"ನನಗೆ ಕ್ಯಾನ್ಸರ್ ಬಂದಿರಬೇಕೇನೋ ಕಣೇ.. ನನಗೇಕೋ ಅನುಮಾನ" ಎಂದ ಗೆಳತಿಯ ಮಾತಿಗೆ ಅಚ್ಚರಿಯಿಂದ ನೋಡಿದಳು ರಾಶಿ.
"ಯಾಕೆ ಹೀಗೆಲ್ಲಾ ಮಾತನಾಡುತ್ತಾ ಇದ್ದೀಯ.. ತಲೆ ಗಿಲೆ ಕೆಟ್ಟಿಲ್ಲ ತಾನೇ.. " ಎಂದಾಗ ಮುಖ ಉಬ್ಬಿಸಿ ಗೆಳತಿ ರಕ್ಷಾ "ಯಾಕೆ ಹೀಗೆಲ್ಲಾ ಕೇಳ್ತೀಯಾ ?
ನೋಡಿಲ್ಲಿ ಎಷ್ಟು ರಾಶಿ ರಾಶಿ ಕೂದಲಿನ ಜೊಂಪೆ ಬಿದ್ದಿದೆ ಇಲ್ಲಿ " ಎಂದಾಗ ನಕ್ಕ ರಾಶಿ "ನಾನೇನೋ ಅಂದುಕೊಂಡೆ. ಇಷ್ಟಕ್ಕೇ ಹೀಗಾಡ್ತಿಯಲ್ಲೇ.. ಪಿ.ಜಿ ನೀರು ಅಡ್ಜೆಸ್ಟ್ ಆಗಿಲ್ಲ ಅನ್ಸುತ್ತೆ " ಎಂದಾಗ "ಪಿ.ಜಿ ನೀರು ಮಾತ್ರ ಅಲ್ಲ. ಪಿ.ಜಿ ಊಟ, ಇಲ್ಲಿನ ವಾತಾವರಣ ಒಟ್ಟಾರೆ ಪಿ.ಜಿ ನೇ ಇಷ್ಟವಾಗಿಲ್ಲ ಕಣೇ.. ಮದುವೆಯಾಗುವವರೆಗಾದರೂ ನನ್ನ ಕೂದಲು ಇದ್ದರೆ ಸಾಕು. ನನ್ನ ಕೂದಲು ಉದುರುತ್ತಾ ಇರುವುದನ್ನು ನೋಡಿದ್ರೆ ನನ್ನ ಮದುವೆಗೆ ವಿಗ್ ಹಾಕಿಕೊಳ್ಳಬೇಕಾಗುತ್ತೆ. ಕೂದಲು ಬೆಳೆಯದೇ ಇದ್ದರೂ ಪರವಾಗಿಲ್ಲ. ಆದರೆ, ಇರೋ ನಾಲ್ಕು ಕೂದಲು ಸಹಾ ಉದುರಿ ಹೋಗದೇ ಇದ್ದರೆ ಸಾಕು " ಎಂದಳು.
"ಅದ್ಯಾಕೆ ಹಾಗೆಲ್ಲಾ ಮಾತನಾಡುತ್ತೀಯ.. ಈಗಲೇ ಕೂದಲು ಉದುರಿ ಮುದುಕಿಯಾಗಿ ಬಿಟ್ಟಳು ಅನ್ನೋ ತರಹಾ. ಕೂದಲಿಗೆ ಸರಿಯಾಗಿ ಆರೈಕೆ ಮಾಡಿದ್ರೆ ಏನೂ ಆಗಲ್ಲ. ನೋಡು.. ನನ್ನ ಕೂದಲು ಸಹಾ ಮೊದಲು ಸಣ್ಣ ಇತ್ತು. ಈಗ ಚೆನ್ನಾಗಿ ಆಗಿದೆ. ಅಲ್ಲದೇ, ನಾನಂತೂ ಯಾವತ್ತೂ ಕೂದಲು ಕಟ್ ಮಾಡಿಸೋಕೆಲ್ಲಾ ಹೋಗಲ್ಲಪ್ಪ. " ಎನ್ನುತ್ತಾ ತನ್ನ ಉದ್ದ ಕೂದಲನ್ನೊಮ್ಮೆ ನೋಡಿಕೊಂಡಳು.
