ಮಂಗಳವಾರ, ನವೆಂಬರ್ 19, 2019

ಅವನ ಸಬಲತೆ-ದುರ್ಬಲತೆಯ ನಡುವಲ್ಲಿ..


ಹೆಚ್ಚಿನಂಶದ ಹೆಣ್ಣುಮಕ್ಕಳು ಒಂದಲ್ಲಾಒಂದು ಬಾರಿ "ನಾನು ಪುರುಷನಾಗಿ ಹುಟ್ಟಬೇಕಿತ್ತು" ಅಂತಾ ಅಂದುಕೊಂಡಿರುತ್ತಾರೆ. ಪುರುಷ ಪ್ರಪಂಚದ ಸ್ವಚ್ಛಂದತೆ ಅನುಭವಿಸಲು ಕನಸು ಕಂಡಿರುತ್ತಾರೆ. ಆದರೆ ಅದೇ ಮನಸ್ಸಲ್ಲಿ "ಪುರುಷ ದ್ವೇಷಿ" ನಿಲುವು ಕೂಡಾ ಬಂದೇ ಇರುತ್ತದೆ. ಯಾವುದೋ ಅತ್ಯಾಚಾರದ ಸುದ್ದಿ ಕೇಳಿದಾಗ ಪುರುಷರ ಮೇಲೆ ಅಸಹ್ಯ ಹುಟ್ಟುವಂತಹಾ ಭಾವನೆ ಕೂಡಾ ಬಂದಿರುತ್ತದೆ. ಹಾಗಾದರೆ ಉಳಿಯುವುದು ಯಾವ ಭಾವನೆ? ನಿಮಗೆ ಇದಕ್ಕೆ ಉತ್ತರ ಕೊನೆಯಲ್ಲಿ ಸಿಗುತ್ತದೆ.

ಮಾರ್ಚ್ 8 ಅಂದಾಕ್ಷಣ "ವುಮೆನ್ಸ್ ಡೇ" ಎಂದು ನೆನಪಾಗುವಷ್ಟು ಸುಲಭಕ್ಕೆ "ಮೆನ್ಸ್ ಡೇ" ನೆನಪಾಗುವುದಿಲ್ಲ. ಹಾಗೆಂದು ಪುರುಷರು ಮೂಲೆಗುಂಪಾಗಿದ್ದಾರೆಂದೇನಲ್ಲ. ಮನೆಯೊಳಗಿದ್ದ ಸ್ತ್ರೀಯರು ಮನೆಯಾಚೆ ಬಂದಾಗ, ಸಾಧನೆ ಮಾಡಿದಾಗ ಆಚರಣೆ ಮಹತ್ವ ಪಡೆಯಿತು. ಅದೇ, ಪುರುಷ ಪ್ರಪಂಚದಲ್ಲಿ ಅಂತಹಾ ಬದಲಾವಣೆಯೇನೂ ಗೋಚರಿಸಲಿಲ್ಲ. ಮೊದಲಿನಿಂದಲೂ ಹೊರಗೇ ಇದ್ದವನು, ಸಾಧನೆ ಮಾಡಿದವನ ಆಚರಣೆಗೆಂದೂ ಅಷ್ಟೇನೂ ಮಹತ್ವ ಬರಲಿಲ್ಲವೇನೋ. ಆದರೆ, ಕೆಲವರಂತೂ ವರಾತ ತೆಗೆಯುತ್ತಾರೆ. ಮಹಿಳಾ ದಿನಾಚರಣೆಗೆ ನಾವು ಶುಭಾಷಯ ಕೋರಿದ್ದೆವಲ್ಲಾ ಎಂದು, ಹಾಗಾಗಿ ಮೊದಲಿಗೇ ಹೇಳಿಬಿಡುತ್ತಿದ್ದೇನೆ "ಪುರುಷರ ದಿನಾಚರಣೆ ಶುಭಾಷಯಗಳು"

