ಬುಧವಾರ, ಡಿಸೆಂಬರ್ 5, 2018

'ನಾನು' ಸತ್ತರೆ..

ಸುನಿಧಿಯ ಆಲೋಚನೆ ಹಿಂದಕ್ಕೋಡಿತ್ತು. ಅದರ ಹಿಂದಿನ ಪ್ರಶ್ನೆ ಇದ್ದದ್ದು.. "'ನಾನು' ಸತ್ತರೆ..?

ತಾನು ಬಂದದ್ದು ತುಂಬಿದ ಸಂಸಾರದ ಸೊಸೆಯಾಗಿಯೇ.. ಹಿಂದೆಂದೂ ಇಲ್ಲದ ಹೊಸ ರೀತಿಯ ಭಾವನೆಗಳು, ಈ ಕುಟುಂಬವನ್ನು ನೋಡಿದೊಡನೆ ಉಂಟಾಯಿತು. ಬಹುಶಃ ನನ್ನಮ್ಮ ನೋಡಿ ಮಾಡಿದ ಮದುವೆಯೇ ಆಗಿದ್ದಿದ್ದರೆ ಅಮ್ಮ ಹೇಳುವ ಹಾಗೆಯೇ  ಹೈ ಸೊಸೈಟಿ ಫ್ಯಾಮಿಲಿಯ, ಯಾವುದೋ ಸಾಫ್ಟ್ವೇರ್ ಗಂಡ ಸಿಕ್ಕಿರುತ್ತಿದ್ದ. ಆದರೆ ಇದು ನಾನೇ ಬೇಕೆಂದು ಆರಿಸಿಕೊಂಡ ಸಂಬಂಧವಲ್ಲವೇ..?

ಬೇಕೆಂದಾಗ ಹೊಕ್ಕು, ಬೇಡವೆನ್ನಲು ಇದು ಬಿಟ್ಟು ಹೊರಡುವ ಸಂಬಂಧವಲ್ಲವಲ್ಲಾ..!? ಸಾತ್ವಿಕ್ ನನ್ನು ಮದುವೆಯಾಗುವಾಗ ಅವನು ತಿಳಿಸಿದ್ದ "ನೀನು ಮದುವೆಯಾಗುವುದು ನನ್ನನ್ನು ಮಾತ್ರವಲ್ಲ.. ನನ್ನ ಕುಟುಂಬವನ್ನು" ಎಂದು. ಹದಿಹರೆಯದ ಪ್ರೀತಿ, ಬಿಸಿ ರಕ್ತ ಎಲ್ಲವನ್ನೂ ಎಲ್ಲರನ್ನೂ ಒಪ್ಪಿಕೊಳ್ಳುವಂತೆ ಮಾಡಿತ್ತು. ನಾನು ನೋಡಿದ ದಾಂಪತ್ಯಗೀತೆಗಳೂ ಹಾಗೆಯೇ ಇದ್ದವಲ್ಲಾ.. ಮೊದಮೊದಲಿಗೆ ಮನೆಯವರೆಲ್ಲಾ ಸರ್ವಸ್ವ, ಮನೆಯವರು ಹೇಳಿದಂತೆಯೇ.., ಆದರೆ ನಂತರ ನನ್ನ ಮನೆದೇವರು ಹೇಳಿದಂತೆಯೇ.. ನನ್ನ ಮನೆಯಾಕೆಯೇ ನನ್ನ ಸರ್ವಸ್ವ.

ಆದರೆ ನಾನು ನೋಡಿದ ಹೆಚ್ಚಿನ ದಾಂಪತ್ಯಗಳೆಲ್ಲಾ ವಿಷಮಗೀತೆಗಳೇ.. ದಾಂಪತ್ಯ ಇನ್ನೂ ಚೆನ್ನಾಗಿ ಹೊಂದಿಕೊಂಡಿದೆಯೆಂದರೆ ಅದಕ್ಕೆ ಕಾರಣ ಒಡೆದ ಮನೆಗಳು ಅರ್ಥಾತ್ ಅವಿಭಕ್ತ ಕುಟುಂಬಗಳು. ಅತ್ತೆ-ಸೊಸೆ ಬೇರೆ ಬೇರೆ ಇರುವುದು ಆಷಾಡದಲ್ಲಿ ಮಾತ್ರವಲ್ಲ.. ಯಾವಾಗಲೂ..!

ಅಜ್ಜಿ ಅತ್ತೆಯರ ಸಂಬಂಧವೂ ಹಾಗೇ ಇದ್ದಿತ್ತು. ಒಂದೇ ನಾಣ್ಯದ ಎರಡು ಮುಖಗಳಂತೆಯೇ..? ಅಜ್ಜಿಯದ್ದು ಮಾತು ಜಾಸ್ತಿ ಆದರೂ ಮಾತುಗಳಲ್ಲಿ ಕೊಂಕು ಇರುತ್ತಿರಲಿಲ್ಲ.ಅತ್ತೆಯೂ ಅನುಸರಿಸಿಕೊಂಡು ಹೋಗದವರೇನೂ ಅಲ್ಲ. ಆದರೆ ಅವರ ಹೊಂದಾಣಿಕೆ ಮನೆಯವರೊಂದಿಗೆ ಮಾತ್ರ ಅಲ್ಲ ಎಂಬುದು ವಿಪರ್ಯಾಸ. ಅಮ್ಮ ಕೂಡಾ ಬಾಳಿದ್ದು ಕೂಡು ಕುಟುಂಬದಲ್ಲೇನೂ ಅಲ್ಲ. ಅಲ್ಲದೆ ಅತ್ತೆ ಮನೆಯಲ್ಲಿ ಹೀಗೇ ಇರಬೇಕೆಂದೂ ಅಮ್ಮ ಹೇಳಿಕೊಡಲಿಲ್ಲ. ಹೀಗೇ ಇರಬೇಕೆಂಬುದನ್ನು ಹೇಳಿಕೊಡಲು ಅಮ್ಮನಿಗೆ ಸಮಯವಾದರೂ ಎಲ್ಲಿತ್ತು..?  ಲೇಟ್ ನೈಟ್ ಪಾರ್ಟಿಗಳು, ಸೊಸೈಟಿ, ಕ್ಲಬ್ ಗಳ ಮೀಟಿಂಗ್ ಗಳು ಇದೆಲ್ಲದರ ನಡುವೆಯೇ ಅಮ್ಮ ಅಲ್ಲಲ್ಲ ಮಮ್ಮಿ ಕಳೆದುಹೋಗಿದ್ದಳು.

ಆದರೆ ನಾನು ಹೀಗಿರಲು ಕೊಂಚ ಮಟ್ಟಿಗೆ ಕಾರಣ ಅಪ್ಪನೇ.. ಸಾತ್ವಿಕ್ ನ ಸಂಬಂಧವನ್ನೂ ಯಾವ ತಕರಾರೂ ಇಲ್ಲದೆ ಒಪ್ಪಿಕೊಂಡಿದ್ದರು. ಅಲ್ಲದೆ ನನ್ನನ್ನು ಬೆಂಬಲಿಸಿದ್ದರು. ಅಲ್ಲದೆ ಹೊರಡುವ ಮುನ್ನ ಕೂಡ ಒಂದು ಕಿವಿಮಾತನ್ನೂ ಹೇಳಿದ್ದರು. "ಮನಸ್ಸೆಂಬುದು ನೀನು ಹರಿಯಬಿಟ್ಟಂತೆ, ಲಂಗು ಲಗಾಮು ನಿನ್ನೆಡೆಯೇ ಇರಲಿ".

ಆದರೆ ಈ ಮಾತನ್ನು ಮೀರುವ ಅಥವಾ ಮತ್ತೆ ನೆನಪಿಸಿಕೊಳ್ಳುವ ಸಂದರ್ಭ ಇದುವರೆಗೂ ಬಂದಿರಲಿಲ್ಲ. ಆದರೆ ಅಮ್ಮ ಇತ್ತೀಚೆಗೆ ಹೇಳಿದ ಮಾತು ತುಲನೆ ಮಾಡುವಂತೆ ಮಾಡಿತು ಅಷ್ಟೇ.  ಅಮ್ಮ ಅಲ್ಲಲ್ಲಾ ಮಮ್ಮಿ ಹೇಳಿದ್ದು, "ಆದಷ್ಟು ಬೇಗ ಆ ಜಾತ್ರೆಯಿಂದ ಹೊರಗಡೆ ಬಾ."

ಆದರೆ ನನಗೆಂದೂ ಇಲ್ಲಿ ಜಾತ್ರೆ ಅಥವಾ ಇಕ್ಕಟ್ಟಿನ ಅಥವಾ ಮತ್ತಾವುದೇ ಇರುಸುಮುರುಸಿನ ಅನುಭವವಾಗಿರಲಿಲ್ಲ. ಯಾವ ಕೆಲಸವೂ ಬರದ ನನಗೆ ಅತ್ತೆ ಅಮ್ಮನಾಗಿ.. ಓರಗಿತ್ತಿಯರು ಗೆಳತಿಯರಾಗಿ ಸಹಕರಿಸಿದರು. ಮೈದುನ, ಭಾವ, ಮಾವ ಎಲ್ಲರೂ ಒಳ್ಳೆಯವರೇ..

ಎಲ್ಲವನ್ನೂ ತಿದ್ದುತ್ತಿದ್ದ ಎಲ್ಲರೂ ಇಂದು ಅಷ್ಟು ಕಠೋರವಾಗಿ ನಡೆದುಕೊಂಡದ್ದಾದರೂ ಏಕೆ..?

