ಭಾನುವಾರ, ಅಕ್ಟೋಬರ್ 4, 2026

ಅಕ್ಕರೆಯೇ ದೌರ್ಬಲ್ಯವೆನಿಸಿದರೆ..

 


"ನೀವು ತೋರಿಸುವ ಅಕ್ಕರೆಯನ್ನೇ ಅವರು ನಿಮ್ಮ ದೌರ್ಬಲ್ಯ ಎಂದುಕೊಳ್ಳುತ್ತಿದ್ದಾರೆ. ರೀ, ಕಣ್ಣು ಬಿಟ್ಟು ಎದುರಿಗಿರುವುದನ್ನು ನೋಡಿ. ನೀವು ಅಂದುಕೊಂಡದ್ದೇ ನಿಜವಲ್ಲ. ನಿಮ್ಮ ಕಾಳಜಿ ಇಲ್ಲಿ ಯಾರಿಗೂ ಬೇಡ. ಅವರೆಲ್ಲರಿಗೂ ಬೇಕಾಗಿರುವುದು ನಿಮ್ಮ ಸಂಬಳ, ನಿಮ್ಮ ಹಣ ಅಷ್ಟೇ.. " ಎಂದ ನಂದಿನಿಯ ಮಾತಿಗೆ "ಬರಿ ಇದೇ ಮಾತು ನಿನ್ನದೆಲ್ಲಾ.. ಈ ಮನೆ ಒಡೆದು ಬೇರೆ ಹೋಗಬೇಕು ಅಂತಾ ಹೀಗೆಲ್ಲಾ ಮಾತಾಡ್ತಾ ಇದ್ದೀಯ ಅಷ್ಟೇ.. ನೀನು ನೆನ್ನೆ - ಮೊನ್ನೆ ಬಂದಿರುವವಳು. ನಿನ್ನ ಮಾತನ್ನು ನಾನು ಕೇಳಿ ಅವರ ಮೇಲೆ ಸಂದೇಹ ಪಡುತ್ತೇನಾ ಹೇಳು. ಸುಮ್ಮನೆ ಈ ಚೀಪ್ ಗಿಮಿಕ್ಸ್ ಎಲ್ಲಾ ಬಳಸಬೇಡ. ಅವರು ಯಾವತ್ತಿದ್ದರೂ ನನ್ನ ಅಪ್ಪ ಮತ್ತು ನನ್ನ ಅಣ್ಣ. " ಎಂದನು ನವೀನ್.


"ಆಯ್ತು ರೀ, ಅವರು ನಿಮ್ಮಪ್ಪ ಮತ್ತು ನಿಮ್ಮಣ್ಣ ಅತ್ತಿಗೆ ಎನ್ನುವುದನ್ನು ನಾನು ಅಲ್ಲಗಳೆಯುತ್ತಿಲ್ಲ. ಆದರೆ, ನಿಮ್ಮ ತಂದೆಯ ನಡೆ-ನುಡಿಗಳು ನಾಟಕೀಯ ಅನ್ನುವುದು ನಿಮಗೆ ಯಾಕೆ ಕಾಣುವುದಿಲ್ಲ. ನೀವು ಅಕ್ಕರೆ, ಪ್ರೀತಿ, ಕಾಳಜಿ ತೋರಿಸುತ್ತೀರಿ ಸರಿ. ಆದರೆ, ಅವರಿಗೂ ನಿಮ್ಮ ಮೇಲೆ ಅದೇ ಭಾವನೆ ಇಲ್ಲ ಎನ್ನುವುದನ್ನು ನಾನು ಹೇಳುತ್ತಿರುವುದು. " ಎಂದ ನಂದಿನಿಯ ಮಾತಿಗೆ "ನೀನು ಹೇಳುವುದನ್ನೆಲ್ಲಾ ನಾನು ಕಣ್ಣು ಮುಚ್ಚಿ ನಂಬುವುದಿಲ್ಲ. ಒಂದು ವೇಳೆ ನೀನು ಹೇಳಿದ್ದು ಸತ್ಯ ಎಂದಾದರೆ.. ಅದು ಗೊತ್ತಾದ ದಿನ ನಾನು ಈ ಮನೆಯಲ್ಲಿ ಒಂದು ಕ್ಷಣ ಕೂಡಾ ಇರುವುದಿಲ್ಲ. " ಎಂದವನ ಮಾತಿಗೆ ನಂದಿನಿ ತಲೆ ಅಲ್ಲಾಡಿಸಿದರೂ ಸಹಾ ಅವನಿಗೆ ಸತ್ಯವನ್ನು ಅರ್ಥ ಮಾಡಿಸುವುದು ಅನಿವಾರ್ಯ ಹಾಗೂ ಕಷ್ಟ ಎನ್ನುವುದೇ ಅವಳನ್ನು ಮತ್ತಷ್ಟು ಚಿಂತೆಗೆ ದೂಡಿತ್ತು.


