ಸೋಮವಾರ, ನವೆಂಬರ್ 16, 2026

ಊರ್ಮಿಳೆ (ಪುಸ್ತಕ ಯಾನ - 510)


ಪುಸ್ತಕದ ಶೀರ್ಷಿಕೆ : ಊರ್ಮಿಳೆ

ಕೃತಿ ಪ್ರಕಾರ : ಪೌರಾಣಿಕ ಕಾದಂಬರಿ

ಲೇಖಕರು : ಸು. ರುದ್ರಮೂರ್ತಿ ಶಾಸ್ತ್ರಿ

ಪ್ರಕಾಶಕರು : ಮಾನಸ ಬುಕ್ ಹೌಸ್

ಪ್ರಥಮ ಮುದ್ರಣ : 2011

ಎರಡನೇ ಮುದ್ರಣ : 2021

ಪುಟಗಳು : 252

ಬೆಲೆ : 300 ರೂ.


ವಾಲ್ಮೀಕಿ ರಾಮಾಯಣದಲ್ಲಿ ಕಡೆಗಣಿಸಲ್ಪಟ್ಟ ಪಾತ್ರಗಳಲ್ಲಿ ಊರ್ಮಿಳೆಯ ಪಾತ್ರವೂ ಒಂದು ಎನ್ನುವ ಲೇಖಕರು ಊರ್ಮಿಳೆ ಅರಮನೆಯಲ್ಲೇ.. ಅಂತರಂಗದಲ್ಲೇ ವನವಾಸ ಮಾಡುವ ಪರಿಯನ್ನು ಕಟ್ಟಿಕೊಡುತ್ತಾರೆ. ಅವಳ ತೇಜಸ್ವಿ ಹಾಗೂ ಯಾವ ತಪಸ್ವಿಗೂ ಕಡಿಮೆ ಇಲ್ಲದ ಜೀವನಶೈಲಿ ಪ್ರೇರೇಪಿಸುವಂತೆಯೂ.. ಮನಕಲಕುವಂತೆಯೂ ಇದೆ. 


ಲೇಖಕರೇ ಹೀಗನ್ನುತ್ತಾರೆ. "ನನಗೆ ಪ್ರಿಯವಾದ ನನ್ನ ರಚನೆಗಳಲ್ಲಿ ಊರ್ಮಿಳೆ ಕೂಡ ಒಂದು. ನಾನೇ ಭಾವಾವೇಶಕ್ಕೆ ಒಳಗಾಗುವ ಸಂದರ್ಭಗಳು ಮತ್ತು ಪಾತ್ರಪೋಷಣೆ ಈ ಕಾದಂಬರಿಯಲ್ಲಿದೆ". ಈ ಮಾತುಗಳು ಅತಿಶಯೋಕ್ತಿ ಎನ್ನಿಸಲಿಲ್ಲ. ಏಕೆಂದರೆ, ಎಷ್ಟೋ ಮಾತುಗಳು ಮತ್ತೆಮತ್ತೆ ಮೆಲಕು ಹಾಕುವಂತೆಯೂ.. ಮನಸ್ಸಿಗೆ ಸಮಾಧಾನ ತಂದುಕೊಳ್ಳುವಂತೆಯೂ.. ಕೆಲವು ಭಾವಗಳನ್ನು ಉದ್ದೀಪಿಸುವಂತೆಯೂ ಇವೆ. 


