ಈಗ ನಾಲ್ಕಾರು ದಿನಗಳಿಂದ ನೇರಳೆ ಹಣ್ಣಿನ ಸುದ್ದಿ ಕೇಳುತ್ತಾ ಅಥವಾ ಓದುತ್ತಾ ಇದ್ದೇವೆ. ನೇರಳೆ ಹೆಚ್ಚು ಫಲವಾಗಿ, ಉದುರಿದ ವರ್ಷ ಭೀಕರ ಬರಗಾಲ ಎನ್ನುವ ಹಿರಿಯರ ಮಾತನ್ನು ನೆನಪಿಸಿಕೊಳ್ಳುತ್ತಿದ್ದೇವೆ. ವೈಜ್ಞಾನಿಕವಾಗಿ ಇದನ್ನು ಸ್ಟ್ರೆಸ್ ಫ್ರೂಟಿಂಗ್ ಎಂದು ಕರೆಯುವ ವಿಚಾರದ ಕುರಿತು ಹಾಗೂ ಇದು ಮರದ ಸುಸೈಡ್ ಫ್ರೂಟಿಂಗ್ ಅಂದರೆ ತನ್ನನ್ನು ಉಳಿಸಿಕೊಳ್ಳುವ ಸ್ವಾರ್ಥದ ಬದಲಾಗಿ.. ತನ್ನ ಸಂತತಿ ಉಳಿಯಬೇಕೆಂದು ಹೆಚ್ಚು ಫಲವನ್ನು ಕೊಡುತ್ತಾ ಹೋಗುತ್ತದೆ. ಮುಂದೆ, ಈ ಫಲದ ಬೀಜಗಳೇ ಆ ಹಣ್ಣಿನ ಸಂತತಿಯನ್ನು ಉಳಿಸಿಕೊಂಡು ಹೋಗುತ್ತವೆ. ಇದಿಷ್ಟು ಎಲ್ಲರಿಗೂ ಗೊತ್ತಿರುವ ವಿಚಾರದ ಪುಟ್ಟ ಸಾರಾಂಶ.
ನನಗೊಂದು ಸಂದೇಹ ಬಂದಿತು. ಸ್ಟ್ರೆಸ್ ಫ್ರೂಟಿಂಗ್ ಹಾಗೂ ಸುಸೈಡ್ ಫ್ರೂಟಿಂಗ್ ನೇರಳೆ ಮರ ಮಾತ್ರವಾ..?
ಈ ಕುರಿತು ಹುಡುಕಲು ಹೊರಟ ನನಗೆ ಕೆಲ ಅಚ್ಚರಿಯ ವಿಚಾರಗಳು ತಿಳಿದವು.
ಯಾವಾಗ ಒಂದು ಮರಕ್ಕೆ ತಾನು ಸಾಯುತ್ತಿದ್ದೇನೆ ಅಥವಾ ತೀವ್ರ ಅಪಾಯ ಎದುರಾಗಿದೆ ಎನ್ನುವ ಮುನ್ಸೂಚನೆ ಸಿಗುತ್ತದೆಯೋ.. ಆಗ ತನ್ನ ವಂಶವನ್ನು ಮುಂದಕ್ಕೆ ಕೊಂಡೊಯ್ಯಲು, ಬೀಜಗಳನ್ನು ಸೃಷ್ಟಿಸಲು ತನ್ನಲಿರುವ ಕೊನೆಯ ಹನಿ ಶಕ್ತಿಯನ್ನು ಬಳಸಿ ಅತಿಯಾಗಿ ಹೂವು, ಹಣ್ಣುಗಳನ್ನು ಬಿಡುತ್ತದೆ. ಸಾಮಾನ್ಯವಾಗಿ ಇಂತಹ ಪ್ರಕ್ರಿಯೆಯನ್ನು ದೀರ್ಘಕಾಲದ ಬಹುವಾರ್ಷಿಕ ಹಣ್ಣಿನ ಮರಗಳಲ್ಲಿ ಕಾಣಬಹುದು. ಅದರಲ್ಲಿ ನೇರಳೆಯೂ ಒಂದು.