ಕೆಲಸದವರನ್ನು ನಮ್ಮ ಮನೆಯಲ್ಲಿ ನಡೆಸಿಕೊಳ್ಳುತ್ತಿದ್ದದ್ದೇ ಹಾಗೆ..!

ಕೆಲಸದವನಾಗಿ ನನಗೇ ಏಕವಚನದಿಂದ ಮಾತನಾಡಿಸಿದ್ದೇ ಅಲ್ಲದೆ ನನ್ನ ಚಪ್ಪಲಿ ಹೊಲಿಸಿಕೊಂಡು ಬಾ ಎಂದದ್ದಕ್ಕೆ "ಆಗುವುದಿಲ್ಲ, ನಮಗೂ ಆತ್ಮಗೌರವವಿದೆ, ಹಿರಿಯರಿಗೆ ಗೌರವ ಕೊಡುವುದನ್ನು ಕಲಿ, ಅವರು ಕೆಲಸದವರಾದರೂ ಸರಿಯೇ" ಎಂದರು. ಕೋಪ ಬಂದು ಹೊಡೆದದ್ದೇ ತಪ್ಪಾ?

ಮನೆಯಲ್ಲಿ ಎಲ್ಲರೂ ಅಂದು ಕೋಪ ಮಾಡಿಕೊಂಡು ನನ್ನನ್ನೇ ದೂಷಿಸಿದರು. ನನ್ನ ಕೋಪವೂ ಮೇರೆ ಮೀರಿ ಮಾತಿಗೆ ಮಾತು ಬೆಳೆಯಿತು. ಒಳ್ಳೆಯತನದ ಮತ್ತೊಂದು ಮುಖದ ಪರಿಚಯವಾಗಿತ್ತು.

ಸೋಲಲು ನನಗಿಷ್ಟವಿಲ್ಲ ಆದರೆ ಸೋಲದೆ ವಿಧಿಯಿಲ್ಲ. ಸೋಲದೆ ಸಂಬಂಧದಲ್ಲಿ ಗೆಲ್ಲಲ್ಲೂ ಸಾಧ್ಯವಿಲ್ಲ. ಹಾಗೆಂದು ಮನೆಯವರೆಲ್ಲರನ್ನೂ ಎದುರುಹಾಕಿಕೊಂಡು ಬದುಕಲು ಸಾಧ್ಯವೇ..?

ಇದಕ್ಕೆಲ್ಲಾ ಒಂದೇ ಪರಿಹಾರ 'ನಾನು' ಸಾಯಬೇಕು. ಹೌದು ಇದಕ್ಕೆ ಇದನ್ನು ಬಿಟ್ಟು ಬೇರೆ ಪರಿಹಾರವಿಲ್ಲ.

ಇದೆಲ್ಲದಕ್ಕೂ ಪರಿಹಾರ ಸಿಕ್ಕಿತ್ತು. ಅಪ್ಪನನ್ನು ಸಲಹೆ ಕೇಳಿದಾಗ 'ವಸುದೈವ ಕುಟುಂಬಕಂ' ಎಂದರಷ್ಟೇ.

'ನಾನು' ಸತ್ತಾಗಿತ್ತು. ಸುನಿಧಿ ಸಾಯಲಿಲ್ಲ, ಸುನಿಧಿಯೊಳಗಿನ 'ನಾನು' ಎಂಬ ಅಹಂಕಾರ ಸತ್ತಿತ್ತು. ಮನೆಯೊಳಗೆ ಪಂಕ್ತಿ ಭೋಜನ ಸುನಿಧಿಯ ಮುಂದಾಳತ್ವದಲ್ಲಿ ನಡೆದಿತ್ತು.

~ವಿಭಾ ವಿಶ್ವನಾಥ್

ಶುಕ್ರವಾರ, ನವೆಂಬರ್ 16, 2018

ನಿಮಗೋಸ್ಕರ...


ಪ್ರೀತಿಯ ಕಂದ,

ಪರೀಕ್ಷೆಗಳು ಹತ್ತಿರ ಬರ್ತಾ ಇವೆ ಓದ್ಕೋ, ಹೆಚ್ಚು ಅಂಕ ತೆಗೆದು ಒಳ್ಳೆ ಕಾಲೇಜಿನಲ್ಲಿ ಸೀಟು ತೆಗೆದುಕೊಳ್ಳಬೇಕು ಅಂದಾಗಲೆಲ್ಲಾ ನೀನು ಮುಖ ಪೆಚ್ಚು ಮಾಡ್ಕೊಂಡು ಓದೋದಕ್ಕೆ ಕೂತ್ಕೊಳ್ಳೋದನ್ನು ನೋಡಿದ್ರೆ, ನಮಗೂ ಮನಸ್ಸಿಗೆ ಒಂಥರಾ ಆಗುತ್ತೆ. ಆದ್ರೆ ಏನ್ಮಾಡ್ಲಿ? ನಿನಗೆ ಇವಾಗ ಹೇಳದೆ ಮತ್ತಿನ್ಯಾವಾಗ ಹೇಳೋಕಾಗುತ್ತೆ ಓದ್ಕೋ ಅಂತಾ? ನಮ್ಮಪ್ಪ-ಅಮ್ಮನೂ ಹೀಗೇ ಹೇಳಿ ಓದ್ಸಿದ್ದಿದ್ರೆ ನಾವೂ ಇನ್ನೂ ಒಳ್ಳೆ ಸ್ಥಿತಿಯಲ್ಲಿರ್ತಾ ಇದ್ವು.ನಮ್ ಹಾಗೇ ನೀನೂ ನಾಳೆ ನಮ್ಮನ್ನು ದೂಷಿಸಬಾರದು ಅಂತಾ ನಿನಗೆ ಇದನ್ನ ಹೇಳೋದು. 

ಒಳ್ಳೆ ಕಡೆ ಟ್ಯೂಷನ್ ಗೂ ಸೇರ್ಸಿದ್ದೀವಿ. ಈ ಸಿಟಿಲಿರೋ ಒಳ್ಳೆ ಕಾನ್ವೆಂಟ್ ಗೇ ಸೇರ್ಸಿದ್ದೀವಿ. ಮನೆಯಲ್ಲಿ ಟಿ.ವಿ ಸೌಂಡ್ ಕೂಡಾ ಇಲ್ಲ, ಬೇರೆ ಮಕ್ಕಳಿಂದ ನಿನಗೆ ಓದೋದಕ್ಕೆ ಕಷ್ಟ ಆಗುತ್ತೆ ಅಂತಾ ನಮ್ಮ ಆಫೀಸ್ ಗೆ ದೂರ ಆದ್ರೂ ಈ ಪ್ರಶಾಂತವಾದ ಜಾಗದಲ್ಲಿ ಮನೆ ಮಾಡಿದ್ದೇನೆ. ಆದ್ರೂ ನೀನ್ಯಾಕೆ ಚಿತ್ರ ಬಿಡಿಸ್ತಿನಿ, ಬಣ್ಣ ಹಚ್ತೀನಿ ಅಂತಾ ಏನೇನೋ ಮಾಡೋದಕ್ಕೆ ಹೊರಡ್ತೀಯಾ, ಅದೇ ಸಮಯಾನ ಓದೋದಕ್ಕೆ ಉಪಯೋಗಿಸಿದ್ರೆ ಎಷ್ಟು ಒಳ್ಳೆ ಅಂಕ ಬರುತ್ತೆ ಅಲ್ವಾ?
ಓದ್ಕೋ ಪುಟ್ಟ, ಬೇರೆ  ವೇಳೆಲಿ ಚಿತ್ರ ಬಿಡಿಸಿ, ಬಣ್ಣ ತುಂಬಬಹುದು

-ಇಂತಿ
ನಿನ್ನ ಹಿತಚಿಂತಕರು
**********************************************

ಮುದ್ದಿನ ಅಪ್ಪ,ಅಮ್ಮ

ನೀವಂದ್ರೆ ನನಗೆ ತುಂಬಾ ಇಷ್ಟ. ಆದ್ರೆ, ನೀವು ಯಾವಾಗಲೂ ಓದ್ಕೋ, ಓದ್ಕೋ ಅಂದ್ರೆ ನನಗೂ ಕಿರಿಕಿರಿಯಾಗಲ್ವಾ? ನಂಗೆ ಚಿತ್ರ ಬಿಡಿಸೋದು ಅಂದ್ರೆ ತುಂಬಾ ಇಷ್ಟ. ಹಾಗಂತ ನಾನೇನೂ ದಿನಪೂರ್ತಿ ಅದನ್ನೇ ಮಾಡಲ್ಲ ತಾನೇ? ಇಂಟರ್ ಸ್ಕೂಲ್ ಕಾಂಪಿಟೇಷನ್ ಲ್ಲೂ ನಾನೇ ಫಸ್ಟ್,ಆದ್ರೆ ನೀವು ಯಾವತ್ತಾದ್ರೂ ನಾನು ಬಿಡಿಸಿರೋ ಚಿತ್ರದ ಬಗ್ಗೆ ಒಂದಾದ್ರೂ ಒಳ್ಳೆ ಮಾತಾಡಿದ್ರಾ? ನಾನೇ ನನ್ನ ಚಿತ್ರಗಳನ್ನು ಮುಂದೆ ತಂದಿಟ್ಟರೂ ನೀವು ಅದನ್ನು ಆಮೇಲೆ ನೋಡ್ತೀನಿ ಅಂತಾ ಆ ಕಡೆ ಇಟ್ಟು ಬಿಡ್ತೀರಿ.ಯಾಕೆ?

