ಗುರುವಾರ, ನವೆಂಬರ್ 21, 2019

ರಾಜಕುಮಾರಿಯ ರಾಜಕುಮಾರಿ

ಇತ್ತೀಚೆಗೆ ಕನಸಲ್ಲೆಲ್ಲಾ ನಿನ್ನದೇ ಕನವರಿಕೆ ಕಣೇ ಮುದ್ದು. ಅದೆಷ್ಟೊಂದು ಆಸೆಗಳಿವೆ ಮನಸ್ಸಲ್ಲಿ ಅಂದರೆ ನೀನು ಊಹೆ ಮಾಡಿಕೊಳ್ಳಲಿಕ್ಕೂ ಅಸಾಧ್ಯ. ಇಂತಹದ್ದೇ ಆಸೆ, ಕನಸುಗಳನ್ನು ನನ್ನಪ್ಪ, ಅಮ್ಮನೂ ಕಂಡಿದ್ದರು ಅನ್ನಿಸುತ್ತದೆ. ಹಾಗೆಯೇ ಬೆಳೆಸಿದ್ದರು ಕೂಡಾ.. ಆದರೆ, ಆ ರಾಜಕುಮಾರಿಯರ ಲೋಕ ಮದುವೆ ಆದ ನಂತರ ಹಾಗೇ ಉಳಿಯುವುದಿಲ್ಲ. ಗೊತ್ತಾ? ಎಷ್ಟೇ ಮಕ್ಕಳಿದ್ದರೂ ಅಪ್ಪನಿಗೆ ಹೆಣ್ಣುಮಕ್ಕಳೇ ರಾಜಕುಮಾರಿಯರು. ಮುಕುಟವಿಲ್ಲದ ರಾಜನ ರಾಜ್ಯದಲ್ಲಿ, ಕಪಟವೇ ಅರಿಯದ ಪ್ರೀತಿಯ ಬೆಚ್ಚಗಿನ ಭಾವದಲ್ಲಿ ಬಂಧಿಗಳು. 

ಒಬ್ಬಳೇ ಮಗಳು ಎನ್ನುತ್ತಾ ಬೆಚ್ಚನೆ ಕಾಪಿಡುತ್ತಾ, ನಡೆದರೆ ಎಲ್ಲಿ ಅಂಗಾಲಿಗೆ ನೋವಾಗುವುದೋ ಎಂದು ಭ್ರಮಿಸುತ್ತಾ ಎತ್ತಿಕೊಂಡೇ ತಿರುಗುವ ಅಪ್ಪ-ಅಮ್ಮನ ಪ್ರೀತಿಯ ಸಾಮ್ರಾಜ್ಯದ ಯುವರಾಣಿ. ಅಜ್ಜಿಯ ಕತೆಗಳಲ್ಲಿ ಬರುವ ಏಳು ಮಲ್ಲಿಗೆ ತೂಕದ ರಾಜಕುಮಾರಿ. ಕೆಲಸಕ್ಕೆಂದು ಬರುತ್ತಿದ್ದವರ ಮಕ್ಕಳ ಕಂಗಳಲ್ಲಿ, ಮುಟ್ಟಲಾರದ ಮಡಿವಂತಿಕೆ ಇಟ್ಟುಕೊಂಡು ಎತ್ತರದಲ್ಲೇ ಇದ್ದ ರಾಜಕುಮಾರಿ. ಕೇಳುವುದನ್ನೆಲ್ಲಾ ಕೇಳುವುದಕ್ಕಿಂತ ಮುಂಚೆಯೇ ತಂದುಕೊಟ್ಟಾಗ ಆಗಸದೆತ್ತರಕ್ಕೇರಿ ಸಂಭ್ರಮಿಸುತ್ತಿದ್ದವಳು. ಪ್ರೀತಿಯ ಮಾತನ್ನು ಕೇಳಿ ಬೆಳೆದವಳಿಗೆ ಆ ಪ್ರೀತಿ ಅಭ್ಯಾಸವಾಗಿಬಿಟ್ಟಿತ್ತು ಆದರೆ ಬದುಕು ವಿಭಿನ್ನ ಅಲ್ಲವೇ..? ಬದುಕು ಅಷ್ಟರವರೆಗೆ ತನ್ನ ಒಂದು ಮುಖವನ್ನು ಮಾತ್ರ ತೋರಿಸಿತ್ತು. ಬದುಕಿನ ಮತ್ತೊಂದು ಛಾಯೆ ಪರಿಚಿತವಾಗುವುದರಲ್ಲಿತ್ತು.

