ಮಂಗಳವಾರ, ನವೆಂಬರ್ 17, 2026

ಕೇಳು ಜನಮೇಜಯ (ಪುಸ್ತಕ ಯಾನ - 511)


ಪುಸ್ತಕದ ಶೀರ್ಷಿಕೆ : ಕೇಳು ಜನಮೇಜಯ 

ಕೃತಿ ಪ್ರಕಾರ : ನಾಟಕ

ಲೇಖಕರು : ಶ್ರೀರಂಗ

ಪ್ರಕಾಶಕರು : ಮನೋಹರ ಗ್ರಂಥಮಾಲಾ 

ಪುನರ್ ಮುದ್ರಣ : 2026 ಆಗಸ್ಟ್

ಪುಟಗಳು : 72

ಬೆಲೆ : 110 ರೂ. 


"ಶ್ರೀರಂಗರು, ಶಂಬಾ ಜೋಶಿ ಹಾಗೂ ಬೇಂದ್ರೆ ಜಗತ್ತಿಗೆ ಭಾರತದ ಮತ್ತು ಕನ್ನಡ ರಂಗಭೂಮಿಯ ಆಯಾಮಗಳನ್ನು ಪರಿಚಯಿಸಿದ ಮೂರು ರತ್ನಗಳು" ಎಂದೇ ಖ್ಯಾತಿ ಪಡೆದಿದ್ದಾರೆ. ಭಾರತದಲ್ಲಿ ರಂಗ ರೆಪರ್ಟರಿಯ (ಕಾಯಂ ತಂಡದ ಕಲಾವಿದರು, ತಂತ್ರಜ್ಞರೆಲ್ಲರೂ ಸೇರಿ, ಪೂರ್ವಯೋಜಿತ ನಾಟಕಗಳ ಸರಣಿಯನ್ನ ನಿಯಮಿತವಾಗಿ ಮತ್ತು ಸರದಿಯಂತೆ ಪ್ರದರ್ಶಿಸುವ ವೃತ್ತಿಪರ ರಂಗತಂಡ) ಮೂಲ ಕಲ್ಪನೆ ಹುಟ್ಟು ಹಾಕಿದ ಶ್ರೀರಂಗರು ರಂಗಭೂಮಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. 

ಆದ್ಯರಂಗಾಚಾರ್ಯರು ಶ್ರೀರಂಗ ಎಂಬ ಕಾವ್ಯನಾಮದಿಂದ 1959ರಲ್ಲಿ ಕತ್ತಲೆ-ಬೆಳಕು ನಾಟಕ ಬರೆದವರು, 1960 ರಲ್ಲಿ ಬರೆದ ಎರಡನೇ ನವ್ಯ ನಾಟಕ ಕೇಳು ಜನಮೇಜಯ. 


ಶ್ರೀರಂಗರ ಸಮಗ್ರ ನಾಟಕಗಳ ಕೃತಿ 'ಕಾಮದಹನ'ದ ಮೇಲೆ ಮುದ್ರಿತವಾಗಿರುವ "ತಲೆ ತುಂಬಾ ವಿಚಾರ ಹೊಟ್ಟೆತುಂಬಾ ನಗು" ಎಂಬ ಸಾಲಿನಲ್ಲಿ ಹಿರಿದರ್ಥವಿದೆ. 

ಈ ನಾಟಕ ವ್ಯಂಗ್ಯ, ವಿಡಂಬನೆಗಳ ಜೊತೆಗೆ ಕಟು ವಾಸ್ತವವನ್ನು ರಾಚುವ ನಾಟಕ.


