ಪುಸ್ತಕದ ಶೀರ್ಷಿಕೆ : ಮೋಡ ಸರಿದ ಸೂರ್ಯ
ಲೇಖಕರು : ಹೆಚ್. ಜಿ. ರಾಧಾದೇವಿ
ಪ್ರಕಾಶಕರು : ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ
ದ್ವಿತೀಯ ಮುದ್ರಣ : 2023 (ನನ್ನ ಓದಿಗೆ ಸಿಕ್ಕಿದ್ದು)
ಬದುಕಿನ ಯಾವುದೇ ಕಷ್ಟಗಳು ಸಹಾ ಶಾಶ್ವತವಲ್ಲ. ಸೂರ್ಯನಿಗೆ ಕವಿದ ಮೋಡ ಎಂದಿಗೂ ಸರಿದೇ ಸರಿಯುತ್ತದೆ. ಹಾಗೆಯೇ ಪ್ರತಿಭೆಗೆ ತಕ್ಕ ಮನ್ನಣೆ ಅಂದು ದೊರೆಯದಿದ್ದರೂ.. ಸರಿಯಾದ ಕಾಲ ಸನ್ನಿಹಿತವಾದಾಗ ಅದು ಸಿಕ್ಕೇ ಸಿಗುತ್ತದೆ. ಇಲ್ಲಿ ಹಾಗೆಯೇ ಮೋಡ ಕವಿದ ಸೂರ್ಯನಂತಾಗಿದ್ದವಳು ನಮ್ಮ ಕಥಾನಾಯಕಿ ಸರಿತಾ.
ಕೋಲಾರದಲ್ಲಿ ವಾಸವಾಗಿದ್ದ ನಿವೃತ್ತ ಹೈಸ್ಕೂಲು ಹೆಡ್ ಮಾಸ್ಟರ್ ರಾಮರಾಯರು ಹಾಗೂ ಲಲಿತಮ್ಮ ದಂಪತಿಗಳಿಗೆ ಐದು ಮಕ್ಕಳು ಕಾಲೇಜು ಲೆಕ್ಚರರ್ ಆಗಿದ್ದ ಮೊದಲನೆಯ ಮಗ ಶಂಕರ ಸಂಸಾರದ ಚುಕ್ಕಾಣಿ ಹಿಡಿದಿದ್ದ. ವೆಂಕಟೇಶ ಸೆಕೆಂಡ್ ಪಿ.ಯು.ಸಿಗೆ ಓದು ಮುಕ್ತಾಯ ಮಾಡಿ ಸೇಲ್ಸ್ ಮನ್ ಆಗಿ ಕೆಲಸ ಮಾಡುತ್ತಿದ್ದ. ನಂತರದವಳು ಸರಿತಾ. ಪಿ.ಯು.ಸಿ ಫೇಲ್ ಆಗಿ ಓದುಬಿಟ್ಟಿದ್ದರೂ.. ಆಕೆಯ ರೂಪಿನಿಂದ ಅತ್ಯಾಕರ್ಷಕವಾಗಿದ್ದವಳು. ಆಕೆಯ ತಂಗಿ ವಿಜೇತ ಓದಿನಲ್ಲಿಯೂ ಮುಂದಿರಲಿಲ್ಲ. ರೂಪವಂತೆಯೂ ಅಲ್ಲ. ಆದರೆ, ಕೊನೆಯ ಮಗಳಾಗಿದ್ದ ವನಿತಾ ಓದಿನಲ್ಲಿ ಚುರುಕಾಗಿದ್ದು ಬಿ.ಎಸ್ಸಿ ಫಸ್ಟ್ ಕ್ಲಾಸ್ ಬಂದಿದ್ದಳು.
