ಪುಸ್ತಕದ ಶೀರ್ಷಿಕೆ : #ಕ್ವಾರಂಟೈನ್
ಲೇಖಕರು : ಎಂ. ಆರ್. ಕಮಲ
ಪ್ರಕಾಶಕರು : ಕಥನ ಪ್ರಕಾಶನ
ಪ್ರಥಮ ಮುದ್ರಣ : 2020
ಪುಟಗಳು : 96
ಬೆಲೆ : 85 ರೂ.
ಎಂ.ಆರ್ ಕಮಲ ಮೇಡಂ ಬರಹಗಳನ್ನು, ಕವಿತೆಗಳು ಅಥವಾ ಅನುವಾದಿತ ಕವಿತೆಗಳನ್ನು ಓದುತ್ತಾ ಸಾಗಿದಂತೆ ಹಲವಾರು ಹೊಸ ಹೊಳವುಗಳು ಕಾಣಿಸುತ್ತವೆ. ಅದರಲ್ಲಿಯೂ.. ಇವರ ಪುಸ್ತಕಗಳನ್ನು ಓದಿದಾಗ ಮೊಟ್ಟಮೊದಲಿಗೆ ಅನ್ನಿಸುವುದು ಎಂತಹಾ ನಿರಾಶಾದಾಯಕ ಸಂದರ್ಭವನ್ನು ಸಹಾ ಆಶಾದಾಯಕವಾಗಿ ನೋಡುವ ಶೈಲಿ. ಈ ಪುಸ್ತಕ ನನಗೆ ಇಷ್ಟವಾದದ್ದು ಇದೇ ಕಾರಣಕ್ಕೆ. ಏಕೆಂದರೆ, ಇದು ಕ್ವಾರಂಟೈನ್ ಜೀವನ, ದುರಿತಕಾಲದ ಬರಹಗಳೇ ಆದರೂ.. ಇಲ್ಲಿ ಎಲ್ಲಿಯೂ ನಿರಾಸೆ ಕಾಣುವುದಿಲ್ಲ. ಬದಲಿಗೆ, ಅದರಿಂದ ಹೊರಬರುವ ರೀತಿ, ಮಾಡಬೇಕಾದ ಕೆಲಸಗಳು ಕಂಡುಬರುತ್ತವೆ. ಫೇಸ್ಬುಕ್ ನಲ್ಲಿ ಬಿಡಿ ಬರಹಗಳ ರೂಪದಲ್ಲಿ ಕೆಲವನ್ನು ಓದಿದ್ದರೂ.. ಎಲ್ಲವನ್ನೂ ಓದಿರಲಿಲ್ಲ. ಮತ್ತೊಮ್ಮೆ ಈ ಪುಸ್ತಕವನ್ನು ತೆರೆದಾಗ ಆ ದಿನಗಳನ್ನು ಮೆಲುಕು ಹಾಕಿದ ಭಾವ ಮೂಡಿತು.
ಕೊರೊನಾ ಕಾಲದ ತನ್ನ ಭಾವನೆಗಳನ್ನು, ಅನುಭವವನ್ನು ಎಷ್ಟು ದಿನಗಳು ಸಾಧ್ಯವೋ ಅಷ್ಟು ದಿನಗಳು ಬರವಣಿಗೆಯಲ್ಲಿ ಹಿಡಿದಿಡುವ ಸವಾಲನ್ನು ಅವರಿಗೆ ಒಡ್ಡಿಕೊಂಡು ಈ ಬರಹಗಳನ್ನು ಬರೆದಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಕೊರೊನಾ ಕಾಲವನ್ನು ಬಹುಬೇಗ ದಾಟಿ ನಿತ್ಯದ ಬದುಕಿಗೆ ಮರಳುತ್ತೇವೆ ಎನ್ನುವ ಆತ್ಮವಿಶ್ವಾಸವನ್ನು ವ್ಯಕ್ತಪಡಿಸುತ್ತದೆ ಪುಸ್ತಕ. ಬರಹದ ಮೂಲಕ ಓದುಗರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾರ್ಯವನ್ನು ಮಾಡಿದ್ದಾರೆ.