ಕೇಂದ್ರ ಸರ್ಕಾರದ ನೌಕರನಾಗಿ ತಾನು ನಿರ್ವಹಿಸಬೇಕಾಗಿದ್ದ ಕೆಲ ದಂಧೆಗಳ ಕುರಿತು ರೋಸಿ ಹೋಗಿ 'ಕೇಳು ಜನಮೇಜಯ' ನಾಟಕ ಬರೆದರು ಎಂಬ ಹಿನ್ನೆಲೆಯಿದೆ. ರೇಡಿಯೋ ನಾಟಕವಾಗಿ ಪ್ರದರ್ಶಿತವಾಗಿರುವ ಈ ಮೂರಂಕಿನ ನಾಟಕ ಬೇರೆ ಭಾಷೆಗಳಿಗೂ ಅನುವಾದಿತವಾಗಿದೆ. ಈ ನಾಟಕಕ್ಕೆ ಕೀರ್ತಿನಾಥ ಕುರ್ತಕೋಟಿಯವರ ಬೆನ್ನುಡಿ ಇದೆ. 


ಈ ನಾಟಕದ ಕುರಿತು ಹೇಳುವುದು ಸುಲಭವಾಗಿಲ್ಲ. ಅರ್ಥೈಸಿಕೊಳ್ಳುವುದು ಅಷ್ಟು ಸರಾಗವೂ ಇಲ್ಲ.

"ಶ್ರೀರಂಗರ ಕೇಳು ಜನಮೇಜಯ ಹೇಳುವುದು ಕಥೆಯನ್ನಲ್ಲ. ಕಥೆಯನ್ನು ಬಿಟ್ಟು ನಾಟಕವನ್ನು ಉಳಿಸಿಕೊಂಡಿತು" ಎನ್ನುತ್ತಾರೆ ಕುರ್ತಕೋಟಿಯವರು. 


ಮೂರಂಕದ ನಾಟಕದಲ್ಲಿ ಆರು ಪಾತ್ರಧಾರಿಗಳಿದ್ದಾರೆ. ಮುಂದಾಳು ಹಾಗೂ ಸೂತ್ರಧಾರಿಯನ್ನು ಹೊರತುಪಡಿಸಿ ಮುದುಕ, ಯುವಕ, ಯುವತಿ, ಸಾಮಾನ್ಯಪ್ಪ ಎಂಬ ಪಾತ್ರಧಾರಿಗಳಿಗೆ ಬೇರೆ ಹೆಸರಿಲ್ಲ. 


ನಾಟಕ ಆರಂಭವಾಗುವುದು ಕಣ್ಣು ಮಿಟುಕಿಸದೆ ಗೊಂಬೆಗಳಂತೆ ನಿಂತ ನಾಲ್ಕು ಪಾತ್ರಗಳ ಹಿನ್ನೆಲೆಯಲ್ಲಿ. ಈ ನಿರ್ಜೀವ ಪಾತ್ರಗಳು ಜೀವತಳೆದು ಮನುಷ್ಯರನ್ನೇ ಗೊಂಬೆಗಳನ್ನಾಗಿ ಮಾಡಿ ಆಟವಾಡುತ್ತವೆ. 


ನಿರ್ಜೀವ ಬೊಂಬೆಗಳಲ್ಲಿ ಜೀವವಿಲ್ಲ. ಆದರೆ, ಜೀವ ಇರುವುದು ಅವುಗಳ ಎದುರಿಗಿರುವವರಲ್ಲಿ ಎನ್ನುತ್ತಾ ಪ್ರೇಕ್ಷಕರನ್ನು ಅದರೊಳಗೆ ಪರಕಾಯ ಪ್ರವೇಶ ಮಾಡಿಸಿ ನಾಟಕವನ್ನು ಶುರು ಮಾಡಿಸುತ್ತಾರೆ. ಆಗ ಬರುವುದೇ ಮುಂದಾಳು. 