"ಮೀನು ಮರ ಹತ್ತೋಕಾಗಲ್ಲ,ಹಕ್ಕಿ ಈಜೋಕಾಗಲ್ಲ", ಹಾಗೇ ನಾವೂ ಯಾವುದನ್ನು ಇಷ್ಟ ಪಡ್ತೀವೋ ಅದನ್ನೇ ಮಾಡೋದಕ್ಕೆ ನಮಗೆ ಅವಕಾಶ ಕೊಡಿ."ನಾವು ಒಳ್ಳೆ ಹವ್ಯಾಸ ಬೆಳೆಸಿಕೊಂಡರೆ,ಅದು ನಮ್ಮನ್ನು ಬೆಳೆಸುತ್ತೆ" ಎನ್ನುವುದು ನಿಮಗೆ ಗೊತ್ತಿಲ್ಲದೇ ಇರುತ್ತಾ?ಪರೀಕ್ಷೆಗಳು ನಮ್ಮನ್ನು ಅಳೆಯೋ ಮಾಪಕಗಳಲ್ಲ, ಜೀವನದ ಪರೀಕ್ಷೆಗಳು  ನಮ್ಮನ್ನು ಅಳೆಯುವ ಮಾಪಕಗಳು.

ನಿಮ್ಮ ಹಾಗೆ ನಾನು ಹಿಂದಿನದ್ದಕ್ಕೆ ಕೊರಗುತ್ತಾ ಕುಳಿತುಕೊಳ್ಳುವುದಿಲ್ಲ. ನಿಮ್ಮಪ್ಪ-ಅಮ್ಮ ಅವರ ಶಕ್ತ್ಯಾನುಸಾರ ನಿಮ್ಮನ್ನು ಈ ಹಂತಕ್ಕೆ ದಾಟಿಸಿದ್ದಾರೆ, ಅದಕ್ಕೆ ನಿಮಗೆ ಅವರ ಬಗ್ಗೆ ಅಭಿಮಾನ ಇರಬೇಕಾಗಿತ್ತು. ಆದರೆ, ನನ್ನ ಮಗು ಈಗ  ಎಸ್.ಎಸ್.ಎಲ್.ಸಿ. ಅವನಿಗೆ ತೊಂದರೆಯಾಗೋದು ಬೇಡ ಅಂತಾ ಹಳ್ಳಿಯಲ್ಲೇ ಬಿಟ್ಟು ಬಂದ್ರಿ. ಮುಂದೆ ನಾನೂ ನಿಮಗೆ ಹಾಗೇ ಮಾಡಿದ್ರೆ..?

ಗಿಳಿಯನ್ನು ಚಿನ್ನದ ಪಂಜರದಲ್ಲಿ ಕೂಡಿ ಹಾಕಿ, ರಾಶಿ ಕಾಳು ಸುರಿದ್ರೂ ನೀವು ಅದಕ್ಕೆ ಅದರ ಸ್ವಾತಂತ್ರ್ಯದ ಸಂತೋಷ ಕೊಡುವುದಕ್ಕೆ ಆಗುತ್ತಾ? ನನ್ನ ಪಾಡು ಕೂಡಾ ಈಗ ಅದೇ ಆಗಿದೆ,ಜೊತೆಯಲ್ಲಿ ಆಟ ಆಡುವುದಕ್ಕೆ ಸ್ನೇಹಿತರಿಲ್ಲ,ಸ್ವಲ್ಪ ಹೊತ್ತು ಕಾಲ ಕಳೆಯುವುದಕ್ಕೆ ಟಿ.ವಿ ನೋಡೋಣಾ ಅಂದ್ರೂ ನೋಡುವುದಕ್ಕೆ ಆಗುವುದಿಲ್ಲ. ಸ್ವಲ್ಪ ಹೊತ್ತು ನಿಮ್ಮ ಜೊತೆ ಕೂತು ಮಾತಾಡೋಣಾ ಅಂದ್ರೂ ನೀವು ನಿಮ್ಮ ಆಫೀಸ್ ಕೆಲಸದ ಒಳಗೇ ಮುಳುಗಿ ಹೋಗಿರ್ತೀರ, ಕೇಳಿದ್ರೆ ಇದೆಲ್ಲಾ ನಿನಗೋಸ್ಕರಾನೇ ಅಂತೀರಾ..

ಆದರೂ ನನ್ನ ಕೈಲಾದಷ್ಟು ಪ್ರಯತ್ನ ಮಾಡಿ, ಒಳ್ಳೇ ಅಂಕಗಳನ್ನೇ ತೆಗಿತೀನಿ. ನನಗೋಸ್ಕರ ಅಲ್ಲದಿದ್ರೂ, ನಿಮಗೋಸ್ಕರ...

ಚಿತ್ರಕಲೆಯನ್ನು ಯಾವಾಗ ಬೇಕಾದ್ರೂ ಮಾಡಬಹುದು. ಅಲ್ವಾ?

-ಇಂತಿ
ನಿಮ್ಮ ಪ್ರೀತಿಯ ಕಂದ..
****************************************
~ವಿಭಾ ವಿಶ್ವನಾಥ್  

ಮಂಗಳವಾರ, ನವೆಂಬರ್ 13, 2018

ಸೋತು ಗೆದ್ದವಳು

ಗೆದ್ದವನು ನೀನೆಂಬ ಹಮ್ಮಿನಲಿ
ಬೀಗುತಲಿ ಎಷ್ಟು ದಿನ ಇರುವೆ..?

ಅಹಂಭಾವ ನಿನ್ನ ಮನಸಲ್ಲಿತ್ತು
ಅಹಂಕಾರದಿ ನಿನ್ನ ಕಣ್ಣು ಮಂಜಾಗಿತ್ತು
ಸಂಬಂಧವು ಬಿರುಕು ಬಿಟ್ಟಿತ್ತು
ಮನವು ಛಿದ್ರ-ವಿಛಿದ್ರವಾಗಿತ್ತು

ಮತ್ತೊಬ್ಬರ ಮನಸ್ಸು ಮುರಿದು
ಗೆದ್ದ ಗೆಲುವು ಉಳಿಯುವುದಾದರೂ ಹೇಗೆ?
ಇನ್ನೊಬ್ಬರ ಮನವ ಗೆದ್ದು ನೋಡು
ಅದುವೆ ನಿಜವಾದ ಗೆಲುವು

ಮಾತಿನಲ್ಲೇ ಮತ್ತೊಬ್ಬರ ಕೊಂದವ ನೀನು
ನನ್ನ ಮೌನದಲ್ಲಿ ನೀ ಸತ್ತು ಹೋಗಿದ್ದೆ
ನೀ ಸೋತದ್ದು ,ನಾ ಗೆದ್ದದ್ದು ಇಲ್ಲಿಯೇ..
ನೀ ಗೆದ್ದು ಸೋತಿದ್ದೆ, ನಾ ಸೋತು ಗೆದ್ದಿದ್ದೆ..!

~ವಿಭಾ ವಿಶ್ವನಾಥ್

ಶನಿವಾರ, ನವೆಂಬರ್ 3, 2018

ಕಳೆದು ಹೋದವರು

ಹಣದ ದಾಹದ ಮೋಹಕೆ ಸಿಲುಕಿ ಇಂದು
ಸಂಬಂಧಗಳು ಕಳೆದು ಹೋಗಿವೆ ಹುಡುಕಲಾಗದಂತೆ
ನಮ್ಮದು, ನಮ್ಮವರೆನ್ನುವವರೆಲ್ಲರೂ ಎಲ್ಲರೂ
ಎಲ್ಲೆಲ್ಲೋ ಕಳೆದೇ ಹೋಗಿದ್ದಾರೆ..ಗೊತ್ತೇ?

ಚೆಂದದ ಕಥೆ ಹೇಳುತ್ತಿದ್ದ ಅಜ್ಜಿಯಂದಿರು
ಟಿ.ವಿ ಸೀರಿಯಲ್ ನಡುವೆ  ಕಳೆದುಹೋಗಿದ್ದಾರೆ
ಮಕ್ಕಳೊಡನೆ ಮಕ್ಕಳಂತೆ ಆಡುತ್ತಿದ್ದ ಅಜ್ಜಂದಿರು
ಅನಾರೋಗ್ಯದಿಂದ ಆಸ್ಫತ್ರೆಯಲ್ಲೇ ಕಳೆದುಹೋಗಿದ್ದಾರೆ

ಕೂಸುಮರಿಯಂತೆ ಹೊತ್ತು ಆಡಿಸುತ್ತಿದ್ದ ಮಾವ
ಹಣ,ಹೆಸರಿನ ಸಂಪಾದನೆಯಲ್ಲೇ ಕಳೆದುಹೋಗಿದ್ದಾರೆ
ಪ್ರೀತಿಯಿಂದ ಆರೈಕೆ ಮಾಡುತ್ತಿದ್ದ ಅತ್ತೆಯಂತೂ
ಹೇಳಿಕೆ ಮಾತಿಗೆ ಸಿಲುಕಿ ದ್ವೇಷದಲ್ಲೇ ಕಳೆದುಹೋಗಿದ್ದಾರೆ