ಲಲಿತಮ್ಮನ ತಮ್ಮ ರಾಜೀವ ಶಂಕರನ ಕಾಲೇಜಿನಲ್ಲಿಯೇ ಲೆಕ್ಚರರ್ ಆಗಿದ್ದವನು. ಅಕ್ಕನ ಮನೆಯಲ್ಲಿಯೇ ಪೇಯಿಂಗ್ ಗೆಸ್ಟ್ ಆಗಿದ್ದವನು. ಸರಿತಾಳನ್ನು ಆತನಿಗೆ ಮದುವೆ ಮಾಡಿಕೊಡಬೇಕು ಎಂಬ ಆಸೆ ಇದ್ದರೂ.. ಇನ್ನೂ ಆತನ ತಂಗಿಯ ಮದುವೆಯಾಗಬೇಕಿದ್ದರಿಂದ ಹಣ ಕಳುಹಿಸುತ್ತಿದ್ದ. ಹಾಗಾಗಿ ಮದುವೆಯ ಮಾತನ್ನು ಮುಂದೂಡುತ್ತಲೇ ಬಂದಿದ್ದ.
ಹೀಗೆ.. ಮದುವೆ ಮುಂದೆ ಹೋಗುತ್ತಿದ್ದ ಸಂದರ್ಭದಲ್ಲಿಯೇ ಒಮ್ಮೆ ಲಲಿತಮ್ಮನ ತಂಗಿಯ ಮಗಳು ಹಾಗೂ ಸರಿತಾಳ ಆಪ್ತ ಗೆಳತಿ ಸುನಿತಾ ತನ್ನ ಮಗನ ಹುಟ್ಟುಹಬ್ಬಕ್ಕೆಂದು ಬೆಂಗಳೂರಿನ ತನ್ನ ಮನೆಗೆ ಕರೆದುಕೊಂಡು ಹೋದಾಗ ಸರಿತಾಳ ಅದೃಷ್ಟ ಬದಲಾಯಿತು. ಸುನಿತಾಳ ಗಂಡ ಕೆಲಸ ಮಾಡುತ್ತಿದ್ದ ಜಾಹೀರಾತು ಕಂಪನಿಯ ಪಾಲುದಾರನಾಗಿದ್ದ ವಸಂತರಾಜ್ ಕಣ್ಣಿಗೆ ಬಿದ್ದವಳಿಗೆ 5000 ಸಂಭಾವನೆ ನೀಡುತ್ತೇನೆಂದು ತನ್ನ 13 ಕಂತುಗಳ ಟಿವಿ ಧಾರವಾಹಿಗೆ ನಾಯಕಿಯಾಗಿಸಿದರು.
ಅಲ್ಲಿ ಸುಮ್ಮನಿರುವ ಬದಲು ಇಲ್ಲಿ ತನ್ನ ಪ್ರತಿಭೆಗೆ ಅವಕಾಶ ಸಿಗುತ್ತದೆ ಎಂದು ಒಪ್ಪಿ ಬೆಂಗಳೂರಿಗೆ ಬಂದಾಗ.. ಆಕೆಯ ತಂಗಿ ವನಿತಾ ಕೂಡ ಶಾಲಾ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದಳು. ಅಣ್ಣ ವೆಂಕಟೇಶನೂ ಇವರೊಂದಿಗೆ ಬಂದು ಉಳಿದ. ಈಕೆ ಟಿ.ವಿ ಧಾರಾವಾಹಿಯಲ್ಲಿ ಬಂದದ್ದೇ ನೆಪವಾಗಿಸಿಕೊಂಡ ರಾಜೀವ ವಿಜೇತಳನ್ನು ಮದುವೆಯಾಗಿದ್ದ.
ಇದೆಲ್ಲಾ ಆಗಿ ಈಗ ಸರಿತಾ ಖ್ಯಾತ ಚಿತ್ರತಾರೆಯಾಗಿದ್ದಳು. ವಸಂತರಾಜ್ ತನ್ನ ಮೊದಲ ಧಾರವಾಹಿಯಲ್ಲಿ ಆಕೆಯನ್ನು ನಾಯಕಿಯಾಗಿಸಿದರೂ.. ಆಕೆಗೆ ಸಲ್ಲಬೇಕಾದ ಸಂಭಾವನೆಯನ್ನು ನೀಡಿರಲಿಲ್ಲ. ಅದಕ್ಕಾಗಿ ಹಿಡಿಯಬೇಕಾದ ಅಡ್ಡಮಾರ್ಗವನ್ನು ಸೂಚಿಸಿದ. ನೈತಿಕ ಹಾದಿಯನ್ನು ಬಿಟ್ಟು ಆ ಹಾದಿಯಲ್ಲಿ ನಡೆಯಲು ಒಪ್ಪಲಿಲ್ಲ ಸರಿತಾ.
