ಪುಸ್ತಕದ ಶೀರ್ಷಿಕೆ : ಬೆಳ್ಳಕ್ಕಿಗಳ ಲೋಕದಲ್ಲಿ
ಕೃತಿ ಪ್ರಕಾರ : ಕಥಾ ಸಂಕಲನ
ಲೇಖಕರು : ರಾಘವೇಂದ್ರ ಪಾಟೀಲ
ಪ್ರಕಾಶಕರು : ಸಾಹಿತ್ಯ ಪ್ರಕಾಶನ
ಪ್ರಥಮ ಮುದ್ರಣ : 2026
ಪುಟಗಳು : 208
ಬೆಲೆ : 300 ರೂ.
ಲೇಖಕರು ವಿಭಿನ್ನವಾಗಿ ತಮ್ಮ ನಾಕು ಮಾತಿನಲ್ಲಿ ತಾವು ಕಥಾಲೋಕ ಪ್ರವೇಶಿಸಿದ ಬಗೆಯನ್ನು ಹೇಳುತ್ತಾರೆ. ಅದೇ ಒಂದು ಪುಟ್ಕಥೆಯಂತೆ ಚೆಂದದ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಈ ಕಥಾ ಸಂಕಲನದಲ್ಲಿ ಇವರ 5 ಬೇರೆಯ ಕಥಾ ಸಂಕಲನದಲ್ಲಿನ ಆಯ್ದ ಎಂಟು ಕಥೆಗಳನ್ನು ಸಂಕಲಿಸಿ ನೀಡಿದ್ದಾರೆ.
ಬೆನ್ನುಡಿಯಲ್ಲಿ ಡಾ. ಜಿ. ಎಸ್. ಆಮೂರರು ಪಾಟೀಲರ ಕಥೆಗಳ ಕುರಿತಾಗಿ ಹೇಳುವಾಗ "ಪಾಟೀಲರು ಬದುಕನ್ನು ನೋಡುವ ದೃಷ್ಟಿಯಲ್ಲಿ ಆಧುನಿಕತೆ ಇದೆ. ಈ ದೃಷ್ಟಿ ನಿರ್ಲಿಪ್ತ ಹಾಗೂ ವಸ್ತುನಿಷ್ಠವಾದದ್ದು." ಎಂದು ಉಲ್ಲೇಖಿಸುತ್ತಾರೆ.
"ಪಾಟೀಲರ ಆಧುನಿಕತೆಯ ಇನ್ನೊಂದು ಲಕ್ಷಣವೆಂದರೆ ಬದುಕಿನಲ್ಲಿ ಸಫಲತೆಗಿಂತ ಸೋಲು ಹಾಗೂ ಅವನತಿಗಳೇ ಅವರ ದರ್ಶನದ ಪ್ರಮುಖ ಅಂಶಗಳಾಗಿರುವುದು. ಇದರ್ಥ ಅವರು ಬದುಕನ್ನು ಸರಳಗೊಳಿಸುತ್ತಾರೆ ಎಂದೇನಲ್ಲ. ಬದುಕನ್ನು ಅವರು ವಿಸ್ಮಯದಿಂದಲೇ ನೋಡುತ್ತಾರೆ ಹಾಗೂ ಸೃಜನಶೀಲತೆ ಬದುಕಿನ ರಹಸ್ಯಗಳಿಗೆ ಆಕಾರ ಕೊಡುವುದರಲ್ಲಿಯೇ ತನ್ನ ಶಕ್ತಿಯನ್ನು ವಿನಿಯೋಗಿಸುತ್ತದೆ" ಎನ್ನುತ್ತಾರೆ.