ಮದುವೆಯವರೆಗಿನದ್ದೇ ಒಂದು ಹಂತವಾದರೆ, ಮದುವೆಯ ನಂತರ ಮತ್ತೊಂದು ಹಂತ. ಇದೇ ರೀತಿಯ, ಇದೇ ಪ್ರೀತಿಯ ಬದುಕನ್ನು ಆಮೇಲೆಯೂ ನಿರೀಕ್ಷಿಸಿದರೆ ದಡ್ಡತನವಾಗುತ್ತದೆ ಎಂಬುದು ಆಗ ನನ್ನ ಬುದ್ದಿಗೆ ಹೊಳೆದಿರಲೇ ಇಲ್ಲ. ಕಪಟವಿಲ್ಲದ ಪ್ರೀತಿಯ ಮಾತುಗಳನ್ನು ಮಾತ್ರ ಕೇಳಿ ಬೆಳೆದಿದ್ದವಳಿಗೆ, ಪ್ರೀತಿಯ ಲೇಪನ ಹಚ್ಚಿದ್ದ ನಯವಂಚಕತೆಯ ಬೆಣ್ಣೆಯಂತಹಾ ಮಾತುಗಳ ವ್ಯತ್ಯಾಸ ಅರಿವಾಗಲೇ ಇಲ್ಲ. ಮದುವೆಯ ನಂತರವೇ ಅರಿವಾಗಿದ್ದು ಅಲ್ಲಿ ನಾನು ಪ್ರಮುಖವಾಗಿರಲಿಲ್ಲ, ಪ್ರಮುಖವಾಗಿದ್ದು ನನ್ನ ಹಣ, ಆಸ್ತಿ. ಖುಷಿಯಾಗಿ ಬದುಕಲು ಹಣವಿಲ್ಲದಿದ್ದರೂ ಪ್ರೀತಿ,ಸಹಕಾರವಿದ್ದರೆ ಬದುಕಬಹುದು ಎಂದೆಣಿಸಿದ್ದ ನನ್ನ ಸಿದ್ದಾಂತಗಳೆಲ್ಲವನ್ನೂ ಗಾಳಿಗೆ ತೂರಿ ಬಿಟ್ಟಿದ್ದರು. ಬಾಯಿ ಬಿಟ್ಟರೆ ಹಣ,ಹಣ ಎನ್ನುತ್ತಾ ಜೀವ ತಿನ್ನತೊಡಗಿದರು. "ನಿನ್ನ ಸಂಬಳದ ಹಣದಿಂದ ಜೀವನ ನಡೆಸಬೇಕಾಗಿಲ್ಲ" ಎಂದು ಕೆಲಸಕ್ಕೆ ಹೋಗದಂತೆ ತಡೆದಿದ್ದ ಅಪ್ಪ-ಅಮ್ಮನನ್ನು ಇಲ್ಲಿ ಕಾಣಲಾಗಲಿಲ್ಲ. ಕೆಲಸಕ್ಕೆ ಹೋಗದಿದ್ದರೆ ಇಲ್ಲಿ ಬದುಕು ದುರ್ಲಭ ಎನ್ನುವುದು ಅರಿವಾಗಿತ್ತು. ಅಪ್ಪ-ಅಮ್ಮನ ಆಯ್ಕೆ ತಪ್ಪು ಎಂದು ಹೇಳಲು ನನಗೆ ಧೈರ್ಯ ಇಲ್ಲ. ದೊಡ್ಡ ಮನೆತನಕ್ಕೆ ಮದುವೆ ಮಾಡಿಕೊಟ್ಟರೆ ಮಗಳು ಸುಖವಾಗಿರುತ್ತಾಳೆ ಎಂಬ ಅವರ ಆಲೋಚನೆ ತಪ್ಪು ಎಂದು ನಾನಾದರೂ ಹೇಗೆ ಹೇಳಲಿ..? 

