ಶನಿವಾರ, ನವೆಂಬರ್ 14, 2026

ತೆಂಕನಿಡಿಯೂರಿನ ಕುಳುವಾರಿಗಳು (ಪುಸ್ತಕ ಯಾನ - 508)


ಪುಸ್ತಕದ ಶೀರ್ಷಿಕೆ : ತೆಂಕನಿಡಿಯೂರಿನ ಕುಳುವಾರಿಗಳು

ಕೃತಿ ಪ್ರಕಾರ : ಕಾದಂಬರಿ

ಲೇಖಕರು : ಡಾ. ವ್ಯಾಸರಾವ್ ನಿಂಜೂರ್ 

ಪ್ರಕಾಶಕರು : ಅಂಕಿತ ಪುಸ್ತಕ 

ಪ್ರಥಮ ಮುದ್ರಣ : 2016

ದ್ವಿತೀಯ ಮುದ್ರಣ : 2017 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 272

ಬೆಲೆ : 225 ರೂ. 


ಪಡುಕರಾವಳಿಯ ಪಡುಮನ್ನೂರು ಮಾಗಣೆಯ ತೆಂಕನಿಡಿಯೂರಿನಿಂದ 5 ದಶಕಗಳ ಮೊದಲು ಮುಂಬೈ ಮಹಾನಗರ ಸೇರಿ ವಿಜ್ಞಾನಿಯಾಗಿಯೂ.. ಸಾಹಿತ್ಯ ಸೇವೆಯಲ್ಲಿ ನಿರತವಾಗಿದ್ದವರು ಡಾ. ವ್ಯಾಸರಾವ್ ನಿಂಜೂರ್. ಅವರ ಕುರಿತು ಈ ವಿಚಾರಗಳನ್ನು ಏಕೆ ಪ್ರಸ್ತಾಪಿಸಿದನೆಂದರೆ.. ಶೀರ್ಷಿಕೆಯೇ ಹೇಳುವಂತೆ ಇದು ತೆಂಕನಿಡಿಯೂರಿನ ಕಥೆ. ಅಂತೆಯೇ ಮಹಾನಗರ ಮುಂಬಯಿಯ ಆಕರ್ಷಣೆಗೆ ಬಿದ್ದು ಅಲ್ಲಿಯೂ ಬದುಕು ಕಟ್ಟಿಕೊಂಡವರ ಕಥೆ ಇಲ್ಲಿದೆ. 


ಇಲ್ಲಿ ಲೇಖಕರು ಕೆಲವೊಮ್ಮೆ ಕಾದಂಬರಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ವೈದ್ಯ ಡಾಕ್ಟರ್ ಎಂದು ಇವರನ್ನು ತಪ್ಪು ತಿಳಿದುಕೊಳ್ಳುವಾಗ.. ನನ್ನ ಪಾತ್ರ ಇನ್ನು ಬರಲಿಲ್ಲವಾ ಅಥವಾ ನನ್ನ ಪಾತ್ರವನ್ನು ಹೀಗೆ ಅಂತ್ಯ ಮಾಡಿ, ಇಲ್ಲವೇ ಹೀಗೆ ತೋರಿಸುತ್ತೀರಾ ಎಂದು ಕೇಳುವ ಪಾತ್ರಗಳಿಗೆ ಸಮರ್ಪಕವಾಗಿ ನ್ಯಾಯ ಒದಗಿಸಿಕೊಡುವ, ಅಂತೆಯೇ ಗುಟ್ಟು ಬಿಟ್ಟುಕೊಡದ ಲೇಖಕರಾಗಿ ಕಾಣಿಸುತ್ತಾರೆ.


