ಭಾನುವಾರ, ಜುಲೈ 12, 2026

ಮಡಿಲು (ಪುಸ್ತಕ ಯಾನ - 466)


ಪುಸ್ತಕದ ಶೀರ್ಷಿಕೆ : ಮಡಿಲು

ಲೇಖಕರು : ಬಸವರಾಜ ಹೊನಗೌಡರ 

ಪ್ರಕಾಶಕರು : ಕಲ್ಲಚ್ಚು ಪ್ರಕಾಶನ

ಪ್ರಥಮ ಮುದ್ರಣ : 2022

ಪುಟಗಳು : 128

ಬೆಲೆ : 130 ರೂ.


ಮಡಿಲು ಕಥಾ ಸಂಕಲನ 20 ಕಥೆಗಳ ವೈವಿಧ್ಯಮಯ ಕಥಾಗುಚ್ಚ. ಸಮಾಜದ ಹಲವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಾ ಹಲವು ಆಯಾಮಗಳನ್ನು ತಮ್ಮ ಕಥೆಗಳಲ್ಲಿ ತೆರೆದಿಟ್ಟಿದ್ದಾರೆ. ಮಡಿಲು ಇವರ ಮೊದಲ ಕಥಾ ಸಂಕಲನ. 


ದಕ್ಷಿಣಕ್ಕೆ ಬಾಗಿಲು : ವಾಸ್ತು ತಜ್ಞರನ್ನು ಕೇಳಿ ವಾಸ್ತು ಪ್ರಕಾರ ಮನೆ ಕಟ್ಟಿಸಿದರೂ.. ಈಗ ಉಳಿದವರು ದಕ್ಷಿಣಕ್ಕೆ ಬಾಗಿಲು ಇರಬಾರದು. ವಾಸ್ತು ತಪ್ಪು ಎಂದು ಸಲಹೆ ಕೊಡಲು ಶುರು ಮಾಡಿದಾಗ ವಾಸ್ತುದೋಷಕ್ಕೆ ಪರಿಹಾರ ಮಾಡಿಸಿದರಾದರೂ ಜನರ ಬಾಯಿಗೆ ಪರಿಹಾರ ಮಾಡಿಸಲು ಸಾಧ್ಯವೇ..? ವೈಜ್ಞಾನಿಕ ಮನೋಭಾವ, ವೈಚಾರಿಕತೆ ಹಾಗೂ ಮೂಢನಂಬಿಕೆಗಳ ಕುರಿತ ಕಥೆ ಇಲ್ಲಿದೆ.


ಅದೃಷ್ಟ ನಕ್ಷತ್ರ : ಊರಿನಲ್ಲಿ ದೊಡ್ಡ ಕುಟುಂಬದ ಹಿರಿಯ ಮಗನಾಗಿದ್ದ ರಾಜೀವ ಪ್ರೇಮ ವಿವಾಹವಾಗಿದ್ದ. ಮಕ್ಕಳಾಗದ್ದರಿಂದ ಈಗ ಸುಜಾತರಿಗೆ ಕಿರುಕುಳ ಶುರುವಾದಾಗ ಪತಿ-ಪತ್ನಿಯರು ಮನೆ ಬಿಟ್ಟು ಹೊರಡುತ್ತಾರೆ. ರೈಲಿನಲ್ಲಿ ಅವರಿಗೆ ಸಿಕ್ಕ ಅದೃಷ್ಟ ನಕ್ಷತ್ರದ ಕತೆ ಇಲ್ಲಿದೆ.


ತಿರುಗುಬಾಣ : ಡಾಕ್ಟರ್ ವೃತ್ತಿಯಲ್ಲಿದ್ದ ವರನನ್ನೇ ಮಗಳ ಆಸೆಯಂತೆ ಅವಳಿಗೆ ವಿವಾಹ ಮಾಡಿಸಿದ ತಂದೆ ಮುಂದೆ ಮಗಳ ಕೌಟುಂಬಿಕ ಕಲಹದ ನಿವಾರಣೆಗೆಂದು ಹೋದಾಗ ಅವರಿಗೆ ಅದು ತಿರುಗುಬಾಣವಾಗಿದ್ದೇಗೆ..? ಓದಿ ನೋಡಿ.