ಮುಂದಾಳುವಿನ ಆಸೆ ಎಂದರೆ ಮನುಷ್ಯ ಮಂಗಳ ಲೋಕಕ್ಕೆ, ಚಂದ್ರಲೋಕಕ್ಕೆ ಅಗತ್ಯವಿದ್ದರೆ ಸೂರ್ಯ ಲೋಕಕ್ಕೆ ಮುಟ್ಟುವಷ್ಟು ಎತ್ತರಕ್ಕೆ ಜೀವದ ಮಟ್ಟವನ್ನು ಎತ್ತರಿಸಬೇಕೆಂದು. ಭೂಲೋಕದ ಗೊಡವೆಯೇ ಬೇಡ, ಸತ್ತು ಹುಟ್ಟುವುದು ಬೇಡ. ಹುಟ್ಟಿದರೆ ಸಾಯಲೇಬಾರದು. ಹಿಂದಿನ ಯುಗಗಳ ಅನುಭವವನ್ನು, ಮುಂದಿನ ಯುಗಗಳ ಉತ್ಸಾಹವನ್ನು ಹೊಂದಿಸಿಕೊಂಡ ಮನುಷ್ಯ ಮೇಲೇರಬೇಕು ಎನ್ನುವ ಮಾತು ವಾಸ್ತವದಲ್ಲಿ ಒಪ್ಪುವುದು ಬಹಳ ಕಷ್ಟ. ಅದು ಅಸಾಧ್ಯವೂ..

ಇಲ್ಲಿನ ನಾಲ್ಕು ಪಾತ್ರಧಾರಿಗಳು ನಾಲ್ಕು ರೂಪುಗಳನ್ನು ಬಿಂಬಿಸುತ್ತವೆ. ಅನುಭವ, ಉತ್ಸಾಹ, ಇಚ್ಛಾಶಕ್ತಿ ಹಾಗೂ ಕ್ರಿಯಾಶಕ್ತಿಯನ್ನು. 


ನಾಲ್ಕು ಮುಖ್ಯ ಪಾತ್ರಗಳು ಒಂದೊಂದಾಗಿ ಜೀವ ತಳೆದು ತಮ್ಮ ಮನದಾಳದ ಮಾತುಗಳನ್ನು ತೆರೆದಿಡುತ್ತಾರೆ.


ಮುದುಕ : ತಾಯಿಯ ಮಡಿಲಲ್ಲಿದ್ದಾಗ ದುಡಿಯದೇ ತಿನ್ನುವ ಅನುಭವವನ್ನು, ನಂತರ ಬೆಳೆಯುವುದಕ್ಕಾಗಿಯೇ ತಿನ್ನುವ ಅನುಭವವನ್ನು, ಸಂಸಾರದಲ್ಲಿ ದುಡಿದರೂ ತಿನ್ನಲಾರದೆ ಇರುವ ಅನುಭವವೂ ನನಗಿದೆ ಎನ್ನುತ್ತಾ ಮುಪ್ಪಿನಲ್ಲಿ ದುಡಿಯಲಾಗದೆ, ಇನ್ನೊಬ್ಬರನ್ನು ದುಡಿಸಿ ತಿಂದಿದ್ದೇನೆ, ಕಸಿದುಕೊಂಡು ತಿಂದಿದ್ದೇನೆ. ಬದುಕುವುದಕ್ಕಾಗಿಯೇ ವೈವಿಧ್ಯಮಯವಾದ ರೂಢಿಗಳನ್ನು ಹೊಂದಿದ ಜೀವ ತಾನೆಂದೂ.. ತಿನ್ನದೆಯೇ ಬೆಳೆಯುವ ಅನುಭವವನ್ನೂ ಪಡೆದಿದ್ದೇನೆ ಎಂದು ಅನುಭವವನ್ನೇ ಮುಖ್ಯವಾಗಿಸಿ ತಮ್ಮ ಹಿರಿಮೆಯನ್ನು ಹೇಳಿಕೊಳ್ಳುವ ಪಾತ್ರ. 


