ಭಾನುವಾರ, ಡಿಸೆಂಬರ್ 22, 2019

ದಾರಿದೀಪ

ಮೈಸೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಬಸ್ಸನ್ನು ತಲುಪುವುದು ಕಷ್ಟವೇನೋ ಅನ್ನಿಸುತ್ತಿತ್ತು ಆದರೂ ಆ ಬಸ್ಸನ್ನು ಅದು ಹೊರಡುವುದಕ್ಕಿಂತ ಮುನ್ನವೇ ತಲುಪಬೇಕೆಂಬ ಹಟದಲ್ಲಿ ಕೊಂಚ ಬಿರುಸಾಗಿಯೇ ಹೆಜ್ಜೆ ಹಾಕಿ ಆ ಬಸ್ಸನ್ನು ಹತ್ತಿ ಕುಳಿತೆ ಆದರೂ ನನಗೇಕೋ ಇಂದು ಆಯಾಸ ಎನ್ನಿಸಲಿಲ್ಲ, ನನಗಾಗಿಯೇ ಈ ಬಸ್ಸು ಕಾಯುತ್ತಿತ್ತೇನೋ ಎಂಬಂತೆ ನಾನು ಬಂದ ತಕ್ಷಣವೇ ಬಸ್ಸು ಹೊರಟುಬಿಟ್ಟಿತು. ಎರಡು ಸೀಟುಗಳಿರುವ ಕಡೆ ಕಿಟಕಿಯ ಪಕ್ಕದಲ್ಲೇ ಸೀಟು ಸಿಕ್ಕಿತ್ತು. ಪಕ್ಕದಲ್ಲಿ ಯಾರೂ ಕುಳಿತಿರಲಿಲ್ಲ, ಒಂದರ್ಥದಲ್ಲಿ ಇದು ಒಳ್ಳೆಯದೇ ಆಯಿತು ಎಂದುಕೊಂಡು ನೆಮ್ಮದಿಯಾಗಿಯೇ ಕುಳಿತೆ. ಅಷ್ಟರಲ್ಲಿ ನೆಮ್ಮದಿಯನ್ನು ಭಂಗಗೊಳಿಸುವನಂತೆ ಬಂದ ಕಂಡಕ್ಟರ್ "ಟಿಕೆಟ್, ಟಿಕೆಟ್ ಎಲ್ಲಿಗಪ್ಪಾ..?" ಎನ್ನುತ್ತಾ ಟಿಕೆಟ್ ನೀಡಲು ಬಂದ. ಹೌದು ನಾನು ಎಲ್ಲಿಗೆ ಹೊರಟಿದ್ದೆ ಎಂದು ನೆನಪಿಸಿಕೊಂಡೆ ನೆನಪಾಗಲಿಲ್ಲ.

ಮರೆತಿದ್ದರಲ್ಲವೇ ನೆನೆಪಿಕೊಳ್ಳಲು..? ಗೊತ್ತುಗುರಿ ಇಲ್ಲದ ಪಯಣಕ್ಕೆ ಅಣಿಯಾಗಿ ಹೊರಟಿದ್ದೆ ಆದರೆ ಮನಸ್ಸಿನ ಮೂಲೆಯಲ್ಲೆಲ್ಲೋ ಶಿವಮೊಗ್ಗ ಎಂಬ ಹೆಸರು ಸುಳಿದು ಮರೆಯಾಗಿತ್ತು. ಅಷ್ಟರಲ್ಲಿ ಕಣ್ಣಿಗೆ ಕಂಡ ಶಿವಮೊಗ್ಗದ ಬಸ್ಸನ್ನು ಹತ್ತಿದ್ದೆ. ಗೊತ್ತು ಗುರಿಯಿಲ್ಲದೆ ತಿರುಗುವ ಈ ಮುದುಕನ ಬಗ್ಗೆ ಕಾಳಜಿಯಾದರೂ ಯಾರಿಗಿದೆ? ಮತ್ತೊಮ್ಮೆ ಕಂಡಕ್ಟರ್ ಕೇಳಿದ "ಅಯ್ಯಾ, ಎಲ್ಲಿಗೆ ಹೋಗಬೇಕು..?" 