ಕರುಣಾಶ್ರಮ : ತಾನೇ ಕಟ್ಟಿಸಿದ ಅರಮನೆಂತಹ ಮನೆಯಲ್ಲಿ ಸಿಗದ ಸುಖದ ಭಾವ ಈಗ ಕರುಣಾಳು ವೃದ್ಧಾಶ್ರಮದಲ್ಲಿ ಸಿಗುತ್ತಿತ್ತು. ತಾನೇ ಕಟ್ಟಿಸಿದ ಮನೆಯಿಂದ ಮಕ್ಕಳೇ ತನ್ನನ್ನು ಹೊರ ದಬ್ಬಿದಾಗ ಆದ ಜ್ಞಾನೋದಯ ಇಲ್ಲಿಯವರೆಗೂ ಕರೆತಂದಿತ್ತು. ಅಷ್ಟಕ್ಕೂ ಭಾಸ್ಕರನ ಕಥೆ ಏನು? ಕರುಣಾಶ್ರಮ ಹೇಗಿತ್ತು..? ಈಗ ಆತನ ಬದುಕು ಕಳೆಯುತ್ತಿರುವುದು ಯಾರೊಂದಿಗೆ ಓದಿ ನೋಡಿ.


ಕ್ಷಮಿಸಿ ಬಿಡು : ಶ್ರೇಷ್ಠ ಗಾಯಕಿ ಸರಸ್ವತಿ ಹುಟ್ಟು ಕುರುಡಿಯಾಗಿದ್ದವಳು. ಆದರೆ, ಸಾಧನೆಗೆ ಅಂಧತ್ವ ಅಡ್ಡಿಯಾಗಲಿಲ್ಲ. ಅವಳ ಸಂಗೀತ ಕಚೇರಿಗೆ ಹರಸಾಹಸ ಪಟ್ಟು ಟಿಕೆಟ್ ಪಡೆದಿದ್ದ ಭರತ-ಭಾಗ್ಯಶ್ರೀ ದಂಪತಿಗಳು ಅವಳನ್ನು ವೈಯಕ್ತಿಕವಾಗಿ ಭೇಟಿಯಾಗಲು ಹೋಗಿದ್ದರು. ಇತ್ತೀಚೆಗಷ್ಟೇ ಸಂಗೀತವೆಂದರೆ ಪಂಚಪ್ರಾಣ ಎನ್ನುವಷ್ಟು ಹವ್ಯಾಸವಾಗಿಸಿಕೊಂಡಿದ್ದವರ ಜೀವನಗಾಥೆ ಹಾಗೂ ಕ್ಷಮೆಗೂ ಯಾವ ಸಂಬಂಧವಿತ್ತು..? 


ಆಶೀರ್ವಾದ : ಗಿರೀಶ ದಂಪತಿಗಳು ಈಗ ಎಲ್ಲಾ ಸೌಕರ್ಯಗಳಿದ್ದ ವೃದ್ಧಾಶ್ರಮದಲ್ಲಿದ್ದರು. ತಮ್ಮ ತಪ್ಪಿನ ಅರಿವಾಗುತ್ತಿತ್ತು ಹಾಗೂ ಅದೇ ಕಾಡುತ್ತಿತ್ತು. ಮೊದಲ ಇಬ್ಬರು ಮಕ್ಕಳಿಗೆ ಹೆಚ್ಚು ಮನ್ನಣೆ ಕೊಟ್ಟದ್ದು ಹಾಗೂ ಮುಂದಿನ ಬದುಕು ಜೊತೆಗೆ ಕಿರಿಯ ಮಗ ಸಂತೋಷ ಹಾಗೂ ಸೊಸೆಯನ್ನು ಮನೆಯಿಂದ ಹೊರ ಹಾಕಿದ ವಿಚಾರವೆಲ್ಲವೂ ನೆನಪಾಗಿದ್ದು ಮಗ ಸಂತೋಷನ ಹುಟ್ಟುಹಬ್ಬದಂದು ಅಂದು ಸಂತೋಷನ ಭೇಟಿಯಾದ ಸಂದರ್ಭ ಹೇಗಿತ್ತು ಅವರ ಮುಂದಿನ ಬದುಕು ಏನಾಯ್ತು..?


