಕೇಳುಗರಲ್ಲಿ ಆಸಕ್ತಿ ಹುಟ್ಟಿಸಬೇಕೇ ಹೊರತು ಆಸಕ್ತಿ ಇರುವವರಿಗೆ ಮಾತ್ರ ಕತೆ ಹೇಳುವುದಲ್ಲ.. ಹಾಗಾದಲ್ಲಿ ನೀವು ಹೇಳುವ ಕತೆ ಎಷ್ಟು ಜನರಿಗೆ ತಲುಪಲು ಸಾಧ್ಯ..?" ಎಂದು ಪ್ರಶ್ನೆಯ ಸರಮಾಲೆಯನ್ನೇ ಶಾರ್ವರಿಯ ಎದುರಿಗಿಟ್ಟನು. ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ಆತನ ತಾಯಿ ಆತನ ಕೈ ಜಗ್ಗಿಸಿ ನಿಲ್ಲಿಸು.. ನಿಲ್ಲಿಸು ಎಂಬಂತೆ ಸನ್ನೆ ಮಾಡುತ್ತಿದ್ದರೂ ಆತ ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ತನ್ನ ಪ್ರಶ್ನೆಗಳನ್ನೇ ಮುಂದುವರಿಸುತ್ತಿದ್ದುದನ್ನು ಕಂಡು ಕೊನೆಗೆ ಅವರೇ ಎದ್ದು ನಿಂತು ಆತನನ್ನು ತಡೆದರು.

"ಸ್ಸಾರಿ, ಅವನು ಸ್ವಲ್ಪ ಹೀಗೆಯೇ.. ಎಲ್ಲಿ ಹೋದರೂ ಹೀಗೆಯೇ ಅಧಿಕ ಪ್ರಸಂಗ ಮಾಡಿ ನನ್ನನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತಾನೆ. ನಾನು ನಿಮ್ಮ ದೊಡ್ಡ ಅಭಿಮಾನಿ. ನಿಮ್ಮ 100 ನೇ ಪುಸ್ತಕದ ಬಿಡುಗಡೆಗೆ ನಿಮ್ಮನ್ನು ನೋಡಿ ಮಾತನಾಡಿಸಲು ಬಹಳ ಕಾತುರಳಾಗಿದ್ದೆ. ಒಬ್ಬಳನ್ನೇ ಕಳುಹಿಸಲು ಇಷ್ಟ ಪಡದ ಅವನೂ ನನ್ನೊಡನೆ ಬಂದಿದ್ದಾನೆ. ಅವನಿಗೆ ಕತೆಗಳೆಂದರೆ ಅಷ್ಟಕ್ಕಷ್ಟೇ.. " ಎಂದು ಅವನಮ್ಮ ಹೇಳಿದಾಗ ಶಾರ್ವರಿಯವರು ನಗುತ್ತಾ "ತೊಂದರೆಯಿಲ್ಲ.. ನನ್ನ ಬದುಕಿನ ಅನುಭವದಷ್ಟು ಅವನಿಗೆ ವಯಸ್ಸಾಗಿಲ್ಲ. ಆದರೆ, ಹಾಗೆಂದು ಅವನ ಪ್ರಶ್ನೆಯನ್ನು ಸುಮ್ಮನೆ ನಿರಾಕರಿಸಲು ಅಥವಾ ಪಕ್ಕಕ್ಕಿಡಲು ಸಾಧ್ಯವಿಲ್ಲ. ಅವನ ಮಾತಿನಲ್ಲಿ ತಪ್ಪು ಕಾಣುತ್ತಿಲ್ಲ. ಬದಲಾಗಿ ಅವನ ಕುತೂಹಲ ಕಾಣುತ್ತಿದೆ. ಅದಕ್ಕೆ ಉತ್ತರಿಸುವೆ" ಎನ್ನುತ್ತಾ ತಮ್ಮ ಆಲೋಚನೆ ಹಾಗೂ ವಯಸ್ಸಿನ ಪ್ರಬುದ್ಧತೆಯನ್ನು ತಮ್ಮ ಮಾತುಗಳ ಮೂಲಕ ತೋರಿದರು.



ಅದಾದ ನಂತರ ತಮ್ಮ ಮಾತುಗಳನ್ನು ಶುರು ಮಾಡಿದರು. " ಕತೆ ಬದುಕಿನಲ್ಲಿ ಯಾಕಷ್ಟು ಮುಖ್ಯವಾಗುತ್ತದೆ ಎನ್ನುವುದಕ್ಕಿಂತ ನಮಗೆ ಕತೆಗಳೆಂದರೆ ಏಕೆ ಆಸಕ್ತಿ ಗೊತ್ತೇ..??

ನಮ್ಮದೇ ಬದುಕನ್ನು ಬೇರೆಯವರ ಕನ್ನಡಕದಲ್ಲಿ ಕಂಡರೆ ಅಥವಾ ನಾವು ನಮ್ಮ ಕಣ್ಣಿನ ಮೂಲಕ ಬೇರೆಯವರ ಬದುಕನ್ನು ಕಂಡರೆ ಕೆಲವು ಬಣ್ಣ ಬಣ್ಣದ ಬದುಕುಗಳು ಕಾಣುತ್ತವೆ. ಬೇರೆಯವರ ಬದುಕುಗಳು ಕತೆಗಳಾದಾಗ ಅವು ರುಚಿಕಟ್ಟಾದ ಭೋಜನದಂತೆ ಭಾಸವಾಗುತ್ತವೆ. ದಿನಾ ಅದೇ ಅನ್ನ, ಸಾರು ತಿನ್ನುವವರಿಗೆ ಮಸಾಲೆ ದೋಸೆ ಕಂಡಾಗ ಹೇಗೆ ಮನಸ್ಸು ಅದನ್ನೇ ಬಯಸುವುದೋ.. ಹಾಗೆ ನಮ್ಮ ಬದುಕಿನಲ್ಲಿ ಇಲ್ಲದ್ದನ್ನು ಹಾಗೆಯೇ ನಾವು ಬದುಕಬೇಕು ಎನ್ನಿಸಿದ್ದನ್ನು ಕತೆಯಲ್ಲಿ ಕಂಡು ಅಲ್ಲಿ ನಮ್ಮನ್ನೇ ನಾವು ಕಲ್ಪಿಸಿಕೊಳ್ಳುತ್ತಾ ಹೋಗುತ್ತೇವೆ. ಆಗ ಕತೆಗಳು ನಮ್ಮ ಕನಸಿನ ಬದುಕಾಗುತ್ತವೆ. ವಾಸ್ತವಕ್ಕಿಂತ ಕಲ್ಪನೆಗಳು, ಕತೆಗಳು ವರ್ಣರಂಜಿತವಾಗಿ ತೋರುತ್ತವೆ. ಆಸಕ್ತಿ ಹೆಚ್ಚುತ್ತಾ ಹೋಗುತ್ತದೆ. ಕೆಲವರು ತಮ್ಮ ಕಲ್ಪನೆಗಳಿಗೆ ಗರಿ ಹಚ್ಚಿ ಕತೆಗಳನ್ನು ಕಟ್ಟುತ್ತಾ.. ಹೇಳುತ್ತಾ.. ಬರೆಯುತ್ತಾ ಹೋದರೆ, ಹಲವರು ಅವುಗಳನ್ನು ಕಂಡು, ಕೇಳಿ, ಓದಿ ಕಲ್ಪನೆಗಳನ್ನು ಗರಿಗೆದರಿಸಿಕೊಳ್ಳುತ್ತಾರೆ.

ಪ್ರತಿಯೊಬ್ಬನೊಳಗೂ ಒಂದು ಕತೆ ಇರುತ್ತದೆ. ಆ ಕತೆ ಅವರಿಂದ ಬಿಡುಗಡೆ ಪಡೆಯುವುದು ಅಥವಾ ಅವಿತು ಕುಳಿತುಕೊಳ್ಳುವುದು ಎರಡಕ್ಕೂ ಅವರವರೇ ಕಾರಣ.

ಇನ್ನು ಕತೆ ಕೇಳುವ ಆಸಕ್ತರಿಗೆ ಮಾತ್ರ ಕತೆ ಹೇಳಬೇಕು ಎಂಬುದು ನನ್ನ ಉದ್ದೇಶವಷ್ಟೇ.. ಏಕೆಂದರೆ, ಆಸಕ್ತಿ ಎಂಬುದು ಇಂದಿಗೂ ಹೊರಗಿನಿಂದ ಹುಟ್ಟುವುದಲ್ಲ. ತಮ್ಮ ಮನಸ್ಸಿನಿಂದ ಮುಡಿಸಿಕೊಳ್ಳದ ಹೊರತು ಯಾವ ಆಸಕ್ತಿಯೂ ತನ್ನಿಂದ ತಾನೇ ಉದ್ಭವಿಸಲಾರದು. ನೀನು ಕತೆ ಕೇಳಲು ಆಸಕ್ತಿ ಇಲ್ಲವೆಂದು ತೋರಿಸಿಕೊಂಡರೂ ನಿನ್ನ ಸುಪ್ತ ಮನಸ್ಸಿನಲ್ಲಿ ಕತೆ ಎಂದರೆ ಹೇಗಿರಬಹುದು.. ಕತೆ ಎಂದರೆ.. ಈ ಕತೆ ಯಾರನ್ನು ನೆನಪಿಸಬಹುದು ಎಂಬುದನ್ನು ಆಲೋಚಿಸುತ್ತಲೇ ಒಲ್ಲದ ಮನಸ್ಸಿನಿಂದ ಕತೆ ಕೇಳಲು ಆರಂಭಿಸಿರುತ್ತೀಯ. ಕತೆ ಓದುವವರಿಗೆ, ಕಥೆ ಕೇಳುವುದು ರುಚಿಸದೇ ಇರಬಹುದು. ಕತೆ ಎಂಬುದು ಎಲ್ಲೆಡೆಯೂ ಇದೆ. ಅದನ್ನು ಕಾಣುವ, ಕೇಳುವ ಮನಸ್ಸಿರಬೇಕಷ್ಟೇ..

ನನ್ನ ಕತೆಗಳು ಎಷ್ಟು ಜನರಿಗೆ ತಲುಪಬಹುದು ಎಂಬುದಕ್ಕಿಂತ ನನಗೆ ಒಂದು ಕತೆ ಒಬ್ಬರ ಮೇಲೆ ಎಷ್ಟು ಪರಿಣಾಮ ಬೀರಬಹುದು ಎಂಬುದನ್ನು ಆಲೋಚಿಸುತ್ತೇನೆ. 100 ಜನ ಕತೆ ಕೇಳಿ, 90 ಜನ ಅದನ್ನು ಮರೆತು ಮುಂದಕ್ಕೆ ಸಾಗುವುದಕ್ಕಿಂತಲೂ.. 10 ಜನ ಕತೆ ಕೇಳಿ 10 ಜನರೂ ಪರಿಣಾಮಕಾರಿಯಾಗಿ ಅದನ್ನು ಬಳಸಿಕೊಳ್ಳುವುದೋ ಅಥವಾ ಸಾರ್ಥಕವಾಗಿ ಉಪಯೋಗಿಸುವುದೋ ಮಾಡಿದಾಗ ಅದಕ್ಕೊಂದು ಸಾರ್ಥಕ ಭಾವ ಬರುತ್ತದೆ.

ಕತೆ ಹೊಡೆದಿದ್ದು ಸಾಕು ಇನ್ನು ಕತೆ ಹೇಳಿ ಎಂದು ಬಹಳ ಜನ ಬೈದುಕೊಳ್ಳುತ್ತಿರಬಹುದು. ಕತೆ ಶುರು ಮಾಡೋಣ್ವಾ..? ಎಷ್ಟು ಜನ ಕಥೆ ಕೇಳಲು ಸಿದ್ದರಾಗಿದ್ದೀರಿ..?" ಎಂದಾಗ ಎಲ್ಲರೂ ತಮ್ಮ ಕೈಯೆತ್ತಿದ್ದರು. ಪ್ರದ್ಯುಮ್ನನಂತೂ ತನ್ನ ಎರಡೂ ಕೈಗಳನ್ನು ಮೇಲೆತ್ತಿದ್ದ.

~ವಿಭಾ ವಿಶ್ವನಾಥ್

ನನ್ನ ಮೆಚ್ಚಿನ ಸಾಧಕಿ (ಬೆಳಕಿಂಡಿಯ ಕತೆಗಳು - 71)

 


ಮಹಿಳಾ ದಿನಾಚರಣೆ ಪ್ರಯುಕ್ತ 'ನಿಮ್ಮ ನೆಚ್ಚಿನ ಸಾಧಕಿ' ಯಾರು ಎಂಬ ಪ್ರಶ್ನೆಗೆ ಎಲ್ಲರೂ ಶಾಲೆಯಲ್ಲಿ ವಿವಿಧ ಹೆಸರನ್ನು ಹೇಳತೊಡಗಿದರು ಸರೋಜಿನಿ ನಾಯ್ಡು, ಮಿಶೆಲ್ ಒಬಾಮಾ, ಸೈನಾ ನೆಹ್ವಾಲ್, ಸುಧಾ ಮೂರ್ತಿ, ಹಿಮಾ ದಾಸ್ ಹೀಗೆ ಒಬ್ಬೊಬ್ಬರೂ ಒಂದೊಂದು ಹೆಸರು ಹೇಳಿದರು.


ನನ್ನನ್ನು ಕೇಳಿದಾಗ ನಾನು ಹೇಳಿದ್ದು "ನನ್ನ ಮೆಚ್ಚಿನ ಸಾಧಕಿ ಅಮ್ಮ". ತಮ್ಮ ಮೆಚ್ಚಿನ ಕ್ಷೇತ್ರದಲ್ಲಿ ಸಾಧನೆ ಮಾಡುವವರು ಸಾಧಕರು. ಆದರೆ, ಅಂತಹಾ ಸಾಧನೆ ಮಾಡಲು ಪ್ರೇರೇಪಿಸುವವಳು, ಅಂತಹಾ ಹಾದಿಯಲ್ಲಿ ಸಹಕಾರ ನೀಡಿ ಬೆನ್ನೆಲುಬಾಗುವವಳು, ತನ್ನ ಆಸೆಯನ್ನೆಲ್ಲಾ ಬದಿಗೊತ್ತಿ ತಪಸ್ಸಿನಂತೆ ಮಕ್ಕಳ ಒಳಿತಿಗಾಗಿ ಎದುರು ನೋಡುವವಳೂ ಸಾಧಕಿಯೇ.. ಮಕ್ಕಳ ಸಾಧನೆಯ ತಪಸ್ಸಿನ ಸಲುವಾಗಿ ತಾನೇ ಹವಿಸ್ಸಾಗಿ ಸಮರ್ಪಿತವಾಗುವ ಅಮ್ಮನೇ ನಿಜವಾದ ಸಾಧಕಿ. ಈಗ ತರಗತಿಯಲ್ಲಿ ಚಪ್ಪಾಳೆಯ ದನಿ ಮುಗಿಲು ಮುಟ್ಟಿತ್ತು.


~ವಿಭಾ ವಿಶ್ವನಾಥ್

ಮರಳಿ ಮಣ್ಣಿಗೆ.. (ಬೆಳಕಿಂಡಿಯ ಕತೆಗಳು - 70)

 


ಹಳ್ಳಿಯ ಈ ಜೀವನ ನಿನಗೆ ಬೇಡಪ್ಪಾ.. ನಮ್ಮ ತಲೆಮಾರಿಗೇ ಇದು ಸಾಕು ಎನ್ನುತ್ತಾ ಹಳ್ಳಿಯಿಂದ ದೂರವಿಟ್ಟು ಮಗನನ್ನು ಓದಿಸಿದ ರಾಜೀವ. ಈ ಬೆಲೆ ಇಳಿಕೆ, ಹಕ್ಕಿಗಳ ಕಾಟ, ಬೆಳೆದ ಬೆಳೆಗೆ ಸರಿಯಾಗಿ ಸಿಗದ ಮಾರ್ಕೆಟ್ ಇದೆಲ್ಲವೂ ಅವನನ್ನು ಈ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತ್ತು. 


ಆದರೆ, ಅವನ ಮಗ ಜಗದೀಶನಿಗೆ ಯಾವಾಗಲೂ ಮಣ್ಣಿನ ಸೆಳೆತ. ಹಳ್ಳಿಯಲ್ಲಿ ನಾವು ಕಷ್ಟಪಟ್ಟು ದುಡಿದರೆ ಮಾತ್ರ ಎಲ್ಲರೂ ದಿಲ್ಲಿಯಲ್ಲಿ ದರ್ಬಾರ್ ನಡೆಸಲಿಕ್ಕಾಗುವುದು ಎನ್ನುತ್ತಾ ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ತಂತ್ರಜ್ಞಾನವನ್ನು ಉಪಯೋಗಿಸಿ ಹಳ್ಳಿಯಲ್ಲಿನ ಎಲ್ಲರಿಗೂ ಕೆಲಸವನ್ನು ಸುಲಭ ಮಾಡಿ ಕೊಟ್ಟ. ಈಗ ರೈತರಿಂದ ನೇರವಾಗಿಯೇ ಬಳಕೆದಾರನಿಗೆ ದೊರೆಯುತ್ತಿದ್ದ ಫಸಲು ದಲ್ಲಾಳಿ ಹಾಗೂ ಬೆಲೆ ಇಳಿಕೆ ಸಮಸ್ಯೆಯನ್ನು ಪರಿಹರಿಸಿತ್ತು. ಸಾವಯವ ಕೃಷಿ ಕೂಡಾ ಲಾಭ ಕಾಣುವಂತೆ ಮಾಡಿತ್ತು. ಮಣ್ಣಿನಿಂದಲೇ ಎಲ್ಲರ ಬೆಳವಣಿಗೆ.. ನಾವೇನೇ ಪಡೆದರೂ ಮರಳಿ ಮಣ್ಣಿಗೇ ಅದನ್ನು ಅರ್ಪಿಸಿದರೆ ಅಭ್ಯುದಯ ಕಾಣಬಹುದು ಎಂದವನ ಮಾತು ಎಲ್ಲರ ಕಣ್ತೆರೆಸಿತ್ತು. ಅಂತೂ ಮರಳಿ ಮಣ್ಣಿಗೆ ಬಂದಿದ್ದ


~ವಿಭಾ ವಿಶ್ವನಾಥ್

ಆಕರ್ಷಕ ಬೆಳವಣಿಗೆ (ಬೆಳಕಿಂಡಿಯ ಕತೆಗಳು - 69)


 ಆಶಾ ಬೇಸಿಗೆ ರಜೆ, ದಸರಾ ರಜೆ ಸಿಕ್ಕಾಗಲೆಲ್ಲಾ ಸಿಟಿಯಲ್ಲಿ ದೊಡ್ಡಮ್ಮನ ಮನೆಗೆ ಹೋಗಿಬಿಡುತ್ತಿದ್ದಳು. ಅಲ್ಲಿನ ಸಮ್ಮರ್ ಕ್ಯಾಂಪ್ ಗೆ ಸೇರಿಕೊಂಡು ಅಲ್ಲಿನ ಮಲ್ಟಿಪ್ಲೆಕ್ಸ್, ಪಿಜ್ಜಾ, ಮಾಲ್ ಗಳಲ್ಲಿ ಸುತ್ತುತ್ತಾ ಅಲ್ಲಿನ ಜನಜೀವನಕ್ಕೆ ಹೊಂದಿಕೊಂಡು ಆಕರ್ಷಿತಳಾಗುತ್ತಿದ್ದರೆ ಆಕೆಯ ದೊಡ್ಡಮ್ಮನ ಮಗಳು ಉಷಾ ಸಿಟಿಯಿಂದ ಹಳ್ಳಿಗೆ ಬಂದು ಅಲ್ಲಿನ ಕೃಷಿ, ಹಸಿರಿನ ಪರಿಸರ, ತೊರೆಯಲ್ಲಿ ಆಟ, ಬೆಟ್ಟ-ಗುಡ್ಡ ಸುತ್ತುತ್ತಾ ರಾಗಿ ಮುದ್ದೆ, ಹಸಿಕಾಳು ಸಾರು, ನೊರೆ ಹಾಲು ಇವುಗಳಲ್ಲಿ ಆಕರ್ಷಣೆ ಕಂಡುಕೊಂಡಿದ್ದಳು.


ಇಬ್ಬರೂ ವಿರುದ್ಧ ಧೃವಗಳತ್ತ ಆಕರ್ಷಣೆ ಹೊಂದುತ್ತಾ ಆಶಾ ಹಳ್ಳಿಯಲ್ಲಿ ಸಿಟಿಯ ಬದುಕನ್ನು ಬದುಕುವ ಕೃತಕ ಪರಿಸರವನ್ನು ರೂಪಿಸಿಕೊಂಡಳು. ಆದರೆ, ಉಷಾ ಸಿಟಿಯಿಂದ ಕೊಂಚ ದೂರದಲ್ಲಿ ಆರ್ಗಾನಿಕ್ ಫಾರ್ಮಿಂಗ್ ಮಾಡುತ್ತಾ ಸಿಟಿ ಮಕ್ಕಳಿಗೆ ಹಳ್ಳಿಯ ವಾತಾವರಣದ ಆಕರ್ಷಣೆ ಮಾಡುತ್ತಾ ಅವರಿಗೆ ಕೃಷಿಯ ಅರಿವು ಮೂಡಿಸುತ್ತಿದ್ದಳು. 


~ವಿಭಾ ವಿಶ್ವನಾಥ್

ನೆಮ್ಮದಿ (ಬೆಳಕಿಂಡಿಯ ಕತೆಗಳು - 68)

 


ಭೂಮಿಕಾ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವಳು, ಹಳ್ಳಿಯ ಪರಿಸರದ ಅರಿವೂ ಇರಲಿಲ್ಲ. ತಂದೆ-ತಾಯಿ ಕೆಲಸ, ಹಣ ಎಂದು ಹೊರಗಡೆಯೇ ಕಾಲ ಕಳೆಯುತ್ತಿರುವಾಗ ಅಜ್ಜಿ ಅವಳಿಗೆ ಅವಳಿಗೆ ಹಳ್ಳಿಯ ಪರಿಸರ ಮತ್ತು ಅನ್ಯೋನ್ಯತೆಯ ಬಗ್ಗೆ ತಿಳಿಸಿ ಅಲ್ಲಿಗೆ ಹೋಗುವ ಆಸೆ ಹುಟ್ಟಿಸಿದ್ದಳು. ಮಲ್ಟಿ ನ್ಯಾಷನಲ್ ಕಂಪೆನಿಯಲ್ಲಿ ದುಡಿಯುತ್ತಿದ್ದವಳಿಗೆ ಪ್ರಾಜೆಕ್ಟ್ ಒಂದರ ಮೇಲೆ ಹಳ್ಳಿಗೆ ಹೋಗುವ ಅವಕಾಶ ದೊರೆಯುತ್ತದೆ.

