ಭಾನುವಾರ, ನವೆಂಬರ್ 10, 2019

ಒಲವಿನ ಜೊತೆ ಮಿಳಿತ


ಅನ್ಯಮನಸ್ಕಳಾಗಿ ಸಿರಿಶಾ ಹೊರಜಗುಲಿಯ ಮೇಲೆ ಕುಳಿತು ತುಳಸಿಕಟ್ಟೆಯ ಮೇಲೆ ಹಚ್ಚಿಟ್ಟ ದೀಪವನ್ನೇ ದೃಷ್ಟಿಸುತ್ತಾ ಕುಳಿತಿದ್ದಳು . ಎಲ್ಲೆಡೆಯೂ ಬೆಳಕಿತ್ತು ಆದರೆ ಸಿರಿಶಾಳ ಮನದಲ್ಲಿ ಮಾತ್ರ ಕಾರ್ಗತ್ತಲು. ಎಲ್ಲವೂ ಸರಿ ಇದ್ದಿದ್ದರೆ ಅವಳು ತನ್ನ ಗಂಡನೊಟ್ಟಿಗೆ ಅವನ ಮನೆಯಲ್ಲಿರುತ್ತಿದ್ದಳು. ಆಡಲೂ ಆಗದೆ, ಅನುಭವಿಸಲೂ ಆಗದೆ ಸಿರಿಶಾ ನಗೆಯ ಮೇಲ್ಮುಸುಕು ಹೊದ್ದು ದೀಪವನ್ನೇ ದೃಷ್ಟಿಸುತ್ತಾ ಕುಳಿತಿದ್ದಾಳೆ. ಮನದಲ್ಲಿ ಅಲ್ಲೋಲಕಲ್ಲೋಲವೇ ನಡೆಯುತ್ತಿದ್ದರೂ ಅದನ್ನು ಮರೆಮಾಚಿ ನಗುವುದು ಹೆಣ್ಣುಮಕ್ಕಳಿಗೆ ಹೊಸದೇನೂ ಅಲ್ಲವಲ್ಲ. ಸಿರಿಶಾಳಾ ಮನದೊಳಗೆ ಆಲೋಚನೆಗಳ ಮಹಾಪೂರವೇ ಭೋರ್ಗರೆಯುತ್ತಿತ್ತು. ಅದಕ್ಕೆ ತಡೆಯೊಡ್ಡಿದ್ದು ವೆಂಕಟರಾಯರ ಧ್ವನಿ. "ಮಗೂ, ಹೊರಗಡೆ ಒಬ್ಬಳೇ ಯಾಕೆ ಕೂತಿದ್ದೀಯ? ಬಾ ಇಲ್ಲಿ" ಎಂದರು. ಸಿರಿಶಾ ದಿಗ್ಗನೆದ್ದು "ಬಂದೆ ಅಪ್ಪಾ, ಸುಮ್ಮನೆ ಕೂತಿದ್ದೆ ಅಷ್ಟೇ.." ಎನ್ನುತ್ತಾ ಒಳನಡೆದಳು. "ಕಾಫಿ ಏನಾದರೂ ಬೇಕಿತ್ತೇನಪ್ಪಾ?" ಎಂದಳು. "ಇಲ್ಲಮ್ಮಾ, ಹಾಗೇನಿಲ್ಲ. ಬಾ ಕೂತ್ಕೋ. ನಿನ್ನ ಸಂಗೀತ ಕೇಳಿ ಬಹಳ ದಿನ ಆಯಿತು. ಯಾಕೋ ಹಾಡು ಕೇಳೋ ಆಸೆಯಾಗಿದೆ. ಹಾಡ್ತೀಯೇನಮ್ಮಾ?" ಎಂದರು. "ಆಯ್ತಪ್ಪ, ಹಾಡ್ತೀನಿ" ಎಂದಳು.
"ಲೋಕದ ಕಣ್ಣಿಗೆ ರಾಧೆಯು ಕೂಡಾ
ಎಲ್ಲರಂತೆ ಒಂದು ಹೆಣ್ಣು"
ಭಾವಗೀತೆಯನ್ನು ಸುಶ್ರಾವ್ಯವಾಗಿ ಹಾಡ್ತಾ ಇದ್ದಳು. ಮೈ ಮರೆತು ಮಗಳು ಹಾಡ್ತಾ ಇದ್ದರೆ, ಲೋಕವನ್ನೇ ಮರೆತು ಅಪ್ಪ ಕೇಳ್ತಾ ಇದ್ದರು.

ಸಿರಿಶಾಳದ್ದು ದೈವದತ್ತವಾಗಿ ಬಂದ ಕಂಠಸಿರಿ. ಸಂಗೀತ ಶಾಲೆಗೆಲ್ಲಾ ಹೋಗಿ ಸಂಗೀತ ಕಲಿತಿರಲಿಲ್ಲ. ರೇಡಿಯೋ ಕೇಳುತ್ತಾ, ಕೇಳುತ್ತಾ ಹಾಗೇ ಧ್ವನಿ ಸೇರಿಸುತ್ತಾ ಇದ್ದಳು. ವೆಂಕಟರಾಯರಿಗೆ ಇವಳನ್ನು ಸಂಗೀತ ಶಾಲೆಗೆ ಸೇರಿಸುವ ಆಸೆ. ಆದರೆ, ಅವರ ಆಸೆ ಈಡೇರಿರಲಿಲ್ಲ ಇದಕ್ಕೆ ಕಾರಣ ಅವರ ಹೆಂಡತಿ ಶಾಂತಲಾ. "ಅವಳಿಗೆ ಅದೆಲ್ಲಾ ಯಾಕೆ? ಅದಕ್ಕೆ ಸುರಿಯೋ ದುಡ್ಡಲ್ಲಿ ಅವಳಿಗೆ ಒಡವೆ ಮಾಡಿಸಿದರೆ ಮುಂದಕ್ಕೆ ಉಪಯೋಗಕ್ಕಾದರೂ ಬರುತ್ತೆ. ಹಾಡು, ಕುಣಿತ ಅಂತಾ ಕಲಿತು ಊರೂರು ತಿರುಗುವುದೇನೂ ಬೇಡ ಅವಳು" ಎಂದರು. ಕೈಯಲ್ಲಿದ್ದದ್ದನ್ನು ತೋರಿಸಿ ಏನೆಲ್ಲಾ ಹೇಳಬೇಕೆಂದುಕೊಂಡು ಬಂದಿದ್ದ ಸಿರಿಶಾಳ ಮಾತು ಅಂದು ಗಂಟಲಲ್ಲೇ ಉಳಿಯಿತು.  ಏನೋ ಸದ್ದಾಯಿತೆಂದು ರಾಯರು ತಿರುಗಿ ನೋಡಿದರೆ, ಸಿರಿಶಾಳ ಕೈಯ್ಯಲ್ಲಿದ್ದ ಪ್ರಶಸ್ತಿ ಫಲಕ ಕೆಳಗೆ ಬಿದ್ದಿತ್ತು. ರಾಯರಿಗೆ ಮತ್ತೇನೂ ಹೇಳಲೂ ತೋಚಲಿಲ್ಲ. ಹೆಂಡತಿಯ ಮಾತಿಗೆ ಅವರು ಪ್ರತಿ ಮಾತನಾಡಿದ್ದೇ ಇಲ್ಲ. ಇತ್ತ ಸಿರಿಶಾಳ ಸಂಗೀತದ ಕನಸು ಸಹಾ ನೆಲಕ್ಕೆ ಬಿದ್ದು ಮಣ್ಣಾಗಿತ್ತು. ಆದರೆ, ಸಿರಿಶಾ ಇಷ್ಟಕ್ಕೆಲ್ಲಾ ಕೈ ಚೆಲ್ಲಿ ಕೂರಲಿಲ್ಲ. ರೇಡಿಯೋದಲ್ಲಿ ಬರುವ ಗಾಯನಗಳನ್ನು ಆಲಿಸುತ್ತಾ ಅಲ್ಲಿ ಹಾಡುವ ಗಾಯಕರನ್ನೇ ಗುರುವೆಂದು ಸ್ವೀಕರಿಸಿ ತನ್ನ ಸಂಗೀತಾಭ್ಯಾಸವನ್ನು ಮುಂದುವರಿಸುತ್ತಿದ್ದಳು.