ಧರ್ಮ : ದೇಶದ ಸ್ವಾತಂತ್ರ್ಯ ಬಂದ ನಂತರವೂ ಹಿಂದುಳಿದ ಹಳ್ಳಿಯಾಗಿದ್ದ ಭಾರತೀಪುರದಲ್ಲಿ ಬಡವರಿದ್ದರೂ.. ಎಲ್ಲಾ ಧರ್ಮ, ಜಾತಿಗಳ ಬೀಡಾಗಿ ಸಾಮರಸ್ಯದ ಬಾಳ್ವೆ ಮಾಡುತ್ತಿದ್ದರು. ಆದರೆ, ಈಗ ಕೋಮುದಳ್ಳುರಿಯ ದಿನಗಳು. ಹಿಂದಿನಿಂದ ಇಂದಿನವರೆಗಿನ ಕುಟುಂಬಗಳೆರಡರ ಚಿತ್ರಣವನ್ನು ಇಲ್ಲಿ ಕಾಣಬಹುದು.


ಮಡಿಲು : ಈ ಕಥಾ ಸಂಕಲನದ ಶೀರ್ಷಿಕೆಯೂ ಆಗಿರುವ ಈ ಕಥೆಯಲ್ಲಿ ಮಡಿಲು ತುಂಬುವ ಮಗು ಮನೆಯ ಬೆಳಕಾಗಿ ಬಂದಿತ್ತು. ಬರಿದಾಗಿದ್ದ ಮಡಿಲಿಗೆ ಕಾರಣರು ಯಾರು..? ಪ್ರಕೃತಿಯ ಮಡಿಲಲ್ಲಿ ಮಕ್ಕಳ ಕನಸಿಗೆ ನೀರೆರೆಯುತ್ತಿದ್ದ ಮಡಿಲು ಆಶ್ರಮ ಎಷ್ಟೋ ಮಕ್ಕಳ ಪಾಲಿಗೆ ಬೆಳಕಾಗಿತ್ತು. ಜೊತೆಗೆ ಮಕ್ಕಳು ಹಲವರ ಬರಿದಾದ ಮಡಿಲು ಸೇರಿ ಅವರ ಬದುಕನ್ನು ಬೆಳಕಾಗಿಸುತ್ತಿದ್ದರು. ಹಿತವಾದ ಭಾವ ನೀಡುವ ಕಥೆ.


ಮಿಡಿದ ಹೃದಯ : ಮನಸ್ಸಿನ ನೋವಿಗೆ ಮುಲಾಮು ನೀಡುವ ಸಂಗೀತದ ಸವಿಭಾವವಿದ್ದರೂ.. ಅದರ ಜೊತೆಗೊಂದು ಪುಟ್ಟ ನೋವಿತ್ತು. ಆದರೆ, ಸಂಗೀತ ಹಾಗೂ ಸಂಗಾತಿಯ ಸಾಂಗತ್ಯ ಎರಡೂ ಆ ನೋವೆಲ್ಲವನ್ನೂ ಮರೆಸುವಷ್ಟು ಹಿತವಾಗಿತ್ತು. ತಂದೆಯ ಆಸೆಯಂತೆಯೇ ಪರಿಣಿತಿ ಸಾಧಿಸಿದರೂ ಆ ಕ್ಷೇತ್ರದಲ್ಲಿ ಮುನ್ನಡೆಯಲಾಗದೆ ಸಂಗೀತ ಲೋಕಕ್ಕೆ ಕಾಲಿಟ್ಟಿದ್ದ ಸಂಗೀತಾಳ ಜೀವನದ ಕಥೆ ಇಲ್ಲಿದೆ.


ವಿದ್ಯಾರೇಖೆ : ಈ ಕಥಾ ಸಂಕಲನದಲ್ಲಿ ನನಗೆ ಬಹಳ ಇಷ್ಟವಾದ ಕಥೆ ಇದು. ಚಿಕ್ಕಂದಿನಲ್ಲಿ ಹಳ್ಳಿಗೆ ಬಂದಿದ್ದ ಒಬ್ಬನಿಂದ ಗೌಡರು ತಮ್ಮ ಮಕ್ಕಳ ಹಸ್ತ ಭವಿಷ್ಯ ಹೇಳಿದಾಗ ಮಗನಿಗೆ ಹಸ್ತದಲ್ಲಿ ಸರಸ್ವತಿ ನೆಲೆಸಿದ್ದಾಳೆಂದೂ.. ಮಗಳಿಗೆ ವಿದ್ಯಾರೇಖೆಯೇ ಇಲ್ಲವೆಂದು ಹೇಳಿದ್ದ ಭವಿಷ್ಯ ಸುಳ್ಳಾಗಿ ಎರಡೂ ಅದಲು-ಬದಲಾದಂತಿರುವ ಈ ಕಥೆ ಚಂದದ ಸಂದೇಶವನ್ನು ನೀಡುತ್ತಿದೆ.


