ಪುಸ್ತಕದ ಶೀರ್ಷಿಕೆ : ಮಹರ್ಷಿ ರಮಣರೊಂದಿಗೆ ಮಾತುಕತೆ
ಕೃತಿ ಪ್ರಕಾರ : ಅನುವಾದಿತ ಸಂವಾದ ಸಾಹಿತ್ಯ
ಲೇಖಕರು : ಡಾ. ಎನ್. ಎಸ್. ಲಕ್ಷ್ಮೀನಾರಾಯಣಭಟ್ಟ
ಪ್ರಕಾಶಕರು : ಅಂಕಿತ ಪುಸ್ತಕ
ಪ್ರಥಮ ಮುದ್ರಣ : 2020
ಪುಟಗಳು : 114
ಬೆಲೆ : 120 ರೂ.
ಅರುಣಾಚಲ ಕ್ಷೇತ್ರದಲ್ಲಿ ಆಧ್ಯಾತ್ಮಿಕ ಜ್ಯೋತಿಯಂತೆಯೇ ಬೆಳಗಿದ ರಮಣ ಮಹರ್ಷಿಯವರ ಕುರಿತು ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು 'ಅರುಣಾಚಲದ ಆತ್ಮಜ್ಯೋತಿ ರಮಣ ಮಹರ್ಷಿ' ಎಂಬ ಪುಸ್ತಕದಲ್ಲಿ ಹಲವು ಭಕ್ತರ ಜೊತೆ ನಡೆಸಿದ ಮಾತುಕತೆಗಳು, ಆತ್ಮದ ವಿಚಾರದ ಕುರಿತು ನೀಡಿರುವ ಬೋಧನೆಗಳು ಹಾಗೂ ಮೂರು ಮುಖ್ಯ ಪದ್ಯರೂಪದ ಕೃತಿಗಳ ಅನುವಾದವನ್ನು ಕೊಟ್ಟಿದ್ದಾರೆ. ವಿಶೇಷ ಚಿಂತನೆಗೆ ಪ್ರೇರಿಸಿದ ಭಾಗಗಳನ್ನು ಕಿರುಪುಸ್ತಕವಾಗಿ ಕಡಿಮೆ ಬೆಲೆಗೆ ದೊರೆಯುವಂತೆ ಮಾಡುವ ಅಭಿಪ್ರಾಯಕ್ಕೆ ಮನ್ನಣೆಯಿತ್ತು ಈ ಪುಸ್ತಕವನ್ನು ಪ್ರಕಟಿಸಿದ್ದಾರೆ.
ದೇಶ-ವಿದೇಶಗಳಿಂದಲೂ ರಮಣ ಮಹರ್ಷಿಯವರನ್ನು ಕಂಡು ಅವರೊಡನೆ ಸಂಪಾದ ನಡೆಸಿದ ಹಲವು ಭಕ್ತರಲ್ಲಿ ರಮಣಾಶ್ರಮದಲ್ಲಿಯೇ ನೆಲೆಸಿದವರೂ ಇದ್ದರು. 1930ರಲ್ಲಿ ಪಾಲ್ ಬ್ರಂಟನ್ ಎಂಬ ಬ್ರಿಟಿಷ್ ಪತ್ರಕರ್ತ ಸರ್ಚ್ ಇಂಟು ಸೀಕ್ರೆಟ್ ಇಂಡಿಯಾ ಪುಸ್ತಕದಲ್ಲಿ The hill of holy beacon ಎಂಬ ಅಧ್ಯಾಯದಲ್ಲಿ ರಮಣರ ಸನ್ನಿಧಿಯಲ್ಲಿ ತಾನು ಪಡೆದ ಅನುಭವಗಳು, ವಿಚಾರಗಳು ಯೋಚನೆಯನ್ನು ಉದ್ದೀಪಿಸುವ ವಿಚಾರಗಳನ್ನು ನೀಡಿದ್ದಾನೆ. ಈ ಪುಸ್ತಕದಲ್ಲಿ ಅಲ್ಲಿನ ಕೆಲವು ಪ್ರಶ್ನೆಗಳೂ ಇವೆ
