ಬುಧವಾರ, ನವೆಂಬರ್ 4, 2026

ಬೆಳಕು ಬಿತ್ತಿದವರು (ಪುಸ್ತಕ ಯಾನ - 498


ಪುಸ್ತಕದ ಶೀರ್ಷಿಕೆ : ಬೆಳಕು ಬಿತ್ತಿದವರು 

ಕೃತಿ ಪ್ರಕಾರ : ಪ್ರಬಂಧ ಸಾಹಿತ್ಯ

ಲೇಖಕರು : ನಾಡೋಜ ಪ್ರೊ. ಕಮಲಾ ಹಂಪನಾ 

ಪ್ರಕಾಶಕರು : ಸಪ್ನ ಬುಕ್ ಹೌಸ್ 

ಪ್ರಥಮ ಮುದ್ರಣ : 2022

ಪುಟಗಳು : 251

ಬೆಲೆ : 225 ರೂ. 


ಆಚಾರ್ಯತ್ರಯರು ಎಂದರೆ ಶಂಕರಾಚಾರ್ಯರು, ರಾಮಾನುಜಾಚಾರ್ಯರು ಹಾಗೂ ಮಧ್ವಾಚಾರ್ಯರರ ಕುರಿತು ಅಂದುಕೊಂಡಿದ್ವಳಿಗೆ ಇಲ್ಲಿ ಶ್ವೇತಾಂಬರ ಜೈನ ಆಚಾರ್ಯರಾದ ಕಾಲಕಾಚಾರ್ಯ, ಹರಿಭದ್ರಸೂರಿ ಹಾಗೂ ಹೇಮಚಂದ್ರಾಚಾರ್ಯರ ಕುರಿತ ಪರಿಚಯವಾಯಿತು.   ಪ್ರಮುಖವಾಗಿ ಆಚಾರ್ಯ ತ್ರಯರು ಮತ್ತು ಸೋಮದೇವಸೂರಿ ಅವರ ಜೀವನದ ಜೊತೆಗೆ ಮಹಿಳಾ ಸಂವೇದನೆಯ ಕುರಿತು ಇಲ್ಲಿನ ಮಾಹಿತಿಗಳು ಕೇಂದ್ರೀಕೃತವಾಗಿವೆ. ಈ ಪುಸ್ತಕದಲ್ಲಿ ಹಲವಾರು ಮಾಹಿತಿಯುತ ಹಾಗೂ ಕುತೂಹಲಕಾರಿ ವಿಚಾರಗಳಿವೆ. ಕೆಲವೊಂದನ್ನು ಮಾತ್ರ ನಾನಿಲ್ಲಿ ಪ್ರಸ್ತಾಪಿಸುವೆ. 


ಪುಸ್ತಕದಲ್ಲಿ ನಾಲ್ಕು ಭಾಗಗಳಿವೆ. 

*********************************

ಭಾಗ-1 : ಆಚಾರ್ಯತ್ರಯರು ಮತ್ತು ಸೋಮದೇವಸೂರಿ 


ಕಾಲಕಾಚಾರ್ಯರು : ಕಾಲಕಾಚಾರ್ಯರ ಕಾಲಘಟ್ಟ ಹಾಗೂ ಅವರ ಪೂರ್ವಜೀವನದ ಕುರಿತು ಹೇಳುತ್ತಲೇ ಅವರ ತಂಗಿ ಸರಸ್ವತಿ ಕಂತಿಯ ಕುರಿತು ಪ್ರಸ್ತಾಪಿಸುತ್ತಾರೆ. ಜೈನ ಧರ್ಮದಲ್ಲಿ ಸನ್ಯಾಸಿಯರನ್ನು ಅಜ್ಜಿಕೆ, ಕಂತಿ, ಸಾಧ್ವಿ ಎಂದು ಕರೆಯುತ್ತಾರೆ. ಸರಸ್ವತಿ ಕಂತಿಯರ ಜೀವನ ನಡೆಸುತ್ತಿರುವಾಗ ಉಜ್ಜಯಿನಿಯ ರಾಜ ಗರ್ದಭಿಲ್ಲ ಆಕೆಯನ್ನು ಮೋಹಿಸಿ, ಅಪಹರಿಸಿ ತನ್ನ ಅಂತಃಪುರದಲ್ಲಿರಿಸಿಕೊಳ್ಳುತ್ತಾನೆ. ಕಾಲಕಾಚಾರ್ಯರು ಎಷ್ಟೇ ತಿಳಿ ಹೇಳಿದರೂ ಅದು ಪ್ರಯೋಜನಕ್ಕೆ ಬಾರದೆ ಶಕ/ಶಾಹಿರಾಜನ ಬಳಿ ಸಹಾಯ ಯಾಚಿಸುತ್ತಾರೆ. ಸಾಲದೊರೆ ಯುದ್ಧ ಮಾಡಿ ಸರಸ್ವತಿಯನ್ನು ಬಿಡುಗಡೆಗೊಳಿಸುತ್ತಾರೆ. ಆದರೆ, ಆಕೆಯ ಮುಂದಿನ ಬದುಕು..?

