ಭಾನುವಾರ, ಏಪ್ರಿಲ್ 12, 2026

ಕನಕದಾಸರು (ಪುಸ್ತಕ ಯಾನ - 143)


ಪುಸ್ತಕದ ಶೀರ್ಷಿಕೆ : ಕನಕದಾಸರು

ಲೇಖಕರು : ಡಾ|| ಎಂ.ಕೆ. ಭಾರತೀರಮಣಮಾಚಾರ್ಯ

ಪ್ರಕಾಶಕರು : ಶ್ರುತಿ ಪ್ರಕಾಶನ

ಪ್ರಥಮ ಮುದ್ರಣ : 1990

ಪುಟಗಳು : 168


ಡಾ|| ಎಂ.ಕೆ. ಭಾರತೀರಮಣಮಾಚಾರ್ಯ ಅವರು 1921 ಜುಲೈ 2ರಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಪದವೀಧರರಾಗಿದ್ದ ಇವರು ಬನರಾಸಿನಲ್ಲಿ ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ದಕ್ಷಿಣ ಭಾರತ ಹಿಂದಿ ಪ್ರಚಾರಸಭಾ ಟೀಚರ್‌ ಟ್ರೈನಿಂಗ್‌ ಸ್ಕೂಲಿನಲ್ಲಿ ಪ್ರಾಂಶುಪಾಲರಾಗಿದ್ದ ಇವರು ಡೈರೆಕ್ಟರ್‌ ಆಫ್‌ ಕೊಲಜಿಯೆಟ್‌ ಎಜುಕೇಷನ್‌ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಾಹಿತ್ಯಾಸಕ್ತರು ಆಗಿದ್ದ ಇವರು ಪ್ರಜಾಮತದ ಅಂಕಣಕಾರರಾಗಿ ಹಬ್ಬಹರಿದಿನಗಳ ಬಗ್ಗೆ ಬರೆದಿದ್ದಾರೆ.


ಕನ್ನಡದಿಂದ ಹಿಂದಿಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ. ಪ್ರಥಮ ಮಂತ್ರಿ ಮಂಡಲದ ಸದಸ್ಯರ ಪರಿಚಯ ಇವರ ಪ್ರಮುಖ ಕೃತಿ.  ಇವರು ರಚಿಸಿದ ಹಲವು ಕೃತಿಗಳೆಂದರೆ ಕರ್ಣಸಿಂಹ, ಭಾರತೇಯ ಹರಿಶ್ಚಂದ್ರ, ಕಬೀರದಾಸ, ಕನಕದಾಸರು, ಪ್ರೇಮಚಂದ್ರ ಇತ್ಯಾದಿ.


ತಿರುಪತಿ ದೇವಾಲಯದ ಆಡಳಿತ ಮಂಡಳಿ ರಚಿಸಿದ್ದ "ದಾಸ ಸಾಹಿತ್ಯ ಪ್ರಾಜೆಕ್ಟ್"ನ ಮುಖ್ಯ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಅಪ್ಪಣಾಚಾರ್ಯರ ಪ್ರೇರಣೆಯಿಂದ ತಾವು ಈ ಪುಸ್ತಕವನ್ನು ರಚಿಸಿರುವುದಾಗಿ ಲೇಖಕರು ಹೇಳುತ್ತಾರೆ.


"ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನು

ದೋಷ ರಾಶಿ ನಾಶ ಮಾಡು ಶ್ರೀಶ ಕೇಶವ"

ಪರಮಾತ್ಮನ 24 ಹೆಸರುಗಳನ್ನು ಹೇಳುವ ಈ ದೇವರ ನಾಮವನ್ನು ಹಾಡುತ್ತಾ ಬಂದ ದಾಸರು ಹಾಗೂ ಆ ಹಳ್ಳಿಯ ಒಂದಿಷ್ಟು ಮಕ್ಕಳ ನಡುವೆ ನಡೆದ ಸಂಭಾಷಣೆಯನ್ನು ಜ್ಞಾನಾರ್ಜನೆಯ ರೀತಿಯಲ್ಲಿ ಸರಳವಾಗಿ ಕಟ್ಟಿಕೊಟ್ಟಿರುವ ಕೃತಿ ಇದು. ಮೊದಲ ಭಾಗದಲ್ಲಿ ಕನಕದಾಸರ ಕುರಿತಾದ ಸ್ಥೂಲ ಪರಿಚಯವನ್ನು ಮಕ್ಕಳಿಗೆ ಹೇಳುವಂತೆ ಹಾಗೂ ಮನಸ್ಸಿನಲ್ಲಿ ಉಂಟಾಗುವ ನಮ್ಮ ಹಲವಾರು ಸಂದೇಹಗಳಿಗೂ ಉತ್ತರ ನೀಡುವಂತೆ ರಚಿಸಲಾಗಿದೆ 


 ಕನಕದಾಸರ ಕುರಿತಾಗಿ ಇರುವಂತಹ ವದಂತಿಗಳು ಹಾಗೂ ಅವುಗಳ ಸತ್ಯಾಸತ್ಯತೆಯನ್ನು ದಾಸರು ಇದು ಸರಿ.. ಇದು ತಪ್ಪು.. ಎಂದು ವಿಶ್ಲೇಷಿಸದೇ.. ಆಯಾ ಸಂದರ್ಭವನ್ನೇ ಸಕಾರಣ ಸಮೇತ ವಿವರಿಸಿರುವುದು ನಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಬಹಳಷ್ಟು ಅನುಕೂಲಕರವಾಗಿದೆ.


