ಗುರುವಾರ, ಅಕ್ಟೋಬರ್ 19, 2017

ಅವರವರು ಕಂಡಂತೆ…!!

                ಇವತ್ತು ನಾನು ನಿಮಗೆ ಹೇಳಹೊರಟಿರುವ ವಿಷಯ ನನ್ನ ಗೆಳಯ ರಂಗನಾಥನದ್ದು. ಚಿಕ್ಕಂದಿನಿದಲೂ ಒಟ್ಟಿಗೆ ಆಡಿ ಬೆಳೆದ ನನ್ನ ಬಾಲ್ಯ ಗೆಳೆಯ ಅವನು. ಅಕ್ಕ-ಪಕ್ಕದ ಮನೆ ಅಲ್ಲದಿದ್ದರೂ ಸಮಾನ ಅಭಿರುಚಿ ಹೊಂದಿದ್ದವರು ನಾವು. ಆದರೆ ಬರುಬರುತ್ತ, ಆತ ಆಟದ ಕಡೆಗೆ ಹೆಚ್ಚು ಒಲವು ತೋರಿಸಿ ಕ್ರೀಡಾ ಚಾಂಪಿಯನ್ ಆಗುತ್ತಾ ಬಂದರೆ , ನನ್ನ ಒಲವು ಸಾಹಿತ್ಯದ ಕಡೆಗೆ ವಾಲಿತು. ಎಷ್ಟಾದರೂ “ಲೋಕೋ ಭಿನ್ನ ರುಚಿ ಅಲ್ಲವೇ?”
                ಆದರೆ ನಮ್ಮಲ್ಲಿ ಸಮಾನವಾದ ವಿಚಾರ ಒಂದಿತ್ತು. ಅದು ನಮ್ಮ ಹುಟ್ಟುಹಬ್ಬ. ಏಳನೇ ತರಗತಿಯವರೆಗೂ ಒಂದೇ ಶಾಲೆಯಲ್ಲಿ ಕಲಿತ ನಾವು ಪ್ರೌಢಶಾಲಾ ಓದಿಗೆ ಬೇರೆ ಶಾಲೆಗೆ ಸೇರಿಕೊಂಡೆವು. ಆದರೆ ಪ್ರತಿ ಹುಟ್ಟುಹಬ್ಬವನ್ನು ಒಟ್ಟಿಗೆ ಆಚರಿಸುವುದನ್ನು ಮಾತ್ರ ಬಿಟ್ಟಿರಲಿಲ್ಲ, ನಂತರ ಪಿ.ಯು ಶಿಕ್ಷಣಕ್ಕೆ ಒಂದೇ ಕಾಲೇಜಿನಲ್ಲಿ ಸೇರಿದೆವು. ಅದುವರೆಗೂ ಕನ್ನಡ ಮಾದ್ಯಮದಲ್ಲಿಯೇ ಓದಿದ್ದರೂ, ಅಪ್ಪ-ಅಮ್ಮನ ಆಸೆಯಂತೆ, ನಾನು ಪಿ.ಯು.ಸಿ ಶಿಕ್ಷಣವನ್ನು ಆಂಗ್ಲ ಮಾಧ್ಯಮದ ವಿಜ್ಞಾನ ವಿಭಾಗದಲ್ಲಿ ಮುಂದುವರೆಸಿದೆ. ರಂಗನಾಥನನ ಅಣ್ಣ ಈಗಾಗಲೇ  ಎಂ.ಬಿ.ಬಿ.ಎಸ್ ಮಾಡುತ್ತಿದ್ದರಿಂದ ಮನೆಯಲ್ಲಿ ಆತನಿಗೆ ಪಿ.ಸಿ.ಎಂ.ಬಿಗೆ ಸೇರಿಸಬೇಕೆನ್ನುವ ಒತ್ತಡ ಉಂಟಾಗಿತ್ತು. ಹಾಗೂ,ಹೀಗೂ ಪಿ.ಸಿ.ಎಂ.ಬಿಯನ್ನೇ ಆರಿಸಿಕೊಂಡ ಇಬ್ಬರೂ, ಒಂದು ವರ್ಷವನ್ನು ಮುಗಿಸಿ ಎರಡನೇ ವರ್ಷಕ್ಕೆ ಕೊನೆಯ ಹಂತ ತಲುಪಿದೆವು. ಅಷ್ಟರಲ್ಲಿ ಅಂತರ ಕಾಲೇಜು ಮಟ್ಟದಲ್ಲಿ ಕ್ರೀಡಾಕೂಟವು ಶುರುವಾದ್ದರಿಂದ ರಂಗನಾಥನೂ, ಅವನನ್ನು ಬೆಂಬಲಿಸಲು ಹೋಗಿ ನಾನು ಇಬ್ಬರೂ ಎರಡನೇ ಪಿ.ಯು. ಸಿಯ ತಲಾ ಎರಡೆರಡು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದೆವು. ನಮ್ಮ ಮನೆಯಲ್ಲಿ ಇದರ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದಿದ್ದರೂ, ರಂಗನಾಥನ ಮನೆಯಲ್ಲಿ ಇದರ ಬಗ್ಗೆ ಬಹಳಷ್ಟು ಚರ್ಚೆ ನಡೆಯಿತು.ಈಗಾಗಲೇ ಎಂ.ಬಿ.ಬಿ.ಎಸ್ ಮಾಡುತ್ತಿದ್ದರಿಂದ ಮನೆಯಲ್ಲಿ ಆತನಿಗೆ ಪಿ.ಸಿ.ಎಂ.ಬಿಗೆ ಸೇರಿಸಬೇಕೆನ್ನುವ ಒತ್ತಡ ಉಂಟಾಗಿತ್ತು. ಹಾಗೂ,ಹೀಗೂ ಪಿ.ಸಿ.ಎಂ.