"ವಿಕಾರಿ ಸಂವತ್ಸರ ತಮ್ಮೆಲ್ಲ ವಿಕಾರಗಳನ್ನು ಪ್ರಕಟಿಸಿಯೇ ಹೋದಳು. ಶಾರ್ವರಿಯಾದರು ಈ ಭೀತಿ ಕಳೆವಳೇ" ಎಂದು ಯೋಚಿಸುತ್ತಲೇ "ಯಾವುದೋ ಸಂವತ್ಸರದ ಮೇಲೆ ತಪ್ಪು ಹೊರಿಸಿ ಕೈ ತೊಳೆದುಕೊಳ್ಳುವುದು ಎಷ್ಟು ಸರಿ ?" ಎಂದು ಪ್ರಶ್ನಿಸುತ್ತಾ.. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಹಾಗೂ ಹೆಚ್ಚಿಸಲು ಅಲ್ಲಲ್ಲಿ ಕವಿತೆಗಳನ್ನು ಬರೆಯುತ್ತಾರೆ.
ಕ್ವಾರಂಟೈನ್ ದಿನಗಳಲ್ಲಿ ಹೊರಗೆಲ್ಲೂ ಓಡಾಡಬಾರದು ಎನ್ನುವ ನಿಯಮ ವಿಧಿಸಿದಾಗ ಅವರೊಂದಿಗೆ ಇಲ್ಲದ ಅಮ್ಮನೊಂದಿಗೆ ಕಾಲ್ಪನಿಕ ಮಾತುಕತೆಯನ್ನು ಆರಂಭಿಸುವ ರೀತಿಯಲ್ಲಿ ಬರೆದಿರುವ ಮಾತುಗಳು, ಆಗಿನ ಕಾಲದ ಅಮ್ಮ ಇದ್ದದ್ದಕ್ಕೂ.. ಈಗಿನ ಕಾಲದ ಮಕ್ಕಳು ಇರುವುದಕ್ಕೂ ಇರುವ ವ್ಯತ್ಯಾಸ ತೋರುತ್ತಾರೆ.
ನನ್ನದು ಕೂಡಾ ತೋಟದ ಮನೆಯಾಗಿದ್ದರಿಂದ ಕ್ವಾರಂಟೈನ್ ದಿನಗಳು ನಮಗೆ ಹೆಚ್ಚೇನೂ ತ್ರಾಸದಾಯಕವಾಗಿರಲಿಲ್ಲ. ಏಕೆಂದರೆ, ಮಾಮೂಲು ದಿನಗಳಲ್ಲೂ ನಾವು ಕಳೆದಿದ್ದಕ್ಕಿಂತ ತೀರಾ ವಿಭಿನ್ನವಾಗೇನಿರಲಿಲ್ಲ.
ಇಲ್ಲಿ ಸ್ತ್ರೀ ಸ್ವಾತಂತ್ರದ ಕುರಿತಾಗಿಯೂ ಮಾತು ಬಂದಾಗ ಅಮ್ಮನ ಮೂಲಕ ಹೇಳುವ ಮಾತು ಹೀಗಿದೆ. "ಹೆಣ್ಣುಮಕ್ಕಳು ಕ್ವಾರಂಟೈನ್ ಆಗಿದ್ದು ಈಗಲೇನೆ? ಎಷ್ಟು ಸಾವಿರ ವರ್ಷಗಳಾಯ್ತು ಕೊರೊನಾ ವೈರಸ್ ಹೆಣ್ಣುಮಕ್ಕಳಿಗೆ ಬಂದು, ಈಗ ಜನ ಮಾತಾಡ್ತಿದ್ದಾರೆ ಕಣೆ." ಎನ್ನುವ ಮಾತು ಎಷ್ಟು ನಿಜವಲ್ಲವಾ ಎನಿಸುತ್ತದೆ.
ಸುತ್ತಮುತ್ತಲಿನ ಕ್ವಾರಂಟೈನ್ ದಿನಗಳ ದಿನಚರಿಗಳನ್ನು ಸುಮ್ಮನೆ ನಮ್ಮ ಮುಂದಿಡುತ್ತಾರೆ ಹೊರತು ಅಲ್ಲೆಲ್ಲೂ ನನಗೆ ನಿರಾಸೆಯ ಪಸೆ ಕಾಣಿಸಲಿಲ್ಲ. ಬದಲಾಗಿ ಅಂತರಾಳದಲ್ಲೆಲ್ಲೋ ಇರುವ ಅವರ ಒಳಮಾತುಗಳ ಆತ್ಮವಿಶ್ವಾಸವು ವ್ಯಕ್ತವಾದಂತೆನಿಸಿತು.