"ಶಿವಮೊಗ್ಗಕ್ಕೆ ಒಂದು ಟಿಕೆಟ್ ಕೊಡಿ" ಎಂದು ಹಣ ಕೊಟ್ಟೆ ಬರಬೇಕಾದ ಬಾಕಿ ಚಿಲ್ಲರೆಯನ್ನು ಟಿಕೆಟ್ ಹಿಂದೆಯೇ ಬರೆದು ಟಿಕೆಟ್ ಅನ್ನು ವಾಪಸ್ ಕೊಟ್ಟ ಕಂಡಕ್ಟರ್. ಈ ಕಂಡಕ್ಟರ್ ಗಳೇ ಹೀಗಲ್ಲವೇ..? ಮುದುಕ ಮರೆತು ಹೋದರೆ ನನಗೇ ಲಾಭ ಎಂದುಕೊಂಡು ಟಿಕೆಟ್ ನ ಹಿಂದೆ ಚಿಲ್ಲರೆಯನ್ನು ಬರೆದು ಕೊಟ್ಟ ಆದರೆ ಅವನಿಗೇನು ಗೊತ್ತು ನನ್ನ ನೆನಪಿನ ಶಕ್ತಿಯ ಬಗ್ಗೆ..? ಎಂದು ಒಂದು ಮುಗುಳ್ನಗು ಮುಖದ ಮೇಲೆ ಹಾದು ಹೋಗುವಷ್ಟರಲ್ಲಿ ಆಗಲೇ ಮೈಸೂರಿನ ಹೊರವಲಯವನ್ನು ದಾಟಿಯಾಗಿತ್ತು. ಆದರೆ ಅದಕ್ಕಿಂತ ವೇಗವಾದ ನನ್ನ ಮನೋವೇಗದಲ್ಲಿ ನಾನು ಆಗಲೇ ಶಿವಮೊಗ್ಗ ತಲುಪಿ ಆಗಿತ್ತು.

ಶಿವಮೊಗ್ಗದಿಂದ 3 ಕಿಲೋಮೀಟರ್ ದೂರದ ಸಂಪಿಗೆಪುರ ನನ್ನ ಊರು. ಅಂದಿನ ಬಾಲ್ಯದ ದಿನಗಳು ಎಷ್ಟು ಚೆಂದವಲ್ಲವೇ? ಸ್ಕೂಲಿಗೆ ಚಕ್ಕರ್ ಹಾಕಿ ಕೆರೆಯಲ್ಲಿ ಮನದಣಿಯುವವರೆಗೂ ಈಜುತ್ತಿದ್ದುದು, ಸೀಬೆ, ಮಾವಿನ ತೋಪುಗಳಿಗೆ ಲಗ್ಗೆ ಹಾಕಿ ಅಲ್ಲಿನ ಹಣ್ಣುಗಳನ್ನು ತಿನ್ನುತ್ತಿದ್ದದ್ದು.. ಸಂತೆ, ಜಾತ್ರೆಯ ದಿನಗಳನ್ನು ಮರೆಯುವಂತೆಯೇ ಇರಲಿಲ್ಲ. ಆದರೆ ಕಾಲ ಎಷ್ಟು ನಿರ್ದಯಿ ಎಂದರೆ ಯಾರನ್ನೂ ಲೆಕ್ಕಿಸದೆ ಓಡುತ್ತಲೇ ಇರುತ್ತದೆ. ಹಾಗೇ ಓಡುವ ಕಾಲದ ಜೊತೆಗೆ ಓಡಿದ ನಾನು ಸರ್ಕಾರಿ ಕೆಲಸಕ್ಕೆ ಸೇರಿ ಹುಟ್ಟಿದೂರನ್ನು ಮರೆತು ಇದ್ದಬದ್ದ ಊರುಗಳನ್ನೆಲ್ಲಾ ಅಲೆದು ಕೊನೆಗೆ ಮೈಸೂರಿನಲ್ಲಿ ನೆಲೆಯಾದೆ. ಕೈಯಲ್ಲಿ ಇಂದು ಹಣ ಇರುವುದಕ್ಕೆ ಪರವಾಗಿಲ್ಲ ನನಗಿಷ್ಟ ಬಂದಂತೆ ಬದುಕುತ್ತಿದ್ದೇನೆ. ಅಪ್ಪ,ಅಮ್ಮ,ಹೆಂಡತಿ ಎಲ್ಲರೂ ತಮ್ಮ ಕಾಲ ಮುಗಿಸಿ ಹೊರಟರು. ಈಗ ಮಗನ ಯಜಮಾನಿಕೆಯಲ್ಲಿ ಸೊಸೆಯ ದರ್ಬಾರು ನಡೆಯುತ್ತಿದೆ. ಆ ಸ್ವೀಟ್ ತಿನ್ನಬೇಡಿ, ಆ ತಿಂಡಿ ತಿನ್ನಬೇಡಿ ಅದು ಎಣ್ಣೆ ತಿಂಡಿ, ಸಿಗರೇಟ್ ಸೇದಬೇಡಿ, ಒಬ್ಬರೇ ಎಲ್ಲೂ ಹೋಗಬೇಡಿ.. ಹೀಗೆ ನನ್ನ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹಾ ವಿಚಾರಗಳೇ.. ಒಂದೆರಡು ಸಲ ಇದೆಲ್ಲಾ ಅತಿ ಎನ್ನಿಸಿ ಮನೆಬಿಟ್ಟು ಹೊರಟಾಗ ಹುಡುಕಿದ್ದರು ಆಮೇಲಾಮೇಲೆ ಅವರೇ ಸುಮ್ಮನಾದರು. ಈಗಲೂ ಹಾಗೇ ಆಗುತ್ತದೆ ಎಂದು ಒಂದು ನಗೆ ನಗುವಷ್ಟರಲ್ಲಿ ಮಂಡ್ಯ ಬಂದಿತ್ತು.