ಇದು ಲೇಖಕರ ಮೂರನೇ ಕಾದಂಬರಿ. ನಮ್ಮ ಜಿಲ್ಲೆಗಳಲ್ಲಿ 'ದೊಡ್ಡ ಕುಳ' ಎಂಬ ಪದವನ್ನು ಬಳಸುತ್ತೇವೆ. ಕರಾವಳಿ ಜಿಲ್ಲೆಗಳಲ್ಲಿ ಕುಳುವಾರಿಗಳು ಎಂದರೆ ಆಸಾಮಿಗಳು ಎಂಬರ್ಥವನ್ನು ನೀಡುತ್ತದಾದರೂ.. ಅದನ್ನು ಮೀರಿದ ವಿಶಿಷ್ಟ ಸಂವೇದನೆಯ ಪದವಿದು. ಲೇಖಕರ ಊರು ಹಾಗೂ ಸುತ್ತಮುತ್ತಲಿನ ಪ್ರದೇಶದ ಬೆಚ್ಚಗಿನ ಅನುಭವದ ಜೊತೆಗೆ ಮುಂಬೈಯ ಸುದೀರ್ಘವಾಸದ ಅನುಭವಗಳು ಇಲ್ಲಿ ಯಥೇಚ್ಛವಾಗಿ ಕಾಣಿಸುತ್ತವೆ. 


ದುಗ್ಗಪ್ಪ ಶೆಟ್ಟರು ಹಾಗೂ ದುಗ್ಗಪ್ಪಯ್ಯ ಎಂಬ ಹೆಸರಿನ ಹೆಗ್ಡೆಯವರ ಎರಡು ಪ್ರಮುಖ ಕುಟುಂಬವಾಗಿ ಕಾಣಸಿಗುತ್ತವೆ. ದುಗ್ಗಪ್ಪ ಶೆಟ್ಟರು ಅಂತಹ ಶ್ರೀಮಂತನೇನೂ ಅಲ್ಲದಿದ್ದರೂ ತಾನೊಂದು ದೊಡ್ಡ ಕುಳ ಎನ್ನುವ ಭ್ರಮೆ ಇತ್ತು. ಅವರ ಪತ್ನಿ ರುಕ್ಕು ಶೆಡ್ತಿ ಉಳ್ಳವರ ಮನೆಯಿಂದ ಬಂದವರಾಗಿದ್ದರು ಜೊತೆಗೆ ಶೆಟ್ಟರ ಅನವಶ್ಯಕ ಠೇಂಕಾರಕ್ಕೆ ಕಡಿವಾಣ ಹಾಕುತ್ತಿದ್ದರಾದರೂ.. ಶೆಟ್ಟರಿಗೆ ಅವು ಲೆಕ್ಕಕ್ಕಿರಲಿಲ್ಲ. ಇವರಿಗಿದದ್ದು ಒಬ್ಬನೇ ಮಗ ಶಂಭು. ಅಕ್ಕನ ಮದುವೆ ಮುಗಿದ ತಿಂಗಳೊತ್ತಿನಲ್ಲಿಯೇ ಕಾಣೆಯಾಗಿದ್ದ. 


ಆಗಾಗ ಬರುತ್ತಿದ್ದ ಕೆಲಸ ಮಾಡಿ ಕೊಡುತ್ತಿದ್ದ ತನಿಯ, ಸದಿಯ, ಬೂದ, ಚಿಕ್ಕು, ಪೋಂಕ್ರರನ್ನೂ ನಾವಿಲ್ಲಿ ಕಾಣಬಹುದು. 


ದುಗ್ಗಪ್ಪ ಶೆಟ್ಟರಿಗೆ ದುಗ್ಗಪ್ಪಯ್ಯ ಹೆಗ್ಡೆಯವರ ಹಮ್ಮು ಮುರಿಯಬೇಕೆಂಬ ಆಸೆ. ಆದರೆ, ಅದಾಗುತ್ತಿರಲಿಲ್ಲ. ಹೆಗ್ಡೆಯವರಿಗೆ ಹೆಂಡತಿಯ ಪಾಲಿಗೆ ಬಂದ ಜಮೀನು, ಎಲ್ಲಕ್ಕಿಂತ ಮಿಗಿಲಾಗಿ ಇಬ್ಬರು ಗಂಡುಮಕ್ಕಳು ಮುಂಬೈನಲ್ಲಿ ಹೋಟೆಲ್ ಮಾಡಿ ಹಣ ಮಾಡುತ್ತಿದ್ದರಿಂದ ಯಾವುದಕ್ಕೂ ಕಡಿಮೆ ಇರಲಿಲ್ಲ. ಹಾಗೆಂದು, ಹೆಗ್ಡೆಯವರೆಂದೂ ಶೆಟ್ಟರ ಮೇಲೆ ಜಿದ್ದು ಸಾಧಿಸಿದವರಲ್ಲವೇ ಅಲ್ಲ.