ರಾಣಿಯ ಸುಖವನ್ನು ನಾನು ಬಯಸಿರಲಿಲ್ಲ ಆದರೆ ರಾಜಕುಮಾರಿಯಾಗಿಯೇ ಉಳಿದು ಬಿಡುವೆ ಎಂದರೆ ಸಮಾಜದ ನೂರಾರು ಸಂಕೋಲೆಗಳು, ಕಟ್ಟುಪಾಡುಗಳು ಅದನ್ನು ಸಾಕಾರಗೊಳಿಸಿಕೊಳ್ಳಲು ಅವಕಾಶ ಮಾಡಿಕೊಡಲಿಲ್ಲ. ಆದರೆ, ಇದೆಲ್ಲವನ್ನು ಧಿಕ್ಕರಿಸಿ ಬದುಕುವ ಗಂಡೆದೆ ಕೂಡಾ ನನ್ನಲ್ಲಿರಲಿಲ್ಲ. ಆದರೆ, ಎಲ್ಲವನ್ನೂ ಮೀರಿ ನಿಲ್ಲಲೂ ಸಹಾ ಕಾಲವೆಂಬುದು ಬರಬೇಕು ಎನ್ನಿಸುತ್ತದೆ. ಕಾಲದ ಜೊತೆ ಈಗ ನೀನೂ ಜೊತೆಯಾಗಿದ್ದೀಯ. ಎಲ್ಲವನ್ನೂ ಎದುರಿಸಿ ನಿಲ್ಲಲು ಸ್ಥೈರ್ಯ ಬೇಕು ಜೊತೆಗೆ ನಮ್ಮವರು ಎಂಬುವವರು ಜೊತೆಗೆ ನಿಲ್ಲಬೇಕು. 

ನನ್ನ ಗರ್ಭದಲ್ಲೊಂದು ಕೂಸು ಮೂಡುತ್ತಿದೆ ಎಂದು ತಿಳಿದಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ, ಆ ಸಂತಸ ಹೆಚ್ಚು ದಿನ ಇರಲಿಲ್ಲ. ಕೆಲ ತಿಂಗಳ ನಂತರ ಹೆಣ್ಣು ಎಂಬ ಕಾರಣಕ್ಕೆ ನಿನ್ನನ್ನು ಕೊನೆಗೊಳಿಸುವ ಆಲೋಚನೆಯಲ್ಲಿದ್ದವರಿಗೆ, ನನ್ನ ನಿರ್ಧಾರ ತಿರುಗೇಟು ನೀಡಿತ್ತು. ಅಂದು ಅವರ ರಾಕ್ಷಸ ರೂಪ ಬಯಲಾಗುತ್ತಿರುವ ಸಂಧರ್ಭದಲ್ಲಿ ಅಚಾನಕ್ಕಾಗಿ ಅಪ್ಪ ಬಂದಿದ್ದರು. ನಾನು ನಿನ್ನೊಂದಿಗೆ ಮತ್ತೆ ಅಪ್ಪನ ರಾಜಕುಮಾರಿಯಾಗಿ ಪ್ರೀತಿಯ ಅಭೇದ್ಯ ಕೋಟೆಗೆ ಮರಳಿದ್ದೆ. ನನ್ನ ಮುದ್ದು ರಾಜಕುಮಾರಿಯನ್ನು ಕಾಣುವ ತವಕದಲ್ಲಿದ್ದೇನೆ.