ಮಂಡ್ಯದಲ್ಲಿ ಹತ್ತಿದ ಒಬ್ಬ ಹುಡುಗ ಸೀದಾ ಬಂದು ನನ್ನ ಪಕ್ಕ ಕುಳಿತ. ನನ್ನ ಮಗನಿಗಿಂತ ಚಿಕ್ಕ ವಯಸ್ಸು. ಹಾಗೆ ಕುಳಿತವನನ್ನು ಏಕೋ ಮಾತಾಡಿಸಬೇಕು ಎನ್ನಿಸಿತು ಹಾಗೆ ಮಾತನಾಡಿಸಲು ಶುರು ಮಾಡಿದೆ. ಏನಪ್ಪಾ ನಿನ್ನ ಹೆಸರು ಅಂದೆ ಅದಕ್ಕೆ ಅವನು "ಶಂಕರ್ ಅಂತಾ.. ನಿಮ್ಮ ಹೆಸರೇನು ಅಂಕಲ್? ಎಲ್ಲಿಗೆ ಹೊರಟಿದ್ದೀರಾ..?" ಎಂದು ಕೇಳಿದ. "ನನ್ನ ಹೆಸರು ಮಾಧವರಾವ್ ಅಂತಾ ಶಿವಮೊಗ್ಗಕ್ಕೆ ಹೊರಟಿದ್ದೇನೆ" ಎಂದೆ. "ಏನಂಕಲ್ ಒಬ್ಬರೇ ಹೋಗ್ತಾ ಇದ್ದೀರಿ? ಆಂಟಿ ಬಂದಿಲ್ವಾ?" ಎಂದ. ಅದಕ್ಕೆ ನಾನು "ಆಂಟಿ ನನ್ನ ಬಿಟ್ಟು ಮೊದಲೇ ಹೋಗಿದ್ದಾಳೆ ಕಣಪ್ಪಾ ಆದರೆ ಶಿವಮೊಗ್ಗಕ್ಕಲ್ಲ.. ದೇವರ ಹತ್ತಿರ" ಎಂದೆ. "ಹೋ ಸ್ಸಾರಿ ಅಂಕಲ್, ಮತ್ಯಾಕೆ ಹೋಗ್ತಾ ಇದ್ದೀರಾ ಅಲ್ಲಿಗೆ? ನಿಮ್ಮ ಮಕ್ಕಳನ್ನು ನೋಡೋಕಾ?" ಎಂದೆ. "ಇಲ್ಲಪ್ಪಾ ಆಲ್ಲಿ ಯಾರೂ ಇಲ್ಲ, ಮಕ್ಕಳನ್ನು ನೋಡೋಕಲ್ಲ.. ಮಕ್ಕಳನ್ನು ನೋಡದೇ ಇರೋದಕ್ಕೆ ಐ ಮೀನ್ ಮನೆ ಬಿಟ್ಟು ಹೊರಟಿದ್ದೇನೆ" ಅಂದೆ. ಅದಕ್ಕೆ ಅವನು " ನಿಮಗೆ ಒಂದು ಕಥೆ ಹೇಳ್ಲಾ ಅಂಕಲ್? " ಎಂದ. "ಸರೀನಪ್ಪಾ ಹೇಳು" ಎಂದೆ . 