ರಾಶಿ ಹೇಳಿದ್ದರಲ್ಲಿ ಅತಿಶಯೋಕ್ತಿ ಏನಿರಲಿಲ್ಲ. ರಾಶಿಯ ಕೂದಲು ಕಂಡು ಎಲ್ಲರಿಗೂ ಹೊಟ್ಟೆ ಉರಿಯಾಗುತ್ತಿತ್ತು. ಅಷ್ಟು ನುಣುಪಾದ ಹಾಗೂ ದಪ್ಪದಾದ ಜಡೆ.
"ಬಿಸಿ ನೀರಲ್ಲಿ ತಲೆ ಸ್ನಾನ ಮಾಡಬೇಡ. ಶಾಂಪೂ ಬಳಕೆ ಕಡಿಮೆ ಮಾಡು. ನಿಯಮಿತವಾಗಿ ಬುಡಕ್ಕೆ ಕೊಂಚ ಬಿಸಿ ಮಾಡಿದ ಎಣ್ಣೆಯನ್ನು ಹಚ್ಚು. ಚೆನ್ನಾಗಿ ತರಕಾರಿ - ಹಣ್ಣು ತಿನ್ನು. ಚೆನ್ನಾಗಿ ನೀರು ಕುಡಿ. ಚಿಂತೆ ಮಾಡುವುದನ್ನು ಕಡಿಮೆ ಮಾಡು. ಆಗ ಎಲ್ಲವೂ ಸರಿಯಾಗುತ್ತೆ " ಎಂದಿದ್ದಳು ರಾಶಿ. ರಕ್ಷಾ ರಾಶಿಯ ಮಾತಿನಂತೆಯೇ ನಡೆದುಕೊಳ್ಳತೊಡಗಿದ್ದಳು. ಕೂದಲ ಆರೋಗ್ಯ ಸುಧಾರಿಸಿತ್ತು. ರಾಶಿಯಷ್ಟು ದಪ್ಪವಾಗಿ ಅಲ್ಲದಿದ್ದರೂ ರಕ್ಷಾಳ ಕೂದಲು ತಕ್ಕ ಮಟ್ಟಿಗೆ ಚೆನ್ನಾಗಿಯೇ ಇತ್ತು.
ಕಾಲಚಕ್ರ ಉರುಳಿತ್ತು.
'ಅದು ರಾಶಿ ಅಲ್ಲವಾ..
ಛೇ, ಛೇ ಇರಲಿಕ್ಕಿಲ್ಲ. ಅವಳಿಗೆ ಅಷ್ಟು ಉದ್ದದ ಕೂದಲಿತ್ತು. ಜಡೆ ನೋಡಿಯೇ ರಾಶಿ ಅಂತಾ ಕಂಡು ಹಿಡಿಯಬಹುದಾಗಿತ್ತು. ಈ ಹೆಂಗಸು ಬಾಯ್ ಕಟ್ ಮಾಡಿಸಿಕೊಂಡಿದೆ' ಎಂದು ಮನಸ್ಸಿನಲ್ಲಿಯೇ ಲೆಕ್ಕ ಹಾಕುತ್ತಾ 'ರಾಶಿಯೇ ಆಗಿದ್ರೆ ಮಾತನಾಡಿಸೋಣ. ಇಲ್ಲಾ ಅಂದರೆ ವಾಪಾಸು ಬಂದು ಬಿಡೋಣ' ಎಂದುಕೊಂಡು ಮಾಲ್ ನಲ್ಲಿ ರಕ್ಷಾ ಆ ಹೆಣ್ಣಿನ ಕಡೆ ಹೆಜ್ಜೆ ಹಾಕಿದ್ದಳು.
