ಗುರುವಾರ, ಡಿಸೆಂಬರ್ 26, 2019

ಪ್ರೀತಿ ಹೀಗೇನಾ?

ಶುಭ ಮಾಧವನಿಗೆ ತನ್ನ ಪ್ರೀತಿಯನ್ನು ತಿಳಿಸಿದರೂ ಮಾಧವ ನಿರಾಕರಿಸುತ್ತಾನೆ. ಮಾಧವನಿಗೆ ಶುಭ ಇಷ್ಟವಿಲ್ಲ ಎಂದೇನೂ ಅಲ್ಲ ನಂತರ ಮಾಧವ ಮತ್ತು ಶುಭಾಳ ನಡುವಿನ ಸಂಭಾಷಣೆ ಹೀಗೆ ಸಾಗುತ್ತದೆ.

"ಯಾಕೆ ನಿನಗೆ ನಾನು ಇಷ್ಟ ಇಲ್ಲ?" ಎಂದು ಶುಭ ಪ್ರಶ್ನಿಸಿದಾಗ ಮಾಧವ ಹೇಳುತ್ತಾನೆ. "ನೀನು ಇಷ್ಟ ಇಲ್ಲ ಎಂದೇನೂ ಅಲ್ಲ, ನಿನ್ನ ಮೇಲೆ ಪ್ರೀತಿ ಇಲ್ಲ ಎಂತಲೂ ಅಲ್ಲ. ನನಗೆ ನನ್ನದೇ ಆದ ನೂರಾರು ಸಮಸ್ಯೆಗಳಿವೆ. ಅದರೊಡನೆ ನಿನ್ನ ಜವಾಬ್ದಾರಿಯೂ ಸೇರಿದರೆ ನಿಭಾಯಿಸಲು ಕಷ್ಟವಾಗುತ್ತದೆ."

"ಪ್ರೀತಿ ಜವಾಬ್ದಾರಿಯಲ್ಲ, ಪ್ರೀತಿ ಬಂಧನವೂ ಅಲ್ಲ, ಅದೊಂದು ಸಹಜ ಸಂಬಂಧ ಅಷ್ಟೇ, ಜವಾಬ್ದಾರಿಯೆಂದ ಒಡನೆ ಹೆದರಿ ಓಡುವ ಹೇಡಿಯನ್ನು ನಾನು ಪ್ರೀತಿಸಿದ್ದೆನೇ ಎಂಬುದೇ ನನಗೆ ಅಚ್ಚರಿಯಾಗುತ್ತಿದೆ. ಆದರೆ ಜ್ಞಾನೋದಯವಾಗಲು ಹೆಚ್ಚು ಸಮಯ ಹಿಡಿದಿಲ್ಲ ಎನ್ನುವುದೇ ನನಗೆ ಸಂತೋಷದ ವಿಷಯ. ಇದು ನನ್ನ ಬದುಕಿನಲ್ಲಿ ಒಂದು ಮುಗಿದ ಅಧ್ಯಾಯವೇ ಸರಿ ಇನ್ನೆಂದೂ ನಾನು ನಿನಗೆ ತೊಂದರೆ ನೀಡುವುದಿಲ್ಲ. ನಮ್ಮ ಬದುಕಿನ ಹಾದಿಗಳು ಇಲ್ಲಿ ಕವಲೊಡೆದಿವೆ, ಸದ್ಯಕ್ಕೆ ಅಲ್ಲಲ್ಲ ಇನ್ನು ಮುಂದೆ ಬೇರೆ ಬೇರೆಯಾಗಿ ಬದುಕುವುದೇ ವಿಧಿಬರಹ ಎನ್ನಿಸುತ್ತದೆ. ಆದರೆ ನೆನಪಿನಲ್ಲಿಟ್ಟುಕೋ ನನ್ನ ಪ್ರೀತಿ ಸುಳ್ಳಲ್ಲ, ನೀನು ನನ್ನನ್ನು ಪ್ರೀತಿಸಿದ್ದೂ ಸುಳ್ಳಲ್ಲ ಇದು ನಿಜವೇ ಆಗಿದ್ದರೆ ಸೇರೋಣ. ಗುಡ್ ಬೈ" ಎಂದು ಹೇಳಿದ ಶುಭ ಹಿಂದಿರುಗಿ ನೋಡದಂತೆ ಹೊರಟುಬಿಡುತ್ತಾಳೆ.

ಆಕೆ ಹಿಂತಿರುಗಿ ನೋಡಲೇ ಇಲ್ಲ, ಆದರೆ ಮಾಧವ ತನ್ನ ಬದುಕನ್ನೊಮ್ಮೆ ಸಿಂಹಾವಲೋಕನ ಕ್ರಮದಲ್ಲಿ ನೆನಪಿಸಿಕೊಂಡ.