ಹಾಗೆ ನಡೆಯದ್ದು ಒಳ್ಳೆಯದೇ ಆಯಿತು. ಆಕೆ ನಂಬಿದ ಒಳ್ಳೆಯ ಮಾರ್ಗದಿಂದಲೇ ಆಕೆ ಮುಂಚೂಣಿಗೆ ಬಂದಳು. ವಿಜಯೇಶ್ವರಿ ವಿಷನ್ ಸಂಸ್ಥೆಯ ವಿಜಯಮ್ಮ ಹಿಂದೊಮ್ಮೆ ಖ್ಯಾತ ಚಿತ್ರನಟಿಯಾಗಿದ್ದವಳು. ಈಗ ನಿರ್ಮಾಪಕಿಯಾಗಿದ್ದರು. ಆಕೆಯ ಗರಡಿಯಲ್ಲಿ ಪಳಗುತ್ತಾ ಆಕೆಯ ಮಗ ಅರುಣನ ನಾಯಕ ನಟಿಯಾಗಿ ಮುಂದುವರೆಯುತ್ತಿದ್ದಳು ಸರಿತಾ.
ಹೀಗಿದ್ದಾಗಲೇ.. ಅಚಾನಕ್ಕಾಗಿ ಮನೆಗೆ ಬಂದ ವಸಂತರಾಜ್ ಆಕೆಯನ್ನು ತನ್ನ ನಿರ್ದೇಶನದ ಸಿನಿಮಾದಲ್ಲಿ ನಟಿಸುವಂತೆ ಹೇಳಿದರು. ಅದನ್ನು ಒಪ್ಪದ ಆಕೆಗೆ ಸಂಕಷ್ಟ ಎದುರಾಗಿತ್ತು. ಟಿ.ವಿ ರಾಜಕೀಯದ ದೆಸೆಯಿಂದ ಆಕೆಗೆ ಅವಕಾಶಗಳು ದೊರೆಯದೆ ಆಕೆ ಅಜ್ಞಾತಳಾಗಿಯೇ ಉಳಿದಳು. ಇದಿಷ್ಟರ ನಡುವೆ ಆಕೆಯ ತಂಗಿ ವನಿತ ಮತ್ತು ವೆಂಕಟೇಶನ ವಿವಾಹವಾಗಿತ್ತು. ಈಕೆಯ ಹಣದಿಂದಲೇ ಅಂಗಡಿ ಹಾಗೂ ಮನೆಯಾದರೂ ವೆಂಕಟೇಶನ ಹೆಂಡತಿ ಗೋಡಾ ಬಂದ ನಂತರ ಸರಿತಾಳ ಸ್ಥಾನ ಬದಲಾಯಿತು.
ಎರಡು ವರ್ಷಗಳ ಅಜ್ಞಾತವಾಸದ ನಂತರ ವಿಜಯಮ್ಮನವರಿಂದಲೇ ಆಕೆಗೆ ಮತ್ತೊಂದು ಅವಕಾಶ ಸಿಕ್ಕಿತ್ತು. ಅರುಣ ಮುಂಬೈನಲ್ಲಿದ್ದ ವಿಜಯ್ ಮೆಹ್ತಾ ಬಳಿಯಲ್ಲಿ ಸಹಾಯಕನಾಗಿ ಸೇರಿ ನಾಯಕನಾಗಿ ಬೆಳಕಿಗೆ ಬಂದ. ಸರಿತಾಳ ಪ್ರತಿಭೆಗೂ ಹಿಂದಿ ಟೆಲಿಫಿಲಂ ಮೂಲಕ ಅವಕಾಶವಾಯಿತು. ಎಲ್ಲವೂ ಸರಿಯಾದ ಮಾರ್ಗದಲ್ಲಿಯೇ ನಡೆಯುತ್ತಿದ್ದಾಗ ಮೆಹ್ತಾ ಮದುವೆಯಾಗಿದ್ದ ನೀತುಶ್ರೀ ಸರಿತಾ ಕುರಿತು ಅನುಮಾನದಿಂದಲೇ ನೋಡುತ್ತಿದ್ದಳು.
