ಪುಸ್ತಕದ ಶೀರ್ಷಿಕೆ : ಪಂಜೆ ಮಂಗೇಶರಾಯರ ಮಕ್ಕಳ ಕಥೆಗಳು
ಕೃತಿ ಪ್ರಕಾರ : ಮಕ್ಕಳ ಸಾಹಿತ್ಯ
ಲೇಖಕರು : ಪಂಜೆ ಮಂಗೇಶರಾಯರು
ಪ್ರಕಾಶಕರು : ಅಂಕಿತ ಪುಸ್ತಕ
ಪ್ರಥಮ ಮುದ್ರಣ : 1973
ಆರನೇ ಮುದ್ರಣ : 2024 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 88
ಬೆಲೆ : 120 ರೂ.
ಪಂಜೆ ಮಂಗೇಶರಾಯರು ಮಕ್ಕಳ ಕಥೆಗಳನ್ನು ರಚಿಸಿ ಹಲವಾರು ವರ್ಷಗಳಾದರೂ ಇಂದಿಗೂ ಪ್ರಸ್ತುತ ಕಥೆಗಳಂತೆಯೇ ಕಾಣುತ್ತವೆ. ಕನ್ನಡದಲ್ಲಿ ಮಕ್ಕಳ ಪದ್ಯಗಳನ್ನು ಬರೆಯಲು ಯಾರೂ ಸಾಹಸ ಮಾಡದೆ ಇದ್ದಾಗ ಪಂಜೆಯವರು ಆ ಕೆಲಸದಲ್ಲಿ ತೊಡಗಿ ಯಶಸ್ವಿಯಾದವರು. ಅವರ ಮಕ್ಕಳ ಕಥೆಗಳು ಅನೇಕ ವರ್ಷಗಳ ಕಾಲ ಮಕ್ಕಳ ಪಠ್ಯದಲ್ಲಿ ಸೇರಿದ್ದವು. ಈಗಿನ ತಲೆಮಾರಿನವರಿಗೆ ಪಂಜೆ ಮಂಗೇಶರಾಯರ ಸಾಹಿತ್ಯ ಅಪರಿಚಿತವೆನ್ನಿಸದಿದ್ದರೂ ಅದು ಮತ್ತಷ್ಟು ಪರಿಚಿತವಾಗಬೇಕಿದೆ. 2020 ರಿಂದ 2024ರ ವರೆಗೆ ಮೂರು ಮರುಮುದ್ರಣ ಕಂಡಿರುವ ಈ ಕಥಾ ಸಂಕಲನ ಮಕ್ಕಳ ಸಾಹಿತ್ಯ ಎಂದಿಗೂ ಅಜರಾಮರ ಎನ್ನುವುದನ್ನು ತೋರುತ್ತಿದೆ.
"ನಾವು ಓದದ ಪುಸ್ತಕವನ್ನು ನಮ್ಮ ಮಕ್ಕಳಿಗೆ ನೀಡಬಾರದು" ಎನ್ನುವ ಸಾಲೊಂದನ್ನು ಓದಿದ್ದ ನೆನಪಾಯಿತು. ಹಾಗೆಯೇ ಮಕ್ಕಳಿಗೆ ಬುದ್ಧಿಮಾತನ್ನು ಹೇಳುವಾಗ, ಮನಮುಟ್ಟುವಂತೆ ಬೇರೇನನ್ನೋ ಹೇಳಬೇಕಾದ ಸಂದರ್ಭದಲ್ಲಿ ಕಥೆಯ ಮೂಲಕವೇ ಹೇಳುವುದು ಹೆಚ್ಚು ಸೂಕ್ತವೆನ್ನಿಸುತ್ತದೆ. ಅದು ಪರಿಣಾಮಕಾರಿಯೂ ಹೌದು. ಮಕ್ಕಳ ಸಾಹಿತ್ಯದ ಕೃತಿಗಳು ಈಗ ಮತ್ತೆ ಹೆಚ್ಚಾಗಿ ಪ್ರಕಟವಾಗುತ್ತಿವೆ. ಆದರೂ.. ನಮ್ಮ ಹಿರಿಯ ಸಾಹಿತಿಗಳ ಮಕ್ಕಳ ಸಾಹಿತ್ಯವನ್ನು ನಾವು ಓದಿ.. ಮಕ್ಕಳಿಗೆ ಓದಿಸುವ, ಹೇಳುವ, ಕೇಳಿಸುವ ಪ್ರಯತ್ನ ಮಾಡಬಹುದೆನ್ನಿಸಿತು.