ಅರಮನೆಗಿಂತ ನೆರೆಮನೆ ಲೇಸು : ಗಂಡನನ್ನು ಕಳೆದುಕೊಂಡು ಇಡೀ ವಠಾರವೇ ತನ್ನ ಸಂಸಾರ ಎಂಬಂತೆ ಬದುಕುತ್ತಿದ್ದ ಸೀತಜ್ಜಿ ಅನುಭವದ ಖನಿ, ಜ್ಞಾನದ ಭಂಡಾರ ಹಾಗೂ ತಾಳ್ಮೆಯ ಮೂರ್ತಿ. ಎಲ್ಲರೂ ಗೌರವಿಸುವಂತಹ ಉನ್ನತ ವ್ಯಕ್ತಿತ್ವದ ಸೀತಜ್ಜಿ ಈ ಕಥೆಯಲ್ಲಿ ಸೆಳೆಯುತ್ತಾಳೆ.  ಸಿದ್ಧನಿಗೆ ಹಣದ ಮದ ಏರಿದಾಗಿನ ಸಂದರ್ಭ ಹಾಗೂ ಎಲ್ಲರೆದುರು ಮುಖಭಂಗವಾಗಿದ್ದ ಸಂದರ್ಭದಲ್ಲಿ ಅಜ್ಜಿ ಅದನ್ನು ನಿಭಾಯಿಸಿ, ಪ್ರೀತಿಯಿಂದ ಮತ್ತೊಂದು ಬದುಕಿನತ್ತ ಆಶಾಕಿರಣವನ್ನು ತೋರಿದ ಕಥೆ ಇಲ್ಲಿದೆ. ಸೀತಜ್ಜಿಯಂತಹ ನೆರೆಯವರಿದ್ದರೆ ಎಷ್ಟು ಚಂದವಲ್ಲವೇ ಎನಿಸುತ್ತದೆ.


ಸಂಬಂಧಗಳು : ಯುವ ಉದ್ಯಮಿಯಾಗಿದ್ದ ಭರತನ ಸನ್ಮಾನದ ಸಂದರ್ಭದಲ್ಲಿ ಆತನ ಚಿಕ್ಕಪ್ಪ ಹಾಗೂ ಸಂಬಂಧಿಗಳೆಲ್ಲ ಆತನ ಗುಣಗಾನ ಮಾಡಿ ಆತನಿಗೆ ತಾವು ಬಹಳಷ್ಟು ಸಹಕರಿಸಿದ್ದೇವೆ ಎಂದು ಹೇಳಿದ್ದರು. ಅದರ ಸತ್ಯಾಸತ್ಯತೆ ಹಾಗೂ ಭರತನ ಯಶಸ್ಸಿನ ಕಥೆ ಇಲ್ಲಿದೆ.


ಕೀರ್ತಿಗೊಬ್ಬಳು ಮಗಳು : ಕೀರ್ತಿ ಎತ್ತರಕ್ಕೇರಿದರೂ ಅದು ಅವಳಿಗೆ ತನ್ನ ತಂದೆಯ ಪರಿಶ್ರಮದ ಫಲವೆಂಬ ಗೌರವ ಯಾವಾಗಲೂ ಇತ್ತು. ಅವಳ ತಂದೆಯೇ ಅವಳ ಹೀರೋ. ಅವಳ ತಾಯಿಯ ನೆನಪಿನ ಜೊತೆಗೆ ಕಹಿ ಅನುಭವ ಅವಳಿಗಿದ್ದರೂ ಬದುಕಿನಲ್ಲಿ ಪ್ರಬುದ್ಧಳಾಗಿ ನಡೆಯುವ ಅವಳ ನಡುವೆ ಕೀರ್ತಿಯ ತಂದೆ ಕೊಟ್ಟ ಸಂಸ್ಕಾರ ಹಾಗೂ ಕೀರ್ತಿ ಇಬ್ಬರನ್ನೂ ಇಷ್ಟವಾಗುವಂತೆ ಮಾಡುತ್ತದೆ.