ಬಿಯನ್ನೇ ಆರಿಸಿಕೊಂಡ ಇಬ್ಬರೂ, ಒಂದು ವರ್ಷವನ್ನು ಮುಗಿಸಿ ಎರಡನೇ ವರ್ಷಕ್ಕೆ ಕೊನೆಯ ಹಂತ ತಲುಪಿದೆವು. ಅಷ್ಟರಲ್ಲಿ ಅಂತರ ಕಾಲೇಜು ಮಟ್ಟದಲ್ಲಿ ಕ್ರೀಡಾಕೂಟವು ಶುರುವಾದ್ದರಿಂದ ರಂಗನಾಥನೂ, ಅವನನ್ನು ಬೆಂಬಲಿಸಲು ಹೋಗಿ ನಾನು ಇಬ್ಬರೂ ಎರಡನೇ ಪಿ.ಯು. ಸಿಯ ತಲಾ ಎರಡೆರಡು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದೆವು. ನಮ್ಮ ಮನೆಯಲ್ಲಿ ಇದರ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದಿದ್ದರೂ, ರಂಗನಾಥನ ಮನೆಯಲ್ಲಿ ಇದರ ಬಗ್ಗೆ ಬಹಳಷ್ಟು ಚರ್ಚೆ ನಡೆಯಿತು.
          “ಒಂದು ಪರೀಕ್ಷೆ ನಮ್ಮ ಜೀವನವನ್ನು ನಿರ್ಧಾರ ಮಾಡುವುದಿಲ್ಲ”ವೆಂದು ನಾವು ವಾದ ಮಾಡಿದರೂ, ಕ್ರಮೇಣ ನಾವು ನಮ್ಮ ನಿರ್ಧಾರ ಬದಲಿಸಿ, ಇಬ್ಬರೂ ಆ ವರ್ಷದ ಸಪ್ಲಿಮೆಂಟ್ ಪರೀಕ್ಷೆ ತೆಗೆದುಕೊಳ್ಳುತ್ತೇವೆಂದು ಟ್ಯೂಷನ್ ಗೆ ಹೋಗಲು ತೀರ್ಮಾನ ಮಾಡಿ ಮನೆಯವರ ಒಪ್ಪಿಗೆ ಪಡೆದುಕೊಂಡೆವು.
          ನಾನು ಟ್ಯೂಷನ್ ಗೆ ಹೋಗುತ್ತಿದ್ದರೂ ರಂಗನಾಥ ಬರುತ್ತಲೇ ಇರಲಿಲ್ಲ. ಅವನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಎರಡು-ಮೂರು ದಿನ ಕಳೆದರೂ ಅವನ ಪತ್ತೆಯೇ ಇಲ್ಲ. ಕೊನೆಗೆ ನಾನು ಅವರ ಮನೆಗೆ ಹೋಗಿ ಅವನನ್ನು ಬೈದು, ಟ್ಯೂಷನ್ ಗೆ ಕರೆದುಕೊಂಡು ಹೋಗಲು ತೀರ್ಮಾನಿಸಿ ಬೆಳಗ್ಗೆಯೇ ಅವನ ಮನೆಗೆ ಹೋದೆ. ಅಲ್ಲಿ ನನಗೆ ಕಂಡ ದೃಶ್ಯ ನನಗೆ ಜೀವನವಿಡೀ ಮರೆಯಲು ಸಾಧ್ಯವಿಲ್ಲ. ಅವನ ಫೋಟೋಗೆ ಹಾಕಿದ ಹಾರ ದಂಗುಬಡಿಸಿತು. ಹೌದು ನನ್ನ ಗೆಳೆಯ ಎಂದು ಮರಳಿ ಬಾರದ ಲೋಕಕ್ಕೆ ಹೋಗಿಬಿಟ್ಟಿದ್ದ.
          ನನಗೆ ಅದಕ್ಕಿಂತ ಹೆಚ್ಚಿನ ಆಶ್ಚರ್ಯ ತಂದದ್ದು ಅವನ ಸಾವಿನ ಕಾರಣ. ಅಂದು ಬೆಳಿಗ್ಗೆಯೇ ಮನೆಗೆ ಹಬ್ಬದ ಸಾಮಾನು ತರಲು ಹೊರಟ ರಂಗನಾಥ ಅವತ್ತು ತನ್ನ ಮೊಬೈಲನ್ನು ಮನೆಯಲ್ಲಿಯೇ ಬಿಟ್ಟಿದ್ದ. ಆಗಲೇ ಅವನ ಮೊಬೈಲ್ ಗೆ ಒಂದು ಕರೆ ಬಂದಿತ್ತು. ಆ ಕರೆಯನ್ನು ಅವನ ಅಣ್ಣ ಸ್ವೀಕರಿಸಿದ.ಆ ಕರೆಯ ಸಾರಾಂಶ ಇಷ್ಟು: “ನಿಮ್ಮ ಮಗ ನಮ್ಮ ಮೊಬೈಲ್ ಅಂಗಡಿಯಿಂದ ಮೊಬೈಲ್ ಕದ್ದಿದ್ದಾನೆ. ಆದ್ದರಿಂದ ನಾವು ಪೊಲೀಸರಿಗೆ ದೂರು ನೀಡಿದ್ದೇವೆ, ಇನ್ನಾದರೂ ನಿಮ್ಮ ಮಗನಿಗೆ ಒಳ್ಳೆಯ ಬುದ್ದಿ ಕಲಿಸಿ”. ಇದಾದ ನಂತರ ಅವನ ಅಣ್ಣ ಮೊಬೈಲ್ ಸ್ವಿಚ್ ಆಫ್ ಮಾಡಿಬಿಟ್ಟ. ಅಪ್ಪ-ಅಮ್ಮನಿಗೂ ವಿಷಯ ತಿಳಿಸಿದಾಗ, ಅವನ ತಾಯಿ “ನಮ್ಮ ಮನೆಯ ಮರ್ಯಾದೆ ತೆಗೆದ,ಇಷ್ಟು ದಿನದಿಂದ ಕಾಪಾಡಿಕೊಂಡು ಬಂದಿದ್ದ ಮರ್ಯಾದೆಯನ್ನೆಲ್ಲ ಬೀದಿ ಪಾಲು ಮಾಡಿದೆ.”ಎಂದು ರಂಗನಾಥನನ್ನು ಹೊಡೆದರು. ಅವನು ಎಷ್ಟು ಹೇಳಿದರೂ ಕೇಳದೆ ಅವನನ್ನು ನಿಂದಿಸಿದರು.