ಹಿನ್ನುಡಿಯ ಈ ಮಾತುಗಳನ್ನು ಏಕೆ ಉಲ್ಲೇಖಿಸಿದೆನೆಂದರೆ ಪಾಟೀಲರ ಕಥೆಗಳಲ್ಲಿ ನನಗೆ ಸೃಜನಶೀಲತೆ ಹಾಗೂ ಅವರು ಪ್ರತಿಮೆಗಳಂತೆ ಕಥೆಗಳನ್ನು ಕಟ್ಟಿಕೊಟ್ಟಿರುವ ಬಗೆ ನಿಜಕ್ಕೂ ವಿಸ್ಮಯವೆನ್ನಿಸಿತು. ಪಾಟೀಲರ ಕಥಾಲೋಕದ ಓದು ಬೇರೆಯದ್ದೇ ಅನುಭವವನ್ನು ನೀಡುತ್ತದೆ. ಇಲ್ಲಿನ ಕಥೆಗಳು ಎಂದಿನಂತೆ ಸರಾಗವಾಗಿ ಓದಿಸಿಕೊಂಡು ಹೋಗುವಂತಹವಲ್ಲ. ಹಾಗೆಂದು ಕ್ಲಿಷ್ಟವೂ ಅಲ್ಲ. ಕಥೆಗಳ ನೀತಿಗಳನ್ನು ಒಂದು ಸಾಲಿನಲ್ಲಿ ಬಿಚ್ಚಿಡಬಹುದಾದರೂ.. ಕಥೆ ಕೊಟ್ಟ ನೀತಿಯನ್ನಷ್ಟೇ ಪರಿಗಣಿಸಬೇಕಾ ಎಂದುಕೊಳ್ಳುವಷ್ಟರಲ್ಲಿ ಕಥೆಯ ಭಾಷೆ, ಕಥೆಯನ್ನು ಕಟ್ಟಿಕೊಟ್ಟ ಸ್ವರೂಪ, ಪಾತ್ರಗಳನ್ನು ಕಣ್ಮುಂದೆ ಕಡೆದಂತೆ ನಿಲ್ಲಿಸುವ ಪರಿ, ವ್ಯಕ್ತಿಯ ಸ್ವಭಾವವನ್ನು ಎಳೆಎಳೆಯಾಗಿ ಬಿಚ್ಚಿಡುವ ವರ್ತನೆಗಳು ಎಲ್ಲವೂ ಹೊಸ ಲೋಕವೇ.. ನಿಜಕ್ಕೂ ಸಣ್ಣ ಕಥೆ ಬರೆಯುವವರು ಪಾಟೀಲರನ್ನು ಓದಿಕೊಳ್ಳಲೇಬೇಕು ಎಂದೆನಿಸಿತು. ಇಲ್ಲಿನ ಭಾಷೆಯ ಕಾರಣದಿಂದ ಓದು ನಿಧಾನವಾಗಿ ಸಾಗುತ್ತದಾದರೂ ಕಥೆಯೊಳಗೆ ಸೇರಿಕೊಂಡು ಸವಿಯುತ್ತಾ ಸಾಗುತ್ತೇವೆ.
ಈ ಸಂಕಲನದ ಕಥೆಗಳನ್ನು ವಿಶ್ಲೇಷಿಸುವುದನ್ನು ಸುಲಭದ ಮಾತಲ್ಲ. ನನಗೆ ದಕ್ಕಿದಂತೆ.. ಇಷ್ಟವಾದ ಸಂಗತಿಗಳನ್ನು ಅರ್ಥೈಸಿಕೊಂಡಂತೆ ಹೇಳುತ್ತೇನೆ.