ನವೀನನಿಗೆ ಮದುವೆಯಾದಾಗ 35 ವರ್ಷ. ಗೆಳೆಯನ ಮದುವೆಗೆ ಹೋದಾಗ ಅನಿವಾರ್ಯ ಸ್ಥಿತಿಯಲ್ಲಿ ಬಡವರ ಮನೆಯ ಹುಡುಗಿ ನಂದಿನಿಯನ್ನು ಕೈ ಹಿಡಿದಿದ್ದ ನವೀನ್. ಮನೆಯವರಿಗಾರಿಗೂ ಅವನು ಮದುವೆಯಾದದ್ದೇ ಇಷ್ಟವಿರಲಿಲ್ಲ. ನಂದಿನಿಯನ್ನು ಎಂದಲ್ಲ.. ನವೀನ್ ಮದುವೆಯಾದದ್ದು ಇಷ್ಟವೇ ಇರಲಿಲ್ಲ. ನವೀನ್ ನಿಗೆ ಮದುವೆ ಮಾಡುವ ಯಾವ ಪ್ರಯತ್ನವನ್ನೂ ಮನೆಯವರಾರೂ ಗಂಭೀರವಾಗಿ ಮಾಡಿರಲೇ ಇಲ್ಲ. ಆತನಿಗೆ ಮದುವೆಯಾಗಿ ಅಕಸ್ಮಾತ್ ಆತ ಬೇರೆ ಮನೆ ಮಾಡಿದರೆ ಆ ಮನೆಗೆ ಬರುವ ಮುಕ್ಕಾಲು ಪಾಲು ವರಮಾನ ತಪ್ಪಿ ಹೋಗುತ್ತಿತ್ತಲ್ಲ.. ಅದು ಅವರ ದುರಾಲೋಚನೆ.


ನವೀನ್ ನ ಅಣ್ಣ ಮನೆಗೆ ತರುತ್ತಿದ್ದ ಹಣ ಅವನ ಹಾಗೂ ಅವನ ಹೆಂಡತಿಯ ಖರ್ಚಿಗೇ ಸಾಕಾಗುತ್ತಿರಲಿಲ್ಲ..ಇನ್ನು ಮನೆ ನಡೆಸುವುದಾದರೂ ಎಲ್ಲಿಂದ ? ಇನ್ನು ಆತನ ತಂದೆಗೆ ಜೂಜಿನ ಚಟ. ನವೀನ್ ದುಡಿದ್ದದ್ದೆಲ್ಲವೂ ಎಲ್ಲರ ಖರ್ಚಿಗೇ ಆಗುತ್ತಿತ್ತು. ಇಷ್ಟಾದರೂ ನವೀನ್ ನ ಬೇಕು- ಬೇಡಗಳನ್ನು ನೋಡುವವರು ಯಾರೂ ಇರಲಿಲ್ಲ. ನಂದಿನಿ ಈ ಮನೆಗೆ ಕಾಲಿಟ್ಟ ನಂತರ ನವೀನನ ಬೇಕು-ಬೇಡಗಳನ್ನು ಗಮನಿಸಿಕೊಳ್ಳುತ್ತಾ ಇದ್ದದ್ದು ಉಳಿದವರಿಗೆ ಕಣ್ಣುರಿಯನ್ನು ಸಹಾ ತಂದಿತ್ತು. ಹಾಗಾಗಿ, ಅವಳನ್ನು ಮನೆಯಿಂದ ಓಡಿಸಲು ನವೀನ್ ನಿಗೆ ಇಲ್ಲಸಲ್ಲದ್ದನ್ನು ಹೇಳಿ ಕಿವಿ ತುಂಬಿದ್ದರು. ಆದರೆ, ನವೀನ್ ಅದಾವುದನ್ನೂ ನಂಬಿರಲಿಲ್ಲ. ಅವಳು ಬೇರೆ ಮನೆ ಮಾಡುವ ಆಲೋಚನೆಯಲ್ಲಿ ಇದ್ದಾಳೆ ಎಂದುದ್ದಕ್ಕೂ ನಂದಿನಿ ಅವರ ಕುರಿತು ಹೇಳಿದ್ದಕ್ಕೂ ತಾಳೆಯಾದರೂ ನಂದಿನಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದವನಿಗೆ ಅವಳು ಹೇಳುವ ಮಾತು ನಿಜವಿರಬಹುದೇನೋ ಅನ್ನಿಸಿತ್ತು.


