ಭಾನುವಾರ, ಡಿಸೆಂಬರ್ 1, 2019

ತನ್ಮಯತೆಯ ತಂತಿ ಮೀಟಿ

ಪ್ರೇಮವೆಂದರೆ ರಾಧಾ-ಕೃಷ್ಣನಂತಿರಬೇಕು. ಆದರೆ ನನ್ನ ಬದುಕಲ್ಲಿ ಹಾಗೆ ಒಲವ ಧಾರೆಯೆರೆಯುವವನು ಸಿಗಬಹುದೇ..? ಸಿಕ್ಕರೂ ನಾನು ರಾಧೆಯಾಗಬಲ್ಲೆನೇ..? ಖಂಡಿತಾ ಅದನ್ನು ಕನಸ್ಸಿನಲ್ಲಿಯೂ ನೆನೆಸಿಕೊಳ್ಳಲಾರೆ. ಬದುಕಿನ ಮರುಭೂಮಿಯಲ್ಲಿ ಒಲವ ಧಾರೆಯೆರೆದು, ಜೀವಾಮೃತವ ಸಿಂಪಡಿಸಿ ನನ್ನನ್ನು ದಕ್ಕಿಸಿಕೊಳ್ಳುವ ಸಾಹಸವನ್ನು ಮಾಡಲು ಯಾರೂ ಬರಲಾರರು. ಸುತ್ತಲೂ ಬೇಕಾದಷ್ಟು ಸೌಲಭ್ಯವಿದೆ, ಹಣವಿದೆ ಜೊತೆಗೆ ಬಂಧನವೂ ಇದೆ. ಇಲ್ಲಿನ ಬದುಕನ್ನು ಬಂಗಾರದ ಪಂಜರವೆಂದರೂ ತಪ್ಪಾಗಲಾರದು. ಇಲ್ಲಿ ಎಲ್ಲವೂ ಇದೆ ಆದರೂ ನನ್ನ ಪಾಲಿಗೆ ಮಾತ್ರ ಯಾವುದೂ ಇಲ್ಲ. ಹೆಸರು ಸುಮಂಗಲಾ ಎಂದಾದರೂ ನಾನು ಎಲ್ಲಾ ಸುಮಂಗಲೆಯರ ಪಾಲಿಗೆ ಅಪಶಕುನ. ಒಂದು ಕಾಲದಲ್ಲಿ ನನ್ನ ಮುಖ ನೋಡದೇ ಹೊರ ಹೊರಡದವರ ಪಾಲಿಗೆ ಇಂದು ನಾನು ಕಂಡರೆ ಅಪಶಕುನ. ನನ್ನ ಮುಖ ನೋಡಿದರೆ ಹೊರ ಹೊರಡಲಾರರು. ಇದರಲ್ಲಿ ನನ್ನ ತಪ್ಪಾದರೂ ಏನಿದೆ..? ಸಂಪ್ರದಾಯದ ಬೇಲಿಯ ಬಂಧನದಲ್ಲಿ ನಲುಗಿ ಹೋಗುತ್ತಿರುವವಳ ಇಡೀ ಬದುಕು ಹೀಗೆಯೇ ಸವೆದು ಹೋಗಿಬಿಟ್ಟರೆ..! ಎಂದು ಆಲೋಚಿಸಿದರೇ ಭಯವಾಗುತ್ತಲಿದೆ. ತನ್ಮಯತೆಯಿಂದ ಹಾಡುತ್ತಾ ಕುಳಿತವಳ ಹಾಡು ಕೇಳಲು ಕಿಕ್ಕಿರಿದು ಸೇರುತ್ತಿದ್ದ ಜನ, ಅದಕ್ಕೆ ಪ್ರೋತ್ಸಾಹ ನೀಡುತ್ತಿದ್ದವರು ನನ್ನ ಮನೆಯವರು ಆದರೆ ಇಂದು ಅದೇ ಅವರ ಪಾಲಿಗೆ ಕರ್ಕಶವಾಗಿದೆ. ನನ್ನ ಪಾಲಿಗೆ ಅದು ನಿಷಿದ್ಧವಾಗಿದೆ. ರುಕ್ಮಿಣಿಯಾಗಲಿಲ್ಲ, ರಾಧೆಯೂ ಆಗಲಿಲ್ಲ ಕಡೆಗೆ ಮೀರಾ ಕೂಡಾ ಆಗಲಾಗುತ್ತಿಲ್ಲ. ಬಯಸಿದ ಕೃಷ್ಣ ಸಿಗಲಿಲ್ಲ, ನನ್ನ ಪಾಲಿಗೆಂದು ಮೀಸಲಾದವನು ದಕ್ಕಲಿಲ್ಲ. ಒಲವ ತಂತಿಯ ಮೀಟಿ ಹೊರಟ.. ಈಗ ನನ್ನೊಳಗೆ ಉಂಟಾಗಿರುವ ಪ್ರೀತಿಯ ಅಲೆಯನ್ನು ನನ್ನೊಳಗೇ ಬಚ್ಚಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಲವಿನ ಅಲೆಯನ್ನು ಒಡಲೊಳಗೆ ಬಚ್ಚಿಟ್ಟುಕೊಳ್ಳುವುದು ಎಷ್ಟೊಂದು ಕಷ್ಟ ಅಲ್ಲವೇ..? ಅದರಲ್ಲೂ ತಂಪಾದ ಒಲವು ಹಿಮದಂತೆ ಕಾಲ ಕಳೆದಂತೆ ಬಿಸಿಯ ಅನುಭವ ಮೂಡಿಸಿ ಒಳಗೊಳಗೇ ಕೊಂದುಬಿಡುತ್ತದೆ. ತಂಪೋ-ತಾಪವೋ ತಿಳಿಯುವಷ್ಟರಲ್ಲಿ ಅಲ್ಲಿ ಘಾಸಿಯಾಗಿರುವುದಂತೂ ಸತ್ಯ. 
*************

ಗೋಪಿಕಾಪುರದ ಗೋವಿಂದ ಗೌಡರ ಕುಟುಂಬ ಸುತ್ತಮುತ್ತಲಿನ ಹತ್ತು ಹಳ್ಳಿಗೇ ದೊಡ್ಡ ಕುಟುಂಬ. ವೈಭವ, ಸಂಪ್ರದಾಯ, ಆಸ್ತಿ, ನ್ಯಾಯ ಎಲ್ಲದರಲ್ಲಿಯೂ ಈ ಕುಟುಂಬದ ಸಮನಾಗಿ ಯಾರೂ ನಿಲ್ಲುವರಿಲ್ಲ. ಸಾತ್ವಿಕತೆಯಿಂದ ಮತ್ತು ಸಹಕಾರದಿಂದ ಸಹಬಾಳ್ವೆ ನಡೆಸುತ್ತಿದ್ದರು ಆ ಮನೆಯ ಮಂದಿ. ಆಳುಗಳನ್ನು ಕೀಳಾಗಿ ನೋಡುತ್ತಿರಲಿಲ್ಲ. ಶ್ರೀಮಂತ-ಬಡವ ಎನ್ನದೆ ಎಲ್ಲರಿಗೂ ಒಂದೇ ರೀತಿಯ  ಆತಿಥ್ಯ ಸಿಗುತ್ತಿತ್ತು ಅಲ್ಲಿ. ಗೋವಿಂದಗೌಡರಿಗೆ ಒಬ್ಬ ಮಗ ಮತ್ತು ಒಬ್ಬಳು ಮಗಳು. ಮಗಳು ಮಾಧವಿ ಮತ್ತು ಮಗ ವಿದ್ಯಾಧರ.  ವಿದ್ಯೆಯ ಜೊತೆ ವಿನಯ ಮತ್ತು ಶಿಸ್ತಿನ ಪಾಠವನ್ನು ಸಹಾ ಹೇಳಿಕೊಟ್ಟು ಮಕ್ಕಳನ್ನು ಬೆಳೆಸುತ್ತಿದ್ದರು. ಸಂಪ್ರದಾಯಗಳ ಗೊಡ್ಡು ಬೇಲಿ ಇಲ್ಲಿಲ್ಲ ಆದರೆ ವೈಜ್ಞಾನಿಕ ಮನೋಭಾವದಿಂದ ಬೆಳೆಸಿಕೊಂಡ ಆಚರಣೆಗಳನ್ನು ತಪ್ಪಿಸಲಾರರು. ವಿದ್ಯಾಧರ ಇಂತಹ ವಾತಾವರಣದಲ್ಲಿ ಬೆಳೆದವ. ಪಟ್ಟಣದಲ್ಲಿ ಓದಿದ್ದರೂ ಹಳ್ಳಿಯ ಮತ್ತು ಮಣ್ಣಿನ ಸೇವೆಗೆಂದೇ ಮತ್ತೆ ಮರಳಿ ಹಳ್ಳಿಗೆ ಬಂದು ನೆಲೆ ನಿಂತಿದ್ದವನು. ಆಧುನಿಕತೆಯ ಕಾಲದಲ್ಲೂ ಮಣ್ಣಿನ ಸೊಗಡಿಗೆ ಮರುಳಾದವ. ಎಂ.ಎಸ್ಸಿ ಅಗ್ರಿಕಲ್ಚರ್ ನ ಗೋಲ್ಡ್ ಮೆಡಲಿಸ್ಟ್. ಆದರೆ, ಹಳ್ಳಿಯ ಹೊಲ-ಗದ್ದೆಗಳಲ್ಲಿ ಭೂ ತಾಯಿಯ ಸೇವೆಗೆ ಟೊಂಕ ಕಟ್ಟಿ ನಿಲ್ಲುವ  ಆದರ್ಶ ಯುವಕ. ಗೋಪಿಕಾಪುರದ ಯುವತಿಯರಿಗೆ ವಿದ್ಯಾಧರನನ್ನು ನೋಡುವುದೇ ಕಣ್ಣಿಗೆ ಹಬ್ಬ. ಗೋಪಿಕಾಪುರದ ಹೆಂಗಳೆಯರಿಗೆ ಅಚ್ಚುಮೆಚ್ಚಿನ ಮಗ ವಿದ್ಯಾಧರ. ತಾಯಿಲ್ಲದ ಮಗನಿಗೆ ಊರ ತುಂಬೆಲ್ಲಾ ತಾಯಂದಿರು. ಯೌವ್ವನದ ಹೊಸ್ತಿಲಲ್ಲಿದ್ದರೂ ಇಲ್ಲಿಯವರೆಗೂ ವಿದ್ಯಾಧರನ ಮನದ ಕದ ಯಾರಿಗೂ ತೆರೆದಿರಲಿಲ್ಲ.. ಅವಳೊಬ್ಬಳ ಹೊರತಾಗಿ ಅವನ ಮನದಲ್ಲಿ ಬೇರಾರಿಗೂ ಜಾಗವಿರಲಿಲ್ಲ. ಅವಳಿಗಾಗಿ ಹುಡುಕದ ಜಾಗವಿಲ್ಲ, ಬೇಡದ ದಿನವಿಲ್ಲ, ಪೂಜಿಸದ ದೇವರಿಲ್ಲ ಆದರೆ ಅವಳು ಇವನ ಜೀವನದ ಕೆಲ ದಿನಗಳ ಭಾಗವಾಗಿ ಮಾತ್ರ ಬಂದು ಹೋಗಿದ್ದಳು. 

"ಸುಮ ನಿಲ್ಲು, ಓಡಬೇಡ.. ನನ್ನನ್ನು ಬಿಟ್ಟು ದೂರ ಹೋಗಬೇಡ. ಒಮ್ಮೆ ನನ್ನ ಮಾತು ಕೇಳು. ಬಹುದೂರ ಸಾಗುವುದಿದೆ ಮಧ್ಯದಲ್ಲಿ ನನ್ನನ್ನು ಒಬ್ಬಂಟಿ ಮಾಡಬೇಡ." ಬಡಬಡಿಸುತ್ತಿದ್ದಾಗಲೇ ವಿದ್ಯಾಧರನಿಗೆ ಎಚ್ಚರವಾಯಿತು. ಅವಳ ನೆನಪಿನಿಂದ, ಆ ದಿನಗಳ ಗುಂಗಿನಿಂದ ಹೊರಬರಲು ಅವನಿಗೆ ಸಾಧ್ಯವೇ ಆಗಿರಲಿಲ್ಲ. ಅವಳ ನೆನಪಿನಿಂದ ಎಚ್ಚರಾದವನು ಎದ್ದು ಕೊಳಲು ತೆಗೆದುಕೊಂಡು ಹೊಳೆ ದಂಡೆಗೆ ಹೊರಟ. ಪೌರ್ಣಮಿಯ ಹಾಲು ಬೆಳದಿಂಗಳು ಇಡೀ ಗೋಪಿಕಾಪುರವನ್ನಾವರಿಸಿತ್ತು. ಮೌನದಲ್ಲೂ ನಾದದ ಅಲೆಯನ್ನು ಹೊಮ್ಮಿಸಲು ವಿದ್ಯಾಧರ ಕೊಳಲನ್ನು ಹೊರತೆಗೆದ. ಆ ಕೊಳಲನ್ನು ದಿಟ್ಟಿಸಿ ನೋಡುತ್ತಾ ಒಮ್ಮೆ ನಿಟ್ಟುಸಿರು ಬಿಟ್ಟ. ಆ ಕೊಳಲು ಆತನ ಗೆಳೆಯನನ್ನೊಮ್ಮೆ ನೆನಪಿಸಿತು. 

