2026 ರ ಸೆಪ್ಟೆಂಬರ್ 27 ರಂದು ಗೂಗಲ್ ತನ್ನ 28 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿತು. ಇದಕ್ಕಾಗಿ ಸೂಕ್ತ ಡೂಡಲ್ ಅನ್ನು ಕೂಡಾ ಪ್ರದರ್ಶಿಸಿತ್ತು. ಡೂಡಲ್ ಅಂದರೆ ತನ್ನ ಲೋಗೋ ಮೂಲಕ ಹಾಸ್ಯದ ರೀತಿಯಲ್ಲೋ, ಗೌರವದ ರೀತಿಯಲ್ಲೋ ಅಥವಾ ಆಶ್ಚರ್ಯದ ರೀತಿಯಲ್ಲಿಯೋ ಯಾರದ್ದಾದರೂ ಹುಟ್ಟು ಹಬ್ಬ, ಸಾಧನೆ , ಸಾವಿಗಾಗಿ ಗೌರವ ಸೂಚಿಸುತ್ತಾ ಗೊತ್ತಿಲ್ಲದ ಮಾಹಿತಿಗಳನ್ನು ತಲುಪಿಸುವ ಚಿತ್ರ. ಈ ಗೂಗಲ್ ಡೂಡಲ್ ಪ್ರತಿದಿನವೂ ಬದಲಾಗುತ್ತಿರುತ್ತದೆ.
ಗೂಗಲ್ ನ ಡೂಡಲ್ ಏನೋ ಪ್ರತಿದಿನವೂ ಬದಲಾಗುತ್ತದೆ. ಹಾಗೆಂದು, ಗೂಗಲ್ ನ ಹುಟ್ಟುಹಬ್ಬವೂ ಬದಲಾಗಬೇಕೇ ? ಕೆಲವು ಜನ ತಮ್ಮ ಹುಟ್ಟು ಹಬ್ಬವನ್ನು ದಿನಾಂಕದ ಆಧಾರದಲ್ಲಿ ಅಲ್ಲದೇ ಜನ್ಮ ನಕ್ಷತ್ರಗಳ ಆಧಾರದಲ್ಲಿ ಆಚರಿಸಿಕೊಳ್ಳುತ್ತಾರೆ. ಈ ಗೂಗಲ್ ಕೂಡಾ ಹಾಗೆಯಾ..?? ಈ ಗೂಗಲ್ ಮನುಷ್ಯನಲ್ಲವಲ್ಲ ಹಾಗೆ ಮಾಡಲು..!
27 ಸೆಪ್ಟೆಂಬರ್ 2002 ರಲ್ಲಿ ಗೂಗಲ್ ತನ್ನ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರೆ, 2003 ರಲ್ಲಿ ಸೆಪ್ಟೆಂಬರ್ 8 ರಂದು ತನ್ನ ಐದನೆಯ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿತ್ತು. ಆದರೆ, ಗೂಗಲ್ ತನ್ನ ಏಳನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು 2004 ಸೆಪ್ಟೆಂಬರ್ 7 ರಂದು. ಆದರೆ, ಆ ವರ್ಷ ಗೂಗಲ್ ಡೂಡಲ್ ಪ್ರದರ್ಶನವಾದದ್ದು ಸೆಪ್ಟೆಂಬರ್ 26 ರಂದೇ.. ಆದರೆ, ಅದರಲ್ಲಿ ನಮೂದಿಸಲಾಗಿದ್ದು ಗೂಗಲ್ ನ ಹುಟ್ಟುಹಬ್ಬ ಸೆಪ್ಟೆಂಬರ್ 7 ಎಂದೇ.. ಇದಾದ ನಂತರ ಗೂಗಲ್ ಸೆಪ್ಟೆಂಬರ್ 27 ನ್ನು ತನ್ನ ಹುಟ್ಟುಹಬ್ಬ ಎಂದು ಆಚರಿಸುತ್ತಿದೆ. ಈಗ ಸದ್ಯಕ್ಕೆ ಇದೇ ಇದರ ಆಫಿಶಿಯಲ್ ಹುಟ್ಟು ಹಬ್ಬವಾಗಿದೆ.