ನನ್ನ ಪುಟ್ಟ ರಾಜಕುಮಾರಿಯ ಲೋಕ ನನ್ನದಕ್ಕಿಂತ ಭಿನ್ನವಾಗಿರಬೇಕು. ಭಿನ್ನವಾಗಿರಲಿದೆ ಸಹಾ.. ಅತ್ಯಾಚಾರಗಳೇ ಹೆಚ್ಚಿರುವ ಸಂಧರ್ಭದಲ್ಲಿ ಹೆಣ್ಣು ಕೂಸು ಅಂದರೆ ಭಯವಾಗುತ್ತದೆ. ಆದರೆ, ಆ ಭಯವನ್ನೆಲ್ಲಾ ಮೆಟ್ಟಿ ನಿಲ್ಲಬೇಕು. ನನ್ನ ಪುಟ್ಟ ರಾಜಕುಮಾರಿಯ ಕಾಲಿಗೆ ಗೆಜ್ಜೆ ತೊಡಿಸುವ ಆಸೆಯಿಲ್ಲ ಬದಲಿಗೆ ಬಲಗೊಳಿಸುವ ಶಕ್ತಿಯ ಗೆಜ್ಜೆ ತೋಡಿಸುತ್ತೇನೆ. ಅಬಲೆಯಾಗಿ ಬೆಳೆಸುವುದಿಲ್ಲ ಬದಲಿಗೆ ಸಬಲತೆಯೊಂದಿಗೆ ಕರುಣೆಯ ಮತ್ತು ಆತ್ಮವಿಶ್ವಾಸದ ಖನಿಯಾಗಿಸುತ್ತೇನೆ. ಬಂಗಾರದ ಪಂಜರದೊಳಗೆ ಕೂಡಿ ಹಾಕದೆ ಆಗಸವನ್ನು ಪರಿಚಯಿಸುತ್ತೇನೆ. ಏಳು ಮಲ್ಲಿಗೆ ತೂಕದ ಮಲ್ಲಿಗೆ ರಾಜಕುಮಾರಿಗೆ ಸ್ವರಕ್ಷಣೆಯ ಕಲೆಯನ್ನೂ ಕಲಿಸುತ್ತೇನೆ. ಮಾತನಾಡದಂತೆ ಅನ್ಯಾಯವನ್ನು ಸಹಿಸುವ ಬದಲಿಗೆ, ಮಾತನಾಡಿ ಅನ್ಯಾಯವನ್ನು ಮೆಟ್ಟಿ ನಿಲ್ಲುವಂತೆ ಮಾಡುತ್ತೇನೆ. ಮತ್ತೊಬ್ಬರ ದೃಷ್ಟಿಯಿಂದ ಅವಳು ನಿಲುಕದ ನಕ್ಷತ್ರದಂತೆ ದೂರ ಉಳಿಯುವಂತೆ ಮಾಡಲಾರೆ, ಬದಲಿಗೆ ಎಲ್ಲರೊಳಗೂ ಬೆರೆತು ಒಂದಾಗುತ್ತಾ ತಾನೇ ಅವರಿಗೆ ಒಂದು ದಾರಿದೀಪವಾಗುವಂತೆ ಮಾಡುವೆ. ನನ್ನ ರಾಜಕುಮಾರಿಯನ್ನು ರಕ್ಷಿಸಲು ಮತ್ತೊಬ್ಬರು ಬೇಕಾಗಿಲ್ಲ, ಬದಲಿಗೆ ಅವಳೇ ಮತ್ತೊಬ್ಬರನ್ನು ರಕ್ಷಿಸುವ ಛಾತಿಯುಳ್ಳವಳಾಗಬೇಕು.

ಪ್ರತಿಯೊಬ್ಬ ಹೆಣ್ಣು ಮಗಳು ಸಹಾ ರಾಜಕುಮಾರಿಯೇ ಆಗಿರುತ್ತಾಳೆ. ಆದರೆ, ದಿನಕಳೆದಂತೆ ಅವಳ ಸ್ಥಾನಮಾನ ಬದಲಾಗುತ್ತದೆ. ಆದರೆ, ಈ ರಾಜಕುಮಾರಿಯ ರಾಜಕುಮಾರಿ ವಿಭಿನ್ನವಾಗಿರಬೇಕು. ನನ್ನ ಕನಸಿನ ಸಾಕಾರ ರೂಪದ ರಾಜಕುಮಾರಿಯ ಬರುವಿಕೆಗಾಗಿ ಬಹಳಷ್ಟು ಕನಸು ಹೊತ್ತು ಕಾಯುತಿರುವೆ. ಇಷ್ಟೆಲ್ಲಾ ಕನಸನ್ನು ನನಸು ಮಾಡುವೆಯಲ್ಲವೇ..ಮುದ್ದು ಕಣ್ಮಣಿ..?

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