ಒಡಪುಗಳು : ಅಜ್ಜಿಯ ಮುದ್ದಿನ ಮೊಮ್ಮಗನಿಗೆ ಶಾಲೆಗೆ ಹೋಗಲು ಇಷ್ಟವಿಲ್ಲದಿದ್ದರೂ ಅಪ್ಪನ ಬಯಕೆಂಬಂತೆ ಕಾಲಿಟ್ಟವನಿಗೆ ಮೊದಲನೇ ಕ್ಲಾಸಿನ ಕ್ಲಾಸ್ಮೇಟು 'ಹನುಮಿ'
"ದಯವಿಟ್ಟು ನನ್ನ ಮತ್ತು ಹನುಮಿಯ ಮಧ್ಯದ ಸಂಬಂಧ ಇಂಥದ್ದು ಎಂದು ಕಲ್ಪಿಸಿಕೊಳ್ಳಬೇಡಿರಿ." ಎನ್ನುತ್ತಲೇ ಅದು ಅಷ್ಟು ಸುಲಭವಾಗಿ ವ್ಯಾಖ್ಯಾನಕ್ಕೆ ಸಿಕ್ಕುವಂತೆ ಸರಳವಾದುದಲ್ಲ. ಅಲ್ಲದೆ, ಮುಂದೆ ಹೇಳುವುದರ ಎದುರಲ್ಲಿ ಅದು ಗೌಣವೂ ಅಲ್ಲ ಎನ್ನುತ್ತಾರೆ. ಗಂಡು-ಹೆಣ್ಣಿನ ನಡುವಿನ ಅವಕಾಶಗಳ, ಬದುಕಿನ ವ್ಯತ್ಯಾಸವನ್ನು ತೋರುತ್ತಲೇ.. ಎಂ.ಎ ಓದಲು ಹೋಗಿ ಮಧ್ಯದಲ್ಲಿ ಬಂದಾಗ ಹನುಮಿಗೆ ಮದುವೆಯಾಗಿ ಅದಾಗಲೇ ನಾಲ್ಕು ವರ್ಷವಾಗಿತ್ತು. ಮಕ್ಕಳಿರಲ್ಲಿಲ್ಲ. ಹನುಮಿಯ ಕುರಿತ ಆಸಕ್ತಿ ಕಡಿಮೆಯಾದರೂ ಅಳಿಸಿ ಹೋಗುವಂತದ್ದಲ್ಲ. ಹನುಮಿಯ ಬದುಕು ಬದಲಾಗುತ್ತಾ ಹೋದ ಹಾಗೆ ಕೊನೆಯಲ್ಲಿ ಒಂದು ಒಡಪು ಸಿಗುತ್ತದೆ. ಅವಳು ಕೊಟ್ಟ ಒಡಪನ್ನು ಓದುಗರಾಗಿ ಬಿಡಿಸಿ ನೋಡಿ.
ಪ್ರತಿಮೆಗಳು : ಇಬ್ಬರು ಪುಟ್ಟ ಹುಡುಗರು. ಬಸುವಿನ ಜೊತೆಗೆ ಹೋಗಿ ಮತ್ತೊಬ್ಬನ ಮಾತು ಕೇಳಿ.. ಶಾಲೆಯಲ್ಲಿ ಮಾಸ್ತರರು ಹೇಳಿದ ಕಥೆ ಕೇಳಿ ಸಂಜೀವಿನಿ ಗಿಡ ಹುಡುಕಲು ಹೋದ ರಸವತ್ತಾದ ಪ್ರಸಂಗದಿಂದ ಶುರುವಾದ ಕಥೆ ಬಸು ನಪಾಸಾಗಿ ಅಪ್ಪನ ಜೊತೆಯಲ್ಲಿ ಒಕ್ಕಲುತನಕ್ಕೆ ನಿಂತದ್ದು ಹಾಗೂ ಇವರು ಮುಂದೆ ಬಿ.ಎ ಮಾಡಿಕೊಂಡು ಎಲ್ಲೆಡೆ ಕೆಲಸಕ್ಕೆ ಅರ್ಜಿ ಹಾಕುವ ಸಂದರ್ಭದಲ್ಲಿ ಬಸುವಿಗೆ ವಿವಾಹವಾಗಿದ್ದು. ಬಸುವಿನ ವೈವಾಹಿಕ ಜೀವನ, ಗೆಳೆಯನಾದರೂ ಹಂಚಿಕೊಳ್ಳಲಾಗದ ಪ್ರಸಂಗಗಳು.. ಮುಂದೆ ಆತನ ಪತ್ನಿ ಕಮಲನಮ್ಮೊಡನೆ ಜೋಕಾಲಿ ಆಡುವ ಚಿತ್ರಣವನ್ನು ಹೇಳುತ್ತಲೇ ಬಸುವಿನ ಆಘಾತಕಾರಿ ಸನ್ನಿವೇಶವನ್ನು ತೋರುತ್ತಾರೆ. ಜೋಕಾಲಿ, ಬಸುವಿನ ಆವೇಶ, ಒಡಲುರಿ, ಬಸುವಿನ ಕೊಡಲಿಯ ಪೆಟ್ಟು ಹೆಚ್ಚಾಗಿಯೇ ಕಾಡುತ್ತದೆ.