ಆಕೆಯನ್ನು ಕೇವಲ ತಂಗಿಯಾಗಿ ಪರಿಗಣಿಸದೆ ಅತ್ಯಾಚಾರಕ್ಕೊಳಗಾದ ನೋವಿನಲ್ಲಿರುವ ಅಂತಹ ಎಲ್ಲ ಹೆಣ್ಣುಗಳ ಪ್ರತಿನಿಧಿಯಾಗಿ ಕಂಡು ಮತ್ತೆ ಕಂತಿಯ ದೊರೆಯುವಂತೆ ಮಾಡುವ ಪ್ರಸಂಗ ಇಲ್ಲಿದೆ.


ಹರಿಭದ್ರಸೂರಿ : ಹರಿಭದ್ರಸೂರಿಯ ಕಾಲದಲ್ಲಿ ವಿದ್ವತ್ ಪ್ರಭೆಯಿಂದ ಬೆಳಗುತ್ತಿರುವ ಸ್ತ್ರೀಯರಿದ್ದರು. ಮಹತ್ತರು ಎನ್ನುವ 7 ಜನ ವಿದುಷಿಯರಲ್ಲಿ ಕಿರಿಯವಳು ಯಾಕಿನಿ ಮಹತ್ತರ. ವಿದ್ವತ್ ಸಮಾಜಕ್ಕೆ 'ಯಾರು ತನ್ನನ್ನು ವಾದದಲ್ಲಿ ಸೋಲಿಸುವರೋ ಮತ್ತು ಯಾರ ಪ್ರವಚನವನ್ನು ಅರ್ಥ ಮಾಡಿಕೊಂಡು ವಿವರಿಸಲು ತನಗೆ ಅಸಾಧ್ಯವಾಗುವುದೋ ಅಂತಹವರನ್ನು ನಾನು ಗುರುವೆಂದು ಸ್ವೀಕರಿಸುತ್ತೇನೆ.' ಎಂದು ಹರಿಭದ್ರಸೂರಿ ಎಸೆದ ಸವಾಲನ್ನು ಸ್ವೀಕರಿಸಿದ ಯಾಕಿನಿ ಅವರನ್ನು ಸೋಲಿಸಿದಳು ಸಹ. ಆಕೆಯನ್ನು ಗುರುವಂತೆಯೂ, ತಾಯಾಗಿಯೂ ಕಂಡು 'ಯಾಕಿನಿ ಮಹತ್ತರಸೂನು' ಎಂದು ತಮ್ಮನ್ನು ತಾವು ಕರೆದುಕೊಳ್ಳುತ್ತಾರೆ. ಶ್ವೇತಂಬರ ರಲ್ಲಿ ಹೆಣ್ಣು ಜನ್ಮದಲ್ಲಿಯೇ ತೀರ್ಥಂಕರರಾಗಬಹುದು ಹಾಗೂ ಮೋಕ್ಷವನ್ನು ಪಡೆಯಬಹುದು ಎಂದು ಮಲ್ಲಿಕಾಳ ವಿಚಾರವನ್ನು ಪ್ರಸ್ತಾಪಿಸುತ್ತಾರೆ.