ತೆಂಕನಡಿಯೂರಿನ ಕಂಬಳ, ಕೋಳಿ ಅಂಕಗಳ ಪರಿಸರವನ್ನು ನಾವಿಲ್ಲಿ ಕಾಣಬಹುದು. ಶೆಟ್ಟರ ಕೋಳಿ ಉರಿಯ ಹೆಗ್ಡೆಯವರ ಕೋಳಿ ಕೆಮ್ಮೈರನ ಮೇಲೆ ಗೆದ್ದ ಮರ್ಮವೇನು..?


ತೆಂಕನಿಡಿಯೂರಿನ ಏಕೈಕ ಪಂಚತಾರಾ ಹೋಟೆಲ್ ಶ್ರೀ ವೀರಭದ್ರ ವಿಲಾಸವಾದರೂ ಅದನ್ನು ಭಟ್ಟರು ತಟ್ಟಿ ಹೋಟೆಲು ಎಂದೇ ಗುರುತಿಸುತ್ತಿದ್ದದ್ದು. ಶಿವರಾಮ ಭಟ್ಟರು ಹೊಟ್ಟೆಯನ್ನು ತಂಪು ಮಾಡುವುದರ ಜೊತೆಗೆ ಊರಿಡೀ ತಮಗೆ ಸಿಕ್ಕ ವಾರ್ತೆಯನ್ನು ಭರ್ಜರಿಯಾಗಿ ಬಿತ್ತರಿಸುತ್ತಿದ್ದರೆಂದರೆ ತಪ್ಪಾಗಲಾರದು.


ಶಂಭುವಿನ ಕ್ಲಾಸ್ಮೇಟ್ ಆಗಿದ್ದ ಕಿಟ್ಟಪ್ಪು/ ಕೃಷ್ಣಪ್ರಸಾದ . ಕೃಷ್ಣಪ್ರಸಾದನ ಮನೆಯಲ್ಲಿ ಅವರ ತಂದೆ ಹಾಗೂ ಚಿಕ್ಕಪ್ಪ ಕಾಳು ಭಟ್ಟರು ಹಾಗೂ ಸೀನು ಭಟ್ಟರದ್ದು ಮತ್ತೊಂದು ಇತಿಹಾಸವೇ ಇದೆ. ಅದು ಕತೆಗೆ ಪೂರಕವಾಗಿ ಸಾಗುತ್ತಾ ಹೋಗುವುದರಿಂದ ನೀವೇ ಓದಿ ಅರಿಯಿರಿ.


ತನಿಯ ಶೆಟ್ಟರ ಮೇಲೆ ಕೊಟ್ಟ ಕಂಪ್ಲೆಂಟು ಶೆಟ್ಟರಿಗೆ ತಿಳಿದು, ಹೆಗ್ಡೆಯವರ ಬಳಿ ಹೋಗಿ, ಮುಂದೆ ಹೆಗ್ಡೆಯವರ ಸಹಾಯದಿಂದ ಭಟ್ಟರ ಮಧ್ಯಸ್ಥಿಕೆಯಿಂದ ಯಾರ ಎತ್ತಂಗಡಿಗೆ ಕಾರಣವಾಯಿತು..?