ಮಾವಿನ ಮರದಲ್ಲಿಯೂ ಇಂತಹ ಸ್ಟ್ರೆಸ್ ಫ್ರೂಟಿಂಗ್ ಅನ್ನು ಕಾಣಬಹುದು. ದೀರ್ಘ ಬರಗಾಲ ಬಂದಾಗ ಅಥವಾ ಮರದ ಬೇರುಗಳಿಗೆ ತೀವ್ರ ಹಾನಿಯಾದಾಗ ಮಾವಿನ ಮರ ಆ ವರ್ಷ ಅತಿ ಹೆಚ್ಚು ಹೂ ಬಿಡುತ್ತದೆ. "ಮರ ಸಾಯುತ್ತೇನೋ.. ವಿಪರೀತ ಕಾಯಿ ಕಚ್ಚಿದೆ" ಎನ್ನುವುದನ್ನು ಕೇಳಬಹುದು.
ಮೂಸಂಬಿ, ನಿಂಬೆ, ಕಿತ್ತಳೆ ಹಾಗೂ ಆ ಜಾತಿಯ ಗಿಡಗಳು ಸಹ ಇಂಥದೇ ವರ್ತನೆಯನ್ನು ತೋರುತ್ತವೆ. ದೀರ್ಘಕಾಲ ನೀರು ಸಿಗದಿದ್ದಾಗ ಅಥವಾ ಬೇರಿಗೆ ಶಿಲೀಂದ್ರ ರೋಗ ತಗುಲಿದಾಗ ಎಲೆಗಳಿಗಿಂತಲೂ ಬಿಳಿಯ ಹೂ ಹೆಚ್ಚಾಗಿ ಕಾಣಸಿಗುತ್ತವೆ. ಇದನ್ನು ತಮ್ಮ ಅನುಕೂಲಕ್ಕೆ ಬಳಸುವವರೂ ಇದ್ದಾರೆ. ಉದ್ದೇಶಪೂರ್ವಕವಾಗಿಯೇ ಇಂತಹ ಗಿಡಗಳಿಗೆ ಕೆಲವು ದಿನ ನೀರು ನಿಲ್ಲಿಸಿ, ಅಂದರೆ 'ವಾಟರ್ ಸ್ಟ್ರೆಸ್' ಕೊಟ್ಟು ಇಳುವರಿ ಪಡೆಯುವ ಪದ್ಧತಿಯೂ ರೂಢಿಯಲ್ಲಿದೆ.
ಸೀಬೆ ಮರ ಒಣಗುವ ಹಂತಕ್ಕೆ ತಲುಪಿದಾಗ ಅಥವಾ ಅದರ ಕಾಂಡಕ್ಕೆ ತೀವ್ರ ಗಾಯಗಳಾದಾಗ ಮೂರು ಪಟ್ಟು ಹೆಚ್ಚು ಕಾಯಿಗಳನ್ನು ಬಿಡುತ್ತದೆ. ತೆಂಗಿನ ಮರವೂ ಇಂತಹದ್ದೇ ವರ್ತನೆ ತೋರುತ್ತದೆ. ತೀವ್ರ ಮಿಂಚು ತಗುಲಿದಾಗ ಇನ್ನೇನು ಕೆಲವೇ ತಿಂಗಳು ಸಾಯುತ್ತದೆ ಎನ್ನುವ ಸಂದರ್ಭದಲ್ಲಿ ತನ್ನ ಜೀವಿತದ ಕೊನೆಯ ಹಂತದಲ್ಲಿ ಹೆಚ್ಚು ಹೊಂಬಾಳೆಗಳನ್ನು ಬಿಡುತ್ತದೆ.
ಸ್ಟ್ರೆಸ್ ಕೇವಲ ಮನುಷ್ಯರಿಗಲ್ಲ.. ಗಿಡಗಳಿಗೂ..!
ಕೇವಲ ಬರಗಾಲ ಅಥವಾ ನೀರು ಸಿಗದಿದ್ದಕ್ಕೆ ಮಾತ್ರ ಗಿಡಗಳಿಗೆ ಸ್ಟ್ರೆಸ್ ಉಂಟಾಗುವುದಿಲ್ಲ. ಮರಕ್ಕೆ ಆಹಾರ ಅಥವಾ ನೀರು ಸರಬರಾಜು ಮಾಡುವ ಬೇರುಗಳು ಹಾನಿಗೊಳಗಾದಾಗ ಅಥವಾ ಕೀಟಗಳು, ರೋಗಗಳಿಂದ ಬಾಧಿತವಾದಾಗಲೂ ಇಂತಹ ವರ್ತನೆ ಕಾಣಿಸುತ್ತದೆ.