ಶಾಂತಲಾ ಸಿರಿಶಾಳಿಗೆ ಮಲತಾಯಿಯೇನಲ್ಲ. ಆದರೆ ಶಾಂತಲಾ ಬೆಳೆದು ಬಂದ ವಾತಾವರಣ ಮತ್ತು ಆ ಕಾಲಘಟ್ಟದ ಸಂಕುಚಿತ ಮನೋಭಾವ ಅವಳಲ್ಲಿಯೂ ಬೆಳೆದು ಬಂದಿತ್ತು ಅಷ್ಟೇ. ಹೆಣ್ಣು ಮಕ್ಕಳನ್ನು ಒಳ್ಳೆಯ ಮನೆ ಸೇರಿಸಿದರೆ ಅಲ್ಲಿ ಅವರು ಒಳ್ಳೆಯತನದಿಂದ ನಡೆದುಕೊಂಡರೆ ಮನೆಗೆ ಗೌರವ. ಇದೇ ತನ್ನ ಜೀವನದ ಪರಮಗುರಿ ಎಂಬಂತೆ ಮಗಳಿಗೆ ಸಂಸ್ಕಾರದ ಪಾಠಗಳನ್ನು ಮಾಡುತ್ತಿದ್ದರು. ಸಿರಿಶಾ ಹಾಡು ಹೇಳುವುದಕ್ಕೆ ಅವರ ಅಭ್ಯಂತರವಿಲ್ಲ ಆದರೆ ತರಬೇತಿ, ಕಛೇರಿ ಇವೆಲ್ಲವನ್ನೂ ಅವರು ಒಪ್ಪುತ್ತಿರಲಿಲ್ಲ.

ಸಿರಿಶಾ ವೆಂಕಟರಾಯರು ಮತ್ತು ಶಾಂತಲಾರವರ ಏಕೈಕ ಸಂತಾನ, ಒಬ್ಬಳೇ ಮಗಳಾದರೂ ಹೆಣ್ಣು ಎಂಬ ತಾತ್ಸಾರ ತೋರಿರಲಿಲ್ಲ. ಸಿರಿಶಾ ಕೃಷ್ಣ ಸುಂದರಿ. ಆದರೆ ಗುಣವಂತೆ, ಲಕ್ಷಣವಂತೆ. ಹಾಡು ಹೇಳುವುದು ಮಾತ್ರವಲ್ಲ, ಓದಿನಲ್ಲಿಯೂ ಚುರುಕು. ಕೊಂಚ ಭಾವಜೀವಿ. ಜೊತೆಗಾರರಿಲ್ಲದೇ ಒಬ್ಬಳೇ ಮಗಳಾಗಿ ಬೆಳೆದಿದ್ದಕ್ಕೋ ಅಥವಾ ತನ್ನ ಆಸೆಗಳನ್ನು ಅದುಮಿ ಬದುಕುತ್ತಿರುವುದಕ್ಕೋ ಕೊಂಚ ಅಂತರ್ಮುಖಿ ಎನ್ನಿಸುವಂತಿದ್ದರೂ ಎಲ್ಲರ ಮನಸ್ಸನ್ನು ಅರ್ಥ ಮಾಡಿಕೊಂಡು ಅದರಂತೆಯೇ ನಡೆದುಕೊಳ್ಳುತ್ತಿದ್ದಳು. ರೂಪ ಅಮ್ಮನಂತಿದ್ದರೂ ಗುಣ ತಂದೆಯಂತೆ. ಹೆಚ್ಚು ಎನ್ನಿಸುವಷ್ಟೇ ಮೃದು. ಆದರೆ, ಮತ್ತೊಬ್ಬರು ಕಷ್ಟ ಎಂದಾಗ ತನಗೆ ಎಷ್ಟೇ ಕಷ್ಟವಾದರೂ ಲೆಕ್ಕಿಸದೆ ಸಹಾಯಕ್ಕೆ ನಿಲ್ಲುತ್ತಿದ್ದಳು.

