ಭಾನುವಾರ, ಮೇ 13, 2018

ಅಮ್ಮ ಎಂಬ ಮಾಯಾವಿ


ಕಿನ್ನರ ಲೋಕದಿಂದ ಇಳಿದು ಬರುವ ಅಪ್ಸರೆ ತನ್ನ ಮಂತ್ರದಂಡದಿಂದ ಮಾಡುವ ಮಾಯೆಗೆ ಆಶ್ಚರ್ಯಪಟ್ಟು ಒಮ್ಮೆ ಅವಳನ್ನು ನೋಡಬೇಕು ಅನ್ನಿಸುವ ನಮಗೆ,ನಮ್ಮ ಕಣ್ಣಮುಂದೆಯೇ ಇರುವ ಮಾಯಾವಿ ಯಾಕೋ ಅದೃಶ್ಯಳಾಗಿಯೇ ಉಳಿದು ಬಿಡುತ್ತಾಳೆ. ಯಾವುದೋ ಮಂತ್ರ ಹೇಳಿ,ಕಣ್ಕಟ್ಟು ವಿದ್ಯೆ ಪ್ರದರ್ಶಿಸಿ ಮಾಯಾ-ಮಂತ್ರ ಮಾಡೋ ಮಾಯಾವಿ ಇವಳಲ್ಲ.ಆದರೆ ನಮ್ಮಂತೆಯೇ ಎರಡೇ ಕೈ, ಎರಡೇ ಕಾಲು ಇದ್ದರೂ ನಮಗಿಂತ ಹೆಚ್ಚು ವೇಗವಾಗಿ ಕೆಲಸ ಮಾಡಿ, ಎಲ್ಲವನ್ನೂ ನಿಭಾಯಿಸೋ ಅದ್ಭುತ ಶಕ್ತಿ.

ಆ ಕಡೆ ಅಡುಗೆ ಮಾಡ್ತಾ, ಈ ಕಡೆ ಮಕ್ಕಳನ್ನೂ ಸಂಭಾಳಿಸುತ್ತಾ, ವಾಶಿಂಗ್ ಮಷೀನ್ ಗೆ ಬಟ್ಟೆ ಹಾಕ್ತಾ, ಒಂದು ಕಿವಿಯನ್ನು ಮೊಬೈಲ್ ಗೆ ಕೊಟ್ಟು, ಮತ್ತೊಂದರಲ್ಲಿ ಮನೆಯ ಎಲ್ಲರ ಬೇಕು-ಬೇಡಗಳಿಗೆ ಓಗೊಡುತ್ತಾ ನಾಳೆಗೂ ಸಿದ್ದತೆ ಮಾಡಿಕೊಳ್ಳುವ ಸರ್ವಾಂತರ್ಯಾಮಿ ಅಮ್ಮ.

ತಲೆನೋವು ಅಂದಾಗ ಒಂದು ಲೋಟ ಸ್ಟ್ರಾಂಗ್ ಕಾಫಿ ಮಾಡಿಕೊಟ್ಟು ತಲೆನೋವು ಮಾಯಮಾಡೋ ಯಕ್ಷಿಣಿ, ಮಕ್ಕಳಿಗೆ ಸ್ವಲ್ಪ ಹುಷಾರಿಲ್ಲದೇ ಇದ್ದರೂ, ಎಷ್ಟೇ ದೂರದಲ್ಲಿದ್ದರೂ ಧ್ವನಿ ಕೇಳಿಯೇ ಗುರುತಿಸಿ ಕಾಳಜಿ ಮಾಡುವ ಮಮತಾಮಯಿ. ಮನಸ್ಸಿನ ಎಲ್ಲಾ ಬೇಜಾರುಗಳನ್ನೂ ತನ್ನ ನಿಷ್ಕಲ್ಮಶ ನಗು ಎನ್ನುವ ಮಾಯಾದಂಡದಿಂದ ಮಾಯ ಮಾಡಿಬಿಡುವ ಕಿನ್ನರಿ.ಯಾವುದಾದರೂ ಕಾರ್ಯಕ್ರಮಗಳಿಗೋ, ಸಮಾರಂಭಗಳಿಗೋ ಹೊರಟಾಗ ಹೇಗೆ ಕಾಣಿಸ್ತಾ ಇದ್ದೀವಿ ಅಂತಾ ಮೊದಲು ಕಾಂಪ್ಲಿಮೆಂಟ್ ಕೊಡೋ ಗೆಳತಿ. ಮಕ್ಕಳನ್ನು ದೂರಕ್ಕೆ ಕಳುಹಿಸುವ ಸಂದರ್ಭದಲ್ಲಿ ಮುಖದ ಮೇಲೆ ಬಲವಂತದ ನಗು ಇಟ್ಟುಕೊಂಡು,ಮನದ ತುಂಬಾ ನೋವು, ಕಣ್ಣ ತುಂಬಾ ನೀರು ತುಂಬಿಕೊಳ್ಳೋ ಅಳುಬುರುಕಿ.

ಅಮ್ಮನ ರೂಪಗಳೂ ಹಲವು. ಅದಕ್ಕೇ ಹೇಳಿದ್ದು ನಾನು ಅಮ್ಮ ಮಾಯಾವಿ ಅಂತಾ.ಸ್ಕೂಲಿಗೆ ಮೊದಲ ದಿನ ಅಳ್ತಾ,ಅಳ್ತಾ ಹೋಗಿ ಹಠ ಮಾಡಿಕೊಂಡು ನಿಂತಾಗ ಕೈ ಹಿಡಿದುಕೊಂಡು ಕರೆದುಕೊಂಡು ಹೋಗುವ ಕೈಯ್ಯ ಹಿಡಿತದಲ್ಲಿ ಅಮ್ಮನ ಧೈರ್ಯ ಇರುತ್ತದೆ. ಅಳು ನಿಲ್ಲಿಸದೇ ಇದ್ದಾಗ ಗದರದೇ ರಮಿಸಿ, ಚಾಕೋಲೇಟ್ ಕೊಟ್ಟು ಶಾಲೆ ಬಗ್ಗೆ ಆಸಕ್ತಿ ಮೂಡಿಸೋ ಶಿಕ್ಷಕಿಯಲ್ಲಿಅಮ್ಮ ಕಾಣ್ತಾಳೆ. ಕ್ಲಾಸ್ ಅಲ್ಲಿ ಪಕ್ಕ ಕುಳಿತುಕೊಂಡು ಧೈರ್ಯ ತುಂಬೋ, ಊಟ ಮಾಡುವಾಗ ಜೊತೆಯಲ್ಲಿ ಹಂಚಿ ತಿನ್ನೋ ಗೆಳತಿಯಲ್ಲಿ ಅಮ್ಮ ಇರ್ತಾಳೆ.

ಎಷ್ಟೇ ಕೀಟಲೆ ಮಾಡಿದರೂ ದೂರದೇ, ಅವಳಿಗೆ ಕೊಟ್ಟಿದ್ದರಲ್ಲೇ ಒಂದು ಪಾಲನ್ನು ಮುಚ್ಚಿಟ್ಟು ಕೊಡುವ ಅಕ್ಕನಲ್ಲಿ ಅಮ್ಮನ ಪ್ರೀತಿ ಇರುತ್ತೆ.ಎಷ್ಟೇ ಜಗಳ ಮಾಡಿದರೂ,ಬೈದು-ಹೊಡೆದಾಡಿದರೂ ಮತ್ತೆ-ಮತ್ತೆ ಹಿಂದೆ-ಹಿಂದೆ ಬಂದು ಮಾತಾಡಿಸೋ ಮುಗ್ಧತೆಯಲ್ಲಿ ಅಮ್ಮ ಇರುತ್ತಾಳೆ.