ಲೇಖಕರು ಎಂ . ಎನ್ ವ್ಯಾಸರಾವ್ ಅವರ ಮನೆಗೆ ಹೋಗಿದ್ದಾಗ ಅವರೇ ಬರೆದ ಒಂದು ಪದ್ಯವನ್ನು ಹೇಳುತ್ತಾರೆ. ಕಾವ್ಯವಸ್ತು ಹೇಗಿತ್ತೆಂದರೆ ರಾಮ-ಸೀತೆಯೊಂದಿಗೆ ಲಕ್ಷ್ಮಣನೂ ವನವಾಸಕ್ಕೆ ಹೊರಟುಹೋದ ಕೂಡಲೇ ಊರ್ಮಿಳೆ ಅಸಹನೆಯಿಂದ, ಉದ್ವಿಗ್ನಳಾಗಿ ಬಚ್ಚಲುಮನೆಗೆ ಹೋಗಿ ಬಾಗಿಲು ಹಾಕಿಕೊಂಡು 14 ವರ್ಷಗಳವರೆಗೆ ಹೊರಗೆ ಬರಲಿಲ್ಲ ಎಂಬ ಜನಜನಿತ ನಂಬಿಕೆಯನ್ನು ಕುರಿತದ್ದಾಗಿತ್ತು. ಅಲ್ಲಿಂದ ಕಟ್ಟಿಕೊಂಡ ಊರ್ಮಿಳೆಯ ಚಿತ್ರವೇ ಕಾದಂಬರಿಯ ಪ್ರೇರೇಪಣೆ.


ಇಲ್ಲಿನ ಊರ್ಮಿಳೆ ಗಟ್ಟಿ ದನಿಯವಳಲ್ಲ.. ಆದರೆ, ಗಟ್ಟಿ ವ್ಯಕ್ತಿತ್ವದವಳು. 

"ಲಕ್ಷ್ಮಣ ಅರಣ್ಯದಿಂದ ಅರಮನೆಗೆ ಬಂದ! ಊರ್ಮಿಳೆ ಅರಮನೆಯಿಂದ ಅರಣ್ಯಕ್ಕೆ ಹೋದಳು!" ಎನ್ನುತ್ತಾರಾದರೂ.. ಇಲ್ಲಿ ಊರ್ಮಿಳೆ ವನವಾಸಕ್ಕೆ ಹೋಗಲಿಲ್ಲ. ಬದಲಾಗಿ ತನ್ನ ಅಂತರಂಗವನ್ನು ಮಾರ್ಪಡಿಸಿಕೊಂಡು ವನವಾಸಿಯಾದವಳು.


ಊರ್ಮಿಳೆಯ ಬೆಳಗಿನ ಸೇವೆಗೆ ಮಲ್ಲಿಕಾ ಹಾಗೂ ಚಂದ್ರಿಕಾ ಇದ್ದರು. ಇವರು ಸೇವಕಿಯರಲ್ಲ.. ಸಖಿಯರು ಎಂಬುದು ಅವರ ಅಪ್ಯಾಯಮಾನ ಸೇವೆ, ನಿಷ್ಕಲ್ಮಶ ಮನಸ್ಸಿನ ಕಾಳಜಿ, ಒಳಿತಿನ ಹಾರೈಕೆಯಿಂದ ಅರಿವಾಗುತ್ತದೆ. ಅದೇ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಂದಾಕಿನಿ ತನ್ನ ಕೆಲಸಕ್ಕೆ ಸೀಮಿತವಾಗಿ ಸೇವಕಿಯಾಗಿಯೇ ಕಾಣುವ ಬಗೆಯೂ ಇಲ್ಲಿದೆ.


ಕಾದಂಬರಿ ಆರಂಭವಾಗುವುದು ವನವಾಸಕ್ಕೆ ಹೊರಟ ರಾಮ-ಸೀತೆ, ಲಕ್ಷ್ಮಣರ ಅನುಪಸ್ಥಿತಿಯ ನಂತರದ ಅರಮನೆಯ ಪರಿಸ್ಥಿತಿಯಿಂದ. ಊರ್ಮಿಳೆ ಎಷ್ಟು ಉದ್ವಿಗ್ನಳಾಗಿದ್ದಳೆಂದರೆ ಎಲ್ಲವನ್ನೂ ಗಮನಿಸುತ್ತಿದ್ದರಾದರೂ.. ದಿನದ ಕೊನೆಗೆ ಮರೆತು ಹೋದ ಹಸಿವು ಧಗಧಗಿಸಿ ತಂದಿಟ್ಟ ಹರಿವಾಣವನ್ನು ಆವೇಶದಿಂದ ಪೂರ್ಣ ಮುಗಿಸಿ ನಂತರ ಎಲ್ಲವನ್ನೂ ವಾಂತಿ ಮಾಡಿದ್ದಳು. ಯಾರದ್ದೋ ಮೇಲಿನ ಆಕ್ರೋಶವನ್ನು ತನ್ನ ದೇಹವನ್ನು ದಂಡಿಸಿಕೊಳ್ಳುವ ಊರ್ಮಿಳೆ ವಿವಧ ರೀತಿಯಲ್ಲಿ ತನ್ನನ್ನೇ ದಂಡನೆಗೊಳಪಡಿಸಿಕೊಳ್ಳುತ್ತಾ ಕಾಣಸಿಗುತ್ತಾಳೆ.