ಕನಕದಾಸರು ಹುಟ್ಟಿದ ಕಾಲ 15ನೇ ಶತಮಾನದ ಕೊನೆ ಹಾಗೂ ಹದಿನಾರನೇ ಶತಮಾನದ ಬಹಳಷ್ಟು ದಿನಗಳು ಬದುಕಿದ್ದರು ಎಂದು ಹೇಳುತ್ತಾರೆ. ಮೋಹನ ತರಂಗಿಣಿಯಲ್ಲಿ ಅವರ ಹುಟ್ಟಿನ ಕುರಿತಾದ ಉಲ್ಲೇಖಕ್ಕೆ ಆಧಾರವಿದೆ ಎಂದು ಹೇಳಿದಾಗ ಆ ವಿಚಾರವಾಗಿ "ಅನಿರುದ್ಧನ ಜನ್ಮ ಆನಂದ ಸಂವತ್ಸರದ ಮಾಘಶುದ್ಧ ಪಂಚಮಿ" ಎಂದು ಬರುವ ಉಲ್ಲೇಖವಿದೆ. ಆದ್ದರಿಂದ, ಅಲ್ಲಿನ ಆನಂದ ಸಂವತ್ಸರವನ್ನು ಲೆಕ್ಕ ಹಾಕಿ 1486-87ರ ಸಮಯದಲ್ಲಿ ಹುಟ್ಟಿರಬಹುದು ಎಂದು ಕೆಲ ವಿದ್ವಾಂಸರು ಹೇಳುತ್ತಾರೆ. ಅಷ್ಟೇ ಅಲ್ಲದೆ, ವ್ಯಾಸರಾಜರ ಶಿಷ್ಯರಾಗಿದ್ದ ಪುರಂದರದಾಸರು ಹಾಗೂ ಕನಕದಾಸರು ಸಮಕಾಲೀನರು ಎಂಬ ಅಂಶವು ಇಲ್ಲಿ ಉಲ್ಲೇಖನೀಯ. ಇಷ್ಟೇ ಅಲ್ಲದೆ.. "ವ್ಯಾಸರಾಯರು ವಿಜಯನಗರದ ಕೃಷ್ಣದೇವರಾಯನನ್ನು ಕುಹು ಯೋಗದಿಂದ ರಕ್ಷಿಸಿದರು" ಎಂಬ ಇತಿಹಾಸದ ಘಟನೆಯ 1521ರಲ್ಲಿ ದಾಖಲಾಗಿದೆ. ಅದೇ ಸಮಯಕ್ಕೆ ವ್ಯಾಸರಾಯರು 'ದಾಸಕೂಟ'ವನ್ನು ಸ್ಥಾಪಿಸಿದರು. ಅಷ್ಟೇ ಅಲ್ಲದೆ.. ಪುರಂದರದಾಸರು ವೈಕುಂಠವಾಸಿಗಳಾದದ್ದು 1565ನೇ ಜನವರಿಯಲ್ಲಿ. ಅದಕ್ಕೂ 26 ವರ್ಷದ ಮುಂಚೆ ವ್ಯಾಸರಾಯರು ಕಾಲರಾಗಿದ್ದರು ಎಂಬ ಎಲ್ಲಾ ಅಂಶವನ್ನು ಪರಿಗಣಿಸಿ ಕನಕದಾಸರ ಕಾಲವನ್ನು ನಿರ್ಧರಿಸಲಾಗಿದೆ. 


ಕನಕದಾಸರು ಹುಟ್ಟಿದ್ದು ಕಾಗಿನೆಲೆಯಲ್ಲಿ ಎಂದು ಕೆಲವರು ಹೇಳುತ್ತಾರೆ. ಮತ್ತೆ ಕೆಲವರು ಬಂಕಾಪುರದ ಸಮೀಪದಲ್ಲಿರುವ ಬಾಡ ಗ್ರಾಮದಲ್ಲಿ ಎನ್ನುತ್ತಾರೆ. ಈ ಎರಡೂ ಗ್ರಾಮಗಳು ಧಾರವಾಡ ಜಿಲ್ಲೆಯಲ್ಲಿದ್ದು.. ಕನಕದಾಸರು ತಮ್ಮ ಕೃತಿಯಲ್ಲಿ ಎರಡಕ್ಕೂ ಮಹತ್ವದ ಸ್ಥಾನ ನೀಡಿದ್ದಾರೆ. 14ನೇ ಶತಮಾನದ ನಂತರ ವಿಜಯನಗರದ ಆಳ್ವಿಕೆಯ ಸಮಯದಲ್ಲಿ ಬಾಡದಿಂದ ಆದಿಕೇಶವನನ್ನು ತಂದು ತಾವೇ ಕಟ್ಟಿಸಿದ ಮಂದಿರದಲ್ಲಿ ಸ್ಥಾಪಿಸುತ್ತಾರೆ. ತಮ್ಮ ಅಂಕಿತವನ್ನು 'ಕಾಗಿನೆಲೆ ಆದಿಕೇಶವ' ಎಂದಾಗಿಸಿಕೊಂಡಿದ್ದಾರೆ.