ನಿಂಬೆಹಣ್ಣಿನ ಪವಾಡ : ಮಂಜುನಾಥನ ನಾಸ್ತಿಕತೆ ಆರ್ಥಿಕತೆಯಾದ ಕಥೆ ಇಲ್ಲಿದ್ದರೂ ಅದಕ್ಕೆ ಕಾರಣವಾದ ನಿಂಬೆಹಣ್ಣಿನ ಪವಾಡ ಹಾಗೂ ರಾಘವೇಂದ್ರ ಮಾಮಾರ ಕೈವಾಡವೂ ಇಲ್ಲಿದೆ. ರಾಘವೇಂದ್ರ ಮಾಮಾ ರ ಮಹಿಮೆ ಏನಿದೆ ಓದಿ ನೋಡಿ.


ಬಾಲ್ಯ ವಿವಾಹ : 14 ವರ್ಷದ ತನ್ನ ಇದು ಮಗಳಿಗೆ ಮದುವೆ ಮಾಡಲು ಹೊರಟಿದ್ದ ಶಿವಾನಂದನ ಮದುವೆಯ ಸಂಭ್ರಮ ನಿಂತಿದ್ದಕ್ಕೆ ಕಾರಣರು ಯಾರು..? ಆತ ಮಗಳ ಬಾಲ್ಯ ವಿವಾಹವನ್ನು ನೆರವೇರಿಸಲು ಹೊರಟಿದ್ದರ ಹಿಂದಿನ ಕಥೆ ಏನು..? ಬಾಲ್ಯ ವಿವಾಹದಿಂದ ತಪ್ಪಿಸಿಕೊಂಡ ಹುಡುಗಿ ರಾಣಿಯ ಬದುಕು ಮುಂದೆ ಏನಾಯಿತು ..?


ವಸಂತನಾಗಮನ : ಸಾನ್ವಿಕ ಹಾಗೂ ಸಾಗರ್ ಇಬ್ಬರೂ ಪ್ರೇಮ ವಿವಾಹವಾಗಿದ್ದರು. ಮಗುವಿನ ನಂತರ ಇಬ್ಬರ ಬದುಕಲ್ಲಿಯೂ ಬಂದ ಭಿನ್ನಾಭಿಪ್ರಾಯಗಳು, ಇಬ್ಬರನ್ನೂ ದೂರ ಮಾಡಿದ ಬಗೆ ಅವರಿಗೆ ಕಲಿಸಿದ ಪಾಠ ಯಾವುದು..? ಮತ್ತೆ ಅವರ ಬದುಕಲ್ಲಿ ವಸಂತನ ಆಗಮನ ಹೇಗಾಯಿತು..?


ತನ್ನರಿವು : 25 ವರ್ಷದ ಗಿರೀಶ ಒಂದು ಟಿವಿ ಶೋ ನೋಡಿದ ನಂತರ ಉದ್ಯೋಗವಿಲ್ಲದ, ಆತ್ಮವಿಶ್ವಾಸವಿಲ್ಲದ, ಧೈರ್ಯವಿಲ್ಲದ ತನ್ನ ಬದುಕನ್ನು ಬದಲಿಸಿಕೊಂಡ ಅರಿವಿನ ಕಥೆ ಇದು. ಪ್ರೇರಣೆಯ ಕಥೆಯೂ ಹೌದು. ಜೊತೆಗೆ ಮಕ್ಕಳಲ್ಲಿ ತಂದೆ-ತಾಯಿಗಳು ಆತ್ಮವಿಶ್ವಾಸವನ್ನು ಮೂಡಿಸಬೇಕಾದ ಅಗತ್ಯತೆಯನ್ನು ಹೇಳುತ್ತದೆ. ತಂದೆ-ತಾಯಿಗಳಿಗೂ ಇಲ್ಲೊಂದು ಪಾಠವಿದೆ.


