ಭಾನುವಾರ, ಡಿಸೆಂಬರ್ 8, 2019

ಪ್ರಶ್ನಾತೀತ


"ಉತ್ತರದ ಕಾಯುವಿಕೆಗಿಂತ
ಪ್ರಶ್ನೆಗಳ ಕಾಡುವಿಕೆಯೇ ಹಿತವಾಗಿದೆ"

ಎಂಬ ಸ್ಟೇಟಸ್ ಹಾಕಿ ಸುನೀತಿ ನಿರಾಳವಾಗಿಬಿಟ್ಟಿದ್ದಳು ಅಥವಾ ಅವಳು ಹಾಗೆ ಭಾವಿಸಿದ್ದಳು. ಹೆಚ್ಚಿನವರಂತೆ ಅವಳ ಸ್ಟೇಟಸ್ ಕೂಡಾ ಮತ್ತೊಬ್ಬರನ್ನು ಗುರಿ ಮಾಡಿಯೇ ಇತ್ತು. ನಿರಾಳವಾಗಿದ್ದೇನೆ ಎಂಬ ಭಾವ ಮೂಡುವಷ್ಟರಲ್ಲೇ ನಿಜಕ್ಕೂ ನಾನು ನಿರಾಳವಾದೆನಾ? ಎಂಬ ಪ್ರಶ್ನೆ ಕಾಡುತ್ತಿತ್ತು ಅವಳಿಗೆ. ಕಾಡುವ ಪ್ರಶ್ನೆಗಳ ಪ್ರವಾಹಕ್ಕೆ ಕಾಲವೇ ಕಡಿವಾಣ ಹಾಕಬೇಕೆಂದುಕೊಂಡವಳಿಗೆ ಪ್ರಶ್ನೆಗಳ ಪರಿಯೇ ಅರ್ಥವಾದಂತಿರಲಿಲ್ಲ.

ಸುನೀತಿಯದು ಒಂದು ರೀತಿಯ ಮೌನಿಯಂತಹಾ ವ್ಯಕ್ತಿತ್ವ, ಆದರೆ ಹೆಚ್ಚಿನವರು ಅದಕ್ಕೆ ಅಂತರ್ಮುಖತೆ ಎಂಬ ಹಣೆಪಟ್ಟಿ ನೀಡಿಬಿಟ್ಟಿದ್ದರು. ಆದರೆ, ಅವಳ ಎಲ್ಲಾ ಪ್ರಶ್ನೆಗಳೂ ಹರಡಿಕೊಳ್ಳುತ್ತಿದ್ದದ್ದು ಅವಳಮ್ಮನ ಮುಂದೆ. ತೀರಾ ಹುಚ್ಚು ಪ್ರಶ್ನೆಗಳು, ಹುಚ್ಚು ಆಲೋಚನೆಗಳನ್ನೆಲ್ಲಾ ಹಂಚಿಕೊಳ್ಳುವ ಗೆಳತಿಯಂತಹಾ ಅಮ್ಮನ ಮುಂದೆ. ಆದರೆ ಹಾಕಿದ ಪ್ರಶ್ನೆಗಳಿಗೆಲ್ಲಾ ಉತ್ತರ ದೊರೆಯಬೇಕಲ್ಲವಾ? ಸುನೀತಿಯ ಬೌದ್ದಿಕ ನೆಲೆಗಟ್ಟು ವಿಸ್ತಾರವಾದಂತೆಲ್ಲಾ ಪ್ರಶ್ನೆಗಳೇ.. ಬರೀ ಹುಚ್ಚು ಹುಚ್ಚು ಪ್ರಶ್ನೆಗಳ ಕುತೂಹಲಗಳೇ.. ಹುಚ್ಚು ಎನ್ನಿಸುತ್ತಿದ್ದದ್ದು ನಮ್ಮಂತಹಾ ಮುಖವಾಡ ತೊಟ್ಟವರ ಪ್ರಪಂಚದಲ್ಲಿ ಮಾತ್ರ. ಮಗುವಿನಂತಹಾ ಅವಳ ಮನಸ್ಸಿನಲ್ಲಿ ಪ್ರಶ್ನೆಗಳು ಹಲವಾರು.ಹಾಗೆಂದು ಅವಳು ಪ್ರಶ್ನೆ ಕೇಳುತ್ತಿದ್ದದ್ದು ಅಮ್ಮನಲ್ಲಿ ಮಾತ್ರವಲ್ಲಾ, ಎಲ್ಲರಲ್ಲಿಯೂ. ಆದರೆ ಹೆಚ್ಚಿನವರಿಂದ ಉಡಾಫೆಯ ಪ್ರತ್ಯುತ್ತರ, ಅಣಕದ ನಗು, ಮೋಸದ ಮುಖವಾಡದ ಮಂದಿಯಿಂದ ಅವರಂತಹದ್ದೇ ಪ್ರತ್ಯುತ್ತರ, ಇಲ್ಲವೇ ಮೊಂಡು ವಾದ. ಇವೆಲ್ಲವೂ ಅವಳಿಗೆ ಇಷ್ಟವಾಗದೇ ತನ್ನ ಉತ್ತರವನ್ನು ತಾನೇ ಕಂಡುಕೊಳ್ಳುತ್ತಿದ್ದಳು.

