ಪುಸ್ತಕದ ಶೀರ್ಷಿಕೆ : ಕೃತಿಶೋಧ
ಕೃತಿ ಪ್ರಕಾರ : ವಿಮರ್ಶಾ ಲೇಖನಗಳು
ಲೇಖಕರು : ಸುಬ್ರಾಯ ಚೊಕ್ಕಾಡಿ
ಪ್ರಕಾಶಕರು : ಇಂಚರ ಪ್ರಕಾಶನ
ಪ್ರಥಮ ಮುದ್ರಣ : 2000
ಪುಟಗಳು : 160
ಬೆಲೆ : 70
"ನನ್ನದು ವಿಮರ್ಶಾ ಸಿದ್ದಾಂತಗಳನ್ನು ಆಧರಿಸಿದ ಬರೆವಣಿಗೆ ಅಲ್ಲ; ಅನಿಸಿಕೆಗಳನ್ನು ಆಧರಿಸಿದ ಬರೆವಣಿಗೆ" ಎನ್ನುತ್ತಾರೆ ಲೇಖಕರು.
ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರು ಹಿನ್ನುಡಿಯಲ್ಲಿ ಕೃತಿಶೋಧದ ಕುರಿತಾಗಿ ಹೀಗೆ ಹೇಳುತ್ತಾರೆ.
"ಕೃತಿಶೋಧದಲ್ಲಿ ಇರುವುದು ಎಲ್ಲರ ಗ್ರಹಿಕೆಯ ಸಾರವಲ್ಲ, ಕೃತಿಯನ್ನು ಸಮರ್ಥಿಸುವುದಲ್ಲ, ತನ್ನ ವಿಚಾರವನ್ನು ಹೇರುವುದೂ ಅಲ್ಲ. ಬದಲಾಗಿ ಆಯಾ ಸಂದರ್ಭದ ವೈಶಿಷ್ಟ್ಯದ ನಡುವೆಯೂ ತನ್ನ ಶೋಧನೆಯನ್ನು ಹೇಳಿಕೊಳ್ಳುವುದು."
ಈ ಕೃತಿಯಲ್ಲಿ 13 ವಿಮರ್ಶಾ ಲೇಖನಗಳಿವೆ. ಇಲ್ಲಿನ ವಿಮರ್ಶಾ ಲೇಖನಗಳ ವ್ಯಾಪ್ತಿ ವಿಶಾಲವಾಗಿದೆ ಹಾಗಾಗಿ ಎಲ್ಲವನ್ನೂ ಇಲ್ಲಿ ಹೇಳುವುದು ಅಸಾಧ್ಯ. ಜೊತೆಗೆ ವಿಮರ್ಶೆಯ ಕೃತಿಯೊಂದರ ಅವಲೋಕನ ಮತ್ತೂ ಕಷ್ಟ ನನಗೆ. ನನ್ನನ್ನು ಸೆಳೆದ ಹಾಗೂ ನನಗೆ ವಿಶೇಷವನ್ನಿಸಿದ ಇಲ್ಲಿನ ವಿಚಾರಗಳ ಕುರಿತು ಉಲ್ಲೇಖಿಸುತ್ತೇನೆ.
ಗೋವಿಂದ ಪೈಯವರ ಕಾವ್ಯ : ಚಿಕ್ಕಂದಿನಿಂದಲೇ ನನಗೆ ಚತುರ್ಥ ಪದಿಯಲ್ಲಿ ಮೆಚ್ಚು ಎಂದು ಹೇಳಿಕೊಂಡಿರುವ ಗೋವಿಂದ ಪೈ ಅವರು ಈ ಮನೋಧರ್ಮಕ್ಕೆ ಹೊಂಕೆಯಾಗುವ ಸಾನೆಟ್ ಗಳನ್ನೇ ಹೆಚ್ಚಾಗಿ ಬರೆದಿದ್ದಾರೆ.
