ಗುರುವಾರ, ನವೆಂಬರ್ 19, 2026

ಯುವಜನರ ಸಮಸ್ಯಾತ್ಮಕ ಮಾತು-ವರ್ತನೆಗಳಿಗೆ ಪರಿಹಾರವೇನು? (ಪುಸ್ತಕ ಯಾನ - 513)


ಪುಸ್ತಕದ ಶೀರ್ಷಿಕೆ : ಯುವಜನರ ಸಮಸ್ಯಾತ್ಮಕ ಮಾತು-ವರ್ತನೆಗಳಿಗೆ ಪರಿಹಾರವೇನು?

ಕೃತಿ ಪ್ರಕಾರ : ಮನೋವೈಜ್ಞಾನಿಕ ಮತ್ತು ಆಪ್ತ ಸಮಾಲೋಚನೆ

ಲೇಖಕರು : ಡಾ|| ಸಿ. ಆರ್. ಚಂದ್ರಶೇಖರ್

ಪ್ರಕಾಶಕರು : ನವಕರ್ನಾಟಕ ಪ್ರಕಾಶನ 

ಪ್ರಥಮ ಮುದ್ರಣ : 2018

ಮೂರನೇ ಮುದ್ರಣ : 2025 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 104

ಬೆಲೆ : 110 ರೂ. 


2018 ಅಕ್ಟೋಬರ್ 10ರ ವಿಶ್ವ ಮಾನಸಿಕ ಆರೋಗ್ಯ ದಿನದ ಘೋಷ ವಾಕ್ಯ

"ಬದಲಾಗುತ್ತಿರುವ ಪ್ರಪಂಚದಲ್ಲಿ

ಯುವಜನರ ಮಾನಸಿಕ ಆರೋಗ್ಯ"

ಈ ಸಂದರ್ಭದಲ್ಲಿ ಡಾ|| ಸಿ. ಆರ್. ಚಂದ್ರಶೇಖರ್ ಅವರು ಬರೆದಿರುವ ಕೃತಿ ಇದು. 


15 ರಿಂದ 20ರ ಹರೆಯದಲ್ಲಿ ವ್ಯಕ್ತಿಯ ಆಸೆ-ಆಕಾಂಕ್ಷೆಗಳು, ಆಲೋಚನೆಗಳು, ಪ್ರತಿಕ್ರಿಯೆ ಎಲ್ಲವೂ ನಿರ್ದಿಷ್ಟ ರೂಪ ಪಡೆದು ಗಟ್ಟಿಯಾಗುವ ಅವಧಿ. ಬಾಲ್ಯದ ಮುಗ್ಧತೆ ಕರಗಿ ಪ್ರೌಢತೆಗೆ ಕಾಲಿಡುವ ಸಮಯವದು. ಶಿಕ್ಷಣ, ಸಮಾಜ ಎಲ್ಲವೂ ವ್ಯಕ್ತಿಯ ವಿಕಸನದ ಹಾದಿಗೆ ಬಹಳ ಮುಖ್ಯವಾದದ್ದು. ಯುವಜನರ ಮಾತುಗಳಲ್ಲಿ-ವರ್ತನೆಗಳಲ್ಲಿ ಅಸಹಜತೆ, ಏರುಪೇರು ಕಂಡಾಗ ಕೆಲವೊಮ್ಮೆ ಅದು ಕುಟುಂಬಕ್ಕೆ ಅಥವಾ ಸಮಾಜಕ್ಕೆ ಅಹಿತವನ್ನುಂಟು ಮಾಡಿ ಸವಾಲಾಗುತ್ತದೆ. ವಿಚಿತ್ರವಾಗಿ, ವಿಕೃತವಾಗಿ ನಡೆದುಕೊಳ್ಳುವಾಗ ಆ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯುವುದು ಕುಟುಂಬದ, ಸುತ್ತಲಿನವರ ಆದ್ಯತೆಯೂ ಹೌದು. ಕರ್ತವ್ಯವೂ ಹೌದು. 


