ಭಾನುವಾರ, ಜುಲೈ 5, 2026

ಪ್ರತಿಯೊಬ್ಬರ ಬದುಕಿನ ಸ್ಟಾರ್ಟಿಂಗ್ ಪಾಯಿಂಟ್ ಬೇರೆಯೇ ಅಲ್ಲವಾ..?!


"ನಿನ್ನ ಜೊತೆಯವರಿಗೆಲ್ಲ ಮದುವೆಯಾಯಿತು. ಇನ್ನೂ ನಿನಗೆ ಮದುವೆ ಆಗಿಲ್ವಾ..?!"


"ನಿನ್ನ ವಯಸ್ಸಿನವರಿಗೆ ಮದುವೆಯಾಗಿ ಮಗು ಇದೆ. ನೀನು ಮದುವೆಯಾಗಿ ನಾಲ್ಕು ವರ್ಷವಾದರೂ ಇನ್ನೂ ಮಗು ಆಗಿಲ್ವಾ ಅಥವಾ ಮಾಡಿಕೊಂಡಿಲ್ವಾ..?!"


"ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದ ನಿನ್ನ ಫ್ರೆಂಡ್ಸ್ ಎಲ್ಲರೂ ಎರಡು ವರ್ಷದ ಸಂಬಳ ತೆಗೆದುಕೊಂಡಿದ್ದಾರೆ, ಇನ್ನೂ ನಿನ್ನ ಕೆರಿಯರ್ ಸ್ಟಾರ್ಟ್ ಆಗಿಲ್ವಾ..?"


"ಇವಳ ಜೊತೆಗೆ ಹುಟ್ಟಿದ ಆ ಮಗು ಈಗಾಗಲೇ ಮನೆ ತುಂಬಾ ಓಡಾಡುತ್ತೆ. ಇವಳಿನ್ನೂ ತೆವಳುವುದರಲ್ಲಿಯೇ ಇದ್ದಾಳಾ..?!"


"ನಿನ್ನ ಜೊತೆ ಕೆಲಸಕ್ಕೆ ಸೇರಿದವನಿಗೆ ಈಗಾಗಲೇ ಪ್ರಮೋಷನ್ ಹಾಗೆ ಪ್ಯಾಕೇಜ್ ಕೂಡ ಜಾಸ್ತಿ ಆಯ್ತು. ಎರಡು ಕಂಪನಿ ಬದಲಾಯಿಸಿದ. ನೀನಿನ್ನೂ ಅದೇ ಕಂಪನಿಗೆ ಅಂಟಿ ಕೂತಿದ್ದೀಯಾ..?"


ಹೀಗೆ ಬರೆಯುತ್ತಾ ಹೋದರೆ ಪ್ರಶ್ನೆಗಳ ಅಲ್ಲಲ್ಲ ಕಾಳಜಿಯ ನೆಪದ ಚುಚ್ಚುಮಾತುಗಳ ಪಟ್ಟಿ ಸಾಗುತ್ತಲೇ ಹೋಗುತ್ತದೆ. ಇದೆಲ್ಲದಿದ್ದರೂ ಇಂತಹ ಯಾವುದಾದರೂ ಒಂದಲ್ಲಾ ಒಂದು ಪ್ರಶ್ನೆಗಳನ್ನು ಎದುರಿಸಿಯೇ ಇರುತ್ತೇವಲ್ಲವಾ..?!


ಒಂದೇ ದಿನ, ಒಂದೇ ಸಮಯಕ್ಕೆ ಹುಟ್ಟಿದ ಮಕ್ಕಳಲ್ಲಿಯೂ ಬೆಳವಣಿಗೆಯ ವ್ಯತ್ಯಾಸವಿರುತ್ತದೆ. ಹಾಗಿರುವಾಗ ಈ ವಯಸ್ಸಿನಲ್ಲಿ ನಿನ್ನ ಜೊತೆಯವರು ಮಾಡಿರುವ ಸಾಧನೆ ನಿನ್ನಿಂದ ಸಾಧ್ಯವಾಗಿಲ್ಲವೇಕೆ ಎಂದು ಪ್ರಶ್ನಿಸುವವರೇನು ಕಡಿಮೆ ಇಲ್ಲ. 