ಶಂಭುವಿನ ಪದ್ರಾಡ್ ಐಡಿಯಾ ಕೃಷ್ಣಪ್ರಸಾದನಿಗೂ ಗೊತ್ತಿದ್ದರೂ ಯಾರಿಗೂ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ತಂದೆ-ತಾಯಿ ಕಂಪ್ಲೇಂಟ್ ಕೊಡುವ, ಹಲವಾರು ಪೂಜೆ ಪುನಸ್ಕಾರ ಮಾಡಿಸಿ ಕವಡೆ ಕೇಳುವ, ಶಂಭು ಪರ್ವ ಎರಡು ವರ್ಷಕ್ಕೂ ಮುನ್ನ ಪಂಜುರ್ಲಿಗೆ ಸೇವೆ ಮಾಡಿಸಿದ ಪ್ರಸಂಗಗಳು ತಂದೆ-ತಾಯಿಯರ ಕಾಳಜಿಯನ್ನು ಸಂಪ್ರದಾಯವನ್ನು ಒಟ್ಟೊಟ್ಟಿಗೆ ತೋರಿಸುತ್ತವೆ. 


ಶೆಟ್ಟರ ತೈನಾತಿಗಳಾದ ತನಿಯ, ತುಕ್ರ, ಪಾಂಚ, ಗುರುವ, ಕುಷ್ಟ, ಬೂದ, ತಬುರಾ ಇವರ ಪಟಾಲಂಗಳು ಉಳ್ಳಾಯ(ಒಡೆಯ) ಎಂದು ಮಾತನಾಡುತ್ತಾ.. ಕಾಳಜಿ ಮಾಡುವಂತೆ ಮಾಡಿ ಸೇಂದಿಗೆ ಹಣ ಪೀಕಿಸುವ ಉಪಾಯಗಳೂ ಇಲ್ಲಿವೆ.


ಶಿವರಾಮ ಭಟ್ಟರು ಹರಡುವ ಸುಳ್ಳುಗಳಿಗೆ ರೆಕ್ಕೆ-ಪುಕ್ಕ ಸೇರಿ ಅದರಿಂದಾಗುವ ಆವಾಂತರಗಳು ಕಾಣಸಿಗುತ್ತವೆ.


ವಡಭಾಂಡೇಶ್ವರ, ಮೇಳಗಳು, ಬಯಲಾಟಗಳು, ಯಕ್ಷಗಾನ, ತಾಳಮದ್ದಳೆ ಪ್ರಸಂಗಗಳು ಪ್ರಾದೇಶಿಕ ಸೊಗಡನ್ನು ಹೆಚ್ಚಿಸುತ್ತದೆ.


ಮುಂಬೈಗೆ ಹೋಗಿ ದೊಡ್ಡ ಜನವಾಗಿ ಊರಿಗೆ ವಾಪಾಸ್ಗುವ ಶಂಭುವಿನ ಕನಸು ಅಂದುಕೊಂಡಷ್ಟು ಸರಾಗವಾಗಿರಲಿಲ್ಲ. ಗೊತ್ತಿಲ್ಲದ ಊರಲ್ಲಿ ತಮ್ಮ ಕಡೆಯವನು ಹಾಗೂ ಊರು ಬಿಟ್ಟು ಬಂದವನು ಎಂಬ ವಿಚಾರ ತಿಳಿದು ಬ್ಯಾಂಕಿನಲ್ಲಿ ಕೆಲಸಗಾರರಾಗಿದ್ದ ಶಂಭು, ವೆಂಕಪ್ಪ, ನರಸಿಂಹ, ಗುರುವಣ್ಣ, ಆನಂದ ಇವರ ಸಹಕಾರ ಶಂಭುವಿಗೆ ಎಂದೂ ಮರೆಯುವಂತಹದ್ದಾಗಿರಲಿಲ್ಲ. ಅದರಲ್ಲಿಯೂ ನರಸಿಂಹನ ಋಣವಂತೂ ತೀರುವಂಥದ್ದಲ್ಲ. ಹೆಗ್ಡೆಯವರ ಮಕ್ಕಳಾದ ಶೇಖರ, ಸುಂದರ ರ ಪ್ರತಾಪವಂತೂ ನಿರ್ಲಕ್ಷಿಸುವಂತದ್ದಲ್ಲ.