ಶ್ರೀರಂಗರೋ ಯಾರೋ ಒಮ್ಮೆ ಪೈ ಅವರನ್ನು ಕೇಳಿದರಂತೆ, 'ನೀವು ಅಡಿ ಟಿಪ್ಪಣಿಗಳನ್ನು ಬರೆದು ನಂತರ ಕವಿತೆ ಬರೆಯುತ್ತೀರೋ ಅಥವಾ ಕವಿತೆಯನ್ನು ಬರೆದು ನಂತರ ಟಿಪ್ಪಣಿ ಬರೆಯುತ್ತಿರೋ..!' ಎಂದು. ಸೃಷ್ಟಿಶೀಲ ಕ್ಷಣದಲ್ಲಿ, ಬುದ್ಧಿ-ಭಾವಗಳ ಸಮತೋಲನ ತಪ್ಪಿದಾಗ, ಭಾವಕ್ಕಿಂತ ಬುದ್ಧಿಯ ಬಲವೇ ಮೇಲಾದಾಗ, ತತ್ವಗಳ ನೇರ ನಿರೂಪಣೆ ಅನಿವಾರ್ಯ ಎನ್ನುತ್ತಾರೆ.
ದುಃಖದಿಂದ ಕವಿತೆ ಹುಟ್ಟುತ್ತದೆ ಎಂಬ ಅಭಿಪ್ರಾಯಕ್ಕೆ ಸಾಕ್ಷಿಯಾಗಿ 'ನಂದಾದೀಪ'ದಲ್ಲಿ ಪತ್ನಿ ವಿಯೋಗದ ಯಾತನೆಯೇ ಪರಮಾತ್ಮನಲ್ಲಿ ಆತ್ಮ ನಿವೇದನೆಯಾಗಿ ರೂಪುಗೊಂಡಿರುವುದನ್ನು ಗುರುತಿಸುತ್ತಾರೆ.
ಸೇಡಿಯಾಪು ಕೃಷ್ಣಭಟ್ಟರ ಕಾವ್ಯ :
ಹೆಚ್ಚು ಬರೆದವನಲ್ಲ-
ನಿತ್ಯ ಬರೆದವನಲ್ಲ
ಮೆಚ್ಚಿಸಲು ಬರೆಯುವಭ್ಯಾಸವಿಲ್ಲ
ಇಚ್ಛೆಗೆದೆಯೊಪ್ಪಿ ಬಗೆ
ಬಿಚ್ಚಿದರೆ ಕಣ್ಣೆಮಯ್
ಎಚ್ಚುವಂದದಿ ತೀಡಿ ತಿದ್ದಿ ಬರೆವೆ
ಎನ್ನುವ ಸೇಡಿಯಾಪು ಅವರ ಕವಿತೆಗಳು ಸಂಖ್ಯಾದೃಷ್ಟಿಯಿಂದ ಕಡಿಮೆ ಎನ್ನಬಹುದಾದರೂ.. ವಸ್ತು ವೈವಿಧ್ಯ, ಸೃಷ್ಟಿ ಸೌಂದರ್ಯ ಹಾಗೂ ಬೆರಗಿನಿಂದ ಸೆಳೆಯುತ್ತವೆ. ಅವರ ಕವಿತೆಗಳಲ್ಲಿ ರಾಷ್ಟ್ರದ ಬಗ್ಗೆ ಬರೆದ ಕವಿತೆಗಳೇ ಹೆಚ್ಚು. ಜೊತೆಗೆ ಈ ಭಾವಗಳನ್ನು ಒಳಗೊಂಡಿರುವ ಸಂಕೀರ್ಣ ರಚನೆಗಳು ಎಂದು ಹೇಳುತ್ತಾರೆ. ಅವರು ಸಂಯಮಪೂರ್ಣವಾಗಿ ನಿರುದ್ವೇಗದಿಂದ ಕಥೆ ಹೇಳಬಲ್ಲರು. ಮಂದ್ರ ಸ್ವರದಲ್ಲಿ ತಿಳಿಗಣ್ಣಿನಿಂದ ನೋಡಿ ವರ್ಣಿಸಬಲ್ಲರು. ಅತ್ಯಂತ ಎಚ್ಚರದಿಂದ ಸೂಕ್ತ ಪದಗಳನ್ನು ಆಯ್ದು ಅಲಂಕರಿಸಬಲ್ಲರು. ಇವರ ಕವಿತೆಗಳಲ್ಲಿ ಭಾಷೆ ಪಾಂಡಿತ್ಯಪೂರ್ಣ; ಚಿಂತನಾಂಶ ಹೆಚ್ಚು. ಎಂದು ಹೇಳುತ್ತಾರೆ
