ಪುಸ್ತಕದ ಶೀರ್ಷಿಕೆ : ಅಕ್ಷಿ
ಲೇಖಕರು : ಎಂ. ಮನೋಹರ ಪೈ
ಪ್ರಕಾಶಕರು : ಸಾಹಿತ್ಯಸುಧೆ ಪ್ರಕಾಶನ
ಪ್ರಥಮ ಮುದ್ರಣ : 2024
ಪುಟಗಳು : 180
ಬೆಲೆ : 220 ರೂ.
ಇದು ಲೇಖಕ ಮನೋಹರ ಪೈ ಅವರ ಮೂರನೇ ಕಾದಂಬರಿ.
ವಾಸವಿ ಪಿನಾಕಿಯನ್ನು ಮದುವೆಯಾಗಿ ಬರುವ ಸಂದರ್ಭ ಸಹಜವೇನೂ ಆಗಿರಲಿಲ್ಲ. ನಡುವಯಸ್ಕ ಮಹಿಳೆಯ ಮಗಳು ಅಕ್ಷಿಯನ್ನು ಮುಜುಗರಕ್ಕೆ ದೂಡುವಂತಹ ವಿವಾಹವನ್ನು ವಾಸವಿ ಏಕಾದಳು..? ಎನ್ನುವ ಪ್ರಶ್ನೆಯಿಂದಲೇ ಕಾದಂಬರಿಯ ಓದು ಶುರುವಾಗುತ್ತದೆ. ಕಾಲೇಜಿಗೆ ಹೋಗುವ 18ರ ಹರೆಯದ ಮಗಳ ಕಣ್ಣಲ್ಲಿ ಅಪರಾಧಿನಿ ಆಗಬಹುದಾದರೂ.. ವಾಸವಿ ಹಿಂದೇಟು ಹಾಕದೆ ಪಿನಾಕಿಯನ್ನು ಮದುವೆಯಾದಾಗ ಅದು ಅವಳಿಗೆ ಗಂಡಿನ ಆಸರೆ ಒದಗಿಸುತ್ತದೆ ಹಾಗೂ ಮುಂದೊಂದು ದಿನ ಅಕ್ಷಿ ಕೂಡ ಇದಕ್ಕೆ ಹೊಂದಿಕೊಳ್ಳುತ್ತಾಳೆ ಎಂಬ ಭರವಸೆ ಇಟ್ಟುಕೊಂಡೇ ಕಾದಂಬರಿಯನ್ನು ಆರಂಭಿಸಿದೆ.
ಮಗಳಿಗೆ ಗೊತ್ತಿಲ್ಲದ ತಾಯಿಯ ಬದುಕಿನ ಕಥೆಯಂತೆಯೇ.. ವಾಸವಿಗೂ ಮಗಳ ಬದುಕಿನ ಕುರಿತು ಹೆಚ್ಚೇನೂ ತಿಳಿದಿಲ್ಲ. ಹದಿಹರೆಯದವರ ಭಾವನೆಗಳು ಅಷ್ಟು ಸುಲಭವಾಗಿ ಬಿಚ್ಚಿಡುವಂತಹದ್ದು ಅಲ್ಲವಲ್ಲ. ಇಬ್ಬರ ಬದುಕಿನ ಸಿಕ್ಕುಗಳು ಮುಂದೆ ಹೆಣೆದುಕೊಳ್ಳುತ್ತಾ, ಬಿಡಿಸಿಕೊಳ್ಳುತ್ತಾ ಸಾಗುವ ರೋಚಕ ಪಯಣ ಇಲ್ಲಿದೆ.
