ಶನಿವಾರ, ಅಕ್ಟೋಬರ್ 31, 2026

ಆಂತರಿಕ ಒತ್ತಡ (ಬೆಳಕಿಂಡಿಯ ಕತೆಗಳು - 97)

 


"ಹೊರಗಿನ ಒತ್ತಡದಿಂದ ಆತಂಕ, ಭಯ ಮಾತ್ರವಲ್ಲ ಜೀವವೂ ಹೋಗಬಹುದು. ಅವನಿಗೆ ಅಂಕ ಗಳಿಸಲೇ ಬೇಕೆಂಬ ಒತ್ತಾಯ ಬೇಡ. " ಎಂದ ಶಿಕ್ಷಕರ ಮಾತಿಗೆ "ಮತ್ತೆ.. ಅವನ ವಿದ್ಯಾಭ್ಯಾಸ.." ಎಂದೆ..


"ಅವನಿಗೆ ಕಲಿಯಬೇಕೆನ್ನುವ, ಸಾಧಿಸಬೇಕೆನ್ನುವ ಒತ್ತಡ ಒಳಗಿನಿಂದ ಹುಟ್ಟಬೇಕು. ಆಗಷ್ಟೇ ಪ್ರಗತಿ ಸಾಧ್ಯ. ಮೊಟ್ಟೆ ಒಡೆದು ಮರಿ ಹೊರ ಬರಬೇಕಾದರೆ, ರೇಷ್ಮೆ ಗೂಡಿನಿಂದ ಹುಳು ಆರೋಗ್ಯಯುತವಾಗಿ ಹೊರ ಬರಬೇಕಾದರೆ ಒಳಗಿನ ಒತ್ತಡ ಕಾರಣ. ಇದು ಹಾಗೆಯೇ.. " ಎಂದರು. ಅವರ ವಿಶ್ಲೇಷಣೆ ಕೇಳಿ ಮನಸ್ಸು ನೆಮ್ಮದಿಯಿಂದ ತುಂಬಿತು. 


~ವಿಭಾ ವಿಶ್ವನಾಥ್

ಬಣ್ಣಗಳ ಸವಿ (ಬೆಳಕಿಂಡಿಯ ಕತೆಗಳು - 96)


"ಬಣ್ಣಗಳ ಸವಿಯೇ ಅದ್ಭುತ" ಎಂದು ಹಾಕಿದ್ದ ಗೆಳತಿಯೊಬ್ಬಳ ಸ್ಟೇಟಸ್ ಕಂಡು ಹೌದು, ಬಣ್ಣಗಳ ನೋಟ ಅತ್ಯದ್ಭುತ ಎಂದೆ. 

"ಅಷ್ಟೇ ಅಲ್ಲ, ರುಚಿ ಕೂಡಾ.." ಎಂದಳು. ಅಚ್ಚರಿಯ ನೋಟ ಬೀರಿದಾಗ "ಬಣ್ಣ-ಬಣ್ಣದ ಐಸ್ಕ್ರೀಂಗಳ ರುಚಿ ರುಚಿಯ ಹಣ್ಣಿನ ಪ್ಲೇವರ್ ಗಳಿಗೆ ಸರಿಸಾಟಿ ಯಾವುದು..??" ಎಂದಳು. 


ಗೆಳತಿ ಕವಯಿತ್ರಿಯಾದಳೆಂದು ಸಂಭ್ರಮ ಪಡುವಾಗ ಅದಕ್ಕೂ ಅವಳ ರುಚಿ ತಳುಕು ಹಾಕಿದ್ದು ಕಂಡು ನಗು ಬಂತಾದರೂ ಆಸೆಯೂ ಬಂದಿತು. ನಾನೂ ಬಣ್ಣಗಳನ್ನು ಆಸ್ವಾದಿಸಬೇಕು.


~ವಿಭಾ ವಿಶ್ವನಾಥ್

ಎಲ್ಲರೂ ನಮ್ಮವರೇ..


 ಎಲ್ಲರೂ ನಮ್ಮವರೇ

ವೇಷ ಕಳಚಿ ಬೀಳುವವರೆಗೂ

ಕಷ್ಟಗಳು ಎದುರಾಗುವವರೆಗೂ

ಬಣ್ಣಗಳು ಬದಲಾಗುವವರೆಗೂ

ಸುಳ್ಳುಗಳು ಮರೆಮಾಚಿರುವ ತನಕ

ಬದುಕು ದಿಕ್ಕು ಬದಲಿಸುವ ತನಕ


ಕಡೆ ಉಸಿರಿನ ತನಕವೂ

ವೇಷ ಕಳಚಿ ಬೀಳದಿರಲಿ

ಕಷ್ಟಗಳು ಮುಖಾಮುಖಿಯಾಗದಿರಲಿ

ಬಣ್ಣಗಳು ಬದಲಾಗದಿರಲಿ

ಸುಳ್ಳುಗಳೇ ಕಣ್ಮುಂದೆ ಇರಲಿ

ಬದುಕು ದಿಕ್ಕು ಬದಲಿಸದಿರಲಿ


ಎಲ್ಲರೂ ನಮ್ಮವರೇ ಆಗಿರಲಿ

ಬಣ್ಣದ ವೇಷಗಳಲ್ಲೇ ಸುಖವಿದ್ದರೆ

ನಮ್ಮವರೆಂದುಕೊಂಡೇ ಇರಿಯದಿರಲಿ

ಬೆನ್ನ ಹಿಂದೆ ದೂರದಿರಲಿ

ವಿಷದ ಮಾತಿಗೂ ಸಕ್ಕರೆಯ ಲೇಪವಿರಲಿ

ಹತ್ತಿರ ಬಾರದೇ ದೂರವೇ ಇರಲಿ


ಎಲ್ಲರೂ ನಮ್ಮವರು ಎಂದುಕೊಂಡೇ

ಆಯಸ್ಸು , ಆರೋಗ್ಯ ಬೇಡೋಣ

ಒಳ್ಳೆಯದಾಗಲೆಂದು ಹರಸೋಣ

ಆದರೆ ಸಹಾಯ ಮಾಡೋಣ

ಆಗದಿದ್ದಾಗ ಕಹಿ ಹಂಚದೆ ಸುಮ್ಮನಿರೋಣ

ನಮ್ಮವರ ಅಭ್ಯುದಯವನ್ನೇ ಬಯಸೋಣ


~ವಿಭಾ ವಿಶ್ವನಾಥ್

ತಾಗಿದ ದೃಷ್ಟಿಯೆಲ್ಲಾ..

 


"ಸಾವಿರ ಸಲ ಹೇಳಿದೆ. ಕೇಳಿದ್ಯಾ ನನ್ನ ಮಾತು. ಪಾಪುವಿಗೆ ಕೃಷ್ಣನ ವೇಷ ಹಾಕಬೇಡ. ಹಾಕಿದ ಮೇಲೆ ದೃಷ್ಟಿ ತಾಕದ ಹಾಗೆ ದೃಷ್ಟಿ ಬೊಟ್ಟು ಇಡು ಅಂತಾ ಸಾರಿ ಸಾರಿ ಬಡಕೊಂಡೆ. 


ಸುಮ್ಮನಿರಮ್ಮ ನಿನಗೇನು ಗೊತ್ತಾಗುತ್ತೆ ? ಮಗುವಿಗೆ ಈಗ ಫೋಟೋ ಶೂಟ್ ಮಾಡಿಸದೆ ಇನ್ಯಾವಾಗ ಮಾಡಿಸೋಕಾಗುತ್ತೆ ? ದೃಷ್ಟಿ ಬೊಟ್ಟು ಇಟ್ಟರೆ ಫೋಟೋಗೆ ಚೆನ್ನಾಗಿ ಕಾಣಲ್ಲ ಅಂದೆ. 


ಹೋಗಲಿ ಮನೆ ಟೆರೇಸ್ ಮೇಲೋ.. ಗಾರ್ಡನ್ ಅಲ್ಲೋ ಮಾಡಿಸು ಅಂದರೆ ಅದನ್ನೂ ಕೇಳದೆ ಪಾರ್ಕ್ ಗೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ಯಾರ ಯಾರ ಕೆಟ್ಟ ಕಣ್ಣು ಬಿದ್ದಿರುತ್ತೋ ಏನೋ.. ಹುಟ್ಟಿದಾಗಿಂದ ಈ ಎರಡು ವರ್ಷದಲ್ಲಿ ಪಾಪು ಯಾವತ್ತೂ ಇಷ್ಟು ರಗಳೆ ಮಾಡಿರೋ ನೆನಪೇ ಇಲ್ಲ ನನಗೆ. ಯಾವತ್ತೂ ಇಷ್ಟು ಅಳದೇ ಇರೋ ಮಗು, ಹಾಡು ಹೇಳಿದ ತಕ್ಷಣ ಸುಮ್ಮನಾಗುತ್ತಿದ್ದ ಮಗು ನೋಡು ಇವತ್ತು ಹೇಗೆ ಅಳುತ್ತಾ ಇದೆ ಅಂತಾ.. 


ಮಾಡರ್ನ್, ಮಾಡರ್ನ್ ಅಂತಾ ಅಂದುಕೊಂಡು ಶಾಸ್ತ್ರನೆಲ್ಲಾ ಗಾಳಿಗೆ ತೂರುತ್ತೀರಲ್ಲ.. ನೀನೊಬ್ಬಳು ಸಾಲದು ಅಂತಾ ನಿಮ್ಮಪ್ಪ, ಗಂಡ ಇಬ್ಬರೂ ಹಾಗೇ ಮಾಡ್ತಾರೆ.. ಸರಿಯಾಗಿದ್ದೀರ ಕಂತೆಗೆ ತಕ್ಕ ಬೊಂತೆ ಎನ್ನುವ ಹಾಗೆ. ನಿಮ್ಮಿಂದ ನೋಡಿ ಮಗು ಪಾಡು ಪಡುವ ಹಾಗಾಯ್ತು" ಎನ್ನುತ್ತಾ ರಚ್ಚೆ ಹಿಡಿದಿದ್ದ ಮೊಮ್ಮಗನ ಮೇಲಿನ ಪ್ರೀತಿಯಿಂದ ಮಗಳು, ಅಳಿಯ, ಗಂಡ ಎಲ್ಲರ ಮೇಲೂ ವಾಗ್ಬಾಣಗಳನ್ನು ಪ್ರಯೋಗಿಸತೊಡಗಿದರು ವಸುಧಾ.


"ಅಮ್ಮ, ಸ್ವಲ್ಪ ನಿಲ್ಲಿಸ್ತಿಯಾ.. ಅವನ ಅಳು ಕೇಳಿ ಕೇಳಿ ತಲೆ ಚಿಟ್ಟು ಬಂದಿದೆ. ಅದರ ಜೊತೆಗೆ ನಿನ್ನ ಬೈಗುಳ ಬೇರೆ" ಎಂದು ರೇಗಿದಳು ಪ್ರತ್ಯುಷ.


"ಎಲ್ಲರಿಗೂ ಆಸೆ ಇರುವ ಹಾಗೆ ನನಗಿರೋದಿಲ್ಲವೇನಮ್ಮ ಮಗುವನ್ನು ಮುದ್ದು ಮುದ್ದಾಗಿ ರೆಡಿ ಮಾಡಬೇಕು. ಇವತ್ತು ಕೃಷ್ಣ ಜನ್ಮಾಷ್ಟಮಿ ಬೇರೆ... 


ಅವನು ದೊಡ್ಡವನಾದ ಮೇಲೆ ಅವನಿಗೆ ಈ ಫೋಟೋ.. ವಿಡಿಯೋ ಎಲ್ಲಾ ತೋರಿಸಬೇಕು ಅಂತಾ.. ಫೋಟೋ ಶೂಟ್ ಮಾಡಿಸೋದಕ್ಕೆ ಸ್ವಲ್ಪ ಹೊತ್ತು ಹೊರಗೆ ಕರೆದುಕೊಂಡು ಹೋಗಿ ಬಂದಿದ್ದು.. ನಾನೇನೋ ಬೇಕು ಬೇಕು ಅಂತಾ ಇದನ್ನೆಲ್ಲಾ ಮಾಡಿ ಮಗುನಾ ಅಳಿಸಿದ್ದೀನಿ ಅನ್ನೋ ಹಾಗೆ ಮಾತಾಡ್ತಾ ಇದ್ದೀಯಲ್ಲಮ್ಮ. ದೃಷ್ಟಿ ದೋಷನೂ ಅಲ್ಲ.. ಮತ್ತೊಂದೂ ಅಲ್ಲ. ಅವನಿಗೆ ಸೆಕೆ ಆಗಿ, ಆ ಬಟ್ಟೆ ಹಿಂಸೆ ಆಗಿ, ಹೊಟ್ಟೆ ಹಸಿದು, ಸರಿಯಾಗಿ ನಿದ್ದೆ ಇಲ್ಲದೆ ಹೀಗೆ ಏನೋ ಒಂದು ಆಗಿ ಹಾಗಾಡ್ತಾ ಇರ್ತಾನೆ. ನೀನು ಗೊಣಗಬೇಡ ಸುಮ್ಮನಿರು" ಎನ್ನುತ್ತಾ ಆಳುತ್ತಿದ್ದ ಪಾಪುವಿಗೆ ಊಟ ತಿನ್ನಿಸಲು ಪ್ರಯತ್ನಿಸಿ ಪ್ರಯತ್ನಿಸಿ ಸೋತು ಹೋದಳು ಪ್ರತ್ಯುಷ.


"ಅಲ್ವೇ.. ಹೊಟ್ಟೆ ಹಸಿದಿದ್ದರೆ ಊಟ ಮಾಡಬೇಕಿತ್ತು. ನಿದ್ದೆ ಬಂದಿದ್ದರೆ ಮಲಗಿಸುವುದಕ್ಕೆ ಹೋದಾಗ ಮಲಗಬೇಕಿತ್ತು. ಇಲ್ಲಾ ಅಂದರೆ ಅತ್ತು ಅತ್ತು ಆದರೂ ಮಲಗಬೇಕಿತ್ತು. ಬಟ್ಟೆ ತೆಗೆದು ಸ್ನಾನ ಮಾಡಿಸಿ ಗಾಳಿಯಲ್ಲಿ ಬಿಟ್ಟರೂ ಅಳು ನಿಲ್ತಾ ಇಲ್ಲ. ಒಂದು ಹೆತ್ತೋಳು ಮೂರು ಹೆತ್ತೋಳಿಗೆ ಹೇಳೋಕೆ ಬರ್ತಾಳೆ. 


ಅಮ್ಮನ ದೃಷ್ಟಿನೇ ತಾಗಿರುತ್ತೆ ಮಗೂಗೆ.. ಇರು ಮೊದಲು ಪಾಪುಗೆ ದೃಷ್ಟಿ ತೆಗೀತಿನಿ." ಎನ್ನುತ್ತಾ ಒಳ ಹೋಗಿ ಉಪ್ಪು, ಒಣ ಮೆಣಸಿನಕಾಯಿ ತಂದು 


"ಹಾದಿ ಕಣ್ಣು ಬೀದಿ ಕಣ್ಣು

ನಾಯಿ ಕಣ್ಣು ನರಿ ಕಣ್ಣು

ಹಾದಿ- ಬೀದಿಲಿ ಹೋಗುವವರ ಕಣ್ಣು

ನನ್ನ ಕಣ್ಣು, ನಿಮ್ಮಮ್ಮನ ಕಣ್ಣು

ಅವರಿವರ ಕೆಟ್ಟ ಕಣ್ಣು

ಎಲ್ಲಾ ಪಟ್ ಪಟಾ ಅಂತ ಸಿಡಿದು ಹೋಗಲಿ"


ಎನ್ನುತ್ತಾ ಕೆಂಡಕ್ಕೆ ಹಾಕಿದರು. 


ಮಗುವಿನ ಅಳು ಇನ್ನೂ ಜೋರಾದದ್ದೇ ಬಂತು. 


ಅಷ್ಟರಲ್ಲಿ ಮನೆಗೆ ಬಂದ ಪ್ರತ್ಯುಷಳ ಗಂಡ ಬಂದವನೇ ಮಗುವನ್ನು ಕಂಡು "ಯಾಕೆ ಅಳ್ತಾ ಇದ್ದೀ ಕಂದಾ.." ಎನ್ನುತ್ತಾ ಎತ್ತಿಕೊಂಡ ತಕ್ಷಣವೇ ಮಗು ಅಳು ನಿಲ್ಲಿಸಿದ್ದು ಮಗುವಿನ ಅಮ್ಮ, ಅಜ್ಜಿ ಇಬ್ಬರಿಗೂ ಪವಾಡವೆಂಬಂತೆ ಭಾಸವಾಯಿತು. ನೋಡಿದರೆ ಪಾಪು ಅವನ ಅಪ್ಪನ ಜೇಬಿನಲ್ಲಿದ್ದ ಪುಟ್ಟ ಆಟಿಕೆ ಕೊಳಲನ್ನು ಕೈಯ್ಯಲ್ಲಿಡಿದು ಆಡತೊಡಗಿದ್ದ.


ಅಷ್ಟೆಲ್ಲಾ ಮಾಡಿದರೂ ಮಗುವಿನ ಕೈಗೆ ಆಟಿಕೆ ನೀಡಲು ಮರೆತದ್ದಕ್ಕೆ ಅಮ್ಮ, ಮಗಳು ಇಬ್ಬರೂ ಮುಖ ಮುಖ ನೋಡಿಕೊಂಡರು. ನಂತರ ನಡೆದ ರಂಪಾಟವಷ್ಟನ್ನೂ ಹೇಳಿ ಅಮ್ಮ ದೃಷ್ಟಿ ತೆಗೆದಿದ್ದನ್ನೂ ಹೇಳಿ ಹಾಸ್ಯ ಮಾಡಿದಳು ಪ್ರತ್ಯುಷ.


ವಸುಧಾ ತಾನೂ ಸೋಲದೆ ತಾನು ದೃಷ್ಟಿ ತೆಗೆದಿದ್ದಕ್ಕೇ ಪಾಪು ಅಳು ನಿಲ್ಲಿಸಿದ್ದು ಎಂದು ಸಮರ್ಥಿಸಿಕೊಂಡರು. ಅದಕ್ಕೆ ಪ್ರತ್ಯುಷಳ ಗಂಡ "ಅಯ್ಯೋ ಅತ್ತೆ.. ಫೋಟೋ ಶೂಟ್ ಮಾಡಿಸಿದ್ದು ಪಾಪುಗೇ ಆದರೂ.. ಅವನ ಜೊತೆಗೆ ಫೋಟೋ ತೆಗೆಸಿಕೊಳ್ಳುವುದಕ್ಕೆ ಇವಳೇ ಜಾಸ್ತಿ ರೆಡಿಯಾಗಿದ್ಲು. ಪಾಪು ಗಮನ ಸೆಳೆಯೋಕೆ ಇವಳ ಕಿರುಚಾಟ, ಹಾರಾಟ, ಮಂಗನಾಟ ಎಲ್ಲಾ ನೋಡಿ ಜನ ಪಾಪುಗಿಂತ ಇವಳನ್ನೇ ಜಾಸ್ತಿ ನೋಡಿರ್ತಾರೆ. 


ದೃಷ್ಟಿ ತೆಗೆಯಬೇಕಾದದ್ದು ಪಾಪುಗಲ್ಲ.. ಇವಳಿಗೆ" ಎಂದು ಪ್ರತ್ಯುಷ ಕಡೆ ತಿರುಗಿ ಕಣ್ಣೊಡೆದು ನಕ್ಕನು.


~ವಿಭಾ ವಿಶ್ವನಾಥ್

ಸೇದಿ ಬಾವಿ (ಪುಸ್ತಕ ಯಾನ - 494)


ಪುಸ್ತಕದ ಶೀರ್ಷಿಕೆ : ಸೇದಿ ಬಾವಿ

ಲೇಖಕರು : ಗಂಗಾದೇವಿ ಚಕ್ರಸಾಲಿ

ಪ್ರಕಾಶಕರು : ಮಿಂಚುಳ್ಳಿ ಪ್ರಕಾಶನ 

ಪ್ರಥಮ ಮುದ್ರಣ : 2026

ಪುಟಗಳು : 110

ಬೆಲೆ : 150 ರೂ.


ಶಿಕ್ಷಕಿಯಾಗಿರುವ ಗಂಗಾದೇವಿ ಚಕ್ರಸಾಲಿಯವರ ಮೊದಲ ಕಥಾ ಸಂಕಲನ ಹಾಗೂ ಎರಡನೆಯ ಪುಸ್ತಕ ಸೇದಿಬಾವಿ. ಇಲ್ಲಿನ ಹಲವು ಕಥೆಗಳು ಮಿಂಚುಳ್ಳಿ, ಕರ್ಮವೀರ, ಅಕ್ಷರ ಸಂಗಾತ ಕುಂದಾನಗರಿ ಪತ್ರಿಕೆಗಳಲ್ಲಿ ಪ್ರಕಟಿತ. ಬದುಕಿನ ವೈವಿಧ್ಯಮಯ ಘಟನೆಗಳನ್ನು ಕಟ್ಟಿಕೊಡುವ 12 ಚೆಂದದ ಕಥೆಗಳಿವೆ ಇಲ್ಲಿ.


ಅರುಂಧತಿ : ಇಂದಿನ ದಿನಗಳಲ್ಲಿ ಅಹಂ ಇರುವ ಸಂಬಂಧಗಳು ಒಡೆದು ಹೋಗುವ, ನಂತರ ಪಶ್ಚಾತ್ತಾಪ ಪಟ್ಟರೂ ಮೊದಲಿನ ಬಿಸುಪು ಬರದ ಸಂಬಂಧಗಳು ನೆನಪಾದವು. ಅರುಂಧತಿ ಹಾಗೂ ಅಜಯ್ ಪ್ರೀತಿಸಿ ಮದುವೆಯಾದವರು. ಕುಟುಂಬದವರ ನೆರವಿಲ್ಲದೆ ಬದುಕು ಕಟ್ಟಿಕೊಳ್ಳಲು ಹೊರಟವರು. ಮುಂದೆ ಮಗುವಾದ ನಂತರ ದಾಂಪತ್ಯದಲ್ಲಿ ಬಿರುಕು ಮೂಡಿಸಿಕೊಂಡು ಬೇರೆಯಾಗುತ್ತಾರೆ. ಮಹತ್ವಕಾಂಕ್ಷಿಯಾಗಿ ಅರುಂಧತಿ ಗಂಡ ಹಾಗೂ ಪುಟ್ಟ ಮಗಳನ್ನು ಬಿಟ್ಟು ಅಮೆರಿಕಕ್ಕೆ ಉದ್ಯೋಗಕ್ಕೆಂದು ಹೋಗಿ ಕೆಲ ವರ್ಷಗಳ ನಂತರ ಅಲ್ಲಿಂದ ಪರಿತಪಿಸಿ ಮಗಳಿಗಾಗಿ ಬರುವ ಚಿತ್ರಣ ಇಲ್ಲಿದೆ. ರೈಲಿನಲ್ಲಿ ತನ್ನ ಜೊತೆಗಿದ್ದ ಅಜ್ಜಿಯನ್ನು ಮಾತನಾಡಿಸುತ್ತಲೇ ಗತ ಬದುಕನ್ನು ನೆನಪಿಸಿಕೊಂಡವಳ ಬದುಕು ಮುಂದೆ ಯಾವ ತಿರುವ ಪಡೆದುಕೊಂಡಿತು ಓದಿ ನೋಡಿ.


ಕಪ್ಪು ಹುಡುಗಿ : ಕಥಾ ಶೀರ್ಷಿಕೆಯ ವಿರುದ್ಧದ ಪದದ ಹೆಸರಿನ ಕಥಾನಾಯಕಿ ಶ್ವೇತಾಳನ್ನು ನೋಡಲು ಬಂದ ಗಂಡುಗಳ ಸಂಖ್ಯೆ ಹೆಚ್ಚುತ್ತಲೇ ಇದ್ದರೂ ಕಪ್ಪು ಎನ್ನುವ ಕಾರಣಕ್ಕೆ ವಿವಾಹ ಕೂಡಿಬಂದಿರಲಿಲ್ಲ. ಆದರೆ, ಕಪ್ಪು ಎಂದಿಗೂ ಕೀಳಲ್ಲವಲ್ಲ. ಆದರೆ, ಮದುವೆ ಮಾತ್ರವಲ್ಲ ಪ್ರತಿ ವಿಚಾರದಲ್ಲಿಯೂ ಕಪ್ಪು ಎಂಬ ನುಡಿ ಕೇಳುತ್ತಲೇ.. ಕೀಳಿರಿಮೆ ಬೆಳಸಿಕೊಂಡ ಕಪ್ಪು ಹುಡುಗಿಯ ಬದುಕು ಸಾಧನೆಯ ಹಾದಿಯಲ್ಲಿ ಮುನ್ನಡೆದಾಗ ಏನಾಗುತ್ತದೆ ಎಂಬ ಸ್ಪೂರ್ತಿದಾಯಕ ಕಥೆ ಇಲ್ಲಿದೆ.


ಕಲ್ಲೇಶಿ : ಎಸ್.ಎಸ್.ಎಲ್.ಸಿ ಪರೀಕ್ಷೆ ಕಟ್ಟಿರುವ ಕಲ್ಲೇಶಿ ಕುರಿತು ತಂದೆ-ತಾಯಿಗೆ ಆತನ ಶಾಲಾ ಶಿಕ್ಷಕರು ಹೇಳಿದ ನಂತರವೇ ಪರಿಸ್ಥಿತಿಯ ಗಂಭೀರತೆ ಅರಿವಾಗಿ ಆತನನ್ನು ಯಾವ ಕೆಲಸಕ್ಕೂ ಕರೆಯದಂತೆ ಓದಲು ಬಿಟ್ಟಿದ್ದರು. 