ಕಾಲಚಕ್ರ ಮೆಲ್ಲಮೆಲ್ಲನೆ ಸರಿಯುತ್ತಲಿತ್ತು. ಎಲ್ಲವೂ ಬದಲಾದರೂ ಬದಲಾಗದವಳು ಸಿರಿಶಾ ಮಾತ್ರ. ಸರಳತೆ, ಸಂಸ್ಕೃತಿ, ಪರೋಪಕಾರಿ ಗುಣವನ್ನು ಬಿಟ್ಟಿರಲಿಲ್ಲ. ಅಮ್ಮನ ವಿರೋಧದ ನಡುವೆಯೇ ಡಿಗ್ರಿ ಮುಗಿಸಿದ್ದಳಾದರೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಇದಕ್ಕೆ ಕಾರಣ ಶಾಂತಲಾರ ಮತ್ತದೇ ಧೋರಣೆ.. "ಮದುವೆ ಆದ ಮೇಲೆ ನಿನ್ನ ಗಂಡನನ್ನು ಕೇಳಿಕೊಂಡು ಕೆಲಸಕ್ಕೆ ಹೋಗು. ಈಗ ಅದೆಲ್ಲಾ ಏನೂ ಬೇಡ.ನೀನು ಸಂಪಾದಿಸುವ ದುಡ್ಡಿನಿಂದ ಇಲ್ಲಿ ಯಾರೂ ಜೀವನ ಮಾಡಬೇಕಾಗಿಲ್ಲ." ಎಂದು ಖಡಾಖಂಡಿತವಾಗಿ ನಿರಾಕರಿಸಿದ್ದರು. ಹಾಗೆಂದು ಸಿರಿಶಾ ಸುಮ್ಮನೆಯಂತೂ ಕುಳಿತುಕೊಳ್ಳುತ್ತಿರಲಿಲ್ಲ. ಮನೆಗೆಲಸ ಮುಗಿಸಿ, ಹಾಡುತ್ತಾ ಇಲ್ಲವೇ ಪುಸ್ತಕ ಹಿಡಿದು ಕುಳಿತರೆ ಲೋಕವನ್ನೇ ಮರೆತು ಬಿಡುತ್ತಿದ್ದಳು. ಅಪ್ಪ-ಮಗಳದ್ದು ಒಂದೇ ಅಭಿರುಚಿಯಾಗಿದ್ದರಿಂದ ಪುಸ್ತಕದ ಕುರಿತು ಚರ್ಚೆ ನಡೆಯುತ್ತಿತ್ತು. ಹೆಸರಿಗಷ್ಟೇ ಅದು ಚರ್ಚೆ. ಅಲ್ಲಿ ಬರೀ ರಾಯರದ್ದೇ ಮಾತು. ಸಿರಿಶಾಳದ್ದು "ಹೂಂ ಅಥವಾ ಹೂಂಹೂಂ", "ಹೌದು ಅಥವಾ ಇಲ್ಲ". ಸಿರಿಶಾಳ ಭಾವಲೋಕ, ಮಾತಿನ ಲೋಕವೆಲ್ಲಾ ಅನಾವರಣಗೊಳ್ಳುತ್ತಿದ್ದದ್ದು ಅವಳ ಡೈರಿಯಲ್ಲಿ ಯಾರಿಗೂ ತಿಳಿಯದಂತೆ ತನ್ನ ಭಾವನೆಗಳಿಗೆ ಬಣ್ಣ ಹಚ್ಚಿ, ಗರಿಗೆದರಿ ನರ್ತಿಸುವಂತೆ ಮಾಡುತ್ತಿದ್ದದ್ದು ಇಲ್ಲೇ. ಸಾಕಾರಗೊಳ್ಳದ ಕನಸುಗಳ ಲೋಕವೇ ಮಲಗಿತ್ತು.

ಬದುಕು ಸರಾಗವಾಗಿ ಸಾಗುತ್ತಿದ್ದರೆ ದೇವರಿಗೂ ಅಸೂಯೆಯಾಗುತ್ತದೇನೋ.. ಶಾಂತಲಾರ ಆರೋಗ್ಯ ಮೆಲ್ಲನೆ ಕೆಡುತ್ತಾ ಬರುತ್ತಿತ್ತು, ಅವರಂತೂ ಪೂರ್ಣ ಹಾಸಿಗೆ ಹಿಡಿದರು. ವೈದ್ಯರಿಗೂ ಖಾಯಿಲೆಯ ಪತ್ತೆ ಮಾಡಲಾಗಲಿಲ್ಲ. ಎಲ್ಲಾ ಕೆಲಸವೂ ಸಿರಿಶಾಳ ಮೇಲೆಯೇ ಬಿದ್ದಿತ್ತು. ಶಾಂತಲಾರ ವರಾತ ಹೆಚ್ಚಾಗಿತ್ತು. "ನಾನು ಸಾಯುವ ಮುಂಚೆ ಅವಳ ಮದುವೆ ನೋಡಬೇಕು." ಅದೇ ಸಮಯಕ್ಕೆ ಶಾಂತಲಾರನ್ನು ನೋಡಲು ಬಂದ ಅವರ ಅಣ್ಣನಿಗೆ ಸಿರಿಶಾ ಕಣ್ಣಿಗೆ ಬಿದ್ದಳು. ಶಾಂತಲಾರ ಮುಂದೆ ತಮ್ಮ ಮಗ ಸಾಕೇತ್ ನಿಗೆ ಸಿರಿಶಾಳನ್ನು ತಂದುಕೊಳ್ಳುವ ಕುರಿತು ಪ್ರಸ್ತಾಪವಾಯಿತು. ಆಸ್ತಿ ವಿವಾದಗಳಿಂದ ಕೊಂಚ ದೂರವೇ ಇದ್ದ ತವರು ಮನೆಯವರೊಂದಿಗೆ ನಂಟು ಬೆಸೆಯಲು ಬಂದ ಈ ಸಂಬಂಧವನ್ನು ಕಳೆದುಕೊಳ್ಳಲು ಶಾಂತಲಾ ಸಿದ್ದರಿರಲಿಲ್ಲ. ಸಿರಿಶಾಳ ಒಪ್ಪಿಗೆಯನ್ನೂ ಕೇಳದೆ ಈ ಮದುವೆಗೆ ಒಪ್ಪಿಗೆ ಇತ್ತರು. ರಾಯರದ್ದೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿ.     