                 ಇಷ್ಟೆಲ್ಲಾ ನಡೆದ ನಂತರ, ರಾತ್ರಿ ರಂಗನಾಥ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ. ಹಬ್ಬದ ಮನೆ ಅಂದು ಮಸಣವಾಯಿತು.
                       ಆ ಸಾವಿನ ನಂತರ ತಿಳಿದುಬಂದದ್ದೇನೆಂದರೆ, ಆ ಕರೆ ಆತನ ಗೆಳೆಯರು ಮಾಡಿದ ಫ್ರಾಂಕ್ ಕಾಲ್ ಆಗಿತ್ತು. ಇಷ್ಟಕ್ಕೂ “ಪಿ.ಯು.ಸಿ ಪರೀಕ್ಷೆಯ ಫಲಿತಾಂಶಕ್ಕೇ ತಲೆಕೆಡಿಸಿಕೊಳ್ಳದ ಆತ ಇದಕ್ಕೆ ಮನನೊಂದನೆ,,,? ಆತ್ಮ ಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿನವನಾದನೆ?”
“ಕ್ರೀಡೆಯಲ್ಲಿ ಚಾಂಪಿಯನ್ ಆಗಿದ್ದಾತ ನಿಜ ಜೀವನದಲ್ಲಿ ಸೋತನೆ? ತನ್ನ ಸಾವಿಗೆ ತಾನೇ ಕಾರಣನೇ ? ”
“ತಮಾಷೆ ಹೋಗಿ ಅಮಾಸೆಯಾಯಿತೆ? ಐದು ನಿಮಿಷ ತಮಾಷೆ ಮಾಡಲು ಹೋಗಿ ಆತನ ಗೆಳೆಯರೇ ಆತನ ಪಾಲಿಗೆ ಮೃತ್ಯುವಾದರೇ?”
“ಮನೆಯವರು ಮಗ ತಪ್ಪು ಮಾಡಿದ್ದನೆಂದು ಬೈದದ್ದು ತಪ್ಪೇ? ಅಥವಾ ಮಗನನ್ನೇ ನಂಬದೇ ತಪ್ಪು ಮಾಡಿದರೆ? ತಾಯ್ತಂದೆಯರೆ ಅವನ ಪಾಲಿನ ಯಮದೂತರಾದರೇ? ”
“ಆತನ ಅಣ್ಣ ಮೊಬೈಲನ್ನು ಆ ಕ್ಷಣಕ್ಕೆ ಸ್ವಿಚ್ ಆಫ್ ಮಾಡದೆ ಇಟ್ಟಿದ್ದರೆ ನಿಜ ತಿಳಿಯುತ್ತಿತ್ತೇ? ಪ್ರತ್ಯಕ್ಷ ಕಂಡರು ಪ್ರಮಾಣಿಸಿ ನೋಡದೆ ಆತ ತಪ್ಪು ಮಾಡಿದನೇ?ಆತನ ಅಣ್ಣನೆ ಆತನ ಸಾವಿನ ಪಾಶವಾದನೇ?”
ಕಾರಣ ಹುಡುಕುತ್ತ ಹೊರಟರೆ ನೂರೆಂಟು ಸಿಗುತ್ತವೆ ಎಲ್ಲಾ “ಅವರವರು ಕಂಡಂತೆ…” ಆದರೆ ಸತ್ತವರು ಮರಳಿ ಬರುವರೆ…?
ಯುವ ಜನತೆ ದುರ್ಬಲ ಮನಸ್ಸಿನವರಗದೆ, ತಾಯ್ತಂದೆ ತಮ್ಮ ಮಕ್ಕಳನ್ನು ನಂಬಿದರೆ, ಫ್ರಾಂಕ್ ಕಾಲ್ ಮಾಡದೆ, ಬೇರೆಯವರನ್ನು ಸಾವಿನ ದವಡೆಗೆ ತರುವಷ್ಟು ತಮಾಷೆ ಮಾಡದೆ, ಕ್ಷಣಕಾಲ ತಾಳ್ಮೆಯಿಂದ ಯೋಚಿಸಿದರೆ ಇನ್ನಾದರೂ ಎಷ್ಟೋ ರಂಗನಾಥನ ಸಾವು ತಪ್ಪುತ್ತದೆ
                                                                                                                   -vಭಾ