ಬದಲಾದ ಇಂದಿನ ಶಿಕ್ಷಣ ವ್ಯವಸ್ಥೆ, ಅಂಕ ಗಳಿಕೆಯ ಪಂದ್ಯದಲ್ಲಿ ಇರುವ ಬಗೆ, ಶಿಕ್ಷಣ ಇಲಾಖೆ, ಶಾಲಾ ಶಿಕ್ಷಕರು, ಬದಲಾದ ಸಮಾಜ, ತಂದೆ-ತಾಯಿ ಎಲ್ಲದರ ನಡುವೆ ನಲುಗುತ್ತಿರುವ ತಮ್ಮದೇ ಕನಸುಗಳನ್ನು ಕಾಣಲು ಕೂಡ ಸಮಯವಿಲ್ಲದಷ್ಟು ಮುಳುಗಿ ಹೋಗಿರುವ ವಿದ್ಯಾರ್ಥಿಗಳ ಪ್ರತಿನಿಧಿಯಂತೆ ಕಾಣುತ್ತಾನೆ ಕಲ್ಲೇಶಿ. ಬದಲಾದ ಶೈಕ್ಷಣಿಕ ದಿನಗಳಲ್ಲಿ ಕಡಿಮೆ ಬುದ್ಧಿಮತ್ತೆಯ ಅಥವಾ ಓದಿನಲ್ಲಿ ಆಸಕ್ತಿ ಇಲ್ಲದ ವಿದ್ಯಾರ್ಥಿಗಳ ಪ್ರತಿನಿಧಿಯಂತಿರುವ ಕಲ್ಲೇಶಿ ಅರಿವಾಗಿಸುವುದೇನು ಓದಿ ನೋಡಿ.


ಕುಲ ಮರ್ಯಾದೆ : ತಮ್ಮ ಕುಲದ ಮರ್ಯಾದೆಯೇ ಮುಖ್ಯ ಎನ್ನುವ ರಶ್ಮಿಯ ತಂದೆ-ತಾಯಿಯ ಕುರುಡು ನಂಬಿಕೆಯಲ್ಲಿ ರಶ್ಮಿ ಹಾಗೂ ವಿನಯ್ ಇಬ್ಬರ ಪ್ರೇಮ ಮಾತ್ರವೇ ಮುರುಟಿ ಹೋದದ್ದಾ..? ಜಾತಿ, ಧರ್ಮದ ಅಮಲಿನಲ್ಲಿ ಕೊಚ್ಚಿ ಹೋಗುವ ಹಿರಿಯರು ಕಿರಿಯರ ಭವಿಷ್ಯಕ್ಕೆ ಮುಳ್ಳಾದರೇ..? ಇದರಿಂದ ಯಾರ ಮರ್ಯಾದೆ ಉಳಿಯಿತು ಹಾಗೂ ಏನು ಅವಸಾನವಾಯಿತು ಎಂಬುದನ್ನು ಕಟ್ಟಿಕೊಟ್ಟಿದ್ದಾರೆ ಲೇಖಕಿ.


ನಾಣಿ : ಇನ್ನೂ.. ಮಕ್ಕಳ ಬುದ್ಧಿಮತ್ತೆಯಷ್ಟೇ ಇದ್ದು ದೇಹ ಮಾತ್ರ ಬೆಳೆದಿದ್ದ ನಾಣಿ ಊರಿನವರಿಗೆಲ್ಲ ನಗೆಪಾಟಲಿನ ವಸ್ತುವಾಗಿದ್ದರೆ ಶಾಲೆಯ ಶಿಕ್ಷಕರಿಗೆ ಅಕ್ಕರೆ ಹಾಗೂ ಅನುಕಂಪದ ಹುಡುಗ. ಹೇಳಿದ್ದನ್ನು ಚಾಚೂ ತಪ್ಪದೆ ಮಾಡುವ ಆತನಿಗೆ ಹೆಡ್ ಮಾಸ್ಟರ್ ಶಾಲೆಯಲ್ಲಿಯೇ ಕಾಳಜಿಯಿಂದ ಆತನಿಗೆ ತಕ್ಕ ಕೆಲಸ ವಹಿಸುತ್ತಿದ್ದರು. ಆದರೂ.. ಕೆಲವೊಮ್ಮೆ ಶಾಲೆಯ ಮಕ್ಕಳ ಕಿತಾಪತಿಯಿಂದ ಆತನಿಗೆ ಕೋಪ ಬಂದು ಮಧ್ಯದಲ್ಲಿ ಹೊರಡುವುದೂ ಇತ್ತು. ನಾಣಿ ಅಂದರೆ ನಾರಾಯಣನ ಮನೆಯ ಪರಿಸ್ಥಿತಿ ಹೇಗಿತ್ತು..? ಇದ್ದಕ್ಕಿದ್ದಂತೆ ಕಾಣೆಯಾದ ನಾಣಿ ಎಲ್ಲಿದ್ದ ಆತನ ಪರಿಸ್ಥಿತಿ ಏನಿತ್ತು ಅದಕ್ಕೆ ಕಾರಣರು ಯಾರು..? ಮನ ಮಿಡಿಯುವ ಕಥೆ ಸಸ್ಪೆನ್ಸ್ ಶೈಲಿಯಲ್ಲಿ ಹೆಣೆಯಲ್ಪಟ್ಟಿದೆ.


ಮಡಿಲ ಕೆಂಡ : ಪದ್ಮ ಹಾಗೂ ಮಂಜುಳಾ ಇಬ್ಬರು ಬಾಲ್ಯದ ಗೆಳತಿಯರು. ಮದುವೆಯಾಗಿದ್ದು ಒಂದೇ ಊರಿಗೆ ಈಗ ಪದ್ಮಳ ಬದುಕಿನಲ್ಲಿ ದೊಡ್ಡ ಸಮಸ್ಯೆ ಒಂದು ಎದುರಾಗಿತ್ತು. ತನಗೆ ಮಕ್ಕಳಾಗದ್ದಕ್ಕೆ ಅವಳೇ ತನ್ನ ಗಂಡನಿಗೆ ತನ್ನ ಚಿಕ್ಕಮ್ಮನ ಮಗಳನ್ನು ವಿವಾಹ ಮಾಡಿಸುವ ನಿರ್ಧಾರ ತಳೆದಿದ್ದಳು. ಹೆಚ್ಚು ಕಡಿಮೆ ಅದಕ್ಕೆ ಎಲ್ಲರೂ ಒಪ್ಪಿದ್ದರು. 

ಆದರೆ ಕೆಲವೇ ದಿನಗಳಲ್ಲಿ ಗೆಳತಿ ಮಂಜುಳಾಳಿಗೆ ತಾಯಿಯಾಗುತ್ತಿರುವ ವಿಚಾರ ತಿಳಿಸಿದರೂ ಅದರಲ್ಲಿ ತಳಮಳವೇ ತುಂಬಿತ್ತು. ಅದಕ್ಕೆ ಕಾರಣವೇನಿತ್ತು ..? ಓದಿ ನೋಡಿ.


ಆಲೋಚನೆ : ಪರಿಣಿತ ಒಬ್ಬಂಟಿಯಾಗಿ ಗಂಡನ ಮನೆಗೆ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ತನ್ನನ್ನೇ ದಿಟ್ಟಿಸಿ ನೋಡುತ್ತಿದ್ದ ಅಪರಿಚಿತ ವ್ಯಕ್ತಿಯ ಕುರಿತು ತನ್ನದೇ ಆಲೋಚನೆಗಳನ್ನು ಮಾಡುತ್ತಿರುವಾಗಲೇ ರೈಲು ಇಳಿದ ನಂತರ ಅದೆಲ್ಲದಕ್ಕೂ ಪೂರ್ಣವಿರಾಮ ಸಿಕ್ಕಿತು.

ಮನಸ್ಸಿನಲ್ಲಿಯೇ ಮೂಡಿಬರುವ ವಿಚಾರಗಳು, ಊಹೆಗಳಿಗೆ ಎಷ್ಟೆಲ್ಲಾ ಶಕ್ತಿಗಳಿರುತ್ತವೆ..! ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ತುಂಬಿದಾಗ ಸುತ್ತಲಿನ ಪರಿಸರವೂ ಹಾಗೆಯೇ ಕಾಣುತ್ತದೆ. ಕೆಲವೊಮ್ಮೆ ಸತ್ಯ ಬೇರೆಯೂ ಇರಬಹುದು.


ಶರಣ : ಬಸವಣ್ಣನವರ ಒಂದು ವಚನದೊಂದಿಗೆ ಶುರುವಾಗುವ ಕಥೆಯಲ್ಲಿ ಶರಣನ ಮನಸ್ಸಿನ ತುಮುಲಗಳು ಹೆಚ್ಚಿಕೊಳ್ಳುತ್ತಾ ಸಾಗುತ್ತವೆ. ಕೆಲವರು ಭೂತದ ನೆನಪುಗಳನ್ನು ಅಳಿಸಿ ಸುಖವಾಗಿದ್ದರೆ.. ಇನ್ನು ಕೆಲವರು ಅದೇ ನೆನಪುಗಳು ತಮ್ಮನ್ನು ಕಾಡುವುದಿಲ್ಲ ಎಂದುಕೊಂಡಿದ್ದರೂ ಅದೇ ನೆನಪುಗಳಲ್ಲಿ ಜೀವಿಸುತ್ತಿರುತ್ತಾರೆ. ಇದರಲ್ಲಿ ಶರಣ ಹಾಗೂ ಆತ ಪ್ರೀತಿಸಿದ ಹುಡುಗಿ ಇಬ್ಬರೂ ಯಾವ ಕೆಟಗರಿಗೆ ಸೇರುತ್ತಾರೆ ಓದಿ ಅರಿಯಿರಿ.


ಸೇದಿಬಾವಿ : ಈ ಕಥೆಯಲ್ಲಿ ಸೇದಿಬಾವಿಯದ್ದು ಬಹಳ ಮುಖ್ಯ ಪಾತ್ರ. ಅದರ ಪ್ರಾಮುಖ್ಯತೆ ಇಂದಿಗೂ ಅರಿವಿದ್ದದ್ದು ಗುರುಬಸಪ್ಪನಿಗೆ. ಅದರೊಟ್ಟಿಗಿನ ಆತ್ಮೀಯ ಭಾವ ಆತನ ಬಾಲ್ಯದ ದಿನಗಳನ್ನು ನೆನಪಿಸಿ ಬದುಕನ್ನು ನವಿರಾಗಿರಿಸಿತ್ತು. ಗುರುಬಸಪ್ಪನ ಬದುಕು ಹಾಗೂ ಬಾವಿಯ ಜೊತೆಗಿನ ನಂಟು ಎರಡನ್ನೂ ತೆರೆದಿಡುತ್ತಾರೆ. ಹೀಗೆ ಸಾಗುವ ಕಥೆಯಲ್ಲಿ ಬದಲಾದ ದಿನಗಳನ್ನು ಕಾಣಬಹುದು. ಎಪ್ಪತ್ತು ವರ್ಷದ ಮುದುಕನಾಗಿದ್ದರೂ ಇನ್ನೂ ಬಾವಿ ನೀರು ಸೇದಿ ಕುಡಿಯುವ ಏಕೈಕ ವ್ಯಕ್ತಿಯಾಗಿದ್ದವನು ಆಧುನಿಕತೆಗೆ ಒಗ್ಗಿಕೊಳ್ಳದ ವ್ಯಕ್ತಿಯಂತೆ ಕಂಡರೂ.. ಜೀವನೋತ್ಸಹ ಬಿಡದ ವ್ಯಕ್ತಿಯಂತೆಯೂ ಕಾಣಸಿಗುತ್ತಾನೆ. ಆತನ ನ್ಯಾಯ ತೀರ್ಮಾನ ಇಂಗ್ಲಿಷ್ ಶಾಲೆಯನ್ನು ಬಿಟ್ಟು ಸರ್ಕಾರಿ ಕನ್ನಡ ಶಾಲೆಗೆ ಮೊಮ್ಮಗನನ್ನು ಹಾಕುವ ಕುರಿತಾಗಿ ಹೀಗೆ ಹಲವಾರು ವಿಚಾರಗಳಿಂದ ಗುರುಬಸಪ್ಪ ಮನೆಯವರಿಗೆ ಸವಾಲಿನಂತೆಯೂ ಕಾಣುತ್ತಾನೆ. ಗುರುಬಸಪ್ಪನ ಮನಸ್ಸಿಗಾದ ಆಳವಾದ ಗಾಯಕ್ಕೂ ಸೇದಿ ಬಾವಿಗೂ ಇದ್ದ ಸಂಬಂಧವೇನು..? ಬಹಳ ಅರ್ಥಪೂರ್ಣವಾದ ಮಾರ್ಮಿಕವಾದ ಹಾಗೂ ಮನಸ್ಸಿನಲ್ಲುಳಿಯುವ ಕಥೆ ಇದು.


ಸ್ನೇಹಬಂಧ : ಲಲಿತಾ ಬಹಳ ವರ್ಷಗಳ ನಂತರ ಗೆಳು ಗಿರಿಜಳ ಮನೆಗೆ ಬಂದ ಸಂದರ್ಭದಲ್ಲಿ ಜಾಣೆಯಾಗಿದ್ದ ಗಿರಿಜಾ ಆತ್ಮಹತ್ಯೆಯ ಪ್ರಯತ್ನವನ್ನು ಮಾಡಿ ಬದುಕಿನಲ್ಲಿ ಸೋತು ಸೊರಗಿದ್ದ ದಿನಗಳ ವಿಚಾರಕ್ಕೆ ಕಿವಿಯಾಗುತ್ತಾಳೆ. ಗಂಡನ ಮನೆಯವರು ಹಾಗೂ ಗಂಡನೂ ಕೈಬಿಟ್ಟ ಸಂದರ್ಭದಲ್ಲಿ ಸೋತೇ ಹೋಗಿದ್ದ ಗಿರಿಜಾಳನ್ನು ಕೈಹಿಡಿದ ಸ್ನೇಹಬಂಧದ ಸುಂದರ ಸಮ್ಮಿಲನವಿದು. ಸ್ನೇಹ ಬಳಗದ ಪರಿಶ್ರಮದಿಂದ ಬಾಳಲ್ಲಿ ನೆಮ್ಮದಿ ಕಂಡ ಗಿರಿಜಾಳ ಬದುಕಿನ ಗಾಥೆ ಇಲ್ಲಿದೆ.


ಕಲ್ಯಾಣ ಜಂಕ್ಷನ್ : ದ್ಯಾಮವ್ವ ತಾನು ನೋಡಿಯೇ ಇರದಿದ್ದ ಊರಿಗೆ ಎರಡನೆಯ ಮಗ ಶಿವಪ್ಪನೊಂದಿಗೆ ಹೊರಟಿದ್ದಳು. ಮಾತಿಗೆ ಮಾತು ಬೆಳೆದು ಅಣ್ಣನ ಮನೆಯಿಂದ ತನ್ನ ತಾಯಿಯನ್ನು ಕರೆದುಕೊಂಡು ಮುಂಬೈ ಸೇರಿದ್ದ ಶಿವಪ್ಪ. ಪ್ರೀತಿಸಿ ಮದುವೆಯಾಗಿದ್ದ ಶಿವಪ್ಪ ಅಲ್ಲಿಯ ಬದುಕಿಗೆ ಒಗ್ಗಿ ಹೋಗಿದ್ದ ಆದರೆ ದ್ಯಾಮವ್ವಳಿಗೆ ಅದು ಅಷ್ಟು ಸುಲಭವಿತ್ತೇ..? ಮುಂಬೈ ಮಹಾನಗರದ ಮತ್ತೊಂದು ಮುಖವನ್ನು, ಒಂಟಿತನದ ತೆಕ್ಕೆಗೆ ಜಾರುವವರನ್ನು, ಹೊಂದಿಕೊಳ್ಳಲಾಗದ ಅಸಹಾಯಕತೆಯನ್ನು ನಾವಿಲ್ಲಿ ಕಾಣುತ್ತೇವೆ. 


ದೇವಮ್ಮಜ್ಜಿ ಮತ್ತು ಮನೆ : ದೇವಮ್ಮಜ್ಜಿ ತನ್ನ ಕನಸಿನ ಒಂದು ಮನೆಗಾಗಿ ಐದಾರು ವರ್ಷದಿಂದಲೂ ಪಂಚಾಯಿತಿಗೆ ಅರ್ಜಿ ಕೊಡುತ್ತಲೇ ಬಂದಿದ್ದಳಾದರೂ ಅವಳಿಗೆ ಏನಾದರೂ ನೆಪ ಹೇಳಿ ಸಾಗ ಹಾಕುತ್ತಿದ್ದದ್ದೇ ಹೆಚ್ಚು. ಇದ್ದೊಬ್ಬ ಮೊಮ್ಮಗಳೊಂದಿಗೆ ಒಂಟಿಯಾಗಿದ್ದ, ಪುಟ್ಟ ಗುಡಿಸಲಲ್ಲಿ ವಾಸಿಸುತ್ತಿದ್ದ ಅಜ್ಜಿ ಮೊಮ್ಮಗಳು ರೇಣುಕಾಳಿಗೆ ದಿಕ್ಕು ಮಾಡುವ ಆಲೋಚನೆಯಲ್ಲಿ ತೆಗೆದುಕೊಳ್ಳುವ ನಿರ್ಧಾರವೇನು..? ರೇಣುಕಾ ಎಡವಿದ್ದನ್ನು ದೇವಮ್ಮಜ್ಜಿ ಸರಿಪಡಿಸಲು ಸಾಧ್ಯವಿತ್ತೆ..?


ಇಲ್ಲಿನ ಕಥೆಗಳಲ್ಲಿ ಗ್ರಾಮೀಣ ಪರಿಸರದ ಸೊಗಸು ಹಾಗೂ ಭಾಷೆಯ ಸೊಗಡು ಚೆನ್ನಾಗಿ ಮೂಡಿ ಬಂದಿದೆ. ಇಂದಿನ ಜೀವನ ಶೈಲಿ, ಬದಲಾದ ದಿನಗಳು ಬದಲಾದ ಪರಿಸ್ಥಿತಿಗಳ ಜೊತೆಗೆ ಅಂತಃಕರಣದ ಜೀವಗಳು ಬದುಕುವ ಬಗೆಯನ್ನು ಕಟ್ಟಿಕೊಟ್ಟಿದ್ದಾರೆ. ಪ್ರತಿಯೊಂದು ಕಥೆಯಲ್ಲಿಯೂ ಒಂದಲ್ಲಾ ಒಂದು ಮಾನವೀಯತೆಯ ಒರತೆ ಕಾಣುತ್ತದೆ. ಇದು ಕಥೆಯ ಸಕಾರಾತ್ಮಕ ಅಂಶವಾಗಿ ಕಂಡಿತು. ಸರಳ ಸುಂದರ ಕಥೆಗಳು ಭಾಷಾ ಶೈಲಿ, ಸೊಗಸಾದ ನಿರೂಪಣೆಯಿಂದ ಸೊಗಸಾಗಿ ಓದಿಸಿಕೊಂಡು ಹೋಗುತ್ತವೆ. ಲೇಖಕಿಯಿಂದ ಇನ್ನಷ್ಟು ಚೆಂದದ ಕಥೆಗಳು ಮೂಡಿಬರಲಿ ಹಾಗೂ ಮುಂದಿನ ಸಾಹಿತ್ಯ ಪಯಣಕ್ಕೆ ಶುಭವಾಗಲಿ ಎಂದು ಹಾರೈಸುವೆ.


~ವಿಭಾ ವಿಶ್ವನಾಥ್

ಶನಿವಾರ, ಅಕ್ಟೋಬರ್ 24, 2026

ಪ್ರಪಂಚಕ್ಕೆ ರಹದಾರಿ (ಬೆಳಕಿಂಡಿಯ ಕತೆಗಳು -95)

 


"ಅಮ್ಮ ನಾನು ದೊಡ್ಡವನಾದ ಮೇಲೆ ಇಡೀ ಪ್ರಪಂಚ ಸುತ್ತುತ್ತೇನೆ" ಎಂದಾಗ ಖುಷಿಯಾಯಿತು. ಆದರೆ, ಚಿಕ್ಕ ಮಗ "ನಾನು ದೊಡ್ಡವನಾದ ಮೇಲೆ ನಿಮ್ಮ ಜೊತೆಯೇ ಇರುತ್ತೇನೆ. ನೀವೇ ನನ್ನ ಪ್ರಪಂಚ" ಎಂದಾಗ ಮನಸ್ಸು ತುಂಬಿ ಬಂದಿತು. "ಯಾಕೆ ಹೀಗೆ ಹೇಳುತ್ತಿದ್ದೀರಿ..??" ಎಂದಿದ್ದಕ್ಕೆ "ನಾನು ವಾಸ್ಕೊಡಿಗಾಮಾ ಕಥೆ ಕೇಳಿದೆ" ಎಂದ ದೊಡ್ಡವನು. "ನಾನು ಬಾಲ ಗಣೇಶನ ಕತೆ ನೋಡಿದೆ. ಸುಬ್ರಹ್ಮಣ್ಯ ನವಿಲು ತೆಗೆದುಕೊಂಡು ಲೋಕ ಸುತ್ತುವುದಕ್ಕೆ ಹೊರಟರೆ ಗಣೇಶ ಅಪ್ಪ-ಅಮ್ಮನನ್ನೇ ಸುತ್ತಿ ಬುದ್ಧಿವಂತನಾದ" ಎಂದ ಚಿಕ್ಕವನು. 

ಒಬ್ಬ ಸಾಹಸದತ್ತ ಹೊರಟರೆ ಮತ್ತೊಬ್ಬ ಸಂಸ್ಕೃತಿ ಮೌಲ್ಯಗಳತ್ತ ಹೊರಟ. 

ಇಬ್ಬರ ಭವಿಷ್ಯವೂ ಹಸನಾಗಿ ಅವರ ಪ್ರಪಂಚ ಸುಂದರವಾಗಿರಲಿ ಎಂದಷ್ಟೇ ಹರಸಬಲ್ಲೆ. ದಾರಿ ತೋರಿಸುವುದಷ್ಟೇ ನಮ್ಮ ಕೆಲಸ.. ಅವರ ಪ್ರಪಂಚವನ್ನು ಆಯ್ದುಕೊಳ್ಳುವ ಆಯ್ಕೆ ಅವರಿಗೇ ಬಿಟ್ಟದ್ದು.

~ವಿಭಾ ವಿಶ್ವನಾಥ್

ಲೀಡರ್ (ಬೆಳಕಿಂಡಿಯ ಕತೆಗಳು - 94)

 


"ಗುಣ, ನೀನೇ ಈ ಕ್ಲಾಸ್ ಲೀಡರ್" ಎನ್ನುತ್ತಾ ಅವತ್ತಿನ ತರಗತಿಯಲ್ಲಿ ಅವಳನ್ನು ಲೀಡರ್ ಮಾಡಿ ಹೊರಟಿದ್ದೆ ನಾನು. ಮೆಕ್ಯಾನಿಕಲ್ ಬ್ರ್ಯಾಂಚ್ ನ 60 ಜನರ ತರಗತಿಯಲ್ಲಿ ಏಕೈಕ ಹುಡುಗಿ ಅವಳು. ಹುಡುಗರು "ಹುಡುಗಿಯ ಕೈ ಕೆಳಗೆ ಲೀಡರ್ ಶಿಪ್" ಎನ್ನಲಿಲ್ಲ. ಬದಲಾಗಿ ಅವಳಿಗೆ ಸಹಕಾರ ನೀಡಿ ಮನೆಮಗಳಂತೆ ಕಂಡು ಸ್ಫೂರ್ತಿ ತುಂಬಿದ್ದರು. ಅವಳೂ ಅಷ್ಟೇ ಕೀಳಿರಿಮೆ ತೊರೆದು ಎಲ್ಲರ ಒಳಿತಿಗಾಗಿ ಪಣ ತೊಟ್ಟಿದ್ದಳು. 

ಲೀಡರ್ ಶಿಪ್ ಎನ್ನುವುದು ಲಿಂಗ ಅಥವಾ ಹುಡುಗ-ಹುಡುಗಿ ಎಂಬ ಭೇಧದಿಂದ ಕೂಡಿರುವುದಿಲ್ಲ. ಅದಕ್ಕೆ 'ನಾಯಕತ್ವ' ಎನ್ನಲಿಲ್ಲ ನಾನು.. 'ನಾಯಕಿ'ಯೂ ಆಗಬಲ್ಲಳು ಅವಳು. ಅದಕ್ಕೆ ಲೀಡರ್ ಎಂದದ್ದು ನಾನು..


~ವಿಭಾ ವಿಶ್ವನಾಥ್

ಸುರಕ್ಷಾ


 "ಉಳ್ಳವರು ಶಿವಾಲಯವ ಕಟ್ಟುವರು

ನಾನೇನು ಮಾಡಲಿ ಬಡವನಯ್ಯ

ಎನ್ನ ಕಾಲೇ ಕಂಬ, ದೇಹವೇ ದೇಗುಲ

ಶಿರವೇ ಹೊನ್ನ ಕಳಸವಯ್ಯ"


ಎನ್ನುವ ವಚನವನ್ನು ಶಾಲೆಯಲ್ಲಿ ಭೋಧಿಸುವಾಗ ಹೊರಗೆ ಏನೋ ಗಲಾಟೆ ಕೇಳಿಸುತ್ತಿತ್ತು. ಇದನ್ನು ಎಲ್ಲರ ಬಳಿಯೂ ಓದಿಸು ಎಂದು ಕ್ಲಾಸ್ ಲೀಡರ್ ಅಪ್ರಮೇಯನಿಗೆ ಹೇಳಿ ಹೊರಗೆ ಬಂದು ನೋಡಿದರೆ ಒಬ್ಬಳು ಹೆಂಗಸು ಜೋರು ಜೋರಾಗಿ ಗಲಾಟೆ ಮಾಡುತ್ತಿದ್ದಳು. "ನಾವು ಮಾಡೋದೂ ವೃತ್ತಿಯೇ ಅಲ್ವಾ ಮೇಡಂ.. ಅದಕ್ಕೆ ನನ್ನ ಮಗು ಶಾಲೆಯಲ್ಲಿ ಓದಬಾರದು ಅಂದ್ರೆ ಹೇಗೆ..?? ನೀವೇ ಹೇಳಿ. " ಎನ್ನುತ್ತಾ ಪ್ರಶ್ನಿಸುತ್ತಿದ್ದವಳ ಮಾತಲ್ಲಿಯೂ ನ್ಯಾಯವಿತ್ತು. ಅವಳು ಕೇಳುತ್ತಿದ್ದುದರಲ್ಲಿ ತಪ್ಪೇನೂ ಇರಲಿಲ್ಲ ಎನ್ನಿಸಿದರೂ.. ಅವಳ ಮಗು ಈ ಶಾಲೆಯಲ್ಲಿ ಓದುವುದು ಒಂದು ಸವಾಲೇ ಸರಿ ಎನ್ನಿಸಿತು. ಸುಶಿಕ್ಷಿತ ಮಹಿಳೆಯಂತೆ ಮಾತನಾಡುತ್ತಿದ್ದವಳ ಹಿನ್ನೆಲೆಯನ್ನು ಮೊದಲ ಬಾರಿಗೆ ನೋಡಿದವರು ಊಹಿಸುವಂತೆಯೇ ಇರಲಿಲ್ಲ. ಹಾಗಿತ್ತು ಅವಳ ನಡೆ-ನುಡಿ.