"ಎರಡು ಪಾವು ಅನ್ನ ಬೇಯಿಸುತ್ತಿದ್ದವಳು ಮೂರು ಪಾವು ಹಾಕುತ್ತಿದ್ದಾಳೆ. ಬೆಕ್ಕು, ನಾಯಿಗಳ ಕೂಗು ಅವಳಿಗೀಗ ಕೇಳುತ್ತಿದೆ." ಎನ್ನುವ ಮಾತು ಕೊರೊನ ಕಾಲದಲ್ಲಿ ಮನುಷ್ಯರು ರೂಡಿಸಿಕೊಂಡ ಮಾನವೀಯತೆಯ ಮುಖದರ್ಶನ ಮಾಡಿಸಿತು. ಈ ಸಾಲು ಕೇವಲ ಉದಾಹರಣೆಯಷ್ಟೇ.
ಏಪ್ರಿಲ್ ತಿಂಗಳೆಂದರೆ ಪರೀಕ್ಷೆಗಳೆಂದು ಓಡಾಡುತ್ತಿದ್ದ ವಿದ್ಯಾರ್ಥಿಗಳು, ಪರೀಕ್ಷೆ ಇಲ್ಲವೆಂದು ಸಂತಸ ಪಡುತ್ತಿದ್ದ ದಿನಗಳನ್ನು ಗಮನಿಸಿ, ಇಟಲಿಯ ಕಾರ್ಲೊ ಕೋಲೋಡಿ ಎಂಬುವನು ಬರೆದಿರುವ ಪಿನಾಕಿಯೋ ಕತೆಯ ಎಲ್ಲ ದಿನಗಳು ಭಾನುವಾರಗಳೇ ಆದರೆ ಹೇಗಿರುತ್ತದೆ ಎನ್ನುತ್ತಾ ವಿದ್ಯಾರ್ಥಿಗಳಿಗೆ ಪಾಠ ಹೇಳುವಂತಿದೆ.
ಲೇಖಕಿ ತಾವು ಸಂತೆಯಲ್ಲಿ ಹುಟ್ಟಿ ಸಂತೆಯಲ್ಲೇ ಬೆಳೆದವಳು ಎಂದು ತಾವು ಗಲಗಲನೆ ಇದ್ದ ದಿನಚರಿಯಿಂದ ಅಚಾನಕ್ಕಾಗಿ ಮೌನಕ್ಕೆ ಶರಣಾದ ದಿನಗಳ ಕುರಿತು ಹೇಳುತ್ತಾರೆ. 'ಸ್ಮಶಾನ ಮೌನ' ಎನ್ನುವ ಪದವನ್ನು ಹೇಳುತ್ತಿದ್ದವಳು ಈಗ ಅರ್ಥ ಮಾಡಿಕೊಳ್ಳುತ್ತಿದ್ದುದರ ಬಗೆಗೆ ಹೇಳುತ್ತಾರೆ. ಅದನ್ನು ಬಹಳ ಮನಮುಟ್ಟುವಂತೆ "ಧ್ಯಾನದ ಹಂಗಿಲ್ಲದೆ ಬದುಕಿದವಳಿಗೆ ಧ್ಯಾನ ಬದುಕಿನ ಭಾಗವಾಗಿ ಹೋಗಿದೆ" ಎನ್ನುತ್ತಾರೆ.
ಸಾವಿನ ಅಂಕಿ-ಅಂಶಗಳತ್ತ ಆಸಕ್ತಿ ವಹಿಸುತ್ತಿದ್ದವರು.. ಆಸಕ್ತಿ ಕಳೆದುಕೊಂಡು, ನಂತರದಲ್ಲಿ ಕ್ವಾರಂಟೈನ್ ದಿನಗಳನ್ನು ಹಿಂದಿನ ಪ್ಲೇಗ್ ದಿನಗಳಿಗೆ ಹೋಲಿಸುತ್ತಲೇ.. ತಾನು ಪ್ಲೇಗ್ ಕುರಿತು ಕೇಳಿದಂತೆ ಕ್ವಾರಂಟೈನ್ ಕುರಿತು ಕೇಳುವವರು ಮುಂದೊಂದು ದಿನ ಇರಬಹುದು ಎನ್ನುತ್ತಾ ಕೊರೊನಾ ಕಾಲದ ಸಂಗತಿಗಳನ್ನು ಬರೆಯುತ್ತಿರುವ ಸಂಗತಿ ಬಿಚ್ಚಿಡುತ್ತಾರೆ.
"ಅವಳೆಂದೂ ತನ್ನ ಬದುಕನ್ನು ನೋವಿನ ಕೂಪ ಮಾಡಿಕೊಂಡಿಲ್ಲ. ತಲ್ಲಣ, ತಳಮಳಗಳನ್ನು ಕ್ರಿಯಾಶೀಲವಾಗಿ ನಿಭಾಯಿಸುವುದನ್ನು ಹುಟ್ಟಿನಿಂದಲೇ ಕಲಿತಿದ್ದಾಳೆ" ಎನ್ನುತ್ತಾ ಅವಳ/ತನ್ನದೇ ಮೂಲಕ ಇಂದಿನ ಜನತೆಯು ಇರಬೇಕಾದ ದಾರಿ ತೋರುತ್ತಾರೆ.
