ಭಾನುವಾರ, ಏಪ್ರಿಲ್ 12, 2026

ಕಳೆದುಕೊಂಡವಳು ಮತ್ತು ಇತರ ಕತೆಗಳು (ಪುಸ್ತಕ ಯಾನ - 144)


ಪುಸ್ತಕದ ಶೀರ್ಷಿಕೆ : ಕಳೆದುಕೊಂಡವಳು ಮತ್ತು ಇತರ ಕತೆಗಳು

ಲೇಖಕರು : ಬಿ. ಟಿ. ಜಾಹ್ನವಿ

ಪ್ರಕಾಶಕರು : ಪತ್ರಿಕೆ ಪ್ರಕಾಶನ

ಪ್ರಥಮ ಮುದ್ರಣ : 1996

ಪುಟಗಳು : 100


ಜಾಹ್ನವಿಯವರು ಬೆಂಗಳೂರಿನಲ್ಲಿ 1963ರಲ್ಲಿ ಜನಿಸಿದರು. ತಂದೆ ಡಾ.ಬಿ.ಎಂ.ತಿಪ್ಪೇಸ್ವಾಮಿ ಪ್ರಖ್ಯಾತ ನೇತ್ರತಜ್ಞರು. ದಾವಣಗೆರೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಜಾಹ್ನವಿ ಹಲವು ಕೃತಿಗಳನ್ನ ರಚಿಸಿದ್ದಾರೆ.  ಅವರ ಚೊಚ್ಚಲ ಕೃತಿಯಾದ ಕಳೆದು ಕೊಂಡವಳು ಮತ್ತು ಇತರ ಕತೆಗಳು ಎಂಬ ಕಥಾಸಂಕಲನ ಹೆಚ್ಚು ಜನಪ್ರಿಯವಾಗಿದೆ. ಕಳ್ಳುಬಳ್ಳಿ ಎಂಬ ಮತ್ತೊಂದು ಕಥಾಸಂಕಲನವನ್ನೂ ರಚಿಸಿದ್ದಾರೆ.


'ಕಳೆದುಕೊಂಡವಳು' ಕಥಾ ಸಂಕಲನದ ಹೆಚ್ಚಿನ ಕತೆಗಳು ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಇಲ್ಲಿನ ಕತೆಗಳು ಸೂಕ್ಷ್ಮವಾಗಿ ಹೆಣ್ಣಿನ ವಿವಿಧ ಸಮಸ್ಯೆಗಳನ್ನು ತೆರೆದಿಡುತ್ತವೆ. ಇಲ್ಲಿ ಅನೈತಿಕ ಹಾಗೂ ನೈತಿಕ ಎಂಬ ಜಾಡಿನಲ್ಲಿ ಕತೆಯನ್ನು ನೋಡುವುದಕ್ಕಿಂತ ಆಕೆ ಇದ್ದ ಪರಿಸ್ಥಿತಿ ಹಾಗೂ ತೊಳಲಾಟಗಳ ನಿಟ್ಟಿನಲ್ಲಿ ನೋಡುವುದು ಸೂಕ್ತವೆನಿಸುತ್ತದೆ. ಈ ಕತೆಗಳ ಕಥಾವಸ್ತು ಈಗಿನ ದಿನಕ್ಕೂ ಡೇರಿಂಗ್ ಎನ್ನಿಸುವಂತಹಾ ಕಥಾವಸ್ತು. ಇಂತಹಾ ಕಥಾವಸ್ತುಗಳನ್ನು ಆರಿಸಿಕೊಳ್ಳುವುದು ಸುಲಭವಲ್ಲ. ಇಲ್ಲಿನ ನಿಗಿನಿಗಿ ಕೆಂಡದಂತಹಾ ಸತ್ಯಗಳನ್ನು ಅರಗಿಸಿಕೊಳ್ಳುವುದು ಅಷ್ಟು ಸುಲಭವಲ್ಲ. 