ಈ ಕಥಾ ಸಂಕಲನದಲ್ಲಿ 16 ಚೆಂದದ ಕಥೆಗಳಿವೆ.
ಅಮ್ಮನನ್ನು ಹೇಗೆ ಕೂಗಬೇಕು : ಇದು ಪ್ರಾಣಿ ಪ್ರಪಂಚದ ಕಥೆ. ಪುಟ್ಟ ಕರುವೊಂದು ತನ್ನಮ್ಮ ಮೇಯಲು ಹೋದಾಗ ತಾಯಿಯ ಹಾದಿಯನ್ನು ಎದುರು ನೋಡುತ್ತಿದ್ದಾಗ.. ತನ್ನಮ್ಮನನ್ನು ಏನೆಂದು ಕರೆಯಬೇಕು ಎಂದು ತಿಳಿಯದೆ ಎಲ್ಲರನ್ನೂ ಕೇಳುವ ಕಥೆ ಇಲ್ಲಿದೆ. ಇಲ್ಲಿ ಮಕ್ಕಳಿಗೆ ವಿವಿಧ ಪ್ರಾಣಿಗಳ, ಅವುಗಳ ಕೂಗಿನ ಪರಿಚಯವಾಗುತ್ತದೆ. ಅಮ್ಮನನ್ನು ಕರೆಯಲು ಮಗುವಿನ ಮುಗ್ಧ ಪ್ರೀತಿ ಸಾಕಲ್ಲವೇ..?!
ಮೂರು ಕರಡಿಗಳು : ದೊಡ್ಡ ಕರಡಿ, ಹದ ಕರಡಿ ಹಾಗೂ ಸಣ್ಣ ಕರಡಿಗಳ ಬದುಕಿಗೆ ಒಂದೊಮ್ಮೆ ಅಪರಿಚಿತ ಅತಿಥಿ ಬಂದಾಗ ಪುಟ್ಟ ಪ್ರಪಂಚದಲ್ಲಾಗುವ ಬದಲಾವಣೆಗಳು ಇಲ್ಲಿವೆ.
ಹೇನು ಸತ್ತು ಕಾಗೆ ಬಡವಾಯಿತು : ಮಠದ ಗೋಡೆಯಲ್ಲಿದ್ದ ಹೇನು ಸಾಯುವುದಕ್ಕೂ.. ಅರಳಿ ಮರದ ಮೇಲಿದ್ದ ಕಾಗೆ ಬಡವಾಗುವುದಕ್ಕೂ ಇರುವ ಕೊಂಡಿಯ ಜೊತೆಗೆ ಒಬ್ಬರನ್ನೊಬ್ಬರು ಶಪಿಸುವ ಹಾಗೂ ಶಾಪ ಫಲಿಸುವ ಬಗೆಯಲ್ಲಿ ಪರಿಸರದ ಹಲವು ವಿಚಾರಗಳು ಮಕ್ಕಳ ಅರಿವಿಗೆ ಬರುತ್ತದೆ.
ಇಲಿಗಳ ತಕ್ಕಥೈ : ಅರಮನೆಯಲ್ಲಿ ಇಲಿಗಳನ್ನು ಹಿಡಿಯಲು ಬೇಕಾದ ಕ್ರಮ ಕೈಗೊಂಡಿದ್ದರು. ಅರಮನೆಯಲ್ಲಿದ್ದ ಇಲಿಗಳ ಕಾಟ ಅದಕ್ಕೆ ಕಾರಣವಾಗಿತ್ತು. ಹಾಗಾದರೆ ಇಲಿಗಳ ಕಾಟ ತಪ್ಪಿತೇ..? ಕೊನೆಯಲ್ಲಿ ಒಂದು ಪ್ರಾಸ ಪದ್ಯ ಮಕ್ಕಳನ್ನು ಸೆಳೆಯುತ್ತಾ.. ಇಲಿಗಳ ತಕ್ಕಥೈಯೊಡನೆ ಮಕ್ಕಳನ್ನು ಕುಣಿಸುತ್ತದೆ.