ಯುವಕ : ಉತ್ಸಾಹದ ಪ್ರತಿರೂಪ ಈತ. ಉತ್ಸಾಹದ ಫಲವೇ  ಅನುಭವ. ಬೇರೆ ಅನುಭವ ಇನ್ನೇನಿದೆ ಎನ್ನುತ್ತಾ ತನ್ನ ಜೀವವನ್ನು ಉಳಿಸಿಕೊಂಡು ಮತ್ತೊಂದು ಜೀವವನ್ನು ಅಸ್ತಿತ್ವಕ್ಕೆ ತರುವ ಶಕ್ತಿ ಇರುವ ತನ್ನ ಉತ್ಸಾಹದ ಕುರಿತು ಮಾತನಾಡುತ್ತಾನೆ. ಮನುಷ್ಯ ಅನುಭವದಿಂದ ಕಲಿಯುವುದು ಸುಳ್ಳು. ಕೆಲವೊಮ್ಮೆ ಅನುಭವ ಹೇಳಿದ್ದನ್ನೇ ಹೇಳುತ್ತದೆ. ಹಾಗಾಗಿ ಅದು ಮೂರ್ಖತನವನ್ನು ತೋರುತ್ತದೆ. ಉತ್ಸಾಹವಿದ್ದಲ್ಲಿ ಅನುಭವವಿಲ್ಲದಿದ್ದರೂ ಮುಂದಿನ ಹಾದಿ ಸವೆಸಬಹುದು ಎಂದು ಉತ್ಸಾಹದ ಹಿರಿಮೆಯನ್ನೇ ಹೇಳಿಕೊಳ್ಳುವ ಪಾತ್ರವಿದು. 


ಯುವತಿ : ಇಚ್ಛಾಶಕ್ತಿಯನ್ನು ಪ್ರತಿನಿಧಿಸುವ ಪ್ರತಿನಿಧಿ ಈಕೆ. ಇಚ್ಛಾಶಕ್ತಿಯೇ ಇಲ್ಲದೆ ಕೇವಲ ಉತ್ಸಾಹದಿಂದ ಏನು ಸಿಗುತ್ತದೆ..? ಹರಿವ ನದಿಗೆ ಉತ್ಸಾಹವಿರುತ್ತದೆ. ಆದರೆ, ಸುಮ್ಮನೆ ನೀರು ಹರಿದು ಹೋದರೆ ಅದು ವ್ಯರ್ಥ. ಇಚ್ಛಾಶಕ್ತಿಯಿಂದ ನದಿಗೆ ಒಡ್ಡು ಕಟ್ಟಿ ನೆಲವನ್ನು ಫಲವತ್ತಾಗಿಸುವ ಪ್ರಯತ್ನವಿರಬೇಕು. ಈ ಕಾರ್ಯಸಿದ್ಧಿ ಮಾಡಿದಾಗ ಭೂಮಿ ಫಲವತ್ತಾಗುತ್ತದೆ. ಇದಕ್ಕೆ ಕಾರಣ ಹೆಣ್ಣು. ಹರಿವ ನೀರಿನಂತಹ ಗಂಡಿನ ಹೊಡೆತಗಳನ್ನು ಸಹಿಸಿ, ತಡೆಹಿಡಿದು ಮತ್ತೊಂದು ಹೊಸ ಜೀವದ ಸೃಷ್ಟಿಗೆ ಕಾರಣವಾಗುವ ಹೆಣ್ಣಿನ ಹಿರಿಮೆಯನ್ನು ಹೇಳುತ್ತಾ ಬದುಕಿನಲ್ಲಿ ಇಚ್ಛಾಶಕ್ತಿ ಹಾಗೂ ಅದರ ಪ್ರತಿರೂಪವೇ ಆದಂತಹ ಹೆಣ್ಣಿನ ಅವಶ್ಯಕತೆ ಪ್ರಗತಿಪಥದಲ್ಲಿ ಎಷ್ಟು ಮುಖ್ಯವೆಂದು ಸಾರುತ್ತಾಳೆ.