ಬಾಯ್ತುಂಬ ನನ್ನೊಡನೆ ಹರಟುತ್ತಿದ್ದ ಅಮ್ಮ
ಮೊಬೈಲ್, ಪಾರ್ಟಿಗಳಲ್ಲೇ ಕಳೆದುಹೋಗಿದ್ದಾರೆ
ಪ್ರತಿ ಆಟ-ಪಾಠಗಳಿಗೂ ಕಿವಿಯಾಗುತ್ತದ್ದ ಅಪ್ಪ
ದುಡಿಮೆ, ಪ್ರಾಜೆಕ್ಟ್ ಗಳಲ್ಲೇ ಕಳೆದುಹೋಗಿದ್ದಾರೆ

ದಿನಕ್ಕೊಂದಾದರೂ ತರಲೆ ಮಾಡುತ್ತಿದ್ದ ಅಕ್ಕ,ತಂಗಿ
ಮೊಬೈಲ್ ಗೇಮ್, ಸೆಲ್ಫಿಯೊಳಗೇ ಕಳೆದುಹೋಗಿದ್ದಾರೆ
ಮಾತುಮಾತಿಗೂ ರೇಗಿಸಿ ಅಳಿಸುತ್ತಿದ್ದ ಅಣ್ಣ,ತಮ್ಮ
ಸೋಷಿಯಲ್ ಮೀಡಿಯಾದೊಳಗೇ ಕಳೆದುಹೋಗಿದ್ದಾರೆ

ಇದೆಲ್ಲದರ ನಡುವೆ ನಾನೂ ಕಳೆದುಹೋಗಿದ್ದೇನೆ
ಹಳೆಯ ಸಂಬಂಧಗಳನ್ನು ಹುಡುಕುತ್ತಾ..
ಮಾನವೀಯತೆಯ ಕೊಂಡಿಗಳನ್ನು ಪೋಣಿಸುತ್ತಾ..
ಮತ್ತೆ ಮೊದಲಿನ ದಿನಗಳನ್ನು ಬಯಸುತ್ತಾ..

ಕಳೆದು ಹೋದವರನ್ನು ಹುಡುಕಿ ಕೊಡುವಿರಾ..?
ಬಹುಶಃ ನೀವೂ ಸಹಾ ಕಳೆದು ಹೋಗಬಹುದು
ಕಳೆದು ಹೋದವರನ್ನು ನೀವೂ ಹುಡುಕುತ್ತಲೇ..
ಕಳೆದು ಹೋಗಲು ಯಾರಾದರೂ ಸಿದ್ದರಾಗಿರುವಿರಾ..?

~ವಿಭಾ ವಿಶ್ವನಾಥ್

ಶುಕ್ರವಾರ, ಅಕ್ಟೋಬರ್ 26, 2018

ಪಯಣದಲ್ಲೊಂದು ತಿರುವು..

ಬದುಕೆಂಬುದು ಹಾಗೇ, ನಿರಂತರ ಪಯಣ..ಸಾಗುತ್ತಲೇ ಇರುವಂತಹದ್ದು. ಎಷ್ಟೋ ಜನ ಪಯಣದಲ್ಲಿ ಜೊತೆಯಾಗುತ್ತಾರೆ, ಹಾಗೆಯೇ ಬಿಟ್ಟೂ ಹೋಗುತ್ತಾರೆ. ಮೊದಲಿನಿಂದಲೂ, ಕೊನೆಯವರೆಗೂ ಜೊತೆಗೇ ಬರುವವರುತುಂಬಾನೇ ಅಪರೂಪ, ವಿರಳ ಎಂದೇ ಹೇಳಬಹುದು. ಕೆಲವೊಮ್ಮೆ ನಮಗೇ ಅರಿವಿಲ್ಲದೆ ಕೆಲವರ ಪಯಣದಲ್ಲಿ ಜೊತೆಯಾಗುತ್ತಾ ಅವರ ದಾರಿಯಲ್ಲೇ ಕ್ರಮಿಸಿಬಿಡುತ್ತೇವೆ, ಕೆಲವೊಮ್ಮೆ ಸ್ಥಗಿತಗೊಳಿಸುತ್ತೇವೆ, ಕುಂಠಿತಗೊಳಿಸುತ್ತೇವೆ ಸಹಾ. ಅರಿವಿದ್ದೋ, ಅರಿವಿಲ್ಲದೆಯೋ ಇವೆಲ್ಲವೂ ನಡೆದು ಹೋಗಿರುತ್ತದೆ. 

ನಾವಿಲ್ಲದೇ ಅವರ ಪಯಣ ಸಾಗೋದಿಲ್ವಾ..? ಅಥವಾ ಅವರಿಲ್ಲದೇ ನಮ್ಮ ಪಯಣ ಸಾಗೋದಿಲ್ವಾ..? ಖಂಡಿತಾ ಪಯಣ ಮುಂದುವರಿಯುತ್ತಲೇ ಹೋಗುತ್ತದೆ., ಯಾರಿದ್ದರೂ..! ಯಾರಿಲ್ಲದಿದ್ದರೂ..! ಅವರು ಮುಂದುವರಿಯುವುದಕ್ಕೆ ನಾವೇ ಕಾರಣ ಅಂತಾ ಬೀಗುತ್ತಾ ಹೋಗುತ್ತಾ ಇರುತ್ತೇವೆ ಅಲ್ವಾ..? ಅವಾಗಲೇ ಅಚಾನಕ್ಕಾಗಿ ಎದುರಾಗುವುದು ಒಂದು ದೊಡ್ಡ ತಿರುವು, ಅದು ಎದುರಾಗುವುದು ಬೀಗುವವರನ್ನು ಬಾಗಿಸುವುದಕ್ಕೇ ಅಂತನ್ನಿಸುತ್ತೆ.

ಬೀಳ್ತೀವಾ? ಏಳ್ತೀವಾ? ಬ್ರೇಕ್ ಹಾಕಿ ನಂತರ ಮುಂದೆ ಸಾಗುತ್ತೇವಾ? ಅಥವಾ ದಿಗ್ಭ್ರಮೆಯಿಂದ ಅಲ್ಲೇ ನಿಲ್ತೀವಾ..? ಅದು ನಮ್ಮ ನಮ್ಮ ಮನಃಶಕ್ತಿಗೆ ಬಿಟ್ಟದ್ದು. ಆದರೂ ಆ ತಿರುವಿನಲ್ಲಿ ಉಂಟಾಗುತ್ತಲ್ಲಾ ಒಂದು ದಿಗ್ಭ್ರಮೆ, ಅದಕ್ಕೆ ಸರಿದೂಗಿಸುವಂತೆ ತೆಗೆದುಕೊಳ್ಳೋ ತೀರ್ಮಾನ ಅದು ಇಡೀ ಲೈಫ್ಗೇ ಯೂ ಟರ್ನ್ ಕೊಟ್ಟು ಬಿಡುತ್ತೆ. ಒಂದು ತಿರುವು ದಾಟಿ ಮುಂದೆ ಹೋದರೆ ಅಲ್ಲಿ ಮತ್ತೊಂದು, ಮತ್ತೊಂದು ಮುಂದೆ ಮಗದೊಂದು ಹೀಗೇ.. ಮುಗಿಯುವುದೇ ಇಲ್ಲ ಆ ತಿರುವುಗಳ ಲೆಕ್ಕ. ಸ್ಕಿಡ್ ಆಗಿ ಬಿದ್ದೆವೋ ನಿರಾಸೆಯ ಪ್ರಪಾತದ ಕೂಪಕ್ಕೇ ಹೋಗಿ ಬಿದ್ದು ಬಿಡುತ್ತೇವೆ. ಎದ್ದು ನಿಲ್ಲುವುದು ನಮ್ಮ ಧೀಃಶಕ್ತಿಗೇ ಬಿಟ್ಟದ್ದು..

ಓವರ್ ಸ್ಪೀಡ್ ಅಲ್ಲೂ ಹೋಗಬಾರದು ಅಂತಹಾ ತಿರುವುಗಳಲ್ಲಿ, ಆಮೇಲೆ ಲೈಫೇ ಟರ್ನ್ ಹೊಡೆದುಬಿಟ್ಟಾತು. ಮುಂದೆ ಬರುವವರಿಗೇ ಡಿಕ್ಕಿ ಹೊಡೆದುಬಿಟ್ಟರೆ..! ಅದಕ್ಕೂ ಒಂದು ಪರಿಹಾರವಿದೆ ಕಣ್ರೀ.. ಮಾತಿನ ಹಾರ್ನ್ ಜೊತೆಗೆ ಲಿಮಿಟೆಡ್ ಸ್ಪೀಡ್ ಅಲ್ಲೇ ಹೋಗಬೇಕು.   