ಹಳ್ಳಿಗೆ ಹೋದವಳಿಗೆ ಅಲ್ಲಿನ ನೀರಿನ ಅಭಾವ, ಶೌಚಾಲಯದ ಕೊರತೆ, ಶಿಕ್ಷಣದ ಪರಿಸ್ಥಿತಿ ಮತ್ತು ಬಡತನದೊಂದಿಗೆ ಅವರ ಹಂಚಿ ತಿನ್ನುವ ಮತ್ತು ಹೊಂದಿ ಬಾಳುವ ಅನ್ಯೋನ್ಯತೆ ಮತ್ತು ಪ್ರೀತಿಯ ಅರಿವೂ ಆಗುತ್ತದೆ. ಪಟ್ಟಣದಲ್ಲಿ ಎಲ್ಲವೂ ಕೊರಗುವ ಮತ್ತು ಹಣದ ಹಿಂದೆ ಬಿದ್ದು ಪ್ರೀತಿಯ ಅರಿವೇ ಇಲ್ಲದ ಬಾಳುತ್ತಿರುವುದರ ಅರಿವಾಗುತ್ತದೆ. ಆದ್ದರಿಂದ ಹಳ್ಳಿಯಲ್ಲೇ ನೆಲೆಸಿ ಅವರ ಸಹಕಾರದೊಂದಿಗೆ ಮೂಲಭೂತ ಸೌಕರ್ಯಗಳನ್ನೆಲ್ಲಾ ಒದಗಿಸಿ ನೆಮ್ಮದಿಯಲ್ಲಿ ಅಲ್ಲೇ ನೆಲೆಸುತ್ತಾಳೆ. ಪಟ್ಟಣದಲ್ಲಿನ ಹಣಕ್ಕಿಂತ, ಹಳ್ಳಿಯಲ್ಲಿನ ಸಹಕಾರ, ಪ್ರೀತಿಯಲ್ಲಿ ನೆಮ್ಮದಿಯಿದೆ ಎಂಬುದನ್ನು ಅರಿಯುತ್ತಾಳೆ.


~ವಿಭಾ ವಿಶ್ವನಾಥ್

ಕೋಗನೂರ ಸ್ವಾತಂತ್ರ್ಯ ಯೋಧರು (ಪುಸ್ತಕ ಯಾನ - 482)


ಮೂಲ ಆಕರದ ಶೀರ್ಷಿಕೆ : ಕೋಗನೂರ ಸ್ವಾತಂತ್ರ್ಯ ಯೋಧರು

ಲೇಖಕರು (ಮೂಲ) : ನಲವಡಿ ಶ್ರೀಕಂಠಶಾಸ್ತ್ರಿಗಳು

ಸಂಪಾದಕರು : ಎಚ್. ಎಸ್. ಕೆಂಗುಡ್ಡಪ್ಪನವರ

ಪ್ರಕಾಶಕರು : ಕನ್ನಡ ಸಾಹಿತ್ಯ ಪರಿಷತ್ತು 


ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ದಿಸೆಯಲ್ಲಿ ಹೆಸರೇ ಕೇಳದ ಹಳ್ಳಿಗಳು, ಪುಟ್ಟ ಗ್ರಾಮಗಳ ವೀರರು ತಮ್ಮ ಕೈಲಾದಂತೆ ಸೇವೆ ಸಲ್ಲಿಸಿದ್ದಾರೆ. ದೇಶದಲ್ಲೆಡೆ ಸ್ವಾತಂತ್ರ್ಯದ ಕಿಚ್ಚು ಹರಡಿರುವ ಸಂದರ್ಭದಲ್ಲಿ ಕರ್ನಾಟಕದ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೋಗನೂರು ತನ್ನದೇ ವಿಶೇಷ ಛಾಪು ಮೂಡಿಸಿತು. ಪ್ರಮುಖವಾಗಿ ಮೈಲಾರ ಮಹದೇವಪ್ಪನವರು ಹಾಗೂ ಸಹಚರರ ಸಾಹಸಗಾಥೆಯನ್ನು ಹೇಳಬಯಸುವೆ. ಮೈಲಾರ ಮಹದೇವಪ್ಪನವರ ಸಹಚರರಾಗಿ ಅವರೊಡನೆ ಹುತಾತ್ಮರಾದ ತಿರುಕಪ್ಪ ಮಡಿವಾಳರ ಹಾಗೂ ವೀರಯ್ಯ ಹಿರೇಮಠ ಕೋಗನೂರಿನವರು.


ಕೋಗನೂರಿನ ಗೋಣೆಪ್ಪ ಕಮತ, ಯಲ್ಲವ್ವ ಕಮತ, ಚನ್ನಪ್ಪ ಕೊರಗುಂದ, ನಿಂಗಪ್ಪ ಕೊರಗುಂದ, ನಿಶೀಮಪ್ಪ ಚನ್ನೂರ, ವೀರಭದ್ರಪ್ಪ ಪಾಟೀಲ, ವೀರಭದ್ರಪ್ಪ ಅಂಗಡಿ, ಗುಡ್ಡಪ್ಪ ದೇವಪ್ಪನವರ, ಭಗವಂತಪ್ಪ ಬೂದನೂರ ನೇರವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು. ಮಹದೇವಪ್ಪನವರ ನಾಯಕತ್ವದಲ್ಲಿ ಕೋಗನೂರಿನ 18 ಜನರು ಭಾಗವಹಿಸಿ ದೇಶಪ್ರೇಮ ತೋರಿದ ಇತಿಹಾಸ ಸ್ಮರಣೀಯ. 


ಗೋಣೆಪ್ಪ ಕಮತ, ಯಲ್ಲವ್ವ ಕಮತ ಪತಿ-ಪತ್ನಿಯರು. ಬ್ರಿಟಿಷರು ಇವರಿಬ್ಬರನ್ನು ಜೈಲಿಗೆ ಹಾಕಿದ್ದಾಗ ಯಲ್ಲಮ್ಮ ಕಮತನವರು ಜೈಲಿನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದು ವೀರಯೋಧರ ದೇಶಪ್ರೇಮ ಹೇಗಿತ್ತು ಎಂಬುದರ ಸಾಕ್ಷಿಯಾಗಿದೆ. ಜೊತೆಗೆ ಹೆಣ್ಣು ಮಕ್ಕಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುತ್ತಿದ್ದ ಬಗೆ, ಗರ್ಭಿಣಿ ಹೆಣ್ಣು ಮಕ್ಕಳು ಹಿಂಜರಿಯದೆ ಹೋರಾಟದಲ್ಲಿ ಮುನ್ನುಗ್ಗುತ್ತಿದ್ದ ದಿನಗಳು ಭವಿಷ್ಯಕ್ಕೆ ಸ್ವಾತಂತ್ರ್ಯ ಎಷ್ಟು ಮುಖ್ಯ ಎಂಬುದರ ಪ್ರತಿಫಲನದಂತಿದೆ.


"ಭಾರತ ದೇಶದ ಬಂಧವಿಮೋಚನೆಗೆ ಭಾರೀ ಕಷ್ಟವ ಸೋಸಿದರು

ತಾರುಣ್ಯವೆಲ್ಲವ ತುರಂಗದಲ್ಲಿ ಕಳೆದು ಮಡಿದ ಮಹಾಶೂರ ಮೈಲಾರರು

ತುಂಟರ ತುಂಟನು, ಭಂಟರ ಭಂಟನು, ಸಾತ್ವಿಕರೊಳಗೆ ಸರದಾರ! 

ದಿಟ್ಟನ ಹೆಸರನ್ನು ಹುಟ್ಟಿದ ಕೂಸಿಗೆ ಇಟ್ಟರೂ ತೀರದು ಉಪಕಾರ!"



1930ರಲ್ಲಿ ನಡೆದ ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸಿದ ಕರ್ನಾಟಕದ ಏಕೈಕ ಪ್ರತಿನಿಧಿ ಮೈಲಾರಪ್ಪನವರು ಎಂಬುದು ಹೆಮ್ಮೆಯ ವಿಷಯ. 


ಆಗಿನ ಅವಿಭಾಜಿತ ಧಾರವಾಡ ಜಿಲ್ಲೆ, ಈಗಿನ ಹಾವೇರಿ ಶಿರಹಟ್ಟಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ಮಾರ್ತಂಡಪ್ಪ ಮತ್ತು ಬಸಮ್ಮ ದೇಶಪ್ರೇಮಿ ದಂಪತಿಗಳ ಪುತ್ರನೇ ಮಹದೇವಪ್ಪ ಮೈಲಾರ. 1920ರಲ್ಲಿ ಗಾಂಧೀಜಿಯವರು ಧಾರವಾಡಕ್ಕೆ ಆಗಮಿಸಿದಾಗ ಅವರ ಭಾಷಣ ಕೇಳಿ ಪ್ರಭಾವಿತರಾಗಿ ಅಹಿಂಸಾ ತತ್ವವನ್ನು ಅಳವಡಿಸಿಕೊಂಡು 16ನೇ ವರ್ಷದಿಂದ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ನಡೆದವರು. 


ಬಿಜಾಪುರ ಜಿಲ್ಲೆಯ ಕಲಾದಗಿ ಗ್ರಾಮದ ಇದಕ್ಕೆ ಹೋಗಿ ಖಾದಿ ಬಟ್ಟೆ ತಯಾರಿಸುವುದು ಹೇಗೆಂದು ತಿಳಿದು ತಾನು ತಯಾರಿಸಿದ ಖಾದಿಯನ್ನು ಊರು ತಿರುಗಿ ಮಾರಾಟ ಮಾಡಿ ಅದರ ಪ್ರಚಾರ ಮಾಡುತ್ತಾರೆ. ಮುಂದೆ ತಮ್ಮ ಪತ್ನಿ ಸಿದ್ದಮ್ಮನವರ ಸಹಾಯದಿಂದ 1936ರಲ್ಲಿ ವರದಾ ನದಿತೀರದ ಕೊರಡೂರ ಗ್ರಾಮದಲ್ಲಿ ಸೇವಾಶ್ರಮವನ್ನು ಪ್ರಾರಂಭಿಸಿ ಅದರ ಸಂಚಾಲಕರಾಗಿ, ಪ್ರಕೃತಿ ಚಿಕಿತ್ಸೆ, ವ್ಯಾಯಾಮದ ಜೊತೆಗೆ ಖಾದಿ ತಯಾರಿಸುತ್ತಾರೆ. ಇದು 'ಮಹಾದೇವನ ಖಾದಿ' ಎಂದೇ ಪ್ರಸಿದ್ಧವಾಗುತ್ತದೆ.


ದಂಡಿ ಉಪ್ಪಿನ ಚಳುವಳಿಯಲ್ಲಿ ಸ್ವತಃ ಗಾಂಧೀಜಿಯವರೇ ನೀನಿನ್ನು ಚಿಕ್ಕವನಿದ್ದೀಯ ಜೊತೆಗೆ ಹುಷಾರಿಲ್ಲದ ಸಂದರ್ಭದಲ್ಲಿ ನಿನ್ನಿಂದ ಆಗುವುದಿಲ್ಲ ಎಂದು ಹೇಳಿ ಹಿಂದೆ ಕಳುಹಿಸಿದರೂ... ಅವರ ಮಾತು ಕೇಳದೆ ಉತ್ಸಾಹದಿಂದ ಭಾಗಿಯಾಗಿ ಗಾಂಧೀಜಿಯವರಿಗೆ ತನ್ನ ಧೈರ್ಯ, ಆತ್ಮಸ್ಥೈರ್ಯ ಎಂತಹದು ಎನ್ನುವುದನ್ನು ತೋರಿದರು. ಆಗಿನ್ನೂ ಅವರಿಗೆ 19 ವರ್ಷ.  ಈ ಸತ್ಯಾಗ್ರಹದಲ್ಲಿ ಬ್ರಿಟಿಷ್ ಅಧಿಕಾರಿಗಳು ಒಂದು ಗೆರೆ ಹಾಕಿ ಯಾರೂ ದಾಟದಂತೆ ಸೂಚನೆ ನೀಡಿದ್ದರಾದರೂ.. ಅದನ್ನು ದಾಟಿ ಅವರ ಕಟ್ಟಳೆಯನ್ನು ಮುರಿದು 6 ತಿಂಗಳ ಜೈಲುವಾಸ ಅನುಭವಿಸಿದ್ದರು.


'ಚಲೇ ಜಾವ್' ಚಳುವಳಿಯ ಅಂಗವಾಗಿ ಗಾಂಧೀಜಿಯವರ ಅಹಿಂಸಾ ಮಾರ್ಗದಲ್ಲಿ ನಡೆದು ಚಾವಡಿ ರೈಲ್ವೇ ಸ್ಟೇಷನ್ ಸುಟ್ಟರು. ವಸೂಲಿಯಾದ ಹಫ್ತೆ ಲೂಟಿ ಮಾಡುವುದು ಮಾಡುತ್ತಾರೆ. ಇವರ ನೇತೃತ್ವದಲ್ಲಿ ಮುಂದೆ ಬ್ರಿಟಿಷರ ನೆಲೆಗಳನ್ನು ನಾಶ ಮಾಡುವುದು, ಬ್ರಿಟಿಷರಿಗೆ ಸಂಬಂಧಿಸಿದ ಟಪಾಲುಗಳನ್ನು ಬಸ್ ನಲ್ಲಿ ಸಾಗಿಸುವಾಗ ಅಪಹರಿಸುವುದು ಮಾಡಿ ಬ್ರಿಟಿಷರನ್ನು ಹೈರಾಣಾಗಿಸಿದ್ದರು. ಗಾಂಧಿ ಮಾರ್ಗದ ತಾತ್ವಿಕತೆಯನ್ನೂ.. ಯಾರಿಗೂ ತಲೆಬಾಗದ ಭಗತ್ ಸಿಂಗ್, ರಾಜಗುರು, ಸುಖದೇವ್, ಚಂದ್ರಶೇಖರ ಆಜಾದರಂತಹ ದಿಟ್ಟ ಸಂಘರ್ಷದ ಹೋರಾಟವನ್ನು ಜೊತೆಜೊತೆಯಾಗಿಯೇ ನಿರ್ವಹಿಸಿದರು.


1943 ಏಪ್ರಿಲ್ 1ರಂದು ಹೊಸರಿತ್ತಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿಟ್ಟಿದ್ದ, ವಸೂಲಿಯಾದ ಹಣವನ್ನು ಅಪಹರಿಸಲು ಹೋದಾಗ ಪೊಲೀಸರ ಗುಂಡಿಗೆ, ಬ್ರಿಟಿಷರ ಗಾಳಕ್ಕೆ ಬಲಿಯಾದ ಸ್ವಾತಂತ್ರ್ಯ ಹೋರಾಟದ ಹುತಾತ್ಮರಿವರು. ಕೆಲವೆಡೆ ಬ್ರಿಟಿಷರೇ ಹಫ್ತಾ ವಸೂಲಿ ಮಾಡಿದ ಹಣವನ್ನು ಸಂಗ್ರಹಿಸಿಟ್ಟು ನಿಜವಾದ ಅಚ್ಚ ಕನ್ನಡಿಗರಾದರೆ ಆ ಹಣವನ್ನು ಅಪಹರಣ ಮಾಡಿ ಎಂದು ಸವಾಲು ಹಾಕಿದ್ದು ಎಂಬ ಉಲ್ಲೇಖಗಳೂ ಕಾಣಸಿಗುತ್ತವೆ. ಈ ಸವಾಲನ್ನು ಸ್ವೀಕರಿಸಿ ತಂಡವಾಗಿ ಕೆಲಸವನ್ನು ವಿಭಾಗಿಸಿ ತಮ್ಮಲ್ಲಿ ಯಾರು ಸತ್ತರೂ ಈ ಕಾರ್ಯ ನಿಲ್ಲುವಂತಿಲ್ಲ ಎಂದು ಹೇಳಿ ಮುನ್ನಡೆದ ವೀರ ಸೇನಾನಿ ಇವರು. 


ಸಕಾರಾತ್ಮಕ ಅಂಶವೆಂದರೆ ಈ ಮೂವರು ಹುತಾತ್ಮರಾದ ನಂತರವೂ ಹೋರಾಟ ಮುಂದುವರಿಯಿತು. ಮಹಾತ್ಮ ಗಾಂಧೀಜಿಯವರ 75ನೇ ಹುಟ್ಟು ಹಬ್ಬದ ಅಂಗವಾಗಿ 75 ಕಾರ್ಯಕ್ರಮ ಹಮ್ಮಿಕೊಂಡಿದ್ದ ಅವರ ತಂಡದ 75 ನೇ ಕಾರ್ಯಕ್ರಮ ಇದಾಗಿತ್ತು. 


ಕೋಗನೂರು ಸ್ವಾತಂತ್ರ್ಯ ಯೋಧರು ನಾಟಕದ ರೂಪದಲ್ಲಿದೆ. ಈ ಎಲ್ಲಾ ಅಂಶಗಳ ಜೊತೆಗೆ ಇನ್ನೂ ಹಲವು ವಿಶೇಷ ಅಂಶಗಳನ್ನು ಈ ಪುಸ್ತಕದಲ್ಲಿ ನಾವು ಕಾಣಬಹುದಾಗಿದೆ. ಇಲ್ಲಿ ಸ್ವಾತಂತ್ರ್ಯ ಪ್ರೇಮ, ಜಾತೀಯತೆ ನಿರ್ಮೂಲನೆ, ಕರ್ನಾಟಕ ಏಕೀಕರಣ ಜೊತೆಗೆ ಕೋಮು ಸಾಮರಸ್ಯವನ್ನು ಬಿಂಬಿಸಿದ್ದಾರೆ.


1954ರಲ್ಲಿ ಮೂರು ತಿಂಗಳು ನಲವಡಿ ಶ್ರೀಕಂಠಶಾಸ್ತ್ರಿಗಳು ಕೋಗನೂರಿನಲ್ಲಿ ತಂಗಿದ್ದರು. ಇದಕ್ಕೆ ಕಾರಣ ಕೋಗನೂರಿನ ಗೋಣೆಪ್ಪ ಕಮತ ಹಾಗೂ ಅವರ ಆತ್ಮೀಯರಾದ ಗುಡ್ಡೆಪ್ಪ ಡಿಳ್ಳೆಪ್ಪ. ಗೋಣೆಪ್ಪನವರು ಮಹದೇವರ ಆತ್ಮೀಯರು ಹಾಗೂ ಹೊಸರಿತ್ತಿಯ ಗೋಲಿಬಾರ್ ನಲ್ಲಿ ತಮ್ಮ ಮೂವರು ಆತ್ಮೀಯರ ಜೊತೆಗೆ ಬಲಗೈ ನಡುವಿನ ಮೂರು ಬೆರಳನ್ನು ಕಳೆದುಕೊಂಡಿದ್ದವರು. ತಮ್ಮ ಹಾಗೂ ಸಹಚರರ ಹೋರಾಟವನ್ನು ರಂಗಕ್ಕೆ ಅಳವಡಿಸುವ ಆಶಯದಿಂದ ಸ್ವಾತಂತ್ರ್ಯ ಪ್ರೇಮಿಗಳು ಹಾಗೂ ಖ್ಯಾತ ನಾಟಕಕಾರರೂ ಆಗಿದ್ದ ಶ್ರೀ ನಲವಡಿ ಶ್ರೀಕಂಠಶಾಸ್ತ್ರಿಗಳನ್ನು ಸಂಪರ್ಕಿಸಿ ಕೋಗನೂರಿನಲ್ಲಿ ತಂಗಲು ಅನುವು ಮಾಡಿಕೊಟ್ಟಿದ್ದರು. 


ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದವರ ನೈಜ ಅನುಭವಗಳು, ಸನ್ನಿವೇಶಗಳು ಎದುರಿಸಿದ್ದ ಬಿಕ್ಕಟ್ಟು, ಮಹದೇವರ ಕಾರ್ಯನಿರ್ವಹಣೆ, ಕಾರ್ಯತಂತ್ರ, ಅಪ್ರತಿಮ ದೇಶಪ್ರೇಮ, ಗಾಂಧೀಜಿಯ ಬಗೆಗಿನ ಅಭಿಮಾನ, ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಪಣತೊಟ್ಟ ಬಗ್ಗೆ, ಸಂಘಟನಾ ಶಕ್ತಿ, ಸಾಮೂಹಿಕ ಚಟುವಟಿಕೆಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದ ರೀತಿ ಎಲ್ಲವನ್ನೂ ಟಿಪ್ಪಣಿ ರೂಪದಲ್ಲಿ ಬರೆದುಕೊಂಡು ನಾಟಕ ರಚಿಸುತ್ತಾರೆ.


1980 ಏಪ್ರಿಲ್ 1ರಂದು ಕೋಗನೂರಿನಲ್ಲಿ ಕಾರಣಾಂತರದಿಂದ ಈ ನಾಟಕದ ಹಸ್ತಪ್ರತಿ ನಾಶವಾಗಿದ್ದರಿಂದ ಹೆಚ್ಚು ಕೆಂಗುಡಪ್ಪನವರು ನಾಟಕದಲ್ಲಿ ಪಾತ್ರ ಮಾಡಿದ್ದವರ ಬಾಯಿಂದ ಬಾಯಿಗೆ ಕಂಠಪಾಠವಾಗಿದ್ದ ಸಂಭಾಷಣೆಯನ್ನು ಹೇಳಿಸಿ, ಬರೆದುಕೊಂಡು, ಸಂಗ್ರಹಿಸಿರುವುದು ಈಗ ನಮಗೆ ಪುಸ್ತಕ ರೂಪದಲ್ಲಿ ಲಭ್ಯವಾಗಿದೆ. 


ಮುಂದಿನ ಪೀಳಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಪಟ್ಟ ಕಷ್ಟಗಳನ್ನು ತಿಳಿದಾಗ ಮಾತ್ರವೇ ಸ್ವಾತಂತ್ರ್ಯಎಷ್ಟೆಲ್ಲಾ ಕಷ್ಟದ ಹೋರಾಟದಿಂದ ದೊರೆತ ಫಲ, ಅದನ್ನು ಕಾಪಾಡಿಕೊಳ್ಳುವ ಹಾಗೂ ಗೌರವಿಸುವ ಕುರಿತ ಅರಿವು ಮೂಡಿಸಿಕೊಳ್ಳಲು ಸಾಧ್ಯ. 


"ನಮ್ಮ ಆಡಳಿತ ಪರಕೀಯರ ಕೈಯಲ್ಲಿದೆ ಎಂದು ಹೇಳುವುದು ಹೇಳಿತನದ ಲಕ್ಷಣವಲ್ಲವೇ..?"