ವಿಮುಖ: 'ಭರತ್ ವಿಥ್ ಮೈತ್ರ' ಎನ್ನುವ ಕಾರ್ಡ್ ನೋಡಿದ್ದ ರಘುವಿಗೆ ಅಚ್ಚರಿ. ಎಲ್ಲವೂ ಸರಿ ಇದ್ದಿದ್ದರೆ ಮೈತ್ರ ಅವನವಳಾಗುತ್ತಿದ್ದಳು. ಆದರೆ, ತಾನೇ ಪರಿಚಯಿಸಿದ್ದ ತನ್ನ ಮಿತ್ರ.. ತಾನೇ ಮಾಡಿಕೊಟ್ಟ ಅವಕಾಶ ಎಲ್ಲವನ್ನೂ ತಲೆಕೆಳಗಾಗಿಸಿತ್ತು. 

ಕನ್ಯೆಯಲ್ಲದ ಮೈತ್ರ ದಿನಕ್ಕೊಂದು ಹುಡುಗಿಯನ್ನು ಬದಲಾಯಿಸುತ್ತಿದ್ದ ಭರತ್ ನನ್ನು ವಿವಾಹವಾಗುವ ಸಂಧರ್ಭವೇನಿತ್ತು..?? ಇಲ್ಲಿ ಮನುಷ್ಯನ ಬದಲಾಗುವ ಮನಸ್ಥಿತಿಗಳ ಜೊತೆಗೆ ಹೆಣ್ಣಿನ ಶೀಲದ ಕುರಿತ ಪ್ರಶ್ನೆಗಳು ನಮ್ಮನ್ನೂ ಚಿಂತಿಸುವಂತೆ ಮಾಡುತ್ತದೆ. ಇಲ್ಲಿ ವಿಮಖರಾಗಿದ್ದು ಯಾರು..??


ಕಳ್ಳುಬಳ್ಳಿ: ಇತ್ತ ಶಿವಣ್ಣ ಹಾಗೂ ಇಂದ್ರನ ಒಬ್ಬನೇ ಮಗನಾದ ರಾಜುವಿನ ಹನ್ನೆರಡನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅದೇ ಮನೆಯಲ್ಲಿ ಕೆಲಸದ ಆಳಾಗಿದ್ದ ತಿಪ್ಗನನ್ನು ನಡೆಸಿಕೊಂಡ, ನಡೆಸಿಕೊಳ್ಳುತ್ತಿದ್ದ ರೀತಿಯನ್ನು ಆತನ ತಂದೆ ಕೆಂಚ ಗಮನಿಸಿದ. ಆತ ಹಾಗೂ ಆತನ ಹೆಂಡತಿ ಬಸ್ವಿ ಒಬ್ಬನೇ ಮಗನಾದ ಆತನನ್ನು ಸಾಕಿದ್ದ ರೀತಿಗೂ ಇಲ್ಲಿಗೂ ಬಹಳಷ್ಟು ವ್ಯತ್ಯಾಸವಿತ್ತು. ತಿಪ್ಗನನ್ನು ಅಲ್ಲಿ ಬಿಟ್ಟಿದ್ದಾದರೂ ಏಕೆ..? ಶಿವಣ್ಣನೇನೂ ಅಪರಿಚಿತನಲ್ಲವಾದರೂ ಅಸಹಾಯಕತೆ ಹೀಗೆಯೇ ಇರುತ್ತದಾ..?? ಕಳ್ಳುಬಳ್ಳಿಯ ಸೆಳೆತ, ಮಿಡಿತದಿಂದ ಕೆಂಚನ ಪ್ರತಿಕ್ರಿಯೆ ಏನು..??