ಯಾಕೋ ಆಕೆಯ ವೃತ್ತಿಗಾಗಿ ಅವಳ ಮಗುವಿನ ಭವಿಷ್ಯವನ್ನು ಹಾಳು ಮಾಡುವುದರಲ್ಲಿ ಅರ್ಥವಿಲ್ಲ ಎನ್ನಿಸಿತು. ಇವತ್ತು ಈ ಕುರಿತು ಹೆಡ್ ಮೇಡಂ ಜೊತೆ ಒಮ್ಮೆ ಮಾತನಾಡಬೇಕು ಎಂದು ತೀರ್ಮಾನಿಸಿ ಅಲ್ಲಿಯೇ ಇದ್ದ ಆಯಾ ಜೊತೆಗೆ ಅವರನ್ನು ನಾಳೆ ಬೆಳಿಗ್ಗೆ ಬರಲು ಹೇಳಿ ಕಳುಹಿಸಿದೆ. ಆ ಶಾಲೆಯ ಕಾರ್ಯದರ್ಶಿಗಳ ಸೊಸೆಯಾಗಿ ಅಲ್ಲದಿದ್ದರೂ ಮಾನವೀಯ ದೃಷ್ಟಿಯಿಂದ ಅವಳ ಮಗುವಿಗೊಂದು ನ್ಯಾಯಯುತ ಶಿಕ್ಷಣ ದೊರಕಿಸಿಕೊಡಬೇಕು ಎಂದು ಗಟ್ಟಿ ನಿರ್ಧಾರ ಮಾಡಿದೆ.


"ಅಲ್ಲ ಮೇಡಂ.. ನೀವು ಹೇಳುತ್ತಿದ್ದೀರ ಎಂದು ಆ ಮಗುವಿಗೆ ಶಾಲೆಯಲ್ಲಿ ಓದಲು ಅವಕಾಶ ಮಾಡಿಕೊಟ್ಟರೆ, ನಾಳೆ ಅಂತಹದ್ದೇ ಮಕ್ಕಳು ಬಂದರೆ ಏನು ಮಾಡುವುದು..?? " ಎಂದಾಗ "ಅಂತಹವರನ್ನು ಆ ಪರಿಸ್ಥಿತಿಗೆ ದೂಡಿದ್ದಕ್ಕೆ ನಾವೂ ಕಾರಣ ಆಗಬಾರದು. ಅಲ್ಲವಾ..?? " ಎಂದೆ. ಎಲ್ಲರಿಗೂ ನನ್ನ ನಿರ್ಧಾರ ಸರಿಯಾಗಿ ಕಂಡರೂ ಒಪ್ಪಿಕೊಳ್ಳಲು ಏನೋ ಅಡ್ಡಿ. ಕೊನೆಗೆ, ಮಗುವಿನ ತಾಯಿ ವೇಶ್ಯಾ ವೃತ್ತಿ ಬಿಟ್ಟು ಬೇರೆ ವೃತ್ತಿ ಆಯ್ದುಕೊಳ್ಳುವುದಾದರೆ ಆಕೆಯ ಮಗುವನ್ನು ಶಾಲೆಗೆ ಸೇರಿಸಿಕೊಳ್ಳಬಹುದು ಎಂದು ತೀರ್ಮಾನವಾಯಿತು. ಅದನ್ನು ಆಕೆಗೆ ಹೇಳುವ ಹೊಣೆ ನನ್ನ ಹೆಗಲೇರಿತು.


ಆಕೆಗೆ ಬುದ್ಧಿ ಮಾತು ಹೇಳಲು ಹೊರಟ ನನಗೆ ಅವಳ ಕತೆ ಕೇಳಿ ನಾಲಿಗೆಯೇ ಹೊರಳಲಿಲ್ಲ. ಆಕೆ ಚಿಕ್ಕ ವಯಸ್ಸಿನಲ್ಲಿಯೇ ಅತ್ಯಾಚಾರಕ್ಕೆ ಒಳಗಾದವಳು. ಸಂಪ್ರದಾಯಸ್ಥ ಕುಟುಂಬದಲ್ಲಿ ಹೆಣ್ಣಿನ ದೇಹ ಬಹಳ ಪವಿತ್ರ ಎಂಬ ಭಾವವಿತ್ತು. ಅಪವಿತ್ರವಾದವಳ ಭವಿಷ್ಯಕ್ಕಿಂತ ಮನೆತನದ ಮರ್ಯಾದೆ ಮುಖ್ಯವಾಗಿ ಅವಳನ್ನು ಮನೆಯಿಂದ ಹೊರ ಹಾಕಿದ್ದರು. ಕೊನೆಗೆ, ವಿಧಿ ಇಲ್ಲದೇ ಆ ಪಾಪಕೂಪದಲ್ಲಿ ನರಳಿದ್ದವಳು ತನ್ನ ಮಗುವಿಗೂ ಅದೇ ಪರಿಸ್ಥಿತಿ ಉಂಟಾಗಬಾರದು ಎಂದು ಶಾಲೆಗೆ ಸೇರಿಸುವ ತೀರ್ಮಾನಕ್ಕೆ ಬಂದಿದ್ದಳು.


ಕೊಂಚ ಸಾವರಿಸಿಕೊಂಡು ಅವಳೇ ಮುಂದುವರಿಸಿದ್ದಳು. ಯಾವುದಾದರೂ ಕೆಲಸ ಸಿಕ್ಕರೆ ನನಗೂ ಈ ಕೆಲಸದಲ್ಲಿ ಮುಂದುವರಿಯಲು ಇಷ್ಟವಿಲ್ಲ ಎಂದಾಗ ನನಗೂ ಕೊಂಚ ಧೈರ್ಯ ಬಂದಿತ್ತು.


ನನ್ನ ಯೋಜನೆಗೆ ರೂಪು ನೀಡಲು ಇದೇ ಸರಿಯಾದ ಸಮಯ ಎಂದೆನಿಸಿತು.


ಮಕ್ಕಳಿಗೆ ತಮ್ಮ ದೇಹದ ಕುರಿತು.. ಅದರಲ್ಲೂ ಚಿಕ್ಕ ಮಕ್ಕಳಿಗೆ ಗುಡ್ ಟಚ್ ಹಾಗೂ ಬ್ಯಾಡ್ ಟಚ್ ಕುರಿತು ತಿಳಿಸಿ ಹೇಳಲು ಹಾಗೂ ಲೈಂಗಿಕ ಕಿರುಕುಳಕ್ಕೆ ಒಳಗಾಗುವ ಹೆಣ್ಣು ಮಕ್ಕಳನ್ನು ರಕ್ಷಿಸಲು ಹಾಗೂ ಧೈರ್ಯ ತುಂಬಲು ಒಂದು ಪ್ರಾಜೆಕ್ಟ್ ರೂಪಿಸಿದ್ದೆ. ಆದರೆ, ಆ 'ಸುರಕ್ಷಾ' ಯೋಜನೆಯನ್ನು ಜಾರಿಗೆ ತರಲು ಇದಕ್ಕಿಂತ ಒಳ್ಳೆಯ ಅಭ್ಯರ್ಥಿ ಇಲ್ಲವೆಂದು ಆಕೆಯನ್ನು ಆಯ್ಕೆ ಮಾಡಿ ಆಕೆಗೆ ಉದ್ಯೋಗ ನೀಡಿದೆ. ಇದಲ್ಲದೆ ಆಕೆಯ ಮಗುವಿಗೆ ಕೂಡಾ ಶಿಕ್ಷಣ ದೊರೆಯಿತು.


ಇದಲ್ಲದೇ.. ಮಕ್ಕಳಲ್ಲಿ ತಮ್ಮ ದೇಹ ಪ್ರಕೃತಿಯ ಕುರಿತು ಅರಿವು ಮೂಡಿಸುವ ಪ್ರಯತ್ನ ಅಂದಿನಿಂದಲೇ ಜಾರಿಗೆ ಬಂದಿತು.


ಮಕ್ಕಳು ತರಗತಿಯೊಳಗಿನಿಂದ ವಚನವನ್ನು ಹೇಳುತ್ತಿದ್ದದ್ದು ಕೇಳುತ್ತಲೇ ಇತ್ತು.


ಉಳ್ಳವರು ಶಿವಾಲಯವ ಕಟ್ಟುವರು

ನಾನೇನು ಮಾಡಲಿ ಬಡವನಯ್ಯ

ಎನ್ನ ಕಾಲೇ ಕಂಬ, ದೇಹವೇ ದೇಗುಲ

ಶಿರವೇ ಹೊನ್ನ ಕಳಸವಯ್ಯ"


~ವಿಭಾ ವಿಶ್ವನಾಥ್

ಅವಳು ಹಾಗೆಯೇ.. (ಅವಳ ಕವಿತೆಗಳು - 26)

 


ಹೌದು, ಅವಳು ಹಾಗೆಯೇ..

ಅವಳ ಕಾಲು ನೆಲದ ಮೇಲೆ ನಿಲ್ಲುವುದೇ ಕಡಿಮೆ

ಸದಾ ಒಂದಿಲ್ಲೊಂದು ಚಟುವಟಿಕೆಗಳನ್ನು ಮಾಡುತ್ತಾ

ತನಗೆ ತಾನೇ ಕೆಲಸಗಳನ್ನು ಹಚ್ಚಿಕೊಳ್ಳುತ್ತಾಳೆ


ಹೌದು, ಅವಳು ಹಾಗೆಯೇ..

ಎಲ್ಲರನ್ನೂ ತೆರೆದ ಬಾಹುಗಳಿಂದ ಸ್ವಾಗತಿಸುತ್ತಾಳೆ

ಸದಾ ಪ್ರೇಮದ ಹೊದಿಕೆ ಹೊದ್ದು, ದ್ವೇಷ ಕಳಚಿಟ್ಟು

ಮುಕ್ತ ಮನಸ್ಸಿನಿಂದ ಎಲ್ಲರೊಡನೆ ಬೆರೆಯುತ್ತಾಳೆ


ಹೌದು, ಅವಳು ಹಾಗೆಯೇ..

ತನ್ನನ್ನು ಬಂಧಿಸ ಹೊರಟಷ್ಟು ಸ್ವತಂತ್ರವಾಗುತ್ತಾಳೆ

ಬಂಧನದಲ್ಲಿ ಸಿಲುಕದೆ ಕರ್ತವ್ಯವನ್ನು ಪ್ರೀತಿಸುತ್ತಾ

ಅಂಕೆಗೆ ಸಿಗದೆ ಸ್ವತಂತ್ರವಾಗಿರುವುದನ್ನು ಕಲಿಸುತ್ತಾಳೆ


ಹೌದು, ಅವಳು ಹಾಗೆಯೇ..

ಪದಗಳಿಗೆ ನಿಲುಕದೇ ಸದಾ ಸತಾಯಿಸುತ್ತಾಳೆ

ಸದಾ ಜಾಗೃತವಾಗಿದ್ದು ನಮ್ಮನ್ನೂ ಜಾಗೃತಿಗೊಳಿಸುತ್ತಾ

ಸ್ಫೂರ್ತಿಯಾಗಿ ಹೆಜ್ಜೆ ಹೆಜ್ಜೆಗೂ ಕಾಯುತ್ತಿರುತ್ತಾಳೆ


~ವಿಭಾ ವಿಶ್ವನಾಥ್

ಮೀಟೂ (ಪುಸ್ತಕ ಯಾನ - 493)


ಪುಸ್ತಕದ ಶೀರ್ಷಿಕೆ : ಮೀಟೂ 

ಲೇಖಕರು : ಡಾ. ಸಿ. ನಂದಿನಿ

ಪ್ರಕಾಶಕರು : ಸಿ. ವಿ. ಜಿ ಪಬ್ಲಿಕೇಶನ್ಸ್ 

ಪ್ರಥಮ ಮುದ್ರಣ : 2020

ಪುಟಗಳು : 206

ಬೆಲೆ : 200 ರೂ. 


ಈ ಸಾಮಾಜಿಕ ಕಾದಂಬರಿಯಲ್ಲಿ ಬಹಳ ಗಹನವಾದ ಹಾಗೂ ಅಷ್ಟೇ ಗಂಭೀರವಾದ ವಿಚಾರವನ್ನು ಕಟ್ಟಿಕೊಟ್ಟಿರುವ ಬಗೆ ಬಹಳ ಸೊಗಸಾಗಿದೆ. 


" 'ಅಯ್ಯೋ ಪಾಪ.. ಎಂಥಾ ಮುಗ್ಧೆ..! ಬದುಕಿ ಸಾಧಿಸಬೇಕಿತ್ತು.' ಎನ್ನುತ್ತೇವೆ. ಆದರೆ, ಅವಳು ಬದುಕಿ ಉಳಿದರೆ ಚಾರಿತ್ರ್ಯಹೀನಳೆಂಬ ಪಟ್ಟ ಕಟ್ಟುತ್ತೇವೆ."

ಎಂಬ ಮಾತನ್ನು ಓದಿದಾಗ ಎಷ್ಟು ನಿಜವಲ್ಲವಾ ಎನ್ನಿಸಿತು. ಹಾಗೆಂದು ಸತ್ತವರ ಚಾರಿತ್ರ್ಯದ ಕುರಿತು ಮಾತನಾಡುವ ವಿಚಾರಕ್ಕಿಂತಲೂ.. ಬದುಕಿದ್ದೂ ಸತ್ತಂತೆ, ಎಲ್ಲವನ್ನೂ ಸಹಿಸಿಕೊಂಡು ಬದುಕುವವರನ್ನೂ ಚುಚ್ಚಿ ಮಾತನಾಡುವವರಿಗೂ ಇದು ಅನ್ವಯಿಸುತ್ತದೆ ಎನ್ನಿಸಿತು. 


2006ರಲ್ಲಿ ಮೊಟ್ಟಮೊದಲ ಬಾರಿಗೆ ನ್ಯೂಯಾರ್ಕಿನ ಬ್ರುಕ್ಲಿನ್ ಮೂಲದ ಟರಾನಾ ಬರ್ಕ್ ಎಂಬ ಆಫ್ರೋ-ಅಮೆರಿಕನ್ ಚಳುವಳಿಗಾರ್ತಿಯಿಂದ ಮೈ ಸ್ಪೇಸ್ ಎಂಬ ವೆಬ್ ಪೋರ್ಟಲ್ ನಲ್ಲಿ ಮೊಟ್ಟಮೊದಲ ಬಾರಿಗೆ ಬಳಕೆಯಾದ ಈ ಪದ ದ್ವನಿಸುವುದು ತಾನು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೇನೆ ಎಂಬುದನ್ನು. 

ಯೂಥ್ ಕ್ಯಾಂಪ್ ನಡೆಸುತ್ತಿದ್ದಾಗ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಕುರಿತು ಮನಬಿಚ್ಚಿ ಮಾತನಾಡಿದಾಗ ಟರಾನಾ ನೀಡಿದ ತಕ್ಷಣದ ಸಾಂತ್ವನದ ಪ್ರತಿಕ್ರಿಯೆ ಮೀ-ಟೂ.. 'ನಾನೂ ಕೂಡ' ಎಂಬುದಾಗಿ. 

ಆಗ ಅದಕ್ಕೆ ಅಂತಹ ವ್ಯಾಪಕತೆ ಏನೂ ಸಿಕ್ಕಿರದಿದ್ದರೂ 2017ರಲ್ಲಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಟಿ ಅಲಿಸ್ಸಾ ಮಿಲಾನೋ ಈ ಪದವನ್ನು ಬಳಸುತ್ತಾರೆ. ಆಗ ವೈರಲ್ ಆಗಿ ಮುಂದೆ ಬಹಳಷ್ಟು ಸೆನ್ಸಿಟಿವ್ ವಿಚಾರಗಳನ್ನು ತರೆದಿಟ್ಟ ಪದ ಹಾಗೂ ಹ್ಯಾಷ್ ಟ್ಯಾಗ್ ಮೀಟೂ. ಇದನ್ನು


ಈ ಕಾದಂಬರಿಯಲ್ಲಿ ಭಾರತೀಯ ಹೆಣ್ಣುಮಕ್ಕಳ ಮೀಟೂ ಬದುಕನ್ನು ಕಟ್ಟಿಕೊಟ್ಟಿದ್ದಾರೆ. 

"ಭಾರತೀಯ ಹೆಣ್ಣುಮಗಳು ಯಾವತ್ತೂ ತನ್ನ ಮರ್ಯಾದೆಗಾಗಿ ಅಂಜುವವಳು. ತನ್ನ ವ್ಯಕ್ತಿತ್ವಕ್ಕೆ, ಆದರ್ಶಗಳಿಗೆ ತಾನೇ ಮಸಿ ಬಳಿಯುವ ಕೆಲಸ ಯಾವತ್ತೂ ಮಾಡಲಾರಳು." ಎನ್ನುವ ಮೀರಾಳ ಮಾತು

" ತನ್ನ ಭಾವನೆಗಳು ನೈತಿಕತೆ ಇವೇ ಭಾರತೀಯ ಹೆಣ್ಣಿಗೆ ಮುಖ್ಯವಾಗುತ್ತದೆ. ಇಂಥಾ ವಿಷಯಗಳಲ್ಲಿ ಹೆಣ್ಣು ಅದರಲ್ಲೂ ಭಾರತೀಯ ಹೆಣ್ಣು ಸುಳ್ಳು ಹೇಳಲಾರಳು" ಎನ್ನುವ ನಿಲುವನ್ನು ತಳೆಯುವ ವಿದೇಶಿಯರನ್ನೂ ಕಾಣುತ್ತೇವೆ. 


ಹೆಣ್ಣು ಬಹಳಷ್ಟು ಸಹಿಸಿಕೊಳ್ಳುತ್ತಾಳೆ. ತನ್ನ ಕಷ್ಟ, ನೋವುಗಳನ್ನು ಸಹಿಸಿಕೊಂಡರೂ ಕೆಲವೊಮ್ಮೆ ತಾನು ಆರಾಧಿಸುವ ವ್ಯಕ್ತಿಗೆ ತನ್ನ ಪ್ರೀತಿ ಕಾಣದೆ ತಾನು ಕೇವಲ ತಾನು(ದೇಹ ಮಾತ್ರ) ಮಾತೃವಾಗಿ ಕಾಣುವ ವಿಷಯ ಮನದಟ್ಟಾಗ ಅನುಭವಿಸುವ ಮಾನಸಿಕ ತುಮುಲಗಳು ಅಷ್ಟಿಷ್ಟಲ್ಲ. ಎಷ್ಟೇ ಮಾನಸಿಕವಾಗಿ ದೃಢಚಿತ್ತದಿಂದ ಇದ್ದರೂ ಕೆಲವೊಮ್ಮೆ ಸಮಾಜಕ್ಕೆ ಬೇಕಾಗುವುದು ಸಾಕ್ಷಿ, ಆತ್ಮಸಾಕ್ಷಿ ಅಲ್ಲ. ಅಂತಹ ಸಂದರ್ಭದಲ್ಲಿ ಹೆಣ್ಣು ಸೋಲಬಹುದು. ಆದರೆ, ಆ ಸೋಲು ಕೇವಲ ತಾತ್ಕಾಲಿಕ. 


ಕಾದಂಬರಿಯ ನಾಯಕಿ ಮಹತಿ ತನ್ನೊಳಗೆ ಸಾಕಷ್ಟು ಆಂದೋಲನಗಳನ್ನು ಅನುಭವಿಸುತ್ತಾ ಸಾಕಷ್ಟು ಸಹಿಸಿಕೊಂಡು ಒಳಗೊಳಗೆ ಬೆಂದು ರಾಮನ್ ಸೃಷ್ಟಿಸಿದ ಚಕ್ರವ್ಯೂಹದಲ್ಲಿ ಬಂಧಿಯಾಗುತ್ತಾಳೆ. ಎಲ್ಲವನ್ನೂ ದಾಟಿ ನಿಲ್ಲುವುದು ಸುಲಭವಲ್ಲ. ಅದರಲ್ಲಿಯೂ ಮಹತಿಯಂತಹ ಮಧ್ಯಮ ವರ್ಗದ ಹೆಣ್ಣುಮಕ್ಕಳಿಗೆ ಅದು ಸುಲಭವಂತೂ ಅಲ್ಲವೇ ಅಲ್ಲ. ಹಾಗೆಂದು ಅವಳು ದಡ್ಡಿಯಲ್ಲ. ಕೇವಲ ಜಾಣ್ಮೆ ಮಾತ್ರ ಇದೆಲ್ಲದರಿಂದ ಹೊರಬರಲು ಸಾಲುವುದಿಲ್ಲ. 


ಮಹತಿ, ಹೀರಾ ಇಬ್ಬರೂ ಶಾಲಾ ದಿನಗಳಿಂದ ಜೊತೆಯಾಗಿ ಓದುತ್ತಾ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಹೋಗುವಾಗ ಪಿ. ಜಿಯಲ್ಲಿಯೂ ಒಟ್ಟಿಗೆ ಇದ್ದವರು. ಇಂಜಿನಿಯರಿಂಗ್ ಮುಗಿಸಿದ ನಂತರ ಇಬ್ಬರೂ ಬೇರೆಬೇರೆ ಕಂಪನಿಗೆ ಆಯ್ಕೆಯಾಗಿದ್ದರು. ಮಹತಿಯದ್ದು ಸೂಕ್ಷ್ಮ ಸ್ವಭಾವ ಅದನ್ನು ಅರ್ಥೈಸಿಕೊಂಡು ತಾಯಿಯಂತೆ ಸಲಹುತ್ತಾ... ಅವಳಲ್ಲಿ ಆತ್ಮವಿಶ್ವಾಸ ತುಂಬುತ್ತಾ ಅಕ್ಷರಶಃ ತನ್ನ ಬದುಕಿನ ಭಾಗದಂತೆಯೇ ನೋಡಿಕೊಳ್ಳುವ ಗೆಳತಿ ಹೀರಾ ಕಾದಂಬರಿಯ ಪ್ರತಿ ಹಂತದಲ್ಲಿಯೂ ಆಪ್ತವಾಗುತ್ತಾ ಹೋಗುತ್ತಾಳೆ. ಇಂತಹ ಗೆಳೆತನ ತೀರಾ ವಿರಳ. ಮಹತಿಯ ಪ್ರತಿ ಹೆಜ್ಜೆಯಲ್ಲಿಯೂ ಧೈರ್ಯ ತುಂಬಿದರೂ ಮಹತಿಯ ಸೂಕ್ಷ್ಮ ಸ್ವಭಾವವನ್ನು ಬದಲಿಸುವುದು ಸುಲಭವಾಗಿರಲಿಲ್ಲ. 


ಮಹತಿಯ ತಂದೆ ಪೊಲೀಸ್ ಆಗಿದ್ದವರು. ತಮ್ಮ ಅನಾರೋಗ್ಯಕ್ಕಿಂತಲೂ ಮುಂಚೆಯೇ ವಿ.ಆರ್.ಎಸ್ ತೆಗೆದುಕೊಂಡವರು. ಸಂಬಳ ಮಾತ್ರದಿಂದಲೇ ಕೆಲಸ ಸಾಗಿಸುತ್ತಾ.. ಮಗಳಿಗಾಗಿ ಹಣ-ಆಸ್ತಿ ಎಂದು ಮಾಡದೆ ವಿದ್ಯೆ ಎಂಬ ಆಸ್ತಿಯನ್ನು ನೀಡಿದ್ದವರು. ಹಾಗಾಗಿ ಬೇರೆಲ್ಲರಂತೆ ಈ ಕೆಲಸವಲ್ಲದಿದ್ದರೆ ಮತ್ತೊಂದು ಕೆಲಸ, ಇಲ್ಲವೇ ಕೆಲಸಕ್ಕೆ ಹೋಗಲಾರೆ ಎನ್ನುವ ಆಯ್ಕೆ ಮಹತಿಯ ಬಳಿ ಇರಲಿಲ್ಲ. ಟೀಚಿಂಗ್ ವೃತ್ತಿಯೆಡೆಗೆ ಒಲವಿದ್ದರೂ.. ತಂದೆಯ ಆಸೆಯಂತೆ ಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ವೃತ್ತಿ ಬದಲಾಯಿಸುವುದು ಸಹ ಅವಳ ಪಾಲಿಗೆ ಸುಲಭವಾಗಿರಲಿಲ್ಲ.


ಮಹತಿ ಟೀಮ್ ಲೀಟರ್ ಪಟ್ಟಕ್ಕೇರಿದ್ದು.. ತಮಗಿಂತ ಜೂನಿಯರ್ ಆಗಿದ್ದವಳು ಟೀಮ್ ಲೀಡರ್ ಆಗಿದ್ದು ಕೆಲವರಿಗೆ ಇರುಸುಮುರುಸು ತಂದಿತ್ತು. ಟೀಮ್ ನಲ್ಲಿಯೂ ಹೇಳಿಕೊಳ್ಳುವಂತಹ ಸಪೋರ್ಟ್ ಸಿಕ್ಕಿರಲಿಲ್ಲ. ಅವರೆಲ್ಲರೂ ರಮಣ್ ಗೆ ಅತ್ಯಪ್ತವಾಗಿದ್ದೇ ಅವಳ ಈ ಏಳಿಗೆಗೆ ಕಾರಣವೆಂದು ತಿಳಿದಿದ್ದರು. ಆದರೆ, ವಿಷಯ ಬೇರೆಯೇ ಇತ್ತು. ಹಲವು ಬಾರಿ ಹೀಗೆಯೇ ಹೆಣ್ಣುಮಕ್ಕಳ ಚಾರಿತ್ರ್ಯವನ್ನು ಅಳೆದುಬಿಡುವುದು ವಿಪರ್ಯಾಸ. 