ಆಟ ಆಡುವಾಗ ಬಿದ್ದು ಅಳ್ತಾ ಇರುವಾಗ,ಓಡಿಬಂದು ಎತ್ತಿ "ಏಟಾಯ್ತಾ" ಅಂತಾ ಕಕ್ಕುಲಾತಿಯಿಂದ ವಿಚಾರಿಸಿ, "ನೋಡಿಕೊಂಡು ಆಟ ಆಡಬಾರದಾ?" ಎಂದು ಅಕ್ಕರೆಯಿಂದ ಬಯ್ಯುವ ಹಿತೈಷಿಯ ಬೈಗುಳದಲ್ಲಿ ಅಮ್ಮ ಧ್ವನಿಸುತ್ತಾಳೆ.

"ಹುಷಾರು","ಮನೆ ತಲುಪಿದ್ಯಾ?","ಮೊದಲು ಊಟ ಮಾಡು, ಆಮೇಲೆ ಕೆಲಸ", "ನೀನು ಮೊದಲು ತಿನ್ನು", "ಖುಷಿ ಆಯ್ತಾ?", "ಜಾಸ್ತಿ ನಿದ್ದೆಗೆಡಬೇಡ", "ಚೆನ್ನಾಗಿ ಓದ್ಕೋ", "ನಿಂಗಿಷ್ಟ ಅಂತಾ ತಂದೆ", "ನಿನಗೆ ಇಷ್ಟ ಆಗುತ್ತೆ ಅಂತಾ ಗೊತ್ತಿತ್ತು, ಅದಕ್ಕೇ ಆರಿಸಿದೆ" ಇನ್ನೂ ಹೀಗೇ ಹಲವಾರು ಇಷ್ಟ-ಕಷ್ಟಗಳನ್ನು ಅರಿತು ಕಾಳಜಿ ಮಾಡೋ ಪ್ರತಿಯೊಬ್ಬರಲ್ಲೂ ಅಮ್ಮನ ಛಾಯೆ ಇರುತ್ತೆ.

ಪ್ರೀತಿಯಲ್ಲಿ ಸೋತು ತಲೆ ಮೇಲೆ ಕೈಯಿಟ್ಟುಕೊಂಡು ಕೂತಿದ್ದಾಗ "ಪ್ರೀತಿ ಅಂದ್ರೆ ಅದಲ್ಲ, ನಿಜವಾದ ಪ್ರೀತಿ ಅಂದ್ರೆ ಅಮ್ಮನ ಪ್ರೀತಿ" ಅಂತಾ ತಿಳಿ ಹೇಳಿ ತಿದ್ದುವ ಗೆಳತಿ ಥೇಟ್ ಅಮ್ಮನಂತೇ ಕಾಣಿಸ್ತಾಳೆ. "ನೀನು ಹೀಗೇ ಇದ್ರೆ ಮುಗೀತು ಕಥೆ, ನಿನಗೆ ಹಠ-ಛಲ ಇದ್ದರೆ ಆಡಿಕೊಳ್ಳೂವವರ ಮುಂದೆ ಗೆದ್ದು ತೋರಿಸು" ಅಂತಾ ಛಾಲೆಂಜ್ ಮಾಡಿ, ಬೈಯ್ಯುತ್ತಾ ಬೈಯ್ಯುತ್ತಲೇ ಆತ್ಮಸ್ಥೈರ್ಯ ತುಂಬುವ ಜೊತೆಗಾತಿಯಲ್ಲಿ ಅಮ್ಮ ಕಾಣಸಿಕ್ತಾಳೆ. ಬೈದು ಬುದ್ದಿ ಹೇಳಿ ಸರಿದಾರಿಯಲ್ಲಿ ನಡೆಸುವ ಗೆಳತಿಯ ನಿಸ್ವಾರ್ಥತೆಯಲ್ಲಿ ಅಮ್ಮನ ಕಾಳಜಿ ತುಂಬಿರುತ್ತೆ.

ಸ್ನೇಹಿತರ ಅಮ್ಮಂದಿರ ಕೈರುಚಿಯಲ್ಲಿ ಅಮ್ಮ ನೆನಪಾಗ್ತಾಳೆ. ಭೇಧ-ಭಾವ ತೋರಿಸದೆ ತನ್ನ ಮಕ್ಕಳಂತೆಯೇ ನೋಡಿಕೊಳ್ಳುವ ಚಿಕ್ಕಮ್ಮ-ದೊಡ್ಡಮ್ಮಂದಿರು ಅಮ್ಮನ ಪ್ರತಿರೂಪವೇ ಸರಿ. ಅಷ್ಟೇ ಯಾಕೆ, ಮುದ್ದು-ಮುದ್ದು ಮಾತಾಡುವ ಪುಟಾಣಿಯ ಪ್ರಶ್ನೆಗಳ ಕೌತುಕದಲ್ಲಿ ಅಮ್ಮ ಕಾಣ್ತಾಳೆ.

ಇಷ್ಟೆಲ್ಲಾ ಕಡೆ ಕಾಣಿಸಿ, ಪ್ರೀತಿ ಹಂಚಿ, ಧೈರ್ಯ ನೀಡಿ, ಸ್ಥೈರ್ಯ ತುಂಬಿ ಬಾಳಿಗೇ ದಾರಿದೀಪ ಆಗುವ ಅಮ್ಮ ಮಾಯಾವಿ ಅಲ್ಲದೇ ಮತ್ತೇನು?

-ವಿಭಾ ವಿಶ್ವನಾಥ್

ಗಜಲ್-01


ಮಗುವಿಗೆ ತನ್ನ ಪ್ರೀತಿಯನೆಲ್ಲಾ ಕೊಡುವವಳು ಅಮ್ಮ
ಮಮತೆಯ ಜೀವಧಾರೆಯ ಉಣಿಸಿ ಬೆಳೆಸುವವಳು ಅಮ್ಮ

ಅಳುವ ಮಗುವಿಗಾಗಿ ಮರುಗಿ ಕೊರಗಿ ತಾನು
ಸಕಲ ಕೆಲಸವನೆಲ್ಲ ಬಿಟ್ಟು ರಮಿಸುವವಳು ಅಮ್ಮ

ತನ್ನ ಕಷ್ಟವನ್ನೂ ಲೆಕ್ಕಿಸದೆ, ಕಂದನ ಏಳಿಗೆಗಾಗಿ
ತನ್ನದೆಲ್ಲವ ತ್ಯಜಿಸಿ ದುಡಿದು ದಣಿಯುವವಳು ಅಮ್ಮ

ತಾನು ಅರೆಹೊಟ್ಟೆಯಲಿ ಇದ್ದರೂ ಅದನು ನೆನೆಯದೆ
ಕಂದನ ತೃಪ್ತಿಗಾಗಿ ತನ್ನ ಪಾಲನು ಉಣಿಸುವಳು ಅಮ್ಮ

ಕಿರಿಯರನ್ನು ಪ್ರೀತಿಸಿ, ಹಿರಿಯರನ್ನು ಗೌರವಿಸು ಎನ್ನುತ
ತಾನೇ ದೇವರಾಗಿ ನಿಂತು ಪಾಲಿಸುವವಳು ಅಮ್ಮ

ಸ್ವಾರ್ಥವಿಲ್ಲದ ಪ್ರೀತಿ ತೋರಿ, ನಿಸ್ವಾರ್ಥತೆಯಿಂದ ಬಾಳಿ
ತನ್ನ ಛಾಪನು ನಮ್ಮಲ್ಲಿ ಮೂಡಿಸಿ ಹೊರಡುವವಳು ಅಮ್ಮ