ಮಾಧವಕಾಂತ ವಿದ್ಯಾಧರನ ಅಚ್ಚುಮೆಚ್ಚಿನ ಗೆಳೆಯ. ಒಂದೇ ತಾಯಿಯ ಒಡಲಿನಿಂದ ಜೀವತಳೆಯಲಿಲ್ಲ ಆದರೆ ಒಂದೇ ಆತ್ಮದ ಎರಡು ಜೀವಗಳು ಅವರು.. ಸಹೋದರತೆ, ಆತ್ಮೀಯತೆ ಒಟ್ಟಾಗಿ ಮೇಳೈಸಿತ್ತು ಅವರಿಬ್ಬರ ಬದುಕಲ್ಲಿ. ಹಣ್ಣು, ಆಟಿಕೆ, ಪುಸ್ತಕ ಎಲ್ಲವೂ ಸಮನಾಗಿ ಹಂಚಿಕೆಯಾಗುತ್ತಿತ್ತು ಇಬ್ಬರಲ್ಲೂ. ಮಾಧವನಿಗೆ ಈಜಲು ಕಲಿಸಿ ಕೊಟ್ಟಿದ್ದ ವಿದ್ಯಾಧರ. ವಿದ್ಯಾಧರನಿಗೆ ಕೊಳಲು ನುಡಿಸಲು ಕಳಿಸಿದ್ದ ಮಾಧವ. ಈಜಲು ಕಲಿತ ನಂತರ ಗುರುವಿಗೇ ಪೈಪೋಟಿ ನೀಡುವಂತೆ ಸಜ್ಜಾಗಿದ್ದ. ಆದರೆ, ಅಷ್ಟು ಒಳ್ಳೆಯ ಈಜುಪಟು ನೀರಲ್ಲಿ ಮುಳುಗಿ ಸತ್ತದ್ದು ವಿದ್ಯಾಧರನಿಗೆ ಸೋಜಿಗ. ಆ ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆಯಲ್ಲಿ ಅವನಿಗೆ ಈಜುವ ಹುಚ್ಚು ಬಂದದ್ದಾದರೂ ಏಕೆ? ಅಪರಾತ್ರಿಯಲ್ಲಿ ಮನೆಯಿಂದ ಹೊರ ಹೊರಟನಂತೆ.. ಅಂತಹಾ  ಯಾವ ಕಷ್ಟದಲ್ಲಿ ಅವನಿದ್ದ..? ನಾನಿದ್ದಿದ್ದರೆ ನನ್ನ ಪ್ರಾಣವನ್ನೇ ಒತ್ತೆ ಇಟ್ಟು ಅವನನ್ನು ಉಳಿಸಿಕೊಳ್ಳುತ್ತಿದ್ದೆ. ಪ್ರೀತಿಯನ್ನು ಕಳೆದುಕೊಂಡಿದ್ದೆ ಆದರೆ ನಾನು ವಿವೇಕವನ್ನೂ ಕಳೆದುಕೊಂಡಿದ್ದೆನೇ..? ಪ್ರಾಣ ಸ್ನೇಹಿತನ ಮದುವೆಗೂ ಬಾರದಷ್ಟು ಕಟುಕನಾಗಿದ್ದೆನೇ..? ಸಣ್ಣ ಪುಟ್ಟ ವಿಚಾರಗಳಿಗೆ ನಾನು ತಲೆಕೆಡಿಸಿಕೊಂಡು ಕೂತಿದ್ದಾಗ ನನ್ನಲ್ಲಿ ಸ್ಥೈರ್ಯ ತುಂಬುತ್ತಿದ್ದವನ ಬದುಕು ಏಕೆ ಹಾಗಾಯಿತು..? ನಾನು ಓದಲು ಪಟ್ಟಣಕ್ಕೆ ಹೋಗಲೇಬಾರದಿತ್ತು. ನಾನು ಹೋಗುವುದಿಲ್ಲ ಎಂದಾಗ ಅವನೇ ನನ್ನನ್ನು ಬಲವಂತವಾಗಿ ಓದಲು ಕಳುಹಿಸಿದ. "ನನಗಂತೂ ಓದು ತಲೆಗೆ ಹತ್ತಲಿಲ್ಲ. ನೀನು ಹೆಸರಿಗೆ ತಕ್ಕಂತೆ ಸರಸ್ವತಿ ಪುತ್ರ. ನೀನು ಓದಿ ನಮ್ಮೆಲ್ಲರ, ಹಳ್ಳಿಯ ಕೀರ್ತಿಯನ್ನು ಎತ್ತಿ ಹಿಡಿಯಬೇಕು. ನೀನು ಬರುವವರೆಗೂ ನೀನು ನಿರ್ವಹಿಸಬೇಕಾದ ಜವಾಬ್ದಾರಿಯನ್ನು ನಾನು ನಿರ್ವಹಿಸುತ್ತೇನೆ. ನಿನ್ನ ತಂದೆಗೆ ಮತ್ತೊಬ್ಬ ಮಗನಾಗಿ ಕರ್ತವ್ಯದಲ್ಲಿ ಹೆಗಲು ಕೊಡುತ್ತೇನೆ. ಮಾಧವಿಯ ಅಣ್ಣನಾಗಿ ರಕ್ಷಣೆ ಮಾಡುತ್ತೇನೆ" ಎಂದಿದ್ದ. ಅವನ ಈ ಭರವಸೆಯ ಮಾತುಗಳೇ ಅಲ್ಲವೇ ನನ್ನನ್ನು ಓದಲು ಪ್ರೇರೇಪಿಸಿದ್ದು. ಬದುಕಿನ ಲಹರಿ ಬದಲಾಗಲು ಎಷ್ಟು ಕಾಲ ಹಿಡಿಯುತ್ತದೆ ಅಲ್ಲವೇ..? ಅವನ ಉಸಿರು ಈ ಕೊಳಲೊಳಗೇ ಉಳಿದು ಹೋದಂತೆ ಭಾಸವಾಗುತ್ತದೆ.. ಅವಳು ನನ್ನೊಳಗೇ ಉಳಿದಂತೆ. ಕಾಣದ ಭಾವ ದಕ್ಕುವುದಕ್ಕೆ ಪ್ರೀತಿ ಎನ್ನಬಹುದೇ..? ಕೊರಳ ಕಂಪಿನಿಂದ ತನ್ಮಯತೆಯ ತಂತಿ ಮೀಟಿದವಳು ಅವಳಾದರೆ, ಆತ್ಮೀಯತೆಯಿಂದ ಮನದ ಭಾವ ಮೀಟಿದವನು ಇವನು.. ಮೀಟಿದ ಭಾವಗಳನ್ನು ಅಲೆಯಾಗಿ ತೇಲಿ ಬಿಡದಿದ್ದರೆ ಅದು ಭಾರವಾಗುತ್ತದೆ. ಒಲವ ಸುಧೆಯಾದರೂ, ದ್ವೇಷದ ತರಂಗವಾದರೂ ಹರಿದುಹೋಗಿಬಿಡಬೇಕು ಇಲ್ಲವಾದಲ್ಲಿ ಹೆಪ್ಪುಗಟ್ಟಿ ಮನದಲ್ಲಿ ನೆಲೆ ನಿಂತುಬಿಡುತ್ತದೆ. ನಿಶ್ಚಲವಾಗಿ ನಿಂತದ್ದು ಕೊಳಕಾಗಬಹುದು. ಗೋಪಿಕಾಪುರದ ಹೊಳೆಯಂತೆ ಎಲ್ಲವನ್ನೂ ಹರಿಯಬಿಡಬೇಕು. ಹರಿಯ ಬಿಟ್ಟಾಗ ಕಾಲದೊಂದಿಗೆ ಮಾಯವಾಗಬಹುದು. ಕಾಲದೊಂದಿಗೆ ಮಾಯವಾಗಬಹುದೆಂಬುದು ನಮ್ಮ ಭ್ರಮೆ ಅಷ್ಟೇ.. ನೆನಪುಗಳು ಎಂದಿಗೂ ಸ್ಥಿರ. ಕಾಲ ಓಡಬಹುದು, ವ್ಯಕ್ತಿಗಳು ಮತ್ತು ನಡವಳಿಕೆಗಳು ಬದಲಾಗಬಹುದು ಆದರೆ ನೆನಪುಗಳು ಮಾತ್ರ ಬದಲಾಗವು.

ಮಾಧವನ ನೆನಪು ನನ್ನಲ್ಲಿ ಸದಾ ಜೀವಂತವಾಗಿ ಉಳಿಯಬೇಕೆಂದೇ ನಾನು ಅವನ ಅಂತ್ಯಕ್ರಿಯೆಗೂ ಬರಲಿಲ್ಲ. ಬೆಂಕಿಯಲ್ಲಿ ಧಗಧಗಿಸುವ ಅವನನ್ನು ನೋಡಲು ನನ್ನಿಂದಾಗದು ಆದುದರಿಂದ ನಾನು ಬರಲಿಲ್ಲ. ಏನೇನೋ ದಂತಕತೆಗಳು ಹರಿದಾಡಿದವು ಹಾಗೂ ಇನ್ನೂ ಆ ಕಥೆಗಳು ನಿಂತಿಲ್ಲ. ಅಮ್ಮನಿಗೆ ಹೇಗೆ ಮುಖ ತೋರಿಸಲಿ ಮಾಧವ..? ನನ್ನ ಗೆಳೆಯನನ್ನು ಉಳಿಸಿಕೊಳ್ಳಲಾಗದ ಕಡು ಪಾಪಿ ಎಂದು ನಾನು ಹೇಗೆ ಹೇಳಲಿ..? ಈಗ ತಾನೇ ಮದುವೆಯಾಗಿ ಬಂದಿರುವ ಆ ಹುಡುಗಿಯ ಪರಿಸ್ಥಿತಿ ಹೇಗಿರಬಹುದು..? ಉತ್ತರಿಸುವವ ಈಗ ಜೊತೆಗಿಲ್ಲ. ಕೆಲ ಪ್ರಶ್ನೆಗಳು ಉಳಿದು ಹೋಗಿವೆ ಉತ್ತರವೇ ಸಿಗದಂತೆ.. ಉತ್ತರಿಸಬೇಕಾದವರು ಜೊತೆಗಿಲ್ಲವಾದರೂ ಪ್ರಶ್ನೆಗಳ ಜೊತೆಗೇ ಗುದ್ದಾಡುತ್ತಾ ಬದುಕಿಬಿಡುತ್ತೇವೆ, ಉತ್ತರ ಸಿಗದೆಂದು ಗೊತ್ತಿದ್ದರೂ.. ಆಲೋಚನೆಯ ಜೊತೆ ಈಗ ಕೊಳಲು ಜೊತೆಯಾಯಿತು. ನಿದ್ರಿಸುವವರಿಗೆ ಜೋಗುಳ ಹಾಡಿದಂತೆ ನಿನಾದ ಹೊಮ್ಮುತ್ತಿತ್ತು ಶೋಕಭರಿತವಾಗಿ.. ಗೋಪಿಕಾಪುರದ ಹೊಳೆದಂಡೆಯ ಪಕ್ಕದ ಬಂಡೆಯ ಮೇಲೆ ಕಾಲು ಇಳಿ ಬಿಟ್ಟು ಕೂತವನು ಮೈಮರೆತು ಕೊಳಲು ನುಡಿಸುತ್ತಿದ್ದ. ಕಣ್ಣಿಂದ ಹರಿದ ನೀರು ಹೊಳೆಯ ಜೊತೆಗೆ ಮಿಳಿತವಾಗುತ್ತಿತ್ತು. ಶೋಕಪೂರ್ಣ ರಾಗವನ್ನು ಕೇಳಿ ಚಂದಿರನೂ ಮೋಡದ ಚಾದರ ಹೊದ್ದು ಮುಗುಮ್ಮನೆ ಕುಳಿತಿದ್ದ. ಆದರೆ, ನಿದ್ದೆ ಬಾರದ ಒಬ್ಬರ ಮನದಲ್ಲಿನ ತಳಮಳ ಈ ರಾಗವನ್ನು ಕೇಳಿದೊಡನೆ ಕಣ್ಣೀರಾಗಿ ಹರಿದು ಹೋಗುತ್ತಿತ್ತು. ಮನಸೋತಿದ್ದ ರಾಗವನ್ನು ಎಂದಾದರೂ ಮರೆಯಲಾದೀತೇ..? ಕೊಳಲು ನುಡಿಸಿ ಮನದ ದುಗುಡವನ್ನು ಕಳೆದುಕೊಂಡು ಹಗುರಾದವನಂತೆ ವಿದ್ಯಾಧರ ಮನೆಯ ಕಡೆ ಹೊರಟರೆ, ಕಣ್ಣಿಗೆ ಹತ್ತಲಿದ್ದ ನಿದ್ದೆಯನ್ನು ಕಳೆದುಕೊಂಡು ಮತ್ತಷ್ಟು ಗೊಂದಲಕ್ಕೆ ಬಿದ್ದು, ಮನಸ್ಸನ್ನೆಲ್ಲಾ ರಾಡಿ ಮಾಡಿಕೊಂಡು ಹಠಕ್ಕೆ ಬಿದ್ದವಳಂತೆ ಅಳುತ್ತಿದ್ದಳು ಸುಮಂಗಲಾ..
*************