ರಾಘವ ಅಯ್ಯರ್, ಮಾಧವ ಅಯ್ಯರ್ ಇಬ್ಬರೂ ಯಮುನಾ ಮತ್ತು ಶಂಕರ್ ಅಯ್ಯರ್ ಅವರ ಇಬ್ಬರು ಗಂಡು ಮಕ್ಕಳು, ಇವರೆಲ್ಲರ ಮುದ್ದಿನ ಕಣ್ಮಣಿ ಮನೆಮಗಳು ಭೂಮಿ. ರಾಘವ ಮತ್ತು ಮಾಧವರ ಮುದ್ದಿನ ತಂಗಿ ಭೂಮಿ. ಹೆಚ್ಚು ಮಾತಾಡುವ ಮಾಧವನಿಗೂ, ಏಕಾಂತವನ್ನೇ ಇಷ್ಟಪಡುವ ರಾಘವನಿಗೂ ಭೂಮಿ ಅಚ್ಚುಮೆಚ್ಚು. ಎಲ್ಲರ ಗುಟ್ಟೂ ಗೊತ್ತಿರುವ ಭೂಮಿ ಸಹನಾಶೀಲೆ ಅಲ್ಲದೆ ಬುದ್ದಿವಂತೆ ಸಹಾ.

ಹೆಚ್ಚಿನ ಗೆಳೆಯರಿದ್ದರೂ ಮಾಧವ ತನ್ನ ಮನದ ಮಾತುಗಳನ್ನೆಲ್ಲಾ ಹಂಚಿಕೊಳ್ಳುವದು ಭೂಮಿಯಲ್ಲಿಯೇ. ಮಾಧವ ಮತ್ತು ರಾಘವರ ವಯಸ್ಸಿನ ಅಂತರ ಕಡಿಮೆ ಇದ್ದರೂ ಅಣ್ಣನೊಂದಿಗೆ ಮಾಧವನ ಒಡನಾಟ ಕಡಿಮೆಯೇ, ಹೆಚ್ಚು ಕಡಿಮೆ ಇಲ್ಲವೆಂದರೂ ತಪ್ಪಿಲ್ಲ. ತನ್ನ ಗೆಳೆಯ-ಗೆಳತಿಯರು, ಆಟ, ಶಾಲೆ, ಪ್ರವಾಸ ಹೋದ ಕ್ಷಣಗಳನ್ನು ಹಂಚಿಕೊಳ್ಳುವಷ್ಟು ನಿರ್ಭೀತಿಯಿಂದಲೇ ತನ್ನ ಪ್ರೀತಿ, ಪ್ರೀತಿಸುವ ಹುಡುಗಿಯ ಕುರಿತು ಹೇಳುತ್ತಿದ್ದ ಭೂಮಿಗೆ.

ರಾಘವ ಬಹಳ ಬುದ್ದಿವಂತ, ಸಹಜವಾಗಿಯೇ ಮಾಧವನ ಓದಿನ ಮೇಲೆಯೂ ಸಹಾ ಅಷ್ಟೇ ನಿರೀಕ್ಷೆಗಳಿದ್ದವು ಆದರೆ ಮಾಧವನಿಗೆ ಆಟ, ಗೆಳೆಯರು, ಪರೋಪಕಾರದಲ್ಲಿಯೇ ಒಲವು ಹೆಚ್ಚು. ಇಬ್ಬರ ವಯಸ್ಸಿನ ಅಂತರ 3 ವರ್ಷಗಳೇ ಆದರೂ ಅವರಿಬ್ಬರ ಒಡನಾಟದ ಮೇಲೆ ಯಾವ
ಪ್ರಭಾವವನ್ನೂ ಬೀರಿರಲಿಲ್ಲ, ಆದರೆ ತನ್ನಣ್ಣನಿಂದಾಗಿ ತನ್ನ ಮೇಲೆ ಪ್ರಭಾವವಿರುವುದು ಅವನನ್ನು ಪ್ರತಿಯೊಂದರಲ್ಲೂ ಯೋಚಿಸಿ ಹೆಜ್ಜೆ ಇಡುವಂತೆ ಮಾಡಿತ್ತು. ಹೀಗಿರುವಾಗ ಅಣ್ಣ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಅನ್ನು ಆಯ್ಕೆ ಮಾಡಿದ್ದರಿಂದ ಮನೆಯವರ ಆಯ್ಕೆಯ ಮೇರೆಗೆ ತಾನೂ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಗೆ ಸೇರುತ್ತಾನೆ.

ಮೊದಲನೇ ವರ್ಷ ಎಲ್ಲರಿಗೂ ಕಾಮನ್ ಸಬ್ಜೆಕ್ಟ್, ಆದುದರಿಂದ ಮೊದಲ ವರ್ಷದಲ್ಲಿ ಎಲ್ಲರೂ ಇರುತ್ತಾರೆ. ಎರಡನೇ ವರ್ಷದ ಬ್ರಾಂಚ್ ಎಂಟ್ರಿಯಲ್ಲಿ ಬರೀ ಸಿ.ಎಸ್ ವಿದ್ಯಾರ್ಥಿಗಳು ಒಂದಾಗುತ್ತಾರೆ, ಮೂರನೇ ಸೆಮ್ ಬಳಿಕವಂತೂ ಎಲ್ಲರಿಗೂ ಎಲ್ಲರೂ ಪರಿಚಿತರಾಗುತ್ತಾರೆ. ಅವರ ತರಗತಿಯಲ್ಲಿ ಲಕ್ಷ್ಮಿ ಪಾಟೀಲ್ ಹೆಚ್ಚು ಅಂಕ ಗಳಿಸುವ ಹುಡುಗಿ. ಲಕ್ಷ್ಮಿಯ ನಂತರದ ರಿಜಿಸ್ಟರ್ ನಂಬರ್ ಮಾಧವನದ್ದು. ಪರೀಕ್ಷೆಗಳಲ್ಲೆಲ್ಲಾ ಲಕ್ಷ್ಮಿಯ ಹಿಂದೆಯೇ ಮಾಧವನ ಸ್ಥಾನ. ಆದರೆ ರ್ಯಾಂಕ್ ನಲ್ಲಿ ಲಕ್ಷ್ಮಿಯದ್ದು ಮೊದಲಾದರೆ, ಮಾಧವನದ್ದು ಕೊನೆಯಿಂದ ಮೊದಲು.