ಸಾಮಾನ್ಯಪ್ಪ : ಅನುಭವವಿಲ್ಲದಿದ್ದರೂ ಆಗತಾನೆ ಹುಟ್ಟಿದ ಮಗು ತಾಯಿಯ ಎದೆಹಾಲಿಗೆ ಹವಣಿಸುವ ಹಾಗೂ ಅನುಭವವಿಲ್ಲದೆಯೂ.. ಹುಟ್ಟಿದ ಕೂಸಿಗೆ ಹಾಲುಣಿಸುವ ತಾಯಿ ಕರ್ತವ್ಯವನ್ನಷ್ಟೇ ಮಾಡುತ್ತಾರೆ. ಇಲ್ಲಿ ಅನುಭವವಿಲ್ಲ, ವಿಚಾರಶಕ್ತಿಯೂ ಇಲ್ಲ, ಮುಂದೇನಾಗಬೇಕು ಎಂಬ ಆಲೋಚನೆಯೂ ಅವರಲ್ಲಿಲ್ಲ. ಆ ಕ್ಷಣದ ಕ್ರಿಯೆಯಷ್ಟೇ ಮುಖ್ಯ. ಕತ್ತಲನ್ನು ಹೊಡೆದೋಡಿಸಲು ಬೆಳಕು ಹಚ್ಚಿದರಾಯಿತು ಎನ್ನುತ್ತಾ ಆ ಕ್ಷಣದ ಕ್ರಿಯೆ ಮುಂದಿನ ಭವಿಷ್ಯದ ಅರಿವಿಲ್ಲದೆಯೂ ಮಾಡುವ ಪರಿಣಾಮವನ್ನು ತೋರುತ್ತಾರೆ.


ಹಾಗಾದರೆ.. ಮುದುಕನ ಅನುಭವ, ಹುಡುಗನ ಉತ್ಸಾಹ, ಹುಡುಗಿಯ ಇಚ್ಛಾಶಕ್ತಿ ಹಾಗೂ ಆಕರ್ಷಣೆ ಇವೆಲ್ಲವೂ ತಪ್ಪೇ..?! ಸಾಮಾನ್ಯಪ್ಪನ ಮಾತೇ ಸರಿಯೇ..!?

ಇಲ್ಲಿ ಸಾಮಾನ್ಯಪ್ಪನೂ ಸರಿಯಲ್ಲ..


ಯಾವಾಗಲೂ ನೋಟ ನಾವು ನೋಡುವುದನ್ನು ಮಾತ್ರವೇ ಅವಲಂಬಿಸಿರುತ್ತದೆ. ಅಂತರಂಗ ಹಾಗೂ ಬಹಿರಂಗ ಎರಡಕ್ಕೂ ದೊಡ್ಡ ವ್ಯತ್ಯಾಸವಿರುತ್ತದೆ. ಒಬ್ಬರಿಗೆ ಸರಿ ಕಂಡದ್ದು ಮತ್ತೊಬ್ಬರಿಗೆ ತಪ್ಪು ಎನ್ನಿಸಬಹುದು. ಮೊದಲನೇ ಅಂಕದಲ್ಲಿ ವ್ಯಕ್ತಿಗಳ ಅಂತರಂಗವನ್ನು ತೋರಿಸಿದ್ದಾರೆ. ಮುಂದೆ ಇದೇ ಅಂತರಂಗದ ಬಿಂಬ ಆ ವ್ಯಕ್ತಿಗಳ ನಡೆಗಳಲ್ಲಿ ಇರುತ್ತದೆಯೇ ಅಥವಾ ಬದಲಾಗುತ್ತದೆಯೇ ಎಂಬ ಚಿತ್ರಣವನ್ನು ತೋರುತ್ತಾರೆ. 


ಎರಡನೇ ಅಂಕದಲ್ಲಿ ಆಫೀಸ್ ನಲ್ಲಿ ಮೇಲಧಿಕಾರಿಯಾಗಿ ಕೆಲಸ ಮಾಡುತ್ತಿರುವ ಮುದುಕ. ಸಾದಾ ಮೇಜಿನಲ್ಲಿ ಕೆಲಸ ಮಾಡುತ್ತಿರುವ ಯುವಕ, ಟೈಪರೇಟರ್ ಆಗಿರುವ ಯುವತಿ, ಆಫೀಸ್ ಜವಾನನಾಗಿರುವ ಸಾಮಾನ್ಯಪ್ಪ ಕಾಣಸಿಗುತ್ತಾರೆ. 