ವಾಟ್ಸಾಪ್, ಫೇಸ್ ಬುಕ್ ನಂತಹಾ ಮೋಹಕದ ಜಗದಲ್ಲಿಯೂ ಅವಳ ಮೌನ ಮತ್ತು ಪುಸ್ತಕಪ್ರೀತಿ ಮನೆಯವರಿಗೆ ಕೆಲವೊಮ್ಮೆ ಖುಷಿ ತರಿಸಿದರೆ ಹಲವು ಬಾರಿ ರೇಜಿಗೆ ಹುಟ್ಟಿಸುತ್ತಿತ್ತು. ಹೀಗೇ ಇರುವ ಸಂದರ್ಭದಲ್ಲಿಯೇ ಅವಳಿಗೆ ಪರಿಚಿತನಾದವನು ಸುಶಾಂತ್. ಆಕೆಗಿಂತ ದೊಡ್ಡವನು ಮತ್ತು ತಿಳುವಳಿಕೆ ಉಳ್ಳವನು, ಬೌದ್ದಿಕ ಸಾಂಗತ್ಯಕ್ಕೆ ಜೊತೆಯಾಗಬಲ್ಲವನು. ಹಾಗೆಂದಾಕ್ಷಣ ಇದು ಪ್ರೀತಿ ಅಲ್ಲ. ಪ್ರೀತಿ ಎಂಬ ಮಹಾಸಾಗರಕ್ಕೆ ಅಂಟಿಯೂ ಅಂಟದಂತೆ ಜೀವನ ನಡೆಸುವ ಛಾತಿ ಇಬ್ಬರಲ್ಲಿಯೂ ಇತ್ತು. ಮೇಲ್ನೋಟಕ್ಕೆ ಮಹಾನ್ ಕೋಪಿಯಂತೆ ಕಂಡರೂ ಅಂತರಂಗದಲ್ಲಿ ಅಷ್ಟೇ ತಾಳ್ಮೆ ಉಳ್ಳವನು, ಸ್ವಚ್ಛ ಮನಸ್ಸಿನ ಶಾಂತ ಸ್ವಭಾವದ ಹುಡುಗ. ಜೀವನ ಏಕೆ ಇಬ್ಬರನ್ನು ಒಂದೇ ಹಾದಿಯ ಮೇಲೆ ನಡೆಯುವಂತೆ ಮಾಡುತ್ತಿತ್ತೋ ಗೊತ್ತಿಲ್ಲ. ನಮ್ಮ ಜೀವನದಲ್ಲಿ ಬರುವವರು ಕೆಲವೊಮ್ಮೆ ಪಾಠ ಕಲಿಸಲೆಂದೇ ಬರುತ್ತಾರೇನೋ..?