ಹೇಮಚಂದ್ರ ಆಚಾರ್ಯ : ಕಲಿಕಾಲ ಸರ್ವಜ್ಞ, ಗುಜರಾತಿ ಭಾಷೆಯ ಪಿತಾಮಹ ಎಂದೇ ಖ್ಯಾತರಾಗಿರುವ ಇವರು ಆಚಾರ್ಯ ಸ್ಥಾನಕ್ಕೆ ಬರುವುದರ ಮೊದಲು ಬಾಲ್ಯದಲ್ಲಿ ನಡೆದ ಒಂದು ಘಟನೆ ಕಾರಣವಾಗುತ್ತದೆ. ತಾಯಿಯ ಜೊತೆ ಗುರುಗಳ ಆಗಮನಕ್ಕೆ ಕಾಯುತ್ತಿರುವಾಗ ಗುರುಗಳಿಗಾಗಿ ಹಾಕಿದ ಉನ್ನತ ಪೀಠದ ಮೇಲೆ ಹೋಗಿ ಕುಳಿತು ಎಷ್ಟು ಕರೆದರೂ ಬರದೆ ಗುರುಗಳ ಕೃಪೆಗೆ ಭಾಗಿಯಾದಾಗ.. ತಾಯಿ ಪಾಹಿನಿ ಯಾರ ಬಳಿಯೂ ಏನು ಕೇಳದ ಆಚಾರ್ಯರು ತನ್ನ ಮಗನನ್ನು ಕೇಳಿದಾಗ ದುಗುಡವನ್ನು ಬದಿಗಿಟ್ಟು ಮಗುವನ್ನು ಗುರುಗಳಿಗೆ ಒಪ್ಪಿಸುತ್ತಾರೆ. ಮುಂದೆ ಇವರೇ ಹೇಮಚಂದ್ರಚಾರ್ಯರಾಗಿ ವಿದ್ವಾಂಸರಾಗುತ್ತಾರೆ.


ಸೋಮದೇವಸೂರಿ : ನೀತಿ ಕಾವ್ಯಾಮೃತ ಎಂಬ ಅಪೂರ್ವ ಕೃತಿ ಬರೆದ ನೀತಿಶಾಸ್ತ್ರಜ್ಞರೂ ಆಗಿದ್ದ ಸೋಮದೇವಸೂರಿ ಹೆಣ್ಣು-ಗಂಡಿನ ಮದುವೆ ವಯಸ್ಸನ್ನು ಹೆಣ್ಣಿಗೆ 12 ಮತ್ತು ಗಂಡಿಗೆ 16 ಎಂದು.. ಅದುವರೆಗೂ ಈತ ಎಂಟು ಹಾಗೂ ಹತ್ತನೇ ವಯಸ್ಸನ್ನು ಮುಂದೂಡಿರುವುದು ಪ್ರಬಲ ಕ್ರಾಂತಿಕಾರಿ ನಡೆಯೇ ಆಗಿದೆ.


*********************************

ಭಾಗ - 2 : ಕೆಲವು ಸಾಂಗತ್ಯ ಕವಿಗಳು


ಆದಿಯಪ್ಪ : ಜೈನ ಕವಿ ಆದಿಯಪ್ಪ ಧನ್ಯಕುಮಾರ ಚರಿತೆ ಮತ್ತು ಪಟಹಸ್ತನ ಚರಿತೆ ಎಂಬ ಎರಡು ಕಾವ್ಯಗಳನ್ನು ರಚಿಸಿದಕ್ಕೆ ಪ್ರಮಾಣಗಳನ್ನು ನೀಡುತ್ತಾ ಎರಡರಲ್ಲಿಯೂ ಇರುವ ಪದ್ಯಗಳನ್ನು ಉದಾಹರಿಸಿ, ಅವರ ಕಾಲದ ವಿಚಾರವನ್ನು ಪ್ರಸ್ತಾಪಿಸುತ್ತಾರೆ. ಅವರು ಆಶ್ರಯ ಪಡೆದದ್ದು ನಗಿರೆ ರಾಜ್ಯದ ರಾಜಧಾನಿ ಗೇರುಸೊಪ್ಪೆಯಲ್ಲಿ ಹಾಗೂ ನಗಿರೆ ಅರಸರು ತುಳುನಾಡಿನ ವ್ಯಾಪ್ತಿಗೆ ಒಳಪಟ್ಟಿದ್ದವರು ಎಂದು ಹೇಳುತ್ತಾರೆ.


