ಭಾನುವಾರ, ಮೇ 3, 2026

ಕದಡದ ಬಿಂಬ (ಬೆಳಕಿಂಡಿಯ ಕತೆಗಳು - 9)


"ಅತ್ತು ಬಿಡೆ ಉಮಾ ಒಮ್ಮೆ.. ಈಗಲಾದರೂ ಅತ್ತು ಬಿಡೆ. 

ಎಷ್ಟು ಅಂತಾ ದುಃಖವನ್ನು ತಡೆ ಹಿಡಿಯುತ್ತೀಯ ಹೇಳು.. ಹಾಗೆಲ್ಲಾ ಇರಬಾರದಮ್ಮಾ

ಒಳಗಡೆ ಹೆಪ್ಪುಗಟ್ಟಿಕೊಂಡ ನೋವೆಲ್ಲಾ ಒಮ್ಮೆ ಕಣ್ಣೀರಿನ ಹೊರಬಂದು ಬಿಡಲಿ. ಮನಸ್ಸು ಸಹಾ ಹಗುರವಾಗುತ್ತೆ. " ಎಂದು ಹೇಳುತ್ತಿದ್ದರೂ ಉಮಾ ಕಲ್ಲಿನಂತೆಯೇ ಕುಳಿತಿದ್ದಳು.


ಅವಳದ್ದು ಎಂತಹಾ ಕಲ್ಲು ಮನಸ್ಸು ಎಂದುಕೊಂಡರೂ ಅವಳ ದೌರ್ಭಾಗ್ಯಕ್ಕೆ ಮರುಗಿದವರೇ ಎಲ್ಲರೂ.. ಮದುವೆಯಾದ ತಿಂಗಳಲ್ಲೇ ಸೌಭಾಗ್ಯವನ್ನು ಕಳೆದುಕೊಂಡಾಗ ಉಮಾ ಅಳದೆ ಇರುವುದು ಅಚ್ಚರಿ ತರಿಸಿದರೂ ಅವಳ ಉತ್ತರ ಎಲ್ಲರ ಕಣ್ಣಲ್ಲೂ ಮತ್ತಷ್ಟು ಕಣ್ಣೀರು ಮೂಡಿಸಿತ್ತು.


"ನಾನು ಅತ್ತರೆ ನನ್ನ ಕಣ್ಣಲ್ಲಿನ ಅವರ ಬಿಂಬ ಕರಗಿ ಹೋಗುತ್ತದೆ ಅಮ್ಮ. ನಾನು ಅಳಲಾರೆ. ಇಂದಲ್ಲಾ ಎಂದೆಂದಿಗೂ.. "


ಅವಳ ದಿಟ್ಟತೆ ಮಿಶ್ರಿತ ಪ್ರೀತಿಯ ಬಿಂಬ ಹಾಗೇ ಉಳಿದು ಬಿಡಲಿ.


~ ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