ಇಬ್ಬರದ್ದೂ ಜಗಳದ ಸ್ವಭಾವವೂ ಅಲ್ಲ. ಆಕೆಗೆ ಬೌದ್ಧಿಕ ಸಹಚರ್ಯದ ಅಗತ್ಯತೆ ಇತ್ತು. ಈತ ಸ್ನೇಹಜೀವಿ, ಇಬ್ಬರೂ ಜೊತೆಯಾದದ್ದರಲ್ಲಿ ಯಾವ ಅತಿಶಯೋಕ್ತಿಯೂ ಇರಲಿಲ್ಲ. ಎಂತಹಾ ಪರಿಸ್ಥಿತಿಯಲ್ಲೂ ಈಕೆ ತನ್ನ ನಿರ್ಧಾರಕ್ಕೆ ಬದ್ಧಳಾಗಿ ನಡೆಯುವಂತಹವಳು ಆದರೆ ಆತನದ್ದು ಸಡಿಲ ನಿರ್ಧಾರದ ಮನೋಸ್ಥಿತಿ. ಇದೇ ಮನಸ್ಥಿತಿಗಳು ಅವರಲ್ಲಿ ಬಿರುಕು ಮೂಡಿಸಬಹುದಾ? ಅಥವಾ ಅವೆಲ್ಲವನ್ನೂ ಮೀರಿ ಮುಂದೆ ನಡೆಸಬಹುದಾ?

ಸುನೀತಿ ತನಗೆ ಕಾಡುತ್ತಿದ್ದ ಹಲವು ಪ್ರಶ್ನೆಗಳ ಉತ್ತರ ಕಂಡುಕೊಂಡಿದ್ದು ಆತನ ಬಳಿಯೇ. ಆಕೆಯ ಸ್ವಭಾವದಂತೆ ಎಲ್ಲರ ಬಳಿಯೂ ಕಡಿಮೆ ಮಾತಾದರೆ, ಆತನ ಬಳಿ ಆಕೆ ವಾಚಾಳಿ, ತಿಳಿ ಹಾಸ್ಯದ ಸಹ ಜೊತೆಗಾತಿ. ಆಕೆಯೇ ಎಷ್ಟೋ ಬಾರಿ ಹೇಳಿದ್ದೂ ಇದೆ.. "ಯಾಕೆ ನಾನು ನಿಮ್ಮೊಡನೆ ಇಷ್ಟು ಪ್ರಶ್ನೆಗಳನ್ನು ಕೇಳುತ್ತೇನೆಯೋ ಗೊತ್ತಿಲ್ಲ, ಆದರೆ ಉತ್ತರಗಳನ್ನು ಕೇಳಿದ ನಂತರ ಸಮಾಧಾನ ದೊರೆಯುತ್ತದೆ. ಹಾಗೆಂದು, ಎಲ್ಲಾ ಉತ್ತರಗಳನ್ನು ಒಪ್ಪಿಕೊಳ್ಳುತ್ತೇನೆ ಎಂದೂ ಅಲ್ಲ, ಆದರೂ ಏನೋ ಸಮಾಧಾನ". ಸ್ವಭಾವತಃ ಆಕೆ ಭಾವಜೀವಿಯಾದರೂ ಸಹಾ ಮಾತಾಡುತ್ತಿದ್ದದ್ದು ಪ್ರಾಮಾಣಿಕತೆ ಲೇಪಿತ ಗಾಂಭೀರ್ಯದಿಂದಲೇ.

ಆತನಿಗೆ ಇದರ ಕುರಿತು ಬೇಸರವಿಲ್ಲ. ಆದರೆ, ಬೇರೆಯವರು ಏನೆಂದುಕೊಳ್ಳುವರೋ ಎಂಬ ಭಾವ ಅವನನ್ನು ಕಾಡುತ್ತಿತ್ತು. ಜೊತೆಗೆ ಉನ್ನತ ಹುದ್ದೆಯಲ್ಲಿದ್ದ ಆತ ಆತನ ಕೆಲಸಕಾರ್ಯಗಳಲ್ಲಿಯೇ ಮಗ್ನ, ಕೆಲಸದ ಒತ್ತಡವೂ ಅವನ ಅದಕ್ಕೆ ಕಾರಣವಾಗಿತ್ತೋ ಏನೋ ಈಗೀಗ ಅವಳ ಪ್ರಶ್ನೆಗಳಿಗೆಲ್ಲಾ ಅವನು ಮೌನಿ. ಅವಳಿಗೆ ಈ ಸೂಕ್ಷ್ಮತೆಯ ಅರಿವಾಗಿತ್ತು ಹಾಗಾಗಿ ಅವಳೂ ಮೌನವಾಗಿಬಿಟ್ಟಿದ್ದಳು. ಬಾಯಿ ಬಿಟ್ಟು ಹೇಳದೆ ಆತನಿಗೆ ಅರ್ಥಮಾಡಿಸಲಾಗದು ಎಂದುಕೊಂಡಿದ್ದಳು ಆಕೆ ಆದರೆ ಅವಳ ಬದಲಾದ ಮನಸ್ಥಿತಿಯ ಅರಿವಾಗಿತ್ತು ಅವನಿಗೆ.