ವ್ಯಭಿಚಾರ: ಮುತ್ತಣ್ಣನವರ ಹೆಂಡತಿ ಲೀಲಾವತಿ ನಡೆದುಕೊಂಡ ರೀತಿ ನೈತಿಕವಾಗಿ ಸರಿಯಿಲ್ಲವೆನ್ನುತ್ತಿದ್ದ ಸವಿಯ ಅಭಿಪ್ರಾಯ ಬದಲಾಗಿತ್ತು. ಮಾನಸಿಕ ವ್ಯಭಿಚಾರಕ್ಕಿಂತ ಹಾಗೆ ಬದುಕಲೂ ಧೈರ್ಯ ಬೇಕು ಎಂಬುದು ಹೌದಾದರೂ.. ಆ ರೀತಿಯ ಹೆಣ್ಣಿನ ಅಥವಾ ಗಂಡಿನ ನಡವಳಿಕೆಗಳಿಗೆ ಕಾರಣವೇನು..?? ಹೆಣ್ಣಿನ ಮಾನಸಿಕ ತುಮುಲಗಳು ಸಿಟ್ಟಾಗಿ ಪರಿವರ್ತನೆಯಾದಾಗಿನ ಪರಿಣಾಮಗಳಾ ಅಥವಾ ಹೆಣ್ಣು ತಾನು ಸೇಡು ತೀರಿಸಿಕೊಳ್ಳುವ ಬಗೆಯಾ ಎನ್ನಿಸಿತು. ಮೂರನೇ ವ್ಯಕ್ತಿಯಾದ ಸುಜಿಯ ಮೂಲಕ ನಿರೂಪಣೆಗೊಳ್ಳುವ ಕತೆ ಇದು.


ಅಜ್ಞಾತ: ಮಾಲಿಂಗನ ಅಜ್ಞಾತವಾಸ ಅಂತೂ ಒಂದು ರೀತಿಯಲ್ಲಿ ಕೊನೆಗೊಂಡಿತ್ತು. ಅಮ್ಮನಿಗೆ ತಾನು ತನ್ನ ಭಾವನೆಗಳನ್ನು ತೋರದೆ, ಆಕೆಗೆ ಗೊತ್ತಾದೀತು ಎಂದೇ ದೂರ ಉಳಿದರೂ ತನ್ನ ಹಾಗೂ ತನ್ನ ಹೆಂಡತಿ ಕಮಲಮ್ಮನ ನಡುವಿನ ಒಡನಾಟದಿಂದ ಆಕೆ ಗ್ರಹಿಸಿಕೊಂಡ ಸತ್ಯ ಹಾಗೂ ಮಾಲಿಂಗನ ಜೀವನದ ಏರುಪೇರುಗಳು ಅಜ್ಞಾತವಾಗಿಯೇ ಉಳಿದಿದ್ದವು. ಬದಲಾದ ಮಗನ ನಡವಳಿಕೆ ಎಲ್ಲದಕ್ಕೂ ಸಾಂತ್ವನ ಹೇಳಿದಂತೆ, ಅಮ್ಮನ ಮನಸ್ಸು ನಿರಾಳಗೊಳ್ಳುವ ಪರಿ ಇಲ್ಲಿದೆ. ಮಾಲಿಂಗನ ನಡೆಗೆ ಅಂತಹಾ ಕಾರಣವೇನು..??


ಕಳೆದುಕೊಂಡವಳು: ರಾಜಿಯ ಜೊತೆಗೆ ಬಂದ ಕೀರ್ತಿಗೆ ಸಿಕ್ಕಿದ್ದು ಮಹೇಶನ ಸಾವಿನ ಸುದ್ದಿ. ತನಗೆ ಇಷ್ಟವಿಲ್ಲದಿದ್ದರೂ ಮನೆಗೆ ಹೋದಾಗ  ಅಲ್ಲಿ ನಡೆದ ಸಾವಿನ ಮನೆಯ ಚಟುವಟಿಕೆಗಳು ತಂಗಿ ಸ್ವರ್ಣಳನ್ನು ನಲುಗಿಸಿದ ಪರಿಗೆ, ಮಹೇಶನ ತಂಗಿಯ ಕಟು ಮಾತಿಗೆ ಹೇಸಿದಳು. ಸ್ವರ್ಣಳ ಜಾಗದಲ್ಲಿ ಅವಳಿರಬೇಕಾದ ಸಂಧರ್ಭ ಬದಲಾದದ್ದು ಹೇಗೆ..?? ತನ್ನ ಗಂಡನಾಗಿದ್ದವನ ಕುರಿತು ಮೂಡಿದ್ದ ಭಾವನೆಗಳೇನು..?? ಸ್ವರ್ಣಳಿಗೆ ಕೀರ್ತಿಯ ಬಗ್ಗೆ ಮೂಡಿದ ಭಾವನೆಗಳೇನು..?? ಇಲ್ಲಿ ಕಳೆದುಕೊಂಡವಳು ನಿಜಕ್ಕೂ ಯಾರು..??