"ಒರಟುತನವೆಂಬುದು ದುರ್ಬಲ ವ್ಯಕ್ತಿಯ ಬಲಾಡ್ಯತೆಯ ಸೋಗು" ಎಂದಿರುವನು ಎಮರ್ಸನ್. ಹೊರ ಜಗತ್ತಿಗೆ ಕಾಣುವ ಅವನ ರೂಪಕ್ಕಿಂತ ಮನಸ್ಸು ಬೇರೆಯೇ ಆಗಿರುತ್ತದೆಯಲ್ಲವೇ?
'+' ಎಂದು ಬಯಾಲಜಿಯ ಸಂಕೇತದಲ್ಲಿ ಗುರುತಿಸಿಕೊಳ್ಳುವ ಗಂಡು ನಿಜಕ್ಕೂ ಸಕಾರಾತ್ಮಕನೇ..?
ದೈಹಿಕವಾಗಿ ಗಟ್ಟಿಯಾಗಿರುವ ಗಂಡು ಮಾನಸಿಕವಾಗಿಯೂ ಅಷ್ಟೇ ಬಲಿಷ್ಠನೇ..?
ಖಂಡಿತಾ ಇಲ್ಲ. ಸ್ವಚ್ಛಂದತೆಯ ಮುಖವಾಡದ ಅಡಿಯಲ್ಲಿ ಗಂಡಿನ ಕೆಲವು ಭಾವನೆಗಳ ತೋರ್ಪಡಿಕೆಗಳು ಮುಚ್ಚಿ ಹೋಗಿದೆ.
ಪುರುಷ ದಿನಾಚರಣೆಯ ಈ ವರ್ಷದ ಘೋಷ ವಾಕ್ಯವೇನು ಗೊತ್ತಾ?
"ಧನಾತ್ಮಕ ಪುರುಷ ಮಾದರಿ[Positive male role models]". ಪುರುಷರಲ್ಲಿನ ಆದರ್ಶಗಳನ್ನು ಹೊರಜಗತ್ತಿಗೆ ಪರಿಚಯಿಸಲು, ಪುರುಷರ ಮಾನಸಿಕ ಆರೋಗ್ಯ, ಆತ್ಮಹತ್ಯೆ ತಡೆ, ದೈಹಿಕ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಹಾಗೂ ಅದರ ಕುರಿತು ಜಾಗೃತಿ ಮೂಡಿಸುವ ದಿನ ಇದು. 

ಇಂದು ಸುಲಭವಾಗಿ ಡ್ರಗ್ಸ್, ಧೂಮಪಾನ, ಮದ್ಯಪಾನದ ಮೊರೆಹೋಗಿ ಮಾನಸಿಕ ಸಮಸ್ಯೆಗಳನ್ನು ಮರೆಯುತ್ತೇವೆ ಎನ್ನುವ ಕಾರಣ ನೀಡಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿರುವವರು ಪುರುಷರೇ. ಹೆಣ್ಣಿನಂತೆ ಆರಾಮವಾಗಿ ಗಂಡು ತನ್ನ ಭಾವನೆಗಳನ್ನು ಬಿಚ್ಚಿಡಲಾರ. ಅದರಲ್ಲೂ ಅಹಂ ತೋರಿಸುತ್ತಾನೆ. ಹೆಣ್ಣಿನ ಹತ್ತಿರ ಪ್ರೀತಿಯನ್ನು ತೋರಿಸುವಷ್ಟು ಸುಲಭವಾಗಿ ಸಮಸ್ಯೆಗಳನ್ನು ತೆರೆದಿಡಲಾರ. ಕಾರಣ, ಕಾಳಜಿ. ತಮ್ಮ ಪ್ರೀತಿ ಪಾತ್ರರು ನೋಯಬಾರದು ಎಂಬ ಕಾಳಜಿ. ಕುಟುಂಬದ ಕುರಿತು ಕಾಳಜಿ ತೋರುವವ ತನ್ನ ಆರೋಗ್ಯದ ಕುರಿತು ಅಷ್ಟು ಅಸ್ಥೆ ವಹಿಸಲಾರ. ಹಾಗಾಗಿ, ಚಟಕ್ಕೆ ಬಲಿಪಶುವಾಗುತ್ತಾ ನಡೆಯುತ್ತಾನೆ.

ಪ್ರೀತಿ ಕೊಟ್ಟವನು ಮರು ಪ್ರೀತಿಯ ನಿರೀಕ್ಷೆಯಲ್ಲಿರುತ್ತಾನೆ. ಅಕಸ್ಮಾತ್, ಮರು ಪ್ರೀತಿ ಸಿಗದಿದ್ದರೆ ಮೃಗಕ್ಕಿಂತಲೂ ವ್ಯಗ್ರವಾಗಿ, ಕಠೋರವಾಗಿ ವರ್ತಿಸಬಲ್ಲ. (ಕೆಲವರು ಮಾತ್ರ ಇದಕ್ಕೆ ಅಪವಾದ ಎಂಬಂತಿರಬಹುದು) ಆದರೆ ಕಾರಣವನ್ನು ಮಾತ್ರ ಬಾಯಿ ಬಿಟ್ಟು ಹೇಳುವುದಿಲ್ಲ.