ಮಾಧವನಿಗೆ ಗೆಳೆಯರ ಬಳಗ ಹೆಚ್ಚು. ಕಲ್ಲನ್ನು ಬೇಕಾದರೂ ಮಾತನಾಡಿಸುವ ಛಾತಿ ಮಾಧವನಿಗೆ ಇತ್ತು. ಕಾಲೇಜಿನ ವಾಚ್ ಮ್ಯಾನ್ ನಿಂದ ಹಿಡಿದು ಹೆಚ್.ಓ.ಡಿ ವರೆಗೂ ಎಲ್ಲರಿಗೂ ಆತ ಚಿರಪರಿಚಿತ. ಲಕ್ಷ್ಮಿಯದ್ದು ತಾನಾಯಿತು, ತನ್ನ ಓದಾಯಿತು ಎನ್ನುವ ಸ್ವಭಾವ, ತಾನಾಗಿಯೇ ಹೆಚ್ಚು ಯಾರನ್ನೂ ಮಾತನಾಡಿಸದ ಆಕೆಗೆ ಹೆಚ್ಚು ಗೆಳೆಯರಿರಲಿಲ್ಲ. ಅಲ್ಲದೇ ತಾನು ಚೆನ್ನಾಗಿಲ್ಲವೆಂಬ ಕೀಳಿರಿಮೆಯೂ ಅವಳಿಗಿತ್ತು. ಆಕೆ ಸ್ವಲ್ಪ ಹೆಚ್ಚೆನ್ನಿಸುವಷ್ಟೇ ದಪ್ಪವಿದ್ದ ಕಾರಣ ಆಕೆಗೆ ಗುಂಪಿನಲ್ಲಿ ಬೆರೆಯಲು ಹಿಂಜರಿಕೆ. ಮಾಧವ ಎಲ್ಲವನ್ನೂ ಗಮನಿಸುತ್ತಿದ್ದ. ಅವನಿಗೆ ಸುಮ್ಮನಿರಲು ಆಗದೆ ಆಕೆಯನ್ನು ಮಾತನಾಡಿಸಲು ಯತ್ನಿಸಿ ಸಫಲನಾಗಿದ್ದ. ನೋಡಲು ಚೆನ್ನಾಗಿದ್ದರೂ ಕೊಂಚ ದಪ್ಪವಾಗಿದ್ದ ಅವಳನ್ನು ಸ್ನೇಹ ಮಾಡಲು ಮಾಧವನಿಗೆ ಯಾವ ಹಿಂಜರಿಕೆಯೂ ಇರಲಿಲ್ಲ. ಅಲ್ಲದೇ ಸ್ನೇಹ ನೋಟ, ಜಾತಿಗಳ ಆಧಾರದ ಮೇಲೆ ನಿರ್ಧಾರವಾಗುವುದೂ ಇಲ್ಲವಲ್ಲ. ನಂಬರ್, ನೋಟ್ಸ್ ಗಳ ಬದಲಾವಣೆಯಿಂದ ಆರಂಭವಾದ ಸ್ನೇಹವು ಲಕ್ಷ್ಮಿಯ ಮನದಲ್ಲಿ ಅನುರಾಗದ ಅಲೆಯನ್ನು ಬೀಸಿತ್ತು. ಇದರಿಂದ ಅವಳೂ ಕಾಲಕ್ರಮೇಣ
ಬದಲಾಗುತ್ತಲಿದ್ದಳು. ಮಾಧವನ ಸ್ನೇಹದಿಂದ ಅವಳೂ ಆತ್ಮಸ್ಥೈರ್ಯ ತುಂಬಿಕೊಂಡು ಬದಲಾದಳು. ಆದರೂ ಓದಿನಲ್ಲಿ ಮೊದಲ ಸ್ಥಾನವನ್ನು ಬಿಟ್ಟುಕೊಡಲಿಲ್ಲ. ನಾಲ್ಕನೇ ಸೆಮ್ ನ ಅಂತ್ಯದಿಂದ ಆರಂಭವಾದ ಪ್ರೀತಿಯು ಹೆಮ್ಮರವಾಗಿ ಬೆಳೆದಿತ್ತು. ಆದರೆ ಮಾಧವನಿಗೆ ಪ್ರೀತಿಯಿದ್ದರೂ ಆತ ಅದನ್ನು ತೋರ್ಪಡಿಸಿಕೊಳ್ಳಲಿಲ್ಲ, ಕೊನೆಯ ವರ್ಷದಲ್ಲಿ ಆಕೆಯೇ ಮಾಧವನಿಗೆ ತನ್ನ ಪ್ರೀತಿಯನ್ನು ನಿವೇದಿಸಿದಳು. ಆದರೆ ಮಾಧವ ನಯವಾಗಿಯೇ ಆಕೆಯ ಮನವಿಯನ್ನು ತಿರಸ್ಕರಿದ್ದ.