ಐ.ಐ.ಟಿಯಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಮಾಡಿ ಐ.ಐ.ಎಂ ನಲ್ಲಿ ಎಂ.ಬಿ.ಎ ಮಾಡಿ ಅತಿ ಕಿರಿಯ ವಯಸ್ಸಿನಲ್ಲಿಯೇ ಹೆಸರಾಂತ ಐಟಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಬಂದಿದ್ದ ರಮಣ್ ಬುದ್ಧಿವಂತಿಕೆ ಕಡಿಮೆಯದೇನಲ್ಲ. ಬುದ್ಧಿವಂತನಾಗಿದ್ದವನು ಕಿರುಕುಳವನ್ನು ಕೊಡುವುದು ಅಷ್ಟೇ ಬುದ್ಧಿವಂತಿಕೆಯಿಂದಲೇ.. ಎಲ್ಲಿಯೂ ಸಿಕ್ಕಿಕೊಳ್ಳದಂತೆ, ಯಾವುದೇ ಸಾಕ್ಷಿ ಉಳಿಯದಂತೆ.. ಮೇಲ್ನೋಟಕ್ಕೆ ತನ್ನ ತಪ್ಪು ಇಲ್ಲದಂತೆಯೇ ಕಾಡುವುದು..


ಮೊದಮೊದಲಿಗೆ ರಮಣ್ ಕುರಿತು ಆರಾಧನೆಯ ಭಾವ, ಬುದ್ಧಿವಂತಿಕೆಯ ಕುರಿತು ಹೆಮ್ಮೆ ಇಟ್ಟುಕೊಂಡು ಅವನನ್ನು ಹೊಗಳುತ್ತಿದ್ದವಳಿಗೆ ಆತನ ನಿಜಬಣ್ಣ ತಿಳಿದಂತೆ ಆತನ ಕುರಿತು ಹೇವರಿಕೆ ಮೂಡಿತ್ತು. ಆದರೆ ಅಷ್ಟರಲ್ಲಾಗಲೇ ಆತನ ಕಪಿಮುಷ್ಠಿಗೆ ಸಿಲುಕಿದ್ದ ಮಹತಿ ಯಾರಲ್ಲಿಯೂ ಕಷ್ಟವನ್ನು ಹೇಳಿಕೊಳ್ಳಲಾಗದಂತಾಗಿದ್ದಳು. ಹೀರಾಳಿಗೆ ಈ ವಿಚಾರ ತಿಳಿದಾಗ ಅವಳು ತಿಳಿಸಿದ್ದ ವಿಚಾರವೇ ಮೀಟೂ. ಕಾದಂಬರಿ ಆರಂಭವಾಗುವುದೇ ಪಿ.ಜಿಯಲ್ಲಿ ಮೀಟೂ ಅಭಿಯಾನದ ಕುರಿತ ಕಾರ್ಯಕ್ರಮ ಪ್ರಸಾರವಾಗುತ್ತಿದ್ದಾಗ. ವಿವಿಧ ವ್ಯಕ್ತಿಗಳು ವ್ಯಕ್ತಪಡಿಸುತ್ತಿದ್ದ ವಿವಿಧ ಭಾವಗಳಿಂದ. 


ಹೀರಾಳ ಮಾತಿಗೆ ಮಹತಿಯ ಪ್ರತಿಕ್ರಿಯೆ ಏನಿತ್ತು ..?


ಕಂಪನಿಯಲ್ಲಿ ಎಲ್ಲರೂ ತನ್ನ ವಿರುದ್ಧವೇ ಇದ್ದಾರೇನೋ ಎಂಬತ್ತಿದ್ದಾಗ ಆಕೆಗೆ ಬೆಳಕಾಗಿ ಕಂಡವನು ಅಭಯ್. ಮಹತಿಯ ಕಷ್ಟಕ್ಕೆ ಅಭಯಹಸ್ತ ಚಾಚಿದ ಅವನನ್ನು ನಂಬುವುದು ಮಹತಿಯ ಪಾಲಿಗೆ ಸುಲಭವಾಗಿತ್ತಾ..? ಆತನಿಗೂ ರಮಣ್ ಕುರಿತು ಹೇಳಲಿಲ್ಲ ಮಹತಿ.


ರಮಣ್ ಮುಂದೆ ಕಂಪನಿಯ ಸಿ.ಇ.ಓ ಆಗಿ ಉನ್ನತಿಯ ಸ್ಥಾನಕ್ಕೇರುತ್ತಾನೆ. ಪ್ರಾಜೆಕ್ಟ್ ಸಲುವಾಗಿ ಮಹತಿ ಅಮೆರಿಕಾಗೆ ಹೋಗಬೇಕಾಗಿ ಬರುತ್ತದೆ. ರಮಣ್ ಅಲ್ಲಿ ಮಹತಿಗೆ ಹೇಳಿದ ವಿಚಾರ ಎಷ್ಟು ಕಳವಳಕಾರಿಯಾಗಿತ್ತು..?


ರಮಣ್ ಮಾಡಿದ ಒಂದು ಕೆಲಸದಿಂದ ಮಹತಿಯ ಜಾಗಕ್ಕೆ ಮೀರಾ ಬರುತ್ತಾಳಾದರೂ.. ಮತ್ತೆ ರಮಣ್ ಅವಳನ್ನು ತೆಗೆದು ಹಾಕಿದಾಗ ಮೀರಾಳ ಮನಸ್ಸು ಮಹತಿಯ ವಿರುದ್ದವಿತ್ತೇ..? ಮೀರಾ ಮತ್ತು ಮಹತಿ ಒಂದಾಗಿ ಕೆಲಸ ಮಾಡಬೇಕಾದ ಸಂದರ್ಭ ಬಂದಾಗ ಏನಾಯ್ತು..?


ರಮಣ್ ಸಿ.ಇ.ಓ ಆಗಿ ಬಂದ ನಂತರ ಆ ಜಾಗಕ್ಕೆ ಬಂದವಳು ಮಾಯಾ ಚಟರ್ಜಿ, ರಮಣ್ ನಷ್ಟೇ ಅಥವಾ ರಮಣ್ ಗಿಂತಲೂ ಹೆಚ್ಚು ಎಫಿಶಿಯೆಂಟ್ ಆಗಿದ್ದವಳು ರಮಣ್ ನನ್ನು ದ್ವೇಷಿಸಲು ಕಾರಣವೇನಿತ್ತು ..?


ರಮಣ್ ತಾತ್ಕಾಲಿಕ ಗೆಲುವು ಕೊನೆಗೊಳ್ಳುವಂತೆ ಮಾಡಲು ಮೂವರು ಶಕ್ತಿದೇವತೆಗಳು ಒಟ್ಟಾಗುತ್ತಾರೆ. ಈ ಶಕ್ತಿದೇವತೆಗಳು ದೇವಲೋಕದಿಂದ ಇಳಿದವರಲ್ಲ. ಆತನಿಂದ ಶೋಷಿತರಾದ ಹೆಣ್ಣುಮಕ್ಕಳೇ. ಆ ಹಾದಿ ಅಷ್ಟು ಸುಲಭದಲ್ಲ.


ಮಹತಿ ತಂದೆಯನ್ನು ಕಳೆದುಕೊಂಡು, ಸಂಪ್ರದಾಯ ಮನೋಭಾವದ ತಾಯಿಯನ್ನು ನಿಭಾಯಿಸುತ್ತಾ.. ಕೆಲಸವನ್ನು ಬಿಡಲಾಗದೆ ಮೀಟೂ ಅಭಿಯಾನದಲ್ಲಿ ಪಾಲ್ಗೊಳ್ಳುವುದು ಸುಲಭ ಸಾಧ್ಯವಲ್ಲ. ಅದರಲ್ಲಿಯೂ ಅವಿವಾಹಿತ ಹೆಣ್ಣುಮಕ್ಕಳು ಅಸಹಾಯಕರಾಗಿ ನಿಂತಾಗಲಂತೂ ಅದು ಸುಲಭ ಅಲ್ಲವೇ ಅಲ್ಲ. ಇಂತಹ ಪರಿಸ್ಥಿತಿಯಲ್ಲಿ ಯಾರಿಂದ ಸಹಾಯಹಸ್ತ ಸಿಕ್ಕಿತು..?


ಎದುರಿಗಿದ್ದವರನ್ನು ಅಳೆಯಲು ತಕ್ಷಣಕ್ಕೆ ಸಾಧ್ಯವಾಗದು. ಆದರೆ, ಅವರ ದುರುದ್ದೇಶ ತಿಳಿದ ನಂತರ ಅಂತಹವರಿಂದ ದೂರ ನಿಲ್ಲಬೇಕಾಗುತ್ತದೆ. ಆದರೆ, ಹೆಣ್ಣುಮಕ್ಕಳ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು, ಸಾಕ್ಷಿ ಇಲ್ಲದಂತೆ ಸಿಕ್ಕಿಹಾಕಿಸಿದಾಗ ತಪ್ಪಿಸಿಕೊಳ್ಳುವುದು ಸುಲಭವಲ್ಲ. ಇಂತಹ ಎಷ್ಟೋ ಹೆಣ್ಣುಮಕ್ಕಳು ಪರಸ್ಪರ ಪರಿಚಯವಿಲ್ಲದೆಯೇ ಮಾನಸಿಕ ಕಿರುಕುಳಕ್ಕೆ ಒಳಗಾಗಿ ಕೊರಗುವ ನೋವನ್ನು ಅನುಭವಿಸುವ ಚಿತ್ರಣವಿದೆ. ಮಾನಸಿಕ ಒತ್ತಡ, ತುಮಲಗಳು, ವಾಸ್ತವಕ್ಕೆ ಎದುರಾದಾಗ ಕಾಯಿಸುವುದು ಸುಲಭವಲ್ಲ. ಸಾವು ಅದಕ್ಕೆ ಪರಿಹಾರವೂ ಅಲ್ಲ. ಎಂತಹದ್ದೇ ಪರಿಸ್ಥಿತಿ ಇದ್ದರೂ ಜಯಿಸಿ ಬಾಳುವ ಆತ್ಮಸ್ಥೈರ್ಯವನ್ನು ತುಂಬುತ್ತಾರೆ ಲೇಖಕಿ.


ತನ್ನತನವನ್ನು ಉಳಿಸಿಕೊಳ್ಳಲು ಹೋರಾಡುವ ಹೆಣ್ಣಿನ ಧ್ವನಿಯನ್ನು ನಾನಿಲ್ಲಿ ಕಂಡೆ. ಸತ್ಯವನ್ನು ತನ್ನೊಳಗೆ ಮಣ್ಣಾಗಿಸಿಕೊಳ್ಳದೆ ಮತ್ತೊಬ್ಬರನ್ನು ಆ ಕತ್ತಲಕೂಪಕ್ಕೆ ಬಲಿಯಾಗದಂತೆ ಮಾಡಲು ಧ್ವನಿ ಎತ್ತುವುದು ಅತ್ಯವಶ್ಯಕ. ಇಲ್ಲಿ ಮೀಟೂ ಎಂಬುದು ಅಂತಹ ಶಕ್ತ ಧ್ವನಿ. 


ಧೈರ್ಯ, ಆತ್ಮಸ್ಥೈರ್ಯ, ಛಲ, ಜಾಣ್ಮೆ ಇಷ್ಟೇ ಅಲ್ಲದೆ ಮುಗ್ಧತೆಯನ್ನು ಅಸಹಾಯಕತೆಯೆಂದು ಭಾವಿಸದೆ.. ಅದನ್ನೇ ತನ್ನ ಶಕ್ತಿಯಾಗಿಸಿಕೊಳ್ಳುವುದು, ನಿಷ್ಕಲ್ಮಶವಾಗಿ ಬದುಕುವುದು ಎಲ್ಲವೂ ಸೇರಿ ಹೆಣ್ಣು ಶಕ್ತಿದೇವತೆಯಾಗುವ ಅಂಶ ನನಗೆ ಬಹಳ ಇಷ್ಟವಾಯ್ತು. ಇಂತಹ ಹೆಣ್ಣು ಧ್ವನಿಗಳು ಮರುದ್ವನಿಯಾಗಿ ಮತ್ತಷ್ಟು ಧ್ವನಿಸಲಿ ಎನ್ನುವ ಆಶಯ ಹೊತ್ತ ಕಾದಂಬರಿ ಸೊಗಸಾಗಿ ಮೂಡಿಬಂದಿದೆ.


ಇದು ನಾನು ಓದಿದ ಈ ಲೇಖಕರ ಮೊದಲ ಪುಸ್ತಕ. ಕಥಾವಸ್ತು, ನಿರೂಪಣೆ ಶೈಲಿ ಎಲ್ಲವೂ ಸೆಳೆಯಿತು. 


~ವಿಭಾ ವಿಶ್ವನಾಥ್

ಭಾನುವಾರ, ಅಕ್ಟೋಬರ್ 18, 2026

ಮುಟ್ಟು ಗುಟ್ಟೇ ?

 


ಮಗಳು ಧಾತ್ರಿ ಮೊದಲ ಬಾರಿಗೆ ಮುಟ್ಟಾದಾಗ ಗೌರಿ "ಶ್! ಇದನ್ನು ಯಾರಿಗೂ ಹೇಳಬೇಡವೇ.. ನಾಳೆ ಸುಮ್ಮನೆ ಹೋಗಿ ಪರೀಕ್ಷೆ ಬರೆದು ಬಾ. ಎಸ್.ಎಸ್.ಎಲ್.ಸಿ ಪರೀಕ್ಷೆ ಒಂದು ಹಂತದಲ್ಲಿ ನಿನ್ನ ಬದುಕಿನ ನಿರ್ಧರಿತ ಘಟ್ಟ. ನಾಳೆ ಪರೀಕ್ಷೆ ಮುಗಿದ ಮೇಲೆ ಎಲ್ಲರಿಗೂ ಹೇಳಿದರಾಯಿತು. " ಎಂದಾಗ "ಅಯ್ಯೋ ನೀನೊಬ್ಬಳು.. ಇನ್ನೂ ಹಳೇ ಕಾಲದಲ್ಲೇ ಇದ್ದೀಯ. ಪಿರಿಯೆಡ್ಸ್ ಆದ್ರೆ ಏನಾಯ್ತು ? ಎಕ್ಸಾಂಗೆ ಕಳುಹಿಸುದಿಲ್ಲವಾ..?? ನನ್ನ ಫ್ರೆಂಡ್ಸ್ ಎಲ್ಲಾ ಆಗಲೇ ಪಿರಿಯೆಡ್ಸ್ ಆಗಿದ್ದಾರೆ. ಅವರೆಲ್ಲಾ ಸ್ಕೂಲಿಗೆ ಬರುತ್ತಾ ಇದ್ದಾರೆ. ಅದೂ ಅಲ್ಲದೇ ನಮ್ಮ ಮಿಸ್ ಹೇಳಿದ್ದಾರೆ.. ಇದೇನೂ ಮುಚ್ಚು ಮರೆ ಮಾಡುವ ವಿಷಯ ಅಲ್ಲ. ಎಲ್ಲಾ ಹೆಣ್ಣು ಮಕ್ಕಳ ಬದುಕಿನಲ್ಲಿಯೂ ಬರುವಂತಹದ್ದೇ.. ಇಟ್ಸ್ ಅ ನ್ಯಾಚುರಲ್ ಪ್ರೊಸೆಸ್. ಅದಕ್ಕೆ ಹೆದರುವುದು ಬೇಡ ಅಂತಾ. ನಮಗೆ ಸೈನ್ಸ್ ಅಲ್ಲಿಯೂ ಈ ಕುರಿತು ಲೆಸೆನ್ ಇದೆ. ಸ್ವಲ್ಪ ಅಪ್ಡೇಟ್ ಆಗು ಅಮ್ಮ" ಎಂದ ಧಾತ್ರಿಯ ಮಾತು ಕೇಳಿ..


"ನಾನು ಅಪ್ಡೇಟ್ ಆಗಿದ್ದೇನೆ ಕಣೇ.. ಅದಕ್ಕೇ ಹೇಳಿದ್ದು ರೆಸ್ಟ್ ಮಾಡು ಅಂತಾ.. ಎಕ್ಸಾಂಗೂ ಹೋಗಿ ಬಾ ಅಂತಾ ಹೇಳಿದೆ ಅಲ್ವಾ.. ನಿಮ್ಮಜ್ಜಿಗೇನಾದರೂ ಗೊತ್ತಾದರೆ ಅವರು ನಿನ್ನನ್ನು ಎಕ್ಸಾಂಗೆ ಹೋಗಬೇಡ ಅಂತಾ ಹೇಳಿದ್ರೂ ಹೇಳಿದರೇ.. ಯಾವುದನ್ನೂ ಹೇಳೋಕಾಗಲ್ಲ ಕಣೇ. ನನಗಂತೂ ಅವರಿಗೆ ಎದುರು ವಾದಿಸುವ ಶಕ್ತಿ ಇಲ್ಲ. ಆಮೇಲೆ ಏನಾದರೂ ಮಾಡಿಕೋ.." ಎನ್ನುತ್ತಾ ಇದ್ದ ಗೌರಿ ಹಾಗೂ ಧಾತ್ರಿಯ ಮಾತನ್ನು ಅರ್ಧಂಬರ್ಧ ಕೇಳಿಸಿಕೊಂಡ ಹರ್ಷ "ಏನದು ಅಮ್ಮ ಮಗಳದ್ದು.. ನಮ್ಮಮ್ಮ ಏನು ಮಾಡ್ತಾರೆ. " ಎಂದಾಗ


"ನೋಡಿಪಾ.. ನಾನು ಪಿರಿಯೆಡ್ಸ್ ಆದೆ. ಅದಕ್ಕೆ ಅಮ್ಮ ಅದೇನೋ ಗುಟ್ಟು ಮಾಡುವವರ ಹಾಗೆ ಹೇಳುತ್ತಾ ಇದ್ದಾರೆ." ಎಂದು ಜೋರು ಧ್ವನಿಯಲ್ಲಿಯೇ ದೂರುತ್ತಿದ್ದಾಗ "ಶ್! ಮೆಲ್ಲ ಕಣೇ. ರೀ ನೀವು ಇದನ್ನು ಯಾರಿಗೂ ಹೇಳ್ಬೇಡಿ ಆಯ್ತಾ.." ಎನ್ನುತ್ತಿದ್ದ ಹಾಗೆ ಹರ್ಷ "ಅಲ್ವೇ.. ಸೂತಕ ಬರುತ್ತಲ್ವಾ.. ಯಾರಿಗೂ ಹೇಳ್ಬೇಡಿ ಅಂತಾ ಇದ್ದೀಯ. ಅಮ್ಮನಿಗೆ ಗೊತ್ತಾದ್ರೆ.." ಎನ್ನುತ್ತಿದ್ದಂತೆಯೇ ಆತನ ಅಮ್ಮ ಬಾಗಿಲಲ್ಲೇ ನಿಂತಿದ್ದರು.


"ಅಲ್ಲಾ ಗೌರಿ.. ನೀನು ನನ್ನಿಂದ ವಿಷಯ ಮುಚ್ಚಿಡುತ್ತಾ ಇದ್ದೀಯಾ..?? ಅಲ್ಲಾ.. ನಾನೇನು ಅಂತಹಾ ಮಾಡಬಾರದ್ದನ್ನು ಮಾಡುತ್ತೇನೆ ಹೇಳು. ನನ್ನ ಮೇಲೆ ಅಷ್ಟೂ ನಂಬಿಕೆ ಇಲ್ಲವಾ.. ಇನ್ನೂ ನೀನು ನನ್ನನ್ನು ಅರ್ಥ ಮಾಡಿಕೊಂಡಿಲ್ಲವಾ..


ಮೂರು ದಿನ ನಿನ್ನನ್ನು ಅಡುಗೆ ಮನೆಯಿಂದ ದೂರ ಇಡುವುದು ನಿನಗೆ ಸಂಪೂರ್ಣ ವಿಶ್ರಾಂತಿ ಸಿಗಲಿ ಅಂತಾ.. ಮೈಲಿಗೆ ಅಂತಾ ನಾನು ಯಾವತ್ತಾದರೂ ಭಾವಿಸಿದ್ದೀನಾ ಹೇಳು. ಅದು ಮುಟ್ಟಬೇಡ, ಇದು ಮುಟ್ಟಬೇಡ ಅಂತಾ ಏನಾದರೂ ಹೇಳುತ್ತಾ ಕಟ್ಟು ಹಾಕುತ್ತೇನಾ.." ಎಂದು ಬೇಸರ ವ್ಯಕ್ತ ಪಡಿಸಿದಾಗ "ಅದು ಹಾಗಲ್ಲ ಅತ್ತೆ. ಯಾಕೋ ನನ್ನ ಹಿಂದಿನ ದಿನಗಳು ನೆನಪಾದವು. ಅದೊಂದು ಕಹಿ ಘಟನೆಯಂತೆ ಮನಸ್ಸಿನಲ್ಲಿಯೇ ಉಳಿದು ಬಿಟ್ಟಿದೆ. ಅದಕ್ಕಾಗಿಯೇ ನಾನು ಇವರಿಬ್ಬರಿಗೂ ಹೇಳಬೇಡಿ ಎಂದದ್ದು.


ನಾನೂ ಮೊದಲ ಬಾರಿ ಮುಟ್ಟಾಗಿದ್ದು ಹೀಗೇ ಹತ್ತನೇ ತರಗತಿ ಓದುತ್ತಿರುವಾಗ.. ಅಮ್ಮ ಪರೀಕ್ಷೆ ಬರೆಯಬೇಡ ಎನ್ನಲಿಲ್ಲ. ಆದರೆ, ಅಜ್ಜಿ ಹಾಗೂ ಸೋದರತ್ತೆಯಂದಿರು ಸೇರಿ ನನ್ನನ್ನು ಮನೆಯಿಂದ ಹೊರಗೆ ಕಳುಹಿಸಲೇ ಇಲ್ಲ. ಆನಂತರ ನಾನು ಮುಂದಿನ ವರ್ಷ ಪರೀಕ್ಷೆ ಬರೆಯಬೇಕಾಗಿ ಬಂದಿತು. ಅಮ್ಮನಿಗೆ ಅವರ ಅತ್ತೆಯ ವಿರುದ್ಧ ಮಾತನಾಡುವ ಶಕ್ತಿ ಇರಲಿಲ್ಲ. ನನಗೋ ಅಪ್ಪ ಇರಲಿಲ್ಲ. ಈ ಘಟನೆಯ ನೆನಪಾಗಿಯೇ ನಾನು ಧಾತ್ರಿಗೆ ಏನು ಹೇಳಬೇಡ ಎಂದದ್ದು " ಎನ್ನುತ್ತಲೇ ಬಿಕ್ಕಿದಾಗ ಗೌರಿಯ ಅತ್ತೆ ಬಂದು ಅವಳನ್ನು ಅಪ್ಪಿದರು.


"ನೀನೇ ಬೇಡ ಎಂದರೂ ನಾನು ಅವಳನ್ನು ನಾಳೆ ಪರೀಕ್ಷೆಗೆ ಕಳುಹಿಸಿಯೇ ಕಳುಹಿಸುತ್ತೇನೆ.


ಇನ್ನು ಸೂತಕ ಅಂತಹಾ ಕಟ್ಟು ಮಾಡುವ ಅವಶ್ಯಕತೆ ಇಲ್ಲ. ಸತ್ತವರ ಮನೆಯ ಹೂ ತಂದು ದೇವರಿಗೇ ಏರಿಸಿದರೆ ನಮಗದ್ದು ತಿಳಿದಿರುತ್ತದೆಯೇ..??


ಇದೇನೂ ಅಮಂಗಳಕರವಾದ ಕಾರ್ಯವಲ್ಲ. ಹರ್ಷ ಬೇಕಿದ್ದರೆ ಧಾತ್ರಿಯ ಪರೀಕ್ಷೆ ಮುಗಿದ ನಂತರ ಅವಳ ಆರತಿ ಶಾಸ್ತ್ರ ಅಂದರೆ ಹಾಫ್ ಸ್ಯಾರಿ ಫಂಕ್ಷನ್ ಮಾಡೋಣ" ಎಂದರು.


"ಥ್ಯಾಂಕ್ಯೂ ಅಜ್ಜಿ.

ನಾನೂ ನನ್ನ ಫ್ರೆಂಡ್ಸ್ ಹಾಗೇ ಫೋಟೋ ಶೂಟ್ ಮಾಡಿಸಿಕೊಳ್ಳಬಹುದು. " ಎಂದ ಧಾತ್ರಿಯ ಮಾತಿಗೆ ಎಲ್ಲರೂ ನಕ್ಕರು.


"ಈಗ ಫೋನ್ ಇಡಕೊಂಡು ನಿನ್ನ ಫ್ರೆಂಡ್ಸ್ ಎಲ್ಲರ ಜೊತೆಗೂ ಹರಟೆ ಹೊಡೆಯುತ್ತಾ ಕೂರಬೇಡ ಮತ್ತೆ.. ಹೋಗಿ ಓದಿಕೋ. ನಾಳೆ ಎಕ್ಸಾಂ ಅಲ್ಲಿ ಕಮ್ಮಿ ಮಾರ್ಕ್ಸ್ ಬರುವ ಹಾಗಿಲ್ಲ ನೋಡು" ಎಂದ ಗೌರಿಯ ಮಾತನ್ನು ಕೇಳಿ ಓದಲು ನಡೆದಳು ಧಾತ್ರಿ.


~ವಿಭಾ ವಿಶ್ವನಾಥ್

ಸಹಾಯಹಸ್ತ (ಬೆಳಕಿಂಡಿಯ ಕತೆಗಳು - 93)


 "ನಾನು ಮದುವೆಯಾದ ಮೇಲೂ ಕೆಲಸಕ್ಕೆ ಹೋಗಬೇಕು ಅಂದುಕೊಂಡಿದ್ದೇನೆ." ಎಂದು ಅಳುಕಿನಿಂದಲೇ ಹೇಳಿದವಳ ಮಾತಿಗೆ "ಆಯ್ತು. ತೊಂದರೆ ಏನಿಲ್ಲ.. ನಾನೂ ಮನೆಯ ಕೆಲಸ ಹಾಗೂ ಅಡುಗೆ ಕೆಲಸದಲ್ಲಿ ಸಹಾಯ ಮಾಡುತ್ತೇನೆ." ಎಂದು ಸಹಾಯಹಸ್ತ ಚಾಚಿದ್ದ ಅವನು. ಕೆಲಸಲ್ಲಿಯ ಭೇಧಭಾವ..?? ಕಾಯಕವೇ ಕೈಲಾಸ.