ಆದಿದೇವ : ಆದಿಯಪ್ಪ ಹಾಗೂ ಆದಿದೇವ ಈ ಇಬ್ಬರಿಗೂ 40 ವರ್ಷಗಳ ಅಂತರವಿದೆ. ಆದಿದೇವನನ್ನು ಮೈಸೂರು ಜಿಲ್ಲೆಯ ಕೆಲಸೂರಿನ ಕವಿಯೆಂದೇ ಪರಿಗಣಿಸಬಹುದು ಎನ್ನುತ್ತಾ ಇವರ ಏಕೈಕ ಉಪಲಬ್ಧ ಕಾವ್ಯ ಸುಕುಮಾರ ಚರಿತೆಯ ಕುರಿತು ಹೇಳುತ್ತಾರೆ. ಈ ಕೃತಿಯಲ್ಲಿ ಸಾಂಗತ್ಯದ ಓಟ ಹಿತವಾಗಿರುವಂತೆ ಈತನ ರಗಳೆಯ ಲಯವು ಆಕರ್ಷಕವಾಗಿದೆ ಎನ್ನುತ್ತಾರೆ.


ನೇಮಣ್ಣಕವಿ (ನೇಮಿವ್ರತಿ) : ನೇಮಣ್ಣ ಕವಿ ಶೀಲಾಬ್ಧಿ ಎಂಬ ಜೈನಾಚಾರ್ಯನ ಶಿಷ್ಯ. ಜ್ಞಾನಭಸ್ತರ ಚರಿತೆ ಮತ್ತು ಸುವಿಚಾರ ಚರಿತೆ ಇವರ ಕಾವ್ಯಗಳು. ಇವರು ಮೂಡಬಿದಿರೆಯ ಮಹಾಕವಿ ರತ್ನಾಕರವರ್ಣಿಯ ಪ್ರಭಾವ ಪಡೆದಿದ್ದಾರೆನ್ನುತ್ತಾರೆ.


ಶ್ರುತಕೀರ್ತಿ : ವಿಜಯಕುಮಾರಿ ಚರಿತೆ ಎಂಬ ಸಾಂಗತ್ಯ ಕಾವ್ಯವನ್ನು ರಚಿಸಿರುವ ಇವರು ಕನಕಗಿರಿಯವರು. ಕಾಮನ ಗೆಲಿದ ಸಂಯಮಿ, ಧರ್ಮಿಷ್ಣು, ಶ್ರದ್ಧಾಭಕ್ತಿಯುಳ್ಳ ಹಾಗೂ ಆದರ್ಶ ಶ್ರಾವಕಿ(ಗೃಹಿಣಿ)ಯಾಗಿ ಜೀವನವನ್ನು ರೂಪಿಸಿಕೊಂಡ ವಿಜಯಕುಮಾರಿಯ ಚರಿತೆಯನ್ನು ಒಳಗೊಂಡ ಕಾವ್ಯವಿದು.


ಶಾಂತವೀರ : ಈತನ ಕೃತಿ ವೀರಭದ್ರಲೀಲ ಕಾವ್ಯದ ವಸ್ತು ವೀರಭದ್ರನಿಗೆ ಸಂಬಂಧಿಸಿದೆ. ದಕ್ಷ ಯಜ್ಞಕ್ಕೆ ಈಶ್ವರನನ್ನು ಕರೆಯದೆಯೇ ಯಾಗ ಮಾಡಲು.. ಮುಂದೆ ಇವನು ವೀರಭದ್ರನಾಗಿ ಗೆದ್ದ ಕಥೆ ಇದರಲ್ಲಿದೆ.