ಹೆಗ್ಡೆಯವರಿಗೆ ತಮ್ಮ ಮಕ್ಕಳ ಕಾರುಬಾರಿನ ಸಣ್ಣ ಸುಳಿವೂ ಇರಲಿಲ್ಲ. ಸಜ್ಜನರಾದ ಅವರಿಗೆ ಏಕಿಂತಹ ಮಕ್ಕಳು ಎನಿಸಿಬಿಡುತ್ತದೆ. ಸ್ವಲ್ಪ ಯಾಮಾರಿದ್ದರೂ ಶಂಭು ಜೀವಂತ ಉಳಿಯುತ್ತಿರಲಿಲ್ಲ. 


ಕೊಜಕೊಳ್ಳಿ ಹುಡುಗಿ ಮಾಲತಿ ಕಾಣೆಯಾದದ್ದರ ಹಿಂದಿದ್ದ ಕೃಷ್ಣಪ್ಪ ಮಾಸ್ಟರ್ ಮುಂದೆ ಅರೆಸ್ಟ್ ಆದದ್ದು ಹೇಗೆ..? ಚಂದು ಶೆಟ್ಟಿ ಸಿಕ್ಕನೇ..? ಮಾಲತಿಯಂತಹ ಗಟ್ಟಿ ಹುಡುಗಿ ಅಲ್ಲದಿದ್ದರೆ ಮುಂಬೈಯಂತಹ ಶಹರದಲ್ಲಿ ಮೈಮಾರಿಕೊಂಡೇ ಬದುಕು ನಡೆಸಬೇಕಿತ್ತು. ಆದರೆ, ಅವಳ ಗಟ್ಟಿತನ ಯಾವುದಕ್ಕೂ ಜಗ್ಗದ ನಿಲುವಿನಿಂದಾಗಿ ಅಸಿಸ್ಟೆಂಟ್ ಕಮಿಷನರ್ ಬಿಲ್ಲಿ ಮೋರಿಯಾ ಮನೆಯಲ್ಲಿ ಇರುವಂತಾಯ್ತು. ಸುಗುಣಾಭಾಯಿಯ ಪಾತ್ರ ಎಷ್ಟಿತ್ತು.? ಮಾತಿಗೆ ಮಾತ್ರ ಭೇಟಿಯಲ್ಲದೆ ಮಗಳಂತೆಯೇ ಕಾಣುತ್ತಿದ್ದವರು ಅವರು.


ಬ್ಯಾಂಕಿನ ಮಿತ್ರರ ಒಡನಾಟದ ಹಾಗೂ ಅವರ ದೊಡ್ಡ ಸಹಕಾರದ ನಂತರ ಶಂಭು ಮುಂದೆ ಉಡುಪಿ ಉಪಹಾರ ಭವನದ ಮಾಲೀಕನಾಗಿ, ಮಾಲತಿಯನ್ನು ವಿವಾಹವಾಗಿದ್ದು ಬಹು ದೊಡ್ಡ ಕಥೆ. ಯಾವೆಲ್ಲ ಅಡೆತಡೆಗಳನ್ನು ಮೀರಿ ಶಂಭು ಬರಿಗೈಯಲ್ಲಿ ಬಂದವನು ಹೋಟೆಲ್ ಮಾಲೀಕನಾದ..? ಅದರಲ್ಲಿ ಚಂಪಾರಾಣಿ ಮತ್ತವಳ ಗಂಡ ಮಿಶ್ರನ ಋಣ ಎಷ್ಟಿತ್ತು ಅಥವಾ ಈತನೇ ಋಣವೇ ಅವರ ಮೇಲಿತ್ತೇ..? 


ಶಂಭುವಿನ ಸಾಹಸಗಾಥೆ ಹಾಗೂ ಆತನ ವೈವಾಹಿಕ ಬದುಕಿನ ಕುರಿತು ಊರಿನಲ್ಲಿ ಹರಡಿದ್ದ ಪುಕಾರುಗಳೇನು..? ಆತನ ತಂದೆ-ತಾಯಿಯ ಬದುಕು ಬದಲಾಯಿತೇ..?