ಶಾಂತಲಾ ಅವರ ಅಣ್ಣನ ಕುಟುಂಬ ವಾಸವಾಗಿದ್ದು ಹಳ್ಳಿಯಲ್ಲಿಯೇ ಆದರೂ ಮಗ ಸಾಕೇತ್ ವಾಸವಾಗಿದ್ದು ಬೆಂಗಳೂರಿನಲ್ಲಿ. ಬೆಂಗಳೂರಿನ ಪ್ರತಿಷ್ಟಿತ ಸಾಫ್ಟ್ ವೇರ್ ಕಂಪೆನಿಯೊಂದರ ಉದ್ಯೋಗ ಮೇಲಾಗಿ ಸಂಸ್ಕಾರವಂತ. ಯಾರೇ ಆದರೂ ಒಪ್ಪುವಂತಹಾ ಹುಡುಗ. ಆದರೆ ಏಕೋ ಮದುವೆ ಬೇಡ ಬೇಡ ಎನ್ನುತ್ತಾ ಮುಂದೂಡುತ್ತಲೇ ಬಂದಿದ್ದ. ಯಾವ ಹುಡುಗಿಯನ್ನು ತೋರಿಸಿದರೂ ಯಾವುದಾದರೂ ಒಂದು ಕಾರಣ ಕೊಟ್ಟು ನಿರಾಕರಿಸಿಬಿಡುತ್ತಿದ್ದ. ಶಾಂತಲಾರ ಪರಿಸ್ಥಿತಿ ಮತ್ತು ಎರಡು ಕುಟುಂಬಗಳೂ ಒಂದಾಗಲೂ ಇದ್ದ ಅವಕಾಶ ಇದು ಎಂಬ ಕಾರಣವನ್ನು ಮುಂದಿಟ್ಟು ಸಾಕೇತ್ ನನ್ನು ಅವನ ತಂದೆ ಮದುವೆಗೆ ಒಪ್ಪಿಸಿದ್ದರು.

ತರಾತುರಿಯಲ್ಲಿಯೇ ಮದುವೆ ನಿಶ್ಚಯವಾಗಿತ್ತು. ವಧು-ವರರಿಬ್ಬರೂ ಪರಸ್ಪರ ನೋಡಿದ್ದು ಮದುವೆ ಮಂಟಪದಲ್ಲಿಯೇ.. ಪರಸ್ಪರರ ಇಷ್ಟಾನಿಷ್ಟಗಳ ಅರಿವಿಲ್ಲದ ಅಪರಿಚಿತರಿಬ್ಬರೂ ಶುಭ ಘಳಿಗೆಯೊಂದರಲ್ಲಿ ಸತಿ-ಪತಿಯಾಗಿದ್ದರು. ನಂತರದಲ್ಲಿ ಸಿರಿಶಾ ಸಾಕೇತ್ ನೊಂದಿಗೆ ಬೆಂಗಳೂರಿಗೆ ಕಾಲಿಟ್ಟಳು. ಅಲ್ಲಿಗೆ ಬಂದ ಮೊದಲ ದಿನವೇ ಸಾಕೇತ್ ಹೇಳಿದ್ದ. "ಹಿರಿಯರ ಮಾತಿಗೆ ಬೆಲೆ ಕೊಟ್ಟು ನಿನ್ನನ್ನು ಮದುವೆಯಾಗಿದ್ದೇನೆ ಅಷ್ಟೇ. ಈ ಹಿಂದೆ ನಾನು ಒಬ್ಬಳನ್ನು ಪ್ರೀತಿಸಿದ್ದೆ ಆದರೆ ಈಗ ಅವಳ ಮದುವೆಯಾಗಿದೆ. ಸಮಾಜದ ದೃಷ್ಟಿಯಿಂದ ಈಗ ಈ ಪ್ರೇಮ ಸತ್ತಿರಬಹುದು ಆದರೆ ನನ್ನ ಬದುಕಲ್ಲಿ, ನನ್ನ ಮನಸ್ಸಿನಲ್ಲಿ ಆ ಪ್ರೇಮ ಇನ್ನೂ ಹಚ್ಚಹಸಿರಾಗಿದೆ. ನೀನು ಆ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ" ಎಂದನು. ಸಿರಿಶಾಳಿಗೆ ಆಘಾತವಾದರೂ ಮತ್ತೇನೂ ಹೇಳಲೂ ತೋಚದೆ "ಕಾಯುತ್ತೇನೆ " ಎಂದಷ್ಟೇ ಹೇಳಿ ಸುಮ್ಮನಾದಳು.