ಆತ್ಮ ಸಾಕ್ಷಾತ್ಕಾರ ಎರಡು ಆಧ್ಯಾತ್ಮಿಕ ಮಾರ್ಗಗಳ ಮೂಲಕ ಸಾಧಿಸುವಂತಹವು. ಪೀಪೀಲಿಕಾ ಮಾರ್ಗ, ಪೀಪೀಲಿಕಾ ಎಂದರೆ ಇರುವೆ. ನೆಲದ ಮೇಲೆ ಹರಿಯುವ ಇರುವೆ ಮಾವಿನ ಮರದ ಮೇಲೆ ತೂಗುವ ಹಣ್ಣಿಗಾಗಿ ಮರ ಹತ್ತಿ ರೆಂಬೆ-ಕೊಂಗಳನ್ನು ಅಡೆತಡೆಗಳನ್ನು ತಲುಪಿ ಸವಿಯುವಂತೆ ಇದು ದೀರ್ಘಕಾಲದ ಕಷ್ಟಕರವಾದ ಮಾರ್ಗ.
ಆದರೆ ಇದಕ್ಕೆ ಪ್ರತಿಯಾಗಿ ಅಸಾಧಾರಣ ವ್ಯಕ್ತಿಗಳು ನೇರವೂ ಹತ್ತಿರವೂ ಆದ ಮಾರ್ಗವನ್ನು ಬಳಸುತ್ತಾರೆ. ಅದೇ ಶುಕಮಾರ್ಗ. ಶುಕ ಎಂದರೆ ಗಿಳಿ. ಮಾವಿನ ಹಣ್ಣಿನ ಪರಿಮಳದ ಸುಳಿವು ಪಡೆದು ನೇರವಾಗಿ ಹಾರಿ ಹೋಗಿ ರುಚಿ ಸವಿಯುವ ಮಾರ್ಗವಿದು. ತೀವ್ರವಾದ ಜ್ಞಾನ-ವೈರಾಗ್ಯಗಳ ದಾರಿ ಇದು. ರಮಣ ಮಹರ್ಷಿಗಳ ಮಾರ್ಗ ಇದುವೇ ಎಂದಿದ್ದಾರೆ.
ಈ ಪುಸ್ತಕದಲ್ಲಿ ನಾಲ್ಕು ಅಧ್ಯಾಯಗಳಿವೆ
1. ಭಕ್ತರ ಆಗಮನ : ರಮಣರಿಗೆ ಇನ್ನೂ 20 ವರ್ಷವಾಗಿದ್ದಾಗಲೇ ದರ್ಶಿಸಿ ತಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ಪಡೆದ ಮೊಟ್ಟಮೊದಲ ಸಾಧಕ ಗಂಭೀರಂ ಶೇಷಯ್ಯರ್. ರಾಮ ಗೀತಾ, ಯೋಗ, ವಿವೇಕಾನಂದರ ಉಪನ್ಯಾಸಮಾಲೆಯನ್ನು ಆಸಕ್ತಿಯಿಂದ ಅಭ್ಯಾಸಿಸಿದ್ದ ಇವರು ಅವುಗಳಲ್ಲಿನ ವಿಚಾರಗಳನ್ನು ಗ್ರಹಿಸುವಾಗ ಉಂಟಾದ ತೊಡಕುಗಳಿಗೆ ಉತ್ತರ ಕಂಡುಕೊಳ್ಳಲು ಬರುತ್ತಿದ್ದವರು. ಮುಂದೆ 'ರಮಣ ಮಹರ್ಷಿಗಳ ಆತ್ಮ ವಿಚಾರ' ಎಂಬ ಪುಸ್ತಕಕ್ಕೆ ಆಧಾರವಾಗುವಂತಹ ಪ್ರಶ್ನೆಗಳನ್ನು ಸಹ ಕೇಳಿದರು.