ಈಗಿನ ದಿನಮಾನಗಳಲ್ಲಿ ಜೆನ್-ಜಿ ಗಳನ್ನು ಕಾಣುತ್ತಿರುವಂತೆ ಪ್ರತಿ ಹಂತದಲ್ಲಿಯೂ ಯುವಜನತೆ ಒಂದಿಲ್ಲೊಂದು ಕಾರಣಗಳಿಗೆ ಹಿರಿಯರನ್ನು ಸೆಳೆಯುತ್ತಾರೆ. 


ಕೆಲವೊಮ್ಮೆ ಬುದ್ಧಿ ಸಾಮರ್ಥ್ಯಗಳಿದ್ದರೂ.. ವಿದ್ಯಾಭ್ಯಾಸದಲ್ಲಿ ಹಿಂದುಳಿಯುವುದು, ಕಲಿಯಬಾರದ್ದರ ಕಡೆಗೆ ಹೆಚ್ಚು ಆಸಕ್ತಿ ತಳೆಯುವುದು, ಸುಳ್ಳು-ಮೋಸ-ವಂಚನೆಗಳ ಹಾದಿ ಹಿಡಿಯುವುದು, ಗುರು-ಹಿರಿಯರ ಮಾತು, ಸಲಹೆಗಳನ್ನು ನಿರ್ಲಕ್ಷಿಸುವುದು, ಭಾವೋದ್ವೇಗಗಳಿಗೆ, ನಕಾರಾತ್ಮಕ ಆಲೋಚನೆಗಳಿಗೆ ಬೇಗ ಒಳಗಾಗುವುದು, ವಿವಾಹಪೂರ್ವ ಲೈಂಗಿಕ ಸಂಪರ್ಕಗಳು, ಧೂಮಪಾನ, ಮದ್ಯಪಾನ, ಮಾದಕ ವಸ್ತುಗಳ ಸೇವನೆಯ ಜೊತೆಗೆ ಹಿಂಸಾಚಾರ ಹಾಗೂ ಅಪರಾಧ ಪ್ರವೃತ್ತಿ.. ಇವು ಕೆಲವು ಸಮಸ್ಯೆಗಳಷ್ಟೇ.. 


ಯುವಜನತೆಗೆ ಮಾದರಿಯಾಗಬೇಕಾದ ವ್ಯಕ್ತಿಗಳು ಅಥವಾ ಪರಿಸರವೇ ನಕಾರಾತ್ಮಕ ಮಾದರಿಯಾಗಿ ಪ್ರಭಾವ ಬೀರುತ್ತಿದೆಯಾ ಎಂದೂ ಕೆಲವೊಮ್ಮೆ ಅನ್ನಿಸಿಬಿಡುತ್ತದೆ. ಈ ವಿಚಾರವನ್ನು ಸಹ ಇಲ್ಲಿ ಲೇಖಕರು ಪ್ರಸ್ತಾಪಿಸಿದ್ದಾರೆ. 


ಬಾಲ್ಯದಲ್ಲಿ ಮಕ್ಕಳ ಲಾಲನೆ-ಪಾಲನೆ, ಶಾಲೆಯಲ್ಲಿನ ಸರಿಯಾದ ಮಾರ್ಗದರ್ಶನ ಅವರನ್ನು ಆರೋಗ್ಯಕರವಾಗಿ ಹಾಗೂ ಸಮಾಜಮುಖಿಯಾಗಿ ಬೆಳೆಸಲು ಸಾಧ್ಯವಿದೆ ಎನ್ನುವುದರ ಜೊತೆಗೆ ಕೆಲವೊಂದಿಷ್ಟು ಪ್ರಕರಣಗಳು, ಯುವಜನರ ಸಮಸ್ಯಾತ್ಮಕ ವರ್ತನೆಗಳಿಗೆ ಪ್ರೇರಕ ಅಂಶಗಳು, ಮಾನಸಿಕ ರೋಗಗಳು ಜೊತೆಗೆ ಎಲ್ಲಕ್ಕಿಂತ ಮುಖ್ಯವಾಗಿ ಇಂತಹ ಸಮಸ್ಯಾತ್ಮಕ ಮಾತು-ವರ್ತನೆಗಳಿಗೆ ಪರಿಹಾರವೇನೆಂಬುದನ್ನು ಹೇಳಿದ್ದಾರೆ.