"ಆಲಸ್ಯವೇ ಎಲ್ಲರನ್ನೂ ಅದೋಗತಿಗೆ ಒಯ್ಯುವ ವೈರಿ. ನಾವೀಗ ಜಾಗೃತ ಜನಾಂಗವನ್ನು ನೋಡಿ ಎಚ್ಚರಾಗಬೇಕಿದೆ."

ಇಂತಹ ಮಿಂಚಿನ ಮಾತುಗಳಿಂದ ಭಾರತ ಬಂಧನಮುಕ್ತವಾಗಬೇಕು, ದಾಸ್ಯ ಹರಿದು ಹೋಗಬೇಕು ಎನ್ನುವ ಯುವ ಉತ್ಸಾಹಿ ಮೈಲಾರ ಮಹದೇವಪ್ಪ  ತಮ್ಮ ಸ್ನೇಹಿತರನ್ನು ಸ್ವಾತಂತ್ರ್ಯಕ್ಕೆ ಹುರಿದುಂಬಿಸುವ ಬಗೆ ಇಲ್ಲಿದೆ.


ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಸಹೋದರರಿಗೆ ನೆರವಾಗಬೇಕು. ಸಂಗ್ರಾಮದ ಕರೆ ಬಂದಾಗ ಗುಂಪು ಗುಂಪಾಗಿ ಹೋರಾಡಬೇಕು. ಜೀವದಾನ ಮಾಡುವ ಪ್ರಸಂಗ ಬಂದರೂ ಸಾವಿಗಂಜದೆ ಮುನ್ನುಗ್ಗಬೇಕು ಎನ್ನುತ್ತಾ ಗತಕಾಲದ ವೀರನಾರಿಯರ ನೆನಪು ಮಾಡಿ ಹೆಣ್ಣು ಮಕ್ಕಳನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಣಿ ಮಾಡುತ್ತಿದ್ದ ದಿನಗಳಿವೆ.


ಅಸ್ಪೃಶ್ಯ ನೀತಿಯನ್ನು ತಡೆಗಟ್ಟಿ, ಖಾದಿ ತೊಡುವ ಗಾಂಧೀಜಿಯವರ ನಿಲುವನ್ನು ಎತ್ತಿ ಹಿಡಿಯುವ ಯುವ ಜನರು ಕಾಣುತ್ತಾರೆ.


ಮೈಲಾರ ಮಹದೇವಪ್ಪನವರು ಹರ್ಡೇಕರ್ ಮಂಜಪ್ಪನವರಿಂದಲೂ ಪ್ರೇರಿತವಾಗಿದ್ದಾರೆ. ಅವರ ಕೆಲ ಮಾತುಗಳನ್ನು ತಮ್ಮ ಜೊತೆಗಾರರಿಗೆ ಹೇಳುವಾಗ ಉಲ್ಲೇಖಿಸುತ್ತಾರೆ ಸಹ.

"ಸಾವಿಗಂಚದವರು ಸತ್ಯಾಗ್ರಹಿಗಳಂತೆ. ಸತ್ಯಾಗ್ರಹದಿಂದಲೇ ಸ್ವರಾಜ್ಯ ಸಿದ್ದಿಯಂತೆ. ಸತ್ಯಾಗ್ರಹಿಗಳು ಸ್ವದೇಶಿ ವ್ರತವನ್ನು ಆಚರಿಸಬೇಕಂತೆ. ಹಿಂದೂಸ್ಥಾನದ ಬಡತನ ಕಳೆಯುವುದು ರಾಟೆ, ಖಾದಿ, ಸ್ವಉದ್ಯೋಗದಿಂದ." ಇದೇ ಮೊದಲಾಗಿ ಭಾರತವನ್ನು ಸ್ವತಂತ್ರಗೊಳಿಸುವ ಸರಳ ಮಾರ್ಗದ ಸ್ಪಷ್ಟ ನಿರೂಪಣೆಯಿದೆ.


1918ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಅನಾಚಾರವು ಜನರನ್ನು ರೊಚ್ಚಿಗೆಬ್ಬಿಸಿತ್ತು. ಇದಾದ ನಂತರ ಧಾರವಾಡದ ಬೀದಿಗಳಲ್ಲಿ ಸವಿನಯ ಕಾಯ್ದೆ ಭಂಗ, ಬ್ರಿಟಿಷ್ ಸರ್ಕಾರದಿಂದ ದೊರೆತ ವಿಧಾನ ಮಂಡಲಗಳ ಚುನಾವಣೆಗಳ ಬಹಿಷ್ಕಾರ, ಪರದೇಶಿ ಬಟ್ಟೆ, ಶಿಕ್ಷಣ ಸಂಸ್ಥೆಗಳ ಬಹಿಷ್ಕಾರ, ಶಾಸನಭಂಗಗಳು ನಡೆದವು.


ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಆತಂಕ, ನಿರ್ಬಂಧಗಳನ್ನು ಲಕ್ಷಿಸದೆ ಉಪ್ಪಿನ ಪಾರತಂತ್ರವನ್ನು ಕಿತ್ತೊಗೆದ ಮಹಾದೇವರ ಶೌರ್ಯ ನಂತರ ಜೈಲುವಾಸದ ಕುರಿತ ಚಿತ್ರಣಗಳಿವೆ.


1942ಕ್ಕೆ ಸ್ಟಾಫೋರ್ಡ್ ಕ್ರಿಪ್ಸ್ ಅವರು ರಾಜಕೀಯ ಕೊಡುಗೆ ನೀಡುವುದಾಗಿ ಭಾರತಕ್ಕೆ ಬಂದಾಗ ಅವರ ಅನಿಶ್ಚಿತ ಹೇಳಿಕೆಯನ್ನು ನಿರಾಕರಿಸಿ ಕಮಿಟಿಯಲ್ಲಾದ ತೀರ್ಮಾನ ಮುಂದಕ್ಕೆ ಕ್ವಿಟ್ ಇಂಡಿಯಾ, ಭಾರತ ಬಿಟ್ಟು ತೊಲಗಿ ಎಂದು ಮಹಾತ್ಮರು ನೀಡಿದ ಕರೆಗೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ಕೋಗನೂರ ವೀರಯ್ಯನವರ ಸಂಘಟನೆ ಹಾಗೂ ಮೈಲಾರ ಮಹದೇವಪ್ಪನವರ ನಾಯಕತ್ವ ಶುರುವಾಗುತ್ತದೆ. ಧಾರವಾಡದಿಂದ ಬುರ್ಲಿ ಬಿಂದುಮಾಧವರಾಯರ ಪತ್ರ ತಲುಪಿ ಮುಂದೆ ಗುಂಪಿನ ಚಟುವಟಿಕೆಗಳು ನಿರ್ಧರಿಸಿದಂತೆ ಸಾಗುತ್ತವೆ. ಗುಪ್ತಚರ ಕಾರ್ಯ ಮಾಡುವವರು, ಹಳ್ಳಿ ಹಳ್ಳಿಗಳಲ್ಲಿಯೂ ತಮ್ಮ ಕೈಲಾದ ಸೇವೆ ಮಾಡುವವರು ಸ್ವಾತಂತ್ರ್ಯಕ್ಕೆ ನೆರವಾದ ಬಗೆ ಇಲ್ಲಿದೆ. 


ಮೈಲಾರ ಮಹಾದೇವರು ತಮ್ಮ ಪತ್ನಿಗೂ ಧೈರ್ಯ ತುಂಬಿ ಅವರನ್ನು ಉಳಿದ ಹೆಣ್ಣು ಮಕ್ಕಳೊಡನೆ ದೇಶ ಸೇವೆಗಾಗಿ ಬರಲು ಪ್ರೇರೇಪಿಸುತ್ತಾರೆ. ಸ್ವಾತಂತ್ರ್ಯ ಸಂಗ್ರಾಮಕ್ಕೆ ಅವರಿಗೆ ಜಯ ಹಾರೈಸುವುದರ ಜೊತೆಗೆ ಅವರ ಪತ್ನಿಯ ದಿಟ್ಟತನ ಕಾಣುತ್ತದೆ. ಪೊಲೀಸರು ಅವರನ್ನು ಹಿಡಿದುಕೊಂಡು ಹೋಗಲು ವಾರೆಂಟ್ ತಂದಿರುವಾಗ ಕೊಡುವ ದಿಟ್ಟ ಉತ್ತರ ಇಲ್ಲಿ ಕಾಣುತ್ತದೆ. ಮಹದೇವಪ್ಪನವರು ಬೇರೆಲ್ಲಿಯೂ ಸಿಗದಿದ್ದಾಗ ಪ್ರತಿ ಊರಿನಲ್ಲಿಯೂ ಅವರು ಬಂದಿದ್ದಾರೆಯೇ ಎಂದು ವಿಚಾರಿಸುವ ಸಂದರ್ಭದಲ್ಲಿ ಕುರಿಗಾಹಿಗಳು ಸಹ ಅವರು ಹೋದ ಜಾಗದ ಸುಳಿವನ್ನು ನೀಡುವುದಿಲ್ಲ. 


ಬಸ್ಸಿನಲ್ಲಿದ್ದ ಟಪಾಲು ಕದಿಯುವುದಕ್ಕೆ ಡ್ರೈವರ್ ಕಂಡಕ್ಟರ್ರಿಗೆ ಬ್ಯಾಡಗಿ ಬಾಂಬ್ ಹಾಕುವ ಸಂದರ್ಭವಿದೆ. ಬ್ಯಾಡಗಿ ಬಾಂಬ್ ಎಂದರೆ ಮತ್ತೇನಲ್ಲ ಬ್ಯಾಡಗಿ ಮೆಣಸಿನಕಾಯಿ ಕಾರದಪುಡಿಯನ್ನು ಅವರ ಕಣ್ಣಿಗೆ ಎರಚುವುದು. ಬಸ್ಸಿನಲ್ಲಿರುವ ಬೇರೆ ಯಾರಿಗೂ ಯಾವುದೇ ತೊಂದರೆ ಮಾಡದೆ, ಯಾರಿಗೂ ಪ್ರಾಣ ಹಾನಿ ಮಾಡದೆ, ತಮಗೆ ಬೇಕಾದ ಟಪಾಲು ಕಸಿದುಕೊಂಡು ಹೋಗುತ್ತಾರೆ.


ಹತ್ತಿಮತ್ತೂರು ಸ್ಟೇಷನ್ ಸುಡುವ ಕಾರ್ಯಕ್ರಮವಿದ್ದಾಗ ಅಲ್ಲಿರುವ ಪೊಲೀಸರನ್ನು ದಿಕ್ಕು ತಪ್ಪಿಸಲು ಮಾರುವೇಷದಲ್ಲಿ ಕಬ್ಬು ಮಾರುವವರಂತೆ ಹೋಗಿ ಅವರಿಗೆ ಆಸೆ ತೋರಿಸಿ, ಪೊಲೀಸರ ಬಂದೂಕು ಕೆಳಗಿಡುವಂತೆ ಮಾಡಿ ಉಪಾಯದಿಂದ ಅವರನ್ನು ಕಟ್ಟಿ ಹಾಕಿ ಬಂದೂಕು ಅಪಹರಿಸಿ ಸ್ಟೇಷನ್ ಸುಡುತ್ತಾರೆ.


ಕಚವಿ ಸರ್ದಾರ ವೀರನಗೌಡರ ಪತ್ನಿ ನಾಗಮ್ಮ ಮತ್ತು ಹೊಸರಿತ್ತಿ, ಹಾಲಗಿಯ 15 ಜನ ಯುವತಿಯರು, ಕೋಗನೂರಿನ ಗೋಣೆಪ್ಪನವರ ಪತ್ನಿ ಯಲ್ಲಮ್ಮ, ಹುಬ್ಬಳ್ಳಿಯ ಹರಿಜನ ಆಶ್ರಮದಿಂದ ಯಶೋದ, ಕೃಷ್ಣೆ, ಇಂದಿರಾಬಾಯಿ, ಲಕ್ಷ್ಮಿದೇವಿ ಹೀಗೆ ಮೂರು ನಾಲ್ಕು ತಿಂಗಳಿನ ಕೂಸಿನ ತಾಯಂದಿರು ಪುಟ್ಟ ಮಕ್ಕಳಿರುವವರು ಪ್ರಭಾತ ಪೇರಿಯಲ್ಲಿ ಹಾವೇರಿಯಲ್ಲಿ ಬುಲೆಟಿನ್ ಹಂಚುವಾಗ ಹಾಗೂ ಸ್ವರಾಜ್ಯ ಸಾಧನೆಗೆ ಹೋರಾಡಿ ಎಂದು ಸಾಹೇಬರಿಗೆ ಹೇಳಿ, ಅವರಿಗೆ ಗಾಂಧಿ ಟೋಪಿ ಕೊಡುವಾಗ... ಕೋರ್ಟಿನಲ್ಲಿರುವ ಮುನಸೂಫ್ ಸಾಹೇಬರು, ಮಜೀದ, ಪೌಜದಾರರಿಗೂ, ಮಾಮಲೆದಾರರಿಗೂ ಬುದ್ಧಿ ಬರುವಂತೆ ಪತ್ರ ಓದುವಾಗ ಬಂಧಿಯಾಗಿ ಜೈಲಿಗೆ ಹೋಗುತ್ತಾರೆ


ನೆಗಳೂರ ಚಾವಡಿ, ಕೋಗನೂರ ಚಾವಡಿ, ಹೆಬ್ಬಾಳ ಚಾವಡಿ ಇಲ್ಲೆಲ್ಲ ಹಪ್ತೆ ವಸೂಲಿ ಮಾಡುವ ಒಂದೊಂದು ಸಂದರ್ಭಗಳೂ ರೋಮಾಂಚನಗೊಳಿಸುತ್ತವೆ.


ಸ್ವಾತಂತ್ರ್ಯ ಹೋರಾಟದಲ್ಲಿ ಲಾವಣಿಗಳು, ಸ್ವಾತಂತ್ರ್ಯದ ಕುರಿತ ಹಾಡುಗಳು ಇದ್ದ ಬಗೆಯನ್ನು ನಾವು ಕೇಳಿರುತ್ತೇವೆ. ಹೆಣ್ಣು ಮಕ್ಕಳ ಗುಂಪು ಪ್ರಭಾತ ಪೇರಿಯಲ್ಲಿ ಆಳುವ ಈ ಪದಗಳು ಅರ್ಥಪೂರ್ಣವಾಗಿದೆ. ಇಂತಹ ಕೆಲ ಸಾಲುಗಳನ್ನು ಇಲ್ಲಿ ಕಾಣಬಹುದಾಗಿದೆ


ಸಾಗಿರಿ ಮುಂದೆ ಸಾಗಿರಿ ಮುಂದೆ

ನಾರಿಯರೆಲ್ಲಾ ಒಂದಾಗಿ ಸಾಗಿರಿ ಮುಂದೆ

ಲಕ್ಷಿಬಾಯಿ ಚನ್ನಮ್ಮರಂತೆ

ಸುಭಾಶ್ಚಂದ್ರ ಭೋಸರಂತೆ

ವಿಜಯದ ಕಹಳೆ ಊದುತ ಮುಂದೆ

ಸಾಗಿರಿ ಮುಂದೆ ಸಾಗಿರಿ ಮುಂದೆ

ಜೈ ಹಿಂದ್‌... ಜೈ ಹಿಂದ್‌.... ಜೈ ಹಿಂದ್‌

ಸಿಂಧೂರ ಲಕ್ಷ್ಮಣ ರಾಯಣ್ಣನಂತೆ

ಸಾಗುವ ಮುಂದೆ ಸಾಗುವ ಮುಂದೆ


ಹೊಸರಿತ್ತಿಯ ಘಟನೆಯ ನಂತರವೂ ಸ್ವಾತಂತ್ರ್ಯ ಹೋರಾಟ ನಡೆಯುವ ಘಟನೆಗಳೊಂದಿಗೆ ನಾಟಕ ಮುಕ್ತಾಯವಾಗುತ್ತದೆ. 


ಮಹಾದೇವರ ತಂಡದ ಹಲವು ಸದಸ್ಯರು 'ಹೋರಾಟವೇ ಉಸಿರು' ಎಂದು ಬದುಕಿದವರು. ಚಳುವಳಿಯ ಕೆಚ್ಚು, ಪ್ರಾಮಾಣಿಕತೆ, ಬಡವರಿಗೆ ಮಿಡಿಯುವ ಹೃದಯದ ಕೆಲವರು ಭೂಮಾಲೀಕರ ಕುತಂತ್ರಕ್ಕೆ ಬಲಿಯಾದರೆ.. ಇನ್ನು ಕೆಲವರು ಸ್ವಾತಂತ್ರ್ಯ ಚಳುವಳಿಯ ಪಿಂಚಣಿಯನ್ನು ಪಡೆದು ಗೌರವಕ್ಕೂ ಪಾತ್ರರಾದರು.


2001 ಏಪ್ರಿಲ್ ಒಂದರಂದು ಕೋಗನೂರು ಗ್ರಾಮದಲ್ಲಿ ಹೊಸ ರೀತಿಯಲ್ಲಿ  ಮಾಡಿದ ಮೂವರಿಗೆ ಹುತಾತ್ಮತ್ರಯರ ಸ್ಮಾರಕ ಕಟ್ಟಿಸಿ ಅಂದೆ ಹುತಾತ್ಮರ ದಿನವನ್ನು ಆಚರಿಸುತ್ತಾರೆ. 


2015 ರ ಪರಿಷ್ಕೃತ ಮುದ್ರಣದಲ್ಲಿ 7 ನೇ ತರಗತಿಗೆ ಮೈಲಾರ ಮಹಾದೇವ ಅವರ ಕುರಿತ ಪಾಠವಿದೆ. 


ಗ್ರಂಥಋಣಿ: 

ವೃತ್ತ ಪತ್ರಿಕೆಗಳು, ಮಾಸಿಕ ಪತ್ರಿಕೆಗಳು, ಸಿರಿಗನ್ನಡ ಪಠ್ಯ, ಇಂದಿರಾ ಕೃಷ್ಣಪ್ಪನವರ ಸಂಪಾದಿತ ಕವನಗಳಲ್ಲಿ ಮೂಡಿದ ಗಾಂಧಿ, ಪ್ರೊ. ಬಿ. ಪೊಲೀಸ್ ಪಾಟೀಲ ಅವರ ನಾನೆಂಬುದು ನಾನಲ್ಲ, ಹುತಾತ್ಮ ತಿಮ್ಮನ ಗೌಡ ಪಾಟೀಲ (ಮೆಣಸಿನಹಾಳ) ಇವುಗಳಿಂದಲೂ ಆಯ್ದ ಮಾಹಿತಿಗಳನ್ನು ಉಲ್ಲೇಖಿಸಿರುವೆ. 


~ವಿಭಾ ವಿಶ್ವನಾಥ್

ಅಪ್ಪನ ಅಂಗಡಿ (ಪುಸ್ತಕ ಯಾನ - 481)


ಪುಸ್ತಕದ ಶೀರ್ಷಿಕೆ : ಅಪ್ಪನ ಅಂಗಡಿ

ಸಂಪಾದಕರು : ಮನು ಗುರುಸ್ವಾಮಿ

ಪ್ರಕಾಶಕರು : ಕ್ರಿಯೇಟಿವ್ ಪುಸ್ತಕಮನೆ

ಪ್ರಥಮ ಮುದ್ರಣ : 2026

ಪುಟಗಳು : 84

ಬೆಲೆ : 100 ರೂ. 


ಮನು ಗುರುಸ್ವಾಮಿಯವರು ಕನ್ನಡ ಆಧ್ಯಾಪಕರು ಹಾಗೂ ಬರಹಗಾರರು. ಇವರ ಬರಹ ಸೇರಿದಂತೆ ಇಲ್ಲಿ 16 ಅಪ್ಪನ ಕುರಿತ ಬರಹಗಳನ್ನು ಕಾಣಬಹುದು. ವಿವಿಧ ಊರುಗಳ, ವಿವಿಧ ಕಾಲಘಟ್ಟಗಳ, ವಿವಿಧ ಶೈಲಿಯ ಕನ್ನಡದ, ಆಡು ಭಾಷೆಯ ಲೇಖನಗಳಿವೆ. ಅಪ್ಪಂದಿರು ಬದುಕಿದ ರೀತಿ ಮಕ್ಕಳ ಕಣ್ಣಲ್ಲಿ ಕಂಡ ಬಗೆ ವಿವಿಧ ರೂಪಗಳಲ್ಲಿ ಇಲ್ಲಿದೆ. 


ಅಪ್ಪನನ್ನು ಹೀಗೆಯೇ ಎಂಬ ರೂಪದಲ್ಲಿ ಕಂಡುಕೊಳ್ಳಲಾಗದು. ಅವನ ಸ್ವರೂಪ ವಿಭಿನ್ನ. ಆತನ ವ್ಯಕ್ತಿತ್ವವಿಲ್ಲದೆ ನಾವಿಲ್ಲ. ಅಪ್ಪ ಹಾಸುಹೊಕ್ಕಾಗಿ ನಮ್ಮೊಳಗಿರುತ್ತಾನೆ. ಬಾಲ್ಯದ ನೆನಪುಗಳಿಂದ, ನಂತರ ಬದಲಾದ ಅಪ್ಪನ ರೂಪ, ನೆನಪುಗಳು ಅಪ್ಪನ ಕುರಿತ ದೃಷ್ಟಿಕೋನ ಎಲ್ಲವೂ ಇಲ್ಲಿವೆ. ಇಲ್ಲಿ ಎಲ್ಲಿಯೂ ಹೊಡೆದು ಬುದ್ದಿ ಕಲಿಸಿದ ಅಪ್ಪಂದಿರು ಕಾಣಲಿಲ್ಲ. ಹೀಗಾಗಿ ಅಪ್ಪ ಅಷ್ಟು ಆಳಕ್ಕಿಳಿದರಾ..?! ಎಲ್ಲಿಯೂ ಅತಿರಂಜಿತ ವರ್ಣನೆಗಳಿಲ್ಲ. ವಾಸ್ತವದ ದೃಷ್ಟಿಕೋನಗಳಿವೆ. ಸುಮ್ಮನೆ ಅಪ್ಪನನ್ನು ಕಣ್ತುಂಬಿಕೊಳ್ಳಬೇಕಿದೆ. ಎಲ್ಲಾ ಅಪ್ಪಂದಿರಲ್ಲಿಯೂ ಒಂದಲ್ಲಾ ಒಂದು ಬಗೆಯಲ್ಲಿ ನಾನು ನನ್ನಪ್ಪನನ್ನು ಕಂಡ ಕೌತುಕವೂ ಇದೆ.