ಸಿರಿಶಾ ಅವನ ದಿನಚರಿಯನ್ನು ಬದಲಾಯಿಸಲೇನೂ ಹೋಗಲಿಲ್ಲ. ತನ್ನ ಪಾಡಿಗೆ ತಾನು ಎಂಬಂತೆ ಅವಳು ಅವನನ್ನು ಅರ್ಥೈಸಿಕೊಂಡು ಅವನಿಗೆ ಅನುಕೂಲವಾದ ರೀತಿಯಲ್ಲಿಯೇ ತನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಳು. ಒಂದು ಸಂಜೆ ಎಂದಿನಂತೆ ಎಂದಿನಂತೆ ಸಾಕೇತ್ ಬರುವ ಮುನ್ನ ಹಾಡುತ್ತಿದ್ದಳು. ಆದರೆ ಅವತ್ತು ಎಂದಿಗಿಂತ ಮುಂಚೆ ಬಂದವನು ಅವಳ ಗಾಯನವನ್ನು ಕೇಳಿ ಮೈಮರೆತು ನಿಂತಿದ್ದ. ಅಂದಿನಿಂದ ಹದಿನೈದು ದಿನವೂ ಅವನ ದಿನಚರಿ ಹಾಗೆಯೇ ಮುಂದುವರಿದಿತ್ತು. ಅವಳ ಹಾಡು ಕೇಳಲೆಂದೇ ಮುಂಚೆ ಬಂದು ಅವಳಿಗೆ ತಿಳಿಯದಂತೆ ನಿಂತಿರುತ್ತಿದ್ದ. ಅದಾದ ನಂತರ ಒಂದು ದಿನ ಅವಳಿಗಾಗಿ ಒಂದಷ್ಟು ಹಾಡಿನ ಸಿ.ಡಿ ಗಳನ್ನು ತಂದು ಕೊಟ್ಟು, "ಆಸಕ್ತಿ ಇದ್ದರೆ ಸಂಗೀತ ಶಾಲೆಗೂ ಸೇರು. ನನ್ನ ಅಭ್ಯಂತರವೇನೂ ಇಲ್ಲ" ಎಂದನು. ಆಗ ಸಿರಿಶಾ ಅದಕ್ಕೆ ಏನೂ ಉತ್ತರಿಸದೆ " ನೀವೂ ಸಂಗೀತ ಕಲಿತಿದ್ದೀರಾ..? ನೀವೂ ಕೊಳಲು ನುಡಿಸುತ್ತಾ ಇದ್ದಿರಂತೆ.. ಈಗ್ಯಾಕೆ ಅದನ್ನು ನುಡಿಸುತ್ತಾ ಇಲ್ಲ" ಎಂದು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಿದ್ದವಳನ್ನು ತಡೆದು "ನನ್ನ ಬದುಕಿನ ಕುರಿತ ಅಸ್ಥೆ ನಿನಗೆ ಬೇಡ. ನೀನು ನನ್ನ ಬಾಳಿನಲ್ಲಿ ಏನೇನೂ ಅಲ್ಲ, ಮೊದಲು ಇಲ್ಲಿಂದ ಹೊರಡು ಇಲ್ಲವೆಂದರೆ ನಾನು ನಿನಗೆ ಏನು ಮಾಡುತ್ತೇನೋ ನನಗೇ ಗೊತ್ತಿಲ್ಲ" ಎನ್ನುತ್ತಾ ಇನ್ನಷ್ಟನ್ನು ಮುಂದೆ ಮಾತನಾಡುವವನಿದ್ದ ಆದರೆ ಅಷ್ಟರಲ್ಲಿ ಬಂದ ಫೋನ್ ಕಾಲ್ ಅವನನ್ನು ಏನೂ ಹೇಳದಂತೆ ತಡೆದಿತ್ತು. "ಈಗಲೇ ಹೊರಡು ಬೇಗ, ಊರಿಗೆ ಹೊರಡಬೇಕಾಗಿದೆ" ಎಂದವನು ತರಾತುರಿಯಲ್ಲಿ ಅವಳನ್ನು ಕರೆದುಕೊಂಡು ಹಳ್ಳಿಗೆ ಹೊರಟ. ಸಿರಿಶಾ-ಸಾಕೇತ್ ಅಲ್ಲಿಗೆ ಬರುವಷ್ಟರಲ್ಲಿ ಮನೆಯ ಮುಂದೆಲ್ಲಾ ಜನಸಮೂಹವೇ ನೆರೆದಿತ್ತು. ಶಾಂತಲಾರ ಅನಿರೀಕ್ಷಿತ ಸಾವು ಸಿರಿಶಾಳಿಗೆ ಮತ್ತಷ್ಟು ಘಾಸಿ ಮಾಡಿತ್ತು. ಅಂತ್ಯಕ್ರಿಯೆ ಎಲ್ಲಾ ಮುಗಿದ ನಂತರ ಸಾಕೇತ್ ಸಿರಿಶಾಳನ್ನು ಇಲ್ಲಿಯೇ ಬಿಟ್ಟು ಹೊರಟ. ಮುಂದಿನ ಅವಳ ಭವಿಷ್ಯ ಅವಳ ಮುಂದೆ ಪ್ರಶ್ನಾರ್ಥಕವಾಗಿ ಕಾಡಿತ್ತು. ಸಾಕೇತ್ ತನ್ನನ್ನು ಇಲ್ಲಿಂದ ಕರೆದೊಯ್ಯುವನು ಎಂಬ ಭರವಸೆಯನ್ನೇ ಬಿಟ್ಟು ಬಿಟ್ಟಿದ್ದಳು. ಅಪ್ಪನ ಮುಂದೆ ಅವರ ಸಮಾಧಾನಕ್ಕಾಗಿ ನೆಮ್ಮದಿಯ ನಾಟಕವಾಡುತ್ತಿದ್ದಳು.

"ಲೋಕದ ಕಣ್ಣಿಗೆ..." ಹಾಡಿದ ನಂತರ ಸುಮ್ಮನಾದವಳನ್ನು ಇನ್ನೊಂದು ಹಾಡು ಹಾಡಮ್ಮ ಎಂದರು ರಾಯರು.

"ಈ ರಾಧೆಗೆ... ಗೋಪಾಲನಾ
ಸಂತೋಷವೇ ನಿಜವಾದ ಆನಂದವು
ರಾಧೆಯಾ ಕೃಷ್ಣನಾ ಅನುಬಂಧವಾ..
ಹೇಳಲೂ ಸಾಧ್ಯವೇ..?"
ಎಂದು ಹಾಡತೊಡಗಿದಳು. ಸಾಕೇತ್ ನೆನಪಾಗುತ್ತಿದ್ದ. ನಾನೇ ರಾಧೆಯಾಗಿ ಅವನು ಕೃಷ್ಣನಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ಲವೇ? ಎಂದುಕೊಂಡವಳ ಮುಖದಲ್ಲೊಂದು ವಿಷಾದದ ಮುಗುಳ್ನಗು ಸುಳಿದುಹೋಯಿತು. "ನಾನು ಅವನ ಬಾಳಿನಲ್ಲಿ ಏನೂ ಅಲ್ಲ ಅಂದವನು ಕಾಳಜಿ ತೋರುತ್ತಿದ್ದದ್ದು ಏಕೆ? ಅವನಿಗೆ ನನ್ನ ಮೇಲೆ ಕರುಣೆಯಿತ್ತಾ? ಅಥವಾ ಪ್ರೀತಿಯೇ..? ಎಂದು ಆಲೋಚನೆಗೆ ಬಿದ್ದಿದ್ದಳು.