ವಿಭಾಳ ಬಾಳಿನ ಪ್ರತಿ ಹೆಜ್ಜೆಯಲೂ ಜೊತೆಗೆ ನಿಂತು
ತಪ್ಪು-ಸರಿಯ ವಿಮರ್ಶಿಸುತ ದಾರಿದೀಪವಾಗಿರುವವಳು ಅಮ್ಮ

~ವಿಭಾ ವಿಶ್ವನಾಥ್


ಶುಕ್ರವಾರ, ಮೇ 4, 2018

ನೈತಿಕತೆ-ಅನೈತಿಕತೆ

ನೈತಿಕತೆ-ಅನೈತಿಕತೆಯ ದ್ವಂದ್ವದಲಿ
ಸವೆದಿತ್ತು ಬಾಳು ಸರಿಯಾಗದಂತೆ

ಸಂಬಂಧದ ಬಂಧನದೊಳಗೆ
ಬಂಧಿಯಾದಾಗ ಹೇಳಿದರು
ಇದು ಬಿಡಿಸಲಾರದ ಬಂಧವೆಂದು

ನೈತಿಕತೆಯ ಈ ಸೆರೆಯೊಳಗೆ
ನೆಮ್ಮದಿಯೇ ಹೆಚ್ಚಿರುವುದಂತೆ
ಕರೆಯುವರು ಇದನು ವಿವಾಹವೆಂದು

ಬಿಡಿಸಲಾರದ ಬಂಧವೂ ಸಹಾ
ಅಧಃಪತನದೆಡೆಗೆ ಸಾಗುತಲಿತ್ತು
ಸ್ವಾಭಿಮಾನದ ಹೆಸರಿನ ದುರಹಂಕಾರದಿಂದ

ನಲುಗಿದ ಬಂಧನದ ಬೇಡಿಯದು
ಕಳಚಿ ಬಿದ್ದಿತ್ತು ನೈತಿಕವಾಗಿಯೇ..
ವಿಚ್ಛೇದನವೆಂಬ ಹೆಸರಿನಿಂದ

ಬಂಧನಕ್ಕಿಂತ ಸ್ವಾತಂತ್ರ್ಯ ಚೆಂದ
ಎಂದುಕೊಂಡು ಅದು ಸ್ವೇಚ್ಛೆಯಾಗಿತ್ತು
ನಾನೇ ಮೇಲೆಂಬ ಹಮ್ಮಿನಿಂದಲೇ

ಮತ್ತೊಂದು ಮಗದೊಂದು ಎಂಬಂತೆ
ಮುಗಿದ ಮುರಿದ ಸಂಬಂಧಗಳೊಡನೆ
ದಕ್ಕಿತ್ತು ಪಟ್ಟ ಅನೈತಿಕವೆಂತಲೇ

~ವಿಭಾ ವಿಶ್ವನಾಥ್

ಸೋಮವಾರ, ಏಪ್ರಿಲ್ 30, 2018

ಬುದ್ದನಾಗಲು..

ಭೋದಿ ವೃಕ್ಷದಡಿ ಕುಳಿತುಕೊಂಡ ಮಾತ್ರಕೆ
ಜ್ಞಾನೋದಯವಾಗಿ ಬುದ್ದನಾಗಲು ಸಾಧ್ಯವೇ?
ಇಂತಾದರೆ ಮರದಡಿ ಕುಳಿತವರೆಲ್ಲಾ ಬುದ್ದರೇ..!?
ತನ್ನಂತರಂಗದ ಅರಿವಾಗಬೇಕು ಬುದ್ದನಾಗಲು..

ಅಪರಾತ್ರಿಯಲಿ ಮನೆ-ಮಾರನ್ನೆಲ್ಲಾ ತೊರೆದು
ಹೊರ ನಡೆದೊಡನೆ ಬುದ್ದನಾಗಲು ಸಾಧ್ಯವೇ?
ಇಷ್ಟು ಮಾಡಿದರೆ ತೊರೆದವರೆಲ್ಲಾ ಬುದ್ದರೇ..!?
ಮೋಹವನು ಮೀರಿ ನಿಲ್ಲಬೇಕು ಬುದ್ದನಾಗಲು..

ಆಸೆಯೇ ದುಃಖಕ್ಕೆ ಮೂಲ ಕಾರಣವೆಂದು
ಭೋದಿಸಿದೊಡನೆ ಬುದ್ದನಾಗಲು ಸಾಧ್ಯವೇ?
ಹಾಗಾದರೆ ಭೋದಿಸಿದವರೆಲ್ಲಾ ಬುದ್ದರೇ..!?
ನುಡಿದಂತೆ ನಡೆಯಲೂಬೇಕು ಬುದ್ದನಾಗಲು..

ಅರ್ಧ ನಿಮೀಲಿತ ನೇತ್ರನಾಗಿ ಧ್ಯಾನಕ್ಕೆ ಕೂತು
ಮುಗುಳ್ನಕ್ಕೊಡನೆ ಬುದ್ದನಾಗಲು ಸಾಧ್ಯವೇ?
ಹೀಗಾದರೆ ಧ್ಯಾನಿಸುವವರೆಲ್ಲರೂ ಬುದ್ದರೇ..!?
ತನ್ಮಯತೆ, ನಿರ್ಲಿಪ್ತತೆಯಿಂದಿರಬೇಕು ಬುದ್ದನಾಗಲು..

ಯಾರು ಏನಂದರೂ ಕೋಪ ಮಾಡಿಕೊಳ್ಳದೆ 
ಸುಮ್ಮನಿದ್ದೊಡನೆ ಬುದ್ದನಾಗಲು ಸಾಧ್ಯವೇ?
ಇಷ್ಟಾದರೆ ವಾದಿಸದಿರುವವರೆಲ್ಲರೂ ಬುದ್ದರೇ..!?
ಶಾಂತತೆಯ ಜೊತೆ ಸ್ಥಿಗ್ದತೆ ಇರಬೇಕು ಬುದ್ದನಾಗಲು..

-ವಿಭಾ ವಿಶ್ವನಾಥ್

ಸೋಮವಾರ, ಏಪ್ರಿಲ್ 23, 2018

ದೇವರಿಗೆ..

ದೇವಸ್ಥಾನದ ಘಂಟೆ ಸದ್ದಲಿ
ಕಿವುಡಾಗಿರುವ ದೇವರಿಗೆ
ದುಷ್ಟರಿಗೆ ಸಿಕ್ಕಿ ನಲುಗುತ್ತಿರುವ
ಹೂವಿನ ಅಳಲು ಕೇಳಲೇ ಇಲ್ಲ

ಗಂಧ-ಅಕ್ಷತೆಗಳಿಂದ ತುಂಬಿ
ಧೂಪದ ವಾಸನೆಯೊಳಿರುವ ದೇವರಿಗೆ
ಅತ್ಯಾಚಾರದ ಕೊಳಚೆ ವಾಸನೆ
ಮೂಗಿಗೆ ರಾಚಲೇ ಇಲ್ಲ..