ಅಪ್ಪನ ಅಂಗಡಿ - ಮಂಜಯ್ಯ ದೇವರಮನಿ :

ಓದಿಲ್ಲದಿದ್ದರೂ ವ್ಯವಹಾರದ ಕಲೆ ಕಲಿತಿದ್ದ ಅಪ್ಪ ವ್ಯವಹಾರದಲ್ಲಿ ಎಷ್ಟು ನಿಪುಣ ಎನ್ನುವುದಕ್ಕೆ ಸಾಕ್ಷಿಯಾಗಿ ಅಪ್ಪನ ಅಂಗಡಿಯ ಕುರಿತು ಹೇಳುತ್ತಾ ಸಾಗುತ್ತಾರೆ. ಕಡು ಬೇಸಿಗೆಯ ಬರಗಾಲದಲ್ಲಿ ಬ್ಯಾಂಕಿನಲ್ಲಿದ್ದ ತನ್ನಲ್ಲ ದುಡ್ಡನ್ನು ಬಿಡಿಸಿಕೊಂಡು ಅಂಗಡಿಗೆ ಬೇಕಾದ ಸಾಮಾನುಗಳನ್ನು ತಂದು, ಉದ್ರಿ ಕೊಟ್ಟ ಅಪ್ಪ ಬೇರೆಯವರ ಕಣ್ಣಿಗೆ ಕಂಡ ಬಗೆಗೂ ಮಗನಿಗೆ ಕಂಡದ್ದಕ್ಕೂ ವ್ಯತ್ಯಾಸವಿದೆ. ಅಪ್ಪ ಯಾವ ನಂಬಿಕೆಯ ಮೇಲೆ ಉದ್ರಿ ಕೊಟ್ಟಿದ್ದ ಎಂದು ಮನವರಿಕೆಯಾದ ಸಂದರ್ಭ ಊರವರ ಒಳ್ಳೆಯತನಕ್ಕೂ.. ಅಪ್ಪನ ಉದಾತ್ತತೆಗೂ ಸಾಕ್ಷಿಯಂತಿದೆ. ಇಡೀ ಬರಹಗಳ ಗುಚ್ಛದಲ್ಲಿ ಇದು ಬಹಳ ಆಪ್ತವಾದ ಬರಹ.


ಹೀಗೊಂದು 'ನೀಚ ಅಪ್ಪ'ನ ನೆನಪು - ಈರಪ್ಪ ಎಂ ಕಂಬಳಿ :

ನಕಾರಾತ್ಮಕ ಶೀರ್ಷಿಕೆಯಾಗಿ ಕಂಡರೂ.. ಇಲ್ಲಿ ಸಕಾರಾತ್ಮಕವಾಗಿ ಅಪ್ಪನನ್ನು ಕಾಣುವ ಬಗೆಯಿದೆ. 

"ಯಮಕಾಲನ ತೆಕ್ಕೆಯಲ್ಲಿ ಅಳಿದು ಹೋದವರು ಎಲ್ಲಿಯೂ ಹೋಗುವುದಿಲ್ಲ. ಹೀಗೆ ಜೀವಂತವಾಗಿರುತ್ತಾರೆ. ಬದುಕಿ ಇದ್ದ ನಮ್ಮ ನಿಮ್ಮಂತವರ ಮನಗಳಲ್ಲಿ. ಅವರಿಗೆ ಕಾಡುವ ಗುಣವಿದ್ದರಂತೂ ತೀರಿತು. ಅಂಥವರು ಬೆಂಬಿಡದೆ ಸತಾಯಿಸುತ್ತಿರುತ್ತಾರೆ." 

ದೊಡ್ಡಾಟದ ಹಾರ್ಮೋನಿಯಂ ಮಾಸ್ತರಾಗಿದ್ದ ಅಪ್ಪ ಹಂಪಿಯ ಸಣ್ಣ ಕಂಬಗಳಲ್ಲಿ ರಾಗಗಳನ್ನು ನುಡಿಸಿದ ಚಿತ್ರಣ ಕಣ್ಣಿಗೆ ಕಟ್ಟಿದಂತಿದೆ. ಅಪ್ಪ ಮಗನನ್ನು ತನ್ನಂತಾಗಿಸದೆ ಬೇರೆ ದಾರಿ ಹಿಡಿಸಿದ್ದೇಕೆ..? ಓದಿ ನೋಡಿ. 


ಅಪ್ಪ ಎಂಬ ಕಾಡುವ ಭಾವಗೀತೆ - ವಾಸುದೇವ ನಾಡಿಗ್‌ :

ಕಟು ಶತ್ರುವಾಗಿ, ಕಟು ಗುರುವಾಗಿ ಕಂಡವ ಈ ಅಪ್ಪ ಎನ್ನುತ್ತಲೇ ಶುರುವಾದ ಲೇಖನ ಅಪ್ಪನ ಹಿರಿದಾದ ಕನಸುಗಳು ನನಸಾಗದ ಸಂದರ್ಭದಲ್ಲಿ ನಡೆಸಿಕೊಳ್ಳುತ್ತಿದ್ದ ಕಟು ಸ್ವಭಾವ ಮಗನಲ್ಲಿ ಕೆಚ್ಚು ಮೂಡಿಸಿದ ಬಗೆ, ನಂತರ ಅಪ್ಪ ಕಾಡುವ ಬಗೆ ಆರ್ದ್ರವಾಗಿ ಚಿತ್ರಿತವಾಗಿದೆ.


ಅಪ್ಪಾ - ನಾನು ನಿಮ್ಮ ಮಗ ಮತ್ತು ಮಗಳು - ಸಹನಾ ರವೀಂದ್ರ : 

ಅಪ್ಪನ ಪ್ರೀತಿಯಲ್ಲಿ ಭಾವನೆಗಳ ಕಾಮನಬಿಲ್ಲಿದ್ದರೂ.. ಗಂಡು ಮಗನಾಗಲಿಲ್ಲ ಎಂಬ ಅಸಮಾಧಾನವನ್ನು ಮಗಳಾಗಿ ಹೋಗಲಾಡಿಸಿದ ಇವರ ಸೂಕ್ಷ್ಮ ಹಾಗೂ ಪ್ರೀತಿಯ ಒಡನಾಟ ಚೆಂದವಾಗಿ ಅಭಿವ್ಯಕ್ತವಾಗಿದೆ. ಅಪ್ಪನ ಮಾರಣಾಂತಿಕ ಖಾಯಿಲೆಯ ಸಂದರ್ಭದಲ್ಲಿ ಮಗ ಮಾಡುವ ಕೆಲಸಗಳನ್ನು ಮಾಡಿದರೂ.. ಸ್ವೀಕರಿಸಲು ಅಪ್ಪನಿಗಿದ್ದ ಹಿಂಜರಿಕೆ, ಮುಜುಗರ ಅಸಮಾಧಾನಗಳಾಚೆಗೂ ಅಪ್ಪ ಮಾಡುವ ಮಗಳ ರಕ್ಷಣೆ, ಅಗತ್ಯಗಳ ಪೂರೈಕೆ, ಪ್ರಶಂಸೆ ಎಲ್ಲಕ್ಕಿಂತ ಹೆಚ್ಚಾಗಿ ಉಪಸ್ಥಿತಿಯಿಂದ ಕಾಡುತ್ತಾರೆ.


ಅಪ್ಪ ನನಗೇಕೆ ನಿನ್ನ ಪ್ರೀತಿ ತಿಳಿಯುತ್ತಿಲ್ಲ? - ಎಸ್‌. ಎಮ್‌. ಪುಷ್ಕರ :

ಶಿಸ್ತಿನ ಅಪ್ಪನ ಮುಖವನ್ನು ತೆರೆದಿಡುತ್ತಲೇ.. ಅಪ್ಪನ ಇಚ್ಛೆಯಂತೆಯೇ ಓದಿ ಕೆಲಸ ಹಿಡಿದ ನಂತರ ಮನೆಗೆ ಹೋದಾನ ಕಂಡ ಅಪ್ಪನ ಕಣ್ಣುಗಳು ಅಷ್ಟು ವರ್ಷ ಹೇಳದ ಮಾತುಗಳನ್ನು, ಪ್ರೀತಿಯನ್ನು ತೋರಿದ ಬಗೆ ಸೊಗಸಾಗಿದೆ.


ಅಪ್ಪ ಅಪ್ರಯೋಜಕನಲ್ಲ - ಪುಟ್ಟಸ್ವಾಮಿ ನೇರಲೇಕೆರೆ :

ಮಾಜಿಯ ತಾತನನ್ನು ತೋರುತ್ತಲೇ ಮಾಜಿಯ ತಂದೆಯನ್ನು ಪರಿಚಯಿಸುತ್ತಾರೆ. ಕುಡುಕ, ಬೇಜವಾಬ್ದಾರಿತನ, ಅಕ್ಕ-ಪಕ್ಕದವರ ಕೋಪಕ್ಕೆ ತುತ್ತಾಗಿದ್ದವನು ಮಗನ ಬಗೆಗೆ ತೋರುತ್ತಿದ್ದ ಕಾಳಜಿ, ಮಕ್ಕಳಿಗೆ ಜಮೀನನ್ನು ಹಿಂದಿರುಗುವಂತೆ ಮಾಡಲು ಹವಣಿಸಿದ್ದು, ಮಕ್ಕಳ ಬದುಕಿನ ದಾರಿ ರೂಪಿಸಿದ್ದು ಅಪ್ಪನ ಮತ್ತೊಂದು ರೂಪವನ್ನೇ ಬಯಲು ಮಾಡುತ್ತದೆ.


ಅಪ್ಪನಿಗ್‌ ಹೇಳ್ತೀನಿ - ವಾಣಿ ಭಟ್ಟ : 

ಈ ಲೇಖನ ವಿಭಿನ್ನವೆನಿಸಿತು. ಇಲ್ಲಿ ಲೇಖಕಿ ತಂದೆ ಹಾಗೂ ತನ್ನ ಮಗುವಿನ ತಂದೆ ಎರಡು ತಂದೆಯ ರೂಪವನ್ನು ತೋರುತ್ತಾರೆ. ಅಮ್ಮನ ಜೊತೆಗಿನ ಸಲುಗೆ ಅಪ್ಪನ ಜೊತೆಗಿಲ್ಲದಿದ್ದರೂ.. ಅಪ್ಪನ ಒಂದು ಮಾತಿಗೆ ಭಯ ಬೀಳುವ ದಿನಗಳು.. 

ಮಕ್ಕಳು ಪಾಲಕರನ್ನು ನೋಡುವ ದೃಷ್ಟಿಕೋನ ರೂಪಿಸುವ ತಂದೆ-ತಾಯಿಯ ಜವಾಬ್ದಾರಿಯ ವಿಚಾರ ಹೇಳುತ್ತಾರೆ. ಬದಲಾದ ದಿನಗಳಲ್ಲಿ ಮಕ್ಕಳ ಜೊತೆಗೆ ಮಗುವಾಗಿ ಆಡುವ ಅಪ್ಪನನ್ನು ತೋರುತ್ತಾರೆ. ಇಂದಿನ ತಂದೆಯಂದಿರ ಜವಾಬ್ದಾರಿ ಹಾಗೂ ಪ್ರೀತಿಯಿಂದ ಕೈಜೋಡಿಸುವ ಗುಣಗಳ ತಂದೆಯಂದಿರ ಮೇಲೆ ಬೆಳಕು ಚೆಲ್ಲುತ್ತಾರೆ. ಹಿಂದಿಗಿಂತ ಇಂದಿನ ಸ್ಥಿತಿ ಸುಧಾರಿಸಿದೆ. ಮಗುವಿನ ದೈನಂದಿನ ಜೀವನದಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುವ ತಂದೆಯಂದಿರ ಸಂಖ್ಯೆ ಮತ್ತಷ್ಟು ಹೆಚ್ಚಲಿ ಎನ್ನುವ ಆಶಯ ಬಹಳ ಇಷ್ಟವಾಯಿತು.


ವಾಮಣ್ಣ-ಅಣ್ಣ ಅಲ್ಲ ಅಪ್ಪ - ಮಾಧುರಿ ಭಾವೆ : 

ತಂಗಿಯಂದಿರು ಕರೆದ ಹಾಗೆ ಮಕ್ಕಳು ತಂದೆಯನ್ನು ವಾಮಣ್ಣನೆಂದೇ ಕರೆದ ಬಗೆ.. ಬರೀ ಓದು ಎಂದು ಒತ್ತಡ ಹೇರದೆ, ಯಾವುದು ಒಳ್ಳೆಯದು-ಕೆಟ್ಟದ್ದು ಎಂಬುದನ್ನು ತಿಳಿಹೇಳಿದ, ಅಪರಿಮಿತ ವಿಶ್ವಾಸದಿಂದ ಮಗಳನ್ನು ನಂಬಿದ ತಂದೆ, ತಂದೆ-ತಾಯಿಯರ ಪ್ರೀತಿ ಅನ್ಯೋನ್ಯತೆಯ ದಾಂಪತ್ಯ ಇರುವ ಬಹಳ ಲವಲವಿಕೆಯ ಚಿತ್ರಣ ಇದು.


ಅಪ್ಪಾ ಲವ್‌ ಯೂ ಪಾ - ಗೀತಾ ನಾಗರಾಜ್‌ :

ಹಾಡನ್ನು ನೆನಪಿಸಿಕೊಳ್ಳುತ್ತಲೇ ಮಕ್ಕಳೊಡನೆ ಮಗುವಾಗಿ ನಲಿಯುತ್ತಾ.. "ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಮೇಲೆ ಗುಲಗಂಜಿಗಿಂತ ರವಷ್ಟು ಹೆಚ್ಚು ಪ್ರೀತಿ ತೋರಿಸುವ", ಮುದ್ದು ಹೆಸರುಗಳಿಂದ ಕರೆದು ರೇಗಿಸುವ ಅಪ್ಪ ಕಾಣುತ್ತಾರೆ.

"ನಮ್ಮ ಬಾಲ್ಯ ಹುಡುಗಾಟಕೆಯ ದಿನಗಳು ಅಪ್ಪನ ನೆನಪುಗಳೊಂದಿಗೆ ಸಮೃದ್ಧವಾಗಿದೆ. ದಿನಗಳಂತೆ ನಮಗೆ ವಯಸ್ಸಾಗುತ್ತಾ ಹೋದಂತೆ ಅಪ್ಪ ಮತ್ತಷ್ಟು ಮಗದಷ್ಟು ನಮ್ಮೊಳಗೆ ಜೀವಂತವಾಗಿದ್ದಾರೆ" ಎನ್ನುತ್ತಾರೆ.


ತಂದೀಯ ನೆನೆದರೆ ತಂಗಳು ಬಿಸಿಯಾಯಿತು - ಯಶೋದ ಗಾಣಿಗ :

ಜನಪದದ ಚಂದದ ಸಾಲೊಂದನ್ನು ನೆನೆಯುತ್ತಾ.. ಹೆಚ್ಚು ಕಾಲ ಅಪ್ಪನೊಡನೆ ಇಲ್ಲದ, ಮಲತಾಯಿ ಬಂದ ನಂತರ ಅಪ್ಪನ ಚಿಕ್ಕಮ್ಮನ ಮನೆಯಲ್ಲಿ ಬೆಳೆದ ಮಗಳ ಕಣ್ಣಲ್ಲಿ ಅಪ್ಪ ಎತ್ತರದಲ್ಲಿರುವ ಮನ ಮಿಡಿಯುವ ಚಿತ್ರಣವಿದು.


ಅಪ್ಪ ಎಂದರೆ - ದ್ವಾರನಕುಂಟೆ ಪಿ ಚಿತ್ತಣ್ಣ :

ಅಪ್ಪ ಪಾಂಡುರಂಗಪ್ಪನ ಪ್ರಪಂಚ, ಹೊಲ-ಮನೆ, ಎತ್ತುಗಳ ಒಡನಾಟವಿದ್ದರೂ.. ಕಡುಬಡತನದಲ್ಲಿಯೂ ಮಕ್ಕಳನ್ನು ತನ್ನ ಪ್ರಪಂಚವೆಂಬಂತೆ ಸಾಕಿದ, ಅಮ್ಮನನ್ನು ಕಷ್ಟಪಟ್ಟು ಉಳಿಸಿಕೊಳ್ಳುವ ದಿನಗಳಲ್ಲಿ ಅಮ್ಮನ ಸ್ಥಾನದಲ್ಲಿ ನಿಂತು ಮುತುವರ್ಜಿವಹಿಸಿ ಕಾಳಗೆ ಮಾಡುವ ಇಂತಹ ಅಪ್ಪಂದಿರು ಬಹಳ ಅಪರೂಪ. 


ಅಪ್ಪ - ರೇಣುಕಾ ಗೌಳಿ :

ಮಹಾನ್ ದೇಶಾಭಿಮಾನಿ ಅಪ್ಪನ ಮಗಳು ಊರಿಗೆ, ಪರರಿಗೆ ಮಹೋಪಕಾರಿಯಾದ ದಿನಗಳನ್ನು ಹೇಳುತ್ತಾರೆ. ಸ್ವಾತಂತ್ರ್ಯ ಪೂರ್ವದ ದಿನಗಳ ಅಪ್ಪನ 50 ವರ್ಷದ ಬದುಕಿನ ಬಗೆ ಇಲ್ಲಿದೆ. ದೇಶಭಕ್ತಿ, ಶರಣರ ವಾಣಿ, ಧೈರ್ಯದ ಬದುಕು ಎಲ್ಲವನ್ನೂ ಕಲಿಸಿದ ಚೇತನ ಅಪ್ಪ ಕೇವಲ ಮನೆಯವರು ಮಾತ್ರವಲ್ಲ ಹೆ, ಪ್ರತಿಯೊಬ್ಬರೂ ಗೌರವಿಸುವ ವ್ಯಕ್ತಿತ್ವವಾಗಿರುವುದರ ಚಿತ್ರಣವಿಲ್ಲಿದೆ.


ನಾ ಕಂಡ ಅಪ್ಪ - ಪದ್ಮಲತಾ ಮೈಸೂರು :

ಅಪ್ಪನ ಸಕಾರಾತ್ಮಕ ನಿಲುವು, ಜ್ಞಾನ ಸಂಪಾದನೆ, ಶ್ರದ್ಧೆ, ಮಕ್ಕಳಿಗೆ ನೀಡುತ್ತಿದ್ದ ಪ್ರೋತ್ಸಾಹ ಹೀಗೆ ಸಕಾರಾತ್ಮಕವಾಗಿ ಅಪ್ಪನನ್ನು ತೆರೆದಿಟ್ಟರೂ.. ಎರಡು ನಕಾರಾತ್ಮಕ ಗುಣಗಳನ್ನು ಉಲ್ಲೇಖಿಸಿ ಅವುಗಳನ್ನು ಸುಧಾರಿಸಿಕೊಂಡ, ತಿದ್ದಿಕೊಂಡ ಹಾಗೂ ಮಾದರಿಯಾದ ಬಗೆ ಇಲ್ಲಿದೆ.


ಎಲ್ಲರಂತಲ್ಲ ನನ್ನಪ್ಪ - ಗಾಯತ್ರಿ ಅನಂತ್‌ :

ಓದು ಮಾತ್ರವಲ್ಲದೆ.. ಕಲೆ, ಸಾಹಿತ್ಯ, ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ನೆರವಾದ ಅಪ್ಪನಿದ್ದಿದ್ದರೆ.. ಕರಕುಶಲ ಕಲೆಗಾಗಿ ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯ ನ್ಯಾಷನಲ್ ರೆಕಾರ್ಡ್ ಸಿಕ್ಕಾಗ ಅದೆಷ್ಟು ಹರುಷಪಡುತ್ತಿದ್ದರು ಎನ್ನುವ ನೆನಪುಗಳ ತೆರೆದಿಡುವಿಕೆ ಇಲ್ಲಿದೆ.


ಅಪ್ಪ ಎಂದರೆ ಅಸ್ತಿತ್ವ - ಚೈತ್ರ ವಿ ಮಂಡ್ಯ :

ಅಪ್ಪ ಎಂದರೆ ನನ್ನ ಅಸ್ತಿತ್ವ ಎನ್ನುವ ಇವರ ತಂದೆ ಕೇಳುವ ಶಕ್ತಿಯನ್ನು ಒಂದು ಸಂದರ್ಭದಲ್ಲಿ ಕಳೆದುಕೊಂಡಿದ್ದರು. ಬದುಕಲು ಬೇಕಿರುವ ಅದಮ್ಯ ಚೈತನ್ಯವನ್ನು ಕಳೆದುಕೊಳ್ಳದೆ ಬದುಕಿದ ಕ್ರಿಯಾಶೀಲ ವ್ಯಕ್ತಿ. ಇವರೂ ಶ್ರವಣಶಕ್ತಿ ಕಳೆದುಕೊಂಡಾಗ ನನಗಿಂತಲೂ ಹೆಚ್ಚು ಕನಲಿ,ಬೆಂದದ್ದು ನನ್ನಪ್ಪನೇ ಎನ್ನುತ್ತಾ ಮಕ್ಕಳನ್ನೇ ಆಸ್ತಿ ಮಾಡುವ ಯೋಚನೆಯ ಅಪ್ಪ ಇಲ್ಲಿದ್ದಾರೆ. ಬರೆದಷ್ಟು ಮುಗಿಯದ ಅಕ್ಷಯ ಪಾತ್ರೆಯನ್ನು ನಮಗೆ ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ.


ಅಣ್ಣನಿಗೆ ನಾನಿನ್ನೂ ಪುಟ್ಟ ಮಗು - ಮನು ಗುರುಸ್ವಾಮಿ :

ಎತ್ತರದಲ್ಲಿ ಮಾತ್ರವಲ್ಲದೆ, ವ್ಯಕ್ತಿತ್ವದಲ್ಲಿಯೂ ಅಷ್ಟೇ ಎತ್ತರವಿರುವ ತಂದೆ ಗುರುಸ್ವಾಮಿಯವರ ಕುರಿತು ಹೇಳುತ್ತಲೇ ಈಗಲೂ ಪುಟ್ಟ ಮಗುವಂತೆ ಕಾಳಜಿ ಮಾಡುವ ತಂದೆಯನ್ನು ತೋರುತ್ತಾರೆ.


ಅಪ್ಪನೆಂಬ ಮುಗಿಯದ ಅದ್ಭುತಗಳ ಕಥನ ಇಲ್ಲಿದೆ. ಕೆಲ ಅಕ್ಷರ ದೋಷಗಳಿವೆ. ಆದರೆ, ಅಪ್ಪನೆಂಬ ಅದ್ಭುತ ಭಾವವಷ್ಟೇ ಮನದಲ್ಲುಳಿಯಿತು. 


~ ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 9, 2026

ಸಕ್ಕರೆ ನಿದ್ದೆಯ ದೇವರ ನಗು (ಬೆಳಕಿಂಡಿಯ ಕತೆಗಳು - 67)


 "ಅಮ್ಮನ ಅತಿ ಇಷ್ಟದ ನಗು ಯಾವುದು ಗೊತ್ತಾ..?" 

"ಯಾವುದು..?"

