ಭಾನುವಾರ, ಡಿಸೆಂಬರ್ 29, 2019

ಸೋಷಿಯಲ್ ಸಂಬಂಧ


ಪೃಥ್ವಿಯ ವಾಟ್ಸಾಪ್ ಸ್ಟೇಟಸ್, ಇನ್ ಸ್ಟಾಗ್ರಾಂ,ಫೇಸ್ ಬುಕ್ ಎಲ್ಲವೂ ತಾನು ಅಮ್ಮನಿಗೆ ಅವರ ಹುಟ್ಟುಹಬ್ಬದ ದಿನ ಕೊಡಿಸಿರುವ ಸ್ಮಾರ್ಟ್ ಫೋನ್ ಹಾಗೂ ಅವರಿಗೆ ಅದನ್ನು ಬಳಸಲು ಹೇಳಿಕೊಡುತ್ತಿರುವ ಕುರಿತೇ ಆಗಿದ್ದು, ಹುಟ್ಟುಹಬ್ಬದ ಶುಭಾಶಯಗಳು ಅಮ್ಮ ಎಂಬ ಟ್ಯಾಗ್ ಲೈನ್ ನೊಂದಿಗೆ. ಹೀಗೆ ಹೇಳಿದವನ ಬದುಕಿನ ದೊಡ್ಡ ವಿಪರ್ಯಾಸ ಏನು ಗೊತ್ತಾ? ಅವನು ಅವನ ಅಮ್ಮನಿಗೆ ಹುಟ್ಟುಹಬ್ಬದ ಶುಭಾಷಯ ಹೇಳಿಯೇ ಇರಲಿಲ್ಲ. ಇನ್ನೊಂದು ಸಂಗತಿ ಏನಪ್ಪಾ ಅಂದ್ರೆ ಅಮ್ಮನ ಹುಟ್ಟುಹಬ್ಬ ಅಂದು ಎಂದು ತಿಳಿದದ್ದು ಕೂಡಾ ಜಿ-ಮೇಲ್ ಅಕೌಂಟ್ ಕ್ರಿಯೇಟ್ ಮಾಡಲು ಹೋದಾಗ, ಅಮ್ಮ ಅವರ ಜನ್ಮ ದಿನಾಂಕವನ್ನು ತಿಳಿಸಿದ ಮೇಲೆಯೇ. ತಕ್ಷಣಕ್ಕೆ ಅವನಿಗೆ ನೆನಪಾಗಿದ್ದು ಸಾಮಾಜಿಕ ಜಾಲತಾಣಗಳು ಅರ್ಥಾತ್ ಸೋಶಿಯಲ್ ಮೀಡಿಯಾಗಳು. ತಕ್ಷಣವೇ ಫೋಟೋ ಕ್ಲಿಕ್ ಮಾಡಿ ಅಪ್ಲೋಡ್ ಮಾಡಿ "ಫೀಲಿಂಗ್ ಹ್ಯಾಪಿ ವಿಥ್ ಅಮ್ಮ" ಎಂಬ ಸಾಲನ್ನೂ ಟೈಪಿಸಿ ಹರಿಬಿಟ್ಟದ್ದ. ನಿಮಿಷಗಳಲ್ಲೇ ನೂರಾರು ಲೈಕ್, ಕಾಮೆಂಟ್ ಗಳೂ ಬಂದು ಬಿದ್ದದ್ದೂ ಆಯ್ತು.

ಆದರೆ ಅಮ್ಮನಿಗೆ ಅವತ್ತು ಮೊಬೈಲ್ ತಂದು ಕೊಡಲೂ ಒಂದು ಕಾರಣವಿತ್ತು. ಅವನ ಹೆಂಡತಿಯೂ ಇನ್ನು ಮುಂದೆ ಕೆಲಸಕ್ಕೆ ಹೋಗಲು ತೀರ್ಮಾನ ಮಾಡಿದ್ದರಿಂದ ಮಗುವನ್ನು ಮೈಸೂರಿನಲ್ಲಿದ್ದ ಅಮ್ಮನ ಸುಪರ್ದಿಗೆ ಸೇರಿಸಲು ಬಂದಾಗ, ತನ್ನ ಮಗುವಿನ ಆಟ-ಪಾಠಗಳನ್ನೆಲ್ಲಾ ಫೋಟೋ ತೆಗೆದು, ವೀಡಿಯೋ ಮಾಡಿ ಕಳುಹಿಸಲು ಹೇಳುವ ಕಾರಣಕ್ಕೆ ಅಮ್ಮನಿಗೆ ಸ್ಮಾರ್ಟ್ ಫೋನ್ ತಂದು ಕೊಟ್ಟಿದ್ದ.