ಜರಿ-ರೇಷ್ಮೆ ವಸ್ತ್ರಾಲಂಕೃತರಾಗಿ
ಬಿಮ್ಮನೆ ಕುಳಿತ ದೇವರಿಗೆ
ಅಟ್ಟಹಾಸಕ್ಕೆ ಸಿಕ್ಕು ಹರಿದ
ಬಟ್ಟೆ-ಬಾಳುಗಳೆರಡೂ ಕಾಣಲೇ ಇಲ್ಲ

ಮಂತ್ರ-ಘೋಷ, ಜಲದಿಂದ
ಮಡಿಯಾದ ದೇವರಿಗೆ..
ಮೈಲಿಗೆಯಾದವರ ಕೂಗು ಸಹಾ
ಮೈಲಿಗೆಯಾಗುಳಿದು ತಲುಪಲೇ ಇಲ್ಲ

ಕಲ್ಲಿನಿಂದಲೇ ರೂಪಿತವಾಗಿ
ಕಲ್ಲಾಗಿಯೇ ಉಳಿದ ದೇವರಿಗೆ
ಜೀವಂತ ಮಗುವಿನಳಲು
ಕಿವಿಗೆ ತಲುಪಲೇ ಇಲ್ಲ

-ವಿಭಾ ವಿಶ್ವನಾಥ್

ಶುಕ್ರವಾರ, ಏಪ್ರಿಲ್ 20, 2018

ಮೌನಿಯಂತರಾಳ



ಮೌನಗೀತೆಯನಾಲಿಸು ಮನದುಂಬಿ
ಅರಿವಾಗುವುದು ನಿನ್ನಂತರಾಳ...

ಆಡದೆ ಉಳಿದ ಮಾತುಗಳನೆಲ್ಲ
ನುಡಿದು ತೀರಲೇಬೇಕೆಂದಿರುವೆಯೇಕೆ...
ಒಲವಿನಂತರಾಳವ ಅಳೆಯಬಹುದೇ
ಆಡಂಬರದ ಒಣ ಮಾತುಗಳಿಂದ..?

ಪ್ರೀತಿಯನು ಎಲ್ಲೆಡೆ ಪಸರಿಸಲು
ಮಾತಿನ ಹಂಗೇತಕೆ ಹೇಳು..?
ಒಂದೊಮ್ಮೆ ಬಂಧಿಯಾಗಿಬಿಡು
ಮನದ ಮೌನದ ಪಾಶದೊಳಗೆ

ಬಂಧನದ ಕಹಿ ಇದರಲಿಲ್ಲ
ಚಿಮ್ಮುತಿದೆ ಸಂತಸದ ಚಿಲುಮೆ..
ಭಾವನೆಯಲೆಗಳಲಿ ಮೂಡುತಿದೆ
ಮೌನಿಯಂತರಾಳದ ಚಿತ್ತಾರ..

~ವಿಭಾ ವಿಶ್ವನಾಥ್

ಮಂಗಳವಾರ, ಏಪ್ರಿಲ್ 17, 2018

ಅವನು ಮತ್ತು ನನ್ನಾಸೆ

ಆಗಸಕೆ ಲಗ್ಗೆಯಿಟ್ಟು
ನಿಲುಕದ ಚಂದಿರನ ಹಿಡಿದು,
ಅವನ ಬೆಳದಿಂಗಳನು
ಜಗಕೆಲ್ಲ ಪಸರಿಸುವಾಸೆ

ಅಳುವ ಮಕ್ಕಳೆದುರು
ಅವನನ್ನು ತಂದು ನಿಲ್ಲಿಸಿ
ಇವನಿನ್ನು ನಿಮ್ಮವನೆಂದು
ಅವರಿಗೇ ಕೊಡುವಾಸೆ

ಅವನನ್ನು  ತಾರೆಗಳಿಂದ 
ದೂರಕೆ ಕರೆತಂದು
ಮತ್ತೊಂದು ಬದುಕಿದೆಯೆಂದು ತೋರಿ
ಅದನು ಅವನಿಗೆ ಪರಿಚಯಿಸುವಾಸೆ

ಅಮವಾಸ್ಯೆಗೆ ಕಾಣೆಯಾಗಿ ಕಾಡುವ
ಹುಣ್ಣಿಮೆಯಲ್ಲಿ ಬೆಳಗಿದಾಗ ಕಾಣುವ
ಅವನಲಿ ಕಂಡೂ ಕಾಣದಂತಿರುವ ಅವನ 
ಮುಗುಳ್ನಗೆಯ ಹಿಡಿದಿಟ್ಟುಕೊಳ್ಳುವಾಸೆ

~ವಿಭಾ ವಿಶ್ವನಾಥ್

ಸೋಮವಾರ, ಏಪ್ರಿಲ್ 16, 2018

ನರರಾಕ್ಷಸರ ಅಂತ್ಯವೆಂದು..?

"ಹೆಣ್ಣು ಬರಿ ಕಾಮದ,ಭೋಗದ ವಸ್ತುವೇ?ಪುಟ್ಟ ಹೆಣ್ಣು ಹಸುಳೆಯಿಂದ ಹಿಡಿದು ಮುದುಕಿಯವರೆಗೂ ಬೇಕಾಗಿರುವುದು ಅವಳ ದೈಹಿಕ ಸುಖ ಮಾತ್ರವೇ?" ಇಂತದ್ದೊಂದು ಪ್ರಶ್ನೆ ಪ್ರತಿ ದಿನವೂ ಮೂಡಿ ಮರೆಯಾಗುತ್ತಿರುವುದು ಸುಳ್ಳಲ್ಲ.ಇದಕ್ಕೆ ಪುಷ್ಠಿ ಒದಗಿಸುವಂತೆ ದಿನನಿತ್ಯವೂ ಅತ್ಯಾಚಾರಗಳು ನಡೆಯುತ್ತಲೇ ಇವೆ. ಆದರೆ 'ಆಸಿಫಾ'ಳ ಘಟನೆ ಮನಕಲಕುವಂತದು, ಅದು ಮನಸ್ಸನ್ನು ಇನ್ನಷ್ಟು ಘಾಸಿಗೊಳಿಸಿತು.ಮುಗ್ಧ ಮಗುವಿನ ಮೇಲೆ ನಡೆದ ಈ ಹಸಿ ಹಸಿ ಕ್ರೌರ್ಯ ನರರಾಕ್ಷಸರ ದರ್ಶನ ಮಾಡಿಸಿಬಿಟ್ಟಿತು.

ಹೆಣ್ಣಾಗಿ ಹುಟ್ಟುವುದೇ ತಪ್ಪೇ? ಎಂಬ ಪ್ರಶ್ನೆ ಮನದಾಳದಿಂದ ಕೇಳಿ ಬರುತ್ತಲಿದೆ.

ಪ್ರಚೋದನಕಾರಿ ಬಟ್ಟೆ, ಅವಳ ಹಾವ-ಭಾವ,ಓಡಾಡುವ ಸಮಯ ಇವೆಲ್ಲವೂ ಅತ್ಯಾಚಾರಕ್ಕೆ ಕಾರಣ ಎನ್ನುವ ಬುದ್ದಿಜೀವಿಗಳೇ ಹೇಳಿ..,ಎಂಟು ವರ್ಷದ ಪುಟ್ಟ ಕಂದನಲ್ಲಿ ಅದಾವ ಪ್ರಚೋದನಕಾರಿ ಅಂಶವಿತ್ತು?ಅತ್ಯಾಚಾರಿಗಳಿಗೆ ಪ್ರಚೋದಿಸುವ ಅದ್ಯಾವ ಹಾವ-ಭಾವದಿಂದ ಅವಳು ನಿಮ್ಮನ್ನು ಸೆಳೆದಿದ್ದಳು? ಬುದ್ದಿ ಬಲಿಯದ ಆ ಮಗು ಅದೇನು ಪಾಪ ಮಾಡಿತ್ತು?