ತಿರುವು ದಾಟಿ ದಿಗಂತದ ಕನಸಿಗೆ ಕೈ ಚಾಚುತ್ತಾ ಪಯಣದಲ್ಲಿ ಹೆಜ್ಜೆ ಹಾಕಬೇಕು. " ಹಕ್ಕಿ ಮರದ ಗಟ್ಟಿತನವನ್ನು ನೆಚ್ಚಿ ಕೊಂಬೆ ಮೇಲೆ ಕುಳಿತಿರೋದಿಲ್ವಂತೆ, ಅಕಸ್ಮಾತ್ ಈ ರೆಂಬೆ ಮುರಿದರೂ ಸಹಾ ತಾನು ಹಾರಬಲ್ಲೆ ಎಂಬ ಆತ್ಮವಿಶ್ವಾಸದಿಂದ ತನ್ನ ರೆಕ್ಕೆಗಳನ್ನು ನೆಚ್ಚಿ ಕೂತಿರುತ್ತದೆಯಂತೆ", ಅಷ್ಟು ಚೈತನ್ಯದಿಂದ ಹಕ್ಕಿಯೇ ತನ್ನ ಪಯಣವನ್ನು ಕ್ರಮಿಸುವಾಗ, ನಾವು ಬೇರೆಯವರನ್ನು ನಂಬಿ ಯಾಕೆ ನಮ್ಮ ಪಯಣ ನಡೆಸಬೇಕು..? ನಮ್ಮ ಬಲ, ಛಲದ ಮೇಲೇ ನಂಬಿಕೆ ಇಟ್ಟು ಪಯಣದ ತಿರುವುಗಳನ್ನೆಲ್ಲಾ ಬಳಸೋಣ, ದಾಟೋಣ. ಹಾಗಂತಾ ಜೊತೆಗಾರರು, ಸಹಪಯಣಿಗರನ್ನು ನಿರ್ಲಕ್ಷ್ಯ ಮಾಡೋದಲ್ಲ. ಅವರೂ ನಮ್ಮಂತೆಯೇ ಎಂಬುದನ್ನು ಅರಿತು ಹೆಜ್ಜೆ ಹಾಕೋಣ.

ಇಷ್ಟೆಲ್ಲಾ ಬರೆದು ಮುಗಿಸುವಷ್ಟೊತ್ತಿಗೆ ಕಿವಿಯಲ್ಲಿ ಹಾಡಿನ ಸಾಲೊಂದು ರಿಂಗಣಿಸುತ್ತಿದೆ.

"ನಿನ್ನ ದಾರಿ ನೀನೇ ನಡೆದು ಸೇರಬೇಕು ಗುರಿಯನು"

ಅದನ್ನು ನನಗೆ ನಾನೇ ಹೇಳಿಕೊಳ್ಳೋದಾದ್ರೆ

"ನನ್ನ ದಾರಿ ನಾನೇ ನಡೆದು ಸೇರಬೇಕು ಗುರಿಯನು"

ಅಂತಾ ಹೇಳಿಕೊಳ್ಳಬಹುದಾ?
ಖಂಡಿತಾ .. ಈ ಮಾತನ್ನು ನನಗೆ ನಾನೇ ಹೇಳಿಕೊಳ್ಳುತ್ತೇನೆ. ಬೇರೆಯವರಿಗೆ ಉಪದೇಶ ಮಾಡುವುದಕ್ಕಿಂತ, ನಮಗೆ ನಾವೇ ಉಪದೇಶ ಮಾಡಿಕೊಳ್ಳುವುದೇ ಒಳ್ಳೆಯದು. ಯಾಕೋ ಬಹಳ ಸಲ ಹೀಗೇ ಅನ್ನಿಸುತ್ತಾ ಇರುತ್ತೆ. ನಿಜಾನೇ ಅಲ್ವಾ?

~ವಿಭಾ ವಿಶ್ವನಾಥ್

ಭಾನುವಾರ, ಅಕ್ಟೋಬರ್ 21, 2018

ರತ್ನ

ನಿಜವಾಗಿಯೂ ದೇವರು ಪ್ರತ್ಯಕ್ಷವಾದರೆ ನಾನು ಕೇಳುವ ಮೊದಲ ಪ್ರಶ್ನೆ, "ಅಮ್ಮನಿಂದ ಮಗುವನ್ನು ಅಗಲಿಸಿ, ನೋವು ನೀಡಿ ನೀನು ಸಾಧಿಸುವುದಾದರೂ ಏನು?"

ಅಂದು ನಾನು ರತ್ನಮ್ಮನ ಮನೆಗೆ ಕಾಲಿಟ್ಟ ಕ್ಷಣ ಆಕೆ ಕೇಳಿದ ಮೊದಲ ಪ್ರಶ್ನೆ, "ನಾನು ಯಾವತ್ತಾದರೂ,ಯಾರಿಗಾದರೂ ಅನ್ಯಾಯ ಮಾಡಿದ್ದೇನಾ? ನನ್ನ ಮಗ ನನ್ನಿಂದ ಯಾಕೆ ದೂರ ಆದ? ನಾನು ಯಾವ ಪಾಪ ಮಾಡಿದ್ದೆ? ವಿದ್ಯಾರ್ಥಿಗಳಿಗೆ ಯಾವತ್ತಾದರೂ ದ್ರೋಹ ಮಾಡಿದ್ದೇನಾ? ಭೇದ-ಭಾವ ಮಾಡಿದ್ದೇನಾ? ಹೇಳು"

ಬಾಣದಂತೆ ತೂರಿ ಬಂದ ಆ ಪ್ರಶ್ನೆಗೆ ಉತ್ತರಿಸಲಾದರೂ ಸಾಧ್ಯವಿತ್ತೇ? ನನ್ನ ಕಣ್ಣೀರೇ ಅದಕ್ಕೆ ಉತ್ತರವಾಗಿತ್ತು. ಅದನ್ನು ಬಿಟ್ಟು ಆ ಕ್ಷಣದಲ್ಲಿ ನನಗೇನೂ ಮಾಡಲು ತೋಚಲಿಲ್ಲ.ನನಗೇನಾದರೂ ಅಪರೂಪದ ಶಕ್ತಿ ಬಂದರೆ, ಅಥವಾ ವರ ಸಿಕ್ಕಿದರೆ ನಾನು ಮಾಡುವ ಮೊದಲ ಕೆಲಸ ರತ್ನಮ್ಮನ ಮಗ ಹಿಮವಂತನನ್ನು ಬದುಕಿಸುವುದು.

ಆಕೆ ನನಗೆ ಪ್ರಾಥಮಿಕ ಶಾಲೆಯಲ್ಲಿ ಕಲಿಸಿದ ನನ್ನ ಅಚ್ಚುಮೆಚ್ಚಿನ ಶಿಕ್ಷಕಿ. ನನ್ನ ಬರಹಗಳಿಗೆ ಶಕ್ತಿ ತುಂಬಿದ ದೇವತೆ, ನನ್ನ ಬೆಳವಣಿಗೆಯ ಎಲ್ಲಾ ಹಂತದಲ್ಲಿಯೂ ಸ್ಪೂರ್ತಿ ತುಂಬುತ್ತಿದ್ದವರು .ಎಲ್ಲರನ್ನೂ ತನ್ನ ಮಕ್ಕಳೆಂದುಕೊಂಡು ಕಾಳಜಿ ತೋರಿಸಿ ಕಲಿಸುತ್ತಿದ್ದ, ಸಲಹುತ್ತಿದ್ದ ಶಿಕ್ಷಕಿ. ಬೆತ್ತ ಬಳಸದೆಯೂ ಮಕ್ಕಳನ್ನು ತಿದ್ದಿ ಬುದ್ದಿ ಕಲಿಸುತ್ತಿದ್ದ ಮಿಸ್. ಅದೇಕೋ ರತ್ನಮ್ಮ ಮಿಸ್ ನನಗೆ ಬಹಳ ಇಷ್ಟ. ಅಪ್ಪ-ಅಮ್ಮನಿಂದಲೂ ಆಶೀರ್ವಾದ ಪಡೆಯದೆ ಹೊರಟ ನಾನು ಅಂದು ಪ್ರತಿಭಾ ಕಾರಂಜಿಗೆ ಹೋಗುವ ಮುನ್ನ ಆಕೆಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದೆ. ಅಂದು ಲಘು ಸಂಗೀತದಲ್ಲಿ ಪ್ರಥಮ ಬಹುಮಾನ ಪಡೆದದ್ದು ಆಕೆಯ ಆಶೀರ್ವಾದದ ಫಲದಿಂದಲೇ ಎಂಬುದು ನನ್ನ ಬಲವಾದ ನಂಬಿಕೆ.

"ತಿಳಿಮುಗಿಲ ತೊಟ್ಟಿಲಲ್ಲಿ ಮಲಗಿದ್ದ ಚಂದಿರನ, ಗಾಳಿ ಜೋಗುಳ ಹಾಡಿ ತೂಗುತ್ತಿತ್ತು" ಎಂಬ 7 ನೇ ತರಗತಿಯ ಪದ್ಯವನ್ನು ಆಕೆ ಹಾಡುತ್ತಿದ್ದ ರೀತಿ ಬಹಳವೇ ಇಷ್ಟ. ಈಗಲೂ ಆ ಹಾಡು ಕೇಳಿ ಬಂದರೆ ಆಕೆಯೇ ಕಣ್ಮುಂದೆ ಬಂದಂತಾಗುತ್ತದೆ.ಕನ್ನಡದ ಪಾಠಗಳನ್ನು ಅದರ ಪೂರಕ ವಿಷಯಗಳೊಂದಿಗೆ ಆಕೆ ಭೋದಿಸುತ್ತಿದ್ದ ರೀತಿ ಮತ್ತು ಪದ್ಯಗಳನ್ನು ಹಾಡುತ್ತಿದ್ದ ರೀತಿ ಬಹಳವೇ ಇಷ್ಟ.ಸಮಾಜ-ವಿಜ್ಞಾನವೆಂದರೇ ಅಲರ್ಜಿ ಎನ್ನುತ್ತಿದ್ದ ನನಗೆ,ಸಮಾಜ-ವಿಜ್ಞಾನದ ಕುರಿತು ಆಸಕ್ತಿ ಹುಟ್ಟಿಸಿ,ಅದ್ಭುತ ಪಾಠವೆಂದರೆ ಹೀಗೇ ಇರುತ್ತದೆ ಎಂಬುದರ ಪರಿಕಲ್ಪನೆಯನ್ನು ಬೆಳೆಸಿದವರು. ಪೂರ್ವಾಗ್ರಹಪೀಡಿತರಾಗದೆ ಎಲ್ಲರನ್ನೂ ಒಂದೇ ರೀತಿ ನೋಡಿ, ಆದರ್ಶ ಶಿಕ್ಷಕಿ ಎಂಬ ಪದಕ್ಕೆ ಒಂದು ಮೆರುಗನ್ನು ತಂದು ಕೊಟ್ಟವರು. ನನ್ನ ಮತ್ತೊಬ್ಬಳು ತಾಯಿ ಎಂದರೂ ತಪ್ಪಿಲ್ಲ.