ಒಂದು ಪ್ರಕರಣದಲ್ಲಿ ಹುಡುಗಿ ಅಕ್ಕನ ಬಾಣಂತನದ ಸಂದರ್ಭದಲ್ಲಿ ಸಹಾಯಕ್ಕೆಂದು ಹೋದವಳು ಆಕೆಯ ಪತಿಯ ಜೊತೆಗೆ ಸಂಬಂಧವಿರಿಸಿಕೊಂಡು ವಿವಾಹದವರೆಗೂ ಹೋಗಿದ್ದು..

ಡ್ರಗ್ಸ್ ಗೆ ದಾಸನಾದ ಹುಡುಗ ಮನೆಯಲ್ಲಿಯೇ ಕಳ್ಳತನ ಮಾಡಿ ಸಿಕ್ಕಿಕೊಂಡು ಬದಲಾಗಲು ಪ್ರಯತ್ನಿಸುತ್ತಿರುವುದು..

ಪರೀಕ್ಷಾ ಸಂದರ್ಭದಲ್ಲಿ ಸರಿಯಾಗಿ ಓದಲು ಒಂದೆರಡು ಹೆಚ್ಚಿನ ಬುದ್ಧಿಮಾತು ಹೇಳಿದರೆ ಆತ್ಮಹತ್ಯೆಗೆ ಪ್ರಯತ್ನಿಸುವುದು...

ತೀರಾ ಮಂಕಾಗಿ ಒಂದೆಡೆ ಕುಳಿತು ಬಿಡುವುದು... 

ಮೂರ್ನಾಲ್ಕು ತಿಂಗಳು ವಿಪರೀತ ಮಾತನಾಡುವ ಹುಡುಗಿಯೊಬ್ಬಳು ಅತಿ ಲವಲವಿಕೆ, ಜೀವಂತಿಕೆಯಿಂದ ಬದುಕಿದರೆ ನಂತರದ ಮೂರ್ನಾಲ್ಕು ತಿಂಗಳು ತೀರಾ ಡಿಪ್ರೆಶನ್ ಗೆ ಹೋದಂತೆ ಎರಡು ವಿಪರೀತದ ನಡೆಗಳು..

ವಿಪರೀತ ಓಸಿಡಿ

ಯಾರೋ ಅದೃಶ್ಯ ವ್ಯಕ್ತಿಯೊಬ್ಬರು ತನ್ನೊಡನೆ ಇರುವಂತೆ, ಅವರೊಡನೆ ನಿರಂತರ ಸಂಭಾಷಣೆಯಲ್ಲಿ ತೊಡಗಿಕೊಂಡಿರುವುದು...

 ಹೀಗೆ 20 ರೀತಿಯ ವಿವಿಧ ಪ್ರಕರಣಗಳನ್ನು ಮೊದಲಿಗೆ ಹೇಳಿಬಿಡುತ್ತಾರೆ. ಕೆಲವೊಂದು ಪ್ರಕರಣಗಳಂತೂ ತೀರಾ ಕಳವಳ ಮೂಡಿಸುತ್ತವೆ.


ಇವುಗಳಿಗೆ ಪ್ರೇರಕ ಅಂಶಗಳು ಯಾವುದಿರಬಹುದು ಎಂದು ವಿಶ್ಲೇಷಿಸುತ್ತಾರೆ :

ಮೊದಲಿಗೆ ತಂದೆ-ತಾಯಿಗಳು : ತಂದೆ-ತಾಯಿಗಳ ನಡೆ, ಲಾಲನೆ-ಪಾಲನೆ ವಿಧಾನದಲ್ಲಿನ ಕೊರತೆ, ತಪ್ಪುಗಳು, ಮಕ್ಕಳೊಡನೆ ಸಂವಹನದಲ್ಲಿ ಏರುಪೇರು, ಹೆಚ್ಚಿನ ಸಮಯವನ್ನು ಅವರಿಗೆ ಕೊಡದಿರುವುದು ಅಥವಾ ಅತಿ ಶಿಸ್ತು, ದುಶ್ಚಟಗಳ ದಾಸರಾಗಿರುವುದು ಇಲ್ಲವೇ ಸಿಂಗಲ್ ಪೇರೆಂಟ್ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಾಕಷ್ಟು ಪ್ರೇರಕ ಅಂಶಗಳು ಸಿಗುತ್ತಾ ಹೋಗುತ್ತವೆ. 