ಕಡೆಂಗೋಡ್ಲು ಶಂಕರ ಭಟ್ಟರ ಕಥನ ಕವನ : ಹೆಣ್ಣು :
ಇವರ 'ಮಾದ್ರಿಯ ಚಿತೆ'ಯು ಮಹಾಕಾವ್ಯದ ಅನುಭವ ಕಟ್ಟಿಕೊಡುವ ಕಥನ ಕವನ. 'ಹೆಣ್ಣು' ಕವನದಲ್ಲಿ ಇನ್ನಷ್ಟು ವಿಸ್ತಾರವಾದ ಸ್ತ್ರೀಚಿತ್ರವನ್ನು ಚಿತ್ರಿಸಲು ಯತ್ನಿಸಿದ್ದಾರೆ. ಇದು 1945ರಲ್ಲಿ ಬಂಗಾಳದ ಭೀಕರ ಕ್ಷಾಮದ ಹಿನ್ನೆಲೆಯಲ್ಲಿ ಕಲ್ಪಿಸಲಾಗಿರುವ ಸ್ತ್ರೀಚಿತ್ರ. ಜಿ. ಬಿ. ಜೋಶಿ ಸಂಪಾದಕತ್ವದಲ್ಲಿ 'ನಡೆದು ಬಂದ ದಾರಿ'ಯ ಕಾವ್ಯ ನಾಟಕ ಸಂಪುಟದಲ್ಲಿ ಪ್ರಕಟವಾಗಿದ್ದರು ಬಹುತೇಕ ವಿಮರ್ಶಕರು ಗಮನಿಸದಿರುವುದು ಆಶ್ಚರ್ಯಕರವಾಗಿದೆ ಎನ್ನುತ್ತಾರೆ.
ಕವನದ ಕೆಲ ಸಾಲುಗಳನ್ನು ಉಲ್ಲೇಖಿಸಿ ಅವುಗಳನ್ನು ವಿಸ್ತಾರವಾಗಿ ವಿಶ್ಲೇಷಿಸುತ್ತಾ ಇಷ್ಟೆಲ್ಲಾ ಇದ್ದರೂ ಕವನ ನಮಗೆ ಪೂರ್ತಿಯಾಗಿ ಆಪ್ತವಾಗದೆ ಗಾಢವಾಗಿ ಆವರಿಸಿಕೊಳ್ಳದೆ ಸ್ವಲ್ಪಮಟ್ಟಿಗೆ ಹೊರಗೆ ಉಳಿಯುತ್ತದೆ ಎನ್ನುತ್ತಾರೆ. ಅದಕ್ಕೆ ಕಾರಣವೇನು ಓದಿ ನೋಡಿ.
ಎ. ಕೆ ರಾಮಾನುಜನ್ ಅವರ 'ಹೊಕ್ಕುಳಲ್ಲಿ ಹೂವಿಲ್ಲ' : ಇತರರ ಕವನಗಳಿಗಿಂತ ರಾಮಾನುಜನ್ ಅವರ ಕವನಗಳು ಏಕೆ ಭಿನ್ನ ಎಂದು ಈ ಲೇಖನದಲ್ಲಿ ಹೇಳುತ್ತಾರೆ.
ನಂದಾದೀಪದ ಒಂದು ಬತ್ತಿ ಜ್ವಾಲೆಯಲ್ಲಿ ನಲವತ್ತು
ಜನರಿಗೆ ನಲವತ್ತು ತಲೆಯ ಒಂದೆ ನೆರಳು (ನಲವತ್ತು ನೆರಳು)
ತೋರಿಕೆಗೆ ವಿರೋಧವೆಂದು ತೋರುವ ಮೂಲಸ್ಥಿತಿ ಒಂದೇ ಆಗಿರುವ ಈ ಸಾಲುಗಳು ಹಾಗೂ ಇನ್ನಷ್ಟು ಸಾಲುಗಳನ್ನು ಉದಾಹರಿಸುತ್ತಾರೆ.