ಮಗನ ಉತ್ಸಾಹಕ್ಕೆ ತಣ್ಣೀರೆರಚಲು ಇಷ್ಟಪಡದ ಅಮ್ಮ, ಸ್ಮಾರ್ಟ್ ಫೋನ್ ಬಳಸಲು ಪಟ್ಟು ಹಿಡಿದು ಕುಳಿತೂ ಆಯ್ತು. ಸಂಜೆ ಆಗ್ತಾ ಇರುವಾಗ ಆಮ್ಮ ಬಂದು "ಏ ನೋಡೋ, ವಾಟ್ಸಾಪ್ ಇಂದ ಈ ಫೋಟೋ ಸೆಂಡ್ ಆಗ್ತಾನೇ ಇಲ್ಲ" ಅಂದ್ರು. ಆಗ ಪೃಥ್ವಿ "ಅಯ್ಯೋ ಅಮ್ಮ, ಇಂಟರ್ ನೆಟ್ ಡೇಟಾ ಆನ್ ಮಾಡಿಯೇ ಇಲ್ಲವಲ್ಲ" ಅಂದು ಡೇಟಾ ಆನ್ ಮಾಡಿಕೊಟ್ಟ. ಇನ್ನೊಂದು ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಬಂದ ಅಮ್ಮ "ನೀನು ಆವಾಗ ಏನೋ ಸರಿ ಮಾಡಿ ಕೊಟ್ಟಿದ್ಯಲ್ಲಾ, ಮತ್ತೆ ಮಾಡಿಕೊಡು. ಯಾಕೋ ಮತ್ತೆ ಅದೇತರಾ ಆಗ್ತಾ ಇದೆ" ಅಂದ್ರು.ಸ್ವಲ್ಪ ಸಿಟ್ಟು ಮಾಡಿಕೊಂಡ ಪೃಥ್ವಿ "ಏನಮ್ಮಾ ನಿಂದು, ಒಂದು ಸರಿ ಹೇಳಿದ್ರೆ ಗೊತ್ತಾಗಲ್ವಾ?" ಅಂತಾ ಹೇಳಿ ಸರಿ ಮಾಡಿಕೊಟ್ಟ. ಇನ್ನೊಂದು ಅರ್ಧ ಘಂಟೆ ಬಿಟ್ಟು ಅಮ್ಮ ಮತ್ತೆ ಬಂದು "ಏ ಪೃಥ್ವಿ, ಮರೆತೇ ಹೋಯ್ತು ನೀನು ಆವಾಗ ಹೇಳಿಕೊಟ್ಟಿದ್ದು. ಮತ್ತೆ ಹೇಳಿಕೊಡೋ" ಅಂದ್ರು. ಸಿಡಿಸಿಡಿ ಅಂತಾ ಸಿಟ್ಟು ಮಾಡಿಕೊಂಡ ಪೃಥ್ವಿ "ಎಷ್ಟು ಸಲ ಅಂತಾ ಹೇಳಿಕೊಡಬೇಕು? ಈ ಸಣ್ಣ-ಪುಟ್ಟ ವಿಷಯಗಳನ್ನೂ ನೆನಪಿಟ್ಟುಕೊಂಡು ಕಲಿಯೋಕೆ ಆಗಲ್ವಾ? ಅಷ್ಟೂ ತಿಳುವಳಿಕೆ ಬೇಡ್ವಾ..? " ಅಂತಾ ಹಿಗಾಮುಗ್ಗಾ ಬೈದು ಅಲ್ಲಿಂದ ಧಡಾರಂತಾ ಎದ್ದು ಹೊರಟ. ಇತ್ತ ಅಮ್ಮನ ಕಣ್ಣಲ್ಲಿ ನೀರು ತುಂಬಿತ್ತು. ಅಮ್ಮ ರೂಮಿಗೆ ಹೋಗಿ ಪತ್ರ ಬರೆಯುವುದಕ್ಕೆ ಶುರು ಮಾಡಿದ್ರು.