ವಿಜಯಮ್ಮನವರು ನಿಸ್ವಾರ್ಥವಾಗಿಯೇ ಈಕೆಯನ್ನು ಮುಂದೆ ತಂದರು. ಈಕೆಯ ಹಣಕಾಸಿನ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು. ಇಂತಹಾ ಸಂದರ್ಭದಲ್ಲಿ ಮೇಕಪ್ ಮ್ಯಾನ್ ಆಗಿದ್ದ ಜಗದೀಶನನ್ನು ಮದುವೆಯಾಗಲು ಸೂಚಿಸಿದರು. ಆದರೆ, ಹಣ ಇಲ್ಲದ ಆತನನ್ನು ಮದುವೆಯಾಗಲು ನಿರಾಕರಿಸಿದ್ದಳು ಸರಿತ. ಹಾಗೆಂದು, ಆಕೆಯನ್ನು ದೂಷಿಸದೇ.. ಹಿಂದಿನಂತೆಯೇ ಸಹಕರಿಸುತ್ತಿದ್ದರು ವಿಜಯಮ್ಮ.
ವಿಜೇತಳನ್ನು ಮದುವೆಯಾಗಿದ್ದ ರಾಜೀವನಿಗಿನ್ನೂ ಸರಿತಾ ಮೇಲೆ ಮನಸ್ಸಿತ್ತು. ವಿಜೇತ ಕುಟುಂಬದ ಪರಿಸ್ಥಿತಿ ಏನಿತ್ತು..??
ಈಕೆಯಿಂದಲೇ ಮುಂದೆ ಬಂದಿದ್ದ ವನಿತಾ ಹಾಗೂ ವೆಂಕಟೇಶ ಸಹ ಇವಳಿಗೆ ಮೋಸ ಮಾಡಿ ಹಣ ಮನೆ ಹಾಗೂ ಅಂಗಡಿಯನ್ನು ಅವರದ್ದನ್ನಾಗಿಸಿಕೊಳ್ಳಲು ನೋಡಿದರೂ.. 'ಹಾಲಿನದ್ದು ಹಾಲಿಗೆ, ನೀರಿನದ್ದು ನೀರಿಗೆ' ಎಂಬಂತೆ ಅವು ಅವರಿಗೆ ದಕ್ಕಿರಲಿಲ್ಲ.
'ಹೆಣ್ಣಿಗೊಂದು ಗಂಡು, ಗಂಡಿಗೊಂದು ಹೆಣ್ಣು' ಎಂದು ಇದ್ದೇ ಇರುತ್ತಾರೆ. ಹಾಗೆ ಸರಿತಾಳಿಗೆ ಜೊತೆಯಾದದ್ದು ಖ್ಯಾತ ಉದ್ಯಮಿಯಾಗಿದ್ದ ಸುಂದರ್ ರಾಜ್ ಮೋಹನ್ ರಾಜ್. ಪರಸ್ಪರರ ನಡುವೆ ಇದ್ದ ಸ್ನೇಹ ಪ್ರೇಮಕ್ಕೆ ತಿರುಗಿತು. ಆತನಿಗೆ ಮಧ್ಯಮ ವರ್ಗದ ಜೀವನ ನಡೆಸುವ ಪರಿಸ್ಥಿತಿ ಬಂದಾಗಲೂ.. ಆತನ ಕೈಬಿಡದೆ ಮದುವೆಯಾದಳು ಸರಿತಾ. ಅಷ್ಟರಲ್ಲಾಗಲೇ ಆಕೆಯ ನಾಯಕಿಯ ಗ್ಲಾಮರ್ ಕುಂದಿ ಬೇರೆಯ ಪಾತ್ರಗಳನ್ನು ಮಾಡಲು ಕರೆ ಬರುತ್ತಿತ್ತು. ಆಕೆಯು ವೈವಾಹಿಕ ಜೀವನದಿಂದ ತನ್ನ ಇಬ್ಬರು ಮಕ್ಕಳನ್ನು ಪಡೆದರು.