ಗುಡುಗುಡು ಗುಮ್ಮಟ ದೇವರು : ಉಪಾಯ ಬಲ್ಲವನಿಗೆ ಅಪಾಯವಿಲ್ಲ ಎಂಬಂತೆ ತನ್ನ ಅಜ್ಜಿಯ ಮನೆಗೆ ಹೋದ ಆಡು ದಾರಿಯಲ್ಲಿನ ಅಡೆತಡೆಗಳನ್ನೆಲ್ಲ ದಾಟಿ ಮತ್ತೆ ಮನೆ ಸೇರುವ ಬುದ್ದಿವಂತಿಕೆಯ ಕಥೆಯೊಂದಿದೆ.
ಅರ್ಗಣೆ ಮುದ್ದೆ : ಸೋರೆ ಹಕ್ಕಿಗಳು ಗೂಡು ಕಟ್ಟುವ ಪರಿ ಮನಸೆಳೆಯುವಂತಿದೆ. ಅದೂ ಪರೋಪಕಾರದಿಂದ ಸಿಕ್ಕ ವಸ್ತುಗಳನ್ನು ಬಳಸಿ. ಮರಿಹಕ್ಕಿಗಳ ಹೆಸರು ಬೆಲ್ಲದ ಮಲ್ಲಕ್ಕ, ಕಬ್ಬಿನ ಸುಬ್ಬಕ್ಕ ಹಾಗೂ ಹೂವಿನ ಮಾದೇವಿ. ಮರಿ ಹಕ್ಕಿಗಳು ಹಾಗೂ ಪ್ರಾಣಿ ಪ್ರಪಂಚದ ಸುಂದರ ಕಥೆ ಇದು.
ಸಿಗಡಿ ಯಾಕೆ ಒಣಗಲಿಲ್ಲ : ಕಡಲ ತೀರದ ಕುಟುಂಬವೊಂದರ ಚಿತ್ರಣದ ಪರಿಚಯದ ಜೊತೆಗೆ ಅವರ ಸಂಕಷ್ಟವೂ ಕಾಣುತ್ತದೆ ಇಲ್ಲಿ.
ಹುಲಿಯೋ ಇಲಿಯೋ : ಮಂತ್ರವಾದಿಯ ದಯದಿಂದ ಇಲಿಯೊಂದು ಹುಲಿಯಾದ ಕತೆಯಾದರೂ.. ಇಲ್ಲಿ ಅದು ಇಲಿಯೋ ಹುಲಿಯೋ ಎಂಬುದಕ್ಕೆ ಅದರ ವರ್ತನೆಯೂ ಕಾರಣವಾಗುತ್ತದೆ.
ಅಂಗಳ ದುಗ್ಗು : ಕುಂಬಾರನ ಮನೆಯಲ್ಲಿದ್ದ ಕೋಳಿಯ ಹೆಸರು ಅಂಗಳ ದುಗ್ಗು. ಭತ್ತದ ಕಾಳನ್ನು ಬಿತ್ತಿ ಫಲ ಪಡೆದು ಅದರಿಂದ ಏನು ಮಾಡಿತು? ಸಹಾಯಕ್ಕಾಗಿ ಯಾಚಿಸಿದ ಹಕ್ಕಿಗಳು ಹಾಗೂ ಪಕ್ಷಿ ಪ್ರಪಂಚದ ಪರಿಚಯ ಮಕ್ಕಳಿಗಾಗುತ್ತದೆ.