ಕನಕದಾಸರ ತಂದೆ ಬೀರಪ್ಪನಾಯಕ. ತಾಯಿ ಬಚ್ಚಮ್ಮ. ನಾಯಕ ಎಂದರೆ ಸಣ್ಣ ಸೈನ್ಯದ ಸೇನಾಧಿಕಾರಿ. ವಿಜಯನಗರ ಕಾಲದ ಆಳ್ವಿಕೆಯಲ್ಲಿ ಬಾಡ ಹಾಗೂ ಕಾಗಿನೆಲೆ ಗ್ರಾಮಗಳ ಶಾಸಕನಾಗಿದ್ದರು ಬೀರಪ್ಪನಾಯಕ. ಈ ದಂಪತಿಗಳು ಕುರುಬರೆಂದು ಕೆಲವರು ಹೇಳಿದರೆ.. ಹಾಲುಮತಸ್ಥರೆಂದು ಕೆಲವರು ಹೇಳುತ್ತಾರೆ. ಬೆಟಗೇರಿ ಕೃಷ್ಣಶರ್ಮ ಎಂಬ ವಿದ್ವಾಂಸರು ಇವರನ್ನು ಶ್ರೀವೈಷ್ಣವರ ಸಂಪ್ರದಾಯದ 'ಛತ್ರಿ' ಜಾತಿಯವರೆಂದು ಹೇಳುತ್ತಾರೆ. ಹುಟ್ಟಿನಿಂದ ಯಾವ ಜಾತಿ ಎನ್ನುವುದಕ್ಕಿಂತ ಅವರು 'ಕುಲಕುಲಕುಲವೆಂದು ಹೊಡೆದಾಡದಿರಿ' ಎಂದು ಜಾತಿ-ಮತಗಳನ್ನು ಮೀರಿ ನಿಲ್ಲುವ ಬಗೆ ಕಾಣುತ್ತದೆ. 


 ಬಹಳ ಕಾಲ ಮಕ್ಕಳಿಲ್ಲದ ದಂಪತಿಗಳು ತಿರುಪತಿ ತಿಮ್ಮಪ್ಪನ ಮೊರೆ ಹೊಕ್ಕಾಗ ಹುಟ್ಟಿದ ಮಗುವಿಗೆ 'ತಿಮ್ಮಪ್ಪ' ಎಂದು ಕರೆದರು. ತಿಮ್ಮಪ್ಪ ಎನ್ನುವುದು ತಮಿಳಿನ ತಿರುಮಲೈಯಪ್ಪ ಎನ್ನುವುದರ ಕನ್ನಡ ರೂಪ ಎನ್ನುತ್ತಾರೆ. ವೆಂಕಟೇಶ, ಶ್ರೀನಿವಾಸ, ತಿಮ್ಮಪ್ಪ ಎಲ್ಲವೂ ಒಂದೇ ಅಲ್ಲವೇ..?? ಮಗ ಹುಟ್ಟಿದ ಮೇಲೆ ಬೀರಪ್ಪನಾಯಕರಿಗೆ ದೇವರ ಮೇಲಿನ ಭಕ್ತಿ ಹೆಚ್ಚಾಗಿ ಕಾಗಿನೆಲೆಯ ಸಮೀಪದ ಬೆಟ್ಟದ ಮೇಲೆ ದೇವರನ್ನು ಸ್ಥಾಪಿಸಿ ಪೂಜಿಸತೊಡಗಿದರು. ಇಂದಿಗೂ ಅವರ ವಂಶಸ್ಥರೇ ಪೂಜೆ ಮಾಡುತ್ತಾರೆ. ಅಲ್ಲದೇ, ಅವರನ್ನವರು ದೇವರ 'ದಾಸ' ಎಂದೇ ಗುರುತಿಸಿಕೊಳ್ಳುತ್ತಾರೆ. 


 ತಿಮ್ಮಪ್ಪದಾಸನಾಗಬೇಕಿದ್ದವರು ಕನಕದಾಸರಾದ ಬಗೆ ವಿಚಿತ್ರ. ಇವರು 8 ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಳ್ಳುತ್ತಾರೆ. ತಾಯಿಯೇ ಬಹಳ ದಕ್ಷತೆಯಿಂದ, ಅವರಿಲ್ಲದ ಕೊರಗನ್ನು ನೀಗಿಸಿ ಅವರಂತೆಯೇ ಆಡಳಿತ-ಆಳ್ವಿಕೆಯನ್ನು ನೋಡಿಕೊಂಡು ಮಗನಿಗೆ ಸರಿಯಾದ ಶಿಕ್ಷಣ ನೀಡಿ ಸಮರ್ಥರನ್ನಾಗಿಸುತ್ತಾರೆ. ಮೇಧಾವಿಯಾಗಿದ್ದ ತಿಮ್ಮಪ್ಪರಿಗೆ ಎಲ್ಲಾ ವಿದ್ಯೆಗಳೂ ಅನಾಯಾಸವಾಗಿ ಒಲಿಯುತ್ತವೆ. ಒಮ್ಮೆ ತಿಮ್ಮಪ್ಪ ನಾಯಕರಿಗೆ ಯಾರೋ ಹೂತಿಟ್ಟಿದ್ದ ಚಿನ್ನದ ಕೊಪ್ಪರಿಗೆ ಸಿಕ್ಕಾದಂದಿನಿಂದ ಕನಕ(ಚಿನ್ನ) ನಾಯಕರಾದರು. 