ಇದ್ದೊಬ್ಬ ಮಗ ಹಿಮವಂತನನ್ನು ಉತ್ತಮ ಸಂಸ್ಕಾರ ನೀಡಿ ಬೆಳೆಸಿದ್ದರು. ಆತನನ್ನು ನೋಡಿದವರೆಲ್ಲಾ, ಇದ್ದರೆ ಇಂತಹಾ ಮಗ ಇರಬೇಕು ಎಂಬ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರು. 9 ನೇ ತರಗತಿಯ ರಜಾ ದಿನಗಳಲ್ಲಿ ಆತ ಅಜ್ಜಿಯ ಮನೆಗೆಂದು ಹೊರಟ,ಎಲ್ಲೂ ಹೋಗಲು ಕೇಳದಿದ್ದವನು ಅಂದು ಮಾವನ ಮಕ್ಕಳ ಜೊತೆಗೆ ಆಡುವ ಆಸೆಯಿಂದ ಕೇಳಿದ. ಇವರೂ ಏನೂ ಹೇಳದೆ ಕಳುಹಿಸಿಕೊಟ್ಟರು. ಇನ್ನೆರಡು ದಿನ ಕಳೆದು ನಾನು ಬರುವೆ, ಈಗ ಹೋಗಿರು ಎಂದು ಹೇಳಿ ಅವರ ಅಣ್ಣನೊಂದಿಗೆ ಕಳುಹಿಸಿಕೊಟ್ಟರು.

ಇದಾದ ಮಾರನೆಯ ದಿನ , ಮನೆಯವರೆಲ್ಲಾ ಹೊಲದ ಪೂಜೆಗೆಂಂದು ತಯಾರಿ ನಡೆಸುತ್ತಿದ್ದರೆ, ಅಕ್ಕ-ಪಕ್ಕದ ಮನೆಯ ಮಕ್ಕಳೊಂದಿಗೆ ಆಡುತ್ತಾಅ, ಮನೆಯಲ್ಲಿ ಯಾರಿಗೂ ಹೇಳದಂತೆ, ಕೆರೆಯ ಹತ್ತಿರಕ್ಕೆ ಬಂದಿದ್ದ.ಅವರೆಲ್ಲಾಅ ಈಜಲು ಹೊರಟರೆ,ಈತನಿಗೆ ಈಜು ಬರದ ಕಾರಣಕ್ಕೆ ದಡದಲ್ಲಿಯೇ ನಿಂತಿದ್ದನ್ನು ಕಂಡು ಉಳಿದವರೆಲ್ಲಾ ಛೇಡಿಸುತ್ತಾ, "ಬಾರೋ, ಈ ನೀರಿಗೆ ಹೆದರಿಕೊಳ್ಳುತ್ತೀಯಾ..?" ಎನ್ನುತ್ತಾ ಅವನನ್ನು ಮೇಲಿನಿಂದ ತಳ್ಳಿದರು. ಅದೇನೂ ತೀರಾ ಆಳದ ನೀರಲ್ಲ,ಆದರೆ ಅಲ್ಲಿ ಸ್ವಲ್ಪ ಕೆಸರಿತ್ತು. ಅಡಿಮೇಲಾಗಿ ಬಿದ್ದಿದ್ದಕ್ಕೋ, ಹೆದರಿ ಉಸಿರು ಕಟ್ಟಿದ್ದಕ್ಕೋ ಗೊತ್ತಿಲ್ಲ, ಆತ ಮುಳುಗಿದವ ಮೇಲೇಳಲೇ ಇಲ್ಲ. ಜೊತೆಗಿದ್ದವರೂ ಹೆದರಿ ಅಲ್ಲಿಂದ ಪರಾರಿಯಾದರು.

ಅಜ್ಜಿಯ ಮನೆಗೆ ರಜೆಗೆಂದು ಹೋದವನು ಮರಳಿದ್ದು ಹೆಣವಾಗಿ. ಎದೆಯೆತ್ತರಕ್ಕೆ ಬೆಳೆದ ಇದ್ದೊಬ್ಬ ಮಗನನ್ನು ಕಳೆದುಕೊಂಡ ರತ್ನಮ್ಮನ ದುಃಖ ಹೇಳತೀರದು. ನನಗೆ ವಿಷಯ ತಿಳಿದದ್ದು ತಡವಾಗಿ, ಅಲ್ಲದೇ ಮಾರನೇ ದಿನ ಪರೀಕ್ಷೆ ಇದ್ದುದ್ದರಿಂದ ಹೋಗಲಾಗಿರಲಿಲ್ಲ. 3 ದಿನ ಕಳೆದ ನಂತರ ಅವರ ಮನೆಗೆ ಹೋದಾಗ ಕೇಳಿದ ಪ್ರಶ್ನೆ ಮನಕಲಕುವಂತಿತ್ತು. ಕಲ್ಲು ಕೂಡಾ ಕರಗುವಂತೆ ಅಳುತ್ತಿದ್ದ ಅವರನ್ನು ಕಂಡು ಅಳದಿರಲು ಸಾಧ್ಯವೇ ಇರಲಿಲ್ಲ. ಸಮಾಧಾನ ಮಾಡಲು ಪದಗಳಿರಲಿಲ್ಲ.

3 ದಿನದಿಂದ ಸರಿಯಾಗಿ ಊಟ,ತಿಂಡಿ,ನಿದ್ರೆಗಳಿಲ್ಲದೆ ಸೊರಗಿದ್ದರು. ನನ್ನ ಮಡಿಲಿನಲ್ಲಿ ಮಲಗಿದ್ದ 2 ನಿಮಿಷ ಅವರ ತಲೆ ನೇವರಿಸುವುದನ್ನು ಬಿಟ್ಟು ಮತ್ತೇನೂ ತೋಚಲಿಲ್ಲ. ಸಮಾಧಾನದ ಮಾತುಗಳೆಲ್ಲಾ ನಿರರ್ಥಕ ಎನ್ನಿಸಿದವು. ನಾನು ದುಃಖವನ್ನು ಅಷ್ಟು ಹತ್ತಿರದಿಂದ ನೋಡಿದ್ದು ಮೊದಲೇನಲ್ಲ, ಆದರೆ ಹೆಸರಿಗೆ ತಕ್ಕಂತೆ 'ರತ್ನ'ದಂತೆಯೇ ಇದ್ದವರ ಬಾಳನ್ನು ಪುತ್ರಶೋಕ ಮಸುಕಾಗಿಸಿದೆ.

"ಪುತ್ರ ಶೋಕಂ ನಿರಂತರಂ" ಎನ್ನುತ್ತಾರೆ. "ಎಲ್ಲವನ್ನೂ ಕಳೆದುಕೊಂಡರೂ ಅವನೊಬ್ಬನಿದ್ದರೆ ಸಾಕು, ಹೇಗಾದರೂ ಬದುಕುತ್ತಿದ್ದೆ" ಎನ್ನುತ್ತಾರೆ. ಅವನನ್ನು ಮರಳಿ ತಂದು ಕೊಡಲು ಸಾಧ್ಯವೇ? ಕೃಷ್ಣ ತನ್ನ ಗುರು ಸಾಂದೀಪನಿಯ ಸತ್ತು ಹೋಗಿದ್ದ ಮಗನನ್ನು ಮರಳಿ ಕರೆತಂದನಂತೆ, ಈಗ ಅಂತಹಾ ಪವಾಡವೇನಾದರೂ ನಡೆಯುವುದೇ?

"ರಾತ್ರಿ ಮಳೆಬಂದು ನನ್ನ ಮಗನನ್ನು ಮಲಗಿಸಿದ್ದ ಜಾಗವೆಲ್ಲಾ ನೆನೆದಿದೆ. ಪಾಪ ನನ್ನ ಕಂದಾ, ಅದೆಷ್ಟು ನಡುಗುತ್ತಿದೆಯೋ? ಒಬ್ಬನೆ ಇರಲು ಅವನು ಭಯ ಪಡುತ್ತಿದ್ದ. ಈಗ ಅದೇಗೆ ಇದ್ದಾನೋ? ಅವನು ಒಬ್ಬನನ್ನೇ ಬಿಟ್ಟ ನಾನು ಇಲ್ಲಿ ಬೆಚ್ಚಗೆ ಕುಳಿತಿದ್ದೇನೆ." ಎಂದು ಮರುಗುತ್ತಾರೆ.