ಶಿಶುನಾಳ ಶರೀಫರ ತತ್ವಪದಗಳಲ್ಲಿನ "ಕೋಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ"ಯನ್ನು ನೆನಪಾಗಿಸಿ ವಿದ್ಯಾರ್ಥಿಗಳು ಕೇಳುತ್ತಿದ್ದ ಪ್ರಶ್ನೆ "ಸಣ್ಣದು ದೊಡ್ಡದನ್ನು ಹೇಗೆ ನುಂಗುತ್ತದೆ?" ಎಂಬುದನ್ನು ಸಾಂದರ್ಭಿಕವಾಗಿ ನೆನೆಸಿಕೊಂಡು, ಹೊಸ ಅರ್ಥ ಹೊಳೆಸುವ ಬರಿಗಣ್ಣಿಗೂ ಕಾಣದ ಕ್ರಿಮಿ ಜಗತ್ತಿನ ಜನರನ್ನೆಲ್ಲ ನುಂಗಿ ಹಾಕುತ್ತಿರುವ ಸತ್ಯದ ದರ್ಶನ ಮಾಡಿಸುತ್ತಾರೆ.
ಮಂಕು ಬಡಿದ ದಿನಗಳಲ್ಲಿ ಹಿಂದಿನ ನೆನಪುಗಳನ್ನೆಲ್ಲಾ ಮೆಲುಕು ಹಾಕಿಕೊಂಡು.. ತಾವು ಕವಿತೆಗಳನ್ನು ಕಂಠಪಾಠ ಮಾಡಿದ ದಿನಗಳು, ತಮ್ಮ ಬಳಿ ಇರುವ ಸೀರೆಗಳ ಕುರಿತು ಬಿಚ್ಚಿಡುತ್ತಾರೆ. ಯಾರ ನೆರವಿಲ್ಲದೆಯೂ ತನ್ನ ಮನಸ್ಸನ್ನು ಖುಷಿಯಾಗಿಟ್ಟುಕೊಳ್ಳುವ ಹಲವು ದಾರಿಗಳನ್ನು ಅವರ ಅನುಭವಗಳ ಮೂಲಕ ಓದುಗರಿಗೆ ತಿಳಿಸುತ್ತಾರೆ. ವಿದ್ಯಾರ್ಥಿಗಳೊಳಗಿನ ಸಂವಾದವನ್ನು ನೆನೆಸಿಕೊಳ್ಳುತ್ತಾರೆ. ಪಾಶ್ಚಾತ್ಯ ಸಾಹಿತ್ಯದ ಹಲವು ಕವಿತೆಗಳನ್ನು, ಕಥೆಗಳನ್ನು ಅನುವಾದಿಸಿ ಪರಿಚಯಿಸುತ್ತಾರೆ. ಚಿಂತನೆಗಳನ್ನು ದಾಟಿಸುತ್ತಾರೆ. ಅವರು ವೃತ್ತಿಯಲ್ಲಿದ್ದ ದಿನಗಳಿಗೂ.. ಈಗ ನಿವೃತ್ತರಾಗಿರುವ ದಿನಗಳಿಗೂ ಇರುವ ವ್ಯತ್ಯಾಸವು ತಿಳಿಯುತ್ತದೆ. ಸೀರೆಯ ಕುರಿತ ಸವಾಲು ಅವರಿಗೆ ಸವಾಲೇ ಆಗದ ಬಗೆ ಹೇಗೆ ಎಂದು ತಿಳಿಸುತ್ತಾರೆ. ಚಟುವಟಿಕೆಯಿಂದ ಇದ್ದ ದಿನಗಳಿಗೂ.. ಚಟುವಟಿಕೆ ಇಲ್ಲದ ದಿನಗಳಿಗೂ ಇರುವ ಜೀವಂತಿಕೆಯ ವ್ಯತ್ಯಾಸ ಒಂದು ಸ್ವ ಅನುಭವದಿಂದ ಅವರಿಗೆ ಹೊಳೆದ ಬಗೆ ತಿಳಿಸುತ್ತಾರೆ.