'ಕೊಟ್ಟರೆ ದೇವರು ಎಲ್ಲವನ್ನೂ ಕೊಡುತ್ತಾನೆ' ಎಂಬಂತೆ ಅಧಿಕಾರ, ಐಶ್ವರ್ಯ ಎಲ್ಲವೂ ಕನಕರ ವಶವಾಯಿತು. ರಾಜರ ಕೃಪಾದೃಷ್ಟಿಯೂ ಬಿದ್ದು ಕಾಗಿನೆಲೆಯ ಕಿಲ್ಲೇದಾರರಾದರು. ಬಂಕಾಪುರದ ಆಡಳಿತವೂ ಸಿಕ್ಕಿತು. ಆದರೂ, ಕನಕರಿಗೆ ಯಾವುದೇ ರೀತಿಯ ಅಧಿಕಾರದ ಮದ ಬರಲಿಲ್ಲ. ತಿರುಪತಿಗೆ ಜನರು ಹೋಗುವಂತೆ ಕಾಗಿನೆಲೆಯಲ್ಲಿಯೂ ಜನರು ಬಂದು ಬೇಡುವಂತೆ ಆದಿಕೇಶವನನ್ನು ಸ್ಥಾಪಿಸಿದರು. ಬಚ್ಚಮ್ಮ ಯೋಗ್ಯ ಹೆಣ್ಣನ್ನು ಆರಿಸಿ ಅವರಿಗೆ ವಿವಾಹವನ್ನು ಮಾಡಿದರು. 


 ಸಂಸಾರದ ಸುಖ ಕಂಡ ನಂತರ ಒಂದು ದಿನ ದೇವರು ಕನಸಿನಲ್ಲಿ ಬಂದು "ಕನಕ ನನ್ನ ದಾಸನಾಗೋ.. ಸಾಕು ಈ ಸಂಸಾರ" ಎಂದರಂತೆ. ಆದರೆ ಕನಕದಾಸರಿಗೆ ದೈವಭಕ್ತಿ ಇದ್ದರೂ.. 'ದಾಸ'ರಾಗುವ ಮನಸ್ಥಿತಿಯಿರಲಿಲ್ಲ. "ನಾನು ಬೇಡಿ ತಿನ್ನಲಾರೆ" ಎಂದು ನಿರಾಕರಿಸಿದರು. ಅದೇ ಸಂದರ್ಭದಲ್ಲಿ ತಾಯಿ, ಹೆಂಡತಿ ಇಬ್ಬರೂ ತೀರಿಹೋಗುತ್ತಾರೆ. ಆದರೂ.. ರಾಜಕಾರಣವನ್ನು ನಡೆಸಿಕೊಂಡೇ ಹೋಗುತ್ತಿರುತ್ತಾರೆ. ದೇವರ ಹೆಸರು ಹೇಳಿ ಶರಣಾಗುತ್ತಿದ್ದರೂ.. ದಾಸನಾಗಲು ಮಾತ್ರ ಸಿದ್ಧವಿರಲಿಲ್ಲ. ಇದೇ ಸಮಯದಲ್ಲಿ ವಿಜಯನಗರದ ಅರಸರ ಮೇಲೆ ಬಂಡೆದ್ದು ಬಂದ ಒಂದು ಸೈನ್ಯವನ್ನು ನಿಯಂತ್ರಿಸಲು ಹೋದಾಗ ಆ ಯುದ್ಧದಲ್ಲಿ ಉಂಟಾದ ಸಂದರ್ಭದಲ್ಲಿ ದೇವರ ದರ್ಶನ ಸಿಕ್ಕಿ "ಕೇಶವನೊಲುಮೆಯು ಆಗುವ ತನಕ ಹರಿ ದಾಸರೊಳಿರುತಿರು" ಎನ್ನುತ್ತಾ ಹೊರಾಡುತ್ತಾರೆ ಕನಕದಾಸರು.


ಗುರುಗಳಿಂದ ದೀಕ್ಷೆ ಪಡೆಯಲು ಕನಕದಾಸರು ವ್ಯಾಸರಾಜರಿದ್ದ ಮದನಪಲ್ಲಿಗೆ ಹೊರಟರು. ಅಷ್ಟರಲ್ಲಾಗಲೇ ಪುರಂದರದಾಸರು, ವಾದಿರಾಜರನ್ನು ಶಿಷ್ಯರನ್ನಾಗಿಸಿಕೊಂಡ ಅವರ ಕೀರ್ತಿ ಎಲ್ಲೆಡೆ ಹಬ್ಬಿತು. ಮದನಪಲ್ಲಿಯ ಕಂದಕೂರಿನಲ್ಲಿ ನಡೆಯುತ್ತಿದ್ದ ವ್ಯಾಸರಾಯರು ನಿರ್ಮಿಸುತ್ತಿದ್ದ ಜಲಾಶಯದ ನಿರ್ಮಾಣದಲ್ಲಿ ತೂಬು ಮಾಡಬೇಕಾದ ಕಡೆ ಬಂಡೆಯೊಂದಿತ್ತು. ಅದನ್ನು ಕನಕನ ಕೋಣ ಬಂದು ಎತ್ತಿ ಎಸೆದಿದ್ದರಿಂದ ಇಂದಿಗೂ ಅದನ್ನು 'ಕನಕನ ತೂಬು' ಎಂದೇ ಕರೆಯುತ್ತಾರೆ. ಎಲ್ಲಿಯ ಕನಕ..? ಎಲ್ಲಿಯ ಕೋಣ..? ಎಂದಿರಾ..! ಈ ಪವಾಡವನ್ನು ನೀವೇ ಸವಿಸ್ತಾರವಾಗಿ ಓದಿ.