ಬಸತ್ತಿ : ಮೊದಲಿಗೆ ಇಲ್ಲಿ ಕೇಸಿನ ಪ್ರಸ್ತಾಪವಿದ್ದರೂ.. ಬಸತ್ತಿಯ ವಿಚಾರ ಕೇಸಿನಷ್ಟೇ ಪ್ರಮುಖವಾಗಿದೆ. ಅಜ್ಜಿ ಸತ್ತ ನಂತರ ಅಜ್ಜ ಅಪ್ಪನಿಗೆ 18 ವರ್ಷವಾಗುವ ತನಕ ಹಾಗೆಯೇ ಉಳಿದದ್ದು.. ಮುಂದೆ ಶಿವಜ್ಜಿಯನ್ನು ಉಡಿಕೀ ಮಾಡಿಕೊಂಡದ್ದು, ನಂತರ ಶಿವಜ್ಜಿ ಬಸವ್ವನನ್ನು ಹೆತ್ತು ಸತ್ತದ್ದು. ತನ್ನ ತಾಯಿಯೇ ಅವಳನ್ನು ದೊಡ್ಡದು ಮಾಡಿದ್ದನ್ನು ನೆನೆಸಿಕೊಳ್ಳುತ್ತಲೇ ಅಕ್ಕನಂತಿದ್ದ ಅವಳು ಅತ್ತೆಯಾದ ಪರಿ... ಗೆಳೆತನಕ್ಕಿಂತ ಅವಳ ಹಿರಿತನದ ಅರಿವು ಕಾಣಿಸುತ್ತದೆ.
ತನ್ನ ಓದಿನ ಜೊತೆ ಜೊತೆಗೆ ಬಸತ್ತಿಗೆ ಬರುತ್ತಿದ್ದ ವಿವಾಹದ ಪ್ರಸ್ತಾಪಗಳು.. ಬಸತ್ತಿಯ ವಿವಾಹ ಅಂದುಕೊಂಡಷ್ಟು ಸುಲಭವಾಗದೆ ಉಳಿದದ್ದಕ್ಕೆ ಕಾರಣ ಆಕೆಯ ಜನ್ಮ ವೃತ್ತಾಂತವೇ..? ರಾಜಕೀಯವೇ..?
ಎಲ್ಲಿಂದ ಎಲ್ಲಿಯ ರಾಜಕೀಯ ಎನ್ನುತ್ತೀರಾ..? ತಂದೆ ಹಾಗೂ ಮಗ ಇಬ್ಬರೂ ಬೇರೆ ಬೇರೆಯಾಗಿಯೇ ರಾಜಕೀಯದ ರಣರಂಗಕ್ಕೆ ಸಾಕ್ಷಿಯಾದ ಪ್ರಸಂಗಗಳೊಂದಿಗೆ ಬಸತ್ತಿಯ ವಿವಾಹ ಹಾಗೂ ಬದುಕು ಎರಡು ದುಸ್ತರವಾಗುತ್ತಾ ಸಾಗುವ ಪರಿಯಿದೆ.
ಅಂದಹಾಗೆ ಅಪ್ಪ ಜೈಲಿನಲ್ಲಿದ್ದರೂ ಅವರಿಗೆ ಜಿದ್ದು, ಅಂದ ಹಾಗೆ ಯಾವ ಕೇಸು ಯಾವ ಕಾರಣಕ್ಕೆ..? ಬಸತ್ತಿ ಏನಾದಳು..? ಓದಿ ನೋಡಿ.