ಪ್ರೀತಿ ಒಂದುಗೂಡಲು ಎಲ್ಲವೂ ಸಹಕಾರಿಯಾಗಿಬೇಕು ಆದರೆ ಇಲ್ಲಿ ವ್ಯತಿರಿಕ್ತವಾಗಿತ್ತು. ಮಾಧವ ತನ್ನ ಪ್ರೀತಿಯನ್ನು ಮುಚ್ಚಿಟ್ಟು ಅವಳ ಪ್ರೀತಿಯನ್ನೂ ತಿರಸ್ಕರಿಸಲು ಕಾರಣ ಅವಳ ದಪ್ಪವೂ ಆಗಿರಲಿಲ್ಲ, ಇಬ್ಬರ ಜಾತಿ ಬೇರೆಯಾದರೂ ಜಾತಿಯೂ ಅದಕ್ಕೆ ಕಾರಣವಾಗಿರಲಿಲ್ಲ. ತಿರಸ್ಕರಿಸಲು ಮಾಧವನಿಗೆ ಅವನದ್ದೇ ಆದ ಕಾರಣವೊಂದಿತ್ತು, ಯಾರಿಗೂ ತಿಳಿಸಲಾರದ ನೋವೊಂದಿತ್ತು, ಆದರೂ ಅವನ ನಿರ್ಧಾರವೂ ಅಷ್ಟೇ ಧೃಡವಾಗಿತ್ತು. "ನಿನ್ನ ಜೀವನದುದ್ದಕ್ಕೂ ನಾನೊಬ್ಬ ಒಳ್ಳೆಯ ಗೆಳೆಯನಾಗಿರಬಲ್ಲೆ" ಎಂದಷ್ಟೇ ಹೇಳಿ ಅಲ್ಲಿಂದ ಹೊರಟಿದ್ದ.

ಅಂದು ಭೂಮಿಯ ಬಳಿ ಅದೆಲ್ಲವನ್ನೂ ಹೇಳಿ ಬೇಸರಿಸಿಕೊಂಡಿದ್ದ. ಅಲ್ಲದೇ ಅವಳಿಗೂ ಆ ಕಾರಣದ ಅರಿವು ಇದ್ದುದರಿಂದ ಅವಳೂ ಇಲ್ಲಿ ನಿಸ್ಸಹಾಯಕಳು. ಕಾಲ ಎಲ್ಲವನ್ನೂ ಬದಲಾಯಿಸುತ್ತದೆ. ಹಾಗೆಯೇ ಮಾಧವ ಮತ್ತು ಲಕ್ಷ್ಮಿಯ ಜೀವನ ಪಥಗಳೂ ಬದಲಾದವು.

ಮಾಧವ ಅಣ್ಣನ ಸ್ಟಾರ್ಟಪ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದರೆ, ಲಕ್ಷ್ಮಿಗೆ ಕೆಲದಿನಗಳ ನಂತರ ಎಂ.ಎನ್.ಸಿ ಯಲ್ಲಿ ಒಳ್ಳೆಯ ಸಂಬಳದ ಕೆಲಸವೇ ಸಿಕ್ಕಿತ್ತು. ನಿರಾಕರಣೆಯಾದ ಪ್ರೇಮದ ಫಲವೋ, ಬೆಂಗಳೂರಿನ ಜೀವನ ಶೈಲಿಯೋ ಲಕ್ಷ್ಮಿ ಸಂಪೂರ್ಣವಾಗಿ ಬದಲಾಗಿದ್ದಳು. ಕನಿಷ್ಟ ತನ್ನ ಗೆಳೆಯ-ಗೆಳತಿಯರೊಂದಿಗೆ ಮಾತನಾಡಲೂ ಸಮಯ ನೀಡಲಿಲ್ಲ. ಎಲ್ಲವನ್ನೂ,ಎಲ್ಲರನ್ನೂ ನಿರ್ಲಕ್ಷಿಸಿದ್ದಳು. ಮಾಧವ ಕೂಡಾ ಇದರಿಂದ ಸಂಪೂರ್ಣವಾಗಿ ನೊಂದಿದ್ದ. ಇದರಿಂದ ಹೊರಬರಲು ಕೆಲದಿನ ರಜೆ ಹಾಕಿ ಆತ ತನ್ನ ಆತ್ಮೀಯ ಗೆಳೆಯ ಶಶಾಂಕ್ ಊರಿಗೆ ಹೊರಟ.