 ಶ್ರೀ ವ್ಯಾಸ ತೀರ್ಥರಿಂದ ವೈಷ್ಣವ ದಾಸ ದೀಕ್ಷೆಯನ್ನು ಪಡೆದ ಕನಕರು ಆನಂದದಿಂದ 

"ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು 

ಪದುಮನಾಭನ ಪಾದದೊಲುಮೆ ಎನಗಾಯಿತು" ಎನ್ನುತ್ತಾ ಹಾಡುತ್ತಾರೆ.


ವ್ಯಾಸರಾಯದ ಸಾಮೀಪ್ಯದಲ್ಲಿ ಕಲಿತ, ಓದಿದ, ಕೇಳಿದ ಎಲ್ಲಾ ತತ್ವರಹಸ್ಯಗಳನ್ನು ತಮ್ಮ ಅನುಭವಕ್ಕೆ ತಂದುಕೊಂಡಿದ್ದ ಕನಕದಾಸರು ತತ್ವಜ್ಞಾನಿಗಳಾದರು.


 ವ್ಯಾಸರಾಯರ ಎಲ್ಲಾ ಸಭೆಗಳಲ್ಲಿ ಕನಕದಾಸರು ಇರುತ್ತಿದ್ದದ್ದು ಉಳಿದ ಪಂಡಿತರ ಅಸೂಯೆಗೂ ಕಾರಣವಾಗಿತ್ತು 

"ತನು ನಿನ್ನದು ಜೀವನ ನಿನ್ನದು" ಎಂದಿದ್ದ ಕನಕದಾಸರಿಗೆ ಈ ಅಸೂಯೆ, ಯಾವ ಲೆಕ್ಕ..?? ಆದರೆ, ವ್ಯಾಸರಾಯರು ಅವರೆಲ್ಲರ ಭ್ರಮೆ ಸರಿಸಲು ಒಂದು ಸಭೆಯಲ್ಲಿ ಮುಷ್ಟಿ ಕಟ್ಟಿ ಹಿಡಿದು "ಇದರಲ್ಲೇನಿದೆ..??" ಎಂದು ಕೇಳಿದಾಗ ಬೇರಾರೂ ಉತ್ತರಿಸದಿದ್ದಾಗ. ಕನಕದಾಸರೊಬ್ಬರೇ ಎದ್ದು ನಿಂತು "ಈತನೀಗ ವಾಸುದೇವನು" ಎಂದು ಹಾಡುತ್ತಾರೆ. ಅಲ್ಲಿದ್ದದ್ದು ವಾಸುದೇವ ಸಾಲಿಗ್ರಾಮ ಎಂದು ತೋರಿಸಿದಾಗ ಎಲ್ಲರಿಗೂ ದಿಗ್ಭ್ರಮೆಯಾಗುತ್ತದೆ.  


"ಕನಕದಾಸನ ಮೇಲೆ ದಯೆ ಮಾಡಲು ವ್ಯಾಸಮುನಿ ಮಠದವರೆಲ್ಲ ದೂರಿಕೊಂಬುವರೊ" ಎಂಬ ದೇವರನಾಮದಲ್ಲಿ ಸಾಲಿಗ್ರಾಮದ ಸನ್ನಿವೇಶದ ಉಲ್ಲೇಖವಿದೆ. 


ಕನಕರು ದೇವರನ್ನು ಕಾಣುತ್ತಾರೆ ಎಂದರಿತವರು ನಮಗೂ ದೇವರನ್ನು ತೋರಿಸು ಎಂದು ದುಂಬಾಲು ಬಿದ್ದಾಗ ಎಲ್ಲರನ್ನು ಒಂದೆಡೆ ಸೇರಿಸುತ್ತಾರೆ. ಅಂದು ನಾಯಿ ಅಲ್ಲಿಗೆ ಬರುತ್ತದೆ. ಜನರೆಲ್ಲರೂ ಅದನ್ನು ಓಡಿಸುತ್ತಾರೆ. ಆದರೆ, ಪುರಂದರದಾಸರು ಮಾತ್ರ ಆ ನಾಯಿಯನ್ನು ಕನಕರನ್ನೊಮ್ಮೆ ನೋಡುತ್ತಾರಂತೆ. ಆಗ ಕನಕದಾಸರು "ಡೊಂಕು ಬಾಲದ ನಾಯಕರೆ" ಎಂದು ಹಾಡುತ್ತಾರೆ. ನೀನು ನಮಗೆ ಮೋಸ ಮಾಡಿದೆ ಎಂದು ದೂಷಿಸಿದ ಜನರಿಗೆ ನಾಳೆ ಮತ್ತೆ ಬರುವಂತೆ ಹೇಳುತ್ತಾರೆ. ಮರುದಿನ ಅಲ್ಲಿಗೆ ಹಾವು ಬಂದಾಗ ಜನರು ಅಲ್ಲಿಂದ ಓಡುತ್ತಾರೆ. ಆಗ ಕನಕರು ಒಂದು ದಿನ ನೀವು ಅವರನ್ನೇ ಓಡಿಸಿದರೆ.. ಇನ್ನೊಂದು ದಿನ ನೀವೇ ಓಡಿ ಹೋಗುತ್ತಿದ್ದೀರಿ ಎನ್ನುತ್ತಾರೆ. 