ಇಂತಹಾ ಪಾಶವೀ ಕೃತ್ಯಕ್ಕೆ ಧರ್ಮಗಳ ಹೆಸರು ಬಳಸಿ, ಕೋಮುಗಲಭೆಗೆ ಕಾರಣರಾಗಲು ಹೊರಟಿರುವಿರಲ್ಲಾ, ನಿಮಗಿಂತಾ ಸಮಯಸಾಧಕರು ಮತ್ತಾರಾದರೂ ಇರುವರೇ? ಪುಟ್ಟ ಕಂದಮ್ಮನ ಮೇಲೆ ಗಂಡಸ್ತನದ ಶೌರ್ಯ ತೋರಿಸಿ ಸರದಿಯಂತೆ ವಿಜೃಂಭಿಸಿದಿರಲ್ಲಾ ನಿಮಗಿಂತಾ ಅಧಮರು ಇರಲು ಸಾದ್ಯವೇ? ಅಧಿಕಾರದ ಅಮಲು,ಹಣದ ಮದದಿಂದ ಕೊಬ್ಬಿ ಹೋಗಿರುವ ನೀವು ನರರಾಕ್ಷಸರಲ್ಲದೇ ಮತ್ತೇನು? ವಿದ್ಯಾವಂತರಾಗಿ ಸರ್ಕಾರದ ಹುದ್ದೆಯಲ್ಲಿದ್ದು, ದುಷ್ಟರನ್ನು ಶಿಕ್ಷಿಸಬೇಕಾದ ನೀವೇ ಮೃಗಕ್ಕಿಂತಲೂ ಕಡೆಯಾಗಿ ವರ್ತಿಸಿದಾಗ 'ರಕ್ಷಕ'ರಲ್ಲಿ ನಂಬಿಕೆ ಇಡುವುದಾದರೂ ಹೇಗೆ?

ಇಂದು ನಮ್ಮಿಂದ ಬಹಳ ದೂರದಲ್ಲಿ ನಡೆದ ಘಟನೆ ನಾಳೆ ನಮ್ಮ ಸುತ್ತ-ಮುತ್ತ ನಡೆಯಬಹುದು. ಅಷ್ಟೇ ಏಕೆ? ನಮ್ಮ ಮನೆಯ ಹೆಣ್ಣುಮಕ್ಕಳೇ ಬಲಿಯಾಗಬಹುದು..ಯಾರದೋ ಸಮಸ್ಯೆಂದು ನಾವು ಸ್ಪಂದಿಸದಿದ್ದರೆ ನಾವು ಆ ಘಟನೆಗೆ ಕುಮ್ಮಕ್ಕು ಕೊಟ್ಟಂಟೆಯೇ ಅಲ್ಲವೇ?

ಒಂದೊಮ್ಮೆ ನನಗೆ ಅನಿಸಿದ್ದು, ಒಂದು ವೇಳೆ ಆಸಿಫಾ ಬದುಕುಳಿದಿದ್ದರೆ ಅವಳಿಗೆ ಮಾನವೀಯತೆ, ಮನುಷ್ಯತ್ವದ ಮೇಲೆ ನಂಬಿಕೆಯೇ ಹೋಗಿಬಿಡುತ್ತಿತ್ತು.'ದೊಡ್ಡ ಜನರ ಸಣ್ಣ ಮನಸ್ಸು'ಗಳು ಪುಟಾಣಿಯ ಗಾಯದ ಮೇಲೆ ಬರೆ ಎಳೆಯುತ್ತಿದ್ದವು.

ರಾಕ್ಷಸರ ಅಪರಾವತಾರ ತಾಳಿ ಈ ಕೃತ್ಯ ನಡೆಸಿರುವವರೇ ಉತ್ತರಿಸಿ,ಆ ಮಗುವಿನ ಮೇಲೆ ವಿಜೃಂಭಿಸುವಾಗ ನಿಮಗೆ ನಿಮ್ಮ ಮಕ್ಕಳ ಭವಿಷ್ಯ ನೆನಪಾಗಲಿಲ್ಲವೇ? ನಿಮ್ಮ ತಾಯಿ,ತಂಗಿ,ಹೆಂಡತಿ, ಮಕ್ಕಳೇ ಈ ಜಾಗದಲ್ಲಿದ್ದಿದ್ದರೆ ಎಂಬ ಕನಿಷ್ಟ ಚಿಂತನೆಯೂ ಬರಲಿಲ್ಲವೇ? ನಿಮಗೆ ಹೇಗೆ ಈ ವಿಚಾರಗಳು ಬರಲು ಸಾಧ್ಯ? ನೀವು ಮಾನವತ್ವವನ್ನು ತೊರೆದು ರಾಕ್ಷಸರಾದವರು ಅಲ್ಲವೇ?

ನ್ಯಾಯ ಪಾಲಕರೇ ಉತ್ತರಿಸಿ, ಈ ಅನ್ಯಾಯ ನಿಮ್ಮ ಮನೆಯ ಮಗಳಿಗೇ ಆಗಿದ್ದರೆ,ಜಾತಿ,ಮತ,ಪಂಥ,ಧರ್ಮದ ಆಧಾರದ ಮೇಲೆ ಕೋಮುಗಲಭೆಯನ್ನು ಸೃಷ್ಟಿಸಿ ಅದನ್ನು ಲಾಭಕ್ಕಾಗಿ ಬಳಸಿಕೊಂಡು, ಅಪರಾಧಿಗಳನ್ನು ಪಾರು ಮಾಡುತ್ತಿದ್ದಿರಾ?

ನ್ಯಾಯ ದೇವತೆಯ ಕಣ್ಣು ಕುರುಡಾಗಿದೆ. ದೇಗುಲ,ಮಸೀದಿ,ಚರ್ಚಿನಲ್ಲಿನ ದೇವರುಗಳು ಕಲ್ಲಾಗಿದ್ದಾರೆ. ನರರಾಕ್ಷಸರ ಈ ಅಟ್ಟಹಾಸಕ್ಕೆ ತೆರೆ ಎಳೆಯಲು ದೇವರು ಬರುವರೇ? ಗುರುತು-ಪರಿಚಯವಿರುವ ಮನುಷ್ಯರನ್ನೇ ನಂಬಲು ಸಾಧ್ಯವಿಲ್ಲದ ಸ್ಥಿತಿ ಇರುವಾಗ, ಕಾಣಿಸದ ದೇವರನು ನಂಬಿ ಕೈ ಕಟ್ಟಿ ಕೂರಲು ಸಾಧ್ಯವೇ?

ಇಂತವೇ ಎಷ್ಟೋ ನುಡಿನಮನಗಳು ನಿನಗೆ ಸಂದಿರಬಹುದು,ಕಂದಾ..
ನಿನಗಷ್ಟೇ ಅಲ್ಲಾ, ನಿನ್ನಂತೆ ಅನ್ಯಾಯಕ್ಕೆ ಒಳಗಾಗಿರುವ ನಿನ್ನ ಸಹೋದರಿಯರಿಗೂ ಸಂದಿರಬಹುದು.'RIP' ಪ್ರತಿಭಟನೆಗಳಿದು ಸುಮ್ಮನಾಗಬಹುದು,ಒಂದಷ್ಟು ದಿನ ಕಳೆದ ಮೇಲೆ ಮರೆತೂ ಹೋಗಬಹುದು. ಏಕೆಂದರೆ, ಇಲ್ಲಿಯವರೆಗೂ ಆಗಿರುವುದೆಲ್ಲಾ ಇಂತವೇ...
ಕೈಲಾಗದ ಹೇಡಿಯಂತೆ ನಾನೂ ಸಹಾ ಒಂದಿಷ್ಟನ್ನು ಗೀಚಿ,ಸಹಾನುಭೂತಿ ತೋರಿಸುತ್ತೇನೆ, ನನ್ನ ಮಿತಿಯಲ್ಲಿ ನನಗೆ ಮಾಡಲಾಗುವುದು ಇಷ್ಟನ್ನೇ..