ಕಥೆಯ ಹುಚ್ಚಿನ ಕರಿಟೊಪಿಗಿಯ ರಾಯ : ಕರಿಟೊಪಿಗಿಯ ರಾಯರು ಗೋಕಾಂವಿಯ ಬಸ್ ಸ್ಟ್ಯಾಂಡಿನಲ್ಲಿ ಪರಿಚಯವಾದದ್ದು.. ಬಸ್ ಕ್ಯಾನ್ಸಲ್ ಆಗಿದ್ದಕ್ಕೆ ಬೇಸರ ಮಾಡಿಕೊಳ್ಳಬೇಡಿ ಎನ್ನುತ್ತಾ ಶುರುವಾದ ಹರಟೆ, ಊರು ಮನೆತನ ಜೊತೆಗೆ ಒಕ್ಕಲುತನದ ಎಲ್ಲಾ ವಿಚಾರಗಳನ್ನು ಹೇಳುತ್ತಾ.. ಕೇಳುತ್ತಾ ಮಾತುಕತೆ ಸಾಗಿತ್ತು. ಅವರೊಡನೆ ಕೋರ್ಟಿಗೆ ಹೋಗಿ ಕೋರ್ಟಿನಲ್ಲಿ ಕೇಸು ಗೆದ್ದಾಗ 'ಸತ್ಯಮೇವ ಜಯತೆ' ಎಂದು ಹುರ್ರೆ ಎನ್ನುವಂತೆ ಜಿಗಿದದ್ದು, ಟೊಪಿಗೆ ತೂರಿದ ಚಿತ್ರಗಳನ್ನು ನೆನಪಿಸಿಕೊಳ್ಳುತ್ತಲೇ ಇದ್ದು.. ಅವರ ಚಿತ್ರ ಇನ್ನೇನು ಮನಸ್ಸಿನಿಂದ ಕಡಿಮೆಯಾಗುವ ಹೊತ್ತಿಗೆ ಕಲ್ಲೋಳಿಗೆ ನೇರವಾಗಿ ಬಂದು ಪಟ್ಟು ಹಿಡಿದು ತಮ್ಮೊಡನೆ ಊರಿಗೆ ಕರೆದುಕೊಂಡು ಹೋಗಿದ್ದರ ಹಿಂದೆ ಮತ್ತೊಂದು ಕಥೆಯೇ ಇತ್ತು. ಅದಕ್ಕೆ ಕಾರಣವೇನು..? ಶೀರ್ಷಿಕೆ ನೋಡಿ ಸ್ವಲ್ಪಮಟ್ಟಿಗೆ ಇದನ್ನು ಊಹಿಸಬಹುದಾದರೂ ಈ ಕಥೆಯ ಅಂತ್ಯವಂತೂ ಊಹಿಸಲಾಗದ್ದು.
ಬೆಳ್ಳಕ್ಕಿಗಳ ಲೋಕದಲ್ಲಿ : ಪರಿವ್ಯಾ ಪರವ್ವನ ಮಗ. ಆಕೆಯ ಗಂಡ ಯಲ್ಯಾ. ಪರವ್ವನಿಗೂ ಊರ ಗೌಡನಿಗೂ ಸಂಬಂಧವಿತ್ತು ಎಂದು ಮಾತನಾಡುವವರಿಗೆ ಸಡ್ಡು ಹೊಡೆಯುವಂತೆ ಅದು ನಿಜವೇ ಎನ್ನುವಂತೆ ನಡೆದುಕೊಂಡ ಗೌಡರು ಆಕೆಗೆ ಕೊಟ್ಟ ಪತ್ರದಲ್ಲಿ ಏನಿತ್ತು..? ಪರಿವ್ಯಾ ಗೌಡರ ಕಲ್ಲು ನೆಲವನ್ನು ಹಸನಾಗಿಸಿ, ಬಿತ್ತಿ ಸಾಗುವಳಿ ಮಾಡಿ ಬಾವಿ ತೋರಿಸಿ ಎಲ್ಲರಿಗೂ ಮಾದರಿಯಾಗುತ್ತಿದ್ದರೆ.. ಯಲ್ಯಾ ಹಾಗೂ ಗೌಡರು ಇಬ್ಬರ ಕಾಲವೂ ಮುಗಿದಿತ್ತು. ಗೌಡರ ಒಬ್ಬನೇ ಮಗ ಭದ್ರಗೌಡ ಹೊಲದ ವಿಚಾರ ಗೊತ್ತಿದ್ದರೂ ನಿರ್ಲಕ್ಷಿಸಿ ಸುಮ್ಮನಾಗಿದ್ದ.