ಚಿನ್ನಕ್ಕೆ ಒರೆಹಚ್ಚಿ ನೋಡಿದರೂ.. ಅದು ಮತ್ತಷ್ಟು ಪುಟವಿಟ್ಟ ಚಿನ್ನವಾಗುವಂತೆ ಕನಕದಾಸರನ್ನು ಪರೀಕ್ಷಿಸಿ ಅವರ ಶ್ರೇಷ್ಠತೆಯನ್ನು ಎಲ್ಲರಿಗೂ ತಿಳಿಸುತ್ತಾರೆ ವ್ಯಾಸರಾಜರು. 


ಯಾರೂ ಇಲ್ಲದ ಜಾಗದಲ್ಲಿ ಬಾಳೆಹಣ್ಣನ್ನು ತಿಂದು ಬರಲು ಹೇಳಿದಾಗ ಕನಕರೊಬ್ಬರು ದೇವರು ಸರ್ವವ್ಯಾಪಿ ಎಂದು ತಿನ್ನಲಿಲ್ಲ. ಮತ್ತೊಮ್ಮೆ "ಯಾರು ಮುಕ್ತಿಗೆ ಹೋಗುತ್ತಾರೆ" ಎಂಬ ಪ್ರಶ್ನೆಗೆ "ನಾನು ಹೋದರೆ ಹೋದೇನು" ಎನ್ನುವ ಅರ್ಥಗರ್ಭಿತ ಮಾತೊಂದನ್ನು ಹೇಳಿ ಅದನ್ನು ವಿವರಿಸಿದಾಗ ಅವರ ಹಿರಿಮೆ ಎಲ್ಲರಿಗೂ ತಿಳಿಯುತ್ತದೆ.

"ಮುಂಡಿಗೆ ಹೊರುವುದು ಕಷ್ಟ, ಕನಕನ ಮಾತನ್ನು ಬಿಡಿಸುವುದು ಕಷ್ಟ" ಎನ್ನುತ್ತಾರೆ ಗುರುಗಳು. 


ಮತ್ತೊಮ್ಮೆ ವ್ಯಾಸರಾಯರು ತಮ್ಮ ಸ್ನಾನ ಮುಗಿಸಿ ತುಳಸಿ ಪೂಜೆಯನ್ನು ಮಾಡಲು ಬಂದಾಗ ಅದು ಬಾಡಿದಂತಾಗಿರುವುದನ್ನು ಕಂಡು ಬೇರೆ ತುಳಸಿಯನ್ನು ತರುವಂತೆ ಹೇಳುತ್ತಾರೆ. ಆದರೆ, ಎಲ್ಲಿ ನೋಡಿದರೂ.. ತುಳಸಿ ಬಾಡಿದೆ ಎಂಬ ಉತ್ತರವೇ ಬಂದಾಗ "ಕನಕ ಆಗಲೇ ತನ್ನ ಮಾನಸಪೂಜೆಯಿಂದ ಗಿಡದಿಂದಲೇ ಆ ತುಳಸಿಯನ್ನು ದೇವರಿಗೆ ಏರಿಸಿಬಿಟ್ಟಿದ್ದಾನೆ" ಎಂದು ಹೇಳಿ ಎಲ್ಲರನ್ನೂ ಚಕಿತಗೊಳಿಸುತ್ತಾರೆ. 


'ಬ್ರಾಹ್ಮಣರ ಸಭೆಯಲ್ಲಿ ಬ್ರಾಹ್ಮಣರಲ್ಲದವರನ್ನು ಸೇರಿಸಿಕೊಳ್ಳುವುದು ನ್ಯಾಯವೇ..??' ಎಂಬ ಪ್ರಶ್ನೆಗೆ ವ್ಯಾಸರಾಯರು "ವಜ್ರ ಸಿಗುವುದು ಕಲ್ಲಿದ್ದಲಿನ ಗಣಿಯಲ್ಲಿ. ಹಾಗೆಂದು, ಅದನ್ನು ಎಸೆಯಲಾದೀತೇ..?? ಅಂತಹಾ ಅಪರೂಪದ ವಜ್ರ ಕನಕ" ಎನ್ನುತ್ತಾರೆ. 