ಹಾಡು ಮುಗಿದ ನಂತರ ರಾಯರು ಕೇಳಿದರು. "ಏನು ವಿಶೇಷ? ಬರೀ ರಾಧೆಯ ಹಾಡನ್ನೇ ಹಾಡುತ್ತಿದ್ದೀಯಲ್ಲ.. ಇಂದು ಶಿವನ ಭಕ್ತೆಗೆ ರಾಧಾ-ಕೃಷ್ಣರು ಸೆಳೆದಂತಿದೆ." ಎಂದರು. "ಹಾಗೇನಿಲ್ಲಪ್ಪ, ರುಕ್ಮಿಣಿಗಿಂತ ರಾಧೆಯೇ ಪುಣ್ಯವಂತಳು ಅಲ್ಲವೇ? ರಾಧೆಯು ಭೌತಿಕವಾಗಿ ಕೃಷ್ಣನಿಗಿಂತ ದೂರದಲ್ಲಿದ್ದರೂ ಮಾನಸಿಕವಾಗಿ ಎಂದಿಗೂ ಕೃಷ್ಣನ ಮನಸ್ಸಿನಲ್ಲಿ ಶಾಶ್ವತವಾದ ಸ್ಥಾನ ಪಡೆದಿದ್ದಾಳೆ. ಹಾಗಾಗಿ ಇತ್ತೀಚೆಗೆ ಯಾಕೋ ರಾಧೆ ಕಾಡುತ್ತಿದ್ದಾಳೆ" ಎಂದಳು. ಅದಕ್ಕೆ ರಾಯರು "ಎಲ್ಲವೂ, ಕೃಷ್ಣನ ಮನಸ್ಥಿತಿಯ ಮೇಲೆ ಅವಲಂಬಿತ ಅಲ್ಲವೇನಮ್ಮಾ? ಕೃಷ್ಣ ಎಂದಿಗೂ ರುಕ್ಮಿಣಿಯನ್ನು ಕಡೆಗಾಣಿಸಲಿಲ್ಲ. ರಾಧೆಯನ್ನು ರುಕ್ಮಿಣಿಯಲ್ಲಿಯೇ ಕಂಡ. ಅಷ್ಟಕ್ಕೂ ರಾಧೆಗಿಂತ ರುಕ್ಮಿಣಿಯೇ ಪುಣ್ಯವಂತಳು.. ಅವಳಿಗೆ ಸದಾ ಕೃಷ್ಣನ ಸಾನಿಧ್ಯವಿತ್ತು. ಕೃಷ್ಣ ರುಕ್ಮಿಣಿಯನ್ನು ಮನಸ್ಫೂರ್ತಿ ಪ್ರೀತಿಸುತ್ತಿದ್ದನೋ ಇಲ್ಲವೋ ಗೊತ್ತಿಲ್ಲ. ಆದರೆ, ರುಕ್ಮಿಣಿಯ ಪ್ರೀತಿಯೆಲ್ಲವೂ ಸದಾ ಕೃಷ್ಣನಿಗೇ ಸಮರ್ಪಿತವಲ್ಲವೇ..? ಅಲ್ಲದೇ ರಾಧೆ ಎಂದಿಗೂ ರುಕ್ಮಿಣಿಯ ಸವತಿಯಾಗಲಿಲ್ಲ. ರುಕ್ಮಿಣಿಯ ನಿಶ್ಕಲ್ಮಶ ಪ್ರೇಮವೇ ಅವಳನ್ನು ಕೃಷ್ಣನಿಗೆ ಹತ್ತಿರವಾಗುವಂತೆ ಮಾಡಿತು." ಎಂದರು. ಸಿರಿಶಾಳಿಗೆ ಈ ಮಾತುಗಳು ಎಲ್ಲೋ ಒಂದು ಕಡೆ ಆಶಾಕಿರಣದಂತೆ ಗೋಚರವಾದವು.

ಅಷ್ಟರಲ್ಲಿ ಮತ್ತೊಂದು ಧ್ವನಿ ಕೇಳಿಸಿತು. "ನಿಶ್ಕಲ್ಮಶ ಪ್ರೀತಿಗೆ, ಮುಗ್ದ ಮನಸ್ಸಿಗೆ, ಏನೂ ಬಯಸದಂತಹಾ ನಿಸ್ವಾರ್ಥ ಒಲವಿಗೆ ಎಲ್ಲವನ್ನೂ ಗೆಲ್ಲುವ ಶಕ್ತಿ ಇದೆ. ಕೃಷ್ಣನಲ್ಲಿಯೇ ಅಂತಹಾ ಬದಲಾವಣೆ ಗೋಚರಿಸಿದೆ.ಬಹುಶಃ ಅವನಿಗೂ ರುಕ್ಮಿಣಿಯ ಸನ್ನಿಧಿಯಲ್ಲಿ ರಾಧೆಯ ಪ್ರೇಮ ಮರೆತು ಹೋಗುತ್ತಿತ್ತೇನೋ..? ಅಲ್ಲವೇ ಮಾವ?" ಎಂದ ಸಾಕೇತ್. ಸಿರಿಶಾಳಿಗೆ ಇದು ಕನಸೋ? ನನಸೋ? ತಿಳಿಯದ ಭಾವ. "ಓ ಅಳಿಯಂದ್ರೇ ಬನ್ನಿ, ನೀವು ಬರೋ ವಿಷಯವನ್ನು ಇವಳು ನನಗೆ ಹೇಳಿಯೇ ಇರಲಿಲ್ಲ. ಯಾವಾಗ ಬಂದ್ರಿ..? ಅದಕ್ಕೇ ಅನ್ನಿಸುತ್ತೆ ಸಂಜೆ ನಿಮ್ಮ ಹಾದಿಯನ್ನೇ ಕಾಯುತ್ತಾ ಹೊರಗಡೆ ಕುಳಿತಿದ್ದಳು" ಎನ್ನುತ್ತಲೇ ಸಾಕೇತ್ ನನ್ನು ಸ್ವಾಗತಿಸಿದರು. "ಸಿರಿ ಹಾಡು ಶುರು ಮಾಡಿದಾಗಲೇ ಬಂದೆ, ನಿಮ್ಮ ಸಂಗೀತ ಆಸ್ವಾದನೆಗೆ ಭಂಗ ಮಾಡಬಾರದೆಂದು ಅಲ್ಲೇ ನಿಂತೆ ಅಷ್ಟೇ.." ಎನ್ನುತ್ತಾ ಒಳಬಂದು ಕುಳಿತ. ಈ ಮಾತು ಕೇಳಿ ಲಜ್ಜೆಯಿಂದ ಒಳಗೆ ಓಡಿದಳು ಸಿರಿಶಾ. ಟೀ ಮಾಡಿ ತಂದವಳನ್ನು ರೇಗಿಸಲು "ಸಂಜೆಯಿಂದ ಅಪ್ಪನನ್ನು ಮರೆತಿದ್ದಳು ನನ್ನ ಮಗಳು, ಅವಳ ಗಂಡನ ದೆಸೆಯಿಂದ ಈಗ ಈ ಬಡಪಾಯಿ ಅಪ್ಪನಿಗೂ ಒಂದು ಲೋಟ ಟೀ ಸಿಕ್ಕಿತು ಅಷ್ಟೇ.."ಎಂದರು ರಾಯರು. ಸಿರಿಶಾ ಏನೂ ಮಾತನಾಡದೆ ಮುಗುಳ್ನಕ್ಕಳು ಅಷ್ಟೇ. ಸಾಕೇತ್ ಕೂಡಾ ಮುಗುಳ್ನಕ್ಕನು. ಸಾಕೇತ್ ಮಾವನೊಂದಿಗೆ ಮನಸ್ಸು ಬಿಚ್ಚಿ ಹರಟಿದರೂ ಸಿರಿಶಾಳೊಂದಿಗೆ ಕೊಂಚ ಗಂಭೀರವಾಗಿಯೇ ಇದ್ದ.