ಹಸಿವಿನ ಸಂಕಟದಿಂದ ವಲಸೆ ಹೋಗುತ್ತಿದ್ದ ಕಾರ್ಮಿಕರ ಮನಸ್ಸಿನ ಬೇಗುದಿ ಹೀಗಿರಬಹುದಾ..?? ಎನ್ನುವ ಬೇರೆಯ ತೆರನಾದ ಆಲೋಚನೆಯನ್ನು ತೋರುತ್ತಾರೆ. ಕ್ವಾರಂಟೈನ್ ದಿನಗಳಲ್ಲಿ ಸಾಮರಸ್ಯದ ಬದಲಾಗಿ, ಗೃಹ ಕಲಹಗಳು ಶುರುವಾದ ಬಗೆಯನ್ನು ಹೇಳುತ್ತಾರೆ.
ಇಲ್ಲಿ ಕೇವಲ ಕ್ವಾರಂಟೈನ್ ಕುರಿತ ಚಿತ್ರಣಗಳಿಲ್ಲ. ಅದನ್ನು ಮೀರಿದ ಆಲೋಚನೆಗಳಿವೆ. ಅದನ್ನು ಮೀರಬಹುದಾದ ಚೈತನ್ಯ ತುಂಬುವ ಹಲವು ಕವಿತೆಗಳು, ಘಟನೆಗಳು ನಮ್ಮವೇ ಎನಿಸುವಂತೆ ಕಾಣುತ್ತಾ ಹೋಗುತ್ತವೆ. ನಮ್ಮೊಳಗಿನ ನೋವುಗಳೆಲ್ಲವನ್ನೂ ಮೀರಿ ನಮಗೆ ನಾವೇ ಚೈತನ್ಯ ತುಂಬಿಕೊಳ್ಳುವ ಬಗೆ ಸಿಗುತ್ತದೆ. ನನಗಿದು ಕೇವಲ ಕೊರೊನಾ ಕಾಲದ ಕ್ವಾರಂಟೈನ್ ನ ಚಿತ್ರಣದಂತೆ ಕಾಣಲಿಲ್ಲ. ಬದಲಾಗಿ ನಮ್ಮನ್ನು ನಾವೇ ಯಾವುದೋ ನೋವಿನ ಕೂಪದೊಳಗೆ ಬಂಧಿಸಿಕೊಂಡು, ಕ್ವಾರಂಟೈನ್ ಮಾಡಿಕೊಂಡಾಗ.. ಮಾಡಿಕೊಳ್ಳಬೇಕಾಗಿ ಬಂದಾಗ ಅದೆಲ್ಲವನ್ನು ಮೀರಿ ನಿಲ್ಲುವ ಬಗೆ ಸಿಕ್ಕಿತು.
ಹಲವು ಕಾವ್ಯಗಳು, ವಚನಗಳು, ಹಲವು ರೂಪಕಗಳು, ಹಲವು ಅನುಭವಗಳು, ಹಲವಾರು ಒಳ ಮನಸ್ಸಿನ ಚಿಂತನೆಗಳು.. ಸೃಜನಾತ್ಮಕ ಶೈಲಿಯಲ್ಲಿ ಮೂಡಿಬಂದು ನೋವು, ತಳಮಳ, ಒಂಟಿತನ ಇವೆಲ್ಲವೂ ಸೃಜನಾತ್ಮಕವಾಗಿ ಬದಲಾಗಬಹುದಾದ ಸಂದರ್ಭಗಳ ಚಿತ್ರಣವನ್ನು ಕಣ್ಣಮುಂದಿಡುತ್ತದೆ.
ಅಂದಿನ ಕ್ವಾರಂಟೈನ್ ಕಾಲ ಮುಗಿದಿದೆ. ಇನ್ನು ನಾವು ನಮ್ಮನ್ನು ಕ್ವಾರಂಟೈನ್ ಮಾಡಿಕೊಂಡಾಗ ಹೊರಬರಲೇಬೇಕು. ನೋವುಗಳನ್ನು ಮೆಟ್ಟಿ ನಿಲ್ಲಲೇಬೇಕು. ಸಹಜ ಸ್ಥಿತಿಗೆ ಬರಲು ನಮ್ಮನ್ನು ಬೇರೆಯವರು ಒಪ್ಪಿಸಲಾಗದು. ಬದಲಾಗಿ ನಾವೇ ಒಗ್ಗಿಕೊಳ್ಳಬೇಕು ಎಂಬ ವಾಸ್ತವವನ್ನು ಹೇಳುವ ಪುಸ್ತಕ. ಜೀವಂತಿಕೆಯನ್ನು ತುಂಬಲು ಇಂತಹಾ ಪುಸ್ತಕವೊಂದು ಬೇಕಿತ್ತು. ಅಂತಹಾ ಪುಸ್ತಕದ ಓದು ಇದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