ಡಾ|| ನಾ. ಮೊಗಸಾಲೆಯವರ 'ಪ್ರಭವ' : ನವೋದಯ ಕಾಲದಲ್ಲಿ ಕವಿತೆ ಬರೆಯುವುದನ್ನು ಆರಂಭಿಸಿ ಆಮೇಲೆ ನವ್ಯತೆಯತ್ತ ಸರಿದುಕೊಂಡ ಮೊಗಸಾಲೆಯವರು ಮೂಲತಃ ರಮ್ಯ ಮನೋಧರ್ಮದ ಕವಿಯೇ ಆಗಿದ್ದಾರೆ. ವ್ಯಾಮೋಹವೂ ಆ ಮನೋಧರ್ಮದ ಪ್ರತೀಕವೇ ಆಗಿದೆ ಎಂದು ಉಲ್ಲೇಖಿಸುತ್ತಾರೆ. 'ದಕ್ಷಿಣ ಕನ್ನಡ ಕಾವ್ಯ' ಆ್ಯಂಥಾಲಜಿಗೆ ಬರೆದ ಸಮೀಕ್ಷೆಯಲ್ಲಿ 'ಮೊಗಸಾಲೆಯವರ ಕವಿತೆಗಳು ಶಾಪಗ್ರಸ್ತ ದೇವತೆಯರಂತಿವೆ' ಎಂದು ಲೇಖಕರು ಬರೆದಿದ್ದಾರೆ
ಜಿ. ಪಿ ರಾಜರತ್ನಂ ಅವರ ಗದ್ಯಸಾಹಿತ್ಯ ಪ್ರಪಂಚ : ರಾಜರತ್ನಂ ಅವರ ಸರ್ವಧರ್ಮ ಸಮನ್ವಯ ದೃಷ್ಟಿ ಅವರ ವೈವಿಧ್ಯಪೂರ್ಣ ಸಾಹಿತ್ಯ ಸೃಷ್ಟಿ ಅವರ ಪ್ರತಿಭೆ ಹಾಗೂ ಪಾಂಡಿತ್ಯ ಇವರ ಮೇಲೆ ಬೀರಿದ ಪ್ರಭಾವ ಇನ್ನಿತರ ಅಂಶಗಳನ್ನು ಗುರುತಿಸುವ ಮೂಲಕ ವಿಶ್ವರೂಪದರ್ಶನವನ್ನು ಸಾಧ್ಯವಾದಷ್ಟು ಮಟ್ಟಿಗೆ ಕಾಣಿಸುವ ಪ್ರಯತ್ನ ನನ್ನದು ಎನ್ನುತ್ತಾ ಅವರ ಕಥೆ, ನಾಟಕ, ಹರಟೆಗಳ ಕುರಿತಾಗಿ ಹೇಳುತ್ತಾರೆ.
ರಾಜರತ್ನಂ ಅವರ ಕೃತಿಗಳಲ್ಲಿ ರತ್ನನ ಪದಗಳು ಹಾಗೂ ನಾಗನ ಪದಗಳು ನನಗೆ ಹೆಚ್ಚು ಹಿಡಿಸಿದ, ಅನೇಕ ಕಾಲ ಗುಂಗಾಗಿ ಅಬ್ಸೆಶನ್ ಆಗಿ ಕಾಡಿದ ಕೃತಿಗಳು ಎನ್ನುತ್ತಾರೆ.
ರಾಜರತ್ನಂ ಅವರ ನಾಟಕಗಳ ಮೇಲೆ, ರತ್ನನ ಪದಗಳ ಮೇಲೆ ಕೈಲಾಸಂ ಅವರ ಭಾಷೆ ವ್ಯಕ್ತಿತ್ವಗಳ ಆರೋಗ್ಯಕರ ಪ್ರಭಾವ ಇದೆ ಎಂದು ಉಲ್ಲೇಖಿಸುತ್ತಾರೆ.
ಸೇಡಿಯಾಪು ಕೃಷ್ಣಭಟ್ಟರ 'ಪಳಮೆಗಳು' : ಪಳಮೆಗಳು ಇವರ ಏಕಮಾತ್ರ ಪ್ರಕಟಿತ ಕಥಾಸಂಕಲನವಾದರೂ.. ನಮ್ಮ ಕಥಾ ಪರಂಪರೆಯನ್ನು ಅಭ್ಯಾಸ ಮಾಡುವವರು ಮರೆಯಬಾರದ, ಮರೆಯಲಾಗದ ಕಥೆಗಳಿವು ಎನ್ನುತ್ತಾರೆ.