"ಎರಡೂ ದಡದಲ್ಲಿಯೂ ಅದೇ ಮೌನ
ಬದಲಾಗದಂತಹಾ ಅದೇ ತೀರ್ಮಾನ
ಹೇಳದೇ ಉಳಿದ ಎಷ್ಟೋ ಮಾತುಗಳು
ಇಕ್ಕೆಲಗಳಲೂ ಪ್ರತಿಧ್ವನಿಸುತ್ತಿವೆ..
ಎಂದಾದರೂ ಎರಡು ದಡಗಳು 
ಒಂದಾಗಲು ಸಾಧ್ಯವೇ?"

ಇಬ್ಬರೂ ಒಬ್ಬರನೊಬ್ಬರು ದೂಷಿಸಲಿಲ್ಲ. ಸುನೀತಿಯಾದರೂ ಇಂದಲ್ಲಾ ನಾಳೆ ಮದುವೆಯಾಗುವವಳು, ಸುಶಾಂತ್ ಕೂಡಾ ಹಾಗೆಯೇ.. ಇಬ್ಬರ ಸಂಗಾತಿಗಳೂ ಬಹುಶಃ ಈ ರೀತಿಯ ಸಾಂಗತ್ಯವನ್ನು ಒಪ್ಪುವುದು ಸಾಧ್ಯವಿಲ್ಲ. ಇಬ್ಬರದ್ದೂ ಒಂದೇ ತೀರ್ಮಾನವಾದರೂ ಬಾಯಿ ಬಿಟ್ಟು ಹೇಳಿಕೊಳ್ಳುತ್ತಿಲ್ಲ. ಬಹುಶಃ ಸ್ವಾಭಿಮಾನ ಅಡ್ಡ ಬರುತ್ತಿರಬಹುದು ಅಥವಾ ಆತನ ಭಾವನಾ ಪ್ರಪಂಚದಲ್ಲಿ ಈ ರೀತಿಯ ಯೋಚನೆಗಳು ಬಂದಿರುವುದೇ ಅನುಮಾನ. ಈಕೆಯು ಕೈಗೆಟುಕದ ದ್ರಾಕ್ಷಿ ಹುಳಿ ಎಂಬಂತೆ ಸಿಗದ ಉತ್ತರ, ನಿಲುಕದ ವ್ಯಕ್ತಿ ಕೂಡಾ ಸಲ್ಲದು ಎಂಬ ತೀರ್ಮಾನದಲ್ಲಿದ್ದಾಳೆ.

ಕೇಳಿದರೆ, ಎಲ್ಲದಕ್ಕೂ ಉತ್ತರ ಹುಡುಕಿಕೊಂಡು ಹೋಗಬಾರದು. ನದಿಮೂಲ, ಋಷಿಮೂಲ, ಸ್ತ್ರೀಮೂಲ ಹುಡುಕಬಾರದಂತೆ ಹಾಗೆಯೇ ಆಲೋಚನೆ ಮತ್ತು ಬೇಜಾರಿನ ಮೂಲವನ್ನೂ ಅರಸಿ ಹೊರಡಬಾರದು ಎಂಬ ಜಾಣ ಉತ್ತರ ನೀಡಿ ಜಾರಿಕೊಳ್ಳುತ್ತಾಳೆ.