"ಕಂದಮ್ಮ ಸಕ್ಕರೆ ನಿದ್ದೆಯ ಸವಿಯಲ್ಲಿ ಮಂದಹಾಸ ಬೀರುವ ಅರೆ ಕ್ಷಣದ ನಗು, ದೃಷ್ಟಿಯಾಗುತ್ತದೆ ನೋಡಬೇಡ ಎಂದದ್ದನ್ನು ಬದಿಗೊತ್ತಿ ಕಾಯುತ್ತಿದ್ದ ಕಳೆದೇ ಹೋಗುವಂತೆ ಮಾಡುತ್ತಿದ್ದ ನಗು"


ಅವಳೇ ಕಟ್ಟಿ ಹಾಡುತ್ತಿದ್ದ ಲಾಲಿಯಲ್ಲಿ ಈ ಸಾಲುಗಳು ಇಂದಿಗೂ ಅತ್ಯಾಪ್ತ

ಜೋ ಜೋ ಲಾಲಿ ಕಂದಮ್ಮ..

ಅಮ್ಮನ ಕಣ್ಮಣಿ ನೀನಮ್ಮ..

ಸಕ್ಕರೆ ನಿದ್ದೆ ಮಾಡಮ್ಮಾ..

ಕನಸಿನ ಲೋಕಕೆ ಜಾರಮ್ಮಾ..


ಲಾಲಿ ಹಾಡು ಸಾಗುತ್ತಿತ್ತು..!

~ವಿಭಾ ವಿಶ್ವನಾಥ್

ಗೀಳಿಗೊಂದು ಬ್ರೇಕ್ (ಬೆಳಕಿಂಡಿಯ ಕತೆಗಳು - 66)

 


"ನಾನೂ ನಿನ್ನಂತೆ ಪುಸ್ತಕ ಓದಬೇಕು, ಏನಾದರೂ ಬರೆಯಬೇಕು. ಇದಕ್ಕೆಲ್ಲಾ ಹೇಗೆ ಸಮಯ ಹೊಂದಿಸುತ್ತೀಯ" ಎಂದು ಪ್ರಶ್ನೆ ಕೇಳಿದ ಗೆಳತಿಗೆ ಉತ್ತರ ಕೇಳುವ ಸಂಯಮವೂ ಇರದೆ ಮೊಬೈಲ್ ನಲ್ಲಿ ಸ್ಕ್ರೋಲ್ ಮಾಡುತ್ತಾ ಕಳೆದುಹೋಗಿದ್ದಳು. 

"ಮೊಬೈಲ್ ಬಿಟ್ಟರೆ ಎಲ್ಲಕ್ಕೂ ಸಮಯ ಹೊಂದಿಸಿಕೊಳ್ಳಬಹುದು" ಎಂದು ಅವಳ ಫೋನ್ ಕಿತ್ತು ತನ್ನ ಬ್ಯಾಗ್ ನಲ್ಲಿ ಹಾಕಿಕೊಂಡವಳು ಗೆಳತಿಯ ಅತಿಯಾದ ಮೊಬೈಲ್ ಗೀಳಿಗೆ ಬ್ರೇಕ್ ಹಾಕುವುದರಲಿದ್ದರೆ.. ಇನ್ನಾದರೂ ಸಂಯಮ ರೂಢಿಸಿಕೊಂಡು ಬದಲಾಗಬೇಕು ಎನ್ನುವ ಆಲೋಚನೆಯಲ್ಲಿದ್ದಳು ಗೆಳತಿ.

~ವಿಭಾ ವಿಶ್ವನಾಥ್

ಉಡುಗೊರೆಯ ಸಮಯ (ಬೆಳಕಿಂಡಿಯ ಕತೆಗಳು - 65)

 


"ನಾಳೆ ನಿನ್ನ ಹುಟ್ಟುಹಬ್ಬಕ್ಕೆ ಏನು ಉಡುಗೊರೆ ಬೇಕು ಕೇಳು ಕೊಡಿಸುತ್ತೇನೆ, ಅಷ್ಟು ಖರ್ಚಾದರೂ ಪರವಾಗಿಲ್ಲ" ಎಂದವನ ಮಾತು 'ಯಾವ ವರ ಕೇಳುವೆಯೋ ಕೇಳು. ತಥಾಸ್ತು' ಎಂಬಂತೆ ಭಾಸವಾಗಿತ್ತು.

ಬೆಲೆಬಾಳುವ ಉಡುಗೊರೆಗಿಂತ ಅವನ ಜೊತೆ ಸಮಯ ಕಳೆಯುವುದು ಮುಖ್ಯವಾಗಿತ್ತು ಅವಳಿಗೆ. ಆದರೆ, ಅವನ ಬ್ಯುಸಿ ಶೆಡ್ಯೂಲ್ ಅನ್ನು ಬ್ರೇಕ್ ಮಾಡುವ ಮನಸ್ಸಿರಲಿಲ್ಲ

"ಏನಿಲ್ಲ" ಎಂದು ಚುಟುಕಾಗಿ ಮಾತು ಮುಗಿಸಿದವಳಿಗೆ "ನಾಳೆ ಇಡೀ ದಿನ ನಿನ್ನದೇ" ಎಂದು ಕಣ್ಣು ಮಿಟುಕಿಸಿದವನನ್ನು ಕಂಡು ಇಚ್ಚೆಯನರಿತು ನಡೆವ ಪತಿ, ಅವನ ಜೊತೆಗಿನ ಸಮಯಕ್ಕಿಂತ ಮಿಗಿಲಾದ ಉಡುಗೊರೆ ಬೇರೇನು ಎನ್ನಿಸಿತ್ತು.

~ವಿಭಾ ವಿಶ್ವನಾಥ್


ಪ್ರಾರ್ಥನೆ (ಬೆಳಕಿಂಡಿಯ ಕತೆಗಳು - 64)

 


ಯುದ್ದದ ಹೆಸರು ಮನದಲ್ಲಿ ತಲ್ಲಣ ಮೂಡಿಸುತ್ತಿತ್ತು. ಇತ್ತೀಚಿನ ಜಾಗತಿಕ ಬೆಳವಣಿಗೆಗಳ ವಾರ್ತೆ ನಿತ್ಯವೂ ಟಿ. ವಿ, ಪೇಪರ್, ಸೋಶಿಯಲ್ ಮೀಡಿಯಾಗಳಲ್ಲಿ ಕಂಡು ಅಗತ್ಯಕ್ಕಿಂತ ಹೆಚ್ಚೇ ಕಳವಳವಾಗುತ್ತಿತ್ತು.

ಇಂದು ಮಾತ್ರವಲ್ಲ ಎಂದಿಗೂ ಯುದ್ದದ ನೆನಪೆಂದರೆ ಅವಳಿಗೆ ಸದಾ ಆತಂಕವೇ.. ರಾಮಾಯಣ, ಮಹಾಭಾರತದ ಯುದ್ಧ, ಕಾರ್ಗಿಲ್ ಯುದ್ಧ, ಹಿರೋಶಿಮಾ, ನಾಗಾಸಾಕಿಯ ದಾಳಿಗಳು ಎಲ್ಲವೂ.. 

ಅಷ್ಟಕ್ಕೂ ಅವಳಿಗೆ ಕಳೆದುಕೊಳ್ಳುವಂತಹದ್ದು ಏನೂ ಇರಲಿಲ್ಲ. ಯಾರೂ ಇರಲಿಲ್ಲ. ಗಂಡ, ಮಗ ಇಬ್ಬರನ್ನೂ ದೇಶಕ್ಕಾಗಿ ಅರ್ಪಿಸಿದವಳು "ಎಲ್ಲ ತಾಯಂದಿರ ಮಕ್ಕಳೂ ಸುಖವಾಗಿರಲಿ, ಸೌಖ್ಯದಿಂದಿರಲಿ" ಎಂದಷ್ಟೇ ಪ್ರಾರ್ಥಿಸುತ್ತಾಳೆ.

~ವಿಭಾ ವಿಶ್ವನಾಥ್

ಭರವಸೆ (ಬೆಳಕಿಂಡಿಯ ಕತೆಗಳು - 63)


 ನಮ್ಮ ಆಚಾರ-ವಿಚಾರ ತಿಳಿಯದ ಫಾರಿನ್ ಹುಡುಗಿಯನ್ನು ಮನೆ ಸೊಸೆ ಎಂದು ಒಪ್ಪುವುದಾದರೂ ಹೇಗೆ ಎಂದು ಹಿಂಜರಿಯುತ್ತಿದ್ದ ಅಪ್ಪ-ಅಮ್ಮನಿಗೆ ಅಂದು ತಮ್ಮ ಪ್ರೀತಿಯ ಆಳ ಅರ್ಥ ಮಾಡಿಸಿದ್ದ ಮಗ. ಮನಸ್ಸಿಲ್ಲದ ಮನಸ್ಸಿನಲ್ಲಿ ಒಪ್ಪಿದ್ದವರಿಗೆ ಇಂದು ಸೊಸೆಯ ಮೌಲ್ಯ ಅರ್ಥವಾಗಿತ್ತು.

ಗೊತ್ತಿಲ್ಲದಿದ್ದರೂ ಎಲ್ಲವನ್ನೂ ಕಲಿತು ತಮ್ಮ ಆಚಾರ-ವಿಚಾರವನ್ನು ಕಲಿತು ಪ್ರೀತಿಯಿಂದ ಒಪ್ಪಿ ಅಪ್ಪಿರುವ ಸೊಸೆ ಹೆಮ್ಮೆ ಮೂಡಿಸಿದ್ದಳು. ಬದಲಾಗುತ್ತಿರುವುದು ಯುವ ಜನತೆಯ ಮತ್ತೊಂದು ಮಜಲು ಭರವಸೆ ಮೂಡಿಸಿತ್ತು.

~ವಿಭಾ ವಿಶ್ವನಾಥ್

ತಿತ್ತಿಬ್ವಾಸನ ಟೈಟಾನ್ ವಾಚು (ಪುಸ್ತಕ ಯಾನ - 480)


ಪುಸ್ತಕದ ಶೀರ್ಷಿಕೆ : ತಿತ್ತಿಬ್ವಾಸನ ಟೈಟಾನ್ ವಾಚು

ಲೇಖಕರು : ದಿಲೀಪ್ ಎನ್ಕೆ

ಪ್ರಕಾಶಕರು : ಈಶ್ವರಿ ಪ್ರಕಾಶನ

ಪ್ರಥಮ ಮುದ್ರಣ : 2025

ಪುಟಗಳು : 148

ಬೆಲೆ : 178 ರೂ.


ತಿತ್ತಿಬ್ವಾಸನ ಟೈಟಾನ್ ವಾಚು ದಿಲೀಪ್ ಎನ್ಕೆ ಅವರ ನಾಲ್ಕನೇ ಕೃತಿ ಹಾಗೂ ಎರಡನೆಯ ಕಥಾ ಸಂಕಲನ. ಇವರ ಮೊದಲ ಕಥಾ ಸಂಕಲನ ಬಲಿಷ್ಠ. ಈ ಕಥಾ ಸಂಕಲನದ ಕೆಲವು ಕಥೆಗಳು ಕೆಂಡಸಂಪಿಗೆ ಬ್ಲಾಗ್ ನಲ್ಲಿ ಹಾಗೂ ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾಗಿದೆ.


ಈ ಕಥಾ ಸಂಕಲನದಲ್ಲಿ ಒಟ್ಟು ಒಂಬತ್ತು ಕಥೆಗಳಿವೆ.


ತಿತ್ತಿಬ್ವಾಸನ ಟೈಟಾನ್ ವಾಚು : 

ಕೊಕ್ಕರಕ್ಕಿ ಹಾಗೂ ತಿತ್ತಿಬ್ವಾಸ ಎಂಬ ಎರಡು ಪಾತ್ರಗಳು ಓದುಗರನ್ನು ಕಥೆಯೊಳಗೆ ಸೆಳೆದುಕೊಂಡು ಹೋಗುತ್ತವೆ. ಇಲ್ಲಿ ಗೆಳೆಯ ಧನಂಜಯನೇ ಕೊಕ್ಕರಕ್ಕಿ. ಆತನ ಮೂಲಕವೇ ಇಲ್ಲಿ ಕಥೆ ತೆರೆದುಕೊಳ್ಳುತ್ತಾ ಹೋಗುತ್ತವೆ. ಅಮ್ಮನಿಲ್ಲದೆ, ಮಲತಾಯಿ ಬಂದ ನಂತರ ತಿತ್ತಿಬ್ವಾಸನ ಬದುಕು ಹೇಗಿತ್ತು..? ತನ್ನ ಕೈಯಲ್ಲಿದ್ದ ಟೈಟಾನ್ ವಾಚು ಅಮ್ಮ ಕೊಟ್ಟಿದ್ದು ಅಮ್ಮನ ಪ್ರತಿರೂಪವೇ ಎಂದು ಭಾವಿಸುತ್ತಿದ್ದವನು ವಾಚ್ ಅನ್ನು ತೆಗೆಯುವ ಅನಿವಾರ್ಯ ಸಂದರ್ಭ ಬಂದದ್ದೇಕೆ..? ಬಳ್ಳಾರಿಯಲಿ ಪಿ.ಟಿ ಶಿಕ್ಷಕನ ಕೆಲಸ ಸಿಕ್ಕಿದರೂ ತಿತ್ತಿಬ್ವಾಸನಿಗೆ ಅಲ್ಲಿಗೆ ಹೋಗದಂತಹ ಸಂದರ್ಭ ಬಂದದ್ದಕ್ಕೆ ಕಾರಣವೇನು..? ಆತನ ಬದುಕಿನ ದಾರುಣ ಕಥೆ ಸಿಗುತ್ತದೆ. ಇಲ್ಲಿ ಕಥೆ ಹಾಗೂ ಕಾವ್ಯ ಎರಡರ ಮೂಲಕ ವಿಭಿನ್ನವಾಗಿ ಕಥೆಯನ್ನು ನಿರೂಪಿಸಿದ್ದಾರೆ.


ಸುಟ್ಟಿರದೇ ಮೂರ್ ದ್ವಾಸ : ಅಣಕಿಸುವಂತೆಯೇ ಶುರುವಾಗುವ ಹಾಡಿನಲ್ಲಿರುವ ಸಾಲಿನಂತೆ ಇಲ್ಲಿ ಬಡತನ ಕಾಣಸಿಗುತ್ತದೆ. ತಾವು ಕಷ್ಟಪಟ್ಟರೂ ಮಕ್ಕಳು ಓದಿ ಮುಂದೆ ಬರಲೆಂದು ಆಶಿಸುವ ತಂದೆ ತಾಯಿ ಇಲ್ಲಿ ಕಾಣಿಸುತ್ತಾರೆ. ಬುದ್ಧಿ ಬಲಿಯದ ವಯಸ್ಸಿನ ಉಡಾಫೆಯ ಮಗ ಸಿದ್ದನಿದ್ದಾನೆ. 

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದವರು ಸಿದ್ದನ ಕಥೆ ಹೇಳಿದ್ದೇಕೆ.. ಬದುಕಿನ ಬದಲಾವಣೆ ಎಲ್ಲಿ ಶುರುವಾಗುತ್ತದೆ ಮತ್ತು ಹೇಗೆ ಎಂಬುದರ ಚೆಂದದ ಕಥೆ.


ದೊಡ್ಡ ಸಂಪಿಗೆಯ ತಿರುವು : ಹುಚ್ಚಾಲಮ್ಮನ ಒಕ್ಕಲಿಗೆ ಸೇರಿದ ಕಾರಣಕ್ಕೆ ಹುಚ್ಚಾಲಿ ಎಂದು ಹೆಸರು ಕರೆದಿರಬೇಕು ಎಂದುಕೊಂಡರೂ ಮೂಲ ಕಥೆ ಅವಳ ಹೆಸರ ಹಿಂದಿನ ಮರ್ಮವನ್ನು ಬೇರೆಯೇ ಹೇಳುತ್ತದೆ. ಜೊತೆಗೆ ಆಕೆಯ ತಂದೆಯ ನ್ಯಾಯ ನಿಷ್ಠುರತೆಯ ಪರಿಚಯವನ್ನು ಮಾಡಿಸುತ್ತದೆ. ಹುಚ್ಚಾಲಿಯ ಸಾಂಸಾರಿಕ ಬದುಕು ಹೇಗಿತ್ತು..? ಆಕೆಯ ಗಂಡ ಕಾಣೆಯಾದದಕ್ಕೂ.. ಅವಳ ಭ್ರಮೆಗೂ ಇರುವ ಸಂಬಂಧವೇನು..? ಕಣ್ಣಿಗೆ ಕಂಡದ್ದು ಅಥವಾ ಅಂದುಕೊಂಡದ್ದೇ ನಿಜ ಎನ್ನುವ ದೃಷ್ಟಿಕೋನವನ್ನು ಬದಲಿಸುವ ಕಥೆ ಇದು.


ಕಾಕ್ಟೇಲ್ : ವೀರೇಶ್ ಮಾಡುತ್ತಿದ್ದ ಕೆಲಸದ ಪರಿಚಯವನ್ನು ಮಾಡಿಸುತ್ತಲೇ ಆತನ ಕಥೆ, ಕಾದಂಬರಿಗಳನ್ನು ಓದುವ ಗೀಳು ಹಚ್ಚಿಕೊಂಡದ್ದು ಹಾಗೂ ಓದನ್ನು ಆಸ್ವಾದಿಸುತ್ತಿದ್ದ ಬಗೆಯ ಜೊತೆಗೆ ಅಚಾನಕ್ಕಾಗಿ ಸಿಕ್ಕ ಗೆಳೆತನಗಳಲ್ಲಿ ಸಾಹಿತ್ಯಕ್ಕೆ ಕನೆಕ್ಟ್ ಆದ ಗೆಳೆತನಗಳು ಕಾಣುತ್ತವೆ. ಆ ಗೆಳೆಯರ ಗುಂಪಿನಲ್ಲಿ ಪ್ರದೀಪ್ ಬರೆದ ಕಾಗದ ಒಂದು ಆತನ ಬದುಕಿಗೆ ಸಂಬಂಧಪಟ್ಟಿದ್ದೇ ಆದರೂ.. ವೀರುವಿನ ಒಂದು ನಿರ್ಲಕ್ಷ್ಯ ಪ್ರದೀಪ್ ಹಾಗೂ ವೀರುವಿನ ಬದುಕನ್ನೇ ಬುಡಮೇಲಾಗಿಸುವ ಬಗೆ ಇಲ್ಲಿದೆ. 


ಕುಂಟು ಸೇತುವೆ : ಇದೊಂದು ಪ್ರೇಮ ಕಥೆ. ಇಲ್ಲಿ ಪ್ರೇಮ ಯಶಸ್ವಿಯಾಯಿತೋ ಅಥವಾ ವಿಫಲವಾಯಿತೋ ಎಂಬುದನ್ನು ಓದಿ ನೋಡಿ. ಆದರೆ, ಈ ಕಥೆಯ ಕೊನೆಯಲ್ಲಿ ಬರುವ ಸಾಲು ಈ ಕಥೆಯನ್ನು ಬೇರೆಯದ್ದೇ ಆಯಾಮದಲ್ಲಿ ತೋರುವ ಸಾಮರ್ಥ್ಯ ಹೊಂದಿದೆ. 

ಸಂದರ್ಭ : ಕುಂಟು ಸೇತುವೆಯ ಕೆಳಗೆ ಮೀನುಗಳಿಗೆ ಕಡಲೆಪುರಿ ಇಡುತ್ತಾ ಕುಳಿತಿದ್ದ ಆತ ಹಾಗೂ ಪಚ್ಚಿ.

"ನಾನು ನನ್ನದೇ ಆದ ರೀತಿಯಲ್ಲಿ ಹೇಳಿದ ಅವನ ಕಥೆಯನ್ನು ಕೇಳಿ ಅವನಿಗೆ ಹೇಗಾಯಿತು ಏನೋ?"

ಈ ಕಥೆಯ ಕುರಿತು ನೀವೇ ಓದಿ ನೋಡಿ.


ಅಂಬಾಸಿಡರ್ ಕಾರು : ಸುಹಾಸ್ ತಿಳಿದೋ ತಿಳಿಯದೆಯೋ ಸಣ್ಣ-ಪುಟ್ಟ ತಪ್ಪನ್ನೂ ಬೆಟ್ಟದಷ್ಟೆಂದು ಭಾವಿಸಿ ಭಯಭೀತನಾಗುತ್ತಿದ್ದ. ನಲುಗುತ್ತಿದ್ದ, ನರಳುತ್ತಿದ್ದ. ಆದರೆ, ಕ್ಷಮೆ ಕೇಳಿ ಮತ್ತೆ ಸರಿಪಡಿಸಿಕೊಂಡು ಸಂತಸವನ್ನು ಹಂಚಿಕೊಳ್ಳುವುದು ಸಹ ಅಷ್ಟೇ ಆಪ್ತವಾಗಿ ಹಾಗೂ ಗಾಢವಾಗಿ. 

ಎಳ್ಳಮಾವಾಸ್ಯೆಯ ದಿನ ನಡೆದ ಒಂದು ಘಟನೆ ಅವನಿಗೆ ಗಾಢವಾಗಿ ಬಾಧಿಸುತ್ತಿತ್ತು. ತಪ್ಪು ಇವನದ್ದೇ.. ಅಪಘಾತವೆಂದರೆ ಅದು ಒಂದು ಕ್ಷಣದ ಮೈಮರೆಯುವಿಕೆ. ಈತ ಮಾಡಿದ ಅಪಘಾತಕ್ಕೆ ಬಲಿಯಾದ ವ್ಯಕ್ತಿ ಇವನನ್ನು ಸುಮ್ಮನೆ ಬಿಟ್ಟುಬಿಟ್ಟಿದ್ದ. ಆದರೆ, ಆತನ ಮಾತಿನಿಂದ ಪಶ್ಚಾತ್ತಾಪ ಪಡುತ್ತಾ ಆ ವ್ಯಕ್ತಿಯ ಯೋಗಕ್ಷೇಮ ವಿಚಾರಿಸಲು ಅಪ್ಪ, ಅತ್ತೆ ಹಾಗೂ ಪುಟ್ಟಿಯ ಜೊತೆ ಹೊರಡುತ್ತಾನೆ. ಪುಟ್ಟಿ ಎಲ್ಲರಂತಲ್ಲ. ಅಂದು ಅಲ್ಲಿಗೆ ಹೋದಾಗ ಅಂಬಾಸಿಡರ್ ಕಾರು ಕಂಡ ಪುಟ್ಟಿ ಕೆರಳಿದ್ದೇಕೆ..? 

ಕೆಲವೊಮ್ಮೆ ಸಂತ್ರಸ್ತರು ಎಂದು ಭಾವಿಸುವವರು ನಿಜಕ್ಕೂ ಸಂತ್ರಸ್ತರೇ ಆಗಿರುತ್ತಾರೆಯೇ..?