ಈ ಕಥೆಗಳು ತೋರಿಕೆಯ ಸರಳತೆಯ ಆಳದಲ್ಲಿ ಸಂಕೀರ್ಣವಾದ ಬದುಕಿನ ಸತ್ವ ಹಾಗೂ ತತ್ವಗಳತ್ತ ಸೆಳೆಯಬಲ್ಲ ಒಳಸುಳಿಗಳನ್ನು ಒಳಗೊಂಡಿದೆ. ಹಾಗೆಂದು ಅವನು ಗಂಭೀರವಾಗಿ ಅಭ್ಯಾಸ ಮಾಡುವುದು ಅವಶ್ಯವಾಗಿದೆ ಎನ್ನುತ್ತಾರೆ. ಇವರ 'ನಾಗರಬೆತ್ತ', 'ಚನ್ನೆಮಣೆ'ಯಂತಹ ಕಥೆಗಳನ್ನು ಓದಿರದಿದ್ದರೆ.. ಅಭ್ಯಾಸಿಸದಿದ್ದರೆ ನಮ್ಮ ಕನ್ನಡ ಕಥಾಸಾಹಿತ್ಯದ ಅಭ್ಯಾಸವು ಪೂರ್ಣವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎನ್ನುತ್ತಾರೆ. ಇಲ್ಲಿ ಈ ಕಥೆಗಳನ್ನು ಕೊಂಚ ದರ್ಶನ ಮಾಡಿಸುತ್ತಾರೆ.
ಯರ್ಮುಂಜ ರಾಮಚಂದ್ರರ 'ಚಿಕಿತ್ಸೆಯ ಹುಚ್ಚು' : ಇವರ ಕಥೆಗಳಲ್ಲಿ ಅಂತರಂಗದ ಬದುಕು ಅವರಿಗೆ ಮುಖ್ಯವಾಗುತ್ತದೆ. ಕವಿತೆಗಳಲ್ಲಿ ಒಳಗಿನಿಂದ ನೋಡುತ್ತಾರಾದರೆ.. ಕಥೆಗಳಲ್ಲಿ ಅವರು ಹೊರಗಿನಿಂದ ನೋಡುತ್ತಾರೆ. ಯರ್ಮುಂಜರ ಮುಖ್ಯ ಒತ್ತು ಮಾನವೀಯ ಅಂಶಗಳ ಮೇಲೆಯೇ.. ಕಥೆಗಳಲ್ಲಿ ಮೂರ್ತ ಅನುಭವಗಳಿಗೆ ಹೆಚ್ಚು ಒತ್ತು. ಅನುಭವಗಳನ್ನು ದೂರದಿಂದ ನೋಡಿ ಅರ್ಥೈಸುತ ಕ್ರಮ ಇಲ್ಲಿದೆ. ಹೀಗಾಗಿಯೇ ಕಥೆ ರೂಪುಗೊಳ್ಳುವ ನಿರ್ಮಮ, ನಿರದ್ವಿಗ್ನ ಕ್ರಮ ಇಲ್ಲಿ ಸಾಧ್ಯವಾಗುತ್ತದೆ ಎನ್ನುತ್ತಾರೆ.
ನಿರಂಜನರ ಕಥಾ ಸಾಹಿತ್ಯ : ನಿರಂಜನರ ಕುರಿತಾಗಿ ಲೇಖಕರು ತಾವು ಗಮನಿಸಿದ ಮುಖ್ಯ ಅಂಶವೊಂದನ್ನು ಹೇಳುತ್ತಾರೆ. ನಿರಂಜನರು ಕವಿಯಲ್ಲವಾದರೂ.. ಅವರಿಗೊಂದು ಕಾವ್ಯದ ಮುಖವೂ ಇರುವಂತಿದೆ. ಅವರು ಕಟ್ಟಾ ಪ್ರಗತಿಶೀಲರಾಗಿದ್ದರೂ, ಇದರ ಹಿಂದೆ ಅಡಗಿರುವುದು ರೊಮ್ಯಾಂಟಿಕ್ ಮನೋಧರ್ಮ. ಅವರ ಕಥೆಗಳ ಪಾತ್ರಗಳು ಕನಸು ಕಾಣುತ್ತವೆ. ಅಲ್ಲದೆ ಹೆಚ್ಚಿನ ಕಥೆಗಳು ಕಾಲ್ಪನಿಕ ಹಾಗೂ ಆದರ್ಶದ ಮುಕ್ತಾಯ ಪಡೆಯುತ್ತವೆ. ಇದನ್ನು ಮೀರುವ ಯತ್ನವನ್ನು ನಿರಂಜನರು ಮಾಡಿದ್ದರೂ ಮತ್ತದೇ ಹಾದಿ ಹಿಡಿದ ಬಗೆಯನ್ನು ಉಲ್ಲೇಖಿಸುತ್ತಾರೆ.