ಅಕ್ಷಿಯ ಇಬ್ಬರು ಸ್ನೇಹಿತರು ರಾಧೇಶ ಹಾಗೂ ಚಾರ್ವಿ. ಈ ಮೂವರ ಲೋಕದಲ್ಲಿ ತುಂಟಾಟ, ಹುಡುಗಾಟ, ನಿಷ್ಕಾಮ ಪ್ರೇಮ, ಪರಿಶುದ್ಧ ಸ್ನೇಹ ಇದೆಲ್ಲದರ ಜೊತೆಗೆ ಇಂತಹ ಸ್ನೇಹ ಅಕ್ಷಿಯ ಪಾಲಿಗೆ ವರವಯಿತೇ ಅಥವಾ ಶಾಪವಾಯಿತೇ ಎಂದು ತಿಳಿಯಬಹುದು. ಚಾರ್ವಿಯ ಬದುಕನ್ನು ಒಂದು ದೃಷ್ಟಿಯಲ್ಲಿ ನೋಡಿದಾಗ ಮಾದಕದ್ರವ್ಯದ ವ್ಯಸನಿಯಂತೆಯೂ.. ಅಕ್ಷಿಯನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾಳೇನೋ.. ಅಕ್ಷಿಗೆ ಇವಳ ಸಹವಾಸ ಬೇಕಿತ್ತೇ ಎಂಬ ಪ್ರಶ್ನೆ ಮೂಡಿದರೂ.. ಚಾರ್ವಿಯ ಬದುಕು ಅಷ್ಟು ನೇರಾನೇರ ಆಗಿರಲಿಲ್ಲ ಹಾಗೂ ಅವಳ ಬದುಕಿನ ಸತ್ಯ ತಿಳಿದಾಗ ಬೇರೆ ಲೋಕವೇ ನಮ್ಮ ಕಣ್ಮುಂದೆ ಕಾಣಸಿಗುತ್ತದೆ.
ವಾಸವಿಯ ಗೊಂದಲಗಳಿಗೆ ಪರಿಹಾರ ನೀಡುತ್ತಿದ್ದ ಗೆಳತಿ ಅದಿತಿ ಅವಳ ಮದುವೆಗೂ ಸಹಾಯಕವಾಗಿಯೇ ನಿಂತಿದ್ದಳು. ಕೆಲಸದ ಆಳು ಶಾಂತಮ್ಮನೂ ಇದನ್ನು ತೀರಾ ವಿಶೇಷವೆಂಬಂತೆ ಕಂಡಿರಲಿಲ್ಲವಾದರೂ ವಾಸವಿಗೆ ಮುಜುಗರ ಇದ್ದೇ ಇತ್ತು. ಮಧ್ಯವಯಸ್ಸಿನ ವಾಸವಿಯ ಎರಡನೇ ವಿವಾಹ ಮಂಗಳೂರು ಸ್ಟೋರ್ಸ್ ನಡೆಸುತ್ತಿದ್ದ ಪಿನಾಕಿಯ ಜೊತೆಗಾದಡ್ಡು ಸಮಸ್ಯೆಯಾಗಿತ್ತೇ..? ಅಥವಾ ಅಕ್ಷಿ ತನ್ನ ತಂದೆ ಅನಿರುದ್ಧನ ಮೇಲಿಟ್ಟಿದ್ದ ಭಾವ ಇದಕ್ಕೆ ಅಡ್ಡಿಯಾಯಿತೇ..? ತಾಯಿ ತಿಂಗಳಿಗೆ ಎರಡು ಬಾರಿ ಯಾರನ್ನೋ ಭೇಟಿಯಾಗಿ ಬರುತ್ತಿದ್ದುದಕ್ಕೆ ಅಕ್ಷಿ ಕಲ್ಪಿಸಿದ ಅರ್ಥ ಇಲ್ಲಿ ತಪ್ಪಾಗಿತ್ತೇ..?
ಅಕ್ಷಿ ಇಲ್ಲಿ ತಾಯಿ ತನ್ನ ಮೇಲಿಟ್ಟಿದ್ದ ಪ್ರೀತಿ ಕಡಿಮೆಯಾಯಿತು ಎಂಬ ಭಾವದಲ್ಲೋ ಅಥವಾ ತಾಯಿಯಿಂದ ದೂರಾದ ಸಂದರ್ಭದಲ್ಲಿಯೋ.. ಅನುಭವಿಸುವ ನೋವಿನಲ್ಲಿಯೇ ಯಾವುದೋ ಮಾನಸಿಕ ವೇದನೆಗೆ ಗುರಿಯಾಗುತ್ತಾಳಾ ಎಂದನಿಸಿದರೂ ಹಾಗಾಗದೆ ಹಫೇಫೋಬಿಯಾ ಆರಂಭವಾಯ್ತು ಎಂದೆನಿಸುವಂತೆ ಮಾಡಿದ ಸಂಧರ್ಭಗಳೇನು..?