ಪೃಥ್ವಿ,

ಆಗ ನೀನಿನ್ನೂ ಚಿಕ್ಕ ಹುಡುಗ, ಬಹುಶಃ ನಿನಗೆ ಈ ಘಟನೆ ನೆನಪಿರಲಿಕ್ಕಿಲ್ಲ ಅನ್ಸುತ್ತೆ. ಅವತ್ತು ನಿನಗೆ ಅಕ್ಷರಗಳನ್ನು ತಿದ್ದಿಸುತ್ತಾ, ಅಡುಗೆ ಕೆಲಸಾನೂ ಮಾಡ್ತಾ ಇದ್ದೆ. ಸ್ಲೇಟ್ ಅಲ್ಲಿ 'ಅ' ಮತ್ತು 'ಆ' ಬರೆದು ಒಂದೆರಡು ಬಾರಿ ತಿದ್ದಿಸಿ, ಅಡುಗೆ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಾ ಇದ್ದೆ. ಆವಾಗ ನೀನು ತಿದ್ದಲು ಹಾಕಿಕೊಟ್ಟದ್ದನ್ನು ಅಳಿಸಿ, ಹೊಸದಾಗಿ ಹೊಸದಾಗಿ ಬರೆಯಲು ಪ್ರಯತ್ನ ಮಾಡುತ್ತಾ, 'ಅ' ಬರೆಯಲು ಶುರುಮಾಡಲು ಗೊತ್ತಾಗದೆ ಬಂದಿದ್ದೆ. ಅವತ್ತು ಹೀಗೀ ಒಂದಲ್ಲಾ, ಎರಡಲ್ಲಾ, ಹತ್ತು ಸಾರಿ ನಡೆಯಿತು. ನನಗೆ ಅವತ್ತು ಕೋಪ ಬರಲಿಲ್ಲ, ಕಿರಿಕಿರಿ ಅನ್ನಿಸಲಿಲ್ಲ. ಬದಲಾಗಿ ನೀನು ಮಾಡುತ್ತಿದ್ದ ಹೊಸ ಪ್ರಯತ್ನ ಕಂಡು ಖುಷಿ ಆಯ್ತು. ನೀನು ಇವತ್ತು ಸಿಡುಕಿದ ಹಾಗೆ ನಾನೂ ನಿನ್ನ ಮೇಲೆ ಸಿಟ್ಟು ಮಾಡಿಕೊಂಡಿದ್ದರೆ ಬಹುಶಃ ನೀನಿವತ್ತು ಕೆಲಸಕ್ಕೆ ಹೋಗುವುದು ಸಾಧ್ಯವೇ ಇರ್ತಾ ಇರಲಿಲ್ಲ. ಇರಲಿ ಬಿಡು, ಹಳೆಯದನ್ನೆಲ್ಲಾ ಇವಾಗ ನೆನಪು ಮಾಡಿಕೊಂಡು ಪ್ರಯೋಜನ ಆದ್ರೂ ಏನು?

ಇನ್ನೊಂದು ಮಾತು, ಇಂಟರ್ನೆಟ್ ನಿಂದ ಇವತ್ತು ಪ್ರಪಂಚ ತುಂಬಿಹೋಗಿದೆ. ಅಪರಿಚಿತರೂ ಪರಿಚಿತವಾಗುವ ಹೊತ್ತು, ಆದರೆ.. ಪರಿಚಿತರ ಸಂಬಂಧದ ಸಂಕೋಲೆಯ ಕೊಂಡಿ ಸವೆಯುತ್ತಾ ಬರ್ತಾ ಇದೆ.