ಯಾಂತ್ರಿಕವಾಗಿ ತನ್ನ ಕೆಲಸವನ್ನು ಮುಗಿಸಿಕೊಳ್ಳುತ್ತಾ ಲಕ್ಷ್ಮಣ ಹೋದಂದಿನಿಂದ ಮೌನವ್ರತಧಾರಿಯಾದವಳು ತನ್ನ ಮನಸ್ಸಿನ ಮಾತುಗಳಿಂದ, ಕಲ್ಪನೆಗಳಿಂದ, ಕನಸುಗಳಿಂದ ನಮ್ಮನ್ನು ಆವರಿಸಿಕೊಳ್ಳುತ್ತಾಳೆ.


ರಾಮ-ಸೀತೆಯರ ಕಷ್ಟ ಅನುಪಸ್ಥಿತಿಗಳೇ ಎಲ್ಲರನ್ನು ಹೆಚ್ಚು ಭಾದಿಸುವಾಗ ಅಲ್ಲಿಯೂ ಲಕ್ಷ್ಮಣ ಅಷ್ಟಾಗಿ ಕಾಣಿಸಿಕೊಳ್ಳದಿರುವುದು.. ಅಷ್ಟೇ ಅಲ್ಲದೆ, ಎಲ್ಲವನ್ನೂ ಸಂಭಾಳಿಸುತ್ತಾ.. ಸಹನೆಯಿಂದ ಮತ್ತೊಬ್ಬರ ನೆರಳಿನಂತೆಯೇ ಬದುಕುವ ಸುಮಿತ್ರೆಯ ವ್ಯಕ್ತಿತ್ವವೇ ಲಕ್ಷ್ಮಣನಿಗೂ, ಶತ್ರುಘ್ನನಿಗೂ ಆವರಿಸಿಕೊಂಡಿತೇನೋ ಎಂಬ ಆಲೋಚನೆ.. ಸೋದರಿಯರ ಅನುಪಸ್ಥಿತಿಯಲ್ಲಿ ಸುಮಿತ್ರೆಯೂ ದಶರಥ ಹಾಗೂ ಕೌಸಲ್ಯರ ಉಪಚಾರಕ್ಕೆ ನಿಂತಾಗ ಕಾಡುವ ಅನಾಥಪ್ರಜ್ಞೆ, ಸಖಿಯರೇ ಇಲ್ಲದಿದ್ದರೆ ಊರ್ಮಿಳೆಯ ಪರಿಸ್ಥಿತಿ ಏನಿರುತ್ತಿತ್ತು ಎನ್ನಿಸಿಬಿಡುತ್ತದೆ.