ಇನ್ನು ಶಾಲೆ ಹಾಗೂ ಶಿಕ್ಷಕರ ವಿಚಾರವನ್ನು ನೋಡುವುದಾದರೆ ಮನೆಯವರನ್ನು ಬಿಟ್ಟು ಐದಾರು ಗಂಟೆಗಳ ಕಾಲ ಸಹಪಾಠಿ ಹಾಗೂ ಶಿಕ್ಷಕರ ಜೊತೆಗಿರುವ ಮಕ್ಕಳು ಅಲ್ಲಿಯ ವಾತಾವರಣದಿಂದಲೂ ಪ್ರಭಾವಿತರಾಗುತ್ತಾರೆ. ಸಂಪನ್ಮೂಲಗಳ ಕೊರತೆ ಇದ್ದಾಗ, ಶಾಲೆಯಲ್ಲಿ ಪಕ್ಷಪಾತವಿದ್ದಾಗ, ಕೆಟ್ಟ ವಿದ್ಯಾರ್ಥಿಗಳೆಂದು ಲೇಬಲ್ ಮಾಡಿದಾಗ ಹೀಗೆ ಹಲವಾರು ಕಾರಣಗಳಿಲ್ಲಿವೆ.


ಇನ್ನು ಮಾಧ್ಯಮಗಳ ವಿಚಾರಕ್ಕೆ ಬಂದರೆ ಹವ್ಯಾಸ, ಮನರಂಜನೆಯ ಮಾರ್ಗಗಳು ಯಾವುವು..? ಸರಿ-ತಪ್ಪು, ನ್ಯಾಯ-ಅನ್ಯಾಯಗಳ ವಿಶ್ಲೇಷಣೆ ಮಾಡುವಲ್ಲಿ ಸೋಲುವುದು, ಜೀವನಶೈಲಿಯ ಕುರಿತ ತಪ್ಪು ಮಾಹಿತಿ, ಹತೋಟಿ ಇಲ್ಲದೆ ಪ್ರೇರಣೆ ನೀಡುವ ದೃಶ್ಯ ಮಾಧ್ಯಮಗಳು, ಮೊಬೈಲ್ ಅಂತರ್ಜಾಲ ಹಲವು ಬಾರಿ ಮನೋವಿಕಾಸಕ್ಕೆ ಬದಲು ಮನೋವಿಕೃತಿಗೆ ಪ್ರೇರಣೆ ನೀಡುವುದು ವಿಪರ್ಯಾಸವೆನ್ನಿಸುತ್ತದೆ. 


"ಸಾಮಾಜಿಕ ಅವ್ಯವಸ್ಥೆಯಲ್ಲಿ, ಅನಾದಿಕಾಲದಿಂದಲೂ ಸಮಾಜದಲ್ಲಿ ಪಾಂಡವರ ಸಂಖ್ಯೆ ಕಡಿಮೆ. ಕೌರವರ ಸಂಖ್ಯೆ ಹೆಚ್ಚು!" ಎನ್ನುತ್ತಾರೆ. ಇದು ಕಟುವಾದರೂ ಸತ್ಯವಲ್ಲವಾ..!?

ಯುವಜನತೆ ಆಯ್ಕೆ ಮಾಡಿಕೊಳ್ಳುವ ಐಕಾನ್ ಗಳು ಹೆಚ್ಚಿನ ಪ್ರಭಾವ ಬೀರುತ್ತಾರೆ.