ಕೃಷ್ಣಾಪುರದ ಗೋಪಾಲಗೌಡರ ಮುದ್ದಿನ ಮಗಳು ಸುಮಂಗಲಾ. ಮೂರು ಜನ ಅಣ್ಣರ ಮುದ್ದು ಗೊಂಬೆ. ಮಂಗಳಮ್ಮನವರ ಪಾಲಿಗೆ ಮಗಳು ಎಷ್ಟೇ ಬೆಳೆದರೂ ಕೈಗೂಸು. ಮನೆಯವರ ಪಾಲಿನ ಅದೃಷ್ಟ ದೇವತೆ ಸುಮಂಗಲಾ. ಮಂಗಳಕರಳಾದವಳು ಸಹಾ ಹೌದು.. ಸುಮದಂತೆ ಮೃದುವೂ ಹೌದು. ಅಪ್ಪ ಅವಳ ಮುಖ ನೋಡದೆ ಹೊರಗೇ ಕಾಲಿಡರು. ನಡೆದರೆ ನೋಯುತ್ತದೆ, ಅತ್ತರೆ ಸೊರಗುತ್ತದೆ ಮಗು ಎಂದು ಅಂಗೈಯ್ಯಲ್ಲಿಟ್ಟುಕೊಂಡೇ ಸಾಕುತ್ತಿದ್ದರು ಅವಳನ್ನು. ಕೊಂಚ ಶೀತವಾದರೂ ಮನೆಯಲ್ಲಿ ವೈದ್ಯರು ಪ್ರತ್ಯಕ್ಷ. ಅವಳು ಕೇಳುವುದಕ್ಕಿಂತ ಮುನ್ನವೇ ಎಲ್ಲವೂ ಅವಳೆದುರಲ್ಲಿ ಪ್ರತ್ಯಕ್ಷ. ಇಷ್ಟಪಟ್ಟು ಒಂದು ಗೊಂಬೆಯನ್ನು ಬಯಸಿದರೆ ಗೊಂಬೆಗಳ ರಾಶಿಯೇ ಅವಳ ಮುಂದಿರುತ್ತಿತ್ತು. ರೇಡಿಯೋದಲ್ಲಿ ಬರುತ್ತಿದ್ದ ಹಾಡಿಗೆ ಧ್ವನಿಯಾಗಿ ಹಾಡಿದನ್ನು ಕಂಡು ಅವಳ ತಂದೆಗೆ ಆದ ಸಂತಸ ಅಷ್ಟಿಷ್ಟಲ್ಲ. ಅಂದಿನಿಂದ ಅವಳಿಗೆ ಮನೆಯಲ್ಲಿಯೇ ಸಂಗೀತ ಪಾಠ ಆರಂಭವಾಯಿತು. ಅವಳೂ ಸಂಗೀತವನ್ನು ತನ್ನ ಪ್ರಾಣವೆನ್ನುವಂತೆ ಪ್ರೀತಿಸಿದಳು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಎಲ್ಲಾ ರಾಗಗಳನ್ನೂ ಕರತಲಾಮಲಕ ಮಾಡಿಕೊಂಡಳು. ಜೊತೆಗೆ ವೀಣೆ ನುಡಿಸುವುದನ್ನು ಸಹಾ ಕಲಿತುಕೊಂಡಳು. ವೀಣೆ ಮೀಟಿ ಶೃತಿ ಮಾಡಿಕೊಂಡು ಹಾಡಲು ಕುಳಿತರೆ ಆಕೆ ಸಾಕ್ಷಾತ್ ಸರಸ್ವತಿಯ ಅಪರಾವತಾರವೇ. ಪ್ರತಿ ಶುಕ್ರವಾರ ದೇವಿ ದೇವಸ್ಥಾನದಲ್ಲಿ ಸಂಜೆ ಇವಳ ಕಛೇರಿ. ಜೇನು ಸುರಿದಂತಹಾ ಕಂಠಸಿರಿಯಿಂದ ಲಲಿತಾ ಸಹಸ್ರನಾಮ ಪಾರಾಯಣ. ದೇವಿಯ ಗುಡಿಯಲ್ಲಿ ಎಷ್ಟೇ ಜನರಿದ್ದರೂ ಸುಮಂಗಲಾಳಿಗೇ ಮೊದಲು ದೇವಿ ದರ್ಶನವಾಗುತ್ತಿತ್ತು. ಇಷ್ಟೆಲ್ಲಾ ಇದ್ದರೂ ಸಹಾ ಅವಳಿಗೆ ಕೊಂಚವೂ ಅಹಂಕಾರವಿರಲಿಲ್ಲ. ತುಂಬಿದ ಕೊಡ ತುಳುಕುವುದಿಲ್ಲ ಎಂಬ ಮಾತಿಗೆ ಪ್ರತ್ಯಕ್ಷ ಸಾಕ್ಷಿಯಂತಿದ್ದಳು ಅವಳು. ಮನೆಯಲ್ಲಿ ನೀಡಿದ್ದ ಸಂಸ್ಕಾರ, ವಿನಯ ಅಂತಹದಿತ್ತು ಆದರೆ ಸುಮಂಗಲಾ ಕೊಂಚ ದುಃಖಿಯೇ. 

ಶಾಲೆಯಲ್ಲಿಯೂ ಸುಮಂಗಲಾಳಿಗೆ ಗೆಳತಿಯರು ಕಡಿಮೆ. ಸಂಜೆ ಆಡುವ ಹೊತ್ತಿನಲ್ಲಿ ಸಂಗೀತಾಭ್ಯಾಸ ಸಾಗುತ್ತಿತ್ತು. ಮುಂಜಾನೆಯೂ ಸಂಗೀತಾಭ್ಯಾಸ.. ಅವಳು ಹೊರ ಹೋಗುತ್ತಿದ್ದದ್ದೇ ಕಡಿಮೆ ಎಂಬಂತ್ತಿತ್ತು. ಹೊರಗೆ ಆಡಲು ಹೊರಟರೂ ಜೊತೆಯಲ್ಲಿ ಯಾರಾದರೂ ಇದ್ದೇ ಇರುತ್ತಿದ್ದರು ಅವಳ ಬೆಂಗಾವಲಾಗಿ. ಮನೆಯವರ ಅತಿ ಕಾಳಜಿ ಅವಳ ಪಾಲಿಗೆ ಹಿಂಸೆಯಂತೆ ಭಾಸವಾಗುತ್ತಿತ್ತು. ಬಂಗಾರದ ಪಂಜರವಾದರೂ ಅದು ಪಂಜರವೇ ಅಲ್ಲವೇ..? ಹಕ್ಕಿಗೆ ಬಂಗಾರ ಬೇಡ ಸ್ವಾತಂತ್ರ್ಯ ಬೇಕು ಆದರೆ ಸಾಕುವವರಿಗೆ ಬಂಗಾರದ ಪಂಜರ ಪ್ರತಿಷ್ಠೆಯೇ ಅಲ್ಲವೇ..? ಶಾಲೆಯಲ್ಲಿ ಓದಿನಲ್ಲಿಯೂ ಇವಳಿಗೆ ಮೊದಲ ಸ್ಥಾನ ಕಟ್ಟಿಟ್ಟ ಬುತ್ತಿ. ಎಲ್ಲರ ಕಣ್ಣಿಗೂ ಅವಳ ಬದುಕು ಸುಂದರವಾಗಿ ಕಾಣಿಸುತ್ತಿತ್ತು ಅವಳೊಬ್ಬಳ ಹೊರತಾಗಿ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಲ್ಲವೇ..? ನೋಡುಗರಿಗೆ ಎಂದಿಗೂ ಹೊರನೋಟವಷ್ಟೇ ದಕ್ಕುತ್ತದೆ ಆದರೆ ಅನುಭವಿಸುವವರಿಗೆ ಅಷ್ಟೇ ತಿಳಿದಿರುವುದು ಅವರವರ ಹಣೆಪಾಡು. ಆದರೂ, ಸುಮಂಗಲಾ ಯಾರನ್ನೂ ನೋಯಿಸಲು ಇಚ್ಛಿಸುತ್ತಿರಲಿಲ್ಲ. ಮತ್ತೊಬ್ಬರ ಇಚ್ಛೆಗೆ ವಿರುದ್ಧವಾಗಿ ನಡೆದದ್ದಿಲ್ಲ. ಅಪ್ಪನ ಮಾತು ಅವಳಿಗೆ ವೇದವಾಕ್ಯವಿದ್ದಂತೆ, ಅದನ್ನು ಮೀರಿ ನಡೆಯುವ ಧೈರ್ಯ ಅವಳಿಗಿಲ್ಲ, ಅದನ್ನು ಮೀರಿ ನಡೆಯಲಾರಳು ಸಹಾ. ತನ್ನ ಪಾಲಿಗೆ ಬಂದದ್ದನ್ನು ಸ್ವೀಕರಿಸುತ್ತಾ ಅಂತರ್ಮುಖಿಯಾಗುತ್ತಾ ಹೋದಳು. ಅವಳ ಸಂಗಾತಿ ಸಂಗೀತವೇ ಆಯಿತು. ಸುಖ-ದುಃಖ ಎರಡೂ ಸಹಾ ವ್ಯಕ್ತವಾಗುತ್ತಿದ್ದದ್ದು ಸಂಗೀತದ ಮೂಲಕವೇ.. ಇವಳ ಸಂಗೀತ ಪ್ರೇಮವನ್ನು ಮೆಚ್ಚುವ ಮತ್ತು ಪ್ರೋತ್ಸಾಹಿಸುವ ಹುಡುಗನನ್ನೇ ಹುಡುಕಬೇಕು ಎಂದು ತನ್ನ ತಾಯಿ ತಂದೆಯೊಡನೆ ಮಾತನಾಡುತ್ತಿರುವುದು ಸುಮಂಗಲಾ ಕಿವಿಗೆ ಬಿದ್ದಿತು. ತಾರುಣ್ಯದ ಕಾಲವಾದರೂ ಪ್ರೀತಿ-ಪ್ರೇಮದ ಭಾವನೆಗಳು ಅವಳಲ್ಲಿ ಮೂಡಿರಲಿಲ್ಲ. ಅವಳ ಪ್ರೇಮವೇನಿದ್ದರೂ ಕೃಷ್ಣನಿಗೇ ಮೀಸಲು. ಮತ್ತೊಬ್ಬಳು ಮೀರಾಳಾಗುವ ಹಂತದಲ್ಲಿದ್ದಳು. ಆದರೆ, ಅವಳ ವಿಧಿ ಬರಹ ಮತ್ತೇನನ್ನೋ ಸೂಚಿಸುತ್ತಲಿತ್ತು. ಅದಾವುದರ ಅರಿವೂ ಇಲ್ಲದೆ ಮೀರಾಳಂತೆ ಭಕ್ತಿ-ಪ್ರೇಮದ ಪರಾಕಾಷ್ಠೆಯಲ್ಲಿ ತೊಡಗಿದ್ದಳು ಸುಮಂಗಲಾ.

ಸುಮಂಗಲಾಳ ಪಿ.ಯು.ಸಿ ಮುಗಿದಿತ್ತು. ಮುಂದೆ ಓದಲು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಾಲೇಜು ಇರಲಿಲ್ಲ. ಓದಿನಲ್ಲಿ ಮುಂದಿದ್ದ ವಿದ್ಯಾರ್ಥಿಗಳನ್ನು ಶಿಕ್ಷಕರು ಪ್ರೋತ್ಸಾಹಿಸುತ್ತಿದ್ದರು ಜೊತೆಗೆ ಮನೆಯವರಲ್ಲಿಯೂ ತಿಳುವಳಿಕೆ ತುಂಬಿ ಮುಂದಿನ ಶೈಕ್ಷಣಿಕ ಪ್ರಗತಿಗೆ ಅನುವು ಮಾಡಿಕೊಡುತ್ತಿದ್ದರು. ಸುಮಂಗಲಾಳಿಗೂ ಅಂತಹಾ ಶಿಕ್ಷಕರು ಸಿಕ್ಕಿದ್ದು ಅವಳ ಅದೃಷ್ಟ ಎಂದೇ ಹೇಳಬೇಕು. ಮನೆಯಲ್ಲಿ ಮುಂದೆ ಓದಲು ಕಳುಹಿಸುವರೋ ಇಲ್ಲವೋ ಎಂಬ ಗೊಂದಲದಲ್ಲಿ ಇರುವಾಗಲೇ ಅವಳ ಶಿಕ್ಷಕರು ಅವಳ ತಂದೆಯ ಜೊತೆ ಮಾತನಾಡಿ ಅವರನ್ನು ಒಪ್ಪಿಸಿದ್ದರು. ಅವಳ ಮುಂದಿನ ಹಾದಿಯನ್ನು ಸುಗಮಗೊಳಿಸಿದ್ದರು. ಸುಗಮ ಎಂಬ ಹಾದಿ ಎಲ್ಲಿಯೂ ಇರಲಾರದು, ನಮ್ಮ ನಡೆಗಳಷ್ಟೇ ಹಾದಿಯನ್ನು ಸುಗಮಗೊಳಿಸಬಲ್ಲವು. ಹಾದಿಯ ತುಂಬೆಲ್ಲಾ ಹೂವೇ ತುಂಬಿದಂತೆ ಕಾಣಬಹುದು ಆದರೆ ಹೂವಿನ ಅಡಿಯ ಕಲ್ಲು ಮುಳ್ಳುಗಳು ನಡೆದಾಗಲಷ್ಟೇ ಅರಿವಿಗೆ ಬರಲು ಸಾಧ್ಯ. ಎಲ್ಲರ ಹಾದಿಯೂ ಸುಗಮವಾಗಿಯೇ ಇದ್ದಿದ್ದರೆ ಗಮ್ಯಕ್ಕೆ ಬೆಲೆಯಾದರೂ ಎಲ್ಲಿರುತ್ತಿತ್ತು ಅಲ್ಲವೇ..? ಸುಮಂಗಲಾ ಮನೆಯಲ್ಲಿ ಸಾಕಷ್ಟು ವಾದ-ವಿವಾದ ಚರ್ಚೆಗಳು ನಡೆದವು. ಕಡೆಗೂ ಮನೆಮಗಳ ಭವಿಷ್ಯವನ್ನು ಆಲೋಚಿಸಿ ಅವಳನ್ನು ಮುಂದಿನ ಓದಿಗೆ ಎಂದು ಸಿರಿನಗರಿಗೆ ಕಳುಹಿಸಲಾಯಿತು. ಕಾಲೇಜಿನ ಹಾಸ್ಟೆಲ್ ನಲ್ಲಿ ಅವಳು ಉಳಿದುಕೊಂಡು ವ್ಯಾಸಂಗ ಮುಂದುವರಿಸುತ್ತಿದ್ದಳು. ಅವಳ ಸಂಗೀತಕ್ಕೆ ಮತ್ತಷ್ಟು ಬೆಲೆ ಬರಲಿತ್ತು. ಅವಳು ಅಲ್ಲಿ ಸುಗಮ ಸಂಗೀತದ ಪಾಠಕ್ಕೆ ಸೇರಿಕೊಂಡಳು.