ಕಿಟ್ಟುಪ್ಪು, ಶಿವರಾಮ ಭಟ್ಟರು ಇವರಿಬ್ಬರ ಜೊತೆಗೆ ಮುಂಬೈಗೆ ಹೋಗಿ ಶಂಭುವನ್ನು ಭೇಟಿಯಾಗಲು ಹಾತೊರೆಯುತ್ತಿದ್ದ ಮತ್ತೊಂದು ಜೀವ ಜಿಲ್ಲ ನಾಯಕ. ಕಿರಿಸ್ತಾನದವನಾದರೂ ಸರ್ವಧರ್ಮ ಪ್ರೇಮಿ, ಪರೋಪಕಾರದ ಗುಣ ಅಂತೆಯೇ ಎಣ್ಣೆಯ ಪ್ರಭಾವ, ಕತ್ತಿ ಬಾಯಿಯ ಜೊತೆಗೆ ಬದುಕು ಎಲ್ಲವನ್ನೂ ತಿಳಿಯದಿದ್ದರೆ ಕಥೆಯ ಒಂದಷ್ಟು ಭಾಗ ಅಪೂರ್ಣವೇ ಆಗಬಹುದು. ಗರ್ವಾಲಿಯಂತೆ ಬದುಕು ಸಾಧಿಸುತ್ತಿದ್ದ ಗುಲಾಬಿಬಾಯಿಯ ಪೂಜೆ, ವ್ರತಗಳ ಬದುಕು ಅಚ್ಚರಿಯೇ..!


ವಿವಾಹವಾಗಲು ಹಾತೊರೆಯುತ್ತಿದ್ದ ಶಿವರಾಮ ಭಟ್ಟರು ಯಾರ ಮೊರೆ ಹೋದರು..? ತಮ್ಮ ಒಕ್ಕಲಿನವರಿಗೂ ಧನಿಯೆತ್ತದ ಹೆಗ್ಡೆಯವರ ಬದುಕು ಏನಾಯ್ತು..?


ಶೇಖರ, ಸುಂದರ ರ ಕುರಿತ ಒಂದೇ ಒಂದು ವಾರ್ತೆಯನ್ನು ಮಾಲತಿಯಾಗಲಿ ಶಂಭುವಾಗಲಿ ಊರಿನಲ್ಲಿ ಯಾರ ಬಳಿಯೂ ಉಸಿರೆತ್ತದೆ ಬೇರೆಯದ್ದೇ ಕಥೆ ಹೇಳಿದ್ದರ ಮರ್ಮವೇನಿತ್ತು ..? 


ಹೇಳುತ್ತಾ ಹೋದರೆ ಈ ಕಾದಂಬರಿಯಲ್ಲಿ ಹೇಳಲು, ಗುರುತಿಸಲು ಸಾಕಷ್ಟು ವಿಚಾರಗಳಿವೆ. ನಾನು ಹೇಳಿದ್ದು ಕಾಲುಭಾಗದಷ್ಟಿರಬಹುದೇನೋ.. ಕಾದಂಬರಿ ಓದಿ ಕಳೆದು ಹೋಗಲು ಸಿದ್ದರಾಗಿ.


ಊರಿನ ಪರಿಸರದಲ್ಲಿ ರೆಕ್ಕೆ-ಪುಕ್ಕ ಕಟ್ಟಿಕೊಂಡಂತೆ ಸಾಗುವ ಸುದ್ದಿಗಳು ಈಗಿನ ಸೋಶಿಯಲ್ ಮೀಡಿಯಾಗಳ ಫೇಕ್ ಸುದ್ದಿಗಳಿಗಿಂತ ಏನೂ ಕಡಿಮೆ ಇಲ್ಲ. ಸತ್ಯಾಸತ್ಯತೆ ತಿಳಿಯದೆಯೂ ಒಂದು ವಿಷಯ ಎಷ್ಟೆಲ್ಲಾ ದೂರ ಸಾಗುತ್ತದಲ್ಲವಾ ಎನ್ನಿಸಿತು.