ಎಲ್ಲವೂ ಸರಿಯಾಗಿ ನಡೆಯುತ್ತಿತ್ತು ಎನ್ನುವಾಗಲೇ ವಿಜಯಮ್ಮನವರಿಗೆ ಕೊಟ್ಟ ಹಣ ಹೆಚ್ಚಿ ತನ್ನ ಪಾಲಿಗೆ ಬರಬೇಕಾದದ್ದು ನೆನಪಾಗಿತ್ತು. ತನ್ನ ಪತಿ ಮೋಹನ್ ರಾಜ್ ಹೇಳಿದ ಮಾತಿನಿಂದಾಗಿ ವಿಜಯಮ್ಮನವರ ಬಳಿ ಹೋದ ಸರಿತಾಳಿಗೆ ತನ್ನ ಬದುಕಿನಲ್ಲಿ ನಡೆದಿದ್ದ ಘಟನೆಯೊಂದು ಸತ್ಯ ಅರಿವಾಗಿತ್ತು. ಆ ಘಟನೆಯಿಂದ ಅವಳು ಬದಲಾದಳೇ..?? ಅಥವಾ ಅವಳ ಬದುಕೇ ಬದಲಾಯಿತೇ..?? ವಿಜಯಮ್ಮ ಅವಳ ಜೀವನದಲ್ಲಿ ತೆಗೆದುಕೊಂಡಿದ್ದ ಅಂತಹಾ ನಿರ್ಧಾರವಾದರೂ ಏನು..?? ಅದರ ಅರಿವಿದ್ದ ಮೋಹನ್ ರಾಜ್ ಅಷ್ಟು ವರ್ಷ ಸತ್ಯವನ್ನು ಅವಳಿಂದ ಮುಚ್ಚಿಟ್ಟದ್ದೇಕೆ..?? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ತಿಳಿಯಲು ಓದಿ ಹೆಚ್.ಜಿ. ರಾಧಾದೇವಿಯವರ 'ಮೋಡ ಸರಿದ ಸೂರ್ಯ'.
ಮೋಡ ಸರಿದ ಸೂರ್ಯ ಎಂಬ ಕಾದಂಬರಿ ಶೀರ್ಷಿಕೆಯೇ ಹೇಳುವಂತೆ ತನ್ನ ಪ್ರತಿಭೆಗೆ ಅಂಟಿದ್ದ ಕಳಂಕದಿಂದ ಹೊರ ಬಂದಿದ್ದಳು ಸರಿತಾ. ನಿಜವಾದ ಪ್ರತಿಭೆ ಎಲ್ಲೆಡೆ ಮಿನುಗುತ್ತದೆ ಎಂಬುದು ಸತ್ಯವಾದರೂ.. ಟಿ.ವಿ ಹಾಗೂ ದೃಶ್ಯ ಮಾಧ್ಯಮಗಳ ಪ್ರಪಂಚದಲ್ಲಿ ಹೆಣ್ಣು ಮಕ್ಕಳು ಇರಬೇಕಾದ ರೀತಿ ಹಾಗೂ ಅಲ್ಲಿ ನಡೆಯುವ ಒಳ ಹೋರಾಟಗಳು, ರಾಜಕೀಯ ಅಲ್ಲಿನ ನೈತಿಕತೆ-ಅನೈತಿಕತೆ, ನೈತಿಕತೆಯಿಂದಲೇ ನಡೆಯುವ ಹೆಣ್ಣುಗಳ ಸ್ಥಿತಿ ಇದೆಲ್ಲವನ್ನೂ ಬಿಡಿಸಿಟ್ಟಿದ್ದಾರೆ.
ನನಗೆ ವಿಜಯಮ್ಮನವರ ಪಾತ್ರ ಬಹಳ ಇಷ್ಟವಾಯಿತು. ಉದಾತ್ತ ಚಿಂತನೆಯ ಹೆಣ್ಣುಮಗಳೊಬ್ಬಳ ಪಾತ್ರವಿದು. ತಾನಾಯಿತು ತನ್ನ ಕಾರ್ಯವಾಯಿತು, ತನ್ನ ಮಕ್ಕಳಾಯಿತು ಎಂದು ಸ್ವಾರ್ಥವನ್ನೇ ನೋಡಿಕೊಂಡಿರಬಹುದಾಗಿದ್ದ ಕಾಲದಲ್ಲಿಯೂ.. ತನ್ನ ಜೀವನಕ್ಕೂ ಹಾಗೂ ಸರಿತಾಳ ಜೀವನಕ್ಕೂ ಇರುವ 'ನಟಿ' ಎಂಬ ಸಾಮ್ಯತೆಯನ್ನು ಮನದಲ್ಲಿಟ್ಟುಕೊಂಡು ಆಕೆಯನ್ನು ಭವಿಷ್ಯವನ್ನು ರೂಪಿಸಿದ ಪರಿ ಇಷ್ಟವಾಯಿತು.