ವೈಯಕ್ತಿಕ ಕಾರಣಗಳನ್ನು ವೈದ್ಯರು, ಮನಃಶಾಸ್ತ್ರಜ್ಞರು ಮನೋವೈದ್ಯರಷ್ಟೇ ಗುರುತಿಸಲು ಸಾಧ್ಯ. ಚಿಕ್ಕಂದಿನಲ್ಲಿ ಮಗುವಿಗೆ ಪೌಷ್ಟಿಕ ಆಹಾರ ಸಿಗದೇ ಅಥವಾ ಗರ್ಭಪಾತಕ್ಕೆ ಪ್ರಯತ್ನಿಸಿದಾಗ ಅತ್ಯಲ್ಪ, ಅಲ್ಪ ಮಟ್ಟದಲ್ಲಿ ಮೆದುಳಿಗೆ ಹಾನಿಯಾಗಿದ್ದರೆ ಮುಂದೆ ಏಕಾಗ್ರತೆ ಇಲ್ಲದ, ಅತಿ ಚಂಚಲತೆ, ಹಠಮಾರಿತನ, ಆಕ್ರಮಣಶೀಲತನ ಕಾರಣವಾಗಬಹುದು. ಗುರುತಿಸಿ ತಕ್ಕ ಚಿಕಿತ್ಸೆ ನೀಡಬೇಕು. 


ಇನ್ನು ಮಾನಸಿಕ ರೋಗಗಳನ್ನು ನೋಡುವುದಾದರೆ..


ಮಂಕುತನ, ಸಂಶಯ ಪೀಡಿತ, ಭ್ರಮಾಧೀನ ಹಾಗೂ ವಿಪರೀತದ ನಡೆವಳಿಕೆಗಳನ್ನು ತೋರುವಾಗ ಅದು ಸ್ಕಿಜೋಫ್ರೀನಿಯಾ ಸಹ ಆಗಿರಬಹುದು.


ಅತಿ ಸಂತೋಷ ಅಥವಾ ಕೋಪ, ಅತಿ ಚಟುವಟಿಕೆ, ಬೈಪೋಲಾರ್ ಅಫೆಕ್ಟಿವ್ ಡಿಸಾರ್ಡರ್ ಆಗಿರಬಹುದು. 


ಆತಂಕ, ಗೀಳು ಅಥವಾ ಈಗಿನ ದಿನಗಳಲ್ಲಿ ಹೆಚ್ಚಾಗಿರುವ ಖಿನ್ನತೆಯಂತಹ ಕಾರಣಗಳೂ ಇರಬಹುದು.


ಅನೋರೆಕ್ಸಿಯಾ ಇದ್ದಲ್ಲಿ ತಾನು ದಪ್ಪಗಿದ್ದೇನೆ ಸಣ್ಣದಾಗಬೇಕು ಎನ್ನುವ ಆತಂಕದಿಂದ ಅಪೌಷ್ಟಿಕತೆಯಿಂದ ನರಳುತ್ತಿದ್ದರೂ ಆಹಾರ ಸೇವಿಸಲು ಒಪ್ಪದಷ್ಟು ಆಹಾರವನ್ನು ತೀವ್ರವಾಗಿ ಕಡಿಮೆ ಮಾಡುತ್ತಾ ಹೋಗುವುದು.. ಬಲವಂತವಾಗಿ ತಿನ್ನಿಸಿದರೆ ವಾಂತಿ ಮಾಡಿಕೊಳ್ಳುತ್ತಾರೆ. ಇದಕ್ಕೆ ವಿರುದ್ಧವಾಗಿ 'ಬುಲೀಮಿಯಾ' ದಲ್ಲಿ ಅತಿಯಾಗಿ ತಿನ್ನುತ್ತಾರೆ. 


ಪರೀಕ್ಷೆಯ ಒತ್ತಡ, ಭಯ, ಕಲಿಕಾ ತೊಂದರೆಗಳಿಗೆ.. ಆತಂಕಕ್ಕೊಳಗಾಗುವುದು, ಏಕಾಗ್ರತೆಯ ಕೊರತೆ, ತಲೆನೋವಿನ ಸಮಸ್ಯೆ, ನಕಾರಾತ್ಮಕ ಭಾವನೆಗಳು ಹೀಗೆ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬಹುದು.