ಶಶಾಂಕ್ ಮಾಧವನ ಇಂಜಿನಿಯರಿಂಗ್ ನ ಗೆಳೆಯ. ಮೂಡಿಗೆರೆಯಲ್ಲಿದ್ದ ಶಶಾಂಕ್ ಮನೆಗೆ ಮಾಧವ ಹೋಗಿದ್ದ. ಸ್ನೇಹ , ಪ್ರೀತಿಯ ಮೋಡಿಯಿಂದ ಹೊರಬರಬೇಕೆಂದುಕೊಂಡಿದ್ದವನು ಪ್ರೀತಿಯ ಬಲೆಗೆ ಸಿಲುಕಿದ್ದ. ಶಶಾಂಕ್ ತನ್ನ ತಂಗಿ ಶುಭಾಳಿಗೆ ಮಾಧವನ ಕುರಿತು ಎಲ್ಲವನ್ನೂ ಹೇಳಿರುತ್ತಾನೆ. ಶುಭಾಳಿಗೆ ಅವನನ್ನು ನೋಡದೆಯೇ ಅವನ ಕುರಿತು ಒಲವು ಮೂಡಿರುತ್ತದೆ. ಇತ್ತ ಶುಭಾಳ ನಡತೆ ಮತ್ತು ಉಪಚಾರಕ್ಕೆ ಮನಸೋತಿದ್ದ ಮಾಧವ. ಶಶಾಂಕ್ ಗೆ ಇದೆಲ್ಲದರ ಅರಿವಿದ್ದರೂ ಅವನು ಇದಕ್ಕೆ ಅಡ್ಡಿಪಡಿಸುವುದಿಲ್ಲ. ಒಂದು ತಿಂಗಳಿದ್ದರೂ ಇಬ್ಬರೂ ಇದರ ಕುರಿತು ಮಾತನಾಡಿರುವುದಿಲ್ಲ. ಇವನು ಊರಿಗೆ ಹೊರಟ ಕೊನೆಯ ದಿನ ಶುಭಾಳೇ ತನ್ನ ಪ್ರೀತಿಯನ್ನು ತಿಳಿಸಿದರೂ ಈತ ನಿರಾಕರಿಸುತ್ತಾನೆ.

ಶುಭಾ ಇದನ್ನು ಶಶಾಂಕ್ ಗೆ ತಿಳಿಸಿದಾಗ ಅವನು ಗೆಳೆಯನ ಕುರಿತೂ ಏನೂ ಹೇಳಲಾಗದೆ, ತನ್ನ ತಂಗಿಗೆ ಸಮಾಧಾನ ಮಾಡಲು "ಎಲ್ಲದಕ್ಕೂ ಸಮಯ ಕೂಡಿಬರಬೇಕು" ಎಂದು ಸುಮ್ಮನಾಗಿದ್ದ.

ಇತ್ತ ಇದೆಲ್ಲವನ್ನೂ ನೆನಪಿಸಿಕೊಂಡು ಊರಿಗೆ ಬಂದ ಮಾಧವ ಬಹಳ ಬೇಸರದಲ್ಲಿದ್ದ. ಭೂಮಿಯ ಬಳಿ ಬಂದ ಮಾಧವ ಇದೆಲ್ಲವನ್ನೂ ತಿಳಿಸಿ ಬಹಳವೇ ಬೇಸರಪಟ್ಟುಕೊಂಡಿದ್ದ."ನನಗೆ ನನ್ನ ಪ್ರೀತಿ ದಕ್ಕಲು ಸಾಧ್ಯವಿಲ್ಲ, ನಾನೊಬ್ಬ ದುರಾದೃಷ್ಟವಂತ" ಎಂದು ಪೇಚಾಡಿಕೊಳ್ಳುತ್ತಿರುವಾಗ ರಾಘವ ಇದನ್ನೆಲ್ಲಾ ಕೇಳಿಸಿಕೊಂಡು ಆಶ್ಚರ್ಯ ಪಟ್ಟಿದ್ದ, ಬೇಕುಬೇಕೆಂದು ಇದನ್ನೆಲ್ಲಾ ಕೇಳಿಸಿಕೊಳ್ಳದಿದ್ದರೂ ಅಚಾನಕ್ ಆಗಿ ರಾಘವ ಇದನ್ನು ಕೇಳಿಸಿಕೊಂಡಿದ್ದ.

ಅಂದೇ ಸಂಜೆ ರಾಘವ ಭೂಮಿಯೊಂದಿಗೆ ಈ ವಿಚಾರವಾಗಿ ಚರ್ಚಿಸಿದ್ದ. ಭೂಮಿಗೆ ಮಾಧವನ ಕುರಿತು ರಾಘವ ಕಾಳಜಿ ತೋರುತ್ತಿರುವುದು ಆಶ್ಚರ್ಯ ತಂದಿತ್ತು. ಆದರೂ ಅವಳು ಅದನ್ನು ತೋರ್ಪಡಿಸದೆ ಮಾಧವನ ಪ್ರೇಮದ ಎಲ್ಲಾ ವಿಚಾರವನ್ನೆಲ್ಲಾ ರಾಘವನೆದುರಿಗೆ
ತೆರೆದಿಟ್ಟಿದ್ದಳು, ಆದರೆ ಆ ಒಂದು ವಿಚಾರವನ್ನು ಬಿಟ್ಟು. ಮಾಧವ ತನ್ನ ಪ್ರೀತಿಯನ್ನು ಮುಚ್ಚಿಟ್ಟು ತಾನಾಗಿಯೇ ತನ್ನ ಪ್ರೀತಿಯನ್ನು ನಿರಾಕರಿಸುವುದು ಯಾಕೆಂದು ಮಾತ್ರ ತಿಳಿಸಲಿಲ್ಲ. ಅವಳಾದರೂ ಅದನ್ನು ಹೇಗೆ ಹೇಳಿಯಾಳು?