ಮಾರನೇ ದಿನ ಬೆಳಿಗ್ಗೆ ಅವಳನ್ನು ಕರೆದು, ಸಂಜೆ ಗುಡ್ಡದ ಮೇಲಿನ ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರೋಣ. ಮಾವನೂ ಅದನ್ನೇ ಹೇಳಿದ್ದಾರೆ. ತಯಾರಾಗು ಎಂದನು. ಸಿರಿಶಾಳ ಮನಸ್ಸಿನಲ್ಲಿ ಏನೇನೋ ಆಲೋಚನೆಗಳು ಮೂಡುತ್ತಿದ್ದವು. ಅಯೋಮಯ ಸ್ಥಿತಿಯಲ್ಲಿ ಎಂದಿನಂತೆ ಆಡಂಬರವಿಲ್ಲದೆ ಸರಳವಾಗಿ ತಯಾರಾಗಿ ಬಂದಳು. ಸರಳವಾದರೂ ಅವಳು ಸುಂದರಿಯೇ. ಇಬ್ಬರು ದೇವರ ದರ್ಶನ ಮಾಡಿ ಅಲ್ಲಿಯೇ ಪ್ರಶಾಂತವಾದ ಪ್ರಾಂಗಣದಲ್ಲಿ ಕುಳಿತರು.  

ಎದುರು ಕುಳಿತಿದ್ದ ಅವಳ ಎರಡೂ ಕೈಗಳನ್ನು ತನ್ನ ಕೈಯ್ಯೊಳಗೆ ತೆಗೆದುಕೊಂಡ ಸಾಕೇತ್ "ಜೊತೆಯಲ್ಲಿದ್ದಾಗ ನಿನ್ನ ಕಾಳಜಿ, ಪ್ರೀತಿಯ ಅರಿವಾಗಲಿಲ್ಲ. ಮನಸ್ಸಿನ ಮೂಲೆಯಲ್ಲಿ ನಿನ್ನ ಮೇಲೆ ಪ್ರೀತಿಯ ಊಟೆ ಒಡೆಯುತ್ತಿತ್ತು ಆದರೆ ಅದನ್ನು ಅದುಮಿ ಬದುಕಲು ಪ್ರಯತ್ನಿಸುತ್ತಿದ್ದೆ. ನೀನು ನನ್ನ ಜೊತೆ ವಾದ ಮಾಡಿದಿದ್ದರೆ ನಿನ್ನನ್ನು ಬೈಯ್ದು ದೂರ ಮಾಡಿಕೊಳ್ಳುತ್ತಿದ್ಡೆ. ಮೌನದಿಂದಲೇ ನೀನು ನನ್ನನ್ನು ಗೆಲ್ಲುತ್ತಾ ಹೋದೆ. ನಾವು ಜೊತೆಯಿದ್ದದ್ದು ತಿಂಗಳು ಅಷ್ಟೇ. . ಆಗ ನಿನಗೆ ನನ್ನಿಂದ ಯಾವ ಪ್ರೀತಿಯೂ ದೊರಕದಿದ್ದರೂ ನೀನು ಪ್ರೀತಿ ನೀಡುತ್ತಲೇ ಹೋದೆ. ಎಲ್ಲಿ ನಿನ್ನ ಮೇಲೆ ಮನಸ್ಸಾಗಿ ಮೊದಲ ಪ್ರೀತಿಯನ್ನು ಮರೆಯುತ್ತಾ ನಿನ್ನ ದೃಷ್ಟಿಯಲ್ಲಿಯೂ ಕೀಳಾಗಿ ಬಿಡುತ್ತೇನೋ ಎಂದು ಗೊಂದಲದಲ್ಲಿರುವಾಗಲೇ ನೀನು ಕೊಳಲಿನ ವಿಷಯ ಎತ್ತಿದ್ದೆ.

ನಾನು ನಿನ್ನನ್ನು ಬೈದೆ, ನೀನು ಮರುವಾದ ಮಾಡುವೆ ಆಗಲಾದರೂ ನೀನು ನಿನ್ನ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಹೇಳುವೆ ಎಂದು ಕಾಯುತ್ತಿದ್ದೆ. ಗಂಡಿಗೆ ಪ್ರೀತಿಯಿದ್ದರೂ ತಾನೇಕೆ ಮೊದಲು ಸೋಲಬೇಕು ಎನ್ನುವ ಅಹಂಭಾವವೂ ಇರುತ್ತದೆ. ಹಾಗಾಗಿ ನೀನೇ ನಿನ್ನ ಪ್ರೀತಿ ಹೇಳುವೆ ಎಂದು ಕಾಯುತಲಿದ್ದೆ. ಅದಾದ ನಂತರ ಏನೇನೋ ಆಯಿತು..

ನಿನ್ನ ತಾಯಿಯ ಮರಣವೊಂದು ನೆಪವಾಗಿತ್ತು ನಿನಗೆ ನನ್ನಿಂದ ದೂರ ಉಳಿಯಲು. ನಿನ್ನ ಪ್ರೀತಿಗಿಂತ ತಿರಸ್ಕಾರ ನನ್ನನ್ನು ಹೆಚ್ಚು ಭಾದಿಸುತ್ತದೆ ಕಣೇ. ನಿನ್ನ ಗೈರು ಹಾಜರಿಯಲ್ಲಿ ಬದುಕಿನಲ್ಲಿ ಅಮೂಲ್ಯವಾದದ್ದು ಏನನ್ನೋ ಕಳೆದುಕೊಂಡಿದ್ದೇನೆ ಎನ್ನಿಸುತ್ತಿದೆ. ನನಗೆ ಕೃಷ್ಣ-ರುಕ್ಮಿಣಿ, ರಾಧೆ-ಕೃಷ್ಣರ ಪ್ರೀತಿಯ ಕುರಿತು ಗೊತ್ತಿಲ್ಲ. ಆದರೆ ಶಿವ ಭಕ್ತೆಯಾದ ನಿನ್ನ ಪ್ರೀತಿ ಮಾತ್ರ ಗೊತ್ತು. ಅವರನ್ನೇ ಆದರ್ಶವಾಗಿರಿಸಿಕೊಂಡು ಬದುಕೋಣ. ನನ್ನ ಬದುಕಿನ ಅರ್ಧಾಂಗಿಯಾಗಿ ನೀನು ಪಾಲಿನ ಬೆಳಕಾಗು." ಎನ್ನುತ್ತಾ ಅವಳ ಡೈರಿಯನ್ನು ಅವಳಿಗೆ ನೀಡಿದನು.