ಸೋಮವಾರ, ಸೆಪ್ಟೆಂಬರ್ 18, 2017

ಜೀವನಯಾನ

ಒಂದೇ ದೋಣಿಯ ಪಯಣಿಗರು ನಾವು
ದೂರ ತೀರವ ಸೇರಲು ಹೊರಟಿರುವವು
ಹತ್ತಿರವಾದಷ್ಟು ದೂರವೆಂದೆನಿಸುತ್ತಾ,
ದೂರ ಹೋಗಲು ಹತ್ತಿರವಾಗಿರಬೇಕೆಂದೆಣಿಸುತ್ತಾ,
ಸಾಗುತಿಹೆವು ಜೀವನ ಕಡಲಿನಲಿ...
ನಾ ನಿನಗಾದರೆ ನೀ ನನಗೆಂದು,
ನಮ್ಮಲ್ಲೇ ಅಡ್ಡ-ಗೋಡೆಯ ನಿರ್ಮಾಣ ಮಾಡುತ್ತಾ,
ದೂರ ದಿಗಂತದ ಕನಸ  ಕಾಣುತ್ತಾ,
ಯಾವುದೇ ಚಂಡಮಾರುತ ಬರದಿರಲೆಂದು ಪ್ರಾರ್ಥಿಸುತ್ತಾ,
ನೂರಾಸೆಗಳಿದ್ದರೂ ನುಚ್ಚುನೂರಾಗಿಸುತ್ತಾ,
ನಮ್ಮ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿರವೆವೇ?
ಆಸೆಗಳು ಭಿತ್ತಿಯಲಿ ಮೂಡಿ ಮರೆಯಾಗಿರಲು,
ಚಿತ್ತ ವಿಕ್ಷಿಪ್ತಿಯ ಭ್ರಾಂತಿಯ ತೊರೆಯುತ್ತಾ,
ತಲುಪಿರುವೆವು ನಮ್ಮಯ ತೀರಕೆ,
ತೀರ ತಲುಪಿದ ಮೇಲೆ  ಹೊಸದಾದ ಬದುಕು.
ಹೊಸ ಬದುಕಿನೊಂದಿಗೆಹೊಸ ಕನಸು.
ಹೊಸ ಕನಸ ಕಾಣುತ್ತಾಹಳೆಯದನ್ನು ನೆನೆಯುತ್ತಾ,
ಸಾಗುತಲಿದೆ ನಮ್ಮಯ ಜೀವನಯಾನ...
                                       -vಭಾ

ಸೋಮವಾರ, ಸೆಪ್ಟೆಂಬರ್ 11, 2017

ಕತ್ತಲು-ಬೆಳಕಿನ ಕಣ್ಣಾಮುಚ್ಚಾಲೆಯಲಿ ಸತ್ಯ-ಮಿಥ್ಯೆ

ಕಡು ಕಪ್ಪು ಕತ್ತಲು ಇಷ್ಟವೆಂದರೆ,
ಬೆಳಕು ಇಷ್ಟವಿಲ್ಲವೆಂದೇನಲ್ಲ.
ಬೆಳಕು ಬರುತ್ತದೆಯೆಂದು ಕಾಯಲೇಬೇಕು
ಹಾಗೆ ಕಾಯುತ್ತಲೇ ಇರುವವರು ಅನಾಥರು
ಬದುಕಿನ ಸತ್ಯ ತಿಳಿಯುವುದಕ್ಕಿಂತ,
ಇರುವ ಬದುಕೇ ಸುಖವಾಗಿರುವುದು.
ಸತ್ಯ ಸ್ವೀಕರಿಸಲೇಬೇಕು, ಇಲ್ಲವೆಂದಲ್ಲ
ಇಷ್ಟು ವರ್ಷ ಸತ್ಯವಿಲ್ಲದೆ ಬದುಕಿರಲೇ ಇಲ್ಲವೇ?
ಸುಖವಾಗಿ, ಎಲ್ಲರೊಳಗೊಂದಾಗಿ ಬದುಕಿದ್ದೆವು
ಬೆಳಕು, ಸತ್ಯದ ಬೆಳಕು ಬಂದಿತು
ಬೇರ್ಪಡಿಸಿತು ಎಲ್ಲರ ಒಗ್ಗಟ್ಟು.
ಬೆಳಕಿನಿಂದ ಒಗ್ಗಟ್ಟು ಒಡೆದು ಹೋಗುವುದಕ್ಕಿಂತ,
ಎಲ್ಲರಿಂದ ದೂರವಾಗುವುದಕ್ಕಿಂತ,
ಕಡುಕತ್ತಲೆಯೇ ಸಾಕಲ್ಲವೇ? ಅದೇ ಇಷ್ಟವಲ್ಲವೇ?
ಕತ್ತಲೆಂದರೆ ಅಜ್ಞಾನವಲ್ಲ, ರಾತ್ರಿಯಲ್ಲ
ಕತ್ತಲು ನಮ್ಮಂತೆ ನಾವು ಬದುಕಲು ಬಿಡುವ ಸೊಬಗು
ಕತ್ತಲು-ಬೆಳಕಿನ ಈ ಕಣ್ಣಾಮುಚ್ಚಾಲೆಯಲ್ಲಿ,
ಸತ್ಯ-ಮಿಥ್ಯೆಯಲ್ಲಿ ಕಾಣುವುದು ನಮ್ಮದೇ ಬದುಕು
                                               -vಭಾ