ಎಲ್ಲರಂತೆ ನಾನು "RIP" ಎನ್ನುವುದಿಲ್ಲ, ಏಕೆಂದರೆ ಇಂತಾ ನರರೂಪದ ರಾಕ್ಷಸರ ಅಟ್ಟಹಾಸವನ್ನು ತಡೆಯುವ ಶಕ್ತಿ ನಿನ್ನ ಹೆಸರಿಗೆ ಬರಲಿ,ಆತ್ಮಶಾಂತಿಯಿಲ್ಲದೆ ಆ ನರರಾಕ್ಷಸರು ಒದ್ದಾಡುವ ದಿನಗಳು ಹತ್ತಿರವಾಗಲಿ..
ನೀನು ನರಳಿ, ಇಂಚಿಂಚೂ ಹಿಂಸೆ ಅನುಭವಿಸಿ ಸತ್ತಿರುವ ಪರಿಸ್ಥಿತಿಯನ್ನು ಅವರೂ ಅನುಭವಿಸಲಿ, ಈಗ ಕಲ್ಲಾಗಿರುವ ದೇವರು ಮುಂದೆಯೂ ಕಲ್ಲಾಗಿಯೇ ಇದ್ದುಬಿಡಲಿ. ಅವರವರ ಕರ್ಮಫಲವನ್ನು ಅವರು ಈಗಲೇ ಅನುಭವಿಸಲಿ..

ಪುರಾಣದ ರಾಕ್ಷಸರು ಶಾಪಗ್ರಸ್ತರು,ಅವರಿಗೆ ಸಾವಿನ ನಂತರ ಸ್ವರ್ಗ ಇಲ್ಲವೇ ಮೋಕ್ಷ ಪ್ರಾಪ್ತಿಯಾಗಿಬಿಡುತ್ತದೆ. ಆದರೆ ಈ ನರರಾಕ್ಷಸರು ಗೋಮುಖ ವ್ಯಾಘ್ರರು, ಇವರು ಶಾಪಗ್ರಸ್ತರಾಗಿಯೇ ಉಳಿದು ಬಿಡಲಿ..

ಈ ವಿಕೃತ ಆಸೆ ನನಗಂತೂ ಇದೆ,ಏಕೆಂದರೆ ನಲುಗಿ ನರಳಿದ ಆ ಪುಟ್ಟ ಕಂದಮ್ಮನ ಸಾವು ಕಣ್ಣಿಗೆ ಕಟ್ಟಿದಂತಾಗುತ್ತಿದೆ.ಮುಂದಿನ ತಲೆಮಾರಿನ ಭೀಕರತೆಯನ್ನು ನೆನೆದಲ್ಲಾ ಈ ಬಯಕೆ. ನಿನ್ನ ಸಾವಿನ ಭೀಕರತೆಯನ್ನು ನೆನೆದೇ ಕಂದಾ..

ಮುಂದೆ, ಹುಟ್ಟಿದರೆ ಹೆಣ್ಣಾಗಿಯೇ ಹುಟ್ಟು,ಇಂತಹಾ ನರರಾಕ್ಷಸರನ್ನು ಅಂತ್ಯಗೊಳಿಸುವ ಶಕ್ತಿ ಸ್ವರೂಪಿಣಿಯಾಗಿ..

-ವಿಭಾ ವಿಶ್ವನಾಥ್

ಭಾನುವಾರ, ಮಾರ್ಚ್ 18, 2018

ಜೀವಕಳೆಯ ಪರ್ವ

ಬಳಲಿ ಬೆಂಡಾಗಿ ಜೀವಕಳೆಯನ್ನೇ ಕಳೆದುಕೊಂಡಿದ್ದ ಇಳೆ ಇಂದು ವಸಂತನ ಆಗಮನಕ್ಕೆ ಪುಳಕಿತಳಾಗಿ ಹಸಿರನ್ನೇ ಮೈ ತುಂಬಾ ಹೊದ್ದು, ಕಣ್ಣು ಕುಕ್ಕುವಂತೆ ನಳನಳಿಸುತ್ತಿದ್ದಾಳೆ. ವಸುಂಧರೆಯ ಈ ಖುಷಿಗೆ ಕೋಗಿಲೆ ಮಾಮರದ ಮೇಲೆ ಕುಳಿತು ಕುಹೂ-ಕುಹೂ ಎನ್ನುತ್ತಾ ದನಿಗೂಡಿಸುತ್ತಿದೆ. ತರು-ಲತೆಗಳು ಹೂಗಳನ್ನೇ ಮೈ ತುಂಬಿಕೊಂಡು ಚಿಗುರಿನಂದದಿಂದ ನಳನಳಿಸುತ್ತಾ ಕಣ್ಮನ ಸೆಳೆಯುತ್ತಿದೆ.
ವಸಂತ ಋತುವಿನ ಈ ಸಮಯದಲ್ಲಿ ಮತ್ತೆ ಮತ್ತೆ ಬರುತ್ತಲಿದೆ ಯುಗಾದಿ. ಕಳೆದ ಕ್ಷಣಗಳು ಮತ್ತೆ ಮತ್ತೆ ಬಾರದಿದ್ದರೂ , ಹೊಸ ಹರುಷವನ್ನು ತರುತ್ತಾ ಯುಗಾದಿ ತಪ್ಪದೆ ಮತ್ತೆ ಮತ್ತೆ ಬರುತ್ತಲಿದೆ.ಇಳೆಯ ಎಲ್ಲಾ ಜೀವರಾಶಿಗಳಿಗೂ ಜೀವಕಳೆಯನ್ನು ತರುತ್ತದೆ.
ಯುಗದ ಆದಿಯ ಸವಿನೆನಪನ್ನು ತರುವ ಯುಗಾದಿ ಅಭ್ಯಂಜನದ ಮಹತ್ವವನ್ನು ಸಾರುತ್ತಾ, ಅದರ ಮಧುರ ಅನುಭೂತಿಯನ್ನೂ ಪರಿಚಯಿಸುತ್ತದೆ.ಜೊತೆಗೆ ಬೇವು-ಬೆಲ್ಲವು ಯಾವ ರಾಸಾಯನಿಕವನ್ನೂ ಒಳಗೊಳ್ಳದ ತಿನಿಸಾಗಿ ಆರೋಗ್ಯವನ್ನು ವೃದ್ದಿಸುತ್ತದೆ.  ಬಾಯಿಗೆ ಕಹಿಯಾದರೂ, ಬೆಲ್ಲದೊಂದಿಗೆ ಸವಿಯುವದನ್ನು ತಪ್ಪಿಸುವುದಿಲ್ಲ. ಬೆಲ್ಲದ ಸಿಹಿಗಿಂತ ಬೇವಿನ ಕಹಿಯೇ ಬಾಯಲ್ಲಿ ಹೆಚ್ಚು ಉಳಿಯುತ್ತದೆನಿಸಿದರೂ, ದೇಹದ ಆರೋಗ್ಯಕ್ಕೆ ಬೇವು ಒಳ್ಳೆಯದು.
ಬೇವು-ಬೆಲ್ಲದಂತೆಯೇ ನಮ್ಮ ಬಾಳಿನಲ್ಲಿ ಬರುವ ಸುಖ-ದುಃಖಗಳು.  ಬೇವು-ಬೆಲ್ಲವನ್ನು ಸವಿಯುವಂತೆಯೇ ಕಷ್ಟ-ಸುಖಗಳನ್ನೂ ಒಟ್ಟಾಗಿ ಅನುಭವಿಸಬೇಕು.  ಕಷ್ಟಕ್ಕೆ ಹೆದರಿ ಕುಗ್ಗದೆ ಅದರಿಂದ ಕಲಿತ ಪಾಠಗಳನ್ನು ಸುಖದೊಂದಿಗೆ ಬೆರೆಸುತ್ತಾ ಬಾಳಿನಲ್ಲಿ ಅಳವಡಿಸಿಕೊಂಡರೆ ಬದುಕು ಸೊಗಸಾಗಿರುತ್ತದೆ ಎಂಬ ಪಾಠವನ್ನೂ ಯುಗಾದಿ ಕಲಿಸುತ್ತದೆ. 
ಹಳೆಯದನ್ನೆಲ್ಲಾ ನೆನಪಿಸುತ್ತಾ, ಈ ಕ್ಷಣ ಇಷ್ಟು ಬೇಗ ಕಳೆದೇ ಹೋಯಿತೇ ಎಂದೆನಿಸುವ ಮಧುರ ನೆನಪುಗಳನ್ನು ಮೂಡಿಸುತ್ತಾ, "ನಿದ್ದೆಗೊಮ್ಮೆ ನಿತ್ಯ ಮರಣ,ಎದ್ದ ಕ್ಷಣ ನವೀನ ಜನನ" ನಮಗೆ ಬರುವುದಿಲ್ಲ ಎಂದು ನೆನಪಿಸುತ್ತಾ ಬಂದಷ್ಟೇ ವೇಗದಲ್ಲಿ ಯುಗಾದಿ ಮುಗಿದೇ ಹೋಗಿಬಿಡುತ್ತದೆ.