ಎರಡನೆಯವರು ಶಿವಪ್ರಕಾಶಂ ಪಿಳ್ಳೆ. ರಮಣರಿಗಿಂತ ನಾಲ್ಕು ವರ್ಷ ದೊಡ್ಡವನಾಗಿದ್ದ ಈತ ತತ್ವಶಾಸ್ತ್ರವನ್ನು ಅಭ್ಯಸಿಸಿದ್ದವರು. ನಾನು ಯಾರು ಎಂಬ ಪ್ರಶ್ನೆಗೆ, ತೀವ್ರ ಸಂದೇಹಕ್ಕೆ ಉತ್ತರ ಹುಡುಕಿಕೊಳ್ಳಲು ಬಂದವರು. ಮೌನ ವ್ರತದಲ್ಲಿದ್ದ ರಮಣರಿಗೆ ಬರಹ ರೂಪದಲ್ಲಿ ಅವರು 14 ಪ್ರಶ್ನೆಗಳನ್ನು ಸಲ್ಲಿಸುತ್ತಾರೆ. ನಾನ್ ಯಾರ್ (ನಾನು ಯಾರು) ಎಂಬ ರಮಣರ ಕೃತಿ ಇದನ್ನು ಆಧರಿಸಿದುದು. ಪ್ರಶ್ನೆಗಳು ಹಾಗೂ ಚುಟುಕಾದ ಉತ್ತರಗಳು ಇಲ್ಲಿವೆ.
ಇವರಾದ ನಂತರ ಹಂಫ್ರೀಸ್, ಪಾಲ್ ಬ್ರಂಟನ್, ಗಣಪತಿ ಶಾಸ್ತ್ರಿ, ಸೂರಿ ನಾಗಮ್ಮ, ಡಾ. ಸ್ವಾಮಿನಾಥನ್ ಮುಂತಾದ ಪ್ರಮುಖರು ಬಂದರು. ಇವರ ತಾಯಿ ಅಳಗಮ್ಮಾಳ್ ಸಹ ತನ್ನ ಕೊನೆಯ ದಿನಗಳನ್ನು ಇವರ ಬಳಿಯೇ ಕಳೆದರು.
2. ಮಹರ್ಷಿಯೊಡನೆ ಸಂಭಾಷಣೆ :
ಭಕ್ತರು ಮಹರ್ಷಿಗಳಿಗೆ ಹಲವಾರು ಪ್ರಶ್ನೆಗಳನ್ನು ಕೇಳಿರುವರಾದರೂ ಪ್ರಾತಿನಿಧಿಕವಾಗಿ ಕೆಲವು ಪ್ರಶ್ನೆಗಳು ಹಾಗೂ ರಮಣರು ಪುಟ್ಟ ಉತ್ತರಗಳನ್ನು ನಿರೂಪಿಸಿದ್ದಾರೆ. ಸುಖ ಎಂದರೇನು? ಸುಖದ ಸ್ವಭಾವ ಎಂತಹದು, ಕರ್ಮ ಹಾಗೂ ಅದರ ಸ್ವಭಾವ ಎಂತಹದು? ಆತ್ಮ ಎನ್ನುವುದೇನು.. ಆನಂದ ಗಳಿಸಿಕೊಳ್ಳುವುದು ಹೇಗೆ? ಅತ್ಯುತ್ತಮವಾಗಿ ಬಾಳುವುದು ಹೇಗೆ? ಭಗವದ್ಗೀತೆಯನ್ನು ಆಗಾಗ ಓದಬೇಕೆ? ತ್ಯಾಗ ಎಂದರೇನು? ಇಂತಹ ಹಲವಾರು ಪ್ರಶ್ನೆಗಳಿವೆ.