~ವಿಭಾ ವಿಶ್ವನಾಥ್

ಮರೆವು (ಬೆಳಕಿಂಡಿಯ ಕತೆಗಳು - 92)


"ಎಲ್ಲವನ್ನೂ ಮರೆತು ಮುಂದಕ್ಕೆ ಸಾಗಬೇಕು" ಎಂದವರ ಉಪದೇಶ ಕೇಳಿ ಮುಗುಳ್ನಕ್ಕಳಷ್ಟೇ.. ಆ ನಗುವಿನಲ್ಲಿಯೇ ಅವಳ ಮನಸ್ಸನ್ನು ತಿಳಿಯಬಹುದಿತ್ತು.

ನೋಯಿಸಿದವರು ಮರೆತು ಮುಂದೆ  ಸಾಗುತ್ತಾರೆ. ಆಗ ಮೌನವಾಗಿದ್ದವರಿಗೆ ಯಾವುದೂ ಲೆಕ್ಕಲಿಲ್ಲ. ನೊಂದವರು ಮರೆಯುವುದೇ ಅಸಾಧ್ಯ.


~ವಿಭಾ ವಿಶ್ವನಾಥ್

ಸಮ್ಮಿಶ್ರ


 ಇರುಳಲ್ಲಿ ನೇಸರನ ನೆರಳನ್ನೂ

ಹಗಲಲ್ಲಿ ಚಂದ್ರಮನ ಬೆಳಕನ್ನೂ

ಬಯಸುತ್ತಾ ಅರ್ಥವಿಲ್ಲದೆ ವರ್ತಿಸದಿರಿ

ಅರ್ಥವಾಗಲಿಲ್ಲವೇ..??

ಈಜುವ ಮೀನನ್ನು ಮರ ಹತ್ತಿ ಸಾಧಿಸು ಎನ್ನದೇ

ಹಾರುವ ಹಕ್ಕಿಯನ್ನು ಈಜಿ ಸಾಧಿಸು ಎನ್ನದಿರಿ

ಇನ್ನೂ ಅರ್ಥವಾಗಲಿಲ್ಲವೇ..??

ಆಟೋಟದಿ ಸಾಧಿಸುವ ಮಗುವಿಗೆ ಓದು ಎನ್ನುತ

ಓದಿನಲ್ಲಿ ಮುಂದಿರುವ ಮಗುವಿಗೆ ಹಾಡು ಎನ್ನುತ

ಒತ್ತಾಯಿಸಿ ಒತ್ತಡ ಹೇರದಿರಿ

ನೆರಳು- ಬೆಳಕು ಎರಡರ ಸಮ್ಮಿಶ್ರವೇ ಬದುಕು


~ವಿಭಾ ವಿಶ್ವನಾಥ್

ಅರ್ಧ ನಾರೀಶ್ವರ

 


ಅವನು ಅವಳಿಗೆ

ಪಟ್ಟೆ ಪೀತಾಂಬರ ಕೊಡಿಸಲಿಲ್ಲ

ಬಂಗಾರವನ್ನು ತೊಡಿಸಲಿಲ್ಲ

ಅರಮನೆಯಲ್ಲಿರಿಸಿ ಸಾಕಲಿಲ್ಲ

ಕಡೆಪಕ್ಷ..

ಮಲ್ಲಿಗೆ ಮಾಲೆಯನ್ನೂ ತಂದೀಯಲಿಲ್ಲ

ಅವಳಿಗೆ ಅದರ ಅವಶ್ಯಕತೆಯೂ ಬೀಳಲಿಲ್ಲ

ಅದರರ್ಥ,ಪ್ರೀತಿ ಇರಲಿಲ್ಲವೆಂದಲ್ಲ


ಅವನೋ... ಹೃದಯದಲ್ಲಿ ಮಾತ್ರವಲ್ಲ

ತನ್ನ ದೇಹದ ಅರ್ಧದಲ್ಲಿ ಭಾಗ ಕೊಟ್ಟ

ಅರ್ಧ ನಾರೀಶ್ವರನಾದ..


~ವಿಭಾ ವಿಶ್ವನಾಥ್

ಪ್ರಾಪ್ತಿ (ಪುಸ್ತಕ ಯಾನ - 492)


ಪುಸ್ತಕದ ಶೀರ್ಷಿಕೆ : ಪ್ರಾಪ್ತಿ

ಲೇಖಕರು : ವಸುಮತಿ ಉಡುಪ 

ಪ್ರಕಾಶಕರು : ಅಂಕಿತ ಪುಸ್ತಕ

ಪ್ರಥಮ ಮುದ್ರಣ : 2025

ಪುಟಗಳು : 144

ಬೆಲೆ : 150 ರೂ. 


ಕೆಲವರ ಪಾಲಿಗೆ ಬದುಕು ಸುಖದ ಸುಪ್ಪತ್ತಿಗೆಯಾದರೆ ಮತ್ತೆ ಕೆಲವರ ಪಾಲಿಗೆ ಕಹಿ ಅನುಭವಗಳ ಬುತ್ತಿ. ಬದುಕು ಹೀಗೇಕೆ ಎನ್ನುವ ನಿಗೂಢ ಪ್ರಶ್ನೆಯ ಕುರಿತು ಉಲ್ಲೇಖಿಸುತ್ತಲೇ ಚೆಂದದ ಕಾದಂಬರಿಯನ್ನು ಕಟ್ಟಿಕೊಡುತ್ತಾರೆ. ರಾಷ್ಟ್ರೀಕೃತ ಬ್ಯಾಂಕಿನ ಮ್ಯಾನೇಜರ್ ಹುದ್ದೆಯಲ್ಲಿದ್ದ ಚಿದಾನಂದ. ಗಂಡನ ಹುದ್ದೆಯನ್ನು ಆತನಿಗಿಂತ ಹೆಚ್ಚು ಸಂಭ್ರಮಿಸುತ್ತಿದ್ದ ಪತ್ನಿ ಸುನಂದಾ.  ಆರತಿಗೊಬ್ಬಳು ಮಗಳು ಕೀರುತಿಗೊಬ್ಬ ಮಗ ಎನ್ನುವಂತೆ ಮಗಳು ಸತ್ಯಭಾಮ, ಮಗ ಭಾರ್ಗವ. ಚೆಂದದ ಸಂಸಾರಕ್ಕೆ ಯಾರ ಕಣ್ಣು ಬಿತ್ತೋ ಏನೋ ಎಂಬಂತೆ ಸುನಂದಾಳ ಆಗಲಿಕೆ ಕುಟುಂಬವನ್ನು ತಟ್ಟುತ್ತದೆ. ಸತ್ಯಭಾಮ ಅಮ್ಮನಂತೆ ತಮ್ಮನನ್ನು ಮಗನಾಗಿ ಪೋಷಿಸುತ್ತಾ.. ತಂದೆಗೆ ನೆರವಾಗಿ ಮುಂದಿನ ಬದುಕು ಇನ್ನೇನು ಸರಾಗವಾಯಿತು ಎನ್ನುವಾಗ ಸುನಂದಾಳ ಕಡೆಯ ನಂಟು ತಪ್ಪಿ ಹೋಗುತ್ತದೆ.


ಎಲ್ಲವನ್ನು ಪ್ರೌಢವಾಗಿ ನಿಭಾಯಿಸುತ್ತಿದ್ದ ಮಗಳ ಮೇಲೆ ಹೆಚ್ಚು ನಂಬಿಕೆ ಇಟ್ಟಿದ್ದ ಚಿದಾನಂದನ ಭರವಸೆ ಕುಸಿದಿತ್ತು. ಅಪ್ಪನ ಕುರಿತು ಹುಟ್ಟಿದ ಸಣ್ಣ ಅನುಮಾನವೊಂದು ಅದು ಹೌದೋ ಅಲ್ಲವೋ ಎಂದು ಸಾಕ್ಷ್ಯಸಮೇತ ಹೇಳಲಾಗದಿದ್ದರೂ.. ಮನಕ್ಕೆ ನಿಜದ ಅರಿವಾಗಿತ್ತು. ವೆಂಕಟೇಶನೆಡೆಗೆ ಸೆಳೆಯುವಂತೆ ಮಾಡಿದ್ದೂ ಹೌದು. ಸತ್ಯಭಾಮ ಕುಟುಂಬದಿಂದ ದೂರವಾದ ದಿನಗಳಲ್ಲಿ ಚಿದಾನಂದ ಹಾಗೂ ಭಾರ್ಗವರ ಬದುಕು ಕಾಣಸಿಗುತ್ತದೆ.  


ಭಾರ್ಗವನಿಗೆ ಜಾಣೆ, ವಾಸ್ತವವಾದಿಯಾದ ಶೀಲಾ ಸಂಗಾತಿಯಾಗಿ ಮಾವನನ್ನು ಮಗಳಿಗಿಂತಲೂ ಚೆನ್ನಾಗಿಯೇ ನೋಡಿ ಕಂಡ ಸೊಸೆಯಾಗಿ ಇಷ್ಟವಾದರೂ.. ಅವಳ ಜಾಣತನದ ನಡೆ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ.


ಬದಲಾದ ಚಿದಾನಂದನ ವಯಸ್ಸು, ಆರೋಗ್ಯ, ಪರಿಸ್ಥಿತಿ, ಮನಸ್ಥಿತಿಗಳಲ್ಲಿ ಮತ್ತೆ ಬಂದ ಭಾಮಾಳನ್ನು ಹಾಗೂ ಅವಳು ಬದುಕು ಕಟ್ಟಿಕೊಂಡ ಬಗೆಯನ್ನು ನಾವಿಲ್ಲಿ ಕಾಣಬಹುದು.


ಒಂದು ಕೌಟುಂಬಿಕ ಕಥೆಯಾಗಿ ಈ ಕಾದಂಬರಿ ಕಾಡುತ್ತದಾದರೂ.. ಇದು ಮೇಲ್ನೋಟಕ್ಕೆ ಕಂಡಂತೆ ಸರಳವಾದ ಕುಟುಂಬದ ಚಿತ್ರಣವೇನಲ್ಲ. ಎಲ್ಲರ ಆಲೋಚನೆಗಳಿಗೂ ಲೇಖಕಿ ಕನ್ನಡಿ ಹಿಡಿದಿದ್ದಾರೆ. 


ಈ ಕಾದಂಬರಿಯಲ್ಲಿ ಭಾವುಕತೆಗೆ ಸಾಕಷ್ಟು ಆದ್ಯತೆಯನ್ನು ನೀಡಲಾಗಿದೆ. ಇದು ಕಾದಂಬರಿಯುವುದಕ್ಕೂ ಕಥೆಯ ಪೋಷಣೆಗೆ ಹಾಗೂ ಆಶಯಕ್ಕೆ ಬಹಳಷ್ಟು ಪೂರಕವಾಗಿದೆ. ಕಾದಂಬರಿಯಲ್ಲಿ ಭಾವನೆಗಳು ಹಾಗೂ ವಾಸ್ತವ ಎರಡನ್ನೂ ನೋಡುತ್ತೇವೆ. ಇಲ್ಲಿನ ಭಾವುಕತೆ ಓದುಗರನ್ನು ಸಹಜವಾಗಿಯೇ ಸೆಳೆಯುತ್ತದೆ ಹಾಗೂ ಕಾಡುತ್ತದೆ. 


ಇಲ್ಲಿ ನಾಟಕೀಯವೆಂಬ ಭಾವನೆಗಳು ಕಾಣಸಿಗುವುದಿಲ್ಲ. ಇಲ್ಲಿನ ಭಾವುಕತೆಯ ಅಂಶಗಳು ಸಹಜವಾಗಿಯೇ ಚಿತ್ರಿತವಾಗಿವೆ. ಇವು ವಿವೇಚನೆಯುಳ್ಳ ಭಾವನೆಗಳೂ ಹೌದು. ಇಲ್ಲಿ ಭಾವುಕತೆ ಪೂರಕವಾಗಿವೆ. ಅವುಗಳಲ್ಲಿ ಕೆಲವನ್ನು ನೋಡೋಣ. 


#ಕುಟುಂಬದಲ್ಲಿನ_ಭಾವುಕತೆ: ತಂದೆ-ಮಕ್ಕಳ ಬಾಂಧವ್ಯ, ತಂದೆಯ ತ್ಯಾಗ, ಅಕ್ಕ-ತಮ್ಮನ ಪ್ರೀತಿ


ಚಿದಾನಂದ ತನ್ನ ಪತ್ನಿ ಸುನಂದಾಳನ್ನು ಕಳೆದುಕೊಂಡ ನಂತರ ಆಕೆಯ ತಮ್ಮ ಅವರಿಗೆ ಮತ್ತೊಂದು ವಿವಾಹದ ಪ್ರಸ್ತಾಪ ತರುವ ಸಂದರ್ಭವಿದೆ. "ತಾಯಿ ಸತ್ತರೂ ಸೋದರ ಮಾವ ಇರಬೇಕು" ಎಂಬ ಗಾದೆ ಮಾತನ್ನು ಉಲ್ಲೇಖಿಸುತ್ತಲೇ ಆತನ ಸ್ವಾರ್ಥ ಜೊತೆಗೆ ಸತ್ಯಭಾಮಳ ಮುಂದಾಲೋಚನೆಯನ್ನು ತೋರುತ್ತಾರೆ. 

ತನ್ನ ತಂದೆ ಮತ್ತೊಂದು ವಿವಾಹವಾದರೆ ಮುಂದಿನ ಬದುಕು ಹೇಗಿರಬಹುದು ಎಂದು ಯೋಚಿಸುತ್ತಾಳಾದರೂ ನೇರವಾಗಿ ತಂದೆಗೆ ಬೇಡ ಎಂದು ಹೇಳುವುದಿಲ್ಲ. ಆದರೆ, ತಮ್ಮನೊಡನೆ ತನ್ನ ಸ್ನೇಹಿತೆಯ ತಂದೆಯೊಬ್ಬರು ಮರು ವಿವಾಹವಾದ ಪ್ರಸಂಗವನ್ನು ಹೇಳುವಾಗ ತನ್ನ ಭವಿಷ್ಯದ ಊಹೆಯನ್ನೇ ಹೇಳುವ ಅವಳ ಮಾತನ್ನು ಅಪ್ರಯತ್ನಪೂರ್ವಕವಾಗಿ ಕೇಳಿಸಿಕೊಳ್ಳುವ ಚಿದಾನಂದ ತನ್ನ ಮರುವಿವಾಹದ ಕುರಿತ ನಿರಾಕರಣೆಯನ್ನು ಮತ್ತಷ್ಟು ಸ್ಪಷ್ಟವಾಗಿಸುತ್ತಾರೆ. 

ಮಕ್ಕಳಿಗಾಗಿ ತಂದೆ ತನ್ನ ಸ್ವಾರ್ಥವನ್ನು ಬದಿಗಿಟ್ಟು ಮಕ್ಕಳ ಕುರಿತು ಕಾಳಜಿ ಮಾಡುತ್ತಾ.. ಅವರ ಭವಿಷ್ಯಕ್ಕೆ ತನ್ನ ಬದುಕು ಎಂದು ಭದ್ರಮಾಡುವ ಚಿತ್ರಣವಿದೆ. 

ಅಕ್ಕ-ತಮ್ಮನ ಪ್ರೀತಿ ತಾಯಿ ತೀರಿಕೊಂಡ ನಂತರ ತುಂಟಾಟಗಳೆಲ್ಲವೂ ಬದಲಾವಣೆಯಾಗಿ ಪ್ರೌಢವಾದರೂ.. ತುಂಟಾಟಗಳಿವೆ. ಈ ಭಾಂದವ್ಯ ಅಮ್ಮ ಮಗನನ್ನು ಪೋಷಿಸುವಂತಿದೆ.


#ಪ್ರೇಮದಲ್ಲಿನ_ಭಾವುಕತೆ: ಪ್ರೀತಿ, ವಿರಹ ಮತ್ತು ನಿರೀಕ್ಷೆ 


ಸಹಪಾಠಿಯಾಗಿದ್ದ ವೆಂಕಟೇಶ ಭಾಮಳ ಕುರಿತು ಒಮ್ಮೆ ತೋರಿದ ಕಾಳಜಿಯ ನಂತರ ಆತನ ಕುರಿತು ಕುತೂಹಲ ತೋರಿ ಆತನ ನೋವಿನ ದಿನಗಳಲ್ಲಿ ಜೊತೆ ನಿಂತು ತಲ್ಲಣ, ಆತಂಕಗಳನ್ನು ನೀಡಲು ಸಹಕಾರಿಯಾದ ಚಿತ್ರಣಗಳು ಮುಂದೆ ಪ್ರೀತಿಯಾಗಿ ಬದಲಾಗುವ ಪರಿ ಇಲ್ಲಿದೆ. 

ಚಿದಾನಂದ ಮಗಳ ಪ್ರೀತಿಗೆ ನಕಾರ ಸೂಚಿಸಿದಾಗ, ತಡೆಯಲು ನೋಡಿದಾಗ ವಿರಹವನ್ನು ತಡೆಯಲಾಗದ ಪರಿ, ವೆಂಕಟೇಶನ ಹಾಗೂ ತನ್ನ ಓದು ಮುಗಿದು ಒಳ್ಳೆಯ ಕೆಲಸಕ್ಕೆ ಸೇರಿ ವಿವಾಹವಾಗುವ ಆಲೋಚನೆ ಇದ್ದರೂ.. ಪರಿಸ್ಥಿತಿಯ ಪ್ರಭಾವ ನಿರೀಕ್ಷೆಗಳೆಲ್ಲವನ್ನು ಮೀರಿ ಪರಿಸ್ಥಿತಿಯನ್ನು ತಲೆಕೆಳಗು ಮಾಡಿದ್ದು ಮುಂದಿನ ಭಾವುಕ ನಿರ್ಧಾರಕ್ಕೆ ಕಾರಣವಾಗುತ್ತದೆ.

ಚಿದಾನಂದನೂ ಭಾವುಕನಾದರೂ ಮಗಳ ಕುರಿತು ಅಸಡ್ಡೆ ತೋರಿದ, ಮಗನನ್ನು ತಡೆದ ಪ್ರಸಂಗವಿದೆ. 


#ಕರುಣೆಯ_ಭಾವುಕತೆ: ದುಃಖ, ಅಸಹಾಯಕತೆ, ಬಡತನ ಮತ್ತು ಮಾನವೀಯ ಸಂಕಟ

ವೆಂಕಟೇಶ ಭಾಮಳಿಗೆ ಹತ್ತಿರವಾಗಿದ್ದು ತನ್ನ ಅಕ್ಕನ ಸಾವಿನ ಸಂದರ್ಭದಲ್ಲಿ. ಮೂರು ತಿಂಗಳ ಬಾಣಂತನ ಮುಗಿಸಿಕೊಂಡು ಗಂಡನ ಮನೆಗೆ ಹೋಗಿದ್ದ ಅವಳಿಗೆ ಗಂಡನ ಅನುಮಾನವೇ ಮುಳುವಾಗಿ ತಾಯಿ-ಮಕ್ಕಳಿಬ್ಬರೂ ಕೊಲೆಯಾಗಿದ್ದರು. ಬಾವ ಮಾಡಿದ ಕೊಲೆಯಿಂದ ಅಕ್ಕ ಮತ್ತು ಮಗುವನ್ನು ರಕ್ಷಿಸಲಾಗದ ಅಸಹಾಯಕತೆ, ದುಃಖ ಜೊತೆಗೆ ಅಕ್ಕ ತನ್ನ ಕಷ್ಟ ಹೇಳಿಕೊಂಡಿದ್ದರೂ ಅದಕ್ಕೆ ಸ್ಪಂದಿಸಿದ ಪರಿ ಅಸಹಾಯಕತೆಯನ್ನು ಮಾತ್ರವಲ್ಲದೆ, ಮಾನವೀಯತೆಯನ್ನು ಮರೆತು ವರ್ತಿಸಿದ ಕ್ಷಣಗಳಂತೆ ವೆಂಕಟೇಶನಿಗೆ ಭಾಸವಾದ ಚಿತ್ರಣವಿದೆ.

ವೆಂಕಟೇಶನದು ಭಾಮಳಷ್ಟು ಸೆಟಲ್ ಆಗಿರುವ ಕುಟುಂಬವಾಗಿರಲಿಲ್ಲ. ಅಲ್ಲದೆ ಜಾತಿಯೂ ಬೇರೆ. ವೆಂಕಟೇಶನ ಮನೆಯಲ್ಲಿ ಮದುವೆಗೆ ಒಪ್ಪಿಗೆ ಸಿಕ್ಕರೂ ಜೋಪಡಿಯಂತಹ ಪುಟ್ಟ ಬೇರೆಯ ಮನೆಯಲ್ಲಿ ವಾಸ. ಕೈಯಲ್ಲಿ ಸರಿಯಾದ ಕೆಲಸವಿಲ್ಲದೆ, ಹಣವಿಲ್ಲದೆ ಹಳ್ಳಿಯ ಬದುಕಿಗೆ ಹೊಂದಿಕೊಳ್ಳುವ ಅನಿವಾರ್ಯತೆ. ಮೊದಲಿಗೆ ಹಸು ಸಾಕಲು ಹೋಗಿ ಆದ ಎಡವಟ್ಟಿನಿಂದ ಇದ್ದುದನ್ನೂ ಕಳೆದುಕೊಂಡು ಸಾಯಲು ನಿರ್ಧರಿಸಿ ಮತ್ತೆ ಬದುಕುವ ಸ್ಥೈರ್ಯ ತೋರಿದ ಭಾಮ ದಂಪತಿಗಳನ್ನು ಕಾಣಬಹುದು.


#ಪ್ರಕೃತಿಯೊಡನೆ_ಭಾವುಕತೆ: ಪ್ರಕೃತಿಯ ಸೌಂದರ್ಯ ಮತ್ತು ಒಡನಾಡುವ ಭಾವನಾತ್ಮಕ ಕ್ಷಣಗಳು

ಚಿದಾನಂದ ಭಾಮಾಳ ಮನೆಗೆ ಬಂದ ಸಂದರ್ಭದಲ್ಲಿ ಬದಲಾದ ಪರಿಸರ, ಹಾಲು ಕರೆಯುವಾಗ ಹೊಲಕ್ಕೆ ಹೋಗುವಾಗ ತಂದೆಯನ್ನು ಒಬ್ಬರನ್ನೇ ಬಿಡದೆ ಜೊತೆಗೆ ಕರೆದುಕೊಂಡು ಹೋಗುವ ಕ್ಷಣಗಳು ಚಿದಾನಂದ ನಿಗೆ ಹಳ್ಳಿಯ ಹೊಸ ಜಗತ್ತಿನಂತೆ ಕಂಡು ವಿಚಿತ್ರದ್ದೂ, ವಿಶೇಷದ್ದೂ ಆಗಿ ಕಾಣಿಸಬಹುದಾದ ಕ್ಷಣಗಳಿವೆ.


#ಸಾಮಾಜಿಕ_ಮತ್ತು_ಅಸ್ತಿತ್ವದ ಭಾವುಕತೆ: ಅಸಮಾನತೆ ಮತ್ತು ಸಾಮಾಜಿಕ ನೋವು, ಬದುಕಿನ ಅರ್ಥದ ಹುಡುಕಾಟ, ನೆನಪು ಮತ್ತು ಅರಿವು

ಚಿದಾನಂದನಿಗೆ ಮಗಳು ತನಗೆ ಮೋಸ ಮಾಡಿದ ನೋವು, ತಂದೆಯ ಕುರಿತು ಅನುಮಾನವಿದ್ದರೂ ಅದನ್ನು ಹೀಗೆಯೇ ಎಂದು ಹೇಳಲಾಗದ ಭಾಮ ಇಬ್ಬರು ಮುಂದೆ ಬದಲಾಗುತ್ತಾರೆ.

ಶೀಲಾಳಿಗೆ ಭಾರ್ಗವ ತರುವ ಸಂಬಳ ತಮ್ಮ ಮುಂದಿನ ಭವಿಷ್ಯಕ್ಕೆ ಸಾಲದು ಎಂಬ ಅರಿವಿದ್ದಾಗ ಜಾಣತನದಿಂದಲೇ ಮಾವನನ್ನು ಒಪ್ಪಿಸಿ ಹಣಕಾಸಿನ ವಹಿವಾಟು, ತನಗೆ ಹಾಗೂ ತನ್ನ ಗಂಡನಿಗೆ ಅನುಕೂಲವಾಗಿ ಮಾಡಿಕೊಂಡ ಸಂದರ್ಭಗಳಿವೆ. ಹಾಗೆಂದು ಮಾವನ ಜೊತೆಗಿನ ಅವಳ ನಡೆ, ತೋರಿದ ಪ್ರೀತಿ ಭಾವುಕತೆ ಯಾವುದೂ ಮೋಸವೆನ್ನಿಸದು. ಸಾಮಾಜಿಕವಾಗಿ ಮುಂದೆ ತಾನು ಯಾರಿಗೂ ಕಮ್ಮಿ ಇರಬಾರದು ಎನಿಸುವ ಅವಳ ಭಾವುಕ ಆಲೋಚನೆ ಇಲ್ಲಿದೆ. 

ನಿವೃತ್ತ ಬದುಕಿನ ನಂತರದ ಬದುಕು ಲವಲವಿಕೆ ಮೊಮ್ಮಗನಲ್ಲಿ ಕಂಡುಕೊಂಡ ಚಿದಾನಂದ, ಸರೋಜನ ಅನುಪಸ್ಥಿತಿಯಲ್ಲಿ ಬದಲಾದ ಅವನ ಲವಲವಿಕೆ, ಮುಂದೆ ನೆನಪುಗಳನ್ನು ಕಳೆದುಕೊಂಡಾಗ ಅರಿವೇ ಇಲ್ಲದಂತೆ ವರ್ತಿಸುತ್ತಿದ್ದ ಅವನನ್ನು ಸಂಭಾಳಿಸಲು ಹೆಣಗುತ್ತಿದ್ದ ಮಗ-ಸೊಸೆ. ಶೀಲಾಳಿಗೆ ಪೀಕಲಾಟಕ್ಕೆ ಇಟ್ಟುಕೊಳ್ಳುವ ಸಂದರ್ಭಗಳು, ಸರೀಕರೆದುರಲ್ಲಿ ಯಾವುದಕ್ಕೂ ಕಡಿಮೆ ಇಲ್ಲ ಬಂದಂತೆ ಬಾಳಲು ಹೊರಟಾಗಲೆಲ್ಲಾ ಅಡ್ಡಿಯಾಗುತ್ತಿದ್ದ ಮಾವನ ವರ್ತನೆಗಳು, ಮತ್ತೊಬ್ಬರು ದೂರಿದಾಗ ಅಥವಾ ಸಲಹೆ ನೀಡಿದಾಗ ಹಿಡಿಯಷ್ಟಾಗುತ್ತಿದ್ದ ಅವಳ ಮನಸ್ಸು ಸೂಕ್ಷ್ಮವಾಗಿ ಚಿತ್ರಿತವಾಗಿವೆ. 