ತೀವ್ರ ಹವಾಮಾನ ವೈಪರೀತ್ಯದಿಂದ ಇಂತಹ ಸ್ಟ್ರೆಸ್ ಉಂಟಾಗುತ್ತದೆ. ಈಗ ನಾವು ನೋಡುತ್ತಿರುವ ನೇರಳೆ ಮರದ ಉದಾಹರಣೆ ಇದಕ್ಕೆ ಹೆಚ್ಚು ಸೂಕ್ತ.
ಮರದ ಕಾಂಡಕ್ಕೆ ಕೊಡಲಿಯಿಂದ ಆಳವಾಗಿ ಕತ್ತರಿಸಿದಾಗ ಸಹ ಮರಗಳು ಸ್ಟ್ರೆಸ್ ಗೆ ಒಳಗಾಗುತ್ತವೆ. ಹಳೆಯ ಕಾಲದಲ್ಲಿ ಮಾವು ಅಥವಾ ಹಲಸಿನ ಮರಗಳು ಹೆಚ್ಚು ಕಾಯಿ ಬಿಡದಿದ್ದಾಗ ಅದರ ಕಾಂಡಕ್ಕೆ ಕೊಡಲಿಯಿಂದ ಸಣ್ಣದಾಗಿ ಗಾಯಮಾಡುವ ಮೂಲಕ ಮರವನ್ನು ಹೆದರಿಸುತ್ತಿದ್ದಾರಂತೆ. ಇನ್ನು ಕೆಲವರು ಮರಕ್ಕೆ ವಾಚಾಮಗೋಚರವಾಗಿ ಬಯ್ಯುವುದನ್ನು ಮಾಡುತ್ತಿದ್ದೆವು, ಅದಾದ ಮರು ವರ್ಷಕ್ಕೆ ಹೆಚ್ಚು ಫಸಲು ಬಂದಿತು ಎನ್ನುತ್ತಾರೆ. ಮರಕ್ಕೆ ಬೈದಾಗ ಅದರಿಂದ ಹೆಚ್ಚು ಫಸಲು ಬಂತು ಎನ್ನುವುದಕ್ಕಿಂತಲೂ.. ವೈಜ್ಞಾನಿಕವಾಗಿ ಹೇಳುವುದಾದರೆ ಮರಕ್ಕೆ ಗಾಯವಾದ ತಕ್ಷಣ ತನಗೆ ಆಪತ್ತು ಬಂದಿದೆ ಎಂದು ಭಾವಿಸಿದ ಮರ ಮುಂದಿನ ಬಾರಿ ಅತಿಯಾಗಿ ಹಣ್ಣು ಬಿಡುತ್ತಿತ್ತಂತೆ. ಪ್ರಕೃತಿಯ ಸೃಷ್ಟಿ ಅದೆಷ್ಟು ಸೂಕ್ಷ್ಮ. ಅಲ್ಲವೇ..?
ಇದಿಷ್ಟು ಸ್ಟ್ರೆಸ್ ಫ್ರೂಟಿಂಗ್ ವಿಚಾರವಾಯಿತು. ಹೀಗೆ ಮಾಡಿದಾಗ ಮರಗಳು ಹೆಚ್ಚಿನ ಫಲ ನೀಡುತ್ತವೆ. ಹಾಗೆಂದು ಎಲ್ಲವೂ ತಮ್ಮನ್ನು ತಾವು ಕೊಂದುಕೊಳ್ಳುವುದಿಲ್ಲ. ಸುಸೈಡ್ ಫ್ರೂಟಿಂಗ್ ಕಂಡುಬರುವುದು ತೀವ್ರ ನೀರಿನ ಅಭಾವ ಹಾಗೂ ಬರಗಾಲದ ಸಮಯದಲ್ಲಿ ನ ಈಗ ನೇರಳೆ ಮರಗಳು ಸುಸೈಡ್ ಫ್ರೂಟಿಂಗ್ ಮಾಡಿಕೊಳ್ಳುತ್ತಿವೆ ಎನ್ನುತ್ತಿದ್ದಾರೆ. ಅವುಗಳ ಅಂತ್ಯವನ್ನು ಕಾಣುವ ಸಮಯ ದೂರವೇನಿಲ್ಲ.