ಮಾತಿಗಿಂತ ನೀವು ಮೌನಕ್ಕೆ ಹೆಚ್ಚು ಮಹತ್ವ ಕೊಡುತ್ತೀರಿ ಏಕೆ ಎಂಬ ಪ್ರಶ್ನೆಗೆ
"ಮೌನ ಎಂದರೆ ಮಾತಿಗಿಂತ ಪ್ರಬಲವಾದ ಸತತ ಸಂಭಾಷಣೆ ಮನಸ್ಸಿನಿಂದ ಮನಸ್ಸಿಗೆ ದಾಟಿಸುವುದು" ಎನ್ನುತ್ತಾರೆ.
ನಮಗಿಷ್ಟವಾದ ಯಾವ ಮಂತ್ರವನ್ನಾದರೂ ಆರಿಸಿಕೊಂಡು ಅದನ್ನು ಸತತವಾಗಿ ಜಪಿಸುತ್ತಿದ್ದರೆ ಅಪೇಕ್ಷಿತ ಫಲ ಸಿಗಬಹುದೇ ಎಂದು ಕೇಳಿದಾಗ
ಖಂಡಿತ ಇಲ್ಲ. ಅರ್ಹತೆಯುಳ್ಳವನು ಸರಿಯಾದವರಿಂದ ಉಪದೇಶವನ್ನೇ ಪಡೆಯಬೇಕು ಎಂದು ಕಥೆಯ ಮೂಲಕ ಉದಾಹರಣೆ ನೀಡುತ್ತಾರೆ.
ರಾಜನ ಅಪೇಕ್ಷೆಯಂತೆ ಮಂತ್ರಿ ಆತನಿಗೆ ಗಾಯತ್ರಿ ಮಂತ್ರದ ಮಹಿಮೆಯನ್ನು ವಿವರಿಸುತ್ತಾರಾದರೂ ಉಪದೇಶ ನೀಡುವುದಿಲ್ಲ. ಸೇವಕನಾದ ನಾನು ಪ್ರಭುವಿಗೆ ಉಪದೇಶ ಮಾಡುವ ಅರ್ಹತೆ ಪಡೆದುಕೊಂಡಿಲ್ಲ ಎಂದು ಹೇಳುತ್ತಾರೆ. ರಾಜ ಬೇರೆಯವರಿಂದ ಮಂತ್ರ ಕಲಿತು ಮಂತ್ರಿಯ ಮುಂದೆ ಹೇಳಿದಾಗ ಮಂತ್ರ ಸರಿಯಾಗಿದೆ. ಆದರೆ, ಸರಿಯಾದ ಗುರುವಿನಿಂದ ಉಪದೇಶವನ್ನು ಪಡೆಯದಿರುವುದರಿಂದ ಇದರಲ್ಲಿ ಸತ್ವವಿಲ್ಲ ಎಂದಾಗ ರಾಜನಿಗೆ ಅಸಮಾಧಾನವಾಗಿ ಅದನ್ನು ನಿರೂಪಿಸುವಂತೆ ಹೇಳುತ್ತಾನೆ.
ಮಂತ್ರಿ ಅಲ್ಲಿದ್ದ ಸಿಪಾಯಿಯನ್ನು ಕರೆದು ರಾಜನನ್ನು ಈಗಲೇ ಸೆರೆಗೆ ಹಾಕು ಎಂದು ಆಜ್ಞೆ ಕೊಡುತ್ತಾನೆ. ಸಿಪಾಯಿ ಆದೇಶವನ್ನು ಪಾಲಿಸುವುದಿಲ್ಲ. ಮತ್ತೆ ಮತ್ತೆ ಹೇಳಿದರೂ ಆದೇಶ ಪಾಲಿಸಲಿಲ್ಲ ಸಿಪಾಯಿ, ವ್ಯತಿರಿಕ್ತವಾಗಿ ವರ್ತಿಸುತ್ತಿದ್ದ ಮಂತ್ರಿಯನ್ನು ಕಂಡು ರಾಜನಿಗೆ ಸಿಟ್ಟು ಬಂದು ಮಂತ್ರಿಯನ್ನು ಸೆರೆಗೆ ಹಾಕಲು ಹೇಳುತ್ತಾನೆ.