ಮಂಗಳವಾರ, ಸೆಪ್ಟೆಂಬರ್ 5, 2017

ಗುರುನಮನ

"ಗುರು ಬ್ರಹ್ಮ,ಗುರು ವಿಷ್ಣು, ಗುರು ದೇವೋ ಮಹೇಶ್ವರಃ,
ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀ ಗುರುವೇ ನಮಃ".
ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿ ರೂಪವೇ ಆಗಿರುವ ಗುರುವಿಗೆ ವಂದನೆಗಳು. ಹೌದು, ಗುರುಗಳು ಯಾವ ದೇವರಿಗೂ ಕಡಿಮೆ ಇಲ್ಲ. ಏನೂ ಗೊತ್ತಿಲ್ಲದೆ ಇರುವ ಎಳೆಯ ಮುಗ್ಧ ಜೀವವನ್ನು ಸಮಾಜದ ಅತ್ಯುನ್ನತ ನಾಗರೀಕನನ್ನಾಗಿ ರೂಪಿಸಲು ತನ್ನ ಜೀವನವನ್ನೇ ಮುಡುಪಾಗಿಡುವ ಗುರುಗಳು ಅತ್ಯುನ್ನತ ಸ್ಥಾನದಲ್ಲಿಯೇ ಸ್ಥಾಪಿತರಾಗಿರುತ್ತಾರೆ.
         ಗುರು ಅಥವಾ ಶಿಕ್ಷಕರು ಶಿಕ್ಷಣವನ್ನಷ್ಟೇ ಅಲ್ಲದೇ, ಜೀವನಕ್ಕೆ ಬೇಕಾದ ಮೌಲ್ಯಗಳು, ಉತ್ತಮ ನಡತೆಗಳನ್ನೂ ಭೋಧಿಸುತ್ತಾರೆ. ತಾಯಿಯೇ ನಮ್ಮ ಜೀವನದ ಮೊದಲ ಗುರು. ನಂತರ ಆ ಸಾಲಿನಲ್ಲಿ ತಂದೆ,ಸಹೋದರ-ಸಹೋದರಿಯರು, ಶಿಕ್ಷಕರು, ಬಂಧು-ಮಿತ್ರರೂ ಸೇರುತ್ತಾರೆ. ಜೀವನದಲ್ಲಿ ಒಂದಕ್ಷರ ಕಲಿಸಿದವರೂ ಸಹ ಗುರುಗಳೇ. ಪರಿಸರವೂ ಒಂದರ್ಥದಲ್ಲಿ ಮನುಷ್ಯನ ಗುರು.
ಆದರೆ, ಶಾಲೆಯಲ್ಲಿ ಕಲಿಯುವ ಪಾಠ ಇದೆಲ್ಲಕ್ಕೂ ಭಿನ್ನವಾದುದು. ಶಿಕ್ಷಿಸಿ,ಕ್ಷಮಿಸಿ,ಕಲಿಸುವವರು (ಶಿಕ್ಷಕರು) ಇದಕ್ಕೆ ಕಾರಣೀಕರ್ತರು. ಶಿಕ್ಷೆ ಕೂಡಾ ಶಿಕ್ಷಣದ ಒಂದು ಭಾಗವೇ ಆಗಿದೆ. "ಹರ ಮುನಿದರೆ ಗುರು ಕಾಯ್ವನು, ಆದರೆ ಗುರು ಮುನಿದರೆ..?"
ಗುರು ಮುನಿದ ಉದಾಹರಣೆಗಳು ಅತಿ ವಿರಳವೇ ಆಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಗುರುಗಳು ಶಿಕ್ಷೆ ನೀಡುತ್ತಾರೆಯೇ ಹೊರತು ಯಾವುದೇ ದ್ವೇಷದಿಂದಲ್ಲ. ಆದರೆ ಇಂದಿನ ಶಿಕ್ಷಣದ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗುತ್ತಿರುವುದು ಶೋಚನೀಯ.
"ಹಿಂದೆ ಗುರುವಿದ್ದ, ಮುಂದೆ ಗುರಿಯಿತ್ತು
ಸಾಗುತ್ತಿತ್ತು ರಣವೀರರ ದಂಡು"
ಎಂಬುದು ಹಿಂದಿನ ನುಡಿಯಾದರೆ
"ಹಿಂದೆ ಗುರುವೂ ಇಲ್ಲ, ಮುಂದೆ ಗುರಿಯೂ ಇಲ್ಲ
ಸಾಗುತ್ತಿದೆ ರಣ ಹೇಡಿಗಳ ಹಿಂಡು"
ಎಂಬುದು ಇಂದಿನ ನುಡಿಯಾಗುತ್ತಿದೆ.
ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಿದರೆ, ಶಿಕ್ಷಕರ ಶ್ರಮಕ್ಕೆ ತಕ್ಕ ಪ್ರತಿವಂದನೆಗಳನ್ನು ಸಲ್ಲಿಸಬಹುದು.ಶಿಕ್ಷಕರು ಹೇಳಿಕೊಟ್ಟ ಪಾಠವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅವರ ಋಣವನ್ನು ಅಲ್ಪಮಟ್ಟಿಗೆ ತೀರಿಸಿದ ತೃಪ್ತಿ ಸಿಗುತ್ತದೆ.
     ಶಿಕ್ಷಕರ ಸ್ಥಾನವನ್ನು ನಿರೂಪಿಸುವ ದೃಷ್ಟಾಂತ ಹೀಗಿದೆ. ಒಮ್ಮೆ ಒಂದು ರಾಜ್ಯದ ರಾಜನಿಗೆ ವಿದ್ಯೆ ಕಲಿಯುವ ಆಸೆಯಾಯಿತು.ಆದ್ದರಿಂದ ರಾಜ ಒಬ್ಬರು ಗುರುಗಳನ್ನು ನೇಮಿಸಿಕೊಂಡ. ಪಾಠ ಕಲಿಯುವಾಗಲೂ ರಾಜ ತನ್ನ ಸಿಂಹಾಸನವನ್ನು ಬಿಡದೆ ಅಲ್ಲಿಯೇ ಕುಳಿತು ಪಾಠ ಹೇಳಿಸಿಕೊಳ್ಳುತ್ತಿದ್ದ. ಎಷ್ಟೇ ಪ್ರಯತ್ನಪಟ್ಟರೂ, ರಾಜನಿಗೆ ವಿದ್ಯೆ ಕಲಿಯಲು ಆಗಲೇ ಇಲ್ಲ. ನಂತರ ವಿಶ್ಲೇಷಿಸಿ ನೋಡಿದಾಗ ರಾಜನಿಗೆ ಅದರ ಕಾರಣ ದೊರೆಯಿತು. ಅದರ ಕಾರಣವೇನೆಂದರೆ , ರಾಜ ಕುಳಿತುಕೊಳ್ಳುವ ಜಾಗ ಆತನ ಗುರು ಕುಳಿತುಕೊಳ್ಳುವ ಜಾಗದಿಂದ ಎತ್ತರದಲ್ಲಿದ್ದಿತು. ಶಿಷ್ಯನ ತನ್ನ ಸ್ಥಾನ ಎಂದೆಂದಿಗೂ ಗುರುವಿಗಿಂತ ಕೆಳಗೆ ಎಂದರಿತು ಅಹಂಕಾರವನ್ನು ತೊರೆದಾಗ ವಿದ್ಯೆ ಒಲಿಯುತ್ತದೆ. ಅದಕ್ಕಾಗಿಯೇ ಹಿರಿಯರು ಹೇಳಿರುವುದು "ಗುರುವಿನ ಗುಲಾಮನಾಗದ ಹೊರತು ದೊರೆಯದಣ್ಣ ಮುಕುತಿ."
ಜೀವನದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಪಾಠ ಕಲಿಸಿದ ಎಲ್ಲಾ ಗುರುಗಳಿಗೂ ಧನ್ಯವಾದಗಳು.
                                                                                                -vಭಾ