ಕಾಲೇಜಿನಲ್ಲಿ ಧಾತ್ರಿ ಮೇಡಂ ಹಾಗೂ ಡಿಕೆ ಸರ್ ಇಬ್ಬರೂ ತಮ್ಮ ವಿದ್ಯಾರ್ಥಿಗಳು ಕುರಿತು ತೋರಿದ ಕಾಳಜಿ ಹಾಗೂ ಅವರಿಬ್ಬರ ಕುರಿತು ಚಾರ್ವಿ, ರಾಧೇಶ ಹಾಗೂ ಅಕ್ಷಿಗಿದ್ದ ಭಾವಗಳು ಕಾಣುತ್ತಾ ಹೋಗುತ್ತವೆ.
ದಿನ ಕಳೆದಂತೆ ಪಿನಾಕಿಯನ್ನು ಸಹಜವಾಗಿ ಮಾತನಾಡಿಸುತ್ತಾ ಅಕ್ಷಿ ಆತನಿಗೆ ಹತ್ತಿರವಾಗುತ್ತಾ ಹೋಗುವುದು ವಾಸವಿಗೆ ಸಮಾಧಾನ ತರುತ್ತದೆ ಎಂದುಕೊಂಡರೆ ಅವಳಲ್ಲಿ ದಿನೇದಿನೇ ಭಯ ಹೆಚ್ಚಾಗುತ್ತಲೇ ಹೋಗುವುದೇಕೆ..?
ವಾಸವಿಯ ಈ ಅಭದ್ರತೆಯನ್ನು ಪಿನಾಕಿ ಹಾಗೂ ಅಕ್ಷಿಯರ ಬಳಿ ಹಂಚಿಕೊಂಡಾಗ ಅವರಿಬ್ಬರ ಸ್ಪಂದಿಸುವಿಕೆ ಹೇಗಿತ್ತು..? ಕನ್ಯಾಕುಮಾರಿಯಲ್ಲಿ ನಡೆದ ಘಟನೆ ಯಾರಲ್ಲಿ ಯಾವ ಭಾವವನ್ನು ಮೂಡಿಸುತ್ತದೆ..?
ಈ ಕಾದಂಬರಿ ಕೇವಲ ಕೌಟುಂಬಿಕ ಕಾದಂಬರಿಯ ಆಯಾಮವಾಗಿಲ್ಲ ಬದಲಾಗಿ ಇದನ್ನು ರೋಚಕ ಕಾದಂಬರಿಯಾಗಿ ಕಟ್ಟಿಕೊಡುತ್ತಾ ಹೋಗುವಾಗ ಬದಲಾಗುವ ಅಕ್ಷಿ ಮಾತ್ರವಲ್ಲದೆ, ಬದಲಾಗುವ ಪಿನಾಕಿ ಕಾಣಸಿಗುತ್ತಾರೆ. ಅಲ್ಲಲ್ಲಿ ಬದಲಾಗುವ ಪಿನಾಕಿಯ ವರ್ತನೆ ಹಾಗೂ ಸ್ಪಂದನೆಗಳು ಮೊದಲಿನಿಂದಲೂ ಓದುಗರಲ್ಲಿ ಅನುಮಾನ ಮೂಡಿಸುತ್ತಲೇ ಸಾಗಿದರೂ ಕೆಲವೊಮ್ಮೆ ಇದು ನಿಜವೇ ಎನ್ನುವಂತಾಗುತ್ತದೆ. ಮುಂದೆ ಪಿನಾಕಿಯ ಹಿನ್ನೆಲೆ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ.