ಕೆಲವರ ಬದುಕಿನ ಹಾದಿಗಳು ಮೊದಲೇ ಬೆಸೆದುಕೊಂಡಿರುತ್ತವೆ. ಆದರೆ, ನಮಗೆ ಅದರ ಅರಿವಿರುವುದಿಲ್ಲ ಅಷ್ಟೇ.. ಸುಮಂಗಲಾ  ಸಿರಿನಗರಕ್ಕೆ ಬರುವಷ್ಟರಲ್ಲಿ ವಿದ್ಯಾಧರ ಅಲ್ಲಿಗೆ ಬಂದಾಗಿತ್ತು. ವಿದ್ಯಾಧರ ಕೊಳಲಿನ ಧ್ವನಿಯ ನಾದಕ್ಕೆ ಮತ್ತಷ್ಟು ತನ್ಮಯತೆಯನ್ನು ಜೋಡಿಸಲು ಅವನು ಸಹಾ ಸಂಗೀತ ಶಾಲೆಗೆ ಸೇರಿಯಾಗಿತ್ತು. ಇಬ್ಬರು ಕೆಲವೊಮ್ಮೆ ಅಲ್ಲಿ ಮುಖಾಮುಖಿಯಾದರೂ ಸಹಾ ಮುಗುಳ್ನಗೆಯ ವಿನಿಮಯವಾಗುತ್ತಿತ್ತು ಅಷ್ಟೇ. ಸುಮಂಗಲಾಳ 3 ವರ್ಷದ ಡಿಗ್ರಿ ಮುಗಿಯುತ್ತಾ ಬಂದಿತ್ತು. ಕಡೆಯ 6 ತಿಂಗಳು ಮಾತ್ರ ಉಳಿದಿತ್ತು. ಇತ್ತ ಸುಗಮ ಸಂಗೀತದಲ್ಲೂ ಸೀನಿಯರ್ ಪರೀಕ್ಷೆ ಮುಗಿದಿತ್ತು. ಎಲ್ಲರೂ ತಮ್ಮ ತಮ್ಮ ಪ್ರತಿಭೆಯನ್ನು ತೋರುವ ದಿನ ಹತ್ತಿರದಲ್ಲಿತ್ತು. ಎಲ್ಲರೂ ವೇದಿಕೆ ಕಾರ್ಯಕ್ರಮ ನೀಡಲು ತಮ್ಮ ಸರತಿಗಾಗಿ ಕಾಯುತ್ತಿದ್ದರು. "ಸವಿಗಾನ"ನ ಗಾನ ಮಾಧುರ್ಯವನ್ನು ಸವಿಯಲು ಎಲ್ಲರೂ ಕಾತುರರಾಗಿದ್ದರು.

ಸುಮಂಗಲಾ ಹಸಿರು ರೇಶಿಮೆ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದಳು. ಸೀರೆಯುಟ್ಟು ಬಂದ ಅವಳನ್ನು ಬೆರಗಿನಿಂದ ನೋಡಿ ಮೈ ಮರೆತ ವಿದ್ಯಾಧರ. ಕೈಗೆ ಬಳೆ, ಮುಡಿಯಲ್ಲಿ ಮಲ್ಲಿಗೆ ಅಪ್ಪಟ ಭಾರತೀಯ ನಾರಿಯಂತೆ ಕಂಗೊಳಿಸುತ್ತಿದ್ದ ಅವಳನ್ನು ಕಂಡಾಗ ಅವಳ ಸೌಭಾಗ್ಯ ಹೀಗೇ ಇರಲೆಂದು ಹಾರೈಸಿತು ಅವನ ಮನ. ಹಾರೈಸಿದಾಕ್ಷಣ ಎಲ್ಲವೂ ಒಳ್ಳೆಯದೇ ಆಗುವುದೋ ಇಲ್ಲವೋ ಗೊತ್ತಿಲ್ಲ ಆದರೆ ಹಾರೈಸುವ ಮನಸ್ಸು ಒಳ್ಳೆಯದೇ ಆಗಿರುತ್ತದೆ ಎಂಬುದು ಮಾತ್ರ ಸತ್ಯ. ನಿಷ್ಕಲ್ಮಶ ಮನಸ್ಸಿನ ಹಾರೈಕೆ ಇದ್ದರೆ ವಿಧಾತನೂ ಸೋಲಬಹುದು. ವೀಣೆ ಹಿಡಿದು ಕೂತ ಅವಳನ್ನು ಕಂಡು  ಸಾಕ್ಷಾತ್ ಶಾರದೆಯ ಅಪರಾವತಾರವೆಂದರು ಎಲ್ಲರೂ. ಎಲ್ಲರ ಬಾಯಲ್ಲೂ ಅವಳ ಗಾನ ಮಾಧುರ್ಯದ್ದೇ ಗುಣಗಾನ. ಅಂದು ಅವಳ ತಂದೆ-ತಾಯಿಯರಿಗಂತೂ ಎಲ್ಲಿಲ್ಲದ ಹೆಮ್ಮೆ. ಮಂಗಳಮ್ಮನವರಿಗೆ ಅವಳ ದೃಷ್ಟಿ ತೆಗೆದ ಮೇಲೆಯೇ ಸಮಾಧಾನವಾದದ್ದು. ಅಂದು ಅವಳ ಅಪ್ಪ-ಅಮ್ಮನಿಗೆ ಮಗಳ ಭವಿಷ್ಯದ ಕುರಿತ ಆಲೋಚನೆ ತಲೆಗೆ ಬಂದಿತು. ಅವಳ ಭವಿಷ್ಯದ ಕುರಿತು ಎಂದರೆ ವಿವಾಹದ ಕುರಿತು.. ಎಲ್ಲಾ ಹೆಣ್ಣು ಹೆತ್ತವರೂ ಸಹಾ ಇದಕ್ಕಿಂತ ವಿಭಿನ್ನವೇನಲ್ಲ. ಹೆಣ್ಣುಮಕ್ಕಳ ವಿವಾಹ ಮಾಡಿದಾಗ ಅವರಿಗೆ ಸಾರ್ಥಕತೆಯ ಭಾವ, ಎಲ್ಲಿಲ್ಲದ ತೃಪ್ತಿ. ಅಂದೇ ಅವಳಿಗೆ ಅನುರೂಪವಾದ ವರನನ್ನು ಹುಡುಕುವ ಕೆಲಸ ಹೆಗಲಿಗೇರಿತು.

ಅಂದು ಕಾರ್ಯಕ್ರಮದಲ್ಲಿ ಮನಸೆಳೆದು ಎಲ್ಲರನ್ನೂ ಮುದಗೊಳಿಸಿದ್ದಳು ಸುಮಂಗಲಾ. ಆದರೆ, ಎಲ್ಲರ ಕಣ್ಣಲ್ಲಿಯೂ ನೀರು ತರಿಸಿದ್ದ ವಿದ್ಯಾಧರ. ಅಂದು ಆತ ಕೊಳಲಿನಲ್ಲಿ ನುಡಿಸಿದ ರಾಗ ಎಂತಹಾ ಕಲ್ಲೆದೆಯವರನ್ನೂ ಕರಗಿಸುವಂತೆ ಇತ್ತು. ಶೋಕಾಲಾಪದ ರಾಗವನ್ನು ನುಡಿಸಿ ಅದನ್ನು ತನ್ನ ಅಮ್ಮನಿಗೆಂದು ಅರ್ಪಿಸಿದ್ದ. ಚಿಕ್ಕ ವಯಸ್ಸಿನಲ್ಲಿ ಅಮ್ಮನನ್ನು ಕಳೆದುಕೊಂಡಿದ್ದ ಅವನ ಮಡುಗಟ್ಟಿದ್ದ ದುಃಖವೆಲ್ಲಾ ಅಂದು ತುಂಬಿ ಹರಿದಿತ್ತು. ಅಮ್ಮನ ಪ್ರೀತಿಯೇ ದೊರಕದಿದ್ದರೆ ಸಿಕ್ಕಿದ್ದನ್ನೇ ಅಮ್ಮನ ಪ್ರೀತಿ ಎಂದುಕೊಂಡು ಬಿಡುತ್ತಿದ್ದೆ ಆದರೆ ಸ್ವರ್ಗದ ಮಡಿಲಲ್ಲಿದ್ದವನನ್ನು ಒಮ್ಮೆಲೆ ಅಲ್ಲಿಂದ ಎತ್ತಿ ಎಸೆದಂತಾಗಿತ್ತು. ಒಬ್ಬ ಅಮ್ಮನನ್ನು ಕಳೆದುಕೊಂಡು ಆದರೆ ಊರೇ ಅಮ್ಮನ ಪ್ರೀತಿ ಕೊಟ್ಟು ಸಲಹಿತು. ಆದರೆ, ಎಲ್ಲರಲ್ಲೂ ಕಳೆದುಕೊಂಡ ಅಮ್ಮನನ್ನು ಹುಡುಕಿದೆ ಆದರೆ ವಿಭಿನ್ನವಾದ ಅಮ್ಮ ಸಿಕ್ಕಳು. ಒಬ್ಬರಲ್ಲಿ ಮತ್ತೊಬ್ಬರು ಸಿಗಲು ಹೇಗೆ ಸಾಧ್ಯ ಎಂಬುದನ್ನು ಅರಿಯದ ದಡ್ಡನಾಗಿದ್ದೆ ಆದರೆ ಕೊಳಲು ನುಡಿಸಿದಾಗಲೆಲ್ಲಾ ಅಮ್ಮ ನನ್ನನ್ನು ಆವರಿಸಿದಂತಾಗುತ್ತದೆ. ಅವಳ ಅಪ್ಪುಗೆಯಲ್ಲೇ ಮೈಮರೆತಂತಾಗುತ್ತದೆ, ಪ್ರತಿ ರಾಗವೂ ಅವಳ ಧ್ವನಿ ಎನ್ನಿಸುತ್ತದೆ.. ಹೊಸ ರಾಗವನ್ನು ನುಡಿಸಿದಾಗೆಲ್ಲಾ ಮತ್ತೆ ಅಮ್ಮನೇ ಹುಟ್ಟಿ ಬಂದಳು ಎನ್ನಿಸುತ್ತದೆ. ಕೊಳಲು ಅವಳ ಕೊರಳಾಗಿ ಅವಳ ಮಾತನ್ನೆಲ್ಲಾ ಉಲಿಯುವಾಗ ಅದರ ಮುಂದೆ ನಾನೆಷ್ಟರವನು? ಎಂದೆನಿಸುತ್ತದೆ. ಎಲ್ಲವೂ ಅವಳಿಂದ ಅವಳಿಗಾಗಿ ಎಂದು ಹೇಳಿ ಅಲ್ಲಿಂದ ಭಾರವಾದ ಹೆಜ್ಜೆಗಳನ್ನು ಎತ್ತಿಡುತ್ತಾ ನಡೆದಾಗ ಸುಮಂಗಲಾಳಿಗೆ ಅವನನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡು ಸಾಂತ್ವನಿಸುವ ಆಸೆಯಾಗಿತ್ತು. ಅವನ ತಲೆಗೂದಲಲ್ಲಿ ಕೈಯ್ಯಾಡಿಸಿ ಇಂದಿನಿಂದ ನಾನು ನಿನಗೆ ಅಮ್ಮನಂತಹಾ ಗೆಳತಿ ಕಣೋ.. ಅಮ್ಮನ ಜೊತೆ ಹಂಚಿಕೊಳ್ಳುವುದನ್ನೆಲ್ಲಾ ನೀನು ನನ್ನೊಡನೆ ಹಂಚಿಕೊಳ್ಳಬಹುದು ಎಂದು ಹೇಳಬೇಕೆನಿಸಿತ್ತು. ಆದರೆ, ಅದಕ್ಕೆಲ್ಲಾ ಅದು ಸೂಕ್ತ ಸಮಯವಾಗಿರಲಿಲ್ಲ. ಆದರೆ, ಅದಕ್ಕೂ ಸಮಯ ಸನ್ನದ್ಧವಾಗಿತ್ತು.

ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ಕಲಿಯುವಿಕೆ ನಿಂತ ನೀರಲ್ಲ ಅದರಲ್ಲೂ ಸಾಧಿಸಬೇಕು ಎಂದುಕೊಂಡು ಹೊರಡುವವರಿಗಂತೂ ಅದರ ಅರಿವಿದ್ದಾಗ ಅಹಂಕಾರ ಎಂಬುದು ಹತ್ತಿರಕ್ಕೂ ಸುಳಿಯದು. ಇಂದು ಸಣ್ಣ ಸಾಧನೆ ಮಾಡಿದಾಗ ತಾನೇನೋ ಮಹತ್ತರವಾದುದನ್ನು ಸಾಧಿಸಿದ್ದೇನೆಂದು ಬೀಗುತ್ತಾರೆ, ಹತ್ತಿದ ಏಣಿಯನ್ನು ಒದ್ದು ಮುಂದಕ್ಕೆ ಸಾಗುತ್ತಾರೆ. ಆದರೆ, ಸುಮಂಗಲಾ ಮತ್ತು ವಿದ್ಯಾಧರ ಇಬ್ಬರೂ ಆ ಪೈಕಿಯವರಲ್ಲ. ತಮ್ಮ ಸಾಧನೆಯ ಹಾದಿಯ ಪಯಣವನ್ನು ಮುಂದುವರಿಸುವ ಸಲುವಾಗಿ ಮತ್ತೆ ಸಂಗೀತ ಶಾಲೆಗೆ ಬಂದರು. ಮೊದಲು ವಿದ್ಯಾಧರ ಮಾತಿಗೆ ಮುನ್ನುಡಿ ಬರೆದ. ನೆನ್ನೆ ನಿಮ್ಮ ವೀಣಾವಾದನ ಮತ್ತು ಗಾಯನ ಅದ್ಭುತವಾಗಿತ್ತು. ಅದರಲ್ಲೂ ಸೀರೆಯಲ್ಲಿ ನೀವು ತುಂಬಾ ಸೊಗಸಾಗಿ ಕಾಣುತ್ತಿದ್ದಿರಿ ಎಂದನು. ಅವಳ ಮುಖದಲ್ಲಿ ನಾಚಿಕೆಯ ಭಾವ ಹಾದು ಹೋಯಿತು ಲಜ್ಜೆಯಿಂದಲೇ ಥ್ಯಾಂಕ್ಯೂ ಎಂದು ಹೇಳಿ ಅವಳು ಮಾತಿಗೆ ಮೊದಲಾದಳು. ನನ್ನ ಬದುಕಲ್ಲಿ ಗೆಳೆಯರು ತುಂಬಾ ಕಡಿಮೆ.. ನಾನೇ ಹೊಂದಿಕೆಯಾಗುವುದಿಲ್ಲವೋ ಅಥವಾ ಅವರೇ ನನಗೆ ಹೊಂದಿಕೆಯಾಗುವುದಿಲ್ಲವೋ ನನಗೆ ಅದರ ಅರಿವಿಲ್ಲ ಆದರೆ ನಾನೇ ನಿಮ್ಮನ್ನು ಕೇಳುತ್ತಿರುವೆ. ನನ್ನನ್ನು ಗೆಳತಿಯಾಗಿ ಸ್ವೀಕರಿಸುವಿರಾ..? ಅಮ್ಮನಂತಹಾ ಗೆಳತಿಯಾಗಲು ಪ್ರಯತ್ನಿಸುವೆ. ವಿದ್ಯಾಧರನಿಗೆ ಕಣ್ತುಂಬಿ ಬಂದಿತು. ನಿನ್ನಂತಹಾ ಗೆಳತಿಯನ್ನು ನನ್ನ ಬದುಕಲ್ಲಿ ಸ್ವೀಕರಿಸದಿದ್ದರೆ ನಾನು ಬದುಕಲ್ಲಿ ಏನನ್ನೋ ಕಳೆದುಕೊಂಡೆ ಎನ್ನಿಸಬಹುದು.. ನಾನು ಆ ತಪ್ಪು ಮಾಡಲಾರೆ. ಬದುಕಿನಲ್ಲಿ ಪ್ರತಿ ಹೆಜ್ಜೆಯಲ್ಲಿಯೂ ನಿನ್ನ ಜೊತೆಯಲ್ಲಿ ಗೆಳೆಯನಾಗಿ ಜೊತೆಯಾಗಿರುವೆ ಎಂದನು.

ಗೆಳೆತನದ ಸವಿ ಪಯಣದ ಬಂಡಿ ಸಾಗಲು ಮುಂದಾಯಿತು. ಬದುಕಲ್ಲಿ ಎಲ್ಲದ್ದಕ್ಕೂ ಜೊತೆಗಾರರಿರಬೇಕು, ಒಬ್ಬಂಟಿ ಪಯಣ ಬಹಳ ಕಷ್ಟ. ನಲಿವಿನಲ್ಲಿ ಮಾತ್ರವಲ್ಲ ನೋವಲ್ಲಿಯೂ ಜೊತೆಯಾದರೆ ಮಾತ್ರವೇ ಅದು ನಿಸ್ವಾರ್ಥ ಬಂಧ ಎನ್ನಿಸಿಕೊಳ್ಳುತ್ತದೆ. ಇಲ್ಲವಾದಲ್ಲಿ ಅದರ ಅರ್ಥವೇ ಬೇರೆ. ಆದರೆ, ನೋವನ್ನು ಮರೆಸಲೆಂದು, ನೋವಿಗೆ ಜೊತೆಯಾಗಲೆಂದು ಸ್ನೇಹ ಹಸ್ತ ಚಾಚುವವರು ಎಷ್ಟು ಮಂದಿ? ಸ್ನೇಹ ಜೀವಿಗಳ ಪಯಣ ಶುರುವಾಯಿತು. ವಿದ್ಯಾಧರ ಗೋಪಿಕಾಪುರ, ಹೊಳೆ, ಮಾಧವ, ಮಾಧವಿ, ತನ್ನ ತಂದೆ ಎಲ್ಲದರ ಕುರಿತೂ ಹೇಳಿಕೊಂಡ. ಯಾರಲ್ಲಿಯೂ ಮನಬಿಚ್ಚಿ ಮಾತನಾಡದೆ ಅಂತರ್ಮುಖಿಯಾಗಿದ್ದ ಸುಮಂಗಲಾ ಮೊಟ್ಟಮೊದಲ ಬಾರಿಗೆ ಕಿವಿಯಾಗುವ ಬದಲು ದನಿಯಾಗಿದ್ದಳು. ಮೌನದ ಮೂರ್ತಿ ಮೌನದ ಚಿಪ್ಪೊಡೆದು ಮಾತಿಗೆ ಮುನ್ನಡಿಯಾದಳು. ಅವಳನ್ನು ಅವಳ ಮನೆಯವರು ಯಾರಾದರೂ ಹೀಗೆ ನೋಡಿದ್ದರೆ ಅವರಿಗೆ ಆಶ್ಚರ್ಯವಾಗುತ್ತಿದ್ದುದಂತೂ ಖಚಿತ. ನಮ್ಮ ಹುಡುಗಿ ಹಿಗಿರಬಲ್ಲಳಾ? ಎಂಬ ಪ್ರಶ್ನೆ ಮೂಡಿ ಮರೆಯಾಗುತ್ತಿದ್ದುದಂತೂ ಸುಳ್ಳಲ್ಲ.. ತನ್ನ ಕುಟುಂಬ, ಅಪ್ಪ-ಅಮ್ಮ, ಸಹೋದರರು, ಲಲಿತಾ ದೇವಿ ಗುಡಿ, ಸಂಗೀತ ಪ್ರೇಮ, ತನ್ನ ಕಾಲೇಜು, ಶಿಕ್ಷಣ, ಸಂಗೀತ, ಹೀಗೇ ತನ್ನ ಮಾತಿನಿಂದಲೇ ಕೃಷ್ಣಾಪುರದ ದರ್ಶನ ಮಾಡಿಸಿಬಿಟ್ಟಿದ್ದಳು. ಅಂದಿನಿಂದ ಅವಳು ವಿದ್ಯಾಧರನಿಗೆ ಇಷ್ಟ ಆಗುವಂತೆ ಬದಲಾಗುತ್ತಾ ಹೋದಳು. ಪ್ರತಿದಿನ ಸೀರೆ ಉಟ್ಟುಕೊಳ್ಳುವುದನ್ನು ರೂಢಿ ಮಾಡಿಕೊಂಡಳು. ಸಂಗೀತ ಪ್ರಪಂಚದ ಮಹಾನ್ ಸಾಧಕರು ಹಾಗೂ ಅವರ ಆದರ್ಶಗಳು ರಾಗ, ತಾಳ ಹೀಗೆ ಎಲ್ಲದರ ಕುರಿತ ಚರ್ಚೆಯಾಗುತ್ತಿತ್ತು. ಸಂಗೀತ ಮಾತ್ರವಲ್ಲ ಸಾಹಿತ್ಯ ಲೋಕ, ಸಿನಿಮಾ, ಕ್ರೀಡೆ, ರಾಜಕೀಯ ಹೀಗೇ ಎಲ್ಲದರ ಕುರಿತಂತೆ ಚರ್ಚೆ ನಡೆಸುತ್ತಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಇವರು ಚರ್ಚಿಸದ ವಿಷಯವಿಲ್ಲ ಎಂದರೆ ಅದು ತಪ್ಪಾಗಲಾರದು. 

ಎಲ್ಲದಕ್ಕೂ ಒಂದು ಅಂತ್ಯವಿರುತ್ತದೆ. ಅಂತ್ಯ ಎಂದು ಹೇಳಲಾಗದಿದ್ದರೂ ವಿರಾಮ ಇರುತ್ತದೆ. ಅದು ಅಲ್ಪವೋ, ದೀರ್ಘವೋ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ. ಗೆಳೆತನ ಎಂದರೂ ಅಲ್ಲಿ ಅದಕ್ಕಿಂತ ಹೆಚ್ಚಿನ ಭಾವವೊಂದಿತ್ತು. ಪ್ರತಿಯೊಬ್ಬರ ಬದುಕಲ್ಲಿಯೂ ಇಂತಹಾ ಒಂದು ಬಂಧ ಇರುತ್ತದೆ. ಗೆಳೆತನಕ್ಕೂ ಮಿಗಿಲು, ಪ್ರೇಮವೇ ಅದು ಎಂದರೆ ವ್ಯಾಖ್ಯಾನಕ್ಕೆ ದಕ್ಕಲಾರದು. ಪ್ರೀತಿ ಎಂಬ ಎರಡಕ್ಷರದ ಪದಕ್ಕೆ ನಿಲುಕದ ಸಂಬಂಧವದು. ಆದರೆ, ಬದುಕಿನ ಅತಿ ಸಂತಸದ ಸವಿ ನೆನಪುಗಳನ್ನು ಕೊಡುವ ಹಾಗೂ ಕಳಚಿಕೊಳ್ಳುವಾಗ ಅತಿ ದುಃಖ ನೀಡುವ ಬಂಧವದು. ರಾಧೆ-ಕೃಷ್ಣರ ಬಂಧದಂತಹಾ ಅಲೌಕಿಕ ಎಳೆ ಅದು. ವ್ಯಾಖ್ಯಾನಕ್ಕೆ ಸಿಗದು, ಅನುಭೂತಿಗೆ ಮಾತ್ರ ನಿಲುಕುವಂತಹದು. ಜೊತೆಗಿರುವವರೆಗೂ ಅದರ ಬೆಲೆ ಅರಿವಾಗದು.. ಆದರೆ, ಒಮ್ಮೆ ಅದರಿಂದ ದೂರವಾದ ಮೇಲೆ ಅದರ ಬೆಲೆ ತಿಳಿಯುವುದು. ಇಲ್ಲಿ ಇಬ್ಬರಿಗೂ ಅಗಲಿಕೆಯ ನೋವು ಗಹನವಾಗಿಯೇ ಭಾದಿಸಿತ್ತು. ತಮ್ಮ ಸಂಗಾತಿಗಳು ಹೇಗಿರಬೇಕೆಂದು ಅಂದುಕೊಂಡಿದ್ದರೋ ಅದೇ ರೀತಿ ಅನುರೂಪವಾದ ವ್ಯಕ್ತಿಗಳು ಅವರು. ಸಂಗಾತಿಗಳ ಪರಿಕಲ್ಪನೆಯಲ್ಲಿ ಮತ್ತಾರನ್ನೂ ಕಲ್ಪಿಸಿಕೊಳ್ಳದಷ್ಟು ತಮ್ಮ ತಮ್ಮ ಲೋಕದ, ತಮ್ಮ ಮನದ ಬಾಗಿಲಿನ ಒಳಗೆ ಇಬ್ಬರ ಪರಸ್ಪರರ ಮೂರ್ತಿಯನ್ನು ಪ್ರತಿಷ್ಠಾಪಿಸಿಕೊಂಡು ಬಿಟ್ಟಿದ್ದರು. 