ಅವನು ಹೇಳಿದ್ದನ್ನು ಸ್ವಲ್ಪ ಚಿಕ್ಕದಾಗಿ ನಾನೇ ಹೇಳುತ್ತೇನೆ ಕೇಳಿ. ಮಂಜಣ್ಣನವರಿಗೆ ವಯಸ್ಸಾಗಿತ್ತು ಆದರೆ ತಿನ್ನುವ ಬಾಯಿಚಪಲ ಜಾಸ್ತಿ ಆಗಿತ್ತು. ಕೊಲೆಸ್ಟ್ರಾಲ್, ಬೀ.ಪಿ, ಶುಗರ್, ಎಲ್ಲವೂ ಇತ್ತು ಆದರೂ ಸಿಹಿತಿಂಡಿ, ಎಣ್ಣೆತಿಂಡಿಗಳ ಚಪಲ ಬೇಡ ಎಂದರೂ ಬಿಡುವ ಸ್ಥಿತಿಯಲ್ಲಿರಲಿಲ್ಲ. ಜೊತೆಗೆ ಹೊರಗಡೆ ಹೋದಾಗ ಒಂದೆರಡು ಸಾರಿ ಬಿದ್ದು ಗಾಯವನ್ನೂ ಮಾಡಿಕೊಂಡಿದ್ದರು. ಹಾಗಾಗಿ ಒಬ್ಬರನ್ನೇ ಹೊರಗೆ ಹೋಗಬೇಡಿ ಎಂದದಕ್ಕೆ ಸಿಟ್ಟು ಮಾಡಿಕೊಂಡು ಮನೆಬಿಟ್ಟು ಹೋಗಿದ್ದರು. ಅವರನ್ನು ಹುಡುಕಲು ಪೋಲೀಸ್ ಕಂಪ್ಲೈಂಟ್ ಕೂಡಾ ಕೊಟ್ಟಿದ್ದೆವು ಆದರೆ ಎರಡು ದಿನ ಬಿಟ್ಟು ಅವರೇ ವಾಪಸ್ ಬಂದಿದ್ದರು, ಇದು ಮತ್ತೆರಡು ಸರಿ ಮರುಕಳಿಸಿದಾಗ ಪೋಲೀಸರು ಬೈದರು ಹಾಗಾಗಿ ಹೇಗೂ ಬರುತ್ತಾರಲ್ಲ ಎಂದು ಸುಮ್ಮನಾದಾಗ ಅವರು ಬಂದದ್ದು ಶವವಾಗಿ.. 

ಅದಾದ ನಂತರ ಅವನೇ ಮುಂದುವರಿಸಿದ "ಈ ಕಥೆಯಲ್ಲಿ ಬರುವ ಮಂಜಣ್ಣ ಬೇರಾರೋ ಅಲ್ಲ ಆತ ನನ್ನ ತಂದೆ" ಎಂದ. ನಾನಿನ್ನೂ ಅದೇ ಆಘಾತದಲ್ಲಿರುವಾಗ ಹೇಳಿದ " ಇನ್ನಾದರೂ ಆ ಕಥೆ ಮರುಕಳಿಸದಿರಲಿ, ಚಿಕ್ಕವನೆಂದು ನನ್ನ ಮಾತನ್ನು ನಿರ್ಲಕ್ಷ್ಯ ಮಾಡದಿರಿ. ಯೋಚಿಸಿ" ಎಂದ. ಅದೇ ಗುಂಗಿನಲ್ಲಿ ಯೋಚನೆ ಮಾಡುತ್ತಾ ನನ್ನ್ ಭವಿಷ್ಯವನ್ನು ನೆನಪಿಸಿಕೊಳ್ಳುತ್ತಾ ನಿದ್ದೆ ಮಾಡಿ ಎದ್ದಾಗ ಮನ ತಿಳಿಯಾಗಿತ್ತು, ಬಸ್ಸು ಗಂಡಸಿ ದಾಟಿತ್ತು.
ಆದರೆ ನನ್ನ ಪಕ್ಕದಲ್ಲಿದ್ದ ಆ ಹುಡುಗನ ಪತ್ತೆಯೇ ಇರಲಿಲ್ಲ..

ಮೂರು ಸೀಟಿನಲ್ಲಿ ಕೂತಿದ್ದವರನ್ನು ಹೇಗೂ ಮೈಸೂರಿನಿಂದ ಇದ್ದರಲ್ಲಾ ಎಂದು "ನನ್ನ ಪಕ್ಕ ಕುಳಿತಿದ್ದ ಹುಡುಗ ಎಲ್ಲಿ ಇಳಿದ?" ಎಂದು ಕೇಳಿದಾಗ ಅವರು " ಯಾವ ಹುಡುಗ? ಏನು ಕನಸು ಕಾಣ್ತಾ ಇದ್ದೀರಾ, ಹೇಗೆ? ಮೈಸೂರಿನಿಂದ ನೀವು ಒಬ್ಬರೇ ಇರೋದು.." ಎಂದರು.

ಅಯೋಮಯ ಸ್ಥಿತಿಯಲ್ಲೇ ನಾನು ಅರಸೀಕೆರೆಯಲ್ಲಿ ಇಳಿದು ವಾಪಾಸ್ ಮೈಸೂರಿಗೆ ಹೊರಟೆ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