ಮಾಧವ ತನ್ನ ಪ್ರೀತಿಯನ್ನು ನಿರಾಕರಿಸುವುದರ ಹಿಂದಿರುವ ಕಾರಣವೇ ರಾಘವ. ಹೌದು, ರಾಘವನ ಪ್ರೇಮ ಪ್ರಕರಣವೇ ಇದೆಲ್ಲದರ ಹಿಂದಿನ ಕಾರಣ. ಅದೂ ಒಂದೆರಡು ವರ್ಷದ್ದಲ್ಲ, 15 ವರ್ಷಗಳಿಂದ ನಡೆಯುತ್ತಾ ಬಂದಿರುವ ನಿಲ್ಲದ ತೆರೆಮರೆಯ ಪ್ರೀತಿ. ಆದರೆ ಇದು ಸಫಲವಾಗಲು
ತೊಡಕೊಂದಿತ್ತು.

ಯಮುನಾ ಮತ್ತು ಶಂಕರ್ ಅಯ್ಯರ್ ದಂಪತಿಗಳದ್ದು ಸಂಪ್ರದಾಯಬದ್ದವಾದ ಜೀವನ. ಪ್ರೀತಿಯಷ್ಟೇ ದ್ವೇಷವನ್ನೂ ತೀವ್ರವಾಗಿ ಬದುಕುತ್ತಿದ್ದವರು ಅಯ್ಯರ್. ತನ್ನ ತಮ್ಮ ಕೇಶವ ಅಯ್ಯರ್ ಪ್ರೀತಿಸಿ ಬೇರೆ ಜಾತಿಯ ಹುಡುಗಿಯನ್ನು ಮದುವೆಯಾದನೆಂಬ ಒಂದೇ ಕಾರಣಕ್ಕೆ ಅವನನ್ನು 30 ವರ್ಷಗಳಿಂದ ದೂರವೇ ಇಟ್ಟಿದ್ದರು ಕಡೇಪಕ್ಷ ನೋಡಲೂ ಇಚ್ಚಿಸಿರಲಿಲ್ಲ. ಮತ್ತೆ ರಾಘವನದ್ದೂ ಅದೇ ಕತೆಯಾಗಿತ್ತು. ಪ್ರೀತಿ ಎಂದರೆ ಸಿಡಿದು ಬೀಳುವ ತಂದೆ ರಾಘವನ ಪ್ರೇಮ ವಿವಾಹವನ್ನು ಒಪ್ಪಲು ಸಾಧ್ಯವೇ ಇರಲಿಲ್ಲ, ರಾಘವ ನೋಡಲು ಸೌಮ್ಯವಾಗಿದ್ದರೂ ಅವನೂ ಹಠವಾದಿಯೇ, ಅವನೂ ತನ್ನ 15 ವರ್ಷದ ಪ್ರೀತಿಯನ್ನು ಬಿಡಲು ಸಿದ್ದವಿರುವುದಿಲ್ಲ. ಅಲ್ಲದೇ ಮೊದಲ ಮಗನ ಪ್ರೇಮ ಪ್ರಕರಣದಿಂದಲೇ ಘಾಸಿಯಾಗಿರುತ್ತದೆ. ಅಲ್ಲದೇ ತಾನೂ ಅದೇ ದಾರಿ ತುಳಿದರೆ ತಪ್ಪಾಗುತ್ತದೆ ಎಂಬ ದೂರಾಲೋಚನೆಯಿಂದ ಮಾಧವ ಪ್ರೀತಿಗಿಂತ ಮಗನ ಕರ್ತವ್ಯವೇ ಹೆಚ್ಚು ಎಂದು ಅದನ್ನು ಪಾಲಿಸಲು ತ್ಯಾಗಮಯಿಯಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡುತ್ತಲೇ ಬಂದಿದ್ದ. ಉಳಿದವರ ಕಣ್ಣಿಗೆ ಅವನೊಬ್ಬ ಮೋಸಗಾರನಂತೆ ಕಂಡುಬಂದರೂ ಭೂಮಿಗೆ ಮಾತ್ರ ಅವನದ್ದು ನಿರ್ಮಲವಾದ ಪ್ರೀತಿ. ಇತ್ತ ರಾಘವನಿಗೂ ಹೇಳಲಾಗದೆ, ಮಾಧವನಿಗೂ ಸಹಾಯ ಮಾಡಲಾಗದೆ ಆಕೆ ತೊಳಲಾಡುತ್ತಿದ್ದಳು. ಆದರೆ ಸಮಯವೇ ಅವಳ
ತೊಳಲಾಟಕ್ಕೊಂದು ವಿರಾಮ ಹಾಡುವುದರಲ್ಲಿತ್ತು.

ಭೂಮಿಯ ಹತ್ತಿರ ರಾಘವ ಮಾತನಾಡಿ ಹೊರಟ ನಂತರ ಅರ್ಧಘಂಟೆಯ ನಂತರ ಮಾಧವ ಬಂದ. ಆಗ ಭೂಮಿ ನಿನ್ನ ಪ್ರೀತಿಯ ವಿಚಾರವೆಲ್ಲಾ ತಿಳಿಯಿತು ಎಂದಳು. "ನಾನು ತಿರಸ್ಕರಿಸುವುದಕ್ಕೆ ಕಾರಣ ಅವನ ಪ್ರೀತಿ ಎಂಬುದನ್ನು ಹೇಳಿಬಿಟ್ಟೆಯಾ?" ಎಂದನು."ಇಲ್ಲ" ಎಂದಳು ಅಷ್ಟರಲ್ಲಿ ರೂಂ
ಬಳಿ ಏನೋ ಸದ್ದಾಯಿತು. ಆ ವಿಚಾರವನ್ನೂ ಅಲ್ಲೇ ಬಿಟ್ಟು ಇಬ್ಬರೂ ಬಾಗಿಲ ಬಳಿ ಹೋದರು ಆಗ ಅಲ್ಲಿ ಯಾರೂ ಇರಲಿಲ್ಲ. ನಮ್ಮ ಭ್ರಮೆ ಇರಬೇಕು ಎಂದುಕೊಂಡ ಇಬ್ಬರೂ ಸುಮ್ಮನಾದರು.