ನಿನ್ನ ವಾಟ್ಸಾಪ್, ಫೇಸ್ ಬುಕ್ ಗಳಿಗೋಸ್ಕರ ನೀನು ನನ್ನ ಜೊತೆ ತೆಗೆದುಕೊಂಡ ಸೆಲ್ಫಿ ಮತ್ತು ಫೋಟೋಗಳು ನನ್ನನ್ನು ಖುಷಿಪಡಿಸಲಿಲ್ಲ. ಬದಲಿಗೆ ಬೇಜಾರು ಮಾಡಿದವು. ಯಾಕೆ ಗೊತ್ತಾ? ನನ್ನ ಹುಟ್ಟುಹಬ್ಬಕ್ಕೆ ನೀನು ವಿಷ್ ಮಾಡಲಿಲ್ಲ ಅಂತಾ ಅಲ್ಲ. ತೋರಿಕೆಯ ಪ್ರಪಂಚಕ್ಕೋಸ್ಕರ ಕೃತಕ ನಗುವನ್ನು ಮುಖದ ಮೇಲೆ ತಂದುಕೊಂಡು ನಿನ್ನ ಅಮ್ಮನ ಜೊತೆಗೇ ನಟಿಸಿದ್ದಕ್ಕೋಸ್ಕರ. ಹುಟ್ಟುಹಬ್ಬ ಬರುತ್ತೆ, ಹೋಗುತ್ತೆ.. ಅದರಲ್ಲೇನಿದೆ ವಿಶೇಷ..? ಆದರೆ ಎಷ್ಟು ಜನರ ಹುಟ್ಟುಹಬ್ಬ ನಿನಗೆ ನೆನಪಿರುತ್ತೆ..? ಫೇಸ್ ಬುಕ್ ನೋಟಿಫಿಕೇಶನ್ ಇಂದ ಅಥವಾ ವಾಟ್ಸಾಪ್ ಗ್ರೂಪ್ ಅಲ್ಲಿ ಬೇರೆ ಯಾರೋ ಹಾಕಿರೋ ಮೆಸೇಜ್ ಇಂದ ಅವರ ಹುಟ್ಟುಹಬ್ಬ ಅಂತಾ ನೆನಪಾಗುತ್ತೆ(ಅಲ್ಲಲ್ಲಾ, ಗೊತ್ತಾಗುತ್ತೆ..!). ಆಮೇಲೆ ಕುರಿಮಂದೆಯ ತರಹಾ ನಾ ಮುಂದೆ, ತಾ ಮುಂದೆ ಅಂತಾ ವಿಷ್ ಮಾಡೋದಕ್ಕೆ ಶುರು ಮಾಡ್ತೀರಾ.

ಇಷ್ಟು ದಿನ ನಾನು ಸ್ಮಾರ್ಟ್ ಫೋನ್ ಕೊಂಡುಕೊಳ್ಳದೇ ಇದ್ದದ್ದು ಹಣ ಇಲ್ಲ ಅಥವಾ ಇಂಟರ್ನೆಟ್ ಬಳಸೋಕೆ ಬರಲ್ಲಾ ಅಂತಾ ಅಲ್ಲ. ಜೀವನದ ಪಾಠವನ್ನೇ ಕಲಿತು ಅರಗಿಸಿಕೊಂಡವರಿಗೆ ಇಂಟರ್ ನೆಟ್ ನ ಪಾಠ ಒಂದು ಲೆಕ್ಕವೇ? ನಾನು ಅದರ ಅವಶ್ಯಕತೆ ಇಲ್ಲದೆಯೂ ಸುಖವಾಗಿ ಬದುಕಿರಬಲ್ಲೆ ಎಂಬ ಕಾರಣಕ್ಕೆ ಅದನ್ನು ಉಪಯೋಗಿಸುತ್ತಾ ಇರಲಿಲ್ಲ ಅಷ್ಟೇ.. ಅಲ್ಲದೇ, ನಾನೇ ನೋಡಿದ ಎಷ್ಟೋ ಮಂದಿ ಹೀಗೇ ಸೋಶಿಯಲ್ ಮೀಡಿಯಾ ಚಟಕ್ಕೆ ಬಿದ್ದು, ಯಾರೋ.., ಎಲ್ಲೋ ಹಾಕಿದ ತೋರಿಕೆಯ ಪ್ರಪಂಚದ ಪೋಸ್ಟ್ ಗಳಿಗೆ ಲೈಕ್ ಒತ್ತಿ, ತಮ್ಮ ಜೀವನದಲ್ಲಿ ಇವೆಲ್ಲಾ ಇಲ್ಲವಲ್ಲಾ ಅಂತಾ ಕೊರಗುತ್ತಾ ತಮ್ಮ ಲೈಫ್ ನ ಖಿನ್ನತೆಯ ಬಟನ್ ಅನ್ನು ಕೂಡಾ ಒತ್ತಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮೊದಲಿಗಿಂತ ಒಂದು ಲೈಕ್ ಕಡಿಮೆ ಆದರೂ, ಯಾಕಿರಬಹುದು ಅಂತಾ ಚಿಂತಿಸುತ್ತಾ ಕೊರಗುತ್ತಾ ಸೊರಗುತ್ತಿದ್ದಾರೆ.