ಶನಿವಾರ, ಸೆಪ್ಟೆಂಬರ್ 2, 2017

ಕನಸುಗಳ ಜೊತೆಗೆ ಒಂದಿಷ್ಟು...

ಒಂದಿಷ್ಟು ಬಣ್ಣ ಬೇಕಾಗಿದೆ,
ಕನಸುಗಳಿಗೆ ಬಳಿಯಲು...

ಒಂದಿಷ್ಟು ಸಮಯ ಬೇಕಾಗಿದೆ,
ಕನಸುಗಳನು ಹಂಚಿಕೊಳ್ಳಲು...

ಒಂದಿಷ್ಟು ಧೈರ್ಯ ಬೇಕಾಗಿದೆ,
ಕನಸುಗಳ ಸಾಕಾರಗೊಳಿಸಲು...

ಒಂದಿಷ್ಟು ಸಹನೆ ಬೇಕಾಗಿದೆ,
ಕನಸುಗಳ ನನಸಿನ ಹಾದಿ ಸವೆಸಲು...

ಒಂದಿಷ್ಟು ತ್ಯಾಗ ಬೇಕಾಗಿದೆ,
ಕನಸಿನ ಬದುಕ ಬದುಕಲು...
                               -vಭಾ

ಋಣ

ತೀರಬಲ್ಲದೇ ಇವರೆಲ್ಲರ ಋಣ?
ತೀರಲಾರದು ಎಷ್ಟೇ ಜನುಮವೆತ್ತಿದರೂ...

ಜನುಮ ನೀಡಿದ ತಾಯ್ತಂದೆಯರ ಋಣ,
ಉಸಿರು ನೀಡಿದ ಗಾಳಿಯ ಋಣ
 ತೀರಬಲ್ಲದೇ ಇವರೆಲ್ಲರ ಋಣ?

ಬೆಳಕು ,ಶಾಖ ನೀಡಿದ ರವಿಯ ಋಣ,
ವಿದ್ಯೆ ಕಲಿಸಿ, ತಿದ್ದಿ ತೀಡಿದ ಗುರುಗಳ ಋಣ
 ತೀರಬಲ್ಲದೇ ಇವರೆಲ್ಲರ ಋಣ?

ಜೊತೆಯಲಿದ್ದು ಆಸರೆಯಾದ ಸ್ನೇಹಿತರ ಋಣ,
ನೋವು-ನಲಿವಿಗೆ ಜೊತೆಯಾಗಿದ್ದ ಬಂಧುಗಳ ಋಣ
 ತೀರಬಲ್ಲದೇ ಇವರೆಲ್ಲರ ಋಣ?

ಗೊತ್ತಿದ್ದೋ, ಗೊತ್ತಿಲ್ಲದೆಯೋ ಪಾಠ ಕಲಿಸಿದವರ ಋಣ
ಮುಗುಳ್ನಗೆಯಂದದಿ ಜಗವನ್ನೇ ಗೆಲ್ಲಲು ಕಲಿಸಿದವರ ಋಣ
 ತೀರಬಲ್ಲದೇ ಇವರೆಲ್ಲರ ಋಣ?