ಶಾಂತಕವಿ : ಈ ಲಿಪಿಕಾರ ಹೆಚ್ಚು ಓದಿದವನಲ್ಲವಾದ್ದರಿಂದ ಕೆಲವು ಅಕ್ಷರ ದೋಷಗಳಿದ್ದರೂ.. ಈ ಪದ್ಯಗಳ ಬಂಧ ಲಲಿತವಾಗಿದೆ ಎನ್ನುತ್ತಾರೆ. ಸತ್ಯೇಂದ್ರ ಚೋಳನ ಸಾಂಗತ್ಯ ಎಂಬ ಒಂಬತ್ತು ಸಂಧಿಯ ಕಾವ್ಯವನ್ನು ರಚಿಸಿದ್ದಾರೆ.


ಪಾಯಣ ವ್ರತಿ : 55 ವರ್ಷಗಳವರೆಗೂ ಶುದ್ಧ ಅವಿವಾಹಿತ ಬ್ರಹ್ಮಚಾರಿಯಾಗಿದ್ದು ಮುಂದೆ ಲಕ್ಷ್ಮಿಸೇನ ಮುನಿಯಿಂದ ದೀಕ್ಷೆ ಪಡೆದು ಸನ್ಯಾಸಿಯಾಗುತ್ತಾರೆ. ಇವರ ಕಾವ್ಯ ಪುರಾಣ ಪಾರಾಯಣ ದಾಟಿಯಲ್ಲಿ ನಡೆಯುತ್ತದೆ. ಇವರ ಕೃತಿ ಸಮ್ಯಕ್ತ್ವ ಕೌಮುದಿ. ಈ ಕಾವ್ಯದ ಕಥಾವಸ್ತು ದಾನ, ಪೂಜೆ, ಉಪವಾಸಗಳ ಮಹತ್ವವನ್ನು ಮನದಟ್ಟು ಮಾಡಿಸಿ ಧರ್ಮಾನುರಾಗ ಮೂಡಿಸುವುದು.


ಓದುವ ಗಿರಿಯ : ಹರಿಚಂದ್ರ ಸಾಂಗತ್ಯ ಮತ್ತು ಸಾನಂದ ಗಣೇಶ ಎಂಬ ಎರಡು ಕಾವ್ಯಗಳನ್ನು ರಚಿಸಿದ್ದಾರೆ. ಇವರು ರಾಘವಾಂಕನ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂಬ ಅಭಿಪ್ರಾಯವನ್ನು ಹೇಳುತ್ತಾರೆ. ಸ್ಕಂದ ಪುರಾಣದಲ್ಲಿ ನಂದಿ ಸನತ್ ಕುಮಾರನಿಗೆ ಹೇಳಿದ ಚರಿತೆ ಸಾನಂದ ಚರಿತ್ರೆಯಾಗಿ ಇಲ್ಲಿ ಹೇಳಲ್ಪಟ್ಟಿದೆ


ಬ್ರಹ್ಮಕವಿ : ಬ್ರಹ್ಮಕವಿ ಕುಂತಳ ದೇಶದವನು ಅಂದರೆ ತುಳುನಾಡಿನವನು. ಇವರ ವಜ್ರಕುಮಾರ ಚರಿತೆ, ಜೈನ ವಾಜ್ಞಯದಲ್ಲಿ ಬರುವ ವಜ್ರ ಕುಮಾರನ ಜನಪದ ಕಥೆ.


ಪದ್ಮರಸ : ಪದ್ಮರಸ ಕವಿ ಭಟ್ಟಾಕಲಂಕನ ಶಿಷ್ಯ. ಈತ ಶೃಂಗಾರ ಕಥೆ ಎಂಬ ಕಾವ್ಯ ರಚಿಸಿದ್ದಾನೆ. ಈತನ ಕಾವ್ಯ ಶೈಲಿ ಹಾಗೂ ವರ್ಣನೆಗಳನ್ನು ಬೇರೆ ಕವಿಗಳೊಂದಿಗೆ ಹೋಲಿಕೆ ಮಾಡುತ್ತಾ ಹಲವಾರು ಸಾಲುಗಳನ್ನು ಉಲ್ಲೇಖಿಸುತ್ತಾರೆ.