ಗಂಡಿಗೆ ಭಾವನೆಗಳು ಸುಲಭವಾಗಿ ಅರ್ಥವಾಗುವುದಿಲ್ಲ ಎನ್ನುತ್ತಾರೆ. ಶುದ್ಧ ಸುಳ್ಳು ಅದು. ಕೆಲವೊಮ್ಮೆ ಅದರ ಕುರಿತು ಅವನು ಗಮನ ನೀಡಿರುವುದಿಲ್ಲ ಇಲ್ಲವೇ ಅರ್ಥವಾದರೂ ಅರ್ಥವಾಗದಂತೆ ನಟಿಸುತ್ತಾನೆ.ಮಗಳು ಮಾಡಿದ ಅಡುಗೆಯಲ್ಲಿ ಅಥವಾ ಕೆಲಸದಲ್ಲಿ ಏನೇ ದೋಷವಿದ್ದರೂ ಒಪ್ಪಿಕೊಳ್ಳುವ ಅಪ್ಪ, ಹೆಂಡತಿಯ ಅದೇ ದೋಷವನ್ನು ಹೇಳುತ್ತಾನೆ. ಆದರೆ, ಅಮ್ಮನಿಗೆ ಅದನ್ನು ಎತ್ತಿ ಆಡುತ್ತಾನೆ. ಗಂಡಸಿನ ಪಾತ್ರ ಇಲ್ಲಿ ಬದಲಾಗುತ್ತಾ ಹೋಗುತ್ತದೆ. ಅವನು ಒಬ್ಬನೇ ಆದರೂ ಭಾವಗಳ ತೋರ್ಪಡಿಸುವುದರಲ್ಲಿ ವಿಭಿನ್ನ ಪಾತ್ರ ವಹಿಸುತ್ತಾನೆ. ವಯಸ್ಸು ಮತ್ತು ಅನುಭವ ಅದೆಷ್ಟೇ ಪರಿಪಕ್ವವಾದರೂ ಈ ನಡವಳಿಕೆ ಸರ್ವೇಸಾಮಾನ್ಯ. [ನಾನು ಗಮನಿಸಿದಂತೆ]

"ಕಮ್ಯೂನಿಕೇಷನ್ ಗ್ಯಾಪ್" ಎನ್ನುವುದು ಅಮ್ಮ-ಮಕ್ಕಳಲ್ಲಿ ಅದರಲ್ಲೂ ಅಮ್ಮ-ಮಗಳಲ್ಲಿ ಬರುವುದೇ ಇಲ್ಲ. ಆದರೆ ಅಪ್ಪ ಮಕ್ಕಳಲ್ಲಿ ಈ ಗ್ಯಾಪ್ ಕೊಂಚ ಹೆಚ್ಚು. ಅಪ್ಪ-ಮಗಳಲ್ಲಿ ಇರುವ ಸಂವಹನ ಅಪ್ಪ-ಮಗನಲ್ಲಿ ಇರುವುದು ತುಂಬಾ ಕಡಿಮೆ. ಇಲ್ಲಿ ಪ್ರೀತಿ ಇರುವುದಿಲ್ಲ ಎಂದಲ್ಲ, ಪ್ರೀತಿಯನ್ನು ತೋರ್ಪಡಿಸುವುದಿಲ್ಲ. ಕಾಳಜಿಯನ್ನು ಮಾತಿಗಿಂತ ಹೆಚ್ಚಾಗಿ ಕೃತಿಯಲ್ಲಿ ತೋರಿಸುತ್ತಾರೆ. ಆದರೆ, ಮಕ್ಕಳಿಗೆ ಇದು ಅರ್ಥವಾಗುವುದು ತುಂಬಾ ತಡವಾಗಿ. ಇದೇ ಕಾರಣದಿಂದಾಗಿ ಎಷ್ಟೋ ಮನಸ್ತಾಪಗಳಾಗಿ ಬಿಟ್ಟಿರುತ್ತವೆ. ಮನಬಿಚ್ಚಿ ಮಾತಾಡಿದಾಕ್ಷಣ ಎಲ್ಲವೂ ಸರಿಯಾಗಿಬಿಡುತ್ತದೆಂದೇನಲ್ಲ. ಆದರೆ, ಭಾಂದವ್ಯ ಗಟ್ಟಿಯಾಗುತ್ತದೆ. ಮಾನಸಿಕ ಕ್ಷೋಭೆಗೆ, ಚಿಂತೆಗೆ ಅಲ್ಲಿ ಜಾಗವೇ ಇರುವುದಿಲ್ಲ.   