"ಮರಳಿ ತನ್ನ ಅಂತಃಪುರಕ್ಕೆ ಬಂದಾಗ ಊರ್ಮಿಳೆ ಗಿಡದಿಂದ ಉದುರಿ ಬಿದ್ದ ಎಲೆಯಂತೆ ಏಕಾಂಗಿತನವನ್ನು ಅನುಭವಿಸಿದಳು"


ಅಣ್ಣ-ಅತ್ತಿಗೆಯ ಸೇವೆ ದೊರೆತೆಂಬ ಸ್ವಾರ್ಥದ ಸಂಭ್ರಮದಲ್ಲಿ ಊರ್ಮಿಳೆಯ ಭಾವನೆಗಳನ್ನೇ ತಿಳಿಯದ ಲಕ್ಷ್ಮಣನ ಕುರಿತು ಆತನದ್ದು ಸ್ವಾರ್ಥ ಎನ್ನುತ್ತಾ ಕಠಿಣವಾದ ವರ್ತನೆಯನ್ನು, ನಿಲುವನ್ನು ತಳೆಯುತ್ತಾ ಇದ್ದರೂ.. ಅಂತರಂಗದಲ್ಲಿ ಅಡಗಿದ ಮೃದು ಭಾವನೆ ಅಥವಾ ಲಕ್ಷ್ಮಣನ ಕುರಿತ ಮತ್ತೊಂದು ನಿಲುವು ಅವಳನ್ನು ಕನಸಾಗಿ ಕಾಡುವ ಪರಿ ಇಲ್ಲಿದೆ. ಆ ಕನಸೇನು..? ಓದಿ ನೋಡಿ.


ವಾತಾಯನದಲ್ಲಿ ನಿಲ್ಲುವ, ರಾಜ್ಯೋದ್ಯಾನದಲ್ಲಿ ಬಳಲುವಷ್ಟು ಓಡಾಡುವ, ಅಲ್ಲೇ ಕಳೆದು ಹೋಗುವ ಊರ್ಮಿಳೆಯ ಮನಸ್ಸು ಉದ್ವಿಗ್ನವಾಗುತ್ತಿದ್ದದ್ದು ಎಷ್ಟು ಬಾರಿಯೋ..? ಸಖಿಯರಿಗೆ ಅವಳ ನೋವು ಅರ್ಥವಾದರೂ ಪೂರ್ಣವಾಗಿ ಅವಳ ಮನಸ್ಸನ್ನು ತೆರೆದಿಡಲು ಸಾಧ್ಯವಿರುತ್ತಿರಲಿಲ್ಲ.


ದಶರಥನ ಮರಣದ ಸಂದರ್ಭದಲ್ಲಿ ಇಳಿದು ಹೋದ ಕೈಕೇಯಿ ಹಾಗೂ ಸೇವಕರಿಂದಲೂ ನಿಕೃಷ್ಟವಾಗಿ ಬೈಸಿಕೊಳ್ಳುತ್ತಿದ್ದ ಕುಬ್ಜೆ ಮಂಥರೆ ಊರ್ಮಿಳಿಗೆ ಕಂಡ ಪರಿ ಹೇಗೆ.. ಮುಂದೆ ಮಂಥರೆಯ ಅವಸಾನವಾಗುತ್ತದೆ. ಅದಕ್ಕೆ ಕಾರಣರು ಯಾರು..? ಅವಳು ಕಾಡುವುದು ಹೇಗೆ..?


ಸೀತೆಯಂತೆ ದಿಟ್ಟೆಯಾಗಿದ್ದರೆ, ರಾಮನೊಡನೆ ಹಠ ಮಾಡಿ ವಾದ ಮಾಡಿ ವನವಾಸಕ್ಕೆ ಹೊರಟಂತೆ.. ನನಗೂ ಧೈರ್ಯ ಇದ್ದಿದ್ದರೆ ಎಂದುಕೊಂಡರೂ ದಿಟ್ಟತನಕ್ಕೆ ಮಾನ್ಯತೆ ಸಿಕ್ಕುತ್ತಿತ್ತೇ ಎನ್ನುವ ಸಂದೇಹವೂ ಅವಳಲ್ಲಿದೆ.