ಎಲ್ಲವೂ ಮತ್ತೆ ಹೊತ್ತಿ ಉರಿಯತೊಡಗಿದ್ದು ಪರಿವ್ಯಾನ ಮಗ ಸಂತ್ರಾಮನಿಂದ. ಗುಡಿಸಲಿಗೆ ಬೆಂಕಿಯನ್ನೇ ಹೊತ್ತಿಸಿದ್ದ ಸಂತ್ರಾಮನ ಛಾಳಿ ಬದುಕಿಗೂ ದಾಂಗುಡಿ ಇಟ್ಟಿತು. ಇಲ್ಲಿ ಮೂರು ತಲೆಮಾರುಗಳ ವಿಭಿನ್ನ ನಳವಳಿಕೆ, ನೋಟ, ಜಾತೀಯತೆ, ಆಲೋಚನೆಗೆ ಹಿಡಿದ ಕನ್ನಡಿಯಂತಿರುವ ಕಥೆಯಲ್ಲಿ ಹಾರುತ್ತಾ ಹಾರುತ್ತಾ ಮುಗಿಲಲ್ಲಿ ಸಾಗುವ ಬೆಳ್ಳಕ್ಕಿಗಳ ಬೆನ್ನಟ್ಟಿದ್ದು ಯಾರು..? ಏಕೆ..? ಓದಿ ನೋಡಿ.
ಲಯ : ಈ ಕಥಾಸಂಕಲನದಲ್ಲಿ ನನಗಿಷ್ಟವಾದ ಕಥೆ ಇದು. ಉರಿ ಉರಿ ಬಿಸಿಲಿನ ಬವಣೆಗೆ ಬೆಂದು ಹೋಗುತ್ತಿರುವ ಊರಿನ ಉರಿಯನ್ನು ಚಿತ್ರಿಸಿರುವುದೇ ವಿಭಿನ್ನವಾಗಿದೆ. ಊರನ್ನು ರಕ್ಷಿಸಿಕೊಳ್ಳಲು ಹೊರಟ ಜನ ಲಂಗಟದ ಸ್ವಾಮಿಗಳನ್ನು ಊರಿಗೆ ಕರೆತರುವಲ್ಲಿ ಸಫಲರಾಗುತ್ತಾರೆ. ಗೌಡರು ಹಾಗೂ ಕುಲಕರ್ಣಿಗಳ ಜೊತೆಗೆ ಸಾಧುವಿನ ನಿರ್ಲಿಪ್ತಿ. ಅವರು ಹೇಳಿದ ಮಾತಿನ ಗೂಡಾರ್ಥ, ಹಾಡಿನ ಲಯ, ಬದುಕಿನ ಲಯ ಎಲ್ಲವೂ ಜೊತೆಯಾದವೇ..? ಸಮಸ್ಯೆಗೆ ಪರಿಹಾರ ದೊರಕಿತೇ..?
ಹಾಡಿನ ಲಯ, ಮಾತಿನ ಲಯ ಒಂದಾಗುವ ಪರಿಯನ್ನು ಓದಿ ನೋಡಿ.
ದೀಬರ ದಿಂಡೀ ದೀಬರ ದಿಂಡೀ ಕುಬಸಾ ಎಲ್ಲಿಟ್ಟೇ... : ಸೋನಪ್ಪ ಹಾಗೂ ಶಿವಬಸವ್ವ ಇಬ್ಬರ ಹೊಂದಾಣಿಕೆಯ ಸಂಸಾರದಲ್ಲಿ ಉಳಿಸಿ ಕಾಸು ಕೂಡಿರುವುದರಲ್ಲಿ ಒಬ್ಬರನ್ನೊಬ್ಬರು ಮೀರಿಸಿದ ಒಬ್ಬರ ನಡೆ ಹೇಗಿತ್ತೆನ್ನುವುದಕ್ಕೆ ಉದಾಹರಣೆಯಾಗಿ ಹೇಳುವುದಾದರೆ.. ಐದು ವರ್ಷದ ಹುಡುಗ ಬಸೂವಿಗೆ ಇನ್ನೂ ಹಾಲು ಬಿಡಿಸದ್ದಕ್ಕೆ ಕಾರಣ ಹಾಲು ಹಾಗೂ ಊಟದ ಖರ್ಚು ಹೆಚ್ಚಾಗುತ್ತದೆನ್ನುವ ದೂ(ದು)ರಾಲೋಚನೆ. ಇಂತಹ ಜಿಪುಣತನವೇ ಶಿವಬಸವ್ವನ ಪ್ರಾಣಕ್ಕೆ ಕುತ್ತು ತಂದು ಸೋನಪ್ಪನೇ ಮನೆಯ ಆಧಾರದಂತೆ ನಿಂತು ಮಗನ ಸಂಸಾರವನ್ನೂ ನೇರ ಮಾಡಿದನೆನ್ನುವಷ್ಟರಲ್ಲಿ ಸೋನಪ್ಪನ ಇಡೀ ಬದುಕು ನಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ. ಹೊಟ್ಟೆ ಬಟ್ಟೆ ಉಳಿಸಿ ಕೂಡಿಟ್ಟ ಕಾಸು ದಕ್ಕಿತೇ..? ಶೀರ್ಷಿಕೆಗೂ ಕಥೆಗೂ ವಿಚಿತ್ರ ಸಂಬಂಧವಿದೆ. ಅದು ಸೋನಪ್ಪ ಕಾಕನ ಗುಟ್ಟೂ ಹೌದು.