ಅಳಿಯನನ್ನು, ಮಗಳನ್ನು ಮನೆಯಲ್ಲೇ ಇಟ್ಟುಕೊಂಡು ನೋಡಿಕೊಳ್ಳುವ ನಿರೀಕ್ಷೆ, ಪ್ರೀತಿಗಳನ್ನು ಹೊತ್ತಿದ್ದ ಚಿದಾನಂದನ ಮನಸ್ಸನ್ನು ಛಿದ್ರಗೊಳಿಸಿದ್ದ ಭಾಮ ಭಾವುಕಳಾಗಿ ವೆಂಕಟೇಶನೊಡನೆ ಹೋಗಲು ನಿರ್ಧರಿಸಿದಳೇ..?

ಇನ್ನಷ್ಟು ತಾಳ್ಮೆ ತೆಗೆದುಕೊಂಡಿದ್ದರೆ ಪರಿಸ್ಥಿತಿ ಬದಲಾಗುತ್ತಿತ್ತಾ..?


"ನಾಲ್ಕು ದಿನ ಕಳೆದ್ರೆ ಎಲ್ಲಾ ಹಳಸೋಕೆ ಶುರುವಾಗುತ್ತೆ" ಅಂದಿದ್ದ ಅಪ್ಪನ ಮಾತು ತಾನು ತೆಗೆದುಕೊಂಡ ನಿರ್ಧಾರ ತಪ್ಪು ಎನ್ನಿಸದಂತೆ ಪಶ್ಚಾತ್ತಾಪ ಆಗುವುದಕ್ಕೆ ಬಿಡದ ಭಾಮಳ ಭಾವುಕತೆಯ ಮೇಲಿನ ಹಿಡಿತ ಅವಳನ್ನು ಗಟ್ಟಿಯಾಗಿಸಿತಾ..?


ಮಗಳನ್ನು ಮರೆಸುವಷ್ಟು ಪ್ರೀತಿ ತೋರಿದ ಸೊಸೆ ಬೇರೆ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಳಾದರೂ ಚಿದಾನಂದನ ಮರೆವಿನ ಸ್ಥಿತಿ ತಂದಿಟ್ಟ ಪೇಚಾಟಕ್ಕೆ ಭಾವಕತೆಯನ್ನು ಮೀರಿ ವಾಸ್ತವದ ನೆಲೆಗಟ್ಟಿನಲ್ಲಿ ಯೋಚಿಸಿ ಭಾಮಾಳನ್ನು ಕರೆಸಿದಳಾ..? 


ಭಾಮಾಳ ವಿಚಾರ ತಿಳಿದಾಗ ಭಾವುಕತೆಯಿಂದಲೇ ಸ್ಪಂದಿಸಿದ್ದ ಭಾರ್ಗವ ವಾಸ್ತವಕ್ಕೆ ಹೊಂದಿಕೊಂಡನಾ..?


ಒಂದೊಮ್ಮೆ ಅಪ್ಪನ ಸ್ಥಿತಿಯನ್ನು ಅನುಮಾನಿಸಿದ ಮಗಳು ಇಷ್ಟಿಷ್ಟೇ ದೂರವಾಗುತ್ತಿದ್ದ ಭಾಮ ಪುನಃ ತಂದೆಯನ್ನು ಕರೆತಂದು ಆದರಿಸುವಾಗ..

"ಮಗಳು ದೊಡ್ಡವಳಾದ್ಲು ಅಂತ ಈಗ ಇನ್ನೊಂದು ಮಗುನ ಮಡಿಲಿಗೆ ಹಾಕಿದ್ದಾನೆ ಭಗವಂತನ ನಂಗೆ ಈಗ ಇಬ್ಬರು ಮಕ್ಕಳು ಕಣೋ.." ಎಂದು ಕುಶಾಲಿನಿಂದ ಗಂಡನೊಡನೆ ಹೇಳಿದರೂ ಮತ್ತೆ ಅಪ್ಪಿ ಒಪ್ಪುವ ಭಾವುಕತೆ ಏನು ಕಡಿಮೆಯದ್ದಾ..?!


"ನಿನಗೆ ಇಬ್ಬರಾದ್ರೆ ನನಗೂ ಇಬ್ಬರೇ.." ಎಂದ ವೆಂಕಟೇಶ ಕೇವಲ ಮಾತಿನಲ್ಲಲ್ಲದೆ ಕೃತಿಯಲ್ಲೂ ಮಾವನನ್ನು ಮಗುವಿನಂತೆ ಪೋಷಿಸಿದ ಭಾವುಕತೆ ಕಡಿಮೆಯದ್ದಲ್ಲ. ಅವರ ಹಣ, ಆಸ್ತಿ ಎಂದಿಗೂ ಬೇಡವೆಂದು ಮುಂಚೆಯೇ ಪತ್ನಿಗೆ ಹೇಳಿದ ಅವನ ಆಲೋಚನೆಯಂತೂ ಚಿಕ್ಕದ್ದಲ್ಲವೇ ಅಲ್ಲ, ಹಾಗೆಂದು ಯಾವುದೋ ಭಾವುಕ ಕ್ಷಣದಲ್ಲಿ ತೆಗೆದುಕೊಂಡ ತೀರ್ಮಾನವೂ ಅಲ್ಲ.

"ನಮ್ಮ ಮಗಳು ನಮ್ಮನ್ನು ನೋಡಿಕೊಳ್ಳಲು ನಾವು ಅವರಿಗೆ ಮೇಲ್ಪಂಕ್ತಿಯಾಗಬೇಕೇ ಹೊರತು ತಪ್ಪು ಮಾದರಿಯಾಗಬಾರದು." ಎನ್ನುವ ವೆಂಕಟೇಶನ ಉದಾತ್ತ ಮಾತುಗಳು ಭಾವುಕತೆಯ ಜೊತೆಗೆ ಹೃದಯ ವೈಶಾಲ್ಯವನ್ನೂ, ಔನತ್ಯವನ್ನೂ ತೋರುತ್ತವೆ. 


ರಸಾನುಭವ, ವಾಸ್ತವತೆ ಜೊತೆಗೆ ಭಾವನಾತ್ಮಕತೆ, ಭಾವುಕತೆಯನ್ನು ಹದವಾಗಿ ಹೆಣೆದಿರುವ ಪರಿ ಸಾಹಿತ್ಯದಲ್ಲಿ ಭಾವುಕತೆಯ ಪಾತ್ರ ಹದವಾಗಿದ್ದಾಗ ಅದು ಬಹಳ ಕಾಲ ಮನಸ್ಸಿನಲ್ಲಿ ಉಳಿಯುವ ಪರಿಯನ್ನು ನಾವಿಲ್ಲಿ ಸ್ಪಷ್ಟವಾಗಿ ಕಾಣಬಹುದು. ವಸುಮತಿ ಉಡುಪರವರ ಸಾಕಷ್ಟು ಕಥೆ-ಕಾದಂಬರಿಗಳಂತೆಯೇ ಗಾಢವಾಗಿ ತಾಕಿದ ಕಾದಂಬರಿ ಇದು. 


~ವಿಭಾ ವಿಶ್ವನಾಥ್

ಭಾನುವಾರ, ಅಕ್ಟೋಬರ್ 11, 2026

ಹೆಚ್ಚು ವ್ಯತ್ಯಾಸವೇನಿಲ್ಲ

 


ಬೆನ್ನ ಹಿಂದಿನ ಮಸಲತ್ತು, ಪಿತೂರಿ

ಕಾಲ ಕೆಳಗಿನ ಕತ್ತಲು ಎರಡೂ ಒಂದೇ

ಹೆಚ್ಚು ವ್ಯತ್ಯಾಸವೇನಿಲ್ಲ..


ಬೈದದ್ದು ಪ್ರೀತಿಯಿಂದ ಎಂದೇ ನಂಬಿಸುವ

ಮಾಡುವುದೆಲ್ಲವೂ ಮಮತೆಯಿಂದಲೇ

ಎಂದು ಸತ್ಯದ ತಲೆ ಮೇಲೆ ಹೊಡೆದಂತೆ 

ಬಿಂಬಿಸುತ್ತಾ ಮಾಡುವ ಮೋಸಕ್ಕೂ, ದಗಕ್ಕೂ

ಹೆಚ್ಚು ವ್ಯತ್ಯಾಸವೇನಿಲ್ಲ


ಕೈ ಕಟ್ಟಿ ಕುಳಿತ ಅಸಹಾಯಕತೆಯ ನಡೆಗೂ

ಆಡಬೇಕೆನಿಸಿದರೂ ಆಡಲಾಗದ ನುಡಿಗೂ

ಮೋಸದ ಪರದೆ ಸರಿಸಿ ನೋಡಿದರೂ ನೋಡದಂತೆ

ಕಣ್ಮುಚ್ಚಿ ಕೂತ ಕುರುಡಿಗೂ, ಸತ್ತು ಸತ್ತು ಹುಟ್ಟುವುದಕ್ಕೂ

ಹೆಚ್ಚು ವ್ಯತ್ಯಾಸವೇನಿಲ್ಲ


ಅವರಿಗೆ ಕತ್ತಲಲ್ಲಿ ಗುರಿ ಹೊಡೆದದ್ದು ಸಾಕಿತ್ತು

ಇವರಿಗೆ ಬಿದ್ದರೂ ಮೀಸೆ ಮಣ್ಣಾಗದಂತಿರಬೇಕಿತ್ತು

ಅವರ ಹಾಗೂ ಇವರ ಮುಸುಕಿನಾಟಕ್ಕೆ ಬಲಿಯಾದವಳ

ಆತ್ಮ ಸತ್ತದಕ್ಕೂ, ಮನಸ್ಸಾಕ್ಷಿ ಮುಕ್ಕಾದದ್ದಕ್ಕೂ

ಹೆಚ್ಚು ವ್ಯತ್ಯಾಸವೇನಿಲ್ಲ


~ವಿಭಾ ವಿಶ್ವನಾಥ್

ಅವಳ ಕೂದಲು..??

 


"ನನಗೆ ಕ್ಯಾನ್ಸರ್ ಬಂದಿರಬೇಕೇನೋ ಕಣೇ.. ನನಗೇಕೋ ಅನುಮಾನ" ಎಂದ ಗೆಳತಿಯ ಮಾತಿಗೆ ಅಚ್ಚರಿಯಿಂದ ನೋಡಿದಳು ರಾಶಿ.

"ಯಾಕೆ ಹೀಗೆಲ್ಲಾ ಮಾತನಾಡುತ್ತಾ ಇದ್ದೀಯ.. ತಲೆ ಗಿಲೆ ಕೆಟ್ಟಿಲ್ಲ ತಾನೇ.. " ಎಂದಾಗ ಮುಖ ಉಬ್ಬಿಸಿ ಗೆಳತಿ ರಕ್ಷಾ "ಯಾಕೆ ಹೀಗೆಲ್ಲಾ ಕೇಳ್ತೀಯಾ ?

ನೋಡಿಲ್ಲಿ ಎಷ್ಟು ರಾಶಿ ರಾಶಿ ಕೂದಲಿನ ಜೊಂಪೆ ಬಿದ್ದಿದೆ ಇಲ್ಲಿ " ಎಂದಾಗ ನಕ್ಕ ರಾಶಿ "ನಾನೇನೋ ಅಂದುಕೊಂಡೆ. ಇಷ್ಟಕ್ಕೇ ಹೀಗಾಡ್ತಿಯಲ್ಲೇ.. ಪಿ.ಜಿ ನೀರು ಅಡ್ಜೆಸ್ಟ್ ಆಗಿಲ್ಲ ಅನ್ಸುತ್ತೆ " ಎಂದಾಗ "ಪಿ.ಜಿ ನೀರು ಮಾತ್ರ ಅಲ್ಲ. ಪಿ.ಜಿ ಊಟ, ಇಲ್ಲಿನ ವಾತಾವರಣ ಒಟ್ಟಾರೆ ಪಿ.ಜಿ ನೇ ಇಷ್ಟವಾಗಿಲ್ಲ ಕಣೇ.. ಮದುವೆಯಾಗುವವರೆಗಾದರೂ ನನ್ನ ಕೂದಲು ಇದ್ದರೆ ಸಾಕು. ನನ್ನ ಕೂದಲು ಉದುರುತ್ತಾ ಇರುವುದನ್ನು ನೋಡಿದ್ರೆ ನನ್ನ ಮದುವೆಗೆ ವಿಗ್ ಹಾಕಿಕೊಳ್ಳಬೇಕಾಗುತ್ತೆ. ಕೂದಲು ಬೆಳೆಯದೇ ಇದ್ದರೂ ಪರವಾಗಿಲ್ಲ. ಆದರೆ, ಇರೋ ನಾಲ್ಕು ಕೂದಲು ಸಹಾ ಉದುರಿ ಹೋಗದೇ ಇದ್ದರೆ ಸಾಕು " ಎಂದಳು.


"ಅದ್ಯಾಕೆ ಹಾಗೆಲ್ಲಾ ಮಾತನಾಡುತ್ತೀಯ.. ಈಗಲೇ ಕೂದಲು ಉದುರಿ ಮುದುಕಿಯಾಗಿ ಬಿಟ್ಟಳು ಅನ್ನೋ ತರಹಾ. ಕೂದಲಿಗೆ ಸರಿಯಾಗಿ ಆರೈಕೆ ಮಾಡಿದ್ರೆ ಏನೂ ಆಗಲ್ಲ. ನೋಡು.. ನನ್ನ ಕೂದಲು ಸಹಾ ಮೊದಲು ಸಣ್ಣ ಇತ್ತು. ಈಗ ಚೆನ್ನಾಗಿ ಆಗಿದೆ. ಅಲ್ಲದೇ, ನಾನಂತೂ ಯಾವತ್ತೂ ಕೂದಲು ಕಟ್ ಮಾಡಿಸೋಕೆಲ್ಲಾ ಹೋಗಲ್ಲಪ್ಪ. " ಎನ್ನುತ್ತಾ ತನ್ನ ಉದ್ದ ಕೂದಲನ್ನೊಮ್ಮೆ ನೋಡಿಕೊಂಡಳು.


ರಾಶಿ ಹೇಳಿದ್ದರಲ್ಲಿ ಅತಿಶಯೋಕ್ತಿ ಏನಿರಲಿಲ್ಲ. ರಾಶಿಯ ಕೂದಲು ಕಂಡು ಎಲ್ಲರಿಗೂ ಹೊಟ್ಟೆ ಉರಿಯಾಗುತ್ತಿತ್ತು. ಅಷ್ಟು ನುಣುಪಾದ ಹಾಗೂ ದಪ್ಪದಾದ ಜಡೆ.


"ಬಿಸಿ ನೀರಲ್ಲಿ ತಲೆ ಸ್ನಾನ ಮಾಡಬೇಡ. ಶಾಂಪೂ ಬಳಕೆ ಕಡಿಮೆ ಮಾಡು. ನಿಯಮಿತವಾಗಿ ಬುಡಕ್ಕೆ ಕೊಂಚ ಬಿಸಿ ಮಾಡಿದ ಎಣ್ಣೆಯನ್ನು ಹಚ್ಚು. ಚೆನ್ನಾಗಿ ತರಕಾರಿ - ಹಣ್ಣು ತಿನ್ನು. ಚೆನ್ನಾಗಿ ನೀರು ಕುಡಿ. ಚಿಂತೆ ಮಾಡುವುದನ್ನು ಕಡಿಮೆ ಮಾಡು. ಆಗ ಎಲ್ಲವೂ ಸರಿಯಾಗುತ್ತೆ " ಎಂದಿದ್ದಳು ರಾಶಿ. ರಕ್ಷಾ ರಾಶಿಯ ಮಾತಿನಂತೆಯೇ ನಡೆದುಕೊಳ್ಳತೊಡಗಿದ್ದಳು. ಕೂದಲ ಆರೋಗ್ಯ ಸುಧಾರಿಸಿತ್ತು. ರಾಶಿಯಷ್ಟು ದಪ್ಪವಾಗಿ ಅಲ್ಲದಿದ್ದರೂ ರಕ್ಷಾಳ ಕೂದಲು ತಕ್ಕ ಮಟ್ಟಿಗೆ ಚೆನ್ನಾಗಿಯೇ ಇತ್ತು.


ಕಾಲಚಕ್ರ ಉರುಳಿತ್ತು.


'ಅದು ರಾಶಿ ಅಲ್ಲವಾ..

ಛೇ, ಛೇ ಇರಲಿಕ್ಕಿಲ್ಲ. ಅವಳಿಗೆ ಅಷ್ಟು ಉದ್ದದ ಕೂದಲಿತ್ತು. ಜಡೆ ನೋಡಿಯೇ ರಾಶಿ ಅಂತಾ ಕಂಡು ಹಿಡಿಯಬಹುದಾಗಿತ್ತು. ಈ ಹೆಂಗಸು ಬಾಯ್ ಕಟ್ ಮಾಡಿಸಿಕೊಂಡಿದೆ' ಎಂದು ಮನಸ್ಸಿನಲ್ಲಿಯೇ ಲೆಕ್ಕ ಹಾಕುತ್ತಾ 'ರಾಶಿಯೇ ಆಗಿದ್ರೆ ಮಾತನಾಡಿಸೋಣ. ಇಲ್ಲಾ ಅಂದರೆ ವಾಪಾಸು ಬಂದು ಬಿಡೋಣ' ಎಂದುಕೊಂಡು ಮಾಲ್ ನಲ್ಲಿ ರಕ್ಷಾ ಆ ಹೆಣ್ಣಿನ ಕಡೆ ಹೆಜ್ಜೆ ಹಾಕಿದ್ದಳು.


"ರಾಶಿ" ಅಚ್ಚರಿಯಿಂದ ಉದ್ಗರಿಸಿದಳು ರಕ್ಷಾ.

"ಅರೆ ! ರಕ್ಷಾ ವಾಟ್ ಅ ಪ್ಲಸೇಂಟ್ ಸರ್ಪ್ರೈಸ್ " ಎನ್ನುತ್ತಾ ಫುಡ್ ಕೋರ್ಟ್ ಕಡೆ ಹೆಜ್ಜೆ ಹಾಕಿದರು.


"ಏನೇ ನಿನ್ನ ಕೂದಲು.. ? " ಎಂದೇ ಮೊದಲು ಕೇಳಿದಳು ರಕ್ಷಾ.

"ಹೇಳ್ತೀನಿ ಇರು. ತಿನ್ನೋಕೆ ಆರ್ಡರ್ ಮಾಡಿ ಬರುತ್ತೇನೆ " ಎಂದು ಸುಮ್ಮನೆ ಎದ್ದು ಹೋದಳು. ಹೋದವಳೆಡೆಗೆ ನೋಡಿದರೆ ಇವಳು ಅದೇ ರಾಶಿ ಹೌದಾ ಎಂಬಷ್ಟು ಸಣ್ಣವಾಗಿದ್ದಳು. ಯಾಕೋ ನಡಿಗೆಯಲ್ಲಿ ಮೊದಲಿನ ಲಾಸ್ಯವಿರಲಿಲ್ಲ. ಯಾಕೋ ಅವಳನ್ನು ಮತ್ತೆ ದಿಟ್ಟಿಸಿ ನೋಡುವ ಮನಸ್ಸಾಗದೇ..


ರಕ್ಷಾ ಮೊಬೈಲ್ ತೆಗೆದು ಫೇಸ್ಬುಕ್ ಸ್ಕ್ರೋಲ್ ಮಾಡತೊಡಗಿದಾಗ ರಾಶಿ ಶೇರ್ ಮಾಡಿದ್ದ ಒಂದು ವಿಡಿಯೋ ಕಣ್ಣಿಗೆ ಬಿತ್ತು. ಉದ್ದ ಕೂದಲಿನ ಹುಡುಗಿಯೊಬ್ಬಳು ಹೇರ್ ಕಟ್ ಮಾಡಿಸಲು ಬರುತ್ತಾಳೆ. ಇನ್ನಷ್ಟು ಚಿಕ್ಕದಾಗಿ.. ಇನ್ನೂ ಚಿಕ್ಕದಾಗಿ .. ಎನ್ನುತ್ತಾ  ಬಾಯ್ ಕಟ್ ಮಾಡಿಸಿಕೊಂಡು "ಇನ್ನೂ ಚಿಕ್ಕದಾಗಿ ಕಟ್ ಮಾಡಿ.. ಅವನ ಕೈಗೆ ಸಿಗದಷ್ಟು.." ಎಂದು ದುಃಖದಿಂದ ನುಡಿಯುತ್ತಾಳೆ. ಯಾಕೋ ರಕ್ಷಾ ಮನಸ್ಸಿನ ಮೇಲೆ ವಿಡಿಯೋ ಪರಿಣಾಮ ಬೀರಿತ್ತು.


ಯಾಕೋ ಸುಮ್ಮನೆ ಕುಳಿತಿದ್ದಳು. ಮನಸ್ಸು ಭಾರವಾಗಿತ್ತು. ಯಾಕೋ ಲವಲವಿಕೆ ಇಲ್ಲದೆ ಸುಮ್ಮನೆ ನಡೆದು ಬರುತ್ತಿದ್ದ ರಾಶಿಗೆ ಮತ್ತೆ ಪ್ರಶ್ನೆ ಕೇಳಬೇಕೆಂದು ಅನ್ನಿಸಲಿಲ್ಲ.


~ವಿಭಾ ವಿಶ್ವನಾಥ್

ಗೂಗಲ್ ಗೆ ತನ್ನ ಹುಟ್ಟುಹಬ್ಬದ ಕುರಿತು ಗೊಂದಲವಾ ??


2026 ರ ಸೆಪ್ಟೆಂಬರ್ 27 ರಂದು ಗೂಗಲ್ ತನ್ನ 28 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿತು. ಇದಕ್ಕಾಗಿ ಸೂಕ್ತ ಡೂಡಲ್ ಅನ್ನು ಕೂಡಾ ಪ್ರದರ್ಶಿಸಿತ್ತು. ಡೂಡಲ್ ಅಂದರೆ  ತನ್ನ ಲೋಗೋ ಮೂಲಕ ಹಾಸ್ಯದ ರೀತಿಯಲ್ಲೋ, ಗೌರವದ ರೀತಿಯಲ್ಲೋ ಅಥವಾ ಆಶ್ಚರ್ಯದ ರೀತಿಯಲ್ಲಿಯೋ ಯಾರದ್ದಾದರೂ ಹುಟ್ಟು ಹಬ್ಬ, ಸಾಧನೆ , ಸಾವಿಗಾಗಿ ಗೌರವ ಸೂಚಿಸುತ್ತಾ ಗೊತ್ತಿಲ್ಲದ ಮಾಹಿತಿಗಳನ್ನು ತಲುಪಿಸುವ ಚಿತ್ರ. ಈ ಗೂಗಲ್ ಡೂಡಲ್ ಪ್ರತಿದಿನವೂ ಬದಲಾಗುತ್ತಿರುತ್ತದೆ.


ಗೂಗಲ್ ನ ಡೂಡಲ್ ಏನೋ ಪ್ರತಿದಿನವೂ ಬದಲಾಗುತ್ತದೆ. ಹಾಗೆಂದು, ಗೂಗಲ್ ನ ಹುಟ್ಟುಹಬ್ಬವೂ ಬದಲಾಗಬೇಕೇ ? ಕೆಲವು ಜನ ತಮ್ಮ ಹುಟ್ಟು ಹಬ್ಬವನ್ನು ದಿನಾಂಕದ ಆಧಾರದಲ್ಲಿ ಅಲ್ಲದೇ ಜನ್ಮ ನಕ್ಷತ್ರಗಳ ಆಧಾರದಲ್ಲಿ ಆಚರಿಸಿಕೊಳ್ಳುತ್ತಾರೆ. ಈ ಗೂಗಲ್ ಕೂಡಾ ಹಾಗೆಯಾ..?? ಈ ಗೂಗಲ್ ಮನುಷ್ಯನಲ್ಲವಲ್ಲ ಹಾಗೆ ಮಾಡಲು..!


27 ಸೆಪ್ಟೆಂಬರ್ 2002 ರಲ್ಲಿ ಗೂಗಲ್ ತನ್ನ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರೆ, 2003 ರಲ್ಲಿ ಸೆಪ್ಟೆಂಬರ್ 8 ರಂದು ತನ್ನ ಐದನೆಯ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿತ್ತು. ಆದರೆ, ಗೂಗಲ್ ತನ್ನ ಏಳನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು 2004 ಸೆಪ್ಟೆಂಬರ್ 7 ರಂದು. ಆದರೆ, ಆ ವರ್ಷ ಗೂಗಲ್ ಡೂಡಲ್ ಪ್ರದರ್ಶನವಾದದ್ದು  ಸೆಪ್ಟೆಂಬರ್ 26 ರಂದೇ.. ಆದರೆ, ಅದರಲ್ಲಿ ನಮೂದಿಸಲಾಗಿದ್ದು ಗೂಗಲ್ ನ ಹುಟ್ಟುಹಬ್ಬ ಸೆಪ್ಟೆಂಬರ್ 7 ಎಂದೇ.. ಇದಾದ ನಂತರ ಗೂಗಲ್ ಸೆಪ್ಟೆಂಬರ್ 27 ನ್ನು ತನ್ನ ಹುಟ್ಟುಹಬ್ಬ ಎಂದು ಆಚರಿಸುತ್ತಿದೆ. ಈಗ ಸದ್ಯಕ್ಕೆ ಇದೇ ಇದರ ಆಫಿಶಿಯಲ್ ಹುಟ್ಟು ಹಬ್ಬವಾಗಿದೆ.