ಹಾಗೆ ನೋಡಿದರೆ.. ಗೂಗಲ್.ಕಾಮ್ ತನ್ನ ವೆಬ್ಸೈಟ್ ಹೆಸರನ್ನು ರಿಜಿಸ್ಟರ್ ಮಾಡಿದ್ದು 1997 ರ ಸೆಪ್ಟೆಂಬರ್ 15 ರಲ್ಲಿ. ಇದಕ್ಕೂ ಮೊದಲೇ ಅಂದರೆ 1996 ರ ಜನವರಿಯಲ್ಲಿ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಮಾಡುತ್ತಿದ್ದ ಲ್ಯಾರಿ ಪೇಜ್ ಹಾಗೂ ಸೆರ್ಜಿ ಬ್ರಿನ್ ಜೊತೆ ಸ್ಕಾಟ್ ಹಸನ್ ಸೇರಿ ಗೂಗಲ್ ಸರ್ಚ್ ಇಂಜಿನ್ ಅನ್ನು ಅವರ ಪ್ರಾಜೆಕ್ಟ್ ಆಗಿ ರೂಪಿಸಿದರು. ಸ್ಕಾಟ್ ಹಸನ್ ತನಗೆ ಬೇರೆ ವಿಷಯದಲ್ಲಿ ಆಸಕ್ತಿ ಇದೆ ಎಂದು.. ಇಲ್ಲಿ ಬಿಟ್ಟು ಹೊರಟ.ಹಾಗಾಗಿ ಉಳಿದ ಇಬ್ಬರನ್ನು ಮಾತ್ರವೇ ಗೂಗಲ್ ನ ಸಂಸ್ಥಾಪಕರು ಎನ್ನಲಾಗುತ್ತದೆ. ಆದರೆ, ಎಲ್ಲಿಯೂ ಯಾವತ್ತೂ ಗೂಗಲ್ ಜನವರಿಯಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಆದರೆ, ಗೂಗಲ್ ಕಂಪನಿಯಾಗಿ ಶುರುವಾಗಿದ್ದು 1998 ರ ಸೆಪ್ಟೆಂಬರ್ 4 ರಂದು. ಒಂದರ್ಥದಲ್ಲಿ ಇದು ಅದರ ನಿಜವಾದ ಹುಟ್ಟುಹಬ್ಬದ ದಿನಾಂಕ. ಆದರೆ, ಗೂಗಲ್ ಸೆಪ್ಟೆಂಬರ್ 27 ನ್ನು ಏಕೆ ಆಯ್ಕೆ ಮಾಡಿಕೊಂಡಿತು ಗೊತ್ತೇ ??
ಗೂಗಲ್ ಮೊದಲಿಗೆ ಖ್ಯಾತವಾದ ಸರ್ಚ್ ಇಂಜಿನ್ ಏನೂ ಆಗಿರಲಿಲ್ಲ. ಯಾಹೂ.ಕಾಮ್ ಇದಕ್ಕಿಂತಲೂ ಹೆಚ್ಚಿನ ಖ್ಯಾತಿ ಪಡೆದಿತ್ತು. ಅಸಲಿಗೆ ಆಗ ಇನ್ನೂ ಗೂಗಲ್ ಇರಲೇ ಇಲ್ಲ. ಆನಂತರದಲ್ಲಿ ಗೂಗಲ್ ನಿಧಾನವಾಗಿ ತನ್ನ ಛಾಪು ಮೂಡಿಸಲು ಆರಂಭಿಸಿತ್ತು.