ಮತ್ತೊಬ್ಬ ಮಾಯಿ : 35 ವರ್ಷದ ಲೆಕ್ಚರರ್ ಸರ್ವಿಸ್ ಆಗಿದವರಿಗೆ ಆತ್ಮೀಯರಾಗಿದ್ದವರೆಂದರೆ ಪ್ರೊಫೆಸರ್ ಡಿಗಸ್ಕರ್. ಇಬ್ಬರ ಮಾತುಕತೆಯಲ್ಲಿ ಬಿಚ್ಚಿಡುತ್ತಾ ಹೋಗುವ ಒಂದು ಪ್ರಸಂಗ ಲಕ್ಷ್ಮಿಯದ್ದು. ಚಿಕ್ಕಂದಿನ ಹುಡುಗಿ ಜಾನಸೀ ರಾಣೀ ಲಕ್ಷಮಿ ಬಾಯಿಯನ್ನು ಆಪ್ತವಾಗಿಸಿದರೆ.. ಪ್ರೌಢವಾಗಿರುವ ಆಕೆಯ ದೌರ್ಭಾಗ್ಯದ ಬದುಕನ್ನು ತೋರುತ್ತದೆ.
"ಇಂಥ ಪ್ರಚಂಡ ದುರಂತದ ಅನುಭವವನ್ನು ಎದೆಯೊಳಗೆ ಇಟ್ಟುಕೊಂಡು ನೀವು ಶಾಂತರಾಗಿ ಇರುತ್ತಿದ್ದಿರಿ..?"
ಎಂದಾಗ
"ಹೆಂಗಂದರs...? ಸುನಾಮಿನ್ನ ಮಡಿಲಿನ್ಯಾಗ ಇಟಗೊಂಡ ಸಮುದ್ರ ಹೆಂಗ ಇರತೈತಿ...? ಅದೂ ಶಾಂತವಾಗಿ ಇದ್ದಂಗ ಕಾಣಿಸತೈತಿಲ್ಲೋ? ಹಂಗs..."
ಈ ಕಾಡುವ ಕಥೆಗಳ ಗುಂಗಿನಿಂದ ಹೊರಬರಲು ಸಮಯವಂತೂ ಬೇಕಾಯಿತು. ವಿಭಿನ್ನ ಓದಿನ ಅನುಭವ ನೀಡಿದ ಲೇಖಕರು ಹಾಗೂ ಕಥಾಸಂಕಲನ. ಇದನ್ನು ಓದಿದ ನಂತರ ಬುಕ್ ಬಹ್ಮದಲ್ಲಿ ಪ್ರಸಾರವಾಗಿದ್ದ ಅವರ ಸಾಹಿತ್ಯ ಹಾಗೂ ಜೀವನಾನುಭವದ ಸಂದರ್ಶನ ನೋಡಿದೆ. ಅದು ಮತ್ತಷ್ಟು ಆಪ್ತವಾಯಿತು.
~ವಿಭಾ ವಿಶ್ವನಾಥ್

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