 ಉಡುಪಿಯ ಕನಕನ ಕಿಂಡಿಯ ಪ್ರಸಂಗವಂತೂ ನಮಗೆ ಗೊತ್ತಿದೆ. ಮತ್ತೊಂದು ಪ್ರಸಂಗವೆಂದರೆ.. ಉಡುಪಿಯಲ್ಲಿ ಪ್ರತಿನಿತ್ಯ ಎಂಟು ಬಾರಿ ಪೂಜೆಯಾಗುತ್ತದೆ. ಎಂಟು ಬಾರಿಯೂ ನೈವೇದ್ಯವಾಗುತ್ತದೆ. ಆ ನೈವೇದ್ಯದ ಪ್ರಸಾದವನ್ನು ಭಕ್ತರಿಗೆಲ್ಲರಿಗೂ ಹಂಚುತ್ತಾರೆ. ಅಂತಹಾ ಕ್ಷೇತ್ರದಲ್ಲಿಯೂ ಕನಕರು ಹಸಿದುಕೊಂಡು ಇದ್ದ ಪ್ರಸಂಗವಿದೆ. ಕನಕದಾಸರು ಅಲ್ಲಿ  ತಾನಾಗಿಯೇ ಊಟಕ್ಕೆ ಹೋಗದೆ.. 

"ಕಾಡಿದರೆ ನಿನ್ನ ಕಾಡುವೆ 

ಬೇಡಿದರೆ ನಿನ್ನ ಬೇಡುವೆ" ಎಂಬ ದೇವರ ನಾಮ ಹಾಡುತ್ತಾರೆ. ಆದರೂ.. ಹಸಿವೆ ಮೇರೆ ಮೀರಿದಾಗ "ತಲ್ಲಣಿಸದಿರು ಕಂಡ್ಯ" ಎಂದು ಸಮಾಧಾನಪಡಿಸಿಕೊಳ್ಳಲು ಮುಂದಾಗುತ್ತಾರೆ. ಅದೂ ಮೀರಿದಾಗ "ತೊರೆದು ಜೀವಿಸಬಹುದೇ ಹರಿ ನಿನ್ನ ಚರಣವನು" ಎನ್ನುತ್ತಾರೆ. ಅದಾದ ನಂತರ ದೇವರೇ ಬಂದು ಕಂಠಿಹಾರವನ್ನು ಕೊಟ್ಟು ಅದನ್ನು ಅಡವಿಟ್ಟು ಊಟ ಸಂಪಾದಿಸಿಕೊಂಡಾಗ, ವಿಚಾರ ವಾದಿರಾಜರಿಗೆ ತಿಳಿದಾಗ ಅವರು ಬಂದು ಕನಕದಾಸರನ್ನು ಗೌರವದಿಂದ ನಡೆಸಿಕೊಂಡರು ಎಂಬ ಪ್ರಸಂಗವಿದೆ.


ಕನಕದಾಸರು ಆಶು ಕವಿಗಳು. ದೇವರ ನಾಮಗಳನ್ನು ಸ್ವತಃ ಕಟ್ಟಿ ಹಾಡುತ್ತಾ ದೇವರನ್ನು ಎಲ್ಲೆಡೆ ಸ್ತುತಿಸುತ್ತಾರೆ. ಭಕ್ತರು ಹೆಚ್ಚಾದ ಸಂದರ್ಭದಲ್ಲಿ ಹೇಳದೇ-ಕೇಳದೇ ಅಲ್ಲಿಂದ ಹೊರಟು ಬಿಡುತ್ತಿದ್ದರಂತೆ. ಅವರಿಗೆ ಬೇಕಾದದ್ದು ಪ್ರಸಿದ್ಧಿಯಲ್ಲ. ಬದಲಾಗಿ ದೇವರ ನಾಮವನ್ನು ಎಲ್ಲೆಡೆ ಹಂಚುವುದು. ಅಷ್ಟೇ..

 

ಹಾಗೆಯೇ ಬೇಲೂರಿಗೆ ಬಂದವರು ಅಲ್ಲಿರುವಾಗ 'ಹರಿಭಕ್ತಿಸಾರ'ವನ್ನು ರಚಿಸಿದ್ದಾರೆ ಎನ್ನುತ್ತಾರೆ. ಆದರೆ, ಅದರಲ್ಲಿನ ಅಂಕಿತ 'ಕಾಗಿನೆಲೆ ಆದಿಕೇಶವ' ಅಲ್ಲ. ಬದಲಾಗಿ, ಸುರಪುರ ನಿಲಯ ಚೆನ್ನಿಗರಾಯ ಎಂದು.

'ಕಾಗಿನೆಲೆ ಆದಿಕೇಶವ' ಎಂಬುದು ನರಸಿಂಹಸ್ತವ ಹಾಗೂ ಮೋಹನ ತರಂಗಿಣಿಯಲ್ಲಿ ಮಾತ್ರ. ಸುರಪುರ ಅಥವಾ ವರಪುರ ಚೆನ್ನಿಗರಾಯಬೆಂಬ ಅಂಕಿತನಾಮದ ಪ್ರಸ್ತುತಿ ಹರಿಭಕ್ತಿಸಾರ, ನಳ ಚರಿತ್ರೆ ಹಾಗೂ ರಾಮಧಾನ್ಯಚರಿತೆಯಲ್ಲಿದೆ. ಕನಕದಾಸರು ಸ್ತುತಿಸಿರುವುದು ಕಾಗಿನೆಲೆಯ ಬಳಿಯಲ್ಲಿರುವ ಇಂಗುಳಗುಂದಿಯ ಚನ್ನಕೇಶವನನ್ನು ಇರಬೇಕು ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಸುರಪುರ ಹಾಗೂ ವರಪುರ ಇದು ಬೇಲೂರಿಗೆ ಸಂಬಂಧಿಸಿದ ಚನ್ನಕೇಶವನೇ ಎಂದೂ ಹೇಳುತ್ತಾರೆ. ಈ ಎರಡಕ್ಕೂ ಇದೇ ಸರಿಯೆನ್ನಲು ಆಧಾರಗಳೇನೂ ಇಲ್ಲ. 