ಆದರೆ, ತನ್ನ ಜೀವಿತಾವಧಿಯಲ್ಲಿ ಒಂದೇ ಒಂದು ಬಾರಿ ತಮ್ಮ ಕೈಲಾದಷ್ಟು ಹೆಚ್ಚಿನ ಹೂವು-ಹಣ್ಣು ಬಿಟ್ಟು.. ನಂತರ ಕಡ್ಡಾಯವಾಗಿ ಸಾಯುವ ಸಸ್ಯಗಳು ಬೇರೆಯೇ ಇವೆ. ಈಗ ಅವುಗಳ ಕುರಿತು ಹೇಳುತ್ತೇನೆ.
ಹಿಂದಿನ ಕಾಲದಲ್ಲಿ "ಬಿದಿರು ಹೂ ಬಿಟ್ಟು ಅಕ್ಕಿಯಾಯ್ತು ಅಂದರೆ ಆ ವರ್ಷ ಖಂಡಿತ ಬರಗಾಲ" ಎನ್ನುತ್ತಿದ್ದರು. ಇದನ್ನು ನೀವು ಕೇಳಿದ್ದೀರಾ ಅಥವಾ ಈ ಪ್ರಸಂಗಕ್ಕೆ ಸಾಕ್ಷಿಯಾಗಿದ್ದೀರಾ..?
ಸೂಸೈಡ್ ಫ್ರೂಟಿಂಗ್ ಗೆ ಅತ್ಯಂತ ಕರಾರುವಕ್ಕಾದ ಉದಾಹರಣೆ ನೀಡುಬಹುದೆಂದರೆ ಅದು ಬಿದಿರು. ಬಿದಿರಿನಲ್ಲಿ ಹಲವಾರು ತಳಿಗಳಿವೆ. ಈ ತಳಿಗಳ ಆಧಾರದ ಮೇಲೆ 30 ರಿಂದ 120 ವರ್ಷಗಳಿಗೆ ಹೂ ಬಿಟ್ಟು, ಅಕ್ಕಿ (ಬೀಜ) ಆಗುತ್ತವೆ. ಇಡೀ ಕಾಡಿನ ಬಿದಿರೆಲ್ಲ ಒಟ್ಟಿಗೆ ಹೂ ಬಿಟ್ಟು ಬೀಜ ಪ್ರಸರಣ ಮಾಡಿ ಒಣಗಿ ಸಾಯುತ್ತವೆ.
ತಾಳೆ ಜಾತಿಯ ಕೆಲವು ಮರಗಳು ಸಹ ಇಂತಹ ಸೂಸೈಡ್ ಫ್ರೂಟಿಂಗ್ ಮಾಡಿಕೊಳ್ಳುತ್ತವೆ. ಶ್ರೀಲಂಕಾ ತಾರಿಪೆ (Talipot Palm) ಸುಮಾರು 30-80 ವರ್ಷಗಳ ಕಾಲ ಕೇವಲ ಎಲೆಯನ್ನು ಮಾತ್ರ ಬೆಳೆಸುತ್ತಾ.. ತನ್ನ ಜೀವಿತಾವಧಿಯ ಕೊನೆಯಲ್ಲಿ ಲಕ್ಷಾಂತರ ಹೂ-ಹಣ್ಣುಗಳನ್ನು ಬಿಟ್ಟು ಹಣ್ಣುಗಳು ಮಾಗುತ್ತಿದ್ದಂತೆ ಮರ ಸಾಯುತ್ತದೆ.
ಬಾಳೆ ಗಿಡವನ್ನು ಗಮನಿಸಿದ್ದಾದರೆ.. ಒಂದು ಬಾರಿ ಗೊನೆ ಬಿಟ್ಟ ಬಾಳೆ ಅದನ್ನು ಕೊಯ್ದ ನಂತರ ಒಣಗುತ್ತದೆ. ಆದರೆ, ಅದರ ಬುಡದಿಂದ ಹೊಸ ಗಿಡಗಳು ಹುಟ್ಟಿ ಫಸಲು ಹೆಚ್ಚುತ್ತದೆ.