ನಿನ್ನ ಮಗುವಿನ ಆಟ-ಪಾಠಗಳನ್ನು ವಾಟ್ಸಾಪ್ ಫೋಟೋ ಮತ್ತು ವೀಡಿಯೋಗಳಿಂದ ಕಣ್ತುಂಬಿಸಿಕೊಳ್ಳಬೇಡ. ನಿನ್ನ ಮಗುವಿನ ಆಟ-ಪಾಠಗಳನ್ನು ಕಣ್ತುಂಬಿಸಿಕೊಳ್ಳಲು ದಿನಾ ಅದರ ಜೊತೆಸ್ವಲ್ಪ ಸಮಯ ಕಳಿ. ಇಲ್ಲವಾದರೆ ನಿನ್ನ ಮಗುವನ್ನೂ ಅಂತರ್ಜಾಲದಲ್ಲೇ ಜಾಲಾಡುವ ಪರಿಸ್ಥಿತಿ ಬರಬಹುದು.ಯಾಕಂದ್ರೇ ಅವರು ನಿನ್ನ ಮುಂದಿನ ಪೀಳಿಗೆ ಅಲ್ವಾ? ನಿನಗಿಂತ ಮುಂದಿರುತ್ತಾರೆ. ಅಂದ ಹಾಗೆ ಕೊನೆ ಮಾತು.. ಅಂತರ್ಜಾಲದ ಕುರಿತು ನನಗೇನೂ ಬೇಸರ ಇಲ್ಲ. ಉಪಯೋಗ ಇದೆ, ಆದರೆ ಅದನ್ನು ಅರ್ಥ ಮಾಡಿಕೊಂಡು ಬಳಸಬೇಕು ಅಷ್ಟೇ. ಆಮೇಲೆ ಈ ಸ್ಮಾರ್ಟ್ಫೋನ್ ಕೂಡಾ ಬೇಡ. ಯಾಕಂದ್ರೆ ಈಗಾಗಲೇ ಇನ್ನೂ ಚೆನ್ನಾರುವ ಫೀಚರ್ ಇರುವ ಸ್ಮಾರ್ಟ್ ಫೋನ್ ತೆಗೆದುಕೊಳ್ಳುವೆ, ಇನ್ನು ಮುಂದೆ ಪತ್ರ ಬರೆಯುವ ಅವಶ್ಯಕತೆ ಇರಲ್ಲ ಅನ್ಸುತ್ತೆ. ಯಾಕಂದ್ರೆ.. ಹೇಗೂ ಇಂಟರ್ ನೆಟ್ ಇದ್ದೇ ಇರುತ್ತೆ. ಅಲ್ವಾ? ವಾಟ್ಸಾಪ್ ಮಾಡ್ತೀನಿ.

ಇಂತಿ
ನಿನ್ನ ಅಮ್ಮ

ಅಮ್ಮನ ಪತ್ರ ಮತ್ತು ಮೊಬೈಲ್ ಎರಡೂ ಬೆಳಿಗ್ಗೆ ಟೀಪಾಯ್ ಮೇಲಿತ್ತು. ಅದನ್ನು ಓದಿ ಅಮ್ಮನನ್ನು ಕ್ಷಮೆ ಕೇಳಲು ಹೊರಟ ಪೃಥ್ವಿಗೆ ಅಮ್ಮ ಕಾಣಿಸಲಿಲ್ಲ. ಮನೆಯಲ್ಲಿ ಇದ್ದರಲ್ಲವೇ? ಅಮ್ಮ ಕಾಣಿಸುವುದು...

ಗಾಬರಿಯಿಂದ ಪೃಥ್ವಿ ಹುಡುಕಲು ಶುರು ಮಾಡುವ ಹೊತ್ತಿಗೆ ಅಮ್ಮ ವಾಟ್ಸಾಪ್ ಗೆ ವೀಡಿಯೋ ಕಾಲ್ ಮಾಡಿದ್ರು .. ಅದನ್ನು ರಿಸೀವ್ ಮಾಡುವ ಹೊತ್ತಿಗೆ, ಅವನ ಮಗು ಅವನ ಕಿರುಬೆರಳಿಡಿದು ಜಗ್ಗುತ್ತಾ ಟಿ.ವಿ ಯಲ್ಲಿ ಬರುತ್ತಾ ಇರುವ ಸ್ಮಾರ್ಟ್ ಫೋನ್ ನ ಜಾಹೀರಾತಿನ ಕಡೆ ನೋಡುತ್ತಾ ಇತ್ತು.

-ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