ತೀರಿಸಲು ಹೊರಟಿಲ್ಲ ಈ ಋಣವ
ನಮಗೆ ದಾರಿದೀಪವಾದವರ ನೆನೆಸುತ್ತಾ,
ಮಿನುಗುವ ಹಣತೆಯಾಗುವಾಸೆ...

ತೀರಬಲ್ಲದೇ ಇವರೆಲ್ಲರ ಋಣ?
ತೀರಲಾರದು ಎಷ್ಟೇ ಜನುಮವೆತ್ತಿದರೂ...
                                     -vಭಾ 

ಬುಧವಾರ, ಆಗಸ್ಟ್ 30, 2017

ಹೆಜ್ಜೆ ಗುರುತುಗಳು














ನಿನ್ನ ಹೆಜ್ಜೆ ಗುರುತುಗಳ ಅರಸಿ ಹೊರಟಿರುವೆ ನಾನು,
ನನ್ನ ಕಣ್ಣೀರಿನಲಿ ಕಲಸಿಹೋಗಿವೆ ಅವು...
ಕಾಲಾಂತರಾಳದಲಿ ಹುದುಗಿ ಹೋಗಿವೆ ಹೆಜ್ಜೆಗಳು...
ನೀ ತೊರೆದ ನಂತರ ಭಾವಭೃಂಗವ ತಲುಪಿ,
ನಿಶ್ಶಬ್ಧದ ರೂಪು-ರೇಷೆಗಳಾಗಿ ಬದಲಾಗಿವೆ ಅವು.
ಅಂದು ನೀ ತುಳಿದ ಸಪ್ತಪದಿಯ ಹೆಜ್ಜೆಗಳು,
ಮರಳ ಮೇಲೆ ನೀ ಮೂಡಿಸಿದ ಹೆಜ್ಜೆಗಳು,
ಗೆಜ್ಜೆ ಕಟ್ಟಿಕೊಂಡು ನಾಟ್ಯ ಮಾಡಿದ ಹೆಜ್ಜೆಗಳು,
ಸಪ್ಪಳವಿಲ್ಲದಂತೆ ನನ್ನಂತರಂಗವ ತುಂಬಿರುವ ಹೆಜ್ಜೆಗಳು,
ಹೇಗೆಂದು ಬಣ್ಣಿಸಲಿಎಷ್ಟೆಂದು ವರ್ಣಿಸಲಿ?!
ನೀ ನನ್ನೆದೆಯಾಳದಲಿ ಮೂಡಿಸಿದ ಹೆಜ್ಜೆ ಗುರುತುಗಳ,
ಸಪ್ತಪದಿಯಲಿ ಜೊತೆಯಲಿ ತುಳಿದ ಹೆಜ್ಜೆಗಳು ಮಾಯವಾಗಿವೆ,
ಮರಳ ಮೇಲೆ ಮೂಡಿದ ಹೆಜ್ಜೆಯ ಅಲೆಯಳಿಸಿದೆ,
ಗೆಜ್ಜೆಗಳು ನರ್ತಿಸುವ ಹೆಜ್ಜೆಗಳಿರದೆ ನಲುಗಿ ಹೋಗಿವೆ.
ನನ್ನಂತರಂಗ ಮಾತ್ರ ನಿನ್ನನ್ನು ಎಲ್ಲೆಲ್ಲೂ ಅರಸಿದೆ.
ನಾನು ಬರುತ್ತಿರುವೆ ನಿನ್ನ ಹೆಜ್ಜೆ ಗುರುತುಗಳನ್ನನುಸರಿಸಿ,
ಮೂಡಿಸುವ ನಮ್ಮೆಜ್ಜೆಗುರುತುಗಳ ಎಂದೆಂದು ಜೊತೆಯಾಗಿ...
                                                       -vಭಾ

ಕನಸುಗಳಿಗೆ ಸಾವಿಲ್ಲ...

ಮನದ ಬಾಂದಳದಲಿ ನಿಂತು,
ಸುತ್ತ-ಮುತ್ತಲ್ಲೆಲ್ಲಾ ಅವಲೋಕಿಸಿದಾಗ
ಅರೆರೆ! ಕನಸಿನ ಕಲ್ಪವೃಕ್ಷಗಳು
ಯಾವುದೋ ಅರೆಗಳಿಗೆಯಲಿ ಕಂಡ ಕನಸುಗಳು,
ನಿದ್ದೆಯಲಿ ಕಂಡ ಕನಸುಗಳಲ್ಲ ಅವು,
ಎಚ್ಚರವಿದ್ದಾಗ ಪಡಿಮೂಡಿದ ಕೂಸುಗಳು
ನಂತರ ಯಾರದೋ ದರ್ಪಕೆ, ಹೀಯಾಳಿಕೆಗೆ
ಅವಮಾನಕೆ ಸಿಕ್ಕು ನಲುಗಿದ್ದ ಕನಸುಗಳು.
ನಂಬಿಕೆಯೆಂಬ ಹನಿ ಅಮೃತದೊಂದಿಗೆ ಬದುಕಿದವು.
ಕಂಡ ಕನಸುಗಳಾವು ಕಳೆದು ಹೋಗಿಲ್ಲ,
ಸತ್ತಂತಿರುವ ಕನಸುಗಳಿಗೂ ನನಸೆಂಬ ಮರುಹುಟ್ಟು
ಹಾಲಾಹಲವ ನುಂಗಿ ಬದುಕುವ ಅಮೃತಫಲಗಳಿವು
ಯಾರ, ಯಾವ ಕನಸಿಗೂ ಸಾವಿಲ್ಲ.
ಯಾರದೋ ಕನಸುಗಳು, ಯಾವುದೋ ಕಂಗಳಲಿ...
ಬದುಕಿ ಬಾಳುವ ಕನಸುಗಳಿಗೆಂದಿಗೂ ಸಾವಿಲ್ಲ...
                                                    -vಭಾ

ಬುಧವಾರ, ಆಗಸ್ಟ್ 23, 2017

ವೇಣುಗಾನದ ಮೋಡಿ...