ದೇವಪ್ಪ ಕವಿ : ಜೈನಕವಿಯಾದ ಈತ ರಾಮ ವಿಜಯ ಎಂಬ ಕಾವ್ಯ ರಚಿಸಿದ್ದಾನೆ. ದೇವಪ್ಪ ಕವಿಯ ರಾಮ ವಿಜಯ ಕಾವ್ಯದ ಹಲವಾರು ವೈಶಿಷ್ಟ್ಯಗಳನ್ನು ಹೇಳುವಾಗ ರಾಮಾಯಣವನ್ನು ಬೇರೊಂದು ಬಗೆಯಲ್ಲಿ ಕೆಲವು ಹೋಲಿಕೆಗಳನ್ನು ಮಾತ್ರವೇ ಸಮೀಕರಿಸುತ್ತಾ ರಾಮ ವಿಜಯದ ಕುರಿತು ಆಸಕ್ತಿಕರ ವಿಚಾರಗಳನ್ನು ಹೇಳುತ್ತಾರೆ.


ಎಲ್ಲಾ ಕವಿಗಳ ಸಾಂಗತ್ಯ, ಷಟ್ಪದಿ ಸಾಲುಗಳು ಉಲ್ಲೇಖವಾಗಿವೆ. ಹಳೆಗನ್ನಡದಲ್ಲಿ ಇರುವ ಇವುಗಳನ್ನು ಓದಿ ಅರ್ಥೈಸಿಕೊಂಡು ಸಾಗುವಾಗ ಸಮಯ ಬೇಕಾಗುತ್ತದೆ. ಹೆಚ್ಚಿನ ಸಾಲುಗಳ ಅರ್ಥವನ್ನು ಅರ್ಥೈಸಿರುವರಾದರೂ.. ಕಾವ್ಯಭಾಗಕ್ಕೆ ಮತ್ತಷ್ಟು ವಿಶ್ಲೇಷಣೆಯಿದ್ದರೆ ಚೆಂದವಿತ್ತು ಎನ್ನಿಸಿತು. ಸಾಕಷ್ಟು ಆಕರಗಳಿಂದ ಮಾಹಿತಿ ಸಂಗ್ರಹಿಸಿರುವ ಇವರು ಪ್ರತಿ ಅಧ್ಯಾಯದ ಕೊನೆಯಲ್ಲಿ ಆಕರಗಳನ್ನು ಉಲ್ಲೇಖಿಸಿದ್ದಾರೆ.


*********************************

ಭಾಗ - 3 : ಪುಸ್ತಕ ವಿಮರ್ಶೆ ಮತ್ತು ಪ್ರಬಂಧಗಳು


ಪುಸ್ತಕಗಳು, ಲೇಖಕರು, ಓದಿನ ವಿಚಾರಗಳು ವೈಯಕ್ತಿಕವಾಗಿ ಯಾವ ರೀತಿಯಲ್ಲಿ ಕನೆಕ್ಟ್ ಆಗಿದೆ ಎಂಬುದನ್ನು ಹೇಳುತ್ತಾರೆ.


ಡಾ. ಜಯಪದ್ಮಕುಮಾರ್ ಅವರು ಮಹಾಮುನಿ ಪುಣ್ಯಸಾಗರ ಮಹಾರಾಜರ ಜೀವನಗಾಥೆಯನ್ನು  'ಪುಣ್ಯಗಾಥೆ' ಎಂಬ ಕೃತಿಯಾಗಿಸಿದ್ದು ಹಾಗೂ ಮುನಿಗಳ ಸಮಾಜ ಸೇವೆಯನ್ನು ಹೇಳುತ್ತಾರೆ.


ಮಹಾಸತಿಯಾದ ತಿಮ್ಮಮ್ಮನ ಕಥೆ,ಮಣ್ಣಿನ ವಾಸನೆಯ ಶುದ್ಧ ಗೀತೆಗಳ ಗುಚ್ಚ ಕಟ್ಟಿಕೊಟ್ಟ ಕ್ರೈಸ್ತ ಜನಪದ ಗೀತೆಗಳು, ಕೆರೆಯ ಹಾರದಂತಹ ಹೊನ್ನಮ್ಮನ ಕಥೆ, ಜಾನಪದೀಯ ಕಥಾನಕಕ್ಕೆ ವೈಚಾರಿಕ ಅರಿವು ಮೂಡಿಸುತ್ತಿರುವ ಬಿ ಎಸ್ ತಲ್ವಾಡಿಯವರ ಕುರಿತು ಹೇಳುತ್ತಾರೆ.