ಹೋರಾಟ: ಲಕ್ಷ್ಮಿ ಒಂದು ಅಸಹಾಯಕ ಸಂದರ್ಭದಲ್ಲಿ ಅತ್ಯಾಚಾರಕ್ಕೆ ಬಲಿಯಾದಳು. ಆದರೆ, ಮುಂದಿನ ಘಟನೆಗಳು ಆ ಊರಿನಲ್ಲಿ ಹಾಗೂ ಅವಳ ಬದುಕಲ್ಲಿ ಸೃಷ್ಟಿಸಿದ ಸಂಚಲನವೇನು..?? ಆಕೆಯ ಮಾವನ ಮಗ ಧರಣೆಪ್ಪನ ಹೋರಾಟಕ್ಕೆ ಸಿಕ್ಕ ಫಲವೇನು..?? ಲಕ್ಷ್ಮಿಯನ್ನು ನಿರಾಕರಿಸಿದ್ದ ದೇವರಾಜು ಮತ್ತೆ ಆಕೆಯನ್ನು ಮದುವೆಯಾದದ್ದೇಕೆ..?? ಮನುಷ್ಯನ ನಿಸ್ವಾರ್ಥತೆಯ ಹೋರಾಟಕ್ಕೆ ಸಿಕ್ಕ ಫಲವೇನು..?? ಸ್ವಾರ್ಥವೇ ವಿಜೃಂಭಿಸಿದ ಕತೆಯ ಕೊನೆ ಏಕೋ ತಲ್ಲಣಕ್ಕೆ ದೂಡಿದರೂ ವಾಸ್ತವವೆನಿಸಿದ ಕತೆ ಇದು.


ಆಸರೆ: ಗಂಗ ಚೆಲುವರಾಜುವನ್ನು ನಿಷ್ಕಲ್ಮಶವಾಗಿ ಪ್ರೀತಿಸಿದ್ದರೂ.. ಮುಗ್ಧ ಗಂಗಾಳಿಗೆ ಆತನ ಸ್ವಾರ್ಥ ಅರಿವಾಗಿರಲಿಲ್ಲ. ಆಸರೆಯಾಗಿದ್ದ ಅಪ್ಪನೂ ಇಲ್ಲ.. ಇತ್ತ, ಸಂಚಿನಿಂದ ಆದ ಮದುವೆಯೂ ಊರ್ಜಿತವಾಗಲಿಲ್ಲ. ಆಸರೆಯಾಗಿದ್ದ ತೋಟವೂ ಇಲ್ಲದ ಬದುಕಿಗೆ ಗಂಗಾಳಿಗೆ ಆಸರೆಯಾದದ್ದೇಕೆ..?? ಸಿಡಿದು ನಿಂತ ಹೆಣ್ಣಿನ ಕೆಚ್ಚು ಇಷ್ಟವಾಯಿತು. 


ತಾಯ್ತನ: ತಾಯ್ತನ ಹೆಣ್ಣನ್ನು ಎಂತಹಾ ತ್ಯಾಗಮಯಿಯಾಗಿಸಬಲ್ಲದು ಎಂಬುದರ ನಿದರ್ಶನ ಇಲ್ಲಿದೆ. ಅಮ್ಮನನ್ನು ಹಿಂಸಿಸಿದ ಅಪ್ಪ.. ಅಪ್ಪನ ಪ್ರತಿರೂಪವಾಗಿದ್ದ ತಮ್ಮ, ಗಂಡಿನ ಅಹಂ ಅನ್ನು ಹೊತ್ತಿದ್ದ ಗಂಡ ಎಲ್ಲರೂ ಸೇರಿ ಪೃಥ್ವಿಯನ್ನು ಗಂಡಿನ ಕುಲವನ್ನೇ ದ್ವೇಷಿಸುವಂತೆ ಮಾಡಿದ್ದರು. ಗಂಡು ಮಗುವೇ ಬೇಡ ಎನ್ನುತ್ತಿದ್ದವಳು ಮಗನ ಮುಂದೆ ಕೇವಲ ತಾಯಿಯಾದ ಪರಿ ಇಲ್ಲಿದೆ. ಅಸಹಾಯಕ ಪರಿಸ್ಥಿತಿಯಲ್ಲಿ ಅಪ್ಪನನ್ನು ಕ್ಷಮಿಸಿದಳೇ..?? ಇಲ್ಲಿನ ತಾಯ್ತನಕ್ಕೆ ಮಿತಿ ಇದೆಯೇ..??