ಮೆಣಸಿನ ಕಾಳಪ್ಪ : ಮಕ್ಕಳಿಲ್ಲದ ಜವಳಿಗಾರನಿಗೆ ಮಗುವಂತೆ ಬಂದ ಮೆಣಸಿನ ಕಾಳಪ್ಪ ಮಗನಾಗಿ ತನ್ನ ಕರ್ತವ್ಯ ನಿಭಾಯಿಸಿದ ಬಗೆ ಹಾಗೂ ಉಪಾಯದಿಂದ ಯಾವೆಲ್ಲಾ ಅಡೆತಡೆಗಳನ್ನು ಹೇಗೆಲ್ಲಾ ನಿವಾರಿಸಬಹುದು ಜೊತೆಗೆ ಯಾವ ಚಿಕ್ಕ ಸೃಷ್ಟಿಯೂ ಕಡೆಗಣಿಸುವಂತದ್ದಲ್ಲ ಎಂಬುದನ್ನು ಕಲಿಯುತ್ತಾರೆ ಮಕ್ಕಳು.
ಕೊ-ಕ್ಕೊ-ಕ್ಕೋ ಕೋಳಿ : ಅಂಗಳ ದುಗ್ಗು ಮೊಟ್ಟೆ ಇಟ್ಟು ಮರಿ ಮಾಡಿ ಪ್ರೀತಿಯಿಂದ ಬೆಳಸಿದ ಕೋಳಿಯ ಕಥೆ ಇದು. ಇದು ಕುಂಬಾರನ ಹುಂಜ. ರಾಜನ ಮನೆಯವರಿಗೂ ಹೋಗಿ ಧೈರ್ಯದಿಂದ ನನಗೆ ಬೇಕಾದನ್ನು ಪಡೆದ ಚಾಣಾಕ್ಷತೆಯ ಕಥೆ.
ಒಡ್ಡನ ಓಟ : ಮೂವರು ಮಕ್ಕಳಲ್ಲಿ ಹಿರಿಯವನು ಹೆಡ್ಡ, ನಡುವಿನವನು ದಡ್ಡ, ಕಿರಿಯವನು ಒಡ್ಡ ಎನ್ನುತ್ತಾ ಅವರ ಸಾಹಸಗಾಥೆಯನ್ನು ಹೇಳಲು ಹೋದರರೂ ಹೆಸರಿಗೆ ತಕ್ಕಂತೆ ನಡೆದುಕೊಳ್ಳುವ ಅವರ ವರ್ತನೆಗಳು ಹಾಗೂ ಒಡ್ಡನ ಬದುಕನ್ನು ನಾವಿಲ್ಲಿ ಕಾಣಬಹುದು.
ಸೋಮಾರಿ ಮಲ್ಲ : ಪಟೇಲನ ಮನೆಯಲ್ಲಿ ಕೆಲಸಕ್ಕೆ ಸೇರಿದರೂ ತನ್ನ ಮೂಲ ಗುಣ ಸೋಮಾರಿತನವನ್ನೇ ತೋರಿಸಿಕೊಂಡು ಅಲ್ಲಿಂದಲೂ ಹೊರ ಬೀಳುವ ಮುನ್ನ ಏನೆಲ್ಲಾ ಆಯ್ತು..? ಸೋಮಾರಿ ಮಲ್ಲಣ್ಣನ ಗುಣ ಬದಲಾಯಿತೇ ಎಂಬ ಕಥೆ ಇದು.
ಹೊಟ್ಟೆಯೂ ಅವಯವಗಳೂ : ಶರೀರದ ಭಾಗಗಳೆಲ್ಲವೂ ತನ್ನ ಕೆಲಸವೇ ಮೇಲು, ತಾನೇ ಶ್ರೇಷ್ಠ ಎಂದು ಹೇಳಿದರೆ ಹೇಗಿರುತ್ತದೆ..? ಅಕಸ್ಮಾತ್ ಅವುಗಳ ನಡುವಿನಲ್ಲಿ ಜಗಳ ಹೊತ್ತಿಕೊಂಡು ಪರಸ್ಪರರು ಸಹಕರಿಸದೆ ಹೋದರೆ..? ಇಲ್ಲಿಯೂ ಅಂಥದ್ದೇ ಕಥೆ ಇದೆ. ಮಕ್ಕಳಿಗೆ ದೇಹದ ಅಂಗಾಂಗಗಳು ಹಾಗೂ ಅವುಗಳ ಕೆಲಸದ ಮಹತ್ವವನ್ನು ಚೆನ್ನಾಗಿ ಅರ್ಥ ಮಾಡಿಸುವ ಕಥೆ.