ಹಆಗ ಮಂತ್ರಿ ನಾವಿಬ್ಬರೂ ಸೈನಿಕನಿಗೆ ಒಂದೇ ರೀತಿಯ ಆಜ್ಞೆಯನ್ನು ಮಾಡಿದರೂ ಸೈನಿಕ ಪಾಲಿಸಿದ್ದು ರಾಜನ ಆಜ್ಞೆಯನ್ನು. ಹಾಗಾಗಿ ಅಧಿಕಾರ ಇಲ್ಲದಿರುವುದರಿಂದ ಎಷ್ಟೇ ಆಜ್ಞೆ ನೀಡಿದರೂ ಅದು ಪರಿಣಾಮವಾಗುವುದಿಲ್ಲ ಮಂತ್ರವೂ ಹಾಗೆಯೇ ಎನ್ನುತ್ತಾನೆ.
ಆತ್ಮ ಸಾಕ್ಷಾತ್ಕಾರ, ಮನಸ್ಸನ್ನು ಲಯಗೊಳಿಸುವ ಮಾರ್ಗ, ಉದ್ಯೋಗ ಅಥವಾ ಕರ್ತವ್ಯ ನಿರ್ವಹಣೆಗೆ ಆಧ್ಯಾತ್ಮ ಸಾಧನೆಗೆ ಅಡ್ಡಿಯಾಗುವುದಿಲ್ಲವೇ? ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವುದು ಹೇಗೆ? ಧ್ಯಾನ ಅಗತ್ಯವೇ? ಅಜ್ಞಾನವನ್ನು ಕಳೆದುಕೊಳ್ಳುವುದು ಹೇಗೆ ? ಭಕ್ತಿಯನ್ನು ಸಾಧಿಸುವುದರಿಂದ ಪ್ರಯೋಜನವಿದೆಯೇ ಅದರಿಂದ ಜ್ಞಾನ ಲಭ್ಯವಾಗುತ್ತದೆಯೇ ಇಂತಹ ಹಲವಾರು ಪ್ರಶ್ನೆಗಳಿಗೆ ಸಮರ್ಪಕ ಉತ್ತರವನ್ನು ನೀಡಿದ್ದಾರೆ
ಜ್ಞಾನಿಯಾದ ಗುರು ಶರೀರತ್ಯಾಗ ಮಾಡಿದ ನಂತರ ಶಿಷ್ಯನಿಗೆ ಅವನ ಪ್ರಭಾವ ಅನುಭವಕ್ಕೆ ಬರುತ್ತದೆಯೋ ಅಥವಾ ಜೀವಂತ ಇದ್ದಾಗ ಮಾತ್ರವೇ ಎಂಬ ಪ್ರಶ್ನೆಗೆ
ಗುರು ಕೇವಲ ಭೌತಿಕ ಶರೀರವಲ್ಲ. ಆದ್ದರಿಂದ ಶರೀರ ಬಿಟ್ಟ ನಂತರವೂ ಶಿಷ್ಯನಿಗೆ ಗುರುವಿನ ಸಂಬಂಧ ಉಳಿದೆ ಇರುತ್ತದೆ ಎನ್ನುತ್ತಾರೆ.
ಗುರು-ಶಿಷ್ಯರ ಈ ಬಿಡಿಸಲಾಗದ ನಂಟಿನ ಪ್ರಶ್ನೆ ಸೆಳೆಯಿತು.
