ಪಾರಿಜಾತದ ಕಡುಮೋಹಿಯಾದ ನಾನು ನಿನ್ನೆ ಮನೆಯಲ್ಲಿ ಅರಳಿದ ಬ್ರಹ್ಮ ಕಮಲದ ಕುರಿತು ಆಲೋಚಿಸುತ್ತಿದ್ದೆ. ಅಪರೂಪದ ವರ್ಷಕ್ಕೊಮ್ಮೆ ರಾತ್ರಿಯಲ್ಲಿ ಅರಳಿ ಸೂರ್ಯೋದಯಕ್ಕೂ ಮುನ್ನ ಬಾಡುವ ಈ ರಾತ್ರಿರಾಣಿಗೆ ಬ್ರಹ್ಮನ ಹೆಸರು ಜೋಡಣೆಯಾಗಲು ಕಾರಣವೇನಿರಬಹುದು ಎಂದುಕೊಳ್ಳುತ್ತಿದ್ದೆ.
ಈಗ ಮೊದಲಿನಂತೆ ಪ್ರತಿಯೊಂದಕ್ಕೂ ಹೆಚ್ಚು ಹುಡುಕಾಡಬೇಕಿಲ್ಲ. ಆದರೆ, ಹುಡುಕಿದ ವಿಚಾರಗಳಲ್ಲಿ ಯಾವುದು ಎಷ್ಟು ಜೆನ್ಯೂನ್ ಎಂದು ಪರಿಶೀಲಿಸಬೇಕಾಗುತ್ತದೆ. ಮುಂದೆ ಮಗಳಿಗೆ ಹೇಳಬೇಕಾದರೆ.. ಅವಳು ಕೇಳಿ ಆಗ ಹುಡುಕಾಡುವ ಮುನ್ನ ನಾನು ತಿಳಿದುಕೊಂಡಿರಬೇಕು ಎಂಬ ಮುಂದಾಲೋಚನೆ ಈಗೀಗ ಮಾಹಿತಿಗಳನ್ನು ತಿಳಿಯಲು ಅಥವಾ ಕುತೂಹಲಗಳನ್ನು ತಣಿಸಿಕೊಳ್ಳುವಾಗ ಹೆಚ್ಚು ಪ್ರೇರೇಪಿಸುತ್ತದೆ. ಈಗ ಬ್ರಹ್ಮ ಕಮಲ ಎಂಬ ಹೆಸರು ಬರಲು ಕಾರಣವಾದ ಹಾಗೂ ವೈಶಿಷ್ಟ್ಯಗಳ ಕಥೆಗಳನಷ್ಟೇ ಪ್ರಸ್ತಾಪಿಸುವೆ.
ಇತಿಹಾಸ ಹಾಗೂ ಧಾರ್ಮಿಕ ಕಥೆಗಳನ್ನು ಹುಡುಕಲು ಹೊರಟಾಗ ಹಲವು ಕಥೆಗಳು ಹಾಗೂ ಹಲವು ಆಯಾಮಗಳು ಕಾಣಿಸುತ್ತವೆ. ನನಗೆ ಸಿಕ್ಕವನ್ನು ನಿಮ್ಮೆದುರು ಹರವಿಡುತ್ತೇನಷ್ಟೇ..
ಈಶ್ವರನು ಗಣೇಶನ ಶಿರ ಕಡಿದು, ಪಾರ್ವತಿ ದೇವಿಯ ಬೇಡಿಕೆಯ ಮೇರೆಗೆ ಪ್ರಾಣ ನೀಡಲು ಗಜ ಶಿರವನ್ನು ಆತನಿಗೆ ಜೋಡಿಸಿ ಮರು ಜೀವ ನೀಡುವಾಗ ಬ್ರಹ್ಮದೇವ ಆನಂದಭಾಷ್ಪ ಸುರಿಸಿದಾಗ ಈ ಹೂವು ಹುಟ್ಟಿತು ಎನ್ನುವ ಐತಿಹ್ಯವಿದೆ.
ಇನ್ನೊಂದು ನಂಬಿಕೆಯ ಪ್ರಕಾರ ಶಿವನು ಆನೆಯ ತಲೆಯನ್ನ ಜೋಡಿಸಿ ಈ ಹೂವಿನ ನೀರನ್ನು ಪ್ರೋಕ್ಷಿಸಿ ಬದುಕಿಸಿದನೆಂದು ಸಹ ಹೇಳುತ್ತಾರೆ.