"ಅವನು ನನ್ನ ಹೊಟ್ಟೆಯಲ್ಲಿದ್ದಾಗ, ಪ್ರತಿ ಇರುವನ್ನೂ, ಪ್ರತಿ ಕ್ಷಣವನ್ನೂ ನೆನೆದು ಸಂತೋಷ ಪಟ್ಟಿದ್ದೇನೆ. ಈ ಪಾಪಿಯ ಹೊಟ್ಟಯಲ್ಲಿ ಹುಟ್ಟಿದ್ದಕ್ಕೇ ಸತ್ತೆಯಾ?ನನ್ನ ಜೊತೆ ಇರಲು ಇಷ್ಟವಾಗಲಿಲ್ಲವೇ? ನನ್ನನ್ನು ಒಬ್ಬಳನ್ನೇ ಬಿಟ್ಟು ಹೊರಟೆಯಾ?" ಎಂದು ಕೇಳುತ್ತಾರೆ. ಉತ್ತರಿಸಲು ಅವನಿಲ್ಲ.

"ಎಲ್ಲಾ ವಿದ್ಯಾರ್ಥಿಗಳ ಉದಾಹರಣೆ ನೀಡಿ ಅವನನ್ನು ಬೆಳೆಸುತ್ತಿದ್ದೆ, ಅದರಲ್ಲೂ ನಿನ್ನ ಬಗ್ಗೆ ಹೆಚ್ಚು ಹೇಳುತ್ತಿದ್ದೆ. ಇನ್ನು ಯಾರ ಬಗ್ಗೆ ಹೇಳಿದರೂ ಕೇಳಲು ಅವನಿಲ್ಲ" ಎಂದು ಕೊರಗುತ್ತಾರೆ.

ಕಿಸಾಗೌತಮಿಯ ಕಥೆ ಹೇಳಿದ ಅವರೇ ಆ ಸ್ಥಿತಿಯಲ್ಲಿ ಇರುವುದನ್ನು ಕಂಡು ಸಂಕಟಪಡುತ್ತೇನೆ. ಯಾರನ್ನೂ ದೂಷಿಸದೇ ವಿಧಿಯನ್ನು ಹಳಿಯುವ ಅವರನ್ನು ಕಂಡು ಮರುಗುತ್ತೇನೆ."ಶಾಪಗ್ರಸ್ತ ದೇವತೆಗಳು ಭೂಮಿಯಲ್ಲಿ ಹುಟ್ಟಿ, ಕೆಲವು ದಿನ ಇದ್ದು ಮರೆಯಾಗುತ್ತಾರಂತೆ, ಅವನು ಶಾಪಗ್ರಸ್ತ ದೇವರು" ಎಂದು ಹೇಳಲು ಹೊರಟು ಮಾತು ಬಾರದೆ ಸುಮ್ಮನಾಗುತ್ತೇನೆ. "ವಿದ್ಯಾರ್ಥಿಗಳಲ್ಲೇ ಮತ್ತೆ ಮಕ್ಕಳನ್ನು ಕಾಣಿ" ಎಂದು ಹೇಳಬೇಕೆಂದರೂ ಸಾಧ್ಯವಾಗದೆ ಗಂಟಲುಬ್ಬಿ ಬರುತ್ತದೆ.

ಅದಾದ ಒಂದೆರಡು ಸಲ ಅವರ ಮನೆಗೆ ಹೋಗಿ ಬಂದೆ. ಯಾವ ವಿಷಯ ಮಾತನಾಡಲು ಶುರು ಮಾಡಿದರೂ ಮತ್ತೆ ಅದು ಹಿಮವಂತನ ವಿಷಯಕ್ಕೇ ಹೋಗಿ ನಿಲ್ಲುತ್ತದೆ.ಆದದನ್ನು ನೆನೆದು ಕೊರಗುತ್ತಾರೆ. ಮೊದಲಿನ ಲವಲವಿಕೆ ಇಲ್ಲದಿದ್ದರೂ, ಹೋದಾಗ ಏನಾದರೂ ತಿನ್ನಲು,ಕುಡಿಯಲು ಕೊಡಲು ತವಕಿಸುತ್ತಾರೆ. ಮತ್ತೆ ಅರೆಕ್ಷಣಕ್ಕೆ ಅದೇ ನೋವಿನಿಂದ ನರಳುತ್ತಾರೆ.

ಇದನ್ನು ಕಂಡು ನನಗನ್ನಿಸುವುದು ಹೀಗೆ, "ನಾನು ಕೂಡಾ ಒಬ್ಬಳೇ ಮಗಳು. ನಾನು ಸತ್ತರೆ,ನನ್ನಮ್ಮ ಕೂಡಾ ಹೀಗೇ ಇರುತ್ತಾರೇನೋ" ಎಂದು. ಕರುಳಬಳ್ಳಿಯ ಸಂಕಟ ಅನುಭವಿಸಿದವರಿಗೇ ಗೊತ್ತು. ಎಷ್ಟೋ ಜನರ ಭವಿಷ್ಯವನ್ನು ರೂಪಿಸಿದ ರತ್ನಮ್ಮ ಮಿಸ್ ನ ಭವಿಷ್ಯ ಅತಂತ್ರವಾಗಿದೆ. ಆದರೆ ಇದೆಲ್ಲವನ್ನೂ ಬದಿಗಿಟ್ಟು ಸಾವಿರಾರು ವಿದ್ಯಾರ್ಥಿಗಳ ಅಮ್ಮನಾಗಿ ಬಾಳುವ ಅವರ ಭವಿಷ್ಯವನ್ನು ಕಾಣಲು ನಾನು ಕಾಯುತ್ತೇನೆ. ಕಾಯುತ್ತಲೇ ಇರುತ್ತೇನೆ.

ಅಕ್ಕರೆಯಿಂದ ಕಲಿಸಿ,ತಪ್ಪನ್ನು ತಿದ್ದಿ, ಮಾತು ಕೇಳದಿದ್ದಾಗ ದಂಡಿಸಿ ಬುದ್ದಿ ಕಲಿಸಿ, ತಿದ್ದುವ ಅಮ್ಮನ ಅವಶ್ಯಕತೆಯಿರುವ ಮಕ್ಕಳು ನಿಮ್ಮನ್ನು ಕಾಯುತ್ತಿದ್ದಾರೆ. ಅವರೊಂದಿಗೆ ನಿಮ್ಮ ಮುಖದಲ್ಲಿ ಮಿನುಗುವ ನಗುವಿಗೆ, ನಿಮ್ಮ ಹಾಡಿಗೆ ನಾನೂ ಕಾಯುತ್ತಿರುತ್ತೇನೆ.

ಮಸುಕಾಗಿರುವ ರತ್ನ ಮತ್ತೆ ಹೊಳಪು ತುಂಬಿ ಹೊಳೆಯಲಿ ಎಂಬ ಆಸೆ ನನ್ನದು.

~ವಿಭಾ ವಿಶ್ವನಾಥ್

ಗುರುವಾರ, ಅಕ್ಟೋಬರ್ 18, 2018

ನವೋಲ್ಲಾಸದ ನವರಾತ್ರಿ


ನವನವೋತ್ಸಾಹದಲಿ ಆಚರಿಸುವ
ಸಂಭ್ರಮದ ನವರಾತ್ರಿಯನು..

ಗಜರಾಜನ ಮೇಲೇರಿ ಕುಳಿತು
ಚಿನ್ನದ ಅಂಬಾರಿಯಲಿರುವ
ಚಾಮುಂಡಾಂಬೆಯ ಪೂಜಿಸುತ
ಭಕ್ತಿಯಲಿ ಆಚರಿಸುವ ನವರಾತ್ರಿಯ

ನವನಾಮದಿ ನಲಿನಲಿದಾಡುವ
ಶಕ್ತಿಯ ಅಧಿದೇವತೆಯ ಅರ್ಚಿಸಿ
ಗೊಂಬೆಗಳ ಕೂರಿಸಿ ಆಚರಿಸುವ
ನಮ್ಮ ಮನೆಮನೆಯ ಹಬ್ಬ ದಸರಾವನು

ಶಕ್ತಿ ಅಭಿಮಾನಗಳಾ ಸಂಕೇತವಾಗಿ
ಆಯುಧಪೂಜೆ, ವಿಜಯದಶಮಿಗಳು
ನವರಾತ್ರಿಗೆ ಮೆರುಗು ನೀಡುತ
ತಂದಿದೆ ಹರುಷದ ಹೊನಲ ಮನಕೆ

ಬಂಧು-ಭಾಂಧವರೆಲ್ಲ ಒಂದುಗೂಡಿ
ಸಾಂಗೋಪಾಂಗವಾಗಿ ಪೂಜಿಸಿ
ಚಾಮುಂಡಾಂಬೆಯ ಆಶೀರ್ವಾದ ಬೇಡಿ
ಧನ್ಯರಾಗುವ ಆಕೆಯ ಪಾದಪದ್ಮದಲಿ

ಶಕ್ತಿ,ಯುಕ್ತಿ ಭಕ್ತಿಗಳೊಡನೆ ಮಿಳಿತವಾಗಿ
ಹರುಷದ ಹೊಳೆಯಲಿ ಮಿಂದು
ಮನೆಮನದಲಿ ನವೋಲ್ಲಾಸ ತಳೆದು
ನಡೆಸುವ ನಾಡಹಬ್ಬ ನವರಾತ್ರಿಯ