ಸಮಾಜಕ್ಕೆ ಅನುಭವ ಬೇಕು. ಅದೇ ಅನುಭವ ಹಳೆಯದಾದಾಗ ಯುವಕರು ಬೇಕು. ಅರ್ಧದಷ್ಟು ಯುವತಿಯರೂ ಬೇಕು. ಸ್ವತಂತ್ರವಾಗಿ ಬುದ್ಧಿ ಬೆಳೆದರೆ ಅನುಭವ ಬದಲಾಯಿಸಬಹುದು ಎನ್ನುವ ಆಲೋಚನೆಯಲ್ಲಿ ಸಾಮಾನ್ಯಪ್ಪ ಬಂದ. 


ನವಸಮಾಜ ನಿರ್ಮಾಣ ಆಫೀಸಿನಲ್ಲಿ ಪೆನ್ಶನ್ ತೆಗೆದುಕೊಂಡು ಅನುಭವಿಯಾಗಿದ್ದ ಮುದುಕ ಮೇಲಧಿಕಾರಿಯಾಗಿ, ಆತನ ತಾಳಕ್ಕೆ ತಕ್ಕ ಹಾಗೆ ಕುಣಿಯಬೇಕಾದ ಅನಿವಾರ್ಯತೆ ಇರುವ ಯುವಕ, ಆಕರ್ಷಣೆಯೇ ಮುಖ್ಯವೆಂಬಂತೆ ಭಾಸವಾಗುವ ಯುವತಿ.. ಬುದ್ಧಿವಂತಿಕೆಯ ಸಾಮಾನ್ಯಪ್ಪ ಕಚೇರಿಗಳಲ್ಲಿ ಕೆಲಸ ನಡೆಯುವ ರೀತಿಯನ್ನೂ.. ಭ್ರಷ್ಟಾಚಾರವನ್ನು ಹಾಗೂ ಸಮಾಜದಲ್ಲಿ ಹೆಣ್ಣು-ಗಂಡುಗಳು ಬದುಕುವ ರೀತಿಯನ್ನು ಹಾಗೂ ಬದಲಾಗುತ್ತಿರುವ ಅವಶ್ಯಕತೆಗಳಿಗೆ ಕನ್ನಡಿ ಹಿಡಿದಂತೆ ತೋರುವ ಹಲವಾರು ಸನ್ನಿವೇಶಗಳು ಮಾತುಕತೆಗಳೊಂದಿಗೆ ಎರಡನೆಯ ಅಂಕ ಮುಕ್ತಾಯವಾಗುತ್ತದೆ.


ಮೂರನೇ ಅಂಕದಲ್ಲಿ ಬುದ್ಧಿವಂತ ಸಾಮಾನ್ಯಪ್ಪ ಎಲ್ಲರಿಗೂ ಪಾಠ ಕಲಿಸುವ ಪರಿ, ಮುದುಕ ಹಾಗೂ ಯುವಕ ಬಯಲಲ್ಲಿ ದುಡಿಯುವುದು ಹಾಗೂ ವೇಷವು ದರ್ಜೆಯಲ್ಲಿ ಇಳಿದಿರುವುದನ್ನು ಕಾಣಬಹುದು. ಯುವತಿಯ ಪರಿಸ್ಥಿತಿ ಏನಿದೆ ಓದಿ ನೋಡಿ. 

ತೆರೆ ಇಳಿದು ನಾಟಕ ಮುಕ್ತಾಯವಾದರೂ ಮುಗಿಯದಂತಹ ನಾಟಕವಿದು. 


ಎಲ್ಲವನ್ನೂ ನೋಡಿದ ಮುಂದಾಳು ಸೂತ್ರದಾರನಿಗೆ 

"ಜೀವಂತನಾದ ನಾನು ಸತ್ತಿರುವೆ. ಸತ್ತ ಅವರು ಜೀವಂತ ಎಂದು ಹೇಳುವೆಯಾ..? 

ನಾನು ಜೀವಂತ, ಸತ್ತಿಲ್ಲ."