ಅಂದು ಭಾವುಕನಾಗಿ ವಿದ್ಯಾಧರ ಕೇಳಿದ್ದ "ಸುಮ, ಅಮ್ಮ ನನ್ನನ್ನು ಬಿಟ್ಟು ಹೊರಟ ಹಾಗೆ ಅಮ್ಮನಂತಹಾ ಗೆಳತಿಯಾದ ನೀನೂ ಸಹಾ ನನ್ನನ್ನು ಬಿಟ್ಟು ಹೊರಡುವುದಿಲ್ಲ ಅಲ್ಲವೇ..?" ಅಮ್ಮನ ಮಡಿಲು ಕಳೆದುಕೊಂಡೆ ಆಗ ಅವಳನ್ನು ತಡೆಯುವ ಶಕ್ತಿ ಮತ್ತು ಸ್ಥೈರ್ಯ ನನ್ನಲ್ಲಿರಲಿಲ್ಲ, ಪರಿಸ್ಥಿತಿ ಮನುಷ್ಯರ ಕೈಯಲ್ಲಿ ಇರುವುದಿಲ್ಲ ಅಲ್ಲವೇ..? ಅವಳನ್ನಂತೂ ಉಳಿಸಿಕೊಳ್ಳಲಾಗಲಿಲ್ಲ ನಿನ್ನನ್ನು ಬಿಟ್ಟು ಕೊಡಲಾರೆ, ನನ್ನ ಮನದ ಬಾಗಿಲಿಗೆ ಪ್ರವೇಶಿಸಿದಂತೆ ಮನೆಯ ಮನೆಯ ಮಹಾಲಕ್ಷಿಯಾಗಿ ಜೊತೆಗೇ ಬರುವೆಯಾ..? ಎಂದು ಕೇಳಿದ್ದ ವಿದ್ಯಾಧರ. ಅವನ ಭಾವುಕತೆ ಅವಳ ಮನ ತಟ್ಟಿತ್ತು, ಗಂಟಲುಬ್ಬಿ ಬಂದು ಏನೂ ಹೇಳಲಾಗದೆ ಮುಖ ತಿರುಗಿಸಿ ನಿಂತುಬಿಟ್ಟಿದ್ದಳು. ಅವಳ ಮನದಲ್ಲಿ ಚಂಡಮಾರುತವೇ ಏಳುತ್ತಿತ್ತು. ಎಷ್ಟೋ ವರ್ಷದ ನಂತರ ಅವಳು ಬಯಸಿದ ಬದುಕನ್ನು ಅವಳು ಬದುಕುತ್ತಿದ್ದಳು ಹಾಗೆಂದು ಮನೆಯವರನ್ನು ಧಿಕ್ಕರಿಸುವ ಸ್ಥಿತಿಯಲ್ಲಿ ಅವಳಿರಲಿಲ್ಲ. ಪಂಜರದ ಪಕ್ಷಿಯೊಂದು ಕೆಲಕಾಲ ಹಾರಾಡಿ ಮತ್ತೆ ಚಿನ್ನದ ಪಂಜರಕ್ಕೆ ಮರಳುವ ಸ್ಥಿತಿ ಅವಳದ್ದು. ಆವನಿಗಿಂತ ಅವಳ ಪರಿಸ್ಥಿತಿ ಭಿನ್ನವಾಗಿರಲಿಲ್ಲ ಆದರೆ ಅವನಂತೆ ಭಾವುಕಳಾಗಲಾರಳು. ಮೊದಲಿನಿಂದಲೂ ಭಾವನೆಗಳನ್ನು ಬಚ್ಚಿಟ್ಟೂ ಬಚ್ಚಿಟ್ಟೂ ಬದುಕಿದ್ದ ಅವಳಿಗೆ ಅದು ಕಷ್ಟವೂ ಆಗಲಾರದು. ರಾಧೆ ಕೃಷ್ಣನನ್ನು ಸೇರಲು ಸಾಧ್ಯವಿಲ್ಲ. ಎಲ್ಲರ ಬದುಕನ್ನು ಬದಲಿಸುವ ಶಕ್ತಿಯಿದ್ದ ಕೃಷ್ಣನಿಗೆ ರಾಧೆಯನ್ನು ತನ್ನವಳನ್ನಾಗಿ ಮಾಡಿಕೊಳ್ಳುವ ಶಕ್ತಿ ಇರಲಿಲ್ಲವೇ..? ಆಲೋಚಿಸಿದಳು. ರಾಧೆಯನ್ನು ತೊರೆದ ಮೇಲೂ ಕೃಷ್ಣ ಬದುಕಿದ.. ರಾಧೆಯೇ ಬೇಕಿಲ್ಲ ಕೃಷ್ಣನ ಬದುಕ ತುಂಬಲು.. ರುಕ್ಮಿಣಿ ಕೂಡಾ ಕೃಷ್ಣನನ್ನು ರೂಪಿಸಬಲ್ಲಳು. ನಾನು ರುಕ್ಮಿಣಿಯಾಗ ಹೊರಟರೆ ಅಷ್ಟು ಪ್ರೀತಿಯಿಂದ ಸಾಕಿದವರೆಲ್ಲರಿಗೂ ಮೋಸ ಮಾಡಿದಂತಾಗುತ್ತದೆ ಎಂದು ಆಲೋಚಿಸಿ ಅವನು ಹಿಡಿದಿದ್ದ ಕೈ ಕೊಡವಿಕೊಂಡು ಅಲ್ಲಿಂದ ಹೊರಟು ಬಿಟ್ಟಳು. "ಸುಮ, ನಿಲ್ಲು" ಎಂದು ಹಿಂದೆ ಬಂದವನನ್ನು ಬಿಟ್ಟು ಹಿಂತಿರುಗಿ ನೋಡದಂತೆ ಕಣ್ಮರೆಯಾದಳು. ಅಂದೇನಾದರೂ ಅವಳು ಹಿಂತಿರುಗಿ ನೋಡಿದಿದ್ದರೆ ಭವಿಷ್ಯ ಬದಲಾಗುತ್ತಿತ್ತು.. ಎಲ್ಲಕ್ಕೂ ಕಾಲ ಕೂಡಿ ಬರಬೇಕಲ್ಲವೇ..?

ಮಾಧವ ವಿದ್ಯಾಧರನನ್ನು ಹುಡುಕಿಕೊಂಡು ಸಿರಿನಗರಕ್ಕೆ ಬಂದಿದ್ದ. ಅಲ್ಲಿ ಅವನಿದ್ದ ಪರಿಸ್ಥಿತಿಯನ್ನು ಕಂಡು ಮಾಧವನಿಗೆ ಜಂಘಾಬಲವೇ ಉಡುಗಿ ಹೋದಂತಾಯಿತು. ಸುಮ ಸುಮ ಎಂದು ಹಲುಬುತ್ತಿದ್ದ ಅವನನ್ನು ಸಾಂತ್ವನಗೊಳಿಸಿ ರೂಮಿಗೆ ಕರೆತಂದ. ಮಾಧವ ಓದಲಿಲ್ಲ, ವಿದ್ಯೆ ಅಂದರೆ ಪುಸ್ತಕದ ಓದು ಅವನ ತಲೆಗೆ ಹತ್ತಲಿಲ್ಲ ಆದರೆ ತಿಳುವಳಿಕೆಯಲ್ಲಿ ಅವನದ್ದು ಮೇಲುಗೈ. ಅಂಕಗಳ ಆಧಾರದ ವಿದ್ಯೆಯನ್ನು ಮಾತ್ರ ಬುದ್ಧಿಮತ್ತೆಯನ್ನು ಅಳೆಯಲು ಬಳಸುತ್ತಾರೆ, ಆದರೆ ಬದುಕಿಗೆ ಬರೀ ಅಂಕಗಳ ಬುದ್ಧಿಮತ್ತೆ ಸಾಲುವುದಿಲ್ಲ ಎಂಬುದನ್ನು ತಿಳಿಯದ ದಡ್ಡರಾಗಿರುತ್ತಾರೆ. ತಾಯಿ ತನ್ನ ಮಗುವನ್ನು ಕುಳ್ಳಿರಿಸಿ ಬುದ್ದಿ ಹೇಳುವಂತೆ ಅಂದು ಮಾಧವ ವಿದ್ಯಾಧರನನ್ನು ಕೂರಿಸಿ ಬುದ್ದಿ ಹೇಳಿದ. ಅವನ ತಂದೆ, ತಂಗಿ, ಮನೆತನ, ಅವನಿಗಿರುವ ಜವಾಬ್ದಾರಿ ಎಲ್ಲವನ್ನೂ ತಿಳಿ ಹೇಳಿದ. ಪ್ರೀತಿಯೇ ಬದುಕಲ್ಲ, ಪ್ರೀತಿ ನಿಜವೇ ಆಗಿದ್ದಲ್ಲಿ ನಿನಗೆ ನಿನ್ನ ಪ್ರೀತಿ ದಕ್ಕಿಯೇ ದಕ್ಕುತ್ತದೆ ಎಂದು ಹೇಳಿ ಅವನಲ್ಲಿ ಕಳೆದು ಹೋಗಿದ್ದ ಆತ್ಮಸ್ಥೈರ್ಯವನ್ನು ತುಂಬಿದ. ಮತ್ತೆ ಕರ್ತವ್ಯವನ್ನು ನೆನಪಿಸಿದ. ಆದರೆ, ತಾನು ಬಂದಿದ್ದ ವಿಷಯವನ್ನು ಮುಚ್ಚಿಟ್ಟುಕೊಂಡು ಮನೆಗೆ ವಾಪಾಸಾದ. ಅಂದು ಮಾಧವ ಆ ವಿಚಾರವನ್ನು ಹೇಳಿದ್ದರೆ ಇಬ್ಬರ ಬದುಕಿನ ಗತಿಯೂ ಬದಲಾಗುತ್ತಿತ್ತೇನೋ..?

ಇತ್ತ ಸುಮಂಗಲಾ ಬಂದವಳೆ ಆತುರಾತುರವಾಗಿ ಊರಿಗೆ ಹೊರಟು ನಿಂತಿದ್ದಳು. ಯಾರಿಗೂ ವಿದಾಯ ಹೇಳದಂತೆ ಹೊರಟು ಬಿಟ್ಟಳು. ಅವಳ ಅಂತರ್ಮುಖತೆಯ ಅರಿವಿದ್ದ ಯಾರೂ ಏನೂ ಹೇಳಿಲಿಲ್ಲ, ಅನ್ಯಥಾ ಭಾವಿಸಲಿಲ್ಲ. ಸುಮಂಗಲಾ ಊರಿಗೆ ಬಂದರೆ ಅಲ್ಲಿ ಸಡಗರದ ವಾತಾವರಣ. ಮಗಳು ಮನೆಗೆ ಬಂದ ಖುಷಿಯಲ್ಲಿ ಅಂದು ಮನೆಯಲ್ಲಿ ಹಬ್ಬದಡುಗೆ. ಆದರೆ, ಅವಳಿಗೆ ಈ ಸಂತೋಷಕ್ಕೆ ಮತ್ತೇನೋ ಕಾರಣ ಇರಬೇಕು ಎನ್ನಿಸಿತ್ತು ಆದರೆ ಕೇಳುವ ಧೈರ್ಯವಾಗಲಿಲ್ಲ. ಮೊದಲಿನಿಂದಲೂ ಹಾಗೆಯೇ ಹೇಳಬೇಕೆನಿಸುವ ಎಷ್ಟೋ ಮಾತುಗಳನ್ನು ಎದೆಯಲ್ಲಿಯೇ ಉಳಿಸಿಕೊಂಡು ಭಾದೆ ಪಡುತ್ತಾ ಕೇಳಬೇಕೆಂದುಕೊಂಡ ಎಷ್ಟೋ ಪ್ರಶ್ನೆಗಳನ್ನು ಕೇಳಲಾಗದೆ ತಳಮಳದ ಭಾವದಲ್ಲಿ ಸುಮ್ಮನಾಗುತ್ತಿದ್ದಳು. ಅಧೈರ್ಯದ ಅವಳ ಆ ಭಾವಕ್ಕೆ ಮನೆಯಲ್ಲಿ ವಿನಯತೆ ಎಂಬ ಹೆಸರು. ಕೆಲವೊಮ್ಮೆ ಭಾವಗಳೇ ಹಾಗೇ.  ತೋರ್ಪಡಿಸಿಕೊಂಡುದ್ದಕ್ಕಿಂತ, ಕಾಣುವುದಕ್ಕಿಂತ ಬೇರೆಯೇ ರೀತಿಯಲ್ಲಿ ಭಾಸವಾಗುತ್ತದೆ. ಆದರೆ ಅವರವರಿಗೆ ಮಾತ್ರ ಅವರವರ ಭಾವ ದಕ್ಕುವುದು. ಈಗ ಕೂಡಾ ಹಾಗೆಯೇ ಆಯಿತು, ತುದಿನಾಲಿಗೆಯವರೆಗೆ ಬಂದ ಮಾತನ್ನು ನುಂಗಿಕೊಂಡು ಹೇಳಬೇಕಾದ ವಿಷಯವಾದರೆ ಅವರೇ ಹೇಳುತ್ತಾರೆ ಎಂಬ ನಿರ್ಲಿಪ್ತ ಭಾವವನ್ನು ಮೂಡಿಸಿಕೊಂಡು ಸುಮ್ಮನೆ ತನ್ನ ಪಾಡಿಗೆ ತನ್ನ ವೀಣೆ ಹಿಡಿದು ಕುಳಿತುಬಿಟ್ಟಳು. ಅಂದು ವಿದ್ಯಾಧರ ಕೊಳಲಲ್ಲಿ ನುಡಿಸಿದ ರಾಗ ಇಂದು ವೀಣೆಯಲ್ಲಿ ಧ್ವನಿಸಿತ್ತು. ಅವನ ಮಡುಗಟ್ಟಿದ್ದ ನೋವು ಇಲ್ಲಿ ಅಲೆಯಾಗಿ ಹೊಮ್ಮಿ ಎಲ್ಲರ ಎದೆಯನ್ನೂ ಕಲಕಿತ್ತು.