24 ಜೈನ ತೀರ್ಥಂಕರರಲ್ಲಿ ಮೊದಲನೆಯವರಾದ ವೃಷಭನಾಥರ ತಾಯಿ ಮರುದೇವಿ, ಹೆಣ್ಣುಮಕ್ಕಳಾದ ಬ್ರಾಹ್ಮಿ ಮತ್ತು ಸುಂದರಿಯರ ಕುರಿತ ಕಥೆಯೊಡನೆ.. ಶ್ವೇತಂಬರರಲ್ಲಿ ಸ್ತ್ರೀ ಕೂಡ ಮೋಕ್ಷಕ್ಕೆ ಅರ್ಹಳೆಂದು ಜೊತೆಗೆ ವಸ್ತ್ರಧಾರಣೆ ಅವರಿಗೆ ಅಡ್ಡಿಯಾಗದ ಕುರಿತಾಗಿಯೂ ಹೇಳುತ್ತಾರೆ.


ತಮ್ಮ ಪತಿ ನಾಡೋಜ ಡಾ. ಹಂಪನಾ ಅದರ ಜೊತೆಗೆ ಬಾಂಧವ್ಯ ಒಡನಾಟ, ಇಬ್ಬರ ಕಾರ್ಯಕ್ಷೇತ್ರಗಳು, ವೈವಾಹಿಕ ಬದುಕು ಹೀಗೆ ಎಲ್ಲವನ್ನೂ ಆಪ್ತಭಾವದಿಂದ ಕಟ್ಟಿಕೊಟ್ಟಿದ್ದಾರೆ. ಆಧುನಿಕ ವಚನಗಳೊಂದಿಗೆ ಈ ಲೇಖನವಿದೆ.


ಒಂದು ಆಧುನಿಕ ವಚನವನ್ನು ನೋಡುವುದಾದರೆ..

ಅಕ್ಷತೆ ಸುರಿವ ಕೈಯಲೇ ಸೀಮೆಎಣ್ಣೆ ಸುರಿವರಯ್ಯ

ಅರಿಸಿನ ಹಚ್ಚಿದ ಕೈಯಲೇ ಬೆಂಕಿ ಹಚ್ಚಿ ಸುಡುವರಯ್ಯ

ವಧು ಮಾಡಿ ಮನೆ ತುಂಬಿಸಿಕೊಂಡವರೆ

ಹೆಣ ಮಾಡಿ ಆಚೆ ಸಾಗಿಸುವರಯ್ಯಾ ಕಮಲಾಪ್ರಿಯ


ಡಾ. ಬಿ. ಆರ್ ಅಂಬೇಡ್ಕರ್ ಅವರ ಸಮಗ್ರ ಸಂಪುಟಗಳು ಮಾಲೆಯಲ್ಲಿ ಲೇಖನ ಬರೆದದ್ದು.. ಇವರ ವಿದ್ಯಾರ್ಥಿನಿ ಮೋಟಮ್ಮನವರ ರಾಜಕೀಯ ಹಾಗೂ ಸಾಹಿತ್ಯಿಕ ಸಾಧನೆ ಎರಡರ ಕುರಿತೂ ಇಲ್ಲಿ ಪ್ರಬಂಧಗಳಿವೆ.


*********************************

ಭಾಗ - 4 : ವ್ಯಕ್ತಿ ಚಿತ್ರಗಳು


ವಿ. ಕೃ. ಗೋಕಾಕರ ಒಡನಾಟದ ಜೊತೆಗೆ ಶಾರದಾ ಕೋಕಾಕರಲ್ಲಿರುವ ಕವಿ, ಸಾಹಿತಿ ಹಾಗೂ ವಿಮರ್ಶಕಿಯ ಕುರಿತು ಬೆಳಕು ಚೆಲ್ಲುತ್ತಾರೆ. ಇಡೀ ಲೇಖನದಲ್ಲಿ ಶಾರದಾ ಅವರ ತೂಕವೇ ಹೆಚ್ಚು ಎನ್ನಿಸಿತು. ಗೋಕಾಕರು ಬರೆದ ವನಮಾಲೆಯ ಒಲವಿನ ಓಲೆಗಳು ಕುರಿತು ಆಸಕ್ತಿ ಮೂಡಿತು.