ಭೈರೂಪ : ವಂದನಾ ಹಾಗೂ ಅಭಿಯ ಮನಸ್ತಾಪ ಹಾಗೂ ಅವರಿಬ್ಬರ ಮನದ ತುಮುಲಗಳು ತೆರೆದುಕೊಳ್ಳುತ್ತಾ ಸಾಗುತ್ತವೆ. ವಂದನಾ ಹಾಗೂ ಅಭಿ ಒಬ್ಬರಿಗೊಬ್ಬರು ಏನಾಗಬೇಕು ಎಂಬ ಸಂಬಂಧ ತೆರೆದುಕೊಂಡಾಗ ಅವರಿಬ್ಬರ ನಡುವಿನ ಮನದ ಮಾತುಗಳು ನಿಜಕ್ಕೂ ಸರಿಯೇ ಎಂಬ ಆಲೋಚನೆ ಮೂಡುತ್ತಿರುವಾಗಲೇ ವಂದನಾ ಅಭಿ ಎಂದು ಕರೆಯುತ್ತಿದ್ದದ್ದು ಅನಿತಾಳನ್ನು ಎಂದು ತಿಳಿದುಬರುವಷ್ಟರಲ್ಲಿ ಕಥೆ ಕೊನೆಯಾಗುತ್ತದಾದರೂ.. ಕಥೆ ಮತ್ತೊಂದು ಆಯಾಮದಲ್ಲಿ ಇನ್ನೊಮ್ಮೆ ಓದಿಸಿಕೊಳ್ಳುತ್ತದೆ.


ಕ್ವಲ್ಲನಂಜಿ : ಕ್ರಿಶ್ಚಿಯನ್ನರ ಸಮಾಧಿ ಹಾಗೂ ಅವರು ಅಂತ್ಯಸಂಸ್ಕಾರ ಕಾರ್ಯವನ್ನು ಮಾಡುವ ಕ್ಷಣದಿಂದ ತೆರೆದುಕೊಳ್ಳುವ ಕಥೆ ನಂಜಿಯ ಹಾಲುತುಪ್ಪದ ದಿನ ಸಮಾಧಿಯ ಮೇಲಿಟ್ಟ ತಿಂಡಿ-ತಿನಿಸನ್ನು ಕಾಗೆ ಮುಟ್ಟದೆ ಇರುವಾಗ ಅಯ್ಯನಿಗೆ ಗೊತ್ತಾಗದಂತೆ ನಂಜೆಯ ದೊಡ್ಡ ಮಗ ಮಾಡಿದ ಕೆಲಸವೇನು..? ಎನ್ನುವುದರಿಂದ ಶುರುವಾಗಿ, ಅಯ್ಯ ಹಾಗೂ ನಂಜಿಯ ಯೌವ್ವನದ ದಿನಗಳಿಂದ ಇಂದಿನ ಆಪ್ತತೆಯವರೆಗೂ ತೆರೆದುಕೊಳ್ಳುತ್ತದೆ. ಅಯ್ಯವನ್ನು ಸಮಾಧಾನಪಡಿಸಿದವರಾರು..? ನಂಜಿಯ ಕೊನೆಯ ಆಸೆ ಏನಿತ್ತು..? 


ವಿಕಾರಿ : ಇಲ್ಲಿ ಪ್ರತಿ ಕಥೆಗೂ ಶೀರ್ಷಿಕೆ ಚಿತ್ರಗಳಿವೆ. ಆದರೆ, ಈ ಕಥೆಯ ಚಿತ್ರವಂತೂ ಅನ್ವರ್ಥದಂತಿದೆ. 

ಎಲ್ಲಾ ಪತ್ರಗಳು ಸರಿಯಾಗಿ ಹೊಂದಿ ಕೆಲಸಕ್ಕೆಂದು ಹೋದ ಮುರುಗ ಬಂದಾಗ ಮೊದಲಿನಂತಿರಲಿಲ್ಲ. ಅಮ್ಮನ ಉತ್ಸಾಹಕ್ಕೂ ಅವನ ನಿರುತ್ಸಾಹಕ್ಕೂ ಬಹಳ ವೇ ಅಂತರ. 

ಅದಕ್ಕೂ ಮೊದಲು ಆಕೆಯ ನೆನಪಿನಾಳದ ಮಾತುಗಳು ಇಂತಿವೆ.

"ಹೆಣ್ಣ ತ್ತಾಣ ನೂರ್ಮಡಿಗೊಳ್ಳುವುದಕ್ಕೆ ತಾಯ್ತನವೇ ವೇದಿಕೆ. ಹೆಣ್ಣ ಹುಟ್ಟು, ಹೆಣ್ಣ ಬದುಕು ಸಾರ್ಥಕ್ಯದ ಗುರಿ ಮುಟ್ಟಿ ತೇಲಾಡುವಂಥದ್ದು ಆಗಲೇ. ಯಾರೇ, ಏನೇ ಎದುರಾದರೂ ಈಸುವ ಛಲ ಹೆಣ್ಣಿನೊಳಗೆ ಪುಟಿದೇಳುವಂತದ್ದು ಅಲ್ಲಿಂದೀಚೆಗೇ. ಇಂತಹ ಮಧುರ ಸುಮಧುರ ಪ್ರಕೃತಿಯಲ್ಲಿ ನನ್ನೊಳಗೊಬ್ಬ ವಿಕಾರಿ ಮೈದಾಳುವುದೇ..?!"

ಪಲ್ಲಮ್ಮನ ಮನಸ್ಸಿನ ಈ ಮಾತುಗಳು ಯಾವ ನೆನಪಿನಿಂದ ವಾಸ್ತವಕ್ಕೆ ಕರೆತರುತ್ತವೆ..? ಇದರ ಹಿನ್ನೆಲೆ ಏನು..?

ಕೆಲವು ವೃತ್ತಿಗಳು ವಂಶಪಾರಂಪರ್ಯವಾಗಿ ಮುಂದುವರಿಯುವುದಿಲ್ಲ. ಅದಕ್ಕೆ ಹಲವು ಕಾರಣಗಳು. ಇಲ್ಲಿ ಅಂತಹದ್ದೇ ಒಂದು ವೃತ್ತಿ ಇದೆ. ಆ ವೃತ್ತಿ ಸಮಾಜ ಎಷ್ಟೇ ಆಧುನಿಕತೆ ಕಂಡರೂ ಬದಲಾಗದ ವಾಸ್ತವತೆಗೆ ಹಿಡಿದ ಕನ್ನಡಿಯಂತಿದೆ. 

ನನಗೇಕೋ ಈ ಕಥೆಯ ಅಂತ್ಯ ಬದಲಾವಣೆಯನ್ನು ಬಿಂಬಿಸಿದ್ದರೆ ಚೆನ್ನಾಗಿರುತ್ತಿತ್ತು ಎನಿಸಿದರೂ.. ಆ ಬದಲಾವಣೆ ಅಷ್ಟು ಸುಲಭವಲ್ಲ ಎನ್ನುವ ವಾಸ್ತವತೆ ತೋರಿರುವ ಕಥೆಗಾರರೇ ಸರಿಯೇನೋ ಎಂದೂ ಅನ್ನಿಸಿತು.


ಈ ಕಥಾ ಸಂಕಲನದಲ್ಲಿ ಭಾಷೆ ಚಾಮರಾಜನಗರ, ಕೊಳ್ಳೇಗಾಲ ಭಾಗದ ಪ್ರಾಂತೀಯ ಕನ್ನಡ. ಅಲ್ಲಿನ ಆಡು ನುಡಿ, ಬೈಗುಳ ಹಾಗೂ ಮಂಟೇಸ್ವಾಮಿ ಪದಗಳು ವಿಭಿನ್ನ ಓದಿನ ಅನುಭವ ನೀಡುತ್ತವೆ. ಆಡುಭಾಷೆಯಿಂದಾಗಿ ಓದು ನಿಧಾನವಾದರೂ.. ಆಸಕ್ತಿಕರವಾಗಿ ಓದಿಸಿಕೊಂಡು ಹೋಗುವ ಕಥೆಗಳು ಇಲ್ಲಿವೆ. ಭಾಷೆ ಕಾವ್ಯಾತ್ಮಕವಾಗಿ ಹಾಗೂ ಸೆಳೆಯುವಂತಿದೆ. ಇನ್ನಷ್ಟು ವೈವಿಧ್ಯಮಯ ಬರಹಗಳು ಮೂಡಿ ಬರಲಿ ಎಂದು ಹಾರೈಸುವೆ. 


~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 2, 2026

ಒಂದೇ ನೋವಿಗೆ ಎಷ್ಟೆಂದು ಘಾಸಿಗೊಳ್ಳುವುದು..?


ನನಗಂತೂ ಆಗಾಗ ಬಹಳಷ್ಟು ಜ್ಞಾನೋದಯಗಳಾಗುತ್ತಿರುತ್ತವೆ. ಕೆಲವೊಂದು ಅಷ್ಟೇ ಬೇಗ ಅದರ ತೀವ್ರತೆಯನ್ನು ಕಳೆದುಕೊಳ್ಳಬಹುದಾದರೂ ಹೊಳೆಯುವ ಹೊಳವುಗಳು ಆ ಕ್ಷಣಕ್ಕೆ ಸಾಂತ್ವನ ನೀಡುತ್ತವೆ. ಅದರಲ್ಲೂ ಈಗೀಗ ಮಗಳ ನಡೆಗಳನ್ನೂ ಮೆಲುಕು ಹಾಕುವಾಗ, ಆಟೋಟಗಳನ್ನು ಗಮನಿಸಿ ಯಾವಾಗಲೋ ನನ್ನದೇ ಲಹರಿಯಲ್ಲಿರುವಾಗ ಯೋಚನಾಲಹರಿ ಮತ್ತೊಂದು ಕಡೆ ಹೊರಳುತ್ತದೆ. ಇದು ಹಾಗೆ ಹೊಳೆದದ್ದೇ..


ಕಳೆದ ವಾರ ಮಗಳಿಗೆ ವ್ಯಾಕ್ಸಿನ್ ಹಾಕಿಸಿದಾಗ ಆಸ್ಪತ್ರೆಯಲ್ಲಿ ನೋವಿನ ತೀವ್ರತೆಯಲ್ಲಿ ಒಂದೆರಡು ನಿಮಿಷ ಅತ್ತದಷ್ಟೇ. ಅವಳಿಗೆ ಮತ್ತೆ ಅದರ ಕಡೆ ಗಮನವಿರಲಿಲ್ಲ. ಮನೆಗೆ ಬಂದು ಆ ಬ್ಯಾಂಡೆಡ್ ನೋಡಿದಾಗ, ಎಲ್ಲಿ ಚುಚ್ಚಿ ಮಾಡಿದ್ದಾರೆ ಎಂದು ನಾವೇ ಬೇಕೆಂದು ಪ್ರಶ್ನಿಸಿದಾಗಲೆಲ್ಲಾ ಅವಳು ಅದನ್ನು ನೋಡಿಕೊಂಡಂತೆಲ್ಲಾ ಅಳು. ಅದೂ ಒಂದರ್ಧ ಗಂಟೆಯಷ್ಟೇ.. ನಂತರದ ಒಂದು ಗಂಟೆಯಲ್ಲಿ ಆಟದ ಸಂಭ್ರಮದಲ್ಲಿ ಅದನ್ನು ನೋಡಿಕೊಂಡು ಅವಳೇ ನಗುತ್ತಾ ತೋರುತ್ತಿದ್ದಳು. ನಾನು ಗಟ್ಟಿಗಿತ್ತಿ ನೋಡು ಎಂಬ ಹೆಮ್ಮೆ ಇರುವಂತೆ..! ಇನ್ನೊಂದಷ್ಟು ಕ್ಷಣಕ್ಕೆ ಹಾಗೂ ನಂತರ ಅದು ಲೆಕ್ಕವೇ ಇಲ್ಲವೆಂಬಂತೆ..!


ಇದನ್ನು ಮೆಲುಕು ಹಾಕಿದಾಗ ನನಗೆ ಹೀಗೆಲ್ಲಾ ಆಲೋಚನೆ ಮೂಡಿತು. ಯಾರಿಂದಲೋ ಯಾವುದೋ ಒಂದು ಸಂದರ್ಭದಲ್ಲಿ ನೋವಾದಾಗ, ಆಘಾತ, ದ್ರೋಹ, ವಂಚನೆ, ಅವಮಾನವಾದಾಗ.. ಹೀಗೆ ಯಾವುದೋ ಒಂದು ವಿಚಾರಕ್ಕೆ ಮನಸ್ಸು ಕೆಡಿಸಿಕೊಂಡು ಆ ಕ್ಷಣದಲ್ಲಿ ರಿಯಾಕ್ಟ್ ಮಾಡುತ್ತೇವೆ. ಹಲವಾರು ಬಾರಿ ಮತ್ತದು ನಮಗೆ ಮರೆತೇ ಹೋಗಿರುತ್ತದೆ. ಸಾಮಾನ್ಯವಾಗಿ ಕೋಪ ತೋರಿಸಿಕೊಂಡ ನಂತರ ಮತ್ತದೇ ವಿಚಾರಕ್ಕೆ ಕೋಪ ಬರುವ ಸಾಧ್ಯತೆ ತೀರಾ ಕಡಿಮೆ. 


ಆ ವ್ಯಕ್ತಿಯನ್ನೋ, ವಸ್ತುವನ್ನೋ ಅಥವಾ ಆ ಕ್ಷಣವನ್ನೋ ಯಾರೋ ನೆನಪಿಸಿದಾಗ ಅಥವಾ ಅಚಾನಕ್ಕಾಗಿ ನೆನಪಾದಾಗ ನೋವಿನ ತೀವ್ರತೆ ಹೆಚ್ಚಾಗುತ್ತದೆ. ಜೊತೆಗೆ ಮನಸ್ಸು ಘಾಸಿಯಾಗುತ್ತದೆ. ಅದನ್ನು ನೆನಪಿಸಿದವರ ಮೇಲೆಯೇ ಹರಿಹಾಯುವಂತಾಗುತ್ತದೆ. ಅವರಾದರೂ ಗೊತ್ತಿದ್ದೂ ಕೆಣಕುವುದೇಕೆ..?! ಗೊತ್ತಿದ್ದೂ.. ಬೇಡವೆಂದರೂ ಮತ್ತೊಬ್ಬರ ನೋವನ್ನು ಹೆಚ್ಚಿಸುವುದೇ ಅವರ ಗುರಿಯಿರಬಹುದೇನೋ..


ಅದೂ ಒಂದಷ್ಟು ದಿನಗಳಷ್ಟೇ.. ಮತ್ತೆ ಅವರನ್ನು ನೋಡಿದಾಗ ಬರುತ್ತಿದ್ದ ಕೋಪ-ತಾಪ, ಅಸಹನೆ ಎಲ್ಲವೂ ಮರೆತಂತೆ ಮರೆಗೆ ಸರಿಯುತ್ತದೆ. ಅದೂ ಒಂದಷ್ಟು ದಿನಗಳಷ್ಟೇ.. ಮತ್ತೆ ನಾವು ಅವರ ಇರುವಿಕೆಯನ್ನೇ ನಿರ್ಲಕ್ಷಿಸಿ ನಿರ್ಲಿಪ್ತಿಗೆ ಜಾರಿ ಬಿಡುತ್ತೇವೆ ಅಥವಾ ಅವರು ಎದುರಾದರೂ ಮತ್ತೆ ಮೊದಲಿನಷ್ಟಂತೂ ಮನಸ್ಸು ಕೆಡಿಸಿಕೊಳ್ಳುವುದಿಲ್ಲ.


ಒಂದೇ ನೋವಿಗೆ ಎಷ್ಟೆಂದು ಘಾಸಿಗೊಳ್ಳುವುದು..? 

ದೈಹಿಕ ಹಾಗೂ ಮಾನಸಿಕ ನೋವು ಎರಡನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಲಾಗದು. ಆದರೆ, ಮನಸ್ಸಿನ ನೆಮ್ಮದಿಗೆ, ನಿರಾಳತೆಗೆ ನಿರ್ಲಕ್ಷಿಸುವುದೋ ಇಲ್ಲವೇ ಕ್ಷಮಿಸಿಬಿಡುವುದೋ ಮಾಡುತ್ತೇವೆ. ಇದೆಲ್ಲದರಾಚೆಗೆ ನಮಗೆ ನೆನಪಿರಬೇಕಾಗುವುದು ಪದೇಪದೇ ಅಂತಹ ಮೋಸ, ಘಾಸಿಗೆ ಒಳಗಾಗದಂತೆ ನಮ್ಮನ್ನು ರಕ್ಷಿಸಿಕೊಳ್ಳುವುದು. ಕೆಲವೊಮ್ಮೆ ಕ್ಷಮಿಸುವುದು ಅನಿವಾರ್ಯವಾಗುತ್ತದೆ. ಆದರೆ, ಮರೆಯುವುದಿಲ್ಲ. ಹಾಗೆಂದು ಅದನ್ನೇ ಸಾಧಿಸುವುದೂ ಅಲ್ಲ. ಮರೆಯುವಷ್ಟೇ ಮರೆಯದಿರುವುದೂ ಮುಖ್ಯವಾಗುತ್ತದೆ. ಇಲ್ಲವಾದಲ್ಲಿ, ಅದೇ ಪಾಠವನ್ನು ಬದುಕು ನಾವು ಕಲಿಯುವವರೆಗೂ ಬೇರೊಂದು ರೂಪದಲ್ಲಿ ಕಲಿಸುತ್ತಲೇ ಇರುತ್ತದೆ. ಅಲ್ಲವೇ..?!


~ವಿಭಾ ವಿಶ್ವನಾಥ್ 

ಆತಂಕ ಕರಗಿ

 


ಪ್ರತಿ ಆತಂಕವೂ ಸೃಷ್ಟಿಯಾಗಿದ್ದು

ಭವಿಷ್ಯದ ಮುಂದಾಲೋಚನೆಯಲ್ಲಿ

ದೂರಾಲೋಚನೆಯಲ್ಲಿ


ಪ್ರತಿ ಆತಂಕವೂ ಕರಗಿದ್ದು

ಆ ಕ್ಷಣ ಕಳೆದಾಗ 

ವಾಸ್ತವದ ನಿಜ ಹಿತವಾದಾಗ


ನಿರಾತಂಕದ ಹಿಂದೆ

ಭವಿಷ್ಯದ ಭಯವಿರಲಿಲ್ಲ

ವಾಸ್ತವ ಹೆದರಿಸಲಿಲ್ಲ


~ವಿಭಾ ವಿಶ್ವನಾಥ್

ಬಂಧ

 


ನಿಷ್ಠುರವಾದ ನಿರಾಕರಣೆ

ವಾದ - ಪ್ರತಿವಾದಗಳು

ಒಮ್ಮೆ ಘಾಸಿಗೊಳಿಸಿದರೂ

ಒಳ್ಳೆಯದಕ್ಕೆಂದು ಅರಿವಾದಾಗ

ಬಂಧ ಗಟ್ಟಿಯಾಗಿತ್ತು


ನಾಟಕದ ಪ್ರೀತಿ ತೋರಿ

ಬೆನ್ನಿಗೆ ಇರಿದದ್ದು

ಜೀವನವಿಡೀ ನೆನಪಲ್ಲುಳಿಯಿತು

ಬಂಧ ಮಾತ್ರ ಕಳಚಲಿಲ್ಲ

ಅಳಿದದ್ದು ನಂಬಿಕೆಯೂ..!


~ವಿಭಾ ವಿಶ್ವನಾಥ್

ಮಾನದಂಡ

 


ಬುದ್ಧಿವಂತಿಕೆಯ ಮಾನದಂಡ 

ಅಂಕ, ಜ್ಞಾನಾರ್ಜನೆ ಮಾತ್ರವಲ್ಲ..!

ಓದಿದ್ದನ್ನು ಉಪಯೋಗಿಸುವುದು

ಕಲಿತಿದ್ದನ್ನು ಹಂಚಿಕೊಳ್ಳುವುದು

ಅಷ್ಟೇ ಅಲ್ಲ..!

ಕಲಿತದ್ದು ಸಾಸಿವೆಯಷ್ಟಿದ್ದರೆ

ಕಲಿಯುವುದು ಸಾಗರದಷ್ಟಿದೆ 

ಎಂಬುದ ಮರೆಯದಿರುವುದು

ಹಾಗೆಯೇ.. ಯಶಸ್ಸಿನ ಮಾನದಂಡ

ಕೇವಲ ಗೆಲುವಲ್ಲ

ಎಲ್ಲ ಸಿಕ್ಕ ನಂತರವೂ

ವಿನಯತೆಯನ್ನು ಮರೆಯದಿರುವುದು

ಮೆರೆಯದಿರುವುದು..!


~ವಿಭಾ ವಿಶ್ವನಾಥ್

ಸಣ್ಣ ತಪ್ಪಿನ ಹಿಂದೆ (ಬೆಳಕಿಂಡಿಯ ಕತೆಗಳು - 62)

 


ರಾತ್ರಿಯ ಸಣ್ಣ ಮನಸ್ತಾಪ ಅವಳು ಹಾಕುತ್ತಿದ್ದ ರಂಗೋಲಿಯನ್ನೂ ಪ್ರಭಾವಿಸಿತ್ತು. ಎಷ್ಟೇ ಕೇಂದ್ರೀಕರಿಸಿದರೂ ಸಣ್ಣ ತಪ್ಪು ಆಗುತ್ತಲೇ ಇತ್ತು. ಒಮ್ಮೆ ಚುಕ್ಕಿ ಕಡಿಮೆ, ಮತ್ತೊಂದು ಸಾಲಿನಲ್ಲಿ ಹೆಚ್ಚು. ಎಲ್ಲಿಗೋ ಎಳೆಯಬೇಕಾದ ಎಳೆ ಮತ್ತೆಲ್ಲೋ..!

ಒಳಗಿನಿಂದ ತೇಲಿ ಬಂದ ಕಾಫಿಯ ಘಮಲು ಮನಸ್ತಾಪವನ್ನು ಮಾತ್ರವಲ್ಲ ಸಣ್ಣ ತಪ್ಪುಗಳನ್ನೂ ಸರಿಪಡಿಸಿತ್ತು.