ದಶರಥನ ಸಾವಿನ ನಂತರ ಬಂದ ಭರತ-ಶತ್ರುಘ್ನರು, ಮತ್ತೆ ರಾಮನನ್ನು ಕರೆತರಲು ಹೋಗುವ ಸಂದರ್ಭ, ಅಲ್ಲಿಂದ ಹತಾಶರಾಗಿ ಬಂದಾಗ ಊರ್ಮಿಳೆಯ ಎಣಿಕೆ ನಿಜವಾದ ಬಗೆ.. ಅವರು ಬರಲಾರರೆಂದುಕೊಂಡರೂ ದೂರದಲ್ಲಿಲ್ಲೋ ಉದಿಸಿದ್ದ ಆಶಾಕಿರಣವೂ ನಂದಿ ಹೋದ ಚಿತ್ರಣವಿಲ್ಲಿದೆ.


ಭರತನು ನಂದಿಗ್ರಾಮವನ್ನು ಸೇರಿದ ಮೇಲೆ ಮಾಂಡವಿಯೂ ನಾರುಮಡಿಯುಡುತ್ತಾಳೆ. ಸೀತೆ ಕಾಡಿಗೆ ಹೋದರೂ ರಾಮನೊಡನಿರುತ್ತಾಳೆ. ಅವಳಿಗೆ ಪತಿಯ ಸಾನಿಧ್ಯವಿರುತ್ತದೆ. ಮಾಂಡವಿ ಭರತನನ್ನು ಪ್ರತಿನಿತ್ಯವೂ ದರ್ಶಿಸುವ ಅವಕಾಶವಿರುತ್ತದೆ. ಶ್ರುತಕೀರ್ತಿ-ಶತ್ರುಘ್ನರು ನಾರುಮಡಿಯುಡದಿದ್ದರೂ.. ಸುಖದ ಪಾಲುದಾರರೂ ಆಗದೆ ಜೊತೆಗಿರುತ್ತಾರೆ. ಆದರೆ, ಪತಿಯ ಸಾನಿಧ್ಯವೂ ಇಲ್ಲದೆ ನೋವನ್ನನುಭವಿಸುತ್ತಿದ್ದ ಊರ್ಮಿಳೆ..?

ಮಾಂಡವಿಯೂ ಕುರಿತು ಮಾತನಾಡುವಾಗ ಅನುರಾಗ ಅರಳುವ ಸಮಯದಲ್ಲಿ ದೂರಾದ ಮಾತಿನ ತಾತ್ಪರ್ಯ ಒಳ್ಳೆಯ ಊಟವನ್ನು ಕೈಗೆಟುಕುವಂತಿಟ್ಟು.. ಹಸಿವಿದ್ದಾಗ ಅದು ಗಾಜಿನ ಹೊರಕವಚದಲ್ಲಿ ಮುಚ್ಚಿದ್ದರೆ..?! 

ರಾಜಭೋಗಗಳನ್ನು ತ್ಯಜಿಸಿದ್ದ ಊರ್ಮಿಳೆ ಮಾಂಡವಿ ನಾರುಮಡಿಯುಟ್ಟ ನಂತರ ನಾರುಮಡಿ ಉಟ್ಟದ್ದೇಕೆ..? ಓದಿ ನೋಡಿ


ಕೌಸಲ್ಯೆ ಕೆಲವೊಮ್ಮೆ ಊರ್ಮಿಳೆಯ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳುವ ನಡೆಯ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿದರೂ.. ಆಗಾಗ ಸುಮಿತ್ರೆ ಸಮಾಧಾನಿಸಿದರೂ ಇಲ್ಲಿ ಕೈಕೆಯ ಸಾನಿಧ್ಯಕ್ಕೆ ಹೆಚ್ಚಿನ ಅಂತಃಕರಣದ ಪಾತ್ರವಿದೆ. ಒಂದು ಕಾಲದಲ್ಲಿ ದಶರಥನನ್ನು ಕಿರುಬೆರಳಿನಲ್ಲಿ ಆಡಿಸಿದ ಅವಳೀಗ ಊರ್ಮಿಳೆಯ ಸಖಿಯರನ್ನೂ ಕ್ಷಮೆ ಕೇಳುವ ಸಂದರ್ಭವಿದೆ. ತಾಯಿಯಂತೆಯೇ ಊರ್ಮಿಳಿಗೆ ಉಣಿಸುವ ಮಮತೆಯಿದೆ. 