ಭಾರತೀಸುತರ ಕಥೆಗಳು : ಭಾರತೀಸುತರ ಸರಳ, ಸುಂದರ, ಸುಲಲಿತ ಕಥಾಶೈಲಿಯ ಕುರಿತು ಹೇಳುತ್ತಾರೆ. ಓದುಗರಿಗೆ ಅಪರಿಮಿತವೆನಿಸುವ ವಿಶಿಷ್ಟ ಪ್ರಾದೇಶಿಕತೆಯ ಕುರಿತು ಪ್ರಸ್ತಾಪಿಸುತ್ತಾರೆ. ಕುತೂಹಲ, ಆಶ್ಚರ್ಯವನ್ನು ಅಧಿಕಗೊಳಿಸಲು ಇದು ನೆರವಾಗುತ್ತದಾದರೂ ಇದು ಕಥೆಗಾರಿಕೆಗೆ ಅವಶ್ಯವಲ್ಲ ಎಂಬ ಅಭಿಪ್ರಾಯವನ್ನು ಲೇಖಕರು ಹೇಳುತ್ತಾರೆ. ಅದೇಕೆ ಓದಿ ನೋಡಿ. ಈ ಕಥೆಗಳಲ್ಲಿನ ಸಾಮಾಜಿಕ ಕಳಕಳಿ ಕಥೆಯ ಆಪ್ತತೆಯನ್ನು ಹೆಚ್ಚಿಸಲು ಸಹಾಯಕವಾಗುವ ಬಗೆಯನ್ನೂ ಹೇಳುತ್ತಾರೆ.
ಅನಂತಮೂರ್ತಿಯವರ 'ಮೌನಿ' : ಮೌನಿ ಕತೆಯ ಮುಖ್ಯ ಕಥಾಪಾತ್ರಗಳು ಹಾಗೂ ಕಥಾಹಂದರದ ಕುರಿತು ಪ್ರಸ್ತಾಪಿಸಿ ನಂತರ ಮೌನಿ ಯಾರು ಈ ಪ್ರಶ್ನೆಗೆ ಸಿಗಬಹುದಾದ ಉತ್ತರವೇ ಬಹುಶಃ ಸಾಮಾನ್ಯ ಕತೆಯಾಗಬಹುದಾಗಿದ್ದ ಈ ಕಥೆಯ ಒಳ್ಳೆಯ ಮಟ್ಟಕ್ಕೇರಲು ಕಾರಣವಾಗುತ್ತಲ್ಲದೆ ಕಥೆಯ ಘಟನೆಗಳಿಗೆ ಆಂತರಿಕವಾಗಿ ಏಕಸೂತ್ರತೆಯನ್ನು ತಂದುಕೊಡುವ ಕುರಿತಾಗಿ ಹೇಳುತ್ತಾರೆ. ಮೌನಿ ಕತೆಯಲ್ಲಿನ ಪುನರ್ಜನ್ಮದ ಕುರಿತಾಗಿ, ಜೊತೆಗೆ ಅವರ ಹಿಂದಿನ ಕಥೆಗಳಿಗಿಂತ ಇದು ವಿಭಿನ್ನವಾಗಿ ಇರುವುದನ್ನು.. ವಿಚಾರ ಸಾಮ್ಯವಿದ್ದರೂ ಅಲ್ಲಿನ ಸಮಸ್ಯೆಗಳು ಇಲ್ಲಿ ಬೆಳವಣಿಗೆ ಪಡೆದಿರುವುದರ ಕುರಿತು ಬೆಳಕು ಚೆಲ್ಲುತ್ತಾರೆ.