~ವಿಭಾ ವಿಶ್ವನಾಥ್

ಗುರುವಾರ, ಅಕ್ಟೋಬರ್ 11, 2018

ಬಂಧಗಳ ಬದುಕು

ಬಾಡಿಯೇ ಹೋದಂತಿದ್ದ ಸಂಬಂಧಗಳು
ಮತ್ತೆ ಚಿಗುರಲು ಹವಣಿಸುತ್ತಿರುವಾಗ
ಚಿಗುರನ್ನು ಚಿವುಟುವುದೋ..?
ಹೂವನ್ನು ಕಿತ್ತೆಸೆಯುವುದೋ..?
ಕಾಯಾಗುವ ಮುನ್ನ ಹೀಚಲ್ಲೇ ಹಿಸುಕುವುದೋ.?
ಹಣ್ಣಾಗಿ ಫಲ ಕೊಡಲೆಂದು ನಿರೀಕ್ಷಿಸುವುದೋ..?
ಮತ್ತದೇ ವಿಷ ಬೀಜ ಚಿಗುರಿದರೆ..!
ಆ ಮರವೇ ವಿಷವೃಕ್ಷವಾದರೆ..?!
ಮುಂದೊಮ್ಮೆ ಮರುಗಿ ಕೊರಗುವ ಬದಲು
ಚಿಗುರುವಾಗಲೇ ಮುರುಟಿ ಹಾಕಿದರೆ..!
ಕೆಡುಕು ಸಂಭವಿಸದೆ ಒಳಿತೇ ಆಗಲಿ ಎಂಬ
ಆಶಾಭಾವನೆಯಿಂದ ಸಂಬಂಧಗಳ ಸಾಕಿ
ಪ್ರೀತಿ,ವಾತ್ಸಲ್ಯದ ನೀರುಣಿಸಿ ಬೆಳೆಸುವ..
ತ್ಯಾಗವೆಂಬ ಪೋಷಕಾಂಶವ ನೀಡಿ
ಹಸನಾದ ಫಲ ಸಿಗಲೆಂದು ಆಶಿಸುವ..
ಆದರೆ ವಿಷವೃಕ್ಷವಾಗ ಹೊರಟರೆ
ಕೊಡಲಿ ಕಾವಿಗೆ ಕೆಲಸ ಕೊಡುವ..
ಕೈಗೆ ಕೊಡಲಿ ನೀಡುವ ಬದಲು
ನೀರುಣಿಸುವ ಕೆಲಸವೇ ಸಿಗಲಿ..
ತಾವೂ ಉತ್ತಮರಂತೆ ಬದುಕಲೆತ್ನಿಸಲಿ
ನಮ್ಮನ್ನೂ ಬದುಕಲಿ ಬಿಡಲೆಂದೇ ಹಾರೈಸುವ..

~ವಿಭಾ ವಿಶ್ವನಾಥ್

ಸೋಮವಾರ, ಅಕ್ಟೋಬರ್ 1, 2018

ಮತ್ತೇನು ಮಾಡಬಲ್ಲಳವಳು?

ಲೋಕದ ಕಣ್ಣಿಗೆಲ್ಲಾ ಬಹು ಸುಖಿಯವಳು
ಪಂಜರದ ಪಕ್ಷಿಯ ಪಾಡು ಕೇಳುವವರಾರು?
ಸುಖವೋ.. ದುಃಖವೋ.. ಹಾಡಬಲ್ಲಳಷ್ಟೇ
ಹಾಡುವುದ ಬಿಟ್ಟು ಮತ್ತೇನು ಮಾಡಬಲ್ಲಳವಳು?

ಜಗದ ಕಣ್ಣಿಗೆಲ್ಲಾ ಸುಖೀ ಸಂಸಾರದ ಒಡತಿ
ಗಾಣದೆತ್ತಿನ ದುಡಿಮೆ ಅವಳ ಪಾಲಿಗೆ
ಸುಖವೋ.. ದುಃಖವೋ.. ದುಡಿಯಬಲ್ಲಳಷ್ಟೇ
ದುಡಿಯುವುದ ಬಿಟ್ಟು ಮತ್ತೇನು ಮಾಡಬಲ್ಲಳವಳು?

ಜಗಕೆ ಗಳಿಸಿ ಸುಖಪಡುವ ಹೆಣ್ಣಂತೆ ಕಾಣುವಳು
ತೃಪ್ತಿಯಿಲ್ಲದೇ ದುಡಿಯುವುದೇ ಅವಳ ಪಾಡು
ಸುಖವೋ.. ದುಃಖವೋ.. ಗಳಿಸಬಲ್ಲಳಷ್ಟೇ
ಗಳಿಸುವುದ ಬಿಟ್ಟು ಮತ್ತೇನು ಮಾಡಬಲ್ಲಳವಳು?

ಅವಳು ಮತ್ತೇನು ಮಾಡಬಲ್ಲಳು ಎಂದುಕೊಂಡೇ
ಮಾಡಿದ ಅಡಿಗೆಯನೆಲ್ಲಾ ಉಂಡದ್ದಾಯಿತು
ತೋರಿದ ಪ್ರೀತಿಯನೆಲ್ಲಾ ಸವಿದು ತಿರಸ್ಕರಿಸಿದ್ದಾಯಿತು..
ಸಹಿಸುವುದ ಬಿಟ್ಟು ಮತ್ತೇನು ಮಾಡಬಲ್ಲಳವಳು?

ಎಷ್ಟೆಂದು ಸಹಿಸುವಳು ಅವಳು..?
ತುಟಿ ಮೀರಿ ಆಚೆ ಬಂದಿದೆ ಮರುಮಾತು..
ತೋರಬಾರದೆಂದುಕೊಂಡ ಕ್ರೋಧ ಸಹಾ
ಅದ ಬಿಟ್ಟು ಮತ್ತೇನು ಮಾಡಬಲ್ಲಳವಳು?

ಲೋಕದ ಪಾಲಿಗೆ ಅವಳೇನೇ ಆದರೂ..
ಅಂತರಂಗದಲಿ ಮತ್ತದೇ ಆರ್ದ್ರತೆಯ ಹೆಣ್ತನ
ಅಂದದೆಲ್ಲವ ಅಡಿಗಡಿಗೆ ನೆನಪಿಸಿಕೊಂಡು ಬಿಕ್ಕುತ್ತಾ
ಪಶ್ಚಾತ್ತಾಪ ಪಡುವುದ ಬಿಟ್ಟು ಮತ್ತೇನು ಮಾಡಬಲ್ಲಳವಳು?

ಮರೆವೆಂಬ ಹಣೆಪಟ್ಟಿಯ ನಿರ್ಲಕ್ಷ್ಯ ಸಹಿಸಿಕೊಂಡು
ಇಂದಲ್ಲಾ ನಾಳೆ ಎಲ್ಲವೂ ಸರಿಯಾಗುವುದೆಂಬ ಭರವಸೆಯಲಿ
ಲೋಕದ ಕಣ್ಣಿಗೆಲ್ಲಾ ಸುಖಿಯಾಗಿಯೇ ಕಾಣುತ್ತಾ
ಮಮತಾಮಯಿಯಾಗುವುದ ಬಿಟ್ಟು ಮತ್ತೇನು ಮಾಡಬಲ್ಲಳವಳು?

~ವಿಭಾ ವಿಶ್ವನಾಥ್




ಶುಕ್ರವಾರ, ಸೆಪ್ಟೆಂಬರ್ 28, 2018

ಆತ ಮತ್ತು ಈಕೆ

ಆಗ, ಆತ ಭಾವಗಳಲ್ಲಿ ಶಾಂತತೆಯ ಆಗರ
ಈಕೆ ಕೃತಿಯಲ್ಲಿ ಭೋರ್ಗರೆಯುವ ಕಡಲು
ಈಗ, ಆತ ಉಕ್ಕಿ ಹರಿಯುವ ಹುಚ್ಚು ಹೊಳೆ..
ಈಕೆ ಭರತವಿಳಿದ ಮಂದ್ರ ಸಾಗರದಂತಾ ನಡೆ

ಎಲ್ಲದಕ್ಕೂ ಕುತೂಹಲದ ಪ್ರಶ್ನೆ ಮಾಡುವಾಕೆಗೆ
ಎಲ್ಲದರ ಉತ್ತರ ಕೊಡುವ ಆಸಕ್ತ ಆತ
ಕೇಳುತ್ತಾ, ಈಕೆ ಮೌನಿಯಾಗುತ್ತಲೇ ಹೋದಳು
ಉತ್ತರಿಸುತ್ತಾ ಆತ ವಾಚಾಳಿಯಾಗುತ್ತಲೇ ಇದ್ದ

ಆಗ ಕೆಲವೊಂದರಲಿ ಆತ ಪೂರ್ವ,ಈಕೆ ಪಶ್ಚಿಮ
ಈಗ ಅವೆಲ್ಲದರಲ್ಲೂ ಆತ ಪಶ್ಚಿಮ,ಈಕೆ ಪೂರ್ವ
ಹೊಸದರಲಿ ಎಲ್ಲವೂ ಬೇಕೆನಿಸುವ ಆಸೆ ಆಕೆಗೆ
ಈಗೀಗ ಎಲ್ಲವನ್ನೂ ಆತನಿಗೆ ನೀಡುವುದೇ ಆಸೆ

ಇಬ್ಬರೂ ಒಬ್ಬರನೊಬ್ಬರು ಒಪ್ಪಿ ಅರಿಯುವಲ್ಲಿ
ಬದಲಾದರು ಈಕೆಯಂತೆ ಆತ,ಅವನಂತೆ ಈಕೆ
ಬದಲಾವಣೆಯ ಇಬ್ಬರ ಈ ಪರಿಭ್ರಮಣವೇ
ಆಕೆ ಮತ್ತು ಈತನ ಜೀವನದ ಮರುಸಮ್ಮಿಲನ

~ವಿಭಾ ವಿಶ್ವನಾಥ್