ಸಾಮಾನ್ಯರಂತಲ್ಲದೆ ರಾಜಮನೆತನದ ಕಟ್ಟಳೆಯಂತೆ ಬೇಕೆಂದಾಗ ತವರಿಗೆ ಹೋಗಲಾಗುವುದಿಲ್ಲ. ಅಲ್ಲಿಂದ ಬಂದದ್ದು ವೈಯಕ್ತಿಕ ಪತ್ರವಲ್ಲ, ಬದಲಾಗಿ ರಾಜರಿಗೆ ಸಮಾಚಾರ ಸಮಾಧಾನದ ಪತ್ರ. ಆದರೆ, ಕೈಕೇಯಿಯ ಸಹೋದರ ಯುಧಾಜಿತ್ತು ಬಂದು ಮಗಳಂತೆಯೇ ತನ್ನ ರಾಜ್ಯಕ್ಕೆ ಬರಲು ಆಹ್ವಾನವಿತ್ತ ಹಾಗೂ ಅವನ ನಿಷ್ಕಲ್ಮಶ ಅಂತಃಕರಣ ಊರ್ಮಿಳೆಯನ್ನು ಮಾತ್ರವಲ್ಲ.. ನಮ್ಮನ್ನೂ ಆವರಿಸಿಕೊಳ್ಳುತ್ತದೆ.


ಮಲ್ಲಿಕಾ ಹಾಗೂ ಚಂದ್ರಿಕಾರೇ ಊರ್ಮಿಳ ಳ ಮನಸ್ಸನ್ನರಿತು ಸಂಭಾಷಿಸುವ ಪರಿ ಮನದಾಳದ ಮಾತುಗಳನ್ನು ತೆರೆದಿಟ್ಟಿದೆ. ಅವಳ ಉದ್ವಿಗ್ನತೆ, ಅಶಾಂತಿ, ಚಿಂತೆಗಳು ಅವರನ್ನೂ ಭಾಧಿಸುತ್ತವೆ.

"ಕಣ್ಣು, ಕಿವಿ, ಹೃದಯಗಳನ್ನು ತೆರೆದಿದ್ದರೆ ಲೋಕವೇ ಎಲ್ಲ ಪಾಠವನ್ನು ಕಲಿಸಿಬಿಡುತ್ತದೆ" ಎನ್ನುವ ಮಲ್ಲಿಕಾಳ ಪ್ರಬುದ್ಧ ಆಲೋಚನೆಯನ್ನು ಕಾಣಬಹುದು.


"ಲಕ್ಷ್ಮಣನನ್ನು ಪ್ರೀತಿಸುತ್ತಲೂ ಇದ್ದೇನೆ. ದ್ವೇಷಿಸುತ್ತಲೂ ಇದ್ದೇನೆ. ದ್ವೇಷಕ್ಕಾಗಿ ದ್ವೇಷವಲ್ಲ ಪ್ರೀತಿಗಾಗಿ ದ್ವೇಷ. ನಾನು ಪ್ರೀತಿಸುವುದರಿಂದಲೇ ಅವನನ್ನು ದ್ವೇಷಿಸುತ್ತಿರುವುದು. ಪ್ರೀತಿಯಿಂದ ವಂಚಿತಳಾದೆನೆಂದೇ ಈ ದ್ವೇಷ" ಎನ್ನುವ ಊರ್ಮಿಳ ಲಕ್ಷ್ಮಣನನ್ನು ಆವರಿಸಿಕೊಂಡಂತೆ ಬದುಕುವ ಪರಿ, ಅವಳ ನೋವನ್ನು ಅವಳ ಜಾಗದಲ್ಲಿ ನಿಂತು ಮಾತ್ರವೇ ಕಾಣಬೇಕಾಗುತ್ತದೆ.