ಮತ್ತೊಬ್ಬರಿಗೆ ಉಪಕಾರ ಮಾಡಲು ಮುಖ್ಯವಾಗಿ ಮನಸ್ಸಿರಬೇಕು. ಅದಕ್ಕೆ ತಳುಕು ಹಾಕಿಕೊಂಡಂತೆ ಊರು, ಭಾಷೆ ಇಲ್ಲಿ ಕಂಡರೂ ಎಲ್ಲದರಾಚೆಯೂ ಆ ಒಳ್ಳೆಯ ಮನಸ್ಸು ಕಾಣಸಿಗುತ್ತದೆ. ಕೆಟ್ಟದ್ದು ಢಾಳಾಗಿ ಕಾಣಬಹುದಾದರೂ.. ಅದನ್ನು ಮೀರಿದ ಒಳ್ಳೆಯತನವನ್ನು ನಾವಿಲ್ಲಿ ಕಾಣಬಹುದು.


ವಿಭಿನ್ನ ಜಾತಿ, ಧರ್ಮಗಳ ಆಚರಣೆಗಳು, ಆಹಾರ, ಪೂಜಾಪದ್ಧತಿಗಳು, ಹಬ್ಬಗಳು, ಜೀವನಶೈಲಿ, ಮನೆಗಳಲ್ಲಿನ ಪರಿಸರ, ಹೋಟೆಲ್ ವಾತಾವರಣ, ಸಮಾರಂಭಗಳು, ಪೂಜೆಗಳು ಎಲ್ಲದರ ಜೊತೆಗೆ ಕುಡಿತವೂ ಜೀವನ ಶೈಲಿಯೊಂದಿಗೆ ಮಿಳತವಾಗಿರುವುದು ಕಾಣಸಿಗುತ್ತದೆ. ಇದು ತೆಂಕನಿಡಿಯೂರಿನ ಮುಕ್ತ ಜೀವನಶೈಲಿ ಎಂದರೂ ತಪ್ಪಾಗಲಾರದು.


ಅದೇ ಮುಂಬಯಿಯಲ್ಲಿ ಹೆಣ್ಣುಮಕ್ಕಳ ಟ್ರಾಫಿಕಿಂಗ್, ಡ್ರಗ್ಸ್ ಕೇಸುಗಳು, ಹಿಂದಿ ಭಾಷೆ, ಹೋಟೆಲ್, ತರಹೇವಾರಿ ದುಷ್ಕೃತ್ಯಗಳು, ಅಮಾನವೀಯ ಕೆಲಸಗಳು, ಪೊಲೀಸರ ಬೆಂಬಲ ಅಂತೆಯೇ ವಿರೋಧ.. ಹೀಗೆ ಮಹಾನಗರದ ಕಾಣದ ಕಠೋರ ಮುಖವೂ ಇಲ್ಲಿ ವ್ಯಕ್ತವಾಗಿದೆ.


ಎರಡು ಬಗೆಯ ಜೀವನ ಶೈಲಿಗಳು, ಹಿರಿಯರ ಅಂತೆಯೇ ಯುವಕರ ಆಲೋಚನೆಗಳು, ಪರಸ್ಪರ ವಿಭಿನ್ನ ಬದುಕಿನ ರೀತಿಗಳು ಎಲ್ಲದರ ಸಮಗ್ರ ಚಿತ್ರಣ ಹೊಂದಿರುವ ಕಾದಂಬರಿ. ಕರಾವಳಿ ಜಿಲ್ಲೆಯವರು ಹಾಗೂ ಕಡೆಯವರಿಗೊಂದು ಅತ್ಯಾಪ್ತವಾಗಲ್ಲ ಕಾದಂಬರಿ. ಆವರಿಸಿಕೊಳ್ಳುವ ಓದು ಅಂತೆಯೇ ಮನಸ್ಸಿನಲ್ಲಿ ಉಳಿಯುವ ಓದು. ಈ ವರ್ಷದ ನನ್ನ ಉತ್ತಮ ಓದಿನ ಪಟ್ಟಿಯಲ್ಲಿ ಈ ಪುಸ್ತಕವೂ ಸೇರ್ಪಡೆಯಾಯಿತು. 

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