ಅಂಕೆಗೆ ಸಿಗದ ರಾಧಾ-ಮಾಧವರ ಸಹಚರ್ಯ ಇವರದ್ದು ಎಂದು ಭಾಸವಾಗುವ ಹೊತ್ತಲ್ಲೇ, ರಾಧಾ-ಮಾಧವರು ಒಟ್ಟಾಗಿ ಬದುಕಿದ್ದು ಕಡಿಮೆಯೇ ಎಂಬ ಆಲೋಚನೆಯೂ ಬರುತ್ತದೆ. ಇವರ ಜೀವನವೂ ಹಾಗೇ ಆಗಬಹುದೇ? ಅಲ್ಲಿ ಪ್ರೀತಿ ಇಬ್ಬರನ್ನೂ ಬಂಧಿಸಿತ್ತು. ಆದರೆ ಇಲ್ಲಿ ಪ್ರೀತಿಯೇ ಇಲ್ಲವಲ್ಲ... ಬಹುಶಃ ಹಾಗೆನ್ನುವುದೂ ತಪ್ಪಾಗುವುದೋ ಏನೋ..!?

ಪ್ರೀತಿ ಇಲ್ಲದ ಮೇಲೆ ಮಾತಿಗೆ ಪ್ರತಿಮಾತು, ಪ್ರಶ್ನೆಗೆ ಉತ್ತರ ಹುಟ್ಟಿತು ಹೇಗೆ? ಪ್ರೀತಿ ಎಂದರೆ ಹರೆಯದ ಹುಚ್ಚು ಹೊಳೆಯಲ್ಲ, ಅದರಲ್ಲಿ ಕೊಚ್ಚಿ ಹೋಗುವ ಜೊಳ್ಳುಗಳೂ ಇವರಲ್ಲ. ಅದಮ್ಯ ಜೀವನಪ್ರೀತಿ, ಪರಸ್ಪರ ಹೊಂದಾಣಿಕೆ, ಅರ್ಥೈಸುವಿಕೆ, ಒಬ್ಬರನೊಬ್ಬರು ನೋಯಿಸದ ಗುಣಗಳು ಜೊತೆಯಾಗಬಹುದೇ?

"ಬದುಕೊಂದು ಸುಂದರ ಪ್ರಶ್ನೆ
ಉತ್ತರ ಹುಡುಕಲು ಹಾತೊರೆಯಬಾರದು
ಸಿಕ್ಕ ಉತ್ತರವ ಪ್ರಶ್ನಿಸದೆ ಒಪ್ಪಲೂಬಾರದು
ಇದೇ ಉತ್ತರ ಎನ್ನಲೂಬಾರದು
ಉತ್ತರ ಸುಂದರವೇ ಆಗಬೇಕಿಲ್ಲ
ಕುರೂಪಿ ಉತ್ತರವೂ ಜೊತೆಯಾಗಬಹುದು
ಯಾವಾಗಲೂ ಉತ್ತರ ಪ್ರಶ್ನೆಯದ್ದೇ ಆಯ್ಕೆ
ಅದನ್ನು ಪ್ರಶ್ನಿಸಲೂಬಾರದು
ಏಕೆಂದರೆ ಬದುಕು ಪ್ರಶ್ನಾತೀತ"

ಸುನೀತಿಯ ಈ ಸ್ಟೇಟಸ್ ಅನ್ನಾದರೂ ಸುಶಾಂತ್ ನೋಡುತ್ತಾನಾ? ಮುಂದೇನಾಗಬಹುದು..?

ಈ ಕುತೂಹಲಕ್ಕೆ ಉತ್ತರ ನನ್ನ ಬಳಿ ಇಲ್ಲ. ಏಕೆಂದರೆ  ಅದು  ಅವರವರ ಸ್ವಂತ ಬದುಕು, ನಿರ್ಧಾರಗಳು ಅವರವರ ಸ್ವಂತ. ಏಕೆಂದರೆ, ಬದುಕು ಪ್ರಶ್ನಾತೀತ ಅಲ್ಲವೇ? ಬೇಕಾದರೆ ನಮ್ಮ ನಮ್ಮ ಯೋಚನೆಗಳಂತೆ ಅವರ ಜೀವನವನ್ನು ರೂಪಿಸಿ ಖುಷಿಪಡಬಹುದು. ಏಕೆಂದರೆ, ಇದು ನಮ್ಮ ಆಲೋಚನೆ. ಇದೂ ನಮ್ಮ ಸ್ವಂತ, ಇದೂ ಕೂಡಾ ಪ್ರಶ್ನಾತೀತ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