ಶಿವರಾಮ ಕಾರಂತರ 'ಬೆಟ್ಟದ ಜೀವ' : ಬೆಟ್ಟದ ಜೀವದ ಕಥಾವಸ್ತು ತೀರಾ ಕಡಿಮೆಯಾಗಿದ್ದು.. ಕಥೆ ಹೇಳುವುದು, ಕಾರಂತರ ಉದ್ದೇಶವಲ್ ಪ್ರಾದೇಶಿಕ ಚಿತ್ರವಾದ ಈ ಬರಹವನ್ನು 'ಶೀಲ ನಿರೂಪಣೆ' ಎಂದು ತಿಳಿದರಾಯಿತು ಎಂದು ಕಾರಂತರೇ ತಮ್ಮ ಆತ್ಮಕಥೆಯಲ್ಲಿ ಹೇಳಿರುವ ಉದ್ದೇಶವನ್ನು ಪ್ರಸ್ತಾಪಿಸುತ್ತಲೇ.. ಪ್ರಾದೇಶಿಕ ಚಿತ್ರ ಎಂಬ ಹಿನ್ನೆಲೆಯಲ್ಲಿ ಕಾದಂಬರಿಯ ಒಳನೋಟಗಳನ್ನು ಕಟ್ಟಿಕೊಡುತ್ತಾ ಸಾಗುತ್ತಾರೆ. ಇದು ಬರಿಯ ಪ್ರಾದೇಶಿಕ ಕಾದಂಬರಿಯಲ್ಲ, ಬರಿಯ ವ್ಯಕ್ತಿಯೊಬ್ಬರ ಜೀವನ ಚಿತ್ರವೂ ಅಲ್ಲ ಎನ್ನುತ್ತಾ ಬೆಟ್ಟದ ಜೀವ ಹೊಂದಿರುವ ಹಲವು ಆಯಾಮಗಳನ್ನು ತೋರುತ್ತಾರೆ.
ಶಿವರಾಮ ಕಾರಂತರ 'ಮೂಕಜ್ಜಿಯ ಕನಸುಗಳು' : ಮೊದಮೊದಲು ಶುದ್ಧ ಜೀವನಾನುಭವದ ಗಟ್ಟಿ ಹಿನ್ನೆಲೆಯಲ್ಲಿ ಕಾದಂಬರಿಗಳನ್ನು ರಚಿಸಿದ ಕಾರಂತರು ಅನಂತರ ನಿಧಾನವಾಗಿ ಜೀವನಾನುಭವಗಳ ಹಿನ್ನೆಲೆಯಲ್ಲಿ ಭೌತಿಕವಾಗಿ ಜೀವನ ವಿಮರ್ಶೆ ಮಾಡುತ್ತಾ.. ಜೀವನ ಮೌಲ್ಯಗಳ ಬೆಲೆಕಟ್ಟಲು ತೊಡಗಿದಾಗ.. ಪರಂಪರಾಗತ ಮೌಲ್ಯಗಳನ್ನು ವಿಶ್ಲೇಷಿಸಿ, ವಿಮರ್ಶಿಸಿ, ಮೌಲ್ಯಗಳನ್ನು ಕಂಡುಕೊಳ್ಳುವ ಪ್ರಯತ್ನದ ಹಂತದಲ್ಲಿಯೇ ಮೂಕಜ್ಜಿಯ ಕನಸುಗಳು ಜನ್ಮತಾಳಿದೆ ಎಂದು ಅಭಿಪ್ರಾಯಪಡುತ್ತಾರೆ.
ಇಲ್ಲಿನ ವಿಮರ್ಶೆಯಲ್ಲಿ ಸಕಾರಾತ್ಮಕ ಹಾಗೂ ಪ್ರಶ್ನಿಸುವ ನೋಟಗಳನ್ನು ಕಾಣುವಂತೆ ಒಪ್ಪದಿರುವ ಅಂಶಗಳನ್ನೂ ಉಲ್ಲೇಖಿಸುತ್ತಾರೆ. ಇಲ್ಲಿನ ಕೆಲ ಕತೆಗಳು, ಕಥಾ ಸಂಕಲನ, ಕವಿತೆಗಳನ್ನು ಓದಲು ಆಸಕ್ತಿ ಮೂಡಿತು. ನನ್ನ ಓದು ಎಷ್ಟು ಸೀಮಿತ ಪರಿಧಿಯಲ್ಲಿದೆ ಎಂದು ಅರಿವಾಗಿಸಿದ ಕೃತಿ ಇದು.
~ವಿಭಾ ವಿಶ್ವನಾಥ್

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