~ವಿಭಾ ವಿಶ್ವನಾಥ್

ಹೊಣೆ (ಬೆಳಕಿಂಡಿಯ ಕತೆಗಳು - 61)

 


ತಮ್ಮ ಊರಿನಲ್ಲಿ ಮಾತ್ರವಲ್ಲದೆ ಅಕ್ಕ-ಪಕ್ಕದ ಹಳ್ಳಿಗಳಲ್ಲಿಯೂ ಹೂಳು ತೆಗೆದು, ಬಾವಿ ಕಟ್ಟೆ ಸರಿಪಡಿಸಿ, ಬತ್ತಿ ಹೋಗಿದ್ದ ಬೋರ್ ಗಳ ಪಕ್ಕದಲ್ಲಿ ಹಾಗೂ ಬೇರೆಡೆಗಳಲ್ಲಿ ಇಂಗು ಗುಂಡಿ ಮಾಡಿಸಿ, ರಸ್ತೆಯ ಇಕ್ಕೆಲಗಳಲ್ಲಿ ಗಿಡ ನೆಡುವ ಹಾಗೂ ಇಂತಹದ್ದೇ ಯಾವುದಾದರೊಂದು ಚಟುವಟಿಕೆಯನ್ನು ವಾರಕ್ಕೊಮ್ಮೆ ತಪ್ಪದೆ ಮಾಡುವ ಕಾಲೇಜು ಡ್ರಾಪ್ ಔಟ್ ಗಳ ಗುಂಪನ್ನು ವಿಚಿತ್ರವಾಗಿ ನೋಡುತ್ತಿದ್ದರು ಜನ. 

ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸವನ್ನು ಮಾಡುತ್ತಾ, ಮಣ್ಣಿನ ಮಕ್ಕಳಾದವರು ಪರಿಸರ ಸಂರಕ್ಷಣೆಯನ್ನು ಅತ್ಯಂತ ಸಮರ್ಪಕವಾಗಿ ಮಾಡುತ್ತಿದ್ದರು. ಹೆಚ್ಚೇನಿಲ್ಲ.. ಐದು ವರ್ಷಗಳಲ್ಲಿಯೇ ಜನರಿಗೆ ಅದರ ಮಹತ್ವ ಅರಿವಾಗಿ ಅವರೊಡನೆ ಕೈಜೋಡಿಸಿದರು. "ಪ್ರಕೃತಿ ಸಂರಕ್ಷಣೆ ಎಲ್ಲರ ಹೊಣೆ" ಎಂದು ಮಕ್ಕಳಿಗೂ ಹೇಳಿಕೊಡುತ್ತಿದ್ದಾರೆ.

~ವಿಭಾ ವಿಶ್ವನಾಥ್

ಹರಸು ಬಾ ನನ್ನನು (ಪುಸ್ತಕ ಯಾನ - 479)


ಪುಸ್ತಕದ ಶೀರ್ಷಿಕೆ : ಹರಸು ಬಾ ನನ್ನನು

ಲೇಖಕರು : ಸಿ. ಎನ್. ಮುಕ್ತಾ

ಪ್ರಕಾಶಕರು : ಪಾಂಚಜನ್ಯ ಪಬ್ಲಿಕೇಶನ್ಸ್ 

ಪ್ರಥಮ ಮುದ್ರಣ : 2023

ಪುಟಗಳು : 328

ಬೆಲೆ : 325 ರೂ. 


ಹುಟ್ಟಿದಾಗಲೇ ತಾಯಿಯನ್ನು ಕಳೆದುಕೊಂಡು ತಂದೆಯ ಜೊತೆ ಬೆಳೆಯದೆ, ತಾಯಿಯ ತಾಯಿ ಅಜ್ಜಿಯ ಆಶ್ರಯದಲ್ಲಿ ಬೆಳೆದು ಸಂಸ್ಕಾರ ಹಾಗೂ ವಿದ್ಯೆ ಕಲಿತ ಯುವತಿಯೊಬ್ಬಳು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವ ಪರಿ ಈ ಕಾದಂಬರಿಯ ಕಥಾವಸ್ತು. ಜೊತೆಗೆ ಕೌಟುಂಬಿಕ ಮೌಲ್ಯವನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ.


ಕೌಶಿಕಿ ಈ ಕಥೆಯ ನಾಯಕಿ. ರಾಜಾರಾಯರ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಪಾತಜ್ಜಿ ಕೌಶಿಕಿಯನ್ನು ಬೆಳೆಸಿ ದೊಡ್ಡವಳನ್ನಾಗಿಸಿದಳು. 


ಇಲ್ಲಿ ರಾಜರಾಯರ ಮನೆಯ ಪರಿಸರವನ್ನು ತಿಳಿದುಕೊಳ್ಳುವ ಅಗತ್ಯ ಕಾಣುತ್ತದೆ. ಮುಂದೆ ಕೌಶಿಕಿಗೆ ಈ ಮನೆಯ ನಂಟು ಬೆಳೆಯುವ ಬಗೆಯೂ ಈ ಕಥೆಯಲ್ಲಿದೆ. 


ರಾಜಾರಾಯರಿಗೆ ನಾಲ್ಕರ ಗಂಡು ಮಕ್ಕಳು ಹಾಗೂ ಒಬ್ಬಳು ಮಗಳು. ಪತ್ನಿ ಶಂಕರಮ್ಮ. ಮೊದಲ ಮಗ ಸುಧಾಕರ್ ಲಾಯರ್ ಆತನ ಪತ್ನಿ ಇರಲಿಲ್ಲ. ಎರಡನೆಯ ಮಗ ಪ್ರಭಾಕರ ಕಾಲೇಜು ಅಧ್ಯಾಪಕ, ಹೆಂಡತಿ ಅನುರಾಧ. ಮೂರನೆಯ ಮಗ ಸೋಮೇಶ್ವರ ಇಂಜಿನಿಯರ್ ಆಗಿದ್ದವನು. ಆತನ ಪತ್ನಿ ಸರಳ. ಕೊನೆಯ ಮಗ ದಿನಕರನಿಗಿನ್ನೂ ವಿವಾಹವಾಗಿರಲಿಲ್ಲ. ಒಬ್ಬಳೇ ಮಗಳು ಚಿನ್ಮಯಿ. ಅವಳ ಗಂಡ ಶರತ್ ಸಹ ಡಾಕ್ಟರ್. ಇವರಿಗೆ ಇಬ್ಬರು ಹೆಣ್ಣು ಮಕ್ಕಳು. ದಿನಕರನಿಗಿಂತ ಮೊದಲು ಹುಟ್ಟಿದವಳು ಚಿನ್ಮಯಿ. 


ಚಿನ್ಮಯಿ ಡಾಕ್ಟರ್ ಆಗಿದ್ದರೂ ತನ್ನ ನರ್ಸಿಂಗ್ ಹೋಮ್ ನಲ್ಲಿ ಹಣದಾಸೆಗೆ ಬಿದ್ದಿದ್ದಳು. ನೆಂಟರಿಗೂ ರಿಯಾಯಿತಿ ತೋರಿಸುತ್ತಿರಲಿಲ್ಲ. ಅತ್ತಿಗೆಯರ ಜೊತೆ ಆತ್ಮೀಯ ಭಾವವಿರಲಿಲ್ಲ. ಎಲ್ಲರಿಗೂ ಎಲ್ಲೆಡೆಯೂ ದರ್ಪ ತೋರುತ್ತಿದಳು. ಕೆಲಸದವರನ್ನು ಆತ್ಮೀಯವಾಗಿ ಕಂಡಿರಲಿಲ್ಲ. ಅತ್ತೆ-ಮಾವನ ಜೊತೆ ಇರಲಿಲ್ಲ. ಗಂಡ ಶರತ್ ಗೂ ನೆರವಾಗದೆ ತನ್ನ ಊಟ-ತಿಂಡಿ, ಮಕ್ಕಳ ಆರೈಕೆಗೆ ಅಮ್ಮನ ಮನೆಯನ್ನು ನೆಚ್ಚಿದ್ದವಳು.


ಕೌಶಿಕಿ ತನ್ನ ಕಂಪ್ಯೂಟರ್ ಸೈನ್ಸ್ ಬಿ .ಎಸ್ಸಿ ಮುಗಿಸಿದ ನಂತರ ಎಂ .ಎಸ್ಸಿಗೆ ಹೋಗುವ ಆಸೆ ಇದ್ದರೂ ತಾನೇ ದುಡಿದು ಓದಬೇಕೆಂದು ಕೆಲಸ ಹುಡುಕುತ್ತಿರುವಾಗ.. ರಾಜಾರಾಯರಲ್ಲಿಯೇ ಕೆಲಸ ಸಿಕ್ಕಿತ್ತು. ಬೆಳಗ್ಗೆ ಮಕ್ಕಳನ್ನು ರೆಡಿ ಮಾಡಿ ಶಾಲೆಗೆ ಬಿಟ್ಟು ಬಂದು, ಸಾಯಂಕಾಲ ಹೋಮ್ ವರ್ಕ್ ಮಾಡಿಸುವುದು. ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಮಕ್ಕಳ ಮನೆಗೆದ್ದಿದ್ದಳು. ಅನುರಾಧ ಹಾಗೂ ಸರಳರು ಇದರಿಂದ ತೃಪ್ತಿ ಹೊಂದಿದ್ದರು. ಆದರೆ, ಚಿನ್ಮಯಿ ಆಕೆಗೆ ಹೊಂದಿಕೊಂಡಿರಲಿಲ್ಲ. ಆಕೆಯನ್ನು ಕೆಲಸದವಳ ಹಾಗೆ ನಡೆಸಿಕೊಳ್ಳಲು ಹೋದಾಗ ಸ್ವಾಭಿಮಾನದಿಂದಲೇ ಉತ್ತರಿಸಿದ್ದಳು ಕೌಶಿಕಿ.


ಚಿನ್ಮಯಿಯ ಅಹಂಕಾರದ ಗುಣಕ್ಕೆ ಶರತ್ ಸಹ ಪಾಠ ಕಲಿಸಲು ತೀರ್ಮಾನಿಸಿದ. ಇದಕ್ಕೆ ಶಂಕರಮ್ಮನ ಸಹಕಾರವೂ ಇತ್ತು. ತಂದೆ-ತಾಯಿಯ ಅನುಪಸ್ಥಿತಿ ಮಕ್ಕಳಿಗೆ ಕಾಡಿತ್ತು. ಅದರಲ್ಲಿಯೂ ಹಿರಿಯ ಮಗಳಾದ ಚಾರುಲತಾಳಿಗೆ ಹೆಚ್ಚು. ಮುಂದೆ ಮತ್ತೊಬ್ಬ ಮಗಳು ಚಿನ್ಮಯಿಯೂ ಅದೇ ಹಾದಿ ಹಿಡಿಯುವುದೇನು ಕಷ್ಟವಿರಲಿಲ್ಲ. ಚಾರುವನ್ನು ಮನೋವೈದ್ಯರ ಬಳಿಗೆ ಕರೆದುಯ್ದ ಚಿನ್ಮಯಿ ಯಲ್ಲಿ ಕ್ರಮೇಣ ಆದ ಬದಲಾವಣೆಗಳೇನು..? ಹೆಣ್ಣುಮಕ್ಕಳ ಹೊಂದಾಣಿಕೆಯಿಂದ ಸಂಸಾರದ ಸುಖ, ಮಕ್ಕಳ ಭವಿಷ್ಯ, ನೆಮ್ಮದಿಯ ಬದುಕು ಅಡಗಿರುವುದನ್ನು ಇಲ್ಲಿ ಗಮನಿಸಬಹುದು. 


ಸುಧಾಕರನ ಮೊದಲ ಪತ್ನಿ ತೀರಿ ಹೋದದ್ದು ಹೇಗೆ..? ಸುಧಾಕರ ಅದಕ್ಕಿಂತಲೂ ಮೊದಲು ಪ್ರೀತಿಸಿದ ಶ್ಯಾಮಲಾ ಡಾಕ್ಟರ್ ಆಗಿದ್ದಳು. ಈಗಲೂ ಅವಳು ಅವಿವಾಹಿತೆಯಾಗಿಯೇ ಇದ್ದಳು. ಸುಧಾಕರನ ಜೊತೆಗೆ ಅವಳ ಮರು ವಿವಾಹವಾಗಿ ಮಕ್ಕಳು ಅವಳನ್ನು ಅಮ್ಮ ಎಂದು ಸ್ವೀಕರಿಸುವಲ್ಲಿ ಕೌಶಿಕಿ ಪಾತ್ರ ಏನಿತ್ತು..? ಶ್ಯಾಮಲಾಳ ನೇರವಂತಿಕೆಯ ಸ್ವಭಾವವನ್ನು ಇಲ್ಲಿ ಕಾಣಬಹುದಾದರೂ ಅದು ನಕಾರಾತ್ಮಕ ರೀತಿಯಲ್ಲಲ್ಲ. ಶಂಕರಮ್ಮ ತಮ್ಮ ಮನೆಯಲ್ಲಿ ಕೆಲಸಕ್ಕಿದ್ದ ಬಾಯಮ್ಮನನ್ನು ಬಿಡಿಸುವುದಕ್ಕೂ ಶ್ಯಾಮಲಾ ಹಾಗೂ ಸುಧಾಕರನ ವಿವಾಹ ತಪ್ಪಿಸುವುದಕ್ಕೂ ನೀಡಿದ ಕಾರಣವೇನು..?


ರಾಜರಾಯರ ತಮ್ಮನ ಮಗ ಹರೀಶ ತನ್ನ ತಂಗಿ ಹರಿಣಿ ಮದುವೆಗೆ ಕರೆಯಲು ಬಂದಾಗ ಕೌಶಿಕಿಗೂ ಆತನಿಗೂ ಪರಿಚಯವಾಗಿತ್ತು. ಆತ ಮೈಸೂರಿನ ಹತ್ತಿರದ ಹಳ್ಳಿಯಲ್ಲಿದದ್ದು. ಕೌಶಿಕಿಗೆ ಆತ ಮನಸೋತ. ಬಡವರಾಗಿದ್ದರೂ.. ಗ್ರಾಜುಯೇಟ್ ಆಗಿರುವ, ಹಳ್ಳಿಯಲ್ಲಿ ಇರಲು ಒಪ್ಪುವ ಹುಡುಗಿ ಆತನ ಸಂಗಾತಿಯಾಗಿ ಬರಲು ಆತನಿಗೆ ಆಸೆ ಇತ್ತು.


ಹರಿಣಿಯ ಮದುವೆ ಹಳ್ಳಿಯಲ್ಲಿ ಆಗದೇ ಇದ್ದದ್ದು ರಾಜರಾಯರು ಹಳ್ಳಿಗೆ ಬರದೇ ಇರಲು ಶಪಥ ಮಾಡಿದ್ದು, ರಾಜರಾಯರ ತಮ್ಮ ಗಣೇಶರಾಯರ ಮೊದಲ ಪತ್ನಿ ತುಳಸಿಯ ಸಾವು, ಈಗಿನ ಪತ್ನಿ ಸುವರ್ಣಮ್ಮ ಹಾಗೂ ಅವರ ಮಗ ಹರೀಶ ಹೀಗೆ ಎಲ್ಲರ ವಿಚಾರವನ್ನು ಪಾತಜ್ಜಿ ಕೌಶಿಕಿಗೆ ತಿಳಿಸುತ್ತಾರೆ. ಸಿರಿವಂತರ ಮನೆಯ ಹಿನ್ನೆಲೆ ಬಿಚ್ಚಿಕೊಳ್ಳುತ್ತದೆ. ಹಿನ್ನೆಲೆ ಓದಿ ನೋಡಿ 


ವಠಾರದಲ್ಲಿದ್ದ ಶಾಂತಮ್ಮನವರು ಕೌಶಿಕಿಯನ್ನು ಮಗಳಂತೆಯೇ ಕಾಣುತ್ತಿದ್ದವರು. ಪಾತಜ್ಜಿಯನ್ನು ಬಹಳ ಗೌರವಿಸುತ್ತಿದ್ದವರು. ಶಾಂತಮ್ಮನವರ ಅಣ್ಣನ ಮಗಳು ಮೇಘಳ ವಿವಾಹದಲ್ಲಿ ಕೌಶಕಿಯ ಪಾತ್ರವೇನಿತ್ತು...? 


ಮೇಘಾಳ ತಂದೆ ದಯಾನಂದ ಹಾಗೂ ತಾಯಿ ಮಂದಾಕಿನಿ ಕೌಶಿಕಿಯನ್ನು ಮುಕ್ತ ಮನಸ್ಸಿನಿಂದ ಹೊಗಳಿದರು. ಅದು ಕೇವಲ ಬಾಯಿ ಮಾತಿನ ಹೊಗಳಿಕೆಯಾಗಿರಲಿಲ್ಲ. 


ಮುಂದೆ ದಯಾನಂದ ಅವರ ಸಹಾಯ ಹಾಗೂ ಶಾಂತಮ್ಮನವರ ಸಹಕಾರದಿಂದ ರಾಜರಾಯರ ಮನೆಯ ಕೆಲಸ ಬಿಟ್ಟು ಅಜ್ಜಿ ಮೊಮ್ಮಗಳಿಬ್ಬರು ಮೈಸೂರಿಗೆ ಹೋಗುವ ಕಾರಣವೇನು..? ಇದಕ್ಕೆ ಶಂಕರಮ್ಮನವರು ಒಪ್ಪಿದರೇ..?


ಕೌಶಿಕಿಯ ವಿವಾಹದ ಸಂದರ್ಭದಲ್ಲಿ ನೀಡಲು ಅವರು ಶಾಂತಮ್ಮನವರ ಬಳಿ ಕೊಟ್ಟ ಒಡವೆ ಅವರದಲ್ಲವೆಂಬ ಸುಳಿವು ಸಿಕ್ಕದ್ದು ಹೇಗೆ..?


ರಾಜರಾಯರ ಒಟ್ಟು ಮನೆ ಬೇರೆಯಾದದ್ದು ಹೇಗೆ..? ಕಾಲ ಎಲ್ಲವನ್ನು ಬದಲಿಸುತ್ತದೆ. ದಿನಕರನ ವಿವಾಹ ಶಂಕರಮ್ಮನವರು ಅಂದುಕೊಂಡಂತೆ ನಡೆಯದ್ದಕ್ಕೆ ಕಾರಣವೇನು..? ಕೌಶಿಕಿಗೂ ಇದಕ್ಕೂ ಸಂಬಂಧವಿತ್ತೆ..?


ತನ್ನದಲ್ಲದ ಕ್ಷೇತ್ರದಲ್ಲಿಯೂ ಕೌಶಿಕಿ ದುಡಿದು ದಯಾನಂದ ಅವರ ಮೇಘಾ ಗಾರ್ಮೆಂಟ್ ಫ್ಯಾಕ್ಟರಿಯನ್ನು ಬದಲಾಯಿಸಿದ್ದು ಹೇಗೆ..? ಇದಕ್ಕೆ ಮಂದಾಕಿನಿ ಅವರ ಒಪ್ಪಿಗೆ ಸಿಕ್ಕಿತೇ..?


ದಯಾನಂದರಿಗೆ ಹರೀಶ ಮೊದಲೇ ಪರಿಚಿತ. ಫ್ಯಾಕ್ಟರಿಯ ಹಗರಣವನ್ನು ಬಯಲು ಮಾಡಲು ಹರೀಶ ಯಾವ ನಾಟಕ ಮಾಡಿದ..? 


ಈಗಿನ ಕಾಲಕ್ಕೆ ತಕ್ಕಂತೆ ಬೊಟಿಕ್ ಹಾಗೂ ಶೋರೂಮ್ ನಿರ್ಮಿಸಿದ ದಯಾನಂದರ ಹೊಸ ಬ್ಯುಸಿನೆಸ್ ಹೇಗೆ ನಡೆಯಿತು..? ನಿಷ್ಠಾವಂತ ಕೆಲಸಗಾತಿ ಫಿಲೋಮಿನಾ ಕೂಡ ತ ಸೆಳೆಯುತ್ತಾರೆ. 


ಹರೀಶ ಹಾಗೂ ಕೌಶಿಕಿ ಇಬ್ಬರ ವಿವಾಹ ನಿಶ್ಚಯವಾಗುತ್ತದೆ. ಆದರೆ, ಇದು ಹೂವಿನ ಹಾಸಿಗೆಯಂತೇನಿರಲಿಲ್ಲ. ಅವರ ಕುಟುಂಬದ ಇತಿಹಾಸ ಗೊತ್ತಿದ್ದ ಪಾತಜ್ಜಿ ಇದಕ್ಕೆ ಒಪ್ಪಿದ್ದು ಹೇಗೆ..? ಶಂಕರಮ್ಮನವರಿಗೆ ಇದು ಇಷ್ಟವಾಗದೆ ಹೋದದ್ದೇಕೆ..? ಹರೀಶನೇನೋ ಆದರ್ಶ ಯುವಕ. ಆದರೆ, ಆತನ ತಂದೆ-ತಾಯಿಯೂ ಹಾಗೆಯೇ ಇದ್ದರೆ..?


ಕೌಶಿಕಿಯ ಓದುವ ಕನಸಿನ ಬದಲಾಗಿ ಅವಳು ಬೆನ್ನುತ್ತಿದ ಮತ್ತೊಂದು ಕನಸು ಯಾವುದು..? ವಿವಾಹದ ನಂತರ ಕೌಶಿಕಿ ಕುಟುಂಬವನ್ನು ಬೆಸೆಯುವ ಪರಿ ಹೇಗಿದೆ..?


ಹರಿಣಿಯ ಮಗಳಿಗೆ ಇಡುವ ಐದು ಹೆಸರುಗಳಲ್ಲಿ ಒಂದನ್ನು ಕೌಶಿಕಿ ಆರಿಸಿ ತುಳಸಿಯವರ ಹೆಸರು ಇಟ್ಟದ್ದೇಕೆ..?


ಮೊದಲಿಗೆ ಸಾಮಾಜಿಕ ಹಾಗೂ ಕೌಟುಂಬಿಕ ಕಾದಂಬರಿಯಂತೆ ಕಂಡರೂ.. ಕುತೂಹಲಕರವಾಗಿ ರೋಚಕವಾಗಿ ಸಾಗುವ ಕಥೆ ಕೊನೆಯವರೆಗೂ ಊಹಿಸಲಾಗದ ತಿರುವನ್ನು ಹೊತ್ತು ಸಾಗಿದೆ. ಈ ನಿಗೂಢತೆ ಮುಂದೇನು ಎಂದು ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಮನುಷ್ಯ ನೆಮ್ಮದಿಯ ಜೀವನ ನಡೆಸಲು ಅಗತ್ಯವಾದುದೇನು ಎಂಬುದನ್ನು.. ಜೊತೆಗೆ ಸ್ವಾಭಿಮಾನ, ನೇರವಂತಿಕೆ, ಬದುಕಿನಲ್ಲಿ ವ್ಯಕ್ತಿತ್ವಕ್ಕೆ ಕೊಡುವ ಮೆರುಗೇನು ಎನ್ನುವುದನ್ನು ಹಾಗೂ ಕೌಟುಂಬಿಕ ಮೌಲ್ಯಗಳನ್ನು ಕಟ್ಟಿಕೊಡುವ ಕಾದಂಬರಿ ಇದು. 