ಕೊಳಲ ಜೋಗಿ : ಕಿಂದರಿ ಜೋಗಿ ಕಥೆಯ ರೀತಿಯ ಕಥೆ ಇದು.
ಜೋಡು ನಕ್ಷತ್ರ : ಜೋಡು ನಕ್ಷತ್ರದ ಆಸೆ ಹೊತ್ತ ಇಬ್ಬರು ಮಕ್ಕಳು ಅವುಗಳನ್ನು ಹುಡುಕಿಕೊಂಡು ಹೊರಡುವ ಕಥೆ ಮುಂದೆ ಏನಾಯ್ತು ಓದಿ ನೋಡಿ.
ಮಕ್ಕಳಲ್ಲಿ ಸಾಹಸವನ್ನು ಪ್ರೇರೇಪಿಸುವ ಬಗೆ, ಯಾರೂ ಕನಿಷ್ಠರಲ್ಲ ಎಂದು ಹೇಳುವುದು, ಉಪಾಯ ಬಲ್ಲವನಿಗೆ ಅಪಾಯವಿಲ್ಲ ಎನ್ನುವ ಸಂದೇಶ, ಕಷ್ಟಪಟ್ಟು ದುಡಿದು ತಿನ್ನಬೇಕು ಕಳ್ಳತನ ಸಲ್ಲದು, ಪ್ರಾಮಾಣಿಕತೆ ಹಾಗೂ ಬುದ್ಧಿವಂತಿಕೆಯಿಂದ ಬದುಕಿನಲ್ಲಿ ಮೇಲೇರುವ ಸಾರ್ಥಕತೆ, ಕಷ್ಟ ಬಂದಾಗ ಕೈಕಟ್ಟಿ ಕುಳಿತುಕೊಳ್ಳದೆ..ಅಳದೆ ಉಪಾಯದಿಂದ ಯೋಚಿಸಬೇಕಾದ ಅವಶ್ಯಕತೆ, ಪ್ರಾಣಿ-ಪಕ್ಷಿ ಪ್ರಪಂಚ, ನಮ್ಮ ಸುತ್ತಮುತ್ತಲಿನ ಪರಿಸರ, ಕುಟುಂಬ ಹೀಗೆ ಎಲ್ಲವನ್ನೂ ಪರಿಚಯಿಸುವ ಕಥೆಗಳಿವೆ ಇಲ್ಲಿ.
ಮಕ್ಕಳಿಗೆ ಪ್ರತಿ ಕಥೆಯ ಜೊತೆಗೆ ನೀತಿಯನ್ನು ಹೇಳಲೇಬೇಕೆಂಬ ಅವಶ್ಯಕತೆ ಇರುವುದಿಲ್ಲ. ಪೋಷಕರು ಇಂತಹ ಕಥೆಗಳನ್ನು ಹೇಳಿದಾಗ ಮಕ್ಕಳ ಮೇಲೆ ಆಗುವ ಪರಿಣಾಮ ಹೇಗಿರುತ್ತದೆ ಎಂಬುದನ್ನು ಅರಿತಿರಬೇಕು. ಹಾಗಾಗಿ ಮಕ್ಕಳ ಕಥೆಗಳನ್ನು ಪೋಷಕರೂ ಓದುವುದು ಅವಶ್ಯಕ. ಅಲ್ಲದೆ, ಮಕ್ಕಳು ನೋಡಿ ಕಲಿಯುವುದು ಹೆಚ್ಚು. ತಪ್ಪಾದ ಅಥವಾ ದಾರಿ ತಪ್ಪಿದ ನಮ್ಮ ನಡೆಗಳನ್ನು ತಿದ್ದಿಕೊಳ್ಳಲೂ ಇಂತಹ ಕಥೆಗಳು ಅವಶ್ಯಕ.
ಸರಳ ಭಾಷೆಯ ಸುಂದರ ಕಥೆಗಳು ಮಕ್ಕಳನ್ನು ಮೋಡಿ ಮಾಡುವುದರಲ್ಲಿ ಸಂಶಯವಿಲ್ಲ.
~ವಿಭಾ ವಿಶ್ವನಾಥ್

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