ಹಿಂದೂಗಳ ಹೊಸ ವರ್ಷವೆಂದೇ ಖ್ಯಾತಿ ಪಡೆದ ಯುಗಾದಿಯನ್ನು ಅಬ್ಬರದಿಂದ ಆಚರಿಸದೆ, ಪರಿಸರ-ಸ್ನೇಹಿ ಹಬ್ಬವಾಗಿ ಆಚರಿಸೋಣ. ಮಾವಿನ ತಳಿರ-ತೋರಣವ ಕಟ್ಟುತ್ತಾ, ಬೇವು-ಬೆಲ್ಲದೊಂದಿಗೆ, ಮರಳಿ ಬರುತ್ತಿರುವ ಜೀವಕಳೆಯ ಹಬ್ಬ ಯುಗಾದಿಯನ್ನು ಮಂದಹಾಸದೊಂದಿಗೆ ಸ್ವಾಗತಿಸೋಣ.

-ವಿಭಾ ವಿಶ್ವನಾಥ್

ಗುರುವಾರ, ಮಾರ್ಚ್ 8, 2018

ಅವಳಂತರಂಗ


ನಮಗೆ ಬದುಕಿನಲ್ಲಿ ಸ್ಫೂರ್ತಿ ನೀಡಿದ ಮಹಿಳೆಯರ ಪಟ್ಟಿ ಮಾಡ ಹೊರಟಲ್ಲಿ ಅಮ್ಮ, ಚಿಕ್ಕಮ್ಮ, ದೊಡ್ಡಮ್ಮ, ಅಜ್ಜಿ, ಅಕ್ಕ-ತಂಗಿ, ಅತ್ತೆ, ಶಿಕ್ಷಕಿ, ಗೆಳತಿ,ಹೆಂಡತಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ಮಹಿಳೆಯರ ದಿನ ಮಾತ್ರ ನಾವು ಸಾಧನೆ ಮಾಡಿದ, ಸ್ಫೂರ್ತಿ ನೀಡಿದ  ಮಹಿಳೆಯರನ್ನು ನೆನೆಯುವ ನಾವು ಎಂದಾದರೂ ಅವಳಂತರಂಗದ ಆಲೋಚನೆಗಳು ಹೇಗಿರಬಹುದೆಂಬುದನ್ನು ಯೋಚನೆ ಮಾಡಿದ್ದೇವೆಯೇ?

"ಮಹಿಳೆ ಇಂದು ಪುರುಷ ಪ್ರಧಾನ ಸಮಾಜದಲ್ಲಿ, ತಾನೂ ಸರಿಸಮವಾಗಿ ನಿಂತು ಪ್ರಗತಿ ಸಾಧಿಸುತ್ತಿದ್ದಾಳೆ" ಎಂದು ದಿನಪತ್ರಿಕೆಗಳಲ್ಲಿ, ದೂರದರ್ಶನಗಳಲ್ಲಿ ನೋಡಿದಾಗ ಒಂದು ಕಿರು ನಗೆ ನಕ್ಕು ಸುಮ್ಮನಾಗಿಬಿಡುತ್ತೇವೆ.ಆ ನಗು ಮಹಿಳೆಯರದಾದರೆ ಒಂದು ಹೆಮ್ಮೆಯ ನಗು, ಪುರುಷರದಾದರೆ ತಿರಸ್ಕಾರದ ಒಣ ನಗು(ಬಹುಷಃ ಎಲ್ಲರಿಗೂ ಅನ್ವಯಿಸದಿದ್ದರೂ, ಬಹುಮಂದಿಗೆ ಅನ್ವಯಿಸುತ್ತದೆ.)

ಪ್ರತಿ ಮಹಿಳೆಯ ಸಾಧನೆಯ ಹಿಂದೆ ಒತ್ತಾಸೆಯಾಗಿ ನಿಂತವರು, ಸ್ಥೈರ್ಯ ತುಂಬಿದವರು ಪ್ರತಿಯೊಬ್ಬರೂ ಇರುತ್ತಾರೆ. ಹಾಗೆಯೇ ಅವರುಗಳ ನಡುವಲ್ಲೇ ಕುಹಕವಾಡಿ ನಕ್ಕವರೂ ಇರುತ್ತಾರೆ. ಇದನೆಲ್ಲಾ ಮೆಟ್ಟಿ ನಿಲ್ಲಲು ಬಹಳಷ್ಟು ಅಂತಃಶಕ್ತಿ ಬೇಕು. ಅದರ ಮಧ್ಯೆ, ತಾನೆಲ್ಲೋ ಇದರ ನಡುವಲ್ಲಿ ಕಳೆದುಹೋಗುತ್ತಿದ್ದೇನೇನೋ ಎಂಬ ಭಾವನೆಯಿಂದ ಹೊರಬಂದು ಸ್ಥೈರ್ಯ ತಳೆದು ಬದುಕು ಕಟ್ಟಿಕೊಳ್ಳಬೇಕು. ಈ ಪ್ರಸಂಗಗಳು ಉದ್ಯೋಗಸ್ಥ,ವಿವಾಹಿತ ಮಹಿಳೆಯರ ಬದುಕಿನಲ್ಲಿ ಸ್ವಲ್ಪ ಹೆಚ್ಚೇ ಇರುತ್ತವೆ. ಹೊರ ಜಗತ್ತಿಗೆ ಅವಳ ಸಾಧನೆ ಕಾಣುತ್ತದೆ ಅಷ್ಟೇ, ಅದಕ್ಕಾಗಿ ಅವಳು ಅನುಭವಿಸಿದ ಮಾನಸಿಕ ತುಮುಲಗಳು ಕಾಣದೆ ಮುಚ್ಚಿ ಹೋಗಿ ಬಿಡುತ್ತವೆ.