ಒಳಗುದಿ: ಹೆಣ್ಣಿನ ಒಳಗುದಿ ಹೀಗೂ ಇರಬಹುದಾ..?? ಎಲ್ಲವೂ ಇದ್ದರೂ ಮತ್ತೇನಕ್ಕೋ ಹಾತೊರೆಯುವ ಮನಸ್ಸಿಗೆ ಸಿಕ್ಕ ನೆಮ್ಮದಿ ಮರೀಚಿಕೆಯಾಯಿತಾ..?? ತನಗೆ ಸರಿಸಮವೇ ಅಲ್ಲ ಎಂದುಕೊಂಡಿದ್ದ ಗೌರಿಯನ್ನು ಕುರಿತು ಉಂಟಾದ ಈರ್ಷೆಗೆ ಅರ್ಥವಿದೆಯೇ..? ಹೆಣ್ಣುಮಕ್ಕಳ ಉದಾರತೆ ಹಾಗೂ ಸಣ್ಣತನ ಎರಡನ್ನೂ ಚಿತ್ರಿಸಿರುವ ಕತೆ ಇಲ್ಲಿದೆ.


ಬಸವಿ: ಮಗಳು ದೇವೀರಿಯನ್ನು ಬಸವಿ ಬಿಡಲು ಶಾಂತವ್ವನಿಗೆ ದಿಗಿಲಾಗಿತ್ತು. ಬಸವಿ ಬಿಡುವ ಪದ್ದತಿ ಇನ್ನೂ ಜೀವಂತವಾಗಿರುವ ಸಂಧರ್ಭದಲ್ಲಿ ಆಕೆಯನ್ನು ಪ್ರೀತಿಸಿದವನನ್ನು, ಆತನ ತಂದೆಯೇ ಸಂಚು ಮಾಡಲು ದೂರ ಹೋಗಿ ಮಗನನ್ನೇ ಕಳೆದುಕೊಂಡವನು ನಂತರವೂ ಬುದ್ದಿ ಕಲಿಯಲಿಲ್ಲ. ಒಂದು ಹೆಣ್ಣಿನ ಕಾರಣಕ್ಕೆ, ಅವಳ ನೋವಿಗೆ, ಸೇಡಿಗೆ ಊರಿನ ಗಣ್ಯರ ಹಾಗೂ ಊರಿನ ಪರಿಸರವೇ ಬದಲಾದ ಕತೆ ಇಲ್ಲಿದೆ. 


ಹೆಣ್ಣಿನ ನೋವು, ಸೇಡು, ಸಿಟ್ಟು, ಹತಾಶೆ ಎಲ್ಲವೂ ಹೆಣ್ಣನ್ನು ಹೀಗೂ ಪರಿವರ್ತಿಸಬಲ್ಲದು ಎಂಬುದರ ಚಿತ್ರಣ ಇಲ್ಲಿದೆ. ಹೆಣ್ಣೊಬ್ಬಳು ಹೇಳಿಕೊಳ್ಳಲಾಗದ ಪರಿಸ್ಥಿತಿಯನ್ನು ನಿಭಾಯಿಸುವ ಚಿತ್ರಣ ಇಲ್ಲಿದೆ. ಇಲ್ಲಿನ ಕತೆಗಳು ನೋವು ಅಥವಾ ನಿರಾಶೆಗಳಲ್ಲ. ಬದಲಾಗಿ ಧೈರ್ಯ ತೋರುವ ದಾರಿದೀಪಗಳು. ಆದರೂ.. ಹೆಣ್ಣಿನ ಕತೆಗಳು ನಿಜಕ್ಕೂ ನೈತಿಕ ದಾರಿದೀಪವಾ..?? ಓದಿ ನೀವೇ ಉತ್ತರ ತಿಳಿಯಿರಿ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