"ರಾಶಿ" ಅಚ್ಚರಿಯಿಂದ ಉದ್ಗರಿಸಿದಳು ರಕ್ಷಾ.
"ಅರೆ ! ರಕ್ಷಾ ವಾಟ್ ಅ ಪ್ಲಸೇಂಟ್ ಸರ್ಪ್ರೈಸ್ " ಎನ್ನುತ್ತಾ ಫುಡ್ ಕೋರ್ಟ್ ಕಡೆ ಹೆಜ್ಜೆ ಹಾಕಿದರು.
"ಏನೇ ನಿನ್ನ ಕೂದಲು.. ? " ಎಂದೇ ಮೊದಲು ಕೇಳಿದಳು ರಕ್ಷಾ.
"ಹೇಳ್ತೀನಿ ಇರು. ತಿನ್ನೋಕೆ ಆರ್ಡರ್ ಮಾಡಿ ಬರುತ್ತೇನೆ " ಎಂದು ಸುಮ್ಮನೆ ಎದ್ದು ಹೋದಳು. ಹೋದವಳೆಡೆಗೆ ನೋಡಿದರೆ ಇವಳು ಅದೇ ರಾಶಿ ಹೌದಾ ಎಂಬಷ್ಟು ಸಣ್ಣವಾಗಿದ್ದಳು. ಯಾಕೋ ನಡಿಗೆಯಲ್ಲಿ ಮೊದಲಿನ ಲಾಸ್ಯವಿರಲಿಲ್ಲ. ಯಾಕೋ ಅವಳನ್ನು ಮತ್ತೆ ದಿಟ್ಟಿಸಿ ನೋಡುವ ಮನಸ್ಸಾಗದೇ..
ರಕ್ಷಾ ಮೊಬೈಲ್ ತೆಗೆದು ಫೇಸ್ಬುಕ್ ಸ್ಕ್ರೋಲ್ ಮಾಡತೊಡಗಿದಾಗ ರಾಶಿ ಶೇರ್ ಮಾಡಿದ್ದ ಒಂದು ವಿಡಿಯೋ ಕಣ್ಣಿಗೆ ಬಿತ್ತು. ಉದ್ದ ಕೂದಲಿನ ಹುಡುಗಿಯೊಬ್ಬಳು ಹೇರ್ ಕಟ್ ಮಾಡಿಸಲು ಬರುತ್ತಾಳೆ. ಇನ್ನಷ್ಟು ಚಿಕ್ಕದಾಗಿ.. ಇನ್ನೂ ಚಿಕ್ಕದಾಗಿ .. ಎನ್ನುತ್ತಾ ಬಾಯ್ ಕಟ್ ಮಾಡಿಸಿಕೊಂಡು "ಇನ್ನೂ ಚಿಕ್ಕದಾಗಿ ಕಟ್ ಮಾಡಿ.. ಅವನ ಕೈಗೆ ಸಿಗದಷ್ಟು.." ಎಂದು ದುಃಖದಿಂದ ನುಡಿಯುತ್ತಾಳೆ. ಯಾಕೋ ರಕ್ಷಾ ಮನಸ್ಸಿನ ಮೇಲೆ ವಿಡಿಯೋ ಪರಿಣಾಮ ಬೀರಿತ್ತು.
ಯಾಕೋ ಸುಮ್ಮನೆ ಕುಳಿತಿದ್ದಳು. ಮನಸ್ಸು ಭಾರವಾಗಿತ್ತು. ಯಾಕೋ ಲವಲವಿಕೆ ಇಲ್ಲದೆ ಸುಮ್ಮನೆ ನಡೆದು ಬರುತ್ತಿದ್ದ ರಾಶಿಗೆ ಮತ್ತೆ ಪ್ರಶ್ನೆ ಕೇಳಬೇಕೆಂದು ಅನ್ನಿಸಲಿಲ್ಲ.
~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