ಅವಳ ಅಂತರಂಗದ ತೊಳಲಾಟ ಯಾರಲ್ಲೂ ಹೇಳಲೂ ಸಾಧ್ಯವಿಲ್ಲದೆ, ಅನುಭವಿಸಲೂ ಆಗದೆ ಇರುವ ಮನಸ್ಥಿತಿ ದೇವರಿಗೇ ಪ್ರೀತಿ. ಅದರಲ್ಲೂ ತಿಂಗಳ 'ಆ ದಿನ'ಗಳಲ್ಲಿ ಇನ್ನಷ್ಟು ಅಸ್ತವ್ಯಸ್ತವಾಗಿ ಬಿಡುತ್ತದೆ. ಬದಲಾಗುತ್ತಿರುವ ಭಾವನೆಗಳ ಆಂದೋಲನ(ಮೂಡ್ ಸ್ವಿಂಗ್ಸ್), ಜೊತೆಯಲ್ಲಿ ಶುರುವಾಗುವ ಕಿರಿ-ಕಿರಿ, ಜೊತೆಗೊಂದಿಷ್ಟು ಹೊಟ್ಟೆನೋವು, ಎಲ್ಲವೂ ಸೇರಿ  ಅವಳನ್ನು ಹಣ್ಣಾಗಿಸುತ್ತವೆ. ಇದೆಲ್ಲದರ ಜೊತೆಗೆ ಆಫೀಸ್ ನ ಅನಿವಾರ್ಯ ಕೆಲಸಗಳು, ಮಕ್ಕಳ ಪ್ರಾಜೆಕ್ಟ್ ವರ್ಕ್, ಅದೇ ಸಮಯದಲ್ಲಿ ಸುಳಿವೇ ನೀಡದೆ ಬರುವ ನೆಂಟರು, ಇವೆಲ್ಲ ಅವಳಿಗಾಗಿಯೇ ಕಾಯ್ದು ಕುಳಿತಿವೆಯೇನೋ ಎಂಬಂತೆ ಒಟ್ಟಿಗೆ ಮುಗಿಬಿದ್ದು ಅವಳನ್ನು ಹಣ್ಣುಗಾಯಿ-ನೀರುಗಾಯಿ ಮಾಡಿಬಿಡುತ್ತವೆ.

ಇನ್ನು 45-50 ರ ಆಸುಪಾಸಿನ ಮಹಿಳೆಯರದ್ದು ಇನ್ನೊಂದು ಬಗೆ. ಋತುಚಕ್ರ ನಿಲ್ಲುವ ಸಂಧರ್ಭದಲ್ಲಿ ಉಂಟಾಗುವ ಬೇಡದ ಸಂದರ್ಭಗಳು, ಅದರೊಂದಿಗೆ ನಿಶ್ಶಕ್ತಿ, ಎಲ್ಲರೂ ನನ್ನಿಂದೇನೋ ಮುಚ್ಚಿಡುತ್ತಿದ್ದಾರೇನೋ ಅಥವಾ ಎಲ್ಲರೂ ನನ್ನಿಂದ ದೂರವಾಗುತ್ತಿದ್ದಾರೇನೋ ಎನ್ನುವುದೊಂದು ಭಾವನೆ ಸಣ್ಣದಾಗಿ ಮೊಳೆಯಲು ಪ್ರಾರಂಭವಾಗಿಬಿಟ್ಟಿರುತ್ತದೆ. ಮನೆಯಲ್ಲಿನ ಕೆಲಸಗಳ ಒತ್ತಡಗಳು, ಮಕ್ಕಳ ಜವಾಬ್ದಾರಿ ಇವುಗಳೂ ಸೇರಿ  ಅವರನ್ನು ಜರ್ಜರಿತರನ್ನಾಗಿಸುತ್ತಿರುತ್ತದೆ.

ಆದರೂ ಮಹಿಳೆಯರ ಅಂತರಂಗದ ಶಕ್ತಿಯೆಂತದೆಂದರೆ, ಆಕೆ ಇವೆಲ್ಲವನ್ನೂ ದಾಟಿ ಮುಂದುವರಿಯುತ್ತಾಳೆ. ತನ್ನ ಪುಟ್ಟ ಪ್ರಪಂಚದಲ್ಲಿ ಯಾರಿಗೂ, ಯಾವ ಕೊರತೆಯೂ ಆಗದಂತೆ, ಕಾಪಾಡಿ ಬಿಡುತ್ತಾಳೆ. ತನಗೆ ಸಾವಿರಾರು ಕೈಗಳಿವೆಯೇನೋ ಎಂಬಂತೆ ದುಡಿಯುತ್ತಾಳೆ. ತನ್ನ ಮುಟ್ಟಿನ ನೋವನ್ನೂ ಬಚ್ಚಿಟ್ಟುಕೊಂಡು ಮಗುವಿನ ಸಣ್ಣ ತಲೆನೋವಿಗೆ ಸಂಕಟಪಡುತ್ತಾಳೆ. ಗಂಡನಷ್ಟೇ ಸಂಪಾದಿಸಿದರೂ, ಅವನಿಗಿಂತ ಮೇಲೆಂದು ಅಹಂಕಾರ ತೋರದೆ, ದರ್ಪ ತೋರದೆ, ಸಂಸಾರದ ರಥ ಸಾಗಿಸುತ್ತಾಳೆ. ಗಂಡಿನಷ್ಟು ಸ್ವಾತಂತ್ರ್ಯ ದೊರೆಯದಿದ್ದರೂ, ತನಗೆ ಸಿಕ್ಕಿದ ಮಿತಿಯಾದ ಸ್ವಾತಂತ್ರ್ಯದಲ್ಲೇ, ತನ್ನವರಾರಿಗೂ ತೊಂದರೆಯಾಗದಂತೆ, ತನ್ನ ಗುರಿ ಸಾದಿಸಿಯೇ ಬಿಡುತ್ತಾಳೆ. ಆದರೆ ತನ್ನ ಅಂತರಂಗವನ್ನು ಸುತ್ತಲಿನವರು ಅರ್ಥ ಮಾಡಿಕೊಂಡರೆ... ಎಷ್ಟು ಚೆಂದವಲ್ಲವೇ ಎಂಬ ಸ್ವಗತದೊಂದಿಗೆ ಮುಖದ ಮೇಲೆ ಮುಗುಳ್ನಗೆಯೊಂದನ್ನು ಮೂಡಿಸಿಕೊಂಡು ಬಿಡುತ್ತಾಳೆ.

ಅಂತಹಾ ಎಲ್ಲಾ ಮಹಿಳೆಯರಿಗೂ ನನ್ನದೊಂದು ಪುಟ್ಟ ಸಲಾಂ.

ಸಾಧ್ಯವಾದರೆ, ಇನ್ನು ಮುಂದಾದರೂ ಅವಳಿಗೆ ಸ್ವಲ್ಪ ಸಹಾಯ ಮಾಡಿ. ಸಹಾಯ ಮಾಡಲು ಸಾಧ್ಯವಾಗದಿದ್ದರೆ, ಅಣಕವನ್ನಂತೂ ಮಾಡಬೇಡಿ. ಅವಳ ಜೊತೆಯೇ ನಿಂತು ಸಹಾಯ ಮಾಡಬೇಕೆಂದೇನೂ ಇಲ್ಲ. ನಾನಿದ್ದೇನೆಂಬ ಭರವಸೆಯ ಮುಗುಳ್ನಗೆಯೊಂದೇ ಸಾಕು ಅವಳಲ್ಲಿ ಆತ್ಮವಿಶ್ವಾಸ ಮೂಡಿಸಲು. ಆ ಒಂದು ಮುಗುಳ್ನಗು ಅವಳ ಜೀವನದಲ್ಲಿ ಖುಷಿ ತರುವುದರಲ್ಲಿ ಸಂದೇಹವೇ ಇಲ್ಲ.

-ವಿಭಾ ವಿಶ್ವನಾಥ್