ಸುಮಂಗಲಾಳ ತಂದೆ ರಾಗವನ್ನು ಮೆಚ್ಚಿಕೊಂಡರಾದರೂ ಏಕೋ ಆ ರಾಗವನ್ನು ನುಡಿಸಲು ಪ್ರೋತ್ಸಾಹ ನೀಡಲಿಲ್ಲ. ನಾಳೆ ನಮ್ಮ ಮನೆಗೆ ಅತಿಥಿಗಳು ಬರುತ್ತಾರೆ ಆಗ ನೀನು ಅವರೆದುರು ಈ ರಾಗವನ್ನು ನುಡಿಸಬೇಡ. ಶೋಕಭರಿತವಾದ ಗೀತೆಯನ್ನು ಸಂತಸದ ಸಮಾರಂಭದಲ್ಲಿ ನುಡಿಸಬಾರದು ಎಂಬ ಕಿವಿಮಾತನ್ನೇಳಿ ಅಲ್ಲಿಂದ ಹೊರಟರು. ನಾಳಿನ ಸಂಧರ್ಭದಲ್ಲಿ ಹಾಡುವ ಹಾಡಿಗೆ ತಯಾರಾಗುತ್ತಾ ಆಲೋಚನೆಯ ಒಳಸುಳಿಗೆ ಸಿಲುಕುತ್ತಾ ಅಂದು ನಿದ್ರಿಸಿದಳು. ಮರುದಿನ ಬೆಳಿಗ್ಗೆ ಮಂಗಳಮ್ಮನವರು ಬಂದು ಸೀರೆ ಉಟ್ಟುಕೋ ಎಂದು ಹೇಳುವ ಮೊದಲೇ ಅವಳು ಸೀರೆ ಉಟ್ಟು ವೀಣೆಯನ್ನು ಶೃತಿ ಮಾಡಿಕೊಳ್ಳುತ್ತಿದ್ದಳು. ಮಗಳಲ್ಲಿ ಬಂದಾಗಿನಿಂದ ಆದ ಬದಲಾವಣೆಯನ್ನು ಅವರು ಗಮನಿಸಿದ್ದರು. ಅವಳ ನಡವಳಿಕೆಗೆ ಪ್ರಬುದ್ಧತೆ ಎಂಬ ಹೆಸರು ನೀಡಿದ್ದರು. ಅಂದು ಅವಳಿಗೇ ಅರಿವಿಲ್ಲದಂತೆ ಅವಳ ಮದುವೆಯ ಮುನ್ನುಡಿಯಾಗಿ ಹೆಣ್ಣು ನೋಡುವ ಶಾಸ್ತ್ರ. ಮಾಧವಕಾಂತ ತನ್ನ ಮನೆಯವರೆಲ್ಲರ ಜೊತೆ ಆ ಶಾಸ್ತ್ರಕ್ಕೆ ಹಾಜರಾಗಿದ್ದ. ಸಂಗೀತವನ್ನು ಪ್ರೇರೇಪಿಸುವ ಕುಟುಂಬ ಜೊತೆಗೆ ತಮ್ಮ ಅಂತಸ್ತಿಗೆ ಸರಿಯಾದ ವರ ಎಂದು ಮಾಧವಕಾಂತನನ್ನು ಸುಮಂಗಲಾಳಿಗೆ ಜೋಡಿ ಮಾಡಲು ಹೊರಟಿದ್ದರು. ಸುಮಂಗಲಾ ಇದಾವುದರ ಅರಿವಿಲ್ಲದಂತೆ ಎಲ್ಲಾ ಅತಿಥಿಗಳನ್ನೂ ಉಪಚರಿಸುವಂತೆ ಅವರನ್ನು ಸಹಾ ಉಪಚರಿಸಿದ್ದಳು. ಮಾಧವನಿಗೆ ತನ್ನ ಮದುವೆಯ ಪ್ರತಿ ಶಾಸ್ತ್ರದಲ್ಲೂ ವಿದ್ಯಾಧರ ಜೊತೆ ಇರಬೇಕು ಎಂಬ ಆಸೆ ಆದರೆ ಅವನ ಪರಿಸ್ಥಿತಿಯನ್ನು ಕಂಡ ಮೇಲೆ ಅವನನ್ನು ಮತ್ತೆ ಇಲ್ಲಿಗೆ ಕರೆಯುವುದು ಅವನ ಮನಸ್ಥಿತಿಗೆ ಅಪಾಯ ಎಂದು ಅವನ ಹಿತವನ್ನು ಬಯಸಿ ಮೊದಲೇ ಇದಾವುದನ್ನೂ ತಿಳಿಸಿರಲಿಲ್ಲ. ಮಾಧವನಿಗೆ ಮತ್ತು ಮನೆಯವರೆಲ್ಲರಿಗೂ ಸುಮಂಗಲಾ ಇಷ್ಟವಾಗಿದ್ದಳು. ಅವರೆಲ್ಲರೂ ಒಪ್ಪಿಗೆ ಸೂಚಿಸಿ ಆದಷ್ಟು ಬೇಗ ಈ ಮದುವೆಯನ್ನು ಮಾಡಿಕೊಡಿ ಎಂಬ ಬೇಡಿಕೆಯನ್ನಿಟ್ಟಿದ್ದರು.

ಮಾಧವನ ತಾಯಿಗೆ ಹುಷಾರಿಲ್ಲವಾಗಿ ತಿಂಗಳುಗಳೇ ಕಳೆದಿದ್ದವು. ಮಗನ ಮದುವೆಯನ್ನು ನೋಡುವ ಆಸೆ ಅವಳಿಗೆ.. ಇದೆಲ್ಲದರ ಜೊತೆಗೆ ಅಂದು ಬಂದ ಬುಡುಬುಡಿಕೆಯವನು "ಹಾಲಕ್ಕಿ ನುಡಿತೈತೆ ತಾಯಿ, ಹಾಲಕ್ಕಿ ನುಡಿತೈತೆ.. ಸುಖದ ಹಿಂದೆಯೇ ಒಂದು ದುಃಖವಿರುತೈತೆ. ಈ ಮನೆಯಲ್ಲಿ ಸಾವಿನ ಕಳೆ ಕಾಣುತೈತೆ" ಎಂಬ ಒಗಟಿನ ಮಾತನಾಡಿ ಭಿಕ್ಷೆಯನ್ನೂ ಹಾಕಿಸಿಕೊಳ್ಳದೆ ಹೊರಟುಬಿಟ್ಟಿದ್ದ. ಮಾಧವನ ಮನೆಯಲ್ಲಿ ಮೂಢನಂಬಿಕೆ ಕೊಂಚ ಹೆಚ್ಚು. ಈ ಮಾತನ್ನು ಗಂಭೀರವಾಗಿ ಪರಿಗಣಿಸಿ ಅವರು ಮಾಧವನ ಮದುವೆಯನ್ನು ಆದಷ್ಟು ಬೇಗ ಮುಗಿಸಬೇಕು ಎಂಬ ತೀರ್ಮಾನಕ್ಕೆ ಬಂದಿದ್ದರು. ಅದಕ್ಕೆ ಕಾಲ ಕೂಡಿ ಬಂದಂತೆ ಈ ಪ್ರಸ್ತಾಪ ಕೂಡಾ ಬಂದಿತು. ವಾರದ ಅಂತರದಲ್ಲಿಯೇ ಮಾಧವಕಾಂತ ಮತ್ತು ಸುಮಂಗಲಾ ವಿವಾಹ ನಡೆಯಿತು. ವಿವಾಹದ ಕೊನೆಯ ಕ್ಷಣದವರೆಗೂ ಯಾವುದಾದರೂ ಪವಾಡ ಜರುಗಬಹುದು ಎಂಬ ನಿರೀಕ್ಷೆಯಲ್ಲಿದ್ದಳು. ಮದುವೆಯ ಎಲ್ಲಾ ಶಾಸ್ತ್ರ ನಡೆಯುವಾಗಲೂ ಮಾಧವ "ವಿದ್ಯಾ ಇದ್ದಿದ್ದರೆ.." ಎಂಬುದನ್ನು ಎಷ್ಟು ಬಾರಿ ನುಡಿದಿದ್ದನೋ ಗೊತ್ತಿಲ್ಲ. ವಿದ್ಯಾಧರನಿಗೆ ಕರೆ ಮಾಡಿ ಮದುವೆಗೆ ಕರೆದಿದ್ದ. ಅಷ್ಟು ಕೆಲಸಗಳ ನಡುವೆ ಅವನಿಗೆ ಸಿರಿಪುರಕ್ಕೆ ಹೋಗಲಾಗಿರಲಿಲ್ಲ. ಹುಡುಗಿಯ ಹೆಸರು "ಮಂಗಳ" ಎಂದು.. ಕೃಷ್ಣಾಪುರದವಳು ಎಂದಾಗ.. ನಿರ್ಲಿಪ್ತನಾಗಿ "ಸರಿ ಕಣೋ, ನಾನು ಈ ಸ್ಥಿತಿಯಲ್ಲಿ ಊರಿಗೆ ಬಂದರೆ ಸರಿಯಾಗುವುದಿಲ್ಲ. ನನ್ನ ಶುಭ ಹಾರೈಕೆಗಳು ಯಾವಾಗಲೂ ನಿನ್ನ ಜೊತೆ ಇರುತ್ತದೆ. ಮುಂದಿನ ವಾರದಲ್ಲಿ ಊರಿಗೆ ಬರುತ್ತಿದ್ದೇನೆ. ಓದು ಕೂಡಾ ಮುಗಿದಿದೆ ಯಾಕೋ ಅಲ್ಲಿಯ ಮಣ್ಣಿನ ಋಣ ಸೆಳೆಯುತ್ತಿದೆ. ಆದಷ್ಟು ಬೇಗ ಬಂದು ನನ್ನ ಕರ್ತವ್ಯವನ್ನು ನಿರ್ವಹಿಸುತ್ತೇನೆ. ಮದುವೆಗೆ ನಾನಿಲ್ಲ ಅಂತಾ ನೀನು ನನ್ನ ಮದುವೆಗೆ ಬರದೇ ಹೋಗಬೇಡವೋ.." ಎಂದು ರೇಗಿಸುತ್ತಾ ಕಾಲೆಳೆದಾಗ ಮಾಧವನಿಗೆ ಕೊಂಚ ಸಮಾಧಾನವಾಯಿತು.

ಮಳೆಗಾಲವಾದುದರಿಂದ ಮದುವೆಯ ಸಮಾರಂಭ ಸಂಜೆಯ ಮುನ್ನವೇ ಮುಗಿದು ಎಲ್ಲರೂ ತಮ್ಮ ತಮ್ಮ ಮನೆಗೆ ಹೊರಟರು. ಮಾಧವನಿಗೆ ತನ್ನ ಮಡದಿಯ ಅನ್ಯಮನಸ್ಕತೆಯನ್ನು ಕಂಡು ಆಶ್ಚರ್ಯವಾಯಿತು. ಮೊದಮೊದಲಿಗೆ ತನ್ನ ಮನೆಯವರನ್ನು ಬಿಟ್ಟು ಬಂದ ಬೇಸರವಿರಬಹುದು ಎಂದು ಭಾವಿಸಿದ್ದ ಆದರೆ ಅವನಿಗೆ ಯಾಕೋ ಅದಷ್ಟೇ ಅವಳ ಅನ್ಯಮನಸ್ಕತೆಯ ಕಾರಣವಲ್ಲ ಎಂದು ಅನ್ನಿಸಿ ಅವಳ ಜೊತೆ ಮನಬಿಚ್ಚಿ ಮಾತನಾಡಬೇಕೆಂಬ ಇಚ್ಛೆಯಿಂದ ಹೊಳೆದಂಡೆಗೆ ಅವಳನ್ನು ಕರೆದುಕೊಂಡು ಹೊರಟ. ಸುಮಂಗಲಾ ಕೂಡಾ ಎಲ್ಲವನ್ನು ಮಾಧವನಿಗೆ ಹೇಳಿ, ತನ್ನ ಹೊಸ ಜೀವನಕ್ಕೆ ಕೊಂಚ ಕಾಲಾವಕಾಶ ನೀಡಿ ಎಲ್ಲದಕ್ಕೂ ಹೊಂದಿಕೊಂಡು ಹೋಗುತ್ತೇನೆ ಎಂದು ಹೇಳಬೇಕೆಂಬ ತೀರ್ಮಾನ ಮಾಡಿಕೊಂಡೇ ಹೊರಟಳು. ಅಂದು, ಅವರಿಬ್ಬರ ಮಾತುಕತೆಗೆ ಹೊಳೆದಂಡೆ ಸಾಕ್ಷಿಯಾಗಿತ್ತು. ಮಾಧವ ಸ್ನೇಹಭಾವದಿಂದ ಅವಳನ್ನು ಮಾತನಾಡಿಸಿ ಅವಳ ವಿಮನಸ್ಕತೆಯ ಕಾರಣ ತಿಳಿದುಕೊಂಡ. ಅದನ್ನು ಅವನು ತಪ್ಪಾಗಿ ಅರ್ಥೈಸಿಕೊಳ್ಳದೇ ಆ ವಯಸ್ಸಿನಲ್ಲಿ ಅದು ಸಾಮಾನ್ಯ. ನಿನ್ನ ಗತ ಬದುಕಿನ ಕುರುಹುಗಳನ್ನು ನಾನು ನೆನಪಿಸಲಾರೆ, ನಿನಗೆಷ್ಟು ಬೇಕೋ ಅಷ್ಟು ಕಾಲಾವಕಾಶವನ್ನು ತೆಗೆದುಕೊಂಡು ನನ್ನೊಂದಿಗೆ ಮುಂದಿನ ಬದುಕನ್ನು ಹೊಸದಾಗಿ ಶುರು ಮಾಡು ಎಂದು ಹೇಳಿದ. ಅವನ ಒಳ್ಳೆಯತನವನ್ನು ಮೆಚ್ಚಿಕೊಂಡು ಅವನ ಕೈಯ್ಯ ಮೇಲೆ ಕೈಯಿಟ್ಟು ಪ್ರಮಾಣ ಮಾಡಿದಳು. ಅಂದು ಮಳೆ ಶುರುವಾಯಿತು. ವಿದ್ಯಾಧರನ ಮನೆಗೆ ಬರುವಷ್ಟರಲ್ಲಿ ಮಳೆ ಜೋರಾಯಿತು. ಅಲ್ಲೇ ಇದ್ದ ಗೋಪಾಲಗೌಡರು ಈ ಮಳೆಯಲ್ಲಿ ನೆನೆದುಕೊಂಡು ಹೋಗಬೇಡಿ ಎನ್ನುತ್ತಾ ಒಳಗೆ ಕರೆದರು. ಇಬ್ಬರೂ ಅಲ್ಲಿಯೇ ಕುಳಿತಿದ್ದಾಗ "ಇದು ವಿದ್ಯಾ ಮನೆ" ಎಂದು ಪರಿಚಯಿಸಿದನು. ವಿದ್ಯಾ ಎಂದರೆ ಯಾರು ಎಂದು ಕೇಳಿದಾಗ ಅಲ್ಲೇ ಇದ್ದ ಅವನ ಫೋಟೋ ತೋರಿಸಿದ ಮಾಧವ. ವಿದ್ಯಾಧರನ ಮನೆಗೆ ಬಂದಿದ್ದಳು ಸುಮಂಗಲಾ. ಅವಳು ತನ್ನ ಬದುಕಲ್ಲಿ ಯಾರನ್ನು ನೋಡಬಾರದು ಎಂದುಕೊಂಡಿದ್ದಳೋ.. ಎಲ್ಲಿಗೆ ಬರಬಾರದು ಎಂದುಕೊಂಡಿದ್ದಳೋ  ವಿಧಿ ಅವಳನ್ನು ಮತ್ತೆ ಅಲ್ಲಿಗೇ ತಂದು ನಿಲ್ಲಿಸಿತ್ತು. ಅವಳು ಈ ಆಘಾತಕ್ಕೆ ಮೂರ್ಛೆ ಹೋದಳು. ಮಾಧವನಿಗೆ ಈಗ ಎಲ್ಲವೂ ಒಂದೊಂದಾಗಿ ಅರ್ಥವಾದಂತಿತ್ತು. ಎಲ್ಲಿಯದ್ದೋ, ಯಾರದ್ದೋ ಬದುಕಿನದ್ದು ಎಂದುಕೊಂಡಿದ್ದ ಎಳೆ ಈಗ ಅವನ ಬದುಕಿಗೇ ಸುತ್ತಿಕೊಂಡಿತ್ತು. ವಿದ್ಯಾಧರನ ಬದುಕಲ್ಲಿ ತಾನು ಮಾಡಿದ ಒಂದು ಸಣ್ಣ ನಿರ್ಲಕ್ಷ್ಯದ ಪಾಪಪ್ರಜ್ಞೆ ಈಗ ಅವನನ್ನು ಬಹುವಾಗಿ ಕಾಡತೊಡಗಿತ್ತು. ಅಂದು ಅವಳ ಪಕ್ಕದಲ್ಲಿಯೇ ಕುಳಿತು ಅವಳಿಗೆ ಎಚ್ಚರವಾಗುವುದನ್ನೇ ಕಾಯುತ್ತಿದ್ದ. ಆದರೆ, ಏಕೋ ಒಂದು ಹೊತ್ತಿನಲ್ಲಿ ಎದ್ದು ಹೊರಟ. ಅವನು ಹೊರಟದ್ದು ಇವಳ ಅರಿವಿಗೆ ಬಂದಿತು. ಕೂಗಬೇಕು ಎಂದುಕೊಳ್ಳುವಷ್ಟರಲ್ಲಿ ಮತ್ತೆ ಬವಳಿ ಬಂದಂತಾಗಿ ಕಣ್ಮುಚ್ಚಿದಳು. ಬೆಳಿಗ್ಗೆ ಏಳುವಷ್ಟರಲ್ಲಿ ಮಾಧವ ಶವವಾಗಿ ಮಲಗಿದ್ದ. ಬದುಕಿನಲ್ಲಿ ಆಶಾಕಿರಣವಾಗಿ ಬಂದಿದ್ದವನು ಅಷ್ಟೇ ಬೇಗ ಬದುಕಿನಿಂದ ಮರೆಯಾಗಿದ್ದ. ಅದೇಕೋ ಅವಳಿಗೆ ರುಕ್ಮಿಣಿಯಾಗುವ ಅವಕಾಶವಾಗಲೇ ಇಲ್ಲ.