ಇವತ್ತು ಯಾರು ಏನೇ ಕೇಳಿದರೂ ಗೂಗಲ್ ನೋಡಲು ಹೇಳುತ್ತೇವೆ. ಇಲ್ಲವೇ, ಗೂಗಲ್ ಮೊರೆಹೋಗುತ್ತೇವೆ. "ಜಸ್ಟ್ ಗೂಗಲ್ ಇಟ್" ಎಂದು ಬಿಡುತ್ತೇವೆ. ಅಷ್ಟಕ್ಕೂ ಗೂಗಲ್ ಪದದ ಅರ್ಥವೇನು ಗೊತ್ತೇ ? ಈ ಪದ ಹುಟ್ಟಿದ್ದು ಗೂಗಾಲ್(Googole) ಎಂಬ ಪದದಿಂದ. ಹೀಗೆಂದರೆ 1 ರ ಮುಂದೆ 100 ಸೊನ್ನೆಗಳನ್ನು ಸೇರಿಸಿದಾಗ ಬರುವ ಸಂಖ್ಯೆ. ಬಹುಶಃ, ಶುರು ಮಾಡಿದಾಗ ಅವರು ಅಷ್ಟು ಸಂಖ್ಯೆಯ ಮಾಹಿತಿ ದೊರೆಯಲಿ ಎಂದು ಇಟ್ಟಿದ್ದಿರಬಹುದು. ಆದರೆ , ಅಷ್ಟು ಸಂಖ್ಯೆಯ ಜನರು ಬಳಸುವಷ್ಟು ದೊಡ್ಡ ಕಂಪೆನಿಯಾಗುತ್ತದೆ ಎಂದು ಅಂದುಕೊಂಡಿರಲಿಕ್ಕಿಲ್ಲ.
1920ರಲ್ಲಿ ಅಮೆರಿಕದ ಗಣಿತಜ್ಞ ಎಡ್ವರ್ಡ್ ಕಸ್ನರ್ ಒಂದು ವಿಭಿನ್ನ ಅಸಾಮಾನ್ಯ ಸಂಖ್ಯೆಯ ಬಗ್ಗೆ ಯೋಚಿಸುತ್ತಿದ್ದ. ಆಗ ಅದಕ್ಕೆ ಏನು ಹೆಸರಿಟ್ಟರೆ ಚೆಂದ ಎಂದು ತನ್ನ 9 ವರ್ಷದ ಕಸಿನ್ ನ ಮಗ ಮಿಲ್ಟನ್ ಸಿರೋಟಾಗೆ ಕೇಳಿದನಂತೆ. ಆ ಹುಡುಗ ಬಾಲಭಾಷೆಯಲ್ಲಿ ಹೇಳಿದ ಹೆಸರು `ಗೂಗಾಲ್'. ಅದನ್ನೇ ತಾನು ಬರೆದ 'ಮ್ಯಾಥಮ್ಯಾಟಿಕ್ಸ್ ಅಂಡ್ ದಿ ಇಮ್ಯಾಜಿನೇಷನ್' ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾನೆ ಕಸ್ನರ್.
ಗೂಗಲ್ ಬ್ರೌಸಿಂಗ್ ನಲ್ಲಿ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳಬೇಕೆಂದರೆ ಅದರ ಪುಟಗಳು ಇಂಡೆಕ್ಸಿಂಗ್ ಮೂಲಕವೇ ಕಾಣಿಸಿಕೊಳ್ಳಬೇಕಿತ್ತು.ಎಲ್ಲಾ ವೆಬ್ಸೈಟ್ ಗಳೂ ಹೀಗೆಯೇ.. ಗೂಗಲ್ ನ ಹೆಚ್ಚಿನ ಪುಟಗಳು ಇಂಡೆಕ್ಸಿಂಗ್ ಆಗಿದ್ದು ಗೂಗಲ್ ನ ಸಾಧನೆಯ ಮೈಲುಗಲ್ಲು. ಹೀಗೆ ಆದದ್ದು ಸೆಪ್ಟೆಂಬರ್ 27 ರಂದು. ಹಾಗಾಗಿಯೇ.. ಗೂಗಲ್ ಇದರ ಸವಿನೆನಪಿಗೆ ತನ್ನ ಹುಟ್ಟುಹಬ್ಬದ ದಿನಾಂಕವನ್ನು ಸೆಪ್ಟೆಂಬರ್ 27 ಎಂದು ಆಚರಿಸುತ್ತದೆ.
~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