ಪ್ರತಿಯೊಬ್ಬರ ಬದುಕಿನ ಕಲಿಕೆ ಒಂದೇ ರೀತಿ ಇರುವುದಿಲ್ಲ. ವಯಸ್ಸು, ಅನುಭವ, ಪ್ರಯತ್ನ, ಲಕ್ ಒಬ್ಬರಂತೆ ಒಬ್ಬರಿಗಿರುವುದಿಲ್ಲ. ಅಕಸ್ಮಾತ್ ಹಾಗೆಯೇ ಇದ್ದರೂ ಬೆಳೆದ ವಾತಾವರಣ ಮನಸ್ಥಿತಿ ಬೇರೆಯೇ ಇರುತ್ತದಲ್ಲವಾ..?!

ಮೇಲಿನ ಪ್ರಶ್ನೆಗಳು ಅಥವಾ ಅಂತಹ ಸಂದರ್ಭಗಳು ಎದುರಾದಾಗ ಅಥವಾ ಪದೇ ಪದೇ ಅಂತಹ ಪ್ರಶ್ನೆಗಳೇ ಎದುರಾದಾಗ ನಾವು ಒಂದಲ್ಲಾ ಒಂದು ಬಾರಿಯಾದರೂ.. ಒಂದು ಕ್ಷಣವಾದರೂ ಅವರು ಹೇಳಿರುವ ಮತ್ತೊಬ್ಬರೊಡನೆ ಹೋಲಿಸಿಕೊಂಡಿರುತ್ತೇವೆ. ಹೌದು ತಾನೇ..?


ಇಷ್ಟಕ್ಕೂ ಇನ್ನೊಬ್ಬರೊಂದಿಗೆ ನಾವು ಯಾಕೆ ಕಾಂಪಿಟೇಶನ್ ಗಿಳಿಯಬೇಕು..? ಪ್ರತಿಯೊಬ್ಬರ ಬದುಕಿನ ಸ್ಟಾರ್ಟಿಂಗ್ ಪಾಯಿಂಟ್ ಹಾಗೂ ಎಂಡಿಂಗ್ ಪಾಯಿಂಟ್ ಎರಡೂ ಬೇರೆ ಬೇರೆ ಅಲ್ಲವಾ..! ಸಾಗುವ ಗತಿ ವಿಭಿನ್ನವೇ ಅಲ್ಲವಾ..? 


ಹಾಗೆಂದು, ಎದುರಿನವರಿಗೆ ಪ್ರತ್ಯುತ್ತರ ಕೊಡಲು ಹೋಗದೆ ಸುಮ್ಮನಾಗಿ ಬಿಟ್ಟಿರುತ್ತೇವೆ. ಏಕೆಂದರೆ, ಪ್ರತಿಯೊಬ್ಬರ ಮಾತು ಹಾಗೂ ಮೆಚ್ಯುರಿಟಿಯ ಸ್ಟಾರ್ಟಿಂಗ್ ಪಾಯಿಂಟ್ ಕೂಡಾ ಬೇರೆಯೇ. ಎಲ್ಲದಕ್ಕೂ ಉತ್ತರ ಕೊಡುತ್ತಾ ಕುಳಿತುಕೊಳ್ಳಲು ಸಾಧ್ಯವಿಲ್ಲ. ಹಾಗೆಂದು ಮನಸ್ಸನ್ನು ವಿಚಲಿತಗೊಳಿಸಿಕೊಳ್ಳುವುದು ಬೇಡ. ನಮ್ಮ ಪ್ರಯತ್ನ ನಾವು ಮಾಡುತ್ತಿರೋಣ. ನಮ್ಮ ಬದುಕಿನ ಟರ್ನಿಂಗ್ ನ ಸ್ಟಾರ್ಟಿಂಗ್ ಪಾಯಿಂಟ್ ಸಿಕ್ಕಿಯೇ ಸಿಗುತ್ತದೆ. ಹಾಗೆಯೇ ಮಾತನಾಡುವವರ ಬಾಯಿಗೆ ಎಂಡಿಂಗ್ ಪಾಯಿಂಟ್ ಸಹ..!


~ ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