ಸುಮಂಗಲಾ ಈಗ ಇಲ್ಲಿ ಒಬ್ಬಂಟಿ. ವಿಧವೆಯ ಮುಖ ನೋಡುವುದು ಅಪಶಕುನ, ಯಾರಾದರೂ ಎಲ್ಲಾದರೂ ಹೊರಟಾಗ ಹೊರಗೆ ಬರಬೇಡ ಎಂದಾಗ ತನ್ನ ಮುಖ ನೋಡದೆ ಹೊರಗೆ ಹೋಗದ ಅಪ್ಪ ನೆನಪಾಗುತ್ತಾರೆ. ಹಾಡಲೂ ಸ್ವಾತಂತ್ರ್ಯವಿಲ್ಲ.. ಸಂಪ್ರದಾಯದ ಸಂಕೋಲೆಗಳಲ್ಲಿ ಈಗ ಅವಳು ಬಂಧಿ. ತನ್ನನ್ನು ತಾನೇ ಒಂದು ಕೋಣೆಯೊಳಗೆ ಕೂಡಿ ಹಾಕಿಕೊಂಡು ಅವಳಿಗೆ ಅವಳೇ ಹಿಂಸಿಸಿಕೊಂಡು ಭಾದೆ ಪಡುತ್ತಾಳೆ. ಹಳೆಯ ನೆನಪುಗಳಲ್ಲೇ
ಈಗವಳು ತನ್ಮಯಳು.
*************

ರಾತ್ರಿ  ಯಾವಾಗ ನಿದ್ರಿಸಿದಳೋ ಅವಳಿಗೇ ತಿಳಿದಿರಲಿಲ್ಲ.. ಬೆಳಿಗ್ಗೆ ಎಚ್ಚರವಾದಾಗ ಪರಿಚಿತ ಧ್ವನಿ ಕೇಳಿಸಿತು. ವಿದ್ಯಾಧರ ಬಂದಿದ್ದ ಅಂದು ಅವನು ಹೋಗುವವರೆಗೂ ಅವಳು ಕೋಣೆಯಿಂದಾಚೆ ಕಾಲಿಟ್ಟಿರಲಿಲ್ಲ. ಮಾಧವನ ತಾಯಿಯ ಯೋಗಕ್ಷೇಮದ ಹೊಣೆಯನ್ನು ಈಗ ವಿದ್ಯಾಧರ ಹೊತ್ತುಕೊಂಡಿದ್ದ. ಮಾಧವ ತಾನಿಲ್ಲದಾಗ ತನ್ನ ಕುಟುಂಬಕ್ಕೆ ಮಾಡಿದ ಸೇವೆಗೆ ಈಗ ವಿದ್ಯಾಧರ ಮಗನಾಗಿ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಪ್ರತಿದಿನದ ಅವನ ಸೇವೆಗೆ ಪ್ರತಿಫಲವಾಗಿ ಮಾಧವನ ತಾಯಿಯ ಆರೋಗ್ಯ ಸುಧಾರಿಸುತ್ತಿದೆ. ಪ್ರತಿದಿನ ತನ್ನ ಆರಾಧ್ಯದೈವವನ್ನು ನೋಡಿದರೂ ಮಾತನಾಡಿಸಲಾಗದೆ ವೇದನೆ ಅನುಭವಿಸುತ್ತಿದ್ದಾಳೆ ಸುಮಂಗಲಾ. ಈಗ ವಿದ್ಯಾಧರ ಮನೆ ಮಗನಿಗಿಂತ ಹೆಚ್ಚು. ಒಂದು ತಿಂಗಳಲ್ಲಿ ಮನೆ ಮತ್ತು ಮನೆಯ ಜನರ ಮನಸ್ಸನ್ನು ಬದಲಾಯಿಸಿದ್ದಾನೆ. ಮೂಢನಂಬಿಕೆಗೆ ಬಲಿಯಾಗಬೇಡಿ ಎಂದು ಮಾಧವ ಬದುಕಿದ್ದಾಗ ಹೇಳುತ್ತಿದ್ದ ಅವನ ಮಾತುಗಳನ್ನು ಹೇಳುತ್ತಾನೆ. ಸತ್ತ ಮಾಧವನೇ ವಿದ್ಯಾಧರನ ರೂಪದಲ್ಲಿರುವಂತೆ ಅನ್ನಿಸುತ್ತಿದೆ ಎಲ್ಲರಿಗೂ.


ಇಂದು ಮಾಧವನ ತಾಯಿ ಬಂದು ಹೇಳಿದ ಮಾತಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕೆಂದೇ ತಿಳಿಯದಾಗಿದೆ. ಕನಸೋ.. ನನಸೋ ಒಂದೂ ತಿಳಿಯದ ಅಯೋಮಯ ಸ್ಥಿತಿಯಾಗಿದೆ. "ಮಗಳೇ, ಇಷ್ಟು ದಿನ ನಾವೂ ನೋವಲ್ಲಿದ್ದೆವು. ನಿನ್ನನ್ನು ಗಮನಿಸಿಕೊಳ್ಳಲಾಗಲಿಲ್ಲ. ನಮ್ಮ ನೋವಿನಷ್ಟೇ ನಿನಗೂ ನೋವಿದೆ ಎಂಬುದು ಒಬ್ಬ ತಾಯಿಯಾಗಿ ಅರ್ಥ ಮಾಡಿಕೊಳ್ಳಲು ತಡವಾಯಿತು. ನಿನಗೆ ಉತ್ತಮ ಭವಿಷ್ಯವಿದೆ. ಅದು ಈ ಕತ್ತಲ ಕೂಪದಲ್ಲಿ ಸೆರೆಯಾಗುವುದು ಬೇಡ. ಇಷ್ಟು ದಿನ ನಿನ್ನನ್ನು ನೀನು ಹಿಂಸಿಸಿಕೊಂಡಿರುವುದು ಸಾಕು. ಇನ್ನು ಮುಂದೆ ನೀನು ಈ ಮನೆಯ ಸೊಸೆಯಲ್ಲ ಈ ಮನೆಮಗಳು. ನಿನ್ನ ಸಂಗೀತವನ್ನು ಮುಂದುವರಿಸು. ಓದುವ ಇಚ್ಛೆಯಿದ್ದರೆ ಮುಂದಕ್ಕೆ ಓದು ಆದರೆ ಇಲ್ಲಿಯೇ ಕುಳಿತು ಭವಿಷ್ಯವನ್ನು ಸೆರೆಯಾಗಿಸಿಕೊಳ್ಳಬೇಡ". ಬಹುಶಃ ನನ್ನ ಮನಸ್ಸು ಸಹಾ ಇದೇ ಮಾತಿಗೆ ಕಾಯುತ್ತಿತ್ತು ಎನ್ನಿಸುತ್ತದೆ. ಮೂಲೆಯಲ್ಲಿಟ್ಟಿದ್ದ ವೀಣೆ ಇಂದು ಕೈಗೆ ಬಂದಿತ್ತು. ವೀಣೆಯನ್ನು ನುಡಿಸುವಾಗಿನ ತನ್ಮಯತೆಯ ತಂತಿಯನ್ನು ಮೀಟಲು ಈಗ ಯಾರಿಂದಲೂ ಸಾಧ್ಯವಾಗದು.

ವಿದ್ಯಾಧರನಿಗೆ ಮಾಧವ ಬರೆದಿಟ್ಟಿದ್ದ ಪತ್ರ ದೊರಕಿತಂತೆ. ನನ್ನನ್ನು ವಿವಾಹವಾಗಲು ವಿದ್ಯಾಧರ ಸಿದ್ದನಿರುವ. ಮಾಧವನ ತಾಯಿ, ನನ್ನ ತಂದೆ ತಾಯಿ ಎಲ್ಲರೂ ಒತ್ತಾಯಿಸಿದರು. ಆದರೆ, ಏಕೋ ಮನಸ್ಸು ಒಪ್ಪುತ್ತಿಲ್ಲ. ಮಾಧವನ ಮೂರ್ತಿ ಮನದಿಂದ ಮರೆಯಾಗುತ್ತಿಲ್ಲ. ವಿದ್ಯಾಧರನಿಗೆ ಅಮ್ಮನಂತಹಾ ಗೆಳತಿಯಾಗಿಯೇ ಕಡೆಯವರೆಗೂ ಉಳಿಯುವಾಸೆ. ವಿದ್ಯಾಧರನಿಗೆ ನಾನೇ ನಿಂತು ಮದುವೆ ಮಾಡಿಸಿದೆ. ಅವನ ಮಗ ಪುಟ್ಟ ಮಾಧವನಿಗೆ ಈಗ ನಾನೇ ಯಶೋದೆ. ಕೃಷ್ಣ ಇಡಿಯಾಗಿ ದಕ್ಕಿದ್ದು, ವಿಶ್ವರೂಪ ತೋರಿಸಿದ್ದು ಯಶೋದೆಗೆ ಮಾತ್ರವಲ್ಲವೇ..? ಮೀರಾ ಆಗಲಾಗಲಿಲ್ಲ. ರಾಧೆಯಾಗಿಯೂ ಉಳಿದಿಲ್ಲ, ರುಕ್ಮಿಣಿಯಾಗುವ ಭಾಗ್ಯ ಇರಲಿಲ್ಲ, ದೇವಕಿಯಾಗುವ ಭಾಗ್ಯವಂತೂ ಇಲ್ಲವೇ ಇಲ್ಲ ಆದರೆ ಯಶೋದೆಯಾಗಿದ್ದೇನೆ. ತನ್ಮಯತೆಯ ತಂತಿಯನ್ನು ಮೀಟುವ ಧೈರ್ಯ ಇರುವುದು ಈಗ ಪುಟ್ಟ ಮಾಧವನಿಗೆ ಮಾತ್ರ.

ತನ್ಮಯತೆಯ ತಂತಿ ಮೀಟಿದ
ಮಾಧವನಿಗೆ ಜೋ ಜೋ ಲಾಲಿ

ಜೋಗುಳ ಹಾಡಿಸಿಕೊಂಡು ಮಲಗಿದ ಪುಟ್ಟ ಮಾಧವನ ಮುಂಗುರುಳ ನೇವರಿಸಿದಾಗ ಅದೇಕೋ ಮಮತೆಯ ತಂತು ಅರಿವಿಲ್ಲದಂತೆ ಮಿಡಿದು ತಾಯ್ತನದ ಬಂಧದಲ್ಲಿ ತನ್ಮಯಳಾಗುತ್ತೇನೆ. ನನ್ನ ಪ್ರಾಣವೆನಿಸಿದ ವೀಣೆಯೂ ಮರೆತು ಹೋಗುತ್ತದೆ. ಎಲ್ಲವನ್ನೂ ಮರೆಸಿ ನನ್ನನ್ನು ಮಾತ್ರ ನೆನಪಿಟ್ಟುಕೋ ಎಂದು ಪುಟ್ಟ ಮಾಧವ ಉಸುರಿದಂತಾಗುತ್ತದೆ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