ವಸಿಷ್ಟರು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುವ ರೀತಿ ಮುಂದೆ ಊರ್ಮಿಳೆಗೆ ಅವರ ಮಾರ್ಗದರ್ಶನವನ್ನು ಕಲ್ಪಿಸಿಕೊಡುತ್ತದೆ. ಊರ್ಮಿಳೆ ಮೌನವ್ರತಧಾರಿಯಾಗಿದ್ದೇ ಸರಿಯಾಯ್ತು. ಇಲ್ಲವಾದಲ್ಲಿ ಅವಳ ಮಾತಿನ ಬೆಂಕಿ, ಉದ್ವಿಗ್ನ ನಡೆಗೆ ಅರಮನೆಯ ವಾತಾವರಣ ಮತ್ತಷ್ಟು ಸಂಕಟಕ್ಕೆ ಈಡಾಗುತ್ತಿತ್ತು ಎನ್ನುವ ವಸಿಷ್ಠರ ನಿಲುವನ್ನೂ ಕಾಣಬಹುದು. 


ಆತ್ಮಾನುಕಂಪ, ಆತ್ಮೋದ್ದಾರ ಎರಡರಲ್ಲಿ ಒಂದನ್ನು ಆರಿಸಿಕೊಳ್ಳುವಂತೆ ಹೇಳುವ ವಸಿಷ್ಠರ ಮಾತು, ಆರು ತಿಂಗಳ ಪ್ರತಿದಿನದ ಆಶ್ರಮದ ಭೇಟಿ ಊರ್ಮಿಳಳ ಬದುಕನ್ನೇ ಬದಲಿಸುತ್ತದೆ.


ವಸಿಷ್ಟರ ಪುತ್ರ ಪ್ರವಚನ ನೀಡುವ ಮಾತಿನಲ್ಲಿ ಒಂದು ಮಾತು ಇಂತಿದೆ.

"ಮನುಷ್ಯ ಸದಾ ಯಾವುದಕ್ಕಾದರೂ ಹಂಬಲಿಸುತ್ತಲೇ ಇರುತ್ತಾನೆ. ತಾನು ಪಡೆದುಕೊಳ್ಳುವುದಕ್ಕಾಗಿ ಸದಾ ಆತುರಪಡುವ ಮನುಷ್ಯ, ತಾನು ಪಡೆದಿದ್ದರಲ್ಲಿ ಸ್ವಲ್ಪವನ್ನಾದರೂ ಕೊಡಲು ಆತುರ ಪಡುವುದಿಲ್ಲ. ತಾನು, ತನ್ನದು, ತನಗೆ, ತನ್ನಿಂದ, ತಾನೇ ಎನ್ನುವ ಸ್ವಾರ್ಥದ ಸುಳಿಯಲ್ಲೇ ಸದಾ ಸುತ್ತುತ್ತಿರುತ್ತಾನೆ. ಆದ್ದರಿಂದ ಈ ಲೋಕದಿಂದ, ಪ್ರಕೃತಿಯಿಂದ ನಾವು ಏನನ್ನು ಪಡೆದಿದ್ದೇವೆ ಎಂದು ಮೊದಲು ಯೋಚಿಸಬೇಕು" ಎನ್ನುತ್ತಾ ನಿಸ್ವಾರ್ಥ ಮನೋಭಾವ ಹಾಗೂ ಕೃತಜ್ಞತೆಯ ಭಾವವನ್ನು ಜಾಗೃತಗೊಳಿಸುವ ಪರಿ ಇದು.