ಬ್ರೇಕಿಂಗ್ ನ್ಯೂಸ್ : ಈಗ ಬ್ರೇಕಿಂಗ್ ನ್ಯೂಸ್ ಗಳ ಕಾಲ. ಸತ್ಯಾಸತ್ಯತೆಗಿಂತಲೂ ವಿಚಾರ ಹರಡುವುದು ಹೆಚ್ಚು. ಮೇಲಧಿಕಾರಿಯಿಂದ ಮಹಿಳಾ ಸಿಬ್ಬಂದಿಯ ಮೇಲೆ ಅತ್ಯಾಚಾರ ಎಂಬ ಬ್ರೇಕಿಂಗ್ ನ್ಯೂಸ್ ಹರಡಿದುದರ ಹಿಂದಿನ ಸತ್ಯಾಸತ್ಯತೆ ಏನಿತ್ತು..? ಪ್ರಾಮಾಣಿಕರಾದ ಈ ಇಬ್ಬರು ನೌಕರರು ಯಾರೋ ಹೆಣೆದ ಜಾಲದಲ್ಲಿ ಬಿದ್ದುದೇಕೆ..? ಇಬ್ಬರಲ್ಲಿ ಒಬ್ಬರಾದರೂ ಅಪ್ರಾಮಾಣಿಕರಾಗಿದ್ದರೆ ಪರಿಸ್ಥಿತಿ ಎಷ್ಟು ಬದಲಾಗುತ್ತಿತ್ತಲ್ಲವಾ ಎನ್ನಿಸಿತು.


ಮೋಸ : ರಾಮಸಿದ್ದ ತನ್ನ ಅನಾರೋಗ್ಯದ ನಂತರ ತಾನು ಮೋಸ ಹೋದ ಒಂದು ಕಥೆಯನ್ನು ತನ್ನ ಹೋಟೆಲಿಗೆ ಬಂದ ಗಿರಾಕಿಗಳಿಗೆ ಹೇಳುತ್ತಿದ್ದ. ಅದಕ್ಕೆ ಕಾರಣ ಮತ್ತೊಬ್ಬರು ಮೋಸ ಹೋಗಬಾರದೆಂದು. ಅವನ ಈ ಕಾಳಜಿ, ಒಳ್ಳೆಯ ಮನಸ್ಸು ಇಷ್ಟವಾಗುತ್ತದೆ. ಆತನಿಗೆ ಮೋಸವಾಗಿದ್ದು ಹೇಗೆ ಓದಿ ನೋಡಿ.


ಪ್ರೇಮಕಾವ್ಯ : ನಿಷ್ಠಾವಂತ, ಆದರ್ಶ ಶಿಕ್ಷಕರಾದ ಅಜ್ಜ-ಅಜ್ಜಿಯ ಪ್ರೇಮ ಕಾವ್ಯ ಮೊಮ್ಮಗಳಲ್ಲಿ ಅಚ್ಚಾಗುವ ಪರಿ ಹಾಗೂ ನವಿರಾದ ಈ ಪ್ರೇಮಗಾಥೆ ಓದುಗರಿಗೂ ಇಷ್ಟವಾಗುವಂತಿದೆ. 


ಸರಳ, ಸುಲಲಿತವಾಗಿ ಓದಿಸಿಕೊಂಡು ಹೋಗುವ ಈ ಕಥೆಗಳು ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ಹಾಗೂ ಸ್ಪೂರ್ತಿ, ಪ್ರೇರಣೆಯನ್ನು ನೀಡುವಂತಿವೆ. ಭಾಷಾ ಬಳಕೆ ಇಷ್ಟವಾಯಿತು. ಸಮಾಜದ ಹಲವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರೂ.. ನೀಡಬೇಕಾದ ಸಂದೇಶ ಸ್ಪಷ್ಟವಾಗಿ ಸಕಾರಾತ್ಮಕವಾಗಿದೆ. ಪರಿವರ್ತನೆಯ ಹಾದಿಗೆ ಬೆಳಕು ಚೆಲ್ಲಿರುವ ಹಲವಾರು ವೈವಿಧ್ಯಮಯ ಕಥಾವಸ್ತುಗಳನ್ನೊಳಗೊಂಡ ಕಥಾ ಸಂಕಲನದ ಚೆಂದದ ಓದು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