ರಾಮಾಯಣದಲ್ಲಿ ಲಕ್ಷ್ಮಣನು ಪ್ರಜ್ಞಾಹೀನನಾಗಿ ಬಿದ್ದ ಸಂದರ್ಭದಲ್ಲಿ ದೇವತೆಗಳು ಸ್ವರ್ಗದಿಂದ ಸುರಿಸಿದ ಹೂವುಗಳೇ ಬ್ರಹ್ಮ ಕಮಲವೆಂದು ಹೇಳುತ್ತಾರೆ. ಇನ್ನು ಕೆಲವರು ಹನುಮಂತ ಸಂಜೀವಿನಿ ಪರ್ವತ ತಂದಾಗ ಅಲ್ಲಿದ್ದ ಬ್ರಹ್ಮ ಕಮಲದ ನೀರನ್ನು ಚಿಮುಕಿಸಿದಾಗ ಆತ ಮರುಜೀವ ಪಡೆದನೆಂದು ಹೇಳಲಾಗುತ್ತದೆ.
ಮಹಾಭಾರತದಲ್ಲಿ ಬ್ರಹ್ಮ ಕಮಲದ ವಿಚಾರವನ್ನು ನೋಡುವುದಾದರೆ.. ಪಾಂಡವರ ವನವಾಸ ಕಾಲದಲ್ಲಿ ದ್ರೌಪದಿ ಈ ಹೂವನ್ನು ತಂದುಕೊಡಲು ಭೀಮಸೇನನಿಗೆ ಬೇಡಿಕೆ ಇಟ್ಟಿದ್ದಾಗಿಯೂ ಈ ಹೂವನ್ನು ಹುಡುಕುತ್ತಾ ಹೋದ ಭೀಮನಿಗೆ ತನ್ನ ಸಹೋದರ ಹನುಮಂತನ ದರ್ಶನವಾಗುತ್ತದೆ ಎಂಬ ಐತಿಹ್ಯವಿದೆ. ಕೆಲವರು ಅದು ಸೌಗಂಧಿಕಾ ಪುಷ್ಪವೆಂದೂ ಹೇಳುತ್ತಾರೆ.
ಬ್ರಹ್ಮದೇವನ ಕೈಯಲ್ಲಿರುವ ಶ್ವೇತ ಕಮಲವೇ ಬ್ರಹ್ಮ ಕಮಲವೆಂದು ಕೆಲವರು ಹೇಳಿದರೆ, ಬ್ರಹ್ಮದೇವ ಕುಳಿತಿರುವ ಹೂವೇ ಬ್ರಹ್ಮ ಕಮಲವೆನ್ನುತ್ತಾರೆ. ವಿಷ್ಣುವಿನ ನಾಭಿಯಲ್ಲಿ ಅರಳಿದ ಕಮಲದ ಹೂವಿನ ಮೂಲಕ ಬ್ರಹ್ಮ ಹೊರಬಂದ ಕಾರಣಕ್ಕೆ ಅದು ಬ್ರಹ್ಮ ಕಮಲವಾಯಿತು ಎಂಬ ನಂಬಿಕೆಯೂ ಇದೆ.
ಒಮ್ಮೆ ಬ್ರಹ್ಮದೇವ ನಿದ್ದೆಗೆ ಜಾರಿದಾಗ ಕಮಲದ ಹೂವಿನ ಧ್ಯಾನ ಮಾಡುತ್ತಾರಂತೆ. ನಂತರ ಎಚ್ಚರಗೊಂಡು ನೋಡಿದಾಗ ಅವರೇ ಕಮಲವಾಗಿ ರೂಪಾಂತರಗೊಂಡಿದ್ದರು. ಆಗ ಆ ಹೂವಿಗೆ ಬ್ರಹ್ಮ ಕಮಲ ಎಂಬ ಹೆಸರು ಬಂತು ಎಂಬ ಕಥೆಯೂ ಇದೆ. ಬ್ರಹ್ಮಾಂಡವನ್ನು ಸೃಷ್ಟಿಸಲು ಬ್ರಹ್ಮನು ಇದೇ ಕಮಲದ ಹೂ ಬಳಸಿದನು ಎಂದು ಹೇಳುತ್ತಾರೆ.
ಇವಿಷ್ಟು ನನಗೆ ಸಿಕ್ಕ ವಿವಿಧ ಕಥೆಗಳು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