ಪ್ರೀತಿ-ಪ್ರೇಮ, ಲವ್ ಅಫೇರ್ ಗಳು, ಲೈಂಗಿಕ ವರ್ತನೆಯ ಸಮಸ್ಯೆಗಳು, ವಿವಾಹಪೂರ್ವ ಲೈಂಗಿಕ ಚಟುವಟಿಕೆಗಳು, ವಿಕೃತ ಆಸೆಗಳ ನಾನಾರೂಪಗಳು ಭಾವಿಸುವ ಪರಿ ಹಾಗೂ ಅದರ ವಿಷಮ ಪರಿಣಾಮಗಳಿಗೆ ಒಳಗಾಗುವ ಯುವಜನರನ್ನು ಇಲ್ಲಿ ತೋರಿದ್ದಾರೆ.


ಇಂತಹ ಸಾಕಷ್ಟು ಸಮಸ್ಯೆಗಳ ಕುರಿತು ಚರ್ಚಿಸಿದ್ದಾರೆ.


ಇದಕ್ಕೆ ಹಲವಾರು ಪರಿಹಾರಗಳನ್ನು ಸೂಚಿಸಿದ್ದಾರೆ.

ಸಮಸ್ಯಾತ್ಮಕ ವರ್ತನೆ ಕಂಡುಬಂದಲ್ಲಿ ತಕ್ಷಣಕ್ಕೆ ಶಿಕ್ಷೆ ನೀಡುತ್ತೇವೆ ಎನ್ನುವ ಭಾವ ಬೇಡ ಹಾಗೂ ಹಾಗೆ ಮಾಡುವವರನ್ನು ತಡೆಯಬಹುದು. ಯುವಜನರು ಶಿಕ್ಷೆ ಕೊಡುವುದರಿಂದ ಮತ್ತಷ್ಟು ಹಠಮಾರಿಗಳಾಗುತ್ತಾರೆ. ಕೋಪ, ದ್ವೇಷ ಸಾಧಿಸುತ್ತಾರೆ. ಬದಲಾಗಿ ತಿದ್ದಿಕೊಳ್ಳಲು ಅವರಿಗೆ ಮತ್ತೊಂದು ಅವಕಾಶವನ್ನು ನೀಡಬೇಕಿದೆ ಎನ್ನುವ ಮಾತು ಪರಿಣಾಮಕಾರಿ ಎನ್ನಿಸಿತು.


ಮನೋವೈದ್ಯರು, ಮನಃಶಾಸ್ತ್ರಜ್ಞರು, ಆಪ್ತ ಸಮಾಲೋಚಕರ ನೆರವು ಪಡೆಯುವ ಅವಶ್ಯಕತೆ ಇದ್ದಲ್ಲಿ ಅದಕ್ಕೆ ಹಿಂಜರಿಯುವುದಂತೂ ಬೇಕಿಲ್ಲ. ಔಷಧಿಯ ಅವಶ್ಯಕತೆಯನ್ನು ಮನೋವೈದ್ಯರೇ ನಿರ್ಧರಿಸುತ್ತಾರೆ. ಅದಕ್ಕೆ ಅವರು ಬದ್ಧರಾಗಿರಬೇಕಷ್ಟೇ..


ಕಾಗ್ನಿಟಿವ್ ಬಿಹೇವಿಯರ್ ಥೆರಪಿ : ಅರಿವನ್ನು ಹೆಚ್ಚಿಸಿ, ನಕಾರಾತ್ಮಕ ಚಿಂತನೆಯನ್ನು ಬದಲಿಸಿ, ಸಕಾರಾತ್ಮಕ ಚಿಂತನೆಯನ್ನು ಪ್ರೋತ್ಸಾಹಿಸಿ ತಿದ್ದುಪಡಿ ತರುವ ತರಬೇತಿಯಿದು. ಇದರ ಜೊತೆಗೆ ವರ್ತನ ಚಿಕಿತ್ಸೆ ಅಂದರೆ ಬಿಹೇವಿಯರ್ ಥೆರಪಿಯ ಕುರಿತಾಗಿಯೂ ಹೇಳುತ್ತಾರೆ.


ಇಲ್ಲಿನ ಎಷ್ಟೋ ವಿಚಾರಗಳು ನನಗೆ ಹೊಸ ವಿಚಾರಗಳು. ಹಾಗೆಂದು ಇಲ್ಲಿನ ಎಲ್ಲವನ್ನೂ ರೂಢಿಸಿಕೊಳ್ಳುವುದು ಸುಲಭವಲ್ಲ ಹಾಗೂ ಯುವಜನರನ್ನು ಬದಲಾಯಿಸಲು ಸಾಕಷ್ಟು ತಾಳ್ಮೆಯೂ ಬೇಕಿದೆ. 