ಇನ್ನು ಹದಿಹರೆಯದ ಗಂಡು ಮಕ್ಕಳು ಕೆಲಸ ಸಿಕ್ಕಿಲ್ಲದ್ದಕ್ಕೆ, ಪ್ರೀತಿಯಲ್ಲಿ ಮೋಸ ಹೋಗಿದ್ದಕ್ಕೆ, ಪರೀಕ್ಷೆಯಲ್ಲಿ ಸೋತದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯಾ ಪ್ರಕರಣಗಳಲ್ಲಿ ಪ್ರಸ್ತುತ ಅಂಕಿ-ಅಂಶಗಳ ಪ್ರಕಾರ ಗಂಡು ಮಕ್ಕಳದ್ದೇ ಮೇಲುಗೈ. ಕಾರಣ ಇಷ್ಟೇ, ಆ ಕ್ಷಣದಲ್ಲಿ ಅವರು ಮಾನಸಿಕ ದುರ್ಬಲರು. "ನೀನು ಸೋತಿರಬಹುದಷ್ಟೇ, ಸತ್ತಿಲ್ಲ", "ಸೋಲೆಂಬುದು ಅಲ್ಪವಿರಾಮ" ಎಂದು ಹೇಳಲು ಯಾರೂ ಇರುವುದಿಲ್ಲ.ಅಂದರೆ, ಇವರ ಈ ವಿಚಾರಗಳ ಕುರಿತು ಮನಬಿಚ್ಚಿ ಮಾತನಾಡಿರುವುದಿಲ್ಲ. ಎಲ್ಲರ ಮುಂದೆ ಅತ್ತರೆ ಅಥವಾ ದುಗುಡವನ್ನು ಬಿಚ್ಚಿಟ್ಟರೆ ಹೀಯಾಳಿಸುತ್ತಾರೆ ಎಂಬ ಕಾರಣಕ್ಕೆ ಭಾವನೆಗಳನ್ನೆಲ್ಲಾ ಅದುಮಿ ಬದುಕಿಬಿಟ್ಟಿರುತ್ತಾರೆ.

ಗಂಡು ಎಲ್ಲಾ ಪಾತ್ರವನ್ನೂ ನಿರ್ವಹಿಸಬಲ್ಲ. ಆದರೆ, ಸಮರ್ಥವಾಗಿ ಎಂಬುದು ಮಾತ್ರ ಅನುಮಾನ. ಹಾಗಾಗಿಯೇ ಒಬ್ಬರಿಗೆ ಒಳ್ಳೆಯವನಾಗಿ ಕಂಡವರು ಮತ್ತೊಬ್ಬರ ದೃಷ್ಟಿಯಲ್ಲಿ ಕೆಟ್ಟವರು. ಈ ಕೆಟ್ಟ-ಒಳ್ಳೆಯತನ ಮತ್ತು ಸಬಲತೆ-ದುರ್ಬಲತೆಯನ್ನು ಅರಿತು ಬದಲಾಯಿಸಿಕೊಂಡು ಬದುಕುವುದು ಅವನಿಗೇ ಬಿಟ್ಟಿದ್ದು. ಯಾರೋ ಕೆಲವರು ಮಾಡುವ ತಪ್ಪಿಗೆ ಎಲ್ಲರನ್ನೂ ದ್ವೇಷಿಸುವುದು ಸರಿಯಲ್ಲ ಹಾಗೆಯೇ ಕಣ್ಣಿಗೆ ಕಂಡದೆಲ್ಲ ನಿಜವೂ ಅಲ್ಲ..

ಅಪ್ಪ, ಅಣ್ಣ, ತಮ್ಮ, ಸ್ನೇಹಿತ, ಗಂಡ, ಪ್ರಿಯಕರ, ಮಗ, ಅಜ್ಜ, ಚಿಕ್ಕಪ್ಪ, ದೊಡ್ಡಪ್ಪ, ಮಾವ, ಶಿಕ್ಷಕ ಎಲ್ಲವೂ ಆಗಿರುವ ಪುರುಷರಿಗೆ "ಅಂತಾರಾಷ್ಟ್ರೀಯ ಪುರುಷ ದಿನಾಚರಣೆ"ಯ ಶುಭಾಷಯಗಳು. ದೈಹಿಕವಾಗಿ ಸಬಲರಾಗಿರುವಷ್ಟೇ ಮಾನಸಿಕವಾಗಿಯೂ ಸಬಲರಾಗಿ ಎಂದು ಹಾರೈಸುವೆ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