ನಿನ್ನ ವೇಣುಗಾನದಿ ಎಂಥ ಮೋಡಿಯೋ?
ಮರುಳಾಗಿದೆ ಮನ ಆ ನಿನ್ನ ಗಾನಕೆ
ಎಲ್ಲಾ ಚಿಂತೆಗಳ ಮರೆತು ಕುಳಿತು,
ಎಲ್ಲಾ ಬಿಗುಮಾನಗಳ ಬಿಟ್ಟು ಆಲಿಸೆ...
ಮನದ ನೋವೆಲ್ಲವೂ ಮರೆವುದು.
ಹಿರಿಯ-ಕಿರಿಯರೆಲ್ಲರಿಗೂ ಚೈತನ್ಯದ ಚಿಲುಮೆಯು,
ನಿನ್ನ ಕೊಳಲ ಗಾನದುಲಿಗೆ ಸರಿಸಾಟಿ ಯಾರಿಹರು?
ಬಾಳಿನಲಿ ಹೊಸ ಹರ್ಷ ನೀಡುವ ಗಾನಕೆ,
ಮನಸೋತಿಹೆವು ನಿನ್ನ ಮಾಂತ್ರಿಕ ಸ್ಪರ್ಷಕೆ
ಇಂಪಾದ ದನಿಯಲಿ ಎಲ್ಲರಿಗೂ ಮಾಡಿರುವೆ ಮೋಡಿ
ಹಾತೊರೆಯುತಿದೆ ಮನ ಮತ್ತದೇ ಗಾನಕೆ... 
ಮುಗಿದ ನಿನ್ನ ಮುರಳಿಗಾನ ಕೂಡ ಧ್ವನಿಸುತಿಹುದು ಇಲ್ಲಿಯೇ,
ಮತ್ತೆ,ಮತ್ತೆ  ಭ್ರಮಿಸುತಿರುವೆವು ನೀ ಇಲ್ಲೇ ಇರುವೆಯೆಂದು
ನೀಲ ವರ್ಣ, ನವಿಲುಗರಿ, ಕೈಯ್ಯಲ್ಲೊಂದು ಕೊಳಲು
ನೀಲ ಶ್ಯಾಮನ ಗಾನಕೆ ಸ್ವರ್ಗವೇ ಇಳೆಗಿಳಿದಿದೆ.
ಸುಪ್ತ ಭಾವಗಳೂ ಗರಿಗೆದರಿ ನರ್ತಿಸುತ್ತಲಿವೆ...
ಮನದೆಲ್ಲಾ ಕಾರ್ಮೋಡಗಳು ಕರಗಿ ಕಂಬನಿಯಾಗಿವೆ
ನಿನ್ನ ಗಾನದ ಮೋಡಿಗೆ, ಸಕಲ ಸೃಷ್ಟಿಯೂ ಸಿಲುಕಿದೆ 
                                                        -vಭಾ

ನೆರಳು-ಬೆಳಕು

ನೆರಳು ಬೆಳಕಿನ ಕಣ್ಣುಮುಚ್ಚಾಲೆಯಲಿ,
ಕಂಡದೆಷ್ಟೋಅರ್ಥವಾದುದು ಎಷ್ಟೋ?
ಬೆಳಕಿನ ಪತ್ತಲಕೆ ಕತ್ತಲ ಕಸೂತಿ,
ಕಪ್ಪು-ಬಿಳುಪಿನ ಹಿಂದೆ ಮನಸಿನ ಭ್ರಾಂತಿ.
ಹೋದ ಹೊತ್ತು ಮರಳಿಯಂತೂ ಬಾರದು
ಬಣ್ಣದ ಪ್ರಪಂಚದಲಿ ತಮ್ಮ ನೆರಳನೇ ಮರೆತವರೆಷ್ಟೋ?
ಅಗಣಿತ ತಾರೆಗಳ ಸ್ವಚ್ಚಂದ ಬೆಳಕಿನಲಿ,
ಆಗಸದಿ ಚಂದಿರನ ಕಣ್ಣುಮುಚ್ಚಾಲೆ...
ಹಗಲಲ್ಲಿ ನೇಸರನ ನೆರಳ ಹುಡುಕುವವರಿವರು,
ಮರೆತ ಗತ ವೈಭವಗಳ ಬೆಳಕ ತೋರುತ,
ಇರುಳಲ್ಲಿ ಬೆಳಕಿನ ಸ್ಪರ್ಧಾಳುಗಳಾಗುವರು.
ಬೆಳಕಿಲ್ಲದೆ ನೆರಳಿಗೆ ಅಸ್ತಿತ್ವವಿಲ್ಲ
ಮಿಂದ ಮೈ ಮನಕೆ ನೆರಳಿನಾ ಚಿತ್ರ
ನೆರಳಿಲ್ಲದ ಬೆಳಕಿಗೆ ಬೆಲೆಯೆಂದಿಗೂ ಇಲ್ಲ,
ಇದುವೆ ನೆರಳು-ಬೆಳಕಿನ ಮಿಳಿತ ಸೆಳೆತ
                                       -vಭಾ