ಇವರ ಸೋದರ ಮಾವನಾದ ಡಾ. ಬಿ ದೇವೇಂದ್ರಪ್ಪನವರು ಜಲ ತರಂಗ ವಾದಕರು ಹಾಗೂ ಮೈಸೂರಿನ ಅರಮನೆ ವಿದ್ವಾಂಸರಾಗಿದವರು ಸಹ. ಅವರ ಮನೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಆಶ್ರಯ ನೀಡುವುದರ ಜೊತೆಗೆ ಅದ್ಭುತವಾಗಿ ಉಚಿತ ಸಂಗೀತ ಪಾಠವನ್ನು ಕಲಿಸಿಕೊಡುವ ಅವರ ಉದಾರತೆಯನ್ನು ಇಲ್ಲಿ ಹೇಳುತ್ತಾರೆ. 


ಅವೆನ್ಯೂ ರೋಡಿನಲ್ಲಿ ಹಳೆಯ ಪುಸ್ತಕಗಳನ್ನು ವ್ಯವಸ್ಥಿತವಾಗಿ ಮಾರಾಟ ಮಾಡುತ್ತಿದ್ದ ಹಾಗೂ ಆ ದಿನಗಳಿಂದಲೇ ಪರಿಚಯವಿದ್ದ ಸುರೇಶ್ ಷಾ ಏಷ್ಯಾದಲ್ಲಿ ಹೆಸರುವಾಸಿಯಾದ ಸಪ್ನ ಬುಕ್ ಹೌಸ್ ತೆರೆದ ಹಾಗೂ ತ್ರಿವಿಕ್ರಮರಾಗಿ ಬೆಳೆದ ಬದುಕಿನಗಾಥೆ ನಿಜಕ್ಕೂ ಪ್ರೇರಣದಾಯಕ. 


ಶಾಂತತೆಯಿಂದಲೇ ನಮ್ಮ ಮನಸ್ಸಿನಲ್ಲಿ ಶಾಂತದೇವಿ ಕಣವಿಯವರನ್ನು ಕೂರುವಂತೆ ಮಾಡುವ, ಮಲ್ಲೇಪುರಂ ಅವರ ಸಾಹಿತಿಕ ಸಾಧನೆ ಹಾಗೂ ಅವರ ಬದುಕನ್ನು ಕಟ್ಟಿಕೊಡುವ, ದಾನ ಚಿಂತಾಮಣಿ ಅತ್ತಿಮಬ್ಬೆಯ ಬದುಕಿನ ಕುರಿತು ಬೆಳಕು ಚೆಲ್ಲುವ, ಮೂರ್ತಿಯವರ ತಾಯಿ ತಿಮ್ಮಕ್ಕ ಎಂಬುವವರ ಕುರಿತು ಬರೆದಿರುವ ವ್ಯಕ್ತಿ ಚಿತ್ರಣಗಳು ಸಹ ಆಪ್ತವಾಗುತ್ತವೆ.


ಇದುವರೆಗೂ ಓದಿದ ಪುಸ್ತಕಗಳಿಗಿಂತ ವಿಭಿನ್ನವಾಗಿ ಕಂಡುಬಂದ ಪ್ರಬಂಧ ಸಂಕಲನ. ಮಾಹಿತಿಯುತ ಪುಸ್ತಕವಾಗಿರುವುದರಿಂದ ಮತ್ತೆ ಮತ್ತೆ ಓದಬೇಕಿದೆ ಹಾಗೂ ಇದನ್ನು ಜೀರ್ಣಿಸಿಕೊಳ್ಳುವಲ್ಲಿ ಮತ್ತಷ್ಟು ಓದು ಬೇಕಿದೆ ಎನ್ನಿಸಿತು. ಕನ್ನಡ ಕಾವ್ಯ ಹಾಗೂ ಜೈನ ಧರ್ಮದ ಕುರಿತ ಆಸಕ್ತರು ತಪ್ಪದೇ ಓದಿ ನೋಡಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