ಬಿದಿರು ಅಥವಾ ನೇರಳೆ ಸ್ಟ್ರೆಸ್ ಫ್ರೂಟಿಂಗ್ ಅಥವಾ ಸುಸೈಡ್ ಫ್ರೂಟಿಂಗ್ ಮಾಡಿಕೊಳ್ಳುವಾಗ.. ಒಂದು ಪ್ರದೇಶದ ಗಿಡಮರಗಳೆಲ್ಲವೂ ಒಟ್ಟಿಗೆ ಆ ಪ್ರಕ್ರಿಯೆಗೆ ಒಳಗಾಗುವುದಕ್ಕೆ ಕುತೂಹಲಕರ ಕಾರಣ ಹಾಗೆಯೇ ಚಾಣಾಕ್ಷ ನಡೆಯೂ ಇದೆ.
ಒಂದು ಪ್ರದೇಶದಲ್ಲಿ ಹೀಗಾಗುತ್ತಿದೆ ಎಂದಾಗ ಆ ಪ್ರದೇಶದ ಹವಾಮಾನದ ಪ್ರಚೋದನೆ ಹಾಗೂ ಅವುಗಳ ಜೀವಕೋಶದಲ್ಲಿರುವ ಜೆನೆಟಿಕ್ ಕ್ಲಾಕ್ ಕಾರಣವಾಗಬಹುದು. ಎಂದರೆ, ಒಂದೇ ತಾಯಿಬೇರಿನಿಂದ ಹುಟ್ಟಿ ಬೇರೆ-ಬೇರೆ ಕಡೆ ಪ್ರಸರಣವಾಗಿ ಹುಟ್ಟಿರುವ ಆ ಗಿಡಗಳು ಆಂತರಿಕವಾಗಿ ಒಂದೇ ರೀತಿ ವರ್ತಿಸುತ್ತವೆ ಎನ್ನುತ್ತಾರೆ.
ನನಗೆ ಎಲ್ಲಕ್ಕಿಂತ ಅಚ್ಚರಿಗೊಳಿಸಿದ ಕಾರಣ ಎಂದರೆ ಅವುಗಳ ಆಲೋಚನೆಯ ಪರಿ. ಒಂದೊಂದು ಗಿಡ ಒಮ್ಮೊಮ್ಮೆ ಹಣ್ಣು ಬಿಟ್ಟರೆ ಪ್ರಾಣಿ-ಪಕ್ಷಿಗಳು ಅದನ್ನು ತಿಂದು ಖಾಲಿ ಮಾಡಿಬಿಡುತ್ತವೆ. ಆದರೆ, ಎಲ್ಲ ಮರಗಳೂ ಒಟ್ಟಿಗೆ ಫಲ ಬಿಟ್ಟಾಗ ಎಷ್ಟು ತಿಂದರೂ ಅವು ಖಾಲಿಯಾಗುವುದಿಲ್ಲ. ಹೊಟ್ಟೆ ತುಂಬಿ ಸಾಕಾಗಿ ಸುಮ್ಮನಾಗಿಬಿಡುತ್ತವೆ. ಮುಂದಿನ ದಿನಗಳಿಗೆ ರಕ್ಷಿಸಿಕೊಳ್ಳುವ ಮನುಷ್ಯನನ್ನು ಹಾಗೂ ಅವನ ಅತಿಯಾಸೆಯನ್ನು ಅವು ಪರಿಗಣಿಸಿಲ್ಲವೇನೋ.. ಹೀಗೆ ಪ್ರಾಣಿಗಳು ತಿಂದು ಉಳಿಯುವ ಲಕ್ಷಾಂತರ ಬೀಜಗಳು ಮಣ್ಣು ಸೇರಿ ಮುಂದಿನ ಪೀಳಿಗೆಗೆ ಸಾಗುತ್ತವೆ.
ಗಿಡಗಳಿಗೂ ಜೀವ ಇದೆ ಎಂದಷ್ಟೇ ಓದಿದ್ದವಳಿಗೆ.. ಗಿಡಗಳ ಸ್ಟ್ರೆಸ್ ಕುರಿತು ತಿಳಿಯಿತು. ಕುತೂಹಲದಿಂದ ಅದರ ಹಿಂದೆ ಸಾಗಿದಾಗ ನಾನು ತಿಳಿದುಕೊಂಡ ಕೆಲ ಕುತೂಹಲಕರ ವಿಚಾರಗಳಿವು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