"ಮತ್ತೊಬ್ಬರ ಡೈರಿಯನ್ನು ಓದಬಾರದೆಂದುಕೊಂಡಿದ್ದೆ, ಆದರೆ ಅರ್ಧಾಂಗಿಯ ಡೈರಿಯನ್ನು ಓದುವುದರಲ್ಲಿ ತಪ್ಪಿಲ್ಲವಲ್ಲ" ಎಂದು ಕಣ್ಣು ಹೊಡೆದನು. "ಧೈರಿ ಓದಿ ಬದಲಾಗಿದ್ದೇನೆ, ಕರುಣೆ ತೋರುತ್ತಿದ್ದೇನೆ ಎಂಬ ಭಾವ ಬೇಡ. ಡೈರಿ ಓದಿದ ನಂತರ ನಿನ್ನ ಬದುಕಿನ ಪ್ರತಿ ಹಂತದ ಪರಿಚಯವಾಗಿದೆ ಅಷ್ಟೇ. ಈ ಪ್ರೀತಿ ಪ್ರೀತಿಯೇ.. ನಿಷ್ಕಲ್ಮಶವಾದ ಒಲವೇ.. ಅದರ ಕುರಿತು ಸಂದೇಹ ಬೇಡ" ಎಂದನು.

ಸಿರಿಶಾ ಮೇಲೆದ್ದು ಅವನನ್ನು ಅಪ್ಪಿ ಹಿಡಿದವಳೇ ಕೊಂಚ ಹೊತ್ತು ಸುಮ್ಮನಿದ್ದು ನಂತರ ಅವನನ್ನು ಬಿಟ್ಟು ಸುಮ್ಮನೇ ನಡೆದು ಬಿಟ್ಟಳು. ಸಾಕೇತ್ ನಿಗೆ ಅವಳು ತನ್ನನ್ನು ಒಪ್ಪಿದಳೋ, ನಿರಾಕರಿಸಿದಳೋ ಒಂದೂ ತಿಳಿಯಲಿಲ್ಲ. ನನ್ನಂತಹವನೇ ಪ್ರೀತಿಯಿಂದ ಬದಲಾಗಿರುವಾಗ ಅವಳನ್ನು ಬದಲಾಯಿಸಲಾಗದೇ..? ನನ್ನ ಪ್ರೀತಿಯಿಂದ ಅವಳನ್ನು ಒಲಿಸಿಕೊಳ್ಳುತ್ತೇನೆ ಎಂದು ತೀರ್ಮಾನಿಸಿ ಮನೆಗೆ ಬಂದ. ಅವಳೆಲ್ಲಿಯೂ ಕಾಣಲಿಲ್ಲ. ರೂಮಿನಲ್ಲಿ ಹಾಸಿಗೆಯ ಮೇಲಿರುವ ಪತ್ರ ಕಂಡಿತು. ಅದನ್ನು ಬಿಡಿಸಿದಾಗ ಹೀಗಿತ್ತು.

ಒಲವೇ ಒಲವ ತಿಳಿಸಿದ ಮೇಲೆ
ಒಪ್ಪದಿರುವುದಾದರೂ ಹೇಗೆ..?
ಒಪ್ಪುವವರೆಗೂ ಕಾಯುವೆನೆಂದವಳ
ಜೀವದುಸಿರು ನಿನಗೇ ಮೀಸಲು
ನಿನ್ನ ಒಲವಲ್ಲಿ ಮಿಂದವಳಿಗೆ
ಬದುಕಲ್ಲಿ ನೀನೇ ಉಸಿರು..
ಒಲವಿನ ಮಿಳಿತವೇ ನಮ್ಮ ಬದುಕು

ನಿಮ್ಮ ಒಲವಿನ ಮಾತು ಕೇಳಿದೆ. ಕೊಳಲಿನ ಮಾತು ಕೇಳಬೇಕೆನಿಸುತ್ತಿದೆ. ನನ್ನ ಗಾಯನದೊಂದಿಗೆ ನಿಮ್ಮ ಕೊಳಲ ನಾದ ಬೆರೆತರೆ ಎಷ್ಟು ಚೆಂದ ಅಲ್ಲವೇ..? ನಮ್ಮಿಬ್ಬರ ಬದುಕಲ್ಲಿ ಒಲವ ಜೇನ ಬೆರೆಸಿದಂತೆ.
-ಸಿರಿಶಾ

ಸಾಕೇತ್ ಮನ ಗಾಳಿಯಲ್ಲಿ ತೇಲಾಡುತ್ತಿತ್ತು. ಅಂದು ಸಂಜೆಯಿಂದ ಮನೆಯಂಗಳದಲ್ಲಿ ಸ್ವರ್ಗವೇ ಧರೆಗಿಳಿದಿತ್ತು. ದೀಪಾವಳಿಯಲ್ಲದಿದ್ದರೂ ದೀಪಗಳ ಬೆಳಕು ಮನೆಯಂಗಳದಲ್ಲಿ ಚೆಲ್ಲಾಡಿತ್ತು. ಸಾಕೇತ್-ಸಿರಿಶಾ ಜುಗಲ್ಭಂದಿ ಸಂಜೆಗೇ ರಂಗು ತಂದಿತ್ತು. ರಾಯರಂತೂ ಗಾಯನದಿಂದ ಮೈಮರೆತು ತಲ್ಲೀನರಾಗಿದ್ದರೆ, ಜೋಡಿ ಹಕ್ಕಿಗಳು ಪ್ರೇಮರಾಗದಿಂದ ತಲ್ಲೀನರಾಗಿದ್ದರು. ಆಕಾಶದಿಂದ ಒಂದು ನಕ್ಷತ್ರ ಈ ಸಂತಸವ ಕಂಡು ಸಂಭ್ರಮಿಸುತಲಿತ್ತು. ಒಲವಿನ ಜೊತೆ ಮಿಳಿತವಾದ ಈ ಜೋಡಿ ಹೀಗೇ ಇರಲೆಂದು ಹಾರೈಸುತಲಿತ್ತು.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