ಇಂದಿನ ಯುವಜನತೆ ಹೇಗಿದೆ ಎಂಬುದನ್ನು ಮಾತ್ರ ಹೇಳುವವರು ಹೇಗೆ ವರ್ತಿಸುತ್ತಾರೆಂದರೆ.. ಲೇಖಕರು ಆ ಕುರಿತು ಹೇಳಿರುವ ಮಾತು ಸಾಕಷ್ಟು ಅರ್ಥಪೂರ್ಣವಾಗಿದೆ.

"ತಲೆಯ ಮೇಲೆ ಸುರಿದ ನೀರು ಕಾಲ ಬುಡಕ್ಕೆ ಬರುವುದೆಂಬಂತೆ ಇಂದಿನ ಯುವ ಜನತೆಯನ್ನು ತೆಗಳುವ ಪೋಷಕರು, ಅಧ್ಯಾಪಕರು ಹಿತೈಷಿಗಳೆಲ್ಲರೂ ತಮ್ಮ ಪಾತ್ರವನ್ನು ಮಾತ್ರ ಮರೆಯುತ್ತಾರೆ."


ತಂದೆ-ತಾಯಿಗಳು, ಶಿಕ್ಷಕರು ಹಾಗೂ ಹಿತೈಷಿಗಳು ಹೀಗೆ ಎಲ್ಲರೂ ಓದಬೇಕಾದ ಕೃತಿ ಇದು. ಪುಟ್ಟ ಪುಸ್ತಕ ವಾದರೂ.. ಹಿರಿದರ್ಥ ಕೊಡುತ್ತದೆ. 


ಪ್ರೇರಕ ಅಂಶಗಳು, ಮಾನಸಿಕ ರೋಗಗಳು ಹಾಗೂ ಪರಿಹಾರಗಳನ್ನು ಓದಿದ ನಂತರ ಇಲ್ಲಿನ ಪ್ರಕರಣಗಳನ್ನು ಮತ್ತೊಮ್ಮೆ ಓದಿದಲ್ಲಿ.. ಓದುಗರು ಸಹ ಸಮಸ್ಯೆಗಳನ್ನು ಸುಲಭವಾಗಿ ಗುರುತಿಸಿ ಇಂತಹದಕ್ಕೆ ಇಂತಹ ಪರಿಹಾರ ಎಂದು ಹೇಳುವಷ್ಟರ ಮಟ್ಟಿಗೆ ಪರಿಣಾಮಕಾರಿಯಾದ ಮಾರ್ಗದರ್ಶನ ಇದೆ ಇಲ್ಲಿ. ಮೊದಲಿಗೆ ಕೇವಲ ಪ್ರಕರಣಗಳನ್ನಷ್ಟೇ ಚರ್ಚಿಸಿದ್ದಾರೆ. ಅವುಗಳಿಗೆ ಪರಿಹಾರಗಳನ್ನು ಸೂಚಿಸಬಹುದಿತ್ತಲ್ಲವೇ ಎಂದುಕೊಂಡೆನಾದರೂ ಲೇಖಕರ ಆಶಯ ಮಾರ್ಗದರ್ಶನದಲ್ಲಿದೆ ಎನ್ನಿಸಿತು. ಈ ಕೃತಿ ಅಥವಾ ಇಂತಹ ಕೃತಿಯನ್ನು ಓದಿ ಒಬ್ಬರಾದರೂ ಬದಲಾಗುತ್ತಾರೆ.. ಕನಿಷ್ಠಪಕ್ಷ ಆಲೋಚಿಸುವ ಶೈಲಿಯಲ್ಲಿ. ಅಂತಹ ಬದಲಾವಣೆಯೇ ಈ ಹಾಗೂ ಈ ರೀತಿಯ ಕೃತಿಗಳೆಲ್ಲದರ ಗೆಲುವು ಎನ್ನಿಸಿತು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