ರಾಧೇಶ, ಚಾರ್ವಿ ಹಾಗೂ ಅಕ್ಷಿಯರ ಸ್ನೇಹ ಗಾಢವಾಗುತ್ತಾ.. ಪರಸ್ಪರರು ಅರ್ಥವಾಗುತ್ತಾ ಹೋಗುವಾಗ ತುಂಟಾಟದ ನಡೆಗಳು, ಮಾತುಗಳು ಆಪ್ತವಾಗುತ್ತವೆ. ಮುಂದುವರಿದ ಈ ಸ್ನೇಹದ ಕ್ಷಣಗಳು ಟ್ರಕಿಂಗ್ ಹೋಗುವ ನಿರ್ಧಾರದಿಂದ ಮತ್ತಷ್ಟು ಹೆಚ್ಚಾಗುತ್ತದೆ. ಸುಬ್ರಮಣ್ಯ ಹಾಗೂ ಕುಮಾರ ಪರ್ವತದ ಟ್ರಕ್ಕಿಂಗ್ ನ ಪ್ರಸಂಗಗಳು ಸಹಜವಾಗಿ ಮೂಡಿಬಂದಿವೆ. ಇಲ್ಲಿಂದ ಮುಂದೆ ಕಥೆ ವೇಗವಾಗಿ ಹಾಗೂ ವಿಭಿನ್ನವಾದ ತಿರುವುಗಳನ್ನು ಪಡೆಯುತ್ತಾ ಸಾಗುತ್ತದೆ. ಸುಬ್ರಹ್ಮಣ್ಯದ ದೇವಸ್ಥಾನ ಹಾಗೂ ಬ್ರಹ್ಮರಕುದ್ರುವಿಗೆ ಹೋದಾಗ ಅಲ್ಲಿದ್ದ ಅಜ್ಜಿ ಎಂದೂ ಅಕ್ಷಿಯನ್ನು ನೋಡಿದಿದ್ದರೂ ಅವಳನ್ನು ಕುರಿತು ಹಾಗೆ ಮಾತನಾಡಿದ್ದಕ್ಕೆ ಕಾರಣವೇನಿತ್ತು..? ಅಜ್ಜಿಯ ಜೊತೆಗಿದ್ದ ರಮೇಶ ಅದನ್ನು ಅರ್ಥೈಸಿಕೊಂಡದ್ದು ಹೇಗೆ..? ತುಳು ಭಾಷೆಯ ಸಂಭಾಷಣೆಗಳು ಹಾಗೂ ಅದರ ಕನ್ನಡ ಅನುವಾದ ಎರಡೂ ಪ್ರಾದೇಶಿಕ ಪರಿಸರವನ್ನು ಕಟ್ಟಿಕೊಳ್ಳುತ್ತಾ ಅಲ್ಲಿನ ಪರಿಸರ, ಭಾಷೆಯನ್ನರಿಯದ ಓದುಗರಿಗೂ ಅರ್ಥವಾಗುವಂತೆ ಮೂಡಿಬಂದಿದೆ.
ಬ್ರಹ್ಮರ ಕುದ್ರು ಕಥೆಗೆ ಹೊಸ ಆಯಾಮವನ್ನೇ ಕೊಡುವ ಜಾಗ. ಅಕ್ಷಿ ಅಲ್ಲಿಗೆ ಹೋಗಿ ಬರುತ್ತಾಳಾದರೂ.. ಅದು ಉದ್ದೇಶಪೂರ್ವಕ ಭೇಟಿಯಲ್ಲ. ಅಲ್ಲಿ ಕಾಣುವ ಒಗಟುಗಳನ್ನು ಬಿಡಿಸುತ್ತಾ ಸಾಗುವ ಪರಿ ಓದುಗರಲ್ಲಿಯೂ ಮುಂದೇನು ಎಂಬ ಕುತೂಹಲ ಮೂಡಿಸುತ್ತದೆ.