3.ಆತ್ಮ ಸ್ವರೂಪ ಚಿಂತನೆ ಮತ್ತು ಭಗವಾನರ ಮೂರು ಮುಖ್ಯ ಪದ್ಯ ಕೃತಿಗಳ ಸಂಪೂರ್ಣ ಅನುವಾದ
ತಾನು ಆತ್ಮ ಮಾತ್ರವೇ ಎಂದು ತಿಳಿದವನು ಜ್ಞಾನಿ. ನಾವು ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳಬೇಕಾಗಿದೆ ಎನ್ನುವ ಮಾತೇ ಒಂದು ರೀತಿಯಲ್ಲಿ ಸರಿಯಲ್ಲ. ಹೊಸದು ಎನ್ನುವುದು ಯಾವುದೂ ಇಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ
ಬಾವಿಯನ್ನು ತೆಗೆಯಲು ಹೊಂಡವನ್ನು ತೋಡುತ್ತೇವೆ. ಖಾಲಿ ಬಯಲಿದೆ. ಅದನ್ನು ನಾವು ಹೊಸದಾಗಿ ಸೃಷ್ಟಿಸಲಿಲ್ಲ. ಅನಾವಶ್ಯಕವಾದದನ್ನು ಹೊರ ಹಾಕಿದಾಗ ಅಲ್ಲಿ ಇದ್ದದನ್ನು ಕಾಣುತ್ತಿದ್ದೇವೆ ಅಷ್ಟೇ. ಹೀಗೆ ಕಾಣುವುದೇ ಆತ್ಮದರ್ಶನ ಎನ್ನುತ್ತಾರೆ.
ವಿದ್ಯಾರಣ್ಯರ 'ಪಂಚದಶಿ' ಕೃತಿಯಲ್ಲಿನ ಇಂತಹದ್ದೇ ನಿದರ್ಶನ ನೀಡುತ್ತಾರೆ.
ರಮಣರ 3 ಮುಖ್ಯ ಪದ್ಯ ಕೃತಿಗಳ ಅನುವಾದಗಳು ಇಲ್ಲಿವೆ
ಉಪದೇಶ ಸಾರಂ : ಇಲ್ಲಿನ 30 ಪದ್ಯಗಳಲ್ಲಿ ಒಂದು ಪದ್ಯವನ್ನು ನೋಡುವುದಾದರೆ . .
ಈ ನಾನು ಎನ್ನುವುದು ಹುಟ್ಟುವುದು ಎಲ್ಲಿ
ಎಂದು ಶೋಧಿಸುವವನ
ಅಹಂಕಾರ ಅಳಿಯುವುದು
ಅದೇ ಆತ್ಮ ವಿಚಾರಣೆ
ಉಳ್ಳದು ನಾರ್ಪದು : ಇಲ್ಲಿನ 40 ಪದ್ಯಗಳಲ್ಲಿ ಒಂದನ್ನು ಗಮನಿಸುವುದಾದರೆ
ತನ್ನದೇ ಒಂದು ರೂಪವಿಲ್ಲದ ಅಹಂಕಾರ ಒಂದು ಪಿಶಾಚಿಯಂತೆ
ದೇಹವನ್ನು ಆಶ್ರಯಿಸಿ ಹುಟ್ಟುತ್ತದೆ
ದೇಹವನ್ನೇ ಆಶ್ರಯಿಸಿ ನೆಲೆಸುತ್ತದೆ
ದೇಹವನ್ನೇ ಆಶ್ರಯಿಸಿ ವಿಷಯ ಸುಖ ಅನುಭವಿಸಿ ಕೊಬ್ಬಿ ಬೆಳೆಯುತ್ತದೆ
ಒಂದು ದೇಹ ಬಿಟ್ಟು ಇನ್ನೊಂದಕ್ಕೆ ಹಾಯುತ್ತದೆ
ಅಂತರ್ಮುಖವಾಗಿ ಚಿಂತಿಸಿ ಹಿಡಿಯ ಹೋದಾಗ ಓಡಿ ಹೋಗುತ್ತದೆ
ಅಕ್ಷರ ಮಣಮಾಲೈ : ರಮಣ ಮಹರ್ಷಿಗಳು ಅರುಣಾಚಲನನ್ನು ಕುರಿತು ರಚಿಸಿರುವ 108 ದ್ವಿಪದಿಗಳಲ್ಲಿ ಒಂದೆರಡನ್ನು ನೋಡೋಣ.