ಮಲ್ಲಿಕಾಳ ವಿವಾಹವಾದ ಸಂದರ್ಭದಲ್ಲಿ ತಾನು ತೆಗೆದಿಟ್ಟಿದ್ದ ಆಭರಣಗಳಿಂದ ಸುಂದರ ಹಾರವನ್ನು ಕೊಡುವ ಪರಿ ಜೊತೆಗೆ ಚಂದ್ರಿಕಾಳಿಗೂ ಪ್ರೀತಿಯಿಂದ ಹಂಚುವ ಪರಿ.. ಮುಂದೆ ಮಲ್ಲಿಕಾ ಗರ್ಭಿಣಿಯಾದ ಸಂದರ್ಭದಲ್ಲಿ ಅವಳಿಗಿಂತ ಮುಂಚೆ ಮದುವೆಯಾದ ಚಂದ್ರಿಕಾಳಿಗೆ ಇನ್ನು ಮಗುವಾಗದೆ ಇರುವುದು. ಆದರೆ, ಚಂದ್ರಿಕಾಳ ಉದಾರ ಮನಸ್ಸು ತನ್ನ ಗೆಳತಿಯ ಮಗುವನ್ನೇ ತನ್ನ ಮಗುವೆಂದು ಭಾವಿಸುವೆ ಎಂದು ಹೇಳಿದಾಗ ಊರ್ಮಿಳಾ ತನ್ನ ಸಂಕುಚಿತವಾಗಿ ಆಲೋಚನೆ ಕುರಿತು ಯೋಚಿಸುವುದು.. ಮಲ್ಲಿಕಾ ಮಗುವಿಗೆ ಊರ್ಮಿಳಾ ಎಂದೇ ಹೆಸರಿಡುವುದು, ಮಗುವಿನ ಸಾನಿಧ್ಯದಲ್ಲಿ ಊರ್ಮಿಳೆ ತನ್ನನ್ನೇ ಮರೆಯುವ ಪರಿ ಇಲ್ಲಿದೆ.


14 ವರ್ಷ ಕೇವಲ ಯೌವ್ವನ, ಅನುರಾಗವನ್ನು ಮಾತ್ರವಲ್ಲ. ಮನುಷ್ಯನ ಆಲೋಚನೆ, ನಡೆಗಳನ್ನೂ ಬದಲಾಯಿಸುತ್ತದೆ... ಊರ್ಮಿಳೆಯ ಹಲವು ಪ್ರಶ್ನೆಗಳಿಗೆ ಉತ್ತರ ಕಷ್ಟ.


ಸೀತೆಯನ್ನು ಮಾತ್ರ ಪತಿವ್ರತಿಯಂದು ಪರಿಗಣಿಸುವುದೇಕೆ..? ಮಾಂಡವಿ, ಊರ್ಮಿಳೆಯರನ್ನು ಏಕಿಲ್ಲ..?


ಹೆಣ್ಣಿಗೆ ತನ್ನದೇ ಆದ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಎಷ್ಟು ಕಷ್ಟ..? ಸುಮಿತ್ರೆಯ ದೃಷ್ಟಿಯಲ್ಲಿ ಮಲ್ಲಿಗೆಯಂತಹ ಆದರೆ ತನ್ನದೇ ದೃಷ್ಟಿಯಲ್ಲಿ ಕಾಡುಸಂಪಿಗೆಯಂತಹ ಊರ್ಮಿಳೆಯ ವ್ಯಕ್ತಿತ್ವ ಸ್ವಾಭಿಮಾನದತ್ತ.. ತನ್ನದೇ ಸ್ವಂತ ವ್ಯಕ್ತಿತ್ವ ರೂಪಿಸಿಕೊಳ್ಳುವತ್ತ ಹೆಜ್ಜೆ ಹಾಕಿದ ಪ್ರತಿ ಘಟನೆಗೂ ಸಾಕ್ಷಿಯಾಗುತ್ತೇವೆ ಇಲ್ಲಿ. ಇಲ್ಲಿ ನಾನು ಹೇಳಿರುವ ಸಂಗತಿಗಳು ಬೆರಳೆಣಿಕೆಯಷ್ಟೇ.. ಕಾಡುವ ಮತ್ತು ಕಲಕಿದ ಕಾದಂಬರಿ ಇದು. ಊರ್ಮಿಳೆ ಗಾಢವಾಗಿ ಆವರಿಸಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