ವಾಸವಿ ಬದಲಾದ ದಿನಗಳು, ಮನಸ್ಥಿತಿಯಿಂದ ಎಲ್ಲರನ್ನೂ ಅನುಮಾನದಿಂದಲೇ ನೋಡುತ್ತಿದ್ದಾಳೇನೋ ಎಂಬ ಸಂದೇಹ ಹುಟ್ಟುತ್ತದೆ. ಪಿನಾಕಿ, ಅಕ್ಷಿ, ಅದಿತಿ, ಶಾಂತಮ್ಮ ಎಲ್ಲರೂ ವಾಸವಿಯ ದೃಷ್ಟಿಯಲ್ಲಿ ಕಂಡುಬರುವುದು ಹೇಗೆ..? ಅವಳ ಸಂದೇಹ ಹಾಗೂ ವಾಸ್ತವ ಎಷ್ಟು ಒಪ್ಪುತ್ತವೆ..?
ಪ್ರೊಫೆಸರ್ ಡಿಕೆ ಅಕ್ಷಿಯ ತಾಯಿಯನ್ನು ಭೇಟಿ ಮಾಡಲು ಮುಂದಾಗಿ ಹೇಳು ಕಳುಹಿಸಿದಾಗ ಬಂದ ವಾಸವಿ ಹಾಗೂ ಡಿಕೆ ಇಬ್ಬರಿಗೂ ಅಚ್ಚರಿಯಾಗಿದ್ದೇಕೆ..?
ಶಂಭು? ಕಿನ್ನಿಬಾಲೆ?
ವಾಸವಿ ಕಾಲೇಜ್ ಕ್ಯಾಂಟೀನ್ ನಲ್ಲಿ ಆತನನ್ನು ಭೇಟಿಯಾದಾಗ ಆ ಭೇಟಿ ಇಬ್ಬರಿಗೂ ಅಚ್ಚರಿಯೇ. ಅದುವರೆಗೂ ಪ್ರೊಫೆಸರ್ ಡಿಕೆಗೆ ಬಹಳಷ್ಟು ಗೌರವ ಕೊಡುತ್ತಿದ್ದ ಶಂಭು ಬದಲಾದದ್ದೇಕೆ..?
ಪಿನಾಕಿ ಮಂಗಳೂರು ಸ್ಟೋರ್ಸ್ ಅನ್ನು ಬಿಟ್ಟು ತಾನು ಹೊಸ ಉದ್ಯಮವೊಂದನ್ನು ಆರಂಭಿಸುವ ಕುರಿತು ವಾಸವಿಯ ಮುಂದೆ ಹೇಳಿದಾಗ ಅವಳು ಅದಕ್ಕೆ ಪ್ರತಿಕ್ರಿಯಿಸಿದ್ದು ಹೇಗೆ..?
ಎಲ್ಲ ಬಿಂದುಗಳು ಮುಂದೆ ಬ್ರಹ್ಮರ ಕುದ್ರುವಿನಲ್ಲಿ ಬೆಸೆಯುತ್ತವೆ. ಕಥೆಯ ರೋಚಕ ತಿರುವು ಇರುವುದು ಇಲ್ಲಿಯೇ.
ಅಕ್ಷಿ ಎಂಬ ಹೆಸರು ಅವಳು ಹುಟ್ಟಿದ ಮೇಲೆ ತೀರ್ಮಾನಿಸಿದ್ದಲ್ಲ. ಅದರ ಹಿಂದಿನ ಅರ್ಥ ಬಹಳ ಗಾಢವಾಗಿದೆ. ತನ್ನ ಕಣ್ಣಿನ ಕಣ್ಮಣಿಯಂತೆ ಅಕ್ಷಿಯನ್ನು ಕಾಪಾಡಿಕೊಳ್ಳುವ ತಾಯಿ ವಾಸವಿ ಅಕ್ಷಿಗೆ ತಿಳಿಸದೆ ಇದ್ದ ಸತ್ಯ ಯಾವುದು..?
ಚಾರ್ವಿಯ ಮಾದಕದ್ರವ್ಯದ ವ್ಯಸನ ಕೊನೆಯಾಯಿತೇ..? ಚಾರ್ವಿ ಮಾತ್ರವಲ್ಲ, ಅವಳಂತಹ ಅನೇಕರು ಇಂತಹ ವ್ಯಸನಕ್ಕೆ ಬಲಿಯಾದ ಪರಿ ನಿಜಕ್ಕೂ ಚಿಂತಾಜನಕ. ಅಂತಹ ಜಾಲ ಕೊನೆಯಾಗುವುದೇ..? ತಡೆಯಾಗುವುದೇ..?