ಇದಾದ ಒಂದು ವಾರದ ನಂತರ, ಯಾವತ್ತೂ ತಮ್ಮನೊಡನೆ ಮನಬಿಚ್ಚಿ ಮಾತನಾಡಿರದ ರಾಘವ ಮೊದಲ ಬಾರಿಗೆ ತನ್ನ ತಮ್ಮನೊಡನೆ ಮಾತನಾಡಿದ್ದ. ಅವನ ಅಂತರಂಗದ ನೋವುಗಳನ್ನು ಹಂಚಿಕೊಂಡಿದ್ದ. "ನಿನ್ನ ನೋವು ನನಗೆ ಅರ್ಥವಾಗುತ್ತದೆ ಆದರೆ ನಿನ್ನ ಭಾವನೆಗಳು, ತಳಮಳಗಳು ನನಗೆ ಅರ್ಥವಾಗುತ್ತದೆ, ಆದರೆ ಇಷ್ಟು ದಿನ ಸ್ವಾರ್ಥಿಯಾಗಿಬಿಟ್ಟಿದ್ದೆ, ನಿನ್ನ ಭಾವನೆಗಳು ನನಗೆ ಕಾಣಿಸಲೇ ಇಲ್ಲ. ಎಲ್ಲವನ್ನೂ ನನ್ನಿಂದ ಮುಚ್ಚಿಟ್ಟು ನೋವು ಪಡುವುದಾದರೂ ಏಕೆ?
ಪ್ರೀತಿಸಿದವರು ಬಿಟ್ಟು ಹೋದ ನೋವು ನನಗೆ ತಿಳಿದಿದೆ. 15 ವರ್ಷಗಳ ಪ್ರೀತಿಯನ್ನು ಕಳೆದುಕೊಂಡು ನಾನೂ ನೋವು ಪಡುತ್ತಿದ್ದೇನೆ. ನೀನಾದರೂ ಚೆನ್ನಾಗಿರು" ಎನ್ನುತ್ತಾ "ನೀನು ನಿನ್ನ ಪ್ರೀತಿಯನ್ನು ನಿರಾಕರಿಸಲು ಕಾರಣ ತಿಳಿಸು, ನಾನು ಅದನ್ನು
ಸರಿಪಡಿಸುತ್ತೇನೆ." ಎಂದನು ರಾಘವ. ಅಣ್ಣನ ವರ್ತನೆ, ಮಾತುಗಳು ಮಾಧವನಿಗೆ ಅಚ್ಚರಿಯುಂಟು ಮಾಡಿದ್ದವು. ಅಲ್ಲದೇ ಅವನ ಪ್ರೀತಿ ತಪ್ಪಿಹೋಗಲು ಕಾರಣ ತಿಳಿಯಲು
ಬಯಸಿದ್ದ. ಅದನ್ನು ಅರಿತವನಂತೆ ರಾಘವನೇ ಮುಂದುವರಿಸಿದ, "ಎಲ್ಲಾ ಹಂತದಲ್ಲಿಯೂ ಸರಿಯಾಗಿದ್ದ ನನ್ನ ಪ್ರೀತಿ ಮದುವೆಯ ನಂತರದ ನನ್ನ ಕನಸುಗಳಿಗೆ ಅಡ್ಡವಾಗಿತ್ತು. ಅಪ್ಪ, ಅಮ್ಮ, ನಿಮ್ಮಿಂದ ದೂರವಾಗಿ ಹೋಗಬೇಕೆಂಬುದು ಅವಳ ಆಸೆಯಾಗಿತ್ತು. ಪ್ರೀತಿ ಎಲ್ಲರನ್ನೂ ಒಂದುಗೂಡಿಸಬೇಕೇ ವಿನಃ ಯಾರನ್ನೂ ದೂರಗೊಳಿಸಬಾರದು. ಆದ್ದರಿಂದ ನಾನೇ ನಮ್ಮಿಬ್ಬರ ಪ್ರೀತಿಗೆ ಅಂತ್ಯ ಹಾಡಿದೆ. ಮನೆಯಲ್ಲಿ ಈಗಾಗಲೇ ಹಲವಾರು ಸಂಬಂಧಗಳನ್ನು ನೋಡುತ್ತಿದ್ದಾರೆ. ಎಲ್ಲರಿಗೂ ಇಷ್ಟವಾದವಳನ್ನೇ ನಾನು ಮದುವೆಯಾಗುವೆ. ಮದುವೆಯ ನಂತರವೂ ಪ್ರೀತಿ ಮೂಡಬಹುದು. ಆದರೆ ನಿನ್ನ ಬದುಕು ಹಾಗಾಗದಿರಲಿ. ಆ ಹುಡುಗಿಯ ಜೊತೆಗೇ ನಿನ್ನ ಮದುವೆ ಮಾಡಿಸುವೆ" ಎಂದು ಎಲ್ಲವನ್ನೂ ತಾನೇ ಮಾತನಾಡಿದ ರಾಘವ.

ಇದೆಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ ಭೂಮಿಗೆ ಯಾರ ತ್ಯಾಗ ದೊಡ್ಡದು, ಯಾರ ಪ್ರೀತಿ ಹೆಚ್ಚಿನದ್ದು ಎಂದು ತೀರ್ಮಾನಿಸಲೇ ಕಷ್ಟವಾಗುತ್ತಿತ್ತು. ಅನುರಾಗ ಗಂಡು-ಹೆಣ್ಣಿನ ಮಧ್ಯೆ ಅರಳಿದರೆ, ಪ್ರೀತಿ ಪ್ರತಿ ಮನುಷ್ಯರ ಮನವನ್ನೂ ಬೆಸೆಯುತ್ತದೆ.

ರಾಘವ ಎಲ್ಲರೂ ಒಪ್ಪಿದ ಹುಡುಗಿಯನ್ನೇ ಮದುವೆಯಾಗಿ ಪ್ರೀತಿಸತೊಡಗಿದ, ಆನಂತರ ಮಾಧವನ ಜೀವನಕ್ಕೆ ರಾಘವ ಶುಭಾಳನ್ನೇ ಜೋಡಿಯಾಗಿಸಿದ. ಆತ ಪ್ರೀತಿಸಿದ್ದ ಹುಡುಗಿ ಶುಭಾ ಎಂಬ ಸುಳಿವನ್ನೆ ಬಿಟ್ಟುಕೊಡದೆ ಅವರಿಬ್ಬರ ನಿಶ್ಚಿತಾರ್ಥವನ್ನು ಮಾಡಿ ಮುಗಿಸಿದ್ದ.

ಇವೆಲ್ಲದರ ನಡುವೆ ಯಾರಿಗೂ ಅರಿವಿಗೇ ಬಾರದ ಸಂಗತಿಯೊಂದಿತ್ತು. ರಾಘವ ಪ್ರೀತಿಸಿದ್ದ ಹುಡುಗಿ ಪ್ರತಿಮಾ ಬೇಕಂತಲೇ ಆತನಿಂದ ದೂರಾಗಿದ್ದಳು. ರಾಘವನ ಮನೆಯವರಿಗೆ ತಾನು ಅವನ ಗೆಳತಿಯಾಗಿ ಮಾತ್ರ ಗೊತ್ತು ಅವನ ಹೆಂಡತಿಯಾಗಿ ತನ್ನನ್ನು ಒಪ್ಪಿಕೊಳ್ಳುವರೋ ಇಲ್ಲವೋ ಎಂಬ ದ್ವಂದ್ವದಲ್ಲಿದ್ದಾಗ ರಾಘವನನ್ನು ಭೇಟಿ ಮಾಡಲು ಆತನ ಮನೆಗೆ ಬಂದಿದ್ದಳು. ಆ ಸಮಯದಲ್ಲಿಯೇ ಅವಳು ಭೂಮಿ ಮತ್ತು ಮಾಧವ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡಿದ್ದಳು.ತಮ್ಮ ಪ್ರೀತಿಯೇ ಅಡ್ಡಿಯಾಗಿರುವುದನ್ನು ಕೇಳಿಸಿಕೊಂಡ ಆಕೆ ಅಂದೇ ಒಂದು ನಿರ್ಧಾರಕ್ಕೆ ಬಂದಿದ್ದಳು. ಪ್ರೀತಿ ಎಂದಿಗೂ ವಿವಾಹದಲ್ಲೇ ಪರ್ಯಾವಸಾನವಾಗಬೇಕಿಲ್ಲ. ಅಲ್ಲದೇ ಒಳ್ಳೆಯ ರೀತಿಯಿಂದ ದೂರಾದರೆ ರಾಘವ ನನ್ನ ನೆನಪಿನಲ್ಲೇ ಕೊರಗುತ್ತಾನೆ. ದೂರಾಗದಿದ್ದರೆ ಮತ್ತೊಂದು ಪ್ರೀತಿ ದೂರಾಗುತ್ತದೆ.ಮತ್ತೊಬ್ಬರ ಪ್ರೀತಿಯ ಸಮಾಧಿಯ ಮೇಲೆ ತನ್ನ ಪ್ರೀತಿಯ ಸೌಧ ಕಟ್ಟುವುದಾದರೂ ಹೇಗೆ? ಎಂದು ಆಲೋಚಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಳು.

ಪ್ರೀತಿಗೆ ಕೊನೆಯಾದರೂ ಎಲ್ಲಿ? ಎಲ್ಲೋ ಹುಟ್ಟಿದ ಪ್ರೀತಿ, ಯಾರಿಗೋ ಅರ್ಪಿತವಾಗಿ ಮತ್ತಾರಲ್ಲೋ ಪರ್ಯಾವಸಾನವಾಗುತ್ತದೆ. ಅರಿವಿಗೇ ಬಾರದೆ ಬೆಸೆದುಕೊಳ್ಳುವ ನಂಟೇ ಪ್ರೀತಿಯಾ? ತ್ಯಾಗವಿಲ್ಲದ ಪ್ರೀತಿ ಇದೆಯಾ? ನನಗಂತೂ ಯಾವಾಗಲೂ ಕಾಡುವ ಪ್ರಶ್ನೆ "ಪ್ರೀತಿ ಹೀಗೇನಾ?"

-ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