ವನಿತಾ ಹಾಗೂ ವೆಂಕಟೇಶರ ಪಾತ್ರಗಳು ಎರಡು ಶೇಡ್ ಳಿಂದ ಕೂಡಿವೆ. ಪಶ್ಚಾತಾಪದಿಂದ ಅವರು ಮತ್ತೆ ಆಕೆಯ ಮುಂದೆ ಸತ್ಯವನ್ನು ಒಪ್ಪಿಕೊಂಡು ಕ್ಷಮೆ ಕೇಳಿದ ಪರಿ ಸಂಬಂಧಗಳನ್ನು ಉಳಿಸಿಕೊಳ್ಳುವ ಸಾಧ್ಯತೆಗಳನ್ನು ತೋರುತ್ತದೆ. ಹಣ ಎಂತಹಾ ಮನುಷ್ಯನನ್ನೂ ಬದಲಿಸಬಲ್ಲದು ಎಂಬುದಕ್ಕೆ ಉತ್ತಮ ಉದಾಹರಣೆ ಇದು.
ಎಲ್ಲವನ್ನು ಕ್ಷಮಿಸಿ, ಒಪ್ಪಿ-ಅಪ್ಪುವ ಸರಿತಾಳ ಗುಣ, ಅವಳು ಕೇವಲ ದೃಶ್ಯಮಾಧ್ಯಮದಲ್ಲಿ ಮಾತ್ರ ನಾಯಕಿಯಲ್ಲದೇ, ಬದುಕಿನಲ್ಲಿಯೂ ಉದಾತ್ತ ಚಿಂತನೆಗಳನ್ನು ಅಳವಡಿಸಿಕೊಂಡ ನಾಯಕಿ ಎಂಬುದನ್ನು ಸೂಚಿಸುತ್ತದೆ.
ಹೆಣ್ಣು ತಾನು ಜೀವನದಲ್ಲಿ ಏನೇ ಸಾಧನೆ ಮಾಡಿದರೂ... ಆಕೆಗೆ ಸಂಗಾತಿಯ ಅವಶ್ಯಕತೆ ಇರುತ್ತದೆ ಹಾಗೂ ಅಂತಹಾ ಸಾಂಗತ್ಯವಷ್ಟೇ ಅವಳ ಬದುಕಿನಲ್ಲಿ ನೆಮ್ಮದಿ ತರಬಲ್ಲದು ಎನ್ನುವ ಅಂಶವನ್ನು ತೋರುತ್ತಲೇ.. ಹೆಣ್ಣು ಸಾಮಾಜಿಕವಾಗಿ ಹಾಗೂ ಕೌಟುಂಬಿಕವಾಗಿ ನೆಲೆಯೂರಬೇಕಾದ ಹಾಗೂ ನೆಲೆಯೂರಬಹುದಾದ ಸಾಧ್ಯಾಸಾಧ್ಯತೆಗಳ ತೋರಿಸುತ್ತಲೇ ಬದುಕು ಹೀಗಿದ್ದರೆ ಚೆನ್ನ ಎನ್ನುತ್ತಾರೆ ಲೇಖಕಿ.
ಚೆಂದದ ಶೀರ್ಷಿಕೆಯ ಈ ಕಾದಂಬರಿ ಸರಾಗವಾಗಿ ಓದಿಸಿಕೊಳ್ಳುತ್ತಾ.. ಗಾತ್ರದಲ್ಲಿ ಪುಟ್ಟದಾದರೂ ದೊಡ್ಡ ಪಾಠವೊಂದನ್ನು ಹೇಳುತ್ತದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