ಎಲ್ಲ ಗೊತ್ತಿದ್ದರೂ ಚಾರ್ವಿ ಹಾಗೂ ಅಕ್ಷಿಯರ ನಿಷ್ಕಲ್ಮಶ ಸ್ನೇಹ ಹಾಗೂ ರಾಧೇಶನ ಸ್ನೇಹ, ಪ್ರೇಮದ ಭಾವಗಳಲ್ಲಿ ಎಲ್ಲಿಯೂ ಅತಿಶಯೋಕ್ತಿ ಕಾಣಲಿಲ್ಲ.
ಎಲ್ಲ ಕಥೆಯೂ ಕೊನೆಯಾಗುವುದು ಕೆಟ್ಟದ್ದರ ಅಂತ್ಯ ಹಾಗೂ ಒಳಿತಿನ ಆರಂಭದೊಂದಿಗೆ. ಆದರೆ ಕೆಲ ಚಿಕ್ಕ-ಪುಟ್ಟ ಪಾತ್ರಗಳು ಕೆಟ್ಟದರೊಂದಿಗೆ ಭಾಗಿಯಾದರೂ ಯಾವುದೇ ಶಿಕ್ಷೆ ಪಡೆಯದೆ ಉಳಿದುಬಿಟ್ಟರಾ ಎನ್ನಿಸಿದರೂ.. ಕಾಲವೇ ಅದಕ್ಕೆ ತಕ್ಕ ಉತ್ತರ ಕೊಡುತ್ತದೆ ಎನ್ನುವ ಭಾವದೊಂದಿಗೆ ಲೇಖಕರು ಬಿಟ್ಟು ಬಿಟ್ಟರೇನೋ ಎನ್ನಿಸಿತು.
ಇಡೀ ಕಾದಂಬರಿಯಲ್ಲಿ ರೋಚಕ ಹಾಗೂ ಕಾನೂನುಬಾಹಿರ ಕೆಲಸಗಳ ವಿಚಾರವಿದ್ದರೂ.. ಪೊಲೀಸರ ಅಥವಾ ಗೂಢಾಚಾರಿಗಳ ಪಾತ್ರಗಳು ಇದರಲ್ಲಿಲ್ಲ. ಯಾರೋ ಅತಿ ಬುದ್ಧಿವಂತಿಕೆಯಿಂದ ಒಬ್ಬರೇ ನಿಂತು ಇದೆಲ್ಲವನ್ನು ಭೇದಿಸಿದರು ಎಂಬರ್ಥವೂ ಅಲ್ಲ.. ಹಾಗಾಗಿ ಕಾದಂಬರಿ ಸಹಜವಾದ ವಾತಾವರಣದೊಂದಿಗೆ ಕಾಣುತ್ತಾ ಹೋಗುತ್ತದೆ. ನಾಟಕೀಯತೆ ಇಲ್ಲದಂತಹ ಸಹಜ ಸಂಭಾಷಣೆಗಳು ಅದರಲ್ಲಿಯೂ ರಾಧೇಶ, ಚಾರ್ವಿ, ಅಕ್ಷಿಯರ ಸಂಭಾಷಣೆಗಳು ಮುದ ನೀಡುತ್ತವೆ.
ಉತ್ತರಾರ್ಧದಿಂದ ವೇಗ ಪಡೆಯುವ ಕಾದಂಬರಿಯ ಕೊನೆಯ ಭಾಗ ಸಾಕಷ್ಟು ರೋಚಕ ತಿರುವುಗಳನ್ನು ಹೊಂದಿದೆ. ಕಥೆಯ ತಿರುವುಗಳನ್ನು ಊಹಿಸಲಂತೂ ಆಗಲಿಲ್ಲ. ಒಂದೊಳ್ಳೆ ವೆಬ್ ಸೀರೀಸ್ ಆಗಬಹುದಾದ ಕಾದಂಬರಿ ಇದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