ನಂದಿನಿ ಹೇಳಿದ್ದನ್ನು ಪರೀಕ್ಷೆ ಮಾಡಲು ಇಬ್ಬರೂ ಒಂದು ಉಪಾಯ ಮಾಡಿದ್ದರು. ನವೀನ್ ಕೆಲಸ ಹೋಯಿತೆಂದು ಒಂದು ವಾರ ಮನೆಯಲ್ಲೇ ಕುಳಿತುಬಿಟ್ಟ. ವಾರವಿದ್ದದ್ದು ಹದಿನೈದು ದಿನವಾದಾಗ ಮನೆಯಲ್ಲಿ ಎಲ್ಲರ ಅಸಹನೆ, ಕೋಪ, ಸಿಡಿಮಿಡಿ ಎಲ್ಲವೂ ಹೊರಬರಲಾರಂಭಿಸಿತು. ನವೀನನಿಗೆ ಎಲ್ಲವೂ ಅರ್ಥವಾಗಿತ್ತು. ಎಲ್ಲರಿಗೂ ಬೇಕಾಗಿದ್ದದ್ದು ಅವನ ಹಣ ಅಷ್ಟೇ.. ಅವನಲ್ಲ ಎಂದು.


ನಂದಿನಿಯ ಮುಂದೆ ಸೋಲೊಪ್ಪಿಕೊಂಡ. ನನ್ನ ಅಕ್ಕರೆಯನ್ನು ದೌರ್ಬಲ್ಯ ಎಂದುಕೊಂಡವರಿಗೆ ಒಂದು ಪಾಠ ಕಲಿಸಬೇಕು ಎಂದು ನಿರ್ಧಾರ ಮಾಡಿದರೂ ಕಟು ಮಾತಲ್ಲಿ ಸಂಬಂಧಗಳನ್ನು ದೂರ ಮಾಡಿಕೊಳ್ಳುವ ಮನಸ್ಸಾಗಲಿಲ್ಲ. ಹಾಗಾಗಿ, ತನಗೆ ಟ್ರ್ಯಾನ್ಸ್ಪ್ಯಾರ್ ಆಗಿದೆ ಎಂದು ಹೇಳಿ ನಂದಿನಿಯನ್ನು ಕರೆದುಕೊಂಡು ಮನೆಯಿಂದ ಹೊರನಡೆದ. ಎಲ್ಲಾ ಆಸ್ತಿಯನ್ನು, ಬಾಂಧವ್ಯವನ್ನೂ ಅಲ್ಲಿಗೇ ಬಿಟ್ಟು..


ಅಕ್ಕರೆಯನ್ನು ದೌರ್ಬಲ್ಯವಾಗಿಸಿಕೊಂಡವರಿಗೆ ಈಗ ಕುತ್ತಿಗೆಗೆ ಬಂದಿತ್ತು. ಈಗ ತನ್ನ ದುರ್ಬಲತೆಯನ್ನು ಮೆಟ್ಟಿ ನಿಂತಿರುವ ನವೀನ್ ನಂದಿನಿ ಜೊತೆಗೆ ಸಾಮರಸ್ಯದ ಸಂಸಾರ ನಡೆಸುತ್ತಿದ್ದಾನೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