ಹಾಗೆ ನೋಡಿದರೆ.. ಗೂಗಲ್.ಕಾಮ್ ತನ್ನ ವೆಬ್ಸೈಟ್ ಹೆಸರನ್ನು ರಿಜಿಸ್ಟರ್ ಮಾಡಿದ್ದು 1997 ರ ಸೆಪ್ಟೆಂಬರ್ 15 ರಲ್ಲಿ. ಇದಕ್ಕೂ ಮೊದಲೇ ಅಂದರೆ 1996 ರ ಜನವರಿಯಲ್ಲಿ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಮಾಡುತ್ತಿದ್ದ ಲ್ಯಾರಿ ಪೇಜ್ ಹಾಗೂ ಸೆರ್ಜಿ ಬ್ರಿನ್ ಜೊತೆ ಸ್ಕಾಟ್ ಹಸನ್ ಸೇರಿ ಗೂಗಲ್ ಸರ್ಚ್ ಇಂಜಿನ್ ಅನ್ನು ಅವರ ಪ್ರಾಜೆಕ್ಟ್ ಆಗಿ ರೂಪಿಸಿದರು. ಸ್ಕಾಟ್ ಹಸನ್ ತನಗೆ ಬೇರೆ ವಿಷಯದಲ್ಲಿ ಆಸಕ್ತಿ ಇದೆ ಎಂದು.. ಇಲ್ಲಿ ಬಿಟ್ಟು ಹೊರಟ.ಹಾಗಾಗಿ ಉಳಿದ ಇಬ್ಬರನ್ನು ಮಾತ್ರವೇ ಗೂಗಲ್ ನ ಸಂಸ್ಥಾಪಕರು ಎನ್ನಲಾಗುತ್ತದೆ. ಆದರೆ, ಎಲ್ಲಿಯೂ ಯಾವತ್ತೂ ಗೂಗಲ್ ಜನವರಿಯಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಆದರೆ, ಗೂಗಲ್ ಕಂಪನಿಯಾಗಿ ಶುರುವಾಗಿದ್ದು 1998 ರ ಸೆಪ್ಟೆಂಬರ್ 4 ರಂದು. ಒಂದರ್ಥದಲ್ಲಿ ಇದು ಅದರ ನಿಜವಾದ ಹುಟ್ಟುಹಬ್ಬದ ದಿನಾಂಕ. ಆದರೆ, ಗೂಗಲ್ ಸೆಪ್ಟೆಂಬರ್ 27 ನ್ನು ಏಕೆ ಆಯ್ಕೆ ಮಾಡಿಕೊಂಡಿತು ಗೊತ್ತೇ ??


ಗೂಗಲ್ ಮೊದಲಿಗೆ ಖ್ಯಾತವಾದ ಸರ್ಚ್ ಇಂಜಿನ್ ಏನೂ ಆಗಿರಲಿಲ್ಲ. ಯಾಹೂ.ಕಾಮ್ ಇದಕ್ಕಿಂತಲೂ ಹೆಚ್ಚಿನ ಖ್ಯಾತಿ ಪಡೆದಿತ್ತು. ಅಸಲಿಗೆ ಆಗ ಇನ್ನೂ ಗೂಗಲ್ ಇರಲೇ ಇಲ್ಲ. ಆನಂತರದಲ್ಲಿ ಗೂಗಲ್ ನಿಧಾನವಾಗಿ ತನ್ನ ಛಾಪು ಮೂಡಿಸಲು ಆರಂಭಿಸಿತ್ತು.


ಇವತ್ತು ಯಾರು ಏನೇ ಕೇಳಿದರೂ ಗೂಗಲ್ ನೋಡಲು ಹೇಳುತ್ತೇವೆ. ಇಲ್ಲವೇ, ಗೂಗಲ್ ಮೊರೆಹೋಗುತ್ತೇವೆ. "ಜಸ್ಟ್ ಗೂಗಲ್ ಇಟ್" ಎಂದು ಬಿಡುತ್ತೇವೆ. ಅಷ್ಟಕ್ಕೂ ಗೂಗಲ್ ಪದದ ಅರ್ಥವೇನು ಗೊತ್ತೇ ? ಈ ಪದ ಹುಟ್ಟಿದ್ದು ಗೂಗಾಲ್(Googole) ಎಂಬ ಪದದಿಂದ. ಹೀಗೆಂದರೆ 1 ರ ಮುಂದೆ 100 ಸೊನ್ನೆಗಳನ್ನು ಸೇರಿಸಿದಾಗ ಬರುವ ಸಂಖ್ಯೆ. ಬಹುಶಃ, ಶುರು ಮಾಡಿದಾಗ ಅವರು ಅಷ್ಟು ಸಂಖ್ಯೆಯ ಮಾಹಿತಿ ದೊರೆಯಲಿ ಎಂದು ಇಟ್ಟಿದ್ದಿರಬಹುದು. ಆದರೆ , ಅಷ್ಟು ಸಂಖ್ಯೆಯ ಜನರು ಬಳಸುವಷ್ಟು ದೊಡ್ಡ ಕಂಪೆನಿಯಾಗುತ್ತದೆ ಎಂದು ಅಂದುಕೊಂಡಿರಲಿಕ್ಕಿಲ್ಲ.


1920ರಲ್ಲಿ ಅಮೆರಿಕದ ಗಣಿತಜ್ಞ ಎಡ್ವರ್ಡ್ ಕಸ್ನರ್ ಒಂದು ವಿಭಿನ್ನ ಅಸಾಮಾನ್ಯ ಸಂಖ್ಯೆಯ ಬಗ್ಗೆ ಯೋಚಿಸುತ್ತಿದ್ದ. ಆಗ ಅದಕ್ಕೆ ಏನು ಹೆಸರಿಟ್ಟರೆ ಚೆಂದ ಎಂದು ತನ್ನ 9 ವರ್ಷದ ಕಸಿನ್ ನ ಮಗ ಮಿಲ್ಟನ್ ಸಿರೋಟಾಗೆ ಕೇಳಿದನಂತೆ. ಆ ಹುಡುಗ ಬಾಲಭಾಷೆಯಲ್ಲಿ ಹೇಳಿದ ಹೆಸರು `ಗೂಗಾಲ್'. ಅದನ್ನೇ ತಾನು ಬರೆದ 'ಮ್ಯಾಥಮ್ಯಾಟಿಕ್ಸ್ ಅಂಡ್ ದಿ ಇಮ್ಯಾಜಿನೇಷನ್' ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾನೆ ಕಸ್ನರ್.


ಗೂಗಲ್ ಬ್ರೌಸಿಂಗ್ ನಲ್ಲಿ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳಬೇಕೆಂದರೆ ಅದರ ಪುಟಗಳು ಇಂಡೆಕ್ಸಿಂಗ್ ಮೂಲಕವೇ ಕಾಣಿಸಿಕೊಳ್ಳಬೇಕಿತ್ತು.ಎಲ್ಲಾ ವೆಬ್ಸೈಟ್ ಗಳೂ ಹೀಗೆಯೇ.. ಗೂಗಲ್ ನ ಹೆಚ್ಚಿನ ಪುಟಗಳು ಇಂಡೆಕ್ಸಿಂಗ್ ಆಗಿದ್ದು ಗೂಗಲ್ ನ ಸಾಧನೆಯ ಮೈಲುಗಲ್ಲು. ಹೀಗೆ ಆದದ್ದು ಸೆಪ್ಟೆಂಬರ್ 27 ರಂದು. ಹಾಗಾಗಿಯೇ.. ಗೂಗಲ್ ಇದರ ಸವಿನೆನಪಿಗೆ ತನ್ನ ಹುಟ್ಟುಹಬ್ಬದ ದಿನಾಂಕವನ್ನು ಸೆಪ್ಟೆಂಬರ್ 27 ಎಂದು ಆಚರಿಸುತ್ತದೆ.


~ವಿಭಾ ವಿಶ್ವನಾಥ್

ಭಾವನೆಗಳಿಗೆ ಭೇಧವಿಲ್ಲ (ಬೆಳಕಿಂಡಿಯ ಕತೆಗಳು - 91)

 


"ಹೆಣ್ಣಪ್ಪಿಯಂತೆ ರೋಡಲ್ಲಿ ಅಳಬೇಡ ಬಾಯ್ಮಿಚ್ಚಿಕೊಂಡು ಬಾ" ಎಂದು ತಮ್ಮನಿಗೆ ಗದರುತ್ತಿದ್ದ ಅಕ್ಕನನ್ನು ನೋಡಿ ಒಂದು ಕ್ಷಣ ದಿಗ್ಭ್ರಮೆ ಅನ್ನಿಸಿತ್ತು. "ಇವತ್ತು ಫುಟ್ಬಾಲ್ ಮ್ಯಾಚ್ ಅಲ್ಲಿ ಸೋತೆ" ಎನ್ನುತ್ತಲೇ ಆಳುತ್ತಿದ್ದ ಹುಡುಗನನ್ನು ಸಮಾಧಾನಿಸುವ ಮನಸ್ಸಾದರೂ ಸಮಾಧಾನಿಸಲು ಹೋಗಲಿಲ್ಲ. ಬದಲಾಗಿ ಅವನಿಗೆ, ಅಳು.. ಮನಸ್ಫೂರ್ತಿ ಅಳು. ಹೆಣ್ಣು ಮಕ್ಕಳು ಮಾತ್ರ ಅಳಬೇಕು ಅಂತೇನಿಲ್ಲ. ಗಂಡು ಮಕ್ಕಳು ಅಳಬಾರದು ಅಂತಾ ಯಾರೂ ನಿಯಮ ಮಾಡಿಟ್ಟಿಲ್ಲ. ಆದರೆ, ಒಬ್ಬ ಆಟಗಾರನಾಗಿ ಅಳಬೇಡ. ಸೋಲನ್ನು ಸೋಲಿಸು. ಆಗ ಮನಸ್ಫೂರ್ತಿ ನಗು. ಪುಟ್ಟಿ, ನೀನು ಕೂಡಾ.. ಹೆಣ್ಣು ಮಕ್ಕಳು ಮನಸ್ಫೂರ್ತಿ ಸಂತೋಷ ಪಡಬಾರದು ಅಂತಾ ಎಲ್ಲಿಯೂ ಹೇಳಿಲ್ಲ. ಅಂದ ಹಾಗೆ ಭಾವನೆಗಳನ್ನು ವ್ಯಕ್ತ ಪಡಿಸುವುದಕ್ಕೆ ಹಿಂಜರಿಯಬೇಡಿ. ಅದಕ್ಕೆ ಯಾವ ಬೇಧವೂ ಇಲ್ಲ ಎಂದೆ. ಯಾಕೋ ಅವರು ನಡೆಯುತ್ತಿದ್ದ ಹಾದಿ ಅವರ ಪರಿವರ್ತನೆಯ ಹಾದಿಯಂತೆ ಭಾಸವಾಯಿತು.


~ವಿಭಾ ವಿಶ್ವನಾಥ್

ನೈವೇದ್ಯದ ರುಚಿ (ಬೆಳಕಿಂಡಿಯ ಕತೆಗಳು - 90)


 ದೇವರು ಪ್ರಸಾದವನ್ನು ಅರ್ಪಿಸಿಕೊಳ್ಳುವ ಮೊದಲೇ.. ಪುಟಾಣಿ ತನ್ನ ಹೊಟ್ಟೆಗೆ ನೈವೇದ್ಯವನ್ನು ಅರ್ಪಿಸಿಕೊಂಡ.

ನೈವೇದ್ಯ ರುಚಿ ಎನಿಸಿದ್ದು ಆನಂತರವೇ..


~ವಿಭಾ ವಿಶ್ವನಾಥ್

ಹುಷಾರಿನಿಂದ ಎಡವಿದಾಗ (ಬೆಳಕಿಂಡಿಯ ಕತೆಗಳು - 89)


ಅವಳೇನೂ ಹುಷಾರು ತಪ್ಪಿ ಎಡವುತ್ತಿರಲಿಲ್ಲ. ಪ್ರತಿ ಬಾರಿ 'ಹುಷಾರು' ಎಂದು ಕೇಳಿಸಿಕೊಂಡಾಗಲೆಲ್ಲಾ ಅದೇಕೋ ಅವಳ ಗಮನ ಪಲ್ಲಟವಾಗುತ್ತಿತ್ತು.

'ಹುಷಾರಿ'ನಿಂದಲೇ ಎಡವಿ ಬಿಡುತ್ತಿದ್ದಳು


~ವಿಭಾ ವಿಶ್ವನಾಥ್

ಭಾನುವಾರ, ಅಕ್ಟೋಬರ್ 4, 2026

ಪ್ರೀತಿಯ ಹೂ ಅರಳಿದಾಗ (ಬೆಳಕಿಂಡಿಯ ಕತೆಗಳು - 88)

 


ಆ ದೇಶದ ಗಡಿಗಳ ನಡುವಿನ ಬೇಲಿಯ ಮೇಲೆಲ್ಲಾ ಸುಂದರ ಹೂಗಳ ಚಪ್ಪರ ಹಬ್ಬಿತ್ತು. ಆ ದೇಶಗಳ ಜನರಲ್ಲಿ ಮಾನವೀಯತೆ ಹಾಗೂ ಪರಸ್ಪರ ಪ್ರೀತಿ ಹಾಗೂ ಸಹಕಾರ ಹಬ್ಬಿದಂತೆ..


ದ್ವೇಷದ ಮುಳ್ಳನ್ನು ಪ್ರೀತಿ ಮೊಂಡು ಮಾಡಿತ್ತು..


~ವಿಭಾ ವಿಶ್ವನಾಥ್

ಬೇವು-ಬೆಲ್ಲ (ಬೆಳಕಿಂಡಿಯ ಕತೆಗಳು - 87)


 "ಅಜ್ಜಿ, ಬೆಲ್ಲ ಮಾತ್ರ ಸಾಕು. ಬೇವು ಬೇಡ" ಎಂದವನನ್ನು ಕಂಡು ಅಜ್ಜಿ "ಮಗು, ಜೀವನದಲ್ಲಿ ಕಷ್ಟ ಬೇಡ ಸುಖ ಸಾಕು ಅಂದರೆ ಆಗುತ್ತೇನಪ್ಪಾ.. ನಮ್ಮನ್ನು ನೋಡು ಕಷ್ಟ-ಸುಖ ಎಲ್ಲದಕ್ಕೂ ಹೊಂದಿಕೊಂಡು ಬಾಳುತ್ತಾ ಇಲ್ವಾ.. " ಎಂದಾಗ ತಾತ " ಕಹಿ ಇದ್ದರೇನೇ ಕಂದಾ ಸಿಹಿಯ ಸವಿ ಅರಿವಾಗುವುದು. ನಮ್ಮನ್ನು ನೋಡು ಕಹಿ ಉಂಡು ಈಗ ಸಿಹಿ ತಿನ್ನೋ ಕಾಲದಲ್ಲೂ ಶುಗರ್ " ಎಂದದ್ದಕ್ಕೆ ಪುಟ್ಟ "ನಾನು ನಿಮ್ಮ ಹಾಗೆ ತೀರಾ ಕಹಿನೂ ತಿನ್ನಲ್ಲ, ತೀರಾ ಸಿಹಿ ಕೂಡಾ ಬೇಡುವುದಿಲ್ಲ. ಎರಡನ್ನೂ ಸಮಾನವಾಗಿ ಬಯಸುತ್ತೇನೆ" ಎನ್ನುತ್ತಾ ಬೇವು ಬೆಲ್ಲ ತಯಾರಿಸುವಲ್ಲಿ ಕೈ ಹಾಕಿದ.


~ವಿಭಾ ವಿಶ್ವನಾಥ್

ಅಕ್ಕರೆಯೇ ದೌರ್ಬಲ್ಯವೆನಿಸಿದರೆ..

 


"ನೀವು ತೋರಿಸುವ ಅಕ್ಕರೆಯನ್ನೇ ಅವರು ನಿಮ್ಮ ದೌರ್ಬಲ್ಯ ಎಂದುಕೊಳ್ಳುತ್ತಿದ್ದಾರೆ. ರೀ, ಕಣ್ಣು ಬಿಟ್ಟು ಎದುರಿಗಿರುವುದನ್ನು ನೋಡಿ. ನೀವು ಅಂದುಕೊಂಡದ್ದೇ ನಿಜವಲ್ಲ. ನಿಮ್ಮ ಕಾಳಜಿ ಇಲ್ಲಿ ಯಾರಿಗೂ ಬೇಡ. ಅವರೆಲ್ಲರಿಗೂ ಬೇಕಾಗಿರುವುದು ನಿಮ್ಮ ಸಂಬಳ, ನಿಮ್ಮ ಹಣ ಅಷ್ಟೇ.. " ಎಂದ ನಂದಿನಿಯ ಮಾತಿಗೆ "ಬರಿ ಇದೇ ಮಾತು ನಿನ್ನದೆಲ್ಲಾ.. ಈ ಮನೆ ಒಡೆದು ಬೇರೆ ಹೋಗಬೇಕು ಅಂತಾ ಹೀಗೆಲ್ಲಾ ಮಾತಾಡ್ತಾ ಇದ್ದೀಯ ಅಷ್ಟೇ.. ನೀನು ನೆನ್ನೆ - ಮೊನ್ನೆ ಬಂದಿರುವವಳು. ನಿನ್ನ ಮಾತನ್ನು ನಾನು ಕೇಳಿ ಅವರ ಮೇಲೆ ಸಂದೇಹ ಪಡುತ್ತೇನಾ ಹೇಳು. ಸುಮ್ಮನೆ ಈ ಚೀಪ್ ಗಿಮಿಕ್ಸ್ ಎಲ್ಲಾ ಬಳಸಬೇಡ. ಅವರು ಯಾವತ್ತಿದ್ದರೂ ನನ್ನ ಅಪ್ಪ ಮತ್ತು ನನ್ನ ಅಣ್ಣ. " ಎಂದನು ನವೀನ್.


"ಆಯ್ತು ರೀ, ಅವರು ನಿಮ್ಮಪ್ಪ ಮತ್ತು ನಿಮ್ಮಣ್ಣ ಅತ್ತಿಗೆ ಎನ್ನುವುದನ್ನು ನಾನು ಅಲ್ಲಗಳೆಯುತ್ತಿಲ್ಲ. ಆದರೆ, ನಿಮ್ಮ ತಂದೆಯ ನಡೆ-ನುಡಿಗಳು ನಾಟಕೀಯ ಅನ್ನುವುದು ನಿಮಗೆ ಯಾಕೆ ಕಾಣುವುದಿಲ್ಲ. ನೀವು ಅಕ್ಕರೆ, ಪ್ರೀತಿ, ಕಾಳಜಿ ತೋರಿಸುತ್ತೀರಿ ಸರಿ. ಆದರೆ, ಅವರಿಗೂ ನಿಮ್ಮ ಮೇಲೆ ಅದೇ ಭಾವನೆ ಇಲ್ಲ ಎನ್ನುವುದನ್ನು ನಾನು ಹೇಳುತ್ತಿರುವುದು. " ಎಂದ ನಂದಿನಿಯ ಮಾತಿಗೆ "ನೀನು ಹೇಳುವುದನ್ನೆಲ್ಲಾ ನಾನು ಕಣ್ಣು ಮುಚ್ಚಿ ನಂಬುವುದಿಲ್ಲ. ಒಂದು ವೇಳೆ ನೀನು ಹೇಳಿದ್ದು ಸತ್ಯ ಎಂದಾದರೆ.. ಅದು ಗೊತ್ತಾದ ದಿನ ನಾನು ಈ ಮನೆಯಲ್ಲಿ ಒಂದು ಕ್ಷಣ ಕೂಡಾ ಇರುವುದಿಲ್ಲ. " ಎಂದವನ ಮಾತಿಗೆ ನಂದಿನಿ ತಲೆ ಅಲ್ಲಾಡಿಸಿದರೂ ಸಹಾ ಅವನಿಗೆ ಸತ್ಯವನ್ನು ಅರ್ಥ ಮಾಡಿಸುವುದು ಅನಿವಾರ್ಯ ಹಾಗೂ ಕಷ್ಟ ಎನ್ನುವುದೇ ಅವಳನ್ನು ಮತ್ತಷ್ಟು ಚಿಂತೆಗೆ ದೂಡಿತ್ತು.


ನವೀನನಿಗೆ ಮದುವೆಯಾದಾಗ 35 ವರ್ಷ. ಗೆಳೆಯನ ಮದುವೆಗೆ ಹೋದಾಗ ಅನಿವಾರ್ಯ ಸ್ಥಿತಿಯಲ್ಲಿ ಬಡವರ ಮನೆಯ ಹುಡುಗಿ ನಂದಿನಿಯನ್ನು ಕೈ ಹಿಡಿದಿದ್ದ ನವೀನ್. ಮನೆಯವರಿಗಾರಿಗೂ ಅವನು ಮದುವೆಯಾದದ್ದೇ ಇಷ್ಟವಿರಲಿಲ್ಲ. ನಂದಿನಿಯನ್ನು ಎಂದಲ್ಲ.. ನವೀನ್ ಮದುವೆಯಾದದ್ದು ಇಷ್ಟವೇ ಇರಲಿಲ್ಲ. ನವೀನ್ ನಿಗೆ ಮದುವೆ ಮಾಡುವ ಯಾವ ಪ್ರಯತ್ನವನ್ನೂ ಮನೆಯವರಾರೂ ಗಂಭೀರವಾಗಿ ಮಾಡಿರಲೇ ಇಲ್ಲ. ಆತನಿಗೆ ಮದುವೆಯಾಗಿ ಅಕಸ್ಮಾತ್ ಆತ ಬೇರೆ ಮನೆ ಮಾಡಿದರೆ ಆ ಮನೆಗೆ ಬರುವ ಮುಕ್ಕಾಲು ಪಾಲು ವರಮಾನ ತಪ್ಪಿ ಹೋಗುತ್ತಿತ್ತಲ್ಲ.. ಅದು ಅವರ ದುರಾಲೋಚನೆ.


ನವೀನ್ ನ ಅಣ್ಣ ಮನೆಗೆ ತರುತ್ತಿದ್ದ ಹಣ ಅವನ ಹಾಗೂ ಅವನ ಹೆಂಡತಿಯ ಖರ್ಚಿಗೇ ಸಾಕಾಗುತ್ತಿರಲಿಲ್ಲ..ಇನ್ನು ಮನೆ ನಡೆಸುವುದಾದರೂ ಎಲ್ಲಿಂದ ? ಇನ್ನು ಆತನ ತಂದೆಗೆ ಜೂಜಿನ ಚಟ. ನವೀನ್ ದುಡಿದ್ದದ್ದೆಲ್ಲವೂ ಎಲ್ಲರ ಖರ್ಚಿಗೇ ಆಗುತ್ತಿತ್ತು. ಇಷ್ಟಾದರೂ ನವೀನ್ ನ ಬೇಕು- ಬೇಡಗಳನ್ನು ನೋಡುವವರು ಯಾರೂ ಇರಲಿಲ್ಲ. ನಂದಿನಿ ಈ ಮನೆಗೆ ಕಾಲಿಟ್ಟ ನಂತರ ನವೀನನ ಬೇಕು-ಬೇಡಗಳನ್ನು ಗಮನಿಸಿಕೊಳ್ಳುತ್ತಾ ಇದ್ದದ್ದು ಉಳಿದವರಿಗೆ ಕಣ್ಣುರಿಯನ್ನು ಸಹಾ ತಂದಿತ್ತು. ಹಾಗಾಗಿ, ಅವಳನ್ನು ಮನೆಯಿಂದ ಓಡಿಸಲು ನವೀನ್ ನಿಗೆ ಇಲ್ಲಸಲ್ಲದ್ದನ್ನು ಹೇಳಿ ಕಿವಿ ತುಂಬಿದ್ದರು. ಆದರೆ, ನವೀನ್ ಅದಾವುದನ್ನೂ ನಂಬಿರಲಿಲ್ಲ. ಅವಳು ಬೇರೆ ಮನೆ ಮಾಡುವ ಆಲೋಚನೆಯಲ್ಲಿ ಇದ್ದಾಳೆ ಎಂದುದ್ದಕ್ಕೂ ನಂದಿನಿ ಅವರ ಕುರಿತು ಹೇಳಿದ್ದಕ್ಕೂ ತಾಳೆಯಾದರೂ ನಂದಿನಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದವನಿಗೆ ಅವಳು ಹೇಳುವ ಮಾತು ನಿಜವಿರಬಹುದೇನೋ ಅನ್ನಿಸಿತ್ತು.


ನಂದಿನಿ ಹೇಳಿದ್ದನ್ನು ಪರೀಕ್ಷೆ ಮಾಡಲು ಇಬ್ಬರೂ ಒಂದು ಉಪಾಯ ಮಾಡಿದ್ದರು. ನವೀನ್ ಕೆಲಸ ಹೋಯಿತೆಂದು ಒಂದು ವಾರ ಮನೆಯಲ್ಲೇ ಕುಳಿತುಬಿಟ್ಟ. ವಾರವಿದ್ದದ್ದು ಹದಿನೈದು ದಿನವಾದಾಗ ಮನೆಯಲ್ಲಿ ಎಲ್ಲರ ಅಸಹನೆ, ಕೋಪ, ಸಿಡಿಮಿಡಿ ಎಲ್ಲವೂ ಹೊರಬರಲಾರಂಭಿಸಿತು. ನವೀನನಿಗೆ ಎಲ್ಲವೂ ಅರ್ಥವಾಗಿತ್ತು. ಎಲ್ಲರಿಗೂ ಬೇಕಾಗಿದ್ದದ್ದು ಅವನ ಹಣ ಅಷ್ಟೇ.. ಅವನಲ್ಲ ಎಂದು.


ನಂದಿನಿಯ ಮುಂದೆ ಸೋಲೊಪ್ಪಿಕೊಂಡ. ನನ್ನ ಅಕ್ಕರೆಯನ್ನು ದೌರ್ಬಲ್ಯ ಎಂದುಕೊಂಡವರಿಗೆ ಒಂದು ಪಾಠ ಕಲಿಸಬೇಕು ಎಂದು ನಿರ್ಧಾರ ಮಾಡಿದರೂ ಕಟು ಮಾತಲ್ಲಿ ಸಂಬಂಧಗಳನ್ನು ದೂರ ಮಾಡಿಕೊಳ್ಳುವ ಮನಸ್ಸಾಗಲಿಲ್ಲ. ಹಾಗಾಗಿ, ತನಗೆ ಟ್ರ್ಯಾನ್ಸ್ಪ್ಯಾರ್ ಆಗಿದೆ ಎಂದು ಹೇಳಿ ನಂದಿನಿಯನ್ನು ಕರೆದುಕೊಂಡು ಮನೆಯಿಂದ ಹೊರನಡೆದ. ಎಲ್ಲಾ ಆಸ್ತಿಯನ್ನು, ಬಾಂಧವ್ಯವನ್ನೂ ಅಲ್ಲಿಗೇ ಬಿಟ್ಟು..