 ಹರಿಭಕ್ತಿಸಾರದಲ್ಲಿ ಕಥೆ ಇಲ್ಲ. ಬದಲಾಗಿ ದೇವರ ಹಾಗೂ ಜೀವನ ಸಂಬಂಧಗಳನ್ನು ಚಿತ್ರಿಸಿದ್ದಾರೆ. "ರಕ್ಷಿಸು ನಮ್ಮನವರತ" ಎನ್ನುವುದೆಲ್ಲವೂ ಹರಿಭಕ್ತಿಸಾರದಲ್ಲಿ ಬರುವ ಪದ್ಯಗಳು. ಇಂತಹಾ 110 ಪದ್ಯಗಳಿವೆ. ಇದು ಹಾಗೂ 'ನಳ ಚರಿತ್ರೆ' ಎರಡೂ ಭಾಮಿನಿ ಷಟ್ಪದಿಯಲ್ಲಿ ರಚಿತವಾದವು. 


ನಳ ಚರಿತ್ರೆ ಒಂದು ಪ್ರೇಮ ಕಾವ್ಯ. ವ್ಯಾಸರು ವನಪರ್ವದಲ್ಲಿ ಹೇಳಿರುವ ಕಥೆಯನ್ನು ಬಳಸಿಕೊಂಡು ಸಂಸ್ಕ್ರತದಲ್ಲಿ ಶ್ರೀಹರ್ಷ ಎಂಬುವವರು ನೈಷದ ಕಾವ್ಯವನ್ನು ಬರೆದಿದ್ದಾರೆ. ಕನಕದಾಸರು ಕತೆಯಲ್ಲಿ ಹೆಚ್ಚೇನೂ ಬದಲಾವಣೆ ಮಾಡದೇ ಕುಮಾರವ್ಯಾಸ ಭಾರತದಲ್ಲಿ ಐದೇ ಪದ್ಯಗಳಿರುವ ಇದು ನಳಚರಿತ್ರೆಯಲ್ಲಿ 480 ವಿಸ್ತಾರವಾಗಿದೆ. ನಳ-ದಮಯಂತಿಯರ ನಿಷ್ಕಲ್ಮಶ ಪ್ರೇಮದ ಪರಿಚಯವಾಗುತ್ತದೆ.


ಮೋಹನ ತರಂಗಿಣಿ ಒಂದು ದೊಡ್ಡ ಕಾವ್ಯ. 1800 ನುಡಿಗಳನ್ನು ಸಾಂಗತ್ಯ ಎಂಬ ಛಂದಸ್ಸಿನಲ್ಲಿ ಸೊಗಸಾಗಿ ಹೇಳಿದ್ದಾರೆ. ಇದರಲ್ಲಿ ಪ್ರದ್ಯುಮ್ನನ ಹಾಗೂ ಉಷಾ-ಅನಿರುದ್ಧರ ಕತೆಯಿದೆ.


ಅಪೂರ್ವವಾದ 'ರಾಮಧಾನ್ಯ ಚರಿತೆ'ಯಲ್ಲಿ 'ನೆರದಗಲ' ಎಂದರೆ ರಾಗಿ ಹಾಗೂ 'ವ್ರೀಹಿ' ಎಂದರೆ ಅಕ್ಕಿಯ ಮೇಲು-ಕೀಳಿನ ಜಗಳದಲ್ಲಿ ರಾಮನಿಂದ ಪುರಸ್ಕರಿಸಲ್ಪಟ್ಟು ರಾಮಧಾನ್ಯವಾದುದರ ಪ್ರಸಂಗವಿದೆ.


ದಾಸಸಾಹಿತ್ಯದ ಜೊತೆಗೆ, ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಿರುವ ನಾಲ್ಕು ಕಾವ್ಯಗಳ ವಿಸ್ಕೃತ ರೂಪ ಹಾಗೂ ಕನಕರ ಮಹಿಮೆಯ ಮತ್ತಷ್ಟು ಪ್ರಸಂಗವಿದೆ. ಕೆಲವು ಘಟನೆಗಳು ನಿಜವಾಗಿ ನಡೆದಿರಬಹುದಾ ಎಂದು ಅನುಮಾನವನ್ನು ಹುಟ್ಟಿಸಿದರೂ.. ಕನಕದಾಸರ ಮಹಿಮೆಯನ್ನು ಅರಿಯಲು, ದಾಸಶ್ರೇಷ್ಠರ ಹಿರಿಮೆಯನ್ನು ಅರಿಯಲು ಇದು ಅತ್ಯವಶ್ಯಕ.  ಮಕ್ಕಳು ಮಾತ್ರವಲ್ಲದೆ, ದೊಡ್ಡವರು ಸುಲಭವಾಗಿ ಅರ್ಥೈಸಿಕೊಳ್ಳುವಂತಿದೆ ಜ್ಞಾನಾರ್ಜನೆಗೆ ಅತ್ಯವಶ್ಯಕವಾಗಿ ಓದಬೇಕಾದ ಪುಸ್ತಕ ಇದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