~ ವಿಭಾ ವಿಶ್ವನಾಥ್

ಮನಸಾಲಜಿ ಆಫ್ ಮಾನಿನಿ (ಪುಸ್ತಕ ಯಾನ - 478)


ಪುಸ್ತಕದ ಶೀರ್ಷಿಕೆ : ಮನಸಾಲಜಿ ಆಫ್ ಮಾನಿನಿ

ಲೇಖಕರು : ಭಾರ್ಗವಿ ಶೆಟ್ಟಿ

ಪ್ರಕಾಶಕರು : ಕದಂಬ ಪ್ರಕಾಶನ 

ಪ್ರಥಮ ಮುದ್ರಣ : 2026

ಪುಟಗಳು : 100

ಬೆಲೆ : 160 ರೂ.


ಹೆಣ್ಣೆಂದರೆ ಅವಳನ್ನು ಕಡಿಮೆ ಅಂದಾಜಿಸುವಂತೆಯೇ ಇಲ್ಲ. ಆ ಕಾಲಕ್ಕೂ.. ಈ ಕಾಲಕ್ಕೂ ಬಹಳ ವ್ಯತ್ಯಾಸವಿದೆ. ಆದರೆ ನಮ್ಮ ನಡುವೆಯೇ ಇರುವ ಸ್ತ್ರೀಯರನ್ನು, ಅವರ ಆತ್ಮವಿಶ್ವಾಸ, ದೈರ್ಯ, ಸ್ವಾಭಿಮಾನವನ್ನು ಗುರುತಿಸಿ ಅವರನ್ನು ಪರಿಚಯಿಸಿದ್ದಾರೆ ಲೇಖಕಿ. ಅವರ ಭಾವಚಿತ್ರಗಳು, ಸಾಧನೆಗಳ ಜೊತೆಗೆ ಮನದಾಳದ ಮಾತುಗಳು ಇಲ್ಲಿವೆ. 


ಶಿಕ್ಷಣ ಕ್ರಾಂತಿಯ ಹರಿಕಾರಿಣಿ ಜ್ಞಾನವಾಹಿನಿ ದಾಕ್ಷಾಯಿಣಿ ಎನ್ನುತ್ತಾ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಶಿಕ್ಷಕಿ ದಾಕ್ಷಾಯಿಣಿ ಅವರನ್ನು ಪರಿಚಯಿಸುತ್ತಾರೆ. ಅವರ ಘೋಷವಾಕ್ಯ "ಕಷ್ಟಪಟ್ಟು ಮಾಡಬೇಡಿ, ಇಷ್ಟಪಟ್ಟು ಮಾಡಿ" ಎಂದು. ಜನ ಮೆಚ್ಚಿದ ಶಿಕ್ಷಕಿ ಶಿಕ್ಷಕ ವೃತ್ತಿಗೆ ತನ್ನನ್ನು ತಾನು ಅರ್ಪಿಸಿಕೊಂಡ ಬಗೆಯನ್ನು ಕಾಣಬಹುದು.


ಕಣ್ಣಿನ ನ್ಯೂನತೆ ಇದ್ದರೂ ಅದು ಸಾಧನೆಗೆ ಅಡ್ಡಿಯಾಗಲಿಲ್ಲ ತಿಪಟೂರಿನ ಡಾ|| ಜಿ. ಎನ್. ಸಂಗೀತಾ ಅವರಿಗೆ. 28ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವ ಇವರು ಐದು ಪುಸ್ತಕಗಳನ್ನು ರಚಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧನ ಸಿದ್ದಿಧಾತ್ರಿ ಸಂಗೀತ ಅವರ ಜೀವನಗಾಥೆ ಇಲ್ಲಿದೆ.


ಕಾಯಕಕ್ಕೆ ಕಲ್ಪತರು ಅರ್ಧನಾರೀಶ್ವರಿ ಜೋಗತಿ ಮಂಜಮ್ಮ ಎನ್ನುತ್ತಾ ದೈಹಿಕವಾಗಿ ಮಂಜುನಾಥನಿಂದ ಬದಲಾದ ಇವರ ಜಾನಪದ ಲೋಕದ ಸಾಧನೆ ಹಾಗೂ ಹವ್ಯಾಸಿ ರಂಗಭೂಮಿ, ಸಿನಿಮಾ, ಕಿರುಚಿತ್ರದಲ್ಲಿಯೂ ತೊಡಗಿಸಿಕೊಂಡು ಜೋಗತಿಯರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಇವರನ್ನು ಕಾಣಬಹುದು.


ಕಲಿ ಸರ್ವಸ್ವವೆಂದ ನಾಟ್ಯ ಮಯೂರಿ ವರ್ಷಿಣಿಗೆ ಅದು ಕೇವಲ ಹವ್ಯಾಸವಲ್ಲ.. ಬದುಕಿನ ಅಸ್ತಿತ್ವ. ಎಂಟು ವರ್ಷಗಳಿಂದ ಅಮೃತವರ್ಷಿಣಿ ನಾಟ್ಯದೇಗುಲವನ್ನು ಸ್ಥಾಪಿಸಿ ಈ ಕಲಾ ಕೇಂದ್ರದಲ್ಲಿ ಬಾಲಕಲಾವಿದರ ಕನಸುಗಳನ್ನು ರೂಪಿಸುತ್ತಿರುವ ಬಗೆಯನ್ನು ಕಾಣಬಹುದು.


ಬೆಳಗಾವಿಯ ಸವದತ್ತಿಯಲ್ಲಿ ಮೂರನೇ ಮಗಳಾಗಿ ಜನಿಸುವ ರೇಣುಕಾ ಪೋಲಿಯೋ ಲಸಿಕೆಯ ಬಗ್ಗೆ ಇದ್ದ ಮೂಢನಂಬಿಕೆಯಿಂದಾಗಿ ಶಾಶ್ವತವಾಗಿ ಅಂಗವಿಕಲಳಾದರೂ.. ತಂದೆಯನ್ನು ಕಳೆದುಕೊಂಡರೂ.. ಕಷ್ಟ-ಕೋಟಲೆಗಳೆಲ್ಲವನ್ನು ಮೀರಿ ಪ್ಯಾರಾಲಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದ ಸಾಧನೆ ಸುಲಭದಲ್ಲ. "ಹಠ ಸನ್ಮಾನಕ್ಕಾಗಿ ಅಲ್ಲ, ಸ್ವಾಭಿಮಾನಕ್ಕಾಗಿ" ಎನ್ನುತ್ತಾ ಇವರನ್ನು ನಮಗೆ ಪರಿಚಯಿಸುತ್ತಾರೆ.


"ತಾಯಿಗಿಂತ ಮಿಗಿಲಾದ ಯೋಧನಿಲ್ಲ ಜಗದಲ್ಲಿ" ಎನ್ನುತ್ತಾ ವಿಶೇಷ ಚೇತನಳಾದ ತಾಯಿ ಅಮೃತ ಕ್ರೀಡಾಲೋಕದಲ್ಲಿ ಮುನ್ನಡೆದು, ಬಾಲ್ಯ ವಿವಾಹದ ಕಷ್ಟ ಅನುಭವಿಸಿರೂ.. ಅದೆಲ್ಲವನ್ನು ಮೆಟ್ಟಿನಿಂತು ತನ್ನ ಮಗನನ್ನು ಡಾಕ್ಟರ್ ಆಗಿಸಲು ಬೆನ್ನೆಲುಬಾಗಿ ನಿಂತಿರುವ ಸ್ಪೂರ್ತಿದಾಯಕ ಗಾಥೆ ಇದು.


ಭಾರತದ ಮೊದಲ ಜಿಮ್ ತರಬೇತುದಾರರಾದ ಮಂಗಳಮುಖಿ, ಭಾರತದ ಮೊದಲ ಸಿನಿಮಾ ಲೈವ್ ಪ್ರೊಡ್ಯೂಸರ್ ಆಗಿರುವ ಮಂಗಳಮುಖಿ ಆನಿ ಪಟ್ಟ ಪಾಡುಗಳು ಒಂದೆರಡಲ್ಲ. ದೈಹಿಕ ಭಿನ್ನತೆಯಿಂದ ತಾವು ಪಟ್ಟ ಪಾಡನ್ನು ತನ್ನಂತಹವರು ಪಡಬಾರದು ಎಂಬುದಕ್ಕೆ ಅವರು ಶ್ರಮಿಸುತ್ತಿದ್ದಾರೆ. "ಸಾಧನೆ ಮಾಡಿದರೆ ಮಾತ್ರ ಅವಮಾನಗಳನ್ನು ಮೆಟ್ಟಿ ನಿಲ್ಲಬಹುದು" ಎನ್ನುವ ಅಮ್ಮನ ಮಾತು ಹೇಗೆ ಪ್ರೇರಣೆಯಾಗಿ ತೆಗೆದುಕೊಂಡರೋ ಅದಕ್ಕಿಂತ ಇವರ ಬದುಕು ಹೆಚ್ಚಿನ ಪ್ರೇರಣೆ ನೀಡುತ್ತದೆ.


ನಿಸ್ವಾರ್ಥವಾಗಿ, ಸಮಾಜದ ಏಳಿಗೆಗಾಗಿ ತನ್ನನ್ನೇ ತಾನು ಮುಡಿಪಾಗಿಸಿಕೊಂಡ ಶಕ್ತಿದೀಪವಾಗಿ ಕಾಣುವ ನಳಿನಮ್ಮ ಹಾಗೂ ಅವರ ಪತಿಯನ್ನು ನಾವಿಲ್ಲಿ ಕಾಣಬಹುದು. ಟೈಲರಿಂಗ್ ಹಾಗೂ ಯೋಗ ತರಬೇತಿಯ ಮೂಲಕ ಸಂಸ್ಕೃತಿಯ ರಾಯಭಾರಿಯಾಗಿ ಯೋಗದೀಕ್ಷಿಣಿಯಾಗಿರುವ ನಳಿನಾಕ್ಷಿಯವರ ಬದುಕು ಇಲ್ಲಿದೆ.


ಬದುಕಿನಲ್ಲಿ ಸಾಕಷ್ಟು ಇದ್ದವರೇ ದಾನ-ಧರ್ಮ ಮಾಡುವುದು ಕಷ್ಟ. ಆದರೆ, ತಮ್ಮ ಮಿತಿಯನ್ನು ಮೀರಿ ನಿಸ್ವಾರ್ಥವಾಗಿ ಬದುಕುತ್ತಿರುವ ನಂದಿನಿಯವರನ್ನು ನಾವಿಲ್ಲಿ ಕಾಣಬಹುದು. ತಮ್ಮ ಮನೆಯಲ್ಲಿ ಬೆಳಕು ವಾತ್ಸಲ್ಯಧಾಮಕ್ಕೆ ಬರೆದುಕೊಟ್ಟು ಅಸಹಾಯಕ ಜೀವಗಳಿಗೆ ಆಸರೆಯಾಗಿ ನಿಂತಿರುವ ಇವರ ನಿಸ್ವಾರ್ಥ ಬದುಕಿನ ಕಥೆ ಇಲ್ಲಿದೆ.


ತನ್ನೆಲ್ಲಾ ಕನಸುಗಳಿಗೆ ಒತ್ತಾಸೆಯಾಗಿ ನಿಂತ ಗಂಡನಿಗೆ ಬೆನ್ನೆಲುಬಾಗಿ ನಿಲ್ಲಲು ಅವರ ಊರಿನಲ್ಲೇ ನೆಲೆಸಿ ರೈತ ಮಹಿಳೆಯಾಗುವ ಕುಸುಮಾರನ್ನು ನಾವಿಲ್ಲಿ ಕಾಣಬಹುದು. ವಿವಾಹ ಹಾಗೂ ಮಗುವಾದ ನಂತರ ಬಿಎ ವ್ಯಾಸಂಗ ಮುಗಿಸಿ, ಎಂ . ಎಸ್ . ಡಬ್ಲ್ಯೂ ಪ್ರವೇಶ ಪಡೆದು ಕಾಲೇಜ್ ಟಾಪರ್ ಆಗಿ ವಿದ್ಯಾರ್ಥಿವೇತನದಿಂದಲೇ ಓದಿನಲ್ಲಿ ಮುಂದೆ ಬಂದು ವೆಲ್ ಫೇರ್ ಆಫೀಸರ್ ಆಗಿ ನೌಕರಿ ಗಿಟ್ಟಿಸಿಕೊಂಡ ನಂತರವೂ ತಮ್ಮನ್ನು ತಾವು ಕೃಷಿಗೆ ಮುಡಿಪಾಗಿಸಿಕೊಂಡ ಕುಸುಮಾರ ಜೀವನಗಾಥೆ ಇಲ್ಲಿದೆ.


ತಂದೆ-ತಾಯಿ ಇದ್ದರೂ ಹೆಣ್ಣು ಮಗುವೆಂಬ ಕಾರಣಕ್ಕೆ ಒಂಟಿಯಾಗಿ ಅಜ್ಜಿಯ ಮಡಿಲಿಗೆ ಬಿದ್ದ ಹಿರಣ್ಮಯಿಯನ್ನು ಇಂದಿಗೂ ತಂದೆ-ತಾಯಿ ನೋಡುತ್ತಿಲ್ಲ. ವಯಸ್ಸಿಗೂ ಮೀರಿದ ಪ್ರೌಢತೆಯಿಂದ ಅಜ್ಜಿಯ ಜವಾಬ್ದಾರಿ ಹೊತ್ತ ಹಿರಣ್ಮಯಿಯ ದಿಟ್ಟ ನಡೆ ಯಾವ ಸಾಧಕಿಗೂ ಕಡಿಮೆ ಏನಲ್ಲ. ಹಾಗಾದರೆ, ಹಿರಣ್ಮಯಿಯ ಮನಸ್ಸಿನ ಮಾತುಗಳೇನು ನೀವೇ ಓದಿ ನೋಡಿ.


ವರುಣ್ ಎಂಬ ವಿಕಲಚೇತನ ಮಗುವನ್ನು ದೇವರ ಮಗುವೆಂದುಕೊಂಡು ಪೋಷಿಸುತ್ತಿರುವ ತಾಯಿ ಗೌರಿಯವರ ಧೈರ್ಯ ಚಿಕ್ಕಪುಟ್ಟ ಕಷ್ಟಗಳಿಗೆ ಅಳುಕುವವರಿಗೆ ನಿಜಕ್ಕೂ ಮಾದರಿಯಂತಿದೆ.


ಹುಟ್ಟಿದಾಗಿನಿಂದಲೇ ಬಳ್ಳಿಗಳಂತೆ ನಲುಚಿಕೊಂಡಿದ್ದ ಕೈಗಳು ಜೊತೆಗೆ ಹೃದಯ ಸಂಬಂಧಿ ಕಾಯಿಲೆ. ಹೀಗಿದ್ದ ಮಗಳನ್ನು ಉಳಿಸಿಕೊಳ್ಳಲು ಯಶಸ್ವಿಯಾದ ತಾಯಿಯ ಧೈರ್ಯ ಇಂದು ಕೈಗಳೇ ಇಲ್ಲದಿದ್ದರೂ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿರುವ ಅರ್ಪಿತ ಎಂಬ ದಿಟ್ಟ ಯುವತಿಯನ್ನು ಪರಿಚಯಿಸುತ್ತವೆ.


"ನಾನು ಹಾದಿ ಹುಡುಕಿಲ್ಲ-ನಾನು ಹಾದಿ ನಿರ್ಮಿಸಿದ್ದೇನೆ. ನಾನು ನಿಲ್ಲಲಿಲ್ಲ-ನಾನು ಮುಂದಾಳತ್ವ ವಹಿಸಿದೆ" ಎನ್ನುವ ಆತ್ಮವಿಶ್ವಾಸದ ಮಾತುಗಳನ್ನಾಡುವ ಶಿಕ್ಷಣ ಕ್ರಾಂತಿಯ ಹರಿಕಾರಿಣಿ ಕಾಂಚನರವರು "ಶಿಕ್ಷಣ ನನ್ನ ಆಯ್ಕೆಯಲ್ಲ. ನನ್ನ ದೃಷ್ಟಿ, ಸಾಧನೆ, ನನ್ನ ಗುರಿಯಲ್ಲ, ನನ್ನ ಸ್ವಭಾವ" ಎಂದು ಸಾಧನೆಯ ಹಾದಿಯನ್ನು ಸ್ಪಷ್ಟವಾಗಿ ಹೇಳುವ ಬಗೆ ಇಲ್ಲಿದೆ.


"ನೋವು ನನ್ನನ್ನು ಮುರಿಯಲಿಲ್ಲ

ಹೋರಾಟ ನನ್ನನ್ನು ದೃಢವಾಗಿಸಿತು

ಧೈರ್ಯ ನನ್ನನ್ನು ನಾಯಕಿಯಾಗಿಸಿತು"

ಎನ್ನುವ ಅನಿತಾ ರ ಬದುಕಿನಲ್ಲಿ ಬಂದ ಕಷ್ಟಗಳು ಒಂದೆರಡಲ್ಲ. ಅವೆಲ್ಲವನ್ನು ಮೆಟ್ಟಿ, ನಾಯಕಿಯಾಗಿ ನಿಂತಿರುವ ಅವರ ಕೆಲಸ ಊರಿಗಷ್ಟೇ ಸೀಮಿತವಾಗಿಲ್ಲ. ದೇಶಗಳನ್ನು ದಾಟಿರುವ ಪರಿ ಇಲ್ಲಿದೆ.


"ಧೈರ್ಯೇ ಸಾಹಸೇ ರಾಜಲಕ್ಷ್ಮಿ" ಎನ್ನುತ್ತಾ ಪೋಲಿಯೋ ಪೀಡಿತ ರಾಜಲಕ್ಷ್ಮಿ ಅವರ ಬದುಕಿನಲ್ಲಿ ಬಂದ ಸವಾಲುಗಳು.. ಪ್ರಸ್ತುತ, 9 ಶಸ್ತ್ರಚಿಕಿತ್ಸೆಗಳಾದ ತೂ ಸಾಧನೆಯ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಅವರ ಪರಿಚಯ ಇಲ್ಲಿದೆ.


ಎಂ.ಎ ಪದವೀಧರರಾದರೂ ಸರಿಯಾದ ಅವಕಾಶ ಸಿಗದೇ ಬದುಕಿನ ಹೋರಾಟದ ಹಾದಿಯಲ್ಲಿ.. ಮಹಿಳಾ ಸಬಲೀಕರಣದ ಪ್ರಾಜೆಕ್ಟ್, ಫೀಲ್ಡ್ ವರ್ಕ್ ನಂತರ ಆಯ್ದುಕೊಂಡದ್ದು ಆಕಾಶವಾಣಿಯನ್ನು. ಅನುಭವವಿಲ್ಲದ ಕ್ಷೇತ್ರದಲ್ಲಿ 2000 ಅಭ್ಯರ್ಥಿಗಳನ್ನು ಹಿಂದಿಕ್ಕಿ ಮಡಿಕೇರಿಯ ಆಕಾಶವಾಣಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ಆಕಾಶವಾಣಿಯ ಸ್ಪೂರ್ತಿದನಿಯಾಗಿರುವ ಚಂದು ಅವರು ಇಲ್ಲಿದ್ದಾರೆ.


ಅಂತರಪಟ ಹಾಗೂ ಆತ್ಮಾನುಸಂಧಾನ ಕಾದಂಬರಿಗಳನ್ನು ಬರೆದಿರುವ ಲೇಖಕಿ ಉಷಾ ರವಿ ಅವರು ಕನ್ನಡಕ್ಕೆ ಜ್ಞಾನಪೀಠ ಹೆಬ್ಬಯಕೆಯನ್ನು ಹೊಂದಿದ್ದಾರೆ. ಅವರ ಬದುಕು ಹಾಗೂ ಮನದಾಳದ ಮಾತುಗಳು ಇಲ್ಲಿವೆ.


ಆಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾ ಎಂಬ ವಿಭಿನ್ನ ಮೂಳೆಯ ಅನುವಂಶಿಕ ಅಸ್ವಸ್ಥತೆಯನ್ನು ಹೊಂದಿರುವ ಅರ್ಚನಾ ರವಿಯವರು ಬಾಲ್ಯವನ್ನು ಕಳೆದದ್ದು ಎಲ್ಲರಂತಲ್ಲ. ಬಹಳ ಎಚ್ಚರಿಕೆಯಿಂದ ಬೆಳೆದವರು ಈಗ ಭಾರತೀಯ ಆಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾ ಫೌಂಡೇಶನ್ ಅನ್ನು ಸ್ಥಾಪಿಸಿದ್ದಾರೆ. "ದುರ್ಬಲತೆ ಮೂಳೆಗಳಿಗಷ್ಟೇ, ಆತ್ಮವಿಶ್ವಾಸ ಬಂಡೆಯಷ್ಟಿದೆ" ಎನ್ನುವ ಇವರ ಬದುಕಿನ ಕಥೆ ಇಲ್ಲಿದೆ.


ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡರು ತನ್ನ ಮಗನ ಭವಿಷ್ಯಕ್ಕಾಗಿ ಕ್ಷಮಿಸುತ್ತಿರುವ ತಾಯಿ ರಂಜಿತಾರನ್ನು ಇಲ್ಲಿ ಕಾಣಬಹುದು.


"ಹೊರ ಜಗತ್ತಿನಿಂದ ಜಾರಿಗೊಳ್ಳುವ ಸ್ಪೂರ್ತಿ ಅಲ್ಪಾವಧಿಯದ್ದು. ಅಂತರಂಗದಾಳದಿಂದ ಹೊರಹೊಮ್ಮುವ ಸ್ಫೂರ್ತಿ ನಿಚ್ಚಳವಾದದ್ದು" ಎನ್ನುತ್ತಾ ಪ್ರತಿ ಸ್ತ್ರೀಯಲ್ಲಿರುವ ಶಕ್ತಿ ಸ್ವರೂಪಿಣಿಯನ್ನು ಉದ್ದೀಪಿಸುತ್ತಾರೆ. ಇದರ ಜೊತೆಗೆ ಭಾರ್ಗವಿ ಶೆಟ್ಟಿಯವರು ಬರೆದಿರುವ ಕವಿತೆಗಳನ್ನು ನಾವಿಲ್ಲಿ ಕಾಣಬಹುದು. ಚಿಕ್ಕ-ಪುಟ್ಟ ಕಷ್ಟಗಳಿಗೂ ಅಂಜುವವರು ನಮ್ಮ ಜೊತೆಗಿರುವ ಇಂತಹ ಶಕ್ತಿಸ್ವರೂಪಿಣಿಯರನ್ನು ಕಂಡು ಸ್ಪೂರ್ತಿ ಪಡೆಯಬಹುದು. ಸ್ಪೂರ್ತಿದಾಯಕ ಓದು.

~ ವಿಭಾ ವಿಶ್ವನಾಥ್