ಎಂದಾಗ ಸೂತ್ರಧಾರ "ಸತ್ತವರ ರಾಜ್ಯದಲ್ಲಿ ಇದ್ದವರೇ ಭೂತಗಳು" ಎಂದು ಸಾಗುವ ಸಂಭಾಷಣೆಗಳು ಮಾರ್ಮಿಕವಾಗಿ ತೋರುತ್ತವೆ. 


ಕೃತಿಯ ಶೀರ್ಷಿಕೆಗೂ ನಾಟಕಕ್ಕೂ ಸಂಬಂಧವೇನು ಎಂದು ಯೋಚಿಸುತ್ತಿದ್ದೀರಾ..? ಇದು ಖಂಡಿತವಾಗಿಯೂ ಪೌರಾಣಿಕ ಕಾದಂಬರಿಯಲ್ಲ. ಆದರೆ, ಕೇಳು ಜನಮೇಜಯ ಎನ್ನುವ ಶೀರ್ಷಿಕೆ ಈ ನಾಟಕಕ್ಕೆ ಎಷ್ಟು ಸಮಂಜಸವಾಗಿದೆ ಎಂಬುದು ನಾಟಕದ ಅಂತ್ಯದಲ್ಲಿ ಅರಿವಾಗುತ್ತದೆ. 


"ಆಟ ಮುಗಿದು ಹೋದ ಮೇಲೆ ಸತ್ತು ಹೋಗಬೇಕಾದ ಪಾತ್ರಗಳಿವು. ಆದರೆ, ವ್ಯಂಗ್ಯವೆಂದರೆ ಆಟ ಮುಗಿದ ಮೇಲೂ ಇವು ಉಳಿದುಬಿಡುತ್ತವೆ.

ಶ್ರೀರಂಗರ ರಂಗಭೂಮಿಯ ಮೇಲೆ ಆದದ್ದು ಅದೇ. ಆಟ ನಡೆಯಬೇಕಾದರೆ ಗೊಂಬೆಗಳನ್ನು ಹೊರಗೆ ತರಬೇಕು. ಸಿದ್ಧ ಮಾದರಿಗಳನ್ನು ನಾಶಪಡಿಸಿದ ತತ್ವಗಳೇ ಈಗ ಸಿದ್ಧ ಮಾದರಿಗಳಾದವು" ಎನ್ನುವ ಕುರ್ತಕೋಟಿಯವರ ಮಾತುಗಳು ಶ್ರೀರಂಗರ ನಾಟಕದ ಶೈಲಿಯನ್ನು ಎತ್ತಿ ತೋರುತ್ತದೆ.


ಒಂದೇ ಓದಿಗೆ ಓದಿ ಅರಗಿಸಿಕೊಳ್ಳಲು ಕಷ್ಟವಾಗುವ ನಾಟಕ ಕೃತಿ ಇದಾದರೂ ಮರುಓದಿನಲ್ಲಿ ಬೇರೆಬೇರೆ ಹೊಳವುಗಳನ್ನು ತೋರುವ ಕೃತಿಯೂ ಹೌದು. ಅಂತರಂಗ ಹಾಗೂ ಬಹಿರಂಗಗಳ ವ್ಯತ್ಯಾಸದ ಜೊತೆಗೆ ಕಾಲಪುರುಷನ ಕೆಸರಿನ ಹೆಜ್ಜೆಗಳನ್ನು, ನಿರ್ಜೀವವಾಗಿದ್ದ ಆಲೋಚನೆಗೆ ಜೀವ ತುಂಬುವ ತತ್ವಗಳನ್ನು, ನಿರರ್ಗಳ ಸಂಭಾಷಣೆಯ ಮೂಲಕ ಸಾಕಷ್ಟು ಆಲೋಚನೆಗೆ ಹಚ್ಚುವ ವಿಚಾರಗಳನ್ನು ಕಟ್ಟಿಕೊಡುವ ನಾಟಕವಿದು. ಓದು ಸರಳವಾದರೂ.. ಸಂಕೀರ್ಣ ಆಲೋಚನೆಗೆ ದೂಡಿದ ವಿಭಿನ್ನ ಓದು ಇದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