ಅಕ್ಕರೆಯನ್ನು ದೌರ್ಬಲ್ಯವಾಗಿಸಿಕೊಂಡವರಿಗೆ ಈಗ ಕುತ್ತಿಗೆಗೆ ಬಂದಿತ್ತು. ಈಗ ತನ್ನ ದುರ್ಬಲತೆಯನ್ನು ಮೆಟ್ಟಿ ನಿಂತಿರುವ ನವೀನ್ ನಂದಿನಿ ಜೊತೆಗೆ ಸಾಮರಸ್ಯದ ಸಂಸಾರ ನಡೆಸುತ್ತಿದ್ದಾನೆ.


~ವಿಭಾ ವಿಶ್ವನಾಥ್

ಜೊತೆಯಾಗಿ ಸಾಗೋಣ

 


ಜೊತೆಯಲ್ಲಿ ಸಾಗೋಣ 

ಜೊತೆಯಾಗಿ ಮಾಗೋಣ


ನಿರಂತರ ಕಲಿಕೆಯಲ್ಲಿ

ಕೈ ಹಿಡಿದು ನಡೆಯುತ

ಸವಾಲುಗಳ ಎದುರಿಸುತ

ಜವಾಬ್ದಾರಿಗಳ ಹೊರುತ್ತಾ


ಜೊತೆಯಲ್ಲಿ ಸಾಗೋಣ 

ಜೊತೆಯಾಗಿ ಮಾಗೋಣ


ಜೊತೆಯಲ್ಲೇ ಸಾಗಿದರೂ

ಕೈ ಹಿಡಿದು ನೀ ನಡೆಸು

ಸ್ಫೂರ್ತಿ ತುಂಬಿ ನೀ ಹರಸು

ನೀ ಅಮ್ಮ.. ನಾ ಮಗುವು


ಜೊತೆಯಲ್ಲಿ ಸಾಗೋಣ 

ಜೊತೆಯಾಗಿ ಮಾಗೋಣ


~ವಿಭಾ ವಿಶ್ವನಾಥ್

ಅಕ್ಷಿ (ಪುಸ್ತಕ ಯಾನ - 491)


ಪುಸ್ತಕದ ಶೀರ್ಷಿಕೆ : ಅಕ್ಷಿ

ಲೇಖಕರು : ಎಂ. ಮನೋಹರ ಪೈ

ಪ್ರಕಾಶಕರು : ಸಾಹಿತ್ಯಸುಧೆ ಪ್ರಕಾಶನ

ಪ್ರಥಮ ಮುದ್ರಣ : 2024

ಪುಟಗಳು : 180

ಬೆಲೆ : 220 ರೂ. 


ಇದು ಲೇಖಕ ಮನೋಹರ ಪೈ ಅವರ ಮೂರನೇ ಕಾದಂಬರಿ. 


ವಾಸವಿ ಪಿನಾಕಿಯನ್ನು ಮದುವೆಯಾಗಿ ಬರುವ ಸಂದರ್ಭ ಸಹಜವೇನೂ ಆಗಿರಲಿಲ್ಲ. ನಡುವಯಸ್ಕ ಮಹಿಳೆಯ ಮಗಳು ಅಕ್ಷಿಯನ್ನು ಮುಜುಗರಕ್ಕೆ ದೂಡುವಂತಹ ವಿವಾಹವನ್ನು ವಾಸವಿ ಏಕಾದಳು..? ಎನ್ನುವ ಪ್ರಶ್ನೆಯಿಂದಲೇ ಕಾದಂಬರಿಯ ಓದು ಶುರುವಾಗುತ್ತದೆ. ಕಾಲೇಜಿಗೆ ಹೋಗುವ 18ರ ಹರೆಯದ ಮಗಳ ಕಣ್ಣಲ್ಲಿ ಅಪರಾಧಿನಿ ಆಗಬಹುದಾದರೂ.. ವಾಸವಿ ಹಿಂದೇಟು ಹಾಕದೆ ಪಿನಾಕಿಯನ್ನು ಮದುವೆಯಾದಾಗ ಅದು ಅವಳಿಗೆ ಗಂಡಿನ ಆಸರೆ ಒದಗಿಸುತ್ತದೆ ಹಾಗೂ ಮುಂದೊಂದು ದಿನ ಅಕ್ಷಿ ಕೂಡ ಇದಕ್ಕೆ ಹೊಂದಿಕೊಳ್ಳುತ್ತಾಳೆ ಎಂಬ ಭರವಸೆ ಇಟ್ಟುಕೊಂಡೇ ಕಾದಂಬರಿಯನ್ನು ಆರಂಭಿಸಿದೆ.


ಮಗಳಿಗೆ ಗೊತ್ತಿಲ್ಲದ ತಾಯಿಯ ಬದುಕಿನ ಕಥೆಯಂತೆಯೇ.. ವಾಸವಿಗೂ ಮಗಳ ಬದುಕಿನ ಕುರಿತು ಹೆಚ್ಚೇನೂ ತಿಳಿದಿಲ್ಲ. ಹದಿಹರೆಯದವರ ಭಾವನೆಗಳು ಅಷ್ಟು ಸುಲಭವಾಗಿ ಬಿಚ್ಚಿಡುವಂತಹದ್ದು ಅಲ್ಲವಲ್ಲ. ಇಬ್ಬರ ಬದುಕಿನ ಸಿಕ್ಕುಗಳು ಮುಂದೆ ಹೆಣೆದುಕೊಳ್ಳುತ್ತಾ, ಬಿಡಿಸಿಕೊಳ್ಳುತ್ತಾ ಸಾಗುವ ರೋಚಕ ಪಯಣ ಇಲ್ಲಿದೆ. 


ಅಕ್ಷಿಯ ಇಬ್ಬರು ಸ್ನೇಹಿತರು ರಾಧೇಶ ಹಾಗೂ ಚಾರ್ವಿ. ಈ ಮೂವರ ಲೋಕದಲ್ಲಿ ತುಂಟಾಟ, ಹುಡುಗಾಟ, ನಿಷ್ಕಾಮ ಪ್ರೇಮ, ಪರಿಶುದ್ಧ ಸ್ನೇಹ ಇದೆಲ್ಲದರ ಜೊತೆಗೆ ಇಂತಹ ಸ್ನೇಹ ಅಕ್ಷಿಯ ಪಾಲಿಗೆ ವರವಯಿತೇ ಅಥವಾ ಶಾಪವಾಯಿತೇ ಎಂದು ತಿಳಿಯಬಹುದು. ಚಾರ್ವಿಯ ಬದುಕನ್ನು ಒಂದು ದೃಷ್ಟಿಯಲ್ಲಿ ನೋಡಿದಾಗ ಮಾದಕದ್ರವ್ಯದ ವ್ಯಸನಿಯಂತೆಯೂ.. ಅಕ್ಷಿಯನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾಳೇನೋ.. ಅಕ್ಷಿಗೆ ಇವಳ ಸಹವಾಸ ಬೇಕಿತ್ತೇ ಎಂಬ ಪ್ರಶ್ನೆ ಮೂಡಿದರೂ.. ಚಾರ್ವಿಯ ಬದುಕು ಅಷ್ಟು ನೇರಾನೇರ ಆಗಿರಲಿಲ್ಲ ಹಾಗೂ ಅವಳ ಬದುಕಿನ ಸತ್ಯ ತಿಳಿದಾಗ ಬೇರೆ ಲೋಕವೇ ನಮ್ಮ ಕಣ್ಮುಂದೆ ಕಾಣಸಿಗುತ್ತದೆ.


ವಾಸವಿಯ ಗೊಂದಲಗಳಿಗೆ ಪರಿಹಾರ ನೀಡುತ್ತಿದ್ದ ಗೆಳತಿ ಅದಿತಿ ಅವಳ ಮದುವೆಗೂ ಸಹಾಯಕವಾಗಿಯೇ ನಿಂತಿದ್ದಳು. ಕೆಲಸದ ಆಳು ಶಾಂತಮ್ಮನೂ ಇದನ್ನು ತೀರಾ ವಿಶೇಷವೆಂಬಂತೆ ಕಂಡಿರಲಿಲ್ಲವಾದರೂ ವಾಸವಿಗೆ ಮುಜುಗರ ಇದ್ದೇ ಇತ್ತು. ಮಧ್ಯವಯಸ್ಸಿನ ವಾಸವಿಯ ಎರಡನೇ ವಿವಾಹ ಮಂಗಳೂರು ಸ್ಟೋರ್ಸ್ ನಡೆಸುತ್ತಿದ್ದ ಪಿನಾಕಿಯ ಜೊತೆಗಾದಡ್ಡು ಸಮಸ್ಯೆಯಾಗಿತ್ತೇ..? ಅಥವಾ ಅಕ್ಷಿ ತನ್ನ ತಂದೆ ಅನಿರುದ್ಧನ ಮೇಲಿಟ್ಟಿದ್ದ ಭಾವ ಇದಕ್ಕೆ ಅಡ್ಡಿಯಾಯಿತೇ..? ತಾಯಿ ತಿಂಗಳಿಗೆ ಎರಡು ಬಾರಿ ಯಾರನ್ನೋ ಭೇಟಿಯಾಗಿ ಬರುತ್ತಿದ್ದುದಕ್ಕೆ ಅಕ್ಷಿ ಕಲ್ಪಿಸಿದ ಅರ್ಥ ಇಲ್ಲಿ ತಪ್ಪಾಗಿತ್ತೇ..? 


ಅಕ್ಷಿ ಇಲ್ಲಿ ತಾಯಿ ತನ್ನ ಮೇಲಿಟ್ಟಿದ್ದ ಪ್ರೀತಿ ಕಡಿಮೆಯಾಯಿತು ಎಂಬ ಭಾವದಲ್ಲೋ ಅಥವಾ ತಾಯಿಯಿಂದ ದೂರಾದ ಸಂದರ್ಭದಲ್ಲಿಯೋ.. ಅನುಭವಿಸುವ ನೋವಿನಲ್ಲಿಯೇ ಯಾವುದೋ ಮಾನಸಿಕ ವೇದನೆಗೆ ಗುರಿಯಾಗುತ್ತಾಳಾ ಎಂದನಿಸಿದರೂ ಹಾಗಾಗದೆ ಹಫೇಫೋಬಿಯಾ ಆರಂಭವಾಯ್ತು ಎಂದೆನಿಸುವಂತೆ ಮಾಡಿದ ಸಂಧರ್ಭಗಳೇನು..?


ಕಾಲೇಜಿನಲ್ಲಿ ಧಾತ್ರಿ ಮೇಡಂ ಹಾಗೂ ಡಿಕೆ ಸರ್ ಇಬ್ಬರೂ ತಮ್ಮ ವಿದ್ಯಾರ್ಥಿಗಳು ಕುರಿತು ತೋರಿದ ಕಾಳಜಿ ಹಾಗೂ ಅವರಿಬ್ಬರ ಕುರಿತು ಚಾರ್ವಿ, ರಾಧೇಶ ಹಾಗೂ ಅಕ್ಷಿಗಿದ್ದ ಭಾವಗಳು ಕಾಣುತ್ತಾ ಹೋಗುತ್ತವೆ.


ದಿನ ಕಳೆದಂತೆ ಪಿನಾಕಿಯನ್ನು ಸಹಜವಾಗಿ ಮಾತನಾಡಿಸುತ್ತಾ ಅಕ್ಷಿ ಆತನಿಗೆ ಹತ್ತಿರವಾಗುತ್ತಾ ಹೋಗುವುದು ವಾಸವಿಗೆ ಸಮಾಧಾನ ತರುತ್ತದೆ ಎಂದುಕೊಂಡರೆ ಅವಳಲ್ಲಿ ದಿನೇದಿನೇ ಭಯ ಹೆಚ್ಚಾಗುತ್ತಲೇ ಹೋಗುವುದೇಕೆ..?

ವಾಸವಿಯ ಈ ಅಭದ್ರತೆಯನ್ನು ಪಿನಾಕಿ ಹಾಗೂ ಅಕ್ಷಿಯರ ಬಳಿ ಹಂಚಿಕೊಂಡಾಗ ಅವರಿಬ್ಬರ ಸ್ಪಂದಿಸುವಿಕೆ ಹೇಗಿತ್ತು..? ಕನ್ಯಾಕುಮಾರಿಯಲ್ಲಿ ನಡೆದ ಘಟನೆ ಯಾರಲ್ಲಿ ಯಾವ ಭಾವವನ್ನು ಮೂಡಿಸುತ್ತದೆ..?


ಈ ಕಾದಂಬರಿ ಕೇವಲ ಕೌಟುಂಬಿಕ ಕಾದಂಬರಿಯ ಆಯಾಮವಾಗಿಲ್ಲ ಬದಲಾಗಿ ಇದನ್ನು ರೋಚಕ ಕಾದಂಬರಿಯಾಗಿ ಕಟ್ಟಿಕೊಡುತ್ತಾ ಹೋಗುವಾಗ ಬದಲಾಗುವ ಅಕ್ಷಿ ಮಾತ್ರವಲ್ಲದೆ, ಬದಲಾಗುವ ಪಿನಾಕಿ ಕಾಣಸಿಗುತ್ತಾರೆ. ಅಲ್ಲಲ್ಲಿ ಬದಲಾಗುವ ಪಿನಾಕಿಯ ವರ್ತನೆ ಹಾಗೂ ಸ್ಪಂದನೆಗಳು ಮೊದಲಿನಿಂದಲೂ ಓದುಗರಲ್ಲಿ ಅನುಮಾನ ಮೂಡಿಸುತ್ತಲೇ ಸಾಗಿದರೂ ಕೆಲವೊಮ್ಮೆ ಇದು ನಿಜವೇ ಎನ್ನುವಂತಾಗುತ್ತದೆ. ಮುಂದೆ ಪಿನಾಕಿಯ ಹಿನ್ನೆಲೆ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ.


ರಾಧೇಶ, ಚಾರ್ವಿ ಹಾಗೂ ಅಕ್ಷಿಯರ ಸ್ನೇಹ ಗಾಢವಾಗುತ್ತಾ.. ಪರಸ್ಪರರು ಅರ್ಥವಾಗುತ್ತಾ ಹೋಗುವಾಗ ತುಂಟಾಟದ ನಡೆಗಳು, ಮಾತುಗಳು ಆಪ್ತವಾಗುತ್ತವೆ. ಮುಂದುವರಿದ ಈ ಸ್ನೇಹದ ಕ್ಷಣಗಳು ಟ್ರಕಿಂಗ್ ಹೋಗುವ ನಿರ್ಧಾರದಿಂದ ಮತ್ತಷ್ಟು ಹೆಚ್ಚಾಗುತ್ತದೆ. ಸುಬ್ರಮಣ್ಯ ಹಾಗೂ ಕುಮಾರ ಪರ್ವತದ ಟ್ರಕ್ಕಿಂಗ್ ನ ಪ್ರಸಂಗಗಳು ಸಹಜವಾಗಿ ಮೂಡಿಬಂದಿವೆ. ಇಲ್ಲಿಂದ ಮುಂದೆ ಕಥೆ ವೇಗವಾಗಿ ಹಾಗೂ ವಿಭಿನ್ನವಾದ ತಿರುವುಗಳನ್ನು ಪಡೆಯುತ್ತಾ ಸಾಗುತ್ತದೆ. ಸುಬ್ರಹ್ಮಣ್ಯದ ದೇವಸ್ಥಾನ ಹಾಗೂ ಬ್ರಹ್ಮರಕುದ್ರುವಿಗೆ ಹೋದಾಗ ಅಲ್ಲಿದ್ದ ಅಜ್ಜಿ ಎಂದೂ ಅಕ್ಷಿಯನ್ನು ನೋಡಿದಿದ್ದರೂ ಅವಳನ್ನು ಕುರಿತು ಹಾಗೆ ಮಾತನಾಡಿದ್ದಕ್ಕೆ ಕಾರಣವೇನಿತ್ತು..? ಅಜ್ಜಿಯ ಜೊತೆಗಿದ್ದ ರಮೇಶ ಅದನ್ನು ಅರ್ಥೈಸಿಕೊಂಡದ್ದು ಹೇಗೆ..? ತುಳು ಭಾಷೆಯ ಸಂಭಾಷಣೆಗಳು ಹಾಗೂ ಅದರ ಕನ್ನಡ ಅನುವಾದ ಎರಡೂ ಪ್ರಾದೇಶಿಕ ಪರಿಸರವನ್ನು ಕಟ್ಟಿಕೊಳ್ಳುತ್ತಾ ಅಲ್ಲಿನ ಪರಿಸರ, ಭಾಷೆಯನ್ನರಿಯದ ಓದುಗರಿಗೂ ಅರ್ಥವಾಗುವಂತೆ ಮೂಡಿಬಂದಿದೆ.


ಬ್ರಹ್ಮರ ಕುದ್ರು ಕಥೆಗೆ ಹೊಸ ಆಯಾಮವನ್ನೇ ಕೊಡುವ ಜಾಗ. ಅಕ್ಷಿ ಅಲ್ಲಿಗೆ ಹೋಗಿ ಬರುತ್ತಾಳಾದರೂ.. ಅದು ಉದ್ದೇಶಪೂರ್ವಕ ಭೇಟಿಯಲ್ಲ. ಅಲ್ಲಿ ಕಾಣುವ ಒಗಟುಗಳನ್ನು ಬಿಡಿಸುತ್ತಾ ಸಾಗುವ ಪರಿ ಓದುಗರಲ್ಲಿಯೂ ಮುಂದೇನು ಎಂಬ ಕುತೂಹಲ ಮೂಡಿಸುತ್ತದೆ.  


ವಾಸವಿ ಬದಲಾದ ದಿನಗಳು, ಮನಸ್ಥಿತಿಯಿಂದ ಎಲ್ಲರನ್ನೂ ಅನುಮಾನದಿಂದಲೇ ನೋಡುತ್ತಿದ್ದಾಳೇನೋ ಎಂಬ ಸಂದೇಹ ಹುಟ್ಟುತ್ತದೆ. ಪಿನಾಕಿ, ಅಕ್ಷಿ, ಅದಿತಿ, ಶಾಂತಮ್ಮ ಎಲ್ಲರೂ ವಾಸವಿಯ ದೃಷ್ಟಿಯಲ್ಲಿ ಕಂಡುಬರುವುದು ಹೇಗೆ..? ಅವಳ ಸಂದೇಹ ಹಾಗೂ ವಾಸ್ತವ ಎಷ್ಟು ಒಪ್ಪುತ್ತವೆ..? 


ಪ್ರೊಫೆಸರ್ ಡಿಕೆ ಅಕ್ಷಿಯ ತಾಯಿಯನ್ನು ಭೇಟಿ ಮಾಡಲು ಮುಂದಾಗಿ ಹೇಳು ಕಳುಹಿಸಿದಾಗ ಬಂದ ವಾಸವಿ ಹಾಗೂ ಡಿಕೆ ಇಬ್ಬರಿಗೂ ಅಚ್ಚರಿಯಾಗಿದ್ದೇಕೆ..?


ಶಂಭು? ಕಿನ್ನಿಬಾಲೆ?

ವಾಸವಿ ಕಾಲೇಜ್ ಕ್ಯಾಂಟೀನ್ ನಲ್ಲಿ ಆತನನ್ನು ಭೇಟಿಯಾದಾಗ ಆ ಭೇಟಿ ಇಬ್ಬರಿಗೂ ಅಚ್ಚರಿಯೇ. ಅದುವರೆಗೂ ಪ್ರೊಫೆಸರ್ ಡಿಕೆಗೆ ಬಹಳಷ್ಟು ಗೌರವ ಕೊಡುತ್ತಿದ್ದ ಶಂಭು ಬದಲಾದದ್ದೇಕೆ..?


ಪಿನಾಕಿ ಮಂಗಳೂರು ಸ್ಟೋರ್ಸ್ ಅನ್ನು ಬಿಟ್ಟು ತಾನು ಹೊಸ ಉದ್ಯಮವೊಂದನ್ನು ಆರಂಭಿಸುವ ಕುರಿತು ವಾಸವಿಯ ಮುಂದೆ ಹೇಳಿದಾಗ ಅವಳು ಅದಕ್ಕೆ ಪ್ರತಿಕ್ರಿಯಿಸಿದ್ದು ಹೇಗೆ..?


ಎಲ್ಲ ಬಿಂದುಗಳು ಮುಂದೆ ಬ್ರಹ್ಮರ ಕುದ್ರುವಿನಲ್ಲಿ ಬೆಸೆಯುತ್ತವೆ. ಕಥೆಯ ರೋಚಕ ತಿರುವು ಇರುವುದು ಇಲ್ಲಿಯೇ. 


ಅಕ್ಷಿ ಎಂಬ ಹೆಸರು ಅವಳು ಹುಟ್ಟಿದ ಮೇಲೆ ತೀರ್ಮಾನಿಸಿದ್ದಲ್ಲ. ಅದರ ಹಿಂದಿನ ಅರ್ಥ ಬಹಳ ಗಾಢವಾಗಿದೆ. ತನ್ನ ಕಣ್ಣಿನ ಕಣ್ಮಣಿಯಂತೆ ಅಕ್ಷಿಯನ್ನು ಕಾಪಾಡಿಕೊಳ್ಳುವ ತಾಯಿ ವಾಸವಿ ಅಕ್ಷಿಗೆ ತಿಳಿಸದೆ ಇದ್ದ ಸತ್ಯ ಯಾವುದು..?


ಚಾರ್ವಿಯ ಮಾದಕದ್ರವ್ಯದ ವ್ಯಸನ ಕೊನೆಯಾಯಿತೇ..? ಚಾರ್ವಿ ಮಾತ್ರವಲ್ಲ, ಅವಳಂತಹ ಅನೇಕರು ಇಂತಹ ವ್ಯಸನಕ್ಕೆ ಬಲಿಯಾದ ಪರಿ ನಿಜಕ್ಕೂ ಚಿಂತಾಜನಕ. ಅಂತಹ ಜಾಲ ಕೊನೆಯಾಗುವುದೇ..? ತಡೆಯಾಗುವುದೇ..? 


ಎಲ್ಲ ಗೊತ್ತಿದ್ದರೂ ಚಾರ್ವಿ ಹಾಗೂ ಅಕ್ಷಿಯರ ನಿಷ್ಕಲ್ಮಶ ಸ್ನೇಹ ಹಾಗೂ ರಾಧೇಶನ ಸ್ನೇಹ, ಪ್ರೇಮದ ಭಾವಗಳಲ್ಲಿ ಎಲ್ಲಿಯೂ ಅತಿಶಯೋಕ್ತಿ ಕಾಣಲಿಲ್ಲ.


ಎಲ್ಲ ಕಥೆಯೂ ಕೊನೆಯಾಗುವುದು ಕೆಟ್ಟದ್ದರ ಅಂತ್ಯ ಹಾಗೂ ಒಳಿತಿನ ಆರಂಭದೊಂದಿಗೆ. ಆದರೆ ಕೆಲ ಚಿಕ್ಕ-ಪುಟ್ಟ ಪಾತ್ರಗಳು ಕೆಟ್ಟದರೊಂದಿಗೆ ಭಾಗಿಯಾದರೂ ಯಾವುದೇ ಶಿಕ್ಷೆ ಪಡೆಯದೆ ಉಳಿದುಬಿಟ್ಟರಾ ಎನ್ನಿಸಿದರೂ.. ಕಾಲವೇ ಅದಕ್ಕೆ ತಕ್ಕ ಉತ್ತರ ಕೊಡುತ್ತದೆ ಎನ್ನುವ ಭಾವದೊಂದಿಗೆ ಲೇಖಕರು ಬಿಟ್ಟು ಬಿಟ್ಟರೇನೋ ಎನ್ನಿಸಿತು. 


ಇಡೀ ಕಾದಂಬರಿಯಲ್ಲಿ ರೋಚಕ ಹಾಗೂ ಕಾನೂನುಬಾಹಿರ ಕೆಲಸಗಳ ವಿಚಾರವಿದ್ದರೂ.. ಪೊಲೀಸರ ಅಥವಾ ಗೂಢಾಚಾರಿಗಳ ಪಾತ್ರಗಳು ಇದರಲ್ಲಿಲ್ಲ. ಯಾರೋ ಅತಿ ಬುದ್ಧಿವಂತಿಕೆಯಿಂದ ಒಬ್ಬರೇ ನಿಂತು ಇದೆಲ್ಲವನ್ನು ಭೇದಿಸಿದರು ಎಂಬರ್ಥವೂ ಅಲ್ಲ.. ಹಾಗಾಗಿ ಕಾದಂಬರಿ ಸಹಜವಾದ ವಾತಾವರಣದೊಂದಿಗೆ ಕಾಣುತ್ತಾ ಹೋಗುತ್ತದೆ. ನಾಟಕೀಯತೆ ಇಲ್ಲದಂತಹ ಸಹಜ ಸಂಭಾಷಣೆಗಳು ಅದರಲ್ಲಿಯೂ ರಾಧೇಶ, ಚಾರ್ವಿ, ಅಕ್ಷಿಯರ ಸಂಭಾಷಣೆಗಳು ಮುದ ನೀಡುತ್ತವೆ. 


ಉತ್ತರಾರ್ಧದಿಂದ ವೇಗ ಪಡೆಯುವ ಕಾದಂಬರಿಯ ಕೊನೆಯ ಭಾಗ ಸಾಕಷ್ಟು ರೋಚಕ ತಿರುವುಗಳನ್ನು ಹೊಂದಿದೆ. ಕಥೆಯ ತಿರುವುಗಳನ್ನು ಊಹಿಸಲಂತೂ ಆಗಲಿಲ್ಲ. ಒಂದೊಳ್ಳೆ ವೆಬ್ ಸೀರೀಸ್ ಆಗಬಹುದಾದ ಕಾದಂಬರಿ ಇದು.


~ವಿಭಾ ವಿಶ್ವನಾಥ್