ಅದ್ವಿತೀಯ ಅನುಪಮ ಓಂಕಾರನೆ
ಅರಿವೆನೆ ನಿನ್ನನು ಅರುಣಾಚಲ ?
ಕಣ್ಣಿನ ಕಣ್ಣೇ ಕಣ್ಣ ಹಂಗಿರದೆ
ಕಂಡೂ ಕಾಣದಿಹೆ ಅರುಣಾಚಲ
ಕೇಳದೆ ನೀಡುವ ದಾನಿ ಎನ್ನುವರು
ಕಾಯ್ದುಕೊ ಬಿರುದನು ಅರುಣಾಚಲ
4. ಭಗವಾನರ ಜೀವನದ ಕೆಲವು ಮುಖ್ಯ ಘಟನೆಗಳು : ಕಾಲ ವಿವರಗಳು
ರಮಣರು ಹುಟ್ಟಿನಿಂದ, ಶಾಲೆಗೆ ಹೋಗಿದ್ದು, ಆಧ್ಯಾತ್ಮಿಕವಾಗಿ ರಮಣ ಮಂದಿರಂನಲ್ಲಿ ನೆಲೆಸಿದ್ದು, ಆತ್ಮಸಾಕ್ಷಾತ್ಕಾರದ ಅರಿವು, ಅರುಣಾಚಲಗಿರಿಗೆ ಹೋದದ್ದು, ಭಕ್ತರ ವಿಚಾರಗಳು, ತಾಯಿಗೆ ಕಾಯಿಲೆ ಗುಣವಾಗಲೆಂದು ಅರುಣಾಚಲನನ್ನು ಕುರಿತು ಸ್ತೋತ್ರ, ಶ್ಲೋಕಗಳ ರಚನೆ, ಸ್ಕಂದಾಶ್ರಮಕ್ಕೆ ಹೋದದ್ದು, ಹಲವು ಕೃತಿಗಳ ರಚನೆ ಮತ್ತು ಬ್ರಹ್ಮನಿರ್ವಾಣದವರೆಗಿನ ಎಲ್ಲ ವಿಚಾರಗಳು ಅವರ ವಯಸ್ಸು ಹಾಗೂ ವರ್ಷದೊಡನೆ ಚುಟುಕಾಗಿ ನೀಡಿದ್ದಾರೆ.
ಹದಿನಾರನೇ ವರ್ಷದಲ್ಲಿಯೇ ಮನೆ ತೊರೆದು, 50 ವರ್ಷಗಳಷ್ಟು ದೀರ್ಘಕಾಲ ಅಲೌಕಿಕ ಬದುಕನ್ನು ಅರುಣಾಚಲದಲ್ಲಯೇ ಬದುಕಿದವರ ಬದುಕಿನ ದರ್ಶನವಾಗುತ್ತದೆ.
ಜಾತಿ-ಮತ, ವರ್ಣಗಳ ಭೇದವಿಲ್ಲದೆ ತಮ್ಮಲ್ಲಿಗೆ ಬಂದವರಿಗೆಲ್ಲ ಆಧ್ಯಾತ್ಮದ ದಿವ್ಯ ಸಿಂಚನ ಮಾಡಿದ ರಮಣ ಮಹರ್ಷಿಗಳ ಜ್ಞಾನವನ್ನು ನಮಗೂ ಹಂಚಿದ್ದಾರೆ ಲೇಖಕರಾದ ಲಕ್ಷ್ಮೀನಾರಾಯಣ ಭಟ್ಟರು. ಅಧ್ಯಾತ್ಮದ ಕುರಿತಾದ ಆಸಕ್ತರು ಓದಬಹುದಾದ ಒಂದೊಳ್ಳೆ ಕೃತಿ ಇದು.
~ವಿಭಾ ವಿಶ್ವನಾಥ್

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